ಓದಿ ಓಡಿದವರು!

Wednesday 16 May 2012

ದೇವರಂಗಡಿ ಎತ್ತಂಗಡಿಯಾದಾಗೊಮ್ಮೆ!


       ದುಗರೇ ಇದು ಒಂದು ಕಥೆ. ಈ ಕಥೆ ನಡೆಯುವುದು ಒಂದು ಊರಲ್ಲಿ. ಈ ಊರಿನ ಹೆಸರು ಬೆಂಗಳೂರು! ಓಹ್ ನೀವಿರುವ ಊರಲ್ಲ ಬಿಡಿ. ಈ ಕಥೆಯಲ್ಲಿ ಬರುವ ಊರಿನ ಹೆಸರೂ ಬೆಂಗಳೂರಷ್ಟೇ! ಇಲ್ಲಿರುವ ಜನರೂ ಥೇಟ್ ನಿಮ್ಮಂತಹ ಜನರೇ. ಇವರುಗಳೂ ಸಹ ತಾವು ಹಾಕುವ ಬಟ್ಟೆ, ತಮ್ಮ ಹಣೆ, ಕೈಬೆರಳುಗಳು, ದಾಡಿ, ಕೂದಲು, ಮತ್ತು ಧರಿಸುವ ಬಟ್ಟೆ, ಟೊಪ್ಪಿಗೆಗಳಿಂದ ಜಾತಿ ಮತ್ತು ತಮ್ಮ ಆರಾಧ್ಯ ದೈವಗಳನ್ನು ಗುರುತಿಸುವಂತಹವರು. ಉಪ್ಪು ತಿಂದ ಮೇಲೆ ನೀರು ಕುಡಿಯುವಂಥವರು, ಊಟ ಮಾಡಿದ ಮೇಲೆ ತೇಗುವಂಥವರು. ನಾನೊಬ್ಬ ಪುಡಿ ಕಥೆಗಾರ. ನನಗೊಂದು ವಿಚಿತ್ರ ಅಭಿಲಾಷೆ. ಹೇಗೋ ಇದ್ದ ಊರಿನಲ್ಲಿ ದೇವರ ಅಸ್ತಿತ್ವವನ್ನು ಸಾರುವ ಎಲ್ಲ ದೇವಸ್ಥಾನಗಳನ್ನು, ಮಸೀದಿಗಳನ್ನು, ಇಗರ್ಜಿಗಳನ್ನು ಇತರೆ ಇತರೆಗಳನ್ನು ರಾತ್ರಿ ಕಳೆದು ಬೆಳಗಾಗುವುದರೊಳಗೆ ತೆರವುಗೊಳಿಸಿ ಅದೇ ಜಾಗದಲ್ಲಿ ಉದ್ಯಾನವನ, ಹೊಟೇಲು, ಇನ್ನೊಂದು ಮತ್ತೊಂದನ್ನು ತೆರೆದು ಮಾರನೆಯ ಬೆಳಗ್ಗೆ ಜನರ ಪ್ರತಿಕ್ರಿಯೆಗಾಗಿ ಕಾಯುತ್ತಿರುವೆನು. ಇಂತಹ ಒಂದು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸುವರು. ನಮ್ಮ ಕಥೆಯಲ್ಲಿನ ಬೆಂಗಳೂರಿನ ಜನ ಏನು ಮಾಡುವರು ಎಂಬುದೇ ಮುಂದಿನ ಕಥೆ.

ಮಾಮೂಲಿನಂತೆ ಬೆಳಗ್ಗಿನ ಪೂಜೆಯ ತಯಾರಿಗೆಂದು ಎದ್ದು ಬಂದ ದೇವರ ಸ್ವಯಂಸೇವಕರು ತಮ್ಮ ಆಫೀಸು ಉರುಫ್ ದೇವಸ್ಥಾನದ ಜಾಗದಲ್ಲಿ ಹೋಟೇಲೊಂದನ್ನು ಕಂಡು, ಬೆಳಗ್ಗಿನ ಉಪಹಾರಕ್ಕಾಗಿ ತಿಂಡಿ ತಯಾರಾಗುತ್ತಿರುವುದನ್ನು ಕಂಡು ಹೌಹಾರಿ ದಾರಿ ತಪ್ಪಿ ಬಂದಿಲ್ಲವಷ್ಟೇ ಎಂದು ಖಾತ್ರಿಪಡಿಸಿಕೊಂಡು ಸುತ್ತ ಮುತ್ತ ಇದ್ದ ಸೈಕಲ್ ಶಾಪು, ಬೇಕರಿ, ಎಲ್ಲ ಅಂಗಡಿಗಳೂ ಇದ್ದಲ್ಲೇ ಇವೆ ದೇವಸ್ಥಾನ ಮಾತ್ರ ಕಾಣೆಯಾಗಿದೆ. ಅರೆ! ಏನೂ ಅರ್ಥವಾಗದೆ ತಲೆ ಕೆರೆದುಕೊಂಡು, ಮತ್ತೆ ಮತ್ತೆ ಬಂದ ಹಾದಿ ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿ ತಬ್ಬಿಬ್ಬಾಗಿ ತಾನು ಇಷ್ಟು ವರ್ಷಗಳು ಪೂಜೆ ಮಾಡುತ್ತಾ ಬಂದಿರುವ ದೇವಸ್ಥಾನ ಎಲ್ಲಿ ಹೋಗಲು ಸಾಧ್ಯ ಅದೂ ಕೂಡ ರಾತ್ರೋ ರಾತ್ರಿ! ದಿಗ್ಭ್ರಾಂತರಾಗಿ ಅರ್ಧ ಬಾಗಿಲು ಮುಚ್ಚಿದ್ದ ಹೋಟೆಲೊಳಗೆ ಇಣುಕುವಷ್ಟರಲ್ಲಿ ರೀ ಸ್ವಾಮಿ ಇನ್ನೂ ತಿಂಡಿ ರೆಡಿ ಆಗಿಲ್ಲ ಎಂಬ ಮಾತನ್ನು ನಿರ್ಲಕ್ಷಿಸಿ ಪೆದ್ದು ಪೆದ್ದಾಗಿ ಇಲ್ಲಿ ದೇವಸ್ಥಾನವಿತ್ತಲ್ಲಾ, ಏನಾಯ್ತು? ಎಂದು ಕೇಳುತ್ತಾ ತಮಗೇ ಮೂರ್ಖ ಪ್ರಶ್ನೆ ಎನಿಸಿ ಗ್ರೈಂಡರ್ ಶಬ್ಧಕ್ಕೆ ಕೇಳಿಸದೇ ಕೆಲಸದವನು ಏನಂದ್ರೀ ಎಂದು ಮರುಪ್ರಶ್ನಿಸಲು ಏನಿಲ್ಲ ಎಂದು ಹೊರಗೆ ಬರುವರು. ಬೆಳಕು ಹರಿಯುತ್ತಿದ್ದಂತೆಯೇ ಭಕ್ತ ಸಮೂಹ ಒಂದೊಂದೇ ನಿನ್ನೆ ದೇವಸ್ಥಾನವಿದ್ದ ಸ್ಥಳಕ್ಕೆ ಬಂದವರು ಬಾಯ ಮೇಲೆ ಬೆರಳಿಟ್ಟು, ಬೆಳಗ್ಗೆ ಬೆಳಗ್ಗೆಯೇ ತಲೆಕೆಡಿಸಿಕೊಂಡು ಹಿಂದಿರುಗುವರು. ಹೋಟೆಲಿನವನಿಗೂ ಆಶ್ಚರ್ಯ. ಇದೇನು ಜನ ಬಂದು ಹೋಟೆಲನ್ನು ಹೊರಗಿನಿಂದ ನೋಡಿಕೊಂಡು ಹಾಗೇ ಹೋಗುತ್ತಿದ್ದಾರಲ್ಲಾ ಎಂದು. ಇನ್ನೊಂದು ಕಡೆ ಬೆಳಗ್ಗೆ ಐದಕ್ಕೆ ಅಲಾರ್ಮಿನಂತೆ ಕೂಗಬೇಕಿದ್ದ  ಅಲ್ಲಾಹು ಇವತ್ತು ಕೂಗದೇ, ಅವಲಂಬಿಸಿದ್ದ ಹಲವರು ತಡವಾಗಿ ಎದ್ದು ವಿಸ್ಮಿತರಾಗಿದ್ದವರು ಟಿವಿಯಲ್ಲಿ ಆಗಲೇ ಬೆಂಗಳೂರಿನ ಸಕಲೆಡೆಗಳಲ್ಲಿ ಜನರು ನೆರೆದು ದೇವಸ್ಥಾನಕ್ಕೆ ದೇವಸ್ಥಾನವೇ ಕಳುವಾಗಿರುವ ಭಯಾನಕ ಘಟನೆಗೆ ತಮ್ಮದೇ ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದನ್ನು ಕಂಡು ಅಲ್ಲಾಹು ಕೂಗದಿದ್ದ ಕಾರಣ ತಿಳಿದುಕೊಳ್ಳುವರು. ನಗರದೆಲ್ಲೆಡೆಯೂ ಅದೇ ಚರ್ಚೆ.

ದೇವರ ಸೇವಕರೊಬ್ಬರು ಆತ್ಮಹತ್ಯೆ ಮಾಡಿಕೊಂಡರೆಂಬ ಸುದ್ದಿ ಒಂದು ಕಡೆ ಬಂದರೆ, ಇನ್ನೊಂದು ಕಡೆ ಮಂದಿರದ ಜಾಗದಲ್ಲಿ ಧಿಡೀರನೆ ಎದ್ದಿರುವ ಕಾಂಪ್ಲೆಕ್ಸ್ ಮೇಲೆ ಹಲ್ಲೆಯಾಗುತ್ತಿದೆಯೆಂಬುದೊಂದು ಸುದ್ದಿ, ಎಲ್ಲೋ ಧಂಗೆ, ಇನ್ನೆಲ್ಲೋ ಗಲಾಟೆ, ಇನ್ನೆಲ್ಲೋ ರೋಧನ, ಇನ್ನೆಲ್ಲೋ ಸರ್ಕಾರ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲವೆಂದು ವಿರೋಧಪಕ್ಷವೂ ಸೇರಿಕೊಂಡು ಜಾಥಾ ಹೊರಡಿರುವರು. ಹೀಗೇ ಹತ್ತು ಹಲವು ರೀತಿಯಲ್ಲಿ ಮಾಧ್ಯಮದವರೂ ಚುರುಕಾಗಿ ಸೆರೆಹಿಡಿಯುತ್ತಿರುವರು. ಜನರು ಈ ದೇವಸ್ಥಾನಗಳ, ಪ್ರಾರ್ಥನಾ ಮಂದಿರಗಳ ಕಳವಿನ ಬಗ್ಗೆ ಪ್ರತಿಕ್ರಿಯಿಸುವುದೋ ಕ್ಷಣ ಕ್ಷಣಕ್ಕೂ ವರ್ಣರಂಜಿತವಾಗಿ ಬಿತ್ತರವಾಗುತ್ತಿರುವ ಸುದ್ದಿಗಳನ್ನು ತಮ್ಮ ಕುತೂಹಲದ ಹಸಿವು ತೀರಿಸಲೋಸುಗ ಟಿವಿ ಮುಂದೆಯೇ ಕೂರುವುದೋ ಅರ್ಥವಾಗದೇ ಗೊಂದಲಕ್ಕೊಳಗಾಗಿರುವರು. ಹೀಗಿರುವಾಗಲೇ ಪ್ರಸಿದ್ಧ ಮನುಷ್ಯನೋರ್ವನ ಮನೆಯ ದೇವರ ಕೋಣೆಯಲ್ಲಿ ಹಠಾತ್ ಒಂದು ವಿಗ್ರಹ ಕಾಣಿಸಿಕೊಂಡಿರುವುದಾಗಿ ಊರ ಜನರೆಲ್ಲಾ ದರ್ಶನ ಪಡೆದು ಬರಲು ಶುರುಮಾಡಿರುವರು. ಮತ್ತೊಂದು ಕಡೆ ವಿಗ್ರಹವೊಂದನ್ನು ರಸ್ತೆಯಲ್ಲೇ ಪ್ರತಿಷ್ಠಾಪಿಸಿ ಅದಕ್ಕೇ ಪೂಜೆ ಮಾಡುತ್ತಾ ತಮ್ಮ ದಿನದ ಗಳಿಕೆಯನ್ನು ಪಡೆಯುತ್ತಿರುವ ಹಲವು ಸಮಯಪ್ರಜ್ಞೆಯಿರುವ ಬುದ್ದಿಜೀವಿಗಳು. ಹೀಗೇ ನಾಟಕ ಹತ್ತು ಹಲವು ತಿರುಗಳನ್ನು ಪಡೆದುಕೊಳ್ಳುತ್ತಿದ್ದಂತೆ. ಕೆಲಸ ಕಳೆದುಕೊಂಡು ಭ್ರಹ್ಮಾಂಡದಂತಹ ಹೊಟ್ಟೆಯನ್ನು ತುರಿಸಿಕೊಳ್ಳುತ್ತಾ ಕಾಲವ್ಯಯ ಮಾಡುತ್ತಿದ್ದವರೆಲ್ಲಾ ವಿನಾಶದ ಕಾಲ ಹತ್ತಿರ ಬಂದಿದೆ, ಇನ್ನು ಪ್ರಳಯ ನಿಶ್ಚಿತ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಜನರಲ್ಲಿ ಭಯೋತ್ಪಾದನೆ ಮಾಡಿ, ತಮ್ಮ ಸಾವು ಹೇಗಾಗುತ್ತದೆಂದು ಕ್ಯೂ ನಿಂತು ಕೇಳಬಂದವರಿಂದೆಲ್ಲಾ ಚಿನ್ನ ಪಡೆದು ಜಲಪ್ರಳಯ, ಅಗ್ನಿ ಅನಾಹುತ, ಭೂಕಂಪ, ಕಟ್ಟಡ ಕುಸಿತ ಹೀಗೇ ನಾನಾ ರೀತಿಯ ಸಾವಿನ ದರ್ಶನ ಮಾಡಿಸುವರು. ಹೀಗೇ ನಾಟಕ ಹಲವು ತಿರುವುಗಳನ್ನು ಪಡೆಯುತ್ತಾ ಲಾಭ ಮಾಡಿಕೊಳ್ಳುವವರು ಸಮಯೋಚಿತವಾಗಿ ವರ್ತಿಸುತ್ತಾ, ಹೆದರಿದ್ದವರು ಹೆದರಿ ಚಿಂತಿಸುತ್ತಾ, ಮುಕ್ಕಾಲು ವಾಸಿ ಜನ ಮಾಮೂಲಿನಂತೆ ಸುದ್ದಿಗಳನ್ನು ಕಾಲಕಾಲಕ್ಕೆ ಪಡೆದುಕೊಳ್ಳುತ್ತಾ ದುಡಿಯುತ್ತಿಹರು.

ಎಲ್ಲರ ಮುಖಗಳಲ್ಲೂ ಪ್ರಶ್ನೆಗಳು, ಪ್ರಶ್ನೆಗಳು, ಉತ್ತರ ಕಾಣದ ಪ್ರಶ್ನೆಗಳಷ್ಟೇ. ಹಾಗಾದರೆ ದೇವರುಗಳು ಭೂಮಿಯಿಂದ ಹೊರಟು ಹೋದರಾ? ಪ್ರಳಯ ನಿಶ್ಚಿತಾನಾ? ಆದರೆ ಯಾವುದೇ ರೀತಿಯ ಪ್ರಳಯದ ಮುನ್ಸೂಚನೆ ಯಾಕಿಲ್ಲ? ಇನ್ನು ಮುಂದೆ ಪೂಜೆ ಮಾಡುವುದಾದರೂ ಯಾರನ್ನ? ದೇವಸ್ಥಾನಗಳೇ ಇಲ್ಲದ ಮೇಲೆ ಮನೆಯಲ್ಲಿರುವ ದೇವರ ಚಿತ್ರಗಳು, ಮೂರ್ತಿಗಳಲ್ಲಿ ದೇವರಿರಲು ಸಾಧ್ಯಾನಾ? ಮಹೋರಗಗಳು, ಇನ್ನೆಷ್ಟೋ ಜೀವಸಂಕುಲಗಳು ಇತ್ತು ಎನ್ನುವ ಹಾಗೆ ದೇವರುಗಳೂ ಇದ್ದರು ಎಂದು ಹೇಳಬೇಕಾದೀತಾ? ದೇವರುಗಳು ಎಂಬುದೊಂದು ನಂಬಿಕೆ ಎಂದಾದರೆ, ನಂಬಿಕೆಯೇ ಜೀವನವೆಂದಾದರೆ, ದೇವರುಗಳ ಜಾಗದಲ್ಲಿ ಮತ್ತೇನು ಬರಬಹುದು? ಕೋಟ್ಯಾಂತರ ಜೀವರಾಶಿಗಳಲ್ಲಿ ದೇವರು ಎಂಬುವನೊಬ್ಬನಿದ್ದದ್ದು ಮನುಷ್ಯರಿಗೆ ಮಾತ್ರ ಈಗ ನಾವೂ ಎಲ್ಲಾ ಜೀವರಾಶಿಗಳಲ್ಲಿ ಒಂದಾಗುತ್ತಿರುವೆವಾ? ಮುಂದೇನು? ಏನೇ ಆದರೂ ಒಂದು ಕಾರಣವಿರುತ್ತದೆ ಎಂದಾದರೆ ದೇವಸ್ಥಾನಗಳು ಕಣ್ಮರೆಯಾಗಲು ಏನಾದರು ಕಾರಣವಿರಬಹುದಾ? ಪ್ರಳಯವಲ್ಲದಿದ್ದರೂ ಯಾವುದಾದರೂ ದೊಡ್ಡ ಗಂಡಾಂತರವೇ ಕಾದಿರಬಹುದಾ? ಇಂಥವೇ ಸಹಸ್ರ ಸಹಸ್ರ ಪ್ರಶ್ನೆಗಳನ್ನು ಹೊತ್ತ ಮುಖಗಳು. ಹೀಗಿರುವಾಗಲೇ ಸರ್ಕಾರದವರು ಬೇರೆಯವರ ತಲೆ ಉಪಯೋಗಿಸಿ ಪ್ರತಿಯೊಂದು ವಾರ್ಡಿಗೆ ಅವರವರ ನಂಬಿಕೆಳಿಗಾನುಸಾರ ಒಂದು ತಾತ್ಕಾಲಿಕ ದೇವಸ್ಥಾನಗಳನ್ನು ಕಟ್ಟಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಆಗಲೇ ಶುರುವಾದದ್ದು ಹೊಸ ಸಮಸ್ಯೆ. ತಮ್ಮ ದೇವರನ್ನು ಪ್ರತಿಷ್ಠಾಪಿಸಬೇಕೆಂದು ಒಂದು ಜಾತಿಯವರು, ತಮ್ಮ ದೇವರನ್ನು ಪೂಜಿಸಬೇಕೆಂದು ಮತ್ತೊಬ್ಬರು. ಇಲ್ಲಿ ಮುಂಚಿನಿಂದ ಇದ್ದದ್ದು ತಮ್ಮ ದೇವರು ಅದನ್ನೇ ಪ್ರತಿಷ್ಠಾಪಿಸಬೇಕೆಂದು ಮಗುದೊಬ್ಬರು. ಇವರೆಲ್ಲರನ್ನು ವಿರೋಧಿಸಿ ತಮ್ಮ ಪ್ರಾರ್ಥನಾ ಮಂದಿರ ಬರಬೇಕೆಂದು ಇನ್ನೊಬ್ಬರು, ಅವರನ್ನು ವಿರೋಧಿಸುವವರು ಮತ್ತೊಬ್ಬರು. ಹೀಗೇ ಜಗಳ, ಗುಂಪು ಘರ್ಷಣೆಗಳು ನಡೆದು ವಿರೋಧ ಪಕ್ಷದವರು ಆಡಳಿತ ಪಕ್ಷದವರ ತಾತ್ಕಾಲಿಕ ದೇವಸ್ಥಾನಗಳ ಯೋಜನೆಯ ಮೇಲೆಯೇ ಗೂಬೆ ಕೂರಿಸಿ ಅಂತೂ ತಾತ್ಕಾಲಿಕ ದೇವಸ್ಥಾನಗಳ ನಿರ್ಮಾಣ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗುತ್ತದೆ. ತಿಂದರೆ ತಾವು ಮಾತ್ರ ತಿನ್ನಬೇಕು, ಇಲ್ಲವಾದಲ್ಲಿ ಎಲ್ಲರೂ ಹಸಿದುಕೊಂಡೇ ಇರೋಣ ಎನ್ನುವಂತಹ ಜನ ನಮ್ಮವರು.

ಜನರು ಸಾರ್ವಜನಿಕ ಮಂದಿರಗಳು, ಮಸೀದಿಗಳು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕೊಂಚ ಸಮಯವನ್ನೇ ಕಳೆದರೂ ಈಗ ಜೀವನ ಮತ್ತೇ ಮಾಮೂಲಿನಂತೆ ಸಾಗುತ್ತಿರಲು ಒಬ್ಬರ ಮನೆಯಲ್ಲಿ ದೊಡ್ಡ ಸ್ಪೀಕರ್ ಗಳನ್ನು ಹಾಕಿ ಪ್ರಾರ್ಥನೆಯನ್ನು ಜೋರಾಗಿ ಹಾಕಿ ಅಕ್ಕ ಪಕ್ಕದ ಮನೆಯವರನ್ನು ದಂಗು ಬೀಳಿಸುವರು. ಇದಕ್ಕೆ ವಿರುದ್ಧವಾಗಿ ಇನ್ನೊಂದು ಜಾತಿಯವರೂ ಸಹ ತಾವೇನು ಕಮ್ಮಿ ಎಂದು ತಮ್ಮ ಸ್ತೋತ್ರಗಳನ್ನೂ ಇನ್ನೂ ಜೋರಾಗಿ ಹಾಕಿ ಊರಿಗೆಲ್ಲಾ ಕೇಳುವಂತೆ ಹುಯಿಲೆಬ್ಬಿಸಿ ಎರಡೂ ಎದುರುಬದುರು ಮನೆಯಿಂದ ಹೊರಡುತ್ತಿದ್ದ ಗಲಾಟೆಯನ್ನು ತಡೆದುಕೊಳ್ಳುವಷ್ಟೂ ತಡೆದುಕೊಂಡ ಸುತ್ತ ಮುತ್ತಲ ಜನರು ಇಬ್ಬರನ್ನು ಹಿಡಿದು ಜಪ್ಪಿ ಈಗ ಇಡೀ ಊರು ಕೇರಿ ಮತ್ತೇ ಶಾಂತವಾಗಿರುವುದು. ಬೆಂಗಳೂರೆಂಬ ಕಥೆಯ ಊರಿನಲ್ಲಿ ಅದೇ ವಿಧ ವಿಧ ಜಾತಿಯ, ಆಚರಣೆಯ ಜನರೇ ಇದ್ದರೂ ಈಗ ಎಲ್ಲ ಆಚರಣೆಗಳೂ, ನಂಬಿಕೆಗಳೂ, ಆಚಾರ-ವಿಚಾರಗಳೂ, ಎಲ್ಲ ತಮ್ಮ ಮೂರು ಗೋಡೆ ಒಂದು ಬಾಗಿಲು ಎರಡು ಕಿಟಕಿಯಿರುವ ಮನೆಯ ಒಳಗಡೆಯೇ. ಹೊರಗೆ ಬಂದರೆ ಎಲ್ಲ ಒಂದೇ. ಈಗೀಗ ಇವನು ಈ ದೇವರನ್ನು ಪೂಜಿಸುವವನು, ಇವನು ಈ ದೇವಸ್ಥಾನಕ್ಕೆ ಹೋಗುತ್ತಿದ್ದವನು, ಇವನು ಇಂತಹ ನಂಬಿಕೆಯುಳ್ಳವನೆಂದು ವಿಂಗಡಿಸುವಲ್ಲಿಯೂ ಸಹ ಗೊಂದಲ ಉಂಟಾಗಿದೆ ಜನಕ್ಕೆ. ಮನೆಯ ಛಾವಣಿಯಡಿಯಲ್ಲಿ ಹೊಕ್ಕು ನೋಡಿದರೆ ತೋರಿಕೆಗಾಗಿ ಪರಿಪಾಲಿಸುತ್ತಿದ್ದ ಎಷ್ಟೋ ಜನರು ಈಗ ಮನೆಯ ಒಳಗಡೆಯೂ ತಮ್ಮ ಅಚರಣೆಯನ್ನು ನಿಲ್ಲಿಸಿದ್ದಾರೆ. ಆಹಾರ ವಿಧಾನಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಇಂಥವರು ಇಂಥದ್ದೇ ಆಹಾರ ಸ್ವೀಕರಿಸಬೇಕಿತ್ತೆಂದು ಪ್ರಶ್ನಿಸುವವರು ಯಾರೂ ಇಲ್ಲ. ಹಿಡಿಸಿದ್ದನ್ನು ತಿನ್ನುತ್ತಾ, ಎಲ್ಲರೊಂದಿಗೆ ಬೆರೆಯುತ್ತಾ, ಸಾರ್ವಜನಿಕ ಜೀವನದಲ್ಲಿ ಸಹಬಾಳ್ವೆಯಿಂದ ಇದ್ದಾರೆ. ಯಾರಿಗೂ ಯಾರ ವೈಯಕ್ತಿಕ ಜೀವನದ ಬಗ್ಗೆಯೂ ಆಸಕ್ತಿಯೂ ಇಲ್ಲ.

ಮೊದಲೇ ಕೆಲಸವಿಲ್ಲದ ದೇವರ ಸೇವಕರೆಲ್ಲಾ ಈ ಕಥೆಯಲ್ಲಿನ ಬೆಂಗಳೂರಿನಲ್ಲಿದ್ದರೆ ಉಳಿಗಾಲವಿಲ್ಲವೆಂದು ಅರಿತು ಬೇರೆ ಬೇರೆ ಊರುಗಳಿಗೆ ಹೋಗಿ ಅಲ್ಲಿ ತಮ್ಮ ಪ್ರತಿಭೆಯಿಂದ ಜೀವನೋಪಾಯಕ್ಕಾಗಿ ದಾರಿ ಮಾಡಿಕೊಳ್ಳೋಣವೆಂದು ಯೋಜನೆ ಹಾಕಿಕೊಂಡು ಹೋದರೆ, ಎಲ್ಲಿಯೂ ತಮ್ಮ ಕಾರ್ಯಾವ್ಯಾಪ್ತಿಯ ದೇವಸ್ಥಾನಗಳಾಗಲೀ, ಇನ್ನೊಂದು ಮತ್ತೊಂದಾಗಲೀ ಇಲ್ಲದಿರುವುದನ್ನು ಕಂಡು ತನ್ನ ಬದುಕು ಸಾಗಿಸಲು, ಹೊಟ್ಟೆ ಹೊರೆಯಲು ಬೇರೆ ದಾರಿಯೇ ಹಿಡಿಯಬೇಕಾದೀತೆಂದು ಹೊಸ ದಾರಿಯ ಅನ್ವೇಷಣೆಗೆ ತೊಡಗುವರು. ಈ ಮೊದಲು ವರ್ಷದ ಕೂಳೆಂಬಂತೆ ಮಂದಿರಗಳಲ್ಲಿ ದುಡಿಯುತ್ತಾ ಹರ್ಷದ ಕೂಳೆಂಬಂತೆ ಹಬ್ಬ ಹರಿದಿನ, ಮದುವೆ, ಮುಂಜಿ, ಶ್ರಾದ್ಧಗಳಂದು ದುಡಿದು ಹೋಗುತ್ತಿದ್ದವರು, ಈಗ ವರ್ಷದ ಕೂಳನ್ನು ಕಳೆದುಕೊಂಡು ಬಿಟ್ಟಿಯಾಗಿರುವಾಗ ಕೇವಲ ಹರ್ಷದ ಕೂಳನ್ನೆ ನೆಚ್ಚಿ ಬದುಕಿರುವಾಗ ಎಲ್ಲೋ ಒಂದೊಂದು ಸಮಾರಂಭಕ್ಕೆ ಆಹ್ವಾನ ಬಂದದ್ದೇ ನಾ ಮುಂದು ತಾ ಮುಂದು ಎಂದು ಸ್ಪರ್ಧೆ ಮಾಡಿ ಹೆಚ್ಚಿನ ಮೊತ್ತವನ್ನು ಬೇಡಿಕೆಯಿಡುವರು. ಅತ್ತ ಅಷ್ಟು ಮೊತ್ತವನ್ನು ಖರ್ಚು ಮಾಡಿ ಸಂಬಂಧಿಕರನ್ನೊಡಗೂಡಿ, ಈಗ ಹೆಚ್ಚಿರುವ ಸುತ್ತ ಮುತ್ತಲ ಸ್ನೇಹಿತವರ್ಗಕ್ಕೆ ಊಟ ಹಾಕಲಾಗದೇ ಎಷ್ಟೋ ಮನೆಗಳು ಅನಾವಶ್ಯಕ ಖರ್ಚಿನ ಸಮಾರಂಭಗಳನ್ನು ನಿಲ್ಲಿಸಿರುವರು. ಹೀಗೇ ಕ್ರಮೇಣ ಕೆಲಸ ಕಳೆದುಕೊಂಡು ವಲಸೆ ಹೋಗಿ ಅಲ್ಲೂ ಸೋತು ಜೀವನೋಪಾಯಕ್ಕಾಗಿ ಹಲವು ವಿದ್ಯಾಭ್ಯಾಸದ ಹಾದಿ, ಗೊತ್ತಿರುವ ಅಡುಗೆ ಕೆಲಸ ಹಾದಿ ಇತರೆ ಇತರೆ ಸೂಕ್ತವೆನಿಸಿದ ಉದರನಿಮಿತ್ತ ಹಾದಿ ಹಿಡಿದು ಮುಂದುವರೆಯುವರು. ಇನ್ನೂ ಸಮಾರಂಭಗಳನ್ನು ಏರ್ಪಡಿಸುವ ಮನಸ್ಸು ಮತ್ತು ಶಕ್ತಿಯಿದ್ದ ಕೆಲವರು ಆಚರಿಸಬೇಕೆಂದರೂ ಪೂಜೆ ಮಾಡಲು ಪ್ರತಿಭೆಯುಳ್ಳವರು ಸಿಗದೇ ಕ್ರಮೇಣ ಸಾರ್ವಜನಿಕ ಸಮಾರಂಭಗಳು, ಮದುವೆ, ಮುಂಜಿ, ತಿಥಿಯ ಆಚರಣೆಗಳು ಬೇರೆ ಬೇರೆ ರೂಪ ಪಡೆಯುತ್ತಾ ಸಾಗುವವು. ಮನಃಶಾಂತಿಗಾಗಿ ಮಾತ್ರ ದೇವಸ್ಥಾನಗಳಿಗೆ ಹೋಗುತ್ತಿದ್ದ ಕೆಲವರು ಈಗ ಅನಾಥಾಶ್ರಮಗಳಿಗೆ ಬೇಟಿ ಕೊಡುವುದು, ಸಮಾಜ ಸೇವೆಯಂತಹ ಮಾರ್ಗಗಳಲ್ಲಿ ಮನಕೆ ಶಾಂತಿ ಪಡೆಯುವರು. ಸಾರ್ವಜನಿಕ ದೇವರುಗಳು ಎತ್ತಂಗಡಿಯಾದಾಗಿನಿಂದ ತಾವೇ ಬದುಕುತ್ತಿರುವ ದೇವರುಗಳೆಂದು ಸ್ವಯಂಫೋಷಿಸಿಕೊಳ್ಳುತ್ತಾ ತಮ್ಮ ತಮ್ಮ ಧ್ಯಾನ ಮಂದಿರಗಳು, ಮಠಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುತ್ತಾ ಒಂದಷ್ಟು ಬಲಿಪಶುಗಳನ್ನು ಪಡೆದುಕೊಳ್ಳುವರು. ಕೇವಲ ತಮ್ಮ ಪಾಪನಿವೇದನೆಗೆ, ಪಾಪಪರಿಹಾರಾರ್ಥ ದುಡ್ಡು ಕೊಟ್ಟು, ಪೂಜೆ ಸಲ್ಲಿಸಿ, ದೇವರು ಶಾಪ ಕೊಡದಂತೆ ಒಲಿಸಿಕೊಂಡು ಬರಲು ಮಂದಿರ-ಮಸೀದಿಗಳಿಲ್ಲದ ಕಾರಣದಿಂದ ಈಗ ಮಠ, ಮಠಾದೀಶರು, ಸ್ವಯಂಘೋಷಿತ ದೇವರುಗಳನ್ನು ಬಳಸಿಕೊಳ್ಳುತ್ತಿರುವರು.

ಹಲವಾರು ವರ್ಷಗಳ ನಂತರ….

ಪ್ರಳಯವೂ ಆಗಲಿಲ್ಲ, ಭೂಮಿಯೂ ಬಾಯ್ಬಿರಿಯಲಿಲ್ಲ. ಎಲ್ಲವೂ ಹಾಗೇ ಇದೆ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಎಲ್ಲ ಮನೆಯಲ್ಲೂ ಕನಿಷ್ಟಪಕ್ಷ ಅಡುಗೆ ಕೋಣೆ, ನಡುಮನೆ, ಬಾತ್ರೂಮು, ಮಲಗುವ ಕೋಣೆಯನ್ನು ಹೊರತುಪಡಿಸಿದರೆ ಒಂದು ಧ್ಯಾನ ಕೊಠಡಿಯೊಂದು ಕಟ್ಟಿಸಲಾಗಿರುವುದು. ಕಾಲೇಜೊಂದರಲ್ಲಿ ಅರ್ಜಿ ಭರಿಸುತ್ತಿರುವಾಗ ಜಾತಿ, ಪಂಗಡ ಎಂಬ ವಿಭಾಗವನ್ನು ತುಂಬಲಾಗದೆ ಹುಡುಗಿಯೊಬ್ಬಳು ತನ್ನ ತಂದೆಗೆ ಫೋನು ಮಾಡುತ್ತಾಳೆ. ಅಪ್ಪ ಹೀಗಿದೆ, ಏನೆಂದು ಭರಿಸಬೇಕೆಂದು ಕೇಳಿದ್ದಕ್ಕೆ. ಹೋ ಇರಮ್ಮಾ ಇದ್ಯಾವುದೋ ಹಳೇ ಕಾಲದ ಕಾಲೇಜಿರಬೇಕು. ನಮ್ಮ ಕಾಲದಲ್ಲಿ ಕಾಲೇಜು ಸೇರೋವಾಗ ಇಂತಹ ಕಾಲಂ ಭರ್ತಿ ಮಾಡಿದ್ದ ನೆನಪು ನನಗೆ. ಅದೇನೋ ನನ್ನ ಹಳೆಯ ಪ್ರಮಾಣ ಪತ್ರಗಳಲ್ಲಿ ನೋಡಬೇಕು ತಾಳು, ಎನ್ನುವರು. ಅಯ್ಯೋ ಅಪ್ಪ ಹೋಗಲಿ ಬಿಡಿ ಇದೇನು ಕಡ್ಡಾಯವಲ್ಲ ಎಂದು ಖಾಲಿ ಬಿಟ್ಟು ಮುಂದುವರೆಯುವಳು. ಪರಿಸ್ಥಿತಿ ಹೀಗಿರುವಾಗ ಮುಂಚೆ ಎಲ್ಲೆಲ್ಲಿ ಯಾವ ಯಾವ ಮಂದಿರ, ಮಸೀದಿಗಳಿತ್ತೋ ಅವನ್ನೇ ಹಾಗೆಯೇ ಇಟ್ಟುಬಿಟ್ಟೆ!









ನೀ.ಮ. ಹೇಮಂತ್

4 comments:

  1. ವಾಹ್, ಅದ್ಭುತ. ಹೀಗೆಲ್ಲಾ ಜನರನ್ನ ಜಾತಿಯನ್ನ ಬದಲಾಯಿಸಬಹುದು! ಮುಂದೆ ಬೇರೆ ಊರಿಗೆ ಹೋಗುವಾಗ ನನ್ನನ್ನೂ ಕರೆದುಕೊಳ್ಳಿ.
    ನಿಮ್ಮ ಆಲೋಚನಾ ಶಕ್ತಿಗೊಂದು ಸಲಾಂ....

    ReplyDelete
    Replies
    1. ಖಂಡಿತಾ ಗೆಳೆಯ.. :-) ಎಲ್ಲಾ ಒಟ್ಟಿಗೆ ಸೇರಿಯೇ ಕ್ರಾಂತಿ ಮಾಡೋಣ. ನಿನ್ನ ಆಲೋಚನೆಗಳನ್ನ ಗ್ರಹಿಸಬಲ್ಲ ನಿಮ್ಮ ಕಲ್ಪನಾ ಶಕ್ತಿಗೂ ಒಂದು ಸಲಾಂ... ಓದುತ್ತಲಿರಿ.. ;-)

      Delete
  2. ಇದೇನ್ರಿ ಇದು ಊದುಬತ್ತಿ ಹಚ್ಚಿ ಹೊಗೆ(!) ಹಾಕಿಸಿ ದೇವರಂಗಡಿಯನ್ನು ಎತ್ತಂಗಡಿ ಮಾಡಿದ್ದೀರಿ! ಸಮಾನತೆ!
    ನಿಮ್ಮ ಯೋಚನಾಲಹರಿಗೆ ನನ್ನದೊಂದು ನಮನ ಹೇಮಂತ್. ಅದೇನು ಶೈಲಿ ಇದೆ ನಿಮ್ಮ ಬರವಣಿಗೆಯಲ್ಲಿ. ಶಹಭಾಸ್ ಗಿರಿ ನನ್ನ ಕಡೆಯಿಂದ ನಿಮಗೆ.

    ReplyDelete
    Replies
    1. ಗುರುಗಳೇ, ಹ ಹ ಹ.. ಧನ್ಯವಾದಗಳು ತಿಕ್ಕಲು ಆಲೋಚನೆಯನ್ನು ಅರಗಿಸಿಕೊಂಡು ಮೆಚ್ಚಿ ಅಷ್ಟು ಜೋರಾಗಿ ಬೆನ್ನು ತಟ್ಟಿದ್ದಕ್ಕೆ.. ;-) ಎಂತಹ ವಿಚಾರ ವೈರುಧ್ಯಗಳನ್ನೂ ಗಟಗಟನೆ ಕುಡಿದು ಅರಗಿಸಿಕೊಳ್ಲ ಬಲ್ಲ ನಿಮ್ಮ ಸಾಹಿತ್ಯ ಪ್ರೌಢಿಮೆಗೆ ನನ್ನ ಸಲಾಮ್... ಸಾಗಲಿ ನಿಮ್ಮ ಸಾಹಿತ್ಯ ಯಾತ್ರೆ.. ಶುಭದಿನ!

      Delete