ಓದಿ ಓಡಿದವರು!

Monday 13 February 2012

ಲವ್-ಡೇ!

ಮುನ್ನುಡಿ: ಕಥೆ ಓದುವ ಸಾಮರ್ಥ್ಯವಿರುವರಿಗೆ, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುವ ಸಮಸ್ತರಿಗೂ ಮತ್ತು ವಿಶೇಷವಾಗಿ ಎಲ್ಲ ತರುಣ, ತರುಣಿ ಮತ್ತು ಮುಖ್ಯವಾಗಿ ತಾರುಣ್ಯರಿಗೆ.
ಪ್ರೇಮಿಗಳ ದಿನಾಚರಣೆ ಎಷ್ಟು ಸರಿ ಎಷ್ಟು ತಪ್ಪು ನಿಮಗೆ ಬಿಟ್ಟದ್ದು!


ಇನ್ನೂ ೮ ಘಂಟೆ, ಕೈಲಿರುವ ಗುಲಾಬಿ ಇನ್ನು ಮೂರು ಘಂಟೆಯಷ್ಟರಲ್ಲಿ ಮುದುಡುವುದಿಲ್ಲ ತಾನೇ ಎಂದು ಜಾಗರೂಕತೆಯಿಂದ ಇಟ್ಟುಕೊಂಡೆ. ಅವಳಿನ್ನೂ ಬರುವುದು ೧೧ ಘಂಟೆಗೆ. ಕೂತಲ್ಲಿ ಕೂರಲಾಗಲಿಲ್ಲ. ಇವತ್ತೇನೋ ಪಾರ್ಕ್ ನಲ್ಲಿ ಜನ ತುಂಬಾ ಇದ್ದಾರೆ. ಎಲ್ಲಾ ಹುಡುಗ ಹುಡುಗಿಯರು ಕೆಂಪು ಕೆಂಪಾಗಿ ಓಡಾಡುತ್ತಿದ್ದಾರೆ. ಅವಳು ಬರುವುದು ೧೧ ಘಂಟೆಗೆ ಎಂದು ತಿಳಿದಿದ್ದೂ ಇಷ್ಟು ಬೇಗ ಬರುವ ಕಾರಣವೇನೆಂದು ತಿಳಿಯದೆ ನನ್ನ ಹೆಡ್ಡತನಕ್ಕೆ ನಾನೇ ನಕ್ಕೆ. ಅವಳು ಬೇಗ ಬರಬಹುದಾ ಎಂದು ಬರುವ ದಾರಿಯನ್ನು ಆಗಾಗ ನೋಡತೊಡಗಿದೆ. ಅದೇನೋ ಒಂದು ರೀತಿಯ ಖುಷಿ. ಕಾಯುವುದರಲ್ಲಿ ನಿಜವಾಗಲೂ ಸುಖವಿದೆ, ಮಜವಿದೆ. ಕಣ್ಮುಚ್ಚಿದರೂ, ಕಣ್ತೆರೆದರೂ ಅವಳ ನಗು, ಮಗುವಿನಂತ ಮೋರೆಯೇ ಕಣ್ಣಮುಂದೆ ಬಂದಂತಾಗುತ್ತಿದೆ. ಏನೇನೋ ಹಳೆಯ ನೆನಪುಗಳು. ಹಾಗೇ ಆನಂದಿಸುತ್ತಿದ್ದ ನನ್ನನ್ನು ನನ್ನ ನೆನಪುಗಳಿಂದ ಹೊರಗೆಳೆದುಕೊಂಡು ಬಂದು ನನ್ನ ಬೆಂಚಿನ ಮೇಲೆ ಕೂಡ್ರಿಸಿದರು ಇಬ್ಬರು ವಿಚಿತ್ರ ಆಕೃತಿಯ ವ್ಯಕ್ತಿಗಳು. ಇವರು ಇದೇ ಊರಿನ ವ್ಯಕ್ತಿಗಳು ಹೌದಾ ಎಂದು ಒಮ್ಮೆ ಸಂದೇಹವಾಯ್ತು. ತಲೆಯ ಮೇಲೆ ಆ ವಿಚಿತ್ರ ಟೋಪಿ, ಮೈತುಂಬ ಬಣ್ಣ ಬಣ್ಣದ ವಿಚಿತ್ರ ಹೊಲಿಗೆಯ ಬಟ್ಟೆ, ಉದ್ದನೆಯ ಚಪ್ಪಲಿಗಳು. ಅಪಾದ ಮಸ್ತಕವಾಗ್ ಒಮ್ಮೆ ಇಬ್ಬರನ್ನೂ ನೋಡಿದೆ. ಬಂದವರೇ ನನ್ನ ಎಡಬಲದಲ್ಲಿ ಕುಳಿತರು. ಇಬ್ಬರನ್ನೂ ಆಶ್ಚರ್ಯದಿಂದ ನೋಡಿದೆ. ಇಬ್ಬರೂ ನನ್ನನ್ನೇ ನೋಡುತ್ತಿದ್ದರು. ಅರೆ! ಇವರ್ಯಾರು, ನನ್ನನ್ನೇಕೆ ಹೀಗೆ ನೋಡುತ್ತಿದ್ದಾರೆ. ಅಲ್ಲ ಮುಂಚಿತವಾಗಿಯೇ ಆಕ್ರಮಿಸಿರುವ ಬೆಂಚಿಗೆ ಬಂದು ಕೂರುವಾಗ ಅನುಮತಿ ಕೇಳುವ ಕನಿಷ್ಟ ಮ್ಯಾನರ್ಸ್ ಇಲ್ವ ಇವರಿಗೆ ಎಂದು ಸಿಟ್ಟುಬರದೇ ಇರಲಿಲ್ಲ. ಇಬ್ಬರೂ ಒಟ್ಟಿಗೆ ಯಾರದರೂ ಬರ್ತಾರ ಎಂದು ಕೇಳಿದರು. ಇಬ್ಬರ ಕಡೆಗೂ ಒಮ್ಮೆ ತಿರುಗಿ ಹೌದು ಎಂಬಂತೆ ತಲೆಯಾಡಿಸಿದೆ. ಎಡಗಡೆ ಕೂತಿದ್ದವನು ಬರಲಿ ಬಿಡಿ ಎಂದು ಹೇಳಿ ಸುಮ್ಮನೆ ಕೂತರು. ನಾನೇ ಎದ್ದು ಹೋಗುವುದೇ ಒಳ್ಳೆಯದ ಎಂದು ಯೋಚಿಸಿದೆ. ಛೇ ಎಲ್ಲ ಸುಂದರ ನೆನಪುಗಳನ್ನ ಹಾಳು ಮಾಡಿದರು. ಹೋಗುತ್ತಾರೇನೋ ಕಾದೆ. ಇಬ್ಬರೂ ಎದ್ದೇಳುವಹಾಗೆ ಕಾಣಲಿಲ್ಲ. ಸುತ್ತ ಎಲ್ಲ ಹುಡುಗ ಹುಡುಗಿಯರನ್ನ ನೋಡುತ್ತಾ ಏನೋ ಒಳಗೊಳಗೇ ಮಾತನಾಡುತ್ತಾ ಇದ್ದಂಗೆ ಕಂಡರು. ಸರಿ ನಾನೇ ಸ್ಥಳ ಬದಲಾವಣೆ ಮಾಡುವುದು ಒಳ್ಳೆಯದೆಂದು ಎದ್ದು ಹೊರಡಲು ಅನುವಾದೆ. ಥಟ್ಟನೆ ಇಬ್ಬರೂ ನನ್ನ ಕೈ ಹಿಡಿದು ಅರೆ ಎಲ್ಲಿ ಹೊರಟಿರಿ ಕೂತ್ಕೊಳ್ಳಿ ಎಂದರು. ನಾನು ಏನೇ ಪ್ರತಿಕ್ರಿಯಿಸುವ ಮುನ್ನ ಹಾ ಗೊತ್ತು ಬಿಡಿ ಇವತ್ತು ಯಾರ ತೊಂದರೆ ತಕರಾರು ಇಲ್ಲದೆ ನಿಮ್ಮ ಹುಡುಗಿಯ ಜೊತೆ ಆರಾಮವಾಗಿ ಕಾಲ ಕಳೆಯೋಣ ಅಂತ ಇಲ್ಲಿಗೆ ಬಂದ್ರೆ ಯಾರಪ್ಪಾ ಇವರಿಬ್ಬರು ರಾಹು ಕೇತು ತರ ತಗಲಾಕೊಂಡ್ರು ಅಂತ ತಾನೆ ನಿಮ್ಮ ಯೋಚನೆ ಎಂದು ನಕ್ಕರು. ನನ್ನ ಎರಡೂ ಕೈ ಇನ್ನೂ ಹಿಡಿದುಕೊಂಡೇ ಮಾತು ಮುಂದುವರೆಸಿದರು, ಹೆದರ್ಕೋಬೇಡಿ ನನ್ನ ಹೆಸರು ಹು, ನಾನು ಉಹು ಎಂದು ಎಡ ಬಲ ಕೂತಿದ್ದವರು ಹೇಳಿದರು. ಇವರು ಯಾರಾದರೆ ನನಿಗೇನಾಗಬೇಕಿತ್ತು. ಹು ಅಂತೆ ಉಹು ಅಂತೆ ಮನದಲ್ಲೇ ಈ ಶನಿಗಳು ಎದ್ದು ಹೋದರೆ ಸಾಕೆಂದು ಕೊಸರಾಡಿಕೊಂಡು ಕೈಗಳನ್ನು ಬಿಡಿಸಿಕೊಂಡೆ. ನನ್ನನ್ನು ನೋಡಿ ಮತ್ತೆ ನಕ್ಕರು. ಉಹು ನನ್ನ ಕಿವಿಯ ಬಳಿ ಬಂದು ಇದು ಸರಿನಾ ಎಂದ, ಏನು ಹೇಳುತ್ತಿದ್ದಾನಿವನು ಅರ್ಥವಾಗದೆ ಅವನ ಕಡೆ ತಿರುಗಿ ಪ್ರಶ್ನಾರ್ಥಕವಾಗಿ ನೋಡಿದೆ. ಇತ್ತ ಕಡೆಯಿಂದ ಹು ಜೋರಾಗಿ ಏನ್ ಪ್ಲಾನ್ ಇವತ್ತು. ಫುಲ್ ಮಜಾನಾ!! ಎಂದು ಮತ್ತೆ ಅಸಹ್ಯ ಹುಟ್ಟಿಸುವ ನಗು ನಕ್ಕ. ಉಹು ಮತ್ತೆ ಮಾತು ಮುಂದುವರೆಸಿದ “ವಾಲೆಂಟೈನ್ಸ್ ಡೇ ಅಂತೆ ಮಣ್ಣು, ಅಲ್ನೋಡು ಅಸಹ್ಯ ನನ್ನ ಮಕ್ಕಳು ಯಾವ ಜಾಗ ಅಂತ ಇಲ್ಲ, ಸಮಯ ಅಂತ ಇಲ್ಲ ನಾಚಿಕೆ ಮಾನ ಮರ್ಯಾದೆ ಬಿಟ್ಟು ಹೆಂಗೆ ಓಡಾಡ್ತಿದಾರೆ ನೋಡು, ಚಪ್ಪಲಿಯಲ್ಲಿ ಹೊಡಿಬೇಕು ಇವರಿಗೆ” ಎಂದ ಹೋ ಇವತ್ತು ಪ್ರೇಮಿಗಳ ದಿನಾನಾ ಅದಕ್ಕೆ ಮತ್ತೆ ಗುಲಾಬಿ ಬೆಲೆ ಇವತ್ತು ಇಷ್ಟಿರಿವುದು, ಮತ್ತು ಪಾರ್ಕ್ ನಲ್ಲಿ ಇಷ್ಟು ಜನ ತುಂಬಿರುವುದು ಎಂದು ಯೋಚಿಸಿದೆ. ಆದರೆ ಇವನ್ಯಾಕೆ ಹೀಗೆ ಇವರನ್ನ ಬಯ್ಯುತ್ತಿದ್ದಾನೆ. ಅವರು ಹೇಗಿದ್ದರೆ ಇವನಿಗೇನಂತೆ ಎಂದು ಹು ಕಡೆ ತಿರುಗಿದೆ ಅವನು ತಲೆ ಬಗ್ಗಿಸಿ ಏನೂ ಮಾತನಾಡದೆ ಕೂತಿದ್ದ. ನಿಧಾನವಾಗಿ ಮತ್ತು ಶಾಂತವಾಗೇ ನನ್ನ ಕಡೆ ತಿರುಗಿ ಅವರು ನಡೆದುಕೊಳ್ಳುತ್ತಿರುವ ರೀತಿ ಅಲ್ಲ ತೊಂದರೆ ಇರುವುದು ನಮ್ಮ ಕಣ್ಣುಗಳಲ್ಲಿ, ಹೆಣ್ಣು ಗಂಡು ಜೊತೆಗಿದ್ದಾರೆ ಎಂದಾಕ್ಷಣ ಅವರ ಬಗ್ಗೆ ಕೆಟ್ಟದಾಗಿ ಕಲ್ಪಿಸುವುದು ಸಮಾಜದ ಮಾಮೂಲಿನ ಸಂಗತಿ ತಾನೆ. ಅದರಲ್ಲೂ ಇವರು ಪಾಪ ಇನ್ನೂ ಹುಡುಗ ಹುಡುಗಿಯರು ಎಂದು ಪಾರ್ಕಿನಲ್ಲಿದ್ದ ಪ್ರೇಮಿಗಳನ್ನು ಸಮರ್ಥಿಸಿದ. ಉಹು ನನ್ನನ್ನು ಅವನ ಕಡೆ ತಿರುಗಿಸಿ, ಏನೂ ನಮ್ಮ ದೃಷ್ಟಿಕೋನ ತಪ್ಪಂತಲ್ಲವೇ ಬಾ ತೋರಿಸುತ್ತೀನಿ ನಿನಗೆ ಆಮೇಲೆ ನೀನೇ ನಿರ್ಧರಿಸುವಂತೆ ಎಂದು ನನ್ನ ಕೈ ಹಿಡಿದು ಎದ್ದು ನಿಂತ. ಅರೆರೆ! ಇದೇನಪ್ಪ ನಾನು ಯಾರು ಇವರ್ಯಾರು, ಇವರೇಕೆ ನನಗೆ ಈ ಕಥೆಗಳನ್ನ ಹೇಳುತ್ತಿದ್ದಾರೆ. ಸುಮ್ಮನೆ ನನ್ನನ್ನ ಇದರಲ್ಲಿ ಸಿಕ್ಕಿಸುತ್ತಿದ್ದಾರೋ, ಏನು ನಡೆಯುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ, ಪಾರ್ಕಿನಿಂದ ಮಾಯವಾಗಿದ್ದೆವು!
ಉಹು ನನ್ನ ಕೈ ಹಿಡಿದು ನಿಂತಿದ್ದ ಪಕ್ಕದಲ್ಲಿ ಹು ಕೂಡ ನಿಂತಿದ್ದ. ಎಲ್ಲಿದ್ದೇವೆಂದು ಸುತ್ತ ನೋಡಿದೆ, ಇದಾವುದೋ ನಿರ್ಜನ ಪ್ರದೇಶ, ನಗರ ಹೊರವಲಯವಿದ್ದರೂ ಇರಬಹುದು. ಅರೆ! ಕಾರಿನ ಮೇಲೆ ನಿಂತಿದ್ದೆವು. ಉಹು ಬಗ್ಗಿ ಕಾರಿನ ಕಿಟಕಿಯಿಂದ ನೋಡುವಂತೆ ಹೇಳಿದ, ಹಾಗೆಯೇ ಮಾಡಿದೆ ಏನಿರಬಹುದೆಂಬ ಕುತೂಹಲವಿತ್ತು. ಕಾರಿನೊಳಗಡೆ ಗಂಡು ಹೆಣ್ಣು ಸವಿ ಹಂಚಿಕೊಳ್ಳುತ್ತಾ, ಕ್ರಿಯಾಶೀಲರಾಗಿದ್ದರು. ನೋಡಲಾಗಲಿಲ್ಲ ಮುಖ ಕಿವುಚಿಕೊಂಡು ಮೇಲೆದ್ದೆ. ಮಾತು ಹೊರಡಲಿಲ್ಲ. ಏನಿದೆಂಬಂತೆ ಮುಖ ಮಾಡಿದೆ. ಇಲ್ಲಿಗೆ ಯಾಕೆ ಬಂದಿದ್ದೆವೆಂಬುದು ಅರ್ಥವಾಗಲಿಲ್ಲ. ಉಹು ನನ್ನ ರಟ್ಟೆ ಹಿಡಿದು ನೋಡಿದೆಯಾ ಇದಕ್ಕೆ ಏನು ಹೇಳ್ತೀಯಾ? ಇದು ನಮ್ಮ ಸಂಸ್ಕೃತಿನಾ? ಇದೇ ಪ್ರೇಮಿಗಳ ದಿನದ ವಿಶೇಷಾನಾ? ಇಷ್ಟೇ ಅಲ್ಲ ಬಾ ಎಂದು ಮತ್ತೆ ಅಲ್ಲಿಂದ ಮಾಯವಾದೆವು.
ಇದಾವುದೋ ಹೋಟೆಲೋ ರೆಸೋರ್ಟೋ ಇರಬೇಕು. ಉಹು ಒಂದು ಗುಂಪಿನ ಕಡೆ ತೋರಿಸುತ್ತಾ ನೋಡು ಆ ಅಬ್ಬರದ ಸಂಗಿತ, ಸಿಗರೇಟು, ಕುಡಿತ, ಕುಣಿತ ಈ ಅರೆ ನಗ್ನ ಉಡುಗೆ ತೊಡುಗೆ, ಹುಡುಗ ಹುಡುಗಿ ಎಂಬ ಬೇಧವಿಲ್ಲದೆ ಒಬ್ಬರ ಮೇಲೆ ಒಬ್ಬರು ಬಿದ್ದು ಅಸಹ್ಯ ನರ್ತನ ಹೇಗಿದೆ ಪ್ರೇಮಿಗಳ ದಿನದ ಕಾರುಬಾರು. ಪ್ರೇಮ ಈ ಸ್ವರೂಪಕ್ಕೆ ಬಂದಿದೆಯಾ? ಇದು ನಿಜವಾಗಲೂ ಪ್ರೇಮವೇನಾ? ಪ್ರೇಮದ ಹೆಸರಿನಲ್ಲಿ ಎಂಥ ವಿಕೃತವಾದ ಆಚರಣೆಗಳನ್ನು ಮಾಡುತ್ತಿದ್ದೇವೆ ನೋಡು. ಇಷ್ಟೇ ಅಲ್ಲ ಬಾ ಇನ್ನೂ ಇದೆ ಎಂದು ಕೈ ಹಿಡಿದ ಹು ಕಡೆ ನೋಡಿದೆ ಯಾಕೋ ಮನುಷ್ಯ ಏನೂ ಹೇಳುವ ಸ್ಥಿತಿಯಲ್ಲಿದ್ದಂತೆ ಕಾಣಿಸಲಿಲ್ಲ. ಮಾಯವಾದೆವು.
ಪಾರ್ಕಿನಲ್ಲಿ ಬಂದು ಉಹು ತಾನು ಗೆದ್ದಂತೆ ನೋಡಿದೆಯಾ ಗೊತ್ತಾಯ್ತಾ ಹೇಗಿದೆ ವ್ಯಾ-ಲೆಂಟೈನ್ ಡೇ ಎಂದು ಸುಮ್ಮನಿದ್ದ ಹು ಕಡೆ ತಿರುಗಿದ. ಆತ ಸೋಲನ್ನು ಒಪ್ಪಿಕೊಂಡಂತೆ ಕಾಣಲಿಲ್ಲ. ಹು ಸುಮ್ಮನೆ ಮುಗುಳ್ನಗುತ್ತಿದ್ದುದನ್ನು ಕಂಡು ಉಹು ರೊಚ್ಚಿಗೆದ್ದು ಈ ದಿನವನ್ನ ನಮ್ಮ ದೇಶದ ಕಾಲೆಂಡರ್ ನಿಂದಲೇ ತೆಗೆದುಹಾಕಬೇಕು. ಎಲ್ಲಾ ಪಾಶ್ಚಾತ್ಯ ಸಂಸ್ಕೃತಿಯನ್ನ ನಕಲು ಮಾಡಲು ಹೊರಟಿದ್ದಾರೆ ನಮ್ಮ ಯುವಜನತೆ. ಅರ್ಥವಿಲ್ಲದ ಆಚರಣೆಗಳನ್ನ ನಾವು ತಡೆಯಬೇಕು, ಚಿಕ್ಕ ಹುಡುಗರಿಗೂ ಇದು ತಪ್ಪೆಂದು ಅರಿವು ಮೂಡಿಸಬೇಕು ಎಂದು ತನ್ನ ಮಾತುಗಳನ್ನು ಮುಂದುವರೆಸುತ್ತಿದ್ದ, ಹು ಈಗ ಮೌನ ಮುರಿದು ಯಾವುದು ತಪ್ಪು ಅದರಲ್ಲಿ ಎಂದು ಕೇಳಿದ. ಇಷ್ಟೆಲ್ಲಾ ನೋಡಿಯಾದ ಮೇಲೆ ಇದೇನಾ ಕೇಳ್ತಿರೋದು ಎಂದು ಉಹು ಉತ್ತರಿಸಿದ. ಹು ನನ್ನ ಕೈ ಹಿಡಿದು ಬಾ ಎಂದು ಕರೆದುಕೊಂಡೊಯ್ದ, ಮೂವರೂ ಮತ್ತೆ ಮಾಯವಾದೆವು.
ಕಾರಿನ ಒಳಗಡೆ ಹಿಂದಿನ ಸೀಟ್ ಹಿಂಬದಿಯಲ್ಲಿ ಮೂವರೂ ಅವಿತು ಕೂತಹಾಗಿತ್ತು. ಚಿಕ್ಕ ಜಾಗ, ಹು ನನ್ನ ಕೈ ಹಿಡಿದಿದ್ದ, ಉಹು ನನ್ನನ್ನೇ ದುರುಗುಟ್ಟಿನೋಡುತ್ತಿದ್ದ. ಹಿಂದೆ ತಮ್ಮ ಪ್ರಪಂಚದಲ್ಲಿ ಮಗ್ನರಾಗಿದ್ದ ಪ್ರೇಮಿಗಳೆಂಬೋ ಪ್ರೇಮಿಗಳು. ಅಲ್ಲಿ ಒಂದು ಕ್ಷಣವೂ ಕೂಡ್ರಲಾಗಲಿಲ್ಲ, ಕಿವಿ ಗಟ್ಟಿಯಾಗಿ ಮುಚ್ಚಿ, ಮುಖ ಹಿಂಜಿ ಕೂತಿದ್ದೆ. ಹು ನನ್ನನ್ನು ನೋಡಿ ನೋಡಿ ಒಳಗೊಳಗೇ ನಗುತ್ತಿದ್ದ. ಉಹು ಏನೂ ಭಾವವೇ ಇಲ್ಲದೆ ಕೂತಿದ್ದ. ಸ್ವಲ್ಪ ಸಮಯದ ನಂತರ ಹು ಕಿವಿಯಿಂದ ಕೈ ತೆರೆಸಿದ. ಹಿಂದೆ ಕೇಳುತ್ತಿದ್ದ ನಗುವಿನ ಶಬ್ದದಷ್ಟೇ ಜೋರಾಗಿ ಉಸಿರು ಕೇಳಿಸುತಿತ್ತು. ಆಕೆ  ಲವ್ ಯು ಎಂದಳು ಲವ್ ಯು ಟೂ ತರ್ಲೆ ಎಂದ ಆತ. ಮುಂದಿನ ವರ್ಷ ನಮ್ ಕನಸಿನ ಮನೇಲಿ ನಾವ್ ಹೀಗೇ ಇರತೀವೇನೋ ಎಂದಳು ಆಕೆ, ಇಲ್ಲ ಜಾಗ ದೊಡ್ಡದಾಗಿರುತ್ತೆ ಹಿಂಗೆ ಯಾಕೆ ಎಂದು ಛೇಡಿಸಿದ ಆತ. ಇಬ್ಬರೂ ಮುದ್ದು ಮುದ್ದಾಗಿ ನಕ್ಕರು. ಥು ಆ ಮೀಸೆ ಬಿಡೋ ನೀನು ಅಸಹ್ಯವಾಗಿದ್ಯ, ಮದುವೆ ಆದ್ಮೇಲೆ ಹಿಂಗಿರು ಆಮೇಲ್ ಇದೆ ನಿಂಗೆ ಸೀರೆ ಉಡ್ಸ್ತೀನಿ. ಒಹೊ ನೀನ್ ಉಗುರು ಕಟ್ ಮಾಡ್ತೀಯಾ ಹೇಳು ಒಳ್ಳೇ ರಾಕ್ಷಸಿ ಇದ್ದಂಗೆ ಇದ್ಯ ಥು. ಎಷ್ಟು ಕಷ್ಟ ಪಟ್ಟು ಬೆಳೆಸಿದ್ದೀನಿ ಹೋಗೋ ಕೋತಿ ಎಂದು ಅವರದೇ ಪ್ರಪಂಚದಲ್ಲಿ ಮಾತುಗಳು, ಮುತ್ತುಗಳು ಉದುರುತ್ತಲೇ ಇದ್ದವು, ಮುಳ್ಳಿನ ಮೇಲೆ ಕೂತಹಾಗಿತ್ತು. ಮಾಯವಾದೆವು
ರೆಸೋರ್ಟ್, ಗುಂಪಿನ ನಡುವೆ ಇದ್ದೆವು ಒಂದು ಕೈ ಹು ಹಿಡಿದಿದ್ದ, ಪಕ್ಕದಲ್ಲಿ ಉಹು ನಿಂತಿದ್ದ, ಇನ್ನೊಂದು ಕೈಲಿ ವೈನ್ ಹಿಡಿದಿದ್ದೆ. ಅದೇ ಅಬ್ಬರದ ಹಾಡು ಎಲ್ಲಾ ಕುಣಿಯುತ್ತಿದ್ದರು, ನಾವು ನಿಂತಿದ್ದೆವು ನಮ್ಮನ್ನು ಜೊತೆ ಸೇರಿಸಿಕೊಂಡು ಎಳೆದೊಯ್ದರು ಹಾಡಿಗೆ ತಕ್ಕಂತೆ ಕುಣಿದೆವು, ಕೂಗಿದೆವು, ಕುಡಿದೆವು, ಹಾಡಿದೆವು, ಸುಸ್ತಾಯ್ತು ಅಲ್ಲಿಂದ ಹೊರನಡೆದೆವು. ಮಜಾ ಬಂತು ಇಲ್ಲಿ ಏನ್ ತಪ್ಪಿತ್ತು ಗೊತ್ತಾಗಲಿಲ್ಲ. ಆಗಲೆ ದೂರದಲ್ಲಿ ನಿಂತು ನೋಡಿದಾಗಿನ ತಪ್ಪು ಮಾಡುವಾಗ ಗೊತ್ತಾಗುವುದಿಲ್ಲವಾ ಪ್ರಶ್ನೆ ಹುಟ್ಟಿತು! ಎಲ್ಲಾ ಆನಂದಿಸುತ್ತಿದ್ದವರ ಮುಖ ನೋಡಿದೆ ಆ ಅಮಾಯಕ, ಮುಗ್ಧ ನಗು ಮುಖಗಳು, ತೇಲಾಡುತಿದ್ದರು ತಮ್ಮದೇ ಪ್ರಪಂಚದಲ್ಲಿ, ಅವರನ್ನು ನೋಡುತ್ತಲೇ ಕಾರಿನಲ್ಲಿ ನಡೆದ ದೃಶ್ಯ ಮನಸಿಗೆ ಬಂತು ತಮ್ಮ ತಮ್ಮ ಜೀವನ ಅವರು ಬೇಕಾದಂಗೆ ಬದುಕುತ್ತಿದ್ದಾರೆ ಏನು ತಪ್ಪಿತ್ತು ಅದರಲ್ಲಿ, ಪ್ರೀತಿ ಎರಡೂ ಕಡೆಯಿಂದ ನಿಷ್ಕಲ್ಮಷವಾದಲ್ಲಿ, ತಮ್ಮ ಖಾಸಗಿ ಜೀವನದಲ್ಲಿ ಹೇಗಿದ್ದರೆ ಯಾರಿಗೆ ಏನಾಗಬೇಕಿದೆ?
ಪಾರ್ಕುಗಳ ಪೊಟರೆಗಳು, ರಸ್ತೆ ತಿರುವುಗಳು, ಕಾಲೇಜು, ಮಾಲ್ ಗಳು, ಸಿನಿಮಾ ಥಿಯೇಟರ್ ಗಳು, ಕೈಕೈ ಹಿಡಿದು ಅಲೆದಾಟಗಳು, ಕಲರ್ ಕಲರ್ ಗಿಫ್ಟುಗಳು, ತಿಂಡಿಗಳು, ತುಂಡು ಉಡುಗೆಗಳು, ತರಹೇವಾರಿ ಊಟಗಳು, ಮತ್ತಿನ ಸಾಮಾಗ್ರಿಗಳು, ಪ್ರೊಪೋಸಲ್ ಗಳು, ಪ್ರೈವೆಸಿಗಳು, ಎಲ್ಲವೂ ಹು ತೋರಿಸಿದಂತೆ ಸರಿಯಾಗೇ ಕಂಡವು, ಆದರೆ ಮತ್ತೆ ಉಹು ತೋರುವಂತೆ ತಪ್ಪಾಗೆ ಕಂಡವು. ಯಾವುದು ಸರಿ ಯಾವುದು ತಪ್ಪು ಎಂದು ಗೊಂದಲ ಮನದಲ್ಲಿ ಮೂಡಿತು. ಪಕ್ಕದಲ್ಲಿ ಇವರುಗಳು ಬೇರೆ ಮಾತಿಗೆ ಮಾತು ಬೆಳೆಸುತ್ತಲೇ ಇದ್ದರು. ಮಧ್ಯ ನಾನು ಎಡ ಬಲ ಹು ಮತ್ತು ಉಹು. ನೀನೂ ಈ ಪ್ರೇಮಿಗಳ ದಿನವನ್ನ ಆಚರಿಸಬೇಕಾ ಅಂತ ಉಹು, ಪ್ರೇಮಿಗಳ ದಿನವನ್ನ ವರ್ಷಕ್ಕೆ ಒಂದು ದಿನ ಅಲ್ಲ ಇಡೀ ವರ್ಷ ಆಚರಿಸು ಅಂತ ಹು. ಉಹು: ಪ್ರೀತಿಗೆ ಮಹಲು, ಗೋಪುರಗಳನ್ನ ಕಟ್ಟಿರೋ ಸಂಸ್ಕೃತಿ ನಮ್ಮದು ಅದನ್ನ ಬೀದಿಗಳಿಗೆ ತರೋ ಸಂಸ್ಕೃತಿ ನಮಿಗೆ ಬೇಕಾ? ಹು: ಓಪನ್ ಆಗಿ ಪ್ರೀತಿ ಕೂಡ ಹಂಚಿಕೊಳ್ಳೋಕಾಗದೇ ಕದ್ದು ಮುಚ್ಚಿ ಪ್ರೀತಿ ಮಾಡು ಅಂತ ನಮ್ಮ ಸಂಸ್ಕೃತಿ ಹೇಳುತ್ತಾ? ಉಹು: ಪ್ರೀತಿ ಹೆಸರಿನಲ್ಲಿ ಅನೈತಿಕವಾಗಿ ನಡೆದುಕೊಳ್ಳೋದನ್ನ ಪ್ರೀತಿ ಅಂತಾರ? ಹು: ಒಬ್ಬರಿಗೊಬ್ಬರು ಬದ್ಧರಾಗಿರೋವಾಗ, ಇಬ್ಬರ ಸಮ್ಮತಿಯೂ ಇದ್ದಲ್ಲಿ ತಮ್ಮ ರೀತಿಯಲಿ ಬದುಕುವುದರಲ್ಲಿ ತಪ್ಪೇನು? ಉಹು: ಒಬ್ಬರ ಜೊತೆ ಮನಸು ದೇಹ ಹಂಚಿಕೊಂಡು ಮತ್ತೆ ಇನ್ನೊಬ್ಬರ ಜೊತೆ ಮದುವೆಯಾಗಿರೋ ಎಷ್ಟು ಪ್ರಕರಣಗಳಿಲ್ಲ ಎಲ್ಲಾ ಇದೇ ಪ್ರೀತಿಯ ಮತ್ತಿನಲ್ಲಿ ಮಾಡಿಕೊಂಡಿದ್ದಲ್ಲವೇನು? ಹು: ಇದು ಇಬ್ಬರು ಪ್ರೇಮಿಸಿದವರನ್ನ ಮದುವೆಯಾಗದ ಹಾಗೆ ತಡೆಯೋ ಸಮಾಜದ ತಪ್ಪಾ, ಇಲ್ಲ ಪ್ರೇಮಿಗಳ ತಪ್ಪಾ? ಉಹು: ಇದು ಅಷ್ಟು ಸುಲಭವಾದ ಪ್ರಶ್ನೆ ಅಲ್ಲ, ಸುಮ್ಮನೆ ಯಾರನ್ನೋ ಇಷ್ಟ ಪಟ್ಟು ಪ್ರೀತಿ ಮಾಡೋದು ದೊಡ್ಡ ವಿಷಯವಲ್ಲ, ಮದುವೆ ಅನ್ನೋದು ಇಡೀ ಮುಂದಿನ ಜೀವನದ ನಿರ್ಧಾರ. ಹುರುಪಿನಲ್ಲಿ ಪ್ರೀತಿ ಮಾಡಿ ನಂತರ ಆಗುವ ಬ್ರೇಕಪ್ ಗಳಿಗೆ ಯಾರು ಹೊಣೆ? ಹು: ಇಡೀ ಸಮಾಜ, ಇಡೀ ವ್ಯವಸ್ಥೆ ಹೊಣೆ. ಪ್ರೀತಿಯನ್ನು ಮುರಿಯಲು ಒಟ್ಟಾಗುವ ನಮ್ಮ ಸಮಾಜ, ಪ್ರೇಮವನ್ನು ಒಂದುಗೂಡಿಸುವ ಕಾರ್ಯದಲ್ಲಿ ಯಾಕೆ ಒಟ್ಟಾಗಿ ಸಹಕರಿಸುವುದಿಲ್ಲ. ಪ್ರೀತಿ ಮಾಡುವುದನ್ನೂ ಗುರು ಹಿರಿಯರಿಂದ ಮುಚ್ಚಿಟ್ಟು ತಪ್ಪು ನಿರ್ಧಾರ ತೆಗೆದ್ಕೊಳ್ಳುವುದರಲ್ಲಿ ಪರೋಕ್ಷವಾಗಿ ಕಾರಣರಾಗುವುದರ ಬದಲು, ಯಾಕೆ ತಮ್ಮ ತಮ್ಮ ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಕೊಟ್ಟು, ತಮ್ಮ ಜೀವನ ಬದುಕಲು ಬಿಟ್ಟು, ಅವರ ಅನನುಭವಿ ತಪ್ಪು ಹೆಜ್ಜೆಗಳನ್ನು ತೋರಿಸಿಕೊಟ್ಟು ಜೊತೆ ನಿಂತರೆ ನೀನು ಹೇಳಿದಂತಹ ತೊಂದರೆಗಳು ಎಲ್ಲಿ ಉಗಮಿಸುತ್ತವೆ?
ಇವರ ವಾಗ್ವಾದಗಳು ಮುಂದುವರೆಯುತ್ತಲೇ ಹೋಯ್ತು. ನನ್ನ ಕಿವಿಗಳು ಶಬ್ದಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದವು. ನನ್ನ ಕಣ್ಣುಗಳು ಈಗ ತೆರೆದುಕೊಂಡವು, ಮುದುಡಿದ ಮನಸು ಅರಳಿತು, ನಿಂತು ಹೋಗಿದ್ದ ನರನಾಡಿಗಳಲ್ಲಿನ ರಕ್ತ ಸಂಚಲನ ಈಗ ಮತ್ತೆ ಶುರುವಾದುವೇನೋ ಎನಿಸಿತು, ಅವಳು ಬರುತ್ತಿರುವತ್ತಲೇ ನೋಡಿದೆ. ಅವಳ ಮುಗ್ಧ ನಡಿಗೆ, ನನ್ನನ್ನು ಅಲ್ಲಿಂದಲೇ ನೋಡಿದ್ದಳೇನೋ ಎಂಬಂತೆ ನೇರವಾಗಿ ನನ್ನ ಬಳಿಗೆ ನಡೆದು ಬರುತ್ತಿದ್ದಳು. ನನಗೇ ಅರಿವಿಲ್ಲದಂತೆ ನನ್ನ ಕಾಲುಗಳು ಅವಳ ಕಡೆಗೆ ನಡೆಯತೊಡಗಿದವು. ವಾಗ್ಧಾಳಿಯಲ್ಲಿ ತೊಡಗಿದ್ದ ಪುಣ್ಯಾತ್ಮರು ಮೂಕಾಗಿ, ಗಮನ ನನ್ನ ಕಡೆ ಕೇಂದ್ರೀಕರಿಸಿ ನನ್ನ ಕಡೆಗೇ ನೋಡುತ್ತಿದ್ದರೆಂದು ಕಾಣುತ್ತದೆ. ನಾನು ಯಾರನ್ನೂ ಲೆಕ್ಕಿಸಲಿಲ್ಲ, ಸೀದಾ ಹೋದೆ ಕೈಲಿದ್ದ ಹೂವನ್ನು ಮುದುಡುವ ಮುನ್ನ ಅವಳ ಕೈ ಸೇರಿಸಿದೆ. ಅವಳ ಕೈ ಹಿಡಿದು ಬಂದಿದ್ದವಳು, ಅವಳನ್ನು ನನ್ನ ಕೈ ಸೇರಿಸಿ ಅವಳ ಕಿವಿಯಲ್ಲಿ ಏನೋ ಉಸುರಿ ಹೋದಳು. ಅವಳ ಕೈ ಹಿಡಿದು ಅಂಗೈ ಮೇಲೆ ಹೊರಡೋಣವಾ ಎಂದು ಬರೆದೆ ಅವಳ ನಗುಮುಖದಲ್ಲೇ ಹ್ಮ್.. ಎಂದಳು. ಅವಳ ಮುಖದಲ್ಲಿ ಯಾವತ್ತೂ ಕುಂದದ ಆ ನಗು ಎಲ್ಲಿಂದ ಪಡೆದುಕೊಂಡಿದ್ದಳೋ. ಈ ಪ್ರಪಂಚವನ್ನ ನೋಡದೇ ಇರೋದ್ರಿಂದ ಹಾಗೇನೋ ಗೊತ್ತಿಲ್ಲ. ಎಲ್ಲಿಗೆ ಹೊರಟಿದ್ವೋ ಅದೂ ಗೊತ್ತಿಲ್ಲ, ಎಲ್ಲಿಗೆ ಅಂತ ಅವಳೂ ಕೇಳಲಿಲ್ಲ. ನಡೆದುಹೊರಟೆವು. ಹು ಮತ್ತು ಉಹು ಮಾತು ನಿಲ್ಲಿಸಿದ್ದರು. ಅವರಲ್ಲಿ ಏನು ನಿರ್ಧಾರವಾಯಿತೋ ನನಗೆ ಬೇಕಿರಲಿಲ್ಲ. ಪ್ರೇಮಿಗಳ ದಿನ, ಸಮಾಜ, ತಪ್ಪು, ಸರಿ ಯಾವ ಪರಿವೆಯೂ ಕೂಡ ನಮಗೆ ಬೇಕಿರಲಿಲ್ಲ. ನಾನೇ ಅವಳ ಕಣ್ಣು, ಅವಳೇ ನನ್ನ ಮಾತು, ಇದುವೇ ನಮ್ಮ ಸಂಸಾರ. ಪ್ರೇಮವೇ ನಮ್ಮ ಮಾರ್ಗ.

ಹಿನ್ನುಡಿ: ಏನು ಬರೆಯುವುದೋ ನನಗೂ ಗೊತ್ತಿಲ್ಲ. ವಿಚಾರ ನಿಮ್ಮ ತಲೆಯಲ್ಲಿ ಬಿತ್ತನೆಯಾಗಲಿ. ನಿಮ್ಮ ನಿಮ್ಮ ತಪ್ಪು ಸರಿಗಳನ್ನ ನೀವೇ ಕಂಡುಕೊಳ್ಳಿ!

2 comments:

  1. ಮುನ್ನುಡಿ: ಕಥೆ ಓದುವ ಸಾಮರ್ಥ್ಯವಿರುವರಿಗೆ, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುವ ಸಮಸ್ತರಿಗೂ ಮತ್ತು ವಿಶೇಷವಾಗಿ ಎಲ್ಲ ತರುಣ, ತರುಣಿ ಮತ್ತು ಮುಖ್ಯವಾಗಿ ತಾರುಣ್ಯರಿಗೆ.
    ಪ್ರೇಮಿಗಳ ದಿನಾಚರಣೆ ಎಷ್ಟು ಸರಿ ಎಷ್ಟು ತಪ್ಪು ನಿಮಗೆ ಬಿಟ್ಟದ್ದು!>>>>
    ವಯಸ್ಸಾದವರು ಪ್ರೇಮಿಸಬಾರದೆಂದೇ? ಅದೇನು ತರುಣ ತರುಣಿಯರಿಗಷ್ಟೇ ವಿಶೇಷ? I object :-/

    ReplyDelete
    Replies
    1. Maddam Hemma avare.. ಮುನ್ನುಡಿಯ ಅರ್ಥ ಹೀಗಿದೆ..
      ಮೊಟ್ಟಮೊದಲನೆಯದಾಗಿ ಕಥೆ ಓದುವ ಸಾಮರ್ಥ್ಯವಿರುವರಿಗೆ first preference to all readers ಅಂತ ಅರ್ಥ
      ಎರಡನೆಯದಾಗಿ, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುವ ಸಮಸ್ತರಿಗೂ ಇದರಲ್ಲಿ ಎಲ್ಲ ಮನುಷ್ಯರೂ ಸೇರಿದ್ದಾರೆ
      ಮೂರನೆಯದಾಗಿ, ಇಂದು ವಿವಾದಕ್ಕೆ ಸಿಲುಕುವ ಎಲ್ಲ ತರುಣ, ತರುಣಿಯರಿಗೆ
      ನಾಲ್ಕನೆಯದಾಗಿ, ತಾರುಣ್ಯರಿಗೆ, ಇವರು ಬರಿಯಲೇ ಬೇಕು ಅಂತ ಹೇಳಿಸಿ ಬರೆಸಿದ್ದಕ್ಕೆ :-)
      ಅರ್ಥವಾಯ್ತೋ... ಅನರ್ಥವಯ್ತೋ.... ಒಟ್ಟಿನಲ್ಲಿ ಮುನ್ನುಡಿಯಿಂದ ಮುಂದೇನೂ ಸ್ವಲ್ಪ ಹೋಗಿ, matter ಇರೋದೇ ಅಲ್ಲಿ :-)

      Delete