ಖಾರಾ-"ಬಾತ್" |
ಅಸಹ್ಯ
ರೀ ಜೀವನ. ಥೂ, ಕ್ಯಾಕರಿಸಿ ಉಗಿಬೇಕು ಅನ್ಸುತ್ತೆ ಎಲ್ಲರಿಗೂ ಒಂದೊಂದು ಸಲ. ಬರೀ ಮಾತು, ಮಾತು, ಮಾತು.
ಹುಟ್ಟಿದಾಗಿನಿಂದ ಸಾಯೋವರೆಗೂ ಪ್ರತಿನಿತ್ಯ ಅವಿರತವಾಗಿ, ಶ್ರದ್ಧೆಯಿಂದ ನಾವು ಮಾಡೋ ಏಕ ಮಾತ್ರ ಕೆಲಸ
ಅಂದ್ರೆ ಮಾತನಾಡೋದು. ಅಲ್ಲಾ ಯಾಕ್ರೀ ಮಾತನಾಡ್ತೀವಿ ನಾವು. ನನ್ನ ಸ್ನೇಹಿತನೊಬ್ಬ ಬರೀ ಕಷ್ಟಗಳನ್ನ
ಹೇಳಿಕೊಳ್ಳೋಕೇ ಅಂತಾನೇ ಮಾತನಾಡ್ತಿದ್ದ. ಈ ಮಂತ್ರಿಗಳು ಮುಂಡೇ ಮಕ್ಕಳು ಮಾತೊಂದನ್ನ ಬಿಟ್ಟು ಬೇರೆ
ಯಾವ ಕಿತ್ತಾಕೋ ಕೆಲಸ ಕೂಡ ಮಾಡಲ್ಲ. ನಮ್ಮಪ್ಪ ಅನ್ನೋ ಬುದ್ದಿವಂತ ಪ್ರೇಮಿಸಿ ಮದುವೆಯಾಗೋ ಮುನ್ನ ಅಮ್ಮನಿಗೆ
ಮಾತು ಕೊಟ್ಟಿದ್ದನಂತೆ ಇಡೀ ಜೀವನ ನಿನ್ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀನಿ ಅಂತ. ಹೊಗೆ ಹಾಕಿಸಿಕೊಂಡು,
ಅಮ್ಮನಿಗೆ ಕಣ್ಣೀರೇ ಶಾಶ್ವತ ಬಳುವಳಿಯಾಗಿ ಕೊಟ್ಟಿದ್ದಾನೆ. ಅವಳ್ಯಾವಳೋ ನಮ್ಮಣ್ಣನೆಂಬ ಲೋಫರನ್ನ ಹುಚ್ಚಿ
ತರಹ ಪ್ರೀತಿಸ್ತಿದೀನಿ ಅಂತ ಪ್ರತಿನಿತ್ಯ ಹೇಳ್ತಿದ್ದಳಂತೆ, ಅವಳಿಗೆ ಮದುವೆಯಾಗುವ ಮುನ್ನ, ಈಗ ಹುಚ್ಚನ
ತರಹ ರೋಡ್ ರೋಡ್ ಅಲ್ಕೊಂಡಿದ್ದಾನೆ. ನಮ್ ಪಕ್ಕದ್ಮನೆ
ಲಿಪ್ ಸ್ಟಿಕ್ ರಾಣಿ ಆಂಟಿ ಗಂಡ ಕೆಲಸಕ್ಕೆ ಹೋದಕೂಡಲೆ ಗುಸು ಗುಸು ಪಿಸ ಪಿಸ ಆಂತ ಮಹಡಿ ಮೇಲೋಗಿ ಮಾತನಾಡ್ಕೊಂಡು
ನಿಂತಿರ್ತಾಳೆ. ಕತ್ತರಿಸಿ ಹಾಕ್ಬೇಕು ಒಬ್ಬೊಬ್ಬರನ್ನೂ ಮುಖ ಮೂತಿ ನೋಡದೇನೆ. ಮಾತನಾಡ್ತಾರೆ ಮತು.
ಕೆಲ್ಸ ಬೇಕಂದರೂ ಆಡಬೇಕು ಮಾತು, ಮದುವೆ ಆಗಬೇಕಂದ್ರೂ ಆಡಬೇಕು ಮಾತು. ಒಬ್ಬ ಮನುಷ್ಯನ್ನ ಅವನಾಡೋ ಮಾತಿನ
ತೂಕದ ಮೇಲೆ ಅಳಿತಾರಂತೆ. ಆದರೆ ಅಂತಿಮ ಸತ್ಯ ಏನ್ ಗೊತ್ತಾ, ಪ್ರಪಂಚದ ಅತಿ ಸುಂದರ ಕ್ಷಣಗಳಲ್ಲಿ ಬರೀ
ಮೌನಾನೇ ತುಂಬಿರುತ್ತಂತೆ. ಆದರೆ ಈಗೀಗ ಜನ ಸೆಕ್ಸ್ ಮಾಡೋವಾಗ್ಲೂ ಮಾತನಾಡ್ತಾರಂತೆ ಧರಿದ್ರದವರು. ಮಗು
ಹುಟ್ತಾ ಹುಟ್ತಾನೇ ನಾಲಿಗೆ ಕತ್ತರಿಸಿಬಿಡಬೇಕು ಕಣ್ರೀ ಸರಿ ಹೋಗುತ್ತೆ. ಒಬ್ಬಬ್ಬರು ಆ ಬಾಯಿಗಳನ್ನ
ಮಸುಳೆ, ನಾಯಿ, ನರಿ, ಕುರಿ, ಕತ್ತೆ, ಕುದುರೆಗಳ ರೀತಿ ಬಳಸುತ್ತಿರೋದನ್ನ ನೋಡ್ತಿದ್ರೆ ಮೈ ಉರಿಯುತ್ತೆ,
ಪ್ರತಿಯೊಬ್ಬಬ್ಬರ ಮೇಲೂ ಆಸಹ್ಯ ಹುಟ್ಟುತ್ತೆ. ದರಿದ್ರದ್ದು ಈ ನಾಯಿಗಳು ಮಾತನಾಡೋವಾಗ ನಮಗೆ ಹೇಗೆ
ಅರ್ಥ ಆಗಲ್ವೋ ಹಾಗೇ ಪ್ರತಿಯೊಬ್ಬ ಮನುಷ್ಯಾನೂ ಇನ್ನೊಬ್ಬ ಮನುಷ್ಯನೊಂದಿಗೆ ಮಾತನಾಡೋವಾಗ ಅರ್ಥಾನೇ
ಆಗಬಾರದು ಹಂಗಾಗಬೇಕು ಮಾತೇ ನಿಂತುಹೋಗಲಿಲ್ಲ ಅಂದ್ರೆ ಕೇಳಿ. ಹೀಗೆ ನನಗೆ ಇಡೀ ಪ್ರಪಂಚದ ಮೇಲೆ ಅಸಹ್ಯ
ಹುಟ್ಟಿ, ಪ್ರಪಂಚದ ಮೇಲೆ ಅನ್ನೋಕಿಂತ ಮನುಷ್ಯನ ಮಾತುಗಾರಿಕೆಯ ಕೌಶಲ್ಯದ ಮೇಲೆ ಅಸಹ್ಯ ಹುಟ್ಟಿ ಅದರಿಂದ
ನಾನು ಇಡೀ ಪ್ರಪಂಚಕ್ಕೆ ಮಾರೋ ಗೋಲಿ ನಾನು ಇನ್ನು ಮುಂದೆ ಮಾತನಾಡುವುದಿಲ್ಲ ಎಂದು ನಿರ್ಧರಿಸಿ ಇವತ್ತಿಗೆ
ಐದು ವರ್ಷ ಮೂರು ತಿಂಗಳು ಹನ್ನೆರಡು ದಿನಗಳಾಯ್ತು!
ಮುಂಚೆ
ನಮ್ಮ ಪೂರ್ವಜರೆನಿಸಿಕೊಂಡ ಮಹಾಶಯರು ಮೌನವ್ರತ ಅಂತೇನೋ ಮಾಡ್ತಿದ್ರಂತೆ. ಅದ್ಯಾಕೆ ಮಾಡ್ತಿದ್ರೋ ಗಬ್ಬು
ನನ್ನ ಮಕ್ಕಳು ಗೊತ್ತಿಲ್ಲ. ಆದರೆ, ಇದೇ ಮಾತುಗಾರರ ನಡುವೆ ಇದ್ಕೊಂಡು ಒಂದೇ ಒಂದು ದಿನ ಬಾಯಿ ಕಟ್ಟೋದೇ
ಜಗತ್ತಿನ ಅತಿ ದೊಡ್ಡ, ಮತ್ತು ಕ್ಲಿಷ್ಟ ಕಲಾಪ್ರಕಾರ ಅಂತ ನನಗೆ ಅನ್ಸುತ್ತೆ(ಇದು ನನ್ನ ಅನಿಸಿಕೆ ಮಾತ್ರ,
ಇದನ್ನ ಜಗತ್ತಿನ ಯಾವ ಬುದ್ದಿಜೀವಿಗಳು ಒಪ್ಪದಿದ್ರೆ ನನ್ನ ಎಲ್ಲೆಲ್ಲೋ ಬೆಳೆದಿರುವ ಕೂದಲು ಹೋದಂತೆ).
ಈ ನನ್ನ ಸ್ವಯಂಘೋಷಿತ ಅನಿರ್ಧಿಶ್ಟಿತ ಮೌನಾಚರಣೆಯನ್ನ ಚಾಲನೆ ಮಾಡಿದ ಮೊದಲನೆಯ ದಿನವೇ ಇದು ಅಷ್ಟು
ಸುಲಭದ ಕೆಲಸವಲ್ಲವೆಂಬುದು ನನಗೆ ಅರಿವಾಯ್ತು. ಜನ ಯಾಕೆ ಮಾತನಾಡ್ತಾರೆ ಗೊತ್ತಾ, ನಿಜವಾಗಲೂ ಅವರಿಗೆ
ಮೌನವಾಗಿರೋಕೆ ಆಗಲ್ಲ ರೀ. ಮೌನವಾಗಿರೋದು ಕಷ್ಟ. ಸುಲಭವಾಗಿ ಮಾತನಾಡಿಬಿಡಬಹುದು ಅಂತ ಜನ ಸುಲಭದ ದಾರೀಲೇ
ಹೋಗ್ತಾರೆ ಅಂತ ಮೊದಲ ದಿನ ಜ್ಞಾನೋದಯವಾಯ್ತು. ನಾನು ಸಾಮಾನ್ಯ ಮನುಷ್ಯನಲ್ಲವಲ್ಲ. ನಾನು ನನ್ನದೇ ದಾರಿಯಲ್ಲಿ
ಹೋಗ್ತೇನೆ ಅಂತ ನಿರ್ಧರಿಸಿ ಆಗಿತ್ತು. ಒಂದೇ ಸಲ ಮಾತು ನಿಲ್ಲಿಸೋದು ಆಗದಿದ್ದಲ್ಲಿ ಬೇರೆಯವರೊಂದಿಗೆ
ಮಾತನಾಡೋದನ್ನ ನಿಲ್ಲಿಸೋಣ, ಯಾರೂ ಇಲ್ಲದಾಗ ಒಳಗೆ ಇದ್ದದ್ದನ್ನೆಲ್ಲಾ ಒಂದೇ ಸಮನೆ ಹೊರಗುಗುಳೋಣ ಅಂತ
ನಿರ್ಧರಿಸಿದೆ. ಅಂತೆಯೇ ಮಾತನಾಡಲೇ ಬೇಕೆಂದೆನಿಸಿದಾಕ್ಷಣ ಬಾತುರೂಮಿಗೋ, ಮನೆಗೋ ಓಡಿಹೋಗಿ ಜೋರಾಗಿ
ಅರಚುತ್ತಿದ್ದೆ. ಕತ್ತೆ ನನ್ನ ಮಗ ನಾನು. ಮನೆಯ ಒಂದು ಮೂಲೆಯಲ್ಲಿ ಈ ಪ್ರಪಂಚದ ಅದ್ಯಾವುದೋ ಹೆಸರಿನ
ದೇವರ ಫೋಟೋ ಒಂದು ಬಿದ್ದಿತ್ತು ಯಾವಾಗಲೂ ನನ್ನ ಕಣ್ಣು ಕುಕ್ಕುತ್ತಿದ್ದಿದ್ದು ಅದೊಂದೇ. ಈ ದೇವರು
ನನ್ನ ಮಗ ಇದಾನೋ ಇಲ್ವೋ ಗೊತ್ತಿಲ್ಲಾ ರೀ ಆದ್ರೆ ಒಂದು ದಿನಕ್ಕೂ ಒಬ್ಬರೊಂದಿಗೂ ಮಾತನಾಡೋದನ್ನ ನೋಡೇ
ಇಲ್ಲ ಬಿಡಿ. ಅದಕ್ಕೇ ಅವನು ದೇವರು, ಅದೊಂದೇ ಅವನಲ್ಲಿರುವ ಸ್ಪೆಶಲ್ ಶಕ್ತಿ ಅನ್ಸುತ್ತೆ (ಈ ಸತ್ತುಹೋದ
ಸಾಯಿಬಾಬಾ ಇಂತಹವರನ್ನ ಈ ದೇವರುಗಳ ಜಾತಿಗೆ ಸೇರಿಸಿಕೊಳ್ಳಲಾಗಿಲ್ಲ). ಐದು ತಿಂಗಳ ಸತತ ತರಬೇತಿಯ ನಂತರ
ಬಾಯಿ ಕಳೆದು ಮಾತನಾಡುವುದನ್ನ ನಿಲ್ಲಿಸಿದೆ. ಆದರೆ ನಿಜ ಹೇಳಬೇಕಂದ್ರೆ ನಾನು ನಿಜವಾಗಲೂ ಮಾತನಾಡೋಕೆ
ಶುರುಮಾಡಿದ್ದು ಆಗ್ಲೇ ಕಣ್ರೀ. ಹೊರಗೆ ಆಡೋದಲ್ಲ ಮಾತು, ಒಳಗೆ ಆಡಿಕೊಳ್ಳೋದು ಮಾತು. ಹೊರಗೆ ಬಾಯಿ
ಕಳೆದು ಆಡುವ ಮಾತುಗಳನ್ನ ತಡೆಯೋದು ಸುಲಭವಾಗಿ ಖೈದಾಗಿತ್ತು. ಒಳಗೆ? ನನ್ನೊಂದಿಗೆ ಸದಾ ಕಾಲ ಮಾತನಾಡ್ತಿದ್ದೆ.
ನನ್ನೊಳಗೆ ಇಂತಹವನೊಬ್ಬ ನಾನಿದ್ದೀನಿ ಅಂತ ನನಗೆ ಗೊತ್ತಿರಲಿಲ್ಲ. ಎಷ್ಟು ಅಪೂರ್ವ ಮಾತುಗಳಿದ್ವು ಅಂತೀರಿ.
ಇಡೀ ಪ್ರಪಂಚದ ಬೆಂಕಿ ಒಳಗಡೆಯೇ ಸೇರ್ಕೊಂಡು ತಾಂಡವವಾಡ್ತಾ ಇದ್ವು. ಕೋಲಾಹಲ, ಬಿರುಗಾಳಿ, ಬೆಂಕಿ ಮಳೆ,
ಭೂಕಂಪ, ಸಿಡಿಲು, ಬಿಸಿಲು, ಎಲ್ಲಾ ತಣ್ಣಗಾಗ್ತಾ ಬಂತು. ನಾನು, ನನ್ನೊಳಗೊಬ್ಬ ನಾನು ಅಷ್ಟೇ ಕ್ರಮೇಣ
ಉಳಿದುಕೊಂಡಿದ್ದು.
ನಾನೇ
ತಟ್ಟೆಗೆ ಊಟ ಹಾಕೊಂಡು ತಿನ್ತಿದ್ದೆ. ಕೆಲಸಕ್ಕೂ ಹೋಗ್ತಿದ್ದೆ, ದೇಹ ದಂಡಿಸಿ, ಮೈಕೈ ನೋಯೋವರೆಗೂ ಕೆಲಸ
ಮಾಡ್ತಿದ್ದೆ, ಮಾತನಾಡಿಸಲು ಪ್ರಯತ್ನಿಸೋ ಪ್ರತಿಯೊಬ್ಬರನ್ನೂ ಸುಮ್ಮನೆ ದಿಟ್ಟಿಸಿ ನೋಡ್ತಿದ್ದೆ. ನನ್ನನ್ನ
ಮಾತನಾಡಿಸ್ತೀನಿ ಅಂತ ಪಂದ್ಯ ಕಟ್ಟಿದ್ರು, ಹಾಸ್ಯ ಮಾಡಿದ್ರು, ಜಗಳ ತೆಗೆದ್ರು, ಅವಮಾನ ಮಾಡಿದ್ರು,
ಸಂಬಳ ಕಿತ್ಕೊಂಡ್ರು, ಇನ್ನಷ್ಟು ಛಲ ಹುಟ್ಟಿಸಿದ್ರು, ಸೋತ್ರು, ಸುಮ್ಮನಾದ್ರು. ಅಷ್ಟೇ ಅವರುಗಳ ಜೀವನ.
ಅವರ ಮತ್ತು ಅವರ ಕೃತ್ಯಗಳಿಗೆ ಒಳಗೊಳಗೆ ಶಪಿಸುವುದನ್ನ ಸಹ ಬಿಟ್ಟಿದ್ದೆ. ಪ್ರತಿಕ್ರಿಯಿಸುವುದನ್ನ
ತಡೆದಿರ್ಲಿಲ್ಲ, ಪ್ರತಿಕ್ರಿಯೆಯನ್ನೇ ನಿಲ್ಲಿಸಿದ್ದೆ. ಅದೊಂತರಹಾ ನಿರ್ವಿಕಾರತೆ. ಮಾತಿನ ಅಗತ್ಯ ನಿಜವಾಗಲೂ
ಇರಲಿಲ್ಲ. ಏನು ಬೇಕೋ ಖರೀದಿಸಿ ದುಡ್ಡು ಕೊಟ್ರೇ ಮುಗೀತಿತ್ತು. ಯಾರಿಗಾದರೂ ಸಹಾಯ ಬೇಕೆಂದರೆ ಸಹಾಯ
ಮಾಡ್ತಿದ್ದೆ, ಧನ್ಯವಾದಗಳನ್ನ ಕೇಳಿಸಿಕೊಳ್ಳುತ್ತಲೂ ಇರಲಿಲ್ಲ. ನನಗೇ ಒಮ್ಮೆ ಗಾಡಿಯಲ್ಲಿ ಅಪಘಾತವಾದಾಗ
ಸಹಾಯ ಬೇಕಿದ್ದಾಗ ಕೇಳಲೂ ಇಲ್ಲ ಬಿದ್ದಲ್ಲೇ ಅದೆಷ್ಟು ಹೊತ್ತು ನರಳುತ್ತಿದ್ದೆನೋ ಪ್ರಾಣ ಹೋಯ್ತೆಂದು
ಕೊಂಡಿದ್ದೆ ಜ್ಞಾನ ಬಂದಾಗ ಆಸ್ಪತ್ರೆಯಲ್ಲಿ ಬಿದ್ದಿದ್ದೆ. ಬಡವರ ರಕ್ತ ಹೀರೋ ವೈದ್ಯರುಗಳು ನನಗೆ ರಕ್ತ
ಹಾಕಿ ಮಲಗ್ಸಿದ್ರು. ಗುಣವಾಗ್ತಾ ಇದ್ದಂಗೆ, ಹೇಗಿದೆ ನೋವು, ಅದು ಇದು ಅಂತ ಕೇಳಿದ್ದಕ್ಕೂ ಉತ್ತರಿಸದೆ
ಮಿಕಿ ಮಿಕಿ ನೋಡಿದೆ. ಮೂಕನಿರಬೇಕೆಂದ, ಪ್ರತಿಕ್ರಿಯಿಸಲಿಲ್ಲ. ತಲೆ ಕೆಟ್ಟಿದೆ ಎಂದ, ಪರೀಕ್ಷೆಗಳೆಲ್ಲಾ
ಆಯ್ತು, ಸರಿಯಾಗೇ ಇದ್ದೆ. ಎದ್ದು ಬಂದೆ. ಮದುವೆ ಮಾಡಿದ್ರೆ ಸರಿ ಹೋಗುತ್ತೆ ಅಂತ ಗಂಟು ಹಾಕೋಕೆ ನೋಡಿದ್ರು.
ನೇರವಾಗಿ ಮೈ ಮಾರಿಕೊಳ್ತಿದ್ದವಳೊಬ್ಬಳ ಮನೆ ಹೊಕ್ಕೆ, ದುಡ್ಡು ಚೆಲ್ಲಿದ್ದೇ ಹಾಸಿಗೆ ಹರಡಿದ್ದಳು ಮುಗಿಸಿ
ಹಿಂದಿರುಗಿದೆ. ಮನೆಗೆ ಅಪರೂಪಕ್ಕೊಮ್ಮೆ ಹೋಗುತ್ತಿದ್ದೆ. ಮಲಗುತ್ತಿದ್ದೆ ಎದ್ದು ಹೊರಡುತ್ತಿದ್ದೆ.
ಅಮ್ಮ ತುಂಬಾ ದಿನ ತೆಗೆದುಕೊಳ್ಳಲಿಲ್ಲ, ಮೌನರಾಗ ಮುಗಿಸಿ ಹೊರಟುಹೋದಳು, ಯಾರು ಯಾರೋ ಬಂದು ಅತ್ತರು
ನನಗೆ ಅಳುವ ಅಗತ್ಯ ಕಾಣಿಸಲಿಲ್ಲ. ಮಣ್ಣುಕಾಣಿಸಿ ಸುಮ್ಮನಾದೆ. ಮೌನ ಜೀವನ ಮುಂದುವರೆದಿತ್ತು. ಅಣ್ಣ
ಇನ್ನೂ ಬೀದಿಬೀದಿಗಳಲ್ಲಿ ಮಾತನಾಡುತ್ತಾ ತಿರುಗುತ್ತಿದ್ದುದು ಯಾರಿಗೂ ಅರ್ಥವಾಗ್ತಾ ಇರಲಿಲ್ಲ. ನಾನು
ಮೌನವಾಗಿದ್ದುದೂ ಸಹ ಯಾರಿಗೂ ಅರ್ಥವಾಗ್ತಾ ಇರಲಿಲ್ಲ.
ಕೆಲಸಗಳು
ಬದಲಾದವು, ಸುತ್ತ ಮುತ್ತಲ ಜನಗಳು ಬದಲಾದರು, ವಾಸ್ತವ್ಯ ಬದಲಾಯ್ತು, ಹಾಕುತ್ತಿದ್ದ ಬಟ್ಟೆಗಳು ಬದಲಾಯ್ತು.
ಜೀವನೋಪಾಯಕ್ಕೆ ದುಡ್ಡು ಬೇಕಾದಷ್ಟಿತ್ತು, ದುಡ್ಡೊಂದಿದ್ದರೆ ಹೇಗೆ ಬೇಕಾದರೂ ಬದುಕಬಹುದಿತ್ತು, ಮೌನವಾಗಿ
ಬದುಕುವುದು ಸಹ ಕಷ್ಟವಾಗಲಿಲ್ಲ. ವರುಷಗಳುರುಳಿದವು. ಒಮ್ಮೆ ಇದ್ದಕ್ಕಿದ್ದಂತೆ ಯಾವಳೋ ಹರಿದ ಬಟ್ಟೆಯವಳು,
ಬಂದು ಮನೆಯಲ್ಲಿರುತ್ತೇನೆಂದಳು. ನನ್ನ ಪಾಡಿಗೆ ನಾನಿದ್ದೆ. ಅವಳೂ ಮನೆಯಲ್ಲಿ ಸೇರಿಕೊಂಡಳು. ಅಡುಗೆ
ಮಾಡಿ ಹಾಕುತ್ತಿದ್ದಳು. ಧರಿಸಲು ಬಟ್ಟೆ ತಂದು ಕೊಟ್ಟೆ. ಸದಾ ಕಿಟಕಿಯಿಂದಾಚೆ ನೋಡುತ್ತಿದ್ದಳು. ಕೂದಲು
ಕೆದರಿಕೊಂಡೇ ಇರುತ್ತಿದ್ದಳು. ನಾನು ಮನೆಯಿಂದ ಹೊರಗಡೆ ಇದ್ದಾಗಲೂ ಸುಮ್ಮನೆ ಕುಳಿತೇ ಇರುತ್ತಿದ್ದಳು.
ಒಮ್ಮೊಮ್ಮೆ ಇದ್ದಕ್ಕಿದ್ದಂತೆ ನಗುತ್ತಿದ್ದಳು. ಎಷ್ಟೋ ಸಲ ಬಟ್ಟೆಗಳೆಲ್ಲಾ ಬಿಚ್ಚಿ ಬಿಸಾಕಿ ನಗ್ನವಾಗಿ
ಓಡಾಡಿಕೊಂಡಿರುತ್ತಿದ್ದಳು. ಮನೆಯೊಂದಿಗೆ, ತನು, ಮನವನ್ನೂ ಹಂಚಿಕೊಂಡಳು. ಅವಳ ಕತೆಯೇನೋ ಎಂದೂ ನಾನು
ಕೇಳಲಿಲ್ಲ. ಅವಳಿಗೆ ಹೇಳಬೇಕೆಂಬ ಮನಸೂ ಬಂದಿರಲಿಲ್ಲ. ಇರುವಷ್ಟು ದಿನ ಇದ್ದಳು ಸಾಕೆನಿಸಿದೊಂದು ದಿನ
ಕೈಗೆ ಸಿಕ್ಕದ್ದೇನೋ ಕುಡಿದು ಸತ್ತೇ ಹೋದಳು. ನಾನು ಯಾರಿಗೂ ಕೇಳಲಿಲ್ಲ, ಹೇಳಲಿಲ್ಲ ಯಾರ್ಯಾರೋ ಬಂದರು,
ಪೊಲೀಸು, ಕೋರ್ಟು, ಎಲ್ಲೆಲ್ಲೋ ಎಳೆದೊಯ್ದರು, ತನಿಖೆ ಮಾಡಿದರು, ಹೊಡೆದರು, ಪ್ರಶ್ನಿಸಿದರು, ನನಗೆ
ಉತ್ತರಿಸುವ ಇಷ್ಟವೂ ಇರಲಿಲ್ಲ, ಪ್ರತಿಕ್ರಿಯೆಯೆಂಬ ಶಕ್ತಿ ನನ್ನಲ್ಲಿ ಕಾಣೆಯಾಗಿ ಹಲವು ವರ್ಷಗಳಾಗಿತ್ತು.
ತಪ್ಪು ಸರಿಗಳು ನನಗೆ ಬೇಕಾಗಿರಲಿಲ್ಲ. ಶಿಕ್ಷೆ ಎಂದು ತೀರ್ಮಾನಿಸಿದರು. ಒಪ್ಪಿಕೊಂಡೆನೋ ಇಲ್ಲವೋ ಗೊತ್ತಿಲ್ಲ,
ಸಮಯಕ್ಕೆ ಸರಿಯಾಗಿ ದೇಹಕ್ಕೆ ಆಹಾರ ಸಿಗುತ್ತಲಿತ್ತು. ತಿಂದೆ, ಮಲಗಿದೆ, ದುಡಿದೆ, ಕಾಲ ಕಳೆದೆ.
ಬಹಳ
ದಿನಗಳ ಮೇಲೆ ಒಂದೇ ಒಂದು ಪ್ರಶ್ನೆ ಬೇಡಬೇಡವೆಂದರೂ ಹುಟ್ಟಿಕೊಳ್ಳುತ್ತಿದೆ. ಈ ಪ್ರಶ್ನೆಗಳು ಏನು ಬೇಕಾದರೂ
ಮಾಡಬಲ್ಲ ಶಕ್ತಿಯಿರುವಂತಹವು. ಯಾಕಿನ್ನೂ ಬದುಕಬೇಕೆಂದು ಪ್ರಶ್ನೆ ಹುಟ್ಟುತ್ತಲೇ ಇದೆ. ಐದು ವರ್ಷ
ಮೂರು ತಿಂಗಳು ಹನ್ನೆರಡು ದಿನಗಳಾಯ್ತು. ಸಾಕಾಯ್ತು. ಪ.. ಪ.. ಪ… ಪೆನ್ನು… ಪ್….ಪ್… ಪ್..ಪ್… ಪೇಪರು
ಬಾಯಿ ನಿಜವಾಗಲೂ ಹೊರಡಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಈ ಜೈಲಿನಿಂದ ಮುಕ್ತಿ ಹೊಂದಲಿಚ್ಚಿಸಿದ್ದೇನೆ.
ಇಷ್ಟನ್ನೂ ಹೇಳಬೇಕೆಂಬ ಇಂಗಿತ ಒಂದು ಪ್ರಶ್ನೆ ಹುಟ್ಟುಹಾಕಿತು. ಹಾಗಾಗಿ ಬರೆದೆ. ಮುಕ್ತಾಯ.
ನಮಸ್ತೆ ಹೇಮಂತ್ ರವರಿಗೆ, ನಿಮ್ಮ ಮುಕ್ತಾಯ ಎಂಬ ಈ ಕಥೆಯಲ್ಲಿನ ಬೈಗುಳಗಳನ್ನು ಅವ್ಯಾಚ್ಯ ಶಬ್ದಗಳು ಎನ್ನಲಾಗದು.. ಅವು ಕಥೆಯಲ್ಲಿನ ಬರೀ ಪದಗಳು ಎಂದಷ್ಟೇ ತಿಳಿದು ಓದಬೇಕು. ಮೌನದಿಂದ ಓದಿಸಿಕೊಂಡು ಹೋಗುವಂತೆ ಬರೆದಿರುವ ನಿಮ್ಮೊಳಗಿನ ಕಥೆಗಾರನಿಗೆ ಒಂದು ನಮನ.. ಶುಭವಾಗಲಿ..
ReplyDeleteಚೆಂದ ಬರೆದಿದ್ದೀರಿ.. ಅವಾಚ್ಯವಾಗಿರಲೆಂದೇ ಮಡಿವಂತಿಕೆ ತೊರೆದು ಬಳಸಿದ ಪದಗಳವು ಆದರೆ ಅವಾಚ್ಯವೆನಿಸಲಾರವು ಬಿಡಿ ಏಕೆಂದರೆ ನಾವು ಶಬ್ಧಗಳಿಗೆ ಮೀರಿ ನಿಂತಿದ್ದೇವೆ ಹ ಹ ಹ.. ಈ ಕಥೆಯ ವೈಚಿತ್ರ್ಯವೇ ಅದು, ಮೌನಿಯಾಗ ಹೊರಟವನ ಒಳಗಿನ ಮಾತಿನ ಪ್ರಪಂಚ. ಧನ್ಯವಾದಗಳು ಓದಿದ್ದಕ್ಕೆ, ವಿಮರ್ಶಿಸಿದ್ದಕ್ಕೆ ಗೆಳೆಯರೇ..
DeleteTumba chennagi bareddidiri hemanth Infy alli eruvag nimmalli entha bareyuva shakti ede antha ne gottiralilla...nimma abhimanei ade evatinda...
ReplyDeleteಹಹಹಹ್.. ಅಯ್ಯೋ ದೊಡ್ಡ ಮಾತು... :-)
Delete