ಓದಿ ಓಡಿದವರು!

Monday 18 June 2012

ನಮ್ಮಪ್ಪನದೂ ಒಂದು ಕಥೆ!




            ಲೋ ಚೆನ್ನಾಗಿ ಓದಿ ಕ್ಲಾಸಿಗೇ ಫರ್ಸ್ಟ್ ರಾಂಕ್ ಬರಬೇಕೋ, ಟಿವಿ, ಆಟ ಎಲ್ಲಾ ಕಡಿಮೆ ಮಾಡಬೇಕು. ಈ ವಯಸ್ಸಿನಲ್ಲಿ ಓದುವುದರ ಬಗ್ಗೆ ಆಸಕ್ತಿ ಹೆಚ್ಚಿರಬೇಕು. ಬೆಳಗ್ಗೆ ಬೇಗ ಎದ್ದು ಪುಸ್ತಕ ಕೈಯಲ್ಲಿ ಹಿಡ್ಕೋ, ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತೆ. ಸ್ಕೂಲಿನಿಂದ ಒಂದೂ ಕಂಪ್ಲೇಂಟ್ ತರಬಾರದು. ಕೆಟ್ಟವರ ಸಹವಾಸ ಮಾಡಬಾರದು. ಹೊರಗಡೆ ಎಲ್ಲಂದರೆ ಅಲ್ಲಿ ತಿನ್ನಬಾರದು. ಹೊಟ್ಟೆ ತುಂಬಾ ಚೆನ್ನಾಗಿ, ಟೈಮಿಗೆ ಸರಿಯಾಗಿ ತಿನ್ನಬೇಕು, ತರಕಾರಿ ತಟ್ಟೆ ಬದಿಯಲ್ಲಿ ಎತ್ತಿಡಬಾರದು, ಜೀರ್ಣ ಆಗಲ್ಲಾ. ಇವೆಲ್ಲಾ ಸ್ಕೂಲಿನಲ್ಲಿದ್ದಾಗ. ಆದರೆ, ಕಾಲೇಜಿಗೆ ಕಾಲಿಡುತ್ತಿದ್ದಂತೆಯೇ, ಕ್ಲಾಸ್ ಬಂಕ್ ಮಾಡಬಾರದು. ಸಿಗರೇಟು, ಎಣ್ಣೆ, ಗುಟ್ಖಾ ಅದು ಇದು ಚಟಗಳಿಂದ ದೂರ ಇರಬೇಕು. ಸಿನಿಮಾಗಳಿಗೆ ಹೋಗಬೇಕಂದ್ರೆ ಮನೆನಲ್ಲಿ ಹೇಳಿ ಹೋಗು ಬೇಡಾ ಅನ್ನಲ್ಲ, ಮನೆನಲ್ಲಿ ಸುಳ್ಳು ಹೇಳೋ ಅಭ್ಯಾಸ ಇಟ್ಕೋಬೇಡ. ಏನ್ ಬೇಕೋ ಕೇಳು, ಏನ್ ಬೇಕೋ ತೊಗೋ, ಇನ್ನು ಮುಂದೆ ಸ್ನೇಹಿತರು ಅಂತ ತಿಳ್ಕೋ ಅಪ್ಪ ಅಮ್ಮನ್ನ. ಸ್ನೇಹಿತರ ಜೊತೆ ಹೆಚ್ಚು ಹೊತ್ತು ಸುತ್ತುತ್ತಿರಬೇಡ. ಸಂಬಂಧಿಕರ ಮನೆನಲ್ಲಿ ಸಮಾರಂಭಗಳೇನಾದ್ರೂ ಇದ್ರೆ ಬರೋದನ್ನ ಕಲಿ. ಹುಡುಗಿಯರ ಜೊತೆ ರಸ್ತೆಗಳಲ್ಲಿ ಅಲ್ಲಿ ಇಲ್ಲಿ ಮಾತಾಡೋಂತದ್ದು ಏನಿರುತ್ತೆ. ಮನೆಗೆ ಕರೆಸಿ ಮಾತನಾಡಿ ಕಳುಹಿಸೋಕೇನು ಕಷ್ಟ ನಿನಗೆ. ಕೆಲ್ಸಕ್ಕೆ ಸೇರ್ಕೊಂಡೆ. ಅಳಕ್ ಬುಳಕ್ ಪಾಸ್ ಕೂಡ ಆಗಿದ್ದೆ. ಯಾರೋ ದಡ್ಡ ಕಂಪನಿಯವರು ಕೆಲ್ಸ ಕೂಡ ಕೊಟ್ಟಿದ್ರು. ಕೆಲಸಕ್ಕೆ ಸೇರಿದ ಮೇಲೂ ಸಹ ನೂರು ಉಪದೇಶಗಳು ಇದ್ದವು. ಹೆಚ್ಚು ಖರ್ಚು ಮಾಡಬೇಡ, ಕ್ರೆಡಿಟ್ ಕಾರ್ಡ್ ಜಾಸ್ತಿ ಸವೆಸಬೇಡ. ಅಕೌಂಟ್ ಖಾಲಿ ಮಾಡಿಕೊಂಡಿರಬೇಡ. ಅದು ಇದು. ನಮ್ಮಪ್ಪ ಅಂದರೆ ಉಪದೇಶಗಳ ಖಾತೆನಾ ಅಂತ ಒಂದೊಂದು ಸಲ ಅನ್ನಿಸುತ್ತಿತ್ತು, ನಿಜ. ಆದರೆ ಇಷ್ಟೆಲ್ಲಾ ನನ್ನನ್ನ ತಿದ್ದುತ್ತಾ, ತೀಡುತ್ತಾ, ಪ್ರತಿ ಹಂತದಲ್ಲೂ, ಪ್ರತಿ ಅವಕಾಶ ದೊರೆತಾಗಲೂ ಉಪದೇಶ ನೀಡಿ, ಕೆಲವು ಸಲ ನನ್ನ ಕೆಲ್ಸವನ್ನ ತಾನೇ ಮಾಡುತ್ತಿದ್ದ ನನ್ನ ಅಪ್ಪ, ಹೀಗೇ ಇರಬೇಕು, ಹೀಗೇ ಮಾಡಬೇಕು, ಹಾಗೇ ಬದುಕಬೇಕು, ಹಾಗೇ ವರ್ತಿಸಬೇಕು, ಅದೇ ಕೆಲಸವನ್ನ ಮಾಡಬೇಕು, ಅದೇ ಜಾಗದಲ್ಲಿ ಇರಬೇಕು, ಇಂಥದ್ದೇ ರೀತಿಯಲ್ಲಿ ಬಟ್ಟೆ ತೊಡಬೇಕು, ದಾಡಿ ಬಿಡಬಾರದು ಎಂದೆಲ್ಲಾ ನನ್ನನ್ನು ನಿಯಂತ್ರಿಸುತ್ತಿದ್ದ, ಯಾವುದೋ ಒಂದು ಕಂಪನಿಯಲ್ಲಿ ಇನ್ನೂ ದುಡಿಯುತ್ತಿದ್ದ ನನ್ನ ಅಪ್ಪನೆಂಬುವನ ಬಗ್ಗೆ ನಾನು ಅಪರೂಪಕ್ಕೊಮ್ಮೆ ಯೋಚಿಸುತ್ತಿದ್ದುದುಂಟು. ಅಲ್ಲ, ಇಷ್ಟೆಲ್ಲಾ ಹೇಳ್ತಾರಲ್ಲಾ, ಇವರಿಗೂ ಒಂದು ಬಾಲ್ಯ, ಯೌವ್ವನ ಇದ್ದಿರಬಹುದೇ? ಇದ್ದಿದ್ದಲ್ಲಿ ಇವರು ಹೇಗೆ ಬದುಕಿರಬಹುದು ಎಂದು ಸುಮ್ಮನೆ ಅವರ ಲಕ್ಷಾಂತರ ಬುದ್ದಿವಾದಗಳ ಆಧಾರದ ಮೇಲೆ ಅವರ ನನ್ನ ವಯಸ್ಸನ್ನು ಲೆಕ್ಕಾಚಾರ ಮಾಡಿದೆ.



ರಾತ್ರಿ ಒಂಬತ್ತಕ್ಕೆ ಗಂಟೆ ಢಣ್ಣನೆ ಹೊಡೆದುಕೊಂಡದ್ದೇ ಹೋಗಿ ಮಲಗಿಬಿಡುವರು. ಬೆಳಗ್ಗೆ ನಾಲಕ್ಕು ಗಂಟೆಗೆ ಎದ್ದು ಸ್ನಾನಾದಿ ಮುಗಿಸಿ ಪುಸ್ತಕ ಹಿಡಿದು ಕೂರುವರು. ನಂತರ ಸಮಯಕ್ಕೆ ಸರಿಯಾಗಿ ತಿಂಡಿ ತಿಂದು ಸ್ಕೂಲಿಗೆ ಶಿಸ್ತಾಗಿ ಹೊರಡುವರು. ತರಗತಿಗಳಲ್ಲಿ ಅತ್ತ ಇತ್ತ ತಿರುಗುವುದೇ ಇಲ್ಲ. ಮೊದಲ ಸಾಲಿನಲ್ಲಿ ಕುಳಿತು ಗುರುಗಳು ಹೇಳಿದ್ದನ್ನ ಚಾಚೂ ತಪ್ಪದೇ ಕಣ್ಣ ರೆಪ್ಪೆಗಳನ್ನು ಪಿಳುಕಿಸದೇನೇ ಎಲ್ಲವನ್ನು ಮನನ ಮಾಡಿಕೊಂಡು, ಒಂದು ಘಂಟೆಯ ಆಟದ ಸಮಯವನ್ನ ಮಾತ್ರ ಆಟಕ್ಕೆ ಮೀಸಲಿಟ್ಟು, ಸ್ನೇಹಿತರೊಂದಿಗೆ ಮಿತವಾಗಿ ಮಾತನಾಡಿ ಮನೆಗೆ ಮರಳುವರು. ಲೆಕ್ಕಾಚಾರದ ಪ್ರಕಾರ ತಿಂಡಿ ತೀರ್ಥ ಇಳಿಸಿ, ಕೊಂಚ ಸಮಯ ಟಿವಿ ಅಥವಾ ಸುತ್ತ ಮುತ್ತಲ ಸ್ನೇಹಿತರೊಂದಿಗೆ ಆಟವಾಡಿ. ವಾಚ್ ನೋಡಿಕೊಂಡು ಮತ್ತೆ ತಾವೇ, ಅವರ ಅಪ್ಪ ಅಮ್ಮನಿಂದ ಹೇಳಿಸಿಕೊಳ್ಳದೆಯೇ ಮನೆಗೆ ಮರಳಿ, ಕೈಕಾಲು ಮುಖ ತೊಳೆದು ಪುಸ್ತಕ ಹಿಡಿದು ಹೋಮ್ ವರ್ಕುಗಳು ಮುಗಿಸಿ, ಎಲ್ಲ ಅಂದಿನ ಪಾಠಗಳನ್ನು ಮತ್ತೊಮ್ಮೆ ಓದಿ ಮಲಗಿಬಿಡುವರು. ಹೀಗೆ ಪ್ರತಿದಿನದ ಯಾಂತ್ರಿಕ ಶ್ರಮದ ಫಲವಾಗಿ ಸ್ಕೂಲಿನಲ್ಲಿ ಪ್ರತಿ ಬಾರಿಯೂ ಪ್ರಥಮ ಶ್ರೇಣಿ ಪಡೆದು ಗುರು ಹಿರಿಯರ ಅಚ್ಚುಮೆಚ್ಚಿನ ಹುಡುಗನಾಗುವರು. ಕಾಲೇಜಂತೂ ತಲೆ ಎತ್ತದೇ ಹೋಗಿ, ತಲೆ ಬಗ್ಗಿಸಿಕೊಂಡೇ ಮನೆಗೆ ಮರಳಿ, ಉಪನ್ಯಾಸಕರು ಹೇಳಿದ ಎಲ್ಲ ಪುಸ್ತಕಗಳನ್ನೂ ಚಾಚೂ ತಪ್ಪದೇ ಪ್ರತಿದಿನ ಓದಿ ಅರ್ಥವಾಗದ್ದನ್ನು ಚರ್ಚಿಸಿ ತಿಳಿದುಕೊಂಡು, ಅಪರೂಪಕ್ಕೊಮ್ಮೆ ಗೆಳೆಯರೊಂದಿಗೆ ಸಿನಿಮಾ, ಟ್ರಿಪ್ಪೆಂದು ಕಳೆದು, ಒಂದು ದುರಭ್ಯಾಸಗಳಿಲ್ಲದೇ ಲೈಬ್ರೇರಿ, ಕಾಲೇಜು, ಮನೆ ಅಷ್ಟರಲ್ಲೇ ಕಳೆದು ಕಾಲೇಜು ಕೂಡ ದಬ್ಬಾಕಿಬಿಡುವರು. ಅಲ್ಲೂ ಚಿನ್ನದ ಪದಕ, ಬೆಸ್ಟ್ ಸ್ಟೂಡೆಂಟ್ ಪದಕಗಳನ್ನು ಗಳಿಸಿ ಮಾದರಿ ವಿದ್ಯಾರ್ಥಿ ಎನಿಸಿಕೊಳ್ಳುವರು. ಅಕಸ್ಮಾತ್ ಯಾವುದಾದರೂ ಹುಡುಗಿ ಬಂದು ಇವರ ಸನ್ನಡತೆಯನ್ನು ಕಂಡು ಬೆಕ್ಕಸ ಬೆರಗಾಗಿ(!) ಆಕರ್ಷಿತಳಾಗಿ ಇವರನ್ನು ಪ್ರೊಪೋಸ್ ಮಾಡುವ ದುಸ್ಸಾಹಸಕ್ಕೆ ಕೈಹಚ್ಚಿದಳೆಂದರೆ, ಅವಳನ್ನು ನೇರವಾಗಿ ಮನೆಗೆ ಕರೆಯಿಸಿ ಹಾ ಈಗ ಹೇಳಿ ಎಂದು ಅವರ ಅಪ್ಪ ಅಮ್ಮನ ಮುಂದೆ ಅವಳ ಮನಸ್ಸಿನ ಭಾವನೆಯನ್ನ ಹಂಚಿಕೊಳ್ಳಲು ಕೇಳಿದ್ದಿರಬೇಕು. ಹಾಗಾಗಿ ಆ ಹುಡುಗಿ ಯಾವುದೋ ನೋಟ್ಸ್ ಬೇಕೆಂದೋ, ಬೇರೇನೋ ಹೇಳಿ ಹೋಗಿರಬಹುದು. ಹಾಗಾಗಿ ನಮ್ಮಪ್ಪನ ಮೊದಲ ಪ್ರೇಮದ ದೋಣಿ ಕಟ್ಟುವ ಮುನ್ನವೇ ಮುಳುಗಿ ಹೋಗಿರಬಹುದು. ನಂತರ ಒಳ್ಳೆಯ ಚಿನ್ನದ ಪದಕದ ಫಲಿತಾಂಶವಿರುವವರಿಗೆ ಅದೆಷ್ಟೋ ಕಂಪನಿಗಳು ಮನೆಯ ಬಾಗಿಲಿಗೇ ಹುಡುಕಿಕೊಂಡು ಬಂದು ಕೆಲಸ ಕೊಟ್ಟಿರಬಹುದು. ಅದರಲ್ಲಿ ಯಾವುದು ಉತ್ತಮವಾದ ಸಂಬಳ ಮತ್ತು ಕೆಲಸ ಎಂದು ಅಳೆದು ನೋಡಿ ಉತ್ತಮವೆನಿಸಿದ ಕಂಪನಿಗೇ ಸೇರಿರಬಹುದು. ಕೆಲಸ, ಮನೆ, ವೃತ್ತಪತ್ರಿಕೆ, ಕಾಫಿ, ಅಪರೂಪಕ್ಕೆ ಹೊಸದಾಗಿ ಕೊಂಡ ಮೊಬೈಲ್ ಫೋನೆಂಬ ಜಂಗಮಗಂಟೆಯಲ್ಲಿ ಕಳೆದುಹೋದ ಯಾರೋ ಒಂದಿಬ್ಬರು ಸ್ನೇಹಿತರುಗಳು ಫೋನು ಮಾಡಿ ಕಂಪನಿಯ ಬಗ್ಗೆ, ಕೆಲಸದ ಬಗ್ಗೆ ವಿವರ ವಿನಿಮಯ ಮಾಡಿಕೊಳ್ಳುತ್ತಲೇ ಮದುವೆಗೆ ಆಮಂತ್ರಿಸಲು ಮನೆಗೆ ಬಂದುಬಿಡುವರು. ಅವರಿವರ ಲಗ್ನ ಪತ್ರಿಕೆಗಳನ್ನು ನೋಡಿದ ಅಪ್ಪನ ತಂದೆ ತಾಯಿಗಳು ಒಳ್ಳೇ ಕೆಲಸ ಇದೆ, ಚಿನ್ನದಂತಹ ಗುಣ, ಯಾಕೆ ಮದುವೆ ಮಾಡಿಬಿಡಬಾರದೆಂದು ಯೋಚಿಸಿದ್ದೇ, ತಂದು ಒಂದು ಮೂಗುದಾರ ಹಾಕಿಯೇ ಬಿಡುವರು.

ತನ್ನ ಟೈಂ ಟೇಬಲ್ ಪ್ರಕಾರ ಒಂಬತ್ತು ಘಂಟೆಯ ಕೆಲಸ, ನಂತರ ಪುಸ್ತಕ, ಪೇಪರು, ಟಿವಿ, ಅದು ಇದು ಎಂದು ಕಾಲ ಕಳೆಯುತ್ತಿದ್ದ ಅಪ್ಪ ಹೊಸದಾಗಿ ಮದುವೆಯಾಗಿ ಅಂತೂ ತನ್ನ ಟೈಮೆಂಬ ಟೇಬಲ್ಲನ್ನ ಬೆಡ್ರೂಮಿನಲ್ಲಿರಿಸಿ, ನಂತರ ಅಡುಗೆ ಮನೆಯಲ್ಲಿರಿಸಿ, ನಂತರ ನಡುಮನೆಗೆ ತಂದಿರಿಸುವಷ್ಟರಲ್ಲಿ ನಾನೆಂಬ ನಾನು ಹುಟ್ಟಿ ನಂತರದ ಉಪದೇಶಾಮೃತಂ ನಿತ್ಯಂ ಕಥೆ ಶುರುವಾಗಿರಬಹುದೆಂದು ಸ್ಪಷ್ಟವಾಗಿ ಗೊತ್ತಾಗಿಹೋಗಿತ್ತು. ಇದೊಳ್ಳೇ ಪಕ್ಕಾ ಕಲಾತ್ಮಕ ಸಿನಿಮಾ ನೋಡಿದ ಹಾಗಾಯ್ತು ನನಗೆ. ಹೆಂಗೆ ಸಾರ್ ಬದುಕುತ್ತಾರೆ ಈ ನಮ್ಮ ಅಪ್ಪಂದರೂ? ಅವರನ್ನೇ ನೇರವಾಗಿ ಕೇಳಿಯೂಬಿಟ್ಟೆ ಒಮ್ಮೆ. ಅಪ್ಪ ನೀವು ಲವ್ ಏನಾದ್ರೂ ಮಾಡಿದ್ರಾ ಅಂತ. ಲವ್ವಾ? ಯಾಕೋ? ಅಂಥವೆಲ್ಲಾ ಮಾಡಿಲ್ಲ ಅಂದ್ರೂ. ಮತ್ತೆ ನಾನು ಹೆಂಗಪ್ಪಾ ಹುಟ್ಟಿದೆ ಅಂಥ ಕೇಳಿದ್ದಕ್ಕೆ. ಇವತ್ಯಾಕೋ ತಿಂದಿದ್ದು ಜಾಸ್ತಿಯಾಗಿದೆ ಕಣೋ ನಿನಗೆ ಅನ್ನೋದಕ್ಕೂ, ಅಮ್ಮ ಅಡುಗೆ ರೆಡಿ ಇದೆ ಬನ್ನಿ ಅಂತ ಕರೆಯೋದಕ್ಕೂ ಸರಿಹೋಯ್ತು.



ನಾನಂತೂ ಸ್ಕೂಲಿನಲ್ಲಿದ್ದಾಗ ಸಿಕ್ಕಿಬೀಳದ ಹಾಗೆ ತರಲೆಗಳನ್ನು ಮಾಡುತ್ತಿದ್ದೆ. ಮನೆವರೆಗೂ ಕಂಪ್ಲೇಂಟುಗಳು ತಲುಪದ ಹಾಗೆ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದೆ. ಕಾಲೇಜಿನಲ್ಲೇ ಸಿಗರೇಟು ನುಂಗಿ ಹೊಗೆ ಬಿಡುತ್ತಿದ್ದೆ ಮಿಂಟಿ ತಿಂದು ಮನೆಗೆ ಹೋಗುತ್ತಿದ್ದೆ. ಮನೆಯಿಂದ ದೂರ ಎಲ್ಲಾದರೂ ಹೋಗಿದ್ದಾಗ ಪೆಗ್ ಕೂಡ ಸುರಿದುಕೊಳ್ಳುತ್ತಿದ್ದೆ. ಎರಡು ಬಾರಿ ಲವ್ ಅಟ್ ಫರ್ಟ್ ಸೈಟ್ ಆಗಿ ಸೋತಿದ್ದೆ. ಮೂರನೆಯ ಬಾರಿ ಹಾಕಿದ್ದ ಕಾಳು ಹಕ್ಕಿ ತಿಂದು ಅಂತೂ ಕದ್ದು ಮುಚ್ಚಿ ಓಡಾಡಿಕೊಂಡು, ಸಿನಿಮಾ ನೋಡಿಕೊಂಡು, ತರಗತಿಗಳು ಬಂಕ್ ಮಾಡಿಕೊಂಡು, ಊರೂರು ಸುತ್ತುತ್ತಿದ್ದೆವು. ಎಲೆಕ್ಟ್ರಾನಿಕ್ಸ್ ಪಠ್ಯ ಪುಸ್ತಕಕ್ಕೆ ತೆಗೆದುಕೊಂಡ ಕಾಸು ಕೆ ಎಫ್ ಸಿ ನಲ್ಲಿ ಗ್ರಿಲ್ ಮಾಡಿ ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದೆವು. ಆದರೆ ಯಾವುದನ್ನೂ ಮನೆಯಲ್ಲಿ ಅಪ್ಪನ ಎದುರಿಗೇ ಆಗಲಿ ಅಷ್ಟು ಮುದ್ದು ಮಾಡುವ ಅಮ್ಮನಿಗೇ ಆಗಲಿ ಹೇಳುವ ಧೈರ್ಯ ಮಾಡಿರಲಿಲ್ಲ. ಆ ಅಪರಾಧಿ ಭಾವನೆ ಒಳಗೆಲ್ಲೋ ಒಂದು ಕಡೆ ಖಂಡಿತಾ ಕಾಡುತ್ತಿತ್ತು. ಅದರಿಂದಾಗಿಯೇ ಅಪ್ಪನ ಬಗ್ಗೆ ಅಮ್ಮನ ಬಗ್ಗೆ, ಅವರ ಹಿಂದಿನ ಜೀವನದ ಬಗ್ಗೆ, ಚಿಂತಿಸಲು ಪ್ರೇರೇಪಿಸುತ್ತಿತ್ತು. ಯಾವುದೇ ದುರಭ್ಯಾಸಗಳ ಬಗ್ಗೆ ಅಪ್ಪನಿಗೆ ಗೊತ್ತಾದರೆ ಖಂಡಿತಾ ನನ್ನ ಬಗ್ಗೆ ಅಸಹ್ಯ ಪಟ್ಟುಕೊಂಡಾರು. ಅವನ್ನೆಲ್ಲಾ ಅಪ್ಪನಿಗೆ ಗೊತ್ತಾಗದ ಹಾಗೆಯೇ ಬಿಟ್ಟೂ ಸಹ ಬಿಡಬಹುದೇನೋ. ಆದರೆ ಪ್ರೀತಿ! ಅಂತೂ ಅಪ್ಪನ ನಿರೀಕ್ಷೆಯಷ್ಟಲ್ಲದಿದ್ದರೂ ತಕ್ಕ ಮಟ್ಟಿಗೆ ಕಳಪೆಯಲ್ಲದ (ನನ್ನ ಮಟ್ಟಿಗೆ) ಅಂಕಗಳನ್ನು ಪಡೆದು ಒಂದೇ ಹೊಡೆತಕ್ಕೆ ತೇರ್ಗಡೆಯಾಗಿ ಕಾಲೇಜಿನಿಂದ ಹೊರಗೆ ಬಂದಾಯ್ತು. ಕೆಲಸ ಕೊಡುವ ಹೆಸರಿನಲ್ಲಿ ಕೆಲಸ ತೆಗೆದುಕೊಳ್ಳುವ ಎಷ್ಟೋ ಬುದ್ಧಿವಂತರುಗಳಿಗೆ ನನ್ನಂತಹ ದಡ್ಡರುಗಳೇ ಬೇಕಾಗಿರುತ್ತಾರೆ. ಅಂತೆಯೇ ನಾನೂ ಒಂದು ಕಡೆ ಸಿಕ್ಕಿಬಿದ್ದೆ. ಸಂಬಳ ಬರುತ್ತಿತ್ತು ಬೇಡವೆಂದು ತಡೆದಷ್ಟೂ ಅವಳನ್ನು ಅಲ್ಲಿ ಇಲ್ಲಿ ಕರೆದುಕೊಂಡು ಹೋಗಿ ತಿನ್ನಿಸಿ, ಸುಖಾ ಸುಮ್ಮನೆ ಏನಾದರೂ ಕೊಡಿಸಿ ಖರ್ಚು ಮಾಡದಿದ್ದರೆ ಕೈಯಲ್ಲಿನ ಕೆರೆತ ಹೋಗುವುದೇ ಇಲ್ಲ. ಅಂತೂ ನನ್ನಲ್ಲಿಯ ಅಪರಾಧೀ ಭಾವನೆ ಹೋಗುವುದಿರಲಿ, ಜಾಸ್ತಿಯಾಗುತ್ತಲೇ ಹೋಗುತ್ತಿತ್ತು. ಇನ್ನು ಪ್ರೇಮ ಪ್ರಕರಣದ ಪುಟ ಬೇರೆ ತೆರೆದಿಡಬೇಕಿತ್ತು. ಏನು ಕಾದಿದೆಯೋ, ಜಾತಿ, ಧರ್ಮ, ವೇಷ, ಮಣ್ಣು ಮಸಿ ಎಲ್ಲದಕ್ಕೂ ತಕರಾರುಗಳು ಎರಡೂ ಕಡೆಯಿಂದ ಏಳಲೇ ಬೇಕಿತ್ತು, ಅದು ನಮಗೆ ಗೊತ್ತಿತ್ತು ಆದರೂ ಪ್ರೀತಿ ನಿರಾತಂಕವಾಗಿ ಮುಂದುವರೆದಿತ್ತು. ಇಂತಿರ್ಪ ಸಮಯದಲ್ಲೇ ಅವಳ ಮನೆಯಲ್ಲಿ ಗಂಡು ಹುಡುಕುವ ಯೋಜನೆ ಶುರುವಾಗಿ ಇನ್ನು ಹೆಚ್ಚು ಕಾಲಾವಕಾಶವಿಲ್ಲವೆಂದು ಮನೆಯಲ್ಲಿ ವಿಷಯ ಪ್ರಸ್ತಾಪಿಸಿಯೇ ಬಿಡುವುದೆಂದು ತೀರ್ಮಾನಿಸಿ ಕೈಕಾಲು ನಡುಗಿಸಿಕೊಂಡು, ಎದೆ ಬಡಿತ ಹೆಚ್ಚಿಸಿಕೊಂಡು ಮನೆಗೆ ಹೊರಟೆ.

ಅದೇ ಮಾಮೂಲಿ ಡಾಂ ಡೂಂ ಡಸ್ ಪುಸ್ ಕೊಯ್ ಕೊಟಾರ್ ಗಳು ಶುರುವಾದವು. ಏನು ಮಾಡುವುದೋ ಗೊತ್ತಿರಲಿಲ್ಲ. ಇವಳನ್ನು ನಡು ನೀರಿನಲ್ಲಿ ಬಿಟ್ಟುಬಿಡುವ ಸ್ಥಿತಿಯಲ್ಲಿ ನಾನು ಅಥವಾ ಅವಳು ಉಳಿದಿರಲಿಲ್ಲ. ಅಪ್ಪ ಅಮ್ಮನನ್ನು ಎದುರಿಸಿ ಮದುವೆಯಾಗೋಣವೆನ್ನಲು ಅವರು ನಮ್ಮನ್ನು ಆ ಪರಿಸ್ಥಿತಿಗೆ ತಳ್ಳಿರಲಿಲ್ಲ. ಆರ್ ಯಾ ಪಾರ್ ಎಂದು ಬದುಕುತ್ತಿರುವವರದೇ ಸುಖವಾದ ಜೀವನವೆಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಮಧ್ಯ ಇರುತ್ತಾರಲ್ಲಾ ನನ್ನಂತಹ ಆರಕ್ಕೆ ಏರದ ಮೂರಕ್ಕೆ ಇಳಿಯದ ಮಧ್ಯಮಮತಿಗಳು ನಮ್ಮ ಸಮಸ್ಯೆಯೇ ಇಷ್ಟು ಅತ್ತ ಬಗೆ ಹರಿಯುವುದಿಲ್ಲ, ಇತ್ತ ಬಗೆಹರಿಯದೆಯೂ ಇರುವುದಿಲ್ಲ. ನನ್ನಪ್ಪನಂತಹ ಅಪ್ಪನಿಗೆ ನನ್ನಂತಹ ಮಗನಿರಬಾರದಿತ್ತೆಂದು ಖಿನ್ನನಾಗಿಹೋಗಿದ್ದೆ. ಎಷ್ಟೆಲ್ಲಾ ನನ್ನ ಬಗ್ಗೆ ಜಾಗ್ರತೆವಹಿಸಿದ ಅಪ್ಪನನ್ನು ಏಕ್ದಂ ಧಿಕ್ಕರಿಸಿ ಹೋಗಿ ಮದುವೆಯಗುವುದು ಸರಿಯಲ್ಲ. ಅದಕ್ಕೆ ಅವಳು ಒಪ್ಪುವುದೂ ಇಲ್ಲ. ಒಪ್ಪಿಸಿ ಮದುವೆಯಾಗುವುದು ಮರೀಚಿಕೆಯಂತಹ ವಿಷಯ. ಹೀಗೇ ತಲೆ ಮೇಲೆ ಕೈ ಹೊತ್ತು ತಿರುಗಾಡುತ್ತಿರಲು, ಅಪ್ಪನ ಸ್ನೇಹಿತರೊಬ್ಬರು ದಾರಿಮಧ್ಯದಲ್ಲಿ ಸಿಕ್ಕು ಬ್ಲೇಡೊಂದನ್ನು ತೆಗೆದು ಬಾಯಲ್ಲಿ ಹಾಕಿಕೊಂಡರು. ಇನ್ನು ಎಷ್ಟು ಕುಯ್ಯುವರೋ ಎಂದು ಹತ್ತಿ, ಬ್ಯಾಂಡೇಜುಗಳು, ಆಯಿಂಟ್ಮೆಂಟುಗಳು ತೆಗೆದುಕೊಂಡು ದಾಳಿಗೆ ಸನ್ನದ್ಧನಾದೆ. ನೇರವಾಗಿ ನನ್ನ ಪ್ರೀತಿಯ ವಿಷಯ ಎತ್ತಿದರು. ಓಹೋ ನಮ್ಮಪ್ಪ ಆಗಲೇ ನನ್ನ ಮಾನ ಹರಾಜಾಕುತ್ತಿದ್ದಾರೆಂದು ಮನದಲ್ಲೇ ಬ್ಲಡಿ ಬಗರ್ ಫಾದರ್ ಎಂದು ಬಯ್ದುಕೊಂಡೆ. ನನ್ನ ಸಪ್ಪೆ ಮೋರೆಯನ್ನು ನೋಡಿದ್ದೇ ಹೆಗಲ ಮೇಲೆ ಕೈಹಾಕಿ ನಡೆಯುತ್ತಾ ಕರೆದುಕೊಂಡು ಹೋದರು. ನಿಮ್ಮಪ್ಪ ಒಪ್ಲಿಲ್ವಾ? ಒಪ್ತಾನೆ ಬಿಡು, ಸ್ವಲ್ಪ ಲೇಟಾಗಾದರೂ ಎಂದು ಪೊಳ್ಳು ಧೈರ್ಯ ತುಂಬುತ್ತಿದ್ದಾರೆಂದುಕೊಂಡೆ. ಕಥೆ ನಿಧಾನಕ್ಕೆ ವಿಚಿತ್ರ ಟ್ವಿಸ್ಟ್ ತೆಗೆದುಕೊಂಡಿತು. ನಮ್ಮಪ್ಪನ ಕಥೆ! ನಿಮ್ಮಪ್ಪ ಆಡಿದ್ ಆಟಗಳು ನೋಡಬೇಕಿತ್ತು ನೀನು. ನಿನ್ನ ಮುಂದೆ ಹೇಳ್ತಿದ್ದೀನಿ ಅಂತ ದುರುಪಯೋಗ ಪಡಿಸಿಕೊಳ್ಳಬೇಡ. ಸ್ಕೂಲ್ ಸಮಯದಲ್ಲೇ ಮಹಾನ್ ತರಲೆ ನಿಮ್ಮಪ್ಪ. ಸಿಕ್ಕ ಸಿಕ್ಕವರ ಜೊತೆ ಜಗಳ ಆಡೋದು, ಮೂತಿ ಮುಸುಡಿ ನೋಡದಂಗೆ ಹೊಡೆಯೋದು, ನಿಮ್ಮಗಳ ತರಹ ಬಡಕಲಾಗಿರಲಿಲ್ಲ, ಕಟ್ಟುಮಸ್ತು ಮೂರು ಆಳು ಸೇರಿದರೆ ಇವನೊಬ್ಬ. ಇವನ ಕಾಟ ತಾಳಲಾರದೆ ನಿಮ್ಮ ತಾತನಿಗೆ ಪ್ರತಿನಿತ್ಯ ಒಂದು ಹೊಸ ಕಂಪ್ಲೈಂಟು ಬರುತ್ತಿತ್ತು. ಎಷ್ಟು ಬಡಿದ್ರೂ ಇಲ್ಲ, ಹಾಸ್ಟೆಲ್ಲು ಸೇರಿಸಿದರೂ ಇಲ್ಲ, ಹಠಮಾರಿ ಬೇರೇ. ಇಂಥದ್ದು ಮಾಡಬೇಡ ಅಂದ್ರೆ ಅದನ್ನೇ ಮಾಡೋವ್ನು. ತನಗೆ ಬೇಕೆಂದಿದ್ದು ಬೇಕು. ಕಾಲೇಜು ಸೇರಿದಮೇಲಂತೂ ಯಾಕ್ ಕೇಳ್ತೀಯ ಅವನ ಲೀಲೆಗಳನ್ನ. ಸಿನಿಮಾ ಹುಚ್ಚು, ಯಾವ ಹೊಸ ಪಿಕ್ಚರಿನಲ್ಲಿ ಹೊಸ ರೀತಯ ಬಟ್ಟೆ ಬರಲಿ ಇವನಿಗೆ ಅದು ಬೇಕಿತ್ತು, ಹಿಪ್ಪಿ ಮಾಡಿಕೊಂಡು ಓಡಾಡ್ತಿರ್ತಿದ್ದ. ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆಯಾದಾಗ ನಾಲಕ್ಕು ದಿನ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾನೆ, ಮನೆ ಇಲ್ಲ ಮಠ ಇಲ್ಲ ಅದೆಲ್ಲಿ ಇದ್ದನೋ ಗೊತ್ತಿಲ್ಲ. ಬೆಂಗಳೂರಿಗೆ ಬಂದು ಫುಟ್ಪಾತಿನಲ್ಲಿ ಬಿದ್ಕೊಂಡು ಮೂರು ಮೂರು ಸಿನಿಮಾಗಳು ನೋಡ್ಕೊಂಡು ಮನೆನಲ್ಲಿ ಬುರುಡೆ ಬಿಟ್ಕೊಂಡು ತಿರುಗಾಡ್ತಿದ್ದ. ಒಂದೊಂದು ಸಲ ಮನೆನಲ್ಲಿ ಹೇಳದೇ ಕೇಳದೇ ಹೋದವನು ವಾರ ಬಿಟ್ಟು ಮನೆಗೆ ಬರೋದು ಎಲ್ಲೋ ಹೋಗಿದ್ದೆ ಅಂತ ಎಲ್ಲಾ ಸೇರಿ ಬಾರಿಸಿ ಕೇಳೀದ್ರೆ, ಊಟಿ ಹೋಗಿದ್ದೆ ಅನ್ನೋವ್ನು. ಒಂದು ಪರೀಕ್ಷೆನಲ್ಲಿ ಸ್ವಂತವಾಗಿ ಬರೆದು ಪಾಸಾಗಿದ್ರೆ ಕೇಳು. ಬುಕ್ ಹಿಡ್ಕೊಂಡು ಕಾಪಿ ಹೊಡೆಯೋನು ಮಾರಾಯ, ಅದೆಲ್ಲಿತ್ತೋ ಅಷ್ಟು ಧೈರ್ಯ ಅವನಿಗೆ, ಆದರೆ ಒಮ್ಮೆ ಕೂಡ ಸಿಕ್ಕಿಬೀಳ್ತಿರಲಿಲ್ಲ. ಎಲ್ಲಾ ಹುಡುಗಿಯರು ಇವನ ಹಿಂದೆ, ಇವನು ಮಾತ್ರ ನಮ್ಮ ಕ್ಲಾಸ್ ಸುಂದರಿ ಹಿಂದೆ. ನಿಮ್ಮಪ್ಪನ್ನ ಸಶೀ ಸಶೀ ಅಂತ ಕರೀತಿತ್ತು ಇಡೀ ಕಾಲೇಜು ಎಂದರು. ಅದೇನು ಸಶೀ ಎಂದರೆ, ಸಂತೋಷ, ಶೀಲ ಮಿಕ್ಸ್ ಮಾಡಿ ಕರೀತಿದ್ವು. ಅವಳಿಗೊಂದು ಕಾಟ ಕೊಟ್ಟಾ ಕೊಟ್ಟಾ ಕೊನೆಗೂ ಅವಳೂ ಅವಳ ಹಠ ಬಿಡಲಿಲ್ಲ, ಒಪ್ಪಲಿಲ್ಲ. ಇವನೂ ಅವಳು ಮದುವೆ ಹಿಂದಿನ ದಿನಾನೂ ಅವರ ಮನೆ ಮುಂದೆ ಕೂತು, ಜಗಳ ಮಾಡಿ, ರಂಪಾಟ ಮಾಡಿ, ಕೊನೆಗೆ ಅವಳ ಮದುವೆ ಆದ ಮೇಲೆ ಕುಡಿಯೋದು ಕಲಿತು, ಸಿಕ್ಕ ಸಿಕ್ಕಲ್ಲಿ ಬಿದ್ಕೊಂಡು, ನಿಮ್ಮ ತಾತನಿಗೆ ದೊಡ್ಡ ತಲೆ ನೋವು ಮಾಡಿಟ್ಟಿದ್ದ. ನಿಮ್ಮ ತಾತನಿಗೆ ಹುಶಾರು ತಪ್ಪಿದ ಮೇಲೆ ಅದೇನಾಯ್ತೋ ಆಸಾಮಿಗೆ ಎಲ್ಲಾ ಬಿಟ್ಟು, ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಈಗ ನೋಡಿದ್ಯಲ್ಲಾ ದೂರವಾಸ ಮುನಿ ಹಾಗಿದ್ದಾನೆ. ಎಂದು ನಕ್ಕರು. ಯಾಕೋ ಅಪ್ಪ ಯಾವತ್ತಿಗಿಂತ ತುಂಬಾನೇ ಹತ್ತಿರವಾಗ ಹತ್ತಿದರು. ಇವರುಗಳು ಜೀವನ ಮಾಡಿರೋದರ ಮುಂದೆ ನಾನೇನು ಮಾಡಿರೋದು ಅನ್ನಿಸೋಕೆ ಶುರುವಾಯ್ತು. ಈಗಲೂ ಸಹ ಎಂಥ ಅಪ್ಪನಿಗೆ ಎಂಥ ಮಗ ನಾನು ಎಂದೇ ಅನಿಸಿತು. ನೇರವಾಗಿ ಮನೆಗೆ ನಡೆದೆ. ಅಪ್ಪ ನಿಮ್ಮ ಸ್ನೇಹಿತ ಅದೇ ಬ್ಯಾಂಕಲ್ಲಿ ಕೆಲಸ ಮಾಡ್ತಾರಲ್ಲಾ ಅವರು ಸಿಕ್ಕಿದ್ರು ಅಂದೆ. ಸರಿ ಎಂದಷ್ಟೇ ಅಂದು ಟಿವಿ ನೋಡ್ತಾನೇ ಇದ್ರು. ಮೆಲ್ಲಗೆ ಸಶೀ ವಿಷಯ ಎಲ್ಲಾ ಹೇಳಿದ್ರು ಅಂದೆ. ಮುಖದ ಬಣ್ಣವೇ ಬದಲಾಗೋಯ್ತು. ಮಾತು ಬರಲ್ಲ ಹೊರಗೆ ಅಂತ ಗೊತ್ತಿತ್ತು. ರಾತ್ರಿ ತುಂಬಾ ತಡವಾಗಿ ಮನೆಗೆ ಬಂದ್ರು. ಅದಾಗಿ ಮೂರು ತಿಂಗಳಿಗೆ ನನ್ನ ಮದುವೆಗೆ ಅಪ್ಪನೇ ಮೊದಲ ಸಾಕ್ಷಿಯ ಸಹಿ ಹಾಕಿದ್ರು. 








+ನೀ.ಮ. ಹೇಮಂತ್

1 comment:

  1. ಇಡೀ ಕಥನದಲ್ಲಿ ಗೆಲ್ಲುವ ವಿಚಾರಗಳು:
    ಸರಳ ಬರಹ ಶೈಲಿ
    ಸುಲಲಿತ ನಿರೂಪಣೆ
    ಅಪ್ಪಣ ಪ್ರಾಮಾಣಿಕತೆ.

    ಅಂದಹಾಗೆ ನನ್ನ ಬ್ಲಾಗಿಗೂ ಬನ್ನಿರಿ ಒಮ್ಮೆ.

    ReplyDelete