ಓದಿ ಓಡಿದವರು!

Wednesday, 8 February 2012

ಸವದಿ ಸ್ಥಾನದಿ ನನ್ನ ಸಮರ್ಥನೆಯ ದುರ್ಬುದ್ಧಿ!

ಮುನ್ನುಡಿ: ಉದ್ರೇಕಕೊಳಗಾಗದೆ ಶಾಂತವಾಗಿ ಓದುವವರಿಗೆ ಮಾತ್ರ!


ಏನ್ ಹೇಳೋದಕ್ಕೆ ಇಷ್ಟಪಡ್ತೀರಾ ಈ ಸಮಯದಲ್ಲಿ. ಮೀಡಿಯಾದವರ ಪ್ರಶ್ನೆ.
ಏನ್ ಹೇಳಲಿ ಇಂಥ ಸಂದರ್ಭದಲ್ಲಿ, ನನ್ನ ತಪ್ಪು ಇಷ್ಟು ದೊಡ್ಡದೆಂದು ನನಗೆ ಅನ್ನಿಸುತ್ತಿಲ್ಲ.
ನೀವು ಜನಪ್ರತಿನಿಧಿಯಾಗಿದ್ದುಕೊಂಡು ಈ ರೀತಿ ಮಾಡಿದ್ದೂ ಅಲ್ಲದೇ ನನ್ನ ತಪ್ಪು ಅಷ್ಟು ದೊಡ್ಡದಲ್ಲ ಎಂದು ಹೇಳುವುದು ವಿಷಾದದ ಸಂಗತಿಯಲ್ಲವೇ?
ಇಲ್ಲಾ ನನ್ನ ಬಳಿ ಸಮರ್ಥಿಸಿಕೊಳ್ಳಲು ಕಾರಣಗಳಿವೆ.
ನೀವು ಅಸೆಂಬ್ಲಿಯಲ್ಲಿ ಕೂತು ನೀಲಿ ಚಿತ್ರ ನೋಡುವ ಅಪರಾಧ ಎಸಗಿದ್ದೀರೆಂದು ಸಾಕ್ಷಿ ಸಮೇತ ವರದಿಯಾಗಿದೆ ಇದಕ್ಕೆ ಏನ್ ಹೇಳ್ತೀರಿ?
ಇದರಲ್ಲಿ ಅಪರಾಧ ಯಾವುದು. ಸದನದಲ್ಲಿ ಕೂತು ನೋಡಿದ್ದೋ? ಅಥವಾ ನೀಲಿ ಚಿತ್ರ ನೋಡಿದ್ದೋ?
ಎರಡೂ ಅಪರಾಧಗಳೇ ಅಲ್ಲವೇ?
ನನಗೆ ಹಾಗೆನಿಸುವುದಿಲ್ಲ. ಸದನದಲ್ಲಿ ಕಲಾಪ ನಡೆಯುವಾಗ ನೋಡಿದ್ದು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ. ಆದರೆ ಅದಕ್ಕಾಗಿ ಇಷ್ಟು ದೊಡ್ಡ ಇಶ್ಶ್ಯು ಮಾಡುವುದು ಯಾವ ನ್ಯಾಯ. ಸದನದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ನಾನು ಬೇರೆ ಕಡೆ ಗಮನ ಹರಿಸಿದ್ದು ನನ್ನ ತಪ್ಪೇ ಅದಕ್ಕಾಗಿ ನಾನು ಜನರಲ್ಲಿ ಮತ್ತು ಎಲ್ಲ ಸಂಬಂಧಪಟ್ಟವರ ಬಳಿ ಕ್ಷಮಾ ಯಾಚಿಸುತ್ತೇನೆ ಮತ್ತು ಇನ್ನು ಮುಂದೆ ಈ ರೀತಿ ತಪ್ಪೆಸಗದಂತೆ ಎಚ್ಚರವಹಿಸುತ್ತೇನೆ. ಆದರೆ ಈ ರೀತಿ ಕೇವಲ ನಾನು ಮಾತ್ರವಲ್ಲ ಚರ್ಚೆ ನಡೆಯುವಂತ ಸಂದರ್ಭದಲ್ಲಿ ನಮ್ಮ ಮಾನ್ಯ ಮುಖ್ಯಮಂತ್ರಿಗಳೂ ಸಹ ನಿದ್ರೆ ಮಾಡುತ್ತಿದ್ದುದುಂಟು, ಕೆಲವು ಕಲಾಪಗಳು ನಡೆಯದಂತೆ ಮಂತ್ರಿಗಳು ಗಲಾಟೆ ಎಬ್ಬಿಸಿ ತಡೆ ಹಾಕಿದ್ದುಂಟು, ಕೆಲವರು ಮಾತನಾಡುವಾಗ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿದ್ದುಂಟು, ಇನ್ನೊಮ್ಮೆ ಕುಸ್ತಿಯ ಅಖಾಡಕ್ಕೆ ಇಳಿದಿದ್ದುಂಟು, ಎಷ್ಟೋ ಜನ ಕಲಾಪಗಳಿಗೆ ಬರದೇ ಇರುವ ಉದಾಹರಣೆ ಎಷ್ಟು ಬೇಕು ನಿಮಗೆ, ಹೀಗೇ ಹೇಳುತ್ತಾ ಹೋದರೆ ಸಾವಿರ ಘಟನೆಗಳಿವೆ. ಅದಾವುದೂ ಇಷ್ಟು ದೊಡ್ಡ ಇಶ್ಶ್ಯೂ ಅಗದಿರುವುದು   ಈಗ್ಯಾಕೆ ನೀವು ಮೀಡಿಯಾದವರು ಎಳೆದಾಡುತ್ತಿದ್ದೀರ ಮತ್ತು ಜನತೆ ಯಾಕೆ ಇಷ್ಟು ಆಕ್ರೋಶ ವ್ಯಕ್ತ ಪಡಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ ನನಗೆ.

ಇನ್ನು ನೀಲಿ ಚಿತ್ರ ನೋಡಿದ್ದರ ಬಗ್ಗೆ, ನನಗೇನೂ ಅದು ತಪ್ಪೆಂದು ಅನಿಸುತ್ತಿಲ್ಲ. ಕಾಲೇಜ್ ಹುಡುಗರೇ ನೋಡುವಾಗ, ಪ್ರಬುದ್ಧವಾಗಿರುವ ನಾನು ನೋಡಿದರೆ ತಪ್ಪೇನು. ಅಷ್ಟಕ್ಕೂ ‘ನೀಲಿ’ ಚಿತ್ರ ಎಂದು ಕೀಳಾಗಿ ಹೇಳುವಹಾಗೆ ಯಾಕೆ ಬ್ರಾಂಡ್ ಮಾಡಲಾಗುತ್ತಿದೆ? ಸಾಂಸಾರಿಕ ಚಿತ್ರ, ಪ್ರೇಮಕಥೆಯುಳ್ಳ ಚಿತ್ರ, action oriented ಚಿತ್ರ, ಫಾಂಟಸಿ ಚಿತ್ರ, ಕಲಾತ್ಮಕ ಚಿತ್ರಗಳಾಂತೆಯೇ ಸೆಕ್ಸ್ ಓರಿಯೆಂಟೆಡ್ ಚಿತ್ರಗಳು, ಅಷ್ಟೇ! ಎಲ್ಲರೂ ಎಲ್ಲ ಚಿತ್ರಗಳನ್ನೂ ನೋಡಲಾಗುವುದಿಲ್ಲ. ಆದರೆ ಪ್ರತಿಯೊಂದು ರೀತಿಯ ಚಿತ್ರಕ್ಕೂ ಅದರದ್ದೇ ಆದ ಪ್ರೇಕ್ಷಕರು ಇದ್ದೇ ಇದ್ದಾರೆ ಅದಕ್ಕಾಗಿಯೇ ಎಲ್ಲ ರೀತಿಯ ಚಿತ್ರಗಳೂ ನಿರ್ಮಾಣವಾಗುತ್ತಿವೆ ನೆನಪಿರಲಿ.
ನಾನು ಚಿತ್ರ ನೋಡಿದ್ದು ತಪ್ಪಲ್ಲ ಆದರೆ ನೋಡಿದ ಸ್ಥಳ ಮತ್ತು ಸಮಯ ಸರಿ ಇರಲಿಲ್ಲ ಅದು ನಾನೂ ಸಹ ಒಪ್ಪುತ್ತೇನೆ. ನನ್ನ ಬೇಜವಾಬ್ದಾರಿ ತನದ ತಪ್ಪಿಗೆ, ಕರ್ತವ್ಯ ಲೋಪಕ್ಕೆ ನನಗೆ ತಕ್ಕ ಶಿಕ್ಷೆಗೆ ಸಿದ್ಧನಿದ್ದೇನೆ. ಆದರೆ ಅಪಪ್ರಚಾರ ಮಾಡುತ್ತಾ, ಬೇಕೆಂದೇ ಹೈಪ್ ದಯವಿಟ್ಟೂ ಸೃಷ್ಟಿಸಬೇಡಿ ಅದಕ್ಕೆ ಅರ್ಥವಿಲ್ಲ. ಧನ್ಯವಾದಗಳು

ಹೀಗೆ ಮನ ಬಿಚ್ಚಿ ಇರುವ ಸತ್ಯವನ್ನು ವೈಚಾರಿಕವಾಗಿ ಹೇಳಿ ಕತೆಯನ್ನು ಮುಗಿಸಬಹುದಿತ್ತೇನೋ. ಆದರೆ ಕೇಳುವ ವ್ಯವಧಾನ ಮೀಡಿಯಾದವರಿಗಾಗಲಿ, ಪ್ರತಿಭಟನೆ ಮಾಡುತಿದ್ದ ಪ್ರಜೆಗಳಿಗಾಗಲಿ ಇದ್ದಂತೆ ಕಾಣಲಿಲ್ಲ. ವಿಷಯವನ್ನು ಸಾಧಾರಣವಾಗಿ ಮುಗಿಸುವ ಇಚ್ಛೆ ಯಾರಿಗೂ ಇದ್ದಂತೆಯೂ ಕಾಣಲಿಲ್ಲ. ಎಲ್ಲಕ್ಕಿಂತ ಮೇಲಾಗಿ, ವೈಚಾರಿಕವಾಗಿ ಮಾತನಾಡುವ ಸಾಮರ್ಥ್ಯ ನಾಯಕರಿಗೆ ಇದ್ದಂತೆ ಮೊದಲೇ ಕಾಣಲಿಲ್ಲ. ಒಂದು ಚಿಕ್ಕ ತಪ್ಪನ್ನು ಮುಚ್ಚಿಹಾಕುವುದಕ್ಕೆ, ಮತ್ತೊಂದು ಸುಳ್ಳಿನ ಮೊರೆ ಹೊಕ್ಕು ಇನ್ನೂ ಗೊಂದಲದಲ್ಲೇ ಸಿಲುಕಿಕೊಂಡಿದ್ದರು.  ತಪ್ಪು ಮಾಡುವುದು ಮಾನವನ ಜನ್ಮಸಿದ್ದ ಹಕ್ಕು. ತಿದ್ದಿ ನಡೆಯುವುದೂ ಸಹ. ಒಪ್ಪಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಮತ್ತು ಒಪ್ಪಿಕೊಳ್ಳಲು ಧೈರ್ಯ ಬೇಕು. ಧೈರ್ಯವಿರುವಂತವರು ಸ್ಥಾನವನ್ನು ಅಲಂಕರಿಸಬೇಕು. ಒಬ್ಬ ಬಸ್ ಡ್ರೈವರ್ಗೂ ಸಹ ೮ ಬಾರಿ ಎಸಗಬಹುದಾದ ತಪ್ಪಿಗೆ ಕ್ಷಮೆಯಿದೆ. ತಪು ಎಲ್ಲರಿಂದಲೂ ಆಗುತ್ತದೆ. ಆದರೆ ಡ್ರೈವರ್ ತನ್ನ ಕೆಲಸಕ್ಕೆ ತರಬೇತಿ ಪಡೆದುಕೊಂಡಿರುತ್ತಾರೆ. ರಾಜಕಾರಿಣಿಯಾಗಲು, ಒಂದು ವಿದ್ಯಾಭ್ಯಾಸದ ಪರಿಮಿತಿಯಾದರೂ ಇಟ್ಟರೆ ಸರಿಹೋಗುತ್ತದೇನೋ. ಒಂದೋ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಾರೆ, ಏನಾದರೂ ಕರ್ತವ್ಯಲೋಪವಾದಲ್ಲಿ, ತಪ್ಪೊಪ್ಪಿಕೊಂಡು ತಿದ್ದಿಕೊಂಡು ಮುನ್ನಡೆಯುವ ಧೈರ್ಯಮಾಡುತ್ತಾರೆ. ಅಂಥವರು ಇನ್ನಾದರೂ ಬರಲೆಂದು ಹಗಲುಗನಸು ಕಾಣುತ್ತಾ ನನ್ನ ವಿತಂಡವಾದವನ್ನು ಮುಗಿಸುತ್ತೇನೆ.                                 
-       ಹೇಮಂತ್

1 comment:

  1. ಮಂತ್ರಿ ರಾಜಿನಾಮೆ ಕೊಟ್ಟಿದ್ದು ಯಾರಿಗೂ ನಷ್ಟವಲ್ಲ. ಮೀಡಿಯಾದವರಿಗೊಂದು ಸುದ್ದಿ, ಪಕ್ಷಕ್ಕೊಂದು ಕೆಲಸ, ರಾಜಕಾರಣಿಗೊಂದು ಬ್ರೇಕ್ ಅಷ್ಟೇ. ಎಲ್ಲರೂ ಸದನದಲ್ಲಿ ಮಾಡುತ್ತಿರುವ ಕೆಲಸದಿಂದ ಆಗುತ್ತಿರುವ ಉಪಯೋಗ ನಮ್ಮ ಕಣ್ಣ ಮುಂದೆಯೇ ಇದೆ, ಆದರೆ ಇಷ್ಟು ರಾಜಾರೋಷವಾಗಿ ಮಂತ್ರಿ ತಪ್ಪೊಪ್ಪಿಕೊಂಡಿದ್ದರೆ ಕಲ್ಲೇಟುಗಳು ಬೀಳುತ್ತಿದ್ದದ್ದು ಖಂಡಿತ :-). ಸದನ, ಅದರಲ್ಲಿ ಪ್ರಸ್ತಾಪವಾಗುವ ಅಹವಾಲುಗಳ ಬಗ್ಗೆ ನಮ್ಮ ಮಂತ್ರಿವರ್ಯರಿಗೆ ಎಷ್ಟು ಗಂಭೀರತೆ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ.

    ReplyDelete