ಓದಿ ಓಡಿದವರು!

Sunday 15 April 2012

ದೇಹತ್ಯೆ! (ಒಂದು ವಿಕೃತಿ)


       ನನ್ನ ಎಡಗಡೆ ನಿಂತಿರುವವನು ನನ್ನ ಅಪ್ಪ. ನನ್ನ ಬಲಗಡೆ ಇರುವವಳು ನನ್ನ ಅಮ್ಮ ಎಂದು ಕೈಕಾಲುಗಳನ್ನು ಕಟ್ಟಿ ಮೂಖಕ್ಕೆ ಕಪ್ಪು ಬಟ್ಟೆ ಸುತ್ತಿ ನಿಲ್ಲಿಸಿರುವ ಇಬ್ಬರು ವ್ಯಕ್ತಿಗಳನ್ನು ತೋರಿಸುವನು. ಎತ್ತರದ ವೇದಿಕೆ ಮೇಲೆ ನಿಲ್ಲಿಸಲಾಗಿರುವ ಎರಡು ಅಲುಗಾಡದಂತೆ  ಕಪ್ಪುಬಟ್ಟೆಯಿಂದ ಸುತ್ತಲ್ಪಟ್ಟಿರುವ ದೇಹಗಳು ಮತ್ತು ಅದರ ಮಧ್ಯದಲ್ಲಿ ಕೊಂಚ ಎದುರಿಗೆ ನಿಂತು ಮಾತನಾಡುತ್ತಿರುವ ಯುವಕನನ್ನು ಆಶ್ಚರ್ಯಚಕಿತರಾಗಿ ನೋಡುತ್ತಿರುವ ಲಕ್ಷಾಂತರ ಜನತೆ. ಅಲ್ಲಿ ಏನು ನಡೆಯುತ್ತಲಿತ್ತೆಂಬುದು ಯಾರಿಗೂ ಅಂದಾಜಿರಲಿಲ್ಲ. ಇದಾವ ರೀತಿಯ ಸಮಾರಂಭವಿರಬಹುದು ಎಂದು ನೆರೆದಿದ್ದ ಜನ ಬಾಯಿ ಕಳೆದುಕೊಂಡು ನೋಡುತ್ತಿರಲು ಯುವಕ ತನ್ನ ಮಾತು ಮುಂದುವರೆಸುವನು. ನಾನೊಬ್ಬ ರಾಕ್ಷಸ. ಇಲ್ಲಿದ್ದಾಳಲ್ಲ ಈ ನನ್ನ ತಾಯಿಗೆ ನಾನು ತುಂಬಾ ಕಾಟ ಕೊಟ್ಟಿದ್ದೀನಿ. ನಾನು ಇವಳ ಮೇಲೆ ಕೊಂಚವೂ ಗೌರವ ತೋರಿದವನಲ್ಲ. ಪ್ರೀತಿಯಿಂದ ನಡೆಸಿಕೊಂಡವನಲ್ಲ. ಬೆಳಗ್ಗೆ ತಿಂಡಿ ತಯಾರಿಸುವುದು ಕೊಂಚ ತಡವಾಯ್ತೆಂದು ಕಪಾಳೆಗೆ ಹೊಡೆಯುತ್ತಿದ್ದೆ. ಕೆಲವು ಸಲ ಅಡುಗೆ ರುಚಿಕರವಾಗಿರದಿದ್ದಲ್ಲಿ ಬಿಸಿ ಅಡುಗೆಯನ್ನು ಅವಳ ಮೇಲೆ ಎಸೆದಿದ್ದೇನೆ. ಕೆಲವು ಸಲ ಮಾತಿಗೆ ಮಾತು ಬೆಳೆಸಿ ನನ್ನೊಂದಿಗೆ ಇವಳು ಜಗಳವಾಡಿದ್ದಾಗ ಕಾಲಿನಲ್ಲೇ ಒದ್ದಿದ್ದೇನೆ. ಕುಡಿದಾಗಲಂತೂ ಒಳಗಿದ್ದ ಕ್ರೋಧವಷ್ಟನ್ನೂ ಇವಳ ಮೇಲೆ ತೀರಿಸಿಕೊಳ್ಳುತ್ತಾ ನಾಯಿಗೆ ಚಚ್ಚಿದ ಹಾಗೆ ಚಚ್ಚಿದ್ದೇನೆ. ಎದುರಿಗಿದ್ದ ಜನತೆ ಸ್ಥಬ್ಧವಾಗಿ ನಿಂತಿತ್ತು. ಇದಾವುದೋ ದೊಂಬರಾಟ, ಬಯಲಾಟವಂತೂ ಅಲ್ಲ. ಇವನೇನು ಕಥೆ ಹೇಳುತ್ತಿರುವನೋ ಇಲ್ಲ ನಿಜಸಂಗತಿಯನ್ನು ವಿವರಿಸುತ್ತಿರುವನೋ, ಗೊತ್ತಾಗದೇ ಗೊಂದಲದಲ್ಲಿ ಸಿಲುಕಿ, ತಮಗ್ಯಾಕೆ ಬೇಕು ಇವನ ತಲೆನೋವಿನ ಕಥೆ ಎಂದು ಕೆಲವರು ಹೋಗಲು ಮನಸುಮಾಡಿದರಾದರೂ ಇನ್ನೂ ಕುತೂಹಲದಿಂದ ಸೇರಿಕೊಳ್ಳುತ್ತಲೇ ಇದ್ದ ನೂರಾರು ಜನರನ್ನು ಕಂಡು ಮತ್ತೆ ಏನಿರಬಹುದು ಮುಂದೆ ಎಂದು ನಿಂತು ನೋಡಹತ್ತಿದರು. ಮೊದ ಮೊದಲು ವೇದಿಕೆ ಮೇಲಿದ್ದ ಯುವಕನ ಮಾತುಗಳಿಗೆ ಅಲ್ಲಲ್ಲಿ ವ್ಯಕ್ತವಾಗುತ್ತಿದ್ದ ಓಹೋ.. ಆಹಾ… ಹೋಗಲಿ ಬಿಡು… ಕಳ್ಳನನ್ನ ಮಗನೆ.. ಎಂಬಿತ್ಯಾದಿಯಾದ ಪ್ರತಿಕ್ರಿಯೆಗಳು ಕ್ರಮೇಣ ಕುಂಠಿತವಾದವು. ಯುವಕ ತನ್ನ ಸ್ವಗತ ಲಹರಿ ಮುಂದುವರೆಸಿದ.

ನನಗೆ ನನ್ನ ತಾಯಿಯ ಮೇಲೆ ಪ್ರಪಂಚದ ಯಾವ ಮನುಷ್ಯರ ಮೇಲೂ ಇರಲಾರದಂಥ ಕ್ರೋಧ, ವೈಶಮ್ಯವಿತ್ತು. ಇದಕ್ಕೆ ನಾನು ಹೊಣೆಗಾರನಲ್ಲ ಇದಕ್ಕೆ ನೇರ ಹೊಣೆ ಇವಳೇ. ಹೊಡೀತಿದ್ದಳು. ಒಂದು ದಿನ ಪ್ರೀತಿಯಿಂದ ಅಪ್ಪಿಕೊಂಡವಳಲ್ಲ. ಯಾವುದೋ ದೆವ್ವವನ್ನ ಕಂಡವಳ ಹಾಗೆ ದೂರ ತಳ್ಳುತ್ತಿದ್ದಳು. ಮಾತುಮಾತಿಗೆ ಕಪಾಳೆಗೆ ಹೊಡೆಯುತ್ತಿದ್ದಳು. ಸದಾ ಅಳುತ್ತಿದ್ದಳು. ನನಗಿನ್ನೂ ನೆನಪಿದೆ ಶಾಲೆಯಲ್ಲಿ ಉತ್ತಮ ಅಂಕ ಪಡೆದು, ಮಾರ್ಕ್ಸ್ ಕಾರ್ಡ್ ಹಿಡಿದು ಇವಳ ಬಳಿಗೆ ಓಡಿಬಂದರೆ ಹರಿದು ಬಿಸಾಕಿದ್ದಳು. ಇವಳ ಎದುರಿಗೆ ನಾನು ಆಟವಾಡುವ ಹಾಗಿರಲಿಲ್ಲ ಜುಟ್ಟು ಹಿಡಿದು ಗೋಡೆಗೆ ಜಪ್ಪುತ್ತಿದ್ದಳು. ನನ್ನ ಸಹನೆಯೂ ಮೀರಿತ್ತು. ತಿರುಗಿ ಹೊಡೆಯಲು ಶುರುಮಾಡಿದೆ. ಅಪ್ಪನೂ ಸೇರಿ ಹೊಡೆದು ಹೆಡೆಮುರಿಕಟ್ಟುತ್ತಿದ್ದೆವು. ಆಗೆಲ್ಲಾ ನನ್ನ ಅಪ್ಪನಿಲ್ಲದೇ ಇದ್ದಿದ್ರೆ ಇವಳು ವಿಷ ಹಾಕಿ ಕೊಲ್ಲಲೂ ಹೇಸುತ್ತಿರಲಿಲ್ಲ. ಹೆಮ್ಮಾರಿ ಇವಳು. ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಇವಳಿಗೆ ನನ್ನ ಮೇಲೇಕಿಷ್ಟು ಕೋಪ ಎಂದು ನನಗೆ ಅರ್ಥವೇ ಆಗಲಿಲ್ಲ. ನನ್ನನ್ನು ಕಂಡರೇ ಉರಿದು ಬೀಳುತ್ತಿದ್ದಳು. ಮೊದಮೊದಲು ನನ್ನ ಅಪ್ಪ ಕುಡಿದು ಬಂದು ತರಾಟೆಗೆ ತೆಗೆದುಕೊಂಡಾಗಲೆಲ್ಲಾ ಖುಷಿ ನನಗೆ. ಆಗಬೇಕಿತ್ತು ಇವಳಿಗೆ, ಮಾರಿ ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಜನರ ಗುಂಪಿನಿಂದ ಗಲಾಟೆ ಶುರುವಾಯ್ತು. ಯಾವುದೋ ಹೆಂಗಸು, ತಾಯಿಯ ಬಗ್ಗೆ ಹೀಗೆ ಮಾತನಾಡುತ್ತಿರುವನಲ್ಲಾ ಎಂದು ಧಿಕ್ಕಾರ ಸಹಾ ಕೂಗಲು ಶುರುಮಾಡಿದಳು. ಅವಳ ಬೆಂಬಲಕ್ಕೆ ಗಂಡಸರೂ ಸಹ ನಿಂತುದು ಒಂದು ವಿಸ್ಮಯ. ಆ ಯುವಕ ಸಮಾಧಾನ ಪಡಿಸಿ ತನ್ನ ಮಾತುಗಳನ್ನು ಪೂರ್ತಿ ಕೇಳುವವರೆಗೂ ಯಾರೂ ಪ್ರತಿಕ್ರಿಯಿಸದಿರುವಂತೆ ಗುಡುಗಿದನು. ಕೊಂಚ ಸಮಯದ ನಂತರ ವಾತಾವರಣ ಹಿಡಿತಕ್ಕೆ ಬಂತು. ಯುವಕ ಮತ್ತೆ ಮುಂದುವರೆಸಿದ.

ಈ ನಮ್ಮಪ್ಪನಿಗೆ ನನ್ನನ್ನು ಕಂಡರೆ ಅದೇಕೆ ಅಷ್ಟು ಇಷ್ಟವೋ ಗೊತ್ತಿಲ್ಲ, ಇವನೇ ನನ್ನನ್ನು ಬಾಲ್ಯದಿಂದಲೂ ಸಾಕಿದ್ದು, ನನಗೆ ಪಾಠ, ಆಟ, ಊಟ ಎಲ್ಲಾ ಇವನೇ ನೋಡಿಕೊಳ್ಳುತ್ತಿದ್ದ. ಸದಾ ಹುಲಿಯಂತೆ ಬದುಕಬೇಕೆಂದು, ಈ ತಾಯಿಯ ರೀತಿಯ ಕ್ಷುದ್ರ ಹೆಣ್ಣು ಜೀವಿಗಳನ್ನು ಹೊಸಕಿ ಹಾಕಬೇಕೆಂದು ಸದಾ ಹೇಳಿಕೊಡುತ್ತಿದ್ದ. ಯಾರಿಗೂ ಹೆದರಕೂಡದೆಂದು, ಅನಿಸಿದ್ದೆಲ್ಲವನ್ನೂ ಮಾಡಬೇಕೆಂದು ಹೇಳಿಕೊಡುತ್ತಿದ್ದ. ಇವನ ಉಪದ್ರವಗಳನ್ನು ನನ್ನ ಅಮ್ಮ ಹೇಗೆ ತಡೆದುಕೊಂಡು ಇನ್ನೂ ಜೊತೆಗಿದ್ದಳೋ ನನಗೆ ಅರ್ಥವಾಗುತ್ತಿರಲಿಲ್ಲ. ಕೆಲವು ಸಲ ಅವಳ ದಾರುಣ ಪರಿಸ್ಥಿತಿಗೆ ಕರುಣೆ ಹುಟ್ಟಿ ಅವಳ ತಂಟೆಗೆ ಹೋಗದಿದ್ದರೂ, ಅವಳ ಕಣ್ಣುಗಳಲ್ಲಿ ನನಗಾಗಿ ಇದ್ದ ದ್ವೇಷವನ್ನು ಕಂಡು ನನ್ನಲ್ಲಿನ ಕಿಚ್ಚು ಜಾಗೃತಗೊಳ್ಳುತ್ತಿತ್ತು. ನಾನು ಅಪ್ಪನ ಜೊತೆಗೆ ಇರುತ್ತಿದ್ದ ಪ್ರತಿಕ್ಷಣದಲ್ಲೂ ಆಕೆಗೆ ನನ್ನ ಮೇಲೆ ಕೋಪ ಹೆಚ್ಚುತ್ತಿತ್ತು. ನಾನು ಮನಸಿಗೆ ಬಂದದ್ದನ್ನೆಲ್ಲಾ ಮಾಡುವುದನ್ನ ಕಲಿತದ್ದು ಅಪ್ಪನಿಂದಲೇ, ನಾನು ಹುಲಿಯಂತೆಯೇ ಬೆಳೆದೆ. ಎಲ್ಲ ಅಪ್ಪನ ಅಭ್ಯಾಸಗಳನ್ನೂ ಕಲಿತೆ. ಇಷ್ಟು ಹೊತ್ತಿಗಾಗಲೇ ನೆರೆದಿದ್ದ ಜನರಲ್ಲಿ ಯಾರಾದರೂ ಅಗಳು ನುಂಗಿದರೂ ಸಹ ಶಬ್ಧ ಮಾರ್ದನಿಸುತ್ತಿತ್ತು, ಅಷ್ಟು ನಿಶ್ಯಬ್ಧತೆ. ಯುಮಕ ಮುಂದುವರೆದ.

ನನಗೆ ಮೊಲಗಳನ್ನು ಹೊಡೆದು, ಅದರ ರಕ್ತ ಬಿಸಿಯಿರುವಾಗಲೇ ಹಸಿ ಹಸಿ ಹಾಗೇ ತಿಂದು ಮುಗಿಸುವುದರಲ್ಲಿ ಒಂದು ರೀತಿಯ ವಿಕೃತ ಆನಂದ ಸಿಗುತ್ತಲಿತ್ತು. ನನಗೀಗ ಇಪ್ಪತ್ತೆರಡು ವರ್ಷ. ದಷ್ಟಪುಷ್ಟವಾಗಿದ್ದೇನೆ. ನನ್ನ ಅಪ್ಪ ಇಪ್ಪತ್ತೆರಡು ವರ್ಷ ನೀರೆರೆದ ಮರ ಈಗ ಫಲ ನೀಡುವ ಸಮಯ. ಆದರೆ ನನ್ನ ಕಿವಿಗೆ ಈಗ ಇಪ್ಪತ್ತೆರಡು ಮರ್ಷದ ನಂತರ ಒಂದು ಸುದ್ದಿ ಬಿತ್ತು. ನನ್ನ ಈ ಅಪ್ಪನ ದೆಸೆಯಿಂದ ಈ ಅಮ್ಮನಿಗೆ ಇಪ್ಪತ್ನಾಲ್ಕು ವರ್ಷಗಳ ಹಿಂದೆ, ಒಂದು ಮಗು ಜನಿಸಿತ್ತಂತೆ. ಅದು ಕೂಡ ಮೊಲದಂತಹ ಒಂದು ಹೆಣ್ಣು ಜಾತಿಯದ್ದಂತೆ. ನನ್ನ ಅಪ್ಪನಂತಹ ವ್ಯಾಘ್ರನಿಗೆ ನನ್ನಂತಹ ಹುಲಿಯೇ ಬೇಕಿತ್ತಂತೆ. ಮೊಲ ಕಣ್ಬಿಡುವ ಮುನ್ನವೇ ಅದನ್ನು ಸುಲಭವಾಗಿ ಕೊಂದು ತೇಗಿದ್ದನಂತೆ. ನಂತರ ನನ್ನ ತಾಯಿಯಿಂದಲೇ ಬಲಾತ್ಕಾರವಾಗಿ ನನ್ನನ್ನು ಹುಟ್ಟಿಸಿದನಂತೆ. ಹಾಲು ಕೂಡ ಉಣಿಸದೇ, ನನ್ನ ಕಡೆ ತಿರುಗಿ ಕೂಡ ನೋಡದೇ ಮಲಗಿದ್ದ ನನ್ನ ತಾಯಿಯಿಂದ ನನ್ನನು ಕಿತ್ತು ತಂದು ನನ್ನ ತಂದೆ ಸಾಕಿದನಂತೆ. ನನ್ನ ಬಾಲ್ಯದಲ್ಲಿ ನನ್ನ ತಾಯಿ ಹಲವು ಸಲ ನಿನ್ನಿಂದಲೇ ಕಣೋ ಅವಳು ಸತ್ತದ್ದು ಎಂದು ಅರಚಿದ್ದು ನನಗೆ ನೆನಪಿದೆ. ಅವಳ ಕಣ್ಣೆದುರಿಗೇ ಅವಳ ಮೊಲದ ಮರಿ ಸತ್ತಾಗ ಆಕೆಗೆ ಹೇಗೆನಿಸಿರಬಹುದು. ಹಂತಹಂತದಲ್ಲೂ ತಂದೆಯ ಜೊತೆಗೇ ಸೇರಿ, ತಂದೆಯ ಪ್ರತಿ ಗುಣಲಕ್ಷಣಗಳನ್ನೇ ಪಡೆಯುತ್ತಾ ಬೆಳೆದ ನನ್ನನ್ನು ಕಂಡು ಎಷ್ಟು ರೋಷ ಉಕ್ಕಿರಬಹುದು. ಆದರೆ ನಾನೇನು ಮಾಡಲಿ ನನ್ನ ತಪ್ಪೇನಿತ್ತು ಇದರಲ್ಲಿ. ಈ ನನ್ನ ತಾಯಿ ನಾನು ಹೊಟ್ಟೆಯಲ್ಲಿದ್ದಾಗಲೇ ಹೊಡೆದು ಸಾಯಿಸಲು ಪ್ರಯತ್ನಿಸಿದ್ದಳಂತೆ, ಯಶಸ್ವಿಯಾಗಿದ್ದಿದ್ದರೆ ನಾನು ನೆಮ್ಮದಿಯಾಗಿ ಸತ್ತಿರುತ್ತಿದ್ದೆ. ಈ ನನ್ನ ತಂದೆಗೆ ಹುಲಿಯ ಖಯಾಲಿ ನಾನು ಇವನಿಗೇನೋ ಮೋಕ್ಷ ನೀಡುವ, ಸ್ವರ್ಗ ಪ್ರಾಪ್ತಿ ಮಾಡಿಸುವೆನೆಂಬ ಅಪೇಕ್ಷೆ. ನನ್ನಂತಹ ಹುಲಿ ಇವನ ವಂಶ ಬೆಳೆಸುವೆನೆಂಬ ಖಾತ್ರಿ!

ನನಗೆ ನಾನು ಸಾಕಿದ್ದ ಮೊಲಗಳನ್ನು ತಿವಿದು ಕೊಲ್ಲುವುದಕ್ಕಿಂತ ಅದು ಚಿಕ್ಕದರಲ್ಲಿ ಆಟವಾಡುವುದನ್ನ ನೋಡಲು ಬಲು ಇಷ್ಟವಿತ್ತು. ಅದರ ಕುತ್ತಿಗೆಗೆ ಗೆಜ್ಜೆ ಕಟ್ಟಿ ಅದು ಓಡಿಯಾಡಿದಾಗ ಅದು ಮಾಡುವ ಸದ್ದನ್ನು ಕೇಳಬೇಕೆಂಬ ಆಸೆಯಿತ್ತು. ನನ್ನ ಅಮ್ಮನ ಬೆಚ್ಚನೆಯ ತೋಳಿನಲ್ಲಿ ಸೇರಬೇಕು, ಅವಳ ಕೈಯಲ್ಲಿ ಎಣ್ನೆ ಉಜ್ಜಿಸಿಕೊಂಡು ಬಿಸಿ ಬಿಸಿ ನೀರು ಸುರಿಸಿಕೊಂಡು ಮೀಯಬೇಕು, ಮಮತೆ ತುಂಬಿದ ಕೈಗಳಿಂದ ಅನ್ನ ಉಣ್ಣಿಸಿಕೊಳ್ಳಬೇಕೆಂಬ ಹಂಬಲವಿತ್ತು. ಅವಳ ತೊಡೆಗಳ ಮೇಲೆ ನೆಮ್ಮದಿಯಾಗಿ ಒಮ್ಮೆಯಾದ್ರೂ ನಿದ್ರಿಸುವ, ಅವಳ ಕೈಬೆರಳುಗಳು ನನ್ನ ಕೂದಲನ್ನು ಸವರುವ ಸ್ಪರ್ಶದನುಭವ ಬೇಕಿತ್ತು. ಬಿದ್ದು ಗಾಯ ಮಾಡಿಕೊಂಡಾಗ ಮುಲಾಮು ಹಚ್ಚುವ ಅಕ್ಕ ಬೇಕಿತ್ತು. ಅಮ್ಮನ ಹತ್ತಿರವೂ ಹೇಳಲಾಗದ ಆಸೆ, ಕನಸುಗಳನ್ನು ಅಕ್ಕನ ಕಿವಿಯಲ್ಲಿ ಒಸರಬೇಕಿತ್ತು. ಅಕ್ಕನ ತೋಳ್ತೆಕ್ಕೆಯಲ್ಲಿ ನನ್ನ ಬಾಲ್ಯದ ರಾತ್ರಿಗಳನ್ನು ನೆಮ್ಮದಿಯಾಗಿ ಕಳೆಯಬೇಕಿತ್ತು. ನನ್ನಲ್ಲಿದ್ದ ಎಲ್ಲ ಮೊಲಗಳಿಗೂ ಅಕ್ಕನ ಹೆಸರು ಇಡಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದೇ ಒಂದು ಹೆಣ್ಣು ಜೀವ ನನ್ನ ಸುತ್ತ ತನ್ನ ಪ್ರೀತಿ ಚೆಲ್ಲಬೇಕಿತ್ತು. ಆದರೆ ಎಲ್ಲವನ್ನೂ ಕಿತ್ತುಕೊಂಡ ಈ ಅಪ್ಪ ಅಮ್ಮ ನನಗೀಗ ಬೇಕಿರಲಿಲ್ಲ. ನೀವೇ ಹೇಳಿ ಏನು ಮಾಡಲಿ ಇವರನ್ನು. ಇನ್ನೊಬ್ಬರನ್ನು ಬದುಕಗೊಡದ ಈ ದೇಹಗಳಿಗೆ ಬದುಕುವ ಹಕ್ಕು ಇನ್ನು ಉಳಿದಿಲ್ಲ. ಎಂದು ಖಾಲಿ ಬಯಲಿನಷ್ಟೇ ನಿಸ್ತೇಜವಾಗಿ ನಿಂತಿದ್ದ ಜನಸ್ತೋಮವನ್ನು ನೋಡುತ್ತಾ ಜೇಬಿನಿಂದ ರಿವಾಲ್ವರೊಂದನ್ನು ಹೊರತೆಗೆದದ್ದೇ, ಎಲ್ಲ ದೇಹಗಳಲ್ಲಿ ಜೀವಸಂಚಾರವಾದಂತಾಗಿ, ಇಲ್ಲಾ, ತಡೆ, ಕೊಲ್ಲು, ಹೋ, ಹಾ.. ಎಂದು ಏನೇನೋ ಮಾತುಗಳು ಗಿಜಿಗಿಜಿಗಿಜಿಗಿಜಿಗಿಜಿಗಿಜಿಯಲ್ಲಿ ಏನೂ ಕೇಳದಂತಾಯ್ತು. ಎಲ್ಲೆಲ್ಲೂ ಗುಸುಗುಸು ಪಿಸ ಪಿಸ ಮಾತುಗಳು, ನೆರೆದಿದ್ದವರೆಲ್ಲರಲ್ಲೂ ಚೆಲ್ಲಾಪಿಲ್ಲಿಯಾಗುತ್ತಿರಲು. ಎಲ್ಲೆಲ್ಲಿಂದಲೋ ಖಾಕಿ, ಖಾದಿಗಳೆಲ್ಲಾ ಸಭಾಂಗಣದತ್ತ ನುಗ್ಗುತ್ತಿರಲು…

ಯುವಕ ರಕ್ತ ಕಾರುತ್ತಾ ಧರೆಗುರುಳುವನು……!


                                                     -ನೀ.ಮ. ಹೇಮಂತ್

6 comments:

  1. ಅಬ್ಬಾ ಭಯಂಕರವಾಗಿದೆ ಕಣ್ರಿ . ಹುಲಿಯಂತ ಮಗನ ಹಂಬಲದ ಅಪ್ಪ, ಮೊಲದಂತ ಮಗಳನ್ನು ಕಳೆದುಕೊಂಡ ದ್ವೇಷವ ಮಗನ ಮೇಲೆ ತೋರುವ ಅಮ್ಮ, ಅವರಿಬ್ಬರನ್ನೂ ಗುಂಡಿಕ್ಕಿ ಕೊಲ್ಲಲು ಮುಂದಾದ ಮಗ, ಅದರ ಮೊದಲು ಸಾರ್ವಜನಿಕವಾಗಿ ಅವರ ಕೈಕಾಳು ಕಟ್ಟಿ ಕಾರಣ ಹೇಳುವ ಪರಿ.. ಇವೆಲ್ಲವನ್ನೂ ಒಟ್ಟಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ಕೊನೆಯವರೆಗೂ ತನ್ನ ಬಿಗಿತವನ್ನು ಬಿಟ್ಟುಕೊಡದ ಕಥೆ. ಆದರ್ಶಗಳನ್ನು ಕ್ಷಣಕಾಲ ಬದಿಗಿಟ್ಟು ಕಥೆಯ ದೃಷ್ಟಿಯಿಂದಲೇ ನೋಡಿದರೆ ಚೆನ್ನಾಗಿದೆ ಎಂದೇ ಹೇಳಬಹುದು.

    ReplyDelete
    Replies
    1. ಧನ್ಯವಾದಗಳು ಪ್ರಶಾಂತ ಅವರೇ ಕಷ್ಟ ಪಟ್ಟು ಇಷ್ಟ ಪಟ್ಟಿದ್ದಕ್ಕೆ ಹ ಹ ಹ.. ಈ ಕಥೆಯನ್ನು ನಾನು ಆದರ್ಶ, ಮೌಲ್ಯ, ಮುಖ್ಯವಾಗಿ ಮನುಷ್ಯತ್ವ ಕಳೆದುಕೊಂಡಿರುವ ಆತ್ಮವಿಲ್ಲದ ದೇಹಗಳಿಗೇ ಸಮರ್ಪಿಸಿದ್ದೇನೆ :-)

      Delete
  2. hmmm nijakku chennagide ee kathe...

    ReplyDelete
    Replies
    1. ಧನ್ಯವಾದಗಳು ಆಸಕ್ತಿಯಿಟ್ಟು ಓದಿದ್ದಕ್ಕೆ :-)

      Delete
    2. Thannade rakthada magalannu konda appa
      Thannade madilina maganannu dweshisuva amma
      Ibbara naduve nalugida maganigintha
      Oh henne neene punyavanthe
      E lokakke barade jeevava ulisikonde

      Wonderful story hemanth

      Delete
    3. ಚೆನ್ನಾಗ್ ಹೇಳಿದ್ರಿ :-) ಥ್ಯಾಂಕ್ ಯೂ ಓದಿ, ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದಕ್ಕೆ :-)

      Delete