ಓದಿ ಓಡಿದವರು!

Monday, 11 June 2012

ಕಳ್ಳರ ಠಾಣೆಯಿರುವ ಊರಿನಲ್ಲಿ!
ಒಂದೆಡೆ

ಮಾಡ್ತೀಯೇನೋ ಬಡ್ಡೀ ಮಗನೇ? ಬೊಗಳೋ ಬಾಯಿ ಬಿಡೋ ಲೌ..ಕಾ..ಲ್. ಇನ್ನೊಂದ್ಸಾರಿ ಪೊಲೀಸ್ತನ ಮಾಡ್ತೀಯೇನೋ. ಈ ದೊಣ್ಣೇಗೆ ಖಾರಾ ಪುಡಿ ಹಾಕಿ ತುರಕಬಾರದ ಜಾಗದಲ್ಲಿ ತುರುಕಿದ್ರೆ ಬರುತ್ತೆ ಬುದ್ಧಿ ನಿನಗೆ ಎಂದು ಎಡ ಬಲ ಮೇಲೆ ಕೆಳಗೆ ಏನೂ ನೋಡದೆ ಜಡಿಯುತ್ತಿದ್ದರು ಕಳ್ಳರು, ಕಳ್ಳರ ಠಾಣೆಯಲ್ಲಿ. ಸಾರ್ ಇಲ್ಲಾ ಸಾರ್ ಬಿಟ್ಟುಬಿಡಿ ಸಾರ್ ನಾನು ಪೊಲೀಸ್ತನ ಮಾಡಿಲ್ಲ ಸಾರ್. ದೇವರಾಣೆ, ನಮ್ಮಮ್ಮನಾಣೆ ಎಲ್ಲಾ ಕಸುಬು ಬಿಟ್ಟು ಬಹಳ ದಿನಗಳಾಯ್ತು ಸಾರ್. ನಂಬೀ ಸಾರ್ ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಬಿಡಿ ಸಾರ್ ಹೆಂಡತಿ ಮಕ್ಕಳೊಂದಿಗ ಪ್ಲೀಸ್ ಜೈಲಿಗೆ ಹಾಕಬೇಡಿ ಎಂದು ಕಾಲಿಗೆ ಬಿದ್ದು ಗೋಗರೆಯುತ್ತಿದ್ದರೂ ಏನೂ ಪ್ರಯೋಜನವಾಗದೇ ಏರೋಪ್ಲೇನ್ ಹತ್ತಿಸುತ್ತಲೇ ಇದ್ದರು ಡೊಳ್ಳು ಹೊಟ್ಟೆಯ ಎರಡು ನಕ್ಷತ್ರ, ಮೂರು ನಕ್ಷತ್ರಗಳನ್ನು ಹೊತ್ತ ಕಳ್ಳರುಗಳು. ಅದೆಷ್ಟೋ ಹೊತ್ತಿನ ನಂತರ ಅಪರಾಧಿಯ ಶಕ್ತಿ ಉಡುಗಿಹೋಯ್ತೋ ಅಥವಾ ಕಳ್ಳರುಗಳ ತಿಂದಿದ್ದ ಕನ್ನ ಜೀರ್ಣವಾಯ್ತೋ ಗೊತ್ತಿಲ್ಲ ಅಪರಾಧಿಯನ್ನು ಸೆಲ್ಲಿನಲ್ಲಿ ಹಾಕಿ ಬೀಗ ಜಡಿದು ಹೊರಬಂದರು.

ನಾಳೆ ಆ ಪೊಲೀಸನನ್ನು ಅನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ರಿಪೋರ್ಟು ತಯಾರು ಮಾಡೆಂದು ಕನಿಷ್ಟಬಿಲ್ಲೆಯೊಬ್ಬನಿಗೆ ಹೇಳಿ ತನ್ನ ಆಸನದಲ್ಲಿ ವಿರಾಜಮಾನವಾಗುವಷ್ಟರಲ್ಲಿ ಆ ಅನಾಥಾಶ್ರಮ ನಡೆಸುತ್ತಿದ್ದವನ ಮೊಕದ್ದಮೆ ಇವತ್ತು ಇನ್ನು ಒಂದು ಘಂಟೆಯಲ್ಲಿ ಶುರುವಾಗಲಿದೆ ಎಂದು ಹೇಳಿದ್ದೇ ನೆಡಿ ಎಂದು ತನ್ನ ಗರಿ ಗರಿ ಟೊಪ್ಪಿಗೆಯನ್ನು ತಲೆಯ ಮೇಲೆ ಅಲಂಕರಿಸಿ, ಪ್ಯಾಂಟು ಸರಿಪಡಿಸಿಕೊಂಡು ಹೊರಬೀಳುವನು. ತನ್ನ ಬೆನ್ಝ್ ಕಾರಿನಲ್ಲಿ ಜುಯ್ಯನೆ ಹಾರಿದವನೆ ಅನ್ಯಾಯಾಲಯದ ಮುಂದೆ ಇಳಿದು ಬಿಕೋ ಎನ್ನುತ್ತಿದ್ದ ಆವರಣದಲ್ಲಿ ಆಕಳಿಸುತ್ತಾ ಹತ್ತು ನಿಮಿಷ ಮುಂಚಿತವಾಗಿಯೇ ತಲುಪಿದೆನಲ್ಲಾ ಎಂದುಕೊಳ್ಳುತ್ತಾ ಒಳಪ್ರವೇಶಿಸಿದರೆ ಸಮಯಕ್ಕೆ ಮುಂಚಿತವಾಗಿಯೇ ವಾದ ಶುರುವಾಗಿರುವುದನ್ನು ಕಂಡು ತನ್ನ ಕಡತಗಳನ್ನು ಮಂಡಿಸಿ ಕೂರುವನು. ಕಟಕಟೆಯಲ್ಲಿ ನಿಂತಿದ್ದ ಅನ್ಯಾಯಾಧೀಶರು ವಾದ ಮಂಡಿಸುತ್ತಿದ್ದ ವಾಕಿಲರನ್ನೊಮ್ಮೆ, ಪೆದ್ದನಂತೆ ಮೇಲೆ ಹತ್ತಿ ಕೂತಿದ್ದ ಅಪರಾಧಿಯನ್ನೊಮ್ಮೆ ನೋಡುತ್ತಲಿರುವರು. ಗೌರವಾನ್ವಿತರೇ ಈ ಸ್ಥಾನದಲ್ಲಿ ಕುಳಿತಿರುವ ಈ ವ್ಯಕ್ತಿ ಎರಡು ಸಾವಿರ ಎಕರೆಗಳ ಭೂಮಿಯನ್ನು ಆಶ್ರಮ, ಪ್ರಾರ್ಥನಾ ಮಂದಿರಗಳನ್ನು ಕಟ್ಟುವುದಾಗಿ ಹೇಳಿ ಪಡೆದದ್ದೂ ಅಲ್ಲದೇ ಈಗ ಅನಾಥಾಶ್ರಮ ಕಟ್ಟಲು ಮುಂದಾಗಿದ್ದಾನೆ ಮಾತ್ರವಲ್ಲದೇ ಈಗಾಗಲೇ ಹಲವಾರು ರೀತಿಯಲ್ಲಿ ದಾನ ಮಾಡಿ ತನ್ನ ಶ್ರೀಮಂತಿಕೆಯನ್ನು ಕಳೆದುಕೊಂಡಿದ್ದಾನೆ. ಸಿಕ್ಕ ಸಿಕ್ಕವರಲ್ಲಿ ಒಳ್ಳೆಯತನ, ಹೃದಯವೈಶಾಲ್ಯತೆಯ ಬಗ್ಗೆ ಮೊಳೆ ಹೊಡೆಯುತ್ತಿರುತ್ತಾನೆ. ಇವನಂತಹ ಒಬ್ಬರಿದ್ದರೆ ಸಾಕು ನಮ್ಮ ಊರು ಸರ್ವನಾಶವಾಗುವುದಕ್ಕೆ. ಇನ್ನೊಬ್ಬರು ಈತನಿಂದ ಪ್ರೇರಿತರಾಗಿ ಸಮಾಜಸೇವೆಗೆ ಇಳಿಯುವ ಮುನ್ನ ಈತನಿಗೆ ಘೋರವಾದ ಶಿಕ್ಷೆಯಾಗಬೇಕೆಂದು ನನ್ನ ವಿನಂತಿ. ಅನ್ಯಾಯಾಧೀಶರು ತಲೆಕೆರೆದುಕೊಳ್ಳುತ್ತಾ ಏನಯ್ಯಾ ನೀನು ಮಾಡಿದ್ದು ಸರಿಯೇ ಎನ್ನಲು, ಆತ ಒಮ್ಮೆ ಬಿಳಿಬಟ್ಟೆ ಕಣ್ಣಿಗೆ ಕಟ್ಟಿಕೊಂಡಿರುವ, ತಕ್ಕಡಿಯ ಮೇಲೆ ನಿಂತಿರುವ ಕಪ್ಪು ಗಂಡು ಮೂರ್ತಿಯ ಕಡೆ ಒಮ್ಮೆ ನೋಡಿ ಮತ್ತೊಮ್ಮೆ ತನ್ನ ಪರ ವಾಕಿಲರ ಕಡೆ ಒಮ್ಮೆ ನೋಡಿ ಕಣ್ಣು ಹೊಡೆಯಲು ಆತ ಛಂಗನೆ ಮೇಲೆದ್ದು ಇಲ್ಲಾ ಮಹಾಸ್ವಾಮಿ ನನ್ನ ಕುಕ್ಷೀದಾರ ಅಂತಹ ಅಪರಾಧವನ್ನೇನೂ ಮಾಡಿಲ್ಲ ಈ ಅಪವಾದಗಳೆಲ್ಲಾ ಸುಳ್ಳು, ಆಧಾರರಹಿತ. ಆತ ತೆರೆಯಲು ಹೊರಟಿದ್ದು ಹೈಟೆಕ್ ವೇಶ್ಯಾವಾಟಿಕೆಯನ್ನೇ, ಇದಕ್ಕೆ ಸಂಬಂಧಪಟ್ಟ ಪುರಾವೆಗಳು ನಮ್ಮ ಬಳಿಯೇ ಇದ್ದಾವೆ ಎಂದು ಅದನ್ನು ಮಂಡಿಸುವನು. ಅನ್ಯಾಯಾಧೀಶರು ಅದನ್ನು ತಮ್ಮ ಬೋಳುತಲೆಯೊಳಗೆ ತುರುಕಿ ಪರಾಂಬರಿಸಿ ಮೊಕದ್ದಮೆಯ ವಿಚಾರಣೆಯನ್ನು ಅಲ್ಲಿಗೇ ಮೊಟಕುಗೊಳಿಸಿ ತೀರ್ಪನ್ನು ತತ್ಕ್ಷಣವೇ ಇತ್ತು ಮೊಕದ್ದಮೆಯನ್ನು ವಜಾಗೊಳಿಸಿ ಅಪರಾಧಿ ಸ್ಥಾನದಲ್ಲಿದ್ದವನ ವಿಸಿಟಿಂಗ್ ಕಾರ್ಡ್ ಕೇಳಿ ಪಡೆದು ಜಾಗ ಖಾಲಿ ಮಾಡುವರು. ಇಂಥ ದಾನ ಧರ್ಮ ಮಾಡೋರನ್ನೆಲ್ಲಾ ಗುಂಡಿಟ್ಟು ಕೊಲ್ಲುವುದನ್ನ ಬಿಟ್ಟು ವಿಚಾರಣೆ ಮಾಡಿ ಲಂಚ ತಿಂದು ಹೊರಗೆ ಕಳುಹಿಸಿ ಪ್ರಪಂಚ ಹಾಳು ಮಾಡ್ತಾರೆ ಸೂ.. ಮಕ್ಕಳು ಎಂದು ತನ್ನಷ್ಟಕ್ಕೆ ತಾನೇ ಬಯ್ದುಕೊಳ್ಳುತ್ತಾ ಬೆನ್ಝ್ ಹೊಕ್ಕು ಮತ್ತೆ ಠಾಣೆಗೆ ಬಂದು ಇದ್ದ ಬದ್ದ ಕೋಪವನ್ನೆಲ್ಲಾ ಸೆಲ್ ಗಳಲ್ಲಿ ಮುದುರಿಕೊಂಡಿದ್ದ ಸತ್ಯ, ನೀತಿ, ಪ್ರೀತಿಯ ಪ್ರತಿನಿಧಿಗಳ ಮೇಲೆ ತೀರಿಸಿಕೊಳ್ಳೂವನು.

ಇನ್ನೊಂದೆಡೆ

ಸೈಲೆನ್ಸ್ ಪ್ಲೀಸ್ ಎಂಬ ನಾಮಫಲಕ ಕೂಡ ನಾಚುವಷ್ಟು ಸ್ತಬ್ಧ ಪ್ರಪಂಚ. ಎಲ್ಲ ಸತ್ತೇ ಹೋಗಿರುವರೇನೋ ಎಂದು ಪರಿಗಣಿಸಬಹುದಾದಷ್ಟು ಚಿಕ್ಕದಾಗಿ ಉಸಿರೆಳೆದುಬಿಡುತ್ತಿರುವರು. ಇಂತಹ ಶಾಂತವಾದ ವಾತಾವರಣವನ್ನು ಒಂದೇ ಕ್ಷಣದಲ್ಲಿ ಧಿಡೀರನೆ ಕಲಕಿ ಕೋಲಾಹಾಲವೆಬ್ಬಿಸುವಂತೆ ಫೋನೊಂದು ಟುರ್ರ್‍ರ್‍ರ್‍ರ್‍ರ್‍ರ್‍ರ್‍ ಎಂದು ಬಾಯಿ ಬಾಯಿ ಬಡಿದುಕೊಂಡಿದ್ದೇ ಆಸ್ಪತ್ರೆಯ ವಿಶೇಷ, ಸಾಧಾರಣ ಕೊಠಡಿಗಳಲ್ಲಿ ಮಂಚಗಳ ಮೇಲೆ ಮಲಗಿದ್ದ ಎಲ್ಲ ಕಣ್ಣು, ಕಿವಿ, ಮೂಗು, ನರ, ಸಾಮಾನು, ಕೈಕಾಲು, ಉಗುರು ತಜ್ಞರುಗಳ ನವರಂದ್ರಗಳಲ್ಲಿ ಫೋನಿನ ಘಂಟಾನಾದ ಹೊಕ್ಕು ನರಮಂಡಲವನ್ನೆಲ್ಲಾ ಒಮ್ಮೆ ಜಾಗೃತಗೊಳಿಸಿ ಎದ್ದು ಬಿದ್ದು ಓಹೋ.. ಕರೆ ಬಂದಿರುವುದು ನನಗೇ ನನಗೇ ಎಂದು ನೂಕುನುಗ್ಗಲಿನಲ್ಲಿ ಫೋನಿನೆಡೆಗೆ ಧಾವಿಸಿ ಫೋನಿನ್ನೂ ಬಾಯಿಬಡಿದುಕೊಳ್ಳುತ್ತಿದ್ದರೂ ನಾನು ತಾನು ಎಂದು ಜಗ್ಗಾಡಿ ಗುದ್ದಾಡಿ ಮತ್ತೆ ಮಾಮೂಲಿನಂತೆ ಒಪ್ಪಂದಕ್ಕೆ ಬಂದು ಲೌಡ್ ಸ್ಪೀಕರ್ ಹಾಕಿ ಅತ್ತಣಿನಿಂದ ಬರಬೇಕಾದ ಅತ್ಯಮೂಲ್ಯ ದನಿಗೆ ಸಕಲ ಕಣ್ಣು ಬಾಯಿಗಳನ್ನು ತೆರೆದು ತೀಕ್ಷ್ಣವಾಗಿ ಆಲಿಸುವರು. ಹಲ್ಲೋ ಎನ್ನುವ ಧ್ವನಿ ಹೊರಬರುವ ಮೊದಲೇ ಕಂಚಿನ ಕಂಠದ ಧ್ವನಿಯು ಉಹು ಉಹು ಎಂದು ಕೆಮ್ಮಿದ್ದೇ ಇದು ನನ್ನ ವಿಭಾಗ ಎಂದು ಗಂಟಲ ತಜ್ಞ, ಇಲ್ಲಾ ಇದು ನನ್ನ ವಿಭಾಗ ಎಂದು ಮೂಗು ತಜ್ಞ, ಸಾಧ್ಯವೇ ಇಲ್ಲ ಇದು ತನ್ನ ವಿಭಾಗ ಎಂದು ಟಿಬಿ ತಜ್ಞ ಕಿತ್ತಾಡಲು ಶುರುಮಾಡಿಯೇ ಸಾರ್ ನಿಮಗೆ ಯಾವಾಗಿನಿಂದ ಕೆಮ್ಮು, ಯಾವ ರೀತಿ ಕೆಮ್ಮು ಬರುತ್ತಿದೆ, ಎದೆ ಉರಿ ಏನಾದರೂ ಕಾಣಿಸಿಕೊಳ್ಳುವುದೇ, ಕೆಮ್ಮಿದಾಗ ಕಫದ ಜೊತೆಗೆ ರಕ್ತವೇನಾದರೂ ಬರುವುದಾ ಎಂದೆಲ್ಲಾ ಒಂದೇ ಉಸಿರಿಗೆ ಕೇಳಿದ್ದಕ್ಕೆ ಹೆದರಿದ ಫೋನ್ ಜೀವ ಆರಾಮವಾಗಿ ಪ್ರತಿಕ್ರಿಯಿಸುತ್ತಾ ಅಯ್ಯೋ ಇಲ್ಲ ನೋಡಿ ಇವರೇ ನಿಮ್ಮ ಆಸ್ಪತ್ರೆ ತುಂಬಾ ಹೆಸರುವಾಸಿ ಆಸ್ಪತ್ರೆ ದೊಡ್ಡ ದೊಡ್ಡ ತಜ್ಞರನ್ನ ಒಳಗೊಂಡಿದೆ ಅಂತ ಕೇಳ್ಪಟ್ಟೆ, ಆದರೆ ನನಗೆ ಈ ಬಾರಿ ಯಾರೂ ವಿಶೇಷ ತಜ್ಞರು ಬೇಕಾಗಿರಲಿಲ್ಲ ಎನ್ನುವಷ್ಟರಲ್ಲಿಯೇ ಇತ್ತ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸರ್ ಧನ್ಯವಾದಗಳು ನಮ್ಮ ಆಸ್ಪತ್ರೆಯ ಮೇಲೆ ನಂಬಿಕೆಯಿಟ್ಟು ಕರೆ ಮಾಡಿದ್ದಕ್ಕೆ. ಯಾವ ರೀತಿಯ ಸೇವೆ ಬೇಕಾಗಿತ್ತು ತಮಗೆ. ನಾವು ಹೊಸ ಸದಸ್ಯರಿಗೆ ಮೊದಲ ಮೂರು ಭೇಟಿಗೆ ಯಾವುದೇ ರೀತಿಯಲ್ಲಿ ಚಾರ್ಜ್ ಮಾಡುವುದಿಲ್ಲ. ನಂತರವೂ ಸಹ ಶಸ್ತ್ರಚಿಕಿತ್ಸೆಗಳಲ್ಲಿ, ಸ್ಕ್ಯಾನಿಂಗ್ ಇನ್ನೂ ಹಲವು ಚೆಕಪ್ ಗಳಲ್ಲಿ ರಿಯಯಿತಿ ನೀಡಲಾಗುತ್ತದೆ. ನಿಮಗೀಗ ಏನಾಗಬೇಕಿತ್ತು ಹೇಳಿ ನಮ್ಮ ವೈದ್ಯರ ತಂಡವು ಅರ್ಧ ತಾಸಿನಲ್ಲಿ ನಿಮ್ಮ ಸೇವೆಯಲ್ಲಿರುತ್ತೆ ಎಂದು ಪೂರ್ತಿ ವಿವರ ಒಪ್ಪಿಸುತ್ತಾರೆ. ಆ ಧ್ವನಿ ಎಲ್ಲಾ ಕೇಳಿ, ನನ್ನ ಸಮಸ್ಯೆ ಏನೆಂದರೆ ನನ್ನ ತಂದೆ ತೀರಿಹೋಗಿದ್ದಾರೆ, ನಿಮ್ಮ ವೈದ್ಯರೊಬ್ಬರು ಬಂದು ತಪಾಸಣೆ ಮಾಡಿ ರಿಪೋರ್ಟ್ ನೀಡಿದರೆ ನನ್ನ ಮುಂದಿನ ಖರ್ಚಿನ ಮರುಪಾವತಿಗೆ ಸುಲಭವಾಗುತ್ತದೆ, ಇದಕ್ಕೆ ನಿಮ್ಮ ಆಸ್ಪತ್ರೆಯಲ್ಲಿ ಯಾವ ರೀತಿ ಚಾರ್ಜ್ ಮಾಡ್ತೀರಿ, ಮುಂದೆ ಇನ್ನೂ ತಾಯಿಯ ಕೆಲವು ಚೆಕಪ್ ಗಳು, ಶಸ್ತ್ರಚಿಕಿತ್ಸೆಗಳು ಇವೆ ನಿಮ್ಮನ್ನೇ ಸಂಪರ್ಕಿಸುತ್ತೇನೆ ಎಂದದ್ದಕ್ಕೆ, ವೈದ್ಯಾಧಿಕಾರಿ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ನೋಡಿ ಮರಣಾನಂತರದ ಸೇವೆಗೆ ನಮ್ಮ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ನೀವು ದಯವಿಟ್ಟು ನಿಮ್ಮ ವಿಳಾಸ ಬರೆಸಿದರೆ ಅರ್ಧ ಘಂಟೆಯಲ್ಲಿ ನಮ್ಮ ವೈದ್ಯರು ನಿಮ್ಮ ಮನೆಗೆ ತಲುಪುತ್ತಾರೆ ಎಂದು ಆಡಿದಂತೆಯೇ, ನಿಗದಿಪಡಿಸಿದ ಅವಧಿಗೂ ಮುನ್ನ ಕೆಲಸ ಮುಗಿಸುವರು.

ತಾನು ಕರೆಯಿಸಿದ್ದ ಡಾಕ್ಟರುಗಳ ತಂಡ ಮತ್ತು ಸಾವಿನ ಮನೆಯೆಂದು ಗೊತ್ತಾದದ್ದೇ ತಮ್ಮ ವಿಸಿಟಿಂಗ್ ಕಾರ್ಡ್ ಕೊಡಲು ಬಂದಿದ್ದ ಇನ್ನೊಂದೆರಡು ಆಸ್ಪತ್ರೆಯವರನ್ನೂ ಸಾಗಹಾಕಿದ ನಂತರ ತನ್ನ ಹೆಂಡತಿ ವೈದ್ಯರನ್ನು ಕರೆಸುವ ಅಗತ್ಯವೇನಿತ್ತು ನಾವೇ ಇಂಟರ್ ನೆಟ್ಟಿನಲ್ಲಿ ಪಡೆಯಬಹುದಿತ್ತಲ್ಲಾ ಎಲ್ಲಾ ಮಾಹಿತಿ, ಎಂತೆಂಥಾ ಆರೋಗ್ಯ ಸಮಸ್ಯೆಗಳಿಗೇ ಕರೆಯೋದಿಲ್ಲ ಸುಖಾ ಸುಮ್ಮನೆ ಈಗ ಕರೆಸೋದು ಬೇಕಿತ್ತಾ ಎಂದು ತಕರಾರು ಶುರುಮಾಡಿದ್ದಕ್ಕೆ, ಅಯ್ಯೋ ಸುಮ್ಮನೆ ಒಂದು ಬಿಟ್ಟಿ ಫೋನು ಖರ್ಚಷ್ಟೇ ಉಚಿತವಾಗಿ ಮಾಡಿದರು ಹೋದರು, ಏನ್ ಹೆಣ ಇಟ್ಟುಕೊಂಡು ಕೋಟ್ಯಾಂತರ ರೂಪಾಯಿ ಕುಯ್ಕೋತಾರೆ ಅಂದಿದ್ದರೆ ಸಹವಾಸಕ್ಕೇ ಹೋಗ್ತಿರಲಿಲ್ಲ. ತಲೆ ಕೆಡಿಸಿಕೊಳ್ಳೋದು ಬೇಡ ಮುಂದಿನ ಕಾರ್ಯ ನೋಡೋಣ ನೆಡಿ ಎಂದು ಸುಮ್ಮನಾಗಿಸುವರು.
ಮತ್ತೊಂದೆಡೆ

ಗಲ್ಲಿ ಗಲ್ಲಿಗೊಬ್ಬೊಬ್ಬರು ಕಂತ್ರಿಯ ಫೋಟೋ ಉಳ್ಳ ದೊಡ್ಡ ದೊಡ್ಡ ಪೋಸ್ಟರುಗಳು. ಫೋಟೋಗಳಲ್ಲಿಯೂ ಕೈಯಲ್ಲಿ ದುಡ್ಡು ಹಿಡಿದು, ದುಡ್ಡನ್ನು ತಲೆಗೆ ಒತ್ತಿಕೊಳ್ಳುತ್ತಿರುವ ಹಾಗೆ, ದುಡ್ಡಿಗೆ ನಮಸ್ಕರಿಸುತ್ತಿರುವ ಹಾಗೆ ವಿಶೇಷ ಭಂಗಿಗಳಲ್ಲಿ ನಿಂತಿರುವರು. ಈ ಕಂತ್ರಿ ಪ್ರತಿನಿತ್ಯ ತನ್ನ ಕಪ್ಪು ಟೊಪ್ಪಿಗೆ ತೊಟ್ಟು ಯಾರ ಮನೆಯ ಮುಂದೆ ಪ್ರತ್ಯಕ್ಷನಾಗಿ ಕೈಜೋಡಿಸಿ ನಮಸ್ಕರಿಸುವ ಭಂಗಿಯಲ್ಲಿ ಹಿ ಹಿ ಹಿ ಎಂದು ಹಲ್ಲು ಕಿರಿದು ನಿಲ್ಲುವನೋ ಆ ಮನೆಯವರು ಹೊರಬಂದು ಇವನ ಮುಖಕ್ಕೆ ಕಾಸು ಎಸೆಯಬೇಕೆಂಬುದು ವಾಡಿಕೆ. ಆಗ ಕಂತ್ರಿಯ ಹಿಂದೆ ಚೀಲಗಳನ್ನು ಹಿಡಿದು ನಿಂತಿರುವ ಇಬ್ಬರು ಹೆಗಲ ಮೇಲೆ ನಕ್ಷತ್ರಗಳನ್ನು ಹೊತ್ತ ಡೊಳ್ಳು ಹೊಟ್ಟೆಯ ಕಳ್ಳರುಗಳು ತೆಗೆದುಕೊಂಡು ದೊಡ್ಡ ದೊಡ್ಡ ಚೀಲವನ್ನು ತುಂಬಿಸಿಕೊಂಡು ಹೆಗಲೇರಿಸಿಕೊಂಡು ಹೊರಡುವರು. ಯಾವ ಗಲ್ಲಿಯವರು ರಸ್ತೆ ರಿಪೇರಿ ಮಾಡಿಸಿದರೂ, ಎಲ್ಲಿ ನೀರು ಸರಬರಾಜಿನ ಕೆಲಸ ಮಾಡಿಸುತ್ತಿದ್ದರೂ ಈತ ಅದೇ ವೇಷದಲ್ಲಿ, ಭಂಗಿಯಲ್ಲಿ ಹಲ್ಲು ಕಿರಿಯುತ್ತಾ ಕೈಜೋಡಿಸಿಕೊಂಡು ಬಂದು ನಿಲ್ಲುವನು, ಇವನ ತಲೆಯ ಮೇಲಿನ ಕಪ್ಪು ಟೊಪ್ಪಿಗೆಯನ್ನು ನೋಡಿದ್ದೇ ಜನ ಇವನೆಡೆಗೆ ಕಾಸು ಚೆಲ್ಲುವರು. ಹೀಗೆ ಪ್ರತಿನಿತ್ಯ ಎಲ್ಲಂದರಲ್ಲಿ ಕಾಣಿಸಿಕೊಳ್ಳುವ ಈ ಕಂತ್ರಿ ಮಹಾಶಯರುಗಳು ಐದು ವರ್ಷಕ್ಕೊಮ್ಮೆ ಕಾಣೆಯಾಗಿ ಹೋಗುವರು. ಹೀಗೆ ಕಾಣೆಯಾಗಿ ಹೋದರೆಂದರೆ ಜನಕ್ಕೆ ಧಿಡೀರನೆ ನೆನಪಾಗಿಬಿಡುವುದು ಇದು ಚುನಾವಣೆಯ ಸಮಯ ಎಂದು. ಸಮಸ್ತ ನಾಗರೀಕ ಸಮಾಜದ ಸತ್-ಪ್ರಜೆಗಳು ಒಗ್ಗೂಡಿ ಚುನಾವಣೆಯನ್ನು ಏರ್ಪಡಿಸಿ ಎಲ್ಲ ಕಂತ್ರಿಗಳು ಮತ್ತು ಅವರ ಸ್ಪರ್ಧಿಗಳನ್ನು ಒಟ್ಟು ಗುಡ್ಡೆ ಹಾಕಿ ಚುನಾವಣೆ ನಡೆಸುವರು. ಮತ್ತೆ ಕಂತ್ರಿಯಾಗಲು ಕಂತ್ರಿಗಳು ವರ್ಸಸ್ ಸ್ಪರ್ಧಿಗಳಲ್ಲಿ ಯಾರು ಹೆಚ್ಚು ಅರ್ಹರು ಎಂದು ಚರ್ಚೆ ನಡೆಯುವುದು. ಕಂತ್ರಿಗಳು ಆಡಳಿತಾವಧಿಯಲ್ಲಿ ಎಷ್ಟು ಹಣ ಪಡೆಯಲು ಸಮರ್ಥರಾದರು ಸ್ಪರ್ಧಿಗಳು ಕಂತ್ರಿಗಳಿಂದ ಎಷ್ಟು ಹಣ ಕೊಳ್ಳೆ ಹೊಡೆಯಲು ಸಮರ್ಥರಾದರು ಎಂಬ ಆಧಾರದ ಮೇಲೆ ಮತ ನೀಡಿ ಮುಂದಿನ ಕಂತ್ರಿಗಳನ್ನು ನಿರ್ಧರಿಸುವರು. ಹೊಸ ಕಂತ್ರಿಯು ಮತ್ತೆ ಅದೇ ಕಾರ್ಯ ಮುಂದುವರೆಸುತ್ತಾ ಹೋಗುವನು.

ಎಡೆ

ಅಪ್ಪ ಈ ಬಾರಿ ಶಾಲೆಯಲ್ಲಿ ಫಲಿತಾಂಶದ ಮೊತ್ತ ಜಾಸ್ತಿ ಮಾಡಿದ್ದಾರೆ, ನೋಟೀಸ್ ಹಾಕಿದ್ರು ಎಂದದ್ದೇ ವೃತ್ತ ಪತ್ರಿಕೆ ಓದುತ್ತಿದ್ದವರು ಕೆಳಗಿಟ್ಟು ಎಷ್ಟಂತೆ ಎಂದು ಮಗನ ಕಡೆ ನೋಡಲು, ಒಂದು ಪರ್ ಸೆಂಟಿಗೆ ಒಂದು ಸಾವಿರ ಕಟ್ಟಬೇಕಂತೆ ಎನ್ನುವನು. ನಿನಗೆ ಬಂದಿರೋದೆಷ್ಟು ಇವಾಗ ಎನ್ನಲು ೨೩% ಬಂದಿದೆ ನನಗೆ ಬೇಕಿರುವ ಕಾಲೇಜಿಗೆ ಸೇರಬೇಕೆಂದರೆ ೬೪% ಅದ್ರೂ ಬೇಕು ಹಾಗಾಗಿ ನಲವತ್ತೊಂದು ಸಾವಿರವಾದರೂ ಬೇಕಾಗುತ್ತೆ ಎನ್ನುತ್ತಿದ್ದಂತೆಯೇ ಸಿಟ್ಟೇರಿ ಅದಕ್ಕೇ ಓದೋ ಚೆನ್ನಾಗಿ ಅಂದ್ರೆ ಕೇಳಲ್ಲಾ ನೋಡೀಗ ಯಾವ ಗತಿ ಎಂದು ಮತ್ತೇ ಪೇಪರು ಹಿಡಿದು ಸುಮ್ಮನಾಗುವರು. ಅಪ್ಪ ಈ ಮೆಡಿಕಲ್, ಇಂಜಿನೀರಿಂಗ್ ಆಸೆ ಬಿಟ್ಟು ಕಂತ್ರಿಗಳ ಪಾರ್ಟಿ ಸೇರಿಬಿಟ್ಟರೆ ಹೇಗೆ ಎಂದು ಪ್ರಶ್ನಿಸಿ ಅಪ್ಪನ ಮುಖ ನೋಡುವನು. ಏನು ಉತ್ತರ ಹೇಳುವುದೆಂದು ಅಪ್ಪ ಮಿಕಿ ಮಿಕಿ ನೋಡುವನು!
ನೀ.ಮ. ಹೇಮಂತ್

4 comments:

 1. Its very nice n interesting too

  ReplyDelete
 2. Kallara Thane, Pathradari ella super, idela nodi aluvudo,Naguvudo nive heli..........

  ReplyDelete
  Replies
  1. eno nangu gothagthaa illa. adakke ade dwandwadalle kathe kooda iruthe.. :-) thank you very much manasittu odi vichara madiddakke.. nam kaili sadhya adashtu olle dariyalli nadeyona.. :-)

   Delete