ಓದಿ ಓಡಿದವರು!

Saturday, 28 April 2012

ಸುಕಪೈಲಿಚೊಮಿಯ!


(ಇದೊಂದು ಶುದ್ಧ ನಾನ್ ಸೆನ್ಸ್ ಕಥೆ. ಇದನ್ನ ಹೀಗೇ ಬರೀಬೇಕಂತ ತೀರ್ಮಾನಿಸಿ ಬರೆದೆ, ಆದರೆ ಅರ್ಥಪೂರ್ಣವಾಗಿ ಬರೆಯೋದಕ್ಕಿಂತ, ಅರ್ಥಹೀನವಾಗಿ, ಕೆಟ್ಟದಾಗಿ ಬರೆಯೋದು ತುಂಬಾನೇ ಕಷ್ಟ ಅಂತ ಈಗ ಗೊತ್ತಾಯ್ತು. ನಿಮಗೇನಾದ್ರೂ ಅರ್ಥವಾದರೆ ನೀವು ಗೆದ್ರಿ. ಏನೂ ಅರ್ಥವಾಗದಿದ್ರೆ, ಕಿತ್ತೋಗಿರೋ ಕಥೆಯಿಲ್ಲದ ಕಥೆ ಎಂದು ಕಷ್ಟ ಪಟ್ಟು ಓದಲು ಪ್ರಯತ್ನಿಸಿ ತಲೆ ಕೆಡಿಸಿಕೊಂಡು ನನ್ನನ್ನು ಬಯ್ದುಕೊಂಡರೆ, ನಾನು ಗೆದ್ದೆ, ಶುಭವಾಗಲಿ!)
                ಗಾಳಿ ಮೂಗಿನ ಹೊಳ್ಳೆಯೊಳಗೆ ಹೋಗ್ತಿದೆ. ಈ ಬೆಳಕು ಕಣ್ಣಿಗೆ ಮಾತ್ರ ಹೇಗೆ ತಾಗುತ್ತೆ! ಮೂಗಿಗೆ ಏಕೆ ಕಾಣಿಸ್ತಿಲ್ಲ? ಕಿವಿ ಬಾಯಿಯಾಗಿ, ಬಾಯಿ ಕಿವಿಗಳ ಜಾಗದಲ್ಲಿ ಅಲಂಕರಿಸಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ? ಥು ಅನಿಷ್ಟ ಎಲ್ಲಾ ಶುರುವಾಗಿದ್ದೂ ಈ ರೀತಿ ಪ್ರಶ್ನೆಗಳು ಹುಟ್ಟೋಕೆ ಶುರುವಾದಮೇಲೆಯೇ. ನಾನು ಹುಚ್ಚಾನಾ? ಸಾಧ್ಯಾನೇ ಇಲ್ಲಾ! ಯಾರನ್ನಾದರೂ ಕೇಳೋಣ ಅಂದುಕೊಂಡ್ರೆ. ಎಲ್ಲಾ ಹುಚ್ಚುಬಡ್ಡೀ ಮಕ್ಳೇ, ನಾನ್ಯಾಕೆ ಅವರ ಹತ್ತಿರ ಕೇಳಬೇಕು. ಬೇರೆಯವರಿಗೆ ನಾನು ಹುಚ್ಚಾನಾ ಅಲ್ವಾ ಅಂತ ನಿರ್ಧರಿಸೋ ಹಕ್ಕು ಕೊಟ್ರೇ ನಾನು ಖಂಡಿತಾ ಹುಚ್ಚ. ನಾನು ಹುಚ್ಚಾನಾ ಅಲ್ವಾ ಅಂತ ನಾನೇ ನಿರ್ಧರಿಸಬೇಕು. ನನಗೆ ಹುಚ್ಚು ಹುಚ್ಚು ಯೋಚನೆ ಬರುತ್ತಾ? ಪ್ರಶ್ನೆ ಕೇಳೋದು ಹುಚ್ಚುತನ ಅಂತ ಅನ್ಸುತ್ತೆ ಅಷ್ಟೇ ಅದರೆ ಅದು ಹುಚ್ಚುತನ ಆಗಿರೋಲ್ಲ. ಸುಮ್ಮನೆ ಪ್ರಶ್ನಿಸದೇ ಎಲ್ಲವನ್ನೂ ಒಪ್ಪಿಕೊಳ್ಳುವುದು ಹುಚ್ಚುತನದ ರೀತಿ ಕಾಣ್ಸೋಲ್ಲ, ಆದ್ರೆ ಅದು ಖಂಡಿತಾ ಹುಚ್ಚು, ಭಯಾನಕ, ಘೋರವಾದ ಹುಚ್ಚುತನ. ಈ ಮನೆಗೆ ಮೂರು ಬಾಗಿಲು ಒಂದು ಗೋಡೆ ಇರಬೇಕಿತ್ತು. ಗಾಳಿ ನನ್ನ ಅಪ್ಪಣೆ ಇಲ್ಲದೆ ಒಳಗೆ ಹೇಗೆ ನುಗ್ಗುತ್ತೆ. ವಿಷಪೂರಿತ ಗಾಳಿ. ಇಲ್ಲಾ, ಇದು ಹಿಟ್ಲರ್ ಗ್ಯಾಸ್ ಛೇಂಬರ್ ನಲ್ಲಿ ಮನುಷ್ಯರನ್ನೆಲ್ಲಾ ಸಾಯಿಸಲಿಕ್ಕೆ ಬಳಸ್ತಿದ್ನಲ್ಲ ಅದೇ ಇಷಪೂರಿತ ಗಾಳಿ ನನ್ನ ಮನೆಗೆ ಬರ್ತಿದೆ. ಇದು ನನ್ನ ಮನೆಯಲ್ಲ, ದೇಶ! ನನ್ನ ದೇಶದ ಜನರನ್ನ ಸಾಯಿಸಲಿಕ್ಕೇ ಬಿಟ್ಟಿದ್ದಾರೆ ಈ ವಿಷಪೂರಿತ ಗಾಳಿಯನ್ನ. ಎಲ್ಲಾ ಓಡಿ.., ಓಡಿ.., ಓಡಿ…, ತಪ್ಪಿಸಿಕೊಳ್ಳಿ ಈ ಗಾಳಿ ನಿಮ್ಮನ್ನ ಸಾಯಿಸಿಬಿಡುತ್ತೆ. ಉಸಿರು ಕಟ್ಟಿ ನರಳಾಡ್ತಾ ಸತ್ತುಹೋಗ್ತೀರಾ, ಓಡಿ. ಹಹಹ ಹೇಳಿದ ತಕ್ಷಣ ಓಡಿಬಿಟ್ರೂ, ಥೂ ಪುಕ್ಕಲು ಜನ. ಎಲ್ಲಾ ಬಾಲಗಳು, ಹಿಂಬಾಲಕರು, ಒಬ್ರೂ ನಾಯಕರೇ ಇಲ್ಲಾ. ನಾಯಕರು ಅನ್ನಿಸಿಕೊಂಡವರೂ ಕೂಡಾ ನಾಯಿ-ಕರುಗಳು. ಕಂತ್ರಿ, ಕಜ್ಜಿ, ಕಚ್ಚೋ ಹುಚ್ಚು ನಾಯಿಗಳು, ಗುಡ್ಡೆ ಹುಲ್ಲು ತಿಂದು ಹಾಲೇ ಕೊಡದ ಗೊಡ್ಡು ಕರುಗಳು. ಸಾಯಲಿ ಎಲ್ಲಾ. ಹೆಣಗಳನ್ನೇ ಪಾಯ ಮಾಡಿಕೊಂಡು ಮನೆ ಕಟ್ಟಬೇಕು. ಇಡೀ ದೇಶವನ್ನ ನನ್ನ ಮನೆಯಿಂದಾಚೆ ಓಡಿಸಿದ್ರೆ ನೆಮ್ಮದಿಯಾಗಿ ಬದುಕಬಹುದು.  

ಈ ಮನೆಯೊಳಗೊಂದು ಅಡುಗೆ ಮನೆ ಯಾಕಿರಬೇಕಿತ್ತು? ಅಡುಗೆಮನೆಯ ದೀಪ ಬೇರೆ, ಸದಾ ಉರೀತನೇ ಇರುತ್ತೆ. ಹೆಂಗಸೊಬ್ಬಳು ಸೇರ್ಕೊಂಡ್ರೆ ಹಿಂಗೇ ಉರೀತಾನೇ ಇರೋದೇನೋ, ದೀಪ.  ಈ ದೀಪಕ್ಕೂ ಹೆಂಗಸಿಗೂ ಏನಾದ್ರು ಸಂಬಂಧ ಇರಬಹುದಾ? ಈ ಗೋಡೆ ಮೇಲೆ ಆ ಹೆಂಗಸಿನ ನೆರಳು ಬೀಳ್ತಿತ್ತು. ಗೋಡೇನೇ ಹೆಂಗಸು. ಕೈಕಾಲು, ಮುಖ, ದೇಹದ ಆಕೃತಿಯೊಂದನ್ನ ಬಿಡಿಸಿದರೆ ಇದು ಹೆಂಗಸೇ. ಈ ಗೋಡೆಗೆ ಒಂದು ರಂಧ್ರವನ್ನ ಕೊರೆಯಬೇಕು. ಹೌದು ಈಗಲೇ ಕೊರೀತೀನಿ. ಹಾ.. ಹೂ.. ಹೋ.. ಹೇ… ಹೈ… ಹೌ… ಹಂಂಂಂಂಂಂಂ ಆಹಾssssssss.. ಓಹೋ… ಹ ಹ ಹ ಹ  ಚೆನ್ನಾಗಿತ್ತು. ಸುಸ್ತು. ಥು ಅಸಹ್ಯ ಅನ್ಸುತ್ತೆ ಇವಾಗ. ಈ ದೀಪ ಇನ್ನಾ ಉರಿತಾನೇ ಇದೆ. ಇದರಿಂದಾನೇ ಎಲ್ಲಾ ಆಗಿದ್ದು. ಹೊಡೆದುಹಾಕಬೇಕು. (ಛಟಾರ್) ಆಹಾ ಎಷ್ಟು ಸುಲಭವಾಗಿ ಚಿಂದಿ ಆಗೋಯ್ತು. ಹಾಳಾಗಿಹೋಗ್ಲಿ ಥಾಮಸ್ ಆಲ್ವಾ ಎಡಿಸನೇ ಸತ್ತಾಯ್ತು ಇನ್ನಾ ಇದನ್ನೇ ಇಟ್ಟುಕೊಂಡು ಯಾಕ್ ಒದ್ದಾಡ್ತಿದ್ವಿ ನಾವು. ಹೊಸದೇನಾದ್ರು ಬರಲಿ. ಅದೇನೋ ಸರಿ, ನಾನು ಇವನ್ನೆಲ್ಲಾ ಹೇಗೆ ನೋಡ್ತಿದ್ದೆ. ನನಗೆ ಕಣ್ಣೆಲ್ಲಿದೆ. ಕಣ್ಣುಗಳನ್ನ ಕಳೆದುಕೊಂಡು ಯಾವ ಕಾಲವಾಯ್ತು. ಸತ್ಯ, ಸೌಂದರ್ಯ ಕಾಣೋಕೆ ಕಣ್ಣು ಬೇಕಾ? ಕಣ್ಣುಗಳು ಕಳಕೊಂಡಮೇಲೇ ನಿಜವಾದ ಸೌಂದರ್ಯದ ದರ್ಶನವಾಗೋದು ಅನ್ಸುತ್ತೆ. ಕಣ್ಣಿದ್ದಾಗ ಕುರುಡನಾಗಿದ್ದೆ. ಕಣ್ಣು ಹೋದ ಮೇಲೆ ಎಲ್ಲಾ ಸರಿಯಾಗಿ ಕಾಣ್ತಿದೆ. ಇವೆಲ್ಲಾ ನನಗ್ಯಾಕೆ, ಏನ್ ಕಾಣುತ್ತೋ ಬಿಡತ್ತೋ ನನಗೆ ಕಣ್ಣುಗಳಿವೆ. ಯಾರೋ ಬಾಗಿಲು ಬಡೀತಿದ್ದಾರೆ. ಧಡ್ ಧಡ್ ಧಡ್ ಶಬ್ಧ. ಥು, ನಾನಿಲ್ಲಾ ನಾನು ಸತ್ತೋಗಿದ್ದೀನಿ. ಹೋಗಿ. ಇಲ್ಲಾ ನನ್ನ ಬಾಗಿಲೇ ಯಾರನ್ನೋ ಬಡೀತಿರಬೇಕು. ನನ್ನ ಬಾಗಿಲೇ ಸರಿ ಇಲ್ಲ. ಈ ಬಾಗಿಲನ್ನ ಕಿತ್ತು ಹಾಕಿ ಗೋಡೆಗಳೇ ಇಟ್ಟುಬಿಡಬೇಕು. ಎಲ್ಲಾ ಉಲ್ಟಾ ಅಗಿಹೋಗಬೇಕು.  

ಮೊದಲು ಈ ಬೀಗಕ್ಕೆ ಬಾಗಿಲು ಹಾಕಿಬಿಡ್ತೀನಿ. ಯಾಕೆ ಅವಾಗಾವಾಗ ನನ್ನ ತಲೆ, ಕೈನ ಕೆರೀತಿರುತ್ತೆ. ನನಗೆ ಈ ನೆರಳ ಮುಂದೆ ಮುಂದೆ ಹೋಗಿ ಸಾಕಾಗಿದೆ. ಎಷ್ಟು ಪ್ರಯತ್ನ ಪಟ್ಟರೂ ಈ ನೆಲ ನನ್ನ ಕಾಲಿನ ಕೆಳಗೇ ಯಾಕೆ ಸಿಕ್ಕಿಬೀಳುತ್ತೆ, ತಲೆ ಮೇಲೆ ಯಾಕೆ ಬರಲ್ಲ. ನನಗೆ ಊಟದ ತುಂಬಾ ಹೊಟ್ಟೆ ಮಾಡ್ಬೇಕು ಅನ್ಸುತ್ತೆ. ಸಿನಿಮಾಗಳು ನನ್ನನ್ನ ನೋಡ್ಬೆಕು ಯಾವಾಗಲಾದ್ರು. ನನ್ನ ಸ್ನೇಹಿತನನ್ನ ಅವನ ನಾಯಿ ಟೋನಿ ಸಾಕಿಕೊಂಡ ಹಾಗೆ ನನ್ನ ಮನೆಯಲ್ಲೂ ಒಂದು ನಾಯಿ ನನ್ನನ್ನು ಸಾಕಬೇಕು ಒಮ್ಮೆ. ದುಡ್ಡು ಕೂಡ ತುಂಬಾ ನನ್ನನ್ನ ಮಾಡಬೇಕು. ಆಕಾಶದಲ್ಲಿರುವ ಮಳೆಯಿಂದ ಮೋಡ ಭೂಮಿಗೆ ಬರಬೇಕು. ಮರದ ತುಂಬಾ ಭೂಮಿ ಬೆಳೀಬೇಕು. ಪ್ರೀತಿ ಪ್ರೀತಿ ನಡುವೆ ಮನುಷ್ಯ ತುಂಬಿರಬೇಕು. ನಾನು ಸೊಳ್ಳೆಗಳಿಗೆ ಕಚ್ಚಬೇಕು. ಕೋಳಿ ನನ್ನನ್ನ ತಿನ್ನಬೇಕು. ಮರ ನನ್ನನ್ನ ಕಡೀಬೇಕು. ನದಿ ನನ್ನನ್ನ ಕೊಳಕುಗೊಳಿಸಬೇಕು. ಮನೆಗಳೆಲ್ಲಾ ನನ್ನನ್ನ ಕಟ್ಟಬೇಕು. ಬಣ್ಣಕ್ಕೆ ಗೋಡೆ ಹೊಡೀಬೇಕು. ನನ್ನೊಳಗೊಂದು ಮನೆ ಸೇರ್ಕೋಬೇಕು. ಕಂಬಗಳ ಮೇಲೆ ಪಾಯ ನಿಲ್ಲಬೇಕು. ಯಾರಲ್ಲೂ ನನ್ನ ಮನೆ ಇರಬಾರದು.  

ಮತ್ತೆ ಬಾಗಿಲು ಯಾರನ್ನೋ ಬಡೀತಿದೆ. ತುಂಬಾ ಜನ ಹೊರಗಡೆ ಇದ್ದ ಹಾಗಿದ್ದಾರೆ. ಇಲ್ಲ, ಇಲ್ಲ ಹಾಗಿದ್ದಾರೆ ಇದ್ದ ಹೊರಗಡೆ ಜನ ತುಂಬಾ. (ಹೊರಗಿನಿಂದ ಗುಂಪು ಮಾತನಾಡಿಕೊಳ್ಳುತ್ತದೆ) “ಒಳಗೆ ಏನೋ ಆಗಿದೆ, ತುಂಬಾ ದಿನ ಆಯ್ತು, ಆ ಹುಚ್ಚ ಹೊರಗಡೆ ಬಂದು. ಪೊಲೀಸರಿಗೆ ಮೊದಲು ಫೋನ್ ಮಾಡಿ. ಬಾಗಿಲು ಹೊಡೀರಿ.” ಹೊಡೀರಿ ಬಾಗಿಲು. ಮಾಡಿ ಫೋನು ಮೊದಲು ಪೊಲೀಸರಿಗೆ. ಬಂದು ಹೊರಗಡೆ ಹುಚ್ಚ ಆ, ಆಯ್ತು ದಿನ ತುಂಬಾ, ಆಗಿದೆ ಏನೋ ಒಳಗೆ ಎಂದು ನನಗೆ ಅರ್ಥವಾಗುವ ಹಾಗೇ ಮಾತನಾಡ್ತಿದ್ದಾರೆ. ಹುಚ್ಚರು ಹಾ ಹಾ ಹಾ ಹಾ.. ಬಡೀರಿ ಇನ್ನೂ ಜೋರಾಗಿ ಬಡೀರೀ.. ಜೋರಾಗಿ ಇನ್ನೂ ಹಾ.. ಅನ್ಸುತ್ತೆ ಕಿತ್ತೇ ಇನ್ನೇನು ಬಾಗಿಲು. ಬಂದೇಬಿಡ್ತಾರೆ ಒಳಗೆ ಇನ್ನೇನು. ಮಾತನಾಡಬೇಕು ಹಾಗೆ ಅರ್ಥವಾಗೋ ಹುಚ್ಚರಿಗೆ ಈ ಯಾಕೆ ನಾನೂ. ಇಲ್ಲ ಇಲ್ಲ.. ಅಗಬೇಕು ಅರ್ಥ ಮಾತ್ರ ನನಗೆ ಮಾತನಾಡುವುದು ನಾನು. ಹಾಗಾದರೆ ಮಾತನಾಡಲ್ಲ ಹಿಂಗೆ ನಾನು. ಹೌದು ಹೌದು. ಬಿಟ್ರೂ ಬಂದೇ ಬಂದ್ರೂ.  (ಬಾಗಿಲು ಒಡೆದು ಒಳಗೆ ಬಂದ ನಾಲ್ಕೈದು ಜನ) ಏಯ್ ಇಲ್ಲೇ ಇದ್ದಾನೆ, ಬದುಕೇ ಇದ್ದಾನೆ, ಅವನ ಕೈಯಲ್ಲಿ ಏನೋ ಇದೆ ಅನ್ಸುತ್ತೆ. ಹೇಯ್ ಹೊರಗೆ ಬರೋಕೆ ಏನ್ ನಿನಗೆ, ಸತ್ತೋಗಿದ್ಯ ಅಂದುಕೊಂಡ್ವಿ. ಏನಾಗಿದೆ ನಿನಗೆ. ಸುಪಿಜೆಜೊವ್ಜೊಎಇ. ಏನು ಸರಿಯಾಗಿ ಮಾತನಾಡು, ಏನ್ ಹೇಳ್ತಿದ್ಯ. ಚುಮಾಚಿಮೊಪಲೆಇ ಜೆಇಔಎಅಲಿ. ಹೇಯ್ ಇವನು ಪೂರ್ತಿ ಹುಚ್ಚ ಆಗೋಗಿದ್ದಾನೆ. ಹಗ್ಗ ತೊಗೊಂಡ್ಬನ್ನಿ. ಹುಚ್ಚಾಸ್ಪತ್ರೆಗೆ ಫೋನು ಮಾಡಿ. ಬಾಗಿಲು ಹಾಕಿ ಮೊದಲು. ಹೆಇಊಸ್ಕೆವಜಿಎಲ್……. ಸುಕಪೈಲಿಚೊಮಿಯ… ಸುಕಪೈಲಿಚೊಮಿಯ… ಸುಕಪೈಲಿಚೊಮಿಯ..                 -ನೀ.ಮ. ಹೇಮಂತ್

2 comments:

  1. [?]i read it for 3 tyms..!! :( but didn't understood anything..!!!!!

    ReplyDelete
    Replies
    1. hehehhehehe... read for fourth time you will defenitly understand :-)

      Delete