ಓದಿ ಓಡಿದವರು!

Sunday 22 April 2012

ನನ್ನಿಷ್ಟ!



            ದುಗ ಮಹಾಶಯರೇ ನನ್ನ ಬಗ್ಗೆ ಹೇಳ್ತೀನಿ ಕೇಳಿ. ನಾನೊಬ್ಬ ಐಟಿ ಉದ್ಯೋಗಿ ಕಣ್ರೀ. ನಾನು ಮೂವತ್ತು ದಿನಗಳಲ್ಲಿ ಇಪ್ಪತ್ನಾಲ್ಕು ದಿನಗಳು ಕೆಲಸ ಮಾಡಿದ್ರೆ ಮೂವತ್ತೊಂದನೆಯ ದಿನ ನನ್ನ ಕೆಲಸಕ್ಕೆ ಸಂಬಳ ಅಂತ ದುಡ್ಡು ಬಂದು ನನ್ನ ಬ್ಯಾಂಕಿನ ಖಾತೆಗೆ ಬೀಳ್ತಿತ್ತು ಕಣ್ರೀ. ಪೇ ಸ್ಲಿಪ್ ಅಂತ ಒಂದು ಇ-ಮೇಲ್ ಅದರಲ್ಲಿ ಸಂಬಳ ಕೊಟ್ಟಿರುವುದಕ್ಕೆ ಸಾಕ್ಷ್ಯ, ಮತ್ತು ಸಂಬಳದಲ್ಲಿ ದುಡ್ಡು ಹಿಡಿದಿರುವುದರ ಲೆಕ್ಕಾಚಾರಗಳ ವಿವರಗಳು ಇರುತ್ತಿದ್ದವು. ಅದನ್ನು ನೋಡಲು ಅಂದಿನ ದಿನ ನೂಕು ನುಗ್ಗಲು. ಪದೇ ಪದೇ ನೋಡಿದ್ದನ್ನೇ ನೋಡುತ್ತಿದ್ದ ನನ್ನ ಸಹಪಾಠಿಗಳನ್ನು ಕಂಡು ನನಗೆ ನಗೆ ಬರುತ್ತಲಿತ್ತು. ನೋಡಿ ಮೊದಲೇ ಹೇಳಿರ್ತೀನಿ ನಾನು ಹೇಳುತ್ತಿರುವುದು ಸರಿ ಇಲ್ಲ ಎಂದು ನೀವು ಹೇಳಿದರೆ ನೀವೇ ಸರಿ ಇಲ್ಲ ಅಂತ ನಾನ್ ಹೇಳ್ತೀನಿ. ಇದು ನನ್ನ ಕಥೆ ಕಣ್ರೀ. ನನಗೆ ಸರಿ ಅನ್ನಿಸಿದ್ದನ್ನ ಮಾತ್ರ ಹೇಳ್ತೀನಿ. ಮತ್ತೆ ನೀವು ಯಾಕ್ ಇದನ್ನ ಓದಬೇಕು ಅಂತ ಯೋಚಿಸ್ತಿದ್ದೀರಾ? ನನ್ನಂಥವನ ಬಗ್ಗೆ ತಿಳ್ಕೊತೀರಾ, ಅದಕ್ಕೇ ಕಣ್ರೀ. ಸರಿ ಓದಿ. ಎಲ್ಲಿದ್ದೇ? ಹಾ ಆ ಸಂಬಳವನ್ನು ಭಲೇ ಖುಷಿಯಿಂದ ನೋಡ್ತಿದ್ರು ಕಣ್ರೀ. ಒಂದು ದಿನ ಸಂಬಳ ಬರುವುದಕ್ಕೆ ಮೂವತ್ತು ದಿನ ನೆಮ್ಮದಿ, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಳೆದುಕೊಂಡು ದುಡೀಬೇಕಿತ್ತು. ಇದ್ಯಾವ ಹಣೆಬರಹ ರೀ? ಸಂಬಳಕ್ಕೆ ದುಡಿಯೋಷ್ಟು ಚಿಕ್ಕ ಮನುಷ್ಯರಾಗೋದ್ವಲ್ಲಾ ನಾವು ಅಂತ ತುಂಬಾ ಸಂಕಟ ಆಗ್ತಿತ್ತು. ನಮ್ಮ ಮನೆ ಎದುರುಗಡೆ ಒಂದು ಚಿಕ್ಕ ತಳ್ಳುವ ಗಾಡಿ, ಬಿಸಿಲು, ಮಳೆಯಿಂದ ಬಚಾವಾಗಲು ಗಾಡಿಗೆ ಹೊದಿಸಿರುವ ಟಾರ್ಪಾಲು, ಆ ಟಾರ್ಪಾಲಿನ ಕೆಳಗಡೆ ಎರಡು ಕಲ್ಲಿದ್ದಲಿನಂತಹ ಎರಡು ಬೆವರಿನಲ್ಲಿ ಅದ್ದಿ ತೆಗೆದಿರುವ ಎರಡು ದೇಹಗಳು. ಒಂದು ಕಬ್ಬಿಣದ ಇಸ್ತ್ರಿ ಪೆಟ್ಟಿಗೆಯ ಹೊಟ್ಟೆಗೆ ಉರಿ ಉರಿ ಕೆಂಡವನ್ನು ಸುರಿದು ಆ ಇಸ್ತ್ರಿ ಪೆಟ್ಟಿಗೆಯನ್ನು ನಮ್ಮ ಬಟ್ಟೆಗಳ ಮೇಲೆ ಸರಕ್ ಸರಕ್ಕನೆ ಎಳೆದು ಗರಿಗರಿಗೊಳಿಸಿ ಕೊಡುತ್ತಿದ್ದ ಅದನ್ನು ನಾವು ಭಾರೀ ಮೇಧಾವಿಗಳು ಧರಿಸಿಕೊಂಡು ದೊಡ್ಡ ದೊಡ್ಡ ಕಂಪನಿ ಬಸ್ಸನ್ನು ಏರಿ ಕಾಲು ಮೇಲೆ ಕಾಲು ಹಾಕಿಕೊಂಡು ಹೋಗಿ ಏಸಿ ರೂಮಿನಲ್ಲಿ ಅಂಡೂರುತ್ತಿದ್ದೆವು. ನಂಬುತ್ತೀರೋ ಬಿಡ್ತೀರೋ ಆದರೆ ನಿಜ ಹೇಳ್ತೀನಿ, ಒಳಗೆ ಮಾಡುತ್ತಿದ್ದ ಕೆಲಸದಲ್ಲಿ ಒಂದು ದಿನಕ್ಕೆ ಬೆವರು ಬರಲಿಲ್ಲ ಕಣ್ರೀ, ಅಂಥಾ ಕೆಲಸವನ್ನ ಕೆಲಸ ಅಂತ ಕರೀತಿದ್ರು, ಅದಕ್ಕೆ ಘನತೆ, ಗೌರವವನ್ನ ಆರೋಪಿಸುತ್ತಿದ್ರು, ಮತ್ತು ನಡುಬಗ್ಗಿಸಿ ದುಡಿಯುವವರಿಗಿಂತ ಹೆಚ್ಚಿಗೆ ಸಂಬಳ ಕೊಡುತ್ತಿದ್ದರು. ತುಂಬಾ ಓದಿದರೆ ಕಡಿಮೆ ಕೆಲಸ ಮಾಡೋದು ಹೇಗೆ ಅಂತ ಕಲೀತೀವಂತೆ. ಕಡಿಮೆ ಕೆಲಸ ಮಾಡೋದನ್ನ ಕಲಿತವರಿಗೆ ಹೆಚ್ಚಿಗೆ ಸಂಬಳ ಕೊಡ್ತಾರಂತೆ. ನಾನು ನನ್ನ ಕಂಪನಿಯಲ್ಲಿ ಮೇಲೆ ಮೇಲಿನ ಹುದ್ದೆಗೆ ಹೋಗುತ್ತಿದ್ದ ಹಾಗೂ ಕೆಲಸ ಕಡಿತಗೊಳ್ಳುತ್ತಾ ಹೋಗುತ್ತಿತ್ತು ಸಂಬಳ ಹೆಚ್ಚುತ್ತಾ ಹೋಗುತ್ತಿತ್ತು. ಚೆನ್ನಾಗಿದೆ ಕಣ್ರೀ ನಮ್ಮ ಪ್ರಪಂಚ ಅಲ್ವಾ?

ನನ್ನ ಘನತೆ ಎಂಬ ಸುಕ್ಕು ಬಟ್ಟೆಗಳಿಗೆ ನೀರು ಚುಮುಕಿಸಿ ಬಿಸಿ ಬಿಸಿ ಇಸ್ತ್ರಿ ಪೆಟ್ಟಿಗೆಯನ್ನು ಸವರಿದಾಗ ಅದರಿಂದ ಏಳುತ್ತಿದ್ದ ಬುಸ್ಸ್ ಬುಸ್ಸ್ ಶಬ್ಧ, ಮತ್ತು ಸಣ್ಣದಾದ ಹೊಗೆ ಅದ್ಯಾಕೋ ಕಣ್ಮುಂದೆ ಬರುತ್ತಲೇ ಇತ್ತು. ಹಾಗೆ ಆ ಭಾರವಾಗಿರಬಹುದಾದ ಪೆಟ್ಟಿಗೆಯನ್ನು ಎಳೆಯುವಾಗ ಆ ತೊಳೆದಿಟ್ಟ ಕಲ್ಲಿದ್ದಲಿನಂಥ ಮನುಷ್ಯನ ಕೈಗಳಲ್ಲಿ ಹುರಿಗೊಂಡಿದ್ದ ಮಾಂಸಖಂಡಗಳು, ಹೊರಗೇಳುತ್ತಿದ್ದ ನರಗಳು ಛಂದವಾಗಿ ಕಾಣುತ್ತಿತ್ತು ನನಗೆ. ಕೆಲಸ ಅಂದ್ರೆ ಅದು ಕಣ್ರೀ. ಹಿಂಗೆ ಇಸ್ತ್ರಿ ಮಾಡಿಕೊಡುತ್ತಿದ್ದ ಹಂಗೆ ದುಡ್ಡೆಣಿಸುತ್ತಿದ್ದ. ಸಂಬಳ ಅಂದ್ರೆ ಅದು ಕಣ್ರೀ. ಗಂಡ ಅದೆಂಥ ಕಲಾವಿದ ಅಂತೀರಿ. ಪಕ್ಕದಲ್ಲಿದ್ದ ಹೆಂಡತಿಯ ಜೊತೆ ಸದಾ ಏನೋ ಮಾತನಾಡ್ತಾನೇ ಇರ್ತಿದ್ದ ಮತ್ತೆ ಅವಳು ನಗ್ತಿರ್ತಿದ್ದಳು ಅದೇ ನನಗೆ ಆಶ್ಚರ್ಯ. ಅದ್ಯಾವ ಹಾಸ್ಯ ಮಾಡಿರಬಹುದು ಅವನು, ಕದ್ದು ಕೇಳೋಣ ಅಂತ ಪ್ರಯತ್ನ ಪಟ್ಟಿದ್ದೆ ಕೂಡ ಅವರ ನಡುವಿನ ಖುಷಿಗೆ ಕಾರಣ ಏನೂಂತ ಗೊತ್ತೇ ಅಗಲಿಲ್ಲ. ನನಗೆ ನಾಳೆ ರಜಾ ತೊಗೋಬೇಕು ಅನ್ನಿಸಿತ್ತು. ಯಾಕೆ ಅಂತ ಕೇಳಿದ್ರು. ರಜ ತೊಗೋಬೇಕು ಅದೇ ಕಾರಣ ಅಂದೆ. ಕಾರಣ ಇಲ್ಲದೇ ರಜಾ ಕೊಡೋದಿಲ್ಲ. ಹಂಗೂ ಬೇಕಾದ್ರೆ, ನಾಳೆ ಆಗೊಲ್ಲ ಮುಂದಿನ ಬುಧವಾರ ತೊಗೋ ಅವತ್ತು ಕೊಡ್ತೀವಿ ಅಂದ್ರು. ನನಗೆ ನಾಳೆ ರಜಾ ತೊಗೋಬೇಕು ಅಂದ್ರೆ ಮುಂದಿನ ವಾರ ಕೊಡ್ತಾರೆ! ಸರಿ ನನಗೆ ಕೆಲಸ ಬಿಡಬೇಕು ಅನ್ನಿಸುತ್ತಿದೆ ಅಂದೆ. ಅದಕ್ಕೂ ಮನವಿ ಮಾಡು ಮೂರು ತಿಂಗಳ ನಂತರ ಕೆಲಸ ಬಿಡಬಹುದು ಅಂದ್ರು. ಮಾರನೆಯ ದಿನದಿಂದ ಕೆಲಸಕ್ಕೆ ಹೋಗೋದನ್ನ ನಿಲ್ಲಿಸಿದೆ. ಅನುಭವ ಪತ್ರ ಕೊಡಲ್ಲಾ ಅಂದ್ರು ಉಳಿದ ಸಂಬಳ ಕೊಡಲ್ಲ ಅಂದ್ರು ಇಟ್ಟುಕೊಳ್ಳಿ ಸಾರ್. ಮಜಾ ಮಾಡಿ ಅಂತ ಸುಮ್ಮನಾಗಿ ಹೋದೆ.

ಮನೆಯ ಮುಂದೆ ವಿಪರೀತ ಕೂಗಾಟ, ಹೊಡೆದಾಡ್ತಿದ್ರು ಕಣ್ರೀ. ಯಾವ ರೀತಿ ಅಂತೀರಿ? ಗಂಡ ಹೆಂಡತಿಯ ಜುಟ್ಟು ಹಿಡಿದು ಎಳೆದಾಡಿ, ಕಾಲು ಕಾಲಲ್ಲಿ ಒದೀತಿದ್ದ. ಅವಳೂ ರಸ್ತೆ ತುಂಬಾ ಬಿದ್ದು ಒದ್ದಾಡಿ ಎದೆ ಎದೆ ಬಡಿದುಕೊಂಡು ಗಂಡನನ್ನ ಅದು ಸೇದಿ ಹೋಗ ಇದು ಸೇದಿಹೋಗ ಎಂದು ಏನೇನೋ ಶಪಿಸುತ್ತಲೇ ಇದ್ದಳು. ಅರೆರೆ ಗಂಡ ಹೆಂಡಿರಾ ಇಲ್ಲ ಬದ್ಧ ವೈರಿಗಳಾ ಇವರು. ನನ್ನ ಕಣ್ಣೇ ತಗುಲಿರಬೇಕು ಇವರಿಗೆ ಎಂದುಕೊಂಡೆ. ಏನೇ ಹೇಳಿ ಎಷ್ಟು ಚೆನ್ನಾಗಿ ಒದೀತಿದ್ದ ಅಂತೀರಿ, ಫುಟ್ಬಾಲ್ ಆಟಕ್ಕೆ ಕಳುಹಿಸಬಹುದಿತ್ತು ಇವನ್ನ ಆದ್ರೆ ಪರಮಾತ್ಮ ಇಳಿಸಿದ ಮೇಲೆ. ನನಗೇನಾದ್ರು ಹೆಂಡತಿಯೆಂಬವಳೊಬ್ಬಳು ಗಂಟು ಬಿದ್ದಿದ್ರೆ. ಅವಳನ್ನ ನಾನು ಹಾಗೆ ಹೊಡೆಯುವುದೆಲ್ಲ ದೂ……ರದ ಮಾತು ಬಿಡಿ. ಅಕಸ್ಮಾತ್ತಾಗಿ ಕೈ ಎತ್ತಿ, ಕೆನ್ನೆಗೆ ನನ್ನ ಮೂರಿಂಚಿನ ನಾಲ್ಕು ಬೆರಳುಗಳನ್ನ ಅವಳ ಕಪಾಳೆಗೆ ಶಬ್ಧ ಕೂಡ ಬರದಷ್ಟು ಚಿಕ್ಕದಾಗಿ ತಗುಲಿಸಿ, ಅವಳ ಕಿವಿಯಲ್ಲಿ ಪ್ರತಿಧ್ವನಿಸಲೂ ಸಹ ಆಗದಷ್ಟು ಜೋರಾಗಿ ಲೆಕ್ಕ ಹಾಕಿ ಎರಡೇ ಎರಡು ಮಾತು ಆಡಿದ್ದರೆ ಮನೆ ಬಿಟ್ಟು ಹೋಗುವುದಲ್ಲದೇ ವಿಚ್ಛೇದನದವರೆಗೂ ಹೋಗಿಲ್ಲದಿದ್ದರೆ ನಮ್ಮದು ಗೌರವಾನ್ವಿತ ಸಂಸಾರ ಎಂದು ಹೇಳಲು ಯಾವ ಮನುಷ್ಯನಿಗೂ ಸಾಧ್ಯವೇ ಇಲ್ಲ ಬಿಡಿ. ಅಂತೂ ಆ ರಸ್ತೆಯಲ್ಲಿ ಪ್ರತಿನಿತ್ಯ ಬಿಟ್ಟಿಯಾಗಿ ಕಾಣಸಿಗುತ್ತಿದ್ದ ಆದರ್ಶ ಸಂಸಾರ ಮುರಿದು ಬಿತ್ತಾ ಎಂದು ರಾತ್ರಿ ಮಲಗುವಾಗ ಟಿವಿ ಕಡೆ ಗಮನವಿಲ್ಲದೇ ಯೋಚಿಸುತ್ತಿದ್ದೆ. ಒಂದು ಇರುವೆ ನನ್ನ ಮಂಚದ ಪಕ್ಕದಲ್ಲೇ ಅದರ ಎರಡರ ಗಾತ್ರದ ಸಕ್ಕರೆಯ ಹುಂಡೆಯನ್ನು ಎತ್ತಿಕೊಂಡು ಹೋಗುತ್ತಿತ್ತು. ಹಾಗೇ ಗಮನಿಸಿದೆ. ಸಕ್ಕರೆ ಹುಂಡೆ ಬಿದ್ದೋಯ್ತು. ನನ್ನ ಮಗಂದು ಇರುವೆ ಏನು ಸಾಹಸ ಮಾಡ್ತಿತ್ತು ಅಂತೀರಿ. ಬಿದ್ದಷ್ಟೂ ಬಾರಿ ಮತ್ತೆ ತನ್ನ ಮುಂಗಾಲುಗಳಿಗೆ ಸಿಗಿಸಿಕೊಳ್ಳುತ್ತಲೇ ಇತ್ತು. ಮುಂದೆ ಹೋಗುತ್ತಲೇ ಇತ್ತು. ನನಗೆ ನಿದ್ರೆ ಬಂದಿತ್ತು. ಮಾರನೆಯ ದಿನ ಎದ್ದು ಮೈಮುರಿಯುತ್ತಿರುವಷ್ಟರಲ್ಲಿ ಅದೇ ಗಾಡಿ ಅದೇ ಬಾಡಿಗಳು ಹಳದಿ ಹಲ್ಲುಗಳು, ಸುಕ್ಕು ಬಟ್ಟೆಗಳ ಗುಡ್ಡೆಗಳು, ಇಸ್ತ್ರಿ ಪೆಟ್ಟಿಗೆಯ ಬುಸ್ ಬುಸ್ ನಾದ.

ಬಿಜಿನೆಸ್ ಮಾಡುವ ಒಂದು ಆಲೋಚನೆಯಿತ್ತು ಆದರೆ ಮತ್ತೆ, ನಾನಿದ್ದ ಪರಿಸ್ಥಿತಿಯಲ್ಲಿ ನನ್ನ ಕೆಳಗೆ ಜನ ಇರುವಂತೆ ಮಾಡಲು ಮನಸು ಒಪ್ಪಲಿಲ್ಲ. ಮೂವತ್ತು ದಿನಗಳು ಅವರ ಕೈಯಲ್ಲಿ ದುಡಿಸಿ ಒಂದು ದಿನ ಸಂಬಳ ಕೊಡಲು ಯಾಕೋ ಮನಸ್ಸು ಒಪ್ಪಲೇ ಇಲ್ಲ. ಎಲ್ಲವನ್ನೂ ಇದ್ದಲ್ಲೇ ಬಿಟ್ಟೆ, ಮಾರನೆಯ ದಿನ ಕೋಳಿ ಕೂಗುವ ಮುನ್ನ ಹಹಹ.. ತಾಂತ್ರಿಕ ದೋಷ ಅದು, ನಾನು ಕೋಳಿ ಕೂಗಿದ್ದು ಕೇಳೇ ಇಲ್ಲ. ಹಾಗಾಗಿ ನಾಯಿಗಳು ಊಳಿಡುವುದನ್ನು ನಿಲ್ಲಿಸುವ ಮೊದಲೇ ಮನೆ ಬೀಗ ಹಾಕಿ, ಬೀಗವನ್ನು ಕಿಟಕಿಯ ಹಿಂದೆ ಮುಚ್ಚಿಟ್ಟು ಬಟ್ಟೆ ಒಂದೆರಡು ಬಿಟ್ಟರೆ ಬೇರೇನನ್ನೂ ತೆಗೆದುಕೊಳ್ಳದೇ ಹೊರಟೆ. ಊಟ, ಬಹಿರ್ದೆಶೆ, ಸ್ನಾನ, ಮಲಗಲು ಜಾಗ ಇಷ್ಟೇ ನನ್ನ ಮುಂದೆ ಇದ್ದ ಪ್ರಶ್ನೆಗಳು. ಆಫೀಸಿಗೆ ಹೋಗುವಾಗ ಬೆಳಗ್ಗೆ ತಿಂಡಿ ಮಾಡಿಕೊಡುವವರ್ಯಾರು ಇರಲಿಲ್ಲ ಏಳುವುದೂ ಕೂಡ ತಡವಾಗೇ ಆದ್ದರಿಂದ ಬೆಳಗ್ಗೆ ತಿಂದು ಅಭ್ಯಾಸ ತಪ್ಪಿ ಹೋಗಿತ್ತು. ಮಧ್ಯಾಹ್ನ ಹೊಟ್ಟೆ ಬಿರಿಯುವಹಾಗೆ ತಿನ್ನುತ್ತಿದ್ದೆ ಬಿಟ್ಟರೆ ಸಂಜೆ ಆಫೀಸಿನಿಂದ ಮರಳುವುದು ಮಾಮೂಲಿ ತಡವಾದಾಗ ಮನೆಗೆ ಹೋಗಿ ಶೂ ಕೂಡ ಬಿಚ್ಚದೇ ಮಲಗಿಬಿಡುತ್ತಿದ್ದೆ. ಹಾಗಾಗಿ ದಿನಕ್ಕೆ ಒಂದು ಹೊತ್ತು ಊಟ ಸಿಕ್ಕರೆ ಸಾಕಾಗಿತ್ತು. ೨೫ ವರ್ಷ ವಿದ್ಯೆಯ ಮಣ್ಣು ಹೊತ್ತು, ಲೋಕಜ್ಞಾನವನ್ನು ಪಡೆದಂತಹ ನನ್ನಂತಹವನಿಗೆ ದಿನಕ್ಕೆ ಒಂದು ಹೊತ್ತು ಊಟ ಕಂಡುಕೊಳ್ಳುವುದು ಕಷ್ಟವಾದರೆ ನನ್ನ ಸ್ಕೂಲು, ಕಾಲೇಜಿನ ಬಾಗಿಲು ಮೊದಲು ಮುಚ್ಚಿಸಬೇಕೆಂದು ತೀರ್ಮಾನಿಸಿದೆ. ಇನ್ನು ಬಹಿರ್ದೆಶೆಗೆ ಅಯ್ಯೋ ರಸ್ತೆಗಳು, ಪಾದಚಾರಿ ಮಾರ್ಗಗಳು, ಹಾಳು ಬಿದ್ದಿರುವ ಸೈಟು, ಪಕ್ಕದ ಮನೆಯ ಗೋಡೆ, ಹಿಂದಿನ ಮನೆಯ ಸಂಧಿ, ಎಲ್ಲವೂ ಅದಕ್ಕಾಗಿಯೇ ಮೀಸಲಿಟ್ಟದ್ದೆಂದು ನಮ್ಮ ನಗರವಾಸಿಗಳಿಗೆ ಹೊಸದಾಗಿ ಕಲಿಸಬೇಕಾಗಿರಲಿಲ್ಲ. ಸ್ನಾನ, ಅಫೀಸಿಗೆ ಹೋಗುವಾಗ ಸೆಂಟೇ ಸ್ನಾನವಾಗಿರಲಿಲ್ವಾ ಎಷ್ಟೋ ಬಾರಿ. ಈಗ ಯಾರನ್ನು ಆಕರ್ಷಿಸಬೇಕಾಗಿದೆ. ನನ್ನ ಬೆವರಿನ ವಾಸನೆ ನನಗೇ ಬರಲಾರದು ಅಂದುಕೊಂಡು ಹೊರಟೆ.

ಕಸ ಗುಡಿಸುತ್ತಿದ್ದ ಹಣ್ಣು ಹಣ್ಣು ಮುದುಕನಿಗೆ ಸಹಾಯ ಮಾಡಿದರೆ ತನ್ನ ಊಟ ಹಂಚಿಕೊಳ್ಳುತ್ತಾನೆ ನಿಮಗೆ ಗೊತ್ತಿತ್ತಾ? ನನಗೆ ಗೊತ್ತಿರಲಿಲ್ಲ. ನಮ್ಮ ಆಫೀಸಿನ ಕ್ಯಾಂಟೀನಿಗೆ ಹೋಲಿಸಿದರೆ ಅಮೃತ ಕಣ್ರೀ. ಅಂದ ಹಾಗೆ ಒಂದು ವಿಷಯ ನೆನೆಪಿಗೆ ಬಂತು. ಈ ಆಫೀಸು ಕ್ಯಾಂಟೀನುಗಳಲ್ಲಿ ಅಡುಗೆ ಹೇಗಿದೆಯೆಂದು ನಮ್ಮ ಅಭಿಪ್ರಾಯ ಬರೆಯಬಹುದು. ಒಮ್ಮೆ ನನ್ನ ಸಹಪಾಠಿಯೊಬ್ಬರು ಹೀಗೆ ಬರೆದಿದ್ರು “Appoint cook not butchers or barbers” (ಅಡುಗೆ ಮಾಡುವವರನ್ನು ಬಳಸಿ, ಹಜಾಮ ಕ್ಷೌರಿಕ ಅಥವಾ ಕಟುಕರನ್ನಲ್ಲ) ಎಂದು, ಸಾರು/ ಪಲ್ಯಗಳಲ್ಲಿ ತರಕಾರಿ ಅಷ್ಟು ಚೆನ್ನಾಗಿ ಕತ್ತರಿಸಿ ಹಾಕುತ್ತಿದ್ದರು ಅದಕ್ಕೇ. ಎಲ್ಲೆಲ್ಲಿ ಮನೆ ಕಟ್ಟುತ್ತಿದ್ದರೋ ಅಲ್ಲಿ ನನ್ನ ಸ್ನಾನ, ಬಹಿರ್ದೆಶೆಗಳನ್ನು ಮುಗಿಸುತ್ತಿದ್ದೆ. ಅವರೊಂದಿಗೆ ಕೂತು ಅವರ ರೊಟ್ಟಿ, ಮುದ್ದೆ ಕೂಡ ಜಡಾಯಿಸುತ್ತಿದ್ದೆ. ಅಂಗಡಿಗೆ ಅಕ್ಕಿ ಮೂಟೆ, ಗೋಧಿ ಮೂಟೆ, ಸಕ್ಕರೆ ಮೂಟೆಗಳನ್ನು ಹೊರಲು ಸಹಾಯ ಮಾಡಿ ದುಡ್ಡು ಕೇಳದಿದ್ದರೆ, ಊಟ, ಊಟದ ಜೊತೆಗೆ ಪಕ್ಕಾ ಲೋಕಲ್ ಸಾರಾಯಿ ಕೂಡ ಒಟ್ಟಿಗೆ ಕೂತು ಕುಡಿದು ರಂಗು ರಂಗಾಗಿ ಮಾತನಾಡುವ ಅನುಭವದ ಮಜಾ ಸಿಗುತ್ತಿತ್ತು.

ನಮ್ಮ ಆಫೀಸಿನ ಸಹಪಾಠಿಗಳೂ ಹೋಗ್ರಿದ್ವಿ ಸಾರ್, ಕುಡಿಯುವವರೆಗೂ ಆಹಾ ಏನು ಗತ್ತು, ಏನು ಗಾಂಭೀರ್ಯ, ಠೊಳ್ಳು ನನ್ನ ಮಕ್ಕಳು ಕಣ್ರೀ. ಕುಡಿದ ಮೇಲೇ ಅವರ ಅಸಲೀ ರೂಪ ಗೊತ್ತಾಗ್ತಿದ್ದಿದ್ದು, ಒಬ್ಬ ಮೂರು ಜನರೊಂದಿಗೆ ಸಹವಾಸವಂತೆ, ಇನ್ನೊಬ್ಬನಿಗೆ ಹೆಂಗಸು ಸಿಗದೇ ಇನ್ನೊಬ್ಬ ಗಂಡಸೊಂದಿಗೆ ಸಂಬಂಧವಂತೆ, ಇನ್ಯಾವನೋ ಏನು ಉತ್ತಮ ಮಟ್ಟದ ಇಂಗ್ಲೀಷು ಮಾತನಾಡಿ ಹುಡುಗಿಯರನ್ನ ಸೆಳೀತಿದ್ದ ಅಂತೀರಿ, ಕುಡಿದ ಮೇಲೆ ಬರುತ್ತಿದ್ದುದೆಲ್ಲಾ ಅಮ್ಮ, ಅಕ್ಕನ ಸ್ತೋತ್ರ. ಈ ಕೂಲಿಯವರು ಎಂಥಾ ಲೋಕಲ್ ಸರಕು ಏರಿಸಿದರೂ ಏನು ಗತ್ತಿನಿಂದ ಇರುತ್ತಿದ್ದರು ಗೊತ್ತಾ, ಮಿಲಿಟರಿ ಆಫೀಸರುಗಳಂತೆ ನಿಲ್ಲುತ್ತಿದ್ದರು. ನಮ್ಮ ಐಟಿ ಕೂಲಿಗಳೂ ಇದ್ರು. ಕುಡಿದದ್ದೇ ಪಾದಚಾರಿ ಮಾರ್ಗ, ರಸ್ತೆಯ ಉದ್ದಗಲ ಅಳೆಯುತ್ತಿದ್ದರು. ಎಲ್ಲಿ ಹೋದರೂ ಅನ್ನ ಹುಟ್ಟುತ್ತಿತ್ತು ಕಣ್ರೀ ಅದ್ಯಾಕೆ ಜೀವನ ಮಾಡಲು ಹೆದರಿ ಕೋಣೆಗಳೊಳಗೆ ಹೂತುಹೋಗುತಿದ್ವೋ ನಿಜವಾಗಲೂ ತಿಳೀತಿರಲಿಲ್ಲ ನನಗೆ.

ಬೆಂಗಳೂರಿನಿಂದ ಬಿಟ್ಟು ಎಷ್ಟು ದಿನಗಳು ಕಳೆದಿತ್ತೋ ಗೊತ್ತಿಲ್ಲ, ಗಡಿಯಾರ ಕೂಡ ನೋಡುವ ಇಷ್ಟವಿರಲಿಲ್ಲ. ಕತ್ತಲಾದಾಗ ಹತ್ತಿರದ ಸ್ಥಳದಲ್ಲಿ ಮಲಗುತ್ತಿದ್ದೆ, ಬೆಳಕಾದಾಗ ಯಾವಾಗಲೋ ಎಚ್ಚರಾದಾಗ ಎದ್ದು ಹೊರಡುತ್ತಿದ್ದೆ. ಸಿಕ್ಕ ಸಿಕ್ಕವರು ಊಟ ಕೊಡಿಸುತ್ತಿದ್ದರು, ಎರಡು, ಮೂರು ದಿನಗಳಿಗೊಮ್ಮೆ ಸ್ನಾನವೂ ಅಗುತ್ತಿತ್ತು. ಮತ್ತೆ ಈ ವಯಸ್ಸಿನಲ್ಲಿ ಅದಕ್ಕೆ ಏನು ಮಾಡಿದೆ ಅಂತ ನೀವು ನನ್ನ ವಯಸ್ಸಿನವರೇ ಆಗಿದ್ದರೆ ಯೋಚಿಸಿರ್ತೀರಿ! ಗೊತ್ತು ನನಗೆ ನೀವು ಪುಂಡ ಪೋಲಿಗಳು ಅಂತ. ಕಲಾಸಿಪಾಳ್ಯದಲ್ಲಿ ಮಾತ್ರ ಇರ್ತಾರೆ ಅಂತ ಗೊತ್ತಿತ್ತು ನನಗೆ. ಆದರೆ ದುಡ್ಡೇ ಇಲ್ಲದೇ ಹೋದ ಹೋದ ಕಡೆಯೆಲ್ಲಾ ಸಿಗುತ್ತಲಿದ್ದರು ಅಂತ ನನಗೆ ಎರಡು ಮೂರು ಬಾರಿ ಈ ಲಾರಿ, ಬಸ್ ಡ್ರೈವರ್ ಗಳಿಂದಲೇ ಗೊತ್ತಾಗಿದ್ದು. ಅದು ಬಿಡಿ ಪ್ರಕೃತಿ ಸಹಜ ಕಾರ್ಯಕ್ರಮಗಳು ನೀವು ಪ್ರಶ್ನಿಸುವ ಹಾಗಿಲ್ಲ, ನಾವು ಉತ್ತರಿಸುವಹಾಗಿಲ್ಲ. ಅಂತೂ ನಮ್ಮ ಜೀವನಜಾಥಾ ಮುಂದುವರೆಯುತ್ತಾ, ಅದೆಷ್ಟೋ ನಗರಗಳು, ಹಳ್ಳಿಗಳು, ಹೈವೇ ಮಾರ್ಗಗಳು, ನದಿಗಳು, ಬಯಲು, ಕಾಡು, ದೇವಸ್ಥಾನಗಳು, ಪುಣ್ಯಕ್ಷೇತ್ರಗಳು, ಬೆಟ್ಟ ಪ್ರದೇಶಗಳು, ಸಮುದ್ರ, ಎಲ್ಲವನ್ನೂ ದಾಟುತ್ತಾ, ತಲೆನೋವು, ನೆಗಡಿ, ಜ್ವರ, ಸರ್ಕಾರೀ ಆಸ್ಪತ್ರೆಯ ಔಷಧ, ವಾಂತಿ, ಬೇಧಿ, ಎಲ್ಲದರ ಸರದಿಯೂ ಮುಗಿದು, ಈಗ ಮಾಂಸ ಮುಕ್ಕಾಲು ಭಾಗ ಖಾಲಿ ಮಾಡಿಕೊಂಡು, ಚರ್ಮದ ವರ್ಣ ಬದಲಿಸಿಕೊಂಡು, ಕೂದಲು, ಗಡ್ಡ ಬೋಳಿಸಿಕೊಂಡು, ಇನ್ನೂ ಸಾಗುತ್ತಲೇ ಇತ್ತು. ಎಲ್ಲಿಗೆ ಅಂತ ನೀವು ಕೇಳುವ ಹಾಗಿಲ್ಲ ನಾನು ಹೇಳಲು ಗೊತ್ತೂ ಇರಲಿಲ್ಲ.

ಮುಂಚೆ ಏಸಿಯಲ್ಲಿ ಕೂರುತ್ತಿದ್ದಾಗ ಅಪರೂಪಕ್ಕೆ ಬಿಸಿಲಿಗೆ ಮೈಯೊಡ್ಡಿದರೆ ತಲೆನೋವು ಶುರುವಾಗುತ್ತಿತ್ತು, ಮಳೆಯಲ್ಲಿ ನೆಂದರೆ ನೆಗಡಿ, ಚೆಳಿಗೆ ಜ್ವರವೇ ಬಂದುಬಿಡುತ್ತಿತ್ತು. ಈಗ ಅಷ್ಟು ನಿಶ್ಯಕ್ತನಾಗಿರಲಿಲ್ಲ. ನಮ್ಮಾಫೀಸಿನ ಎಲ್ಲ ಕಸದತೊಟ್ಟಿಯ ಹೊಟ್ಟೆ ಇಟ್ಟುಕೊಂಡಿದ್ದ, ಏರೋಬಿಕ್ಸು, ಜಿಮ್ಮು ಎಂದು ಅಲಿಯುತ್ತಿದ್ದ ಎಲ್ಲರೂ ನನ್ನ ಹಾಗೆ ಬದುಕಿದ್ದರೆ ಉದ್ದಾರವಾಗುತ್ತಿದ್ದರೇನೋ. ಆದರೆ, ಎಲ್ಲರೂ ನನ್ನ ಹಾಗೆ ಹುಚ್ಚರೇನಲ್ಲವಲ್ಲಾ! ನೆಮ್ಮದಿಯಿದೆ, ಜೀವನವಿದೆ, ಆಸಕ್ತಿಯಿದೆ, ಮುಂದಿನ ಕ್ಷಣವೇನೆಂಬ ಕುತೂಹಲವಿದೆ, ಬದುಕಬೇಕೆಂಬ ಛಲವಿದೆ, ಸುಂದರವಾದ ಕನಸುಗಳಿವೆ, ಪ್ರತಿನಿತ್ಯ ಬೇರೆಯೇ ಪ್ರಪಂಚದ ದರ್ಶನವಾಗ್ತಿರ್ತವೆ, ಹೊಸ ಹೊಸ ಅನುಭವದ ಅವಕಾಶವಿದೆ, ಸ್ವಂತಿಕೆಯ ಬದುಕಿದೆ, ವೈರಾಗ್ಯವಿದೆ, ಸಂಸಾರವಿದೆ, ಹಂಗಿಲ್ಲ, ಲಗಾಮಿಲ್ಲ. ಸಾಧನೆಯೇ ಇಲ್ಲ ಎಂದು ನಿಮ್ಮ ಪ್ರಶ್ನೆ. ಗೊತ್ತು. ಅಲ್ಲ ಕಣ್ರೀ ಸಾಧನೆ ಮಾಡೋಕೆ ಇಡೀ ಪ್ರಪಂಚದ ಮಾಹಾ ಮೇಧಾವಿಗಳು ನೀವುಗಳಿದ್ದೀರಿ. ನಾನೂ ಸಾಧನೆ ಮಾಡಬೇಕೆಂದು ಯೋಚಿಸುವ ನೀವು ಎಷ್ಟು ಮನೋವಿಕಲತೆ ಪಡೆದಿದ್ದೀರಿ ನೀವೇ ಅರಿತುಕೊಳ್ಳಿ. ನಾನು ಚೆನ್ನಾಗಿದ್ದೇನೆ. ಇನ್ನೂ ನೋಡುವುದು, ಕೇಳುವುದು, ಅನುಭವಿಸುವುದು, ಆನಂದಿಸುವುದು, ನಡೆಯುವುದು, ಸಹಾಯ ಮಾಡುವುದು, ತಿಳಿದುಕೊಳ್ಳುವುದು, ಬದುಕುವುದು ತುಂಬಾ ಇದೆ. ಹೇಳಿದ್ದು ಸಾಕೆನಿಸುತ್ತಿದೆ. ಪ್ರಶ್ನೆಗಳಿದ್ದಲ್ಲಿ, ನಿಮ್ಮನ್ನೇ ಕೇಳ್ಕೊಳ್ಳಿ. ಇದೇ ಈ ಕತೆಗೆ ಮುಕ್ತಾಯ. ಕತೆಗೆ ಇದು ಸರಿಯಾದ ಅಂತ್ಯವೇ ಅಲ್ಲ ಅಂತ ನಿಮಗೆ ಅನಿಸಿದರೆ, ಅರೆ ನನ್ನಿಷ್ಟ ಕಣ್ರೀ!

                                                                                                     -ನೀ.ಮ. ಹೇಮಂತ್

3 comments:

  1. ಪ್ರಿಯ ಹೆಮ೦ತ್ರಿಗೆ,

    Saaa...ನಮಸ್ಕಾರ !!! ಬೊ ಪಸನ್ಧಾಗಯ್ತೆ ನಿಮ್ಮ writings ಉ. ಓ೦ದು ತರಹ ಹೊಸತನವಿದೆ ನಿಮ್ಮ ಬರವಣಿಗೆಯಲ್ಲಿ. ವಸ್೦ತ ಕಾಲದ ಕುಹು ಕುಹುವಿನ೦ತೆ mindಗೆ ನವಿರಾದ ಕಛಗುಳಿ ಇಡುತ್ತೆ. It also opens ones eye towards the every day life and our perceptions towards life, especially of those who claim to be more civilized, more knowledgable.Don't get me wrong, am not advocating violance neither am I a ಸ್ಥ್ರೀ ದ್ವೆಶಿ. ಪ್ರಪ೦ಚದಾದ್ಯ್೦ತಾ ನಮ್ಮನ್ನ ಗುರತಸೊಧು ನಮ್ಮ ಕಲಾಚಾರ, ನಮ್ಮ ಸ೦ಸಕ್ರಿತಿ, ಸ೦ಮಸ್ಕಾರ, ನಮ್ಮ ಸಹನೆ, ಸತ್ಯಪರತೆ, ಉದರತೆ....ಇವುಗಳಿ೦ದ. ಇತ್ತಿಚಿನ IT-BT ದಿನಗಳಿ೦ದಾಗಿ ಇವೆಲ್ಲವು ಯೆಲ್ಲೊ, well almost- Gutter ನಲ್ಲಿ ಬಿದ್ದು ಒದ್ದಾಡುತ್ತಿದೆ. Guess we are all now slaves TO WHAT ONCE WE WERE MASTERS !!! ಅಲ್ವಾ ??? guess its time we realise & re instill the old saying : " A relation translates into a successful one not by "Counting the number of differences but by accepting & ignoring each others in differences. Nice way of throwing light on a subject towards which we are almost all of us, at that are subjudiced and by and large plasticly denying souls. Keep it coming ರಾಯರೆ .....
    ಯಾಕೆ ಅ೦ತೀರಾ ??? ಯಾಕೆ೦ದ್ರೆ.....ಇದು ನಮ್ಮಿಷ್ಟಾ... ಹೆ೦ಗೆ..idea???

    Warm Regards
    Girish.R

    ReplyDelete
    Replies
    1. ಯಪ್ಪಾ ಏನ್ ದೊರೆ ಇದು..!!!!!!!!!!! ಕನಿಷ್ಟ ಪಕ್ಷ ಮೂರು ಸಾರಿ ಓದಿರಬಹುದು ನಿಮ್ಮ ವಿಮರ್ಶೆಯನ್ನ :-) ನನ್ನ ಕಥೆಗಿಂತ ತೂಕದ ಮಾತುಗಳು ಇದರಲ್ಲೇ ಇದೆ ಅನ್ಸುತ್ತೆ.. ತುಂಬು ಹೃದಯದ ಧನ್ಯವಾದಗಳನ್ನು ದಯವಿಟ್ಟು ನನ್ನ ಕಡೆಯಿಂದ ಇಟ್ಟುಕೊಳ್ಳಿ :-)

      Delete
  2. ಗುರುವೇ, ನನ್ನದೊಂದು ನಮಸ್ಕಾರ. ಎಷ್ಟೋ ದಿನಗಳಿಂದ ಕಳೆದುಕೊಂಡಿದ್ದ ಒಂದು ಅದ್ಭುತ ಅನುಭವ ದಯಪಾಲಿಸಿದಿರಿ. ಮಾರ್ಮಿಕ ಅನ್ನಬೇಕೋ, ನಿಗೂಢ ಅನ್ನಬೇಕೋ ತಿಳಿಯುತ್ತಿಲ್ಲ, ನಾ ಓದದೆ ಕಳೆದುಕೊಂಡಿದ್ದ ಇಂತಹಾ ನಿರೂಪಣೆ ಮತ್ತು ಕಥಾವಸ್ತುವಿಗೆ ಮನಸ್ಸು ಹುಡುಕಾಡುತ್ತಿತ್ತು. ಇಂದಿನಿಂದ ಬ್ಲಾಗನ್ನು ಹಿಂಬಾಲಿಸುತ್ತಿದ್ದೀನಿ....

    ReplyDelete