ನಾನಿನ್ನೂ ಬದುಕಿದ್ದೇನೆ. ನನ್ನ ಮೇಲೆ ಮೊಟ್ಟ ಮೊದಲ ಬಾರಿ
ಹಲ್ಲೆ ನಡೆದಿದ್ದು, ಸೀಸದ ಕಡ್ಡಿಯಿಂದ. ನಾನು ನನ್ನ ದೇಹಕ್ಕೆ ಇಂದ್ರಿಯಗಳನ್ನ ಅಂಟಿಸಿಕೊಂಡು ಆಗತಾನೆ
ಕೆಲಸ ನಿರ್ವಹಿಸಲು ಶುರುಮಾಡಿತ್ತು. ನನಗೆ ಏನು ನಡೆಯುತ್ತಿದೆಯೆಂದು ಅರಿವಾಗುವ ಮುನ್ನವೇ ನನ್ನ ಮೇಲೆ
ಮೊದಲ ಹಲ್ಲೆ ನಡೆದಿತ್ತು. ಅದೂ ಕೂಡ ನಿಷ್ಕಾರಣವಾಗಿ. ನಾನೂ ಆಗತಾನೆ ಸಮವಸ್ತ್ರ ಧರಿಸುವುದನ್ನ ಕಲಿತಿದ್ದೆ.
ನನ್ನ ಜೊತೆ ಕೈ ಕೈ ಹಿಡಿದು ಓಡಾಡುತ್ತಿದ್ದವನೇ ನನ್ನ ಕೈ ಮೇಲೆ ಕಡ್ಡಿಯಿಂದ ಚುಚ್ಚಿದ್ದ. ಅದೇನು ಮಾರಣಾಂತಿಕ
ಹಲ್ಲೆಯಾಗಿರದಿದ್ದರೂ ಮೊಟ್ಟ ಮೊದಲ ಬಾರಿಗೆ ಹೆದರಿದ್ದೆ. ಸಮವಸ್ತ್ರ ಧರಿಸುವುದಕ್ಕೆ, ಗುಂಪಿನಲ್ಲಿ
ಕೂರುವುದಕ್ಕೆ, ಧೈರ್ಯ ತಂದುಕೊಳ್ಳಲಿಕ್ಕೆ, ಅಳುವುದಕ್ಕೆ ಕೂಡ ಹೆದರಿದ್ದೆ. ಆದರೂ ಬೇರೆ ವಿಧಿಯಿರಲಿಲ್ಲ.
ನಾ ಹಾಕುತ್ತಿದ್ದ ಚೆಡ್ಡಿ ಚಿಕ್ಕದಾಗುತ್ತಾ ಬಂದಂತೆ, ನನ್ನ ಶೂ ಸೈಜಿನ ನಂಬರು ಹೆಚ್ಚುತ್ತಾ ಹೋದಂತೆ
ನನ್ನ ಮೃದು ತೊಗಲು ಬಲಿಯುತ್ತಾ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಸೂಕ್ಷ್ಮ ಸಂವೇದನೆಗಳಿಗೆ ಸ್ಪಂದಿಸುತ್ತಲೇ
ಇರಲಿಲ್ಲ. ಮೃದುತ್ವದ ಪೊರೆ ಕಳಚಿದ್ದೆನೋ ಏನೋ. ನನಗೆ ದಿನೇ ದಿನೇ ಜಳಕಕ್ಕಿಟ್ಟ ಬಕೆಟ್ ನೀರಿನಲ್ಲಿ
ಕೈಯ್ಯದ್ದಿ ಆಟವಾಡುವಾಗ ಸಿಗುತ್ತಿದ್ದ ಖುಷಿ ಸತ್ತುಹೋಗಿರುವ ಅನುಮಾನ ಶುರುವಾಗಿತ್ತು. ಬೂತಕನ್ನಡಿಯಡಿ
ಇರುವೆಯನ್ನು ಬಿಸಿಲಿಗೆ ಒಡ್ಡಿ ಬೆಂಕಿ ಹೊತ್ತಿಸುವ ಹುಡುಗಾಟ ಬೋರು ಹೊಡೆಸುತ್ತಿತ್ತು. ನನಗೆ ಕೈಕಾಲು
ಅಂಗಾಂಗಳನ್ನ ಕೊಟ್ಟವರೇ ತಮ್ಮ ಕೋಪಕ್ಕೆ ಬಳಸಿಕೊಳ್ಳುತ್ತಿದ್ದರು. ನನ್ನಲ್ಲಿ ಹುಟ್ಟುತ್ತಿದ್ದ ಸಾವಿರ
ಪ್ರಶ್ನೆಗಳನ್ನು ಉತ್ತರಿಸುವವರಿಲ್ಲದೇ ನಾನೇ ಹತ್ಯೆಗಯ್ಯುತ್ತಿದ್ದೆ. ಕಿಟಕಿಯಿಂದ ಒಳಗೆ ಚೆಲ್ಲುತ್ತಿದ್ದ
ಸೂರ್ಯನಕೋಲನ್ನು ಗಮನಿಸುವುದನ್ನೂ ಸಹ ದಿನೇ ದಿನೇ ಬಿಟ್ಟುಬಿಟ್ಟೆ. ನವಿಲುಗರಿ, ಕಾಗೆ ಭಂಡಾರ, ಜಿಯೋಮೆಟ್ರಿ
ಬಾಕ್ಸಿನಲ್ಲಿದ್ದ ಬೆಣಚುಕಲ್ಲುಗಳು, ಪುಸ್ತಕದ ಮಧ್ಯ ಇದ್ದ ಎರೆದ ಪೆನ್ಸಿಲ್ ಪುಡಿಗಳು, ಬ್ಯಾಗಿನಲ್ಲಿದ್ದ
ಹಾಳೆಗಳ ಚಿತ್ರವಿಚಿತ್ರ ಆಕಾರಗಳು ಇವೆಲ್ಲವೂ ನನಗೆ ಬುದ್ದಿ ಕಲಿಸುವವರ ಸ್ಕೇಲಿನ ಧಾಳಿ ಎದುರಿಸುತ್ತಾ
ಮುಂದುವರೆದ ಹಾಗೆಯೇ ಕಸದ ರೀತಿ ಕಾಣಿಸಲು ಶುರುವಾಗಿದ್ದವು. ನನ್ನ ತರಲೆಗಳು, ತುಂಟುತನಗಳನ್ನು ತಾಳಲಾರದೆ
ಒಬ್ಬರಲ್ಲಾ ಒಬ್ಬರು ನನ್ನ ಕಣ್ಣುಗಳು ಒದ್ದೆಯಾಗೇ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಹೊರುತ್ತಲೇ
ಇದ್ದರು. ಅಂತೂ ನಾನು ಕಣ್ಣ ತೊಟ್ಟಿಯಲ್ಲಿನ ನೀರನ್ನಷ್ಟನ್ನೂ ಖರ್ಚು ಮಾಡಿ ಮಿಂದು ರಸ್ತೆಗೆ ಬಂದೆ.
ಮಳೆಗಾಲ ಆಗತಾನೆ ಮುಗಿದಿತ್ತು. ಮನೆಗಳು, ಮರಗಳೂ ಸಹ ಮಿಂದು ಕಲರ್ ಕಲರ್ ಹೂವನ್ನು ಮುಡಿದು ಥೇಟ್ ಲಲನೆಯರಂತೆ
ನಳನಳಿಸುತ್ತಿದ್ದವು.
ಛಳಿ ಛಳಿ. ಮೈಯಲ್ಲಿ ನಡುಕ ಹುಟ್ಟಿಸುವ ಛಳಿ. ದಪ್ಪ ಮೂರು
ಪದರದ ಬಟ್ಟೆಗಳನ್ನೂ ದಾಟಿ ಬಂದು ಮಂದ ಚರ್ಮವನ್ನೂ ತಣ್ಣಗಾಗಿಸುವಷ್ಟು ಛಳಿ. ಬೆಂಕಿ, ಕಿಚ್ಚು, ಕಾವು,
ಹೊಗೆ ಯಾಕೋ ಇವೇ ಇಷ್ಟವಾಗ ಹತ್ತಿದವು. ಛಳಿಗೆ ಮೈಬಿಸಿಯಾಗಲೆಂದು ಸಿಗರೇಟು ಹತ್ತಿಸಿದೆ. ಮಾಂಸಖಂಡಗಳನ್ನೂ
ಸಹ ಬಿಸಿಯಾಗಿಸಬಲ್ಲ ಅಮೃತ ಹೀರಿದೆ. ಹೀಗೇ ಇರುವಾಗ ಉಸಿರನ್ನೂ ಸಹ ಬಿಸಿಯಾಗಿಸುವ ಚೆಲುವೆಯೊಬ್ಬಳು
ಸಿಕ್ಕಳು. ಸಿಗರೇಟು ಹಂಚಿಕೊಂಡವರ ಭಯೋತ್ಪಾದಕ ಕಣ್ಣುಗಳಿಂದ ತಪ್ಪಿಸಿಕೊಂಡು ಹುಡುಗಿಯ ಜೊತೆ ಹೆಜ್ಜೆ
ಹಾಕಿದೆ, ಕೈ ಹಿಡಿದೆ, ನಡು ಹಿಡಿದೆ, ಗಾಡಿಯ ಮೇಲೆ ಮನೆ ಮಾಡಿದಳು. ಊರು ಕೇರಿ ಅಳತೆ ಮಾಡಿದೆವು. ಕತ್ತಲೆ
ಕೋಣೆಯಲ್ಲಿ ಪ್ರಪಂಚ ಕಂಡೆವು. ಮೈಚಳಿ ಬಿಡಿಸಿ ಕಾವು ಹುಟ್ಟಿಸುವ ಹಾಗೆ ಆಲಂಗಿಸಿದಳು, ಬಿಸಿಯುಸಿರು
ಹಂಚಿಕೊಂಡಳು, ಅಂಟಿಕೊಂಡೆವು. ಯೌವನದ ಚಳಿಯಲ್ಲಿ ಜೊತೆಯಾದಳು. ಎದೆ ಗೂಡನ್ನು ಸವರುತ್ತಾ ಹೃದಯವನ್ನು
ಹಿಡಿದುಕೊಂಡಳು. ಲಾಲಿಸಿದಳು, ಆಟವಾಡಿದಳು ಒಮ್ಮೆ ಇದ್ದಕ್ಕಿದ್ದಂತೆ ಕೈಕೊಸರಿಕೊಂಡು ಇನ್ನಾವುದೋ ಕೈ
ಹಿಡಿದು ಹೊರೆಟೇ ಹೋದಳು. ಆ ಚುಮುಚುಮು ಚಳಿಯಲ್ಲೂ ಕಣ್ಣ ಬಿಸಿ ಹನಿಗಳು ಕಾಲ ಚಪ್ಪಲಿಯನ್ನು ಒದ್ದೆ
ಮಾಡುತ್ತಿದ್ದವು. ಚಳಿಗೆ ಬಟ್ಟೆ ಬಿಚ್ಚಿ ನಿಲ್ಲಿಸಿದ ಹಾಗೆನಿಸುತ್ತಿತ್ತು. ಹೃದಯ ಮರಳಿಸದೇ ಕಣ್ಮರೆಯಾದಳು.
ಎಲ್ಲಿದ್ದಳೋ, ಹೃದಯ ಹಿಂಡಿದಾಗಲೆಲ್ಲಾ ದೇಹ ಕಂಪಿಸುತ್ತಿತ್ತು. ಖಾಲಿ ಎದೆಗೂಡಿನಲ್ಲಿ ಸಿಗರೇಟಿನ ಹೊಗೆ
ತುಂಬಿದೆ, ಸಾರಾಯಿ ಸುರಿದೆ. ಛಳಿಯ ಒಂಟಿತನದಲ್ಲೂ ದೇಹ ಬೆಚ್ಚಗಿತ್ತು. ಎಲ್ಲೆಲ್ಲೋ ಹೃದಯಬಡಿತವಿಲ್ಲದೇ
ಸತ್ತು ಬಿದ್ದವನನ್ನು ಎತ್ತಿ ತಂದು ಹೃದಯವಿಲ್ಲದೇ ಮೆದುಳನ್ನುಪಯೋಗಿಸಿ ಬದುಕುವುದು ಹೇಗೆಂದು ದೇಹದ
ಸಮಸ್ತಂಗಾಂಗಗಳನ್ನೂ ಕೊಟ್ಟವರು ಹೇಳಿಕೊಟ್ಟರು. ಅವರ ಕಣ್ಹನಿಗಳ, ಬೆವರ ಹನಿಗಳ, ನಿಟ್ಟುಸಿರುಗಳ ಮುಂದೆ
ನನ್ನ ಹೃದಯ ಅಷ್ಟು ಬೆಲೆಬಾಳುವಂತದ್ದಲ್ಲವೆಂದು ಅರಿವಾದದ್ದೇ ದೇಹದಂಡಿಸಿ ದುಡ್ಡು ಮಾಡುವ ದಾರಿ ಹುಡುಕಿದೆ.
ಹೃದಯಕ್ಕಿಂತ ಮೆದುಳಿಗಿರುವ ಬೆಲೆ ಹೆಚ್ಚೆಂದು ಕ್ರಮೇಣ ಅರಿವಾಗುತ್ತಾ ಹೋಯಿತು. ಛಳಿಗೆ ಬತ್ತಿ, ಹೆಣ್ಣು
ಹೆಂಡವಲ್ಲದೇ ಹಣವೂ ಸಹ ಬೆಚ್ಚಗಿರಿಸಬಲ್ಲದೆಂದು ದುಡಿಯಲು ಶುರುಮಾಡಿದಮೇಲೇ ಗೊತ್ತಾಗಿದ್ದು. ಕಾಲು,
ಕೈ, ಕಣ್ಣು, ಕಿವಿಗಳು ದುಡಿಯುತ್ತಿದ್ದರೂ ಎಲ್ಲ ತಲೆಯುಳ್ಳವರೂ ಮೆದುಳಿನ ಮೇಲೆಯೇ ಕದ್ದು ಆಕ್ರಮಣ
ಮಾಡುತ್ತಿದ್ದರು. ಓದಿ ಓದಿ ದಷ್ಟಪುಷ್ಟವಾಗಿದ್ದ ಮೆದುಳು ಎಲ್ಲರ ಪ್ರಹಾರವನ್ನು ಎದುರಿಸಲು ಸನ್ನದ್ಧವಾಗಿತ್ತು.
ನಿರಂತರ ದಾಳಿಗೂ ಹೆದರದೆ ಎದೆ ಸೆಟೆಸಿ ನಿಂತಿತ್ತು. ಉಂಗುಷ್ಟದ ಸಮೇತ ಸಮಸ್ತ ದೇಹದಂಗಾಂಗಗಳು ತನ್ನ
ನೆರವಿಗಾಗಿ ದುಡಿಯುತ್ತಿರುವಾಗ ಯಾರ ದಾಳಿಗೆ ತಾನೇಕೆ ಹೆದರಬೇಕೆಂದು ಹೋರಾಟಕ್ಕಿಳಿದಿತ್ತು. ಎಷ್ಟು
ದುಡ್ಡು ಬೇಕೋ ಅಷ್ಟೇ ಪ್ರಹಾರಗಳನ್ನ ಎದುರಿಸುವ ಅಗತ್ಯವಿತ್ತು. ಅಂತೂ ಒಮ್ಮೆ ಕೆಲಸ ಕೊಟ್ಟವರ ಬಲವಾದ
ಏಟಿಗೆ ಮಣಿದು ಊನಗೊಂಡಿತು. ಮುದುಳು ಸಂಪೂರ್ಣ ಸಾಯುವ ಮುನ್ನ ಅದಕ್ಕೆ ಬೆಂಬಲವೆಂಬಂತೆ ದೇಹಕೊಟ್ಟವರು
ಉಪಾಯ ಮಾಡಿ ಮತ್ತೊಂದು ಹೃದಯ ಕಳೆದುಕೊಂಡ ದೇಹವನ್ನು ಜೊತೆಯಾಗಿಸಿದರು. ಹೃದಯವಿಲ್ಲದೆಯೇ ಕೇವಲ ದೇಹಗಳೇ
ಸ್ವಾಭಾವಿಕವೆಂಬಂತೆ ಪ್ರೀತಿಸಲು ಶುರುಮಾಡಿಕೊಂಡವು. ಅದಕ್ಕೆ ಫಲವಾಗಿ ತಾಜಾ ಹೃದಯವಿರುವ ಪುಟ್ಟ ದೇಹವೊಂದು
ಹುಟ್ಟಿತು. ಬೆಂಬಲಕ್ಕೆ ಬಂದವಳು, ಕೆಲಸ ಕೊಟ್ಟವರು, ದೇಹದ ಮಾಲೀಕರು, ಸಮಾಜವೆಂಬ ಸುತ್ತ ಮುತ್ತಣ ದಾಳಿಕಾರರು
ಒಟ್ಟು ಸೇರಿ ಮೆದುಳನ್ನು ಕಾಲಕ್ರಮೇಣ ಹೂತುಹಾಕಿದರು. ಛಳಿಗಾಲವೂ ಸರಿದು ಬೇಸಿಗೆಯ ಸ್ಪಷ್ಟ ಸೂಚನೆಗಳೆಂಬಂತೆ
ಬೆವರ ಹನಿಗಳು ಹಣೆಯ ಮೇಲೆ ಮೂಡತೊಡಗಿದವು.
ನನ್ನ ಮೃದು, ಮುಗ್ಧ, ಸೂಕ್ಷ್ಮ ಚರ್ಮ, ನನ್ನದೇ ಭಾವನೆಗಳುಳ್ಳ
ಹೃದಯ, ನನ್ನನ್ನು ನಿಯಂತ್ರಿಸುತ್ತಿದ್ದ ಮೆದುಳು, ಎಲ್ಲವನ್ನೂ ಕಿತ್ತುಕೊಂಡು, ಘಾಸಿಮಾಡಿ, ನನ್ನ ನೋವನ್ನೂ
ಆನಂದಿಸುತ್ತಿರುವ ಇಡೀ ಸಮಾಜವನ್ನು ನಾನೇಕೆ ಸುಮ್ಮನೆ ಬಿಡಬೇಕು? ನಾನೂ ಪ್ರತೀಕಾರ ತೀರಿಸಿಕೊಳ್ಳುವ
ಹಾದಿಯಲ್ಲಿ ಸಾಧ್ಯವಾದಷ್ಟೂ ತಲೆಗಳನ್ನ, ಕೈಗಳನ್ನ, ಹೃದಯಗಳನ್ನ, ಪಂಚೇಂದ್ರಿಯಗಳಲ್ಲಿ ಸಿಕ್ಕ ಸಿಕ್ಕದ್ದನ್ನ
ಹತ್ಯೆಗಯ್ದೆ. ಹತ್ಯೆಗೊಳಗಾದವನ ನೋವೇನೆಂದು ಸಮಾಜಕ್ಕೆ ತೋರಿಸಿಕೊಟ್ಟೆ. ಮೊದಲೇ ದುಡಿದು, ಬಸವಳಿದಿದ್ದ
ನನ್ನ ಅಳಿದುಳಿದ ಅಂಗಾಂಗಳು ಬಳಲುತ್ತಿದ್ದವು. ಯುದ್ಧ, ಪ್ರತೀಕಾರ ಸಾಕೆನಿಸಿತು. ಅವರು ಮಾಡಿದ್ದನ್ನು
ಅವರೇ ಉಣ್ಣಲೆಂದು ತೀರ್ಮಾನಿಸಿ ಸುಮ್ಮನಾದೆ. ಕಿತ್ತು ಬರುತ್ತಿದ್ದ ಬೆವರು ಒಳಗಿದ್ದ ಜೀವವನ್ನೂ ಕ್ಷೀಣಿಸುತ್ತಿದ್ದವು.
ಭೂಮಿಯ ಮೇಲಿನ ಧಗೆಯನ್ನು ತಡೆಯಲು ಸಾಧ್ಯವಿರಲಿಲ್ಲ. ಜೀವನದ ಮಳೆ, ಛಳಿಗಾಲವೇ ಚೆನ್ನಿತ್ತೇನೋ ಎಂದೊಮ್ಮೊಮ್ಮೆ
ಅನ್ನಿಸಿದರೂ ಆ ಹೋರಾಟ, ಓಟ ಈಗ ಇಲ್ಲದೇ ಶಾಂತವಾಗಿರುವುದರಿಂದ ಬಿಸಿಲನ್ನು ಸಹಿಸಿಕೊಳ್ಳುವ ಸಾಹಸ ಮಾಡಿದೆ.
ಜೀವನ ಪರ್ಯಂತ ಜೊತೆ ನೀಡಿದ್ದ ಕಾಲು, ಸೊಂಟ, ಕುತ್ತಿಗೆ, ಕೈಗಳು ದಿನೇ ದಿನೇ ಸೋಲುತ್ತಾ ಬಂದಿದ್ದವು.
ನಾನು ದೇಹ ಕೊಟ್ಟವನೂ ನನ್ನ ಕೈಗಳು, ಕಾಲ್ಗಳನ್ನೂ ಕಿತ್ತುಕೊಂಡುಕೊಂಡ. ಜೀವನ ಪೂರ್ತಿ ಬಂದ ಹಂತಕರನ್ನು
ನೆನೆಯುತ್ತಾ ಮಂಜು ಮಂಜಾಗಿದ್ದ ಕಣ್ಣನ್ನು ಮುಚ್ಚಿದೆ. ಮುಚ್ಚಿದ ಕಣ್ಣನ್ನು ತೆರೆಯೋಣವೆಂದರೆ ಕಣ್ಣುಗಳನ್ನೂ
ಹೊತ್ತೊಯ್ದಿದ್ದರು. ನಾನಿನ್ನೂ ಬದುಕಿದ್ದೇನೆ!
-ನೀ.ಮ. ಹೇಮಂತ್