ಓದಿ ಓಡಿದವರು!

Thursday 14 June 2012

ಜೀವನವಲ್ಲ ಕಥೆ!




       “ನಾನು ಸತ್ತೋದೆ! ಅಣ್ಣಾ ನಾನು ವಿಷ ಕುಡಿದು ಸತ್ತೋದೆ! ನೋಡು ನನ್ನ ಯಂಡ್ರು ಯಂಗೆ ಕ್ಯಾಮೆರಾಗೆ ಮುಖ ತೋರಿಸ್ಕಂಡು ಅಳ್ತಾವ್ಳೆ!” ಅರೆ ಇವತ್ತು ಮಧ್ಯಾಹ್ನ ಸತ್ತವನು ನೇರ ನನ್ನ ಬಳಿಗೆ ಯಾಕೆ ಬಂದನೋ ಗೊತ್ತಾಗಲಿಲ್ಲ. ಟಿವಿಯಲ್ಲೇನೋ ಸಂಜೆ ಇವನ ಮುಖಕ್ಕೆ ಝೂಮ್ ಹಾಕೀ ಹಾಕೀ ತೋರಿಸಿದ್ದರು. ಮುಖ ನೀಲಿಗಟ್ಟಿತ್ತು. ಅವನ ಹೆಂಡತಿ ಕ್ಯಾಮೆರಾ ಕಡೆ ನೋಡಿ ನೋಡಿ ಅಳು ಇನ್ನೂ ಜೋರು ಮಾಡಿದ್ದಂತೂ ಹೌದು. ಸಂಬಂಧಿಕರೋ, ಸುತ್ತಮುತ್ತಲವರೋ ಅವರಲ್ಲಿ ಸಂತಾಪ ನಿಜವಾಗಲೂ ಇತ್ತೋ ಇಲ್ಲವೋ ಅವನ ಹೆಂಡತಿಯಷ್ಟೇ ಶೋಕ ಕ್ಯಾಮೆರಾ ಮುಂದೆ ಹೊರಹಾಕಿದರು. ಎಲ್ಲಾ ನಾಟಕವೆಂದುಕೊಂಡಿದ್ದೆ ಆಗ ನೋಡಿದಾಗ. ಇವನೀಗ ಎದುರಿಗೇ ನಿಂತಿದ್ದಾನೆ. ಏನೆಂದು ಪ್ರತಿಕ್ರಿಯಿಸಲಿ. ಆತನ ಹೆಣ ನೋಡಿದಾಗಲಂತೂ ದೇವರಾಣೆ ನನಗೆ ಯವುದೇ ರೀತಿಯ ಸಂತಾಪವೂ ಹತ್ತು ಸೆಕೆಂಡಿಗಿಂತ ಹೆಚ್ಚಿಗೆ ಉಳಿದಿರಲಿಲ್ಲ. ಪಕ್ಕದ ಚಾನೆಲ್ಲಿನಲ್ಲಿ ಹೊಸ ಸಿನಿಮಾದ ಹಾಡು ಎಲ್ಲವನ್ನು ಮರೆಸಿತ್ತು, ಮರೆತಿದ್ದೆ. ಆದರೆ ಈತ ನನ್ನನ್ನೇ ಹುಡುಕಿ ಬಂದಿದ್ದಾನೆ. ಏನೆಂದು ಪ್ರತಿಕ್ರಿಯಿಸಲಿ. ಆಗಿದ್ದಾಯ್ತು ಹೋಗಲಿ ಬಿಡು ಎಂದು ಹೇಳಿ ಸಾಗಹಾಕಲೇ, ನೀನು ಯಾರೆಂದು ಗೊತ್ತೇ ಇಲ್ಲ ಹೊರಡು ಇಲ್ಲಿಂದ ಎಂದು ಹೊರದಬ್ಬಲೇ. ಅಥವಾ ಮಾಮೂಲಿನಂತೆ ಬೂಟಾಟಿಕೆ ಸಂತಾಪ ಸೂಚಿಸುತ್ತಾ ಧೈರ್ಯ ತಂದುಕೋ, ಎಲ್ಲ ಒಳ್ಳೆಯದೇ ಆಗುತ್ತದೆಂದು ಹೇಳಿ ಧೈರ್ಯ ತುಂಬಲೇ. ಅರೆರೆ! ಅವನಾಗಲೇ ಸತ್ತಾಗಿದೆ ಅವನಿಗೆಂಥಾ ಧೈರ್ಯ ಹೇಳುವುದು. ನನ್ನ ನಂಬಿಕೆಯ ಪ್ರಕಾರ ಆತ ಸತ್ತ ಮೇಲೆ ಎಲ್ಲ ಕಷ್ಟ ಸುಖಗಳು ಮುಗಿದಹಾಗೆಯೇ. ಸ್ವರ್ಗ ನರಕಗಳ ನಾನ್ಸೆನ್ಸ್ ನಂಬಿಕೆ ನನ್ನಲ್ಲಿಲ್ಲದ ಕಾರಣ ಮತ್ತು ಆತ್ಮದ ಬಗ್ಗೆ ನನಗೆ ತಿಳಿಯದ ಮತ್ತು ತಿಳಿಯಲಿಚ್ಛಿಸದ ಪ್ರಕಾರ ಆತನ ದೇಹದ ಜೊತೆಗೆ ಆತನ ಆತ್ಮವೆನ್ನುವುದನ್ನೇನಾದರೂ ಸಾಯುವ ಮುನ್ನ ಈ ಸಮಾಜ ಉಳಿಸಿದ್ದರೆ ಅದೂ ದಫನ್ ಆಗಿರಬೇಕಿತ್ತು. ಆದರೆ ಈತ ನನ್ನ ಮುಂದಿದ್ದಾನೆ ಈಗ. ಕಲ್ಲು ಮಣ್ಣು ಹುಳ ಹುಪ್ಪಟೆಯಲ್ಲೂ ಕಥೆ ಹುಡುಕುವ ನನ್ನ ಮೂರ್ಕಾಸಿನ ಬುದ್ದಿಗೆ ಇವನಲ್ಲಿ ಮಾತು ಬೆಳೆಸಿದರೆ ಕಥೆಗಾಗುವಂತಹ ವಸ್ತು ಹುಟ್ಟಬಹುದೇನೋ ಎಂಬ ಕೆಟ್ಟ ಕುತೂಹಲ ಕತ್ತಲೆ ರಸ್ತೆಯಲ್ಲಿನ ಟಾರ್ಚ್ ದೀಪದಂತೆ ಹೊತ್ತಿಕೊಂಡಿತು ಆದರೆ ನೈತಿಕತೆ ಮಾನವೀಯತೆಯೆಂಬ ಭೂತಗಳು ಎಂತಹ ಕತ್ತಲೆಯಲ್ಲೂ ಭಯೋತ್ಪಾದನೆ ಮಾಡುತ್ತಾವದ್ದರಿಂದ ಟಾರ್ಚಿನ ಬೆಳಕಿನಿಂದ ನನ್ನ ಇರುವಿಕೆ ತೋರ್ಪಡಿಸಕೂಡದೆಂದು ಟಾರ್ಚ್ ಆಫ್ ಮಾಡಿ ಸುಮ್ಮನೆ ಅವನ ಮುಖ ಒಮ್ಮೆ ನನ್ನ ಕಾಲನ್ನೊಮ್ಮೆ ನೋಡುತ್ತಾ ಕುಳಿತೆ.

ತಿನ್ನಾಕ್ ಹಿಟ್ಟಿರ್ನಿಲ್ಲ. ಇವತ್ತ ಅಳ್ತಾವ್ಳೆ ನನ್ನೆಂಡ್ರು, ಕಳದ್ ಸಾರಿ ವಿಷ ಕುಡ್ದಾಗಲೇ ಎಚ್ಚೆತ್ಕಂಡಿದ್ರೆ ನಾನ್ ಈಗ ಕುಡಿತಿದ್ನಾ. ಈಗ ಅಳ್ತಾವ್ಳೆ. ಮನ್ಯಾಗ್ ಜಗಳ, ಊರಾಗ್ ಜಗಳ, ಮಾರ್ಕೆಟ್ನಾಗ್ ಜಗಳ, ಬ್ಯಾಂಕ್ನವ್ರ್ ತಾವ್ ಜಗಳ, ಎಲ್ಲಾ ಕಡೆಯೂ ಜಗಳವೇ ಆಗೋಯ್ತು ಒಂದ್ ತಾವೂ ಗೆಲ್ಲೋದಂತೂ ಇಲ್ಲ. ಸಾಯೋವಾಗಾದ್ರೂ ನೆಮ್ಮದಿಯಾಗ್ ಸಾಯಲಿಲ್ಲಂದ ಮ್ಯಾಕೆ ಸತ್ತೂ ಏನ್ ಭಾಗ್ಯ ಬಂತೋ ಗೊತ್ತಿಲ್ಲ. ಕಥೆಗಾರನೇನೋ ಇನ್ನೂ ಟಾರ್ಚಿನ ಮೇಲೆ ಕೈ ಇಟ್ಟುಕೊಂಡೇ ಇದ್ದ, ಟಾರ್ಚ್ ಹೊತ್ತಿಸಿ ಯಾಕೆ ವಿಷ ಕುಡಿದ್ರಿ ಎಂದು ಕೇಳಿ ಥಟ್ಟನೆ ಟಾರ್ಚ್ ಆರಿಸುವ ಯತ್ನದಲ್ಲಿದ್ದವನನ್ನು ತಡೆದೆ. ಯಾಕೆ ಸಾಯ್ತಿದ್ದಾರೆ ಅಂತ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಷಯವೇ ಅದನ್ನೇ ಮತ್ತೊಮ್ಮೆ ಪ್ರಶ್ನಿಸಿ ಅವನ ಗೋಳಿನ ಕಥೆಯನ್ನು ಕೇಳುವ ವ್ಯವಧಾನವೂ ಇರಲಿಲ್ಲ ಮತ್ತು ಅದನ್ನು ಕಥೆಯಾಗಿಸಿ ಮೊಳೆ ಹೊಡೆದರೆ ಅದೇ ಮಾಮೂಲಿನ ಕಥೆ ಎಂದು ಯಾವ ಮಹಾಶಯರೂ ಓದುವುದೂ ಇಲ್ಲವೆನ್ನುವುದು ಖಚಿತವಾಗಿ ಗೊತ್ತಿದ್ದುದರಿಂದ ಕಥೆಗಾರನ ತಲೆಯಮೇಲೆ ಹೊಡೆದು ಟಾರ್ಚನ್ನು ಕಿತ್ತೆಸೆದೆ. ವಿಷ ಕುಡಿದವನ ಹೆಸರೂ, ವ್ಯ(ಕ)ಥೆಯೂ ಗೊತ್ತಾಗಲೇ ಇಲ್ಲ. ಬಂದ ದಾರಿಯಲ್ಲಿಯೇ ಆತನೂ ಹೊರಟುಹೋದ.

ಪ್ರೇಮಕಥೆಗಳನ್ನ ಪ್ರೇಮಕಾವ್ಯಗಳನ್ನ ಬೇಡಬೇಡವೆನ್ನುತ್ತಲೇ ಜನ ಓದ್ತಾರೆ, ವಿಮರ್ಶೆ ಮಾಡ್ತಾರೆ, ಹಾಗಾಗಿ ಏನು ಮಾಡೋಣ ಎಂದು ಯೋಚಿಸುತ್ತಿರುವಾಗಲೇ ನನ್ನ ಹಳೆಯ ಸೋತ ಪ್ರೇಮಕಥೆ ನೆನಪಾಗಿ ಅದನ್ನೇ ಬಣ್ಣಗಳನ್ನು ಹಚ್ಚಿ ರೆಕ್ಕೆ ಪುಕ್ಕ ಬರೆದು ಹೇಳಿದರೆ ಹೇಗೆಂದು ಚಿಂತಿಸುವಷ್ಟರಲ್ಲೇ ಕೈಯಲ್ಲಿದ್ದ ಕಾದಂಬರಿಯಲ್ಲಿನ ಅಕ್ಷರಗಳನ್ನು ಸರಿಸಿ ನನ್ನ ಮಾಜಿ ಹುಡುಗಿ ಮುಖ ಹ ಹ ಹ ಎಂದು ನಕ್ಕು ಥು ನಿನ್ನ ಮುಖಕ್ಕೆ, ನನ್ನನ್ನು ಉಳಿಸಿಕೊಳ್ಳುವ ಯೋಗ್ಯತೆಯಿರಲಿಲ್ಲ ಈಗ ಕಥೆ ಮಾಡಲು ಹೊರಟಿದ್ದೀಯ ನಾಚಿಕೆಗೇಡು ಜೀವನ ನಿನ್ನದೆಂದು ಉಗಿದು ಮರೆಯಾದಳು. ತೆಪ್ಪಗೆ ಆಫೀಸು ತಲುಪಿ ಕೂರಲು ಪಕ್ಕದ ಚೇರಿನಲ್ಲಿ ಕೂದಲು ಕೆದರಿಕೊಂಡು ಹರಿದ ಟಾಪು ಮತ್ತು ಬಾಟಮ್ ತೊಡದೆಯೇ ಕುಳಿತು ಕಣ್ಣೊರೆಸಿಕೊಂಡು ನನ್ನತ್ತ ನೋಡಿ ನನ್ನನ್ನು ಆರು ಜನ ಸೇರಿ ಕೊಂದರು ಎಂದಳು. ಕೈ ಕಾಲು ನಡುಕ ಶುರುವಾಯ್ತು. ಬಸ್ಸಿನಲ್ಲಿ ಮಾಜಿ ಬಂದು ಉಗಿಯುವ ಕೊಂಚ ಮೊದಲು ಪಕ್ಕದವನ ಪೇಪರಿನಲ್ಲಿ ಗಟ್ಟಿಯಾಗಿ ಓದುತ್ತಿದ್ದ ಬಿಸಿ ಬಿಸಿ ಸಮಾಚಾರದ ದುರಂತ ನಾಯಕಿ ಇವಳೇನಾ. ಬೆವರು ತನ್ನಿಂತಾನೇ ಬಂತು. ನನಗೆ ಗೊತ್ತಿದ್ದ ಹಾಗೆ ಆರು ಜನ ಸೇರಿ ಮಾನಾಪಹರಣ ಮಾಡಿ ಉಸಿರು ಕಟ್ಟಿಸಿ ಕೊಂದು ಎಸೆದು ಹೋಗಿದ್ದರೆಂಬುದು ಸುದ್ದಿ. ಇವಳು ನೋಡಿದರೆ ಇಲ್ಲಿ ನನ್ನ ಪಕ್ಕದಲ್ಲಿ ಈ ಅವಸ್ಥೆಯಲ್ಲಿ. ಅಣ್ಣಾ ಹೊಟ್ಟೆ ನೋಯ್ತಿತ್ತು, ಮೈಕೈಯೆಲ್ಲಾ ನಡುಗುತ್ತಿತ್ತು, ರಕ್ತ ಹರಿದು ಹರಿದು ತಲೆ ಸುತ್ತು ಬರ್ತಿತ್ತು. ನನ್ನ ಕಾಲುಗಳು ನೋಡಣ್ಣಾ ತರಿದು ಹೋಗಿದೆ. ಬಾಯಲ್ಲಿ ಪ್ಲೀಸ್ ಬಿಟ್ಬಿಡಿ ಅಂತ ಹೇಳಲು ಅದೆಷ್ಟೋ ಪ್ರಯತ್ನಿಸಿದೆ, ಪದಗಳೇ ಗಂಟಲಿಂದ ಹೊರಗಡೆ ಬರಲಿಲ್ಲಣ್ಣ ಎಂದು ಇನ್ನೂ ಏನೋ ಹೇಳುತ್ತಿದ್ದಳು ಹೊಟ್ಟೆಯಿಂದೆಲ್ಲಾ ಬೆಳಗ್ಗಿನ ಇಡ್ಲಿ ಹೊರಗೆ ಬಂದಂಗಾಯ್ತು. ಅಯ್ಯಯ್ಯೋ ಬೇಡಮ್ಮಾ, ತಾಯಿ ದಯವಿಟ್ಟು ನನ್ನಲ್ಲಿ ಇಷ್ಟು ಶಕ್ತಿಯಿಲ್ಲ ಸತ್ತೋಗ್ತೀನಿ ಇಲ್ಲೇ ಪ್ಲೀಸ್ ಏನೂ ಹೇಳಬೇಡ ಎಂದು ನನಗೇ ಗೊತ್ತಿಲ್ಲದೇ ಗಟ್ಟಿಯಾಗಿ ತಬ್ಬಿ ತಲೇ ಕೂದಲು ನೇವರಿಸಿದೆ. ನಡುಗುತ್ತಲೇ ಇದ್ದಳು, ಅವಳ ದೇಹದ ಕಂಪನ ರಿಕ್ಟರ್ ಮಾಪನದಲ್ಲಿ ಬಹುಶಃ ಏಳರ ಮೇಲೇ ಇದ್ದೀತು, ಭೂಮಿಯ ಪ್ರಳಯಕ್ಕೆ ಸಾಕಷ್ಟು. ತಬ್ಬಿಕೊಂಡವಳ ಗಟ್ಟಿಯಾಗಿ ಕಂಪನ ಕಡಿಮೆಯಾದೀತೇನೋ ಎಂದು ಕಾದೆ, ಬರೀತೀಯಲ್ಲಣ್ಣ ನನ್ನ ಬಗ್ಗೆ, ಓದ್ತಾರಲ್ಲಣ್ಣ ನನ್ನ ಬಗ್ಗೆ ಎಂದು ಕಿವಿಯ ಬಳಿಯೇ ಸೂಕ್ಷ್ಮವಾಗಿ ಉಸುರಿದಳು. ಧಿಡೀರನೆ ಕುಳಿತಿದ್ದ ಚೇರಿನಿಂದ ಬಿದ್ದೆ. ಸುತ್ತಲಿದ್ದವರು ಚಕಿತರಾಗಿ ನನ್ನನ್ನೇ ನೋಡುತ್ತಿದ್ದರು. ನಿದ್ರೆ ಮಾಡುತ್ತಿದ್ದೆನೆಂದು ತಿಳಿದರೋ ಏನೋ ಬಹುಶಃ, ಅವರುಗಳ ಕಣ್ಣಿನಲ್ಲಿದ್ದ ಅರ್ಧ ನಗು ಅರ್ಧ ಆಶ್ಚರ್ಯವನ್ನು ಎದುರಿಸಲಾಗದೇ ಹಿಂದಿರುಗದೇ ಎದ್ದು ಹೊರನಡೆದೆ.

ಆಫೀಸಿನಲ್ಲಿದ್ದವರೆಲ್ಲಾ ನನ್ನ ಕಡೆಗೇ ಕೈತೋರಿಸಿ ಊರಗಲದ ಬಾಯನ್ನು ತೆರೆದು ಹೋಹಹಹಹಹ ಎಂದು ನಗುತ್ತಿದ್ದಂತೆ, ನಾನು ಮಧ್ಯದಲ್ಲಿ ತಲೆ ಒತ್ತಿ ಹಿಡಿದು ಅದೇ ಚೇರ್ ಮೇಲೆಯೇ ಕುಳಿತಿದ್ದಂತೆ ಕಣ್ಮುಂದೆ ಬರುತ್ತಲಿತ್ತು. ವಿಷ ಕುಡಿದವನು, ಮಾನ ಪ್ರಾಣ ಕಳೆದುಕೊಂಡವಳ ಪ್ರಶ್ನೆಗಳು ಕಾಡುತ್ತಿದ್ದವು. ನಡೆಯುತ್ತಲೇ ಇದ್ದೆ. ಅವಳ ದೇಹದ ಕಂಪನವನ್ನು ನನ್ನ ಹೃದಯಕ್ಕೆ ಸ್ಥಳಾಂತರಿಸಿದ್ದಳು ಅವಳು. ಎದೆ ಹೊಡೆದುಕೊಂಡಷ್ಟೂ ಬೆವರು, ಬೆವರಿನ ಜೊತೆಯಲ್ಲಿ ಕಣ್ಣು ತೇವಗೊಳ್ಳುತ್ತಲೇ ಇತ್ತು.  ಕಟ್ಟಡದ ಹೊರಗಡೆಯೇ ಸಿಗರೇಟು ಸೇದುತ್ತಾ ನಿಂತಿದ್ದವನೊಬ್ಬ ನನ್ನನ್ನು ತಡೆದು ಏನ್ ಸಾರ್ ಎಲ್ಲಿಗೆ ಎಂದ. ಎದೆ ಒಮ್ಮೆ ನಿಂತೇ ಹೋಗಿತ್ತು. ಇವನಾರಪ್ಪಾ ಮತ್ತೊಬ್ಬ ಎಂದುಕೊಂಡೆ ನೋಡಿದರೆ ಗೊತ್ತಿರುವ ಮುಖವೇ. ಯಾರೆಂದು ಅರ್ಥವಾಗುವಷ್ಟರಲ್ಲಿ ಕೊಂಚ ಹೊತ್ತೇ ಹಿಡಿಯಿತು. ತಲೆ ಬಗ್ಗಿಸಿಕೊಂಡು ಕಣ್ಣೊರೆಸಿಕೊಂಡೆ, ಮುಖ ಒರೆಸಿಕೊಳ್ಳುತ್ತಾ ಓಹೋ ನೀವಾ, ಕ್ಷಮಿಸಿ ಏನೋ ಬೇರೆ ಆಲೋಚನೆಯಲ್ಲಿದ್ದೆ ಸಿಗ್ತೇನೆ ಆಮೇಲೆ ಎಂದು ಕಳಚಿಕೊಳ್ಳಲು ಪ್ರಯತ್ನಿಸಿದೆ. ಅರೆ ಸಾರ್ ಇರೀ ಸಾರ್, ಒಂದು ಕಥೆ ಹೇಳ್ತೀನಿ ಕೇಳಿ, ನಿಮ್ಮ ಕಥೆ ಬರಿಯಲಿಕ್ಕೆ ಆಗುತ್ತೆ, ಅದೇ ನನ್ನ ಫ್ರೆಂಡು ಮದುವೆ ಗೊತ್ತಾಗಿದೆ ಅಂತ ಹೇಳ್ತಿದ್ದೆನಲ್ಲ, ಅವನ ಮದುವೆ ನಿಂತು ಹೋಯಿತೆಂದು ಕೂಡ ಹೇಳಿದ್ನಲ್ಲಾ ಕಾರಣವೇನಂತೆ ಗೊತ್ತಾ ಫೇಸ್ಬುಕ್ಕಿನಿಂದ ಹ ಹ ಹ ಎಂದು ನಕ್ಕ. ಆ ಬಾಯೊಳಗೇ ಎಲ್ಲಿ ಹೋಗಿಬಿಡುವೆನೋ ಎಂಬಷ್ಟು ಭಯವಾಯ್ತು, ಅವನು ಹಿಡಿದಿದ್ದ ಕೈಯನ್ನು ಕೊಸರಿಕೊಂಡು ಹಿಂದೆ ಬಂದೆ ಈ ವಿಷಯ ಇವನು ನನಗೆ ಹೇಳಿದ್ದು ನೆನ್ನೆ ಫೋನಿನಲ್ಲಿ ಎಂಬುದು ನೆನಪಾಯ್ತು, ಎದುರಿಗಿದ್ದವನು ಸಿಗರೇಟು, ಸಿಗರೇಟಿನ ಹೊಗೆಯ ಸಮೇತ ಆವಿಯಾಗಿ ಹೋದ. ಇನ್ನೂ ಜೋರಾಗಿ ಓಡಿದೆ ರಸ್ತೆಯ ತುಂಬೆಲ್ಲಾ ಇದ್ದ ಜನರು ನನ್ನನ್ನೇ ಕೆಕ್ಕರಿಸಿ ನೋಡುತ್ತಿದ್ದ ಹಾಗೆ ಭಾಸವಾಗುತ್ತಿತ್ತು. ಬಾಲಕೃಷ್ಣನ ವೇಷತೊಡಿಸಿ ಮಗನನ್ನು ಹಿಡಿದು ನಡೆದುಬರುತ್ತಿದ್ದ ಬುರ್ಖಾಧಾರಿ ಹೆಂಗಸು ನನ್ನ ಕಡೆಗೇ ಕೈಬೀಸಿ ಕರೆಯುತ್ತಿದ್ದಳು. ಅವಳ ವಿರುದ್ಧ ದಿಕ್ಕಿಗೆ ಓಡಿದೆ. ರಸ್ತೆಯಲ್ಲಿ ಬಾಯ್ತುಂಬಾ ಇದ್ದ  ತಾಂಬೂಲವನ್ನು ಉಗಿದವನೊಬ್ಬ ಕೆಕ್ಕರಿಸಿ ನನ್ನನ್ನೇ ನೋಡಿ ನಕ್ಕ, ಕಪಾಳೆಗೆ ಹೊಡೆಯುವ ಮನಸ್ಸಾಯ್ತು, ಓಡಿದೆ. ಹೊಲಿದಾಗಿನಿಂದ ಬಹುಶಃ ನೀರೇ ತೋರಿಸಿರದ, ಅವನಿಗೆರಡರಷ್ಟು ಸೈಜಿನ ಪ್ಯಾಂಟನ್ನು ಕೈಯಲ್ಲಿ ಹಿಡಿದು ಅದೇ ರಸ್ತೆಯಲ್ಲಿ ಮಾಮೂಲಿನಂತೆ ಒಂದು ಬನ್ನು, ಒಂದು ಪುಟ್ಟ ಕವರಿನಲ್ಲಿ ಪಾಪ್ ಕಾರ್ನ್ ಹಿಡಿದು ಅದೇ ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡುತ್ತಿದ್ದವನು ಇವತ್ತು ಬಾ ಬಾ ಎಂದು ನನ್ನನ್ನೇ ಕರೆಯುತ್ತಿದ್ದ, ಹೇ ನನ್ನ ಕಥೆ ಕೇಳೋ ಎಂದು ಕೂಗುತ್ತಲೇ ಇದ್ದ, ಓಡಿದೆ.



ಎಷ್ಟು ದೂರ ಎಷ್ಟು ಜನರಿಂದ, ಎಷ್ಟು ಜನರ ಕಣ್ಣುಗಳಿಂದ, ಎಷ್ಟು ಜನರ ಪರಿಸ್ಥಿತಿಗಳು ಹೇಳುತ್ತಿದ್ದ ಕಥೆಗಳಿಂದ ತಪ್ಪಿಸಿಕೊಂಡು ಓಡಿದ್ದೆನೋ ಗೊತ್ತಿಲ್ಲ. ಮೊದಲು ಮನೆಗೆ ಹೋಗಿ ಸೇರಿಕೊಂಡುಬಿಡಬೇಕು ಯಾರ ಕಾಟವೂ ಇರುವುದಿಲ್ಲ ನಾನು ನನ್ನ ಪುಸ್ತಕವಷ್ಟೇ ಅಲ್ಲಿ ಎಂದು ಬಸ್ ಸ್ಟಾಂಡಿನೆಡೆಗೆ ಹೋದೆ. ಕಾಲುಂಗುರ ಹಾಕಿರುವ ಅಪರೂಪಕ್ಕೆ ಸುಸ್ತಾಗಿರುತ್ತಿದ್ದ ನನ್ನ ಚೆಲುವೆ ಅವಳ ಸೆಕ್ಯುರಿಟಿ ಧಡೂತಿ ಆಂಟಿ, ಸಿಮೆಂಟು ಮೆತ್ತಿಕೊಂಡಿದ್ದವರು, ಊರುಗೋಲು ಹಿಡಿದಿದ್ದವರು, ಸಜ್ಞಾ ಭಾಷೆಯಲ್ಲಿ ಮಾತನಾಡುತ್ತಿದ್ದ ಇಬ್ಬರು ಸಮವಸ್ತ್ರ ಶಾಲಾ ಹುಡುಗರು, ಇನ್ನೂ ಎಷ್ಟೋ ಜನರು ಒಟ್ಟಿಗೆ ನನ್ನನ್ನು ಮುತ್ತಿಗೆ ಹಾಕಿದರು. ಸುತ್ತಲೂ ಜನ. ಇಷ್ಟು ಹೊತ್ತೂ ನಾನು ಸುಮ್ಮನೇ ಓಡುತ್ತಿದ್ದೆ. ಅಯ್ಯಯ್ಯೋ ಬಿಟ್ಟುಬಿಡಿ ನಾನು ಬರೆಯುವುದಿಲ್ಲ. ನಿಮ್ಮಾರ ಕಥೆಯನ್ನೂ ನಾನು ಬರೆಯುವುದಿಲ್ಲ ಯಾಕೆ ನನ್ನ ಬೆನ್ನ ಹಿಂದೆ ಬಿದ್ದಿದ್ದೀರ ಬಿಟ್ಟುಬಿಡಿ ನನ್ನನ್ನ ಎಂದು ಕಾಲುಗಳಿಗೆ ಬಿದ್ದೆ. ಮುಂದೆ ಮುಂದೆ ಬರುತ್ತಲೇ ಇದ್ದರು, ತುಳಿದೇಬಿಡುವರೆನ್ನುವ ಭಯದಲ್ಲಿ ಎಲ್ಲರನ್ನೂ ನೂಕಿ ಓಡಿದೆ. ದೇವಸ್ಥಾನದ ಮೇಲೆ ಹಾರುತ್ತಿದ್ದ ಗರುಡ ಇಳಿದದ್ದೇ ನನ್ನ ಹೆಗಲ ಮೇಲೆಯೇ ಕುಳಿತಿತು, ವಾಹನಕ್ಕೆ ಸಿಕ್ಕು ಕಾಲು ಕುಂಟಾಗಿದ್ದ ಬಾಲವಿಲ್ಲದ ನಾಯಿ ನನ್ನ ಮೇಲೆ ಹಾರಿ ಬನ್ನಿಗಂಟಿಕೊಂಡಿತು, ತುಂಬಿ  ಹರಿಯುತ್ತಿದ್ದ ಒಳಚರಂಡಿ ನೀರು ಮೈ ಪೂರಾ ತೊಯ್ದು ತೊಪ್ಪೆಯಾಗಿಸಿತು. ಹಿಂದೆ ನೂರಾರು ಸಾವಿರಾರು ಜನ ಓಡಿಬರುತ್ತಲೇ ಇದ್ದರು. ರಸ್ತೆಯ ಇಕ್ಕೆಲದಲ್ಲಿದ್ದ ಇನ್ನೊಂದಷ್ಟು ತರಕಾರಿ ಮಾರುವವರು, ಬಳೆ ಕೊಳ್ಳುತ್ತಿದ್ದವರು, ಹೂವ ಕೈಯಲ್ಲಿ ಹಿಡಿದಿದ್ದ ಅಪರೂಪದ ಹೂವಿನ ಚಿತ್ರದ ಲಂಗದ, ತಲೆಗೆ ಎಣ್ಣೆ ಸುರಿದಿದ್ದ ಹುಡುಗಿ ಹಿಡಿಯಲು ಓಡಿಬರುತ್ತಿದ್ದರು. ರಸ್ತೆ ನೋಡಿದರೆ, ರಸ್ತೆಗಳೆಲ್ಲಾ ಗುಂಡಿಗಳಿಂದಲೇ ತುಂಬಿಹೋಗಿತ್ತು ಪಕ್ಕದಲ್ಲೇ ರಾರಾಜಿಸುತ್ತಿದ್ದ ಪುಡಾರಿಯೊಬ್ಬ ಫೋಟೋದೊಳಗಿಂದ ಕೈ ಮುಗಿದುಕೊಂಡೇ ಓಡಿಬಂದ.

ರಸ್ತೆಯಲ್ಲಿದ್ದ ಟ್ರಾಫಿಕ್ಕಿನಲ್ಲಿ ಸಿಕ್ಕಿಬಿದ್ದಿದ್ದ ಆಂಬುಲೆನ್ಸು, ಚಿಲ್ಲರೆ ಭಿಕ್ಷೆ ಬೇಡುತ್ತಿದ್ದ ಖಾಕಿಯವರು, ಕಂಡಕ್ಟರಿಂದ ರೋಸಿ ಹೋಗಿದ್ದ ಪಾಸೆಂಜರುಗಳು, ಜನರಿಂದ ತಾಳ್ಮೆ ಕಳೆದುಕೊಂಡಿದ್ದ ಡ್ರೈವರು, ಸಿಕ್ಕ ಸಿಕ್ಕಲ್ಲಿ ನುಗ್ಗುತ್ತಿದ್ದ ಆಟೋ ರಾಜ, ಮಿಡ್ಡಿ ಚೆಡ್ಡಿ ಹಾಕಿದ್ದ ಕಾಲೇಜು ಕನ್ಯೆಯರು ಎಲ್ಲರೂ ತಮ್ಮ ತಮ್ಮ ಕೈಲಿದ್ದದ್ದನ್ನೆಲ್ಲಾ ನನ್ನೆಡೆಗೆ ಎಸೆಯಲು ಶುರುಮಾಡಿದ್ದರು. ಓಡಿ ಓಡಿ ಓಡಿ ಮನೆ ಸೇರಿದೆ.

ವಿಷ ಕುಡಿದವನು ಇನ್ನೂ ಮನೆಯಲ್ಲೇ ಇದ್ದ. ಹತ್ತಿರ ಬರಬೇಡ ಬಂದರೆ, ಬಂದರೆ, ಬಂದರೆ, ಏನು ಮಾಡಬಹುದು ನಾನು? ಕೊಂದು ಹಾಕುತ್ತೇನೆ. ಹಾ ಕೊಂದು ಹಾಕುತ್ತೇನೆಂದೆ. ಆಗಲೇ ಕೊಂದಿದ್ದಾರೆ ಸಮಾಜ ಒಂದು ಸಲ, ನಾ ಕುಡಿದ ವಿಷ ಒಂದು ಸಲ ಎಂದ. ನಿನ್ನ ಭಾಷಣ ನನಗೆ ಬೇಕಾಗಿಲ್ಲ, ತೊಲಗು ಇಲ್ಲಿಂದ ನಾನು ಕಥೆ ಬರೆಯುವುದನ್ನ ಬಿಟ್ಟುಬಿಟ್ಟಿದ್ದೇನೆ ಎಂದೆ. ಸಾಧ್ಯಾನಾ ಅದು ನಿನ್ನ ಕೈಯಲ್ಲಿ ಎಂದು ಕರ್ಕಶವಾಗಿ ಗಹಗಹಿಸಿ ನಕ್ಕ. ಥು ನಿನ್ನ, ನಗಬೇಡ ಈಗ ಎಂದು ಹೊರಗೆ ಆಗುತ್ತಿದ್ದ ಗದ್ದಲವನ್ನು ಗಮನಿಸಿ ಹೊರಗೋಗಲು ಹೆದರಿ ಕಿಟಕಿಯಿಂದ ಹೊರನೋಡಿದೆ, ಅಕ್ಕ ಪಕ್ಕದ ಬಾಯಿಬಡಕಿ ಆಂಟಿಯರಿಂದ ಸೇರಿಸಿ ನಾ ಕಂಡಿದ್ದ ಎಲ್ಲ ವಿಚಿತ್ರಾಕೃತಿಗಳೂ ಇದ್ದವು ಆ ಯಾರೊಂದಿಗೂ ಮಾತನಾಡದ ತನ್ನಷ್ಟಕ್ಕೇ ಮಾತಾಡಿಕೊಂಡಿರುತ್ತಿದ್ದ ಪ್ಯಾಂಟು ಕೈಯಲ್ಲಿ ಹಿಡಿದಿದ್ದ ಹುಚ್ಚನೂ ಸಹ ಬನ್ನು ಗಬಗಬನೆ ಕಚ್ಚಿ ತಿನ್ನುತ್ತಾ ನಿಂತಿದ್ದ. ಎಲ್ಲ ಕಿಟಕಿಗಳನ್ನು, ಬಾಗಿಲನ್ನು, ಪರದೆಗಳನ್ನು ಮುಚ್ಚಿದೆ. ಈ ವಿಷ ಕುಡಿದವನನ್ನು ಹೊರಗೆ ದಬ್ಬಬೇಕಿತ್ತು. ಇಲ್ಲಾ ಇವನು ಹೋಗುವ ಆಸಾಮಿಯಲ್ಲ, ನಾನೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳಬೇಕೆಂದು ತೀರ್ಮಾನಿಸಿ ಹೊರಟೆ. ಎದುರಿಗೆ ಜಿಗಿದು ನಾನು ಹೆಂಗೆ ಸತ್ತೆ ಗೊತ್ತಾ ಎಂದ. ನಿನ್ನ ಸಾವು ಕಟ್ಟಿಕೊಂಡು ನಾನೇನು ಸಾಯಲಾ ಎಂದೆ, ಇದ್ದ ಅಷ್ಟೂ ಉರಿಯನ್ನು ಹೊರಗೆಡವಿ. ನಕ್ಕ, ಧರಿದ್ರವಾಗಿ ನಕ್ಕ. ಹೊರಗೆ ಗಲಾಟೆ ಶುರುವಾಗಿತ್ತು. ಯಾರೋ ಕಿಟಕಿಯ ಗಾಜಿಗೆ ಕಲ್ಲು ಎಸೆಯುತ್ತಿದ್ದರು. ಅಯ್ಯೋ ಏನು ಮಾಡುವುದೀಗ ಗೊತ್ತಾಗದೇ ಚಡಪಡಿಸುತ್ತಾ ಅಂಡು ಸುಟ್ಟ ಬೆಕ್ಕಿನಂತಾದೆ. ಯಾರೋ ಬಾಗಿಲು ಬಡಿದರು. ದಬ ದಬ ದಬ ಒಳ್ಳೇ ಢೋಲು ಹೊಡೆದ ಹಾಗೆ ಬಡಿಯುತ್ತಿದ್ದರು. ಯಾರು ಎಂದು ಕೇಳಬೇಕೆನಿಸಿತು. ಇಲ್ಲಾ ಪ್ರತಿಕ್ರಿಯಿಸುವುದಿಲ್ಲ ಎಂದು ತೀರ್ಮಾನಿಸಿದ್ದೆ. ಫೋನು ಹೊಡೆದುಕೊಳ್ಳಲು ಶುರುವಾಯ್ತು. ಸ್ನೇಹಿತನೆಂದು ಗೊತ್ತಾಗಿ ಆಪದ್ಬಾಂಧವ ಎಂದು ಸ್ವೀಕರಿಸಿದೆ, ನನಗೇ ಗೊತ್ತಿಲ್ಲದೇ ನನ್ನ ಕಥೆ ಬೆರೆದೆಯಲ್ಲಾ ಅನುಭವಿಸು ಮಗನೇ ಎಂದು ಗಹಗಹಿಸಿ ನಕ್ಕು ಫೋನಿಟ್ಟ. ಮೊಬೈಲನ್ನು ತೆಗೆದು ಗೋಡೆಗೆ ಅಪ್ಪಳಿಸಿದೆ. ಕಿಟಕಿ ಗಾಜುಗಳು ಒಂದರ ಮೇಲೊಂದು ಒಡೆದು ಹೋಗುತ್ತಲೇ ಇತ್ತು. ಕಲ್ಲುಗಳು ಕಿಟಕಿಗಳ ಸರಳನ್ನು ದಾಟಿ, ಪರದೆಗಳನ್ನು ಹರಿದು ಒಳಗೆ ಬೀಳುತ್ತಿದ್ದವು, ವಿಷಕಂಠ ನಾಲಿಗೆ ಹೊರಗಾಕಿ ನಗುತ್ತಲೇ ಇದ್ದ. ಬಾಗಿಲು ಬಡಿಯುತ್ತಲೇ ಇತ್ತು, ಮೊಬೈಲ್ ಚೂರು ಚೂರಾದರೂ ಹೊಡೆದುಕೊಳ್ಳುತ್ತಲೇ ಇತ್ತು, ಹೊರಗಿದ್ದ ಜನ ಕೂಗುತ್ತಲೇ ಇದ್ದರು. ರೂಮಿನಲ್ಲಿದ್ದ ಅಷ್ಟೂ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು. ಇಡೀ ಮನೆ ಗಿರಗಿರಗಿರಗಿರಗಿರಗಿರಗಿರಗಿರಗಿರನೆ ತಿರುಗಲು ಶುರುಮಾಡಿತು. ಮನೆಯಲ್ಲಿದ್ದ ಸಮಸ್ತ ಸಾಮಾನು, ಪುಸ್ತಕ, ಪೇಪರು, ಪೆನ್ನು ಹಾರಾಡುತ್ತಿದ್ದವು. ನಲ್ಲಿಗಳು ಪೈಪುಗಳಿಂದ ನೀರು ಚಿಲ್ಲನೆ ಸುರಿಯುತ್ತಿದ್ದವು, ಬಲ್ಬುಗಳು ಕಣ್ಣುಕುಕ್ಕುವಹಾಗೆ ಹೊಡೆದುಕೊಳ್ಳುತ್ತಿದ್ದವು. ಸುತ್ತಿ ಸುತ್ತಿ ಸುತ್ತಿ… ಬಿದ್ದೆ!








+ನೀ.ಮ. ಹೇಮಂತ್

6 comments:

  1. ಕಥೆ ತುಂಬಾ ಚೆನ್ನಾಗಿದೆ.

    ReplyDelete
    Replies
    1. ವಾವ್ ಧನ್ಯವಾದಗಳು "ಮನಸು" ಇಟ್ಟು ಓದಿ, ಮೆಚ್ಚಿದ್ದಕ್ಕೆ :-)

      Delete
  2. ಕಥೆ ಅದ್ಭುತವಾಗಿದೆ.

    ReplyDelete
    Replies
    1. ವಂದನೆಗಳು ರೀ.. ಓದಿ ಮೆಚ್ಚಿದ್ದಕ್ಕೆ.. :-)

      Delete
  3. ಅಣ್ಣಾ, ಪರ್ಮಿಷನ್ ಕೊಟ್ಟರೆ ನಿನ್ನ ಕಥೆಗಳನ್ನೆಲ್ಲಾ ನಾನೇ ಪಬ್ಲಿಷ್ ಮಾಡೋಣ ಅನಿಸ್ತಾ ಇದೆ.. ಹೆಂಗ್ ಬರೀತೀಯ ಗುರು? ಓ ಮೈ ಗಾಡ್ fantastic..

    ReplyDelete
  4. ನಮ್ಮ ತಲೆನೂ ಗರಗರಗರನೇ ತಿರುಗಲು ಶುರುವಾಯಿತು. ಅದೇನು ತಲೆನಪ್ಪಾ ನಿಮ್ಮದು.ಅದ್ಭುತ.

    ReplyDelete