ಓದಿ ಓಡಿದವರು!

Thursday 28 June 2012

50 : 50!!




         ತ ನನ್ನ ತಲೆಯೊಳಗಡೆ ಮೂಕನಂತೆ ಕುಳಿತಿರುವ ವಿಚಿತ್ರ ಆಸಾಮಿ. ಮೂಕನೇನೂ ಅಲ್ಲ ಮಾತನಾಡಲು ಶುರುಮಾಡಿದನೆಂದರೆ ಅದಕ್ಕೆ ಕೊನೆಮೊದಲಿರುವುದಿಲ್ಲ. ನನ್ನ ಇಡೀ ತಲೆಯಲ್ಲಿನ ಪ್ರಪಂಚವನ್ನೇ ಅಲ್ಲೋಲಕಲ್ಲೋಲವೆಬ್ಬಿಸುವ ಶಕ್ತಿ ಈತನಿಗುಂಟು. ಇವನ ತಂಟೆಗೆ ನಾನು ಹೋಗುವುದು ತುಂಬಾ ಕಡಿಮೆ. ಪಕ್ಕಾ ಹುಚ್ಚ. ಇವನ ಮಾತುಗಳು ನನಗೇ ಒಪ್ಪಿಗೆಯಾಗುವುದಿಲ್ಲ ಇನ್ನು ಇತರರಿಗೆ ಎಲ್ಲಿಂದ ಒಪ್ಪಿಗೆಯಾಗಬೇಕು. ಅದಕ್ಕೇ ಮೂಲೆಗಟ್ಟಿದ್ದೆ. ಆತನೂ ಸಹ ನಾನಾಗಿ ನಾನೇ ಕೆಣಕದ ಹೊರತು ನನ್ನ ಸಹವಾಸಕ್ಕೆ ಬರುತ್ತಿರಲಿಲ್ಲ. ಆದರೆ ಇಂದು ಯಾಕೋ ಕೊಂಚ ಸಮಯವಿದ್ದಿದ್ದರಿಂದ ಕುಶಲೋಪರಿ ವಿಚಾರಿಸೋಣವೆಂದುಕೊಂಡೆ. ಅದೇ ನಾನು ಮಾಡಿದ ಮಹಾಪರಾಧ. ಮಾತು ಕೆಲಸ, ಪ್ರೇಮ, ಮದುವೆ, ಸಂಸಾರ, ಜೀವನ, ಮನೆ, ಎಲ್ಲಾ ಕಡೆ ಉರುಳಿ ಕೊನೆಗೆ ಗಂಡು ಮತ್ತು ಹೆಣ್ಣಿನ ಬಗ್ಗೆ ನಿಂತುಕೊಂಡಿತು. ಕೊಂಚ ಸಮಯ ಮೌನವಾಗಿ ಒಂದೆಡೆ ದಿಟ್ಟಿಸುತ್ತಾ ಕುಳಿತ. ಮತ್ತೇನೋ ಕಾದಿದೆ ನನಗೆ ಎಂದು ಆ ಮೌನದಲ್ಲೇ ಖಾತ್ರಿಯಾಯ್ತು. ಅಂದುಕೊಂಡಿದ್ದಂತೆಯೇ ಮೊದಲು ನನ್ನೆಡೆಗೆ ನಿಧಾನಕ್ಕೆ ಕಣ್ಣು ಹೊರಳಿಸಿ ಏನೋ ಹೇಳಲಿರುವವನೆಂಬಂತೆ ಕೈಯನ್ನು ನಿಧಾನಕ್ಕೆ ಮೇಲಕ್ಕೆ ಎತ್ತಿ ಶುರುಮಾಡಿದ. ಈ ಗಂಡು ಹೆಣ್ಣು ಅನ್ನೋ ನಂಬಿಕೇನೇ ಸುಳ್ಳು ಕಣೋ ಎಂದ. ತೊಗೋಳಪ್ಪಾ ಎಲ್ಲಾದ್ರೂ ಹೇಳಿಬಿಟ್ಟೀಯಾ ಮಾರಾಯ ತಲೆ ಹೋಳಾದೀತು ಅಂದೆ. ನನ್ನ ಮಾತಿಗೆ ತಲೆ ಕೆಡಿಸಿಕೊಳ್ಳದೇ ಮುಂದುವರೆಸಿದ. ನೀನು ನಂಬಿರುವುದು ಖಂಡಿತಾ ತಪ್ಪು. ಗಂಡು ಗಂಡಲ್ಲಾ, ಹೆಣ್ಣು ಹೆಣ್ಣಲ್ಲಾ ಅಂದ. ಇವನ ಬಳಿ ಮಾತನಾಡಲು ಬಂದೆನಲ್ಲಾ ನನಗೆ ಹುಚ್ಚಷ್ಟೇ. ಇದು ಬೇಕಿತ್ತಾ ನನಗೆ ಎಂದುಕೊಳ್ಳುತ್ತಲೇ ಲೋ ಅಪ್ಪಾ ಮಾರಾಯ ಇಡೀ ಪ್ರಪಂಚದಲ್ಲಿ ಇರುವುದೆರಡೇ ಜಾತಿ ಒಂದು ಗಂಡು ಜಾತಿ ಇನ್ನೊಂದು ಹೆಣ್ಣು ಜಾತಿ ಅಂತ ಎಲ್ಲ ಬಲ್ಲವರೂ, ಜಾತ್ಯಾತೀತವಾದವರೂ, ಮಾನವಕುಲಕ್ಕೆ ಸೇರಿದವರೂ, ಬುದ್ಧಿವಂತರುಗಳೂ, ತತ್ವಜ್ಞಾನಿಗಳೂ, ಮಹಾ ಪುರುಷರೂ ಹೇಳಿರುವ ಮಾತಿದು, ನೀನೇನಪ್ಪಾ ಅಂದರೆ ಗಂಡು ಹೆಣ್ಣು ಅನ್ನೋ ಜಾತಿ ಕೂಡ ಇಲ್ಲಾ ಅಂತ ಹೇಳೋಕೆ ಹೊರಟಿದ್ದೀಯಾ? ಸುಮ್ಮನಿದ್ದು ಬಿಡು ಇವಾಗ ಜಾಸ್ತಿ ತಲೆ ತಿನ್ನಬೇಡ ಎಂದೇನೋ ಹೇಳಿ ಎದ್ದು ಹೊರಟೆ.

ಆದರೆ, ಯಾಕೆ ಹಾಗೆ ಹೇಳ್ತಿದ್ದಾನೆ. ಇದೇ ಮೊದಲ ಬಾರಿಗೆ ಹೀಗೆ ಯಾರಾದರೂ ಹೇಳಿರುವುದು ನನಗೆ. ಏನವನ ವಿಚಾರ ತಿಳಿದೇ ಬಿಡೋಣವೆಂದು ಮತ್ತೆ ಕುಳಿತೆ. ಅವನಿಗೆ ಮುಂಚಿತವಾಗಿಯೇ ಗೊತ್ತಿತ್ತೆನಿಸುತ್ತೆ ನಾನು ಮತ್ತೆ ಬಂದು ಕೂರುವೆನೆಂದು. ತನ್ನ ಲಹರಿಯಲ್ಲೇ ಕಳೆದುಹೋಗಿದ್ದವನು ಹೊರಬಂದು, ‘ನೋಡು ಎಲ್ಲರೂ ಮನುಷ್ಯರಷ್ಟೇ ಪ್ರತಿಯೊಬ್ಬರಲ್ಲೂ ಗಂಡು ಹೆಣ್ಣು ಎರಡೂ ಅಂಶಗಳಿರುತ್ತವೆ’ ಅಂತ ಒಂದು ವೇದಾಂತ ಬಿಟ್ಟ. ನಗೆ ತಡೆಯಲಾಗಲಿಲ್ಲ. ಹೊಟ್ಟೆ ಹಿಡಿದು ನಗಲಾರಂಭಿಸಿದೆ. ಅವನು ನನ್ನ ನೋಡಿ ಕೊಂಚವೇ ನಕ್ಕ. ಸುಮ್ಮನಾದೆ. ಅವನ ಪ್ರವಚನ ಮುಂದುವರೆಯಿತು. ಸಮಯಕ್ಕಾನುಸಾರವಾಗಿ ಯಾವ ಮನುಷ್ಯ ಬೇಕಾದರೂ ಹೆಣ್ಣಾಗಬಹುದು ಗಂಡು ಕೂಡ ಆಗಬಹುದು. ಅದು ಹೇಗೆ? ದೇಹದ ವಿನ್ಯಾಸವನ್ನಾಧರಿಸಿ ಅಂದರೆ ದೇಹ ಹೊತ್ತಿರುವ ಭಾಗಗಳಿಗನುಸಾರವಾಗಿ ಲಿಂಗ ಇದ್ದರೆ ಗಂಡು ಯೋನಿ ಇದ್ದರೆ ಹೆಣ್ಣು, ಎದೆ ಇದ್ದರೆ ಗಂಡು, ಮೊಲೆಯಿದ್ದರೆ ಹೆಣ್ಣು ಎಂದು ಪರಿಗಣಿಸುತ್ತೀವಿ. ಆದರೆ ಅದು ಕಾಲು ಭಾಗ ಸತ್ಯವಷ್ಟೇ. ಅಂದರೆ ಇಪ್ಪತ್ತೈದು % ಗಂಡು ಅಥವಾ ಹೆಣ್ಣು ಸತ್ವವನ್ನು ಹೊತ್ತಿರುವ ಮನುಷ್ಯನಷ್ಟೇ. ಇನ್ನು ಮಿಕ್ಕ ಎಪ್ಪತ್ತೈದು% ಮನಸ್ಸಿಗೆ ಸಂಬಂಧ ಪಟ್ಟಿದ್ದು. ನನ್ನ ಬಾಯಿ ತೆರೆದುಕೊಂಡಿದ್ದು ಹಾಗೇ ಇತ್ತು. ಸೊಳ್ಳೆಗಳು ಒಳಹೊಕ್ಕು ಹೊರಬರುತ್ತಿದ್ದವೇನೋ ಅದರ ಕಡೆ ಪರಿವೆಯೇ ಇರಲಿಲ್ಲ. ಅಂದರೆ, ಲಿಂಗವನ್ನು ಹೊತ್ತಿರುವವನೂ ಸಹ ಹೆಣ್ಣಾಗಿರಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ. ಯಪ್ಪಾ!!!!! ತಲೆ ಕೆಸರಿನಲ್ಲಿ ಅದ್ದಿ ಕಚ ಕಚ ಕಚನೆ ತುಳಿದು ಎತ್ತಿದ ಹಾಗಾಯ್ತು. ಕೂದಲುಗಳು ಪರಪರಪರ ಕಿತ್ತುಕೊಂಡು ಅದೇನು ಹೇಳುತ್ತಿದ್ದನೋ ಪುಣ್ಯಾತ್ಮ ಎಂದು ಅವನನ್ನೇ ನೋಡುತ್ತಾ ಹಾಗಾದ್ರೆ ನಾನು ಯಾರು ತಂದೆ ಅಂದೆ. ನೀನು ಎಪ್ಪತ್ತೈದು % ಗಂಡು ೨೫% ಹೆಣ್ಣು ಅಂದ, ಕಾಲಿನಲ್ಲಿರುವ ಮೆಟ್ಟು ಕಿತ್ತು ಅವನ ಮುಖಕ್ಕೆ ಎಸೆಯಬೇಕೆಂದುಕೊಂಡವನು ಸುಧಾರಿಸಿಕೊಂಡು, ಹಾಗಾದರೆ ನಮ್ಮಪ್ಪ ಅಂದೆ ಅರವತ್ತೈದು % ಗಂಡು, ಮುವತ್ತೈದು % ಹೆಣ್ಣು ಅಂದ, ನಮ್ಮಮ್ಮ ಅಂದೆ ಅರವತ್ತೈದು % ಹೆಣ್ಣೂ ಮುವತ್ತೈದು % ಗಂಡು ಎಂದ. ಬಾಯಿಗೆ ತರ್ಮಾಮೀಟರ್ ಇಟ್ಟಿದ್ದಿದ್ದರೆ ಕೋಪದ ಶಾಕಕ್ಕೇ ಒಡೆದು ಚೂರುಚೂರಾಗುತ್ತಿತ್ತು. ಯಾಕೆ ಅಂದೆ ಅಷ್ಟೇ? ನಿಮ್ಮಪ್ಪನದ್ದು ನೋಡಲು ಒರಟಾದರೂ ಮೃದು ಸ್ವಭಾವ, ನಿಮ್ಮ ಸಂಸಾರದಲ್ಲಿ ಯಾರಿಗೆ ಏನೇ ಆಪತ್ತಾದರೂ ಹೆಚ್ಚು ಘಾಸಿಯಾಗುವುದು ನಿನ್ನ ತಂದೆಗೇನೇ. ನಿಮ್ಮಮ್ಮ ನೋಡಲು ಸೌಮ್ಯ, ಆದರೆ ಗಟ್ಟಿ ಹೆಂಗಸು ಇಲ್ಲವಾದಲ್ಲಿ ನಿಮ್ಮಗಳನ್ನ ಸಾಕಲು ನಿಮ್ಮಪ್ಪನಿಂದ ಸಾಧ್ಯವೇ ಆಗುತ್ತಿರಲಿಲ್ಲ.

ನಾನೂ ಯೋಚನೆಗೊಳಗಾದೆ, ಹೌದು ಇವನು ಹೇಳುತ್ತಿರುವುದೇನೋ ಸರಿ ಆದರೆ ನಾನು ೨೫% ಹೆಣ್ಣೆಂದು ಒಪ್ಪಿಕೊಳ್ಳಲು ಕೊಂಚ ಕಸಿವಿಸಿಯಾಯ್ತು. ಹಾಗಾದರೆ ನೀನು ಎಷ್ಟು % ಗಂಡು ಎಂದು ಅವನನ್ನೇ ಪ್ರಶ್ನಿಸಿದೆ. ನಾನು ೧೦೦% ಗಂಡು ಕೆಲವು ಸಲ ೧೦೦% ಹೆಣ್ಣು ಕೆಲವು ಸಲ ಎಂದು ದಿಟ್ಟವಾಗಿ ಉತ್ತರಿಸಿದ. ನನಗೆ ಇವನ ಮಾತುಗಳು ಕೊಂಚವೂ ರುಚಿಸುವುದಿಲ್ಲ ಆದರೂ ಎಲ್ಲವನ್ನೂ ಕೇಳುತ್ತೇನೆ ಬೇರೆ ವಿಧಿಯಿಲ್ಲ. ತೇಜಸ್ವಿ ಅವರು ಎಂದೆ. 60% ಗಂಡು 40% ಹೆಣ್ಣು ಎಂದ. ಭಟ್ಟರು? 73%,27%. ಐಶ್ವರ್ಯ 40,60. ರಾಜಕಾರಿಣಿಗಳು 90,10(ಅಂದಾಜು). ಪೊಲೀಸರು 88,22 (ಅಂದಾಜು), ಕ್ರಿಯಾಶೀಲರು 100,100 (ಅಂದಾಜು), ಸಾಧುಗಳು 100,100 (ಅಂದಾಜು), ವಿದ್ಯಾರ್ಥಿಗಳು 59, 41 (ಅಂದಾಜು), ಭಾರತೀಯರು 60,40 (ಅಂದಾಜು), ವಿದೇಶೀಯರು 50,50 (ಅಂದಾಜು). ಇವನ ಸಮೀಕ್ಷೆ, ಅನ್ವೇಷಣೆ ಹುಚ್ಚುತನವೆಂದು ಗೊತ್ತಿದ್ದರೂ ನಾನು ಕೇಳುತ್ತಾ ಹೋಗಿದ್ದು ನನ್ನ ಮೂರ್ಖತನವಷ್ಟೇ.  

 ಹಾಗಾದರೆ ಗಂಡು ಹೆಣ್ಣೆಂದರೆ ಹೇಗೆ ವಿಭಜಿಸುತ್ತೀಯ? ಎಂದೆ. ವಿಕೃತಿ, ಕ್ರೋಧ, ಕ್ರೌರ್ಯ, ಧೈರ್ಯ, ಒರಟುತನ, ಗಟ್ಟಿತನ, ಹುಂಬತನ, ಸುಳ್ಳುಬುರುಕುತನ, ಮೋಸಗಾರಿಕೆ, ಕೊಲೆಪಾತಕತನ, ಹಾದರಿಕೆ, ಕಳ್ಳತನ, ಮೆರೆಯುವಿಕೆ, ಜಂಭ, ಅಧಿಕಾರೀ ನಡವಳಿಕೆ ಇತರೆ ಇತರೆ ಇತರೆ ಇದು ಗಂಡಸ್ತನ. ಹೆಣ್ತನವೆಂದರೆ ಸೌಂದರ್ಯ, ತ್ಯಾಗ, ಹೆದರುವಿಕೆ,ಸಹಿಶ್ಣುತೆ, ತಾಳ್ಮೆ, ಸಹನೆ, ನಗು, ಕನಸು, ಮೃದುತ್ವ, ಇತರೆ ಇತರೆ ಇತರೆ. ಹಾಗಾದರೆ ನೀನು ಹೇಳ್ತಿರೋದು ಪ್ರಬಲವಾದದ್ದು ಗಂಡು, ದುರ್ಬಲವಾದದ್ದು ಹೆಣ್ಣು ಅಂತಲೋ ಎಂದೆ. ಸುಮ್ಮನೆ ನಕ್ಕ. ಯಾವುದು ದುರ್ಬಲ ಮತ್ತೆ ಯೋಚನೆ ಮಾಡಿ ನೋಡು ಎಂದ. ನನ್ನ ಪ್ರಶ್ನೆಯಲ್ಲಿ ಸತ್ವವಿಲ್ಲದ್ದು ನನಗೆ ಅರಿವಾಯ್ತು. ಅವಗುಣಗಳೆಲ್ಲಾ ಪುರುಷತ್ವ ಮತ್ತು ಸದ್ಗುಣಗಳೆಲ್ಲಾ ಹೆಣ್ತನಗಳಾ ಹಾಗಾದರೆ ಎಂದು ಅದೇ ಪ್ರಶ್ನೆಯನ್ನು ತಿರುಚಿ ಕೇಳಿದೆ. ಒಳಿತು ಕೆಡುಕೆಂಬುದರ ಬೇಧ ಮಾಡಲು ಮಧ್ಯ ಒಂದು ರೇಖೆ ಎಳೆದು ಒಳಿತೊಂದು ಕಡೆ ಕೆಡುಕೊಂದು ಕಡೆ ಹಾಕಬೇಕಾಗುತ್ತದೆ. ಇಲ್ಲಿ ಆ ಮಧ್ಯ ರೇಖೆಯೇ ಇಲ್ಲವಾದ್ದರಿಂದ ಒಳಿತು ಕೆಡುಕು ಎಂಬ ಬೇಧವೇ ಇಲ್ಲವೆಂದ. ಇದ್ಯಾಕೋ ಖಂಡಿತವಾಗಿ ನನಗೆ ಅರಗಿಸಿಕೊಳ್ಳುವ ಮಿತಿಯನ್ನು ದಾಟಿ ತುಂಬಾ ದೂರಹೋಗುತ್ತಲಿತ್ತು. ತಲೆಯಲ್ಲಿನ ಪ್ರಪಂಚದಲ್ಲಿ ಕರ್ಕಶ ಸಿಳ್ಳು ಹುಟ್ಟಿಕೊಂಡಿತ್ತು. ನೇರ ಅವನ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಸಾಕು ಮಾಡು ನಿನ್ನ ಹುಚ್ಚು ಪ್ರವರ ಇದನ್ನು ನಾನೇ ಅಲ್ಲ ಪ್ರಪಂಚದಲ್ಲಿ ಯಾರಿಗೇ ಹೇಳೀದರೂ ನಗುವರಷ್ಟೇ ಹೊರತು ತಮ್ಮಲ್ಲಿ ಗಂಡು ಹೆಣ್ಣು ಇಬ್ಬರೂ ಇದ್ದಾರೆಂದು ಒಪ್ಪಿಕೊಳ್ಳಲಾರರು! ಪ್ರಪಂಚದಲ್ಲಿ ಜಾತಿಯೇ ಇಲ್ಲ, ಯಾರೂ ಮೇಲಲ್ಲಾ, ಕೀಳಲ್ಲಾ, ಸಮಾನರೂ ಅಲ್ಲ, ಯಾರು ಗಂಡೂ ಅಲ್ಲ, ಯಾರು ಹೆಣ್ಣೂ ಅಲ್ಲ, ಎಲ್ಲರೂ ಗಂಡೇ, ಎಲ್ಲರೂ ಹೆಣ್ಣೇ ಎಂದು ನೀವು ಒಪ್ಕೋತೀರಾ???









+ನೀ.ಮ. ಹೇಮಂತ್

1 comment: