ಓದಿ ಓಡಿದವರು!

Friday 25 May 2012

ಬೆಂಗಾಡಿನಲ್ಲಿ ಪ್ರೈಸ್ಥಿತಿ!


ನಾನು ಭಾಗಿಯಾಗದ ಕ್ರಾಂತಿಯ ಫಲ
ಹಣ್ಣಲ್ಲವದು ಕೇವಲ ಮಲ
                          - ಅಂತ

          ಸುಮ್ಮನೆ ಸುತ್ತಾಡಲು ಹೊರಗಡೆ ಹೋಗಿಬರುತ್ತೇನೆಂದು ಹೊರಟೆ. ಅಮ್ಮ ಓಡಿಬಂದದ್ದನ್ನು ಕಂಡು ಇವತ್ತೂ ಬಯ್ಯುವರೆಂದುಕೊಂಡೆ. ಕಿವಿಯ ಕಿಟಕಿಗಳನ್ನು ಮುಚ್ಚುವ ಪ್ರಯತ್ನದಲ್ಲಿದ್ದವನಿಗೆ ಅಮ್ಮನ ಮಾತುಗಳು ಆಘಾತವನ್ನೇ ಉಂಟು ಮಾಡಿದವು. ನಡೆದುಕೊಂಡು ಹೋಗುತ್ತೀಯೇನೋ ಇರು ನಿಮ್ಮಪ್ಪನ ಗಾಡಿಯಲ್ಲಿ ಹೋಗು ಎಂದರು! ಆಹಾ! ಏನಪ್ಪಾ ಇದು ಮಾಯೆ ಎಂದು ತೆರೆದಿದ್ದ ಬಾಯಿ ಮುಚ್ಚುವಷ್ಟರಲ್ಲೇ ಸ್ವಯಂ ಅಪ್ಪನೇ ಬಂದು ಗಾಡಿ ಕೀ ಕೊಟ್ಟು ಪೆಟ್ರೋಲು ಬೇಕಾದರೆ ಹಾಕಿಸಿಕೋ ಎಂದು ದುಡ್ಡು ಕೊಟ್ಟು ಹೋದರು. ಏನೂ ಅರ್ಥವಾಗಲಿಲ್ಲ. ಅಪರೂಪಕ್ಕೆ ಏನಾದರೂ ತುರ್ತುಕಾರ್ಯಕ್ಕೆ ಗಾಡಿ ಮುಟ್ಟಿದಾಗಲೂ ಅಷ್ಟೋತ್ತರಗಳನ್ನು ಕೇಳಬೇಕಾಗಿತ್ತು. ಗಾಡಿ ಹತ್ತಿ ರಸ್ತೆಗಿಳಿದದ್ದೇ ಇನ್ನೂ ವಿಚಿತ್ರವನ್ನು ಕಂಡೆ, ರಸ್ತೆ ಖಾಲಿ! ಪಾದಚಾರಿ ಮಾರ್ಗ ಮಾತ್ರ ಭರ್ತಿ! ಎಲ್ಲರೂ ನನ್ನನ್ನೇ ಯಾರೋ ಕೆಂಪು ಕಾರ್ಪೆಟ್ಟಿನ ಮೇಲೆ ಬರುತ್ತಿರುವವನನ್ನು ನೋಡುವ ಹಾಗೆ ನೋಡುತ್ತಿದ್ದರು. ನೋಡುತ್ತಿದ್ದವರು ಅಲ್ಲಲ್ಲೇ ನಿಂತು ಚಪ್ಪಾಳೆ ತಟ್ಟಿ ಜಯಕಾರ ಕೂಗಲೂ ಸಹ ಶುರುಮಾಡಿಬಿಡುವುದೇ! ಏನಪ್ಪಾ ಇದು ಎಲ್ಲಿದ್ದೀನಿ ನಾನು ಎಂದು ಸುತ್ತಾ ನೋಡಿದೆ, ನಮ್ಮ ಬೀದಿಯೇ. ಕಮಾನ್ ರಮೇಶ ಕಮಾನ್ ಎಂದು ಸ್ನೇಹಿತನೊಬ್ಬ ರಸ್ತೆ ಪಕ್ಕದ ಜನರ ಗುಂಪಿನಲ್ಲಿ ನಿಂತು ನಾನೇನೋ ಯುದ್ಧಕ್ಕೆ ಹೊರಟಿರುವವನೆಂಬಂತೆ ಕಿರುಚುತ್ತಿದ್ದ. ನಾನೂ ಹೋದೆ ಹೋದೆ ಹೋದೆ ಪೆಟ್ರೋಲ್ ಬಂಕೊಂದು ಸಿಕ್ಕಿತು. ಸ್ಮಶಾನದಂತೆ ಸುಮ್ಮನೆ ಮಲಗಿತ್ತು. ಗಾಡಿಯಲ್ಲಿ ಬಂಕ್ ಪ್ರವೇಶಿಸಿದ್ದೇ ಎಲ್ಲಿ ಮೂಲೆ ಮೂಲೆಯಲ್ಲಿ ಅಡಗಿದ್ದರೋ ಕೆಲಸಗಾರರು ಓಡಿ ಬಂದಿದ್ದೇ, ಹೂವಿನ ಹಾರ ಹಾಕಿ ಬಣ್ಣ ಬಣ್ಣದ ಪೇಪರ್ ಗಳನ್ನು ಸುರಿದು ಗಾಡಿಯನ್ನು ಅವರೇ ತೆಗೆದುಕೊಂಡು ಒಳಗೆ ಬಂದು ಬನ್ನಿ ಪೆಟ್ರೋಲ್ ಹಾಕಿ ಗಾಡಿ ಒರೆಸಿಕಳುಹಿಸುತ್ತೇವೆ ಅಲ್ಲಿವರೆಗೂ ಹಾಡು ಕುಣಿತ ಏರ್ಪಡಿಸಲಾಗಿದೆ ಮಜಾ ಮಾಡಿ ಎಂದು ಒಳಗೆ ಎಳೆದುಕೊಂಡು ಹೋದವರೇ ಕುಣಿಯುತ್ತಿದ್ದ ಹುಡುಗ ಹುಡುಗಿಯರೊಡನೆ ಬಿಟ್ಟು ಹೋದರು. ಥು ನಾನು ಹೊರಟಿದ್ಯಾಕೆ ಇಲ್ಲಿ ಯಾಕೆ ಬಂದೆನೆಂದು ನಾನೇ ಆಫೀಸು ರೂಮಿನಿಂದ ಹೊರಗೆ ಬಂದೆ, ಅಪ್ಪನ ಬಜಾಜ್ ಗಾಡಿ ಫಳಫಳನೆ ಹೊಳೆಯುತ್ತಿತ್ತು. ಹೊರಗೆ ಕೈಕುಲುಕುತ್ತಲೇ ಕರೆದುಕೊಂಡು ಬಂದವರು ಗಾಡಿ, ಮತ್ತು ಕೀ ಜೊತೆಗೆ ಉಡುಗೊರೆಯನ್ನೂ ಕೊಟ್ಟು ಶುಭಾಷಯ ಹೇಳಿ ಬಂಕಿನ ಬಾಗಿಲವರೆಗೂ ಬಿಟ್ಟು ಟಾಟಾ ಮಾಡುತ್ತಾ ನಿಂತರು. ಅಷ್ಟು ದೂರ ಹೋಗುವಷ್ಟರಲ್ಲಿ ಒಬ್ಬ ಹುಡುಗ ಕೂಗುತ್ತಾ ಹಿಂದೆಯೇ ಓಡಿಬರುತ್ತಿರುವುದನ್ನು ಕಂಡು ಗಾಡಿ ನಿಲ್ಲಿಸಿದೆ. ಸಾರ್ ನೀವು ಅಲ್ಟೋ ಕಾರೊಂದನ್ನ ಗೆದ್ದೀದ್ದೀರಿ. ತೊಗೊಳ್ಳಿ ಕೀ ಎಂದು ದೊಡ್ಡ ಕೀಯೊಂದನ್ನು ಮುಂದೆ ಎತ್ತಿ ಹಿಡಿದ!

* * * * * *

ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ವಾರಸುದಾರರಿಲ್ಲದೇ ನಿಂತಿರುವುದನ್ನು ನೋಡುತ್ತಾ, ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕುತ್ತಲಿದ್ದ ಗೀತಾ ರಸ್ತೆ ತುಂಬಾ ಕತ್ತೆ, ಕುದುರೆ, ಒಂಟೆ, ಎತ್ತಿನಗಾಡಿಗಳನ್ನೇ ನೋಡುತ್ತಾ ಬೇಗ ಬೇಗ ಬಸ್ ನಿಲ್ದಾಣಕ್ಕೆ ಹೋದಳು. ಜನ ಮಾಮೂಲಿನಂತೆ ಬಸ್ ಬರುವ ದಾರಿ ಪದೇ ಪದೇ ನೋಡುತ್ತಾ ನಿಂತಿಹರು. ಎತ್ತಿನಗಾಡಿಯೊಂದು ಬಂದದ್ದೇ ಜನ ನೂಕುನುಗ್ಗಲಿನಲ್ಲಿ ಹತ್ತಿಕೊಂಡು ಇನ್ನುಳಿದವರು ಕಾಯುವರು. ದೂರದಲ್ಲಿ ಬರುತ್ತಿದ್ದ ಒಂದು ಒಂಟೆಯನ್ನು ನೋಡುತ್ತಾ ನಿಂತಿದ್ದ ಗೀತಾಳಿಗೆ ಒಂಟೆಯ ಮೇಲೆ ತನ್ನ ಸಹಪಾಠಿ ಬಂದು ಬಾ ಜೊತೆಯಲ್ಲಿ ಹಿಂದಿನ ಸೀಟು ಖಾಲಿಯಿದೆ ಎಂದು ಹೇಳಿದ್ದು ಇವಳು ಹತ್ತಿದ್ದು ತಡವಾಗಲಿಲ್ಲ. ಒಂಟೆ ನಿಧಾನಗತಿಯಲ್ಲಿ ಚಲಿಸುತ್ತಿದ್ದುದು ಒಂದೆರಡೇಟು ಬೀಳುತ್ತಲೇ ಓಡಲು ಶುರುಮಾಡಿತು. ಇದೊಳ್ಳೇ ಏರೋಬಿಕ್ಸ್ ವ್ಯಾಯಾಮವಿದ್ದ ಹಾಗಿದೆಯಲ್ವಾ ಎಂದು ನಗಲು ಶುರುಮಾಡಿದಳು. ಮೇಲೆ ಕೂತು ಇಡೀ ರಸ್ತೆ ಚೆನ್ನಾಗಿ ಕಾಣುತ್ತಲಿತ್ತು. ಆ ಎತ್ತಿನ ಗಾಡಿಯಲ್ಲಿ ಹಿಡಿಸೋದೇ ನಾಲ್ಕು ಜನ ಅದರಲ್ಲಿ ಆರು ಜನ ಅದು ಹೇಗೆ ಮುದುಡಿಕೊಂಡು ಕೂರ್ತಾರೋ ಗೊತ್ತಿಲ್ಲಮ್ಮ ನೀನು ಕಾಯ್ತಾ ಇದ್ದಿದ್ರೆ ನಟರಾಜಾ ಸರ್ವೀಸೇ ಕೊನೆಗೆ ಗತಿಯಾಗುತ್ತಿತ್ತು ಎಂದು ತನ್ನ ಸಹಪಾಠಿ ಹೇಳುತ್ತಿದ್ದ ಹಾಗೆಯೇ ಒಂಟೆ ಓಡುವುದನ್ನ ನಿಲ್ಲಿಸಿತು. ಏನಾಯ್ತೋ ಎಂದು ಇಬ್ಬರೂ ನೋಡ ನೋಡುವಷ್ಟರಲ್ಲೇ ಒಂಟೆ ಒಂದು ಮರದ ಎಲೆಗಳನ್ನು ತಿನ್ನಲು ಶುರುಮಾಡಿತು. ಹೋ ಇಂಧನ ಬೇಕಲ್ಲಾ ಪಾಪ ಇದಕ್ಕೂ ತಿಂದುಬಿಡಲೀ ತಾಳು ಎಂದು ಸುಮ್ಮನೆ ಮಾತನಾಡುತ್ತಾ ಕೂತರು. ಎಲ್ಲಾ ಶ್ರೀಮಂತರೂ ಒಳ್ಳೇ ಒಳ್ಳೇ ಕುದುರೆಗಳನ್ನ ತರಿಸಿದ್ದಾರಂತೆ ಕಣೇ ಎಂದು ಅವನು ಹೇಳಿದರೆ, ಲೋ ಕತ್ತೆ ಮೇಲೆ ಇಬ್ಬರು ಮೂರು ಮಕ್ಕಳು ಸ್ಕೂಲಿಗೆ ಹೋಗುತ್ತಿರುವುದನ್ನು ನೋಡಿದೆ ಇವತ್ತು ಗೊತ್ತಾ ಎಂದು ಅವಳು ಹೇಳುವಳು. ಟಾಂಗಾ ಒಂದು ಮನೆಯ ಬಾಗಿಲಿಗೇ ಬಂದಿತ್ತು ಮನೆಯಿಂದ ಆಫೀಸಿಗೆ ಒಬ್ಬರಿಗೆ ಹದಿನೈದು ರೂಪಾಯಿ ಹೇಳಿದ. ಸರಿ ಎತ್ತಿನಗಾಡಿ ಸಿಗುತ್ತಲ್ಲಾ ಅಂತ ಬಂದೆ ನೋಡಿದರೆ ಇವತ್ತು ಇಷ್ಟು ಜನ ಎಂದು ಹೇಳುತ್ತಿದ್ದ ಹಾಗೇ ಒಂಟೆ ತಿಂದು ಮುಗಿಸಿ ಹಾಗೇ ನೆಲಕ್ಕೆ ಕುಸಿಯಹತ್ತಿತು. ಮೇಲೆ ಕೂತಿದ್ದವರಿಬ್ಬರೂ ನೆಲಕ್ಕೆ ಉರುಳುವರೆಂದು ಭಯಕ್ಕೆ ಒಂಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಒಂಟೆ ಅಡ್ಡಡ್ಡ ಉರುಳುತ್ತಲಿತ್ತು!

* * * * * * *

ಚಿಟಾರನೆ ಕಿರುಚಿಕೊಂಡು ಗೀತಾ ಹಾಸಿಗೆಯಿಂದೆದ್ದಳು. ಕಣ್ಬಿಟ್ಟರೆ ಪಕ್ಕದಲ್ಲಿ ತನ್ನ ಗಂಡ ನಗುತ್ತ ಕುಳಿತಿದ್ದಾನೆ. ಬಿತ್ತಾ.. ಬಿತ್ತಾ ನಿನಗೂ ಕನಸು ಹ ಹ ಹ ಹ ಹ.. ನಾನೂ ಆಗಲೇ ಎದ್ದೆ. ನನ್ನ ಅಲ್ಟೋ ಅಯ್ಯೋ… ಎಂದು ಹಾಗೇ ಹಾಸಿಗೆಗೆ ಬಿದ್ದ. ಇನ್ನೂ ಬಿದ್ಕೊಂಡೇ ಇರಿ ಆಫೀಸಿಗೆ ತಡವಾದರೆ ನನ್ನ ಕೇಳಬೇಡಿ ಹೇಳಿದ್ದೀನಿ ಇವಾಗಲೇ ಎಂದು ಹೇಳುತ್ತಾ ಹೊರನಡೆಯುವಳು. ರಮೇಶನೂ ಸೋಂಬೇರಿಯಂತೆ ಎದ್ದು ಇನ್ನೂ ಪೇಪರು ಬಂದಿರದನ್ನು ಕಂಡು ಮೊದಲು ಟಿವಿ ಹಾಕಿ ವಾರ್ತೆಗಳು ಹಾಕುವನು. ಹಲ್ಲುಜ್ಜುತ್ತಿದ್ದ ಗೀತಳೂ ಬಾಯಲ್ಲಿ ಬ್ರಶ್ ಹಿಡಿದುಕೊಂಡೇ ಟಿವಿ ಮುಂದೆ ಬಂದು ನಿಲ್ಲುವಳು. ಇದೀಗ ಬಂದ ವಾರ್ತೆ, ಇಂದು ಪೆಟ್ರೋಲ್ ಬೆಲೆ ಏಕಾಏಕಿ ಹತ್ತು ರೂಪಾಯಿ ಏರಿಸಲಾಗಿದೆ. ಇನ್ನು ನಾಳೆಯ ಬೆಲೆ ನಾಳೆ ಹೇಳಲಾಗುವುದು ಎಂದು ಇತರ ವಾರ್ತೆಗಳನ್ನು ಮುಂದುವೆರೆಸುವರು. ರಮೇಶ ಬಾಯಿಕಳೆದು ನಿಂತಿದ್ದವನು ಎಚ್ಚೆತ್ತುಕೊಂಡು “ಅಲ್ಲಾ ನಿನ್ನೆಯ ಒಂದು ರೂಪಾಯಿ ಹೆಚ್ಚಳಕ್ಕೇ ಹಿಂಗೇ ಚಿತ್ರವಿಚಿತ್ರವಾಗಿ ಕನಸು ಬಿತ್ತು. ಇನ್ನು ಇವತ್ತು ಏನು ಕಾದಿದೆಯೋ” ಎಂದು  ಗೀತಾಳ ಕಡೆ ನೋಡಿದರೆ ಅವಳೂ ಹಲ್ಲುಜ್ಜುವುದನ್ನೂ ಮರೆತು ನಿಂತಿದ್ದವಳು ತಲೆ ಅಲ್ಲಾಡಿಸುತ್ತಾ ಬಚ್ಚಲು ಸೇರುವಳು. ಸಾಂಕೇತಿಕವಾಗಿಯೆಂಬಂತೆ ರೂಮಿನಲ್ಲಿದ್ದ ರಮೇಶನ ಮೊಬೈಲು ಕೂಡ ಬಾಯಿಬಡಿದುಕೊಳ್ಳಲು ಶುರುಮಾಡುತ್ತದೆ. ಕರೆ ಸ್ವೀಕರಿಸಿದ್ದೇ ತಡ ಅತ್ತಲಿಂದ ಮಂಜ ಲೋ ಮಗಾ ಎಂಥಾ ಕನಸು ಅಂತೀಯಾ ಹ ಹ ಹ ಎಂದು ನಗಲು ಶುರುಮಾಡಿದ್ದಕ್ಕೆ ರಮೇಶನ ಪಿತ್ತ ನೆತ್ತಿಗೇರಿ ಲೋ ಹೊಟ್ಟೆ ಉರೀತಿದೆ ನೀನು ಬೇರೆ ತಲೆ ತಿನ್ನಕ್ಕೇ, ಏನ್ ಸಮಾಚಾರ ಹೇಳು ಎಂದರೆ, ನನಗೆ ಒಂದು ಕನಸು ಬಿತ್ತೋ ಮಗ ಹೇಳ್ತೀನಿ ಕೇಳು ಎಂದು ಆಮೇಲೆ ಹೇಳುವಂತೆ ಬಿಡೋ ಮಾರಾಯ ಎಂದು ಏನು ಹೇಳಿದರೂ ಕೇಳದೇ ಪೀಡಿಸೀ ಫೋನಿನಲ್ಲೇ ಕಥೆ ಶುರುಮಾಡುವನು. ಹಸಿವಾಗುತ್ತಿದೆ ಎಂದು ಅಡುಗೆ ಮನೆಗೆ ಹೋದರೆ ಪೆಟ್ರೋಲ್ ಗಂಜಿ, ತಂಗಳು ಪೆಟ್ಟಿಗೆಯಲ್ಲಿದ್ದ ನೀರಿನ ಬಾಟಲ್ ತೆಗೆದರೆ ಅದರಲ್ಲೂ ಪೆಟ್ರೋಲ್, ಪೆಟ್ರೋಲ್ ಸ್ನಾನ, ಪೆಟ್ರೋಲ್ ಸ್ವಿಮ್ಮಿಂಗ್ ಪೂಲ್ ಎಲ್ಲೆಲ್ಲೂ ಪೆಟ್ರೋಲೇ ಬೇಕಾಬಿಟ್ಟಿ ಸಿಗುತ್ತಿತ್ತು ಎಂದು ಹೇಳಿದ್ದಕ್ಕೆ ನಗಬೇಕೋ, ಮುನಿಸಿಕೊಳ್ಳಬೇಕೋ ಅರ್ಥವಾಗದೇ ಮುಗೀತೇನಪ್ಪಾ ನಿನ್ನ ಅಸಂಬದ್ಧ ಪ್ರಲಾಪ ಎಂದು ಫೋನಿಡುವನು. ಬರುವ ಅರ್ಧ ಸಂಬಳ ಬರೀ ಓಡಾಟದ ಖರ್ಚಿಗೇ ಆದರೆ ಯಾವ ಖುಷಿಗೆ ದುಡಿಯಬೇಕು. ಸಂಬಳವಂತೂ ಜಾಸ್ತಿಯಾಗಲ್ಲ, ಖರ್ಚುಗಳು ಮಾತ್ರ ಜಾಸ್ತಿ ಆಗ್ತಾನೇ ಹೋಗ್ತಾವೆ ಎಂದು ಗೊಣಗುತ್ತಾ ತಾನೂ ಹೋಗಿ ನಿತ್ಯಕರ್ಮಗಳನ್ನು ಮುಗಿಸಿಬರುವಷ್ಟರಲ್ಲಿ ಗೀತಾ ತಿಂಡಿ ರೆಡಿ ಮಾಡಿ ತಾನೂ ಸ್ನಾನಾದಿ ಮುಗಿಸಿ ಬರುವಳು. ತಿಂಡಿ ತಿನ್ನುವ ಸಮಯಕ್ಕೆ ಸರಿಯಾಗಿ ಬಾಗಿಲು ಬಡಿಯುವ ಸದ್ದಾಗುತ್ತದೆ. ಇವತ್ತಾದರೂ ಆಫೀಸಿಗೆ ಬೇಗ ಹೋಗೋಣವೆಂದರೆ ಇದ್ಯಾರಪ್ಪಾ ಕಂಟಕರು ಎಂದು ಗೀತಾ ಹೋಗಿ ಬಾಗಿಲು ತೆರೆದರೆ ಅಕ್ಕ ಪಕ್ಕದ ಮನೆಯ ನಿಯತಕಾಲಿಕದ ಗಿರಾಕಿ ಮತ್ತು ಬಾಯಿಚಪಲದ ಗಿರಾಕಿ. ಇಬ್ಬರೂ ಬರಬಾರದ ಹೊತ್ತಿನಲ್ಲಿ ಬಂದಿದ್ದಾರೆಂದರೆ ಮುಗಿಯಿತು ಕತೆ.

ಇದಾರಾಮ್ಮ ರಮೇಶ ಅವರು ಎಂದು ಆಮಂತ್ರಣವಿಲ್ಲದೇ ತಮ್ಮ ನಿಯತಕಾಲಿಕವನ್ನು ಅವರು ಹಿಡಿದು ಒಳಗೆ ಬಂದು ಕೂತವರೇ ತಿಂಡಿ ತಿನ್ನಲು ಅಣಿಯಾಗುತ್ತಿದ್ದ ರಮೇಶನನ್ನು ಕಂಡು ನಿದ್ರೆ ಚೆನ್ನಾಗಿ ಬಂತೋ ಎನ್ನುವರು. ಹೋ ಬನ್ನಿ ಬನ್ನಿ ತಿಂಡಿ ತಿನ್ನಿ ಎಂದು ಔಪಚಾರಿಕವಾಗಿ ಕರೆದರೆ ಅಯ್ಯೋ ಊರೇ ಹೊತ್ತುಕೊಂಡು ಉರೀತಿದೆ ನೀವು ನೋಡಿದರೆ ಆರಾಮವಾಗಿ ತಿಂಡಿ ತಿನ್ತೀದ್ದೀರಲ್ಲಪ್ಪಾ ಎಂದು ತಿನ್ನುತ್ತಿದ್ದವನಿಗೂ ಉಪ್ಪಿಟ್ಟು ಕಾಂಕ್ರೀಟಿನಂತೆ ಗಂಟಲಲ್ಲಿ ಸಿಕ್ಕಿಬೀಳುವ ಹಾಗೆ ಮಾತನಾಡಿ ಕೆಮ್ಮಿ ನೀರು ಕುಡಿದು ಯಾಕೆ ಏನಾಯ್ತು ಅಂತದ್ದು ಎನ್ನಲು, ಅದೇ ಪೆಟ್ರೋಲ್ ದರ ಏರಿಕೆ ವಿಷಯ. ಸ್ವಾಮಿ ಇವಾಗ ೮ ಘಂಟೆಗೆ ಮುಖ್ಯಮಂತ್ರಿಗಳ ಭಾಷಣ ಇದೆ ನೋಡಿ ಬೆಲೆ ಏರಿಕೆ ಬಗ್ಗೆ ಎಂದು ಟಿವಿ ಹಾಕಿಸುವರು. ಮುಖ್ಯಮಂತ್ರಿಗಳು ಟಿವಿ ಚಾಲ್ತಿ ಮಾಡುವುದನ್ನೇ ಕಾಯುತ್ತಿದ್ದವರಂತೆ ಭಾಷಣ ಶುರುಮಾಡುವರು. “ನೋಡಿ ಪ್ರಜೆಗಳೇ, ಪೆಟ್ರೋಲ್ ಬೆಲೆ ನಿಮಗೆಲ್ಲರಿಗೂ ಗೊತ್ತಿರುವಂತೆ ಮೇಲೆ ಮೇಲೆ ಹೋಗುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಇನ್ಯಾವ ತೆರಿಗೆ ಹೆಚ್ಚಿಸಬಹುದೆಂದು ನಾವೂ ಕೂಡ ಕೂಲಂಕಶವಾಗಿ ಚರ್ಚಿಸುತ್ತಲೇ ಇದ್ದೇವೆ. ಹಾಗೂ ನಾವು ದುಡ್ಡು ತಿನ್ನುವುದನ್ನಂತೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ, ನಿಮಗೂ ಗೊತ್ತಿದೆ, ನೀವು ನಮ್ಮನ್ನು ಆಯ್ಕೆ ಮಾಡಿ ಈ ಸ್ಥಾನದಲ್ಲಿ ಕೂಡ್ರಿಸುವುದೇ ದುಡ್ಡು ತಿನ್ನಲೆಂದು, ಹಾಗಾಗಿ ನಾವು ಆ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಪೆಟ್ರೋಲ್ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದರೆ, ನೀವು ಗಾಡಿಗಳನ್ನು ಬಿಟ್ಟು ರಸ್ತೆಗಿಳಿಯಿರಿ, ನಿಮ್ಮೆಲ್ಲರ ಸಹಕಾರ ನಮ್ಮ ಪಕ್ಷದ ಮೇಲಿದೆಯೆಂದು ನಾವು ನಂಬುತ್ತೇವೆ, ಜೈ ಬೆಂಗಾಡು” ಎಂದು ಹೇಳಿ ಕಾರ್ಯಕ್ರಮಕ್ಕೆ ಮಂಗಳ ಹಾಡುತ್ತಾರೆ.

ಇವರಿಗೆಲ್ಲಾ ಬುದ್ದಿ ಕಲಿಸಬೇಕು ರೀ. ಕ್ರಾಂತಿ ಆಗಬೇಕು. ಅದಕ್ಕೇ ಇದೇ ತಿಂಗಳ ಮುವತ್ತೊಂದನೇ ತಾರೀಖು ಬೆಂಗಾಡಿನಾದ್ಯಂತ ಬಂದ್ ಕರೆ ನೀಡಿದ್ದಾರೆ. ಬಾಡಿಗೆ, ಭೋಗ್ಯಕ್ಕಿದ್ದ ಜನರೆಲ್ಲಾ ತಮ್ಮ ತಮ್ಮ ಆಫೀಸು, ನಿತ್ಯ ಓಡಾಟವಿರುವ ಜಾಗಗಳ ಹತ್ತಿರವೇ ಮನೆಗಳನ್ನ ಸ್ಥಳಾಂತರಿಸುತ್ತಿದ್ದಾರಂತೆ. ಈಗ ಬುದ್ದಿ ಬಂದು ಅನವಶ್ಯಕವಾಗಿ ಗಾಡಿಗಳನ್ನು ಬಳಸದೇ ಮೂಲೆ ಸೇರಿದ್ದ ಸೈಕಲ್ ಗಳನ್ನು ಹೊರತೆಗೆಯುತ್ತಿದ್ದಾರಂತೆ. ಎಂದು ರಮೇಶನಿಗೆ ಬೇಡವಾಗಿದ್ದ ವರದಿಯನ್ನು ಒಪ್ಪಿಸುವರು. ಈ ಬಾಯಿ ಚಪಲವಿರುವವರು ಮತ್ತೆ ಶುರುಮಾಡಿಕೊಂಡು ಸರ್ಕಾರದವರು ಮೊನ್ನೆ ಒಂದು ಐವತ್ತು ಪೈಸೆಯಾಯ್ತಿ, ನೆನ್ನೆ ಒಂದು ರೂಪಾಯಿಯಾಯ್ತು, ಇವತ್ತಾಗಲೇ ಬರೋಬ್ಬರಿ ಹತ್ತು ರೂಪಾಯಿ, ನಾಳೆ ಮತ್ತೆ ಇಪ್ಪತ್ತು ರೂಪಾಯಿ ಹೆಚ್ಚಳ ಮಾಡಲು ಸಿದ್ದರಾಗಿದ್ದಾರಂತೆ, ಈ ಪೆಟ್ರೋಲ್ ದರ ದಿನೇ ದಿನೇ ಹೀಗೇ ಏರುತ್ತಾ ಹೋಗುತ್ತದಂತೆ. ಅದರ ಜೊತೆಗೆಯೇ ಬಸ್ ಸ್ಟ್ಯಾಂಡ್ ಆಟೋ ಸ್ಟಾಂಡ್ ಗಳ ಮಾದರಿಯಲ್ಲಿ ಸೈಕಲ್ ಸ್ಟ್ಯಾಂಡ್ ಮಾಡಿ ಜನರು ಟಿಕೇಟ್ ಪಡೆದು ಸೈಕಲ್ ಬಳಸಬಹುದಂತೆ. ಎಲ್ಲಾ ಗಲ್ಲಿ ಗಲ್ಲಿಗೂ ಇಷ್ಟೆಂದು ಸೈಕಲ್ ಕೊಡುತ್ತಾರಂತೆ. ಈ ಸೈಕಲ್ ನಿಲ್ದಾಣ ನಿರ್ವಹಣೆಗೆಂದೇ ಹೊಸ ತಂಡವನ್ನ ರಚಿಸಲಾಗಿದೆಯಂತೆ. ಬೆಂಗಾಡು ಅತಿ ಶೀಘ್ರದಲ್ಲೇ ಇಂಧನಯುಕ್ತ ವಾಹನಮುಕ್ತವಾಗುತ್ತಂತೆ ಎಂದು ತನ್ನ ಮಾತು ಮುಗಿಸುವಷ್ಟರಲ್ಲಿ, ನಿಯತಕಾಲಿಕ ಗಿರಾಕಿ ಮಾತು ಶುರುಮಾಡುವರು. ಇಲ್ಲಿ ನೋಡಿ ಪತ್ರಿಕೆಯಲ್ಲಿ ಈ ಸುದ್ಧಿ ಹೇಗಿದೆ, ಯಾರೋ ಈ ಪೆಟ್ರೋಲ್ ಬೆಲೆ ಏರಿಕೆಯಿಂದ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಸಾಯಲು ತೀರ್ಮಾನ ಮಾಡಿದ್ದನಂತೆ. ಪೆಟ್ರೋಲ್ ಸುರಿದುಕೊಳ್ಳಲು ತಂದಿದ್ದ ಡಬ್ಬಿಯನ್ನೇ ಯಾರೋ ಕಿತ್ತುಕೊಂಡು ತಮ್ಮ ಗಾಡಿಗೆ ಹಾಕಿಕೊಂಡರಂತೆ ಈಗ ಆತ ಸಾಯಲು ಬೇರೆ ದಾರಿ ಹುಡುಕುತ್ತಿದ್ದಾನಂತೆ, ನಾಳೆಯಿಂದ ಗಾಡಿಗಳೇ ರೋಡಿಗೆ ಇಳಿಯದಿದ್ದರೆ ಗಾಡಿಗೆ ತಲೆ ಕೊಟ್ಟು ಸಾಯಲು ಸಹ ಆಗುವುದಿಲ್ಲವೆಂದು ಆತ ಪೇಚಾಡುತ್ತಿದ್ದಾನಂತೆ. ರಮೇಶನೂ ಮಾತುಗೂಡಿಸುತ್ತಾ ಹೌದು ಸಾರ್ ನೀವು ಹೇಳೋದು ಸರಿ ಕ್ರಾಂತಿ ಆಗಬೇಕು ನಮ್ಮ ಬೆಂಗಾಡಿನಲ್ಲಿ. ಮೊದಲು ನವೂ ಸರಿ ಹೋಗಬೇಕು, ನಾವು ಆಯ್ಕೆ ಮಾಡಿರುವ ಸರ್ಕಾರವೂ ಸರಿ ಹೋಗಬೇಕು. ಎಲ್ಲಾ ಒಟ್ಟಿಗೆ ಏಳಿಗೆಯ ಕಡೆಗೆ ದುಡೀಬೇಕು ಸಾರ್ ಎಂದು ಹೇಳುತ್ತಾ ಆಫೀಸಿಗೆ ಹೊರಡಬೇಕೆನ್ನುವನು. ಇಬ್ಬರೂ ಗಿರಾಕಿಗಳು ಎದ್ದು ಹೊರಡುವರು. ರಮೇಶ ಗೀತಾ ಹೊರಗೆ ಬರುತ್ತಾ ನನ್ನನ್ನು ನಿಮ್ಮ ಗಾಡಿಯಲ್ಲೇ ಬಿಟ್ಟು ಹೋಗ್ರೀ ಎಂದರೆ ರಮೇಶ ಅಯ್ಯೋ ಹೋಗಮ್ಮಾ ಪರವಾಗಿಲ್ಲ ಏನು ಹತ್ತು ರೂಪಾಯಿಗೆ ತಲೆ ಕೆಡಿಸಿಕೊಂಡ್ರೆ ಆಗುತ್ತಾ ಎಂದು ಇಬ್ಬರೂ ತಮ್ಮ ತಮ್ಮ ಗಾಡಿಗಳಲ್ಲಿ ಆಫೀಸಿಗೆ ಹೊರಡುವರು. ಇಡೀ ರಸ್ತೆ ಮಾಮೂಲಿನಂತೆ ನಿಧಾನಗತಿಯಲ್ಲಿ ಚಲಿಸುತ್ತಾ ಪೆಟ್ರೋಲ್ ಬಂಕಿನ ಮುಂದೆ ದೊಡ್ಡ ಕ್ಯೂ ನಿಂತಿರುವುದು. ಬೆಂಗಾಡು ಹೀಗೆಯೇ!








-ನೀ.ಮ. ಹೇಮಂತ್

ಬೆಂಗಾಡಿನ ಮನೋರಂಜನೆ!


    
          ಪ್ರವೇಶ ಚೀಟಿ ತೆಗೆದುಕೊಳ್ಳಲು ನೂಕು ನುಗ್ಗಲು. ವಿಶೇಷ ಪ್ರವೇಶದ ಮೂಲಕ ನನಗೇನೋ ಒಳಗೆ ನುಗ್ಗಲು ಅಷ್ಟು ಸಾಹಸ ಪಡಬೇಕಾಗಿ ಬರಲಿಲ್ಲ. ಆದರೆ ಬೆಂಗಾಡಿನ ಜನತೆ ಪಡುತ್ತಿದ್ದ ತ್ರಾಸವನ್ನು ಕಂಡು ಮನೋರಂಜನೆಗೆ ಈ ಊರಿನಲ್ಲಿರುವ ಪ್ರಾಮುಖ್ಯತೆಯ ಅರಿವಾಯ್ತು. ದಿನಂಪ್ರತಿ ಹೊಟ್ಟೆಪಾಡಿಗಾಗಿ ಕತ್ತೆ ದುಡಿದ ಹಾಗೆ ಯಾಂತ್ರಿಕವಾಗಿ ದುಡಿಯುವವರಿಗೆ, ಮನೋರಂಜನೆಯ ಅಗತ್ಯ ತುಂಬಾನೇ ಇತ್ತು ಕೂಡ. ಏನಿರಬಹುದು ಕಾರ್ಯಕ್ರಮವೆಂಬ ಕುತೂಹಲ ನನಗೆ. ಕಾರ್ಯಕ್ರಮ ಶುರುವಾಗಲು ಇನ್ನೂ ಅರ್ಧ ತಾಸಿರುವಾಗಲೇ ಚಿತ್ರಮಂದಿರದ ಒಳಗಡೆ ಪ್ರವೇಶ ನೀಡಿದರು. ಕತ್ತಲಲ್ಲಿ ಕ್ರಮಸಂಖ್ಯೆಯ ಆಧಾರದ ಮೆಲೆ ಸೀಟು ಹುಡುಕಿ ಕೂರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಕೂತು ಮುಂದೆ ನೋಡಿದರೆ ಅರೆ! ಇದೇನಿದು ಬಿಳಿಪರದೆಯಿರಬೇಕಿದ್ದ ಜಾಗದಲ್ಲಿ ಖಾಲಿ ನೆಲ! ಸುತ್ತಲೂ ಕಣ್ಣಾಡಿಸಿದರೆ ಇದು ಶೇಕ್ಸ್-ಪಿಯರ್ ಮಾದರಿಯ ರಂಗಮಂದಿರದಂತೆ ಕಂಡಿತು. ಸುತ್ತ ಪ್ರೇಕ್ಷಕರು, ಮಧ್ಯ ಒಂದು ವೇದಿಕೆ ಕೂಡ ಇಲ್ಲ. ಅಥವಾ ಇದು ಸರ್ಕಸ್ಸಿಗಾಗಿ ನಿರ್ಮಿಸಿರುವ ರಂಗಮಂದಿರವಿರಬೆಹುದೇ? ಹಾಗಾದರೆ ಇದು ಚಿತ್ರಮಂದಿರವಲ್ಲ ರಂಗಮಂದಿರವಿರಬಹುದೆಂದು ಊಹಿಸಿದೆ. ಸುತ್ತ ಪ್ರೇಕ್ಷಕರ ಜಾಗಕ್ಕೆ ಕತ್ತಲು, ಮಧ್ಯ ದುಂಡನೆಯ ರಂಗಮಂಚಕ್ಕೆ ನಾಲ್ಕೂ ಕಡೆಗಳಿಂದ ಬೆಳಕು ನೀಡಲಾಗಿತ್ತು. ಪ್ರೇಕ್ಷಕರನ್ನು ಮತ್ತು ಮಧ್ಯ ರಂಗಸ್ಥಳವನ್ನು ಬೇರ್ಪಾಡಿಸಲು ಕಂಬಿಯ ಜಾಲರೆಗಳನ್ನು ಹೆಣೆಯಲಾಗಿತ್ತು. ಪಕ್ಕದಲ್ಲಿ ಬಂದು ಕುಳಿತ ಮನುಷ್ಯನನ್ನು ಸ್ವಾಮಿ ಇದು ನಾಟಕ ಪ್ರದರ್ಶನವೇ ಎಂದು ಬೆಂಗಾಡಿನ ಭಾಷೆಯಲ್ಲಿಯೇ ಕೇಳಿದೆ. ಆತ ಇನ್ನಾವುದೋ ಭಾಷೆಯಲ್ಲಿ ಉತ್ತರಿಸಿದ್ದು ಅರ್ಥವಾಗಲಿಲ್ಲವಾದರು ಅವನು ಕೈಯಲ್ಲಾಡಿಸಿದ ಪರಿಯಿಂದ ಅಲ್ಲವೆಂದು ಹೇಳಿದನೆನಿಸುತ್ತದೆ. ಈ ಬೆಂಗಾಡಿನಲ್ಲಿ ಬೆಂಗಾಡಿನ ಭಾಷೆ ಮಾತನಾಡುವುದಕ್ಕಿಂತ ವಿದೇಶೀ ಭಾಷೆಯನ್ನು ಬಳಸುವವರೇ ಹೆಚ್ಚೆಂದು ಕೇಳಿದ್ದೆ, ಖಾತ್ರಿಯಾಯ್ತು. ಪ್ರದರ್ಶನ ಶುರುವಾಗಲು ಇನ್ನೂ ಹತ್ತು ನಿಮಿಷ ಕಾಲಾವಕಾಶವಿತ್ತು. ಮೊದಲ ಘಂಟೆ ಬಾರಿಸಿದರು. ಮಧ್ಯದ ರಂಗಸ್ಥಳಕ್ಕೆ ಎರಡು ಕುರ್ಚಿಯನ್ನು ಎದುರುಬದಿರಾಗಿ ಹಾಕಿ ಇಬ್ಬರು ಯಾವುದೋ ದ್ವಾರದಲ್ಲಿ ಮಾಯವಾದರು. ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಪ್ರೇಕ್ಷಕ ವರ್ಗದಲ್ಲಿ ಹೆಂಗಸರು, ಚಿತ್ರವಿಚಿತ್ರ ತಿನಿಸುಗಳನ್ನು ಹಿಡಿದ ಪುಟ್ಟ ಪುಟ್ಟ ಮಕ್ಕಳು, ಗಂಡಸರು, ಎಲ್ಲ ವಯೋಮಾನದವರೂ ಇದ್ದರು. ಪ್ರದರ್ಶನ ಶುರುವಾಗಲು ಐದು ನಿಮಿಷ ಇರುವಾಗಲೇ ಪ್ರೇಕ್ಷಕರಲ್ಲಿ ಗಲಾಟೆ ಹೋ.. ಎಂದು ಶುರುವಾಯ್ತು. ಹಾಗೆಯೇ ಮಧ್ಯದ ರಂಗಸ್ಥಳಕ್ಕೆ ಇಬ್ಬರು ಒಬ್ಬ ದಪ್ಪ ಮೀಸೆಯ, ನೀಲಿ ಸೂಟುಧಾರಿ, ಅಜಾನುಬಾಹುಬಂದು ಒಂದು ಕುರ್ಚಿಯ ಮೇಲೆ ಆಸೀನನಾದ. ಅವನ ಮುಖದಲ್ಲಿ ಯಾವುದೇ ರೀತಿಯ ಭಾವಗಳಿರಲಿಲ್ಲವೆನಿಸುತ್ತೆ. ತಲೆಯ ಮೇಲಿನಿಂದ ಬೀಳುತ್ತಿದ್ದ ಬೆಳಕಿನಿಂದಾಗಿ ಭೀಭತ್ಸವಾಗಿ ಕಾಣಿಸುತ್ತಿದ್ದುದಂತೂ ನಿಜ. ಪ್ರದರ್ಶನಕ್ಕೆ ಇನ್ನು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಒಂದು ಕಿಲಕಿಲನೆ ನಗುತ್ತಲಿದ್ದ ಪುಟ್ಟ ಹುಡುಗಿ, ಆತನಿಗೆ ದೈತ್ಯ ದೇಹದ ಮುಂದೆ ಇಲಿಯಂತೆ ಕಾಣುತ್ತಿದ್ದ ಹುಡುಗಿ ಬಂದು ಎದುರಿನ ಕುರ್ಚಿಯಲ್ಲಿ ಕುಳಿತಳು. ಪ್ರೇಕ್ಷಕವರ್ಗ ಕೊನೆಯ ಗಂಟೆಯೊಡೆಯುತ್ತಿದ್ದ ಹಾಗೆಯೇ ಸ್ತಬ್ಧವಾಯ್ತು. ಯಾವ ಮಟ್ಟಿಗೆಂದರೆ, ಆ ಪುಟ್ಟ ಹುಡುಗಿಯ ಲಂಗದಲ್ಲಿದ್ದ ಗಿಲ್ಕಿ ಸದ್ದು ಕೂಡ ಸ್ಪಶ್ಟವಾಗಿ ಕೇಳುವ ಹಾಗೆ ನಿಶ್ಯಬ್ಧವಾಗಿದ್ದನ್ನು ಕಂಡು ಕುತೂಹಲ ಹೆಚ್ಚಾಗಿ ನನ್ನ ಎದೆಬಡಿತವೂ ಹೆಚ್ಚಾಯ್ತು!

ಕುಳಿತಿದ್ದಾತ ಮಾತಿಗೆ ಮೊದಲಾದ, “ನಿನ್ನ ಹೆಸರೇನು” ಅಷ್ಟೇನು ಗಡುಸಾಗಿಲ್ಲದ ಧ್ವನಿಯಲ್ಲಿ ಕೇಳಿದನು. ಪ್ರಕೃತಿ ಎಂದು ಅವಳೂ ಅಷ್ಟೇ ಮುದ್ದಾಗಿ ಉತ್ತರಿಸಿದಳು. ನೋಡು ನಿನಗೆ ಯವುದೇ ರೀತಿಯ ನಿರ್ಬಂಧಗಳಿಲ್ಲ. ನಿನಗಿಷ್ಟ ಬಂದ ಹಾಗೆ ಇರಬಹುದು ಗೊತ್ತಾಯ್ತಾ ಎಂದನು. ಹಾ ಯಾಯ್ತು ಎಂದು ಕೈಕಟ್ಟಿ ಕುಳಿತಳು. ಎಲ್ಲಿ ನಗು ನೋಡೋಣ ಎಂದ ಅವಳು ಮುಂಚಿನಿಂದಲೇ ನಗುತ್ತಲೇ ಇದ್ದಳು. ಇನ್ನೂ ಜೋರಾಗಿ ನಗು, ನಿನ್ನ ಮುದ್ದಾದ ಹಲ್ಲುಗಳು ಕಾಣಿಸುವಹಾಗೆ ಎಂದನು, ನಕ್ಕಳು, ನಿನ್ನ ನಗು ನನಗೆ ತುಂಬಾ ಇಷ್ಟವಾಯ್ತು ತೊಗೋ ಈ ಚಾಕಲೇಟು, ನಿನಗೆ ಕಚಗುಳಿ ಕೊಡುತ್ತೀನಿ ಇನ್ನೂ ಜೋರಾಗಿ ನಗುತ್ತೀಯಾ ಎಂದು ಚಾಕಲೇಟು ಕೊಟ್ಟು, ಇನ್ನೂ ಜೋರಾಗಿ ನಗುವ ಹಾಗೆ ಕಚಗುಳಿಯಿಟ್ಟನು. ಅವಳು ಬಿದ್ದು ಬಿದ್ದು ನಗುತ್ತಿದ್ದಳು. ಇಲ್ಲಿ ಜನರೂ ಅವಳ ನಗುವಿನೊಂದಿಗೆ ನಗು ಬೆರೆಸಿ ನಗುತ್ತಲಿದ್ದರು. ಪ್ರಕೃತಿ ಕಣ್ಣಲ್ಲಿ ನೀರು ಸುರಿಯ ಹತ್ತಿತು. ಅಬ್ಬ ಆಗುವುದಿಲ್ಲ. ಸಾಕೆಂದು, ಹೊಟ್ಟೆ ಹಿಡಿದುಕೊಂಡು ಸಾಕು ಸಾಕೆಂದು ಕೇಳಿಕೊಳ್ಳಲು ಶುರುಮಾಡಿದಳು. ನಿನ್ನ ನಗು ನನಗೆ ತುಂಬಾ ಇಷ್ಟ ನಗು ಇನ್ನೂ ನಗು ಎಂದು ಇನ್ನೂ ಕಚಗುಳಿಯಿಟ್ಟು ನಗಿಸುತ್ತಲೇ ಇದ್ದ. ಸುಸ್ತಾಗಿ ಆಕೆಯ ನಗು ಕ್ರಮೇಣ ಕಡಿಮೆಯಾಗುತ್ತಾ ಬಂತು. ಯಾಕೆ ನಿನಗೆ ಚಾಕಲೇಟು ಕೊಟ್ಟೆ ತಾನೆ, ನಗು ಯಾಕೆ ನಿಲ್ಲಿಸಿದ್ದು ನಗು ಇನ್ನೂ ಎಂದು ಕೊಂಚ ಅಧಿಕಾರವಾಣಿಯಲ್ಲೇ ಹೇಳಹತ್ತಿದ. ನನ್ನಿಂದ ಇನ್ನು ನಗಲು ಸಾಧ್ಯವಿಲ್ಲ. ಬಿಟ್ಟುಬಿಡೆಂದು ಕೇಳಿಕೊಳ್ಳಲು ಶುರುಮಾಡಿದಳು. ಆತ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಇನ್ನೂ ನಗು ಎಂದು ಪೀಡಿಸುತ್ತಲೇ ಇದ್ದ. ಆಕೆಯ ನಗು ಸಂಪೂರ್ಣ ನಂದಿ ಹೋಯಿತು. ಈ ನಗುವಿನ ಆಟ ವಿಚಿತ್ರ ತಿರುವನ್ನು ಪಡೆಯಹತ್ತಿತು. ಆ ಹುಡುಗಿ ನಗಲು ವಿರೋಧಿಸಿದಳು. ಇನ್ನೂ ಪೀಡಿಸುತ್ತಿದ್ದ ಹಾಗೆಯೇ, ಆ ಮುಗ್ಧ ಕಣ್ಣುಗಳಲ್ಲಿ ಅಳು ಬಂದೇ ಬಿಟ್ಟಿತು. ಯಾಕೆ ಅಳ್ತಿದ್ದೀಯ ನಾನೇನು ನಿನಗೆ ಹೊಡೆದೆನೇನೀಗ. ವಿನಾಕಾರಣ ಅಳುವುದು ನನಗೆ ಹಿಡಿಸುವುದಿಲ್ಲ, ಅಳು ನಿಲ್ಲಿಸು ನೀನು ಎಂದು ಆಜ್ಞೆ ಮಾಡತೊಡಗಿದ. ಆಕೆ ಏನೂ ಉತ್ತರ ಕೊಡದೇ ಅಳುತ್ತಲೇ ಇದ್ದಳು. ಅಳು ನಿಲ್ಲಿಸು ನೀನು. ಏನಾಯ್ತೀಗ ಎಂದು ಅವಳ ಮುಖ ಎತ್ತಿ ಪ್ರಶ್ನೆ ಕೇಳಿದ. ಅವಳು ನನಗೆ ನಗಬೇಕೆನಿಸುತ್ತಿಲ್ಲ ಎಂದು ಕಣ್ನೊರೆಸಿಕೊಂಡು ಹೇಳುವಷ್ಟರಲ್ಲೇ ಅದಕ್ಕೇ ಹೀಗೆ ಅಳೋದಾ ನೋಡು ಎಷ್ಟು ಜನರಿದ್ದಾರೆ ಎಲ್ಲರ ಮುಂದೆ ಅತ್ತು ನನಗೆ ಅವಮಾನ ಮಾಡ್ತಿದ್ದೀಯ ಮೊದಲು ಅಳು ನಿಲ್ಲಿಸು ಎಂದು ಹೇಳುವನು. ಆಕೆ ಬಿಕ್ಕುತ್ತಾ ಕಣ್ಣೊರೆಸಿಕೊಂಡು ತಲೆಬಗ್ಗಿಸಿ ಕೂರುವಳು. ಸುತ್ತ ಜನರೂ ಅಯ್ಯೋ ಪಾಪ ಎಂಬಂತೆ ತ್ಚ್.. ತ್ಚ್.. ಎಂದು ಲೊಚಗುಟ್ಟುತ್ತಿದ್ದರು. ಯಾಕೆ ತಲೆಬಗ್ಗಿಸಿ ಕೂತಿದ್ದೀಯ. ಆ ಕೂದಲನ್ನ ಹಿಂದೆ ಕಟ್ಟುವುದಕ್ಕೆ ಏನು ತೊಂದರೆ ನಿನಗೆ. ನನ್ನ ಕಣ್ಣು ನೋಡಿ ಯಾಕೆ ಮಾತನಾಡುವುದಿಲ್ಲ ನೀನು. ಸರಿಯಾಗಿ ನೆಟ್ಟಗೆ ಯಾಕೆ ಕೂರುವುದಿಲ್ಲ ನೀನು. ಉತ್ತರ ಕೊಡುವಾಗ ಕೈಗಳನ್ನು ಅಷ್ಟೋಂದು ಯಾಕೆ ಬಳಸುತ್ತೀಯ. ಹೀಗೇ ಆಕೆ ಏನು ಮಾಡಿದರೂ ಪ್ರಶ್ನಿಸುತ್ತಾ ಅವಳನ್ನು ಗಲಿಬಿಲಿಗೊಳಿಸುವನು. ಥತ್ ಇದೆಂತಹ ಧರಿದ್ರ ಪ್ರದರ್ಶನಕ್ಕೆ ಬಂದೆನಪ್ಪಾ ಎನಿಸದೇ ಇರಲಿಲ್ಲ ನನಗೆ. ಆದರೂ ಮುಂದೇನು ಎಂಬಂತೆ, ಕಣ್ಣು ಬಾಯಿಗಳನ್ನು ಬಿಟ್ಟುಕೊಂಡು ಕೈಬಾಯಲ್ಲಿದ್ದ ತಿಂಡಿ ತಿನಿಸುಗಳನ್ನು ತಿನ್ನುವುದನ್ನೂ ಮರೆತು ನೋಡುತ್ತಲಿದ್ದರು. ನನಗೆ ಕೂರಲು ಜಿಗುಪ್ಸೆಯಾಗುತ್ತಿದ್ದರೂ ಆ ಹುಡುಗಿಯ ಪಾಡು ನೋಡಿ ಮನಸು ಮರುಗುತ್ತಲಿತ್ತು. ಎದ್ದು ಹೊರಟುಹೋಗೋಣವೆಂದು ಒಂದು ಮನಸ್ಸು, ಆದರೆ ಮುಂದೇನಾಗುವುದೋ ಎಂಬ ಕೆಟ್ಟ ಕುತೂಹಲ ಖಂಡಿತಾ ಇತ್ತು.

ಹುಡುಗಿ ಸುತ್ತಲೂ ಸುತ್ತಿ ಸುತ್ತಿ ಎಲ್ಲರನ್ನೂ ಮನೋರಂಜಿಸುವ ಹಾಗೆ ಕುಣಿಯಳು ಶುರುಮಾಡಿದಳು. ಸುಮ್ಮನಾಗಿದ್ದ ಪ್ರೇಕ್ಷಕರಲ್ಲಿ ಸಂಚಲನ ಮೂಡಿ, ಪುಟ್ಟ ಮಕ್ಕಳೂ ಸೇರಿ ಚಪ್ಪಾಳೆ ತಟ್ಟಿ ಜೊತೆಗೆ ಹಾಡುತ್ತಾ, ಕೂಗುತ್ತಾ ಹುಡುಗಿಯನ್ನು ಪ್ರೋತ್ಸಾಹಿಸಲು ಶುರುಮಾಡಿದರು. ಆ ಹುಡುಗಿಗೆ ಬೇರೇನು ಇಷ್ಟವೆಂದು ಆತ ಕೇಳಿದಾಗ ಸ್ವಚ್ಛಂದವಾಗಿ ನೃತ್ಯ ಮಾಡುವುದು ಇಷ್ಟ ಎಂದಿದ್ದಳು. ಕುಣಿ ಹಾಗಾದರೆ ಎಂದು ಕುಣಿಯಲು ಬಿಟ್ಟಿದ್ದ. ಅವಳು ಕುಣಿಯುತ್ತಿದ್ದರೆ ಅವನು ಸುಮ್ಮನೇ ಕುರ್ಚಿಯ ಮೇಲೆ ಕುಳಿತು ನೋಡುತ್ತಲಿದ್ದ. ಅವಳ ಕಾಲುಗಳು ಜಿಂಕೆಯ ಕಾಲುಗಳಂತಿದ್ದವು. ಪುಟಪುಟಪುಟನೆ ಜಿಗಿಯುತ್ತಲಿದ್ದವು. ಸುತ್ತ ಕುಳಿತಿದ್ದವರೆಲ್ಲರೂ ನಿಂತು ಚಪ್ಪಾಳೆ ತಟ್ಟುವ ಹಾಕೆ ಕುಣಿದಳು. ನಾನೂ ಕಣ್ಣರೆಪ್ಪೆ ಮುಚ್ಚದೆಯೇ ಅವಳ ನೃತ್ಯ ಪ್ರತಿಭೆಗೆ ತಲೆದೂಗಿದೆ. ಇದಪ್ಪಾ ಪ್ರದರ್ಶನ, ಬಂದದ್ದಕ್ಕೂ ಸಾರ್ಥಕವಾಯ್ತೆಂದು ಅಂದುಕೊಂಡು, ನೋಡನೋಡುತ್ತಿದ್ದಂತೆ ಸುತ್ತುತ್ತಾ ಸುತ್ತುತ್ತಾ ಎಡವಿ ಬಿದ್ದೇ ಬಿಟ್ಟಳು. ಕುಳಿತಿದ್ದ ಕೆಲವು ಪ್ರೇಕ್ಷಕರೂ ಸಹ ನಿಂತು ಏನಾಯ್ತೋ ಅವಳಿಗೆ ಎಂದು ಗಾಬರಿಗೊಳ್ಳದೇ ಇರಲಿಲ್ಲ. ಅಷ್ಟು ಹೊತ್ತು ಪ್ರೋತ್ಸಾಹ ಕೂಡ ಮಾಡದೇ, ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದವನು ಎದ್ದು ನೇರವಾಗಿ ಬಿದ್ದವಳ ಬಳಿಗೆ ಹೋಗಿದ್ದೇ ತಲೆಯ ಮೇಲೆ ಛಟೀರನೆ ಹೊಡೆದೇ ಬಿಟ್ಟನು. ಎಲ್ಲ ಜನರೂ ಹೋ ಹೋ ಹೋ ಎಂದು ಬಾಯ ಮೇಲೆ ಕೈಯಿಟ್ಟರು. ಕುಣಿಯಲು ಬರದ ಮೇಲೆ ಯಾಕೆ ಕುಣಿಯಬೇಕಿತ್ತು ನೀನು, ಅದೂ ಇದೂ ಎಂದು ಅವಳ ಹಿಂದೆ ನಿಂತು ಅರಚುತ್ತಲಿದ್ದನು. ತಲೆ ತಗ್ಗಿಸಿ ತಿರುಚಿದ್ದ ಕಾಲು ಹಿಡಿದು ಸಾವರಿಸಿಕೊಳ್ಳುತ್ತಿದ್ದವಳು ಹಾಗೇ ಇದ್ದಳು. ಕೆದರಿದ್ದ ಅವಳ ಕೂದಲು ಅವಳ ಮನಸ್ಸನ್ನು ಪ್ರತಿಬಿಂಬಿಸುತ್ತಿದ್ದವೋ ಏನೋ ಎಂದುಕೊಂಡೆ. ಇದೇನು ಪೂರ್ವನಿಯೋಜಿತ ನಾಟಕವೋ ಇಲ್ಲಾ ಜೀವನದ ಬಿಂಬವೋ ಏನೂ ಅರ್ಥವಾಗದೇ ತಲೆತುರಿಸಿಕೊಂಡೆ. ಆಕೆ ಪಾಪ ಇನ್ನೂ ಕಾಲು ನೀವಿಕೊಳ್ಳುತ್ತಲೇ ಇದ್ದವಳು. ಎದ್ದು ಅವನನ್ನು ವಿರೋಧಿಸಲು ಶುರುಮಾಡಿದಳು. ಒಮ್ಮೆ ಕುಣಿಯುವ ಪ್ರಯತ್ನವನ್ನಾದರೂ ಮಾಡಿನೋಡು ಅರ್ಥವಾಗುತ್ತೆ ನೃತ್ಯದ ನೋವೇನೆಂದು ಎಂದು ದಿಟ್ಟವಾಗಿ ಹೇಳಿದಳು. ಶಹಬ್ಭಾಶ್ ಎಂದುಕೊಂಡೆ. ಅವಳು ಅಸಹಾಯಕಳಾಗಿರಲಾರಳು ತಾಳ್ಮೆಯಿಂದ ವರ್ತಿಸುತ್ತಿದ್ದಳೇನೋ ಇಷ್ಟು ಹೊತ್ತಿನವರೆಗೂ ಎಂದು ನಾನೇ ಲೆಕ್ಕ ಹಾಕುತ್ತಿದ್ದೆ. ಅವನು ಚಪ್ಪಾಳೆ ತಟ್ಟಿ ಇಬ್ಬರು ಮೊದಲು ಕುರ್ಚಿ ತಂದಿಟ್ಟ ಬೋಡರನ್ನು ಕರೆದು ಏನೋ ಕಿವಿಯಲ್ಲಿ ಉಸುರಿದ. ಅವರೂ ಹೋದರು. ನೀಲಿ ಸೂಟುಧಾರಿ ಮತ್ತೆ ಅವಳತ್ತ ತಿರುಗಿ ಹೀಗೆ ಮೈಪ್ರದರ್ಶಿಸುವ ಹಾಗೆ ಬಟ್ಟೆ ತೊಡಲು ನಾಚಿಕೆಯಾಗಲ್ವಾ ನಿನಗೆ ಎಂದು ಅಬ್ಬರಿಸಿದ. ಅವಳು ಅವನನ್ನೇ ನೇರವಾಗಿ ದಿಟ್ಟಿಸುತ್ತಲೇ ಇದ್ದಳು. ಇಬ್ಬರ ನಡುವೆ ವಾಕ್ ಸಮರವೇ ಶುರುವಾಯ್ತು. ನನ್ನಿಷ್ಟ ನಾನು ಹೇಗೆ ಬೇಕೋ ಬದುಕಬಹುದೆಂದು ನೀನೇ ಹೇಳಿದ್ದೆ ತಾನೆ ಎಂದು ಅವಳು. ಹೇಗೆ ಬೇಕೋ ಬದುಕು ಆದರೆ ಹೀಗೆ ಬದುಕಲು ಯಾರು ಅನುಮತಿ ಕೊಟ್ಟದ್ದು ನಿನಗೆ ಎಂದು ಆತ. ಕೇಳಲು ನೀನ್ಯಾರೆಂದು ಅವಳು. ಹಾಗೇ ಮಾತಿಗೆ ಮಾತು ಮುಂದುವರೆಯುತ್ತಲಿತ್ತು.

ಇಬ್ಬರು ಬೋಡರೂ ಒಂದೊಂದು ಕತ್ತಿಗಳನ್ನು ಇಬ್ಬರಿಗೂ ಕೊಟ್ಟು ಹೋದರು. ಅವಳು ಕತ್ತಿ ಹಿಡಿದು ಕುಂಟುತ್ತಾ ನಿಂತಳು. ನೋಡ ನೋಡುತ್ತಿದ್ದಂತೆಯೇ. ಬಾ ಹೊಡೆದಾಡು ಎಂದು ಹೋಗಿ ಅವಳ ಮೇಲೆ ಎರಗಿಯೇ ಬಿಟ್ಟ. ಶಕ್ತಿ ಮೀರಿ ಅವನನ್ನು ಎದುರಿಸಿದಳು. ಹೊಡೆದಾಟ ಶುರುವಾಯ್ತು. ಇದೇನು ನಡೆಯುತ್ತಿದೆಯೆಂದು ನನಗೆ ಏನೆಂದರೆ ಏನೂ ಅರ್ಥವಾಗುತ್ತಲಿರಲಿಲ್ಲ. ಕಣ್ಣ ಮುಂದೆಯೇ ಆ ಪುಟ್ಟ ಹುಡುಗಿಗೂ ಆ ದೈತ್ಯ ಸೂಟುಧಾರಿಗೂ ಹೊಡೆದಾಟ ಶುರುವಾಗೇ ಹೋಯ್ತು. ಇದು ಅನ್ಯಾಯ, ದೌರ್ಜನ್ಯ ಎಂದು ಕೆಲವು ಪ್ರೇಕ್ಷಕ ವರ್ಗದವರು ಕೂಗಲು ಶುರುಮಾಡಿದರು. ಕೆಲವರು ಹುಡುಗಿಯನ್ನು ಹುರಿದುಂಬಿಸುವ ಮಾತುಗಳನ್ನಾಡುತ್ತಿದ್ದರೆ, ಇನ್ನೂ ಕೆಲವರು ಆ ದೈತ್ಯನನ್ನು ಬಾಯಿಗೆ ಬಂದ ಹಾಗೆ ಜರಿಯುತ್ತಿದ್ದರು. ಮಕ್ಕಳು ಅಳಲು ಶುರುಮಾಡಿದ್ದವು. ಆದರೂ ಕೆಲವರು ಕೈಲಿದ್ದ ತಿಂಡಿ ಯಾಂತ್ರಿಕವಾಗಿ ಬಾಯಿಗೆಸೆದುಕೊಳ್ಳುತ್ತಾ ಜಗಿಯುತ್ತಲೇ ಇದ್ದದ್ದು ವಿಚಿತ್ರ. ಅವಕಾಶ ಸಿಕ್ಕಿದ್ದೇ ಅವಳನ್ನು ಕತ್ತಿಯಲಗಿನಿಂದ ನೂಕಿದ್ದೇ ಎರಡು ಅಡಿಯಷ್ಟು ಮೇಲಕ್ಕೆ ಹಾರಿ ಅಷ್ಟು ಕಬ್ಬಿಣದ ಸರಳಿಗೆ ಹೋಗಿ ಹೊಡೆದು ಬಿದ್ದಳು. ಬಿದ್ದವಳನ್ನೂ ಬಿಡದೇ ಹೋಗಿ ಮೇಲೆರಗಲು ಪ್ರಯತ್ನಿಸುತ್ತಿದ್ದವನನ್ನು ಅನ್ಯಾಯ, ಮೋಸ ಎಂದು ಜನರು ಅರಚುತ್ತಲೇ ಇದ್ದರೇ ಹೊರತು ಯಾರೂ ನಿಂತ ಸ್ಥಳದಿಂದ ಅಲುಗಲೂ ಇಲ್ಲ. ನನ್ನಿಂದ ಇದನ್ನು ಅರಗಿಸಿಕೊಳ್ಳಲು ಇನ್ನು ಸಾಧ್ಯವಿರಲಿಲ್ಲ. ಕುಸಿದು ಕುಳಿತು ಕಣ್ಮುಚ್ಚಿದೆ. ಆದರೂ ಸುತ್ತ ಉದ್ಗರಿಸುತ್ತಿದ್ದವರಿಂದಲೇ ಏನು ನಡೆಯುತ್ತಿರಬಹುದೆಂಬ ಚಿತ್ರಣ ಸ್ಮೃತಿಪಟಲದ ಮೇಲೆ ಮೂಡುತ್ತಲಿದ್ದುದನ್ನು ತಡೆಯಲು ಸಾಧ್ಯವಾಗಲಿಲ್ಲ. ತಾನಿನ್ನು ಭಾಗವಹಿಸುವುದಿಲ್ಲವೆಂದು ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದರೂ ಎಳೆದು ತಂದು ನಡುಮಧ್ಯಕ್ಕೆ ಬಿಡುತ್ತಲಿದ್ದನಂತೆ. ಎಲ್ಲ ಬಾಗಿಲುಗಳೂ ಮುಚ್ಚಿದ್ದವಂತೆ. ಅವಳು ಹೊರಗೆ ಹೋಗಲು ಶತಪ್ರಯತ್ನ ಮಾಡುತ್ತಲೇ ಇದ್ದಳಂತೆ. ಎದ್ದು ಸೀದಾ ಹೊರನಡೆದೆ. ಸುಧಾರಿಸಿಕೊಳ್ಳಲು ಬಹಳ ಸಮಯವೇ ಬೇಕಾಯಿತು. ಹೊರಗೆ ಸಂಪೂರ್ಣ ಕತ್ತಲಾಗಿತ್ತು. ಒಳಗೆ ನಡೆಯುತ್ತಿದ್ದ ಯಾವುದರ ಅರಿವೇ ಇಲ್ಲದೆ ತಮ್ಮ ಪಾಡಿಗೆ ಓಡಾಡುತ್ತ, ತಮ್ಮ ಪ್ರಪಂಚದಲ್ಲೇ ಮುಳುಗಿರುವ ಜನತೆ. ಹಾಗೇ ಪ್ರದರ್ಶನ ಮಂದಿರದ ಗೋಡೆಗೆ ಒರಗಿ ನಿಂತೆ. ಒಳಗಿನಿಂದ ಬರುತ್ತಿದ್ದ ಥೂ, ಚೀ, ಅಯ್ಯೋ, ಉದ್ಗಾರಗಳು ಇನ್ನೂ ಸ್ಪಷ್ಟವಾಗಿ ಕೇಳಿಬರುತ್ತಲೇ ಇದ್ದವು. ಈ ದರಿಧ್ರ ಊರನ್ನೇ ಬಿಟ್ಟು ಹೋಗೋಣವೆಂದರೆ ಎಲ್ಲಿಗೆ ಹೋಗುವುದು. ಎಲ್ಲಾ ಕಡೆ ಹೊರಗೆ ನಡೆಯುತ್ತಿದ್ದು ಇಲ್ಲಿ ಒಳಗೆ ನಡೆಯುತ್ತಿತ್ತಷ್ಟೇ! ಒರಗಿದ್ದ ಗೋಡೆಗೆ ಭಿತ್ತಿಪತ್ರವೊಂದನ್ನು ಹಚ್ಚಿದ್ದರು. ಒಂದು ಧಡೂತಿ ನೀಲಿ ಬಟ್ಟೆಯವನ ನೆರಳಿನಲ್ಲಿ ತಲೆ ಮೇಲೆ ಎತ್ತಿ ನೋಡುತ್ತಿರುವ ಹುಡುಗಿ ಕೆಂಪು ಲಂಗದ ಪುಟ್ಟು ಹುಡುಗಿ. ಈಗ ಅದರ ಅರ್ಥವಾಯ್ತು. ಆದರೆ ಪ್ರವೇಶ ಚೀಟಿ ಪಡೆಯುವಾಗ ಇನ್ನೂ ಮೂರು ಸಾಲುಗಳಿದ್ದವು. ಅದ್ಯಾಕಿರಬಹುದು ಎಂದು ಥಟ್ಟನೆ ಪ್ರಶ್ನೆ ಹುಟ್ಟಿಕೊಂಡಿತು.


ಇದೇ ರೀತಿಯ ಮೂರು ಇತರೇ ಪ್ರದರ್ಶನ ಮಂದಿರಗಳಿದ್ದವು. ಒಂದರ ಮುಂದೆ ಕೆಂಪು ತುಟಿಯ, ದಪ್ಪ ಕಣ್ಣುಗಳ, ಕೆದರಿದ ಕೂದಲ ಹೆಣ್ಣೊಂದರ ದೊಡ್ಡ ಮುಖ, ಅವಳ ಮೂಗಿನ ಅರ್ಧದಷ್ಟಿದ್ದ ಒಬ್ಬ ಗಂಡು ಸೂಟುಧಾರಿಯ ಚಿತ್ರ. ಮೂರನೆಯ ಮಂದಿರದ ಮುಂದೆ ಎರಡು ಜುಟ್ಟುಗಳನ್ನು ಹಿಡಿದ ಹೆಣ್ಣು, ನಾಲ್ಕನೆಯದ್ದರ ಮುಂದೆ ಎರಡು ಅಸಮಾನ ಗಂಡು. ಪ್ರದರ್ಶನ ಮುಗಿದು ಜನ ಹೊರಗೆ ಬಂದರು. ನಾಲ್ಕನೆಯದ್ದರಿಂದ ಒಂದೋ ಎರಡೋ ಪುರುಷ ಪ್ರೇಕ್ಷಕರೇ ಹೊರಬರುತ್ತಿದ್ದರೆ. ಮೂರನೆಯದ್ದರಿಂದ ಬೆರಳೆಣಿಕೆಯಷ್ಟು ಜನ ಅದರಲ್ಲೂ ಗಂಡಸರೇ ಇದ್ದದ್ದು ವಿಸ್ಮಯ. ಎರಡನೆಯದ್ದರಲ್ಲಿ ಕೊಂಚ ಮಿಶ್ರ ಪ್ರೇಕ್ಷಕರು ಸ್ವಲ್ಪ ಮಟ್ಟಿಗೆ ಇದ್ದರು. ಮೊದಲನೆಯ ನಾನು ಸಿಕ್ಕಿಬಿದ್ದಿದ್ದ ಮಂದಿರದಿಂದಂತೂ ಕಿಕ್ಕಿರಿದ ಜನಸ್ತೋಮ. ಒಳಗೆ ಅಷ್ಟು ಗೊಂದಲಗೊಂಡಿದ್ದ ಜನರು ಸರ್ವೇ ಸಾಮಾನ್ಯವಾಗಿ ಮಾತನಾಡುತ್ತಾ, ನಗೆಯಾಡುತ್ತಾ ಹೊರಬರುತ್ತಿದ್ದುದು ನನ್ನನ್ನು ಇನ್ನಷ್ಟು ಗೊಂದಲಗೊಳಿಸಿತು. ಒಟ್ಟಿನಲ್ಲಿ ಎಲ್ಲವನ್ನೂ ಟಿಪ್ಪಣಿ ಮಾಡಿಕೊಂಡೆ. ಈ ವಿಚಿತ್ರ ಜನರ ನಡುವೆ ಇನ್ನೆಷ್ಟು ದಿನ ಅಥವಾ ತಿಂಗಳು, ಅಥವಾ ವರ್ಷಗಳು ಬದುಕಬೇಕಿತ್ತೋ ಗೊತ್ತಿಲ್ಲ ಒಟ್ಟಿನಲ್ಲಿ ನಿಮಗೆ ಪರಿಚಯಿಸುವುದಂತೂ ನನ್ನ ಕರ್ತವ್ಯ. ಬೆಂಗಾಡಿನ ಮನೋರಂಜನೆ “ಹೀಗೇ” ಇದೆ. ನಿಮ್ಮನ್ನಿದು ಮನೋರಂಜಿಸಿದ್ದರೆ ಮತ್ತೊಮ್ಮೆ ಚಿಂತಿಸಿ. ಗೊಂದಲಗೊಳಿಸಿದ್ದರೆ ಎಚ್ಚೆತ್ತುಕೊಳ್ಳಿ. ಖುಷಿಕೊಟ್ಟಿದ್ದರೆ ನಿಮ್ಮ ಕಪಾಳೆಗೆ ನೀವೇ ಹೊಡೆದುಕೊಳ್ಳಿ. ಬೇಸರವಾಗಿದ್ದರೆ ತಿದ್ದಿಕೊಳ್ಳಿ. ತಲೆಯಲ್ಲಿ ಹುಳ ಬಿದ್ದಿದ್ದರೆ ನನ್ನನ್ನು ನೆನಪಿಟ್ಟುಕೊಳ್ಳಿ. ಬೋರ್ ಹೊಡೆದಿದ್ದರೆ ನನ್ನನ್ನೇ ಶಪಿಸಿ ಸುಮ್ಮನೆ ಮಲಗಿಬಿಡಿ!






+ನೀ.ಮ. ಹೇಮಂತ್

Saturday 19 May 2012

ಕೆಂಪು ಕ್ಯಾಮೆರಾ ದರ್ಶನ!


    
  ನೇರವಾಗಿ ಮನೆಗೆ ಹೋಗಬೇಕು. ಬ್ಯಾಗನ್ನ ಮಾಮೂಲಿನಂತೆಯೇ ಸೋಫಾದ ಮೇಲೆ ಎಸೀಬೇಕು. ರೂಮಿಗೆ ಹೋಗಿ ಚಕಚಕನೆ ಬಟ್ಟೆ ಬದಲಿಸಿ ಕೈಕಾಲು ಮುಖ ತೊಳೆದು ಅಮ್ಮನನ್ನ ಸಮಾಧಾನವಾಗೇ ಮಾತನಾಡಿಸಿ, ನೀರು ಕುಡಿದು ಬ್ಯಾಗು ತೊಗೊಂಡು ರೂಮು ಸೇರ್ಕೊಂಡು ಚಿಲಕ ಹಾಕ್ಕೊಬೇಕು. ಆದರೆ ಖಂಡಿತಾ ಅಮ್ಮ ಫಲಿತಾಂಶ ಏನಾಯ್ತು ಅಂತ ಕೇಳೇ ಕೇಳ್ತಾಳೆ. ಏನಂತ ಹೇಳೋದು ಎಲ್ಲಾದರಲ್ಲೂ ೭೦ಕ್ಕಿಂತ ಜಾಸ್ತಿ ಬಂದಿದೆ ಇನ್ನೂ ಶೇಕಡಾ ೫% ಹೆಚ್ಚಿಗೆ ಬರಬೇಕು ಅದಕ್ಕೇ ಮರುಮಾಪನಕ್ಕೆ ಹಾಕಬೇಕು ಅಂತ ಇದ್ದೀನಿ ಹಾಗಾಗಿ ನನ್ನ ಫಲಿತಾಂಶ ಇನ್ನೂ ಎರಡು ತಿಂಗಳಾಗುತ್ತೆ ಖಾತ್ರಿಯಾಗೋದು ಅಂತ ಹೇಳಿಬಿಡಲಾ? ಥು ಯಾಕ್ ಹಿಂಗಾಯ್ತೋ, ಏನೇನೋ ಅಂದುಕೊಂಡಿದ್ದೆ, ಎಲ್ಲಾ ಮೋಸ ಆಗೋಯ್ತು. ನಾನು ಓದಿದ್ದು ಒಂದೂ ಬರಲಿಲ್ಲ, ಯಾಕೆ ಹೀಗೆ ಎಡವಿದೆನೋ ಗೊತ್ತಿಲ್ಲ. ಥು, ನಾನು ಅಳ್ತಿರೋದು ಬಸ್ಸಲ್ಲಿ ಯಾರು ನೋಡ್ತಿದ್ದಾರೋ ಏನೋ. ನಾನು ಅಳಬಾರದು. ಕಣ್ಣು ಕೆಂಪಗಾದ್ರೆ ಅಮ್ಮ ಕಂಡು ಹಿಡಿದೇಬಿಡ್ತಾಳೆ. ಎಲ್ಲಾ ಒಳ್ಳೆ ಒಳ್ಳೆ ಕಾಲೇಜಿಗೆ ಸೇರ್ಕೋತಾರೆ. ಗಿರಿ ಮುಂದೆ ಮಾನ ಮರ್ಯಾದೆ ಎಲ್ಲಾ ಹೋಯ್ತು. ಛಾಲೆಂಜಲ್ಲಿ ನಾನೇ ಸೋತೆ ಇನ್ನು ಎದುರಿಗೆ ಸಿಕ್ಕರೆ ಎಲ್ಲಾರ ಮುಂದೆ ಅವಮಾನ ಮಾಡ್ತಾನೆ. ಇನ್ನು ಅಪ್ಪ ಕಾಲು ಮುರಿದಾಕ್ತಾರೇನೋ. ಯಾವಾಗಲೂ ಟ್ವೆಂಟಿ ಟ್ವೆಂಟಿ ನೋಡ್ಕೊಂಡು ಕೂತಿರಬೇಡಾ ಪರೀಕ್ಷೆನಲ್ಲಿ ಗೇಯ್ಲ್ ಎಷ್ಟು ಸಿಕ್ಸ್ ಹೊಡೆದಾ ಅಂತ ಕೇಳಲ್ಲಾ ಅಂತ ಪದೇ ಪದೇ ಹೇಳ್ತಿದ್ದಾಗಲೇ ಮಾತು ಕೇಳಬೇಕಿತ್ತು. ಇವತ್ತಂತೂ ಹೊಡೆದು ಸಾಯ್ಸೇ ಬಿಡ್ತಾರೇನೋ. ದಿವ್ಯಾ ಹೇಗೆ ತರಗತಿಗೇ ಮೊದಲು ಬಂದಳೋ. ಛೇ ಅವಳಿಗೆ ಮುಖ ತೋರ್ಸೋ ಹಾಗಿಲ್ಲ. ಅವಳ ಕಾಲೇಜಿಗಂತೂ ಸೇರೋ ಹಾಗಿಲ್ಲ ನಾನು.  ಯಾವುದೋ ಡಬ್ಬಾ ಕಾಲೇಜಿನಲ್ಲಿ ಸೀಟ್ ಸಿಕ್ರೆ ಇನ್ನ ಅಲ್ಲೂ ಅಷ್ಟಕ್ಕಷ್ಟೇ ಮಾರ್ಕ್ಸ್ ಬರುತ್ತೆ, ಆಮೇಲೆ ಎಲ್ಲಾ ಒಳ್ಳೇ ಕೆಲಸಗಳಲ್ಲಿದ್ರೆ ನಾನು ಮಾತ್ರ ಕಿತ್ತೋಗಿರೋ ಸರ್ಟಿಫಿಕೇಟ್ಸ್ ಇಟ್ಕೊಂಡು ಕೆಲಸಕ್ಕೆ ಅಲೆಯುತ್ತಿರ್ಬೇಕು ಅಷ್ಟೇ. ಅದಕ್ಕೂ ಮೊದಲೇ ನಾನು ಇಂಜಿನೀರಿಂಗ್ ತೊಗೊಳ್ಳೋಕೂ ಆಗಲ್ಲಾ ಅನ್ನಿಸುತ್ತೆ. ಅಪ್ಪನ ಹತ್ರ ಪೇಮೆಂಟ್ ಸೀಟಿಗೆ ಕಟ್ಟೋಕೆ ದುಡ್ಡೆಲ್ಲಿಂದ ಬರಬೇಕು. ಹೆಡ್ ಮಾಸ್ಟ್ರು ಅಪ್ಪನಿಗೆ ತುಂಬಾ ಪರಿಚಯ ಇಷ್ಟು ಹೊತ್ತಿಗೆ ಅವರಿಗೆ ಫೋನು ಮಾಡಿ ತಿಳ್ಕೊಳ್ಳದಿದ್ರೆ ಸಾಕಪ್ಪಾ. ದೇವರೇ ನನ್ನ ಫಲಿತಾಂಶ ಅಂತೂ ಕಿತ್ತುಕೊಂಡೆ ಎಲ್ಲಾದ್ರಲ್ಲೂ ಹಿಂದಿನ ಬೆಂಚಲ್ಲಿ ಕೂರ್ತಿದ್ದೆ. ಧರಿದ್ರ ವಿಜ್ಞಾನದ ಪರೀಕ್ಷೆ ಇದ್ದಾಗಲೇ ಮೊದಲ ಬೆಂಚಲ್ಲಿ ಬೀಳಬೇಕಾ. ಈ ಮುವತ್ತೈದು, ನಲವತ್ತೊಂದು, ಇಷ್ಟು ಮಾರ್ಕ್ಸ್ ತೊಗೊಂಡ್ರೂ ಒಂದೇ ಫೇಲಾದ್ರೂ ಒಂದೇ. ಏನಾದ್ರೂ ಆಗಲಿ. ಮೊದಲು ಅಮ್ಮನಿಗೆ ಫಲಿತಾಂಶಾನೇ ಬಂದಿಲ್ಲ ಇನ್ನಾ ಸಂಜೆ ಬರುತ್ತೆ ಅಂತ ಹೇಳಿ ರೂಮು ಸೇರ್ಕೊಂಡ್ರೆ ಮುಗೀತು. ಹಾಗೇ ಮಾಡ್ತೀನಿ. ಎಂದೆಲ್ಲಾ ಬಸ್ಸಿನಲ್ಲಿ ಕೂತು ಲೆಕ್ಕಾಚಾರ ಮಾಡಿ ಕೊನೆಗೂ ಒಂದು ನಿರ್ಧಾರಕ್ಕೆ ಬದ್ಧನಾಗುವಷ್ಟರಲ್ಲಿ ತನ್ನ ನಿಲ್ದಾಣಕ್ಕೆ ತಲುಪಿ, ನೂಕು ನುಗ್ಗಲಿನಲ್ಲಿ ಬಸ್ಸು ಇಳಿದು ರಸ್ತೆಯ ಅಕ್ಕ ಪಕ್ಕ ಏನನ್ನೂ ಗಮನಿಸದೇ ಎಷ್ಟು ತಡೆದರೂ ಕಣ್ಣಿನಲ್ಲಿ ಕಟ್ಟುತ್ತಿದ್ದ ನೀರನ್ನು ತಡೆಯಲಸಾಧ್ಯವಾಗಿ ಸ್ವಲ್ಪ ಹೊತ್ತು ಅದೇಕೋ ಖಾಲಿ ಖಾಲಿಯಾಗಿದ್ದ ರಸ್ತೆಯಲ್ಲಿ ದೂರದಲ್ಲಿ ನಿಂತಿದ್ದ ಕಾಲ್ ಸೆಂಟರ್ ಕಾರೊಂದನ್ನು ಸುಮ್ಮನೆ ದಿಟ್ಟಿಸುತ್ತಾ ನಿಲ್ಲುವನು. ಇನ್ನೂ ಸಮಯ ಕಳೆದರೆ ಅಪ್ಪ ಮನೆಗೆ ಬಂದುಬಿಡುವನು ಎಂದು ಹೆದರಿ ತಕ್ಷಣ ಕಣ್ಣೊರೆಸಿಕೊಂಡು ಮನೆಗೆ ನುಗ್ಗಿ ಅಂದುಕೊಂಡಂತೆಯೇ ಮೆಷೀನಿನ ರೀತಿಯಲ್ಲೇ ಪೂರ್ವನಿಯೋಜಿತವಾಗೇ ವರ್ತಿಸುತ್ತಿರುವಷ್ಟರಲ್ಲಿ ಅಮ್ಮ ಹರೀ ಅಪ್ಪ ನಿಮ್ ಸ್ಕೂಲ್ ಹತ್ರಾ ಬಂದು ನಿನ್ನ ಕರ್ಕೊಂಡು ಜೊತೇಗೇ ಬರ್ತೀನಿ ಅಂತ ಫೋನು ಮಾಡಿದ್ರಲ್ಲೋ ನೀನ್ಯಾಕ್ ಇಷ್ಟು ಬೇಗ ಬಂದೇ ಎಂದು ಪ್ರಶ್ನಿಸುತ್ತಿದ್ದಂತೆಯೇ ಎದೆ ಒಮ್ಮೆ ಢಸಕ್ಕೆಂದು ಕಣ್ಣು ತುಂಬಿಬಂದು ತಕ್ಷಣ ಬಾತ್ರೂಮು ಸೇರಿ ಮುಖಕ್ಕೆ ನೀರು ಬಡಿದುಕೊಂಡು ಬಂದು ಇಲ್ಲಾ ಮಾ ಫಲಿತಾಂಶ ಇನ್ನಾ ಸಾಯಂಕಾಲಕ್ಕಂತೇ ಅದಕ್ಕೇ ಬಂದ್ಬಿಟ್ಟೇ ಎಂದು ಹೇಳಿ ಊಟ ಬೇಡವೆಂದು ಹೇಳಿ ರೂಮು ಸೇರಿಕೊಂಡು ದಢಾರನೆ ಬಾಗಿಲು ಬಡಿಯುವನು.

ಉಸಿರು ಕಟ್ಟಿ ಬಂದ ಒಂದು ಗಂಡಾಂತರವನ್ನು ಯಶಸ್ವಿಯಾಗಿ ಎದುರಿಸಿ ಒಳಗೆ ಬಂದು ಬಾಗಿಲ ಚಿಲಕ ಜಡಿದವನೇ ಶಬ್ಧ ಹೊರಗೆ ಹೋಗದಂತೆ ಒಳಗಿದ್ದ ಅಷ್ಟೂ ಸಂಕಟವನ್ನು, ಕೋಪವನ್ನು, ನೋವನ್ನು, ಸೋಲನ್ನು ಅಳುವಿನ ಮೂಲಕ ಹೊರಗೆ ಹಾಕುವನು. ಬಿಕ್ಕುತ್ತಲೇ, ಇನ್ನು ತಡ ಮಾಡುವುದು ಸರಿಯಲ್ಲವೆಂದು ಮೋಡ ಮುಸುಕಿದ ಕಣ್ಣುಗಳಿಂದಲೇ ಮಂಚದ ಕೆಳಗಿದ್ದ ಹಗ್ಗವನ್ನು ಹುಡುಕಿ ಗಂಟು ಹಾಕಿ ಫ್ಯಾನಿಗೆ ಹಾಕಿ ಗಂಟು ಬಿಗಿಯುವನು.  ಕೈಕಾಲುಗಳಲ್ಲಿ ಛಳಿಗೆ ನಡುಗುವಂತೆ ನಡುಕ. ಆದರೆ ಮೈಪೂರ್ತಿ ಬೆವರಿನ ಹೊಳೆಯಲ್ಲಿ ತೊಯ್ದುಹೋಗುತ್ತಾ, ನಡುಗುವ ಕೈಗಳಿಂದಲೇ ಪುಸ್ತಕದ ಮಧ್ಯದ ಹಾಳೆಯಲ್ಲಿ ನಾನು ಇಂಜಿನಿಯರಾಗಲು ಸಾಧ್ಯವಿಲ್ಲ. ಹಾಗಾಗಿ ಸತ್ತಿದ್ದೇನೆ ಎಂದು ಬರೆದು. ಆ ಹಾಳೆಯನ್ನು ಹರಿದೆಸೆದು ಮತ್ತೇ ಇನ್ನೊಂದು ಹಾಳೆಯಲ್ಲಿ “ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ. ನಾನು ಸಾಯುತ್ತೇನೆ.” ಎಂದಷ್ಟೇ ಬರೆದು ಅದರ ಮೇಲೆ ಎರಡು ಕಣ್ಹನಿಗಳನ್ನು ಬೀಳಿಸಿ ಸರ್ರನೆ ಮೂಗು ಎಳೆದುಕೊಂಡು ಮಂಚ ಹತ್ತಿ ಹಗ್ಗ ಕೈಯಲ್ಲಿ ಹಿಡಿದು ಮತ್ತೇ ಕೆಳಗೆ ಇಳಿದು ಬಾಗಿಲ ಕೀ ರಂಧ್ರದಲ್ಲಿ ಅಮ್ಮ ಏನು ಮಾಡುತ್ತಿದ್ದಾರೆಂದು ಗಮನಿಸುವನು. ಎಲ್ಲೂ ಸದ್ದಿಲ್ಲದಿರುವುದರಿಂದ ತಡ ಮಾಡದೆ ಮಂಚ ಹತ್ತಿ ಕುತ್ತಿಗೆಗೆ ಕುಣಿಕೆ ಅಲಂಕರಿಸಿಕೊಂಡೇ ಬಿಡುವನು.

ಹ ಹ ಹ ಹ ಹ ಹ ಹ… ಹೋ ಹೋ ಹೋ ಹೋ ಹೋ ಹೋ.. ಎಂದು ಕರ್ಕಶವಾಗಿ ನಗುತ್ತಲಿದ್ದ ಆಸಾಮಿ! ಮಂಚದಿಂದ ಸ್ವಲ್ಪ ಪಕ್ಕಕ್ಕಿದ್ದ ಫ್ಯಾನಿನ ಮೇಲೆ ಭಾರ ಬಿದ್ದದ್ದೇ ಧಡಾರನೆ ನೆಲಕ್ಕುರುಳಿದ ಜೀವವನ್ನು ಕಂಡು ಸುಮಾರು ಅರ್ಧ ತಾಸು ನಿರಂತರವಾಗಿ ನಕ್ಕಿರಬಹುದು. ಕೆಳಗೆ ಬಿದ್ದವನು ಎಷ್ಟು ಹೊತ್ತು ಹಾಗೇ ಬಿದ್ದಿದ್ದನೋ. ಕರ್ಕಶವಾದ ನಗು ಅಸ್ಪಷ್ಟವಾಗಿ ಕಿವಿಗಳನ್ನು ಹೊಕ್ಕು ಮಂಜು ತುಂಬಿದ್ದ ಕಣ್ಣುಗಳನ್ನು ನಿಧಾನವಾಗಿ ತೆರೆಯುತ್ತಿದ್ದಂತೆಯೇ ಥಟ್ಟನೇ ಗಂಟಲು ಹಿಡಿದು ಒಳಗೆ ಖಾಲಿಯಾಗಿದ್ದ ಅಷ್ಟೂ ಆಮ್ಲಜನಕವನ್ನು ಒಂದೇಟಿಗೇ ಕಣ್ಣು ಮೂಗು ಬಾಯಿ ಕಿವಿಗಳಿಂದ ಎಳೆದುಕೊಂಡು ಕೆಮ್ಮಲು ಶುರುಮಾಡುವನು. ಅವನ ಅವಸ್ಥೆ ನೋಡಿ ಈ ಆಸಾಮಿ ಇನ್ನಷ್ಟು ಹಿ ಹಿ ಹಿ ಹಿ ಎಂದು ಬಾಯ್ತೆರೆದು ನಗುವನು. ಹರೀಶ ಎಚ್ಚೆತ್ತುಕೊಂಡು ಸುತ್ತಾ ನೋಡುತ್ತಾ ಮೇಲೆ ಫ್ಯಾನಿನಲ್ಲಿ ನೇತಾಡುತ್ತಿದ್ದ ಹಗ್ಗಕ್ಕೆ ನೇತಾಡುತ್ತಲಿದ್ದ ತನ್ನ ದೇಹವನ್ನೇ ಕಂಡಂತಾಗಿ ಬೆಚ್ಚಿ ಬೀಳುವನು. ಎದುರಿಗಿದ್ದ ವಿಚಿತ್ರ, ವಿಕೃತ ಆಸಾಮಿಯ ನಗು ಆಗಲೇ ಹರೀಶನ ಗಮನಕ್ಕೆ ಬಂದದ್ದು. ಉಸಿರು ಕಟ್ಟಿದ್ದರಿಂದಲೋ ಏನೋ ತಲೆ ಸುತ್ತುತ್ತಲಿದ್ದರಿಂದ ಹಾಗೇ ಗೋಡೆಗೆ ತಡಕಾಡುತ್ತಾ ಹುಡುಕಿ ಗೊಡೆಗೊರಗಿ ಕೂತು ಮಂಜು ಮಂಜಾಗಿ ಕಾಣುತ್ತಿದ್ದ ಕಾಮೆರಾ ಹಿಡಿದು ಕೂತಂತಿರುವ ಆಕೃತಿಯನ್ನು ಕಣ್ಣು ಪಿಳುಕಿಸಿ ಪಿಳುಕಿಸಿ ನೋಡಲು ಪ್ರಯತ್ನಿಸುವನು. ಕೆಮ್ಮುತ್ತಾ, ಉಸಿರಾಡಲು ಶ್ರಮಿಸುತ್ತಾ ಕಣ್ಣುಜ್ಜಿಕೊಂಡು ನೋಡಲು ಮುಖದ ತುಂಬಾ ಬಾಯಗಲಿಸಿ ಕೈಯಲ್ಲೊಂದು ಪುಟ್ಟ ಕ್ಯಾಮೆರಾ ತನ್ನನ್ನು ಸೆರೆಹಿಡಿಯುವಂತಯೇ ಹಿಡಿದು ಮಂಚದ ಪಕ್ಕದ ಟೇಬಲ್ ಮೇಲೆ ಕೆಂಪು ಕೆಂಪು ಟೊಪ್ಪಿಗೆ, ಸೂಟು ಬೂಟು ಧರಿಸಿ ಎರಡೂ ಕಿವಿಗಳವರೆಗೂ ಚಾಚಿದ್ದ ಬಾಯಿಯಿಂದ ಹಿ ಹಿ ಹಿ ಎಂದು ಕರ್ಕಶವಾದ ಧ್ವನಿ ಹೊರಡಿಸುತ್ತಾ, ಕಾಲುಗಳನ್ನು ಜೋಲಿಯಾಡಿಸುತ್ತಾ ಕುಳಿತಿದ್ದವನನ್ನು ಒಮ್ಮೆ ನೋಡಿ ಹಾಗೇ ತಲೆ ಬಗ್ಗಿಸಿ ಕೂರುವನು. ಮೊದಲ ಬಾರಿಗೆ ನಗು ನಿಲ್ಲಿಸಿದ ವಿಚಿತ್ರಾಕೃತಿ ತುಂಬಾ ಒಳ್ಳೆಯ ಪ್ರಯತ್ನ ಮಗಾ, ಸಖತ್ ಧೈರ್ಯಶಾಲಿ ನೀನು. ಆದರೆ ನಿನಗೆ ಗೊತ್ತ ಇಷ್ಟು ಧೈರ್ಯಶಾಲಿಯಾದ ನಿನ್ನನ್ನೂ ಹೇಡಿ ಅಂತ ಕರೀತಾರೆ. ಹಿ ಹಿ ಹಿ ಎನ್ನುವನು. ಹರೀಶನಿಗೆ ಏನೂ ಅರ್ಥವಾಗದೆ ಕಷ್ಟಪಟ್ಟು ಯಾರ್ ನೀನು? ಇಲ್ಲಿಗೆ ಹೇಗೆ ಬಂದೆ? ಎನ್ನುವನು. ಕೆಂಪು ಮಾನವ ಹರೀಶನ ಮಾತನ್ನು ಲೆಕ್ಕಿಸದೇ ಮಗಾ ಸಮಸ್ಯೆಯನ್ನ ಎದುರಿಸಿ ಜೀವನ ಸಾಗಿಸೋಕೆ ಎಷ್ಟು ಧೈರ್ಯ ಬೇಕೋ ಅದಕ್ಕೆ ನೂರು ಪಟ್ಟು ಹೆಚ್ಚಿನ ಧೈರ್ಯ ಸಾವನ್ನ ಎದುರಿಸೋಕೆ ಬೇಕು. ನೀನು ಧೈರ್ಯವಂತ ಕಣೋ ಸಾವನ್ನೇ ಎದುರಿಸಲು ಸಿದ್ಧನಾಗಿ ಹೋದೆ. ಸಮಸ್ಯೆ ಎದುರಿಸಲಾಗದೇ ಹೋದ ಹೇಡಿ ಅಂತ ಎಲ್ಲಾರೂ ಹೇಳಿದರೂ ನಾನು ನಿನ್ನ ಜೊತೆಗೆ ಇದ್ದೀನಿ ಕಣೋ ಮಗಾ ಎಂದು ತನ್ನ ಮಾತು ಮುಂದುವರೆಸುವನು.

ಸ್ವಲ್ಪ ಸುಧಾರಿಸಿಕೊಂಡ ಹರೀಶ ರೀ ಯಾರ್ರೀ ನೀವು? ಏನ್ ಮಾತನಾಡ್ತಿದ್ದೀರಾ? ಎನ್ನುವನು. ಅದಕ್ಕೆ ಆತ ಲೋ ಮಗಾ ನಾನು ಕಣೋ ದರ್ಶನ. ನಾನೂ ಹತ್ತು ವರ್ಷಗಳ ಹಿಂದೆ ನಿನ್ನ ಸ್ಕೂಲಿನಲ್ಲೇ ಓದಿಬಂದವನು ಕಣೋ. ನಾನು ಕಥೆಗಾರ ಕಮ್ ನಿರ್ದೇಶಕ ನಿಮ್ಮಂತಹ ಧೈರ್ಯಶಾಲಿಗಳನ್ನ ಲೈವ್ ಶೂಟ್ ಮಾಡ್ತೀನಿ. ಎಷ್ಟು ಚೆನ್ನಾಗಿ ಬಂದಿದೆ ಗೊತ್ತಾ ನೋಡ್ತೀಯಾ ನಿನ್ನ ಸಾಹಸವನ್ನ? ಎನ್ನುವನು. ಹರೀಶ ದರ್ಶನನ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಗೋಡೆಗೊರಗಿ ಕುಳಿತು ಸುಮ್ಮನೆ ದಿಟ್ಟಿಸುತ್ತಿರುವನು. ಸರಿ ಅಲ್ಲೇ ಕೋತ್ಕೋ, ನೋಡು ಆ ಗೋಡೆ ಮೇಲೆ ಪ್ರೊಜೆಕ್ಷನ್ ಮಾಡ್ತೇನೆ ಎಂದು ಕೈಯಲ್ಲಿದ್ದ ಕ್ಯಾಮೆರಾದಿಂದ ಖಾಲಿ ಗೋಡೆಯ ಮೇಲೆ ಸೆರೆ ಹಿಡಿದಿದ್ದ ಹರೀಶನ ಕುಣಿಕೆಗೆ ಕತ್ತನ್ನಲಂಕರಿಸುವ ದೃಶ್ಯವನ್ನು ಸ್ಫುಟವಾಗಿ ಸೆರೆಹಿಡಿದಿದ್ದಾನೆ. ಹರೀಶನಿಗೆ ವಿಸ್ಮಯವೊಂದು ಕಡೆ, ನಾಚಿಕೆಯೊಂದು ಕಡೆ, ತನ್ನನ್ನೇ ಹಾಗೆ ನೋಡಲು ಹೇಸಿಗೆಯೊಂದು ಕಡೆ. ಸುಮ್ಮನೆ ತಲೆ ಬಗ್ಗಿಸಿ ಕೂರುವನು. ಆದರೆ ಈ ವ್ಯಕ್ತಿ ತನ್ನನ್ನು ಸೆರೆಹಿಡಿದಿದ್ದಾದರೂ ಹೇಗೆ ಎಂದು ತನ್ನ ತಲೆಯಲ್ಲಿ ಪ್ರಶ್ನೆ ಗಿರಿಗಿಟ್ಟಲೆ ಹೊಡೆಯುತ್ತಿದ್ದರೂ ಕೇಳುವ ಮನಸ್ಸು ಮಾಡದೆ ಸುಮ್ಮನೆ ಕುಳಿತುಕೊಳ್ಳುವನು. ಯಾರೀತ ದರ್ಶನ, ಎಲ್ಲಿಂದ ಬಂದನೀತ ಎಂದೆಲ್ಲಾ ತಲೆಯಲ್ಲಿ ಪ್ರಶ್ನೆ ಮೊಳಕೆಯೊಡೆಯುತ್ತಿದ್ದಂತೆಯೇ ದರ್ಶನ ಮತ್ತೆ ನಕ್ಕು. ಇಲ್ಲಿ ನೋಡು ಮಗಾ ಹಗ್ಗಾ ನಿನ್ನ ಕತ್ತಿನಲ್ಲಿ ಹೇಗೆ ಸುಂದರವಾಗಿ ಅಲಂಕರಿಸಿದೆ ಎಂದು ಮತ್ತೆ ಮತ್ತೇ ಅದನ್ನೇ ಖಾಲಿ ಗೋಡೆಯ ಪರದೆಯ ಮೇಲೆ ತೋರಿಸಿ ಬಾಯಗಲಿಸುವನು. ಮಗಾ ನಿನಗೆ ಗೊತ್ತಾ ನಾನು ನನ್ನ ಕ್ಲಾಸಿಗೇ ಮೊದಲ ರಾಂಕ್ ತೊಗೊಂಡಿದ್ದೇ! ಆದರೆ ಮಜಾ ಕೇಳು ನಮ್ಮಪ್ಪ ನಮ್ ತಾತಾ ಏನು ದುಡಿದಿದ್ರೋ ಅದರಲ್ಲಿ ಕಾಲು ಭಾಗ ದುಡಿಯೋಕೆ ನನ್ನ ಕೈಲಿ ಸಾಧ್ಯವಾಗಿಲ್ಲ. ಹ ಹ ಹ ಹ.. ನಮ್ಮಪ್ಪ ಏಳನೇ ಕ್ಲಾಸು ಎರಡು ಸಲ ಡುಮ್ಕಿ, ನಮ್ ತಾತಾ ಒಂದನೇ ಕ್ಲಾಸಿಗೆ ನಮಸ್ಕಾರ ಹೊಡೆದು ಹೊಟೇಲೊಂದನ್ನ ಇಟ್ಟಿದ್ರಂತೆ. ಹಿ ಹಿ ಹಿ… ನಾನು ಡಬ್ಬಲ್ ಡಿಗ್ರೀ ಮಾಡ್ದೆ. ನಾನು ಮಾಡ್ತಿದ್ದ ಕೆಲಸ ನೋಡಿ ನಮ್ಮ ತಾತ ನನ್ನನ್ನ ರೇಗಿಸೋಕೆ ಶುರುಮಾಡಿದ್ರು, ತಾನೇ ಇನ್ನೂ ಒಳ್ಳೆಯ ಕೆಲಸ ಕೊಡ್ತಿದ್ದೆನಲ್ಲೋ ಅಂತ. ಅವೆಲ್ಲಾ ಬಿಡು ನಾನೇನು ನಿನಗೆ ನೀತಿ ಹೇಳೋಕೆ ಬಂದಿಲ್ಲಪ್ಪಾ. ನೀನು ಮಾಡಿರೋ ಕೆಲಸ ಸರಿಯಾಗೇ ಇದೆ. ಹೇಯ್ ಅಂದ ಹಾಗೆ ನೀನು ಯಾವುದಾದರೂ ಹುಡುಗಿಯನ್ನ ಪ್ರೀತಿ ಮಾಡಿದ್ಯಾ? ಎಂದು ಪ್ರಶ್ನಿಸಿ ಕ್ಯಾಮೆರಾ ಹರೀಶನಿಗೆ ಝೂಮ್ ಹಾಕುವನು. ಹರೀಶ ಸುಮ್ಮನೆ ತಲೆ ಎತ್ತಿ ದುರುಗುಟ್ಟುವನು. ದರ್ಶನ ಮತ್ತೆ ಹಲ್ಲು ತೋರಿಸುತ್ತಾ ಹೇಯ್ ಹೇಳೋ ಮಗಾ ಲವ್ ಮಾಡಿದ್ಯಾ? ನಾಚ್ಕೋಬೇಡ ಹೇಳೋಲೇ ಎಂದೆಲ್ಲಾ ಪೀಡಿಸಿದ್ದಕ್ಕೆ ಹರೀಶ ಸುಮ್ಮನೆ ಇಲ್ಲವೆಂಬಂತೆ ತಲೆಯಲ್ಲಾಡಿಸುವನು. ಹೋsssssss..ಹ ಹ ಹಹ ಹ.. ಎಂದು ದೀರ್ಘವಾಗಿ ಅಸಹ್ಯವಾಗಿ ನಗುವನು ಹರೀಶ ಮಾಮೂಲಿನ ದಿನಗಳಲ್ಲಾಗಿದ್ದರೆ ಕಪ್ಪಾಳೆಗೆ ಹೊಡೆದುಬಿಡುತ್ತಿದ್ದನು ಹೀಗೆ ಅವಮಾನಿಸುವ ಹಾಗೆ ನಕ್ಕಿದ್ದಲ್ಲಿ. ಅಲ್ವೋ ಮಾರಾಯ ನೀನು ಪ್ರಪಂಚದಲ್ಲಿ ಏನು ನೋಡಿದ್ಯಾ ಹಾಗಿದ್ರೆ. ನಾನು ಮೂರು ಮೂರು ಸಲ ಪ್ರೀತಿ ಮಾಡಿದ್ದೀನಿ ಗೊತ್ತಾ ನಿನಗೆ. ನಿಜವಾದ ಪ್ರಪಂಚ ದರ್ಶನವಾಗೋದೇ ಸ್ಕೂಲು ಕಾಲೇಜು ಮುಗಿದ ನಂತರ ಕಣೋ ಗೊತ್ತಿರಲಿಲ್ವಾ ನಿನಗೆ? ಎಂದು ಮತ್ತಷ್ಟು ನಗುವನು. ಹರೀಶನಿಗೆ ಕಿರಿಕಿರಿಯಾಗಿ ನೀನು ನಗುವುದನ್ನ ನಿಲ್ಲಿಸುತ್ತೀಯ ಇಲ್ಲಾ ನಿನ್ನ ತಲೆ ಒಡೆದು ಹಾಕಲೋ ಇವಾಗ ಎನ್ನುವನು. ಅದಕ್ಕಿದ್ದು ದರ್ಶನ ಥಟ್ಟನೆ ಹಲ್ಲುಗಳನ್ನ ಬಾಯೊಳಗೆಳೆದುಕೊಂಡು ಆಯ್ತಾಯ್ತು ಬಿಡಪ್ಪಾ ಎಂದು ಸುಮ್ಮನಾಗುವನು.

ಕೊಂಚ ಸಮಯ ಕ್ಯಾಮೆರಾದಲ್ಲಿ ಏನೇನೋ ರಿವೈಂಡ್ ಮಾಡುತ್ತಾ ಆಗಾಗ ಕದ್ದು ಕದ್ದು ಹರೀಶನೆಡೆಗೆ ನೋಡುವನು ಹರೀಶ ಸುಮ್ಮನೆ ಮೊಣಕಾಲ ಚಿಪ್ಪಿನಲ್ಲಿ ಮುಖ ಹುದುಗಿಸಿ ಸುಮ್ಮನೆ ಕೂತಿರುವನು. ದರ್ಶನ ಕೆಮ್ಮಿ ಶಬ್ಧ ಮಾಡಿದರೂ ಏನೂ ಪ್ರತಿಕ್ರಿಯೆಯಿಲ್ಲ. ಹಾಗೇ ಖಾಲಿ ಗೋಡೆಯ ಮೇಲೆ ಏನೇನೋ ವಿಡಿಯೋಗಳನ್ನು ಪ್ರೊಜೆಕ್ಟ್ ಮಾಡುತ್ತಾ ವಿಡಿಯೋಗಳನ್ನು ರಿವೈಂಡ್ ಮಾಡುತ್ತಿರಲು ಯಾವುದೋ ಹುಡುಗಿಯ ಬಾಯಿಯಿಂದ ವಿಷವು ಬಾಟಲಿಗೆ ವಾಪಾಸು ಹೋಗುವುದು, ಕಣ್ಣೀರು ಕೆನ್ನೆಯಿಂದ ಕಣ್ಣಿಗೆ ವಾಪಾಸು ಏರುವುದು ಚಿಕ್ಕ ಬಾಟಲಿಯ ಮುಚ್ಚುಳವನ್ನು ಮುಚ್ಚುವಳು. ದರ್ಶನ ಅದನ್ನು ನೋಡುತ್ತಾ ಆನಂದಿಸುತ್ತಾ ಇನ್ನೂ ವೇಗವಾಗಿ ರಿವೈಂಡ್ ಮಾಡುವನು. ಒಬ್ಬ ತನ್ನ ವಯಸ್ಸಿನವನೇ ಹರಿದ ಬನಿಯನ್ನಿನ ನೆಲಕ್ಕುರುಳಿದ್ದ ಹುಡುಗನೊಬ್ಬನ ಹರಿದ ಕೈಯ ನರದೊಳಕ್ಕೆ, ನೆಲಕ್ಕೆ ಚೆಲ್ಲಿದ್ದ ಕೆಂಪು ರಕ್ತವು ಸರ್ರರ್ರನೆ ಒಳನುಗ್ಗುವುದು. ನೆಲಕ್ಕುರುಳಿದ್ದವನು ಎದ್ದು ಚಾಕು ಕೈಯಲ್ಲಿ ಹಿಡಿಯುವನು. ಹರೀಶನೂ ಓರೆಗಣ್ಣಿನಲ್ಲಿ ಗೋಡೆಯ ಕಡೆಗೆ ನೋಡುತ್ತಿರುವುದನ್ನು ಕಂಡು ಇನ್ನಷ್ಟು ನುಂಗಿದ್ದ ಮಾತ್ರೆ ಹೊರಬರುವ, ರೈಲಿನ ಹಳಿಯ ಮೇಲೆ ಛಿದ್ರವಾಗಿದ್ದವ ಎದ್ದು ನಿಲ್ಲುವುದು, ಬೆಟ್ಟದ ಮೇಲೆಕ್ಕೆ ಉಲ್ಟಾ ಜಿಗಿಯುವುದನ್ನು ತೋರಿಸುತ್ತಾ ಹೇಯ್ ಹರಿ ಇದು ನೋಡೋ, ಅದು ನೋಡೋ ಎಂದು ಗಂಭೀರವಾಗೇ ನೋಡುತ್ತಲಿದ್ದ ಹರೀಶನಿಗೆ ತೋರಿಸುತ್ತಾ ದರ್ಶನ ತಾನು ಮಾತ್ರ ನಗುತ್ತಲಿರುವನು. ಅಷ್ಟರಲ್ಲಿ ಯಾರೋ ಕಾಲು ಕಾಲಿನಲ್ಲಿ ಒದೆಸಿಕೊಳ್ಳುತ್ತಿರುವ ಹುಡುಗನ ದೃಶ್ಯವೊಂದು ಬರುತ್ತದೆ. ತಕ್ಷಣ ರಿವೈಂಡ್ ನಿಲ್ಲಿಸಿ ಸ್ಥಗಿತಗೊಳಿಸಿ ದರ್ಶನ ಮತ್ತೆ ಹಲ್ಲುಬಿಡುವನು. ಹ ಹ ಹ ಇವನು ಯಾರು ಗೊತ್ತಾ, ನನ್ನ ಸ್ಕೂಲ್ ಸ್ನೇಹಿತ ಕಣೋ ಮಗಾ. ಇವನ ಕಥೆ ನೋಡು ಎಂದು ವಿಡಿಯೋ ಮುಂದುವರೆಸುವನು. ಒಬ್ಬ ಧಡೂತಿ ಹೊಟ್ಟೆ ಹೊತ್ತ ಮನುಷ್ಯನಿಂದ ಹಿಗ್ಗಾ ಮುಗ್ಗಾ ಥಳಿಸಿಕೊಳ್ಳುತ್ತಿರುವ ಸಣಕಲು ಹುಡುಗನನ್ನು ಕಂಡರೇ ನೋಡುವವರಿಗೆ ಮೊದಲಿಗೆ ಹಾಸ್ಯದೃಶ್ಯವೆನಿಸದೇ ಇರಲಾರದು.

ಮಗಾ ಅವನು ನನ್ನ ಸ್ಕೂಲ್ ಫ್ರೆಂಡು ಅವನ ಕಥೆ ಏನು ಗೊತ್ತಾ ಎ ಬಿ ಸಿ ಡಿ ಕೂಡ ಝಡ್ ವರೆಗೂ ಬರೆಯೋಕೆ ಬರುತ್ತಿರಲಿಲ್ಲ ಅವನಿಗೆ ಎಲ್ಲಾ ಪರೀಕ್ಷೆನಲ್ಲೂ ಸೊನ್ನೆ, ಎರಡು ಹೆಚ್ಚೆಂದರೆ ಐದು ಕನ್ನಡದಲ್ಲಿ ಹ ಹ ಹ. ಪ್ರತೀ ಬಾರಿ ಮಾರ್ಕ್ಸ್ ಕಾರ್ಡ್ ಹಿಡಿದು ಅಪ್ಪನ ಮುಂದೆ ನಿಲ್ಲುತ್ತಲಿದ್ದ ಅವನಪ್ಪ ಮಿಲ್ಟ್ರೀ ನಿವೃತ್ತನಾಗಿದ್ದರಿಂದ ಗನ್ ಇರಲಿಲ್ಲವೇನೋ ಇದ್ದಿದ್ದರೆ ಢಮಾರ್ ಎನಿಸಿಬಿಡುತ್ತಿದ್ದ. ಪ್ರತಿಬಾರಿಯೂ ರೊಟ್ಟಿ ತಟ್ಟಿದ ಹಾಗೆ ತಟ್ಟುತ್ತಿದ್ದ ಇವನನ್ನ. ಈಗ ರೋಡುಗಳಲ್ಲಿ ಹೋರ್ಡಿಂಗ್ಸ್ ನಲ್ಲಿ ಜಾಹೀರಾತುಗಳು ಕಾಣಿಸುತ್ತಾವಲ್ಲಾ ಅಂಥಾ ಎಷ್ಟೋ ಹೋರ್ಡಿಂಗ್ಸ್ ಇಟ್ಟುಕೊಂಡಿದ್ದಾನೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಟರ್ನೋವರ್ ಇದೆ. ಆದರೆ ಒಂದು ವಿಷಯ ಗೊತ್ತಾ ಇವತ್ತಿಗೂ ಹತ್ತನೇ ತರಗತಿಯ ಪರೀಕ್ಷೆ ಕಟ್ಟುತ್ತಲೇ ಇದ್ದಾನೆ ಅವನ ದಂಡ ಯಾತ್ರೆ ಮುಗಿಯಲ್ಲ ಅವನು ಸಮಾಜ ಶಾಸ್ತ್ರ ಪಾಸು ಮಾಡಲ್ಲಾ ಹ ಹ ಹ ಹ ಹ ಹ ಹ ಎಂದು ಗಹಗಹಿಸಿ ನಗುವನು. ಹರೀಶ ಬಾಯಿ ಕಳೆದು ಖಾಲಿ ಗೋಡೆಯನ್ನೇ ನೋಡುತ್ತಲಿರುವನು. ಇಬ್ಬರೂ ಥಟ್ಟನೆ ಮಾಯವಾಗಿಬಿಡುವರು.
* * * * *
ಆಸ್ಪತ್ರೆಯಲ್ಲಿ ತುರ್ತುಚಿಕಿತ್ಸೆ ವಾರ್ಡಿನಿಂದ ಹೊರಗೆ ಬರುತ್ತಿದ್ದ ಡಾಕ್ಟರನ್ನು ಹರೀಶನ ತಂದೆ ತಾಯಿಗಳು ತಡೆದು ಬಿಕ್ಕುತ್ತಲೇ ಹೇಗಿದ್ದಾನೆಂದು ಕೇಳುವರು. ಕರೆಂಟ್ ಟ್ರೀಟ್ಮೆಂಟ್ ಕೊಡುತ್ತಿರುವುದಾಗಿ ಈಗಲೇ ಏನೂ ಹೇಳಲಾಗುವುದಿಲ್ಲ, ದಯವಿಟ್ಟು ತಾಳ್ಮೆಯಿಂದಿರಿ ನಮ್ಮ ಕೈಲಾದ ಪ್ರಯತ್ನ ನಾವು ಮಾಡ್ತೇವೆ ಎಂದು ನಿಲ್ಲದೇ ಹೊರಗೆ ನಡೆಯುವರು. ಬಿಳಿಬಟ್ಟೆಯಲ್ಲಿ ಅರ್ಧ ಮುಚ್ಚಿದ್ದ ಹರೀಶನ ದೇಹವು ಕತ್ತಿನ ಸುತ್ತ ಬಂದಿದ್ದ ಕಪ್ಪು ಕಲೆಯೊಂದಿಗೆ ಜೀವನ ರೇಖೆ ನೇರವಾಗುವುದು ವಕ್ರವಾಗುವುದು ಹಾಗೇ ಸಾಗುತ್ತಲಿದೆ. ಆಗಾಗೊಮ್ಮೆ ಕೈ ಬೆರೆಳುಗಳನ್ನ ಅಲುಗಿಸುತ್ತಾನೆ. ಕೋಮಾಗೆ ಹೋಗಿರಬಹುದೆಂದು ನರ್ಸ್ ಗಳು ಮಾತನಡಿಕೊಳ್ಳುವರು. ವಿಶೇಷಜ್ಞರು ಬರುವವರೆಗೂ ಜೀವ ಹೋಗದಿದ್ದರೆ ಸಾಕೆಂದು ಆಸ್ಪತ್ರೆಯ ಸಿಬ್ಬಂದಿಯೂ ಕೇಳಿಕೊಳ್ಳುತ್ತಿಹರು. ಎದೆ ಬಡಿತ, ದೇಹದೊಳ ಆಗಿರಬಹುದಾದ ರಕ್ತ ಸ್ರಾವವನ್ನೆಲ್ಲಾ ಪರೀಕ್ಷೆಗೆ ಒಳಪಡಿಸಿ ರಿಪೋರ್ಟಿಗಾಗಿ ಕಾಯುತ್ತಿರುವ ವೈದ್ಯರ ಮುಖ ಮುಖ ನೋಡುತ್ತಾ ಕಣ್ಣೊರೆಸಿಕೊಳ್ಳುತ್ತಿರುವ ಹರೀಶನ ಅಪ್ಪ ಅಮ್ಮ. ಹರೀಶ ಮತ್ತು ದರ್ಶನ ಮತ್ತದೇ ರೂಮಿನಲ್ಲಿ ಕ್ಯಾಮೆರಾದೊಂದಿಗೆ ಪ್ರತ್ಯಕ್ಷರಾಗುತ್ತಾರೆ!







ನೀ.ಮ. ಹೇಮಂತ್

Wednesday 16 May 2012

ದೇವರಂಗಡಿ ಎತ್ತಂಗಡಿಯಾದಾಗೊಮ್ಮೆ!


       ದುಗರೇ ಇದು ಒಂದು ಕಥೆ. ಈ ಕಥೆ ನಡೆಯುವುದು ಒಂದು ಊರಲ್ಲಿ. ಈ ಊರಿನ ಹೆಸರು ಬೆಂಗಳೂರು! ಓಹ್ ನೀವಿರುವ ಊರಲ್ಲ ಬಿಡಿ. ಈ ಕಥೆಯಲ್ಲಿ ಬರುವ ಊರಿನ ಹೆಸರೂ ಬೆಂಗಳೂರಷ್ಟೇ! ಇಲ್ಲಿರುವ ಜನರೂ ಥೇಟ್ ನಿಮ್ಮಂತಹ ಜನರೇ. ಇವರುಗಳೂ ಸಹ ತಾವು ಹಾಕುವ ಬಟ್ಟೆ, ತಮ್ಮ ಹಣೆ, ಕೈಬೆರಳುಗಳು, ದಾಡಿ, ಕೂದಲು, ಮತ್ತು ಧರಿಸುವ ಬಟ್ಟೆ, ಟೊಪ್ಪಿಗೆಗಳಿಂದ ಜಾತಿ ಮತ್ತು ತಮ್ಮ ಆರಾಧ್ಯ ದೈವಗಳನ್ನು ಗುರುತಿಸುವಂತಹವರು. ಉಪ್ಪು ತಿಂದ ಮೇಲೆ ನೀರು ಕುಡಿಯುವಂಥವರು, ಊಟ ಮಾಡಿದ ಮೇಲೆ ತೇಗುವಂಥವರು. ನಾನೊಬ್ಬ ಪುಡಿ ಕಥೆಗಾರ. ನನಗೊಂದು ವಿಚಿತ್ರ ಅಭಿಲಾಷೆ. ಹೇಗೋ ಇದ್ದ ಊರಿನಲ್ಲಿ ದೇವರ ಅಸ್ತಿತ್ವವನ್ನು ಸಾರುವ ಎಲ್ಲ ದೇವಸ್ಥಾನಗಳನ್ನು, ಮಸೀದಿಗಳನ್ನು, ಇಗರ್ಜಿಗಳನ್ನು ಇತರೆ ಇತರೆಗಳನ್ನು ರಾತ್ರಿ ಕಳೆದು ಬೆಳಗಾಗುವುದರೊಳಗೆ ತೆರವುಗೊಳಿಸಿ ಅದೇ ಜಾಗದಲ್ಲಿ ಉದ್ಯಾನವನ, ಹೊಟೇಲು, ಇನ್ನೊಂದು ಮತ್ತೊಂದನ್ನು ತೆರೆದು ಮಾರನೆಯ ಬೆಳಗ್ಗೆ ಜನರ ಪ್ರತಿಕ್ರಿಯೆಗಾಗಿ ಕಾಯುತ್ತಿರುವೆನು. ಇಂತಹ ಒಂದು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸುವರು. ನಮ್ಮ ಕಥೆಯಲ್ಲಿನ ಬೆಂಗಳೂರಿನ ಜನ ಏನು ಮಾಡುವರು ಎಂಬುದೇ ಮುಂದಿನ ಕಥೆ.

ಮಾಮೂಲಿನಂತೆ ಬೆಳಗ್ಗಿನ ಪೂಜೆಯ ತಯಾರಿಗೆಂದು ಎದ್ದು ಬಂದ ದೇವರ ಸ್ವಯಂಸೇವಕರು ತಮ್ಮ ಆಫೀಸು ಉರುಫ್ ದೇವಸ್ಥಾನದ ಜಾಗದಲ್ಲಿ ಹೋಟೇಲೊಂದನ್ನು ಕಂಡು, ಬೆಳಗ್ಗಿನ ಉಪಹಾರಕ್ಕಾಗಿ ತಿಂಡಿ ತಯಾರಾಗುತ್ತಿರುವುದನ್ನು ಕಂಡು ಹೌಹಾರಿ ದಾರಿ ತಪ್ಪಿ ಬಂದಿಲ್ಲವಷ್ಟೇ ಎಂದು ಖಾತ್ರಿಪಡಿಸಿಕೊಂಡು ಸುತ್ತ ಮುತ್ತ ಇದ್ದ ಸೈಕಲ್ ಶಾಪು, ಬೇಕರಿ, ಎಲ್ಲ ಅಂಗಡಿಗಳೂ ಇದ್ದಲ್ಲೇ ಇವೆ ದೇವಸ್ಥಾನ ಮಾತ್ರ ಕಾಣೆಯಾಗಿದೆ. ಅರೆ! ಏನೂ ಅರ್ಥವಾಗದೆ ತಲೆ ಕೆರೆದುಕೊಂಡು, ಮತ್ತೆ ಮತ್ತೆ ಬಂದ ಹಾದಿ ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿ ತಬ್ಬಿಬ್ಬಾಗಿ ತಾನು ಇಷ್ಟು ವರ್ಷಗಳು ಪೂಜೆ ಮಾಡುತ್ತಾ ಬಂದಿರುವ ದೇವಸ್ಥಾನ ಎಲ್ಲಿ ಹೋಗಲು ಸಾಧ್ಯ ಅದೂ ಕೂಡ ರಾತ್ರೋ ರಾತ್ರಿ! ದಿಗ್ಭ್ರಾಂತರಾಗಿ ಅರ್ಧ ಬಾಗಿಲು ಮುಚ್ಚಿದ್ದ ಹೋಟೆಲೊಳಗೆ ಇಣುಕುವಷ್ಟರಲ್ಲಿ ರೀ ಸ್ವಾಮಿ ಇನ್ನೂ ತಿಂಡಿ ರೆಡಿ ಆಗಿಲ್ಲ ಎಂಬ ಮಾತನ್ನು ನಿರ್ಲಕ್ಷಿಸಿ ಪೆದ್ದು ಪೆದ್ದಾಗಿ ಇಲ್ಲಿ ದೇವಸ್ಥಾನವಿತ್ತಲ್ಲಾ, ಏನಾಯ್ತು? ಎಂದು ಕೇಳುತ್ತಾ ತಮಗೇ ಮೂರ್ಖ ಪ್ರಶ್ನೆ ಎನಿಸಿ ಗ್ರೈಂಡರ್ ಶಬ್ಧಕ್ಕೆ ಕೇಳಿಸದೇ ಕೆಲಸದವನು ಏನಂದ್ರೀ ಎಂದು ಮರುಪ್ರಶ್ನಿಸಲು ಏನಿಲ್ಲ ಎಂದು ಹೊರಗೆ ಬರುವರು. ಬೆಳಕು ಹರಿಯುತ್ತಿದ್ದಂತೆಯೇ ಭಕ್ತ ಸಮೂಹ ಒಂದೊಂದೇ ನಿನ್ನೆ ದೇವಸ್ಥಾನವಿದ್ದ ಸ್ಥಳಕ್ಕೆ ಬಂದವರು ಬಾಯ ಮೇಲೆ ಬೆರಳಿಟ್ಟು, ಬೆಳಗ್ಗೆ ಬೆಳಗ್ಗೆಯೇ ತಲೆಕೆಡಿಸಿಕೊಂಡು ಹಿಂದಿರುಗುವರು. ಹೋಟೆಲಿನವನಿಗೂ ಆಶ್ಚರ್ಯ. ಇದೇನು ಜನ ಬಂದು ಹೋಟೆಲನ್ನು ಹೊರಗಿನಿಂದ ನೋಡಿಕೊಂಡು ಹಾಗೇ ಹೋಗುತ್ತಿದ್ದಾರಲ್ಲಾ ಎಂದು. ಇನ್ನೊಂದು ಕಡೆ ಬೆಳಗ್ಗೆ ಐದಕ್ಕೆ ಅಲಾರ್ಮಿನಂತೆ ಕೂಗಬೇಕಿದ್ದ  ಅಲ್ಲಾಹು ಇವತ್ತು ಕೂಗದೇ, ಅವಲಂಬಿಸಿದ್ದ ಹಲವರು ತಡವಾಗಿ ಎದ್ದು ವಿಸ್ಮಿತರಾಗಿದ್ದವರು ಟಿವಿಯಲ್ಲಿ ಆಗಲೇ ಬೆಂಗಳೂರಿನ ಸಕಲೆಡೆಗಳಲ್ಲಿ ಜನರು ನೆರೆದು ದೇವಸ್ಥಾನಕ್ಕೆ ದೇವಸ್ಥಾನವೇ ಕಳುವಾಗಿರುವ ಭಯಾನಕ ಘಟನೆಗೆ ತಮ್ಮದೇ ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದನ್ನು ಕಂಡು ಅಲ್ಲಾಹು ಕೂಗದಿದ್ದ ಕಾರಣ ತಿಳಿದುಕೊಳ್ಳುವರು. ನಗರದೆಲ್ಲೆಡೆಯೂ ಅದೇ ಚರ್ಚೆ.

ದೇವರ ಸೇವಕರೊಬ್ಬರು ಆತ್ಮಹತ್ಯೆ ಮಾಡಿಕೊಂಡರೆಂಬ ಸುದ್ದಿ ಒಂದು ಕಡೆ ಬಂದರೆ, ಇನ್ನೊಂದು ಕಡೆ ಮಂದಿರದ ಜಾಗದಲ್ಲಿ ಧಿಡೀರನೆ ಎದ್ದಿರುವ ಕಾಂಪ್ಲೆಕ್ಸ್ ಮೇಲೆ ಹಲ್ಲೆಯಾಗುತ್ತಿದೆಯೆಂಬುದೊಂದು ಸುದ್ದಿ, ಎಲ್ಲೋ ಧಂಗೆ, ಇನ್ನೆಲ್ಲೋ ಗಲಾಟೆ, ಇನ್ನೆಲ್ಲೋ ರೋಧನ, ಇನ್ನೆಲ್ಲೋ ಸರ್ಕಾರ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲವೆಂದು ವಿರೋಧಪಕ್ಷವೂ ಸೇರಿಕೊಂಡು ಜಾಥಾ ಹೊರಡಿರುವರು. ಹೀಗೇ ಹತ್ತು ಹಲವು ರೀತಿಯಲ್ಲಿ ಮಾಧ್ಯಮದವರೂ ಚುರುಕಾಗಿ ಸೆರೆಹಿಡಿಯುತ್ತಿರುವರು. ಜನರು ಈ ದೇವಸ್ಥಾನಗಳ, ಪ್ರಾರ್ಥನಾ ಮಂದಿರಗಳ ಕಳವಿನ ಬಗ್ಗೆ ಪ್ರತಿಕ್ರಿಯಿಸುವುದೋ ಕ್ಷಣ ಕ್ಷಣಕ್ಕೂ ವರ್ಣರಂಜಿತವಾಗಿ ಬಿತ್ತರವಾಗುತ್ತಿರುವ ಸುದ್ದಿಗಳನ್ನು ತಮ್ಮ ಕುತೂಹಲದ ಹಸಿವು ತೀರಿಸಲೋಸುಗ ಟಿವಿ ಮುಂದೆಯೇ ಕೂರುವುದೋ ಅರ್ಥವಾಗದೇ ಗೊಂದಲಕ್ಕೊಳಗಾಗಿರುವರು. ಹೀಗಿರುವಾಗಲೇ ಪ್ರಸಿದ್ಧ ಮನುಷ್ಯನೋರ್ವನ ಮನೆಯ ದೇವರ ಕೋಣೆಯಲ್ಲಿ ಹಠಾತ್ ಒಂದು ವಿಗ್ರಹ ಕಾಣಿಸಿಕೊಂಡಿರುವುದಾಗಿ ಊರ ಜನರೆಲ್ಲಾ ದರ್ಶನ ಪಡೆದು ಬರಲು ಶುರುಮಾಡಿರುವರು. ಮತ್ತೊಂದು ಕಡೆ ವಿಗ್ರಹವೊಂದನ್ನು ರಸ್ತೆಯಲ್ಲೇ ಪ್ರತಿಷ್ಠಾಪಿಸಿ ಅದಕ್ಕೇ ಪೂಜೆ ಮಾಡುತ್ತಾ ತಮ್ಮ ದಿನದ ಗಳಿಕೆಯನ್ನು ಪಡೆಯುತ್ತಿರುವ ಹಲವು ಸಮಯಪ್ರಜ್ಞೆಯಿರುವ ಬುದ್ದಿಜೀವಿಗಳು. ಹೀಗೇ ನಾಟಕ ಹತ್ತು ಹಲವು ತಿರುಗಳನ್ನು ಪಡೆದುಕೊಳ್ಳುತ್ತಿದ್ದಂತೆ. ಕೆಲಸ ಕಳೆದುಕೊಂಡು ಭ್ರಹ್ಮಾಂಡದಂತಹ ಹೊಟ್ಟೆಯನ್ನು ತುರಿಸಿಕೊಳ್ಳುತ್ತಾ ಕಾಲವ್ಯಯ ಮಾಡುತ್ತಿದ್ದವರೆಲ್ಲಾ ವಿನಾಶದ ಕಾಲ ಹತ್ತಿರ ಬಂದಿದೆ, ಇನ್ನು ಪ್ರಳಯ ನಿಶ್ಚಿತ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಜನರಲ್ಲಿ ಭಯೋತ್ಪಾದನೆ ಮಾಡಿ, ತಮ್ಮ ಸಾವು ಹೇಗಾಗುತ್ತದೆಂದು ಕ್ಯೂ ನಿಂತು ಕೇಳಬಂದವರಿಂದೆಲ್ಲಾ ಚಿನ್ನ ಪಡೆದು ಜಲಪ್ರಳಯ, ಅಗ್ನಿ ಅನಾಹುತ, ಭೂಕಂಪ, ಕಟ್ಟಡ ಕುಸಿತ ಹೀಗೇ ನಾನಾ ರೀತಿಯ ಸಾವಿನ ದರ್ಶನ ಮಾಡಿಸುವರು. ಹೀಗೇ ನಾಟಕ ಹಲವು ತಿರುವುಗಳನ್ನು ಪಡೆಯುತ್ತಾ ಲಾಭ ಮಾಡಿಕೊಳ್ಳುವವರು ಸಮಯೋಚಿತವಾಗಿ ವರ್ತಿಸುತ್ತಾ, ಹೆದರಿದ್ದವರು ಹೆದರಿ ಚಿಂತಿಸುತ್ತಾ, ಮುಕ್ಕಾಲು ವಾಸಿ ಜನ ಮಾಮೂಲಿನಂತೆ ಸುದ್ದಿಗಳನ್ನು ಕಾಲಕಾಲಕ್ಕೆ ಪಡೆದುಕೊಳ್ಳುತ್ತಾ ದುಡಿಯುತ್ತಿಹರು.

ಎಲ್ಲರ ಮುಖಗಳಲ್ಲೂ ಪ್ರಶ್ನೆಗಳು, ಪ್ರಶ್ನೆಗಳು, ಉತ್ತರ ಕಾಣದ ಪ್ರಶ್ನೆಗಳಷ್ಟೇ. ಹಾಗಾದರೆ ದೇವರುಗಳು ಭೂಮಿಯಿಂದ ಹೊರಟು ಹೋದರಾ? ಪ್ರಳಯ ನಿಶ್ಚಿತಾನಾ? ಆದರೆ ಯಾವುದೇ ರೀತಿಯ ಪ್ರಳಯದ ಮುನ್ಸೂಚನೆ ಯಾಕಿಲ್ಲ? ಇನ್ನು ಮುಂದೆ ಪೂಜೆ ಮಾಡುವುದಾದರೂ ಯಾರನ್ನ? ದೇವಸ್ಥಾನಗಳೇ ಇಲ್ಲದ ಮೇಲೆ ಮನೆಯಲ್ಲಿರುವ ದೇವರ ಚಿತ್ರಗಳು, ಮೂರ್ತಿಗಳಲ್ಲಿ ದೇವರಿರಲು ಸಾಧ್ಯಾನಾ? ಮಹೋರಗಗಳು, ಇನ್ನೆಷ್ಟೋ ಜೀವಸಂಕುಲಗಳು ಇತ್ತು ಎನ್ನುವ ಹಾಗೆ ದೇವರುಗಳೂ ಇದ್ದರು ಎಂದು ಹೇಳಬೇಕಾದೀತಾ? ದೇವರುಗಳು ಎಂಬುದೊಂದು ನಂಬಿಕೆ ಎಂದಾದರೆ, ನಂಬಿಕೆಯೇ ಜೀವನವೆಂದಾದರೆ, ದೇವರುಗಳ ಜಾಗದಲ್ಲಿ ಮತ್ತೇನು ಬರಬಹುದು? ಕೋಟ್ಯಾಂತರ ಜೀವರಾಶಿಗಳಲ್ಲಿ ದೇವರು ಎಂಬುವನೊಬ್ಬನಿದ್ದದ್ದು ಮನುಷ್ಯರಿಗೆ ಮಾತ್ರ ಈಗ ನಾವೂ ಎಲ್ಲಾ ಜೀವರಾಶಿಗಳಲ್ಲಿ ಒಂದಾಗುತ್ತಿರುವೆವಾ? ಮುಂದೇನು? ಏನೇ ಆದರೂ ಒಂದು ಕಾರಣವಿರುತ್ತದೆ ಎಂದಾದರೆ ದೇವಸ್ಥಾನಗಳು ಕಣ್ಮರೆಯಾಗಲು ಏನಾದರು ಕಾರಣವಿರಬಹುದಾ? ಪ್ರಳಯವಲ್ಲದಿದ್ದರೂ ಯಾವುದಾದರೂ ದೊಡ್ಡ ಗಂಡಾಂತರವೇ ಕಾದಿರಬಹುದಾ? ಇಂಥವೇ ಸಹಸ್ರ ಸಹಸ್ರ ಪ್ರಶ್ನೆಗಳನ್ನು ಹೊತ್ತ ಮುಖಗಳು. ಹೀಗಿರುವಾಗಲೇ ಸರ್ಕಾರದವರು ಬೇರೆಯವರ ತಲೆ ಉಪಯೋಗಿಸಿ ಪ್ರತಿಯೊಂದು ವಾರ್ಡಿಗೆ ಅವರವರ ನಂಬಿಕೆಳಿಗಾನುಸಾರ ಒಂದು ತಾತ್ಕಾಲಿಕ ದೇವಸ್ಥಾನಗಳನ್ನು ಕಟ್ಟಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಆಗಲೇ ಶುರುವಾದದ್ದು ಹೊಸ ಸಮಸ್ಯೆ. ತಮ್ಮ ದೇವರನ್ನು ಪ್ರತಿಷ್ಠಾಪಿಸಬೇಕೆಂದು ಒಂದು ಜಾತಿಯವರು, ತಮ್ಮ ದೇವರನ್ನು ಪೂಜಿಸಬೇಕೆಂದು ಮತ್ತೊಬ್ಬರು. ಇಲ್ಲಿ ಮುಂಚಿನಿಂದ ಇದ್ದದ್ದು ತಮ್ಮ ದೇವರು ಅದನ್ನೇ ಪ್ರತಿಷ್ಠಾಪಿಸಬೇಕೆಂದು ಮಗುದೊಬ್ಬರು. ಇವರೆಲ್ಲರನ್ನು ವಿರೋಧಿಸಿ ತಮ್ಮ ಪ್ರಾರ್ಥನಾ ಮಂದಿರ ಬರಬೇಕೆಂದು ಇನ್ನೊಬ್ಬರು, ಅವರನ್ನು ವಿರೋಧಿಸುವವರು ಮತ್ತೊಬ್ಬರು. ಹೀಗೇ ಜಗಳ, ಗುಂಪು ಘರ್ಷಣೆಗಳು ನಡೆದು ವಿರೋಧ ಪಕ್ಷದವರು ಆಡಳಿತ ಪಕ್ಷದವರ ತಾತ್ಕಾಲಿಕ ದೇವಸ್ಥಾನಗಳ ಯೋಜನೆಯ ಮೇಲೆಯೇ ಗೂಬೆ ಕೂರಿಸಿ ಅಂತೂ ತಾತ್ಕಾಲಿಕ ದೇವಸ್ಥಾನಗಳ ನಿರ್ಮಾಣ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗುತ್ತದೆ. ತಿಂದರೆ ತಾವು ಮಾತ್ರ ತಿನ್ನಬೇಕು, ಇಲ್ಲವಾದಲ್ಲಿ ಎಲ್ಲರೂ ಹಸಿದುಕೊಂಡೇ ಇರೋಣ ಎನ್ನುವಂತಹ ಜನ ನಮ್ಮವರು.

ಜನರು ಸಾರ್ವಜನಿಕ ಮಂದಿರಗಳು, ಮಸೀದಿಗಳು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕೊಂಚ ಸಮಯವನ್ನೇ ಕಳೆದರೂ ಈಗ ಜೀವನ ಮತ್ತೇ ಮಾಮೂಲಿನಂತೆ ಸಾಗುತ್ತಿರಲು ಒಬ್ಬರ ಮನೆಯಲ್ಲಿ ದೊಡ್ಡ ಸ್ಪೀಕರ್ ಗಳನ್ನು ಹಾಕಿ ಪ್ರಾರ್ಥನೆಯನ್ನು ಜೋರಾಗಿ ಹಾಕಿ ಅಕ್ಕ ಪಕ್ಕದ ಮನೆಯವರನ್ನು ದಂಗು ಬೀಳಿಸುವರು. ಇದಕ್ಕೆ ವಿರುದ್ಧವಾಗಿ ಇನ್ನೊಂದು ಜಾತಿಯವರೂ ಸಹ ತಾವೇನು ಕಮ್ಮಿ ಎಂದು ತಮ್ಮ ಸ್ತೋತ್ರಗಳನ್ನೂ ಇನ್ನೂ ಜೋರಾಗಿ ಹಾಕಿ ಊರಿಗೆಲ್ಲಾ ಕೇಳುವಂತೆ ಹುಯಿಲೆಬ್ಬಿಸಿ ಎರಡೂ ಎದುರುಬದುರು ಮನೆಯಿಂದ ಹೊರಡುತ್ತಿದ್ದ ಗಲಾಟೆಯನ್ನು ತಡೆದುಕೊಳ್ಳುವಷ್ಟೂ ತಡೆದುಕೊಂಡ ಸುತ್ತ ಮುತ್ತಲ ಜನರು ಇಬ್ಬರನ್ನು ಹಿಡಿದು ಜಪ್ಪಿ ಈಗ ಇಡೀ ಊರು ಕೇರಿ ಮತ್ತೇ ಶಾಂತವಾಗಿರುವುದು. ಬೆಂಗಳೂರೆಂಬ ಕಥೆಯ ಊರಿನಲ್ಲಿ ಅದೇ ವಿಧ ವಿಧ ಜಾತಿಯ, ಆಚರಣೆಯ ಜನರೇ ಇದ್ದರೂ ಈಗ ಎಲ್ಲ ಆಚರಣೆಗಳೂ, ನಂಬಿಕೆಗಳೂ, ಆಚಾರ-ವಿಚಾರಗಳೂ, ಎಲ್ಲ ತಮ್ಮ ಮೂರು ಗೋಡೆ ಒಂದು ಬಾಗಿಲು ಎರಡು ಕಿಟಕಿಯಿರುವ ಮನೆಯ ಒಳಗಡೆಯೇ. ಹೊರಗೆ ಬಂದರೆ ಎಲ್ಲ ಒಂದೇ. ಈಗೀಗ ಇವನು ಈ ದೇವರನ್ನು ಪೂಜಿಸುವವನು, ಇವನು ಈ ದೇವಸ್ಥಾನಕ್ಕೆ ಹೋಗುತ್ತಿದ್ದವನು, ಇವನು ಇಂತಹ ನಂಬಿಕೆಯುಳ್ಳವನೆಂದು ವಿಂಗಡಿಸುವಲ್ಲಿಯೂ ಸಹ ಗೊಂದಲ ಉಂಟಾಗಿದೆ ಜನಕ್ಕೆ. ಮನೆಯ ಛಾವಣಿಯಡಿಯಲ್ಲಿ ಹೊಕ್ಕು ನೋಡಿದರೆ ತೋರಿಕೆಗಾಗಿ ಪರಿಪಾಲಿಸುತ್ತಿದ್ದ ಎಷ್ಟೋ ಜನರು ಈಗ ಮನೆಯ ಒಳಗಡೆಯೂ ತಮ್ಮ ಅಚರಣೆಯನ್ನು ನಿಲ್ಲಿಸಿದ್ದಾರೆ. ಆಹಾರ ವಿಧಾನಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಇಂಥವರು ಇಂಥದ್ದೇ ಆಹಾರ ಸ್ವೀಕರಿಸಬೇಕಿತ್ತೆಂದು ಪ್ರಶ್ನಿಸುವವರು ಯಾರೂ ಇಲ್ಲ. ಹಿಡಿಸಿದ್ದನ್ನು ತಿನ್ನುತ್ತಾ, ಎಲ್ಲರೊಂದಿಗೆ ಬೆರೆಯುತ್ತಾ, ಸಾರ್ವಜನಿಕ ಜೀವನದಲ್ಲಿ ಸಹಬಾಳ್ವೆಯಿಂದ ಇದ್ದಾರೆ. ಯಾರಿಗೂ ಯಾರ ವೈಯಕ್ತಿಕ ಜೀವನದ ಬಗ್ಗೆಯೂ ಆಸಕ್ತಿಯೂ ಇಲ್ಲ.

ಮೊದಲೇ ಕೆಲಸವಿಲ್ಲದ ದೇವರ ಸೇವಕರೆಲ್ಲಾ ಈ ಕಥೆಯಲ್ಲಿನ ಬೆಂಗಳೂರಿನಲ್ಲಿದ್ದರೆ ಉಳಿಗಾಲವಿಲ್ಲವೆಂದು ಅರಿತು ಬೇರೆ ಬೇರೆ ಊರುಗಳಿಗೆ ಹೋಗಿ ಅಲ್ಲಿ ತಮ್ಮ ಪ್ರತಿಭೆಯಿಂದ ಜೀವನೋಪಾಯಕ್ಕಾಗಿ ದಾರಿ ಮಾಡಿಕೊಳ್ಳೋಣವೆಂದು ಯೋಜನೆ ಹಾಕಿಕೊಂಡು ಹೋದರೆ, ಎಲ್ಲಿಯೂ ತಮ್ಮ ಕಾರ್ಯಾವ್ಯಾಪ್ತಿಯ ದೇವಸ್ಥಾನಗಳಾಗಲೀ, ಇನ್ನೊಂದು ಮತ್ತೊಂದಾಗಲೀ ಇಲ್ಲದಿರುವುದನ್ನು ಕಂಡು ತನ್ನ ಬದುಕು ಸಾಗಿಸಲು, ಹೊಟ್ಟೆ ಹೊರೆಯಲು ಬೇರೆ ದಾರಿಯೇ ಹಿಡಿಯಬೇಕಾದೀತೆಂದು ಹೊಸ ದಾರಿಯ ಅನ್ವೇಷಣೆಗೆ ತೊಡಗುವರು. ಈ ಮೊದಲು ವರ್ಷದ ಕೂಳೆಂಬಂತೆ ಮಂದಿರಗಳಲ್ಲಿ ದುಡಿಯುತ್ತಾ ಹರ್ಷದ ಕೂಳೆಂಬಂತೆ ಹಬ್ಬ ಹರಿದಿನ, ಮದುವೆ, ಮುಂಜಿ, ಶ್ರಾದ್ಧಗಳಂದು ದುಡಿದು ಹೋಗುತ್ತಿದ್ದವರು, ಈಗ ವರ್ಷದ ಕೂಳನ್ನು ಕಳೆದುಕೊಂಡು ಬಿಟ್ಟಿಯಾಗಿರುವಾಗ ಕೇವಲ ಹರ್ಷದ ಕೂಳನ್ನೆ ನೆಚ್ಚಿ ಬದುಕಿರುವಾಗ ಎಲ್ಲೋ ಒಂದೊಂದು ಸಮಾರಂಭಕ್ಕೆ ಆಹ್ವಾನ ಬಂದದ್ದೇ ನಾ ಮುಂದು ತಾ ಮುಂದು ಎಂದು ಸ್ಪರ್ಧೆ ಮಾಡಿ ಹೆಚ್ಚಿನ ಮೊತ್ತವನ್ನು ಬೇಡಿಕೆಯಿಡುವರು. ಅತ್ತ ಅಷ್ಟು ಮೊತ್ತವನ್ನು ಖರ್ಚು ಮಾಡಿ ಸಂಬಂಧಿಕರನ್ನೊಡಗೂಡಿ, ಈಗ ಹೆಚ್ಚಿರುವ ಸುತ್ತ ಮುತ್ತಲ ಸ್ನೇಹಿತವರ್ಗಕ್ಕೆ ಊಟ ಹಾಕಲಾಗದೇ ಎಷ್ಟೋ ಮನೆಗಳು ಅನಾವಶ್ಯಕ ಖರ್ಚಿನ ಸಮಾರಂಭಗಳನ್ನು ನಿಲ್ಲಿಸಿರುವರು. ಹೀಗೇ ಕ್ರಮೇಣ ಕೆಲಸ ಕಳೆದುಕೊಂಡು ವಲಸೆ ಹೋಗಿ ಅಲ್ಲೂ ಸೋತು ಜೀವನೋಪಾಯಕ್ಕಾಗಿ ಹಲವು ವಿದ್ಯಾಭ್ಯಾಸದ ಹಾದಿ, ಗೊತ್ತಿರುವ ಅಡುಗೆ ಕೆಲಸ ಹಾದಿ ಇತರೆ ಇತರೆ ಸೂಕ್ತವೆನಿಸಿದ ಉದರನಿಮಿತ್ತ ಹಾದಿ ಹಿಡಿದು ಮುಂದುವರೆಯುವರು. ಇನ್ನೂ ಸಮಾರಂಭಗಳನ್ನು ಏರ್ಪಡಿಸುವ ಮನಸ್ಸು ಮತ್ತು ಶಕ್ತಿಯಿದ್ದ ಕೆಲವರು ಆಚರಿಸಬೇಕೆಂದರೂ ಪೂಜೆ ಮಾಡಲು ಪ್ರತಿಭೆಯುಳ್ಳವರು ಸಿಗದೇ ಕ್ರಮೇಣ ಸಾರ್ವಜನಿಕ ಸಮಾರಂಭಗಳು, ಮದುವೆ, ಮುಂಜಿ, ತಿಥಿಯ ಆಚರಣೆಗಳು ಬೇರೆ ಬೇರೆ ರೂಪ ಪಡೆಯುತ್ತಾ ಸಾಗುವವು. ಮನಃಶಾಂತಿಗಾಗಿ ಮಾತ್ರ ದೇವಸ್ಥಾನಗಳಿಗೆ ಹೋಗುತ್ತಿದ್ದ ಕೆಲವರು ಈಗ ಅನಾಥಾಶ್ರಮಗಳಿಗೆ ಬೇಟಿ ಕೊಡುವುದು, ಸಮಾಜ ಸೇವೆಯಂತಹ ಮಾರ್ಗಗಳಲ್ಲಿ ಮನಕೆ ಶಾಂತಿ ಪಡೆಯುವರು. ಸಾರ್ವಜನಿಕ ದೇವರುಗಳು ಎತ್ತಂಗಡಿಯಾದಾಗಿನಿಂದ ತಾವೇ ಬದುಕುತ್ತಿರುವ ದೇವರುಗಳೆಂದು ಸ್ವಯಂಫೋಷಿಸಿಕೊಳ್ಳುತ್ತಾ ತಮ್ಮ ತಮ್ಮ ಧ್ಯಾನ ಮಂದಿರಗಳು, ಮಠಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುತ್ತಾ ಒಂದಷ್ಟು ಬಲಿಪಶುಗಳನ್ನು ಪಡೆದುಕೊಳ್ಳುವರು. ಕೇವಲ ತಮ್ಮ ಪಾಪನಿವೇದನೆಗೆ, ಪಾಪಪರಿಹಾರಾರ್ಥ ದುಡ್ಡು ಕೊಟ್ಟು, ಪೂಜೆ ಸಲ್ಲಿಸಿ, ದೇವರು ಶಾಪ ಕೊಡದಂತೆ ಒಲಿಸಿಕೊಂಡು ಬರಲು ಮಂದಿರ-ಮಸೀದಿಗಳಿಲ್ಲದ ಕಾರಣದಿಂದ ಈಗ ಮಠ, ಮಠಾದೀಶರು, ಸ್ವಯಂಘೋಷಿತ ದೇವರುಗಳನ್ನು ಬಳಸಿಕೊಳ್ಳುತ್ತಿರುವರು.

ಹಲವಾರು ವರ್ಷಗಳ ನಂತರ….

ಪ್ರಳಯವೂ ಆಗಲಿಲ್ಲ, ಭೂಮಿಯೂ ಬಾಯ್ಬಿರಿಯಲಿಲ್ಲ. ಎಲ್ಲವೂ ಹಾಗೇ ಇದೆ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಎಲ್ಲ ಮನೆಯಲ್ಲೂ ಕನಿಷ್ಟಪಕ್ಷ ಅಡುಗೆ ಕೋಣೆ, ನಡುಮನೆ, ಬಾತ್ರೂಮು, ಮಲಗುವ ಕೋಣೆಯನ್ನು ಹೊರತುಪಡಿಸಿದರೆ ಒಂದು ಧ್ಯಾನ ಕೊಠಡಿಯೊಂದು ಕಟ್ಟಿಸಲಾಗಿರುವುದು. ಕಾಲೇಜೊಂದರಲ್ಲಿ ಅರ್ಜಿ ಭರಿಸುತ್ತಿರುವಾಗ ಜಾತಿ, ಪಂಗಡ ಎಂಬ ವಿಭಾಗವನ್ನು ತುಂಬಲಾಗದೆ ಹುಡುಗಿಯೊಬ್ಬಳು ತನ್ನ ತಂದೆಗೆ ಫೋನು ಮಾಡುತ್ತಾಳೆ. ಅಪ್ಪ ಹೀಗಿದೆ, ಏನೆಂದು ಭರಿಸಬೇಕೆಂದು ಕೇಳಿದ್ದಕ್ಕೆ. ಹೋ ಇರಮ್ಮಾ ಇದ್ಯಾವುದೋ ಹಳೇ ಕಾಲದ ಕಾಲೇಜಿರಬೇಕು. ನಮ್ಮ ಕಾಲದಲ್ಲಿ ಕಾಲೇಜು ಸೇರೋವಾಗ ಇಂತಹ ಕಾಲಂ ಭರ್ತಿ ಮಾಡಿದ್ದ ನೆನಪು ನನಗೆ. ಅದೇನೋ ನನ್ನ ಹಳೆಯ ಪ್ರಮಾಣ ಪತ್ರಗಳಲ್ಲಿ ನೋಡಬೇಕು ತಾಳು, ಎನ್ನುವರು. ಅಯ್ಯೋ ಅಪ್ಪ ಹೋಗಲಿ ಬಿಡಿ ಇದೇನು ಕಡ್ಡಾಯವಲ್ಲ ಎಂದು ಖಾಲಿ ಬಿಟ್ಟು ಮುಂದುವರೆಯುವಳು. ಪರಿಸ್ಥಿತಿ ಹೀಗಿರುವಾಗ ಮುಂಚೆ ಎಲ್ಲೆಲ್ಲಿ ಯಾವ ಯಾವ ಮಂದಿರ, ಮಸೀದಿಗಳಿತ್ತೋ ಅವನ್ನೇ ಹಾಗೆಯೇ ಇಟ್ಟುಬಿಟ್ಟೆ!









ನೀ.ಮ. ಹೇಮಂತ್

Monday 14 May 2012

ಅಮ್ಮನೆಂಬ ಬೇತಾಳ!


      ಇಂತಹ ಅಮ್ಮಂದಿರನ್ನ ಬಯ್ಯಲೇ ಬೇಕು ಬಿಡ್ರೀ. ನಾನು ಈ ಮಟ್ಟಕ್ಕೆ ಹಾಳಾಗೋಕೆ ನನ್ನಮ್ಮನೇ ಕಾರಣ. ನನ್ನ ಯಾವುದೇ ಗುಣಾವಗುಣಗಳ ಬಗ್ಗೆ ಯಾರೇ ಶಪಿಸಿದರೂ ಅದರ ಸಂಪೂರ್ಣ ಶ್ರೇಯ ನಮ್ಮಮ್ಮನಿಗೇ ಸಲ್ಲಬೇಕು. ಅವಳನ್ನು ಮನುಷ್ಯರ ಜಾತಿಗೆ ಸೇರಿಸಲು ಸಾಧ್ಯವೇ ಇಲ್ಲ. ಇಷ್ಟು ಕೆಟ್ಟ ಗುಣಗಳನ್ನು ಬಹುಶಃ ಅವಳಮ್ಮನಿಂದಲೇ ಕಲಿತಿರಬೇಕು. ನಾನೂ ಚಿಕ್ಕವನಿದ್ದಾಗ ನೋಡಿದ್ದೇನೆ ನನ್ನ ಅಜ್ಜಿಯನ್ನು. ನನ್ನಮ್ಮ ಥೇಟ್ ಅವಳದ್ದೇ ಪ್ರತಿರೂಪ, ಗುಣದಲ್ಲೇ ಆಗಲಿ, ವ್ಯಕ್ತಿತ್ವದಲ್ಲೇ ಆಗಲಿ, ಮುಖಚಹರೆಯಲ್ಲೇ ಆಗಲಿ, ಮೂಗು, ಕಿವಿ, ಕಣ್ಣುಗಳೂ ಸಹ ತದ್ರೂಪ. ಅದೇನೋ ನೂಲಿನಂತೆ ಸೀರೆ ಅಮ್ಮನಂತೆ ಮಗಳೆಂದು ಹೇಳುತ್ತಿದ್ದರಪ್ಪ ತಿಳಿದವರು, ಅದಕ್ಕೆ ಉದಾಹರಣೆ ನನ್ನಮ್ಮ. ಇರಲಿ, ಅವಳೆಂತವಳೆಂದು ಹೇಳುವುದಕ್ಕೆ ಒಂದು ಘಟನೆ ಮುಂದಿಡುತ್ತೇನೆ ನೋಡಿ. ಕದ್ದು ಮುಚ್ಚಿ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ, ನಾಲ್ಕು ವರ್ಷಗಳಿಂದ. ಈ ಜಾತಿ ಎನ್ನುವ ಅದೇನೋ ಅರ್ಥವಿಲ್ಲದ ಪದ ಇನ್ನೂ ಬಳಕೆಯಲ್ಲಿರುವ ಸಮಾಜದಲ್ಲಿರುವ ನನ್ನಮ್ಮನ ಕಿವಿಗೆ ನನ್ನಪ್ಪನ ಬಾಯಿಯಿಂದ ವಿಷ-ಯ ಬಿತ್ತು. ಆದರೆ ನನಗೆ ಜಾತಿ ಹಾಗೂ ಮೂತಿ ನೋಡಿ ಪ್ರೀತಿ ಹುಟ್ಟುವ ವಯಸ್ಸಲ್ಲ ಬಿಡಿ. ಅವಳ ಕೋತಿಯಂತಹ ಮನಸ್ಸು ನನ್ನ ಮನಸ್ಸಿನ ಮೇಲೆ ಹತ್ತಿ ಕೂತಿದ್ದು ಹಿಡಿಸಿತು, ಆ ಕ್ಷಣದಲ್ಲೇ ಅತಿ ಮಧುರ ಅನುರಾಗ ಶುರುವಾಯ್ತು. ನಮಗೇ ಅಂತ ಪಾರ್ಕಿತ್ತು, ಟಾಲ್ಕೀಸಿತ್ತು, ಕಾಫೀ ಡೇ ಇತ್ತು, ಸಾವಿರಾರು ಪಬ್ಬು, ರೆಸಾರ್ಟಿತ್ತು, ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆಯ ಸಹಸ್ರ ಸಹಸ್ರ ಸುಂದರ ಪ್ರೇಮತಾಣಗಳಿತ್ತು, ಕಾಲೇಜು, ಸ್ಪೆಶಲ್ ಕ್ಲಾಸು, ಟ್ರಿಪ್ಪುಗಳೆಂಬ ಕಾರಣಗಳಿತ್ತು, ಉಪ್ಪು ಖಾರ ತಿಂದಾ ಬಾಡೀಗ್ ಇಪ್ಪತ್ತೊಂದಾಗಿತ್ತು, ಆಯ್ತು ಬಿಡಿ ಅದಲ್ಲಾ ಕಥೆ. ಎಲ್ಲ ಹೇಳಿಕೊಂಡು ತಿರುಗಾಡುವುದರಲ್ಲಲ್ಲಾ ರೀ ಇರುವುದು ಅಸಲೀ ಮಜಾ. ಎಲ್ಲರೊಂದಿಗಿದ್ದೂ ಇಲ್ಲದಿರುವುದರಲ್ಲಿರುವುದು ನಿಜ. ಸರಿಯಾದ ಸಮಯದಲ್ಲಿ ಮನೆಯಲ್ಲಿ ವಿಷಯ ಸಿಡಿಸಿ, ಅಪ್ಪನ ಕೈಯಲ್ಲೊಂದು ಎಕೆ. ೪೭ ಅಮ್ಮನ ಕಣ್ಣಲ್ಲೊಂದೇನು ಸಹಸ್ರ ಹನಿಗಳ ಬಾಂಬನ್ನು ನನ್ನೆಡೆಗೆ ಆಸ್ಪೋಟಿಸಿ ಅದರಿಂದೆಲ್ಲಾ ತಪ್ಪಿಸಿಕೊಂಡು ಗಂಡುಗಲಿಯಂತೆ ನಾನು ನನ್ನ ಹೆಸರು ಹೇಳಲಾರದ ಪ್ರಿಯತಮೆಯನ್ನು ಕಟ್ಟಿಕೊಂಡು ಆರ್ ಎಕ್ಸ್ ೧೦೦ ನಲ್ಲಿ ಕುದುರೆಗಳ ರಥದ ಲೆವೆಲ್ ಗೆ ಫೀಲ್ ಮಾಡಿಕೊಂಡು ಹೋಗಿ ನನ್ನ ಪ್ರಿಯತಮೆ ಉರುಫ್ ಡವ್ ಅನ್ನೂ ಹೆತ್ತ ಬಿನ್ ಲಾಡೆನ್, ಒನಕೆ ಓಬವ್ವರ ದಾಳಿಗಳನ್ನು ಎದುರಿಸಿ ರಿಜಿಸ್ಟ್ರಾರ್ ಆಫೀಸೆಂಬ ಪಾಕಿಸ್ತಾನದಂತಹ ದೇಶಕ್ಕೆ ಗಡಿಪಾರಾಗಿ ಇಡೀ ಸಮಾಜವೆಂಬ ವಿಧ ವಿಧ ಭಯೋತ್ಪಾದಕರ ದಾಳಿಯನ್ನು ಎದುರಿಸಿ ಕೆಚ್ಚೆದೆಯಿಂದ ನನ್ನ ಡವ್ ಕೈ ಹಿಡಿದು, ಅದಾವುದೋ ಕಡತದಲ್ಲಿ ಆಟೋಗ್ರಾಫ್ ಹಾಕಿ ಹೊರಗೆ ಸ್ನೇಹಿತರ ಬಹುಪರಾಕುಗಳೊಂದಿಗೆ ಹೊರಗೆ ಮೆಟ್ಟಿಲಿಳಿಯುತ್ತಿದ್ದರೆ ನನ್ನ ಡವ್ ಕಣ್ಣಲ್ಲಿ ಕ್ರಿಶ್, ಎಂಧಿರನ್ ತರಹ ಅಲ್ಲದಿದ್ದರೂ ಅಣ್ಣಾ ಬಾಂಡಿನಂತಾದರೂ ಕಾಣಿಸಿಕೊಂಡಿದ್ದರೆ ಆಹಾ ಎದೆ ಹಂಗೇ ಅರ್ನಾಲ್ಡಿನಂತೆ ಉಬ್ಬಿಬಿಡುತ್ತಿತ್ತೆಂದು ಹಂಗೇ ಫಾಂಟಸಿ ಲೋಕದಲ್ಲಿ ತೇಲುತ್ತಿದ್ದ ನನಗೆ ಅಮ್ಮ ನೇರವಾಗಿ ಬಂದು ಉಬ್ಬಿದ ಎದೆಗೆ ಸೂಜಿ ಚುಚ್ಚಿ ರಿಯಲ್ ದುನಿಯಾಗೆ ತಂದು ನಿಲ್ಲಿಸಿದಳು. ಲೋ ಮುಚ್ಚಿಕೊಂಡು ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಮದುವೆ ಆಗು ಸುಮ್ಮನೆ ಖರ್ಚು ಮಾಡಿಸಬೇಡ. ಇದು ನನ್ನಮ್ಮನ ಪ್ರತಿಕ್ರಿಯೆ!

ಇಷ್ಟು ಚಿಕ್ಕದಾಗಿ! ಥತ್ ನನಗೊಂಚೂರು ಗೌರವ ಬೇಡವೇನ್ರೀ. ಮದುವೆಯಾಗಿ ಬಂದು ನನ್ನ ಡವ್ವು ನನ್ನ ಹೆಚ್ಚು ಗೌರವಿಸ್ತಾಳಾ ಇಲ್ಲಾ ನನ್ನಮ್ಮನ್ನಾ? ನೀವೇ ಹೇಳಿ. ಮಗ ಹೀರೋ ಆಗಲಿ ಅಂತ ಎಲ್ಲಾ ಅಮ್ಮಂದರು ಆಸೆ ಪಟ್ಟರೆ ಈ ನನ್ನಮ್ಮ ನನಗೇ ಸೈಡ್ ಹೊಡೆದು ಹೋಗೋದು ಎಷ್ಟು ಸರಿ? ಸೀನ್ ಸೃಷ್ಠಿಸು ತಾಯೇ, ಇದಲ್ಲಾ ನೀನು ಕೊಡಬೇಕಿರೋ ಪ್ರತಿಕ್ರಿಯೆ. ಇಂತಹ ಕಥೆಗಳು ಓಡಲ್ಲಮ್ಮ. ಟ್ವಿಸ್ಟ್ ಇರಬೇಕು, ತಂದೆ ತಾಯಿ ಪ್ರೇಮಿಗಳನ್ನ ಬೇರೆ ಮಾಡಬೇಕು, ಜಗಳ ಆಗಬೇಕು, ವಿಷ ಕುಡಿಯೋ ಸೀನ್ ಇರಬೇಕು, ಗೋಳಾಟದಲ್ಲಿ ಬಿಂದಿಗೆಗಳ ಗಟ್ಟಲೆ ಕಣ್ಣೀರು ಹರೀಬೇಕು. ಕರಳು ಅಂತ ಇರುತ್ತಲ್ಲ ಅದು ಚುರುಕ್ ಚುರುಕ್ ಅನ್ನಬೇಕು ನೋಡು ಅವಳು ಕೆಟ್ಟ ಕುಲಗೆಟ್ಟ ಜಾತಿ, ಅವರ ಮನೆಯಲ್ಲಿ ಅವರಮ್ಮ ಬೇರೆ ಮನೆ ಮಾಡು ಮದುವೆಯಾದ ಕೂಡಲೆ ಅಂತ ಹೇಳೋಂತಹ ವಿಚಿತ್ರ ಆಚಾರ ವಿಚಾರದ ಜನ ಎಂದು ಪಟಾಕಿ ಹತ್ತಿಸಿದೆ. ನೀರು ಸುರಿದು, ಸರಿಯಾಗೇ ಹೇಳಿದ್ದಾರೆ ಡಬ್ಬಾ ನನ್ನ ಮಗನೆ ಬೇರೆ ಮನೆ ಮಾಡು ನೀನು, ಮೊದಲು ಸ್ವಲ್ಪ ಪ್ರಪಂಚ ಜ್ಞಾನ ಬರಲೀ ನಿನಗೂವೇ. ಅಕ್ಕಿ, ಈರುಳ್ಳಿ, ನುಗ್ಗೇಕಾಯಿ ಬೆಲೆ ಎಷ್ಟು ಅಂತ ಗೊತ್ತೇನೋ ನಿನಗೆ ಲೋಫರ್ ಅಂತ ನನ್ನಮ್ಮ. ಇವಳು ಮನುಷ್ಯಳಾಗಲು ಸಾಧ್ಯವಾದರೂ ಇದೆಯಾ? ಇಂತಹ ಅಮ್ಮನನ್ನ ತಾಯಂದಿರ ದಿನಾಚರಣೆಯಂದು ಮಾತ್ರವಲ್ಲ ರೀ ದಿನಂಪ್ರತಿ, ಕ್ಷಣಂಪ್ರತಿ ಶಪಿಸುತ್ತೇನೆ. ಅಯ್ಯೋ ಇಷ್ಟಕ್ಕೇ ಬೋರ್ ಹೊಡೆದರೆ ಹೇಗ್ರೀ ನಿಮಗೆ, ಇದೇನ್ ಮಹಾ ಇವಳ ಫ್ಲಾಶ್ ಬ್ಯಾಕ್ ಕೇಳಿದರೆ ನಿದ್ರೇನೇ ಮಾಡ್ಬಿಡ್ತೀರಾ!

ಕಿತ್ತೋಗಿರೋ, ಪ್ರೈವೇಟ್, ಆಂಗ್ಲ ಭಾಷೆಯ ಶಾಲೆ ಕಣ್ರೀ. ವಿಪರೀತ ಮಳೆ ಅವತ್ತು. ಶಾಲೆಯ ಬೆಲ್ ಹೊಡೀತು. ಕಾರು, ಗಾಡಿಗಳಲ್ಲಿ ಕರೆದುಕೊಂಡು ಹೋಗುವವರು ಬಂದು ಕರೆದುಕೊಂಡು ಹೋಗುತ್ತಿದ್ದರು. ಮಳೆಯಲ್ಲಿ ಅಮ್ಮ ಬಂದಿರಳಾರಳೆಂದು ಕಾಯುತ್ತಾ ಕುಳಿತಿದ್ದವನ ಕಣ್ಣಿಗೆ ಅಚ್ಚರಿ. ಕೈಯಲ್ಲಿ ದೊಡ್ಡ ಪ್ಲಾಸ್ಟಿಕ್ ಕವರ್ ಹಿಡಿದು ತಲೆಗೆ ಸೆರಗು ಹೊದ್ದು ನೆನೆಯುತ್ತಾ ಬರುತ್ತಿರುವ ಅಮ್ಮ. ಕವರ್ರಿನಿಂದ ನನ್ನನ್ನು ಮುಚ್ಚಿ ಕರೆದುಕೊಂಡು ಹೊರಟಳು. ತನ್ನನ್ನು ತಾನು ಯಾವುದೋ ಸಿನೆಮಾದ ಹೀರೋಯಿನ್ ಎಂದು ತಿಳಿದಿದ್ದಳೆಂದು ಕಾಣುತ್ತೆ. ಅಷ್ಟು ಸಾಲದೆಂಬಂತೆ ನೀರು ತುಂಬಿದ್ದ ಚಿಕ್ಕ ಹಳ್ಳದಲ್ಲಿ ಕಾಲಿಟ್ಟು ಜಾರಿ ಬಿದ್ದಳು. ಸುತ್ತಲಿದ್ದ ಎಲ್ಲಾ ಹುಡುಗರೂ ಗೊಳ್ಳೆಂದು ನಕ್ಕಿದ್ದರು. ಥು ಅವಮಾನ ಮಾಡಿದ್ದಳು ಎಲ್ಲರ ಮುಂದೆ ಬಿದ್ದು. ಇವಳಿಗ್ಯಾಕೆ ಬೇಕಿತ್ತು ಈ ಕೆಲಸ. ಮಳೆಯಲ್ಲಿ ನೆಂದರೆ ಶೀತವಾಗುತ್ತೆ. ಹುಶಾರು ತಪ್ಪುತ್ತಾರೆಂದು ನನಗೆ ಹೇಳ್ತಾಳೆ ತಾನೇ ನೆನೆಯುತ್ತಾಳೆ. ಎಲ್ಲರೆದುರಿಗೆ ಬಿದ್ದರೆ ಅವಮಾನವಾಗುತ್ತೆಂದು ನನಗೆ ಗೊತ್ತಿರುವಷ್ಟೂ ಅವಳಿಗೆ ಗೊತ್ತಾಗುವುದಿಲ್ಲ. ನಕ್ಕಿದ್ದ ಎಲ್ಲರ ಅಮ್ಮಂದಿರೂ ಬಿದ್ದು ಕಾಲು ಮುರಿದುಕೊಳ್ಳಬೇಕೆಂದು ಶಪಿಸಿದ್ದೆ. ಎಲ್ಲರಿಗೂ ಅವಮಾನವಾಗಬೇಕು. ನಾನೂ ಕೇಕೆ ಹಾಕಿ ನಗಬೇಕು. ಬಿದ್ದರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಕಲ್ಪಿಸಿಕೊಂಡು, ಪದೇ ಪದೇ ನೆನೆನೆನೆದು ನಕ್ಕಿದ್ದೆ. ಅಂದಿನಿಂದ ಅಮ್ಮನ ತೋಳಿನವರೆಗೂ ಮುಚ್ಚಬಹುದಾದ ಕವರೊಂದನ್ನ ಬ್ಯಾಗಿನಲ್ಲಿ ತುರುಕಿಡಲು ಶುರುಮಾಡಿದೆ. ಮತ್ತು ಅಮ್ಮ ನನ್ನ ಕೈ ಹಿಡಿದು ನಡೆಯುವುದಿರಲಿ, ನಾನೇ ಅಮ್ಮನ ಕೈ ಬಿಡದೇ ಹಿಡಿದು ನಡೆಯುತ್ತಿದ್ದೆ ಮತ್ತೆ ಬಿದ್ದು ಅವಮಾನ ಮಾಡದಿರಲೆಂದು! ಇಂಥವಳನ್ನು ಮನುಷ್ಯಳೆನ್ನುವುದಾದರೂ ಹೇಗೆ? ಇನ್ನೇನು ದೇವರಂತೂ ಆಗಲು ಸಾಧ್ಯವೇ ಇಲ್ಲ. ಬೆಚ್ಚಗಿನ ಗರ್ಭಗುಡಿಯಿಂದ ಹೊರಗೆ ಕಾಲಿರಲಿ ಉಗುರಿರಿಸಿದ್ದೂ ಸಹ ಕಂಡಿಲ್ಲ ನಾನು. ಕತ್ತಲೆಯಲ್ಲೂ ಬೆಂಬಿಡದ ದೆವ್ವವೇ ಸರಿ ಇವಳು. ಅಮ್ಮ ದೇವರಲ್ಲ ದೆವ್ವ!

ನನಗಿಂತ ದೊಡ್ಡದಾಗಿ ಕಾಣುವವರಿಗೆಲ್ಲರಿಗೂ ಗೌರವ ಕೊಡಬೇಕಂತೆ. ಯಾರಿಗೂ ಹೊಡಿಬಾರದಂತೆ, ಬಯ್ಯಬಾರದಂತೆ, ನೋಯಿಸಬಾರದಂತೆ, ಜಗಳವಾಡಬಾರದಂತೆ, ದುಷ್ಟರನ್ನ ಕಂಡರೆ ದೂರವಿರಬಾರದಂತೆ, ದೂರವಿಡಬೇಕಂತೆ. ಯಾವತ್ತೂ ಯಾವುದೇ ಕಾರಣಕ್ಕೂ ಸುಳ್ಳು ಹೇಳಕೂಡದಂತೆ. ನೋವಾದಾಗ ಅಳಬಾರದಂತೆ, ಸಹಿಸಿಕೊಳ್ಳಬೇಕಂತೆ. ಸುಮ್ಮನೆ ಕೂರಬಾರದಂತೆ. ಹಿಡಿದ ಕೆಲಸ ಬಿಡಬಾರದಂತೆ. ಕಣ್ಣಿನಲ್ಲಿ ಕಣ್ಣಿಟ್ಟು ನೋಡಬೇಕಂತೆ. ಇವೆಲ್ಲಾ ಒಳ್ಳೆಯ ಉಪದೇಶಗಳೆಂದು ನಿಮಗೆ ಅನ್ನಿಸಿದ್ದರೆ ದಯವಿಟ್ಟು ಪುನರಾಲೋಚಿಸಿ. ಜಗಳವಾಡಬಾರದೆಂದು ಹೇಳುತ್ತಲೇ ಮಾತ್ಸ್ ಟೀಚರ್ ನನ್ನ ಕೈ ಮೇಲೆ ಬಾಸುಂಡೆ ಚಿತ್ರ ಬಿಡಿಸಿದಾಗಲೆಲ್ಲಾ ಕಿತ್ತಾಡುತ್ತಿದ್ದಳು. ದುಷ್ಟರನ್ನು ದೂರವಿಡಬೇಕೆಂದು ಹೇಳುತ್ತಲೇ ನನ್ನನ್ನು ಟೀಚರ್ ಗಳು, ಸ್ಕೂಲು, ಸ್ನೇಹಿತರೊಂದಿಗೆ ಬಿಟ್ಟು ಬರುತ್ತಿದ್ದಳು. ಸುಳ್ಳು ಹೇಳಲೇ ಬಾರದೆಂದು ಬೊಗಳುತ್ತಲೇ ಅಪ್ಪನ ಬಳಿ ಸಾವಿರ ಸುಳ್ಳು ಹೇಳುತ್ತಿದ್ದಳು, ಹರಿದ ಬಟ್ಟೆಯ ಬಗ್ಗೆ, ಖಾರ ಪುಡಿ ಡಬ್ಬಿಯಲ್ಲಿ ಇಡುತ್ತಿದ್ದ ಕಾಸಿನ ಬಗ್ಗೆ, ಸಾಲಗಾರರ ಬಯ್ಗುಳಗಳ ಬಗ್ಗೆ, ಆರೋಗ್ಯದ ಬಗ್ಗೆ, ತನ್ನ ಆಸೆಗಳ ಬಗ್ಗೆ, ಇತರೆ ಇತರೆ ಇತರೆ. ಒಮ್ಮೆಯೂ ಇಡೀ ಪ್ರಪಂಚದಲ್ಲಿ ಯಾರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿದ್ದು ನಾನೂ ನೋಡೇ ಇಲ್ಲ. ಇಂತಹ ಹಲವು ಬುದ್ದಿಮಾತುಗಳನ್ನ ನಾನು ಮಾತ್ರ ಪಾಲಿಸಬೇಕಂತೆ. ಆದರೂ ಪಾಲಿಸಿದೆ. ಸಿಕ್ಕ ಸಿಕ್ಕವರ ಸ್ನೇಹ ಬೆಳೆಸುತ್ತಿದ್ದೆ. ಯಾರೊಂದಿಗಿದ್ದರೂ ನಾನು ಅವರಂತಾಗುತ್ತಿರಲಿಲ್ಲ, ಎಲ್ಲರೂ ನನ್ನಂತಾಗುತ್ತಿದ್ದರು. ದುಶ್ಮನ್ ಗಳನ್ನು ಬೆಳೆಸಿಕೊಳ್ಳಲೇ ಇಲ್ಲ. ಜಗಳವಾಡಬೇಕೆಂದು ಮನಸಾದರೂ ದುಶ್ಮನ್ ಗಳೂ ಸಹ ಮತ್ತೆ ಸ್ನೇಹ ಸಂಪಾದಿಸಿಬಿಡುತ್ತಿದ್ದರು. ನನಗೆ ನಾನೇ ಹೇಡಿಯಂತೆ ಕಾಣುತ್ತಿದ್ದೆ. ಒಂದು ಹೊಡೆದಾಡಲು ಗೊತ್ತಿಲ್ಲ, ಜಗಳವಾಡಲು ಗೊತ್ತಿಲ್ಲ. ಅಮ್ಮನ್ ಅಕ್ಕನ್ ಎಂಬ ಪದಗಳನ್ನು ಲೀಲಾಜಾಲವಾಗಿ ಬಳಸಲು ಗೊತ್ತಿಲ್ಲ, ಕಾಪಿ ಹೊಡೆದು ಯಶಸ್ವಿಯಾಗಲಿಲ್ಲ, ಕೊನೆ ಬೆಂಚಿನ ಹುಡುಗರು ನನ್ನನ್ನು ಸೇರಿಸುತ್ತಿರಲಿಲ್ಲ, ಸಿಗರೇಟು ಕಲಿಯಲು ಭಯ, ಮನೆಯಲ್ಲಿ ತಿಳಿಸದೇ ಥಿಯೇಟರಿಗೆ ಹೋಗಿದ್ದು ಬಹಳ ವಿರಳ. ಇನ್ನೆಂತಹ ಬ್ರಹ್ಮವಿದ್ಯೆಯನ್ನು ಕಲಿತೆನೋ ಗೊತ್ತಿಲ್ಲ ನನ್ನ ಶಾಲೆಯೆಂಬ ಬ್ರಹ್ಮಾಂಡದಲ್ಲಿ. ಕಾಲೇಜು ಸೇರಿದ್ದೇ ಸೇರಿದ್ದು ಅರೆ! ನಾನ್ಯಾಕೆ ಇವನ್ನೆಲ್ಲಾ ಬಿಡಬೇಕು. ಸಿಗರೇಟಿನಿಂದ ಹೊಗೆ ಎಳೆದರೆ ಹೊಗೆಯೇ ಹೇಗೆ ಹೊರಗೆ ಬರುತ್ತೆ ನೋಡಲೇ ಬೇಕೆಂದು ಸೇದಿಯೇಬಿಟ್ಟೆ. ಒದೆ ತಿಂದು ಎಷ್ಟೋ ವರ್ಷವಾಗಿತ್ತು ಇವತ್ತು ಒದೆ ತಿನ್ನಲೇ ಬೇಕೆಂದು ಅಮ್ಮನೆದುರು ಊಟ ಮಾಡುವಾಗ ಹೇಳಿಯೂ ಬಿಟ್ಟೆ. ಹೊಡೆಯಲು ಕೈ ಎತ್ತಿದ ಅಪ್ಪನನ್ನೂ ತಡೆದು ಸೇದಿ ಹಾಳಾಗೋಗು ಕರಳು ಸುಟ್ಟೋದ ಮೇಲೆ ನಾನಂತೂ ತಾಯಿ ಕರುಳು ಕಿತ್ತು ಕೊಡಲ್ಲ ಬಡ್ಡೀ ಮಗನೆ ನಿನ್ ಕರುಳು ನಿನ್ನಿಷ್ಟ ಎಂದಷ್ಟೇ ಹೇಳಿ ನೆಮ್ಮದಿಯಾಗಿ ಊಟ ಮಾಡಿದಳು. ಸೇದುತ್ತಿರುವವರು ಎಷ್ಟೋ ಮಂದಿ ನೆಮ್ಮದಿಯಾಗಿಲ್ವಾ ಅವಳಿಗೇನು ಗೊತ್ತು ಸಿಗರೇಟಿನ ಮಜಾ ಎಂದು ಸೇದುತ್ತಲೇ ಹೋದೆ. ರಸ್ತೆಗಳಲ್ಲಿ ಹುಡುಗಿಯರ ಜೊತೆ ನಿಂತು ಹರಟುವುದನ್ನು ಕಂಡರೆ ಕಾಲು ಮುರೀತೀನೆಂದು ಚೇತಾವನಿ ಕೊಡುತ್ತಿದ್ದಳು. ಮನೆಗೆ ಕರೆದು ಏನಿದ್ದರೂ ಮಾತನಾಡಿಸು ಕಳುಹಿಸು ಎನ್ನುತ್ತಿದ್ದಳು. ರಸ್ತೆಯಲ್ಲೇ ಭೇಟಿಯಾಗಿ ಹರಟುತ್ತಿದ್ದೆ. ವರ್ಷಕ್ಕೊಬ್ಬಳನ್ನು ಗೊತ್ತು ಮಾಡಿ ನನ್ನ ಹೆಸರಿನ ಜೊತೆ ಸೇರಿಸಿ ಮಜಾ ತೊಗೋತಿದ್ರು ಸ್ನೇಹಿತರೂ ಕೂಡ, ನನ್ನ ಡವ್ ಬಂದು ಸಿಕ್ಕಿಬೀಳುವವರೆಗೂ. ನನ್ನ ಡವ್ವಿನ ಆಸೆಯಂತೆ ಜಿಮ್ ಎಂಬ ಅಗ್ನಿ ಪರೀಕ್ಷೆಗೆ ಗುರಿಯಾದೆ. ಮೈತುಂಬಾ ಇದ್ದ ಹೊಗೆ, ಕೈಕಾಲುಗಳನ್ನ ಚುಮ್ಮಾ ಅದರದಿಲ್ಲೇ ಎಂದು ರಜನೀಕಾಂತರ ಡೈಲಾಗ್ ಹೇಳಿ ಹೇಳಿ ನಡುಗಿಸುತ್ತಿತ್ತು. ಆಗ ಗೊತ್ತಾಯ್ತು ಸಿಗರೇಟಿನ ಪರಾಕ್ರಮ. ಸಿಗರೇಟು ಬಿಟ್ಟು, ಆಸ್ಪತ್ರೆ ಸೇರಿ ಬಿಳೀ ಹಾಸಿಗೆ ಮೇಲೆ ಬಿದ್ದಿದ್ದರೂ ಕೈ ತೋರಿಸಿ ನಕ್ಕು ನಕ್ಕೂ ಅವಮಾನಿಸಿ ನಿನ್ನ ಮುಖಕ್ಕೇ ಅವತ್ತೇ ಹೇಳಿದೆ ತಾನೆ, ಆಗಬೇಕು ನಿನಗೆ ಎಂದು ಛೇಡಿಸಿ. ಮುಂದಿನ ಹುಟ್ಟಿದ ಹಬ್ಬಕ್ಕೆ ಸಿಗರೇಟಿನ ಪ್ಯಾಕೆಟ್ಟೇ ಕೊಟ್ಟು ಪಕ ಪಕ ಪಕ ನಕ್ಕು ಕ್ಯಾಂಡಲ್ ಬೆಂಕಿ ಹೊತ್ತಿಸಿದ್ದಳು. ಯಾರಾದರೂ ಮಗನ ಆ ಪರಿಸ್ಥಿತಿಯಲ್ಲಿ ಭಯಂಕರ ಭೂತದ ಹಾಗೆ ನಗ್ತಾರೇನ್ರೀ? ನನ್ನಮ್ಮನನ್ನ ಪಿಶಾಚಿಯೆಂದು ಕರೆಯುವುದರಲ್ಲಿ ಏನು ತಪ್ಪು? ಬಿಟ್ಟೇ. ಸಿಗರೇಟಿನ ಕೈ ಬಿಟ್ಟೆ, ನನ್ನ ಡವ್ ಕೈ ಹಿಡಿದೆ. ಮುಚ್ಚಿಕೊಂಡು ಕಾಲೇಜು ಮುಗಿಸಿದೆ, ಕೆಲಸ ಹಿಡಿದೆ, ಮದುವೆಯಾದೆ. ಆದರೂ ಅಮ್ಮನ ವ್ಯಂಗ್ಯ ನಗು ನಿಲ್ಲಲಿಲ್ಲ.

ಬಂದವಳಿಗೆ ಮುತ್ತಿಗಿಂತ ತುತ್ತೇ ಹೆಚ್ಚು ಪ್ರಿಯ. ನಾನೇ ವಿಕ್ರಮ ನನ್ನಮ್ಮನೇ ಬೇತಾಳ. ಅವಳ ಯಾವ ಪರೀಕ್ಷೆಗಳಲ್ಲೂ ನಾನು ಗೆಲ್ಲಲಿಲ್ಲ. ನನ್ನ ತಲೆ ಹೋಳೂ ಆಗಲಿಲ್ಲ. ಬೇತಾಳವನ್ನು ಹೊತ್ತು ನಡೆಯುವುದೂ ತಪ್ಪಲಿಲ್ಲ. ಗೆದ್ದರೆ ಎಲ್ಲಿ ಹಾರಿಹೋಗುವಳೋ ಎಂದು ಅವಳಿಂದ ಸೋಲುತ್ತಲೇ ಬರುತ್ತಿರುವೆ. ಈ ಸೋಲಿನಂತೆ, ಬೇತಾಳವೂ ಸದಾ ಹೆಗಲೇರಿಯೇ ಇರಲೆಂದು ಆಶಿಸುತ್ತಿರುವೆ!

-ನೀ.ಮ. ಹೇಮಂತ್

Saturday 12 May 2012

ಮೊದಲ ರಾತ್ರಿ!


         ವಳು ಅಡುಗೆ ಮನೆಯಲ್ಲಿದ್ದಾಳೆ. ಎಲ್ಲರೊಂದಿಗೆ ನಗುನಗುತ್ತಲೇ ಇದ್ದವಳು ಈಗ ಅಡುಗೆ ಮನೆಯಲ್ಲಿ ಒಬ್ಬಳೇ ಇರುವಾಗ ಕಣ್ಣೊರೆಸಿಕೊಳ್ಳುತ್ತಿದ್ದಾಳೆ. ಅವಳು ಎಲ್ಲಾ ಮರೆತಿರಬಹುದಾ. ಛೇ ಇಷ್ಟು ಬೇಗ ಮರೆಯಲು ಸಾಧ್ಯವೇ ಇಲ್ಲ. ಆದರೆ ಹೇಗೆ ಎಲ್ಲವನ್ನೂ ಒಪ್ಪಿಕೊಂಡಳೋ. ಅವಳಿಗಷ್ಟು ಧೈರ್ಯ ಎಲ್ಲಿಂದ ಬಂತೋ ಗೊತ್ತಾಗುತ್ತಿಲ್ಲ. ನಾನಂತೂ ತುಂಬಾ ದುರ್ಬಲ, ಹೇಡಿಯಾಗಿಬಿಟ್ಟೆ. ಅತ್ತ ನಡುಮನೆಯಲ್ಲಿ ಎಲ್ಲಾ ವಿಶ್ರಮಿಸುತ್ತಾ, ಹರಟುತ್ತಾ, ಬಂದಿರುವ ಉಡುಗೊರೆ, ದುಡ್ಡನ್ನು ಲೆಕ್ಕ ಮಾಡುತ್ತಾ ಕುಳಿತಿದ್ದಾರೆ. ಇನ್ನೊಂದು ಕಡೆ ಮಲಗುವ ಕೋಣೆಯಲ್ಲಿ ಹಳೇ ಮಂಚಕ್ಕೇ ಹೊಸ ಹಾಸಿಗೆ, ಹೊದಿಕೆ ಹಾಕಿ ಸಿದ್ಧಗೊಳಿಸುತ್ತಿದ್ದಾರೆ. ಸಿನಿಮಾಗಳಲ್ಲಿ ತೋರಿಸಿದಂತೆ ಹೂವುಗಳನ್ನು ಹಾಸಿಗೆಯ ಪೂರ್ತಿ ಹರಡಿ ಮಂಚ ಪೂರ್ತಿ ಹೂವಿನ ಹಾರಗಳಿಂದ ಶೃಂಗರಿಸಿ, ಪಕ್ಕದಲ್ಲಿ ಹಣ್ಣುಹಂಪಲು, ಸಿಹಿ ತಿನಿಸುಗಳನ್ನೆಲ್ಲಾ ಇಟ್ಟು ಸಂಬಂಧಿಕರೆಲ್ಲಾ ತಂದು ಅವಳನ್ನು ಒಳಗೆ ಬಿಟ್ಟು ಬೀಗ ಹಾಕಿ ಹೋಗಲಾರರು ಅನಿಸುತ್ತೆ, ಸಾಧಾರಣವಾಗಿ ಹಾಲು ಕೊಟ್ಟು ಕೋಣೆಗೆ ಬಿಡಬಹುದೇನೋ ಅಷ್ಟೇ. ಛೇ! ಈ ಮೊದಲ ರಾತ್ರಿಯ ಏರ್ಪಾಟು ತಪ್ಪಲು ಯಾವುದಾದರೂ ಸಾಧ್ಯತೆಗಳಿರಬಹುದಾ. ಅವಳು ನನಗಿವತ್ತು ಸಾಧ್ಯವಿಲ್ಲ ತುಂಬಾ ಸುಸ್ತಾಗಿದೆ ಎಂದೇನಾದರು ನೆಪ ತೆಗೆದು ಬೇಡವೆಂದರೆ ಮುಂದೂಡಿಯಾರೇನೋ ಬಹುಶಃ, ಆದರೆ ಎಲ್ಲ ಸಿದ್ಧತೆಗಳು ನಡೆದಿವೆ ಅವಳೂ ಮಾನಸಿಕವಾಗಿ ನಿರೀಕ್ಷಿಸುತ್ತಿರಬಹುದು ಇಷ್ಟೊತ್ತಿಗಾಗಲೇ. ಹಾಲು ಉಕ್ಕಿಬರುವುದನ್ನೇ ಕಾಯುತ್ತಾ ಇನ್ನೂ ಅಲ್ಲೇ ನಿಂತಿದ್ದಳು. ಅಕಸ್ಮಾತ್ ಇವತ್ತೇ ಧಿಡೀರನೆ ಹೊರಗಾದರೆ! ಸಾಧ್ಯವಿಲ್ಲ ಆ ಸಮಯವನ್ನೆಲ್ಲಾ ನೋಡಿಯೇ ಮದುವೆಯ ತಾರೀಖು ನಿಗದಿಪಡಿಸಿರುತ್ತಾರೆ. ಹೇಗೋ ಇವತ್ತು ತಪ್ಪಿದರೆ ಏನಂತೆ ನಾಳೆಯೋ, ನಾಡಿದ್ದೋ, ಇನ್ನೆಂದಾದರೂ ಆಗಲೇ ಬೇಕಲ್ಲಾ. ಮದುವೆಯಂತೂ ಆಗಿದೆ. ಪರವಾನಗಿ ಸಿಕ್ಕಿದೆ. ಆದರೆ ಇವತ್ತು ತಪ್ಪಿದರೆ ಸಾಕು ನಾಳೆಯ ಕತೆ ನಾಳೆಗೆ ನೋಡಿಕೊಳ್ಳೋಣ. ಹೇಗೆ ಹೇಗೆ ಹೇಗೆ ಹೇಗೆ ತಪ್ಪಬಹುದು. ಹಾಲು ಕೆನೆ ಕಟ್ಟಿ, ಕಾವು ಹೆಚ್ಚಾದಂತೆಲ್ಲಾ ಮೇಲೆ ಮೇಲೆ ಏರುತ್ತಿದೆ. ಹಾಲು ಉಕ್ಕಿಬಂದು ಚೆಲ್ಲುತ್ತಿದ್ದರೂ ಅವಳಿನ್ನೂ ಒಲೆ ಆರಿಸುತ್ತಿಲ್ಲ. ಇನ್ನಾರೋ ಬಂದು ಒಲೆ ಆರಿಸಿ ಅವಳನ್ನು ಇನ್ನೆಲ್ಲೋ ಕರೆದುಕೊಂಡು ಹೋದರು. ಇನ್ನೂ ಅದಾವ ಪೂಜೆ, ಮಣ್ಣು ಮಸಿ ಶಾಸ್ತ್ರಗಳು ಇವೆಯೋ ಗೊತ್ತಿಲ್ಲ.

ಥೂ, ನಾನು ಈ ದರಿಧ್ರ ಆಲೋಚನೆಗಳನ್ನ ಮೊದಲು ನಿಲ್ಲಿಸಬೇಕು. ಒಮ್ಮೆ ನಿದ್ರೆ ಬಂದರೆ ಸಾಕು ಬೆಳಗ್ಗೆ ಆಗುವುದೇ ಗೊತ್ತಾಗುವುದಿಲ್ಲ. ಎಲ್ಲಾ ಮರೆತು ನಿದ್ರೆ ಮಾಡಬೇಕೀಗ. ನಿದ್ರೆ ಮಾತ್ರೆಯನ್ನಾದರೂ ತೆಗೆದುಕೊಂಡುಬಿಡಬೇಕಿತ್ತು. ಮೊದಲೇ ಯಾಕೆ ಹೊಳೆಯಲಿಲ್ಲ. ಹೋಗಿ ಕೇಳಿದರೂ ಮೆಡಿಕಲ್ ಸ್ಟೋರ್ ನಲ್ಲಿ ಕೊಡಲಾರರೆನಿಸುತ್ತೆ. ನಿದ್ರೆ ಮಾಡಬೇಕು. ನಿದ್ರೆ, ನಿದ್ರೆ, ನಿದ್ರೆ, ನಿದ್ರೆ,… ನಿದ್ರೆ ಎಷ್ಟು ಸಾರಿ ಹೇಳಿಕೊಂಡರೂ ನಿದ್ರೆ ಮಾತ್ರ ಬರುತ್ತಿಲ್ಲವಲ್ಲ ಅಯ್ಯೋ ಏನು ಮಾಡಿದರೆ ನಿದ್ರೆ ಬರಬಹುದು. ನಿದ್ರೆ ಬರದಿದ್ದರೂ ಪರವಾಗಿಲ್ಲ ನೆನಪುಗಳು ಕಾಡದಿದ್ದರೆ ಸಾಕು. ನಾನ್ಯಾಕೆ ಇಷ್ಟು ಕುಲಗೆಟ್ಟವನ ತರಹ ಯೋಚಿಸುತ್ತಿದ್ದೇನೆ. ತಡೆಯುವುದಾದರೂ ಹೇಗೆ. ಬೇಡವೆಂದರೂ ನುಗ್ಗಿಬರುತ್ತಿರುವ ಕಣ್ಣಿಗೆ ಕಟ್ಟಿದ ಹಾಗೆ ಕಾಣಿಸುತ್ತಿರುವ ಕೆಟ್ಟ ಕೆಟ್ಟ ಅಸಹ್ಯ ಆಲೋಚನೆಗಳನ್ನು ತಡೆಯಲು ಪ್ರಯತ್ನಿಸಿದಷ್ಟೂ ತಲೆ ಧಿಮ್ಮೆನ್ನುತ್ತಿದೆ. ಅಬ್ಭಾ! ತಲೆ ಇಷ್ಟು ಭಾರವಿರಬಹುದೆಂದು ನಾನೆಂದೂ ಊಹಿಸಿರಲಿಲ್ಲ. ಅವಳು ಹಾಲು ಹಿಡಿದು ಹೊರಟೇ ಬಿಟ್ಟಳು. ಇನ್ನೇನು ರೂಮಿಗೆ ಬಂದೇಬಿಡುತ್ತಾಳೆನಿಸುತ್ತೆ. ತಡೆಯಬೇಕು ಅವಳನ್ನ, ಹೇಗಾದರೂ ತಡೆಯಬೇಕು. ಹಾಸಿಗೆಯಲ್ಲಿ ಬಿದ್ದು ಹೊರಳಾಡುತ್ತಿದ್ದವನು ಧಡಾರನೆ ಎದ್ದು ಬಾಗಿಲುಗಳನ್ನು ತೆರೆದು ಹಾಗೇ ಕತ್ತಲು ತುಂಬಿದ ರಸ್ತೆಗಳಲ್ಲಿ ಬರಿಗಾಲಿನಲ್ಲಿ ಓಡಹತ್ತಿದೆ. ಅವಳು ಅವನನ್ನು ಕೂಡುವ ಮೊದಲು ನಾನು ತಡೆಯಬೇಕು. ನಾನು ಇಲ್ಲಿಂದ ಅವರ ಮನೆಯವರೆಗೂ ಓಡುವಷ್ಟರಲ್ಲಿ ಅವಳು ಒಪ್ಪಿಸಿಕೊಂಡರೆ, ಇಲ್ಲಾ ನಾನು ಇನ್ನೂ ಜೋರಾಗಿ ಓಡಬೇಕು. ನಾನು ತಡೆಯಲು ಸಾಧ್ಯ. ಇನ್ನೂ ಜೋರಾಗಿ ಓಡಬೇಕು. ಓಡಬೇಕು. ಗಾಳಿಯವೇಗದಲ್ಲಿ ಓಡಬೇಕು. ಕಾಲು ಸೋಲುವವರೆಗೂ ಓಡಬೇಕು. ಉಸಿರು ಬಿಗಿಹಿಡಿದು ಓಡಬೇಕು. ಓಡೋಡಿ ಅಂತೂ ಅವಳ ಮನೆಯನ್ನು ತಲುಪಿದೆ. ಗೇಟು, ಬಾಗಿಲು, ಹೊರಗೆ ಮಲಗಿದ್ದ ಹಲವರನ್ನು ದಾಟಿಕೊಂಡು ನೇರವಾಗಿ ಒಳಗೆ ನುಗ್ಗಿದೆ.

ಲೋಟದಲ್ಲಿನ ಹಾಲು ಅರ್ಧ ಮಾತ್ರ ಖಾಲಿಯಾಗಿತ್ತು. ಬಹುಶಃ ಅವಳು ಕುಡಿದಿರಲಿಕ್ಕಿಲ್ಲ. ಇಬ್ಬರೂ ಕುಳಿತಿದ್ದರು. ಕತ್ತಲೆ ತುಂಬಿದ್ದ ಕೊಠಡಿಯಾದರೂ ಸ್ಪಶ್ಟವಾಗಿ ಕಾಣುತ್ತಿತ್ತು. ಸೆರಗು ಆಗತಾನೆ ಜಾರಿತು. ಉಸಿರಾಡಲೂ ಸಮಯವಿಲ್ಲ. ಅವನ ಕೈಗಳು, ಅಯ್ಯೋ ಚಂದು ನಾ ಬಂದೆ. ಅವನ ಪ್ರತಿಯೊಂದು ಮುದ್ದನ್ನೂ ಸುಮ್ಮನೆ ಸ್ವೀಕರಿಸುತ್ತಿದ್ದಾಳೆ. ಹೇಗೆ ಎಚ್ಚರಿಸಲಿ ಇವಳನ್ನ. ಕತ್ತಲೆಯಲಿ ನಾನಿವರಿಗೆ ಕಾಣುತ್ತಿಲ್ಲವೇನೋ. ಚಂದೂ ಎಂದು ಜೋರಾಗಿ ಕೂಗಿಬಿಡಲೇ. ಇಲ್ಲಾ, ಶೃಂಗಾರದಾಟದಲ್ಲಿರುವವರನ್ನು ಭಂಗಪಡಿಸುವುದು ಮಹಾ ಪಾಪವಂತೆ. ಆದರೆ ಅವಳು ನನ್ನವಳು. ಆ ದೇಹದ ಸಮಸ್ತ ಅಂಗಗಳೂ ನನ್ನವು. ಅವನ ಕೈಗಳನ್ನು ಮೊದಲು ಕತ್ತರಿಸಿಬಿಡಬೇಕು. ಅವನ ಮೇಲೆ ಪ್ರಪಂಚದ ಯಾವ ವಸ್ತುವಿನ ಮೇಲೂ ಹುಟ್ಟಲಾರದಷ್ಟು ಆಕ್ರೋಶ ಹುಟ್ಟುತ್ತಿದೆ. ಅವಳನ್ನು ಹಕ್ಕಿನಿಂದ ವಿವಸ್ತ್ರಗೊಳಿಸುತ್ತಿದ್ದಾನೆ. ಅವಳು ಸುಮ್ಮನಿದ್ದಾಳೆ. ಅವನನ್ನು ಏನು ಮಾಡಿದರೂ ಉಪಯೋಗವಿಲ್ಲ. ಮೊದಲು ಅವಳನ್ನ ದರದರನೆ ಎಳೆದುಕೊಂಡು ಅವನಿಂದ, ಹೊರಗೆ ಮಲಗಿರುವ ಸರ್ವ ಸಂಬಂಧಿಕರಿಂದ, ಈ ಊರಿನಿಂದ, ಈ ದರಿಧ್ರ ಪ್ರಪಂಚದಿಂದ ದೂರ ಬಹುದೂರ ಕರೆದುಕೊಂಡು ಹೋಗಿಬಿಡಬೇಕು. ಆಗಲೇ ಅವಳನ್ನು ಅವನಿಂದ ಉಳಿಸಲು ಸಾಧ್ಯ. ಅಯ್ಯೋ ಮಲಗೇ ಬಿಟ್ಟರು. ಸಾವಿರ ವಾಹನಗಳ ಶಬ್ಧಗಳಿಗಿಂತ ಕರ್ಕಶವಾಗಿದೆ ಇವರ ಉಸಿರಾಟದ, ಮಂಚದ ಶಬ್ಧ. ನನ್ನ ಕಿವಿಗಳನ್ನು ಮೊದಲು ಕಿತ್ತಿಟ್ಟುಬಿಡಬೇಕು. ಹಾsssssssss.. ಈ ನನ್ನ ಆಲೋಚನೆಗಳು, ಇಡೀ ಪ್ರಪಂಚವನ್ನು ಸೀಳಿ ಅವಳ ಕೋಣೆಯವರೆಗೂ ಹೊಕ್ಕು ಎಲ್ಲವನ್ನು ಕಣ್ಣಾರೆ ನೋಡುತ್ತಿರುವ ನನ್ನ ವಿಕೃತ ಆಲೋಚನೆಗಳನ್ನು ತಡೆಯುವುದಾದರೂ ಹೇಗೆ. ನಾನ್ಯಾಕೆ ಇಷ್ಟು ಅಮಾನವೀಯನಾದೆ. ಅವಳ ಕೋಣೆ ಹೊಕ್ಕು ನೋಡುತ್ತಿರುವುದಕ್ಕೇ ಇಷ್ಟು ಸಂಕಟ, ತೊಳಲಾಟ, ಇನ್ನು ಅವಳನ್ನು ಹೊಕ್ಕು ನೋಡಿದ್ದರೆ ಏನಾಗಬಹುದು. ಅವರ ಬೆವರ ಹನಿಗಳನ್ನು ಕಲ್ಪಿಸಿಕೊಂಡು ಕಣ್ಣ ಹನಿಗಳು ದಿಂಬನ್ನು ಒದ್ದೆ ಮಾಡುತ್ತಲಿರುವುದನ್ನು ತಡೆಯುವುದಾದರೂ ಹೇಗೆ. ಚಿಂತಿಸಬಾರದ್ದನೆಲ್ಲಾ ಚಿಂತಿಸಿ ಮತ್ತೆಂದಾದರೂ ಅವಳ ಭಾವನೆಗಳಿಗೆ ಸ್ಪಂಧಿಸುವುದಾದರೂ ಹೇಗೆ, ನೋಡಬಾರದ್ದನ್ನೆಲ್ಲಾ ಕಲ್ಪಿಸಿಕೊಂಡು ಅವಳ ಕಂಗಳನ್ನು ಎದುರಿಸುವುದಾದರೂ ಹೇಗೆ. ಯಾವ ಮಗ್ಗುಲಲ್ಲಿ ತಿರುಗಿದರೆ ನಿದ್ರೆ ಬರಬಹುದು. ಏನು ಮಾಡಿದರೆ ಈ ರಾತ್ರಿ ಸಾಯಬಹುದು.

ಇಬ್ಬರೂ ಸ್ತಬ್ಧವಾಗಿ ಮಲಗಿದ್ದಾರೆ. ಅವಳ ಕಣ್ಣುಗಳು ಇನ್ನೂ ತೆರೆದೇ ಇವೆಯೇನೋ. ಕತ್ತಲಲ್ಲಿ ಏನು ದಿಟ್ಟಿಸುತ್ತಿರಬಹುದು. ಆಗೇ ಹೋಯ್ತೇನೋ ಎಲ್ಲಾ. ನನಗೆ ಕ್ಷಣಗಳು ಯುಗದಂತೆ ಸಾಗುತ್ತಿವೆ, ಇವರಿಗೆ ಯುಗಗಳು ಕ್ಷಣದಂತೆ ಕಳೆದು ತಣ್ಣಗೆ ಮಲಗಿದ್ದಾರೆ. ಇಷ್ಟೇನಾ ಅಗಬಹುದಾದದ್ದು. ಅವಳ ದೇಹದ ಉಗುರೂ ನನ್ನದೆಂದುಕೊಳ್ಳುತ್ತಿದ್ದವನಿಂದ ಸಂಪೂರ್ಣ ಕಸಿದುಕೊಂಡಾಗಿರಬೇಕು ಈಗ. ಎಲ್ಲರೂ ಸೇರಿ ನನ್ನಿಂದ ಕಿತ್ತುಕೊಂಡರು. ಹ ಹ ಹ ಹ.. ಎಲ್ಲಾ ಮೂರ್ಖರು. ಮುಖ್ಯವಾದ ಅವಳ ಅಂಗ ನನ್ನ ಬಳಿಯೇ ಇದೆಯಲ್ಲ. ಅವಳ ಮನಸ್ಸು. ಅರೆ! ಆದರೆ ಇಷ್ಟು ದೊಡ್ಡ ದೊಡ್ಡ ಅಂಗಗಳನ್ನೇ ಕೊಟ್ಟಾಯ್ತು ಇನ್ನು ಇಷ್ಟು ಚಿಕ್ಕ, ಕಣ್ಣಿಗೆ ಕಾಣದಷ್ಟು ಚಿಕ್ಕ ಮನಸ್ಸನ್ನು ಕೊಡಲಾರಳೇ. ಮನಸ್ಸು ಕೊಟ್ಟವರಿಗೆ ದೇಹ ಹಂಚಿಕೊಳ್ಳಬಹುದೆಂಬುದೆಷ್ಟು ನಿಜವೋ, ದೇಹ ಹಂಚಿಕೊಂಡವರೊಡನೆ ಮನಸು ಕೂಡ ಕ್ರಮೇಣ ಹಂಚಿಕೊಳ್ಳುವರೆನುವುದು ನಿಜ, ಇಲ್ಲವಾದಲ್ಲಿ ಆತ್ಮಹತ್ಯೆ, ವಿಚ್ಛೇದನದ ಸಂಖ್ಯೆ ಜಾಸ್ತಿಯಾಗಬೇಕಿತ್ತಲ್ಲವೇ. ಕನಿಷ್ಟಪಕ್ಷ ನೆಮ್ಮದಿಯಾಗಿ ಮಲಗಲಿ ಅವಳು. ನಾನಿಲ್ಲೇ ಇದ್ದರೆ ಮಲಗಲಾರಳೆನಿಸುತ್ತೆ. ಆದರೆ ಇನ್ನು ಮುಂದೆ ಎಂದಿನಂತೆ ‘ಶುಭರಾತ್ರಿ, ಸಿಹಿಕನಸು’ಗಳೆಂದು ಅವಳಿಗೆ ಶುಭಕೋರಲೂ ಸಹ ಆಗಲಾರದೇನೋ ನನ್ನಿಂದ. ಚಂಡಮಾರುತದ ನಂತರದ ನಿಶ್ಯಬ್ಧತೆ, ನೀರವತೆಯಲ್ಲಿ ನಿಧಾನಕ್ಕೆ ಹೊರಟೆ. ಮನೆಯ ಹೊರಗಡೆ ದೊಡ್ಡ ಸ್ಮಶಾನದಂತಹ ಮರಳುಗಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಭಾಸವಾಗುತ್ತಿತ್ತು. ತಡೆಯುವುದಾದರೆ ಮದುವೆಯನ್ನು ತಡೆಯುವ ಧೈರ್ಯ ಮಾಡಬೇಕಿತ್ತು ನಾನು. ಯಾರ ಮುಖ ನೋಡಿ, ಯಾರ ಸಂಬಂಧಕ್ಕೆ ಗೌರವ ಕೊಟ್ಟು ಪ್ರೀತಿ ಬಿಟ್ಟುಕೊಟ್ಟರೂ ಈಗ ಈ ನರಕಯಾತನೆಯನ್ನು ತಡೆಯಲು ಯಾರೂ ಬರುವುದಿಲ್ಲ. ಸ್ವಾರ್ಥಿಗಳಾಗದಿದ್ದಲ್ಲಿ ಪ್ರೀತಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲವೇನೋ ಹಾಗಾದರೆ. ಯಾವಾಗಲೋ ಜೋಂಪು ಹತ್ತಿತ್ತು. ವಿಚಾರಗಳು ಗಿರಗಿಟ್ಟಲೆ ಸುತ್ತುತ್ತಲೇ ಇದ್ದವು. ರಸ್ತೆ ತುಂಬಾ ಹರಡಿದ್ದ ಕತ್ತಲೆ ಮೈಯಿಗೂ ಅಂಟುತ್ತಲೇ ಕತ್ತಲೆಯಲ್ಲಿ ಕರಗಿಹೋದೆ.

* * * * *
ಅಂತೂ ಆಗೋಯ್ತು. ಏನು ಮಾಡುತ್ತಿದ್ದಾನೋ ಏನೋ. ಎಲ್ಲರ ಹಾಗೆ ಅವನೂ ಈಗ ಕುಡಿಯಲು ಶುರುಮಾಡದಿದ್ದರೆ ಸಾಕು. ಬೆಳಗ್ಗಿನಿಂದ ಮೆಸೇಜು ಮಾಡಿಲ್ಲ. ಒಂದು ಹೊತ್ತು ಮೆಸೇಜು ಮಾಡದಿದ್ದರೂ ಕರೆ ಮಾಡಿ ವಿಚಾರಿಸುತ್ತಲಿದ್ದ. ಈಗೇನು ಮಾಡುತ್ತಿರುವನೋ. ನಾನೇ ಮೆಸೇಜು ಮಾಡೋಣವೆಂದರೆ ನನ್ನ ಮದುವೆಯ ವಿಷಯವನ್ನು ನೆನಪಿಸಿದ ಹಾಗಾಗುತ್ತೇನೋ ಅಂತ ಭಯ. ನನ್ನ ಮೇಲೆ ಎಷ್ಟು ಕೋಪಗೊಂಡಿರುವನೋ, ಯಾವಾಗಲಾದರೂ ಎದುರು ಬಂದಾಗ ಅಸಹ್ಯಪಟ್ಟು ಮುಖಮುರಿದು ಹೋಗದಿದ್ದರೆ ಸಾಕೆನಿಸುತ್ತೆ. ಹೇಗೆ ಎದುರಿಸಲಿ ಅವನನ್ನ. ಹೇಗೆ ತಡಿಯಲಿ ಈ ಕಣ್ಣೀರನ್ನ. ನನಗಿಂತ ಜಾಸ್ತಿ ಅಳುತ್ತಿರುವನೇನೋ. ಅವನೂ ಆದಷ್ಟು ಬೇಗ ಒಂದು ಮದುವೆಯಾಗಿ ಚೆನ್ನಾಗಿದ್ದರೆ ಸಾಕು. ಛೇ ಎಲ್ಲರಂತೆ ನಾನೂ ಅವನ ಮಗಳ ಹೆಸರಲ್ಲಿ, ಅವನ ಪಾಸ್ವರ್ಡ್ ಗಳಲ್ಲಿ ಸೇರಿ ಹೋಗುತ್ತೀನೇನೋ. ಹುಡುಗಿಯರು ಕೈ ಕೊಟ್ಟು ಹೋಗುತ್ತಾರೆ ಎಂಬ ಆಪಾದನೆಗೆ ನಾನೂ ಹೊರತಲ್ಲ. ಇಂಥಾ ಅಸಹ್ಯ ಜೀವನ ಮಾಡುವುದಕ್ಕಿಂತ ಸಾಯುವುದು ಮೇಲಿತ್ತು. ಇದೇ ಪರಿಸ್ಥಿತಿ ಬರುತ್ತದೆಂದು ಗೊತ್ತಿದ್ದೂ ಪ್ರೀತಿ ಮಾಡಿದ್ದು ನನ್ನದೇ ತಪ್ಪು. ನನ್ನಿಂದ ಅವನ ಜೀವನ ಹಾಳಾಗದಿದ್ದರೆ ಸಾಕು. ಒಮ್ಮೆ ಅವನ ಮುಖ ನೋಡಿದರೆ ಸಾಕು. ದಯವಿಟ್ಟು ಕ್ಷಮಿಸು ಚಿರು ನಿನಗೆ ಮೋಸ ಮಾಡಿಬಿಟ್ಟೆ.

ಏನ್ ಮಾಡ್ತಿದ್ಯೇ ಬೇಗ ಬಾ ಇನ್ನಾ ರೂಮು ರೆಡಿ ಮಾಡಬೇಕು. ಇಷ್ಟೊತ್ತಾ, ಬಟ್ಟೆ ಬದಲಿಸೋದು ಎಂದು ಅಮ್ಮನ ಧ್ವನಿ. ನೆಮ್ಮದಿಯಾಗಿ ಅಳುವುದಕ್ಕೂ ಬಿಡುಬುದಿಲ್ಲ. ಥು. ಈ ದರಿಧ್ರ ಮಣಭಾರ ಸೀರೆ ಮೊದಲು ಬಿಚ್ಚಿ ಬಿಸಾಕಬೇಕು. ರೂಮು ರೆಡಿ ಮಾಡಬೇಕಾ! ಇನ್ನಷ್ಟೇ ಅನ್ನಿಸುತ್ತೆ ಗಂಡ, ಮನೆ, ಮಕ್ಕಳು, ಕೆಲಸ, ಸಂಸಾರ ಎಷ್ಟು ಬೇಗ ಗೃಹಿಣಿಯ ಪಟ್ಟಕ್ಕೆ ಬಂದುಬಿಟ್ಟೆ. ಅಂದುಕೊಂಡಿದ್ದೇ ಏನೋ, ಕನಸು ಕಂಡಿದ್ದೇ ಏನೋ ಆಗುತ್ತಿರುವುದೇ ಇನ್ನೇನೋ. ಸಲೀಸಾಗಿ ಈ ಬಟ್ಟೆ ಕಳಚಿದ ಹಾಗೆ ಸಂಬಂಧವನ್ನ ಕಳಚಿಬಿಟ್ಟೆನಲ್ಲಾ. ಹೊರಗೆ ಹೋದರೆ ಇನ್ನ ಶುರುವಾಗುತ್ತೆ ನಾಟಕಗಳು. ತಲೆಯ ತುಂಬಾ ಕಳೆದುಹೋಗುತ್ತಿರುವ, ಕಳೆದುಕೊಳ್ಳುತ್ತಿರುವ ಚಿರುವಿನ ಹಳೆಯ ನೆನಪುಗಳೇ ತುಂಬಿಕೊಂಡು ಯಾವಾಗ ಹೊರಗೆ ಬಂದು ಎಲ್ಲರ ಮಾತಿಗೆ ತಲೆಯಾಡಿಸಿ, ಹುಸಿನಗು ಪ್ರದರ್ಶಿಸುತ್ತಿದ್ದೆನೋ, ಯಾವಾಗ ಊಟಕ್ಕೆ ಹಾಕಿದರೋ, ಏನು ತಿಂದೆನೋ, ಒಂದೂ ಗೊತ್ತಾಗಲಿಲ್ಲ, ಒಂದು ರೀತಿಯ ಮಂಪರಿನಲ್ಲಿದ್ದವಳಿಗೆ ಎಚ್ಚರವಾದದ್ದೇ ಕೈಯಲ್ಲಿ ಒಂದು ಲೋಟ ಹಾಲು ಹಿಡಿದು ರೂಮಿನ ಕಡೆಗೆ ಹೊರಟಾಗ. ಅರೆ! ಏನು ಮಾಡಲು ಹೊರಟಿದ್ದೇನೆ. ಹೇಗೆ ಒಪ್ಪಿಕೊಳ್ಳುವೆ. ಮದುವೆ ಯಾರನ್ನು ಬೇಕಾದರೂ ಮಾಡಿಕೊಳ್ಳಬಹುದು ಆದರೆ ಮೈಯನ್ನು ಹಂಚಿಕೊಳ್ಳುವುದು ಅಷ್ಟು ಸುಲಭವಾಗಲಾರದು. ಹೇಗೆ ಎದುರಿಸುವುದು. ಮೈಮೇಲೆ ಚೇಳು ಹರಿದಂತಾದರೆ, ಅಸಹ್ಯ ಹುಟ್ಟಿ ನನಗೇ ಅರಿವಲ್ಲದೇ ದೂಡಿದರೆ ಏನಾಗುತ್ತದೋ. ಬಲವಂತವಾಗಿ ನನ್ನ ಮೇಲೆರಗಲಾರರು. ಪಾಪ ತುಂಬಾ ಒಳ್ಳೆಯ ಮನುಷ್ಯನೇ. ಆದರೆ ಹೇಗೆ ಹೇಳುವುದು ನನ್ನ ಮನಸ್ಸು ಇನ್ನೂ ನಿಮ್ಮನ್ನು ಒಪ್ಪಿಕೊಂಡಿಲ್ಲವೆಂದು. ನಾನು ಕಟ್ಟಿಕೊಂಡವನಿಗೂ ಮೋಸ ಮಾಡುತ್ತಿರುವೆನೇನೋ. ನನ್ನಂಥವಳು ಬದುಕಿದ್ದು ಮಾಡುವುದಾದರೂ ಏನು. ಯೋಚಿಸುತ್ತಲೇ ಮಂಚದ ಮೇಲೆ ಪಕ್ಕದಲ್ಲಿ ಕುಳಿತಿದ್ದೆ.

ಅವರು ಬಾಗಿಲ ಚಿಲಕ ಹಾಕಿ, ದೀಪ ಆರಿಸಿ ಬರುತ್ತಿದ್ದಂತೆಯೇ ಮೈ ನಡುಕ ಹುಟ್ಟಲು ಶುರುವಾಯ್ತು. ಬಗ್ಗಿಸಿದ್ದ ತಲೆಯೆತ್ತಲು ಆಗಲೇ ಇಲ್ಲ. ಶುರುಮಾಡೋಣವೇ ಎಂಬ ಪ್ರಶ್ನೆಗೆ ಏನೆಂದು ಉತ್ತರಿಸಲಿ. ಇಲ್ಲಾ ನನಗೆ ಬೇಡವೆಂದು ಹೇಳುವ ಧೈರ್ಯ ನನ್ನಲ್ಲಿದೆಯಾ. ತಲೆಯಲ್ಲಿ ಬೇಡವೆನ್ನಲು ಕಾರಣಗಳು ಹುಡುಕುವ ವ್ಯರ್ಥ ಪ್ರಯತ್ನವಷ್ಟೇ ಮೌನವೇ ನನ್ನ ಉತ್ತರವಾಗಿತ್ತು. ಮೌನ ಸಮ್ಮತಿ ಲಕ್ಷಣವಾಗಿರಲಾರದು ಕೆಲವು ಸಲ. ಆಗಿ ಹೋಯ್ತು. ನಾನೂ ಕೂಡ ಎಲ್ಲಕ್ಕೂ ಪ್ರತಿಸ್ಪಂಧಿಸಿದೆನಷ್ಟೇ. ಈಗ ಯೋಚಿಸಿದರೆ ನನ್ನ ಮೇಲೇ ಅಸಹ್ಯ ಹುಟ್ಟುತ್ತದೆ. ಎಷ್ಟು ಸಲೀಸಾಗಿ ಬದಲಾಗ್ತೀವೇನೋ ನಾವು. ನನಗೆ ಇವರಲ್ಲಿ ಚಿರು ಕಂಡನೇನೋ ಎಂಬ ಅನುಮಾನ ಹುಟ್ಟಿದಾಗಲಂತೂ ಕತ್ತು ಹಿಚುಕಿಕೊಂಡು ಸಾಯಬೇಕೆನಿಸುತ್ತದೆ. ಇಲ್ಲಾ ಇನ್ನು ನಾನು ಚಿರುಗೆ ಮುಖ ತೋರಿಸಲು ಸಾಧ್ಯವಿಲ್ಲ. ಕನ್ನಡಿಯನ್ನೂ ಸಹ ಹೇಗೆ ಎದುರಿಸಲಿ. ನನ್ನ ಮುಖ, ಈ ಮೈ ಸಂಪೂರ್ಣ ಬದಲಾದಂತೆನಿಸುವುದೇನೋ. ಅವನ ಕೈ ಹಿಡಿದು ನಡೆಯಲು ಸಹ ಆಗುವುದಿಲ್ಲ. ನನ್ನ ಮೈ ಅಪವಿತ್ರವಾಗಿ ಹೋಯ್ತೇನೋ. ಛೇ ಈ ಕತ್ತಲೆ ಕೋಣೆ, ಈ ಮಂಚ, ಈ ಪಕ್ಕದಲ್ಲಿ ಮಲಗಿರುವ ಗಂಡನೆಂಬ ಜೀವ ಎಲ್ಲವನ್ನೂ ಬಿಟ್ಟು ಹೀಗೇ ನಗ್ನವಾಗಿ ಕತ್ತಲೆಯಲ್ಲಿ ಮರೆಯಾಗಿ ಹೋಗಿಬಿಡಬೇಕು.

* * * *
ಕತ್ತಲೆ ಪ್ರಪಂಚ. ಎಲ್ಲೋ ದೂರದಲ್ಲಿ ಒಂದು ಚಿಕ್ಕ ಬೆಳಕು. ಹೋಗುವುದೋ ಬೇಡವೋ ಎಂಬಂತೆ ಚಿರು ನಿಧಾನವಾಗಿ ಬೆಳಕಿನೆಡೆಗೆ ಬರಲು ಬೆಳಕಿನಡಿಯಲ್ಲಿ ನಗುತ್ತಾ ನಿಂತಿರುವ ಚಂದು. ಕಣ್ಣೀರಿನಿಂದ ತೊಯ್ದಿರುವ ಕೆನ್ನೆಯನ್ನು ಕಂಡವಳೇ ಒರೆಸಿ ಏನೋ ಇದು ನಿನ್ನ ಅವಸ್ಥೆ ಎಂದು ಸುಧಾರಿಸುವಳು. ನೀನೇನೇ ಇಲ್ಲಿ ಎಂದರೆ ಅಯ್ಯೋ ನನ್ನದೊಂದು ದೊಡ್ಡ ಕಥೆ ಬಿಡು ನನ್ನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಲೂ ಬೇಡ. ನೋಡು ನಾನಿಲ್ಲಿ ಇದ್ದೀನಿ, ನಿನಗಾಗಿ. ಸುಖವಾಗಿದ್ದೀನಿ ಕೂಡ. ಒಳ್ಳೆಯ ಗಂಡ ಕೂಡ. ಹೇಯ್ ನಮಗ್ಯಾಕೋ ಬೇರೆಯವರ ವಿಷಯ. ನಮ್ಮಿಬ್ಬರ ನಡುವೆ ಬರಲು ಯಾರಿಗೂ ಅನುಮತಿ ಇಲ್ಲಾ ತಾನೆ. ಮುಂಚಿನಿಂದಲೂ ಇಡೀ ಪ್ರಪಂಚದಲ್ಲಿ ಯಾರ ಬಗ್ಗೆಯೂ ತಲೆ ಕೆಡಿಸಿಕೊಂಡವರಲ್ಲ. ನಾವು, ನಾವು, ನಾವಷ್ಟೇ. ಹಾಗೇ ಇರೋಣ. ನಾವು ದೂರ ಇದ್ರೂ, ಮೊಬೈಲು, ಮೆಸೇಜು, ಫೋನ್ ಕಾಲ್ ಗಳು, ಭೇಟಿ, ಮಾತು ಕತೆ ಯಾವುದೇ ಇಲ್ಲದಿದ್ದರೂ ನಾವು ಜೊತೆಯಲ್ಲೇ ಇರುವುದನ್ನ ಕಲಿತಿಲ್ವಾ ಎಂದು ಚಂದು ಕೇಳುವಳು. ಚಿರು ನಕ್ಕು ಅಯ್ಯೋ ಈ ಮಾತುಗಳನ್ನ ಕೇಳಿ ಎಷ್ಟು ದಿನಗಳಾಗಿತ್ತು ನೋಡು, ನೀನು ಹೀಗಿದ್ರೇನೇ ಚೆನ್ನ ಕಣೇ. ಈ ನಡುವೆ ಬರೀ ಅಳುವುದನ್ನೇ ನೋಡಿ ನೋಡಿ ಸಾಕಾಗಿತ್ತು. ಇವಾಗ ಸರಿ ಇದ್ದೀಯ ನೋಡು ಎಂದು ಜೀವತುಂಬಿಕೊಳ್ಳುವನು. ಸರಿ ಈಗ ಎನು ಮಾಡೋಣ, ಎಲ್ಲಿಗೆ ಹೋಗೋಣ ಎಂದು ಚಂದು. ಏನ್ ಮಾಡೋದೇ ಈ ಕತ್ತಲಲ್ಲಿ ಎಲ್ಲಿಗೂ ಹೋಗೋಕು ಆಗೋಲ್ಲ ಎಂದು ಕೈ ಹಿಡಿದು ನಿಲ್ಲುವನು. ಕತ್ತಲೆಲ್ಲೋ ನಾವು ಒಟ್ಟಿಗೆ ಇರುವಾಗ ಬರೀ ಬೆಳಕೇನೇ ಅಲ್ಲಿ ನೋಡು ಸೂರ್ಯ ಹುಟ್ಟುತ್ತಿಲ್ವಾ. ಬಾ ಮಾಮೂಲಿನಂತೆ ಕೈ ಕೈ ಹಿಡಿದು ಸುಮ್ಮನೆ ದಿಕ್ಕಿಲ್ಲದೇ ನಡೆಯುತ್ತಿರೋಣ ಅಷ್ಟೇ ಎಂದು ಕಣ್ಣು ಮಿಟಿಕಿಸುವಳು. ಆಯ್ತು ನೆಡಿಯಪ್ಪಾ ಎಂದು ಇಬ್ಬರೂ ಸುಮ್ಮನೆ ನಡೆದು ಒಬ್ಬರಿಗೊಬ್ಬರು ತರಲೆ ಮಾಡುತ್ತಾ ಹುಟ್ತುತ್ತಿರುವ ಸೂರ್ಯನೆಡೆಗೆ ಹೆಜ್ಜೆಹಾಕುವರು. 






 - ನೀ. ಮ. ಹೇಮಂತ್

Tuesday 1 May 2012

ಸೌಂದರ್ಯ!



          ಕೆಂಪು ಇಲ್ಲ ಹಸಿರು ಇಲ್ಲಾ ಕೆಂಪೇ ಸರಿ. ಬಣ್ಣಗಳನ್ನು ಅಲಂಕಾರಕ್ಕಲ್ಲದೆ ಭಾವತುಂಬಲು ಬಳಸುವುದದೆಷ್ಟು ಸರಿಯೋ ನಾಕಾಣೆ. ಬಹಳ ದಿನಗಳ ನಂತರ ಈ ಕಲಾಕೃತಿ ಮನಸಿಗೆ ತುಂಬಾ ಹತ್ತಿರವಾಗಿದೆ. ಇದರಲ್ಲಿರುವುದು ಮೊಲ ಮತ್ತು ಸಿಂಹವೋ, ಅಥವಾ ಎರಡೂ ಮೊಲವೇನೋ, ಅಥವಾ ಎರಡೂ ಸಿಂಹವೇ ಇರಬಹುದಾ ಎಂದು ಗೊಂದಲವಾಗದೇ ಇರುವುದಿಲ್ಲ. ಬಹುಷಃ ನನಗೂ ಖಡಖಂಡಿತವಾಗಿ ಗೊತ್ತಿದೆಯೋ ಇಲ್ಲವೋ. ಒಮ್ಮೊಮ್ಮೆ ಈ ಮೊಲ ಸಿಂಹದಂತೆಯೇ ಕಾಣುತ್ತೆ. ಕೆಲವು ಬಾರಿ ಸಿಂಹವೇ ಮೊಲವಾಗಿದೆಯೇನೋ ಅನ್ನಿಸುತ್ತೆ. ಎಲ್ಲವನ್ನೂ ಅವರವರ ದೃಷ್ಟಿಕೋನಕ್ಕೇ ಬಿಟ್ಟುಬಿಡುತ್ತೇನೆ. ಅಷ್ಟಕ್ಕೂ ಈ ಮೊಲವನ್ನು ದುರ್ಬಲತೆ ಮತ್ತು ಸಿಂಹವನ್ನು ಪ್ರಬಲತೆಯ ಪ್ರತೀಕವೆಂದು ಬಳಸುವ ನಾನು ಎಷ್ಟು ಮೂರ್ಖಳಿರಬಹುದು. ಕೊಲ್ಲುವುದಕ್ಕಿಂತ  ಸಾವನ್ನು ಗೊತ್ತಿದ್ದೂ ಎದುರಿಸುವುದಕ್ಕೇ ಹೆಚ್ಚಿನ ಧೈರ್ಯ ಬೇಕಿರೋದಲ್ವಾ. ಇಲ್ಲಾ ಇವತ್ತು ಅವನು ಬಂದು ಈ ಚಿತ್ರಕಲೆಯನ್ನು ಒಡೆದು ಹಾಕಲು ಬಿಡಕೂಡದು, ಶಕ್ತಿಯಿರುವಷ್ಟೂ ವಿರೋಧಿಸುತ್ತೇನೆ. ಆದರೆ ಅದು ಹೇಗೆ ಸಾಧ್ಯ ನಾನು ಜಿಮ್ ಹೋಗೋದಿಲ್ಲ, ನನ್ನಲ್ಲಿ ದೈಹಿಕವಾಗಿ ಅವನಷ್ಟು ಶಕ್ತಿಯಿಲ್ಲ. ತಡೆದಷ್ಟೂ ಈ ಚಿತ್ರದ ಜೊತೆಗೆ ನನಗೂ ಹಾನಿ ಮಾಡುತ್ತಾನೆ. ಮೊನ್ನೆಯ ಕೈ ಗಾಯವೇ ಇನ್ನೂ ಒಣಗಿಲ್ಲ. ಮತ್ತಷ್ಟು ಕಲೆ ಮಾಡಿದರೆ ಏನು ಮಾಡುವುದು. ಅದೆಲ್ಲಾ ಇರಲಿ ಈ ಚಿತ್ರಕ್ಕೆ ಒಂದು ಹೆಸರಿಡಬೇಕಲ್ಲಾ. ಏನಂತ ಇಡಲಿ.. ಹೊಟ್ಟೆ, ಬೇಟೆ, ಸಿಂಹ, ಗೊಂದಲ, ಜೀವನ, ಹಕ್ಕು, ಛಲ, ಸುಖ, ಅರಿವು, ಮೌನ, ಬಿಡುಗಡೆ, ಸ್ವಾತಂತ್ರ್ಯ, ಛೆ, ಇಲ್ಲಾ, ಯಾವುದೂ ಸರಿಯಿಲ್ಲ ಹಾ.. “ಸೌಂದರ್ಯ” ಇದೇ ಸರಿ. ಸಿಂಹ ಮೊಲವನ್ನು, ಅಥವಾ ಮೊಲ ಮೊಲವನ್ನು ಅಥವಾ ಸಿಂಹ ಸಿಂಹವನ್ನು, ಅಥವಾ ಮೊಲ ಸಿಂಹವನ್ನು ಬೇಟೆಯಾಡುತ್ತಿರುವಂತಹ ಈ ಚಿತ್ರಕ್ಕೆ ಸೌಂದರ್ಯ ಎಂದು ಹೆಸರಿಟ್ಟರೆ ಎಷ್ಟು ಸಮಂಜಸ? ಯಾರಿಗೆ ಒಪ್ಪಿಗೆಯಾಗಲೀ ಬಿಡಲಿ ಇದಕ್ಕೆ ಸೌಂದರ್ಯವೆಂದೇ ಹೆಸರಿಡುತ್ತೇನೆ. ಚೆನ್ನಾಗಿದೆ. ನೋಡಿದಷ್ಟೂ ಮತ್ತಷ್ಟು ನೋಡಬೇಕೆನಿಸುತ್ತಿದೆ. ಇಂದೇ ಜನಿಸಿ ಇಂದೇ ಮರಣ ಹೊಂದುವ ನನ್ನ ಪುಟ್ಟ ಶಿಶು ‘ಸೌಂದರ್ಯ’! ಹೌದು ಈ ಸೌಂದರ್ಯ ಹೆಣ್ಣೋ ಗಂಡೋ? ಏನು ವ್ಯತ್ಯಾಸ?

* * * * *
ಬಿಳೀ ಟೈಲ್ಸ್ ಮೇಲೆ ಚಿತ್ರವಿಚಿತ್ರವಾಗಿ ಹರಡಿ ಬಿದ್ದಿರುವ ಬಣ್ಣ. ನನ್ನ 
ಬ್ರಶ್ ಹೊಸದೇ ತೊಗೋಬೇಕೆನಿಸುತ್ತೆ. ನನ್ನ ಸೌಂದರ್ಯ ಹರಿದು ಸಾವಿರ ಹೋಳಾಗಿದ್ದರೂ ಆಗಿರಬಹುದೇನೋ. ನನ್ನ ಕಲಾಕೃತಿಯ ಆಯಸ್ಸು ಮುಗಿದಿತ್ತು. ಅರೆ! ನನ್ನ ಸೌಂದರ್ಯವನ್ನು ನೆಲಕ್ಕೆ ಜಪ್ಪಿ ಜಪ್ಪಿ ಪುಡಿ ಪುಡಿ ಮಾಡುತ್ತಿದ್ದಾಗ ನಾನ್ಯಾಕೆ ವಿರೋಧಿಸಲಿಲ್ಲ. ಇಷ್ಟು ದಿನ ಚಿತ್ರಗಳನ್ನ ಹಾಳು ಮಾಡುವಾಗ ನಾನು ಕಿತ್ತುಕೊಳ್ಳಲು ಪ್ರಯತ್ನಿಸಿದಷ್ಟೂ, ವಿರೋಧಿಸಿದಷ್ಟೂ, ಅತ್ತು ಕರೆದು ಪ್ರತಿಕೃತಿಯನ್ನು ಹಾಳು ಮಾಡದಿರಲು ಕಾಲು ಹಿಡಿದಷ್ಟೂ ಕಿತ್ತುಕೊಂಡು, ಒಡೆದು ಪುಡಿ ಪುಡಿ ಮಾಡಿ, ಕಾಲಿನಲ್ಲಿ ತುಳಿದು, ಬೆಂಕಿ ಕೂಡ ಹಚ್ಚಿ ಕೇಕೆ ಹಾಕಿ ನಗುತ್ತಲಿದ್ದ. ಚಿತ್ರಕಲೆ ತನಗೆ ಇಷ್ಟವಿಲ್ಲವಂತೆ, ಅದಕ್ಕಾಗಿ ನಾನು ಈ ಹವ್ಯಾಸ ಬಿಟ್ಟುಬಿಡಬೇಕಂತೆ. ಆದರೆ ನನಗೆ ಚಿತ್ರಕಲೆ ಪ್ರಾಣ. ನನ್ನ ಹವ್ಯಾಸದಿಂದ ಅವನಿಗೇನೂ ತೊಂದರೆಯಾಗುತ್ತಿರಲಿಲ್ಲ. ನನ್ನ ಕೋಣೆಯಲ್ಲಿ ನಾನು ನನ್ನ ಹವ್ಯಾಸ ಮುಂದುವರೆಸುವ ಅವಕಾಶ ಬೇಕಿತ್ತಷ್ಟೇ. ನಾನು ಮುಂದುವರೆಸುತ್ತೇನೆ, ಇದನ್ನು ನಾನು ನಿರ್ಧರಿಸಿಯಾಗಿತ್ತು. ಆದರೆ ಇಂದು ನಾನೇಕೆ ವಿರೋಧಿಸಲಿಲ್ಲ. ಅದಕ್ಕೇ ಒಡೆದು ಬಿಸುಟಿ ನನ್ನ ಕಪಾಳೆಗೆ ಹೊಡೆಯುವ ಧೈರ್ಯವನ್ನೂ ಮಾಡಿದನೆನಿಸುತ್ತೆ. ಆದರೆ ನನ್ನ ಸೌಂದರ್ಯಕ್ಕೆ ಇಂದು ಬೆಂಕಿ ಬಿದ್ದಿರಲಿಲ್ಲ. ನನ್ನ ಕೆನ್ನೆಗಳಿಗೆ ಇನ್ನೂ ಎರಡು ಬಿದ್ದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇದು ವಿಚಿತ್ರ, ಏನೋ ಮಾಮೂಲಿನಂತಿಲ್ಲ. ನನ್ನ ಸೌಂದರ್ಯ ಹರಿದು ಬಿದ್ದಿದೆಯಷ್ಟೇ, ಬೆಂಕಿ ಕಂಡಿರಲಿಲ್ಲ. ಇದು ನನ್ನ ಗೆಲುವಿರಬಹುದೇ? ಹೌದು ಒಂದು ಹಂತಕ್ಕೆ ನಾನು ಗೆದ್ದಿದ್ದೆನೆನಿಸುತ್ತೆ. ಆದರೆ, ಇದುವರೆಗೂ ನನ್ನ ಕೆನ್ನೆಗಳ ಮೇಲೆ ಈ ರೀತಿ ಅಚ್ಚು ಮೂಡಿರಲಿಲ್ಲ. ಮುಟ್ಟಲೂ ಸಹ ಆಗುತ್ತಿಲ್ಲ ಕೆನ್ನೆಯೆಲ್ಲಾ ಉರಿ. ದವಡೆಯವರೆಗೂ ನೋಯುತ್ತಿದೆ. ಆದರೂ ಅದೇಕೋ ನಿನ್ನೆಯವರೆಗೂ ಆಗುತ್ತಿದ್ದಷ್ಟು ಸಂಕಟವಾಗುತ್ತಿಲ್ಲ. ಈ ನೋವಿನಲ್ಲೂ ಗೆಲುವಿನ ಛಾಯೆಯಿದೆ. ಹೌದು, ನಾನು ಇನ್ನೊಂದು ಸೌಂದರ್ಯವನ್ನು ಚಿತ್ರಿಸಲೇಬೇಕು. 
* * * * *
ಹಾ ಹಾ ಹಾ.. ನನ್ನ ಸೌಂದರ್ಯ ಇವತ್ತು ಉಳಿಯಿತು. ಇದು ಮೊಟ್ಟ ಮೊದಲ ಬಾರಿ ನಾನು ಗೆದ್ದಿರುವುದು. ಅಯ್ಯೋ ನನ್ನ ಖುಷಿ ಯಾರಿಗೆ ಹೇಳಿಕೊಳ್ಳಲಿ. ಆದರೆ ನನ್ನ ಬಲಗೈ ಎತ್ತಲಾಗ್ತಿಲ್ಲ, ಬೆರಳುಗಳನ್ನ ಮುಟ್ಟಿದರೆ ನೋಯುತ್ತಿದೆ. ಮೂಳೆ ಮುರಿದಿಲ್ಲವಾದರೆ ಸರಿ ಅಷ್ಟೇ. ಆದರೆ ನನ್ನ ಚಿತ್ರ ನಗುತ್ತಲಿದೆ. ಇಂದು ನಡೆದದ್ದೇನು. ಮಾಮೂಲಿನಂತೆ ಬಾಗಿಲು ಧಿಡೀರನೆ ಬಡಿಯುತ್ತ ಬಂದ. ಬಂದವನೇ ಅರ್ಧ ಪೂರ್ಣಗೊಂಡಿದ್ದ ಚಿತ್ರದ ಪರದೆಯನ್ನು ನಿಲುವಿನಿಂದ ಕಿತ್ತು ಹಿಡಿದುಕೊಂಡ. ನನ್ನ ಯಾವುದೇ ರೀತಿಯ ಪ್ರತಿಕ್ರಿಯೆಯಿಲ್ಲದ್ದು ಕಂಡು ಗೊಂದಲಗೊಂಡಿರಬಹುದು. ಅವನಿಗೆ ನಾನು ವಿರೋಧಿಸುವುದೇ ಬೇಕಿತ್ತೆನಿಸುತ್ತೆ. ನಾನು ಸುಮ್ಮನೆ ನಿಂತಿರುವುದನ್ನು ಕಂಡು ಚಿತ್ರವನ್ನು ಬಿಟ್ಟು ನನ್ನ ಮೇಲೆಯೇ ಎರಗಿದ. ಎರಡೂ ಕಪಾಳೆಗೆ ಹೊಡೆದ. ಈ ಕೈಯಿದ್ರೆ ತಾನೆ ನೀನು ಈ ಕುಲಗೆಟ್ಟ ಚಿತ್ರಗಳನ್ನ ಬಿಡಿಸುತ್ತಾ ನಿಲ್ಲುವುದು ಎಂದು ನನ್ನ ಬಲಗೈಯನ್ನೇ ತಿರುಗಿಸಿದ. ನಿನಗಿದರಿಂದ ಯಾವ ರೀತಿ ತೊಂದರೆ ಆಗ್ತಿದೆ. ನಿನಗೆ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಹಾಕ್ತಿದ್ದೀನಿ ತಾನೆ. ಮನೆಕೆಲಸಗಳಲ್ಲಿ ಏನಾದ್ರು ನನ್ನಿಂದ ಲೋಪವಾಗಿದ್ಯ ಹೇಳು. ನನ್ನ ಬಿಡುವಿನ ವೇಳೆಯಲ್ಲಿ ನಾನು ಚಿತ್ರ ಬಿಡಿಸುತ್ತೀನಿ. ಅದು ನಿನ್ನಿಂದ ಯಾಕೆ ಸಹಿಸೋಕೆ ಆಗ್ತಿಲ್ಲ ಎಂದದ್ದಕ್ಕೆ. ನೀನು ಚಿತ್ರ ಬಿಡಿಸಿ ಯಾವ ಪ್ರಶಸ್ತಿ ತೊಗೊಬೇಕು ಅಂತ ಅಂದುಕೊಂಡಿದ್ಯಾ, ನಿನ್ನ ಚಿತ್ರಗಳು ಈ ಗೋಡೆಗಳಿಂದ ಹೊರಗೂ ಸಹ ಹೋಗೋದಿಲ್ಲ ನೆನಪಿರಲಿ. ನಿನ್ನ ಧರಿದ್ರ ಚಿತ್ರಗಳನ್ನ ಯಾವನು ನೋಡ್ತಾನೆ. ನಿನ್ನನ್ನ ನೀನು ಮಹಾನ್ ಕಲಾವಿದೆ ಅಂತ ಅಂದುಕೊಂಡಿದ್ಯಾ ಹೇಗೆ. ಕುಲಗೆಟ್ಟ ಅಭಿರುಚಿ ನಿನ್ನದು ಎಂದು ಅವನೇ ನಿರ್ಧರಿಸಿ ಅಬ್ಬರಿಸಿದ. ಕೈಗಳು ಪ್ರಾಣ ಹೋಗುವಹಾಗೆ ನೋಯುತ್ತಿತ್ತು. ಕೈಬಿಟ್ಟು ಮಾತನಾಡು ನೀನು ಎಂದು ನೂಕಿದ್ದು ಅವನಿಗೆ ಅವಮಾನವಾದಂತಾಗಿರಬೇಕು. ಕಾಲು ಕಾಲಿನಲ್ಲಿ ಒದ್ದು ಹೋದ. ಕೊನೆಗೂ ಅವನ ಬಾಯಿಯಲ್ಲಿ ಬಂದ ಮಾತು ಚಿತ್ರಕಲೆ ಬಿಡು ಅಷ್ಟೇ ಎಂದು. ಯಾಕವನಿಗೆ ನನ್ನ ಚಿತ್ರಕಲೆಯ ಮೇಲೆ ಇಷ್ಟು ತಾತ್ಸಾರ, ಇಷ್ಟು ದ್ವೇಷ, ಇಷ್ಟು ವಿರೋಧ. ನನಗದೇ ಅರ್ಥವಾಗುತ್ತಿರಲಿಲ್ಲ. ಅವನದ್ದು ಹಠವಾದರೆ ನನ್ನದೂ ಹಠವೇ. ಅವನು ಹೊಡೆಯುವಾಗ, ಕೈ ತಿರುಗಿಸಿದಾಗ ನಾನ್ಯಾಕೆ ಕಣ್ಣೀರು ಹಾಕುತ್ತಾ, ಬಲಹೀನಳಾಗಿ ಅಮ್ಮನನ್ನು ನೆನೆದು, ದಯವಿಟ್ಟು ಬಿಡು ಬಿಡು ಎಂದು ಅವನಿಗೆ ಬೇಡಿಕೊಂಡೆನೋ ಇವಾಗ ನಾಚಿಕೆಯಾಗುತ್ತಿದೆ. ಆದರೆ ನನ್ನ ಸೌಂದರ್ಯ ನಗುತ್ತಲಿದೆ. ಇದು ನನ್ನ ಸೋಲಲ್ಲ ನನ್ನ ಗೆಲುವೇ ಸರಿ. ಅವನು ಸೋತಿದ್ದ, ಅದಕ್ಕೇ ಕಣ್ಣಲ್ಲಿ ಕಣ್ಣಿಟ್ಟು ನನ್ನಲ್ಲಿ ಮಾತನಾಡಲಾಗಲಿಲ್ಲ ಅವನಿಗೆ. ನಿಂತು ನನ್ನ ಮಾತುಗಳನ್ನ ಎದುರಿಸಲಾಗಲಿಲ್ಲ, ಹೋದ. ಆದರೆ ಎಲ್ಲಿಗೆ ಹೋದಾನು. ಮತ್ತೆ ಬರಲೇ ಬೇಕು, ನನ್ನನ್ನು ಎದುರಿಸಲೇ ಬೇಕು.
* * * * *
ಮಹಿಳೆಯರನ್ನು ಬೆಂಬಲಿಸುವ, ಸಮಾಜದಲ್ಲಿರುವ ಹಲವು ಸಂಘಟನೆಗಳಲ್ಲಿ ಯಾವುದಾದರೂ ಒಂದಕ್ಕೆ ಮೊರೆ ಹೋಗಬೇಕೆಂದು ಹಲವು ಬಾರಿ ಅನಿಸಿತ್ತು. ಈ ಮಹಾಪುರುಷನ ವೈಯಕ್ತಿಕ ಜೀವನದಲ್ಲಿನ ನಡುವಳಿಕೆಯನ್ನು ಇಡೀ ಸಮಾಜಕ್ಕೆ ತೋರಗೊಡಬೇಕೆಂದು ದ್ವೇಷ ಹುಟ್ಟಿದ್ದುಂಟು. ಆದರೆ ಇದು ಒಬ್ಬ ಗಂಡು ಹೆಣ್ಣಿನ ಮೇಲೆ ಮಾಡುತ್ತಿರುವ ದೌರ್ಜನ್ಯವಾಗಿತ್ತೆಂದು ನನಗೆ ಅನುಮಾನ ಸದಾ ಇದೆ. ಅವನು ಗಂಡು ಹೌದು, ನಾನು ಹೆಣ್ಣು ಹೌದು ಆದರೆ ನನ್ನ ಮೇಲೆ ಆತ ಚಲಾಯಿಸುತ್ತಿದ್ದ ಅಧಿಕಾರವನ್ನು ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಗಂಡಿನ ಮೇಲೂ ಸಹ ಚಲಾಯಿಸುತ್ತಿದ್ದ. ಇದು ಅವನಲ್ಲಿನ ಅಹಂಭಾವ, ತಾನು ಮೇಲು ಇತರರು ಕೀಳೆಂಬ ನಡವಳಿಕೆಯಷ್ಟೇ, ಹಾಗಾಗಿ ಇದು ಮನುಷ್ಯ ಮನುಷ್ಯನ ನಡುವಿನ ದ್ವಂದ್ವವಷ್ಟೇ. ಅದಕ್ಕಾಗಿ ಸ್ತ್ರೀ ಸಮಾನತೆಗಾಗಿ, ಪುರುಷ ಪ್ರಧಾನ ಸಮಾಜದ ವಿರುದ್ಧ ಹೋರಾಡುವ ಯಾವ ಬುದ್ಧಿಜೀವಿಗಳ ಬಳಿಯೂ ಹೋಗುವುದು ಸರಿಯೆನಿಸಲಿಲ್ಲ. ಅದರಿಂದ ಸಮಸ್ಯೆ ಇನ್ನೊಂದು ರೂಪ ಪಡೆಯುತ್ತಿತ್ತೇ ಹೊರತು ಪರಿಹಾರವಾಗುತ್ತಿರಲಿಲ್ಲ. ಏನೇ ಆಗಲಿ ನನಗೆ ಅವನು ಬೇಕಿತ್ತು, ಅವನ ದುಡ್ಡಿಗಾಗಿ ಅಲ್ಲ, ಆಸರೆಗಾಗಿ ಅಲ್ಲ, ಘನತೆಗಾಗಿ ಅಲ್ಲ, ಮತ್ತಾವುದೇ ಕಾರಣಕ್ಕಾಗಿ ಅಲ್ಲ ಕೇವಲ ಅವನ ಪ್ರೇಮಕ್ಕಾಗಿ, ನನ್ನಲ್ಲಿದ್ದ ಅವನಲ್ಲಿನ ಪ್ರೇಮಕ್ಕಾಗಿ. ಅವನಿಗೂ ಸಹ ಅದೇ ಕಾರಣಕ್ಕಾಗಿ ನಾನು ಬೇಕಿತ್ತು ಅದು ನನಗೆ ಗೊತ್ತು. ಆದರೆ ಈ ಸಮಸ್ಯೆಗೆ ಪರಿಹಾರ ಬೇಕು. ಅದನ್ನು ನಾನೇ ಕಂಡುಕೊಳ್ಳಬೇಕಿದೆ. ಆಸ್ಪತ್ರೆಯಲ್ಲಿ ಕೈಯಿನ ಇಲಾಜು ಮಾಡಿಸಿಕೊಳ್ಳಲು ಹೇಳಿದ ಸುಳ್ಳು ನನ್ನಲ್ಲಿ ಇಷ್ಟು ಆಲೋಚನೆಗಳನ್ನು ಹುಟ್ಟಿಸಲು ಪ್ರೇರೇಪಿಸಿತ್ತು. ಸಧ್ಯ ಕೈಗಳ ನೋವು, ಊತ ಮೂರು ದಿನಗಳಲ್ಲಿ ಕಡಿಮೆಯಾಯಿತು. ಮತ್ತೆ ನನ್ನ ಚಿತ್ರಕಲೆಯ ಸೌಂದರ್ಯವನ್ನು ಜಾಗೃತಗೊಳಿಸಿದೆ. ಈ ಬಾರಿ ಬಿಳಿ ಕೈಯಿನ ಮೇಲಾಗಿರುವ ಕೆಂಪು ಗಾಯಕ್ಕೆ ಹಸಿರು ಔಷಧಿ ಹಚ್ಚುತ್ತಿರುವ ಕಪ್ಪು ಕೈಯಿನ ಚಿತ್ರ ಬರೆದರೆ ಹೇಗೆಂದು ಒಂದು ಆಲೋಚನೆ. ಇಲ್ಲಾ, ಒಂದು ಊತ ಬಂದಿರುವ ಬಿಳಿಯ ಕೈ ಒಂದು ಸವಕಲು ಕಪ್ಪು ಕೈಯನ್ನು ಬಾಕುವಿನಿಂದ ಚುಚ್ಚುತ್ತಿರುವ ವಿಲಕ್ಷಣ ಕೃತಿಯನ್ನು ಬರೆಯಬೇಕೆಂದು ಮನಸ್ಸಾಗುತ್ತಿದೆ. ಛೆ ಛೆ ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರವಾಗಲಾರದು, ಅದು ಪರಿಹಾರವಲ್ಲ ಪ್ರತೀಕಾರ, ಸಮಸ್ಯೆಯ ಮುಂದುವರಿಕೆ. ಹಾಗಾದ್ರೆ ಔಷಾಧಿಯ ಚಿತ್ರವನ್ನೇ ಬರೆಯುವುದು ಸರಿಯೆಂದು ನಿರ್ಧರಿಸಿ ಬಣ್ಣ ಕಲೆಸಲು ಶುರುಮಾಡಿದೆ.


* * * * *
ಬಣ್ಣಗಳನ್ನು ನನ್ನ ಮೇಲೇ ಸುರಿದು, ಜುಟ್ಟು ಎಳೆದಾಡಿ, ಕಾಲಲ್ಲಿ ಒದ್ದು, ಕೈಮುರಿದು ಏನು ಮಾಡಿದರೂ ನಾನು ಅಳಲೂ ಇಲ್ಲ ವಿರೋಧಿಸಲೂ ಇಲ್ಲ. ಹೊಡೆದೊಡೆದು ಅವನಿಗೇ ಸಾಕಾಯ್ತೇನೋ. ಎರಡು ದಿನವಾಯ್ತು, ಮೂರು ದಿನವಾಯ್ತು ನಾನು ಪ್ರತಿಕ್ರಿಯೆ ಕೊಡುವುದನ್ನು ಸಂಪೂರ್ಣ ನಿಲ್ಲಿಸಿದ್ದೆ. ಸುಸ್ತಾಗುವಷ್ಟು ಹೊಡೆದು ಹೋಗುತ್ತಿದ್ದ. ನೋವನ್ನು ನುಂಗಲು ಕಲಿಯುತ್ತಾ ಬಂದಿದ್ದೆ. ಈಗೀಗ ಅವನ ನಿರರ್ಥ, ನಿಷ್ಪ್ರಯೋಜಕ ಪ್ರಯತ್ನ ಕಂಡು ಒಳಗೊಳಗೇ ನಗೆ ಬರುತ್ತಲಿತ್ತು. ಎಷ್ಟು ಬಲಾಢ್ಯನೆಂದು ತಾನು ತಿಳಿದಿದ್ದನೋ ಗೊತ್ತಿಲ್ಲ, ನನಗಂತೂ ಅಷ್ಟೇ ಕ್ಷೀಣಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಲಿತ್ತು. ಬಹುಷಃ ಅವನಿಗೂ ಗೊತ್ತಾಗಿತ್ತೇನೋ. ತನ್ನ ಸೋಲಿನಲ್ಲಿ ತನಗೆ ಅವಮಾನವಿದೆ, ತನ್ನ ಸೋಲನ್ನಾದರೂ ಎದುರಿಸಿಯಾನು ಅನುಮಾನವನ್ನು ಖಂಡಿತಾ ಎದುರಿಸುವ ಶಕ್ತಿ ಪ್ರಬಲನೆಂದುಕೊಂಡಿದ್ದ ಅವನಿಗೆ ಇರಲು ಸಾಧ್ಯವಿಲ್ಲ. ಆದರೆ ಅವನ ಹಾದಿಯಲ್ಲಿ ಸೋಲಿಗಷ್ಟೇ ಅವಕಾಶವಿರುವುದು. ಆ ಸೋಲನ್ನು ತಾನು ಅವಮಾನವೆಂದು ಪರಿಗಣಿಸಿದರೆ ಅದಕ್ಕೆ ಅವನೇ ಹೊಣೆ.
* * * * *
ಇಂದೂ ನೇರವಾಗಿ ಒಳಗೆ ಬಂದವನೇ ಔಷಧಿಯ ಕೈಗಳ ಚಿತ್ರ ಪೂರ್ಣಗೊಳಿಸುವ ಕೊನೆಯ ಹಂತದಲ್ಲಿದ್ದವಳನ್ನು ಕಂಡು ಹೊಡೆಯಲು ಕೈ ಎತ್ತಿದವನು ಇಳಿಸಿ ಕೈಲಿದ್ದ ಮೊಬೈಲನ್ನು ನೆಲಕ್ಕಪ್ಪಳಿಸಿ, ತಲೆಕೆಡಿಸಿಕೊಂಡು, ಅಡುಗೆ ಮನೆಗೆ ಹೋಗಿ, ಮಾಡ್ತೀಯಲ್ಲಾ ಮಾಡು, ನಿನ್ನ ಚಿತ್ರಕಲೆ, ನಿನ್ನ ಹಠ, ನೀನೇ ಬದುಕು, ನಾನೇನು ಅಲ್ಲ ಅಂದಮೇಲೆ ನಾನ್ಯಾಕೆ ಬದುಕಿರಲಿ ಎಂದು ಘರ್ಜಿಸುತ್ತಲೇ ತಲೆಯ ಮೇಲೆ ಸೀಮೆ ಎಣ್ಣೆ ತಂದು ಸುರಿದುಕೊಂಡೇ ಬಿಟ್ಟ. ಅವನ ಕಣ್ಣಲ್ಲಿ ನೀರಿತ್ತೋ, ಇಲ್ಲ ಸೀಮೆ ಎಣ್ಣೆಯೇ ಸುರಿಯುತ್ತಲಿತ್ತೋ ತಿಳಿಯಲಿಲ್ಲ. ಆದರೆ ಈ ತನ್ನ ಆಘಾತಕಾರೀ ಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಬೆಂಕಿ ಕಡ್ಡಿ ಗೀರಲು ಪ್ರಯತ್ನಿಸುತ್ತಿದ್ದವನನ್ನು ತಡೆದು ಬೆಂಕಿ ಪೊಟ್ಟಣ ಬಿಸಾಕಿದೆ. ಬದುಕೋಕಂತೂ ಬಿಡಲಿಲ್ಲ, ಸಾಯೋಕಾದ್ರೂ ಬಿಡು ಎಂದ. ಏನಾಗಿದೆ ನಿನಗೆ ಸಾಯೋಂಥದ್ದು, ನಿನ್ನ ಸಮಸ್ಯೆಯಾದರೂ ಏನು ಎಂದೆ. ನಿನ್ನ ಹಠ, ನಿನ್ನ ಕೆಟ್ಟ ಹಠ, ನಿನ್ನ ಹಠ ನನ್ನನ್ನ ದಿನೇ ದಿನೇ ಕೊಲ್ಲುತ್ತಲಿದೆ ಎಂದ. ನಿನ್ನ ಹಠವೂ ಎಂದಷ್ಟೇ ಹೇಳಿ ಸುಮ್ಮನೆ ನಿಂತೆ. ಎಷ್ಟು ಹೊತ್ತು ಮೌನವಾಗಿದ್ದೆವೋ ಗೊತ್ತಿಲ್ಲ. ಸುಮ್ಮನೆ ಕುಳಿತೇ ಇದ್ದ. ನೇರವಾಗಿ ಅವನ ಬಳಿ ಹೋಗಿ ಅವನ ಕೆನ್ನೆ ಹಿಡಿದು ನೆಲ ನೋಡುತ್ತಿದ್ದ ಅವನ ಮುಖವನ್ನೆತ್ತಿ ಅವನ ಒದ್ದೆ ಕಣ್ಣುಗಳನ್ನು ದಿಟ್ಟಿಸಿದೆ. ನೀನು ನನ್ನ ಚಿತ್ರಕಲೆಯನ್ನು ಒಪ್ಪುವುದರಲ್ಲೇ ನಿನ್ನ ಗೆಲುವಿದೆ, ಅದು ನಿನ್ನ ಸೋಲಲ್ಲ ಕಣೋ ಎಂದೆ. ಗಟ್ಟಿಯಾಗಿ ತಬ್ಬಿ ಮಗುವಿನಂತೆ ಅತ್ತ. ನಾನು ಯಾವುದನ್ನ ಬೇಡವೆಂದರೂ ನೀನು ಅದನ್ನೇ ಮಾಡ್ತೀಯೆ. ನನಗೆ ನೀನು ಕೊಂಚವೂ ಗೌರವ ಕೊಡೋದಿಲ್ಲ. ನಿನ್ನ ಹಠ ನನ್ನಲ್ಲಿ ಇನ್ನಷ್ಟು ಛಲ ಮೂಡಿಸುತ್ತೆ. ನಿನ್ನನ್ನು ನನ್ನ ದಾರಿಗೆ ತಂದುಕೊಳ್ಳಬೇಕೆಂದು ಎಷ್ಟು ಪ್ರಯತ್ನ ಪಟ್ಟರೂ ನೀನು ನಿನ್ನದೇ ದಾರೀಲಿ ಹೋಗ್ತೀಯ. ಮತ್ತೆ ನಾನ್ಯಾಕೆ ಬದುಕಿರಲಿ ಹೇಳು. ಎಂದು ನನ್ನ ಹಿಂದೆ ಕಣ್ನೊರೆಸಿಕೊಳ್ಳುತ್ತಿದ್ದ. ನಿನ್ನ ಇಷ್ಟಗಳಂತೆ ನಡೆದರೆ ಮಾತ್ರ ನಿನ್ನನ್ನು ಗೌರವಿಸುವುದೆಂದರ್ಥಾನಾ? ನನಗೆ ನಿನ್ನ ಮೇಲೆ ಎಷ್ಟು ಪ್ರೀತಿ, ಗೌರವವಿದೆ ಅಂತ ನನ್ನ ಭೂದಿಯಾದ, ಹರಿದುಹೋದ ಎಷ್ಟೋ ಚಿತ್ರಗಳನ್ನ ಕೇಳು ಹೇಳ್ತವೆ. ನನ್ನ ಔಷಧಿಗಳನ್ನ ಕೇಳು ಗೊತ್ತಾಗುತ್ತೆ. ನಾನು ಮನಸು ಮಾಡಿದ್ರೆ ನಿನ್ನನ್ನ ಬಿಟ್ಟು ಹೋಗೋದೇನು ಕಷ್ಟ ಇರಲಿಲ್ಲ ಅಲ್ವಾ. ಎಂದು ಕೇಳುವಷ್ಟರಲ್ಲಿ ಬಾಯಿ ಮುಚ್ಚಿದ. ಸಾಕು ದಯವಿಟ್ಟು ಇಷ್ಟು ಅವಮಾನ ಮಾಡಬೇಡ. ನಾಚಿಕೆಯಾಗುತ್ತೆ ಎಂದು ಸುಮ್ಮನೆ ಅಪ್ಪಿಕೊಂಡೇ ಇದ್ದ. ಎಷ್ಟೋ ಹೊತ್ತಿನ ನಂತರ ಸರಿ ಮಾಡ್ಕೋ ನಿನ್ನ ಚಿತ್ರಗಳನ್ನ ಎಂದ ನೀನು ಹೇಳದಿದ್ರು ನಾನು ಮಾಡುವವಳೇ ಎಂದೆ ಇಬ್ಬರೂ ನಕ್ಕೆವು. ಅವನು ಹಾಳು ಮಾಡಿದಷ್ಟೂ ಚಿತ್ರಗಳ ಲೆಕ್ಕ ಕೊಟ್ಟದ್ದನ್ನು ಕಂಡು ನಿಜವಾಗಲೂ ಬೆರಗಾಯ್ತು. He is always a gem of a man. ನನ್ನ ಕಣ್ಣುಗಳಲ್ಲೂ ನೀರು ತಡೆಯಲು ಸಾಧ್ಯವಾಗಲಿಲ್ಲ. ದುಡ್ಡು ಕೊಟ್ರೂ ಸಿಕ್ತಿಲ್ಲ ಅಂತದ್ರಲ್ಲಿ ಎಮರ್ಜೆನ್ಸಿಗೆ ಅಂತ ಇಟ್ಟಿದ್ದ ಸೀಮೆ ಎಣ್ಣೆ ಖಾಲಿ ಮಾಡಿದ್ಯ, ಗಬ್ಬು ವಾಸನೆ ಬೇರೆ ಮೊದಲು ಸ್ನಾನ ಮಾಡಪ್ಪಾ ನೀನು ಎಂದು ಕಣ್ಣೀರಿನೊಂದಿಗೆ ನಗುತ್ತಾ ಸ್ನಾನಕ್ಕೆ ಹೊರಟೆವು. ನನ್ನ ಔಷಧಿಯ ಕೈಗಳ ಚಿತ್ರ ನಾಚುತ್ತಾ ನಗುತ್ತಲಿತ್ತು. ಅದರ ಮೇಲೆ ಬಿಳಿ ಬಣ್ಣದ ಬಟ್ಟೆ ಮುಚ್ಚಿ ಸ್ನಾನಗೃಹ ಸೇರಿದೆವು. 









-ನೀ.ಮ. ಹೇಮಂತ್