ಓದಿ ಓಡಿದವರು!

Wednesday 1 February 2012

ನಾವ್ ಹಿಂಗೇ!!!! (A Dream)

ಮುನ್ನುಡಿ: ಇದೊಂದು ಕನಸಿನಲ್ಲಿ ಬಂದ ಕಥೆ. ಇದು ಯಾವುದೇ ರೀತಿ ನನಿಗೆ ಸಂಬಂಧಿಸಿಲ್ಲ. ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ.

ನೂರು ಜನ್ಮಕೂ, ನೂರಾರು ಜನ್ಮಕೂ... ಮೊಬೈಲ್ ಹಾಡೋಕೆ ಶುರುಮಾಡ್ತು. ಹಾಗೇ ಕಣ್ಮುಚ್ಚಿಕೊಂಡೇ ಹ್ಮ್... ಎಂದೆ "ಗುಡ್ ಮಾರ್ನಿಂಗ್" ಎಂದು ಅದೇ ರಾಗದಲ್ಲಿ ಹೇಳಿದಳು. ಮಾಮೂಲಿನಂತೆ ಮುಗುಳ್ನಗೆ ಸ್ವಾಭಾವಿಕವಾಗೇ ಮೂಡಿತು. ಗುಡ್ ನೈಟ್ ಎಂದೆ ಎದ್ದೇಳೋ ತರ್ಲೆ ೭ ಆಯ್ತು ಎಂದಳು. ಇನ್ನೂ ಹತ್ತು ಗಂಟೆಗೆ ತಾನೇ ಬರ್ಬೇಕಿರೋದು, ಇನ್ನೊಂದ್ ಸ್ವಲ್ಪ ಹೊತ್ತು ಮಲ್ಕೊತೀನಿ ಪ್ಲೀಸ್ ಕಣೋ ಎಂದೆ. ಏನ್ ಬೇಕಿಲ್ಲ ಎದ್ದೇಳಪ್ಪ ಜಾಣ ಮರಿ ಅಲ್ವಾ ಅಂದಳು. ಅಲ್ಲಾ ಅಂದೆ. ಎದ್ದೇಳೋ ಪ್ಲೀ....ಸ್ ಎಂದಳು. ಈ ತರ ಮುದ್ದು ಮುದ್ದಾಗಿ ಮಾತನಾಡೋಕೆ ನನಿಗೆ ಇವಳ ಮಾತುಗಳನ್ನ ವಿರೋಧಿಸೋಕೆ ಆಗಲ್ಲ. ಎದ್ದೆ. ಸರಿ ರೆಡಿ ಆಗು ಆಮೇಲೆ ಕಾಲ್ ಮಾಡ್ತೀನಿ, ಹೇಯ್ ಹಾವ್ ಅ ನೈಸ್ ಡೇ ಗುಂಡು ಅಂತ ಫೋನ್ ಇಟ್ಟಳು. ಕಷ್ಟ ಪಟ್ಟು ಎದ್ದು ಮೈ ಮುರಿಯುವಷ್ಟರಲ್ಲಿ ಚರಣ್ ಕಾಲ್ ಮಾಡಿದ. "ಮಗಾ ಎಷ್ಟೋತ್ತಿಗೋ?"... ಸರಿಯಾಗಿ ೯.೧೫ ಘಂಟೆಗೆ ಮನೆ ಅತ್ರಾನೇ ಬಂದುಬಿಡು. ಓಕೆ ಮಗಾ ಅಂತ ಇಟ್ಟಾ. ಫಟಾಫಟ್ ಸ್ನಾನದ ವರೆಗೂ ಮುಗಿಸಿ ಬಂದೆ. ಅಪ್ಪ ಹೊರಗಡೆ ಇನ್ನಾ ಪೇಪರ್ ಹಿಡಿದಿದ್ರು. ಅಮ್ಮನ ಅಡುಗೆ ಆಲ್ಮೋಷ್ಟ್ ರೆಡಿಯಾದಹಾಗಿತ್ತು. ಅಪ್ಪ ನನ್ನ ಕಂಡ ಕೂಡಲೆ ಎದ್ದು ರೆಡಿಯಾಗಲು ಹೊರಟರು. ಯಾರೂ ಒಂದು ಮಾತೂ ಆಡಲಿಲ್ಲ. ಅಮ್ಮ ತಿಂಡಿ ಹಾಕೊಟ್ಟು ಅವರೂ ರೆಡಿಯಾಗಲು ಹೊರಟರು. ಒಳಗೊಳಗೆ ನಗು ಬರುತ್ತಲಿತ್ತು. ತಿಂಡಿ ತಿಂದು ಮುಗಿಸುವಷ್ಟರಲ್ಲಿ ಕಾರ್ ಬಂದು ಹೊರಗೆ ನಿಂತಿತ್ತು. ಅಷ್ಟರಲ್ಲಿ ಚರಣ್ ಮತ್ತೊಮ್ಮೆ ಕಾಲ್ ಮಾಡಿದ ಲೇ ಝೂಮ್ ಲೆನ್ಸ್ ಬೇಕಾ ಕ್ಯಾಮೆರಾ ಜೊತೆ ಅಂತ. ಅಪ್ಪ ಕಂದ ಎಲ್ಲಾ ಸ್ಟೆಡಿ ಶಾಟ್ಸೇ ಇರುತ್ತೆ ಕ್ಲೋಸಪ್ ಲೆನ್ಸ್ ಒಂದ್ ಹಾಕೊಂಡ್ಬಾರಪ್ಪ ಸಾಕು ಪೂರ್ತಿ ಚಾರ್ಜ್ ಮಾಡಿದ್ಯ ತಾನೆ ಎಂದೆ. ಮಾಡಿದೀನಿ ಬಂದೇ ತಾಳು ನಾನ್ ಹೊರಟೆ ಅಂತ ಕಟ್ ಮಾಡ್ದ. ನಂತರ ದೊಡ್ಡಮ್ಮ, ಚಿಕ್ಕಪ್ಪ ಎಲ್ಲಾ ಒಬ್ಬೊಬ್ಬರಾಗಿ ಫೋನ್ ಮಾಡಿದರು. ಎಲ್ಲರಿಗೂ ಇನ್ನೇನ್ ಹೊರಡುತ್ತೇವೆ ಎಂದು ಹೇಳಿ. ಮನೆಯಲ್ಲಿ ಎಲ್ಲರ ತಿಂಡಿ ತೀರ್ಥವಾದ ನಂತರ ಹೊರಡುವಷ್ಟರಲ್ಲಿ ಎಲ್ಲಾ ಸ್ನೇಹಿತರೂ ಬಂದಿದ್ದರು. ಏನೂ ಮರೆತಿಲ್ಲವೆಂಬಂತೆ ಮತ್ತೆ ನೆನಪಿಸಿಕೊಂಡು ಹೊರೆಟೆವು. ಕಾರಿನಲ್ಲಿ ಮುಂದೆ ದ್ರೈವರ್ ಪಕ್ಕ ನಾನು ಹಿಂದೆ ಅಪ್ಪ ಅಮ್ಮ, ಅಮ್ಮನ ಕಡೆ ಒಮ್ಮೆ ನೋಡಿದೆ. ಅಮ್ಮ ಅಪ್ಪನ ಕಡೆ ಕಣ್ಣಿನಲ್ಲೇ ಸಿಗ್ನಲ್ ಮಾಡಿ ತೋರಿಸಿದರು. ಅಪ್ಪ ಇನ್ನೂ ಗರಂ ಆಗೇ ಇದ್ದರು. ಸ್ಪೆಕ್ಸ್ ತರಲಿಲ್ವ ಅಂದೆ ಏನ್ ಬೇಡ ಅಂದ್ರು. ಬಿಸಿ ಇನ್ನೂ ಇದೆ ಅಂತ ಅರ್ಥವಾಯ್ತು. ಸುಮ್ಮನಾದೆ. ಸರಿಯಾದ ಸಮಯಕ್ಕೆ ಕಾಲ್ ಮಾಡಿದಳು. ಹೊರಟೆ ಬಂದು ಮಾತನಾಡೋಣ ಎಂದೆ. ಕೆಂಪು ಶರ್ಟೇ ಹಾಕೊಂಡಿದ್ಯ ತಾನೆ ಅಂದ್ಳು ಹ್ಮ್ ಎಂದೆ ಸರಿ ಬಾ ಬಾ ಅಂದ್ಳು.

ಅವಳ ಮನೆ ಸೇರುವಷ್ಟರಲ್ಲಿ ೧೦.೫ ಆಗಿತ್ತು. "5 mins late" ಎಂದು ಮೆಸೇಜ್ ಬಂತು. ಅವಳ ಅಪ್ಪ ಅಮ್ಮ ಬಾಗಿಲ ಬಳಿ ಬಂದು ಬರಮಾಡಿಕೊಂಡರು. ಅಪ್ಪ ಅಮ್ಮನ್ನ ಒಳಗೆ ಕಳುಹಿಸಿ ಸ್ನೇಹಿತರ ಬಳಿ ಕೊಂಚ ಮಾತುಕತೆ ಆಡಿದೆ. "Olag barooooooooo" ಅಂತ ಮತ್ತೊಂದು ಮೆಸೇಜ್ ಬಂತು. ಇಲ್ಲ ಹಿಂಗೇ ಹೊರಡ್ತೀನಿ ನಾನ್ ಬರಲ್ಲ ಒಳಗೆ ಅಂತ ಕಳುಹಿಸಿದೆ. ಪ್ರತಿಕ್ರಿಯೆ ಬರಲಿಲ್ಲ. ಅವರ ಕಡೆಯ ಒಂದಷ್ತು ಜನ ಸಂಬಂಧಿಕರು ಆಗಲೇ ಬಂದಿದ್ದರೆಂದು ಕಾಣುತ್ತದೆ. ಮನೆಯ ಮುಂದೆ ಚಪ್ಪಲಿಗಳ ರಾಶಿ ಬಿದ್ದಿತ್ತು ಮತ್ತು ಗಾಡಿಗಳು ಒಂದಷ್ಟು ನಿಂತಿತ್ತು. ಚಿಕ್ಕಪ್ಪ, ಅತ್ತೆ, ದೊಡ್ಡಮ್ಮನ ಸಂಸಾರ ಒಟ್ಟಿಗೇ ಪ್ರವೇಶಿಸಿತು. ನಾವು ಗೆಳೆಯರ ಬಳಗವೂ ಒಳಗೆ ಹೊರಟೆವು. 

ಮನೆ ತುಂಬ ಜನ. ಬಂದವರಿಗೆಲ್ಲಾ ಪಾನೀಯ ರೆಡಿ ಇತ್ತು. ಎಲ್ಲಿ ಇವಳು ಅಂತ ಕಣ್ಣಾಡಿಸಿದೆ. ಮೇಲೆ ರೂಮಿನಿಂದ ಧ್ವನಿ ಬಂದಂತಾಯಿತು.ಕ್ಯಾಮೆರಾ ತನ್ನ ಕೆಲಸ ಶುರುಮಾಡಿತ್ತು. ಅಲ್ಲಿ ಫ್ರೀ ಆಗಿ ಏನೂ ಕೆಲಸವಿಲ್ಲದೆ ನಿಂತಿದ್ದವನೆಂದರೆ ನಾನೊಬ್ಬನೇ ಇರಬೇಕು ಎಲ್ಲಾ ಮಾತುಕತೆಗಳಲ್ಲಿ, ಓಡಾಟದಲ್ಲಿ ಬಿಜಿ ಇದ್ದರು. ಸುಮ್ಮನೆ ನಿಂತು ಅವರ ಮಾತುಗಳನ್ನ ಆಲಿಸಿದೆ. ಅಪ್ಪ ನಮ್ ಕೈಯಲ್ಲಿ ಏನಿದೆ ಇವಾಗಿನ್ ಮಕ್ಕಳು ನಮ್ ಮಾತ್ ಕೇಳ್ತಾರಾ ಅವ್ರ್ ಹೇಳ್ದಂಗೆ ನಾವ್ ಕುಣಿಬೇಕಷ್ಟೇ ಇವಾಗ ಅಂತ ಬೇಜಾರು ತೋಡಿಕೊಳ್ಳುತ್ತಿದ್ದರು. ಒಬ್ಬೊಬ್ಬರ ಮುಖವೂ ನಾಟಕೀಯವಾಗಿತ್ತು ಪಾಪ. ನನಗಾಗಿ ಎಲ್ಲರೂ ಮನಸಿಲ್ಲದ ಮನಸಿನಿಂದ ಬಂದಿದ್ದರೇನೋ. ಆದರೆ ನಾನು ಮಾಡುತ್ತಿದ್ದುದು ಸರಿ ಎನ್ನುವುದು ನನಗೆ ಗೊತ್ತಿತ್ತು. ಅಲ್ಲಿ ನನ್ನನ್ನು, ಅವಳನ್ನು ಬಿಟ್ಟರೆ ಮನಸ್ಪೂರ್ವಕವಾಗಿ ಆ ಸಂದರ್ಭವನ್ನ ಆನಂದಿಸುತ್ತಿದ್ದವರೆಂದರೆ ನಮ್ಮ ಸ್ನೇಹಿತ ವೃಂದದವರು. ಅದೇನ್ ನೋಡ್ಕೊಂಡು, ಅದೇನ್ ಮಾತನಾಡ್ಕೊಂಡ್ ನಗ್ತಿದ್ರೋ ಒಟ್ಟಿನಲ್ಲಿ ಮಜಾ ಮಾಡ್ತಿದ್ರು ಬಡ್ಡೀ ಮಕ್ಳು. ನೋಡ ನೋಡುತ್ತ ೧೧.೦೦ ಘಂಟೆ ಆಗೋಯ್ತು. ಅಪ್ಪನ ಕಡೆ ಸಿಗ್ನಲ್ ಮಾಡಿ ಟೈಮ್ ಆಯ್ತು ಅಂತ ಸೂಚಿಸಿದೆ. ಹ್ಮ್.. ಮುಂದುವರೆಸು ಎಂಬಂತೆ ಮುಖಭಾವ ಮಾಡಿದ್ರು. ಸರಿ ಶುಭಶ್ಯ ಶೀಘ್ರಂ ಅಂತ ಎಲ್ಲರನ್ನೂ ಕರೆದೆ. ಸ್ವಲ್ಪ ಶಾಸ್ತ್ರೀಯವಾಗಿ ಎಲ್ಲರನ್ನುದ್ದೇಶಿಸಿ ಮಾತು ಶುರುಮಾಡಿದೆ. 
"ಇಲ್ಲಿ ಬಂದಿರುವ ಎಲ್ಲ ನನ್ನ ಹತ್ತಿರದ ಬಾಂಧವರಿಗೂ ಸ್ನೇಹಿತರಿಗೂ ವಂದನೆಗಳು" ವಿಶಲ್ ಹೊಡ್ದ ಯಾವನೋ. ನನ್ ಫ್ರೆಂಡ್ಸ್ ಕಪಿ ನನ್ ಮಕ್ಳು ಕಪಿ ಬುದ್ದಿ ಎಲ್ಲೋದ್ರು ಬಿಡಲ್ಲ. "ನಾನು ತೊಗೊಂಡಿರೊ ನಿರ್ಧಾರ ಸರಿಯಾಗೇ ಇದೆ ಅಂತ ನನಿಗೆ ಅನ್ಸುತ್ತೆ" ಎನ್ನುವಷ್ಟರಲ್ಲಿ ಅವಳು ಬಂದು ನನ್ನನ್ನು ಸೇರಿಕೊಂಡಳು. "ಕ್ಷಮಿಸಿ, ನಮಿಗೆ ಅನ್ಸುತ್ತೆ. ನಮಿಗೊತ್ತು ನಿಮಗೆಲ್ಲಾ ಇದರಿಂದ ಅಸಮಾಧಾನ ಇದೆ ಅಂತ ಆದರೆ, ಇದೊಂಥರಾ ಚೆನ್ನಾಗಿದೆ. ಪ್ಲೀಸ್ ನಿಮ್ಮೆಲ್ಲರ ಬೇಜಾರುಗಳನ್ನು ಬಿಟ್ಟು, ನಿಮ್ಮ ಮನ ನೋಯಿಸುತ್ತಿದ್ದರೆ ಕ್ಷಮಿಸಿ ನಮ್ಮನ್ನ. ಇದರಲ್ಲಿ ನಮ್ಗೆ ಖುಷಿ ಖಂಡಿತ ಇದೆ. ಮನ:ಪೂರ್ವಕವಾಗಿ ಹರಸಿ" ಎಂದು ಹೇಳಿ ನನ್ನ ಕೈ ಹಿಡಿದು ನಿಂತಿದ್ದ ಇವಳ ಕಡೆ ತಿರುಗಿದೆ. ತಾಳಿ ಕಟ್ಟಿದೆ. ಪ್ಲಾನ್ ಪ್ರಕಾರ ತಾಳಿ ಕಟ್ಟುವಾಗ ಐ ಲವ್ ಯು ಎಂದು ಪಿಸುಗುಟ್ಟಿದಳು. ನಾನೂನೂ ಎಂದೆ. ನಗು ನಗುತ್ತಾ ಅಪ್ಪ ಅಮ್ಮ ಅತ್ತೆ ಮಾವನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡೆವು. ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಶುಭಕೋರಿದರು. ಒಟ್ಟಿಗೆ ಕುಳಿತು ಊಟ ಮಾಡಿದೆವು. ಅಂತೂ ನಮ್ಮ ಮಧುವೆ ನಮ್ಮಿಷ್ಟದಂತೆಯೇ ನೆರವೇರಿತ್ತು. ಮಧುವೆಯ ರೀತಿ ಇಷ್ಟವಾಗದಿದ್ದರೂ, ನೀತಿ ಇಷ್ಟವಾಗಿತ್ತು ನಮ್ಮನ್ನು ಹೆತ್ತವರಿಗೆ. ದುಡ್ಡು ಉಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಅರ್ಥವಾಗದ, ಇಷ್ಟವಿಲ್ಲದ ಶಾಸ್ತ್ರೀಯ ಮಧುವೆಯನ್ನು ವಿರೋಧಿಸುವುದು ಮುಖ್ಯವಾಗಿತ್ತು. ಸಂಜೆ ಸ್ನೇಹಿತರಿಗೆಲ್ಲರಿಗೂ ಗುಂಡು, ತುಂಡು ಪಾರ್ಟಿ ಅವರ ಬೇಡಿಕೆಯಂತೆ ನಡೆಯಿತು. ರಾತ್ರಿ ಇವಳನ್ನು ಕರೆದುಕೊಂಡು ಪ್ರಪಂಚ ಸುತ್ತಿ ಬಂದೆ. 

ಈಗ ಐದು ವರ್ಷಗಳ ನಂತರ ಮಧುವೆ ವಿಡಿಯೋ ನೋಡುವಾಗ ನಗು ಬರುತ್ತೆ. ಸುಖವಾಗಿ, ನೆಮ್ಮದಿಯಾಗಿ, ಹೊಂದಿಕೊಂಡು ಎಲ್ಲರಿಗಿಂತ ಚೆನ್ನಾಗಿಯೇ ನಮ್ಮ ನಮ್ಮ ಸಾಧನೆಗಳ ಕಡೆ ಗಮನಕೊಡುತ್ತಾ, ನಮ್ಮ ಮಗನಿಗಿಂತಲೂ ಹೆಚ್ಚು ಚೇಷ್ಟೆ ಮಾಡುತ್ತಾ ಹಾಯಾಗಿದ್ದೇವೆ. ಅಂದಹಾಗೆ ನಮ್ಮದು ಲವ್ ಮ್ಯಾರೇಜ್ ಅಲ್ಲ, ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ಮಧುವೆ ಆಗಿದ್ದು :-)

ಹಿನ್ನುಡಿ: ಮಧುವೆ ಹಿಂಗೂ ನಡೆದರೆ ಚೆನ್ನಾಗಿರುತ್ತಿತ್ತು. ಇಂದಲ್ಲ ನಾಳೆ ಹಿಂಗಲ್ಲದಿದ್ದರೂ, ಮಧುವೆಯ ಸಂಭ್ರಮದ ರೀತಿ ಬದಲಾಗಲಿ ಎಂದು ಇಚ್ಛಿಸುವೆ. 
                                                                           -  ಹೇಮಂತ್

2 comments:

  1. ಮಧುವೆ ಅಲ್ಲ ಅದು ಮದುವೆ :-) ಹೀಗೇ ನಡೆದರೂ ಚೆನ್ನ ಆದರೆ ಇದೇ ರೂಢಿ ಪದ್ದತಿಯಾಗಿ ಕಡೆಗೆ ಒಂದು ದಿನ ಇದೂ ಬೋರ್ ಅನ್ನಿಸಲು ಶುರುವಾದರೆ? ಏನೇ ಆಗಲಿ ನಿಮ್ಮ ಮದುವೆ ಕತೆ ಚೆನ್ನಾಗಿದೆ :-) ಕನಸು ನಿಜವಾಗಲಿ, ಬೇಗ ಯಾರಾದರೊಬ್ಬಳು ಗಂಟು ಬೀಳಲಿ :-)

    ReplyDelete