ಓದಿ ಓಡಿದವರು!

Sunday 19 February 2012

!


ಇವನು ವಿಚಿತ್ರ ಆಸಾಮಿ. 

ಇವನು ಕೂದಲು ಬಾಚುತ್ತಿದ್ದ. ಮುಖಕ್ಕೆ ಬಣ್ಣ ಹಚ್ಚುತ್ತಿದ್ದ. ದಾಡಿ ಬೋಳಿಸುತ್ತಿದ್ದ. ಬಟ್ಟೆ ಹಾಕುತಿದ್ದ. ಕಾಲಿಗೆ ಶೂ ಕೂಡ ಹಾಕುತಿದ್ದ. ಆದರೆ ಈ ಎಲ್ಲಾ ಕೆಲಸಗಳನ್ನ ಯಾರು ಯಾರಿಗೋ ಮಾಡುವಾಗ ಮನಸಿಟ್ಟು ಮಾಡಲೇ ಇಲ್ಲ. ಹಾಗಾಗಿ ಮತ್ತೆ ನಿರುದ್ಯೋಗಿ ಆಗಿದ್ದ. 
ಇವನ ತಲೆ ತುಂಬಾ ಕೂದಲಿತ್ತು, ಸುಂದರವಾದ ಮುಖ, ತರಹೇವಾರಿ ಬಟ್ಟೆಗಳನ್ನು ಧರಿಸುತಿದ್ದ. ಬಿಸಿಲಲ್ಲಿ ನಿಂತಾಗ ವಿಗ್ ತೆಗೆದು ತಲೆ ಕೆರೆದುಕೊಳ್ಳುತ್ತಿದ್ದ. ಮಳೆಯಲ್ಲಿ ನಿಂತರೆ ಮುಖದ ಬಣ್ಣ ನೀರಿನಲ್ಲಿ ಕರಗಿಹೋಗುತಿತ್ತು. ಬಟ್ಟೆಗಳನ್ನು ಬಳಸಿದ ನಂತರ ಹಿಂತಿರುಗಿಸಿ ಬರುತ್ತಿದ್ದ. ಅದೇ ಹರಕಲು ಬಟ್ಟೆ ಮತ್ತೆ ಅಂತಿಮವಾಗಿ ಉಳಿದಿರುತ್ತಿತ್ತು. 
ಇವನು ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ಆದರೆ ಈತ ಅನಾತ. ಇವನನ್ನು ಹಲವಾರು ಜನ ಪ್ರೀತಿಸುತ್ತಿದ್ದರು್ ಆದರೆ ಈತ ಏಕಾಂಗಿ. ಇವನು ಆರೋಗ್ಯವಾಗಿದ್ದ ಆದರೆ ಇವನಿಗೆ ಹಲವಾರು ರೋಗಗಳಿದ್ದವು. ಇವನ ಹಲವಾರು ಮನೋರೋಗಗಳನ್ನು ಗುಣಪಡಿಸಿಕೊಳ್ಳುವಷ್ಟರಲ್ಲಿ, ದೇಹಾರೋಗ್ಯ ಹದಗೆಟ್ಟಿತ್ತು. 
ಇವನು ಅತ್ಯದ್ಭುತ ಮಾತುಗಾರ, ಮಾತಿನ ಮೋಡಿಗಾರ ಆದರೆ ಈತ ಮೂಕ. ಇವನು ಚಿರಪರಿಚಿತ, ಜಗಜನಿತ ಆದರೆ ಈತ ಅಪರಿಚಿತ.
ಈತ ನನ್ನ ಸ್ನೇಹಿತ ಆದರೆ ಇವನಿಗೆ ಯಾರೂ ಸ್ನೇಹಿತರೇ ಇರಲಿಲ್ಲ. ಇವನ ಬಳಿ ಸಕಲೈಶ್ವರ್ಯವಿತ್ತು ಆದರೆ ಈತ ಬಡವ. ಇವನು ಸದಾ ನಗುತ್ತಲೇ ಇದ್ದ ಆದರೆ ಕೊನೆಗೂ ಸಂತೋಷ ಪಡಲೇ ಇಲ್ಲ. ಇವನಿಗೆ ಹಲವಾರು ಹೆಸರುಗಳಿದ್ದವು ಆದರೂ ಹೇಳಹೆಸರಿಲ್ಲದವನಾಗಿದ್ದ. ಇಂದು ಕೂಡ ಈತನನ್ನು ಕಂಡೆ, ಆದರೆ ಈತ ಸತ್ತು ಹಲವಾರು ವರುಷಗಳಾಯ್ತು.

ಇವನ ಜೀವನ ನನ್ನಲ್ಲಿ ಇನ್ನೂ ಹಲವಾರು ಗೊಂದಲಗಳನ್ನು ಸೃಷ್ಟಿಸಿದ್ದವು. ಇವನು ದೇವರಿಗೆ ಪೂಜೆ ಮಾಡಿದ್ದೇ ಇಲ್ಲ. ದೈವೀಭಕ್ತನೆಂದು ಮನಸಾರೆ ಹೇಳಿಕೊಳ್ಳುತ್ತಿದ್ದ. ಇವನದೇ ಸಂಸಾರವಿತ್ತು. ಇವನು ಮದುವೆಯೇ ಅಗಿರಲಿಲ್ಲ. ಇವನನ್ನು ಬಲ್ಲವರು ಕರುಣಾಮಯಿಯೆಂದು ಪೂಜಿಸಿತ್ತಿದ್ದರು, ಇವನು ಇರುವವರೆಗೂ ಒಂದು ನಯಾ ಪೈಸಾ ದಾನ ಮಾಡಿದ್ದೇ ಇಲ್ಲ. ಇವನನ್ನು ಹಲವರು ಗುರುವೆಂದು ಸ್ವೀಕರಿಸಿದ್ದರು ಆದರೆ ಇವನು ಎಂದೂ ಯಾರಿಗೂ ಏನೂ ಕಲಿಸಲು ಪ್ರಯತ್ನಿಸಲೂ ಇಲ್ಲ.
ಇವನು ಹಲವಾರು ಹೆಣ್ಣುಗಳ ಸಹವಾಸ ಮಾಡಿದ್ದ, ಆದರೆ ಎಂದೂ ಯಾರೊಂದಿಗೂ ಅನೈತಿಕವಾಗಿ ನಡೆದುಕೊಂಡೇ ಇರಲಿಲ್ಲ. ಇವನು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಸಹ ಸೋಲಿನ ಬೇಗೆಯಲ್ಲಿ ಬೇಯುತ್ತಲೇ ಇದ್ದ. ಈತ ನಿರಂತರ ಪರಿಶ್ರಮ ಪಡುತ್ತಲೇ ಇದ್ದ ಆದರೂ ಸುಖಾಸೀನನಾಗೇ ಕಂಡ. ಇವನು ಇವನದ್ದೇ ಆದ ಪ್ರತ್ಯೇಕ ದಾರಿ ಸೃಷ್ಟಿಸಿ ಓಡುತ್ತಿದ್ದ ಆದರೂ ಇವನಿಗೆ ಸ್ಫರ್ಧಿಗಳಿದ್ದರು. 
ಇವನು ಹಲವಾರು ಬಾರಿ ಹುಟ್ಟಿ ಹಲವಾರು ಬಾರಿ ಸತ್ತಿದ್ದ ಆದರೆ ಇವನಿಗೆ ಇದ್ದದ್ದು ಒಂದೇ ಜೀವನ. ಈಗಲೂ ಸತ್ತು ಹಲವಾರು ವರುಷಗಳಾಯ್ತು ಆದರೂ ಬದುಕಿದ್ದ. ನಮ್ಮ ಜೊತೆಯಲ್ಲೇ ಓಡಾಡಿಕೊಂಡಿದ್ದ ಆದರೂ ನೂರು ಊರುಗಳಾಚೆ, ಜನರಿಂದ ತುಂಬಾ ದೂರವಿದ್ದ. 

ಇವನಿಗೂ ಕೂಡ ಹೃದಯವೆಂಬುದಿತ್ತು ಅದೂ ಕೂಡ ಮಿಡಿಯುತ್ತಲಿತ್ತು. ಇವನಿಗೂ ದೇಹವೆಂಬುದಿತ್ತು. ಇವನೂ ಮನುಷ್ಯನಾಗಿದ್ದ. ಕಲಾವಿದ!

2 comments:

  1. ಕಲಾವಿದ anta helidri
    amele?

    ReplyDelete
    Replies
    1. ಅಮೇಲೆಂತ ಮಾರ್ರೇ ಹೇಳ್ಬೇಕಿತ್ತು ನಿಮಗೆ??? :-) ಆಷ್ಟು ಪ್ರಶ್ನೆಗಳಿಗೆ ಅದೇ ಉತ್ತರ ಮತ್ತು ಮುಕ್ತಾಯ :)

      Delete