ಓದಿ ಓಡಿದವರು!

Tuesday, 31 January 2012

ಸ್ವಾತಂತ್ರ್ಯ


ಮುನ್ನುಡಿ: ಒಂದಾನೊಂದು ಕಾಲದಲ್ಲಿ ದಿನಪತ್ರಿಕೆಯಲ್ಲಿ ನೋಡಿದ ಒಂದು ಸತ್ಯ ಘಟನೆಯಾಧಾರಿತ ಕಥೆ


ಸ್ವಾತಂತ್ರ್ಯ - “ಹೊಡೆದು ಸಾಯಿಸಿಬಿಡ್ತೀನಿ, ಏನ್ ಅನ್ಕೊಂಡಿದ್ಯ ನಿನ್ನ ನೀನು” ಹೊರಗಡೆ ಅಸ್ಪಶ್ಟವಾಗಿ ನಡೆಯುತ್ತಿದ್ದ ಆ ಮಾತುಗಳು ಒಳಗಿರುವ ನನ್ನನ್ನು ಬೆಚ್ಚಿ ಬೀಳಿಸುತ್ತಿತ್ತು. ಮರುಕ್ಷಣವೇ ಏನೋ ಭೂಕಂಪ ಸಂಭವಿಸಿದ ಹಾಗಾಯ್ತು. ಬಿದ್ದು ಉರುಳಾಡಿದಹಾಗಾಯ್ತು. ಕೊಂಚ ಸಮಯದ ನಂತರ ಸುಧಾರಿಸಿಕೊಂಡೆ. ನಾನಿರುವ ಕೋಣೆಯಲ್ಲಿ ನನಿಗಾಗುವಷ್ಟು ಜಾಗವಿದೆ. ಕಾಲು ಕೈ ನೇರವಾಗಿ ಚಾಚಿದರೆ ಗೋಡೆಗಳನ್ನು ಮುಟ್ಟಬಹುದು ಅಷ್ಟು ಪುಟ್ಟ ಕೋಣೆ. ನಾನಿಲ್ಲಿ ಖೈದಿಯಾಗಿ ಬಂದಿಯಾಗಿ ಹಲವು ತಿಂಗಳಾಯ್ತು. ನಾನು ಜನಿಸಿದ್ದು ಕೂಡ ಇಲ್ಲೆ! ಇದೊಂದು ಕತ್ತಲೆ ಕೋಣೆ, ಇಲ್ಲಿ ಯಾವುದೇ ಕಿಟಕಿಯಿಲ್ಲ ಬಾಗಿಲು ಕೂಡ ಇಲ್ಲ. ಯಾರ ಸಂಪರ್ಕವು ನನಗಿಲ್ಲ. ನಾನು ಯಾರ ಬಳಿಯೂ ಮಾತನಾಡಿಲ್ಲ. ನಾನು ಕಣ್ಣು ತೆರೆದಿಲ್ಲ, ಉಸಿರಾಡುತ್ತಲೂ ಇರುವುದು ಕೊಂಚ ಸಂಶಯ. ಆದರೂ ನಾನು ಬದುಕಿದ್ದೇನೆ! ಖೈದಿಯಾಗಿದ್ದೂ ಇಲ್ಲಿ ಸಂತಸದಿಂದಿದ್ದೇನೆ, ನೆಮ್ಮದಿಯಿದೆ, ಯಾರ ಭಯವಿಲ್ಲ. ಪ್ರತಿ ದಿನ ನನ್ನ ಕೋಣೆಯಿಂದ ಹೊರಗೆ ಏನೋ ಗಲಾಟೆ, ಜಗಳ ನಡೆಯುತ್ತಲೇ ಇದೆ. ಯಾರೋ ನನಗೇ ನೇರವಾಗಿ ಬಯ್ದಂತೆನಿಸುತ್ತದೆ. ನಾನೇನು ತಪ್ಪು ಮಾಡಿದ್ದೇನೆನ್ನುವುದರ ಅರಿವು ನನಗಿಲ್ಲ ಅಥವಾ ನಾನಿಲ್ಲಿ ಖೈದಿಯಾಗಿ ಬರಲು ಮಾಡಿರುವ ಅಪರಾಧ ಮರೆತಿದ್ದೇನೋ ಗೊತ್ತಿಲ್ಲ. ಸಮಯಕ್ಕೆ ಸರಿಯಾಗಿ ನನಗೆ ಬೇಕೋ ಬೇಡವೋ ಆಹಾರಕ್ಕೆ ಒಂದು ಕೊಳವೆಯಿಟ್ಟು ಸರಬರಾಜು ಮಾಡಲಾಗುತ್ತಿದೆ. ಈ ಕೋಣೆಯೇ ನನ್ನ ಪ್ರಪಂಚ. ಇಷ್ಟು ತಿಂಗಳುಗಳ ನಂತರ ಇದ್ದೂ ಇದ್ದೂ ಹೊಂದಿಕೊಂಡು ಇಲ್ಲೇ ಸಮಯ ಕಳೆಯಲು ಆಟವಾಡಲು ಶುರುಮಾಡಿದೆ. ನನ್ನ ಕೋಣೆಯ ಹೊರಗಡೆಯೂ ಯಾರೋ ನನ್ನಂತೆಯೇ ಬೇಸರದಲ್ಲಿದ್ದಂತೆನಿಸುತ್ತದೆ, ನನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದರು. ನನಗೇ ಕತೆ ಹೇಳುತ್ತಿದ್ದರೆನಿಸುತ್ತದೆ. ಧ್ವನಿ ಮಾತ್ರ ಕೇಳುತಿತ್ತು. ಗೋಡೆಯನ್ನು ಸ್ಪರ್ಶಿಸಿದರೆ ಅತ್ತ ಕಡೆಯಿಂದ ನನ್ನನ್ನು ಮುಟ್ಟಲು ಯಾರೋ ಹವಣಿಸುತ್ತಿರುವಂತೆ ಭಾಸವಾಗುತ್ತಿತ್ತು. ಆಗೆಲ್ಲ ಮತ್ತೊಬ್ಬರ ಸಂಪರ್ಕ ಬೇಕೆನಿಸುತ್ತಿತ್ತು. ಆದರೂ ನಾನು ಮಾತನಾಡಿರಲಿಲ್ಲ. ಹೊರಗಿನಿಂದ ಬಂದ ಮಾತುಗಳನ್ನು ಗ್ರಹಿಸಲು ಪ್ರಯತ್ನಿಸುತ್ತಿದ್ದೆ ಅಷ್ಟೆ. ಯಾರೂ ಇಲ್ಲದಾಗಲೂ ಯಾರೋ ಜೊತೆಯಲ್ಲೇ ಇರುವಂತೆ ಅನಿಸುತಿತ್ತು. ಹೊರಗಿನಿಂದ ಕೇಳಿಸುತ್ತಿದ್ದ ಕತೆಗಳು, ಕತೆಗಳಲ್ಲಿನ ಪ್ರಪಂಚ, ಹೊರಗೆ ಕೇಳಿಸುತ್ತಿದ್ದ ಹಲವು ಶಬ್ದಗಳು, ಒಳಗೆ ಪ್ರಸರಿಸುತ್ತಿದ್ದ ಬಿಸಿ ಶಾಖ ಎಲ್ಲವೂ ಸೇರಿ ಹೊರಗೆ ಏನೋ ಪ್ರಪಂಚವಿದೆ ನೋಡಬೇಕೆಂಬ ತವಕ ಹುಟ್ಟುತ್ತಿತ್ತು. ಈ ಕತ್ತಲೆ ಕೋಣೆಯಿಂದ ಹೊರಗಿನ ಬೆಳಕಿನ ಪ್ರಪಂಚಕ್ಕೆ ಜಿಗಿಯಬೇಕೆಂಬ ಬಯಕೆ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು. ಹೊರಗೆ ಬೆಳಕಿನ ಪ್ರಪಂಚವಿದೆ ಎಂಬುದು ನನ್ನ ಊಹೆಯಾಗಿತ್ತೋ ಎನೋ? ಒಮ್ಮೆ ಇದ್ದಕ್ಕಿದ್ದಂತೆ ಅದೇನೋ ಒಂದು ರೀತಿಯ ಸಂಕಟ, ತೊಳಲಾಟ, ಏನೋ ಅವಘಡ ಸಂಭವಿಸುತ್ತದೆಂಬ ಭಾವನೆ. ಹೊರಗೆ ಏನೋ ಅಲ್ಲೋಲ ಕಲ್ಲೋಲವಾದಂತೆ ಅನಿಸುತ್ತಿತ್ತು. ಒಳಗಿರಲು ಸಾಧ್ಯವಾಗಲಿಲ್ಲ ನನ್ನ ಎಲ್ಲೆಯನ್ನು ಸೀಳಿ ಹೊರಗೋಗಬೇಕೆಂಬ ಉತ್ಕಟ ಬಯಕೆ. ಹೊರಗಿನಿಂದಲೂ ಯಾರೋ ಅದೇ ಉದ್ದೇಶದಿಂದ ನನ್ನನ್ನ್ ಹೊರಗೆಳೆಯಲು ಪ್ರಯತ್ನಿಸುತ್ತಿದ್ದಾರೇನೋ ಎಂಬ ಭಾವನೆ ಮೂಡುತಿತ್ತು. ನಾನೂ ಪ್ರಯತ್ನಿಸಿದೆ, ನನ್ನ ಎಲ್ಲಾ ಹೊರಗಿನ ವಿಷಯಗಳ ಬಗೆಗಿನ ಕುತೂಹಲವನ್ನು ತಣಿಸುವ ಸಮಯವಿದೇ ಇರಬಹುದು. ನನ್ನ ಬಂದೀಖಾನೆಯಿಂದ ನಾನು ಮುಕ್ತನಾಗುತ್ತಿದ್ದೆನೇನೋ. ಶಕ್ತಿಮೀರಿ ನಾನು ಹೊರನುಗ್ಗಲು ಪ್ರಯತ್ನಿಸಿದೆ. ಅಸಾಧ್ಯ ಕಿರುಕುಳ, ಅರಚಾಟ, ಕಿರುಚಾಟದ ಸದ್ದಿನೊಂದಿಗೆ ಮೂಕನಾಗಿ ನೋವನ್ನು ಸಹಿಸಿಕೊಂಡು ಅಂತೂ ಸೀಳಿ ಹೊರಬಂದೆ. ಅತಿರೇಕಕ್ಕೇರಿದ್ದ ಕೋಲಾಹಲ ಒಮ್ಮೆಗೇ ತಣ್ಣಗಾದಂತಾಯಿತು. ಸುರಕ್ಷಿತವಾದ ಯಾವುದೋ ಸ್ಥಳದಿಂದ ಭಯಾನಕ ಸ್ಥಳಕ್ಕೆ ಬಂದೆನೆಂದೋ ಅಥವಾ ಹಿಂದಿನಿಂದ ಯಾರೋ ಹೊಡೆದದ್ದರಿಂದಲೋ ಸ್ವಾಭಾವಿಕವಾಗಿ ಮೊದಲ ಬಾರಿಗೆ ಅಳಲು ಶುರುಮಾಡಿದೆ. ಸುತ್ತ ಏನು ನಡೆಯುತ್ತಿತ್ತೋ ತಿಳಿಯಲಿಲ್ಲ. ಇಷ್ಟು ದಿನ ಕಣ್ತೆರೆಯದೆ ಕತ್ತಲಲ್ಲೇ ಕಳೆದಿದ್ದರಿಂದ ಈಗಲೂ ತಕ್ಷಣಕ್ಕೆ ಕಣ್ತೆರೆಯಲು ಆಗಲೇ ಇಲ್ಲ. ಎಲ್ಲೋ ತೇಲುತ್ತಿದ್ದ ಹಾಗೆ ಅನಿಸುತಿತ್ತು. ಭಯಕ್ಕೋ, ದಿಗ್ಭ್ರಾಂತಿಗೋ, ಕಾರಣವಿಲ್ಲದೆಯೋ, ಸ್ವಾಭಾವಿಕವಾಗೋ, ಒಟ್ಟಿನಲ್ಲಿ ಅಳುತ್ತಲಿದ್ದೆ ಸುಸ್ತಾದಾಗ ನಿದ್ರಿಸುತ್ತಲಿದ್ದೆ. ದಣಿದಿದ್ದ ಜೀವಕ್ಕೆ ಈ ಸಾರಿಯೂ ಕೇಳದೇ ಆಹಾರ ದೊರಕಿತು. ನಿದ್ರೆಗೆ ಜಾರಿದೆ. ಅದೆಷ್ಟು ಹೊತ್ತು ಕಳೆಯಿತೋ ಮೈತುಂಬಾ ಏನೋ ಸುತ್ತಿತ್ತು ಕೈಕಾಲು ಮುಂಚಿನಂತೆ ಅಲುಗಿಸಲೂ ಸಹ ಸಾಧ್ಯವಾಗುತ್ತಿರಲಿಲ್ಲ. ಕಣ್ಣು ಬಿಡಲಾಗದಷ್ಟು ಬೆಳಕಿನ ತೀಕ್ಷ್ಣತೆ. ಮೈ ಮೇಲೆಲ್ಲ ಏನೋ ಹರಿದಾಡಿದಂತಾಗುತ್ತಿತ್ತು. ಏನೆಂದು ಊಹಿಸುವ ಮೊದಲೇ ಮೈ ಇರಿಯುತ್ತಿರುವಂತೆ ನೋವು ಶುರುವಾಯಿತು. ಮೈಮೇಲೆ ಹರಿಯುತ್ತಿದ್ದ ಏನೋ ನನ್ನನ್ನು ತಿನ್ನುತ್ತಿತ್ತೆಂದೆನಿಸುತ್ತದೆ. ಆ ನೋವು ನರಕಸದೃಶವಾಗಿತ್ತು. ಶಕ್ತಿ ಮೀರಿ ಕಿರುಚಿದೆ, ಕೈಕಾಲಾಡಿಸಲು ಪ್ರಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ. ಏನು ಮಾಡಬೇಕೋ ಗೊತ್ತಿಲ್ಲ. ಅಳುವುದೊಂದೇ ಇನ್ನೂ ಕಲಿತಿದ್ದು. ಮೈ ಪೂರ್ತಿ ತಾಳಲಾರದ ಉರಿ, ನೋವು, ಹಿಂಸೆ ಗಂಟಲು ಕಿತ್ತು ಹೋಗುವಂತೆ ಅರಚಿದೆ, ಅತ್ತೆ ಅತ್ತೆ ಅತ್ತೆ ಜೀವವಿರುವವರೆಗೂ ಅತ್ತೆ. ಮೈ ಪೂರ್ತಿ ತರಿದು ಹೋಗುತ್ತಿತ್ತು. ಈ ಸ್ವತಂತ್ರ ಬದುಕು ನನಗೆ ಬೇಕಾಗಿರಲಿಲ್ಲ ಖೈದಿಯಾಗೇ ಆರಾಮವಾಗಿದ್ದೆ ಎನಿಸಿತು. ಅಳುತಿದ್ದ ಬಾಯಿಯೂ ತರಿದುಹೋಗುತ್ತಿತ್ತು. ಶಕ್ತಿ ಉಡುಗಿಹೋಗುತ್ತಿತ್ತು. ಸ್ವರ ನಿಂತುಹೋಯ್ತು. ನಾನು ಖೈದಿಯಾಗೇ, ಕತ್ತಲೆ ಕೋಣೆಯಲ್ಲಿದ್ದಾಗಲೇ ಶಾಂತವಾಗಿ ಸತ್ತುಹೋಗಿದ್ದರೆ ಚೆನ್ನಾಗಿತ್ತು. ಈ ಬೆಳಕಿನ ಪ್ರಪಂಚದ ಆಸೆ ನನ್ನಲ್ಲಿ ಏಕೆ ಬಂತೋ, ಯಾವ ಕಾರಣಕ್ಕಾಗಿ ಇಲ್ಲಿವರೆಗೂ ಬಂದೆನೋ. ನಾನು ಸಾಯುತ್ತಿದ್ದೆ. ಕೆಲವೇ ನಿಮಿಷಗಳಲ್ಲಿ ನನ್ನನ್ನು ನುಚ್ಚು ನೂರು ಮಾಡಿದ್ದವು ನನ್ನ ಮೈಮೇಲಿದ್ದ ಜೀವಿಗಳು. ನಾನು ಸತ್ತೆ. ಸತ್ತಮೇಲೆ ತಿಳಿಯಿತು ಈ ಬೆಳಕಿನ ಪ್ರಪಂಚದಲ್ಲಿ ಗಂಡು, ಹೆಣ್ಣು, ಬೇಕಾಗಿ ಅಥವಾ ಬೇಡವಾಗಿ ಸ್ವತಂತ್ರರಾದವರು ಎಂಬ ಆಧಾರದ ಮೇಲೆ ನಮ್ಮ ಸ್ವಾತಂತ್ರ್ಯ ನಿರ್ಧರಿಸಲಾಗುತ್ತದೆ ಎಂದು. ನಾನು ಕಣ್ಬಿಡುವ ಮುನ್ನ, ಒಮ್ಮೆ ನಗುವ ಮುನ್ನ ಸತ್ತಿದ್ದೆ. ನಾನೂ ಕಣ್ಬಿಡಬೇಕಿತ್ತು, ಬೆಳಕು ನೋಡಬೇಕಿತ್ತು!!!!!!

ಹಿನ್ನುಡಿ: ಇಂತಹ ಎಷ್ಟೋ ಸಹಸ್ರ ಅಮಾಯಕ ಖೈದಿಗಳ ಮಾರಣಹೋಮಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಕಾರಣರಾಗಿರುವ ಎಲ್ಲ ಮೃಗಗಳಿಗೆ ಈ ಕಥ್ ಅರ್ಪಣೆ.              
                                                                                                                          - ಹೇಮಂತ್

4 comments:

  1. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ನಿಮ್ಮ ಬರಹ ಪ್ರಸ್ತುತವಾದಂತದು. Save girl child or your son will be forced to be a gay ಎಂಬ ಮಾತು ಅದೇಕೋ ನಿಮ್ಮ ಸೀರಿಯಸ್ ಬರಹ ಓದಿಯೂ ನೆನಪಾಯಿತು. ಸಂಧರ್ಭೋಚಿತವಿರಬೇಕು :-)

    ಚೆನ್ನಾಗಿದೆ ಬರೆಯುತ್ತಿರಿ, ಬ್ಲಾಗಿಂಗ್ ಗೆ ಸ್ವಾಗತ!

    ReplyDelete
    Replies
    1. ಧನ್ಯವಾದಗಳು ಓದಿದ್ದಕ್ಕಾಗಿ ಮತ್ತು ಚಿಂತಿಸಲು, ಕಮೆಂಟ್ಸ್ ಚಿತ್ರಿಸಲು ಶ್ರಮ ತೆಗೆದುಕೊಂಡದ್ದಕ್ಕಾಗಿ..:-)

      Delete
  2. ದಯವಿಟ್ಟು ಅಕ್ಷರಗಳ ಬಣ್ಣಗಳನ್ನು ಬಿಳಿ ಬಣ್ಣಕ್ಕೆ ಬದಲಿಸಿ ಓದಲು ಕಷ್ಟವಾಗುತ್ತಿದೆ..

    ReplyDelete
  3. ಆಯ್ತು ತೊಗೊಳ್ಳಿ ಬದಲಿಸಿಯಾಯ್ತು :-)

    ReplyDelete