ಓದಿ ಓಡಿದವರು!

Friday, 6 April 2012

ಚೌಕಟ್ಟಿಲ್ಲದ ಸಂಬಂಧ


        ಮಂಜು ಕೆಲಸಕ್ಕೆ ಹೋಗುವ ಮಾರ್ಗದಲ್ಲಿ ಬೈಕ್ ಓಡಿಸುತ್ತಾ ಅಷ್ಟು ದೂರದಲ್ಲಿ ಎದುರುಗಡೆ ನಡೆದು ಬರುತ್ತಿದ್ದ ಹೆಂಗಸಿನ ಕಡೆಗೆ ಸ್ವಾಭಾವಿಕವಾಗೇ ಕಳ್ಳನೋಟ ಬೀರುತ್ತಾನೆ. ಪೂರ್ತಿ ದೇಹವನ್ನು ಒಮ್ಮೆ ಅಷ್ಟೇ ಸ್ವಾಭಾವಿಕವಾಗಿಯೇ ಸ್ಕ್ಯಾನ್ ಮಡಿ ಅಷ್ಟು ದೂರದಿಂದಲೇ ಆಕರ್ಷಿಸಿದ ಆಕೆಯ ಕಣ್ಣುಗಳಿಗೆ ತನ್ನ ಕಣ್ಣುಗಳನ್ನು ನೆಟ್ಟು, ಯಾವುದೇ ಕಡೆಗೆ ತಿರುಗಿಸಲು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಗಾಡಿಯ ವೇಗ ಕಡಿಮೆ ಮಾಡಿಕೊಂಡು ಅವಳ ನಡಿಗೆಯ ವೇಗಕ್ಕೆ ಸಮನಾಗಿ ಇವನ ವೇಗಮಿತಿಯನ್ನು ಅನುಸರಿಸಿ ಸಾಧ್ಯವಾದಷ್ಟೂ ಸಮಯ ಆಕೆಯ ಎದುರುಗಡೆಯೇ ಇದ್ದು ಪಕ್ಕದಲ್ಲಿ ಆಕೆ ಹಾದುಹೋಗುವಾಗ ಧೈರ್ಯ ಮಾಡಿ ಕಣ್ಣು ಹೊಡೆದೇ ಬಿಟ್ಟು ಗಾಡಿಯ ಮಿತಿ ಕಡಿಮೆಯಿದ್ದರೂ ಹೃದಯದ ಬಡಿತ ಮಿತಿಮೀರಿರುವುದನ್ನು ಆಕೆ ಹಾದು ಹೋದ ತಕ್ಷಣ ಉಷ್ ಎಂದು ಒಳಗಿದ್ದ ಪ್ರೆಶ್ಶರ್ ಅನ್ನು ಹೊರಗೆ ಬಿಡುವಾಗ ಆಕೆಯೂ ಇನ್ನೂ ತನ್ನನ್ನೇ ಗಮನಿಸುತ್ತಿದ್ದಳೇನೋ ಎಂದು ನಿಧಾನವಾಗಿ ಅರಿವಾಗಿ ಖಚಿತ ಪಡಿಸಿಕೊಳ್ಳಲೆಂದು ಹಿಂದೆ ಹಿಂದೆ ತಿರುಗಿ ನೋಡಿದರೆ ಆಕೆಯೂ ಸಹ ಹಿಂತಿರುಗಿ ಇವನನ್ನು ನೋಡುತ್ತಿರುವುದನ್ನು, ಎಲ್ಲೋ ಚಿಕ್ಕ ಮುಗುಳ್ನಗೆ ಹೊಂದಿರುವುದನ್ನು ಕಂಡು ತಕ್ಷಣ ಗಾಡಿ ನಿಲ್ಲಿಸಲಾಗದೆ ಹಾಗೆಯೇ ಮುಂದೆ ಬಂದರೂ ಸಹ ಹಯ್ಯೋ ಒಳ್ಳೆಯ ಅವಕಾಶ ತಪ್ಪಿ ಹೋಗುತ್ತಿದೆಯಲ್ಲ ಎಂದು ಒಮ್ಮೆ, ಇಲ್ಲ ಹೇಗಾದರೂ ಅವಕಾಶ ಕಳೆದುಕೊಳ್ಳಬಾರದೆಂದು, ಸದುಪಯೋಗ ಪಡಿಸಿಕೊಳ್ಳಬೇಕು ಇದು ಖಂಡಿತ “ವರ್ಕ್ ಔಟ್” ಆಗುತ್ತೆ ಎಂದು ಒಮ್ಮೆ, ಹಯ್ಯೋ ಯಾಕ್ ಬೇಕು ಇವಾಗಿನ ಪರಿಸ್ಥಿತಿಯಲ್ಲಿ, ಇದು ಬೇರೆ ತಲೆನೋವು ಎಂದು ಮತ್ತೊಮ್ಮೆ ಮನಸ್ಸು, ವಿಚಿತ್ರ ಮನಕಾಮನೆಗಳಲ್ಲಿ ತೊಯ್ದಾಡುತ್ತಿರುವಾಗ ಇಂಥಾ ಸಂದರ್ಭಗಳಲ್ಲಿ ಮನಸು ಎಷ್ಟು ಬೇಡವೆಂದರೂ ದೇಹ ಕಾಮನೆಯ ದಾಸನಾಗಿರುತ್ತದೆ. ತನಗೇ ಗೊತ್ತಿಲ್ಲದಂಗೆ ಸ್ವಲ್ಪ ದೂರದಲ್ಲೇ ಗಾಡಿಗೆ ಬ್ರೇಕ್ ಬೀಳುತ್ತದೆ. ಹೇಗೆ ಆಕೆಯ ಸಂಪರ್ಕದ ರಾಜಮಾರ್ಗ ಪಡೆಯುವುದೆಂದು ಆ ಶೀಘ್ರ ಸಮಯದಲ್ಲಿ ಚಿಂತಿಸುತ್ತಾ ಕ್ಷಣಮಾತ್ರದಲ್ಲಿ ಹಲವಾರು ಉಪಾಯಗಳ ಚಿತ್ರಣ ಮೂಡಿ, ಗೊಂದಲ, ಆತಂಕ, ಉದ್ವೇಗ ಎಲ್ಲಾ ಒಟ್ಟಿಗೆ ಹೃದಯದಲ್ಲಿ ಸೇರಿ ಬಡಿತ ಹೆಚ್ಚಾಗಿ ದೇಹ ಒಂದು ಕ್ಷಣ ಯಾವುದಕ್ಕೂ ಪ್ರತಿಕ್ರಿಯಿಸದಂತಾಗಿ, ಈ ಹಿಂದೆ ತನಗಿರುವ ಏಳೆಂಟು ಇದೇ ರೀತಿಯ ಗಾಡಿಯ ಅನುಭವಗಳು ಈ ಪರಿಸ್ಥಿತಿಗೆ ಸಹಾಯಕವಾಗಿ ಗಾಡಿ ಹಿಂತಿರುಗಿಸಿ ಆಕೆಯ ಸ್ವಲ್ಪ ದೂರದಲ್ಲೇ ಇದ್ದ ಒಂದು ಚಿಲ್ಲರೆ ಅಂಗಡಿಗೆ ಹೋಗಿ ಒಂದು ಚೀಟಿ, ಪೆನ್ನು ಪಡೆದುಕೊಂಡು ಮೊಬೈಲ್ ನಲ್ಲಿ ಸ್ನೇಹಿತನಿಂದ ಯಾರದ್ದೋ ಮೊಬೈಲ್ ಸಂಖ್ಯೆ ಪಡೆಯುತ್ತಿರುವವನಂತೆ ನಟಿಸಿ ಚೀಟಿಯಲ್ಲಿ ಪ್ರವೀಣ ಎಂದು ಹೆಸರನ್ನು ಬದಲಿಸಿ ರಚಿಸಿ ಅದರ ಕೆಳಗೆ ತನ್ನ ಮೊಬೈಲ್ ಸಂಖ್ಯೆಯನ್ನು ಹಾಕಿ ಚೀಟಿಯನ್ನು ಸುರುಳಿ ಸುತ್ತಿ ತಿರುಗಿ ನೋಡುವಷ್ಟರಲ್ಲಿ ಅವಳು ಮಾಯ. ಎಲ್ಲಿ ಹೋದಳೆಂದು ಇಷ್ಟು ಹೊತ್ತೂ ಹುಟ್ಟಿಕೊಂಡಿದ್ದ ಬಿಸಿಗೆ ಒಮ್ಮೆಲೇ ತಣ್ಣೀರೆರೆಚಿದಂತಾಗಿ ತೂತು ಬಿದ್ದ ಗಾಳಿಯಿದ್ದ ಬಲೂನಿನಂತೆ ಅಲ್ಲೇ ನಿಂತು ತಲೆಕೆರೆದುಕೊಳ್ಳುವನು. ಕೈಲಿ ಸುರುಳಿ ಸುತ್ತಿದ ಚೀಟಿ ಹಾಗೇ ಇಟ್ಟುಕೊಂಡು ತನ್ನ ಗಾಡಿ ಹತ್ತುತ್ತಾ ಮುಂದೆ ಹೋದರೆ ಸಿಕ್ಕೇ ಸಿಗುವಳು. ಕೊಟ್ಟೇ ಬಿಡ್ಲಾ ಏನಾದರೂ ತೊಂದರೆಯಾದರೆ, ಇಲ್ಲಾ ಆಗಿದ್ದು ಆಗ್ಲಿ ಕೊಟ್ಟೇ ಬಿಡೋಣ ಎಂದು ತೀರ್ಮಾನಿಸಿ ಮುಂದೆ ಹೋಗಿ, ಸುತ್ತ ಮುತ್ತ ಹುಡುಕಿ ನೋಡಿದರೂ ಸಿಗದೆ ನಿರಾಶೆಯಾಗಿ ಮತ್ತೆ ಮನಸಿಲ್ಲದ ಮನಸಿನಲ್ಲಿ ತನ್ನ ದಾರಿ ಹಿಡಿದು, ಸರಿಯಾಗಿ ಎಲ್ಲ ಕಡೆ ನೋಡಲಿಲ್ಲವೇನೋ ಎಂದು ಮತ್ತೆ ಹಿಂದಿರುಗಿ ಹೋಗಿ ಶೋಧಿಸಿ ಎಲ್ಲೂ ಕಾಣದೆ, ಥು ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಯಿತೇ ಎಂದು ದಾರಿ ಹಿಡಿದವನು ಮತ್ತೆ ಕೊನೆಯ ಬಾರಿ ನೋಡಿಯೇ ಬಿಡೋಣವೆಂದು ತನ್ನ ಅದೃಷ್ಟ ಪರೀಕ್ಷೆಗೆ ಹೊರಡುವನು. ಆಗಲೂ ನಿರಾಸೆ ಕಾದಿತ್ತು ಎಂದುಕೊಂಡು ಹೋಗುವಷ್ಟರಲ್ಲಿ ಎದುರಿಗೆ ಕಾಣಿಸಿಕೊಂಡ ಆಕೆ ಕಾರಿನ ಬಳಿ ನಿಂತು ಇಲ್ಲಿ ಬಾ ಎಂದು ನೇರವಾಗಿ ಮಂಜುನನ್ನೇ ಕೈಬೀಸಿ ಕರೆಯುವಳು. ಅದನ್ನು ನಿರೀಕ್ಷಿಸದಿದ್ದ ಮಂಜುಗೆ ಒಳಗೆ ಎಲ್ಲೋ ಇದ್ದ ಪುಕ್ಕಲುತನ ತಲೆ ಸೇರಿದರೂ ಕಾರಿನಲ್ಲಿ ಇದ್ದ ಹೆಂಗಸರನ್ನು ನೋಡಿ ಓಹೋ ಇದ್ಯಾಕೋ ಅಪಾಯವಿದ್ದಂತೆ ಕಾಣುತ್ತಿದೆ. ಎಲ್ಲರನ್ನೂ ಸೇರಿಸಿ ಹೊಡೆಸಿದರೆ ಮುಗಿಯಿತು ತನ್ನ ಕತೆ ಎಂದು ಆಕೆಯನ್ನು ಹಾದು ಗಾಡಿ ನಿಲ್ಲಿಸದೆ ಮುಂದುವರೆಯುವನು. ಆದರೆ ಆಸೆ ಬಿಡಲೊಲ್ಲದು ಆಗಿದ್ದಾಗಲಿ ಎಂದು ಕೈಲಿ ಸಿಗರೇಟಿನಂತೆ ಹಿಡಿದಿದ್ದ ಚೀಟಿಯನ್ನು ಆಕೆಗೆ ಕಾಣುವಂತೆಯೇ ಕೆಳಗೆ ದಾರಿಯಲ್ಲಿಯೇ ಹಾಕಿ ಹಿಂದಿರುಗಿ ನೋಡದೆಯೇ ಹೊರಟುಹೋಗುವನು.

ಚೀಟಿ ಹಾಕಿದ್ದು ಆಕೆ ನೋಡಿದಳೋ ಇಲ್ಲವೋ, ಅಕಸ್ಮಾತ್ ಸಿಕ್ಕಿದ್ದರೆ ಫೋನ್ ಕಾಲ್ ಮಾಡಬಹುದಾ ಎಂದು ಚಿಂತಿಸಿಕೊಂಡು, ಅಕಸ್ಮಾತ್ ಮಾಡಿದರೆ, ಏನಿರುತ್ತೆ ಮಾತನಾಡಲು ಎಂದು ಲೆಕ್ಕಾಚಾರ ಹಾಕುತ್ತಾ ಆಫೀಸಿನ ಕಡೆ ಹೋಗುತ್ತಿರುವಾಗಲೇ ಫೋನು ರಿಂಗಣಿಸುತ್ತದೆ. ಯಾವುದೋ ಹೊಸ ಸಂಖ್ಯೆ. ಯಾರೋ ಗೊತ್ತಿಲ್ಲ ಎಂದು ತಲೆ ಯೋಚಿಸುತ್ತಿದ್ದರೂ, ಮನಸ್ಸು ಅವಳೇ, ಸ್ವೀಕರಿಸು ಎಂದು ಆದೇಶಿಸಿ ಆಗಿತ್ತು. ಹಲೋ ಎಂದು ಅತ್ತಣಿಂದ ಬಂದ ಆಹ್ಲಾದಕರ ಧ್ವನಿಗೆ ಇವನ ಪ್ರತಿಕ್ರಿಯೆಯೂ ಹಲೋ ಅಷ್ಟೇ. ಪ್ರವೀಣ್ ಅವರಾ ಎಂಬ ಪ್ರಶ್ನೆಗೆ ಒಮ್ಮೆ ಎಂಜಲು ನುಂಗಿ ಹಾ ಹೌದು ನೀವ್ಯಾರು ಎಂದು ಗೊತ್ತಿದ್ದೂ ಕೇಳುವನು. ಅದೇ, ಚೀಟಿ ಹಾಕಿ ಹೋದ್ರಲ್ಲಾ ಎಂದಷ್ಟೇ ಹೇಳುವಳು. ಹಾ ಹೇಳಿ ಎಂದಷ್ಟೇ ಉತ್ತರಿಸಿ ಏನು ಮಾತು ಮುಂದುವರೆಸುವುದೆಂದು ಗೊತ್ತಾಗದೆ ಎದೆ ಬಡಿತ, ಏದುಸಿರು ನಿಯಂತ್ರಿಸಲು ಪ್ರಯತ್ನಿಸುವನು. ಅಷ್ಟರಲ್ಲಿ ಆಕೆಯೇ ಮಾತು ಮುಂದುವರೆಸುತ್ತಾ ಅದ್ಯಾಕ್ ರೀ ಕರೀತಿದ್ರು ಒಳ್ಳೆ ಹಾವು ನೋಡ್ದವರಂಗೆ ಹೊರಟೋದ್ರಿ ಎಂದು ಕೇಳುತ್ತಾಳೆ. ರೀ ಮೊದಲೇ ನಿಮ್ಮ ಏರಿಯಾ, ಯಾರನ್ನಾದರೂ ಕರೆಸಿ ಹೊಡೆಸಿದ್ರೆ ನಾನ್ ಏನ್ ಮಾಡಲಿ ಎಂದು ಬೆಪ್ಪು ಬೆಪ್ಪಾಗಿ ಉತ್ತರಿಸುವನು. ಅವಳಿಗೂ ಇವನ ಬೆಪ್ಪುತನಕ್ಕೆ ನಗೆ ಬರದೆ ಇರಲಿಲ್ಲ. ಇಲ್ಲಾ ರೀ ಸ್ವಲ್ಪ ಗ್ಯಾಸ್ ಸಿಲಿಂಡರ್ ದು ಏನೋ ತೊಂದರೆ ಇತ್ತು ಸ್ವಲ್ಪ ಅದರ ಟೆನ್ಶನ್ ನಲ್ಲಿದ್ದೆ ಅಷ್ಟೇ, ಬಂದಿದ್ರೆ ಹಾಗೇ ಮನೆ ನೋಡ್ಕೋಬೋದಿತ್ತಾ ಎಂದು ಸರಾಗವಾಗೇ ಆತ್ಮೀಯತೆ ಬೆಳೆಸಿದಳು. ತನ್ನ ಹೆಸರು ಭುವನ ತನಗೆ ೮ ವರ್ಷದ ಮಗಳಿರುವುದು, ತಾನು ಜಿಮ್ ಒಂದರಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿರುವ ವಯಕ್ತಿಕ ವಿವರಗಳನ್ನು ಬಿಚ್ಚಿಟ್ಟು ತನ್ನ ವಿವರಗಳನ್ನು ಕೇಳಲು ತಾನು ತನ್ನ ತಂದೆ ತಾಯಿಯೊಂದಿಗೆ ಇರುವುದಾಗಿ, ಮನೆಯಲ್ಲಿ ಓದಲು ಊರಿನಿಂದ ಬಂದಿರುವ ಅತ್ತೆ ಮಗಳು ಸೇರಿ ಒಟ್ಟು ನಾಲ್ಕು ಜನ ಇರುವುದಾಗಿ, ತಾನು ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ ೨೫ ಸಾವಿರ ವರಮಾನವಿರುವುದಾಗಿ ಕಪೋಲ ಕಲ್ಪಿತ ಕತೆಯೊಂದನ್ನು ಹೇಳಿ ಪರಿಚಯಿಸಿಕೊಳ್ಳುವ ಶಾಸ್ತ್ರ ಮುಗಿಸುವನು. ನಿಜಜೀವನದಲ್ಲಿ ಮಂಜುವಿಗೆ ಕೆಲವು ತಿಂಗಳ ಹಿಂದೆ ಪ್ರೇಮವಿವಾಹವಾಗಿರುತ್ತದೆ, ಹಿರಿಯರು ಬೆಂಗಳೂರಿನಿಂದ ದೂರದೂರಿನಲ್ಲಿ ವಾಸವಾಗಿರುತ್ತಾರೆ. ಭುವನಳೆಂಬ ಭುವನ ಯಾವುದೋ ಲಾಂಡ್ ಲೈನಿನಿಂದ ಫೋನ್ ಮಾಡಿರುವ ನಿಮಿತ್ತ, ಮೊಬೈಲ್ ನಂಬರ್ ಕೊಡಿ ಸಂಪರ್ಕದಲ್ಲಿರೋಣ ಎಂದು ಪ್ರವೀಣನೆಂಬ ಮಂಜು ಕೇಳಲು ತಾನೇ ಸುಸಮಯ ನೋಡಿಕೊಂಡು ಕರೆ ಮಾಡುವುದಾಗಿ ಆಶ್ವಾಸನೆ ನೀಡುತ್ತಾಳೆ. ಅವಳು ಕರೆ ಮಾಡುವಳೆಂಬ ವಿಶ್ವಾಸ ಪ್ರವೀಣನಲ್ಲಿರುತ್ತದೆ. ಹಾಗೇ ತಮ್ಮ ಇತ್ಯೋಪರಿಗಳನ್ನು ಹಂಚಿಕೊಳ್ಳುತ್ತಾ ಪ್ರವೀಣನಾದ ಇವನು ತನ್ನಿಂದ ಏನು ಬಯಸುತ್ತಿರುವನೆಂದು ನೇರವಾಗಿ ಕೇಳುತ್ತಾಳೆ ಭುವನ. ಗಾಡಿಯನ್ನು ರಸ್ತೆ ಬದಿಯಲ್ಲಿ ಹಾಕಿ ಮಾತನಾಡುತ್ತಿದ್ದ ಪ್ರವೀಣನೆಂಬುವನು ಹಯ್ಯೋ ನಿಮ್ಮ ಕಣ್ಣುಗಳು ಇಷ್ಟ ಆಯ್ತು ಅಷ್ಟೇ ಇನ್ನೇನೂ ಅಂದರೆ ಏನನ್ನೂ ಅಪೇಕ್ಷಿಸುತ್ತಿಲ್ಲ ನಿಮ್ಮಿಂದ ಎಂಬ ಪ್ರಮಾಣ ಪತ್ರಕ್ಕೆ ಸಹಿ ಹಾಕಿ ಮಾತಿನಲ್ಲಿ ಭುವನಳಿಗೆ ತಲುಪಿಸುತ್ತಾನೆ. ಭುವನಳೂ ನಾಚಿ ನೀರಗಿ, ತನ್ನಲ್ಲಿದ್ದ ಎಂದೋ ಕಳೆದುಹೋಗಿದ್ದ ಯೌವ್ವನ ಗರಿಗೆದರಿ ನೀವು ಸೀರೆನಲ್ಲಿ ನೋಡಿದ್ರಿ ನನ್ನ, ಅಕಸ್ಮಾತ್ ಡ್ರೆಸ್ ನಲ್ಲಿ ನೋಡಿದ್ರೆ ಕಳೆದುಹೋಗುತ್ತಿದ್ದಿರಿ ಎಂದು ತನ್ನ ದೇಹ ಸೌಂದರ್ಯವೆಂಬ ಸರಕನ್ನು ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾ ಹಾಗೇ ಸುಮ್ಮನೆ ನೀವು ಬಿಡುವಾಗಿದ್ದರೆ ಅದೇ ಆಗಲೇ ಬಂದ ದಾರಿಯಲ್ಲಿ ಸಂಜೆ ೪ಕ್ಕೆ ಬನ್ನಿ ನಾನು ಎದುರುಗಡೆಯಿಂದ ಡ್ರೆಸ್ ಹಾಕಿಕೊಂಡು ನನ್ನ ಮಗಳನ್ನೂ ಸಹ ಕರೆದುಕೊಂಡು ನಡೆದುಬರುತ್ತಿರುತ್ತೀನಿ, ನೋಡಿ ಹೇಗಿದ್ದೀನೆಂದು ಅಲ್ಲಿ ಏನೂ ಹೇಳಬೇಡಿ, ಸುಮ್ಮನೆ ನೋಡಿ ಹಾಗೇ ಹೊರಟು ಹೋಗಿ ನಂತರ ಮಾತನಾಡೋಣ ಎಂದು ಒಂದು ಸಿನಿಮಾ ಶೂಟಿಂಗ್ ಮಾದರಿಯಲ್ಲಿ ಸೀನ್ ಹೇಳುತ್ತಾಳೆ. ಪ್ರವೀಣನೆಂಬುವನು ಇಂದು ತಾನೂ ಬಿಡುವಾಗಿರುವುದಾಗಿ ಹೇಳಿ ತಾನು ಬಂದು ಭುವನಳ ಪ್ಲಾನ್ ಪ್ರಕಾರ ಡೀಲ್ ಮಾಡುವನೆಂದು ಹೇಳಿ ತನ್ನ ಆಫೀಸಿನಲ್ಲಿ ಏನು ಕಾರಣ ಕೊಡುವುದೆಂದು ಉಪಾಯ ಮಾಡಿ, ಭುವನ ಹೇಳಿದ ಸಮಯಕ್ಕೆ ಸರಿಯಾಗಿ ಆಫೀಸಿನಲ್ಲಿ ಹೆಂಡತಿಯ ಅಕ್ಕನಿಗೆ ಹುಶಾರಿಲ್ಲವೆಂದು ಹೇಳಿ ರಜೆ ತೆಗೆದುಕೊಂಡು ಬಂದು ಪ್ಲಾನ್ ಪ್ರಕಾರವೇ ತಾಯಿ ಮಗಳನ್ನು ಗಾಡಿಯಲ್ಲಿ ಹಾದುಹೋಗುತ್ತಲೇ ನೋಡಿ ಸೂಪರ್ ಎಂಬ ಸಿಗ್ನಲ್ ಕೂಡ ನೀಡಿ ಪ್ರವೀಣನೆಂಬುವನು ಹೊರಟುಬರುವನು.

ನಂತರ ಸುಸಮಯವೊಂದರಲ್ಲಿ ಭುವನ ಪ್ರವೀಣರು ಫೋನ್ ಕಾಲ್ ನ ಮೂಲಕ ಸಂಪರ್ಕದಲ್ಲಿರುವರು. ಭುವನ ತನ್ನ ಆಸೆಗಳನ್ನೆಲ್ಲಾ ಮುಕ್ತವಾಗಿ ಹೇಳಿಕೊಳ್ಳುವಳು. ಅವನೂ ತನ್ನ ಹುಡುಗತನದ ಕೀಟಲೆಯ ಮಾತುಗಳನ್ನಾಡುತ್ತಾ, ನಗಿಸುತ್ತಾ ಭುವನಳಲ್ಲಿ ಇನ್ನೂ ನಗುವ ಸಾಮರ್ಥ್ಯವಿದೆಯೆಂದು ತೋರಿಸಿಕೊಡುವನು. ಭುವನ ‘ಲಂಚ್’ಗೆ ಎಲ್ಲಾದರೂ ಹೋಗೋಣವೇ ಎಂದು ಆಮಂತ್ರಿಸಿದಾಗ ಪ್ರವೀಣ ತನ್ನ ಪರ್ಸ್ ಮೇಲೆ ಕೈಯಿಟ್ಟುಕೊಂಡು, ಖರ್ಚು ಯಾರದ್ದು ಎಂದು ಕೇಳುವನು. ಆಫ್ ಕೋರ್ಸ್ ನಿಮ್ಮದೇ ಎಂದು ಭುವನ, ಸರಿ ಮುಂದಿನ ತಿಂಗಳು ಹೋಗೋಣವೆಂದು ಪ್ರವೀಣ ಲಂಚ್ ಎಂಬ ಕಥೆಗೆ ಸುಖಾಂತ್ಯ ನೀಡುವನು. ಸಿನಿಮಾಗೇ ಹೋಗಬಹುದಿತ್ತು ಆದರೆ ಯಾರಾದರೂ ಗೊತ್ತಿರುವ ಕಣ್ಣುಗಳು ಇದ್ದೇ ಇರುತ್ತವೆ ಹಾಗಾಗಿ ಬೇಡವೆಂದು ತೀರ್ಮಾನಿಸುವರು. ಹಾಗೇ ಮಾತುಗಳ ಮನೆ ಕಟ್ಟುತ್ತಾ ತನ್ನ ಮೊಬೈಲ್ ಸಂಖ್ಯೆಯನ್ನು ಯಾರಿಗೂ ಕೊಡದಿರಲೂ ಸಹ ಹೇಳುವಳು. ತನ್ನ ಒಂದು ದಿನ ಪೂರ್ತಿ ಹೊರಗೆ ಎಲ್ಲಾದರೂ ದೂರ ಢಾಬಾ ರೀತಿಯ ಜಾಗಕ್ಕೆ ಹೋಗುವ ಆಸೆಯ ಅಪ್ಲಿಕೇಷನ್ ಇಡುವಳು. ಇವರ ಸಂಬಂಧ ಹೀಗೇ ಮುಂದುವರೆಯುವುದು. ಅದು ಎಲ್ಲಿಯವರೆಗೂ ಹೋಗಿ ತಲುಪುವುದೋ ನನಗೂ ಗೊತ್ತಿಲ್ಲ, ಪ್ರಾಯಶಃ ಅವರಿಗೂ ಗೊತ್ತೋ ಇಲ್ಲವೋ! ಈ ಸಂಬಂಧವನ್ನ ಹೆಸರಿಸುವುದಾದರೆ ಇದಕ್ಕೆ ಯಾವ ಹೆಸರೆಂಬ ಚೌಕಟ್ಟಿನಲ್ಲಿ ಸೇರಿಸಬಹುದೋ ಗೊತ್ತಿಲ್ಲ! ಭುವನಳಿಗೆ ಗಂಡನಿದ್ದೂ ಪ್ರವೀಣನೆಂಬುವನೆಂಬುವನ ಬಳಿ ಎಂದೂ ಪ್ರಸ್ತಾಪಿಸುವುದಿಲ್ಲ. ಪ್ರವೀಣನೂ ಎಂದೂ ಕೇಳುವುದಿಲ್ಲ ಆತನ ನಿಜ ಸಂಗತಿಯನ್ನೂ ಎಂದು ಬಿಚ್ಚುವುದೇ ಇಲ್ಲ. ಆದರೂ ಅವರ ಸಂಬಂಧವೆಂಬ ಸಂಬಂಧ ಮುಂದುವರೆಯುತ್ತಲೇ ಹೋಗುತ್ತದೆ. 
                                            -ನೀ.ಮ. ಹೇಮಂತ್

No comments:

Post a Comment