ಓದಿ ಓಡಿದವರು!

Friday 1 June 2012

ಎಲ್ಲಾ ಮಾಯ! (50th Story)




        ಬೋ ಲಬೋ ಲಬೋ ಬಾಯಿ ಬಡಿದುಕೊಂಡು ಗದ್ದೆಯ ಕಡೆಯಿಂದ ಮಂಜ ಎಂಬ ಹುಡುಗನು ಎಂಜಿನ್ನಿನಂತೆ ಮುಂದೆ ಮುಂದೆ ಓಡಿಬರುತ್ತಿರಲು, ಆಶ್ಚರ್ಯ, ಆತಂಕ, ಕುತೂಹಲಗಳ ಸರಕುಗಳನ್ನು ಹೊತ್ತ ಹಳ್ಳಿಯ ಹಲವಾರು ಮಂದಿ ಬೋಗಿಗಳೂ ಅವನ ಹಿಂದೆ ಹಿಂದೆ ಬಂದುದೇ ರೈಲು ನೇರ ಮಂಜನ ಮನೆಯ ಅಂಗಳದಲ್ಲಿ ಇಲ್ಲುವುದು. ಮಂಜನ ಅವ್ವ ಸೀತಕ್ಕ ಇಡೀ ಊರಿಗೆ ಊರೇ ರೈಲು ಹತ್ತಿ ಮನೆಯ ಮುಂದೆ ನಿಂತದ್ದೇ ಒಳಗಿನಿಂದಲೇ ಅಯ್ಯೋ ರಾಮಣ್ಣ ಏನಾತೋ ನನ್ ಗಂಡಂಗೇsssssssssssss ಎಂದು ವಿಚಾರ ಇನ್ನೂ ತಿಳಿಯುವ ಮೊದಲೇ ಎದೆ ಎದೆ ಬಡಿದುಕೊಂಡು ಜನರ ಎದುರು ಪ್ರತ್ಯಕ್ಷವಾಗಿ, ಎಲ್ಲರ ಮುಂದೆ ಹೋ ಎಂದು ಅಳುತ್ತಾ ನಿಂತಿದ್ದ ಮಂಜನನ್ನು ಕಂಡದ್ದೇ ಎಲ್ಲೋ ಮಂಜ ನಿಮ್ಮಪ್ಪ ಎಂದು ಕೇಳಿ ಸುತ್ತಾ ಎಲ್ಲಾ ಮಂಜನ ಉತ್ತರವನ್ನೇ ನಿರೀಕ್ಷಿಸುತ್ತಲಿದ್ದ ಕಣ್ಣುಗಳನ್ನು ನೋಡಿ ಕೆಮ್ಮುವಳು. ಯವ್ವೋ ಗದ್ದೇನ್ಯಾಗೆ… ಎಂದು ಏನೋ ಹೇಳಲು ಪ್ರಯತ್ನಿಸಿ ತಾನೇ ಗೊಂದಲಗೊಂಡು ಯಂಗವ್ವ ಯೋಳಲಿ ಒಂದೂ ಅರ್ಥ ಆಗಾಕಿಲ್ಲ. ಅಪ್ಪ ನನ್ನ ಪಕ್ಕದಾಗೇ ನೀರಿನ್ ಪಾತಿ ಕಟ್ತಿದ್ದ ಹಂಗ್ ತಿರ್ಗಿ ಹಿಂಗ್ ತಿರ್ಗಾಷ್ಟರಲ್ಲೇ ಮಂಗಮಾಯ ಆಗೋದಾನವ್ವ. ಸುತ್ತಾ ಎಲ್ಲಾ ಕಡೇ ಹುಡ್ಕಾಯ್ತು. ಎಲ್ಲೂ ಕಾಣಾಕಿಲ್ಲ. ಅದ್ಯಾವ ಮಾಯದಾಗೆ ಎಲ್ಲಿ ಹೋದ ಅಂತಾನೇ ತಿಳಿಯಾಕಿಲ್ಲವ್ವಾ ಎಂದು ನೆನೆದಷ್ಟೂ ಹೆದರಿ ಸಣ್ಣದಾಗಿ ಕಂಪಿಸುತ್ತಾ ತನ್ನವ್ವನನ್ನು ತಬ್ಬಿ ನಿಲ್ಲುವನು. ಏ ಅದೇನ್ ಸರಿಯಾಗ್ ಯೋಳಲಾ, ಮುಂಡೇದೇ ಅಲ್ಲೇ ಎಲ್ಲಾರ ಇರ್ತಾನು, ಸರಿಯಾಗ್ ನೋಡ್ದಾ ಇಲ್ಲಾ ಎಂದು ಅಳುತ್ತಿದ್ದ ಮಂಜನ ತಲೆ ಮ್ಯಾಗೆ ಥಟ್ಟನೆ ಒಂದು ಬಿಟ್ಟು ಸೀತಕ್ಕ ಎತ್ತಕಡೆ ಹೋಗಿದ್ದಾನೆಂದು ಚಿಂತಿಸುತ್ತಾ ಮೊದಲು ಕಡ್ಡೀಪುಡಿಯನ್ನು ಬಾಯಿಗೆ ಎಸೆದುಕೊಳ್ಳುವಳು. ಅಷ್ಟರಲ್ಲಿ ಸುತ್ತಾ ನೆರೆದಿದ್ದ, ಇನ್ನೂ ನೆರೆಯುತ್ತಿದ್ದ ಬೋಗಿಗಳು ಅರ್ಧಂಬರ್ಧ ವಿಷಯವನ್ನು ತಿಳಿದುಕೊಂಡು ರಾಮಣ್ಣ ಮಾಯಾ ಆಗ್ಯಾನಂತೆ. ರಾಮಣ್ಣ ಮಂಗ ಮಾಯಾ ಅಗ್ಯಾನಂತೆ. ರಾಮಣ್ಣ ಮಂಗನ ತರಹ ಮಾಯಾ ಅಗ್ಯಾನಾಂತೆ. ರಾಮಣ್ಣ ಮಂಗನ ಜೊತೆ ಮಾಯಾ ಅಗ್ಯಾನಂತೆ. ರಾಮಣ್ಣ ಮಂಗನ್ನ ಮಾಯಾ ಮಾಡ್ಯಾನಂತೆ ಎಂದು ಏನೇನೋ ಹರಡುತ್ತಿರಲು. ಸಂಗತಿ ಸರಿಯಾಗಿ ಕೇಳಿಸಿಕೊಂಡಿದ್ದ ಮುಂದಿದ್ದ ಒಂದಷ್ಟು ಜನ ಮಂಜನನ್ನು ಸಂತೈಸುತ್ತಾ ವಿಚಾರ ಕೆದಕುತ್ತಾ ಸರಿಯಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ, ಕೇಳಿದಷ್ಟೂ ಮಂಜ ಪದೇ ಪದೇ ಅದೇ ವಿಷಯವನ್ನು ಒದರುತ್ತಿದ್ದುದನ್ನು ಕಂಡು ಸರಿ ನಡಿ ಹೋಗಿ ಗದ್ದೆಯಾಗೇ ಹುಡುಕುವ ಎಂದು ಈಗ ಸೀತಕ್ಕನನ್ನು ಎಂಜಿನ್ನು ಮಾಡಿ ಇಡೀ ರೈಲು ಇನ್ನೊಂದಷ್ಟು ಜನರನ್ನು ಹೊತ್ತು ಹೊರಡುತ್ತದೆ. ಗದ್ದೆಯಲ್ಲಿ ಪಾತಿ ಕಟ್ಟುತ್ತಿದ್ದ ಜಾಗದಲ್ಲಿ ಸಲಕರಣೆಗಳು ಅಲ್ಲೇ ಇವೆ ರಾಮಣ್ಣ ಮಾತ್ರ ಇಲ್ಲ. ಗದ್ದೆಯ ಅಕ್ಕಪಕ್ಕದಲ್ಲಿ ನಿಂಗನ ಗದ್ದೆಯ ಬಳಿ, ಗೌಡರ ಸಿಹಿ ನೀರಿನ ಬಾವಿಯ ಬಳಿ ಸಾಧ್ಯತೆಗಳಿರುವ ಎಲ್ಲಾ ಕಡೆಗೂ ರೈಲು ನುಗ್ಗಿ ಹೊರಬಂದರೂ ಯಾವುದೇ ಪ್ರಯೋಜನವಾಗದೇ ಎಂಜಿನ್ನಾಗಿದ್ದ ಸೀತಕ್ಕನ ಸಿಳ್ಳು ಇಡೀ ಹಳ್ಳಿಗೆ ಹರಡಿ ಹಳ್ಳಿಗೇ ಹಳ್ಳಿಯೇ ಬಾಯ ಮೇಲೆ ಬೆರಳಿಟ್ಟುಕೊಂಡಿತು.

ಈಗಾಗಲೇ ಹಲವು ತಿಂಗಳ ಹಿಂದೆ ವೆಂಕಣ್ಣ ಅದಕ್ಕೂ ಕೆಲ ತಿಂಗಳ ಹಿಂದೆ ಭೋಬಣ್ಣ ಹೋದ ವರ್ಷ ಬಸಣ್ಣ ಅದಕ್ಕೂ ಮುಂಚೆ ಶಿವಣ್ಣ ಧಿಡೀರನೆ ಇದ್ದಲ್ಲಿಂದಲೇ ಇದ್ದಂಗೆಯೇ ಮಾಯವಾದ ಹಾಗೆಯೇ ಈಗ ರಾಮಣ್ಣ ಮಾಯವಾಗಿರುವ ಸುದ್ದಿ ಮತ್ತೆ ಅವರೆಲ್ಲರೂ ಮಾಯವಾದಾಗ ಮಾಡಿದ್ದ ಸುದ್ದಿಯನ್ನೇ ಮಾಡಿ, ಅದೇ ಆತಂಕವನ್ನೇ ಸೃಷ್ಠಿಸಿ, ಅದೇ ಹಳ್ಳಿಯ ಹಿರಿಯರು ಅದೇ ರೀತಿ ತಲೆ ಕೆಡಿಸಿಕೊಂಡು, ಆ ಸಂಸಾರಗಳಿಗೆ ಸಾಂತ್ವಾನ ಹೇಳಿದ ಹಾಗೆಯೇ ಈಗ ಸೀತಕ್ಕನಿಗೂ ಮಂಜನಿಗೂ ಅದೇ ರೀತಿಯ ಸಾಂತ್ವಾನ ಹೇಳಿ ಧೈರ್ಯ ತುಂಬಿ ಹಿಂತಿರುಗುವನೆಂಬ ಅದೇ ಹಿಂದೆಲ್ಲಾ ಸುಳ್ಳಾಗಿರುವ ವಿಶ್ವಾಸವನ್ನು ಕೊಟ್ಟು ಜಾಗ ಖಾಲಿ ಮಾಡಿದ ಮೇಲೆ ಉಳಿದದ್ದು ತಲೆಗೆ ಕೈ ಹೊತ್ತ ಸೀತಕ್ಕ, ಮಂಡಿಚಿಪ್ಪಿನಲ್ಲಿ ಮುಖ ಹುದುಗಿಸಿದ ಮಂಜ ಮತ್ತು ಕತ್ತಲೆ ಮನೆ, ಕ್ಷೀಣವಾಗಿ ಉರಿಯುತ್ತಿರುವ ಒಂದೇ ಒಂದು ದೀಪ. ಕಾಲವೂ ಕೂಡ ಯಾರ ಪರಿವೆಗೂ ಬರದೇ ಪ್ರತಿಕ್ಷಣ ಮಾಯವಾಗುತ್ತಾ ಹೋಯಿತು. ಚಂದ್ರನೂ ಎರಡು ಬಾರಿ ಸಂಪೂರ್ಣ ಮಾಯವಾಗಿ ಮತ್ತೆ ಮಿರಿಮಿರಿ ಮಿರುಗುವಷ್ಟರಲ್ಲಿ ಹಳ್ಳಿಯವರ, ಹಿರೀಕರ ಸಾಂತ್ವಾನಗಳನ್ನು ತಿಂದುಂಡು ಕೊಂಚ ಸುಧಾರಿಸಿಕೊಂಡ ಸೀತಕ್ಕ ಮತ್ತು ಮಂಜ ಫಸಲು ನೋಡಿಕೊಳ್ಳುತ್ತಾ ಮನೆಯ ಮುಂದೆ ಸೆಗಣಿ ಸಾರಿಸಲು ಕೂಡ ಶುರುಮಾಡಿರುವರು. ಮಂಜಣ್ಣನೆಂಬೋನು ಇದ್ದ ಎಂದು ಹಳ್ಳಿ ಹೇಳಲು ಶುರುಮಾಡಿದ್ದನ್ನೂ ಕೂಡ ಸೀತಕ್ಕ ಒಪ್ಪಿಕೊಳ್ಳಲು ಶುರುಮಾಡಿರುವಳು. ರಾಮಣ್ಣನ ಮನೆ ಎಂಬೋ ಮನೆ ಕ್ರಮೇಣ ಸೀತಕ್ಕನ ಮನೆಯಾಗುತ್ತಾ ಬಂತು.


ಈಗ ಸೀತಕ್ಕನ ಪಕ್ಕದ ಮನೆಯ ಕಣ್ಣಳತೆಯಷ್ಟೇ ದೂರದಲ್ಲಿದ್ದ ನಂಜುಂಡನ ಇಡೀ ಐದು ಜನರ ಸಂಸಾರವೇ ಮಾಯ! ಸಂಜೆ ಕತ್ತಲಾಗುತ್ತಿದ್ದಂತೆ ಮನೆ ಸೇರಿದ್ದ ನಂಜುಂಡ ಮನೆಯ ಒಳಗೆ ಹೋಗಿದ್ದನ್ನು ಸ್ವತಹ ನಂಜುಂಡನ ತಮ್ಮ ಚಂದ್ರನೇ ಕಣ್ಣಾರೆ ನೋಡಿದ್ದನೆಂಬುದೊಂದು ಸುದ್ದಿ. ಮನೆಯಲ್ಲಿ ಮಾಡಿದ್ದ ಅಡುಗೆ ಮಾಡಿದ್ದ ಹಾಗೆಯೇ ಇದೆ. ಮನೆಯಿಂದ ಹೊರಗೆ ಬಂದದ್ದು ಯಾರೂ ಕಂಡವರೂ ಇಲ್ಲ. ರಸ್ತೆಗಳಲ್ಲಿಯೇ ಆಗಲಿ, ಎಲ್ಲಿಯೇ ಆಗಲಿ ಕಂಡವರೂ ಯಾರೂ ಇಲ್ಲ. ಮೇಲಾಗಿ ಮನೆಯಲ್ಲಿ ಬಟ್ಟೆ, ದವಸ ಧಾನ್ಯ ಯಾವುದನ್ನೂ ಮುಟ್ಟಲಾಗಿಲ್ಲ. ಮನೆಯ ಬಾಗಿಲಿಗೆ ಬೀಗ ಕೂಡ ಜಡಿದಿಲ್ಲ. ಆದರೂ ನಂಜುಂಡನ ಸಂಸಾರ ನಾಪತ್ತೆಯಾಗಿದೆ. ರಾತ್ರೊ ರಾತ್ರಿ ಇಡೀ ಹಳ್ಳಿಗೆ ಹಳ್ಳಿಯೇ ಎಚ್ಚೆತ್ತು ಸುತ್ತ ಮುತ್ತಲ ಹೆಂಗಸರು ನಂಜುಂಡನ ಮನೆಯ ಮುಂದೆ ಬೊಬ್ಬೆಯಿಡುತ್ತಲಿದ್ದರೆ, ಮನೆಯ ಮುಂದಿನ ದೀಪದಡಿ ನಿಂತು ಹಳ್ಳಿಯ ಮುಖ್ಯಸ್ಥರ ಗುಂಪು ಸಮಾಲೋಚನೆ ನಡೆಸಿ ಒಬ್ಬೊಬ್ಬರೇ ಕಾಣೆಯಾಗುತ್ತಿದ್ದಲ್ಲಿ ಈಗ ಸಂಸಾರವೇ ಕಾಣೆಯಾಗಲು ಶುರುವಾಗಿರಬೋದಾ ಎಂದು ಚಿಂತಿಸುವರು. ಇದೀಗ ನಂಜುಂಡನ ಸಂಸಾರ ಮುಂದೆ ತಮ್ಮ ಸರದಿಯೂ ಬರಬಹುದೇನೋ ಎಂದು ಹೆದರಿ ಜನರಲ್ಲಿ ಈ ಬಾರಿ ಭಯ ಹುಟ್ಟಿಕೊಂಡು ಈ ಅರಿಯದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲೇಬೇಕೆಂದು ಒಮ್ಮತದಿಂದ ಆ ರಾತ್ರಿಯಲ್ಲೇ ನಿರ್ಧರಿಸಿ ಮನೆಗೆ ಮರಳಿದರೂ ಎಲ್ಲ ಗೋಡಗಳೋಳಗೂ ನಂಜುಂಡನ ಅಂತರ್ಧಾನವಾದ ವಿಷಯದ ಚರ್ಚೆ ಇತ್ತೇ ಹೊರತು ನಿದ್ರೆ ಸುಳಿಯಲಿಲ್ಲ. ನಿದ್ರಿಸಿದವರ ಕನಸಿನಲ್ಲೂ ಸಹ ತಾವೂ ಮಾಯವಾಗಿ ಈ ಸಾಲ, ಜಮೀನು, ಕಂದಾಯ, ಬ್ಯಾಂಕು, ಬೆಳೆ, ರೈತರ ಸಂಘ, ಕ್ರಿಮಿನಾಶಕ, ಗೊಬ್ಬರ, ಮಣ್ಣು, ಸಂಸಾರ, ಮನೆ, ಮಕ್ಕಳು, ದುಡ್ಡು ಎಲ್ಲ ರಾಕ್ಷಸರಿಂದ ತಪ್ಪಿಸಿಕೊಂಡು ಎಲ್ಲೋ ಸ್ವರ್ಗಕ್ಕೆ ಹೋದ ಹಾಗೆ ಕನಸು ಕಂಡು ನಡು ರಾತ್ರಿಯಲ್ಲಿ ಧಿಗ್ಗನೆ ಎದ್ದು ಕೂರುವರು.

ಬೆಳಗ್ಗೆಯೇ ನಿತ್ಯಕರ್ಮಗಳನ್ನು ಹೆಂಗಂದರೆ ಹಂಗೆ ಮುಗಿಸಿ ಮುತ್ತಜ್ಜನ ನೇತೃತ್ವದಲ್ಲಿ ಹಳ್ಳಿಯ ಜನ ಶ್ರೀನಿವಾಸ ಪಂಡಿತರ ಬಳಿ ಹೋಗಿದ್ದೇ ಹಬ್ಬವಲ್ಲ ಹರಿದಿನವಲ್ಲ ಜನ ಹಿಂಗೆ ಕಿಕ್ಕಿರಿದು ಬಂದಿಹರೆಂದರೆ ಇಂದು ಒಳ್ಳೇ ವ್ಯಾಪಾರವೇ ಸರಿ ಎಂದು ಎದೆ ಉಬ್ಬಿಸಿಕೊಂಡು ನರಸಿಂಹ ದೇವರಿಗೆ ಪೂಜೆ ಮುಗಿಸಿದ ಶ್ರೀನಿವಾಸ ಶಾಸ್ತ್ರಿಗಳು ಆರತಿ ತಟ್ಟೆಗೆ ಊಹಿಸದಷ್ಟು ಕಾಸು ಬೀಳದಿದ್ದುದನ್ನು ಕಂಡು ಕೊಂಚ ಬೇಸರಗೊಂಡರೂ ತೋರಿಸಿಕೊಳ್ಳದೇ ಮುತ್ತಜ್ಜನಿಂದ ಬಂದ ಸಮಾಚಾರವನ್ನು ತಿಳಿದುಕೊಳ್ಳುವರು. ಕವಡೆ ಹಾಕಿ ಆಕಾಶ ನೋಡಿ, ಭೂಮಿ ನೋಡಿ, ಬೆರಳೆಣಿಕೆ ಹಾಕಿ ಏನೇನೋ ಮಂತ್ರಿಸಿದ ನಂತರ ಏನು ಹೇಳುವುದೆಂದು ಯೋಚಿಸುತ್ತಿರುವವನಂತೆ ಕಣ್ಣು ಮುಚ್ಚಿಕೊಂಡಿದ್ದವನು ಹೂ.. ನರಸಿಂಹ ದೇವರಿಗೆ ಮುನ್ನೂರ ಒಂದು ರೂಪಾಯಿ ದಕ್ಷಿಣೆ ಇರಿಸಿ ಎಂದು ಕಣ್ಣು ಮುಚ್ಚಿಕೊಂಡೇ ಹೇಳಿದವನು ಮುತ್ತಜ್ಜ, ಇನ್ನೊಂದಷ್ಟು ಜನ ಇದ್ದ ಬದ್ದ ಚಿಲ್ಲರೆಯನ್ನೆಲ್ಲಾ ಜೋಡಿಸಿ ಐವತ್ತು ಪೈಸೆ ಕಮ್ಮಿ ಇದೆ ಎಂದು ಹೇಳಿ ಇಟ್ಟ ಮೇಲೆ ಶ್ರೀನಿವಾಸಾಚಾರ್ಯರು ಕಣ್ಣು ಬಿಟ್ಟು ಈ ಹಳ್ಳಿನ್ಯಾಗೆ ಕತ್ತೆಗಳನ್ನ ಉಪಚರಿಸಿಲ್ಲ. ಹಂಗಾಗೇ ಏನೇನೋ ನಡೀತೈತಿ, ತನ್ನ ಕೈಯಲ್ಲಾಗಲೀ ನರಸಿಂಹ ದೇವರ ಕೈಯಲ್ಲಾಗಲೀ ಏನೂ ಇಲ್ಲ. ಇದು ದವ್ವದ ಕಾಟ ಅಲ್ಲಾ, ಮಂತ್ರಕ್ಕೆ ಮಾವು ಉದರಾಂಗಿಲ್ಲ, ಯಾರೂ ಹೆದರೂದು ಬ್ಯಾಡ. ನರಸಿಂಹನ ನಂಬಿ ದಿನಾ ವಿಶೇಷ ಪೂಜೆ ಮಾಡಿಸೋದರ ಜೊತೆಗೆ ಕತ್ತೆಗಳಿಗೆ ವಿಶೇಷ ಪೂಜೆ, ಆಹಾರಗಳನ್ನಿತ್ತು ಉಪಚಾರ ಮಾಡ್ರೀ ಎಂದು ಹೇಳಿ ಇನ್ನು ಹೋಗಿ ಎನ್ನುವನು. ಜನರೂ ಗುಸುಗುಸು ಪಿಸ ಪಿಸ ಅದ್ ಹೆಂಗಾ, ಅದ್ ಹಂಗಾ, ಇದ್ ಹೆಂಗಾ ಎಂದು ಏನೇನೂ ಅರ್ಥವಾಗದೆ ಅಶ್ವಥ ಕಟ್ಟೆ ತಲುಪುವಷ್ಟರಲ್ಲಿ ಎಲ್ಲರ ಮುಂದಾಳಾದ ಮುತ್ತಜ್ಜನನ್ನೇ ಸುತ್ತುವರೆದು ಪೂಜಾರಯ್ಯ ಹೇಳಿದ ಮಾತಿನ ಅರ್ಥ ಏನೆಂದು ವಿವರಿಸಲು ಕೇಳಿಕೊಳ್ಳುವರು. ನಮ್ಮೂರಿನ್ಯಾಗೆ ಇರೋ ಕೆಲವೇ ಕತ್ತೆಗಳನ್ನ ನಾವು ಊರಾಚೆ ಇಟ್ಟು ತ್ಯಪ್ಗಿದ್ದೀವಲ್ಲ ಅದಕ್ಕೇ ಮುನ್ಸ್ಕಂಡು ಮಳೆ ಬರದಂಗೆ ಮಾಡೈತೇನೋ. ಮಳೆ ಇಲ್ಲದೇ ಉರಿ ತಾಳಾಕಾಗ್ದೇ ಸುಟ್ಟು ಮಾಯ ಏನಾರಾ ಅಗಿರ್ಬೈದಾ ಎನ್ನಲು ಯಾರಿಗೊತ್ತು ಎಂಬಂತೆ ಜನ ಸುಮ್ಮಗೆ ಕೂತಿರುವರು. ಏನೋ ನಿರ್ಧರಿಸಿದವನಂತೆ ಮುತ್ತಜ್ಜ ಆ ಚಿಕ್ಕ ಸಭೆಯನ್ನು ಬರಖಾಸ್ತುಗೊಳಿಸಿ ಎಲ್ಲ ಅಂಟು ವ್ಯಾಧಿಯಂತೆ ಒಬ್ಬರನ್ನು ಕಂಡು ಒಬ್ಬರು ನಿಟ್ಟಿಸುರು ಬಿಟ್ಟು ಚದುರುವರು.


ತಡ ಮಾಡದೇ ಚಕಚಕನೇ ಊರಿಗೆ ಊರೇ ಊರಾಚೆ ತಣ್ಣಗೆ ಇರಬಹುದಾದ ಕತ್ತೆಗಳನ್ನು ಅರಸಿ ಹೊರಟು ಮುಂಚೆ ಇದ್ದಲ್ಲೇ ಬಿಸಿಯ ಝಳವನ್ನೂ ಲೆಕ್ಕಿಸದೇ ತಂಪಾಗಿ ಮಲಗಿದ್ದ ಕತ್ತೆಗಳ ತಾಣವನ್ನು ಬಹುದೂರದಿಂದ ಗುರುತಿಸಿ ಕತ್ತಗಳ ಇರುವಿಕೆಯಿಂದಲೇ ರೋಮಾಂಚಿತರಾದ ಜನರನ್ನು ಮುತ್ತಜ್ಜನೇ ಸೈನ್ಯಾಧಿಕಾರಿಯಂತೆ ಕರೆದುಕೊಂಡು ಕೋಲು ಹಿಡಿದು ಮುನ್ನಡೆಯುವನು. ಹಳೇ ರದ್ದಿ ಅಂಗಡಿಯಂತಿದ್ದ ಪಾಳು ಬಿದ್ದಿದ್ದ ಬಾಗಿಲೇ ಇಲ್ಲದ ಮನೆಯಲ್ಲಿ ಆರಾಮವಾಗಿ ಕಾಲು ಚಾಚಿ ಎಲ್ಲ ಖಾಕೀ ವರ್ಣದ ಗೋಣಿ ಚೀಲಗಳನ್ನ ಹೊದ್ದ ಕತ್ತೆಗಳೂ ಸಿಕ್ಕ ಸಿಕ್ಕ ಪೇಪರುಗಳನ್ನು ಜಮಡುತ್ತಾ, ಆಕಳಿಸುತ್ತಾ ತಮ್ಮ ವಿಶೇಷ ಸ್ವರದಲ್ಲೇ ಆ ಈ ಓ ಎಂದು ಅರಚುತ್ತಾ ಕುಳಿತಿರುವವು ಕತ್ತೆಗಳು. ಪೇಪರುಗಳನ್ನು ತಿಂದೂ ತಿಂದೂ ಹೊಟ್ಟೆಗಳನ್ನು ಗುಡಾಣವಾಗಿಸಿಕೊಂಡಿರು ಕತ್ತೆಗಳನ್ನು ಗೌರವ ಪೂರ್ವಕವಾಗೇ ಸಂಧಿಸಿ ಸಕಲ ಮರ್ಯಾದೆಗಳಿಂದ ಪೂಜೆ ಮಾಡಿ ಕಾಯಿ ಹೊಡೆದು ವಿಭೂತಿ ಹಚ್ಚಿ ಗಾಂಧಿ ತಾತನ ಫೋಟೋ ಇದ್ದ ಒಂದು ಹಾಳೆಯನ್ನು ಕಚಕಚನೆ ಜಮಡುತ್ತಿದ್ದ ಕತ್ತೆಯ ಬಳಿ ಎಲ್ಲ ಸೇರಿ ತಮ್ಮ ಅಹವಾಲನ್ನು ಪ್ರಾರ್ಥಿಸಿಕೊಂಡು, ಇನ್ನಾದರೂ ಈ ಬಡಕಲು ಊರಿಗೆ ಮಳೆ ತರಿಸಿ ತಣಿಸಿ ಉಳಿಸೋ ಕತ್ತೆ ರಾಯ ಎಂದು ಮಂಗಳಾರತಿ ಎತ್ತಲು ಆಗುವುದಿಲ್ಲವೆನ್ನಲಾಗದೆ ತನ್ನ ವಿಶಿಷ್ಟ ಭಾಷೆಯಲ್ಲೇ ಪ್ರಸನ್ನ ಚಿತ್ತವಾಗಿ ಸರಿ ಎನ್ನಲು ಹಳ್ಳಿಯ ಜನ ತಮ್ಮ ಜೊತೆಯಲ್ಲೇ ಕರೆದುಕೊಂಡು ಮೆರವಣಿಗೆಗೆಂದು ಕರೆದುನಡೆಯುವರು. ಹೋಗಹೋಗುತ್ತಾ ಮಾರ್ಗಮಧ್ಯದಲ್ಲಿ ಗಾಂಧಿಯಿದ್ದ ಪೇಪರು ತಿಂದ ಕತ್ತೆಗೂ ಮತ್ತು ಹಿಂದೆ ಹಿಂದೆಯೇ ಬಂದ ಎರಡು ಮೂರು ಮರಿ ಕತ್ತೆಗಳಿಗೂ ಜೈಕಾರವೇನು, ಹೂವಿನ ಹಾರವೇನು, ಛತ್ರಿ ಹಿಡಿಯುದೇನು, ಮಾರ್ಗಕ್ಕೆ ಹೂವು ಹಾಸುವುದೇನು, ಡೊಳ್ಳು ತಮಟೆಗಳೇನು, ಹೋದ ಹೋದ ಕಡೆ ಮಂಗಳಾರತಿಗಳೇನು, ಸ್ವಾಗತಿಸಿದ ರಂಗೋಲೆಯುಕ್ತ ಮನೆಗಳೇನು, ನೋಡಲೆರಡು ಕಣ್ಣು ಸಾಲದು. ಕತ್ತೆಗಳ ದಿಲ್ ಖುಷ್ ಆಗಿ ಅರಚಿದ್ದೋ ಅರಚಿದ್ದು. ನಂಜುಂಡ, ರಾಮಣ್ಣ, ಭೀಮಣ್ಣ ಎಲ್ಲರ ಮನೆಗೂ ಕತ್ತೆಗಳನ್ನು ಪ್ರವೇಶಿಸಿ ಇನ್ನು ತಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ ಸರಿ ಎಂದು ಬೀಗುತ್ತಿದ ಹಳ್ಳಿಯ ಜನತೆಗೆ ಶ್ರೀನಿವಾಸಾಚಾರ್ಯರು ಎದುರು ಸಿಕ್ಕಿದ್ದೇ ತಾವು ಹೇಳಿದ್ದು ಕತ್ತೆ ಸೇವೆಯಲ್ಲ ಕಪ್ಪೆ ಸೇವೆ ಮಾಡಲು ಎಂದಿದ್ದೇ ಸರ್ವಸಂಭ್ರಮಾಚರಣೆಗಳು ಉಡುಗಿಹೋದವು. ಇದ್ದ ಬದ್ದ ಶಕ್ತಿಯನ್ನೆಲ್ಲಾ ಖರ್ಚು ಮಾಡಿ ಮಾಡಿದ ಪೂಜೆ ವ್ಯರ್ಥವಾಯಿತಲ್ಲಾ ಎಂದು ತಲೆ ಮೇಲೆ ಪ್ರತಿಯೊಬ್ಬರೂ ಕೈಹೊತ್ತು ಕೂತಿರಲು, ಇಂಥ ಸಮಯದಲ್ಲಿ ಒಗ್ಗಟ್ಟಾಗಿ ದುಡಿಯದೆ ಇನ್ಯಾವಾಗ ಸಾಧ್ಯ ಎಂದು ಊರ ಗೌಡರು ಮುಂದೆ ಬಂದು ತಾನೂ ಜೊತೆಯಲ್ಲಿ ನಿಲ್ಲುವುದಾಗಿ ಬನ್ನಿ ಕಾಣದಾಗಿರುವ ಕಪ್ಪೆಗಳನ್ನು ಹುಡುಕೋಣ ಎಂದು ಎಲ್ಲರನ್ನೂ ಮತ್ತೆ ಹುರಿದುಂಬಿಸುವರು.

ಆದರೆ ಯಾರಿಗೂ ತಲೆಬುಡ ಅರ್ಥವಾಗದೇ ನಮ್ಮ ಜನ ಕಾಣೆಯಾಗುವುದಕ್ಕೂ ಸುಮ್ಮನೆ ವಟರುಗುಟ್ಟುವ ಕಪ್ಪೆಗಳನ್ನು ಪೂಜಿಸುವುದಕ್ಕೂ ಏನು ಸಂಬಂಧವೆಂದು ಗೌಡರನ್ನೇ ಕೇಳಲು. ಕಪ್ಪೆಗಳು ಕೂಗಿದರೇನೇ ಮಳೆ ಬರುವುದಲ್ಲವೇ ಹಾಗಾಗಿ ಮೊದಲು ಕಪ್ಪೆಗಳ ಪೂಜೆಯಾಗಬೇಕೆಂದು ಹೇಳುವರು. ಅದಕ್ಕಿದ್ದು ಮುತ್ತಜ್ಜ ಮಳೆ ಬರುವಹಾಗಿದ್ದರೆ ತಾನೆ ಕಪ್ಪೆ ಕೂಗುವುದು ಎಂದು ಮರುಪ್ರಶ್ನಿಸಲು ಅದೆಲ್ಲಾ ನಿಮ್ಮ ಕಾಲದಾಗೆ ಮುತ್ತಜ್ಜಣ್ಣ ಈಗ ಕಪ್ಪೆ ಕೂಗಿದ್ರೆ ಮಳೆ ಬತ್ತಾವು ನೋಡಿ ಬೇಕಿದ್ರೆ ಎಂದದ್ದೇ ಮತ್ತೆ ದೇಹಗಳಲ್ಲಿ ಜೀವ ಸಂಚಾರವಾಗಿ, ಮಳೆ ಬಂದರೆ ಮತ್ತೆ ನಮ್ಮ ಭೂತಾಯಿ ಖುಷಿಯಾಗ್ತಾಳೆ, ನಮ್ ಜನಾ ಭೂಮಿ ಮ್ಯಾಲೇ ಉಳೀತಾರೆ ಎಂದು ಕತ್ತೆಗಳ ಜೊತೆಗೆ ಗೌಡರಿಗೂ ಜಯಕಾರ ಹಾಕಿ ಎಂದೋ ಕಂಡಿದ್ದ ಕಪ್ಪೆಗಳಿಗಾಗಿ ಹುಡುಕಾಟ ಶುರುಮಾಡುವರು. ಮಳೆಗಾಲದಲ್ಲಿ ಮಾತ್ರ ತಮ್ಮ ಅಸ್ತಿತ್ವ ಪ್ರಚುರಪಡಿಸುತ್ತಿದ್ದ ಕಪ್ಪೆಗಳನ್ನು ಈ ಸುಡುಬಿಸಿಲಿನ ಕಾಲದಲ್ಲಿ ಎಲ್ಲಿ ಹುಡುಕುವುದೆಂದು ಕಳೆದ ಸಾರಿ ಎಲ್ಲಿ ನೋಡಿದ್ದೆಂದು ಎಲ್ಲರೂ ತಾವು ಅಲ್ಲಿ ನೋಡಿದ್ದಾಗಿ, ಇನ್ನೊಬ್ಬರು ಇನ್ನೆಲ್ಲೋ ನೋಡಿದ್ದಾಗಿ ನೆನಪುಗಳನ್ನು ಕಲೆಹಾಕ್ಕುತ್ತಿರುವಾಗಲೇ. ನಿಂಗನೆಂಬುವನು ಕೊಂಚ ಬುದ್ಧಿವಂತಿಕೆ ಮೆರೆದು ಕಪ್ಪೆಗಳು ತೇವವಿರುವ ತಂಪಿರುವ ಪ್ರದೇಶದಲ್ಲೇ ಇರುವುವೆಂದು ಹೇಳುವನು. ಭಲೇ ಭಲೇ ಎಂದು ಊರ ಜನರು ನಿಂಗನ ಬೆನ್ನು ತಟ್ಟಿ ಒಣಗಿದ್ದರೂ ಇನ್ನೂ ಕೊಂಚ ಕೊಳಕು ನೀರನ್ನು ಉಳಿಸಿಕೊಂಡಿರುವ ಪಿನಾಕಿನಿ ನದಿಗೆ ಅನ್ವೇಷಣೆಗೆ ಹೋಗುವುದೆಂದು ತೀರ್ಮಾನಿಸುವರು. ಆದರೆ ಹೋಗುವ ಮುನ್ನ ಸರ್ವ ಸಿದ್ಧತೆ ಮಾಡಿಕೊಂಡೇ ಹೋಗುವುದೆಂದು ಶುಭ ಘಳಿಗೆಯೊಂದನ್ನು ಶ್ರೀನಿವಾಸಾಚಾರ್ಯರ ಬಳಿ ಗೊತ್ತು ಮಾಡಿಸಿ ಅಂತೂ ಅವನು ಇವನ ಬಳಿ ಇವನು ಅವನ ಬಳಿ ಎಲ್ಲೂ ಇಲ್ಲದವನು ಗೌಡರ ಬಳಿಯೇ ದವಸ ಧಾನ್ಯ ಸಾಲ ಇಸಿದುಕೊಂಡು ಅಂತೂ ತಟ್ಟೆಗಳ ತುಂಬಾ ಕಾಣಿಕೆಗಳನ್ನು ತಯಾರು ಮಾಡಿಕೊಂಡು ಅನ್ವೇಷಣೆಗೆ ಹೊರಡುವರು. ಘಮ್ಮೆನ್ನುವ ಒಂದು ವಿಚಿತ್ರ ಸುವಾಸನೆಯನ್ನು ಹೊತ್ತಿದ್ದ ಕಾಣಿಕೆಗಳನ್ನು ಹೊತ್ತದ್ದರಿಂದಲೋ ಏನೋ ಮಂಡೂಕವನ್ನು ಹುಡುಕುವುದು ಕಷ್ಟವಾಗದೇ ಹೋದದ್ದೇ ಎದುರಿಗೆ ಸಿಕ್ಕಿಬಿತ್ತು.


ಬಿಸಿಲಲ್ಲಿ ಬೆಂದು ಬೆಂಡಾದ ಬಡಕಲು ಹಳ್ಳಿಯಲ್ಲೇ ಇದ್ದರು ಚೆನ್ನಾಗಿ ತಿಂದುಂಡು ಕೊಬ್ಬಿದ್ದ ಕಪ್ಪೆಯೊಂದು ವಟರ್ ವಟರ್ ಎನ್ನುತ್ತಾ ಜನರ ದಾರಿಗೇ ಕಾಯುತ್ತಾ ಕುಳಿತಿರುವಂತೆ ಕಂಡಿತು. ಮತ್ತದೇ ಜನರ ಪ್ರಾರ್ಥನೆ, ಅಹವಾಲು, ಕಪ್ಪೆಯ ಪೂಜೆ, ಕಪ್ಪೆ ಇನ್ನೂ ತಣ್ಣಗಿರಲೆಂದು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಅದರ ತಲೆಗೊಂದು ಬಿಳಿ ಟೊಪ್ಪಿಗೆಯೊಂದನ್ನು ಕಿರೀಟದಂತೆ ಹಾಕಿದರು. ತಂದದ್ದೆಲ್ಲವನ್ನೂ ತನ್ನ ಹೊಟ್ಟೆಯೊಳಗೆ ಬುಳುಬುಳುಕನೆ ಇಳಿಸಿದ ಕಪ್ಪೆ ತೇಗಿದ ಸದ್ದನ್ನೇ ವರವೆಂದು ಗಣಿಸಿದ ಭಕ್ತಾಗ್ರೇಸರು ಇನ್ನು ತಮ್ಮ ಕಷ್ಟ ಕಾರ್ಪಣ್ಯಗಳು ಕಳೆದ ಹಾಗೆಯೇ ಕಪ್ಪೆ ರಾಯನು ಆಕಾಶ ನೋಡಿ ವಟರುಗುಟ್ಟಿದ್ದಾಯ್ತು ಎಂದು ಆಕಾಶವನ್ನು ನೋಡುತ್ತಲೇ ಭೂಮಿಯ ಮೇಲೇ ಚಲಿಸಿ ಮನೆ ಸೇರಿದರು.

ಮಾರನೇ ದಿನವೇ ಸೋಮ, ಸೋಮನ ಹೆಂಡತಿ, ಸೋಮನ ಮೂವರು ಮಕ್ಕಳು, ಸೋಮನ ಮುದಿ ತಂದೆ ತಾಯಿ, ಸೋಮನ ಕುಂಟು ತಂಗಿಯೇ ಅಲ್ಲದೇ ಸೋಮನ ಹರುಕು ಮುರುಕು ಮನೆಯೂ ಇದ್ದಲ್ಲಿಂದ ಮಾಯ! ಮನೆಯೊಳಗಿದ್ದವರನ್ನೂ ಸೇರಿ ಇಡೀ ಮನೆಗೆ ಮನೆಯೇ ನೋಡನೋಡುತ್ತಿದ್ದಂತೆ ಬಟಾ ಬಯಲಾಗಿದ್ದನ್ನು ಕಂಡ ಮಂಜನೆಂಬ ಪುಟ್ಟ ಹುಡುಗನು ಮತಿಭ್ರಮಣೆಯಾಗಿ ಹೆಂಗೆ ಹೆಂಗೋ ಆಡಲು ಶುರುಮಾಡಿರುವನು. ಮನೆಯಿದ್ದ ಈಗ ಬಯಲಾಗಿರುವ ಜಾಗಕ್ಕೇ ಹೋಗಿ ಉಚ್ಚೆ ಉಯ್ಯುವುದು, ಹಿಡಿ ಹಿಡಿ ಮಣ್ಣು ತೆಗೆದು ಎಸೆಯುವುದನ್ನು ಮಾಡುತ್ತಾ ಏನೇನೋ ಅರಚುತ್ತಿರುವನು. ಇತ್ತ ಮಂಜನನ್ನು ನೋಡುವುದಾ ಅತ್ತ ಸೋಮನ ಸಂಸಾರ, ಮನೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಾ ಮುಂದೇನಾಗುವುದೋ ಈ ಊರಿಗೆ ಎಂದು ಹೆದರುವುದಾ ತಾವೂ ಶೂನ್ಯದಲ್ಲಿ ಅಂತರ್ಧಾನವಾಗಿಬಿಡುವ ಮೊದಲು ಹಳ್ಳಿಯಿಂದ ಎಲ್ಲಾದರೂ ದೂರದೂರಿಗೆ ಪೇರಿಕಿತ್ತುಬಿಡುವುದಾ, ಒಂದೂ ತಿಳಿಯದೇ ಗೊಂದಲದಲ್ಲಿರುವಾಗಲೇ ಮುತ್ತಜ್ಜನೊಡಗೂಡಿ ಊರ ಗೌಡನೂ ಒಂದಷ್ಟು ಯುವ ಸೇನೆಯೂ ಶ್ರೀನಿವಾಸಾಚರ್ಯರನ್ನೂ, ವರ ನೀಡಿದ ಕಪ್ಪೆಯನ್ನೂ ಹುಡುಕಲು ಯಾರೂ ಕೈಗೆ ಸಿಗವಲ್ಲರು. ಊರಿನಲ್ಲಿ ಎಲ್ಲಿ ನೋಡಿದರೂ ಹೋ ಎಂದು ಅಳುವ ಮುದಿಯರು, ಹೆಂಗಸರು, ಗಂಡಸರುಗಳು ಅವರನ್ನು ನೋಡುತ್ತಾ ಆಕಾಶವೇ ತಲೆ ಮೇಲೆ ಕಳಚಿಬಿದ್ದವರಂತೆ ಆಟವಾಡದೇ ಅಂಗಾತ ಮಲಗಿರುವ ಮಕ್ಕಳು ಮರಿಗಳು. ತಮ್ಮ ಅಳಲನ್ನು ಕೇಳುವವರು ಯಾರೂ ಇಲ್ಲವೇ ಎಂದು ಎದೆ ಎದೆ ಬಡಿದುಕೊಂದು ಬಾಯಿ ಬಡಿದುಕೊಳ್ಳುತ್ತಿದ್ದರೂ ಯಾರು ತಾನೇ ಬಂದು ಉಳಿಸಿಯಾರು? ಸಾಂತ್ವಾನ ಹೇಳಿಯಾರು?  ಹಿಂಗೇ ಶೋಕದ ಮನೆಯಾಗಿದ್ದ ಹಳ್ಳಿಯಲ್ಲಿ ಮತ್ತೊಂದು ಸಿಡಿಲು ಬಂದೆರಗಿದಂತಹ ಸುದ್ದಿ. ಊರ ಹೊರವಲಯದಲ್ಲಿದ್ದ ಶೇಖರನ ಎಕರೆಗಟ್ಟಲೆ ಇದ್ದ ತೆಂಗಿನ ತೋಟವು ರಾತ್ರೋ ರಾತ್ರಿ ಕಾಣೆಯಾಗಿ ಈಗ ಅದೇ ಜಾಗದಲ್ಲಿ ಕಪ್ಪು ಧಗೆ ಏಳಿಸುತ್ತಾ ಹೋ ಎಂದು ಚಾಚಿ ಬಿದ್ದಿರುವ ಡಾಂಬಾರು ರಸ್ತೆಯೊಂದು ಬಂದಿದೆಯಂತೇsssssssssssssssssssss ಎಂದು ಯಾರೋ ಕೂಗುತ್ತಾ ಓಡುತ್ತಿರುವುದನ್ನು ಹಳ್ಳಿಗರು ಕೇಳಿದ್ದೇ ಇಡೀ ಹಳ್ಳಿಗೆ ಹಳ್ಳಿಯೇ ರಸ್ತೆಯಂಚಿಗೆ ಹೋಗಿ ನಿಂತು ಬಿದ್ದು ಬಿದ್ದು ರಸ್ತೆಗೇ ತಲೆ ಚಚ್ಚಿಕೊಂಡು ಕಣ್ಣೀರ ಕೆರೆಯನ್ನೇ ರಸ್ತೆಯ ಪಕ್ಕ ನಿರ್ಮಿಸುವರು. ನರಸಿಂಹ ದೇವರ ಗುಡಿಯೂ ಬೀಗ ಹಾಕಿದ್ದು ಹಾಗೇ ಇದೆ. ತಮಗೆ ವರ ಕೊಟ್ಟ ವಟರುಗಪ್ಪೆಯನ್ನ ಕೊಂದೇ ಬಿಡುವ ಎಂದು ಒಂದಷ್ಟು ಯುವಕರ ದಂಡು ಚಾಕು ಚೂರಿ ಹಿಡಿದು ಅಲೆಯುತ್ತಲೇ ಇವೆ. ಕತ್ತೆಗಳಂತೂ ಹೊಡೆದರೂ, ಶಪಿಸಿದರೂ, ಕ್ಯಾಕರಿಸಿ ಉಗಿದರೂ, ಏನು ಮಾಡಿದರೂ ತಮ್ಮ ಸ್ಮಶಾನದಲ್ಲಿ ನೆಮ್ಮದಿಯಾಗಿ ಪೇಪರು ನಮಲುತ್ತಾ ನಿದ್ರಿಸುತ್ತಿದ್ದಾರೆ.



ಹೊರಗೆ ಹೋದರೆಲ್ಲಿ ತಾವು ಮಾಯವಾಗುವರೋ ಎಂದು ಒಳಗೇ ಕೊಸರುತ್ತಾ, ಬಿಕ್ಕುತ್ತಾ, ಕಣ್ತೆರೆದುಕೊಂದು ಬಿದ್ದಿರುವ ದೇಹಗಳು. ಹೊರಗೆ ಸ್ಮಶಾನದ ನೀರವತೆಯಲ್ಲಿ ಇದ್ದಕ್ಕಿದ್ದಂತೆ ಧೂಳೆಬ್ಬಿಸುತ್ತಾ ಸುಂಟರಗಾಳಿಯೊಂದು ಶುರುವಾಯಿತು. ಸುರುಳಿ ಸುರುಳಿ ಸುತ್ತಿ ಖಾಲಿ ರಸ್ತೆಗಳಲ್ಲಿ ಇಡೀ ಊರನ್ನೇ ಪ್ರದಕ್ಷಿಣೆ ಹಾಕುತ್ತಿರಲು ಅಯ್ಯೋ ಇದಾವುದೋ ಪ್ರಳಯ ಸಂಭವಿಸುತ್ತಿದೆ ಎಂದು ಜನರು ಕಕ್ಕಾವಿಕ್ಕಿಯಾಗುತ್ತಿರಲು ಮಂಜನೆಂಬ ಪುಟ್ಟ ಬಾಲಕನು ಛಂಗನೆ ಹೊರಗೆ ಜಿಗಿದು ರಸ್ತೆಗಿಳಿದು ಸುಂಟರಗಾಳಿಗೆ ಸಮನಾಗಿ ನಿಂತು ಇಡೀ ಊರಿಗೆ ಕ್ಯಾಕರಿಸಿ ಉಗಿಯುತ್ತಾ ಜೋರಾಗಿ ಕೇಕೆ ಹಾಕಿ ನಗುವನು ಜನರೆಲ್ಲಾ ದಿಗಿಲುಗೊಂಡು ಹೊರಗೆ ಬರಲು ಸುಂಟರಗಾಳಿಯು ಊರಿನ ನಡುಮಧ್ಯದಲ್ಲಿ ನಿಂತು ಸುರುಳಿ ಸುರುಳಿ ತಿರುಗುತ್ತಿರಲು ಮಂಜನು ಅದರ ಏಕ ನಿಂತು ಧೂಳಿನಲ್ಲಿ ಸುರುಳಿಯಲ್ಲೂ ನಿಂತು ಅಟ್ಟಹಾಸದ ನಗೆ ನಗುತ್ತಾ ಈ ನಮ್ಮ ಊರಿನ ಸಮಸ್ಯೆಗೆ ಪರಿಹಾರ ಕೊಡೋಕೆ ಸಾಧ್ಯ ಇರೋದು ಒಬ್ಬನಿಂದಲೇ. ಬನ್ನಿ ನನ್ನ ಜೊತೆ ಎಂದು ಸುಂಟರಗಾಳಿಯನ್ನು ಊರ ಹೊರವಲಯದವರೆಗೂ ಕರೆತಂದು ನಂತರ ಸುಂಟರ ಗಾಳಿ ಮಾಯವಾಗುತ್ತಿದ್ದಂತೆ ಇಡೀ ಊರಿಗೆ ಊರೇ ಉಟ್ಟ ಬಟ್ಟೆಯಲ್ಲಿ ಆ ಧಗೆ ಏಳಿಸುತ್ತಾ ತೆಪ್ಪಗೆ ಬಿದ್ದಿದ್ದ ಕಪ್ಪು ರಸ್ತೆಯಲ್ಲಿ ಮಂಜನ ಹಿಂದೆ ನಡೆಯುವರು.

ರಸ್ತೆ ನೇರ ಬೆಂಗಾಡೆಂಬ ಕಾಂಕ್ರೀಟ್ ಕಾಡೊಂದಕ್ಕೆ ನುಗ್ಗಿತು. ಅಂತಹ ಹತ್ತು ಹಲವು ವಿಕಾರವಾಗಿ ಒಡೆದುಕೊಂಡಿರುವ ರಸ್ತೆಗಳಿರುವ, ಸುಂಟರಗಾಳಿಯಿಂದ ಏಳುತ್ತಿದ್ದ ಧೂಳಿಗಿಂತ ಹತ್ತರಷ್ಟು ಧೂಳು ಕಾರುತ್ತಾ, ಅದರಲ್ಲೂ ಸರ್ವೇ ಸಾಮಾನ್ಯವಾಗಿ ಓಡಾಡುತ್ತಲಿದ್ದ ಜನರ ನಡುವೆ ಜಾಗ ಮಾಡಿಕೊಂಡು ಏಲಿಯನ್ ಗಳನ್ನು ನೋಡುವಂತೆ ನೋಡುತ್ತಿದ್ದ ರಿಯಲ್ ರೋಬೋಟ್(ಯಂತ್ರಮಾನವರ) ಗಳ ಕಣ್ಣುಗಳನ್ನು ತಪ್ಪಿಸಿಕೊಂಡು, ನುಸುಳಿ ಸೂರ್ಯನ ಬಿಸಿಲನ್ನು ದುಪ್ಪಟ್ಟು ಭೂಮಿಗೆ ಪ್ರತಿಧ್ವನಿಸುತ್ತಿದ್ದ ದೊಡ್ಡ ದೊಡ್ಡ ಗಾಜಿನ ಶವಪೆಟ್ಟಿಗೆಗಳನ್ನು ದಾಟಿ ಅಂತೂ ಒಂದು ಒತ್ತೊತ್ತಾದ ಪೈರಿನಂತೆಯೇ ಒತ್ತೊತ್ತಾಗಿ ಬೆಳೆದಿದ್ದ ಮನೆಗಳ ಕೇರಿಯೊಂದನ್ನು ಪ್ರವೇಶಿಸಿದರು. ಅದರಲ್ಲಿ ಒಂದು ಬೆಂಕಿಪೊಟ್ಟಣದಂತಹ ಆರನೇ ಮಹಡಿಯಲ್ಲಿನ ಗೂಡಿನ ಬಾಗಿಲು ತಟ್ಟಲು ಮಂಜ, ಮುತ್ತಜ್ಜ, ಗೌಡರು ಮತ್ತು ಮೂರ್ನಾಲ್ಕು ಯುವಕರು ಹತ್ತಿ ಬಂದು ಉಳಿದವರು ಗೇಟಿನ ಹೊರಗಡೆ ಆರನೆಯ ಮಹಡಿಯನ್ನೇ ದಿಟ್ಟಿಸುತ್ತಾ ರಸ್ತೆ ಪೂರ್ತಿ ನಿಂತಿಹರು. ರಸ್ತೆಯ ಇಕ್ಕೆಲಗಳಲ್ಲೂ ಇದ್ದ ಎಲ್ಲ ಮಹಡಿಯ ಮನೆಗಳಿಂದಲೂ ಜನರು ಟಿವಿ ಆರಿಸಿ ಹೊರ ಬಂದು ನೇರಪ್ರಸಾರ ನೋಡುವವರಂತೇ ಕಾಫಿ ಕಪ್ಪುಗಳು, ಕುರ್ ಕುರೆ ಪ್ಯಾಕೆಟ್ಟುಗಳು, ಕೊಕೊಕೋಲಾಗಳನ್ನು ಹಿಡಿದು ಸುಮ್ಮನೆ ನೆರೆದಿರುವ ಜನರನ್ನು ಮಿಕಿ ಮಿಕಿ ನೋಡುವರು. ಇತ್ತ ಆರನೆಯ ಮಹಡಿಯ ಬೆಂಕಿ ಪೊಟ್ಟಣದ ಒಳಗೆ ಕಿವಿಗೆ ಕಪ್ಪು ದೊಡ್ಡ ದೊಡ್ಡ ಚೀಲವನ್ನು ಹಾಕಿಕೊಂಡು, ಬಾಯ ಮುಂದೆ ಇನ್ನೊಂದು ಕಪ್ಪು ತಂತಿಯನ್ನು ಇಟ್ಟುಕೊಂಡು, ಒಂದು ಕಂಪ್ಯೂಟರಿನ ಜೊತೆ ಪ್ರೇಮ ಸಲ್ಲಾಪ ಮಾಡುತ್ತಲಿದ್ದವನು ಹಲವು ಬಾರಿ ಬಾಗಿಲು ಬಡಿದದ್ದನ್ನು ಗಮನಿಸಿ ಅದೇ ಮೈಮೇಲೆ ಚೆಡ್ಡಿಯೊಂದನ್ನು ಮಾತ್ರ ಅಲಂಕರಿಸಿ ಬಾಗಿಲು ತೆರೆಯುವನು. ಬಾಗಿಲು ತೆರೆದದ್ದೇ ಅಷ್ಟು ಜನರನ್ನು ಕಂಡು ಹೌಹಾರಿದವನೆಡೆಗೆ ಮಂಜ ಸುಮ್ಮನೆ ಕೈ ಬೊಟ್ಟು ಮಾಡಿ ಇವನೇ ಎಂಬಂತೆ ತೋರಿಸುವನು. ಮುತ್ತಜ್ಜ ತಾನು ಮಾತನಾಡುವುದಾಗಿ ಹೇಳುವನು. ಚೆಡ್ಡಿ ಯುವಕನಿಗೆ ಎಲ್ಲ ತಮ್ಮ ಪರಿಚಯ ಮಾಡಿಕೊಂಡು ಯುವಕನ ಹೆಸರು ಕೇಳಿದರೆ H2 ಎನ್ನುವನು. ಇದೆಂತಹ ಹೆಸರಪ್ಪಾ ಎಂದು ಎಲ್ಲರೂ ಬಾಯಿಬಿಟ್ಟರೂ ಮೊದಲು ತಮಗೆ ಸಹಾಯ ಮಾಡಬೇಕೆಂದು ಕಾಲಿಗೆ ಬೀಳಲು ಅಣಿಯಗುವರು. H2 ಹೆದರಿ ಎಲ್ಲರನ್ನೂ ತಡೆದು ಒಳಗೆ ಕರೆದುಕೊಳ್ಳುವನು.

“Don’t worry Dudes, ಎವೆರಿತಿಂಗ್ ವಿಲ್ ಬಿ ಓಕೆ” ಇದು H2 ಎಲ್ಲ ಕತೆಯನ್ನು ಕೇಳಿದ ನಂತರ ಕೊಟ್ಟಾ ಪ್ರತಿಕ್ರಿಯೆ. ಹೋ ಹಾಗಾದರೆ ಈತ ತಮ್ಮ ಕಷ್ಟವನ್ನು ಪರಿಹರಿಸುವನು ಎಂದು ಒಮ್ಮೆ ಬುಸ್ಸೆಂದು ಉಸಿರುಬಿಟ್ಟು ನೆಮ್ಮದಿಯಾಗಿ ಎಲ್ಲರೂ ಡಿಡಿಟಿ ಪೌಡರಿನ ವಾಸನೆಗೆ ಮೂಗು ಮುಚ್ಚಿಕೊಳ್ಳುತ್ತಲೇ ನೀರು ಗುಟುಕಾಯಿಸಿ ಕಣ್ಣರಳಿಸುವರು. H2 ಈಗ ನಾನು ಹೇಳಿದ ಹಾಗೆ ಹೇಳಿ ಎಂದು ಪ್ರಾರ್ಥನೆ ಹೇಳಿಕೊಡುವನು “Googleಏ ನಮ್ಮ ತಾಯಿ ತಂದೆ, Googleಏ ನಮ್ಮ ಬಂಧು ಬಳಗ, Google ದೇವರ ಪಾದಗಳಿಗೆ ನಮ್ಮದಿದುವೆ ಪ್ರಣಾಮವೂ” ಎಲ್ಲರೂ ಅದನ್ನೇ ಪ್ರತಿಧ್ವನಿಸಿ ಕಂಪ್ಯೂಟರೆಡೆಗೆ ಹಾಗೇ ದಿಟ್ಟಿಸಿದರೆ. ಅದೇನೋ ಪುಟ್ಟ ಪುಟ್ಟಾ ಸೂಟ್ ಕೇಸುಗಳು, ಇನ್ನೊಂದು ಮತ್ತೊಂದು ವಿಚಿತ್ರ ಆಕೃತಿಗಳು ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಓಡಾಡಿದ ನಂತರ ಎಲ್ಲರೂ ಸುಯ್ಯನೆ ಕಂಪ್ಯೂಟರೊಳಗೆ ಹೋಗಿಬಿಡುವರು. ಅದಾವುದೋ ಕೊಳವೆ, ಗಿಜಿಗಿಜಿಗುಡುವ ರಸ್ತೆ, ಹೊಗೆ, ಧೂಳು, ಕರ್ಕಶ ಶಬ್ಧ ಎಲ್ಲವನ್ನೂ ದಾಟಿ ಎಲ್ಲೋ ಒಂದು ವಿಚಿತ್ರ ಜಾಗಕ್ಕೆ ಹೋಗಿ ನಿಂತರೆ ಶೇಖರ ಕಪ್ಪು ಬಣ್ಣ ಬಳಿದುಕೊಂಡು ರಸ್ತೆಗೆ ಕಪ್ಪು ಡಾಂಬಾರು ಸುರಿಯುತ್ತಿರುವನು. ಇನ್ನೊಂದು ಕಡೆ ಸೋಮನ ಇಡೀ ಸಂಸಾರ ಮಣ್ಣು ಬಾಣಲೆಗಳನ್ನು ಹತ್ತನೇ ಮಹಡಿಗೆ ಹೊತ್ತೊಯುತ್ತಾ, ಸಿಮೆಂಟು ಕಲೆಸುತ್ತಲಿಹರು, ರಾಮಣ್ಣ ಕಳೆದುಹೋದ ಎಲ್ಲರೂ ಯಾವುದೋ ಕಟ್ಟಡದ ಮುಂದೆ ಸಮವಸ್ತ್ರ ಧರಿಸಿ ಕೋಲು ಹಿಡಿದೋ, ತಟ್ಟೆ ತೊಳೆಯುತ್ತಲೋ ಕಂಡುಬಂದರು. ಸುಯ್ಯನೆ ಹಾಗೇ ಎಲ್ಲರೂ ಕಂಪ್ಯೂಟರಿಂದ ಹೊರಗೆ ಬರುವರು. ಮಂಜ ಓಡಿ ಹೊರಗೆ ರಸ್ತೆಯಲ್ಲಿ ನಿಂತು ಮೇಲೆ ನೋಡುತ್ತಿರುವವರಿಗೂ ವಿಷಯ ಮುಟ್ಟಿಸುತ್ತಲೇ ಒದ್ದೆ ಕಣ್ಣುಗಳಿಂದ, ಒಣಗಿದ ಬಾಯಿಗಳಿಂದ ಜಯಕಾರಗಳನ್ನು ಕೂಗಲು ಶುರುಮಾಡುವರು. ಚೆಡ್ಡಿ ಯುವಕನನ್ನು ಎತ್ತಿಕೊಂಡು ಬಂದು ಹೊತ್ತು, ಮುದ್ದಿಸಿ ಕುಣಿದು ಕುಪ್ಪಳಿಸುವರು. ಸುತ್ತ ಮನೆಗಳ ಮಹಡಿಗಳಲ್ಲಿ ನೋಡುತ್ತಿದ್ದ ಜನತೆ ಏನೋ ದೊಂಬರಾಟವಿರಬೇಕೆಂದು ಸುಮ್ಮನೇ ಕೋಕೋಕೋಲ ಹೀರುವುದನ್ನು ಮುಂದುವರೆಸುವರು. ಆ ಹಳ್ಳಿಗರ ಪ್ರೀತಿಗೆ ಕರಗಿ ಹೋದ ಚೆಡ್ಡಿ ಯುವಕನನ್ನು ಎಲ್ಲರೂ ನಿಮ್ಮ ಹೆಸರೇನೆಂದು ಕೇಳಲು ಈಗ H2 ಎನ್ನದೇ ಹಳ್ಳಿ ಹೈದಾ ಎಂದು ಮೆಲ್ಲಗೇ ಹೇಳುವನು. ಮತ್ತೇ ಜನ ಹೋ ಎನ್ನುವರು.

ಮಂಜ, ಮುತ್ತಜ್ಜ, ಭೀಮ, ಸೋಮ, ಶೇಖರ, ಚಂದ್ರ, ಕಾಳ, ಮುನಿಯನೊಂದಿಗೆ ಎಲ್ಲ ಜನತೆ ಹಿಂದಿರುಗಿ ಹೋಗುತ್ತಿರಲು ಅವರ ಜೊತೆಯಲ್ಲೇ ತನ್ನ ಲಾಪ್ ಟಾಪು, ಇಯರ್ ಫೋನು, ನೇತಾಕಿಕೊಂಡು ಚೆಡ್ಡಿಯ ಜೊತೆಗೆ ಒಂದು ಕೂಲಿಂಗ್ ಗ್ಲಾಸು, ಒಂದು ದೊಗಳೆ ಅಂಗಿಯನ್ನೂ ಏರಿಸಿಕೊಂಡು ಅವರ ಹಿಂದೆಯೇ H2 ಉರುಫ್ ಹಳ್ಳಿ ಹೈದನೂ ಕೂಡ ಹೊರಡುವನು. ಹಳ್ಳಿಗೆ ಆತ ಕಾಲಿಡುತ್ತಿದ್ದಂತೆಯೇ ಮೋಡ ಕಟ್ಟಿದ್ದೂ, ಮಳೆ ಸುರಿದಿದ್ದೂ, ಕಪ್ಪೆಗಳ ವಟರು ಶುರುವಾಗಿದ್ದು, ಈಟಿಗಳು ಕಪ್ಪೆಗಳೆಡೆಗೆ ಸೀಳಿಕೊಂಡು ಹೋಗಿದ್ದೂ, ಕತ್ತೆಗಳು ತಿನ್ನುತ್ತಿದ್ದ ಪೇಪರು ಒದ್ದೆಯಾಗಿ ತಿನ್ನಲು ಸಿಗದೇ ತನ್ನ ಖಾಕಿ ಗೋಣಿಚೀಲವನ್ನೇ ತಿಂದು ಹಾಕಿದ್ದು ಯಾವುದೂ ತಡವಾಗಲಿಲ್ಲ. 



-ನೀ.ಮಹೇಮಂತ್ 

    

No comments:

Post a Comment