ಓದಿ ಓಡಿದವರು!

Friday 30 March 2012

ಬಡ-ಪಾಯಿ-ಖಾನೆ!


       ಈ ಮನೆಯಲ್ಲಿ ಬೆಳಗ್ಗೆ ೫.೩೦ ರಿಂದ ೧೦ ಘಂಟೆಯ ವರೆಗೆ ನಿರಂತರವಾಗಿ ಆಕ್ರಮಿತವಾಗಿರುವ ಏಕೈಕ ಕೊಠಡಿ ಇದೊಂದೇ. ಒಳಬಂದವರು ಮುಕ್ಕಾಲು ಘಂಟೆಯ ಕಡಿಮೆ ಹೊರಗೆ ಹೋದದ್ದು ಇತಿಹಾಸದಲ್ಲೇ ಇಲ್ಲ. ಮನೆಯೊಡತಿ ಇಡೀ ದಿನದ ಅಡುಗೆ ಪಟ್ಟಿ ನಿರ್ಧರಿಸುತ್ತಾ ನೆನಪಿಗೆ ಬಂದ ಯಾವ ಯಾವ ಅಡುಗೆ ಸಾಮಾಗ್ರಿಗಳು ಖಾಲಿಯಾಗಿವೆ, ಯಾವ ತರಕಾರಿ ತರುವುದು, ತಿಂಗಳ ಖರ್ಚುವೆಚ್ಚಗಳು ಎಷ್ಟಾಗಿವೆ, ಯಾವ ಕಡೆಯಿಂದ ಉಳಿಸಬಹುದು ಎಂದೆಲ್ಲಾ ಲೆಕ್ಕಾಚಾರ ಹಾಕುವುದು ಇಲ್ಲಿಂದಲೇ. ನಂತರ ಒಂದು ಕೈಯಲ್ಲಿ ಸಿಗರೇಟ್ ಪ್ಯಾಕೆಟ್ಟು, ಇನ್ನೊಂದು ಕೈಯಲ್ಲಿ ದಿನಪತ್ರಿಕೆ ಹಿಡಿದು ಒಳಗೆ ಬಂದರೆ ಕಾಲೇಜಿಗೆ ತಡವಾಗುತ್ತಿದೆಯೆಂದು ಹೊರಗೆ ಮಗ ಬಾಗಿಲನ್ನು ಅಪ್ಪನ ಖಾಲಿ ತಲೆಯನ್ನು ನೆನೆಸಿಕೊಂಡು ಜಡಿದಾಗಲೇ ಇಹಲೋಕಕ್ಕೆ ಮರಳಿ ನಿಧಾನವಾಗಿ ಮುಂದಿನವರಿಗೆ ದಾರಿ ಮಾಡಿಕೂಡುವುದು. ಹೊರಗೆ ತಡವಾಯ್ತೆಂದು ಬಾಯಿ ಬಾಯಿ ಬಡಿದುಕೊಂಡರೂ ಒಳಗೆ ಬಂದಾಕ್ಷಣ ಹೊರಗಿನ ಸಮಸ್ತ ಪ್ರಪಂಚದ ಪರಿವೆಯೇ ಇಲ್ಲದೆ ಆರಾಮವಾಗಿ ಒಂದು ತರಗತಿಯ ಅವಧಿಯನ್ನು ಕಳೆಯಲು ಹಿಂದೆ ಹೋಗಿದ್ದ ಕಾಲೇಜ್ ಟ್ರಿಪ್, ಮುಂದೆ ಬರಲಿರುವ ಬಹುನಿರೀಕ್ಷಿತ ಸಿನಿಮಾ ಹಾಡು ಗುನುಗುತ್ತಾ, ರಜನಿಕಾಂತ್ ಹೇರ್‍ಸ್ಟೈಲು, ಅಮೀರ್ ಖಾನ್ ಸಿಕ್ಸ್ ಪ್ಯಾಕು, ಇಮ್ರಾನ್ ಹಶ್ಮಿ ಹೊಸ ಲಿಪ್ ಲಾಕು, ತನ್ನ ಸ್ನೇಹಿತ ರಾಕೇಶನ ಹಲವು ಸ್ನೇಹಿತೆಯರು, ಎಲ್ಲಾ ಹಾಗೇ ತನ್ನ ಶುಕ್ಲಪಟಲದ ಪರದೆಯ ಮೇಲೆ ಹಾದು ಹೋಗುತ್ತಿರುವಾಗಲೇ ಮೂಲೋಕದಿಂದಾಚೆಯಿದ್ದರೂ ಕಾಲೇಜಿನ ಘಂಟೆ ತನ್ನ ಕಿವಿಗೆ ಬಿದ್ದು ಜ್ಞಾನೋದಯವಾಗಿ ಸರಸರನೆ ಹೊರಗೋಡುವನು. ಮಾಡಿರದ ಹೋಂವರ್ಕು, ಚಿತ್ರವಿಚಿತ್ರ ಶಿಕ್ಷೆ ವಿಧಿಸುವ ಗಣಿತದ ಉಪಾಧ್ಯಾಯರು, ತನ್ನ ಸಮಸ್ಯೆಯೇ ಸಾಕಾಗಿರುವಾಗ ದಿನಕ್ಕೊಂದರಂತೆ ಬರುವ ಹುಡುಗರ ಪ್ರೊಪೋಸಲ್ ಗಳು, ಈ ಹತ್ತನೆಯ ತರಗತಿ ಯಾವಾಗ ಮುಗಿಯುತ್ತೋ ಎಂದು ತಲೆಯ ಮೆಲೆ ಕೈ ಹೊತ್ತು ಅಲ್ಲೇ ಒಂದು ನಿದ್ರೆ ಮುಗಿಸಿ ಮೊಮ್ಮಗಳು ಹೊರಗೆ ಬರುವುದನ್ನೆ ಕಾಯುತ್ತಿದ್ದ ಕೊನೆಯ ಸದಸ್ಯೆ ಅಟ್ಟೆ ಕಲಿನ, ಹರಿದ ಚಪ್ಪಲಿಯ ನಾಲಗೆಯ ಅಜ್ಜಿ ಬೇಕಂತಲೇ ನಿಧಾನಿಸಬೇಕೆಂಬ ಉದ್ದೇಶವಿರದಿದ್ದರೂ ಆ ಸುಕ್ಕು ದೇಹವನ್ನು ಆ ಪಾಶ್ಚಾತ್ಯ ಕಮೋಡಿನ ಮೇಲೆ ಜೋಡಿಸಿ ಮತ್ತೆ ನಿಧಾನಗತಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ದೇಹವನ್ನು ಒಂದೊಂದೇ ಹೆಜ್ಜೆ ಯಾವುದೇ ಊನಗಳಿಲ್ಲದಂತೆ ಅಧಾರಸಹಿತ ಮುನ್ನಡೆದು ಬಾಗಿಲು ತೆರೆಯುವಷ್ಟರಲ್ಲಿ ಮುಕ್ಕಾಲು ಘಂಟೆಯ ಮಿತಿ ಪೂರ್ಣಗೊಂಡಿರುತ್ತದೆ. ಇದೇ ಪ್ರತಿ ಬೆಳಗ್ಗೆ ಕಂಡು ಬರುವ ಸಾಮಾನ್ಯ ದೃಶ್ಯ. ಇದರಲ್ಲಿ ಹಲವು ವರ್ಷಗಳಿಂದ ಯಾವುದೇ ರೀತಿಯ ಮಾರ್ಪಾಟುಗಳು ಕಂಡುಬಂದಿಲ್ಲ, ಪರಿವರ್ತನೆಗೆ ಯಾವುದೇ ರೀತಿಯ ಅಗತ್ಯವೂ ಸಹ ಇಲ್ಲಿಲ್ಲ. ಇಂತಿರ್ಪ ಈ ಮನೆಯ ಪಾಯಿಖಾನೆ ಇನ್ನೂ ಹಲವು ವರ್ಣರಂಜಿತ ಕಾರಣಗಳಿಗೆ ಬಳಕೆಯಾಗುತ್ತಿರುವುದು ಹುಬ್ಬೇರಿಸುವ ಸಂಗತಿಯೇ ಹೌದು!

ರಾತ್ರಿ ಎಷ್ಟು ಹೊತ್ತೆಂದರೆ ಅಷ್ಟು ಹೊತ್ತಿನಲ್ಲಿ, ಕಾಲೇಜು ರಜೆ ಇದ್ದಾಗ ಹೊರಗೆಲ್ಲೂ ಹೋಗದೇ ಇದ್ದರೆ ಆಗಾಗ ಪದೇ ಪದೇ ಹೋಗಿ ಹಾಜರಿ ಹಾಕಿ ಬರುತ್ತಿದ್ದ ಮಗನನ್ನು ತಂದೆ ತಾಯಿಗಳಿಬ್ಬರೂ ಗಮನಿಸುತ್ತಿದ್ದರು. ಹೊಟ್ಟೆ ಸರಿ ಇಲ್ವೇನೋ ಎಂದರೆ ಏನಿಲ್ಲ ಸರಿ ಇದೆ ಯಾಕೆ? ಎಂದು ಅವರನ್ನೇ ಮರುಪ್ರಶ್ನಿಸುತ್ತಿದ್ದನು. ಒಳಗೆ ಮೂಲೆ ಹಿಡಿದಿದ್ದ ಸುಕ್ಕು ದೇಹದ ಅತ್ತೆ ಸಿಕ್ಕಿದ್ದೇ ಅವಕಾಶವೆಂಬಂತೆ ಸೊಸೆ ಕೊಡುವ ಮೊಸರಲ್ಲೂ ಕಲ್ಲು ಹುಡುಕುವ ಬುದ್ದಿಯನ್ನು ಪ್ರದರ್ಶಿಸುತ್ತಾ ಬೆಳಗ್ಗೆ ಮಾಡಿದ್ದ ಚಟ್ನಿಯಲ್ಲಿ ಹಸಿಮೆಣಸು ಹೆಚ್ಚಾಯ್ತೆಂದೋ, ಮಧ್ಯಾಹ್ನದ ಸಾರಿಗೆ ಹುಳಿ ಹೆಚ್ಚಾಯ್ತೆಂದೋ, ಅನ್ನ ಸರಿಯಾಗಿ ಬೆಂದಿರಲಿಲ್ಲವೆಂದೋ ತನಗೂ ಹೊಟ್ಟೆ ಗುಳುಗುಳು ಎನ್ನುತ್ತಿದೆಯೆಂದು ಶ್ರಮವಹಿಸಿ ಎದ್ದುಬಂದು ಸುಖಾ ಸುಮ್ಮನೆ ಹಾಜರಿಹಾಕಿ ಬರುವುದು. ಪ್ರತಿ ಸಂಜೆ ಶಾಲೆಯಿಂದ ಮರಳಿ ಬಟ್ಟೆ ಬದಲಿಸಿ ನೇರ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡು ಅಂದು ಬಂದ ಪ್ರೇಮಪತ್ರವನ್ನ, ಹಿಡಿಸಿದ ವಾಕ್ಯವನ್ನ ಎರಡು ಮೂರು ಬಾರಿ ಓದಿ ಅಲ್ಲೇ ಫ್ಲಶ್ ಮಾಡಿ ಹಿಂದಿರುಗುತ್ತಿದ್ದವಳಿಗೆ ತನ್ನ ಅಣ್ಣನೂ ಯಾವುದಾದರೂ ಪ್ರೇಮ ಪತ್ರ ಓದಲು ಹೋಗಿ ಕೂರುವನೇನೋ ಎಂದು ಅನುಮಾನ ಬಂದರೂ ನೇರವಾಗಿ ಕೇಳಲು ಸಾಧ್ಯವಿರಲಿಲ್ಲ. ಅದೂ ಅಲ್ಲದೇ ಅಣ್ಣ ಕಂಪ್ಯೂಟರ್ ಈ ಮೇಲ್, ಫೇಸ್ಬುಕ್ ಎಲ್ಲಾ ಇರುವಾಗ ಇನ್ನೂ ಪತ್ರ ವ್ಯವಹಾರ ಇಟ್ಟುಕೊಂಡಿರುವುದು ಸತ್ಯಕ್ಕೆ ದೂರ ಎಂದು ತನಗೆ ತಾನೇ ಸಮಜಾಯಿಷಿ ಹೇಳಿಕೊಂಡು ಸುಮ್ಮನಾಗುವಳು. ಹೀಗಿರುವಾಗಲೇ ಒಂದು ಅಮೃತ ಘಳಿಗೆಯಂದು ಮಗ ಹಾಜರಿ ಹಾಕಿ ಬಂದು ಸ್ವಲ್ಪ ಹೊತ್ತಿಗೆ ರಾತ್ರಿ ಹೊಟ್ಟೆ ಬಿರಿಯುವಹಾಗೆ ತಿಂದು ನಿದ್ರಿಸಲಾಗದೆ ಅನ್ಲೋಡ್ ಮಾಡಲು ಹೋದ ಪಿತಾಮಹರು ತಮ್ಮ ಯಾವ ಪೊಲೀಸ್ ನಾಯಿಗೂ ಸೆಡ್ಡೊಡೆಯಬಲ್ಲ ನಾಸಿಕವನ್ನು ಬಳಸಿ ಮಗನ ದುಶ್ಕೃತ್ಯವನ್ನು ಪತ್ತೆ ಹಚ್ಚಿ ಮಲಗಿದ್ದ ಸಮಸ್ತ ಚರಾಚರಗಳು ಎಚ್ಚರಗೊಳ್ಳುವಂತೆ ಅಲ್ಲೇ ನಿಂತು ತುಂಬಿದ್ದ ಹೊಟ್ಟೆಯನ್ನು ಹಿಡಿದು ಕೂಗು ಹಾಕಲು, ಎಲ್ಲ ಎದ್ದು ಬಂದು ಪಾಯಿಖಾನೆಯನ್ನು ಬೆರಗುಗಣ್ಣಿನಿಂದ ನೋಡುತ್ತಿರಲು, ಬೆಕ್ಕಿನ ಮಾದರಿಯಲ್ಲಿ ನಡೆದುಬಂದ ಮಗನ ಜುಟ್ಟು ಹಿಡಿದು ಒಳಗೆ ಎಳೆದುಕೊಂಡರು. ಎಣ್ಣೆ ಹೊಡೆಯೋದನ್ನ ಬೇರೆ ಕಲಿತಿದ್ದೀಯೇನೋ, ಇದಕ್ಕೇನಾ ನಿನ್ನನ್ನ ನಾವು ಕಾಲೇಜಿಗೆ ಕಳಿಸಿದ್ದು, ಬೆಕ್ಕು ಕಣ್ಮುಚ್ಕೊಂಡು ರಮ್ ಕುಡಿದ್ರೆ ನನಿಗೆ ಗೊತ್ತಾಗಲ್ಲ ಅಂದುಕೊಂಡಿದ್ದೀಯೇನೋ. ಇನ್ನೂ ಏನೇನ್ ಕಲಿತಿದ್ದೀಯ ಹೇಳು ಬಡ್ಡೀ ಮಗನೆ ಹೇಳೋ ಎಂದು ಕಿವಿ ಹಿಂಡುತ್ತಿರಲು, ಅಜ್ಜಿ ಲಬೋ ಲಬೋ ಬಾಯಿ ಬಡಿದುಕೊಂಡಿದ್ದು, ಎಲ್ಲಾ ತನ್ನ ಸೊಸೆ ಕೊಟ್ಟಿರುವ ಸದರ ಎಂದು ಒದರಿದ್ದು ತಡವಾಗಲಿಲ್ಲ. ರಾತ್ರಿ ಇಷ್ಟು ಹೊತ್ತಾಗಿದೆ ಬೆಳಿಗ್ಗೆ ವಿಚಾರಿಸೋಣ ಸುಮ್ಮನಿರಿ ಅಕ್ಕ ಪಕ್ಕದವರಿಗೆಲ್ಲಾ ಕೇಳಿಸುತ್ತೆ ಮೊದಲೆ ನಿಮ್ಮ ಗಂಟಲು ಇಷ್ಟು ದೊಡ್ಡದಾಗಿದೆ ಎಂದು ರಂಪ ರಮ್ಮಾಯಣ ತಡೆಯಲು ತಾಯಿ ಪ್ರಯತ್ನಿಸಿದರೂ ಏನೂ ಫಲಕಾರಿಯಾಗದೆ ಮಗನಿಗೆ ಪಾಯಿಖಾನೆಯಲ್ಲೇ ಎರಡು ಮೂರು ಲಾತಗಳು ಬಿದ್ದೇ ಬಿದ್ದವು. ಆಮೇಲದೇನು ಎಮರ್ಜನ್ಸಿ ಡಿಕ್ಲೇರ್ ಆಯ್ತೋ ಅಥವಾ ಶಿಕ್ಷೆ ಸಾಕೆನಿಸಿತೋ ಗೂತ್ತಿಲ್ಲ ಒಟ್ಟಿನಲ್ಲಿ ಅಂದಿನ ಕಿರಿಕ್ಷೇತ್ರ ಅಲ್ಲಿಗೆ ಮುಕ್ತಾಯವಾಗಿ ಸೂತ್ರಧಾರಿಯೊಬ್ಬನನ್ನು ಬಿಟ್ಟು ಎಲ್ಲರೂ ತಮ್ಮ ತಮ್ಮ ಕೋಣೆಗಳಲ್ಲಿ ಮಾತುಕತೆಗಳಿಲ್ಲದೇ ಹೋಗಿ ಗುಬರಾಕಿಕೊಂಡರು. ತನ್ನ ಪತ್ರಗಳು ಅಕಸ್ಮಾತ್ ಸಿಕ್ಕಿಬಿದ್ದರೆ ತನಗೂ ಇದೇ ಗತಿ, ಇನ್ನು ಮುಂದೆ ಎಚ್ಚರವಹಿಸುವುದೆಂದು ಯೋಚಿಸದೇ ಇರಲಿಲ್ಲ ಆ ಮನೆಯ ಕಿರಿಯ ಸದಸ್ಯೆ.

ಅತ್ತೆ ಅಮೇರಿಕಾಕ್ಕೆ ಹೋಗಿದ್ದಾಗ ಅತ್ತೆಯನ್ನು ಕೊಂಚ ದಿನ ಊರಿನ ತಮ್ಮನ ಮನೆಯಲ್ಲಿ ಸ್ವಲ್ಪ ದಿನ ಏಕೆ ಬಿಡಬಾರದು, ಯಾವಾಗಲೂ ನಾವೇ ನೋಡಿಕೊಳ್ಳಬೇಕೆಂದರೆ ಹೇಗೆ, ಎಂದು ಗಂಡನ ಕಿವಿಯಲ್ಲಿ ಗುಸುಗುಸನೆ ಹೇಳಿದ್ದರೂ ಸಾಮಾನ್ಯ ಪಕ್ಕದಲ್ಲಿ ಕೂತು ಮಾತನಾಡಿದರೂ ಕೇಳದಿರುವ ಕಿವಿಗೆ ಅಮೆರಿಕಾದಲ್ಲಿರುವಾಗಲೂ ಕೇಳಿದ್ದು ವಿಪರ್ಯಾಸವೇ ಸರಿ. ಅಲ್ಲಿಂದಲೇ ಸೊಸೆಗೊಂದಿಷ್ಟು ಹಿಡಿ ಹಿಡಿ ಶಾಪ ಹಾಕಿ ಸುಸಮಯಕ್ಕೆ ಕಾದಿದ್ದು ಒಮ್ಮೆ ಸೊಸೆ ಲಂಡನ್ ಗೆ ಹೋಗಿದ್ದಾಗ ಮಗನ ಬಳಿ ಹೋಗಿ ಸೊಸೆ ತನ್ನನ್ನು ಬಾಯಿಗೆ ಬಂದ ಹಾಗೆ ಬಯ್ಯುವಳೆಂದು, ಎಲ್ಲರೂ ಮನೆಯಲ್ಲಿದ್ದಾಗ ಒಂದು ರೀತಿ, ಮನೆಯಲ್ಲಿ ತಾವಿಬ್ಬರೇ ಇದ್ದಾಗ ಒಂದು ರೀತಿ ನಡೆದುಕೊಳ್ಳುವಳೆಂದು ಮಗನ ಹಿತ್ತಾಳೆ ಕಿವಿಗೆ ಉಸುರುತ್ತಿದ್ದುದು ಒಳಗಿದ್ದ ತನ್ನ ಬಂಗಾರದ ಓಲೆಯಿರುವ ಕಿವಿಗೆ ಬಿದ್ದು ಅಲ್ಲಿ ಕುಳಿತೇ ಅತ್ತು ಎಷ್ಟು ಮಾಡಿ ಹಾಕಿದರೂ ಈ ಮುದುಕಿ ತನ್ನ ಮೇಲೆ ಈ ರೀತಿಯ ಗೂಬೆ ಕೂರಿಸುವುದಲ್ಲ ಎಂದು ಮಮ್ಮಲನೆ ಮರುಗುವಳು. ಮಲಗುವ ಕೊಠಡಿಗೆ ಹೋಗುತ್ತಾ ಲಂಡನ್ನಿಂದಲೇ ಸುರ್ ಸುರನೆ ಮೂಗೆಳೆದುಕೊಳ್ಳುವ ಶಬ್ಧ ಕೇಳಿದ್ದೇ ಹೆಂಡತಿ ಅಳುತ್ತಿರುವಳೆಂದ್ ಅರಿತು. ರಾತ್ರಿ ಮಲಗಲು ಬಂದ ಹೆಂಡತಿಗೆ ವಯಸ್ಸಾದವರು ಏನೋ ಹೇಳ್ತಾರೆ, ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಮಾರಾಯ್ತಿ. ಬಾಯಿಗೆ ಬಾಯಿ ಕೊಡೋಕೋಗ್ಬೇಡ ಎಂದು ರಮಿಸುನು. ಆದರೆ ವಿಷಯ ಅಷ್ಟಕ್ಕೇ ಮುಗಿದರೆ ಅತ್ತೆ ಸೊಸೆಯರಿದ್ದ ಮನೆಯಲ್ಲಿ ಮೆಗಾ ಸೀರಿಯಲ್ ಗಳಿಗೆ ಟಿ ಆರ್ ಪಿ ಹೇಗೆ ಸಿಕ್ಕೀತು!

ಯಾವಾಗಲೂ ಏನಾದರೂ ಹೇಳಿ ಮನ ನೋಯಿಸುತ್ತಿದ್ದ ಅತ್ತೆಗೆ ತಾನೇಕೆ ಸೇವೆ ಮಾಡಬೇಕು, ಬುದ್ದಿ ಕಲಿಸಬೇಕೆಂದು ಸೊಸೆ ಅತ್ತೆಗೆ ಅನ್ನ ಗಟ್ಟಿಯಾದರೆ ಅಜೀರ್ಣವಾಗುತ್ತದೆಂದು ಗೊತ್ತಿದ್ದರೂ ಅನ್ನಕ್ಕೆ ನೀರು ಕಡಿಮೆ ಹಾಕಿ ಅತ್ತೆಯ ಜೀರ್ಣಾಂಗ ವ್ಯವಸ್ಥೆಯನ್ನು ಕಲುಕಿ ಪದೇ ಪದೇ ಅಮೆರಿಕಾಕ್ಕೆ ಹೋಗುವಹಾಗೆ ಮಾಡಿ ಸೇಡು ತೀರಿಸಿಕೊಳ್ಳುವಳು. ಅತ್ತೆ ತನ್ನ ವಯಸ್ಸಿಗನುಸಾರವಾಗಿ ಯುಕ್ತಿ ಪ್ರದರ್ಶಿಸುತ್ತಾ ಸೊಸೆಯೇ ತನ್ನ ಸೇವೆ ಮಾಡುವಂತೆ ಪ್ರತಿ ಸಾರಿ ಹೋಗುವುದಕ್ಕೂ, ಮತ್ತೆ ತಂದು ಮಲಗಿಸುವುದಕ್ಕೂ ಸೊಸೆ ಓಡಾಡಿ ಸುಸ್ತಾಗುವಂತೆ ಮಾಡಿ ಅನ್ನಾಹಾರ ತನಗೆ ಬೇಕಾದಂತೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವುದು.

ಇತ್ತ ಮಗ ಅಪ್ಪನ ಯಾವುದಾದರೂ ಹುಳುಕು ಸಿಕ್ಕರೆ ಹಿಡಿದು ಅಮ್ಮನ ಬಳಿ ಹೇಳಿ ಸೇಡು ತೀರಿಸಿಕೊಳ್ಳಲು ಕಾಯುತ್ತಿರಲು, ಅಣ್ಣನನ್ನು ಮತ್ತೆಂದಾದರೂ ಸಿಕ್ಕಿಸಿ ಅವನ ಕೊಬ್ಬಡಗಿಸಬೇಕೆಂದು ತಂಗಿ ಯೋಚಿಸುತ್ತಿರಲು. ಅತ್ತ ಅತ್ತೆಯಿಂದ ಸೋತ ಸೊಸೆ ಮತ್ತೆ ಅತ್ತೆಯ ಮೂಗು ಮುರಿಯಲು ಹೂಂಚು ಹಾಕುತ್ತಿರಲು, ಸೊಸೆಗೆ ಸರಿಯಾಗಿ ಬುದ್ದಿಕಲಿಸಲು ಸುಕ್ಕು ದೇಹ ಯೋಜಿಸುತ್ತಿರಲು ಮಾಮೂಲಿನಂತೆ ವೃತ್ತಪತ್ರಿಕೆ ಮತ್ತು ಸಿಗರೇಟು ಹಿಡಿದು ಹೋದ ವ್ಯಕ್ತಿ ಒಂದು ಘಂಟೆಯಾದರೂ ಹೊರಬರದಿದ್ದುದನ್ನು ಕಂಡು ಮಗ ಬಾಗಿಲು ಬಡಿಯಲು ಒಳಗಿನಿಂದ ಸದ್ದೇ ಇಲ್ಲ. ಮಗನ ಗಾಬರಿ ಕಂಡು ತಾಯಿ, ಸೊಸೆಯ ತರಾತುರಿ ಕಂಡು ಅತ್ತೆ, ಎಲ್ಲರ ಅರಚಾಟ ಕಂಡು ಮಗಳು ಎಲ್ಲರೂ ಬಂದು ಬಾಗಿಲು ಬಡಿಯುತ್ತಾ ಒಳಗಿರುವ ಪುಣ್ಯಾತ್ಮನನ್ನು ಅಪ್ಪ, ರೀ, ಮಗನೇ ಎಂದು ಎಷ್ಟು ವಿಧವಿಧವಾಗಿ ಕರೆದರೂ ಒಳಗಿನಿಂದ ಸದ್ದೇ ಬಾರದ್ದನ್ನು ಕಂಡು ಎಲ್ಲರೂ ದಿಗ್ಭ್ರಾಂತರಾಗಿ, ಬಾಗಿಲು ಒಡೆದು ಪಾಯಿಖಾನೆ ಪ್ರವೇಶಿಸಲು, ಬೆರಳ ಸಂದಿಯಲ್ಲಿ ಸಿಗರೇಟ್ ಹಾಗೇ ಹಿಡಿದು ಬಾಯಿ ಕಳೆದು ಕಣ್ಣುಗಳು ತೆರೆದು ಪಂಚೆಯಿಲ್ಲದೇ ಹಾಗೇ ನೆಲಕ್ಕುರುಳಿರುವ ದೇಹ ಕಂಡು ಮಹಿಳೆಯರ ಹೃದಯವೂ ನಿಂತುಹೋಗುವಂತಾಗಿ ಹಣೆ, ಎದೆ ಬಡಿದುಕೊಳ್ಳುತ್ತಾ ಚೀರುವರು. ಮಗ ಕೊಂಚ ಸಮಯಪ್ರಜ್ಞೆ ತೋರಿ ಅಪ್ಪನನ್ನು ಹೊರಗೆಳೆದು ತಂದು ಮೈಕೈ ಉಜ್ಜಿ, ಎದೆ ಒತ್ತಿ, ಕೃತಕ ಉಸಿರು ಕೊಟ್ಟು ಎದೆಯ ಭಾಗವನ್ನು ಒತ್ತುತ್ತಿರುವಂತೆ ಹೇಳಿ ಅಕ್ಕಪಕ್ಕದವರ ಸಹಾಯ ಪಡೆದು ಧಿಡೀರನೆ ಆಸ್ಪತ್ರೆಗೆ ಕರೆದೊಯ್ಯಲು ಚಿಕಿತ್ಸೆ ಫಲಕಾರಿಯಾಗಿ ಸಣ್ಣ ಹೃದಯಾಘಾತವಾಗಿತ್ತೆಂದು ಹೇಳಲು ಹೋದ ಎಲ್ಲ ಜೀವಗಳು ಮರಳಿದಂತಾಗುತ್ತದೆ. ಕೊಂಚ ಚೇತರಿಸಿಕೊಂಡ ನಂತರ ಮತ್ತೆ ತಂದೆಯನ್ನು ಮನೆಗೆ ಕರೆತರುತ್ತಿದ್ದಂತೆ ಹಲವು ದಿನಗಳ ನಂತರ ಮನೆ ಪ್ರವೇಶಿಸುತ್ತಿದ್ದಂತೆ ಮೊದಲು ಹೋಗಿದ್ದು ಪಾಯಿಖಾನೆಗೆ! 

                                                    -ನೀ.ಮ. ಹೇಮಂತ್

ಕುರುಡು ಕಾಂಚಾಣ!


ಜೇಬಿನಿಂದ ತುಂಬಿ ತುಳುಕುತ್ತಿದ್ದ ನೋಟುಗಳು. ಚಿನ್ನದ ಹಲ್ಲುಗಳು, ಕೈತುಂಬಾ ವಜ್ರದ ಉಂಗುರಗಳು, ಅಪ್ಪಟ ಬಿಳಿಯ ಸೂಟ್ ಧರಿಸಿ ಥೇಟ್ ಕುಬೇರನ ವಂಶಸ್ಥನಂತೆ ಕಾಣುತ್ತಿದ್ದ ಶ್ರೀಮಂತ ವಯಸ್ಕ ವ್ಯಕ್ತಿ ಬೀದಿಯಲ್ಲಿ ಅದೆಲ್ಲಿಂದ ಪ್ರತ್ಯಕ್ಷನಾದನೋ, ಅವನ ಇತ್ಯೋಪರಿಯೇನೋ ಬೀದಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ, ಬೀದಿಯಲ್ಲೇ ಏನು ಇಡೀ ಪ್ರಪಂಚದಲ್ಲಿ ಅವನನ್ನು ತಿಳಿದವರು, ಬಂಧುಗಳೆಂಬುವರು, ಮಿತ್ರರು ಯಾರೂ ಇರಲಿಲ್ಲ. ಬೀದಿಯಲ್ಲಿದ್ದ ಸಮಸ್ತರ ಕಣ್ಣುಗಳು ಇವನೆಡೆಗೇ ಅಥವಾ ಈತನ ಮೈ ತುಂಬಾ ತಾಂಡವವಾಡುತ್ತಿದ್ದ ಕಾಂಚಾಣದ ಕಡೆಗೇ ನೆಟ್ಟಿದ್ದವು. ಇವನಾರೋ ಹುಚ್ಚನೇ ಇರಬೇಕೆಂದು ಎಲ್ಲರೂ ಊಹಿಸುತ್ತಿದ್ದರು. ದುಡ್ಡು ಬಚ್ಚಿಟ್ಟರೇ ಉಳಿಯುವುದು ಕಷ್ಟ ಅಂಥದ್ದರಲ್ಲಿ ಇವನು ತೆರೆದಿಟ್ಟುಕೊಂಡು ಓಡಾಡುತ್ತಿರುವನಲ್ಲ ಯಾರೀ ಶ್ರೀಮಂತ, ಏನಿವನ ಉದ್ದೇಶ ಎಂದು ಹಲವರು ಹಲವು ರೀತಿಯಲ್ಲಿ ಯೋಚಿಸುತ್ತಿರುವಂತೆಯೇ ಎಲ್ಲರ ತೀಕ್ಷ್ಣ ಕಣ್ಣೋಟಗಳನ್ನು ಸೀಳಿಕೊಂಡು ಒಬ್ಬ ಭಿಕ್ಷುಕ ನೇರವಾಗಿ ಶ್ರೀಮಂತನ ಹತ್ತಿರ ಹೋಗಿ ಭಿಕ್ಷಾಟನೆ ಮಾಡಿಯೇ ಬಿಟ್ಟ. ಆ ಶ್ರೀಮಂತ ತನ್ನ ಚಿನ್ನದ ಹಲ್ಲುಗಳನ್ನು ಪ್ರದರ್ಶಸಿತ್ತಲೇ ಆ ಚಿತ್ತಾರದ ಬಟ್ಟೆ ತೊಟ್ಟ ವ್ಯಕ್ತಿಯನ್ನು ಕೈಹಿಡಿದು ನಿಲ್ಲಿಸಿ ಆತನ ಹೆಗಲ ಮೇಲೆ ಕೈ ಹಾಕಿ ಅಲ್ಲಿಂದ ಕರೆದುಕೊಂಡು ಹೊರಟೇ ಬಿಟ್ಟ. ಅರೆರೆ! ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವನೋ, ಮೊದಲೇ ಹುಚ್ಚನಂತೆ ಕಂಡ ಈ ಶ್ರೀಮಂತನನ್ನು ನಂಬಿ ಭಿಕ್ಷುಕ ಅದಾವ ಧೈರ್ಯದ ಮೇಲೆ ಆತನ ಜೊತೆ ಹೋಗುತ್ತಿರುವನೋ ಎಂದು ಎಲ್ಲರೂ ಶ್ರೀಮಂತ ಪ್ರತ್ಯಕ್ಷನಾದಾಗ ತೆರೆದ ಬಾಯನ್ನು ಇನ್ನೂ ಮುಚ್ಚದೆಯೇ ನೋಡುತ್ತಿದ್ದ ಹಾಗೆಯೇ ಭಿಕ್ಷುಕನನ್ನು ಕರೆದುಕೊಂಡು ಬೀದಿಯಿಂದ ಕಾಣೆಯಾದನು. ಭಿಕ್ಷುಕನನ್ನು ಒಂದು ಭವ್ಯ ಬಂಗಲೆಯ ಮುಂದೆ ತಂದು ನಿಲ್ಲಿಸಿದಾಗ ಭಿಕ್ಷುಕ ಹೆದರಿ ಸಾರ್ ದಯವಿಟ್ಟು ಒಂದಷ್ಟು ಪುಡಿಗಾಸು ಹಾಕಿ ಸಾಕು ನನಿಗೆ ಎಂದು ಕೇಳಿದರೂ, ಹೆದರಬೇಡ ಬಾ ಎಂದು ಮಾತ್ರ ಹೇಳಿ ಕರೆದುಕೊಂಡು ಒಳಪ್ರವೇಶಿಸಲು ದಾರಿ ತೋರಿದರೆ, ಭಿಕ್ಷುಕ ಏನೋ ಗಂಡಾಂತರದಲ್ಲಿ ಸಿಲುಕಿದ್ದೇನೆಂದು ಹೆದರಿ ಹಯ್ಯೋ ಬೇಡ ನಿಮ್ಮ ದುಡ್ಡೂ ಬೇಡ ಏನೂ ಬೇಡ ನನ್ನನ್ನು ಬಿಟ್ಟುಬಿಡಿ ಎಂದು ಅಲ್ಲಿಂದ ಪೇರಿಕಿತ್ತಲು ಪ್ರಯತ್ನದಲ್ಲಿರುವಾಗ ಶ್ರೀಮಂತ ನಕ್ಕು ಯಾತಕ್ಕೆ ಹೆದರುತ್ತಿದ್ದೀಯ ನಿನಗೆ ಏನೂ ಮಾಡುವುದಿಲ್ಲ ಬಾ ಎಂದು ಧೈರ್ಯ ತುಂಬಿ ಕರೆದುಕೊಂಡು ಹೋಗುವನು. ಭಿಕ್ಷುಕ ಅಂಜಿಕೆಯನ್ನು ಹೊದ್ದುಕೊಂಡು ನಡುಗುತ್ತಲೇ ಒಳಗೆ ಹೋದ.

ನಂತರ ಇನ್ನಾರಾರೋ ಇನ್ನೆಲ್ಲೆಲ್ಲೋ ಅದೇ ವಿಚಿತ್ರ ಶ್ರೀಮಂತನನ್ನು ಇನ್ನಾರನ್ನೋ ಕರೆದುಕೊಂಡು ಹೋಗುತ್ತಿರುವುದನ್ನು ಕಂಡವರಿದ್ದಾರೆ. ಆದರೆ ಮತ್ತೆ ಆತನ ಜೊತೆ ಹೋದ ವ್ಯಕ್ತಿಗಳು ಮತ್ತೆ ಎಲ್ಲೂ ಕಾಣದಿರುವುದು ಜನರಲ್ಲಿ ಆತಂಕ ಹುಟ್ಟಿಸುತ್ತಿದ್ದವು. ಈ ಶ್ರೀಮಂತನ ಬಗ್ಗೆ ಹಲವು ಊಹಾ ಪೋಹಗಳು ಬಾಯಿಂದ ಬಾಯಿಗೆ ಜನರಲ್ಲಿ ಹರಡಿ ಇವನ ಬಗ್ಗೆ ಭಯವನ್ನು ಬೆಳೆಸಿಕೊಂಡರು ಆದರೆ ಕೊಂಚ ದಿನಗಳ ನಂತರ ಮುಂಚೆ ಇದ್ದ ಭಿಕ್ಷುಕನನ್ನು, ಶ್ರೀಮಂತನ ಜೊತೆ ಹೋಗಿದ್ದ ಹಲವು ಸಾಮಾನ್ಯ ವ್ಯಕ್ತಿಗಳನ್ನು ಆ ಶ್ರೀಮಂತನ ಆಕಾರದಲ್ಲಿಯೇ ಕಾಣಸಿಗಲು ಶುರುವಾದರು. ಅದೇ ರೀತಿಯ ಸೂಟು ತೊಟ್ಟು, ಜೇಬಿನ ತುಂಬಾ ಹಣ ತುಂಬಿಕೊಂಡು ಹಲ್ಲು ಕಿರಿಯುತ್ತಾ ದುಬಾರಿ ಕಾರೊಂದರಲ್ಲಿ ಹೋಗುವುದನ್ನು ಕಂಡವರ ಎದೆ ಒಮ್ಮೆ ಕೆಲಸ ಮಾಡುವುದನ್ನೇ ನಿಲ್ಲಿಸಿ ಹೋ ಇದೇನೋ ಚಮತ್ಕಾರವಾಗಿದೆ, ಆ ಶ್ರೀಮಂತ ಯಾರೋ ಮಾಮೂಲಿನ ಮನುಷ್ಯನಲ್ಲ ಅವನನ್ನು ಹಿಡಿದರೆ ತಮಗೂ ಏನಾದರೂ ಲಾಭವಾಗಬಹುದು ಎಂದು ಆ ಶ್ರೀಮಂತನನ್ನು ಹುಡುಕಾಡ ಹತ್ತಿದರು. ಎಲ್ಲಿ ಸಿಗುವನೋ, ಏನು ಮಾಡುತ್ತಿರುವನೋ, ಹೇಗೆ ಅವನನ್ನು ಪತ್ತೆಹಚ್ಚುವುದೋ ತಿಳಿಯದೇ ಸಿಕ್ಕ ಸಿಕ್ಕಲ್ಲಿ ಅವನ ಬಗ್ಗೆ ಯಾರಿಗಾದರೂ ಗೊತ್ತೇ ಎಂದು ಹುಚ್ಚರಂತೆ ಹುಡುಕಾಡತೊಡಗಿದರು ಜನ. ಬಿಟ್ಟಿ ದುಡ್ಡೆಂದರೆ ದೇಹವೆಲ್ಲಾ ಜೇಬಂತೆ. ಜನರ ಕನಸಿನಲ್ಲೆಲ್ಲಾ ಆ ಶ್ರೀಮಂತನೇ ಬಂದು ಅವರನ್ನು ಕರೆದುಕೊಂಡು ಹೋಗಿ ಧಿಢೀರನೆ ಶ್ರೀಮಂತರನ್ನಾಗಿ ಮಾರ್ಪಡಿಸಿದ ಹಾಗೆ ಕಂಡವರು ನಿದ್ರಿಸಲಾಗದೆ, ತಿನ್ನಲಾಗದೆ, ನೆಮ್ಮದಿ ಕಳೆದುಕೊಂಡು ಓಡಾಡ ತೊಡಗಿದರು. ಆತನಿಂದ ಶ್ರೀಮಂತರಾಗಿ ಮಾರ್ಪಾಡಾದವರಾದರೂ ಸಿಕ್ಕರೆ ಸಾಕೆಂದು ಮಾಡುವ ಕೆಲಸವನ್ನೆಲ್ಲಾ ಮರೆತು ಅಲೆಯತೊಡಗಿದರು. ಈ ವಿಷಯ ಮಾಧ್ಯಮದವರಿಗೆಲ್ಲಾ ತಿಳಿದು ಎಲ್ಲೆಲ್ಲೂ ಆ ಶ್ರೀಮಂತನದೇ ಆರ್ಭಟ. ಈ ವಿಚಿತ್ರ ಶ್ರೀಮಂತನ ಬಗ್ಗೆ ಹಲವು ರೀತಿಯ ವಾದವಿವಾದಗಳು ಸೃಷ್ಟಿಯಾಗಿ ಅವನನ್ನು ಅಥವಾ ಆತನಿಂದ ಶ್ರೀಮಂತರಾದವರೆನ್ನಲಾಗುತ್ತಿರುವವರನ್ನು ಕಂಡಲ್ಲಿ ಸೆರೆಹಿಡಿಯಬೇಕು. ಆತ ಜನರಲ್ಲಿ ಇಲ್ಲ ಸಲ್ಲದ ಆಸೆ ಹುಟ್ಟಿಸುತ್ತಿದ್ದಾನೆ, ಅವನ ಬಗ್ಗೆ ನಿಗೂಢವಾದ ದೂರುಗಳು ಕೇಳಿಬಂದಿವೆ ಎಂದು ಕೇಸ್ ಕೂಡ ದಾಖಲಿಸಲಾಗುತ್ತದೆ. ಯಾರು, ಏನೆಂದು ಗೊತ್ತಾಗದೆ ಕೇವಲ ಹೇಳಿಕೇಳಿದವರ ಮಾತುಗಳು, ಮತ್ತು ಕೆಲವರು ಕಾರ್ಯಕರ್ತರ ಒತ್ತಡದ ಮೇರೆಗೆ ಪೊಲೀಸರೂ ಸೇರಿ, ಹಲವರು, ಹಲವು ತಮ್ಮದೇ ಕಾರಣಗಳೊಂದಿಗೆ ಆ ಶ್ರೀಮಂತರನ್ನು ಹುಡುಕಲು ಶುರುಮಾಡುತ್ತಾರೆ. ಯಾರು ಎಲ್ಲಿ ಕಂಡರೂ ಸುದ್ದಿ ಮುಟ್ಟಿಸುವಂತೆ ಸುದ್ದಿ ಸಮಾಚಾರ ಹಲವು ಮಾಧ್ಯಮಗಳ ಮುಖಾಂತರ ಬಿತ್ತರವಾಗುತ್ತಲೇ ಇರುತ್ತದೆ. ಇಡೀ ರಾಜ್ಯದಲ್ಲಿಯೇ ಒಂದು ಆತಂಕ ಮತ್ತು ಕುತೂಹಲದ ವಾತಾವರಣ ನಿರ್ಮಾಣವಾಗುತ್ತದೆ.  

ಶ್ರೀಮಂತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಹಲವು ತಂಡಗಳು ಒಟ್ಟುಗೂಡಿದ್ದರಿಂದ ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಶ್ರೀಮಂತರು ಸಿಕ್ಕಿಬೀಳುತ್ತಾರೆ. ಆದರೆ ಸತ್ಯ ಸಂಗತಿ ಏನೆಂದು ತಿಳಿಯುವ ಮೊದಲು ಮತ್ತು ವಿಚಾರಣೆ ಆಗುವ ಮುನ್ನ ವಿಷಯವನ್ನು ಜನರಿಗೆ ತಿಳಿಯದಂತೆ ಗೌಪ್ಯವಾಗಿಡಲಾಗುತ್ತದೆ. ಸಿಕ್ಕಿ ಬಿದ್ದ ಒಂದಿಬ್ಬರು ಶ್ರೀಮಂತರನ್ನು ಬೇರೆ ಬೇರೆ ಕಡೆ ಗೌಪ್ಯವಾದ ಸ್ಥಳದಲ್ಲಿ ಕೂಡಿ ಹಾಕಿ ಸಂಬಂಧ ಪಟ್ಟವರು, ಪೊಲೀಸರು, ಮಂತ್ರಿಗಳು ನೇರವಾಗಿ ಒಟ್ಟು ಸೇರಿ ಅವರುಗಳ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಗರೆಯುತ್ತಾರೆ. ಎಲ್ಲಿಂದ ಬಂತು ಈ ದಿಢೀರ್ ದುಡ್ಡು? ಯಾರು ನೀನು? ಎಲ್ಲಿ ಪೇರಿಸಿಟ್ಟಿದ್ದೀಯ ಎಲ್ಲಾ ದುಡ್ಡನ್ನ? ನಿನ್ನ ನಿವಾಸವೆಲ್ಲಿ? ನಿನ್ನ ಸಂಸಾರ ಎಲ್ಲಿದೆ, ಯಾರು ಯಾರು ನಿನ್ನೊಂದಿಗೆ ಶಾಮೀಲಾಗಿದ್ದಾರೆ? ನಿನ್ನ ಕೆಲಸವೇನು? ನಿನ್ನನ್ನು ಶ್ರೀಮಂತನಾಗಿಸಿದ ಆ ನಿಗೂಢ ವ್ಯಕ್ತಿ ಯಾರು? ಆತ ಎಲ್ಲಿ ಹೋದ? ದುಡ್ಡನ್ನೆಲ್ಲಾ ನೀನು ಎಲ್ಲೆಲ್ಲಿ ಖರ್ಚು ಮಾಡಿದ್ದೀಯ? ಎಂದು ಅವನ ಉತ್ತವನ್ನೂ ಕಾಯದೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕೇಳುತ್ತಲೇ ಹೋಗುತ್ತಾರೆ. ಎಲ್ಲರ ಎದೆಬಡಿತ ಜೋರಾಗಿರುತ್ತದೆ. ವಿಷಯ ದುಡ್ಡಿನದ್ದಾಗಿರುವುದರಿಂದ ನೆರೆದಿದ್ದವರೆಲ್ಲರಲ್ಲೂ ಉತ್ಸುಕತೆ ಸ್ಪಷ್ಟವಾಗಿ ಕಾಣುತ್ತಿರುತ್ತದೆ. ಆ ಕತ್ತಲೆಯ ಕೋಣೆಯಲ್ಲಿ ಆತನ ತಲೆಯ ಮೇಲಿನಿಂದ ಬೀಳುತ್ತಿದ್ದ ಬೆಳಕಿನಲ್ಲಿ ಆ ಶ್ರೀಮಂತ ವ್ಯಕ್ತಿ ಮುಗ್ಧನಂತೆ ನೋಡುತ್ತಾ ತನ್ನ ತಪ್ಪಾದರೂ ಏನು ಎಂಬಂತೆ ನೋಡುತ್ತಿರುತ್ತಾನೆ. ಇವನಾರೋ ಅಕ್ರಮಣಕಾರಿ ವ್ಯಕ್ತಿ ಆಗಿರದಿದ್ದರೂ ಕೈಕೋಳ ಹಾಕಲಾಗಿರುತ್ತದೆ. ಈತ ಸಿಕ್ಕಿ ಬಿದ್ದಾಗ ಇವನ ಜೇಬಿನಲ್ಲಿದ್ದ ನೋಟುಗಳು ಕೋಟಾ ನೋಟಲ್ಲ ಸರಕಾರದ ನೋಟುಗಳೇ ಎಂದು ತಿಳಿದುಬರುತ್ತದೆ. ಅದರ ಜೊತೆಗೆ ಈ ಮುಂಚೆ ಎಲ್ಲೆಲ್ಲಿ ಈ ನೋಟುಗಳನ್ನ ಬಳಸಲಾಗಿದೆ ಎಂದು ಅದರ ಇತಿಹಾಸ ಅನ್ವೇಷಣೆ ಮಾಡಲು ಯಾವುದೇ ರೀತಿಯ ಸುಳಿವು ಸಿಗುವುದಿಲ್ಲ. ಅದರ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿರುತ್ತದೆ. ಈಗ ಏನೇ ಉತ್ತರ ಬಂದರೂ ಈ ವ್ಯಕ್ತಿಗಳಿಂದಲೇ ಬರಬೇಕೆಂದು ಅವರುಗಳ ಮೇಲೆಯೇ ಒತ್ತಡ ಹೇರಿ ಉತ್ತರ ತೆಗೆಸಲು ಹಲವು ಪ್ರಯತ್ನಗಳನ್ನ ಮಾಡುತ್ತಾರೆ. ಆತನಿಗೂ ಅವನನ್ನು ಶ್ರೀಮಂತನನ್ನಾಗಿಸಿದ ವ್ಯಕ್ತಿಯ ಹೆಸರು, ಕುಲ, ಗೋತ್ರ, ಮೂಲ ಏನೂ ಗೊತ್ತಿರುವುದಿಲ್ಲ.

ಒಬ್ಬ ಶ್ರೀಮಂತ ತನ್ನನ್ನು ಕರೆದುಕೊಂಡು ಒಂದು ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ಒಳಗೆ ಹೋಗುತ್ತಾ ಅಂಗಳದಲ್ಲಿ ಬಿದ್ದಿದ್ದ ಒಂದೆರಡು ನೋಟುಗಳನ್ನು ಕದ್ದು ಜೇಬಿಗಿಳಿಬಿಡುವಾಗ ಆ ಶ್ರೀಮಂತ ನೋಡಿ ನಕ್ಕು ಅದೇನ್ ಬೇಡ ಬಿಡು ಎಂದಷ್ಟೇ ಹೇಳಿ ಮನೆಯ ಹಿತ್ತಲು ಪ್ರವೇಶಿಸುತ್ತಾನೆ. ತಾನು ಹೆದರೆದರಿಕೊಂಡೇ ಪ್ರವೇಶಿಸಿದರೆ ಆ ಅದೇನೋ ವಿಚಿತ್ರವಾದ ವಿವರಿಸಲಾಗದಂತಹ ದೃಶ್ಯ ಅದೇನೋ ದುಡ್ಡಿನ ಮರದಂತಹ ಒಂದು ಮರ ಅದರ ತುಂಬಾ ನೋಟುಗಳು. ಎಷ್ಟು ಬೇಕೋ ಕಿತ್ತುಕೊಂಡು ಯಾರನ್ನು ಬೇಕಾದರೂ ಕರೆದು ಸಹಾಯದೊಂದಿಗೆ ತೆಗೆದುಕೊಂಡು ಹೋಗಲು ಹೇಳುತ್ತಾನೆ. ತಾನು ಮೂಟೆ ಮೂಟೆ ಗಟ್ಟಲೆ ತುಂಬಿಸಿಕೊಂಡು ಲೆಕ್ಕ ಹಾಕಲಾರದಷ್ಟು ದುಡ್ಡನ್ನು ಮನೆಗೆ ತೆಗೆದುಕೊಂಡು ಹೋಗುತ್ತನೆ. ತನ್ನ ಮನೆಯಲ್ಲೂ ಒಂದು ಅಂಥದ್ದೇ ಮರ ಹುಟ್ಟಿಕೊಳ್ಳುತ್ತದೆ. ಆ ಶ್ರೀಮಂತ ತನಗೆ ಸಹಾಯ ಮಾಡಿದಂತೆ ಇನ್ನು ಎಷ್ಟೋ ಜನರಿಗೆ ಸಹಾಯ ಮಾಡಿರುತ್ತಾನೆ. ಆ ಶ್ರೀಮಂತನಿಗೂ ಯಾರೋ ಶ್ರೀಮಂತ ಸಹಾಯ ಮಾಡಿದ್ದರಂತೆ, ನಂತರ ತಾನೂ, ಮತ್ತು ಆ ಶ್ರೀಮಂತನಿಂದ ಸಹಾಯ ಪಡೆದ ಫಲಾನುಭವಿಗಳೆಲ್ಲರೂ ಇನ್ನು ಎಷ್ಟೋ ಜನರಿಗೆ ಸಹಾಯ ಮಾಡಿರುವುದಾಗಿ ಮತ್ತು ತನ್ನಿಂದ ಫಲಾನುಭವ ಹೊಂದಿದವರೂ ಸಹ ಅದೇ ಮಾರ್ಗದಲ್ಲಿ ಮುಂದುವರೆಯುತ್ತಿರುವುದಾಗಿ ವಿವರವಾಗಿ ತನ್ನ ವಿಸ್ಮಯ ಕಥೆಯನ್ನು ಬಿಚ್ಚಿಡಿತ್ತಾನೆ. ಎಲ್ಲರೂ ಬಾಯಿ ಕಳೆದು ಒಳಗೆ ಹೋಗಿ ಬರುತ್ತಿದ್ದ ನೊಣವನ್ನೂ ಲೆಕ್ಕಿಸದೆ ಹಾಗೇ ಸ್ತಬ್ಧವಾಗಿ ಕುಳಿತಿರುತ್ತಾರೆ. ಮತ್ತೊಬ್ಬ ಸಿಕ್ಕಿಬಿದ್ದವನ ಮಾತೂ ಸಹ ನೂರಕ್ಕೆ ನೂರರಷ್ಟೂ ಇದೇ ಕಥೆಯಾಗಿರುತ್ತದೆ. ಆದರೆ ಒಬ್ಬರಿಗೊಬ್ಬರು ಗೊತ್ತಿಲ್ಲವೆಂದೇ ಹೇಳುತ್ತಿರುತ್ತಾರೆ. ಯಾರಿಗೂ ಏನೂ ಅರ್ಥವಾಗಿರುವುದಿಲ್ಲ. ಒಂದಿನಿತೂ ನಂಬಲೂ ಸಾಧ್ಯವಾಗುವುದೂ ಇಲ್ಲ. ಹಲವು ರೀತಿ ದಂಡಿಸಿ, ಏನು ಮಾಡಿದರೂ ಕೊನೆಗೂ ಅವರ ಪ್ರವರವನ್ನೇ ಮುಂದುವರೆಸುತ್ತಿರುತ್ತಾರೆ ಹೊರತು ತಮಗೆ ಬೇಕಾದ ಉತ್ತರ ಹೊರಗೆಡುವುದಿಲ್ಲ. ಮತ್ತು ಅವರು ಹೇಳಿದ ಮರ ಕೂಡ ತಮ್ಮ ಮನೆಯಲ್ಲಿ ಸಿಗುವುದಿಲ್ಲ. ಯಾವುದೇ ರೀತಿಯ ಆಧಾರವಿಲ್ಲದೇ ಅವರ ಸುಳ್ಳಿನ ಕಂತೆಯಂತಹ ಕಥೆಗಳನ್ನ ನಂಬಲು ಇಡೀ ಪ್ರಪಂಚದಲ್ಲಿ ಯಾರೂ ತಯಾರಿರುವುದಿಲ್ಲ. ಹಲವಾರು ಪರೀಕ್ಷೆಗಳಲ್ಲಿ ಬುದ್ದಿ ಸ್ಥಿಮಿತವಾಗೇ ಇದೆ ಎಂದು ಕಂಡುಬರುತ್ತದೆ. ಅದೇ ಸಮಯದಲ್ಲಿ ಇನ್ನಷ್ಟು ದಿಢೀರ್ ಶ್ರೀಮಂತರು ಸಿಕ್ಕಿಬೀಳುತ್ತಾರೆ. ಅವರದ್ದೂ ಅದೇ ಉವಾಚ. ಅಲ್ಲೂ ದುಡ್ಡು ಬಿಟ್ಟರೆ ಬೇರೇನೂ ಸುಳಿವು ಸಿಗುವುದಿಲ್ಲ. ನ್ಯಾಯ ತೀರ್ಮಾನಕ್ಕೆ ಸಾಕ್ಷಿಗಳಿಲ್ಲದೇ, ಬಲವಾದ ಅಪರಾಧದ ಕಾರಣಗಳಿಲ್ಲದೆ. ಎಲ್ಲ ಹೊರಬರುತ್ತಾರೆ. ಮತ್ತು ಈಗ ಇವರ ಬಳಿ ಇದ್ದ ದುಡ್ಡಿಗಾಗಿ ಹಲವರು ಕೊಲೆಯಾಗುತ್ತಾರೆ, ಇನ್ನೂ ಹಲವರು ಶ್ರೀಮಂತರಾಗುತ್ತಾ ಹೋಗುತ್ತಾರೆ. ನೋಡ ನೋಡುತ್ತಾ ಇಡೀ ಊರು ಇಡೀ ರಾಜ್ಯ ಇಡೀ ದೇಶ ಶ್ರೀಮಂತವಾಗುತ್ತಾ ಹೋಗುತ್ತದೆ. ಎಲ್ಲಿ ನೋಡಿದರೂ ಕೈಲಿ, ಕಾರಲ್ಲಿ, ಸಿಕ್ಕ ಸಿಕ್ಕದರಲ್ಲಿ ದುಡ್ಡು ತುಂಬಿಕೊಂಡು ಹೋಗುತ್ತಿರುವವರೇ ಕಾಣಸಿಗುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಇದರಿಂದ ದೇಶದ ಹಣಕಾಸಿನ ಪರಿಸ್ಥಿತಿಯಲ್ಲಿ ತುಂಬಾ ಏರುಪೇರುಗಳಾಗುತ್ತವೆ. ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುತ್ತಾ ಹೋಗುತ್ತದೆ. ಆದರೆ ಯಾರಿಂದಲೂ ಯಾವುದನ್ನೂ ತಡೆಯುವ ಹಾಗೆಯೇ ಇರುವುದಿಲ್ಲ ಎಲ್ಲ ಮೂಕ ಪ್ರೇಕ್ಷಕರಾಗಿಯೇ ಉಳಿಯುತ್ತಾರೆ. ಎಲ್ಲರಿಗೂ ಬೇಕಾಗಿರುತ್ತದೆ ದುಡ್ಡು. ಎಷ್ಟು ಬಂದರೂ ಸಾಲದೆ ಎಲ್ಲರೂ ಶಕ್ತಿ, ಜಾಗವಿರುವಷ್ಟೂ ಹಣವನ್ನು ಶೇಖರಿಸುವುದರಲ್ಲೇ ತೊಡಗುತ್ತಾರೆ. ಸಾಕು ಸಾಕೆನಿಸುವಷ್ಟು ದುಡ್ಡು ಎಲ್ಲರಲ್ಲೂ ಸೇರುತ್ತಾ ಹೋಗುತ್ತದೆ. ಯಾರಿಗೂ ಕೆಲಸ ಮಾಡಲು, ಕನ್ನ ಹಾಕಲು, ಕೊಲೆ ಮಾಡಲು, ಮುಂತಾದ ಯಾವುದೇ ಕಾರ್ಯಕ್ಕೂ ಈಗ ಕಾರಣವೇ ಇಲ್ಲವಾಗಿರುತ್ತದೆ. ಎಲ್ಲೆಲ್ಲೂ ದುಡ್ಡು ಚೆಲ್ಲಾಡಿರುತ್ತದೆ. ಈ ವಿಷಯ ಶೀಘ್ರದಲ್ಲಿ ಇಡೀ ಪ್ರಪಂಚಕ್ಕೆ ಹಬ್ಬುತ್ತದೆ. ಎಲ್ಲರೂ ಲಗ್ಗೆಯಿಕ್ಕುತ್ತಾರೆ. ಎಲ್ಲರ ದಾಳಿ ತಪ್ಪಿಸಿಕೊಳ್ಲಲಾಗದೆ ಇಡೀ ದೇಶ ತತ್ತರಿಸುತ್ತದೆ. ಮಾರಣ ಹೋಮವಾಗುತ್ತದೆ. ದುಡ್ಡನ್ನು ಹೊರಗಿನಿಂದ ಬಂದವರೆಲ್ಲಾ ದೋಚಿಕೊಂಡು ಹೋಗಲು ಶುರುಮಾಡುತ್ತಾರೆ. ಮನುಷ್ಯತ್ವಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಎಲ್ಲರಿಗೂ ಬೇಕಾಗಿದ್ದು ದುಡ್ಡೊಂದೇ, ಯಾರಿಗೂ ತೊಂದರೆ ಮಾಡದಿರಲೆಂದು ತಾವೇ ದೇಶವಿದೇಶಗಳಿಗೆ ಹೋಗಿ ದುಡ್ಡು ಹಂಚಿ ಬರಲು ಶುರುಮಾಡುತ್ತಾರೆ. ಎಲ್ಲರ ಮನೆಯಲ್ಲೂ ದುಡ್ಡಿನ ಮರ ಬೆಳೆಯುತ್ತಾ ಹೋಗುತ್ತದೆ. ಚಿಕ್ಕ ಚಿಕ್ಕ ಹಳ್ಳಿಗಳಿಂದ ಹಿಡಿದು ಪ್ರತಿಯೊಬ್ಬ ಮನುಷ್ಯನಲ್ಲೂ ದುಡ್ಡು ಕ್ರೋಢೀಕಾರಿಸಲಾರಂಭವಾಗುತ್ತದೆ. ತಮ್ಮ ಬಳಿಯೂ ದುಡ್ಡು ಬರುವುದೆಂದು ತಿಳಿದು ಮುಗಿಬೀಳುವುದನ್ನು ಜನ ಕಡಿಮೆ ಮಾಡಿರುತ್ತಾರೆ. ದುಡ್ಡು ಎಲ್ಲೆಡೆ ಪಸರಿಸುತ್ತಾ ಹೋಗುತ್ತದೆ. ಎಷ್ಟೋ ಕಂಪನಿಗಳು ಮುಚ್ಚಿ ಹೋಗುತ್ತವೆ. ಎಷ್ಟೋ ಜನ ಬುದ್ದಿವಂತರಾಗಿ ತಿನಿಸುಗಳನ್ನು ಶೇಖರಿಸಿಡುತ್ತಾರೆ. ಇನ್ನೆಷ್ಟೋ ಜನ ದುಡ್ಡನ್ನು ಲೀಲಾಜಾಲವಾಗಿ ವ್ಯಯ ಮಾಡಿ ಬೇಕಾದ್ದು ಮಾಡಿ ಆನಂದವನನುಭವಿಸುತ್ತಾರೆ. ಎತ್ತ ನೋಡಿದರೂ ದುಡ್ಡೇ ದುಡ್ಡು. ಇದಕ್ಕಾಗಿಯೇ ತಾವು ಇಷ್ಟೆಲ್ಲಾ ಬವಣೆಗಳನ್ನು ಇಷ್ಟು ದಿನ ಅನುಭವಿಸಿದ್ದಾ ಎಂದು ಕೈಲಿ ಹಿಡಿದು ಜನ ದಿಗ್ಮೂಢರಂತೆ ನಿಂತಿರುತ್ತಾರೆ. ಎಷ್ಟು ವ್ಯಯ ಮಾಡಿದರೂ ದುಡ್ಡು ಎಲ್ಲರಲ್ಲೂ ಸೇರುತ್ತಲೇ ಇರುತ್ತದೆ. ನೋಡನೋಡುತಲೇ ಇಡೀ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲಿ ಅಪರಿಮಿತ ದುಡ್ಡಿರುತ್ತದೆ. ಅದೇ ದುಡ್ಡಿರುವುದರ ಕಾರಣದಿಂದ ಹಲವಾರು ಪ್ರಲೋಭನೆಗಳಿಗೆ ಸಿಕ್ಕು ಎಷ್ಟೋ ಕಡೆ ಮನುಷ್ಯ ಮನುಷ್ಯರಲ್ಲಿ ಜಗಳಗಳು ಶುರುವಾಗುತ್ತದೆ. ಕೊಲೆಗಳಾಗುತ್ತದೆ. ಮತ್ತೊಂದು ಘಟ್ಟದ ನಂತರ ಎಲ್ಲಾ ಶಾಂತವಾಗುತ್ತದೆ. ಮನುಷ್ಯರು ಬದುಕುವುದರ ಆಸಕ್ತಿಯನ್ನೇ ಕಳೆದುಕೂಳ್ಳುತ್ತಾರೆ. ಏನು ಮಾಡಲೂ ಕಾರಣವೇ ಸಿಗದಂತಾಗಿರುತ್ತದೆ. ಆಕಾಶ ನೋಡುತ್ತಾ ಹಲವರು ಕಾಲ ಕಳೆಯುತ್ತಿರುತ್ತಾರೆ. ಮೂಲಭೂತ ಅವಶ್ಯಕತೆಗಳಂತಹ ಬಟ್ಟೆ, ಆಹಾರ ಉತ್ಪಾದನೆಯೂ ಸಹ ನಿಂತುಹೋಗುತ್ತದೆ. ಇಡೀ ಪ್ರಪಂಚ ದುಡ್ಡೊಂದು ಬಿಟ್ಟು ಬೇರೆಲ್ಲದರ ಕೊರತೆಯಿಂದ ವಿನಾಶದ ಹಾದಿ ಹಿಡಿದಿರುವ ಸ್ಪಷ್ಟ ಸೂಚನೆಗಳು ಕಾಣಸಿಗುತ್ತವೆ.

ಕೆಲವೇ ವರ್ಷಗಳ ನಂತರ……

ಕಳ್ಳನೊಬ್ಬ ಬಾಗಿಲು ತೆರೆದಿದ್ದ ಮನೆಗೆ ನುಗ್ಗುತ್ತಾನೆ. ಚಿನ್ನಾಭರಣ, ದುಡ್ಡು ತುಂಬಿದ್ದ ಲಾಕರ್ ತೆರೆದಿರುತ್ತದೆ, ಅದರ ಎದುರುಗಡೆ ಬೀಗ ಹಾಕಿರುವ ಕೋಣೆಯನ್ನು ಕಷ್ಟ ಪಟ್ಟು ಮುರಿದು, ಸದ್ದು ಕೇಳಿ ಬಂದ ಮನೆಯವರ ಜೊತೆಯೆಲ್ಲಾ ಕಿತ್ತಾಡಿ ಅನ್ನದ ಪಾತ್ರೆ ಎತ್ತಿಕೊಂಡು ಪರಾರಿಯಾಗುತ್ತಾನೆ. ಬಡವರ ಮನೆಯಲ್ಲೂ ಕನ್ನ ಹಾಕುವ ಇಂಥವರನ್ನು ಶಪಿಸುತ್ತಾ ಇಡೀ ರಾತ್ರಿ ನಿದ್ರೆ ಮಾಡದೇ ಮನೆಯವರೆಲ್ಲಾ ತಲೆ ಮೇಲೆ ಕೈ ಹೊತ್ತು ಕಳೆಯುತ್ತಾರೆ. ನೆರೆಮನೆಯವರೆಲ್ಲಾ ಮಾರನೆಯ ದಿನ ಸಾಂತ್ವಾನ ಹೇಳಿ ತಮ್ಮ ಬಳಿ ಇದ್ದದ್ದನ್ನ ಹಂಚಿಕೊಳ್ಳುತ್ತಾರೆ. ಕೆಲಸಗಳೆಲ್ಲಾ ಮುಂಚಿನಂತೆಯೇ ನಡೆಯುತ್ತಿರುತ್ತದೆ. ಅನ್ನಕ್ಕೆ, ಗ್ಯಾಸ್ ಗೆ, ಪೆಟ್ರೋಲ್ ಗೆ ಮುಂಚಿನಂತೆಯೇ ಬೇಡಿಕೆಯಿರುತ್ತದೆ. ಆದರೆ ಸರಕುಗಳಿಗೆ ಬದಲಾಗಿ ಬೇರೆ ಏನನ್ನಾದರೂ ಕೊಡಬೇಕಾಗಿರುತ್ತದೆ. ಎಲ್ಲರ ಬಳಿಯೂ ಇರುವ ದುಡ್ಡು ಚಲಾವಣೆಯಲ್ಲಿ ಇಲ್ಲದೆ ಬಹಳ ಸಮಯವಾಗಿರುತ್ತದೆ. ಅನ್ನ ಬೇಕೆಂದರೆ ರಾಗಿ ಕೊಡಬೇಕಾಗಿರುತ್ತದೆ. ರೈತರಿಗೆ ಅತಿ ಹೆಚ್ಚಿನ ಹುದ್ದೆ ನೀಡಲಾಗಿರುತ್ತದೆ. ಸಿಟಿಯಲ್ಲಿರುವವರು ಅಕ್ಕಿ, ರಾಗಿ ಪಡೆಯಲು, ತಮ್ಮ ಬಳಿಯಿರುವ ಅಲಂಕಾರಿಕ ವಸ್ತುಗಳನ್ನು ಬದಲಾಗಿ ಕೊಡಬೇಕಾಗಿರುತ್ತದೆ. ಬದಲಾಗಿ ಏನೂ ಕೊಡಲಾಗದವರು ಬಡವರಾಗಿ ಬದುಕುತ್ತಿರುತ್ತಾರೆ. ಪ್ರತಿಯೊಂದು ವಸ್ತುವಿಗೂ ಅದರ ಬೇಡಿಕೆಗೆ ತಕ್ಕಂತೆ ಬೆಲೆಯಿರುತ್ತದೆ. ಎಲ್ಲ ಕೆಲಸಗಳೂ ಮಾಮೂಲಿನಂತೆ ನಡೆಯುತ್ತಿರುತ್ತವೆ. ದುಡ್ಡಿಗಾಗಿ, ಆಸ್ತಿಗಾಗಿ ಮನುಷ್ಯತ್ವವನ್ನು ಕಳೆದುಕೊಂಡಿದ್ದ ಜನರ ಜಾಗದಲ್ಲಿ ಈಗ ಹೊಟ್ಟೆಗಾಗಿ, ಬಟ್ಟೆಗಾಗಿ, ನೀರಿಗಾಗಿ, ಮೂಲಭೂತ ಅವಶ್ಯಕತೆಗಳಿಗಾಗಿ ಜಗಳಗಳು ನಡೆಯುತ್ತಿರುತ್ತವೆ, ಆದರೆ ಮನುಷ್ಯತ್ವ ಪೂರಾ ಕಳೆದುಕೊಂಡಿರುವುದಿಲ್ಲ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬದುಕು ಸಾಗಿಸುತ್ತಿರುತ್ತಾರೆ. ದುಡ್ಡು, ಹಣ, ರೊಕ್ಕ, ಕಾಸು, ಲಕ್ಶ್ಮಿ, ಕಾಂಚಾಣ ಒಂದಿಲ್ಲ ಅಷ್ಟೇ, ಪ್ರಪಂಚ ಮುಂಚಿನಂತೆಯೇ ನಡೆಯುತ್ತಿರುತ್ತದೆ. 

                                                         -ನೀ.ಮ.ಹೇಮಂತ್

Friday 23 March 2012

ನಗುವ ಹೆಂಡತಿ!


ನಗುವಹೆಂಡತಿ


                 ಗುವ ಹೆಂಗಸನ್ನ, ಅಳುವ ಗಂಡಸನ್ನ ನಂಬಬಾರದಂತೆ ಹೌದಾ? ಆದರೆ ನನಗೆ ನನ್ನ ಹೆಂಡತಿಯನ್ನ ನಂಬದೆಯೇ ಬೇರೆ ವಿಧಿಯೇ ಇಲ್ಲ. ನನ್ನ ಹೆಂಡತಿಯನ್ನ ಯಾವ ಸಮಯದಲ್ಲಿ ನೆನೆದರೂ ಕಣ್ಣ ಮುಂದೆ ಬರುವ ಆಕೃತಿಗೆ ಕೇವಲ ಊರಗಲದ ಬಾಯಿ, ಬೆಣಚುಕಲ್ಲುಗಳಂತ ಹಲ್ಲುಗಳು! ಮಾಧ್ಯಮ ಸಂದರ್ಶನದಲ್ಲಿ, ಮದುವೆಯಲ್ಲಿ, ಸೂತಕದ ಮನೆಯಲ್ಲಿ, ಕಾರಿನಲ್ಲಿ, ಭಾಷಣ ಮಾಡುವಾಗ ಎಲ್ಲಿ, ಯಾವಾಗ ಕಂಡರೂ ಹಲ್ಲುಕಿರಿಯುವ ಮುಖ್ಯಮಂತ್ರಿಗಳಿಗೆ ಇಡೀ ರಾಜ್ಯದಲ್ಲಿ ಯಾರಾದರೂ ಸರಿಸಾಟಿಯಿದ್ದಾರೆಂದರೆ, ಅದು ನನ್ನ ಏಕಮಾತ್ರ ಪತ್ನಿ ಖುಷಿ. ಎಲ್ಲ ಮಕ್ಕಳೂ ಅಳುತ್ತಾ ಹುಟ್ಟಿದರೆ ಇವಳು ಹುಟ್ಟುವಾಗ ಒಸಡು ಕಿರಿಯುತ್ತಾ ನಗುತ್ತಲೇ ಹುಟ್ಟಿದ್ದಳಂತೆ ಆ ವಿಸ್ಮಯಕ್ಕೆ ಇವಳ ತೀರ್ಥರೂಪುಗಳು ಖುಷಿ ಎಂದು ನಾಮಕರಣ ಮಾಡಿದರಂತೆ ಎಂಬ ಒಂದು ಅಂತೆ ಕಂತೆ ಕಥೆಯು ಇವಳ ಅಜ್ಜಿಯ ಹಲ್ಲಿಲ್ಲದ ಬಾಯಿಯಲ್ಲಿ ಹಲವು ಬಾರಿ ನಾನು ಕೇಳಿದ್ದುಂಟು. ಇವಳ ನಗುವಿನ ಕಾರಣ ಇವಳ ತೀರ್ಥುರೂಪರನ್ನು ಕೇಳಿದರೆ, ಇವಳು ಶಾಲೆಯಲ್ಲಿದ್ದಾಗೊಮ್ಮೆ ನೈಟ್ರಸ್ ಆಕ್ಸೈಡ್ ಮೂಸಿದ್ದಲ್ಲದೇ, ಸಿಹಿ ಸಿಹಿಯಾಗಿದೆ ಎಂದು ಕುಡಿದುಬಿಟ್ಟಿದ್ದಳೆಂದು ಅದರಿಂದ ಇಂದಿನವರೆಗೂ ಅವಳು ನಗುತ್ತಲೇ ಇರುವಳೆಂದು ಹೇಳಿದ್ದು ಕೂಡ ಒಂದು ನೆನಪು. ನಾನು ಯಾವಾಗಲೂ ಚಿಂತೆಯಲ್ಲಿದ್ದುದನ್ನು ಕಂಡು ಸಮಸ್ಯೆಯೇನೆಂದು ಕೇಳಿದವರಿಗೆ ಹಿಂಜರಿಯುತ್ತಲೇ ನನ್ನ ಹೆಂಡತಿ ಯಾವಾಗಲೂ ನಗುವಳು ಎಂದು ಹೇಳಿದರೆ, ಕೇಳಿದವರೆಲ್ಲರೂ ನನ್ನ ಮೇಲೇ ಗೂಬೆ ಕೂರಿಸಿ, ಇದು ನನ್ನ ಏಳೇಳು ಜನುಮದ ಸುಕೃತಫಲ, ತಮ್ಮ ತಮ್ಮ ಹೆಂಡತೀರು ಅಪರೂಪಕೊಮ್ಮೆ ಕಿಸಕ್ಕೆಂದ ಶಬ್ಧ ಕೇಳಿದೊಡನೆ, ಆಹಾ ಇದೇ ಶುಭದಿನ ಎಂದು ತಿಳಿದು ರಮಿಸಲು ಹತ್ತಿರ ಹೋದರೆ, ಅದು ಸೀನಿದ ಸದ್ದೆಂದು ಸಾಕ್ಷಾತ್ಕಾರವಾಗಿ ಪೆಚ್ಚು ಮೋರೆಯಲ್ಲಿ ಹಿಂತಿರುಗುವರೆಂದು, ತಮ್ಮ ಹೆಂಡತೀರು ಮದುವೆ ಫೋಟೋದಲ್ಲಷ್ಟೇ ಸದಾ ನಗುವರೆಂದು ಮತ್ತೆ ನಗುವಿನ ಝಲಕ್ ಕಂಡು ಯಾವುದೋ ಕಾಲವಾಯ್ತೆಂದು ಸದಾ ಕಾಲ ಒಂದಲ್ಲಾ ಒಂದು ಕಾರಣಕ್ಕೆ ಮುಖ ಇಷ್ಟಗಲ ಮಾಡಿಕೊಂಡು, ಮೂತಿ ಮುರಿಯುತ್ತಿರುವರೆಂದು ಹೇಳುತ್ತಾ ಬಾಣಲೆ ತಲೆಯ ಮೇಲಿನ ಬೆವರೊರೆಸಿಕೊಂಡಾಗ ಮಾತ್ರ ಹೌದಪ್ಪಾ ಪಾಪ ತುಂಬಾ ಬೆಂದಿದ್ದಾರೆ ಸಂಸಾರದಲ್ಲಿ ಎಂದು ನನಗನಿಸದೇ ಇರಲಿಲ್ಲ, ಮತ್ತು ಹಲ್ಲಿಲ್ಲದವನ ಕಡಲೆ, ಕಡಲೆಯಿಲ್ಲದವನ ಹಲ್ಲಿನ ಗಾದೆ ನೆನಪಾಗದಿರಲಿಲ್ಲ. ಹೆಂಡತೀರು ನಗಬೇಕು ಸ್ವಾಮಿ ಆಗಲೇ ಸಂಸಾರ ಲವಲವಿಕೆಯಿಂದಿರುವುದು ಎಂದು ಯಾರೋ ಟಿವಿ ಯಲ್ಲಿ ಹೇಳುತ್ತಿದ್ದಾತನಿಗೆ ನನ್ನ ಹೆಂಡತಿಯಂತ ಹೆಂಡತಿ ಸಿಕ್ಕಬೇಕಿತ್ತು, ಆತನ ಹೆಂಡತಿ ನಕ್ಕಿದ್ದೇ ಕಂಡಿರುವುದಿಲ್ಲ ಬಡಪಾಯಿ ಅದಕ್ಕೆ ಕೇಳಿಕೊಳ್ಳುತ್ತಿದ್ದಾನೆಂದುಕೊಂಡು ಸುಮ್ಮನಾದೆ. ನನ್ನ ಹೆಂಡತಿಯ ನಗುವಿನಿಂದ ನಾನು ಇಷ್ಟು ಬಸವಳಿದಿದ್ದೇಕೆಂದು ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತೆ. ಅವಳಿಗೆ ಅಷ್ಟು ನಗುವುದಕ್ಕೆ ಚೈತನ್ಯವಾದರೂ ಎಲ್ಲಿಂದ ಬರುವುದೋ ಒಮ್ಮೆಯೂ ಅರ್ಥವಾಗಲಿಲ್ಲ. ಬೂಸ್ಟ್ ಇಸ್ ದ ಸೀಕ್ರೆಟ್ ಆಫ್ ಸಚಿನ್ ಸೆಹವಾಗ್ಸ್ ಎನರ್ಜಿ ಆದರೆ, ವಾಟ್ ಇಸ್ ದ ಸೀಕ್ರೆಟ್ ಆಫ್ ಮೈ ಹೆಂಡತೀಸ್ ಸ್ಮೈಲಿಂಗ್ ಎನರ್ಜಿ? ಏನೇ ಆದರೂ ಮನ:ಪೂರ್ವಕವಾಗಿ ನಗುತ್ತಾಳಪ್ಪಾ, ಅದಂತೂ ನಿಜ. ಒಂದು ದಿನಕ್ಕೂ ನಾಟಕೀಯ, ಅಸ್ವಾಭಾವಿಕ ನಗೆಗೆ ನಾನು ಸಾಕ್ಷಿಯಾಗಲೇ ಇಲ್ಲ.

            ತಾಳಿ ಕಟ್ಟುವಾಗ ತಲೆ ಬಗ್ಗಿಸಿಕೊಂಡು ಕಣ್ಣು ಹೊಡೆದು ನನ್ನ ಕಡೆಗೆ ಒಂದು ಮುಗುಳ್ನಗೆ ಬೀರಿದ್ದಳು. ಆಹಾ ಎಷ್ಟು ಚೆಂದ ನಗ್ತಾಳಪ್ಪಾ ನನ್ನ ಮುದ್ದು ಹೆಂಡತಿ ನಾನದೇ ಪುಣ್ಯ ಎಂದುಕೊಂಡಿದ್ದೆ. ಆರತಕ್ಷತೆಯಲ್ಲಿ ತೆಗೆದ ಹಲವು ಫೋಟೋ ಗಳು ಬ್ಲೇಚ್ ಆಗಿ ಹಾಳಾದವು ಫೋಟೋಗ್ರಾಫರನನ್ನು ಎಗ್ಗಾ ಮುಗ್ಗಾ ಬಯ್ಯಲು ಆತ ಬ್ಲೀಚ್ ಆಗಲು ಕಾರಣ ನನ್ನ ಹೆಂಡತಿಯ ಹಲ್ಲುಗಳು ಅದನ್ನು ಮುಚ್ಚಿದ್ದಿದ್ದರೆ ಫೋಟೋಗಳು ಸರಿಯಾದ ಬೆಳಕಿತ್ತು, ಕೊಟ್ಟ ಕೊಂಚ ಬೆಳಕೇ ಅವಳ ಹಲ್ಲುಗಳಿಂದ ಆ ರೀತಿ ಪ್ರತಿಫಲಿಸಿ ಮುಖಗಳು ಹಾಳಾಗಿದ್ದವೆಂದು ಹೇಳಲು ಬೇರೆ ದಾರಿ ಕಾಣದೇ ದುಡ್ಡು ಕೊಟ್ಟಿದ್ದಾಯ್ತು. ಅವಳ ನಗುವಿಗೆ ಮಾರು ಹೋಗಿ ಮದುವೆಯಾಗಿದ್ದ ನಾನು ಪ್ರಥಮ ರಾತ್ರಿಗೆ ಪಟ್ಟ ಪೇಚಾಟ ನನಗೆ ಮಾತ್ರ ಗೊತ್ತಿರುವುದು. ರಟ್ಟೆ ಮುಟ್ಟಿದರೆ ಒಳಗೊಳಗೇ ನಗುತ್ತಿದ್ದಳು, ಕೆನ್ನೆ ಮುಟ್ಟಿದರೆ ಕಣ್ಣಲ್ಲೇ ನಗುತ್ತಿದ್ದಳು, ತುಟಗೆ ಮುತ್ತಿಡಲು ಅದೆಷ್ಟು ಪ್ರಯತ್ನಿಸಿದರೂ ಮೀಸೆ ಚುಚ್ಚುತ್ತಿದೆ ಎಂದು ನಾಚುತ್ತಾ ನುಣುಚಿಕೊಂಡು ನಗುತ್ತಿದ್ದಳು, ಸೊಂಟಕ್ಕೆ ಕೈಹಚ್ಚಿದರೆ ನುಲಿನುಲಿದು ಕಿಲಕಿಲ ಸದ್ದು ಮಾಡುತ್ತಿದ್ದಳು, ಶು ಶು ಹೊರಗೇ ಕೇಳ್ಸುತ್ತೇ ಎಂದರೆ ಕಚಗುಳಿ ಆಗುತ್ತೆ ಎಂದು ಮತ್ತೆ ನಗುತ್ತಲೇ ಇದ್ದಳು. ಅಂತೂ ಉರುಳಾಡುವಷ್ಟರಲ್ಲಿ ಲೌಡ್ ಸ್ಪೀಕರಿನಲ್ಲಿ ನಕ್ಕು ಅಂತೂ ಮಾರನೆಯ ದಿನ ಮನೆಮಂದಿಯೆಲ್ಲಾ ನನ್ನ ನೋಡಿ ನೋಡಿ ಮುಸಿ ಮುಸಿ ನಗುವಂತೆ ಮಾಡಿದ್ದಳು.

          ನಾಲ್ಕೈದು ದಿನಗಳಿಂದ ಎಂಥಾ ಬಿಸಿ ಬಿಸಿ ಸಮಯದಲ್ಲೂ ಅವಳು ತಣ್ಣಗೆ ನಗುತ್ತಿದ್ದುದನ್ನು ಕಂಡೂ ಕಂಡೂ ಒಳಗೊಳಗೇ ಒಂದು ರೀತಿಯ ಕೋಪ ಹುಟ್ಟುತ್ತಿದ್ದಾಗಲೇ ಅವಳ ಅಜ್ಜಿ ಮೆಟ್ಟಿಲಿಳಿಯುವಾಗ ಬಿದ್ದು ಕಾಲು ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಮಾಡುವವರೆಗೂ ಸುಮ್ಮನಿದ್ದ ಅಜ್ಜಿ, ಔಷಧಿ ಬರೆದುಕೊಡುತ್ತಾ, ಜೆಲ್ ಬರೆದುಕೊಡುತ್ತೇನೆ, ಕ್ರಮೇಣ ನೋವು ಕಡಿಮೆ ಆಗುತ್ತೆ, ಆದಷ್ಟೂ ನಡೆದಾಡಿ, ಎನ್ನುತ್ತಿರಲು ಬಾಯಿಗೆ ಕೈ ಅಡ್ಡ ಹಿಡುದು ನಗುತ್ತಿದ್ದುದನ್ನು ನೋಡಿ ನಾನೂ, ವೈದ್ಯರೂ ಮುಖ ಮುಖ ನೋಡಿಕೊಂಡೆವು. ಅಜ್ಜಿ ಮನೆಗೆ ವಾಪಾಸಾಗುತ್ತಿದ್ದಾಗಲೂ ನಗುತ್ತಲೇ ಇತ್ತು. ನನಗಂತೂ ಈ ನಗುವುದೆಲ್ಲೋ ಪಿತ್ರಾರ್ಜಿತವಾಗಿ ಬಂದ ರೋಗವಿರಬಹುದೋ ಏನೋ ಎಂದು ಅನುಮಾನವಾಗಹತ್ತಿತ್ತು. ಮನೆಗೆ ಮರಳಿ ಯಾಕೆ ನಗುತ್ತಿದ್ದಾರೆಂದು ಕೇಳಲು, ಅವ ಜೆಲ್ ಯಾಕ್ ಕೊಡ್ತಾನ್ ಮಾರಾಯ, ನಡಿಯುಕಾತ್ತ ನನಗೆ, ಗಾಯ ಸೋಲ್ಪ ಗುಣಾದ್ರೆ ಸಾಕ್ ಮಾರಾಯ ನಡೀತೆ ಎಂದು ಹೇಳಿದ್ದು ಕಂಡು, ಅದಕ್ಕೇ ಮೂಳೆ ನೋವಿಗೆ ಜೆಲ್ ಕೊಡ್ತೀನಿ ಅಂದಿದ್ದು ಅವರು ಎಂದು ಹೇಳಿದ್ದೇ ಇನ್ನೂ ಜೋರಾಗಿ ನಗೆಯಾಡಲು ಶುರುಮಾಡಿತು ಅಜ್ಜಿ. ಸರಿಹೋಯ್ತು. ನೂಲಿನಂತೆ ಚೂಡಿದಾರ, ಅಜ್ಜಿಯಂತೆ ಮೊಮ್ಮಗಳು ಎಂದುಕೊಳ್ಳುತ್ತಾ ಏನಾಯ್ತೀಗ ಎಂದು ಕೇಳಿದ್ದಕ್ಕೆ, ತಮ್ಮ ಕಡೆ ಜೆಲ್ ಎಂದರೆ ಊರುಗೋಲೆಂದು, ಇವ ಜೆಲ್ ಬರ್ಕೊಡ್ತಾನೆಂದದ್ದಕ್ಕೆ ಜೆಲ್ ಹಿಡಿದು ನಡೆಯುವುದನ್ನು ನೆನೆದು ನಗೆ ಬಂತೆಂದು ಹೇಳಿದ್ದಕ್ಕೆ ನನಗೂ ನಗೆ ಬರದಿರಲಿಲ್ಲ. ಹನಿಮೂನು. ಹನಿಮೂನು ಹೋಗಿ ನಗೆಮೂನಾಗಿತ್ತು. ಅವಳು ನಗುವುದು, ನಾನು ನಗಿಸುವುದು. ನಾನು ಏನೇ ಮಾಡಿದರೂ ನಗುತ್ತಿದ್ದಳು. ನನ್ನ ಮೈಯ ಯಾವ ಭಾಗ ಕಂಡರೂ ನಗುತ್ತಿದ್ದಳು. ಕನ್ನಡಿಯ ಮುಂದೆ ನಿಂತರೆ ನನಗೆ ನಾನೇ ಕಪಿ ಕಂಡಂತೆ ಭಾಸವಾಗುತ್ತಿತ್ತು. ಆ ಮರ ನೋಡು ಎಷ್ಟು ಹೂವುಗಳು ತುಂಬಿದೆ ಎಂದರೆ, ಹ ಹ ಹ ಅಲ್ವಾ ನನಗಂತೂ ತುಂಬಾನೆ ಇಷ್ಟವಾಯ್ತಪ್ಪ ಎನ್ನುತ್ತಿದ್ದಳು. ಈ ಬಡತನ ಎಲ್ಲಿ ಹೋದರೂ ತಪ್ಪೋದಿಲ್ಲ ನೋಡು, ಎಂಥಾ ಬಡತನ ಆದ್ರೂ ಹಾಕೋಕೆ ಬಟ್ಟೆ, ತಿನ್ನೋಕೆ ಊಟ ಇದ್ದಿದ್ರೆ ಸಾಕಿತ್ತು ಎಂದು ಚಿಂದಿ ಬಟ್ಟೆಯಲ್ಲಿದ್ದ ಸಂಸಾರವನ್ನು ತೋರಿಸಿದರೆ, ನಮಗೆ ಅವರು ಬಡವರ ಹಾಗೆ ಕಾಣ್ತಾರೆ, ನಾವು ಇನ್ನೊಬ್ಬರಿಗೆ ಬಡವರ ಹಾಗೆ ಕಾಣ್ತೀವೇನೋ ಅಲ್ವಾ ಹ ಹ ಹ.. ಎಂದು ಮತ್ತೆ ಹಲ್ಲು ಝಳಪಿಸಿದಳು. ಇವಳು ನನ್ನ ಮಾತನ್ನ ಉಡಾಫೆ ಮಾಡ್ತಿದ್ದಳೋ ಇಲ್ಲ ವೇದಾಂತ ಹೇಳ್ತಿದ್ದಳೋ ಎಂದು ಅರ್ಥವಾಗದೆ ಒಂದು ಕೃತಕ ನಗೆ ಬೀರಿ ಫುಲ್ ಸ್ಟಾಪ್ ಹಾಕ್ತಿದ್ದೆ.

          ಮನೆಗೆ ಮರಳಿ ಕೆಲವು ದಿನಗಳಲ್ಲೇ ಅಮ್ಮನ ದೂರುಗಳು ಕ್ರಮೇಣ ಶುರುವಾದವು. ಏನೋ ಯಾವಾಗಲೂ ಚೆಲ್ಲು ಚೆಲ್ಲಾಗಿ ಆಡ್ತಾಳೆ, ಗಂಡನಾಗಿ ಸ್ವಲ್ಪ ನೀನು ಸುಧಾರಿಸಬೇಕು ಮೆತ್ತಗಿದ್ರೆ ಆಗಲ್ಲ ಪುಟ್ಟ, ನೋಡಿದ ಜನ ಏನನ್ನಲ್ಲಾ ಹೇಳು, ಶುರುನಲ್ಲೇ ಸ್ವಲ್ಪ ಬಂದೋಬಸ್ತ್ ಮಾಡು ಅವಳನ್ನ ಇಲ್ಲಾ ಅಂದ್ರೆ ಮುಂದೆ ಮುಂದೆ ತುಂಬಾ ಕಷ್ಟವಾಗುತ್ತೆ ಹೇಳಿದೀನಿ. ಡಾಂ ಡೂಂ ಡಸ್ ಪುಸ್ ಕೊಯ್ ಕೊಟಾರ್ ಎಂದು ಇನ್ನೂ ಏನೇನೋ ಬುದ್ದಿವಾದಗಳು ಹೇಳಿ ಅಮ್ಮ ಏನೋ ಆರಾಮವಾಗಿ ಹೋಗಿ ನಿದ್ರೆ ಮಾಡಿದರು. ನಾನೂ ಅಮ್ಮನ ಮಾತುಗಳು ಅರ್ಧಂಬರ್ಧ ಕಿವಿಗೆ ಹಾಕಿಕೊಂಡು ಟಿವಿ ಆಫ್ ಮಾಡಿ ಅದೇ ತಾನೇ ಹಾಲಿನ ಲೋಟವಿಡಿದುಕೊಂಡು ಗಟಗಟನೆ ಕುಡಿದು ತನ್ನ ತೇಗಿಗೆ ತಾನೇ ನಕ್ಕು ತುಟಿಗಳಿಗೆ ವಾಸಲೀನ್ ಬಳಿದುಕೊಳ್ಳುತ್ತಿದ್ದ ಅವಳನ್ನು ಕಳ್ಳನೋಟದಲ್ಲಿ ನೋಡುತ್ತಲೇ ಮುಖ ಗಂಟು ಹಾಕಿಕೊಳ್ಳಲು ಪ್ರಯತ್ನಿಸುವಷ್ಟರಲ್ಲಿ ಬಂದು ನನ್ನ ಬಾಹುಗಳನ್ನು ದಿಂಬು ಮಾಡಿಕೊಳ್ಳುತ್ತಿದ್ದಂತೆ ಗಂಟುಗಳೆಲ್ಲಾ ಬಿಚ್ಚಿಹೋದವು. ಒಂದು ದಿನ ಪರ್ಸ್ ಕಳೆದುಹೋಯ್ತು ಕಣೇ ಎಂದು ಚಿಂತೆಯಲ್ಲಿದ್ದರೆ, ಹ ಹ ಹ ಸ್ವಲ್ಪ ಜಾಗರೂಕರಾಗಿರೋಕೆ ಆಗಲ್ವ, ಏನ್ ಬೇಜವಾಬ್ದಾರಿನಪ್ಪ, ಪರ್ಸ್ ನ ಕಳ್ಕೊಂಡವರು ನಾಳೆ ನನ್ನ ಕಳ್ಕೊಳ್ಳಲ್ಲ ಅಂತ ಏನ್ ಗ್ಯಾರಂಟಿ ಹ ಹ ಹ ಹ ಹ.. ನನಗೆ ನಿಜವಾಗಲೂ ನಗು ಬರಲಿಲ್ಲ. ಅಂದು ಕೇಳಿಯೇ ಕೇಳಿದೆ, ಹೇಯ್ ನೀನ್ಯಾಕೇ ಯಾವಾಗಲೂ ನಗ್ತಿರ್ತೀಯಾ ಎಂದು ಸ್ವಲ್ಪ ಜೋರಾಗೇ ಕೇಳಿದ್ದೆನೇನೋ. ಅವಳ ಮುಖದಲ್ಲಾದ ಹಠಾತ್ ಬದಲಾವಣೆಯನ್ನ ಕಂಡು ಛೆ ಛೆ ಕಿಲಕಿಲನೆ ನಗುತ್ತಿದ್ದ ಮಗುವನ್ನ ಚಿವುಟಿಬಿಟ್ಟೆನೇನೋ ಆ ಪರ್ಸೂ ಬೇಡಾ ಅದರಲ್ಲಿದ್ದ ದುಡ್ಡೂ ಬೇಡ ಇವಳ ನಗುಮುಖವೊಂದೇ ಸಾಕು ಎಂದು ನಿಜವಾಗಲೂ ಅನ್ನಿಸಿತು. ಮುದುಡಿದ ಅವಳ ತುಟಿಗಳಿಗೆ ಮೀಸೆಯಿಂದ ಕಚಗುಳಿಯಿಟ್ಟೆ, ನಗುವಿನ ಬಾಗಿಲು ತೆರೆಯಿತು. ಸ್ವಲ್ಪ ದಿನ ಅವಳ ನಗುವಿನ ತಂಟೆಗೆ ಹೋಗಲೇ ಇಲ್ಲ. ಫೋನಲ್ಲಿ ಅವಳು ಅವಳ ಸ್ನೇಹಿತರ ಜೊತೆ ಮಾತನಾಡುತ್ತಾ ಸಿಗ್ನಲ್ ಸಿಗುವುದಿಲ್ಲೆಂದು ಮನೆಯ ಹೊರಗಿನ ಪೋರ್ಟಿಕೋದಲ್ಲ್ ನಿಂತು ಅಕ್ಕ ಪಕ್ಕದ ಮೂರು ಮೂರು ಮಹಡಿಯ ಪ್ರತಿಯೊಂದು ಮನೆಯ ಪ್ರತಿಯೊಬ್ಬರಿಗೂ ಕೇಳುವಂತೆ ನಗುತ್ತಿದ್ದರಿಂದ ನನ್ನ ಕಿವಿ ಆಗಾಗ ಅದು ಇದು ವಿಷಯ ಬೀಳಲು ಶುರುವಾಯ್ತು. ನಿನ್ನ ಹೆಂಡತಿ ಅದ್ಯಾರ್ ಜೊತೇನೋ ಮಾತಾಡ್ತಾ ಹೆಂಗ್ ನಗ್ತಿದ್ಳೂ ಅಂತೀಯಾ, ಏನ್ ವಿಷಯ ಇರುತ್ತೆ ಅವಳಿಗೆ ಹಾಗೆ ನಗೋದಕ್ಕೆ, ಹುಡುಗೀರು ಮದುವೆ ಆದಮೇಲೆ ಇಷ್ಟು ಚೆಲ್ಲು ಚೆಲ್ಲಾಗಿ ಆಡಬಾರದಪ್ಪ, ಹೆಣ್ಣಾದವಳಿಗೆ ಸ್ವಲ್ಪ ಗಾಂಭೀರ್ಯ ಇರ್ಬೇಕು, ಗಂಡ ಸರಿ ಇರಬೇಕು, ನಾವುಗಳು ನಮ್ಮ ಗಂಡಂದಿರು ಕಣ್ಣು ಬಿಟ್ಟರೆ ಅಡುಗೆ ಮನೆ ಸೇರ್ಕೊತಿದ್ವಿ ಇವಳು ನೋಡು, ಮನೆಯಲ್ಲಿ ಅವಳದ್ದೇ ಅಂತೆ ರೀ ರಾಜ್ಯಭಾರ, ಪಾಪ ಗಂಡಾನೇ ಎಲ್ಲಾ ಕೆಲಸಗಳನ್ನ ಮಾಡಿ ಕೆಲಸಕ್ಕೂ ಹೋಗ್ತಾನಂತೇ, ಅವಳು ಆರಾಮವಾಗಿ ಹತ್ತು ಗಂಟೆಗೆ ಎದ್ದೇಳೋದಂತೆ, ಅಂತೂ ಒಳ್ಳೇ ಹೆಂಡತಿ ಆಗೋಕೆ ನಾಲಾಯಕ್ಕಪ್ಪಾ, ಈಗಿನ ಹೆಣ್ಣು ಮಕ್ಕಳು ಯಾಕ್ ಹೇಳ್ತೀರಾ ನನ್ನ ಮಗಳು ಹಿಂಗೆನಾದ್ರು ಮಾಡಿದ್ರೆ ಕಾಲು ಮುರೀತಿದ್ದೆ…… ಸಹಸ್ರ ನಾಮವೇ ಸ್ತುತಿಸುತ್ತಿದ್ದರು. ಅಂತೂ ನನ್ನ ಹೆಂಡತಿ ಹೆಂಗೋ ಫೇಮಸ್ಸಂತೂ ಆಗ್ತಿದ್ದಳಪ್ಪ. ಪಾಪ ಎಲ್ಲಾ ಕೆಲಸಗಳನ್ನ ಮಾಡ್ತಿದ್ಳು. ಅಮ್ಮನಿಗೆ ಎಲ್ಲ ರೀತಿಯಲ್ಲಿ ನೆರವಾಗ್ತಿದ್ಳು ಅದಕ್ಕೇ, ಏನೇ ದೂರುಗಳಿದ್ರು ಅತ್ತೆ ಸೊಸೆ ಮೆಗಾ ಸೀರಿಯಲ್ ರೀತಿಯ ಯಾವುದೇ ತೊಂದರೆಗಳನ್ನ ಕೊಡ್ತಿರಲಿಲ್ಲ ನೇರವಾಗಿ. ತುತ್ತಾ…? ಮುತ್ತಾ…? ಗೊತ್ತಾ…? ಅಂತ ಹಾಡು ಹೇಳುವ ಪ್ರಮೇಯ ಸಹ ಎಂದೂ ಬರಲಿಲ್ಲ ಸಧ್ಯ. ಇವಳು ನಿದ್ರಿಸುತ್ತಿದ್ದಾಗಲೂ ಹಲ್ಲುಕಿರಿದೇ ಇರ್ತಿದ್ದಳು, ಕನಸಿನಲ್ಲಿ ಅದಾವ ಕಾಮೆಡಿ ಸೀನ್ಸ್ ನೋಡ್ತಿದ್ಲೋ ನನಗೆ ಎಂದೂ ಅರ್ಥವಾಗಲಿಲ್ಲ. ಎಷ್ಟು ಕೆಲಸಗಳಿದ್ರೂ, ಏನೇ ತೊಂದರೆಗಳಿದ್ರೂ ಒಟ್ಟಿನಲ್ಲಿ ಅವಳ ನಗೆಯೊಂದು ಸಾಕಿತ್ತು ಎಲ್ಲ ಮರೆಸುತ್ತಿತ್ತು. ಯಾವಾಗ ಮನೆಗೆ ಬಂದರೂ ಕಿಲಕಿಲನೆ ಬರಮಾಡಿಕೊಳ್ಳುತ್ತಿದ್ದಳು. ಯಾವ ಗಂಭೀರ ಕಷ್ಟಗಳನ್ನೇ ಹಂಚಿಕೊಳ್ಳುತ್ತಿದ್ದರೂ ಹಾಸ್ಯ ಪ್ರಹಸನವೆಂಬಂತೆ ಸಮಸ್ಯೆ ಅಷ್ಟೇನಾ ಎಂದೆನೆಸಿಬಿಡುತ್ತಿದ್ದಳು. ಇವಳ ಚೈತನ್ಯ ಚಿಲುಮೆಯಂತಹ ನಗುವಿಗೆ ನಿಜವಾಗಲೂ ಕ್ರಮೇಣ ಮಾರುಹೋಗುತ್ತಾ ಸಾಗುತ್ತಿದ್ದೆ.

          ಗಾಂಧೀಬಜಾರ್ ಬಳಿ ನಿನ್ನ ಹೆಂಡತಿಯನ್ನು ಕಂಡೆ, ಯಾರೋ ಇದ್ದನಪ್ಪ ಜೊತೆಗೆ ಎಂದು ಮೂರು ನಾಲ್ಕು ಬಾರಿ ವಿವಿಧರು ಹೇಳಿದಾಗ ಎಲ್ಲಿ ಹೋಗಿದ್ದೆ ಎಂದು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಳು. ನಗುವವರು ತುಂಬಾ ವಿಷಯಗಳನ್ನ ಮುಚ್ಚಿಡ್ತಾರೆ ಕಣೋ ಹುಶಾರು ಎಂದು ಅವರಿವರು ಎಚ್ಚರಿಸುತ್ತಿದ್ದುದು ತಲೆಯಲ್ಲಿ ಬೇರೆ ಕುಳಿತುಕೊಂಡು ಅವಳನ್ನು ಒಂದೆರಡು ಬಾರಿ ಹಿಂಬಾಲಿಸಿದೆ ಸಹ. ಮದುವೆಯಾಗಿ ನಾಲ್ಕು ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ ನಿಜ ಆದರೆ ಅದರ ಕೊರತೆ ಎಂದೂ ಕಾಡಿರಲಿಲ್ಲ ಈ ಮಗುವಿನಿಂದಾಗಿ. ಆದರೆ ಇವಳು ತಪ್ಪು ದಾರಿ ಏನಾದರು ಹಿಡಿದಿರಬಹುದೇ? ನನ್ನ ಆಫೀಸಿನ ವೇಳೆಯಲ್ಲಿ ಇವಳು ಗಾಂಧಿಬಜಾರ್ ಹೋಗಿ ಅಲ್ಲಿಂದ ಕೋರಮಂಗಲದವರೆಗೂ ಹೋಗುತ್ತಿದ್ದು ನಿಜವಾಗಿತ್ತು. ಜೊತೆಯಲ್ಲಿದ್ದವನಾರಿರಬಹುದು. ಇವಳ್ಯಾಕೆ ಈ ವಿಷಯ ನನ್ನಿಂದ ಮುಚ್ಚಿಟ್ಟಳು. ಏನಿರಬಹುದು ಇವರ ಮಧ್ಯೆ. ಇವಳನ್ನು ನಿಜವಾಗಲೂ ನಂಬಬಹುದೇ? ನಗುನಗುತ್ತಲೇ ನನ್ನ ಬೆನ್ನ ಹಿಂದೆಯೇ ಚೂರಿ ಹಾಕಿದಳಿವಳು. ಈ ವಿಷಯಗಳನ್ನ ಮರೆಮಾಚಲೆಂದೇ ಇವಳು ನಗುವನ್ನು ಬಳಸುತ್ತಿದ್ದಳೇನೋ? ಅಸಹ್ಯ ಹುಟ್ಟಿಸಿತು ಇವಳ ನಗು. ಅವಳ ಮುಖ ಸಹ ಹಲವು ದಿನಗಳು ನೋಡಲಾಗಲಿಲ್ಲ. ಇವಳು ಅಡುಗೆ ಹಾಲ್ ನಲ್ಲಿ ಕೂತು ಬೀನ್ ನನ್ನೋ ಕಾರ್ಟೂನ್ ನೋಡಿಯೋ ನಗುತ್ತಿದ್ದರೆ ರೂಮಿನಲ್ಲಿದ್ದ ನನಗೆ ಮೈ ಹೊತ್ತಿ ಉರಿಯುತ್ತಿತ್ತು. ನನ್ನನ್ನೂ ಕಾರ್ಟೂನ್ ಎಂದು ತಿಳಿದುಕೊಂಡಿದ್ದಾಳೆನಿಸುತ್ತೆ ಎಂದು ಒಳಗೊಳಗೇ ಹೇಳಿಕೊಳ್ಳುತ್ತಿದ್ದೆ. ಅವಳು ಎದ್ದು ಮಲಗಲು ಒಳ ಬರುವ ವೇಳೆಗೆ ಸರಿಯಾಗಿ ಅವಳ ವಿರುದ್ಧ ದಿಕ್ಕಿಗೆ ತಿರುಗಿ ಮಲಗುತ್ತಿದ್ದೆ. ನನ್ನ ಬೆನ್ನೇ ದಿಂಬು ಮಾಡಿ ಮಲಗುತ್ತಿದ್ದಳು. ಎಚ್ಚರವಿದ್ದರೂ ನಿಧಾನವಾಗಿ ಹಾಗೇ ಕೊಸರಾಡಿಕೊಂಡು ಮಲಗುತ್ತಿದ್ದೆ. ನಾನೇನು ಮಾಡಿದ್ದೆ ಇವಳಿಗೆ ನಗುವಿನಲ್ಲೇ ಕೊಂದಳಲ್ಲಾ ಎಂದು ಕೊರಗುತ್ತಿದ್ದೆ. ಒಂದು ದಿನ ಗಾಂಧಿ ಬಜಾರಿನಲ್ಲಿ ರಸ್ತೆಯಲ್ಲಿ ನಿಂತು ನಗೆಯಾಡುತ್ತಿದ್ದಾಗೊಮ್ಮೆ ಎದುರಿಗೇ ಸಿಕ್ಕುಬಿದ್ದಳು. ನಾನೇನೂ ಮಾತನಾಡಲಿಲ್ಲ. ಒಂದು ರೀತಿಯ ಗೆದ್ದ ಮನೋಭಾವದೊಂದಿಗೆ ಅವಳನ್ನೇ ನೋಡಿದೆ. ಕಪಾಳೆಗೆ ಬಿಗಿಯಬೇಕೆನಿಸಿತ್ತು. ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು ಎಂದು ನನ್ನ ಕೈ ಹಿಡಿದು ಪರಿಚಯ ಮಾಡಿಸಿದಳು. ಇವನು ನನ್ನ ಸ್ನೇಹಿತೆ ಲಕ್ಷ್ಮಿ ಇದಾಳಲ್ಲಾ ಅವಳ ಪ್ರೇಮಿ, ಪಾಪ ಲಕ್ಷ್ಮಿಗೆ ಇವಾಗ ಮದುವೆ ಗೊತ್ತಾಗಿದೆ ರೀ ನಾಳೆ ಓಡಿಹೋಗಿ ಮದುವೆ ಆಗ್ತಿದ್ದಾರೆ, ಹ ಹ ಹ ಹ ಹ ಎಂದು ಅದೇ ನಗೆ ನಕ್ಕಳು. ಅಲ್ಲಿ ಒಂದು ಕ್ಷಣವೂ ನಿಲ್ಲಲಾಗಲಿಲ್ಲ. ಕೈ ಕೊಸರಿಕೊಂಡು ಓಡಿ ಹೋದೆ. ಅವಳು ಏನೆಂದುಕೊಂಡಳೋ, ಆತ ಏನೆಂದುಕೊಂಡನೋ ತಿಳಿಯಲಿಲ್ಲ. ನನ್ನ ಮೇಲೇ ಅಸಹ್ಯ ಮೂಡಿತ್ತು. “ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು” “ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು” “ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು” ಅದೇ ಮಾತುಗಳು ತಲೆಯಲ್ಲಿ ಕುಂತು ಕೊಂದೇಬಿಡುವುದರಲ್ಲಿದ್ದವು. ಎಂಥಾ ಚಪ್ಪರ್ ಕೆಲ್ಸ ಮಾಡ್ಕೊಂಡೆ ನಾನು. ಇನ್ನು ಅವಳಿಗೆ ಮುಖ ತೋರಿಸಬಾರದು ನಾನು. ಅವಳಂತ ಪ್ರೇಮದೇವತೆಗೆ ನಾನು ಮೋಸ ಮಾಡಿದ್ದು. ಅದು ಹೇಗೆ ನಾನು ಅವಳ ಮೇಲೆ ನಂಬಿಕೆ ಕಳೆದುಕೊಂಡೆ. ಮುಖ ಮುಖ ಪರಚಿಕೊಳ್ಳಬೇಕೆನಿಸುತ್ತಿತ್ತು. ನಿಂತರೂ ಕುಂತರೂ ಮುಳ್ಳಿನ ಮೇಲೆ ನಿಂತಹಾಗೆ ಅನಿಸುತ್ತಿತ್ತು. ಮೈ ನರನರಗಳನ್ನ ಹರಿದುಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ. ಮೂರು ದಿನ ಮನೆಗೆ ಹೋಗಲೇ ಇಲ್ಲ. ಎಲ್ಲರೂ ಹೆದರಿ ಸ್ನೇಹಿತನೊಬ್ಬನೊಡಗೂಡಿ ಬಾರಿನಲ್ಲಿ ಕೂತಿದ್ದ ಕೆಂಪು ಕಣ್ಣಿನ ನನ್ನನ್ನು ಎತ್ತಿಕೊಂಡು ಮನೆ ಸೇರಿಸಿದಳು. ಮಾರನೆಯ ದಿನ ಎಚ್ಚರವಾದಾಗ ಕಣ್ಣಿನಲ್ಲಿ ನೀರಿದ್ದರೂ ಮುಗುಳ್ನಗುತ್ತಲೇ ಇದ್ದಳು. ಮುಖ ತೋರಿಸಲಾಗಲಿಲ್ಲ. ಮುಖ ತಿರುಗಿಸಿಕೊಂಡೆ. ಏನಾಯ್ತು ಎಂದಷ್ಟೇ ಕೇಳಿದಳು. ನಾನು ಪಾಪಿಯೆಂದೆ. ಕಣ್ಣೊರೆಸಿಕೊಳ್ಳುತ್ತಾ ಹ ಹ ಹ ಎಂದು ನಕ್ಕಳು. ನಾನೂ ಅಷ್ಟೇ ಎಂದಳು. ಇಲ್ಲ ಕಣೋ ನಾನು ಪಾಪಿ, ನಿನಗೆ ಸರಿಯಾದ ಗಂಡ ನಾನಲ್ಲ ಎಂದೆ. ಎದೆಗವುಚಿಕೊಂಡು ಗೊತ್ತು ಎಂದು ಮತ್ತೆ ನಕ್ಕಳು. ಕಿವಿಯಲ್ಲಿ ಸ್ವರ್ಗವನ್ನೇ ತಂದಿರಿಸಿದಳು. ಘೋರವಾದ ಎದೆ, ತಲೆ ಭಾರ ಒಂದೇ ಕ್ಷಣದಲ್ಲಿ ಇಳಿದುಹೋಯಿತು. ಕಳ್ಳಿಯ ಹಾಗೆ ನಗುತ್ತಲೇ ಇದ್ದಳು. ಅವಳು ನಾಚಿ ನೀರಾದಳೋ, ನಾನು ನಾಚಿ ನೀರಾದೆನೋ ತಿಳಿಯಲಿಲ್ಲ. ಎಲ್ಲವನ್ನೂ ಕಕ್ಕಿದೆ ಇಡೀ ದಿನ, ನನ್ನ ಮನದಲ್ಲಿದ್ದ ಕಟುಕನ ಬಗ್ಗೆ ಒಂದೊಂದು ಸಾಲು ಹೇಳಿದಾಗಲೂ ಅಮ್ಮನನ್ನು ಛೇಡಿಸುವಂತೆ ನಕ್ಕಳು. ಕೊನೆಯಲ್ಲಿ ರೀ ನಾನು ನಿಜವಾಗಲೂ ಓಡೋಗಿದ್ರೆ ಏನ್ ಮಾಡ್ತಿದ್ರೀ ಹ ಹ ಹ ಹ ಹ ಎಂದು ಮತ್ತಷ್ಟು ನಕ್ಕಳು. ಅವಳ ಬಾಯಿ ದಿನೇ ದಿನೇ ಬೆಳೆಯುತ್ತಾ ಎರಡೂ ಕಿವಿಯನ್ನು ಮುಟ್ಟುತ್ತಿವೆಯಾ ಎಂಬ ಅನುಮಾನ ಪ್ರಥಮ ಬಾರಿಗೆ ಮೂಡಿತು. ದಿನಗಳೆದಂತೆ ಅವಳ ನಗುವಿನ ಸಾಗದರಲೆಯಂತೆಯೇ ಉಬ್ಬುತ್ತಾ ಹೋಯಿತು ಅವಳ ಹೊಟ್ಟೆ.

          ಆಪರೇಷನ್ ಥಿಯೇಟರ್ ಒಳಗೂ ನನ್ನನ್ನ ಬಿಡದೇ ಎಳೆದುಕೊಂಡು ಹೋದಳು. ಹಯ್ಯೋ ಆಗ್ತಿಲ್ಲ.. ಅಮ್ಮಾ… ಹ ಹ ಹ ಹ ಆ….. ಎಂದು ಅವಳು ಕೂಗುತ್ತಿದ್ದುದು ನೋಡಲಿಕ್ಕಾಗುತ್ತಿರಲಿಲ್ಲ, ನಾರ್ಮಲ್ ಆಗ್ಲಿ ಎಂದು ಲೇಡೀ ಡಾಕ್ಟರರು ಬೇರೆ ಇವಳು ನೋಡಿದರೇ ಕಣ್ಣಿನಲ್ಲಿ ನೀರು ಸೋರಿಸಿಕೊಂಡೂ ನಗುತ್ತಿದ್ದಾಳೆ. ಅಂತೂ ಅಳುತ್ತಲೇ ಮಗಳು ಹುಟ್ಟಿದಳು. ಸಧ್ಯ ಖುಷಿ ಭಾಗ ಎರಡು ಜನಿಸಲಿಲ್ವಲ್ಲ ಎಂದು ಮಗಳು ಅಳುತ್ತಿದ್ದರೂ ನಾನು ನಕ್ಕೆ. ನನ್ನ ಮಗಳು ಪ್ರತಿನಿತ್ಯ ಅತ್ತಷ್ಟೂ ಬಾಣಂತಿ ಖುಷಿ ಪಡುತ್ತಿದ್ದಳು. ಅಯ್ಯೋ ನನ್ನ ಬಂಗಾರ ಹೆಂಗೆ ಅಳುತ್ತೆ ನೋಡಪ್ಪಾ ಎಂದು ನಗು ಚೆಲ್ಲುತ್ತಲೇ ಇದ್ದಳು. ದಿನಕ್ಕೊಂದು ಛಂದದಲ್ಲಿ ಮಗಳು ಬೆಳೆಯುತ್ತಾ ಹೋದಳು. ನನಗೆ ಜೀವನದ ಡಿವಿಡಿಯನ್ನ ಯಾರೋ ಪಾಸ್ಟ್ ಫಾರ್ವರ್ಡ್ ಮಾಡ್ತಿದ್ದಾರೇನೋ ಎಂದೆನಿಸುತ್ತಿತ್ತು. ಈಗ ಹುಟ್ಟಿದವಳು ಮಾತು ಕಲಿತಳು, ಸೌಮ್ಯ ಆದಳು, ನರ್ಸರಿ ಸೇರಿದಳು, ಸ್ಕೂಲು ಸೇರಿದಳು, ನನ್ನ ಬೆರಲನ್ನಿಡಿದು ಓಡಾಡುತ್ತಿದ್ದವಳು, ಪೆನ್ಸಿಲ್ ಹಿದಿದಳು ಪುಟ್ಟ ಪುಟ್ಟ ಬಟ್ಟೆ ಸಾಕಾಗದೇ ಹೋಯ್ತು. ಆದರೆ ಎಂಥಾ ಹಾಸ್ಯ ಮಾಡಿದರೂ, ಕಾರ್ಟೂನ್ ಹಾಕಿ ಕೂರಿಸಿದರೂ, ಕಚಗುಳಿ ಇಟ್ಟರೂ, ಹರಸಾಹಸ ಮಾಡಿದರೂ ಚಿಕ್ಕಂದಿನಿಂದ ಒಮ್ಮೆಯಾದರೂ ನನ್ನ ಮಗಳು ನಗುವುದನ್ನ ನಾನು ನೋಡಿದ್ದೇ ನೆನಪಿಲ್ಲ ನನಗೆ. ಏನೇ ನಿನ್ನ ಮಗಳ ನಗುವನ್ನೂ ಕಿತ್ತುಕೊಂಡು ನೀನೇ ನಗ್ತಿದ್ದೀಯಾ ಹೇಗೇ? ಒಂಚೂರಾದ್ರೂ ನಗಿಸೇ ಅದನ್ನ. ಎಂದು ನನ್ನ ನಗುವ ಹೆಂಡತಿಯನ್ನು ಏನೆಲ್ಲಾ ರೀಗಿಸಿದರೂ ಏನು ಮಾಡಿದರೂ ಹೆಸರಿಗೆ ತಕ್ಕಂತೆ ಸೌಮ್ಯವಾಗೇ, ಗಾಂಭೀರ್ಯವಾಗೇ ಇರುತ್ತಿದ್ದಳು. ಅಮ್ಮ ಮಗಳನ್ನ ನೋಡಿ ಕಲಿಯಬೇಕಿತ್ತು. ನನ್ನ ಹೆಂಡತಿ ಬಾಯಿ ಕಳೆದು ಚಿಕ್ಕ ಚಿಕ್ಕ ವಿಷಯಗಳಿಗೆ ಹಾ ಹಾ ಹಾ ಹಾ ಎಂದು ನಕ್ಕಾಗಲೆಲ್ಲಾ ಯಾವುದೋ ಕಾಡು ಕಪಿಯನ್ನು ನೋಡಿದಹಾಗೆ ಬೆರಗುಗಣ್ಣುಗಳಿಂದ ಮಗಳು ದಿಟ್ಟಿಸುತ್ತಿದ್ದಳು. ನಾನೂ ನನ್ನ ಮಗಳೂ ಒಂದು ಪಾರ್ಟಿ, ನನ್ನ ಹೆಂಡತಿಯೊಂದು ಪಾರ್ಟಿ ಯಾವಾಗಲೂ. ಇಬ್ಬರೂ ಸೇರಿ ಛೇಡಿಸುತ್ತಿದ್ದೆವು ಅವಳನ್ನ. ಒಮ್ಮೆ ಹಾಗೇ ಸುಮ್ಮನೆ ಕುಳಿತು ಕಾಲ ಹರಣ ಮಾಡುತ್ತಿದ್ದಾಗ, ಹೆಂಡತಿಯನ್ನು ತೆಕ್ಕೆಯಲ್ಲಿ ಸೇರಿಸಿಕೊಂಡು, ನಿನಗೆ ನಿಜವಾಗಲೂ ಸುಸ್ತಾಗ್ತಿಲ್ವೇನೇ ಇಷ್ಟು ವರ್ಷದಿಂದ ನಗುನಗುತ್ತಲೇ ಇದ್ಯಲ್ಲ ಎಂದು ಕೇಳಿದ್ದಕ್ಕೆ, ಉಸಿರಾಡಿ ಸುಸ್ತಾದಾಗ ನಗು ನಿಲ್ಲಬಹುದೇನೋ ಎಂದಳು. ಥು ಲೋಫರ್ ನಿನ್ನ ಹೋಗಿ ಹೋಗಿ ಕೇಳಿದೆನಲ್ಲಾ ಮುಚ್ಚೇ ಬಾಯಿ ಎಂದೆ ನಕ್ಕಳು. ಅವಳ ಅಂತರಾಳದ ಮಾತುಗಳು ಹೊರಬಿದ್ದವು. ನಾವು ಏನೇ ಮಾಡಿದ್ರೂ ಅದು ನಮ್ಮ ಸಂತೋಷಕ್ಕಾಗಿನೇ ಅಲ್ವಾ ರೀ. ಜಗಳ ಆಡ್ತಾರೆ, ಕೊಲೆ ಮಾಡ್ತಾರೆ, ದುಡ್ಡು ಸಂಪಾದನೆ ಮಾಡ್ತಾರೆ, ಜಾತಿ ಅಂತಾರೆ, ದೇವರು ಅಂತಾರೆ, ದುಖ ಕೊಡ್ತಾರೆ, ಮಕ್ಕಳು ಮಾಡ್ಕೊಂತಾರೆ, ಸಂಸಾರ ಅಂತಾರೆ, ಉಸಿರಾಡ್ತಾರೆ, ಬೆಳಗ್ಗೆ ಎದ್ದೇಳ್ತಾರೆ, ನಿದ್ರೆ ಮಾಡ್ತಾರೆ, ಆಕಾಶ ನೋಡ್ತಾರೆ, ಮುತ್ತು ಕೊಡ್ತಾರೆ, ಸರಸವಾಡ್ತಾರೆ, ಜೀವನ ಮಾಡ್ತಾರೆ, ಸಾಯ್ತಾರೆ ಎಲ್ಲದರ ಹಿಂದೆ ಇರೋ ಕಾರಣಗಳನ್ನ ಹುಡುಕ್ತಾ ಹೋಗಿ ಕೊನೆಗೆ ಮುಟ್ಟೋದೆ ಸಂತೋಷ, ಖುಷಿ… ನಾನೇ ರೀ ಎಂದು ಕಿವಿ ಕಿತ್ತು ಹೋಗುವ ಹಾಗೆ ನಕ್ಕಳು. ಮಾತೇ ಹೊರಡಲಿಲ್ಲ. ಜೀವನ ಸವೆಯುತ್ತಿರುವುದು ಗೊತ್ತೇ ಆಗ್ತಿರಲಿಲ್ಲ ನಮಿಗೆ. ನಮ್ಮ ಸಂಸಾರ ಆನಂದ ಸಾಗರ ಹಾಡು ಆಗಾಗ ನೆನಪಿಗೆ ಬರುತ್ತಲೇ ಇತ್ತು. ಅವಳ ಪ್ರತಿ ಹುಟ್ಟುಹಬ್ಬಕ್ಕೆ ನಡುರಾತ್ರಿ ಎಬ್ಬಿಸಿ “ನಗುತಾ ನಗುತಾ ಬಾಳು ನೀನು ನೂರು ವರುಷ, ಎಂದೂ ಹೀಗೇ ಇರಲಿ ಇರಲಿ ಹರುಷ ಹರುಷ…” ಇದೇ ಹಾಡು ಹಾಡಿ ಮಲಗಿಸುತ್ತಲಿದ್ದೆ, ಅಕ್ಷರಶಹ ಇವಳಿಗೆ ಹೋಲುತ್ತಿತ್ತು ಹಾಡು. ಇನ್ನೂ ಅರ್ಧ ಜೀವನ ಇವಳ ಜೊತೆ ಕಳೆಯೋದಿದೆ. ಅಯ್ಯೋ ಉಳಿದಿರುವ ನಮ್ಮ ಸಿನಿಮಾನಾದರೂ ಸ್ಲೋ ಅಂದರೆ ತುಂಬಾನೇ ಸ್ಲೋ ಆಗಿ ಹೋಗ್ಲಪ್ಪ ಎಂದು ಪ್ರತಿಕ್ಷಣ ಕೇಳಿಕೊಳ್ಳುತ್ತಾ ಜೀವನವನ್ನ ಸವಿಯುತ್ತಿದ್ದೇನೆ. ಹಾ ಹಾ ಹಾ ಹಾ ಹಾ…

ಹಿನ್ನುಡಿ: ನಗುತ್ತಾ, ನಗಿಸುತ್ತಾ ಬದುಕುತ್ತಿರುವ ಪ್ರತಿಯೊಬ್ಬ ಜೀವಿಗಳಿಗೆ ಮಾತ್ರ ಈ ಕಥೆಯನ್ನ ಖುಷಿ ಖುಷಿಯಾಗಿ ಯುಗಾದಿ ಹಬ್ಬದ ಈ ದಿನ ಅರ್ಪಿಸುತ್ತಿದ್ದೇನೆ. ಶುಭವಾಗಲಿ. ನಗುತಾ ನಗುತಾ ಬಾಳಿ ನೀವೂ ನೂರು(೬೦ ಇರಬೇಕು ಅಲ್ವಾ ಈಗಿನ ಮಿತಿ) ವರುಷ… ಯುಗ ಯುಗಾದಿ ಕಳೆದರೂ ಯುಗಾದಿ ಪ್ರತಿ ದಿನ ನಿಮ್ಮ ಮನೆಗೆ ಬರುತ್ತಲೇ ಇರಲಿ. ಹ ಹ ಹ..
ಅಯ್ಯೋ ಹೇಳೋದು ಮರೆತೆ: ಈ ಹೆಂಡತಿ, ಹೆಂಡತಿಯಲ್ಲ ನಾನು ನಾನಲ್ಲ ಮಗಳು ಮಗಳಲ್ಲ ಅಮ್ಮ ಅಮ್ಮನಲ್ಲ. ನಾನು ಖುಷಿ ಅರಸುತ್ತಿರುವ ಪ್ರತಿಯೊಬ್ಬರ ಸಂಕೇತ, ಹೆಂಡತಿ ಪ್ರತಿ ವಿಷಯದಲ್ಲಡಗಿರುವ ಸಂತಸ, ಹರ್ಷ, ಆನಂದದ ಸಂಕೇತ. ಅಮ್ಮ ನಮ್ಮಲ್ಲಿರುವ ಬಿಚ್ಚುತನಕ್ಕೆ ಹಿಡಿತದ, ನಿಯಂತ್ರಣದ(ನಿಯಂತ್ರಿಸುವ ಸಮಾಜದ) ಸಂಕೇತ, ಮಗಳು, ನಮ್ಮ ನಗುವನ್ನು ನಾವೇ ಗಾಂಭೀರ್ಯದಿಂದ ಪರ್ಯಾಲೋಚಿಸುವ, ಪರಾಮರ್ಶಿಸುವ, ವಿಮರ್ಶಿಸುವ ಸಂಕೇತ ಅಷ್ಟೇ.. ಹ ಹ ಹ… ಸಮಾಪ್ತಿ.


                                                                                    -ನೀ. ಮ. ಹೇಮಂತ್ ಕುಮಾರ್

Thursday 22 March 2012

ನಂತರದ ಕಥೆ!ಕತ್ತಲೆ ಕೋಣೆ, ನಿಶ್ಯಬ್ಧತೆ, ಮಂಚದ ಮೇಲೆ ಮಲಗಿರುವ ದೇಹದಿಂದ ಪ್ರತಿದಿನ ಹೊರಬರುತ್ತಿದ್ದ ಗೊರಕೆಯ ನಾದ ಕೂಡ ಇಲ್ಲದೆ ನಿಶ್ಚಲವಾಗಿ ಮಲಗಿತ್ತು. ಎಷ್ಟೋ ಸಮಯದ ನಂತರ ಮೊಬೈಲ್ ಒಂದು ರಿಂಗಣಿಸಲು ಆ ನೀರವತೆಯನ್ನು ಮುರಿದು ಕತ್ತಲೆಯಲ್ಲಿ ಕರಗಿದ್ದ ಆ ದೇಹದ ಪೈಜಾಮದಿಂದ ಮಂದವಾಗಿ ಬೆಳಕು ಹೊರಸೂಸುತ್ತಿರಲು. ಆ ದೇಹವು ನಿಧಾನವಾಗಿ ಮೇಲಕ್ಕೆದ್ದು ಕನ್ನಡಕವನ್ನು ಹುಡುಕಾಡಿ ಸಿಗದೆ ಸೋತು, ಹಾಗೇ ತನ್ನ ಪೈಜಾಮದಲ್ಲಿ ಇನ್ನೂ ರಿಂಗಣಿಸುತ್ತಲೇ ಇದ್ದ ಮೊಬೈಲನ್ನು ತೆಗೆದು, “ಸಮಯವಾಯ್ತು, ಹೊರಬನ್ನಿ” ಎಂಬ ಅತ್ತಣಿಂದ ಬಂದ ಧ್ವನಿಗೆ ಉತ್ತರವಾಗಿ ಹಾ.. ಬಂದೆ ಎಂದು ಹೇಳಿ ಮೊಬೈಲ್ ಪೈಜಾಮದೊಳಗೇ ತುರುಕಿಸಿ ಚಪ್ಪಲಿಯನ್ನೂ ಮೆಟ್ಟದೇ ನೇರವಾಗಿ ತನ್ನ ಮಲಗುವ ಕೋಣೆಯಿಂದ ಹೊರಬರುತ್ತಾ ಮಗನಿಗೆ ಹೇಳಿ ಹೊರಡುವುದೆಂದು ಮಗನ ರೂಮಿನ ಬಳಿ ಹೋದರೆ, ರೂಮಿನಲ್ಲಿ ಮಗನಿರಲಿ, ಸೊಸೆ, ಮೊಮ್ಮಗನೂ ಸಹ ಇಲ್ಲ. ರಾತ್ರಿಯ ಈ ಸರಿಹೊತ್ತಿನಲ್ಲಿ ಎಲ್ಲಿ ಹೋದರಿವರೆಂದು ಅರ್ಥವಾಗದೆ ಬಣಗುಡುತ್ತಿರುವ ಮನೆಯಲ್ಲಿ ಚಲಿಸುತ್ತಿರುವ ಏಕಮಾತ್ರ ವಸ್ತು ಗಡಿಯಾರವನ್ನು ನೋಡಿದರೆ ರಾತ್ರಿ ಒಂದು ಘಂಟೆ. ಯಾರಿಗೂ ಹೇಳದೆಯೇ ಹೇಗೆ ಹೋಗುವುದು? ಮನೆಯ ಆಳು ಕಾಳುಗಳನ್ನು ಹುಡುಕಲು ಯಾರೂ ಸಿಗದೆ ಯೋಚಿಸುವಷ್ಟರಲ್ಲಿ ಮತ್ತೊಮ್ಮೆ ತನ್ನ ಮೊಬೈಲ್ ಬಾಯಿ ಬಡಿದುಕೊಳ್ಳುವುದು. ಸಮಯ ಮೀರುತ್ತಲಿದೆ, ಬನ್ನಿ ಬೇಗ ಎಂದು ಧ್ವನಿ ಅತ್ತಣಿನಿಂದ ಒತ್ತಾಯ ಪಡಿಸಲು ಹಾ ಬಂದೆ ಎಂದು ಬಾಗಿಲು ತೆರೆಯಲು ಮನೆಯ ಎದುರಿಗೆ ದೊಡ್ಡ ಬೆಳಕನ್ನು ಹೊತ್ತ ವಾಹನ ತಣ್ಣಗೆ ನಿಂತಿರುವುದು. ಅದರೆದುರಿಗೆ ಇಬ್ಬರು ಅಜಾನುಬಾಹು ಸೂಟು ಧಾರಿಗಳು ನಿಂತಿರುವುದನ್ನು ಕಂಡು ನನ್ನ ಮಗನಿಗೆ ಹೇಳಿ ಬಂದು ಬಿಡ್ತೀನಿ ಈ ಹೊತ್ತಿನಲ್ಲಿ ಎಲ್ಲೋ ಹೋಗಿದ್ದಾರೆ ನೋಡಿ, ಹೇಳದೆಯೇ ಎಂದು ಹೇಳಿದರೂ ಕೇಳದೇ ಏನೂ ಜವಾಬು ಕೊಡಬೇಡಿರೆಂದು ವಾಹನವನ್ನು ಹತ್ತಿರೆಂದಷ್ಟೇ ಹೇಳಿ ಬಾಗಿಲು ತೆರೆಯುವರು. ಇಲ್ಲಪ್ಪಾ ನಾಳೆ ಬರೋಡಾಕ್ಕೆ ಟಿಕೆಟ್ ಬುಕ್ ಮಾಡಿಸೋದಿದೆ ನನ್ನ ಮಗನಿಗೊಮ್ಮೆ ಜ್ಞಾಪಿಸಬೇಕಿದೆ ಎಂದು ಏನು ಹೇಳಿದರೂ ಯಾವುದಕ್ಕು ಆ ಇಬ್ಬರು ಜಗ್ಗದೆ ವಾಹನ ಹತ್ತಿಸಿಕೊಂಡು ಕೊನೆಗೂ ಮಗ ಸೊಸೆ, ತನ್ನ ಮುದ್ದಿನ ಮೊಮ್ಮಗನಿಗೆ ಹೇಳಿ ಹೊರಡುವುದಕ್ಕಾಗಲಿಲ್ಲವಲ್ಲ ಎಂದು ಮನೆಯ ಗೇಟ್ ಬಳಿ ತನ್ನ ಅಮರ್ ಶಶಿಕಾಂತ್ ಎಂಬ ನಾಮಫಲಕದತ್ತ ದೃಷ್ಠಿ ಹರಿಸುತ್ತಿರುವಾಗಲೆ ಗಾಡಿ ಸರ್‍ರ್‍ರನೆ ಮೆಟ್ರೋ ರೈಲಿಗಿಂತ ವೇಗದಲ್ಲಿ ಚಲಿಸಿ ಮುಂದೆಲ್ಲೋ ಒಂದು ಜಾಗದಲ್ಲಿ ಇಬ್ಬರು ಹುಡುಗರನ್ನು ನಾನು ಬರುವುದಿಲ್ಲ, ನನ್ನ ಗಾಡಿ, ನನ್ನ ಹುಡುಗಿಗೆ ನನ್ನ ಬಿಟ್ಟರೆ ಯಾರು ಗತಿ, ಬಿಡಿ ನನ್ನನ್ನ ಎಂದು ಇಬ್ಬರೂ ಕೊಸರಿಕೊಂಡು ಅರಚುತ್ತಿರಲು ಕೇಳದೆಯೇ ಎತ್ತಿ ತಂದು ಒಳಗೆ ಎರಡು ಆಸನಗಳ ಮೇಲೆ ಕುಕ್ಕಲು, ಅಳುತ್ತಲೇ ಇಬ್ಬರೂ ಕೂರುವರು. ಥೇಟ್ ರೈಲಿನಂತೆಯೇ ಉದ್ದೋಕಿದ್ದ ವಾಹನದಲ್ಲಿ ಆಗಲೇ ತನ್ನ ಹಿಂದೆ ಮಹಿಳೆಯರು, ನವಜಾತ ಶಿಶುಗಳು, ಗಂಡಸರು, ಹುಡುಗರು, ಮುದುಕರು, ನಾಯಿ, ಕರು, ಬೆಕ್ಕು, ಇನ್ನೂ ಯಾವುದಾವುದೋ ಪ್ರಾಣಿಗಳು ಎಲ್ಲರೂ, ಎಲ್ಲವೂ ಒಂದೊಂದು ಆಸನದ ಮೇಲೆ ಯಾರೂ ಯಾವ ಭಾವನೆಯೂ ಇಲ್ಲದೆ ಸುಮ್ಮನೆ ಗಾಡಿಯಿಂದ ಹೊರಗೆ ನೋಡುತ್ತಿರುವುದನ್ನು ಕಂಡು ಅಚ್ಚರಿಯಾಗಿ, ಹಾಗೇ ವಾಹನದ ಹೊರಗೆ ಕಣ್ಣು ಹಾಯಿಸಲು, ರಸ್ತೆಗಳು, ಕಟ್ಟಡಗಳು ಎಲ್ಲ ಒಂದು ರೀತಿಯ ಸ್ಮಶಾನದಂತೆ ಕಂಡು, ಎಲ್ಲೂ ಯಾವುದೇ ರೀತಿಯ ಒಂದು ಜೀವಿಯೂ ಸಹ ಕಾಣದೆ ಯಾಕೆ ಪ್ರಪಂಚ ಹೀಗಿರುವುದಿಂದು, ಯಾಕೆ ಇಡೀ ಪ್ರಪಂಚ ಸ್ಥಬ್ಧವಾಗಿದೆ. ಎಲ್ಲಿ ಹೋದರು ಇಡೀ ಪ್ರಪಂಚದ ಜನ ಎಂದು ಯೋಚಿಸುತ್ತಿರುವಾಗಲೇ ಮತ್ತೊಂದು ಸುಂದರವಾದ, ಅರೆಬರೆ ಬಟ್ಟೆಯಲ್ಲಿದ್ದ ಹುಡುಗಿಯನ್ನು ಕರೆತಂದು ತನ್ನ ಪಕ್ಕ ಕೂಡ್ರಿಸಲು ತನ್ನ ವಯಸ್ಸನ್ನೂ ಮರೆತು ಅವಳ ಕಡೆ ಕಳ್ಳ ನೋಟ ಬೀರುವನು. ಮುಂದೆ ವಾಹನ ಓಡಿಸುತ್ತಿದ್ದಾತನೊಬ್ಬ, ಪಕ್ಕದಲ್ಲಿ ಫೋನ್ ಹಿಡಿದು ಎಲ್ಲರಿಗೂ ಕರೆ ಮಾಡುತ್ತಿದ್ದಾತನೊಬ್ಬ, ವಾಹನದ ಹೊರಗೆ ಇಬ್ಬರು ಎಲ್ಲರೂ ಕಪ್ಪು ಸೂಟ್ ಧರಿಸಿ ಸಮವಸ್ತ್ರದಲ್ಲಿರುವರು.

“ನಾವೀಗ ಎಲ್ಲಿಗೆ ಹೋಗುತ್ತಿದ್ದೇವೆ” ಆ ಹುಡುಗರ ಪ್ರಶ್ನೆಗೆ ಯಾರೂ ಉತ್ತರಿಸದೆ ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದುದನ್ನು ಕಂಡು ಉದ್ರೇಕಗೊಂಡು ಎಲ್ಲಿಗೆ ಹೇಳ್ತೀರೋ ಇಲ್ವೋ ಎಂದು ಎದ್ದು ಹೋಗಿ ಚಾಲಕನ ಪಕ್ಕದಲ್ಲಿದ್ದವನನ್ನು ಪೀಡಿಸಲು ಚುರ್‍ರ್‍ರನೆ ಶಾಕ್ ಹೊಡೆದಂತಾಗಿ ಉತ್ತರ ದೊರೆತವರಂತೆ ಶಾಂತವಾಗಿ ಬಂದು ತಮ್ಮ ತಮ್ಮ ಆಸನವನ್ನಲಂಕರಿಸುವರು. ಹಿಂದಿದ್ದ ಎಲ್ಲರೂ ಈಗ ಗೊತ್ತಾಯ್ತಾ ತಾವೆಲ್ಲಾ ಸುಮ್ಮನೆ ಯಾಕೆ ಕುಳಿರಿವುದೆಂಬಂತೆ ಒಳಗೊಳಗೇ ಮುಸಿ ಮುಸಿ ನಗುತ್ತಿರುವುದನ್ನು ಕಂಡು ತಾನೂ ಸುಮ್ಮನೆ ಇರುವುದೊಳಿತೆಂದು ಮನಗಂಡು ಖಾಲಿ ರಸ್ತೆಗಳ ಕಡೆಗೆ ನೋಡಲು ಶುರುಮಾಡುವನು. ವಾಹನದ ಭರ್ತಿ ಹಲವು ಬಗೆಯ ಹಲವು ವಯಸ್ಸುಗಳ ಜನಗಳನ್ನು ತುಂಬಿಕೊಳ್ಳುತ್ತಾ ವಾಹನವು ಶರವೇಗದಲ್ಲಿ ಮುಂದುವರೆಯುತ್ತಾ ಹೋಯಿತು. ಎಲ್ಲರ ಇತಿಹಾಸವೇನಿತ್ತೋ, ಏನೇನು ಕಷ್ಟಗಳು, ಏನೇನು ಜವಾಬ್ದಾರಿಗಳು, ಎಷ್ಟೆಷ್ಟು ಸಿರಿವಂತಿಕೆಯಿತ್ತೋ ಇಂದು ಎಲ್ಲರೂ ಸಮಾನರಾಗಿ ದಿವ್ಯ ಮೌನವನ್ನು ತಾಳಿ, ಬೆಳಕಿನ ವೇಗದಲ್ಲಿ ಸಾಗುತ್ತಿದ್ದ ವಾಹನದಲ್ಲಿ ನಿರುಮ್ಮಳರಾಗಿ ಕುಳೀತಿರುವರು. ಅಮರ್ ಶಶಿಕಾಂತನ ಆ ೫೦ರ ವಯಸ್ಸಿನಲ್ಲಿಯ ಚಪಲಕ್ಕೆ ಕೈಗಳು ಹಾಗೇ ಪಕ್ಕದಲ್ಲಿದ್ದ ಅರೆನಗ್ನ ಸುಂದರಿಯ ತೊಡೆಗಳ ಪಕ್ಕದಲ್ಲಿ ಸ್ಪರ್ಶಿಸುತ್ತಲೇ ಇದ್ದರೂ ಯಾವುದೇ ರೀತಿಯ ಸ್ವರ್ಶದನುಭವದ ರೋಮಾಂಚನವಾಗದೇ ಆಶ್ಚರ್ಯಗೊಂಡು ಕೈತೆಗೆದು ಸುಮ್ಮನೆ ಕೂರುವನು. ಎಲ್ಲರ ಕಣ್ಣುಗಳೂ ಹೊರಗಿನ ಖಾಲಿ ಪ್ರಪಂಚದ ಕಡೆಗೆ ನೆಟ್ಟಿದ್ದರೂ ತಾವು ತಲುಪಲಿರುವ ಸ್ಥಳದ ಬಗೆಗೆ ಯೋಚಿಸದೇ ಇರದಿರಲಿಲ್ಲ. ಇಡೀ ರಸ್ತೆಯಲ್ಲಿ ತಾವು ಹೋಗುತ್ತಿದ್ದ ವಾಹನಕ್ಕೆ ಎದುರು ಬರುತ್ತಿದ್ದ ವಾಹನವಾಗಲೀ, ಅಕ್ಕ ಪಕ್ಕದಲ್ಲಿ ಹೋಗುತ್ತಿದ್ದ ವಾಹನಗಳಾಗಲೀ ಒಂದೂ ಇರಲಿಲ್ಲ. ಸರಾಗವಾಗಿ ಸಾಗುತ್ತಲಿದ್ದ ವಾಹನ ಮುಂದೊಂದು ವೃತ್ತದ ಬಳಿ ನಿಂತಾಗ ಎಲ್ಲರ ಮುಖಗಳಲ್ಲೂ ಆಶ್ಚರ್ಯ ಕಾಣಿಸದೇ ಇರದಿರಲಿಲ್ಲ. ಹಲವು ದಿಕ್ಕುಗಳಿಂದ ಅದೇ ತೆರನ ವಾಹನಗಳು ಅದೇ ಸರಿಯಾದ ಸಮಯಕ್ಕೆ ಬಂದು ನಿಂತು, ಎಲ್ಲ ಸೂಟು ಸಮವಸ್ತ್ರಧಾರಿ ಸಿಬ್ಬಂದಿ ವರ್ಗದವರೂ ತಮ್ಮ ಲಾಪ್ ಟಾಪ್ ನಂತಹ ಚಿಕ್ಕ ಯಂತ್ರಗಳಲ್ಲಿ ಏನೇನೋ ಪರಿಶೀಲಿಸಿ ಸಮಾಲೋಚಿಸಿ ಒಂದರೆಕ್ಷಣದಲ್ಲಿ ಎಲ್ಲಾ ವಾಹನಗಳೂ ಒಂದೇ ದಿಕ್ಕಿನಲ್ಲಿ ಒಂದರ ಹಿಂದೊಂದು ಮುಂದುವರೆಯುವವು. ಎಲ್ಲ ವಾಹನಗಳಲ್ಲೂ ಹಲವು ಬಗೆ ಬಗೆಯ ವೇಷ, ಭಾಷೆ, ಪ್ರಾಂತ್ಯದ ಮನುಷ್ಯರು. ಅರೆರೆ ಇಡೀ ಪ್ರಪಂಚದಲ್ಲಿರುವರೆಲ್ಲಾ ಹೀಗೇ ಹೊರಟಿರುವನೇ ಹಾಗಾದರೆ ಎಂದು ಬಾಯಿ ಕಳೆದುಕೊಂಡು ಅಮರ್ ಶಶಿಕಾಂತ್ ನೋಡುತ್ತಿರಲು, ತಾನು ಅಮೆರಿಕಾದಲ್ಲಿ ಒಮ್ಮೆ ಸಂಧಿಸಿದ್ದ ಜಾನ್ ಮಿಲ್ಲರ್ಸ್ ಎಂಬಾತನನ್ನು ಪಕ್ಕದ ಒಂದು ವಾಹನದಲ್ಲಿ ಕಂಡಂತಾಗಿ ಕೈಸನ್ನೆ ಮಾಡಿದರೂ ಆತ ಏನೋ ಆಲೋಚನೆಯಲ್ಲಿ ಮುಳುಗಿರುವವನಂತೆ ಗಮನಿಸದೇ ಹೋದದ್ದಕ್ಕೆ ಸುಮ್ಮನಾಗುವನು.

ಅಷ್ಟು ದೂರದಲ್ಲಿ ಸೂರ್ಯ ಇಡೀ ಕತ್ತಲೆಯ ಪ್ರಪಂಚದ ಎದುರಿಗೆ ಬೆಳ್ಳಂಬೆಳಕು, ಸೂರ್ಯನ ಕಿರಣಗಳೇ ಇರಬಹುದೇನೋ ಎಂದು ನೋಡುನೋಡುತ್ತಿರುವಂತೆಯೇ ಬೆಳಕು ಹತ್ತಿರತ್ತಿರವಾಗಿ ವಾಹನಗಳು ಆ ಬೆಳಕಿನ ಪ್ರಪಂಚವನ್ನು ಪ್ರವೇಶಿಸಿ ನಿಂತುಕೊಂಡವು. ಒಬ್ಬರಿಗೆ ಮತ್ತೊಬ್ಬರನ್ನು ನೋಡಲಾಗದಷ್ಟು ಬೆಳಕು. ಎಲ್ಲರೂ ಬೆಳಕಿನ ಪ್ರಖರತೆಯಲ್ಲಿ ಕಳೆದುಹೋಗಿ, ಕೊಂಚ ಸಮಯದ ನಂತರ ಆ ಬೆಳಕಿಗೆ ಕಣ್ಣುಗಳು ಹೊಂದಿಕೊಂಡು ವಾಹನದಿಂದಿಳಿದು ಸುತ್ತಲೂ ನೋಡುತ್ತಿದ್ದೆಲ್ಲರೂ ಗೋಚರಿಸಿ ಅದೇ ನಿರ್ಭಾವ ಮುಖಮುದ್ರೆಯಲ್ಲಿ ನೋಡುತ್ತಾ ಲಕ್ಷಾಂತರರಿದ್ದರೂ ಯಾರೊಂದಿಗಾರೂ ಮಾತನಾಡದೆಯೇ ಸುಮ್ಮನೆ ನಿಲ್ಲುವರು. ಪುಟ್ಟ ಪುಟ್ಟ ಕಂದಮ್ಮಗಳನ್ನೂ ಸೇರಿ ಎಲ್ಲ ವಯೋಮಿತಿಯ ಸಕಲ ಮನುಷ್ಯರಲ್ಲದೇ, ಕಪ್ಪೆ, ಹಾವು, ಹಂದಿ, ಹುಲಿ, ಕರಡಿ, ಆನೆಯಾದಿ ಇಡೀ ಪ್ರಪಂಚದ ಸಕಲ ಜೀವರಾಶಿಗಳೇ ಇದ್ದರೂ ಯಾರೂ ಯಾರನ್ನೂ ಮುಟ್ಟದೆಯೂ ತಮ್ಮ ಪಾಡಿಗೆ ತಾವಿದ್ದುದನ್ನು ಕಂಡು ಅಮರ್ ಶಶಿಕಾಂತಗೆ ಆಶ್ಚರ್ಯ. ಪ್ರತಿಯೊಬ್ಬರಲ್ಲೂ ಇದೇ ಅಚ್ಚರಿಯಿತ್ತೇನೋ!

ಮೇಲೆ ಬೆಳಕನ್ನು ಸೀಳಿಕೊಂಡು ಒಂದು ಪರದೆ ತೆರೆದುಕೊಂಡು ಅದರಲ್ಲಿ ಬಿಳಿಯ ಸುಖಾಸೀನದ ಮೇಲೆ ವಿರಾಜಮಾನನಾಗಿದ್ದ ದೈತ್ಯಾಕೃತಿಯೊಂದು ಸಕಲರಿಗೂ ಸ್ವಾಗತವನ್ನು ಕೋರಲು ಸಮಸ್ತರೂ ತಲೆಯೆತ್ತಿ ಮೇಲೆ ನೋಡುತ್ತಾ ನಿಲ್ಲುವರು. ಪರದೆಯಲ್ಲಿ ಮೂಡುತ್ತಿದ್ದಾತ ಸಂಜ್ಞಾ ಭಾಷೆಯಲ್ಲಿ ಹೇಳುತ್ತಿದ್ದರೂ ನಿಂತು ಮೇಲೆ ನೋಡುತ್ತಿದ್ದ ಸಕಲರಿಗೂ ಅದು ಅವರದ್ದೇ ಆದ ಭಾಷೆಯಲ್ಲಿ ಅರ್ಥೈಸುತ್ತಾ ಮುಂದುವರೆಯುತ್ತಿತ್ತು. “ನಿಮ್ಮೊಳಗೆ ಏಳುತ್ತಿರುವ ಪ್ರಶ್ನೆಗಳು ನಮಗೆ ಗೊತ್ತು, ಇಲ್ಲಿ ಯಾಕೆ ಬಂದಿದ್ದೀರಿ? ಎಲ್ಲಿದ್ದೀರಿ,? ಮುಂದೇನು? ಯಾಕೆ ನಿಮ್ಮ ಪ್ರಪಂಚ ನಿಮಗೇ ಅಪರಿಚಿತವೆಂಬಂತೆ ಎಲ್ಲಾ ಖಾಲಿ ಖಾಲಿಯಾಗಿದೆ? ನಿಮಗೆ ಏನೇನು ಕಾದಿದೆ? ಇದು ಮುಕ್ತಾಯವೋ? ಆರಂಭವೋ? ಇತರೆ ಇತರೆ ಇತರೆ… ಎಲ್ಲದಕ್ಕೂ ಉತ್ತರವಿದೆ. ನಿಮ್ಮಂತಹ ಲಕ್ಷಾನು ಲಕ್ಷ ಜೀವಿಗಳ ಗುಂಪುಗಳೇ ಲಕ್ಷಗಟ್ಟಲೆ ಇವೆ. ಎಲ್ಲರೂ ಒಂದೇ ಸಾರಿಗೆ ನನ್ನ ಮಾತನ್ನು ಕೇಳುತ್ತಿದ್ದೀರಿ. ನಿಮ್ಮನ್ನ ಕರಿಸಿದವನೇ ನಾನು. ದಿನಂಪ್ರತಿ ನಿಮ್ಮಂತಹ ಕೋಟ್ಯಾನು ಕೋಟಿ ಜೀವಿಗಳು ಬರುತ್ತಲಿರುತ್ತಾರೆ. ನೀವು ಉಸಿರಾಡುವವರನ್ನ ಕಾಣಲು ಇನ್ನು ಸಾಧ್ಯವಿಲ್ಲ ಅವರೂ ಸಹ ನಿಮ್ಮನ್ನು ಕಾಣಲು ಸಾಧ್ಯವಿಲ್ಲ” ಓಹೋ ಅದಕ್ಕೇ ನನ್ನ ಮಗ ಸೊಸೆಯನ್ನ ಕಾಣಲು ಸಾಧ್ಯವಾಗಲಿಲ್ಲ ಎಂದು ಅಮರ್ ಅಂದುಕೊಳ್ಳುತ್ತಿರಲು. ಆತ ಮಾತು ಮುಂದುವರೆಸಿ ಇನ್ನು ನಿಮ್ಮಲ್ಲಿ ಏನೂ ಉಳಿದಿರುವುದಿಲ್ಲ, ನೀವು ಏನೂ ಮಾಡುವುದಿಲ್ಲ, ಏನೂ ಅಗುವುದಿಲ್ಲ, ಶುಭವಾಗಲಿ ಎಂದು ಹೇಳಿ ಸ್ಕ್ರೀನ್ ಜೊತೆಗೆ ಬೆಳಕಿನಲ್ಲಿ ಕರಗುವನು.

ಎಲ್ಲ ಜೀವಗಳು ಕೊಂಚ ಸಮಯ ನಿಂತು ಕೇಳುವವರು, ಹೇಳುವವರು ಯಾರೂ ಇರದೇ ಸುಮ್ಮನೆ ನಿಂತಿದ್ದವುಗಳು, ಕೆಲವು ಓಡ ಹತ್ತಿದರೆ, ಕೆಲವು ಮಲಗಿದವು, ಕೆಲವು ಹಾರಿಹೋದವು ಕ್ರಮೇಣ ಎಲ್ಲವೂ ದಿಕ್ಕುದಿಕ್ಕುಗಳಿಗೆ ಹೋಗಿ ಬೆಳಕಿನಲ್ಲಿ ಕರಗಿಹೋದವು. ಯಾವು ಎಲ್ಲಿ ಹೋದವೋ, ಏನಾದವೋ ಒಂದೂ ಗೊತ್ತಾಗದೇ ಇನ್ನೂ ಹಲವು ಅಲ್ಲೇ ನಿಂತಿರುವವು. ಅಮರ್ ಎಲ್ಲವನ್ನೂ ನೋಡುತ್ತಾ ತಾನೂ ನಿಧಾನವಾಗಿ ನಡೆಯುತ್ತಾ ನಿಂತಿದ್ದವರ ಪೈಕಿ ಆ ಅರೆನಗ್ನ ಹುಡುಗಿ, ಜಾನ್ ಮಿಲ್ಲರ್ಸ್ ನಂತಹ ಹಲವರು ನಿಂತೇ ಇದ್ದುದನ್ನು ನೋಡುತ್ತಾ ಅವರು ಆತ್ಮಹತ್ಯೆ ಮಾಡಿಕೊಂಡು ಅಲ್ಲಿ ಸಿಗದ ಏನನ್ನೋ ಅರಸುತ್ತಾ ಇಲ್ಲಿ ಬಂದಿರುವರೇನೋ ಎಂದೂಹಿಸುತ್ತಾ ತನ್ನ ಪಾಡಿಗೆ ನಡೆಯುವನು. ಸ್ವರ್ಗ, ಸುಖ, ನರಕ, ಬೆಂಕಿಯ ಬಾಣಲೆ, ಶಿಕ್ಷೆ, ಆ ಕಿತ್ತಾಟ, ಉದ್ಯೋಗ, ವಿದ್ಯಾಭ್ಯಾಸ, ಜಗಳ, ಸ್ವಾರ್ಥ, ಅಸೂಯೆ, ಕಾಮ, ಸಂಸಾರ, ಉನ್ನತಿ, ಪರಿವರ್ತನೆ, ವ್ಯವಸ್ಥೆ, ಪ್ರಪಂಚ, ಉಸಿರು, ಬೆಂಕಿ, ಆಹಾರ, ಭಯ, ಆಸ್ಥೆ, ನೋಟ, ದೇಹ, ಆಕಾಶ, ಆಕಾರ, ಭೂಮಿ, ಯೋಮಿ, ನೀರು, ನಾರು, ಪ್ರಾಣಿ, ತಾರತಮ್ಯ, ಪ್ರಕೃತಿ, ಪುರುಷ, ಕಾಲ, ಗಡಿಯಾರ, ಮರ, ಕಂಪು, ಆನಂದ, ಜೀವ, ಆತ್ಮ, ಪಳೆಯುಳಿಕೆ, ಸ್ಮರ್ಶ, ನರ, ಬರ, ಮೊಳಕೆ, ಮಳೆ, ಮೋಡ, ಪ್ರಳಯ, ಊರು, ಜೈಲು, ಸೆರೆ, ಮುಕ್ತಾಯ, ಸರಳು, ಪ್ರೀತಿ, ಅಹಿಂಸೆ, ರಕ್ತ, ಸಕ್ಕರೆ, ತೈಲ, ಅಣು, ಸಾಗರ, ಆಳ, ಕಪ್ಪು, ಬಣ್ಣ, ಶಬ್ಧ, ಮಿಂಚು, ಯುಗ, ದೇವರು, ಜ್ಯೋತಿ, ನಂಬಿಕೆ, ಪುಣ್ಯ, ಮಂತ್ರ, ವೇಷ, ನಾಶ, ಪಾಶ, ಚರ, ಪರ, ನರ, ಕುರ, ಪಿಡುಗು, ಮಾಂಸ, ಎಲುಬು, ಭವಿಷ್ಯ, ಭೂತ, ಸ್ಥಿತ, ನೊರೆ, ಒಳಗೆ, ಹೊರಗೆ, ನೆರಳು, ಕಿರೀಟ, ದಿಗಂತ, ಚೇತನ, ಹಿಂಬಾಲ, ಜಾಲ, ಮಲ, ಶೂಲ, ಪಾಲ, ಜೊಳ್ಳು, ಓಂ ಎಂದು ಇನ್ನೂ ಏನೇನೋ ನೆನೆಯುತ್ತಲೇ, ನೆನೆಯುತ್ತಲೇ, ನೆನೆಯುತ್ತಲೇ ಬೆಳಕಿನಲ್ಲಿ ಕರಗಿಹೋಯಿತು. 

                                                - ಹೇಮಂತ್

Tuesday 20 March 2012

ಮಾನವನಿಲ್ಲದ ಪ್ರಪಂಚ!


ಮಾನವನಿಲ್ಲದ ಪ್ರಪಂಚ! 


ಇದನ್ನು ಊಹಿಸಲು ಸಾಧ್ಯವಿದೆಯಾ? ಇಂದು ಮನುಷ್ಯನಿಗಾಗಿಯೇ ಪ್ರಪಂಚರಿವುದು. ಮನುಷ್ಯನಿಲ್ಲವಾದಲ್ಲಿ ಪ್ರಪಂಚ ವಿನಾಶವಾದಂತೆಯೇ ಲೆಕ್ಕ. ಈ ಪ್ರಪಂಚ ಮನುಷ್ಯನದೇ. ಇಷ್ಟು ಅಗಾಧವಾದ ಭೂಮಿಯನ್ನು (೨೦೦ ಮಿಲಿಯನ್ ಸ್ಕ್ವೇರ್ ಮೈಲ್) ೩೦ ರಿಂದ ೪೦ ಸೈಟ್ ಆಗಿ ಹರಿದು ಹಂಚಿಕೊಂಡು ಭೂಮಿಗೇ ಒಡೆಯನಾಗಿರುವ ಮಾನವ ಅಕಸ್ಮಾತ್ ಈ ಭೂಮಿ ಮೇಲೆ ಇಲ್ಲದೇ ಹೋಗಿದ್ದರೆ ಏನಾಗಬಹುದಿತ್ತು! ಕುತೂಹಲವೆನಿಸಿತು. ಮೊಟ್ಟ ಮೊದಲನೆಯದಾಗಿ, ಈ ನನ್ನ ಕಥೆಯನ್ನು ಓದಲು ಯಾರೂ ಇರುತ್ತಿರಲಿಲ್ಲ, ಕಥೆ ಬರೆಯಲು ನಾನೇ ಇರುತ್ತಿರಲಿಲ್ಲ, ಅದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇದು ಶುದ್ಧ ಅಸಂಬದ್ಧ ಕಲ್ಪನೆ ಎಂದು ಮೊಟ್ಟಮೊದಲಿಗೇ ಅನಿಸಿತು. ಆದರೆ ಹಾಗೇ ಮಾನವ ವಿಕಾಸಕ್ಕೆ ಕಾರಣವಾದ ಆ ವಾನರನ ಕಾಲಕ್ಕೆ ಹಾಗೇ ಕಲ್ಪನೆಯಲ್ಲೇ ಹೋಗಿ ಅಂದು ಮರಗಳಿಲ್ಲದ, ಹುಲ್ಲುಗಳ ಪ್ರದೇಶದಲ್ಲಿ ತನ್ನ ಬಾಲದ ಉಪಯೋಗ ಕಾಣದೆ ಮತ್ತು ಹೊಟ್ಟೆ ಹೊರೆದುಕೊಳ್ಳಲೋಸಗ ಭೂಮಿಗಿಳಿದ ಅನಿವಾರ್ಯತೆಯಿಂದಾಗಿ ಕ್ರಮೇಣ ಮೆದುಳನ್ನು ಬೆಳೆಸಿಕೊಂಡು ಉದ್ದನೆಯ ಮುಂಗಾಲನ್ನು ಕಳೆದುಕೊಂಡು ಮಾನವನ ಉಗಮಕ್ಕೆ ಕಾರಣವಾನರರ ಗುಂಪು ಒಂದು ಅಕಸ್ಮಾತ್ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಾಶವಾಗಿದ್ದಲ್ಲಿ. ಮತ್ತೆ ಮರಗಳು ಬೆಳೆದು ಮತ್ತೆ ಬಾಲವನ್ನು ಉಪಯೋಗಿಸಿ, ಮರದಲ್ಲೇ ಉಳಿದಿದ್ದರೆ ಇಂದು ಏನಾಗಿರುತ್ತಿತ್ತು. ಇದು ತರ್ಕಬದ್ಧವಾದ ವಿಚಾರವೇ ಸರಿ. ಅಂದು ಹಾಗಾಗಿದ್ದಲ್ಲಿ, ಇಂದು!

ಈಗ ಈ ಭೂಮಿ ಮೇಲೆ ಮಾನವನಿಲ್ಲ. ಮಾನವನಿಲ್ಲವೆಂದ ತಕ್ಷಣ ಇಲ್ಲಿ ಮೊಟ್ಟಮೊದಲನೆಯದಾಗಿ ಎಂತೆಂಥಾ ಗಗನ ಚುಂಬೀ ಕಟ್ಟಡಗಳಿಂದ ಹಿಡಿದು ಪುಟ್ಟ ಗುಡಿಸಿಲಿನ ವರೆಗೂ ಯಾವುದೇ ರೀತಿಯ ಕಟ್ಟಡಗಳಿಲ್ಲ, ಕಟ್ಟಡಗಳೇ ಇಲ್ಲದ ಮೇಲೆ ರಸ್ತೆಗಳಿಗೇನು ಕೆಲಸ, ಮೊಬೈಲ್ ಟವರ್ ಗಳಿಲ್ಲ, ವಿದ್ಯುತ್ ಸ್ಥಾವರಳಲಿಲ್ಲ, ವಾಹನಗಳಿಲ್ಲ, ತೋಟಗಳಿಲ್ಲ, ಅಭಯಾರಣ್ಯಗಳಿಲ್ಲ, ಗಡಿಗಳಿಲ್ಲ, ಬಾವಿಗಳಿಲ್ಲ, ಕಾಲುವೆಗಳಿಲ್ಲ, ಕೆರೆಕಟ್ಟೆಗಳಿಲ್ಲ, ಅಣೆಕಟ್ಟುಗಳಿಲ್ಲ, ಪುತ್ಥಳಿಗಳಿಲ್ಲ, ದೇಶಗಳಿಲ್ಲ, ಹೆಸರುಗಳಿಲ್ಲ, ಜಾತಿಗಳಿಲ್ಲ, ಜಗಳಗಳಿಲ್ಲ, ದೇವರುಗಳಿಲ್ಲ, ಕರ್ಕಶ ಶಭ್ದಗಳಿಲ್ಲ, ಹೊಗೆಯಿಲ್ಲ, ಕೃತಕತೆಯಿಲ್ಲ, ಕೃತಕ ಮಾಲಿನ್ಯವಿಲ್ಲ, ಎಲ್ಲ ಕಡೆಯೂ, ಎಲ್ಲದರ ಬದಲೂ ನೆಲೆಸುವುದು ಹಚ್ಚ ಹಸಿರ ಜೀವಸಂಕುಲಗಳು. ಅಬ್ಬಬ್ಬಾ!!!!!!!!!!! ಭೂಮಿಯ ಮೇಲಿನ ೯೦% ಸಮಸ್ಯೆ ಅಲ್ಲೇ ನಿವಾರಣೆಯಾದ ಹಾಗಾಯಿತು. ಮನುಷ್ಯನೊಬ್ಬ ಇಲ್ಲದಿದ್ದಲ್ಲಿ ಪರಿಸರದ ಚಕ್ರದ ಕಳಚಿಹೋದ ಕೊಂಡಿ ಕೂಡಿಕೊಂಡು ಮತ್ತೆ ಚಕ್ರವಾಗುತ್ತಿತ್ತು. ಮೇಲಿನಿಂದ ನೋಡಿದರೆ ನೀಲಾಕಾಶದಲ್ಲಿ ಹಸಿರು, ನೀಲಿ ವರ್ಣಗಳಿಂದ ಕಂಗೊಳಿಸುತ್ತಿರುವ ಭೂಮಿ ಏನೂ ಚಟುವಟಿಕೆಗಳೇ ಇಲ್ಲದೆ ತಣ್ಣಗೆ ಸುತ್ತುತ್ತಿದೆ ಎಂಬಂತೆ ಭಾಸವಾಗುತ್ತಿತ್ತು.

ಯಾವುದೋ ಹೂವಿನ ಎಸಳನ್ನು ಸುರುಳಿಸುತ್ತಿ ಚಿಕ್ಕ ಉಂಡೆಯನ್ನಾಗಿ ಮಾಡಿ ತಳ್ಳುತ್ತಾ ಬರುತ್ತಿತ್ತು ಇರುವೆ, ಸ್ವಲ್ಪ ದೂರ ತಳ್ಳಿ ಸುಸ್ತಾಯ್ತೆಂಬಂತೆ  ಅಲ್ಲೇ ಕೊಂಚ ಸಮಯ ನಿಂತು ಮತ್ತೆ ಮನೆಯ ಕಡೆ ಹೊರಡುತ್ತಿರುವಂತೆ ತನ್ನ ದಾರಿ ಹಿಡಿದು ಸಾಗುತ್ತಿತ್ತು. ಅದರ ಗಾತ್ರಕ್ಕಿಂತ ಹತ್ತರಷ್ಟಿದ್ದ ಉಂಡೆಯನ್ನು, ಬಂಡೆಯನ್ನು ಹೊತ್ತಂತೆ ಹೊತ್ತು ತಳ್ಳುತ್ತಾ ಸಾಗುತ್ತಾ ಬಂದು ಥಟ್ಟನೆ ಜೇಡದ ಬಾಯಿಗೆ ಬಿತ್ತು. ಆ ಇರುವೆಯ ಹತ್ತರಷ್ಟಿದ್ದ ಜೇಡ ಒಂದೇ ಬಾಯಿಗೆ ತಿಂದು ಮುಗಿಸಿತು. ಅಷ್ಟು ದೂರದಲ್ಲಿ ಬರುತ್ತಿದ್ದ ಇರುವೆಯನ್ನು ತಿನ್ನಲು ಸಾವಧಾನವಾಗಿ ಹೊಂಚು ಹಾಕಿ ಕಾದು ತಿಂದು ಜೀರ್ಣಿಸಿಕೊಳ್ಳುವಷ್ಟರಲ್ಲಿ, ಅದನ್ನು ಉದ್ದ ನಾಲಿಗೆಯ ಕಪ್ಪೆ ನಾಲಿಗೆಯಿಂದ ಸೆಳೆದುಕೊಂಡು ಗಬಕ್ಕನೆ ತಿಂದು ಮುಗಿಸಿತು. ಅಷ್ಟು ದಪ್ಪ ಹಸಿರು ಕಪ್ಪೆ ನೇರವಾಗಿ ಮತ್ತೊಂದು ಹಾವಿನ ಹೊಟ್ಟೆ ಸೇರಿತು. ಸುರುಳಿ ಸುತ್ತಿ ಬಿದ್ದಿದ್ದ ಹಾವನ್ನು ಮುಂಗುಸಿ ತಿಂದಿತು. ಮುಂಗುಸಿಯನ್ನು ನಾಯಿ ಕೊಂದಿತು, ನಾಯಿ ತೋಳಗಳಿಗೆ ಬಲಿಯಾಯಿತು. ತೋಳ ಹುಲಿಗೆ, ಹುಲಿ ಆನೆಗೆ, ಆನೆ ಮತ್ತೆ ಇರುವೆಗಳಿಗೆ ಆಹಾರವಾಯ್ತು.
ನೆಲವೇ ಕಾಣದಂತೆ ಹಸಿರು ಹಾಸು ತುಂಬಿ ಹೋಗಿದೆ. ಸೂರ್ಯನ ಬೆಳಕೇ ಭೂಮಿಗೆ ತಾಗದಷ್ಟು ದಟ್ಟವಾಗಿ ಕಾಡು ಬೆಳೆದಿದೆ. ಹಲವು ಕಡೆ ದಿನದ ಹೊತ್ತೇ ಕತ್ತಲು ಆವರಿಸಿರುತ್ತದೆ. ಬೇಸಿಗೆಯ ಕಾಲದಲ್ಲೂ ತಣ್ಣನೆಯ ಗಾಳಿ ಬೀಸುತ್ತಲಿರುತ್ತದೆ. ಮಳೆ ಸದಾ ಕಾಲ ನಿರಂತರವಾಗಿ ಸುರಿಯುತ್ತಲೇ ಇರುತ್ತದೆ. ಪ್ರಾಣಿಗಳು ಸ್ವಚ್ಛಂದವಾಗಿ, ನಿರ್ಭಯವಾಗಿ ಓಡಾಡಿಕೊಂಡಿರುತ್ತವೆ. ಹುಲಿ, ಚಿರತೆ, ಆನೆ, ಕರಡಿ, ಮುಂತಾದ ಎಷ್ಟೋ ಪ್ರಾಣಿಗಳು ಇನ್ನೂ ವಿಕಾಸ ಹೊಂದಿ ಹಲವಾರು ಊಹಿಸಲೂ ಅಸಾಧ್ಯವಾದ ಪ್ರಬೇಧಗಳಲ್ಲಿ ಬದುಕಿವೆ. ದೈತ್ಯ ಆನೆಯೊಂದಕ್ಕೆ ಎರಡು ಸೊಂಡಲುಗಳಿವೆ, ಆರು ಕಾಲುಗಳಿವೆ. ಒಂದು ಬೆಕ್ಕಿನ ಗಾತ್ರದ ಹುಲಿ ಮಿಂಚಿನವೇಗದಲ್ಲಿ ಅಂತಹ ಆನೆಯ ಹೊಟ್ಟೆಯೊಳಗೆ ಕಣ್ಣು ಮಿಟುಕಿಸುವುದರೊಳಗಾಗಿ ತೂರಿ ರಂಧ್ರ ಮಾಡಿಕೊಂಡು ತಲೆಯ ಭಾಗದಿಂದ ಹೊರಬರುತ್ತದೆ. ಆನೆ ನೆಲಕ್ಕೆ ಉರುಳಿಬೀಳುತ್ತದೆ. ನಂತರ ಎಲ್ಲ ಹುಲಿಗಳು ಒಟ್ಟಿಗೇ ಹರಿದು ಹಂಚಿ ಕ್ಷಣಾರ್ಧದಲ್ಲಿ ತರಿದು ತಿಂದು ಮುಗಿಸುತ್ತವೆ. ಜಿಂಕೆಯೊಂದನ್ನು ಅಟ್ಟಿಸಿಕೊಂಡು ಬಂದ ಚೂಪನೆಯ ಮೂತಿಯ ಚಿರತೆಯೊಂದು ಕ್ಷಣಾರ್ಧದಲ್ಲಿ ಮರದ ಬೊಡ್ಡೆಯಂತೆ ಆಕಾರ ಬದಲಿಸಿ ಕೂತ ಜಿಂಕೆಯನ್ನು ಪತ್ತೆ ಹಚ್ಚಲಾಗದೆ ಸೋತು ಹಿಂದಿರುಗುತ್ತದೆ. ಅದಾವುದೋ ಪ್ರಾಣಿ ಚಂಗನೆ ಆಕಾಶಕ್ಕೆ ಹಾರಿ ರಾಕೆಟ್ ಮಾದರಿಯಲ್ಲಿ ಮೇಲೆ ಹೋಗಿ ಇನ್ನೆಲ್ಲೋ ಇಳಿಯುತ್ತದೆ. ಇನ್ನೂ ಪತ್ತೆ ಹಚ್ಚಲಾಗದ ಅದೆಷ್ಟೋ ಪ್ರಾಣಿಗಳು, ಬಣ್ಣ ಬಣ್ಣದ ಪಕ್ಷಿಗಳು, ಅವುಗಳ ದೂರ ದೂರದಲ್ಲಿನ ಸದ್ದು. ಗಮ್ಮನೆ ಮಣ್ಣಿನ ವಾಸನೆ. ತರಹೇವಾರಿ, ಕಲಾಕೃತಿಯಂತಿರುವ ಸಸ್ಯ ಸಂಕುಲ, ಹೂವು, ಹಣ್ಣು. ಇಡೀ ಪ್ರಪಂಚದ ತುಂಬಾ ಇರುವುದು ಪ್ರಾಣಿ ಪಕ್ಷಿ ಸಂಕುಲ ಮಾತ್ರ. ಶುಭ್ರವಾದ ಸಮುದ್ರ, ಭಯ ಹುಟ್ಟಿಸುವಂತ ಅಲೆಗಳೊಂದಿಗೆ ಆಟವಾಡುತ್ತಿರುವ ಜಲಚರಗಳು. ಸಾಗರದೊಳಗೆ ಮತ್ತೊಂದು ಜೀವ ಪ್ರಪಂಚ.

ಇಲ್ಲಿ ಯಾವ ಪ್ರಾಣಿಗಳಿಗೂ ಅಳಿವಿನ ಭಯವಿಲ್ಲ. ಸಮಯ, ಕಾಲ ಎಂಬ ಪದಗಳಿಗೆ ಇಲ್ಲಿ ಅರ್ಥ ಹುಡುಕಲು ಸಾಧ್ಯವಿಲ್ಲ. ಎಲ್ಲೋ ದೂರದಲ್ಲಿ ಮಹೋರಗಗಳ ಊಳಿಡುವ ಸದ್ದು, ಮೇಲೆ ಆಕಾಶದೆತ್ತರದಲ್ಲಿ ಎರಡು ಗರುಡಗಳ ಸಲ್ಲಾಪ, ಮರದ ಮೇಲೆ ಎರಡು ಮರಿ ಅಳಿಲುಗಳ ಆಟಾಟೋಪ, ಅಪರೂಪಕೊಮ್ಮೆ ಎಲ್ಲೋ ಹುಟ್ಟಿದ ಕಾಡ್ಗಿಚ್ಚಿನಿಂದ, ಅದರಿಂದ ಎದ್ದ ಹೊಗೆಯಿಂದ ಒಂದಷ್ಟು ಪ್ರಾಣಿ ಪಕ್ಷಿಗಳ ಸಾವು, ಮತ್ತಷ್ಟು ಪ್ರಾಣಿಗಳ ಸ್ಥಳಾಂತರ. ಇನ್ನೆಂದೋ ಸಮುದ್ರದಲ್ಲಿ ಎದ್ದ ಭೂಕಂಪ. ಮತ್ತೆಲ್ಲೋ ಆಗುವ ಜ್ವಾಲಾಮುಖಿಯ ಸ್ಫೋಟ. ಅಪರೂಪಕ್ಕೆ ಆಗುವ ಪ್ರಕೃತಿಯ ವೈಪರೀತ್ಯಗಳನ್ನ ಬಿಟ್ಟರೆ ಏಕತಾನತೆಯ ಪ್ರಪಂಚ. ಪ್ರಾಣಿಗಳು ಹಸಿವಾದಾಗ ಅದರದ್ದೇ ಆದ ರೀತಿಯಲ್ಲಿ ಆಹಾರ ಸಂಪಾದನೆಗೆ ಹೊರಡುವವು. ತನ್ನ ಸಂಸಾರಗಳೊಡಗೂಡಿ ಸಮಯ ಕಳೆಯುವವು. ಎಷ್ಟೋ ಮನ್ವಂತರಗಳು ಕಳೆದ ನಂತರ ಏನೋ ಕೊಂಚ ಪ್ರಾಣಿ ಪಕ್ಷಿಗಳಲ್ಲಿ ಪರಿವರ್ತನೆಗಳಾಗಿ ಆ ಪರಿವರ್ತನೆ ಅವಕ್ಕೆ ತಿಳಿಯದೆಯೂ ಜೀವನ ಸಾಗಣೆಗೆ ಪೂರಕವಾಗಿಯೇ ಆಗಿ ಭೂಮಿ ಸುತ್ತುತ್ತಾ ಸುತ್ತುತ್ತಾ ಹೋಗುತ್ತದೆ.

ಇಲ್ಲಿ ಒಂದು ಚಲನೆಯಿಲ್ಲ, ಕಥೆ ಮುಂದುವರೆಸಲು ಸಾಧ್ಯತೆಗಳಿಲ್ಲ. ಭೂಮಿಗೂ ಕೂಡ ಬೋರು ಹೊಡೆಯದೇ ಇರುವುದಿಲ್ಲ. ಅದಕ್ಕೇ ಮನುಷ್ಯ ಅಷ್ಟು ಮುಖ್ಯವಾಗುತ್ತಾನಾ ಅಂತ! ಈ ಚಲನೆಯಿಲ್ಲದೆ ಸಪ್ಪೆಯಾಗಿ ನಿಂತುಹೋದಂತಿರುವ ಪ್ರಪಂಚದಲ್ಲಿ ಒಬ್ಬ ಮನುಷ್ಯನನ್ನು ಪ್ರತಿಷ್ಠಾಪಿಸಿದರೆ ಕಥೆ ಹೇಗೆ ಧಿಗ್ಗನೆ ಓಟ ಶುರುಮಾಡುತ್ತದೆಂದರೆ, ಒಬ್ಬನೇ ಒಬ್ಬ ಮನುಷ್ಯ ಈ ಪ್ರಪಂಚದಲ್ಲಿ ಬಂದವನೇ, ಮೊದಲು ತನ್ನ ಹೊಟ್ಟೆಗಾಗಿ ಒಂದು ಆಹಾರವನ್ನು ಹುಡುಕುತ್ತಾನೆ. ಹೇರಳವಾಗಿ ತಿನ್ನಲು ದೊರೆಯುತ್ತಿದ್ದ ಹುಲಿಯನ್ನು ಕಂಡು, ಬೇಕೆಂದ ತಕ್ಷಣ ಅದಕ್ಕೊಂದು ಆಯುಧ ತಯಾರಿಸಿ, ಹೊಡೆದೇ ಬಿಡುತ್ತಾನೆ. ಒಂದು ಹುಲಿ ಬಲಿಯಾಗೇ ಬಿಡುತ್ತದೆ. ಸುತ್ತಲಿದ್ದ ಹುಲಿಗಳೆಲ್ಲ ಭಯದಿಂದ ಹೆದರಿ ಬೇಲಿ ಕೀಳುತ್ತವೆ. ಯಾವುದಕ್ಕೂ ಏನು ನಡೆಯುತ್ತಿದೆ ಎಂಬುದು ಅರ್ಥವಾಗುವುದಿಲ್ಲ. ಸುತ್ತ ಇದ್ದ ಹಲವು ಪ್ರಾಣಿಗಳು ದಿಕ್ಕಾಪಾಲಾಗಿ ಏನೋ ವಿಚಿತ್ರ ನಡೆದಿದೆ. ಹುಲಿ ಹೀಗೆ ಸತ್ತು ಬೀಳಲು ಏನೋ ಅಚಾತುರ್ಯ ನಡೆದಿರಬೇಕು ಎಂದು ತಮ್ಮ ತಮ್ಮ ಮನೆಗಳಲ್ಲಿ ಅಡಗುತ್ತವೆ. ಇನ್ನು ಮುಂದಿನ ಕಥೆ ನಮ್ಮನ್ನ ಇಂದಿನ ಸತ್ಯ ಪ್ರಪಂಚಕ್ಕೆ ತಂದೊಡ್ಡುತ್ತದೆ. 
             
                                                                                                          - ಹೇಮಂತ್

Saturday 17 March 2012

ತಾಳ್ಮೆ, ಕಿವಿ, ಕಣ್ಣು, ಸಾವು!


ತಾಳ್ಮೆ, ಕಿವಿ, ಕಣ್ಣು, ಸಾವು!
ಮುನ್ನುಡಿ: ಈ ತಿಕ್ಕಲು ಕಥೆ ಅರ್ಥವಾಗದಿದ್ದಲ್ಲಿ ಇದರಲ್ಲಿ ಯಾವುದೇ ರೀತಿಯ ಅರ್ಥವಿಲ್ಲ. ಈ ಕಥೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರೆ ಇದರಲ್ಲಿ ಓದುಗನ ಸಾಮರ್ಥ್ಯಾನುಸಾರ ಅರ್ಥವಡಗಿದೆ! ಶುಭವಾಗಲಿ!

“ನನ್ನ ಕಣ್ಣುಗಳನ್ನು ಕಿತ್ತುಬಿಡಿ! ನನಗೆ ಪ್ರಪಂಚದ ಏನನ್ನೂ ನೋಡಲು ಇಷ್ಟವಿಲ್ಲ. ಡಾಕ್ಟರೇ, ನಿಮ್ಮಿಂದ ಮಾತ್ರ ಇದು ಸಾಧ್ಯ. ದಯವಿಟ್ಟು ನನ್ನ ಕಣ್ಣುಗಳನ್ನ ಕಿತ್ತುಹಾಕಿ ನನ್ನನ್ನು ಉಳಿಸಿ!”
ಡಾಕ್ಟರು ಸಮಾಧಾನ ಮಾಡ್ಕೊಳ್ಳಿ ನೀವು ತುಂಬಾ ಗೊಂದಲದಲ್ಲಿದ್ದೀರೆಂದು ಕಾಣುತ್ತದೆ, ಸಂಯಮ ಕಳೆದುಕೊಳ್ಳಬೇಡಿ ಎಂದು ಸಮಾಧಾನಪಡಿಸಲು ಪ್ರಯತ್ನಿಸದರೂ ಆತ ಇಲ್ಲ ನನ್ನ ಕಣ್ಣುಗಳನ್ನು ನೀವು ತೆಗೆಯುವಹಾಗಿದ್ದರೆ ಮಾತ್ರ ನಾನು ಸುಮ್ಮನಾಗುವುದು. ಈ ಕೆಲಸ ನಿಮ್ಮಿಂದಲ್ಲದೇ ಬೇರಾರಿಂದಲೂ ಸಾಧ್ಯವಿಲ್ಲ ಡಾಕ್ಟ್ರೇ. ನಿಮ್ಮನ್ನೇ ನಂಬಿ ಬಂದಿದ್ದೇನೆ ನನ್ನನ್ನು ಉಳಿಸಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಲೇ ಇರುವನು. ಡಾಕ್ಟರಿಗೆ ಏನು ಹೇಳುವುದೆಂದು ತೋಚದೆ ಸರಿ ಮಲಗಿ ಎಂದು ಬಿಳಿ ಬಟ್ಟೆ ಹಾಸಿದ್ದ ಮಂಚದ ಮೇಲೆ ಮಲಗಿಸಿ ನಿಮ್ಮ ಸಮಸ್ಯೆಯೇನು. ಕಣ್ಣುಗಳಲ್ಲಿ ಏನಾದರೂ ತೊಂದರೆಯಿದೆಯೇ, ಉರಿ, ತುರಿಕೆ, ನೋವು, ಊತ, ಚುಚ್ಚುವಿಕೆಯ ಅನುಭವವೇನಾದರೂ ಆಗುತ್ತಿದೆಯೇ ಎಂದು ಪರೀಕ್ಷಿಸುತ್ತಾ ಕೇಳಲು ಅಂಥದ್ದೇನೂ ಇಲ್ಲ ಎಂದು ಆ ವ್ಯಕ್ತಿ ಕಾರಣ ಕೇಳಬೇಡಿ ದಯವಿಟ್ಟು ಈ ಕ್ಷಣವೇ ಕಣ್ಣುಗಳನ್ನ ಕಿತ್ತುಬಿಡಿ ಎಂದು ಕೇಳುವನು. ಡಾಕ್ಟರು ಇನ್ನೂ ತಾಳ್ಮೆಯಿಂದಲೇ ಸರಿನಪ್ಪ ಕಣ್ಣುಗಳು ತಾನೆ ಕಿತ್ತೋಣಂತೆ ಆದರೆ ಇದು ಅಮಾನವೀಯ ಕೃತ್ಯ ಎಂದು ನಿನಗೆ ಗೊತ್ತಿದೆ ತಾನೆ. ಇದರಿಂದ ನನಗೆ ಶಿಕ್ಷೆ ಸಹ ಆಗುವ ಎಲ್ಲಾ ಸಾಧ್ಯತೆಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಇದು ನನ್ನ ವೃತ್ತಿ ಧರ್ಮಕ್ಕೆ ದ್ರೋಹವೆಸಗಿದ ಹಾಗೆ. ನಾನು ಹಾಗೆಲ್ಲ ಮಾಡಬರುವುದಿಲ್ಲ. ದಯವಿಟ್ಟು ಅರ್ಥಮಾಡಿಕೋ ಎಂದು ಈ ವ್ಯಕ್ತಿಯ ವಿಚಿತ್ರ ಬೇಡಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರಲು. ದಯವಿಟ್ಟು ಡಾಕ್ಟರೇ ಈ ಕೆಲಸ ಬೇರಾರಿಂದಲೂ ಸಾಧ್ಯವಾಗದು ಇದು ಕೇವಲ ನಿಮ್ಮ ಕೈಲಿಂದ ಮಾತ್ರ ಸಾಧ್ಯ. ನನಗೆ ಈ ಪ್ರಪಂಚವನ್ನ ನೋಡುವುದು ಇನ್ನು ಸಾಧ್ಯವಿಲ್ಲ. ಇದು ನಿಮ್ಮ ವೃತ್ತಿ ಧರ್ಮಕ್ಕೆ ಯಾವ ರೀತಿಯಲ್ಲೂ ಚ್ಯುತಿ ತರುವುದಿಲ್ಲ ಏಕೆಂದರೆ ಈ ಕಣ್ಣುಗಳು ಇದ್ದಲ್ಲಿ ತಾನೇ ಪ್ರಾಣ ಬಿಡುವೆನೆಂದು, ಒಂದು ಜೀವ ಉಳಿಸಿದ ಹಾಗಾಗುವುದೆಂದು, ಇನ್ನು ಕಣ್ಕಿತ್ತರೆ ಡಾಕ್ಟರರ ವಿರುದ್ಧ ದೂರು ನೀಡಲು ಈ ಪ್ರಪಂಚಾಲ್ಲಿ ತನ್ನ ಹಿತಚಿಂತಕರಾರೂ ಇಲ್ಲವೆಂದು ಹೇಳುತ್ತಾ ಡಾಕ್ಟರರ ಕೈ ಗಟ್ಟಿಯಾಗಿ ಹಿಡಿದುಕೊಂಡು ಕಣ್ತೆಗೆಯುವೆನೆಂದು ಮಾತುಕೊಡುವವರೆಗೂ ಕೈಬಿಡುವುದಿಲ್ಲವೆಂದು ಹೇಳಿ ಕೊನೆಗೂ ಡಾಕ್ಟರರು ಬೇರೆ ದಾರಿ ಕಾಣದೆ ಮಾತು ಕೊಟ್ಟ ನಂತರ ಕೈಬಿಡುವನು. ತಿಪ್ಪರಲಾಗ ಹಾಕಿದರೂ, ಹಣದಹೊಳೆಯನ್ನೇ ಹರಿಸಿದರೂ ದೃಷ್ಠಿ ಬಾರದ ಎಷ್ಟೋ ಜನರನ್ನು ನೆನೆಯುತ್ತಾ ಎಲ್ಲ ಸರಿಯಾಗಿದ್ದರೂ ಈ ವಿಚಿತ್ರ ಮನುಷ್ಯ ತಾನೇ ಕಣ್ಣು ಕಿತ್ತುಹಾಕಿರೆಂದು ಹೇಳುತ್ತಿರುವ ಮೊಟ್ಟ ಮೊದಲ ಮನುಷ್ಯನಿರಬೇಕೆಂದು ಮನಸಿನಲ್ಲೇ ಅಂದುಕೊಳ್ಳುತ್ತಾ, ಕಣ್ಣುಗುಡ್ಡೆಗಳನ್ನು ಕೀಳಲು ಸಜ್ಜಾಗುತ್ತಾ, ಮಂಚದ ಮೇಲೆ ಕಣ್ಮುಚ್ಚಿಕೊಂಡೇ ಕಾತುರತೆಯಿಂದ ಮಲಗಿದ್ದ ವ್ಯಕ್ತಿಯ ಎದುರು ನಿಂತು ಆತನ ಹೆಸರು ಕೇಳಲು ಆತ ಹೆಸರು ಹಾಳಾಗಿಹೋಗಲಿ ಡಾಕ್ಟ್ರೇ ಎಂದು ಮರೆಮಾಚುವನು. ನನ್ನನ್ನೇ ಏಕೆ ಅರಸಿಬಂದೆ ಎಂದು ಪ್ರಶ್ನಿಸಲು ಆತ ನಗುವನು.  

ನೀವು ನನ್ನನ್ನ ಮರೆತುಹೋಗಿದ್ದೀರೆಂದು ಕಾಣುತ್ತದೆ. ಹೀಗೇ ಬಹಳ ವರ್ಷಗಳ ಹಿಂದೆ ನಾನು ನಿಮ್ಮನ್ನ ಸಂಪರ್ಕಿಸಿದ್ದೆ ಎಂದು ಹೇಳುವನು. ಯಾವಾಗೆಂದು ಡಾಕ್ಟರಿಗೆ ಹೊಳೆಯದೆ, ತಲೆಕೆರೆದುಕೊಂಡು ಯಾವಾಗ ಎಂದು ಆತನನ್ನೇ ಕೇಳಲು ಆತ ಈಗ್ಗೆ ಹಲವು ವರ್ಷಗಳ ಹಿಂದೆ ನಾನು ಅತಿಯಾದ ಗೊಂದಲದಲ್ಲಿ ಸಿಲುಕಿದ್ದೆ. ನನಗೆ ಏನೋ ದೊಡ್ಡ ರೋಗವೊಂದು ತಗುಲಿತ್ತು. ಯಾವ ಡಾಕ್ಟರರ ಬಳಿ ಹೋದರೂ, ಯಾವ ಚಿಕಿತ್ಸೆ ಪಡೆದರೂ, ಏನೇನು ಪ್ರಯೋಗ ಮಾಡಿದರೂ ಗುಣವಾಗದ ನನ್ನ ರೋಗವನ್ನ ನೀವು ಒಂದು ದಿನದಲ್ಲಿ ಗುಣಪಡಿಸಿದಿರಿ ಮತ್ತು ಆ ರೋಗ ಮತ್ತೆ ಬಾರದಿರಲು ದಾರಿ ತೋರಿಸಿದಿರಿ ಎಂದು ಹೇಳುವನು. ಡಾಕ್ಟರಿಗೆ ಆರ್ಥವಾಗದೇ, ನೆನಪು ಕೂಡ ಬಾರದೆ. ಯಾವಾಗ, ಹೇಗೆ ಎಂದು ಆತನನ್ನೇ ಪ್ರಶ್ನಿಸಲು, ಆತ ರೋಗದಿಂದ ನಲುಗಿ ರಸ್ತೆ ರಸ್ತೆಗಳಲ್ಲಿ, ಸರಿಯಾದ ಚಿಕಿತ್ಸೆಗೆಂದು ಅಲೆಯುತ್ತಿದ್ದಾಗ ಒಮ್ಮೆ ನಿಮ್ಮ ಆಫೀಸಿನ ಮುಂದಿರುವ “ಇಲ್ಲಿದೆ ಎಲ್ಲಕ್ಕೂ ಪರಿಹಾರ” ಎಂಬ ನಾಮಫಲಕವನ್ನ ನೋಡಿ ಇಲ್ಲಿ ತನ್ನ ರೋಗಕ್ಕೊಂದು ಪರಿಹರವಿರಬಹುದೇ ಎಂದು ಅನುಮಾನಿಸುತ್ತಲೇ ಒಳಬರಲು, ನೀವೇ ನನ್ನನ್ನು ಮುಗುಳ್ನಗೆಯೊಂದಿಗೆ ಬರಮಾಡಿಕೊಂಡಿರಿ, ನನ್ನನ್ನು ಒಂದು ಅರಾಮ ಕುರ್ಚಿಯಲ್ಲಿ ಕೂಡ್ರಿಸಿ ನನ್ನನ್ನು ಉಪಚರಿಸಿದಿರಿ. ನನ್ನ ಸಮಸ್ಯೆಯನ್ನ ಸುವಿಸ್ತಾರವಾಗಿ ಆಲಿಸಿದಿರಿ ಮತ್ತು ಪರಿಹಾರವನ್ನೂ ಸಹ ಥಟ್ಟನೆ ಕಂಡುಹಿಡಿದಿರಿ ಎಂದು ಹೇಳಲು ಡಾಕ್ಟರರ ನೆನಪಿನ ಮೂಟೆಗಳಲ್ಲಿ ಮೂಲೆಯೊಂದರಲ್ಲಿ ಇದ್ದ ಹಳೆಯ ಒಂದು ಸಂಗತಿ ಹಾಗೇ ತೆರೆದುಕೊಳ್ಳುವುದು. ಈ ಮನುಷ್ಯ ಅಂದು ಬಂದು ತನ್ನನ್ನು ಏನೋ ಬಾಧೆ ಕಾಡುತ್ತಿದ್ದೆ. ಪರಿಹಾರ ಸಿಗದಿದ್ದಲ್ಲಿ ಸಾಯುವೆನೆಂದು ಮರುಗುತ್ತಿರಲು. ಸಮಸ್ಯೆಯ ಜಾಡಿಗೆ ಹೋಗಲೆಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಲು ಈ ವ್ಯಕ್ತಿ ಹೇಳಿದ ಸಮಸ್ಯೆಯನ್ನು ಕೇಳಿ ಅಚ್ಚರಿಪಡುವರು. ತನ್ನ ಗಾಡಿ ಎರಡು ಬಾರಿ ಕಿಕ್ ಹೊಡೆದಾಗಲೂ ಶುರುವಾಗದಿದ್ದಲ್ಲಿ ತನಗೆ ಕೋಪಬಂದು ಗಾಡಿಯನ್ನು ರಸ್ತೆ ಮಧ್ಯದಲ್ಲೇ ಬಿಸಾಕಿ ಹೋಗುವುದು, ತನ್ನ ಸುತ್ತಲ ಜನ ತನ್ನ ಇಷ್ಟಕ್ಕೆ ವಿರುದ್ಧವಾಗಿ ಮಾಡಿದಾಗ ತನ್ನಲ್ಲಿರುವ ಕ್ರೋಧ ಹೊರಗೆ ಬಂದು ಅವರನ್ನೆಲ್ಲಾ ಚಚ್ಚಿರುವುದು, ಸಿಕ್ಕಸಿಕ್ಕವರೊಡನೆ ಜಗಳ, ತನ್ನ ಕಂಪ್ಯೂಟರ್, ಟಿವಿ, ಫ್ಯಾನ್, ಮುಂತಾದಂತಹ ಮನೆಯ ತನ್ನ ಎಲ್ಲಾ ವಸ್ತುಗಳು ಇವನ ಕೈಯಿಂದಲೇ ಚೂರು ಚೂರಾಗಿರುವುದು ಈಗ ರಸ್ತೆ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಎರಗುತ್ತಿರುವನೆಂದು ತಿಳಿದುಕೊಂಡು, ಇದು ಮನೋರೋಗವೇ ಎಂದು ಮೊದಮೊದಲು ತಿಳಿದರೂ ಇಲ್ಲ ಇದು ಸಾಧಾರಣ ಖಾಯಿಲೆ. ಈತನಿಗೆ ಏನೂ ಆಗಿಲ್ಲ ತಾಳ್ಮೆ ಕಳೆದುಕೊಂಡಿದ್ದಾನಷ್ಟೇ ಎಂದು ಅರಿತು. ಇವನ ಹುಚ್ಚಾಟಕ್ಕೆ ಪರಿಹಾರ ಕೊಟ್ಟಿರುತ್ತಾರೆ. ನೇರವಾಗಿ ಆತನನ್ನು ಎಳೆದುಕೊಂಡು ಆಫೀಸಿನ ಒಳಕೋಣೆಯಲ್ಲಿದ್ದ ಫ್ಯಾಕ್ಟರಿಗೆ ಎಳೆದೊಯ್ದು, ಹಲವಾರು ಸೂಜಿಗೆ ದಾರ ಪೋಣಿಸುತ್ತಿದ್ದವರನ್ನು, ರಾಗಿಯಲ್ಲಿ ಸಾಸಿವೆ ಹೆಕ್ಕುತ್ತಿದ್ದವರನ್ನು, ಮಣ್ಣಿನಲ್ಲಿನ ಕಣಗಳನ್ನು ಎಣಿಸುತ್ತಿದ್ದವರನ್ನೆಲ್ಲಾ ಹಾದುಕೊಂಡು ನೂರಾರು ಮಂದಿಯಾದ ನಂತರ ಒಂದು ಹೂವಿನ ಗುಡ್ಡೆ ಹಾಕಿಕೊಂಡು ತನ್ನ ಪಾಡಿಗೆ ಗಿಜಗುಡುತ್ತಿದ್ದ ಆ ಸಂತೆಯ ಜಾಗದಲ್ಲೂ ತನ್ನ ಪಾಡಿಗೆ ತಾನು ಹೂವು ಕಟ್ಟುತ್ತಿದ್ದ ಒಬ್ಬ ಹೆಂಗಸ ಬಳಿ ಬಿಟ್ಟು ಇಂದು ಆ ವ್ಯಕ್ತಿ ಹೂವು ಕಟ್ಟುವನೆಂದು ಹೇಳಿ ಹೋಗುವನು. ಒಂದೊಂದೇ ಒಂದೊಂದೇ ಹೂವನ್ನು ಕಟ್ಟುತ್ತಾ ಕಟ್ಟುತ್ತಾ ಸಂಜೆ ಡಾಕ್ಟರು ಹಿಂದಿರುಗಿದಾಗ ಆ ವ್ಯಕ್ತಿಯ ಮುಖದಲ್ಲಿ ಶಾಂತತೆ ಕಂಡಿದ್ದು ನೆನಸಿಕೊಂಡು ಹೋ ಇವನಾ ಈ ವ್ಯಕ್ತಿ ಈಗ ಈತನಿಗೆ ಏನಾಗಿರಬಹುದು ಮತ್ತೊಂದು ಹೊಸ ಸಮಸ್ಯೆಯನ್ನ ತಂದಿರುವನಲ್ಲಾ ಎಂದು ಆತನತ್ತ ನೋಡುವರು.

ನೀವು ಮತ್ತೆ ತಾಳ್ಮೆ ಕಳೆದುಕೊಂಡಿರುವಂತಿದೆ ಎಂದು ಡಾಕ್ಟರು ಕೇಳಲು. ಆತ, ತನ್ನಿಂದ ಈ ಪ್ರಪಂಚದಲ್ಲಿ ಏರುತ್ತಿರುವ ಬಿಸಿಲಿನ ತೀಕ್ಷ್ಣತೆಯನ್ನು ನೋಡಲಾಗುತ್ತಿಲ್ಲವೆಂದು, ತನ್ನ ಕಣ್ಣುಗಳಲ್ಲಿ ನೀರು ಬರಲು ಶುರುವಾಗಿದ್ದು ಈಗ ರಕ್ತವಾಗಿ ಪರಿಣಮಿಸುತ್ತಿದೆಯೆಂದು ಹೇಳುವನು. ಈ ಬಿಸಿಲು ಪ್ರತಿಯೊಬ್ಬ ಜೀವಿಯನ್ನೂ ಆವರಿಸಿದೆ. ಒಬ್ಬ ಇನ್ನೊಬ್ಬನ ಮೇಲೆ ಈ ಶಾಖವನ್ನು ಕಾರುತ್ತಾ ಪ್ರತಿಯೊಬ್ಬರ ಕಣ್ಣುಗಳಲ್ಲೂ ಅದು ಕಾಣುತ್ತಿದೆ. ಯಾರ ಕಣ್ಣಿನಲ್ಲೂ ತಾನು ಕಣ್ಣಿಟ್ಟು ನೋಡುವ ಹಾಗಿಲ್ಲ, ನೋಡಿದರೆಲ್ಲಿ ತನ್ನ ಕಣ್ಣುಗಳೂ ಆ ಉರಿ ಬೆಂಕಿಯನ್ನು ತುಂಬಿಕೊಳ್ಳುವುದೋ ಎಂದು ಹೆದರಿಕೆಯಾಗುತ್ತಿದೆ. ಎಷ್ಟೋ ಜನ ಈ ಇತರರ ಕಣ್ಣುಗಳಲ್ಲಿರುವ ಉರಿಯಿಂದ ತಪ್ಪಿಸಿಕೊಳ್ಳಲು ಕಪ್ಪು ಕಣ್ಣಡಕಗಳನ್ನೋ, ಇನ್ನೂ ಹಲವು ಮಾರ್ಗಗಳನ್ನು ಅನುಸರಿಸಲೆತ್ನಿಸಿ, ಏನು ಮಾಡಿದರೂ ಸಫಲರಾಗದೆ ಅದೇ ಉರಿಯಲ್ಲಿ ನಲುಗುತ್ತಿರುವರೆಂದು ಹೇಳುವನು. ಇದಕ್ಕೆ ಬೇರೆ ಮಾರ್ಗ ಹುಡುಕುವುದೊಳಿತು ಒಮ್ಮೆ ಕಳೆದುಕೊಂಡ ಕಣ್ಣುಗಳು ಮತ್ತೆ ಸಿಗುವುದಿಲ್ಲೆಂದು, ಯಾವ ರೀತಿಯಲ್ಲಿ ಹೇಳಿದರು ತನ್ನ ನಿರ್ಧಾರಕ್ಕೆ ಆ ವ್ಯಕ್ತಿ ಬದ್ಧನಾಗಿದ್ದರಿಂದ ಕೊನೆಗೂ ಕಣ್ಕಿತ್ತು ಸುಧಾರಿಸಿಕೊಂಡ ನಂತರ ಆ ವ್ಯಕ್ತಿಯನ್ನು ಕಳಿಸಿಕೊಡುವರು. ಹೋಗುವಾಗ ಆತ ಭಲೇ ಖುಷಿಯಿಂದ, ತನ್ನ ಜೀವ ಉಳಿಸಿದ ದೇವರೆಂದು ಅವರ ಕಾಲಿಗೆರಗಿ ನಮಸ್ಕರಿಸಿ ಕೈತುಂಬಾ ತನ್ನಲ್ಲಿದ್ದ ಸಂಪತ್ತನ್ನೆಲ್ಲಾ ಸುರುವಿಹೋಗುವನು. ಡಾಕ್ಟರು ಈತ ಮತ್ತೆ ಬರದಿರಲೆಂದು ಆಶಿಸುತ್ತಾ ಕಳಿಸಿಕೊಡುವರು.

ಹಲವಾರು ವರುಷಗಳ ನಂತರ ಅದೇ “ಇಲ್ಲಿದೆ ಎಲ್ಲಕ್ಕೂ ಪರಿಹಾರ” ಎಂಬ ಆಫೀಸಿನ ಬಾಗಿಲ ಮುಂದೆ ಒಂದು ಆಕೃತಿ ನಿಂತಿರುತ್ತದೆ. ಬರಮಾಡಿಕೊಳ್ಳಲು ಅದೇ ಡಾಕ್ಟರೆಂಬೋ ಡಾಕ್ಟರು ಹೋಗಿ ನೋಡಲು ಎಂದೂ ಮರೆಯಲಾಗದ ಆ ವಿಶಿಷ್ಟ, ವಿಚಿತ್ರ ಆಕೃತಿ ನಿಂತಿರುತ್ತದೆ. ಇಂತಹ ಸಹಸ್ರ ನಮೂನಮೂನೆಯ ರೋಗಿಗಳನ್ನು, ಸಮಸ್ಯೆಗಳನ್ನು ಕಂಡಿದ್ದ ಪರಿಹಾರನಿಧಿಯಂತಹ ಡಾಕ್ಟರೆಂದು ಕರೆಸಿಕೊಳ್ಳುತ್ತಿರುವ ಆ ದೈವಾಂಶಸಂಭೂತನಿಗೆ ಯಾವುದೇ ರೀತಿಯ ಅಚ್ಚರಿಯಾಗುವುದಿಲ್ಲ. ಆದರೆ, ಈತ ತನ್ನ ಕಣ್ಣುಗಳನ್ನು ಮತ್ತೆ ಕೇಳಲು ಬಂದಿರದಿದ್ದರೆ ಸಾಕೆಂದು ಮನಸಿನಲ್ಲೇ ಪ್ರಾರ್ಥಿಸಿಕೊಂಡರು. ಏಕೆಂದರೆ, ಆ ಕಣ್ಣುಗಳಾಗಲೇ ಇಬ್ಬರು ಬಿಸಿಲಿನ ಉರಿಯ ತೀಕ್ಷ್ಣತೆಯನ್ನು ಕಣ್ಣಿಗೆ ಚುಚ್ಚಿಸಿಕೊಂಡರೂ ಪರವಾಯಿಲ್ಲ ಆದರೆ ಕತ್ತಲೆಯ ಕಿಚ್ಚನ್ನು ಸಹಿಸಲಾಗದವರಿಗೆ ಹಂಚಿ ಆಗಿತ್ತು. ಬಾಗಿಲಲ್ಲಿ ನಿಂತಿದ್ದ ಈ ವ್ಯಕ್ತಿಯನ್ನು ನೋಡಿದರೆ ಕಿವಿಗಳಲ್ಲಿ ದೊಡ್ಡ ಹತ್ತಿಯ ಬೆಟ್ಟವನ್ನೇ ತುರುಕಿಕೊಂಡು ಬಂದಿರುವುದನ್ನು ಕಂಡ ಕೂಡಲೇ ಈ ಬಾರಿ ಖಾತ್ರಿಯಾಗಿ ಕಿವಿ ಕಿವುಡು ಮಾಡಿಸಿಕೊಳ್ಳಲು ಬಂದಿರುವನೆಂದು ತಿಳಿದ ಡಾಕ್ಟರು, ಏನಾಯಿತೆಂದು ಕೇಳುತ್ತಾ ಒಳಗೆ ಕರೆದುಕೊಂಡು ಹೋಗಲು, ಮಂಚದ ಮೇಲೆ ಕೂರುತ್ತಾ ಆ ವ್ಯಕ್ತಿ ತನ್ನ ಕಿವಿಗಳನ್ನು ಮೊದಲು ಕಿವುಡಾಗಿಸಿ, ತಾನು ಕಣ್ಣು ಕಳೆದುಕೊಂಡಮೇಲೆ ತನಗೆ ಅರಿವಾದದ್ದು ಈ ಪ್ರಪಂಚದಲ್ಲಿ ಏನು ಕರ್ಕಶ ಶಬ್ಧವಿದೆ ಎಂದು ಹೇಳುವನು. ಡಾಕ್ಟರು ಯಾಕೆ, ಏನು ಎತ್ತವೆಂದು ಕೇಳುತ್ತಿರಲು ಆತ ಡಾಕ್ಟರರ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೇ ಮಾತು ಮುಂದುವರೆಸುವನು. ಪ್ರಪಂಚದ ತುಂಬಾ ವಿಚಿತ್ರ, ವಿಚಿತ್ರ ವಾಹನಗಳು, ಯಂತ್ರಗಳು, ಮನುಷ್ಯರ ಮಾತುಗಳು, ಗಲಾಟೆ, ಆಕ್ರಂದನ, ಚೀರಾಟ, ಬಯ್ಗುಳ, ಇಂತಹ ವಿಕೃತ ಶಬ್ಧಗಳು ಎಲ್ಲಿ ಹೋದರೂ ತನ್ನನ್ನು ಹಿಂಬಾಲಿಸಿದ್ದು, ನಗರಗಳಲ್ಲಿನ ಶಬ್ಧ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಹಳ್ಳಿಗಳಿಗೆ ಹೋದರೆ, ಆ ನೀರವತೆ, ಆ ತಣ್ಣನೆ ಬೀಸುತ್ತಿದ್ದ ಗಾಳಿಯ ಶಬ್ಧ, ಎಲ್ಲರಿಂದ ದೂರ ಹೋಗಿ ಕಾಡಿನಲ್ಲಿ ಇರಲು, ಮರ ಗಿಡ ಪ್ರಾಣಿಪಕ್ಷಿಗಳ ಶಬ್ಧವೂ ಸಹ ಕಿವಿ ತೂತು ಬೀಳುವಂತೆ ಕರ್ಕಶವಾಗಿ ಕೇಳಲಾರಂಭಿಸಿದ್ದು, ಎಲ್ಲ ಶಬ್ಧಗಳಿಂದ ತಪ್ಪಿಸಿಕೊಳ್ಳಲು ಕಿವಿ ಮುಚ್ಚಿಕೊಂಡರೂ ತನ್ನ ಒಡಲಿಗೆ ಇಳಿಯುತ್ತಿದ್ದ ನೀರೂ ಸಹ ಶಬ್ಧ ಮಾಡಲಾರಂಭಿಸಿದ್ದು ಎಲ್ಲವನ್ನೂ ಹೇಳಿ ತನಗೆ ಏಕಾಂತದಲ್ಲಿನ, ಮೌನದಲ್ಲಿನ ಶಬ್ಧವೂ ಕೂಡ ಕೇಳದ ಹಾಗೆ ಮಾಡಿರೆಂದು ಮತ್ತೆ ದುಂಬಾಲು ಬೀಳುವನು. ಶ್ರವಣಶಕ್ತಿಯನ್ನು ಕಳೆದುಕೊಂಡು ಮತ್ತದೇ ಲವಲವಿಕೆಯಿಂದ ಹೊರಡುವನು. ಇನ್ನೊಂದಷ್ಟು ವರ್ಷಗಳ ನಂತರ ನಾಲಗೆ ಕೀಳಿರೆಂದು ಬಂದೇ ಬರುತ್ತಾನೆಂದು ಡಾಕ್ಟರೇ ಊಹಿಸುತ್ತಾ ಕಳಿಸಿಕೊಡುವರು.

ಅಂತೆಯೇ ಹಲವು ವರ್ಷಗಳ ನಂತರ ಅದೇ ಡಾಕ್ಟರರ ಮುಂದೆ ಪ್ರತ್ಯಕ್ಷವಾಗಿ ಒಳಗೆ ನಡೆಯುತ್ತಾ, ತನ್ನ ಹೊಸ ತೊಂದರೆಯನ್ನು ವಿವರಿಸುವನು. ಈ ಎಲ್ಲಾ ಕರ್ಕಶ ಶಬ್ಧಗಳು, ಕಣ್ಕುಕ್ಕುವ ಧಗೆ ಹೊರಗಡೆಯಲ್ಲ ತನ್ನ ಒಳಗೇ ಆವರಿಸಿ ಹಲವು ರೀತಿಯ ಕೋಲಾಹಲವೆಬ್ಬಿಸುತ್ತಿದೆ. ಏನೇನೋ ತಾನು ತಡೆಯಲಾರದಂತಹ ಆಲೋಚನೆಗಳು ಬರುತ್ತಿವೆ. ತನ್ನನ್ನು ಕಿತ್ತು ಕಿತ್ತು ತಿನ್ನುತ್ತಿವೆ ಎಂದು ಹೇಳುವನು. ತನ್ನ ತಲೆಯೊಳಗೆ ಕೋಲಾಹಲ, ಚಂಡಮಾರುತ, ಬಿರುಗಾಳಿ, ಭೂಕಂಪಗಳಾಗುತ್ತಿರುವುದಾಗಿ, ತನ್ನಿಂದ ಈ ತುಮುಲವನ್ನು ಒಳಗೇ ಕುದಿಯುತ್ತಿರುವ ದಾವಾನಲವನ್ನು ಇನ್ನು ತನ್ನಿಂದ ಸಹಿಸಲಾಗುತ್ತಿಲ್ಲವೆಂದು ಇದಕ್ಕೆ ಒಂದೇ ಮಾರ್ಗವೆಂದು ಹೇಳುವನು. ಮೆದುಳನ್ನು ಕೀಳಬೇಕೇನೆಂದು ಡಾಕ್ಟರು ನೋಡುತ್ತಿರಲು. ಆ ವ್ಯಕ್ತಿ ತನ್ನ ಹೃದಯವನ್ನೇ ಕಿತ್ತುಬಿಡಿರೆಂದು ಅದರಿಂದಲೇ ತನ್ನ ತಲೆ ಇಷ್ಟೆಲ್ಲಾ ತೊಂದರೆ ಕೊಡುತ್ತಿರುವುದಾಗಿ ಹೃದಯವನ್ನು ಆದಷ್ಟು ಬೇಗ ಕಿತ್ತುಬಿಡಲು ವಿನಂತಿಸಿಕೊಳ್ಳುವನು.

ಕಿವಿ, ಕಣ್ಣುಗಳನ್ನು ಕಳೆದುಕೊಂಡಿದ್ದ ದೇಹದಲ್ಲಿನ ಹೃದಯ ತೆಗೆದಾಕ್ಷಣ, ಕೈಕಾಲು ಸಕಲಾಂಗ ದೇಹವು ನಿಸ್ತೇಜವಾಗುವುದು. ಸುಧಾರಿಸಿಕೊಂಡ ಕೆಲವು ಘಂಟೆಗಳೊಳಗೆ ಆ ವ್ಯಕ್ತಿ ನಿರ್ವಿಕಾರ, ನಿರ್ಲಿಪ್ತ ಮುಖಮುದ್ರೆಯಲ್ಲಿ, ಡಾಕ್ಟರರ ಮರುಳುವಿಕೆಗೂ ಕಾಯದೆ ನೇರ ನಡೆದುಹೋಗುವನು. ಹಾಗೆ ಹೋದ ಆ ವ್ಯಕ್ತಿ ಮತ್ತೆಂದೂ “ಇಲ್ಲಿದೆ ಎಲ್ಲಕ್ಕೂ ಪರಿಹಾರ”ಕ್ಕೆ ಮರಳುವ ಸುಸಮಯ ಒದಗಲಿಲ್ಲ!

                                                   -ಹೇಮಂತ್

Sunday 11 March 2012

ಭುವನ್ Vs ದೇವರು!


                   ದೇವರು ಪ್ರಾಣವನ್ನು ರಕ್ಷಿಸುವಾತ, ಕೇಳಿದರೆ ತನ್ನ ಆತ್ಮಲಿಂಗವನ್ನೇ ಕರುಣಿಸುವಾತ, ಎಲ್ಲ ಕಷ್ಟಗಳಿಂದ ನಮ್ಮನ್ನು ರಕ್ಷಿಸುವಾತ, ಹಲವು ವರಗಳನ್ನು ಬಿಟ್ಟಿಯಾಗಿ, ಟ್ಯಾಕ್ಸ್ ಸಹ ಇಲ್ಲದೇ ಕರುಣಿಸುವಾತ, ಕೇವಲ ನಾಮಸ್ಮರಣೆಯಿಂದ ಮನಕ್ಕೆ ಸಿಗರೇಟಿಗಿಂತ ಹೆಚ್ಚು ಆಹ್ಲಾದ ನೀಡಬಲ್ಲಾತ…. ಇತರೆ, ಇತರೆ ಏನೇನೋ ಕಥೆಗಳನ್ನು ಕೇಳಿದ್ದೆ, ಇರಬಹುದೇನೋಪ್ಪಾ, ಆತ ಕೆಲಸ ಕಾರ್ಯ ಮಾಡದ, ಸುಮ್ಮನೆ ಅಂಪೈರ್ ರೀತಿ ನಿಂತು ಆಟಗಾರರಾದ ನಮ್ಮ ಆಟವನ್ನು ತೀರ್ಮಾನಿಸುವಾತ ಅಂತ ಎಲ್ಲಾ ನನ್ನ ಗುರುಹಿರಿಯರಿಂದ ತಿಳಿದುಕೊಂಡಿದ್ದ ನನಗೆ, ಅವನು ಮಾಡಲು ಕೆಲಸವಿಲ್ಲದೆ ನಮಗೆ ಎಲ್ಲ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುವ ಕೆಲಸವನ್ನ ಗುತ್ತಿಗೆಗೆ ಪಡೆದಿರುವನೆಂದು ನಂಬಲು ಹೊರಟಿದ್ದ ನನಗೆ, ದೇವರ ಇನ್ನೊಂದು ಮುಖದ ಪರಿಚಯವಾಯ್ತು. ಈ ದೇವರೆಂಬೋ ದೇವರು ಒಬ್ಬ ಅಮಾಯಕನಿಗೆ ಕೇಡನ್ನೇ ಉಂಟುಮಾಡಲು ಸಜ್ಜಾಗಿ ನಿಂತಿದ್ದ. ಭುವನ್. ದೇವರಿಗೆ ಅವನ ಮೇಲೆ ಅದಾವ ರೀತಿಯ ದ್ವೇಷವಿತ್ತೋ ನಾನರಿಯೆ, ಪಾಪ ಭುವನನೂ ಕೂಡ ಅರಿತಿರಲಾರ ಯಾಕೆಂದರೆ ಅವನು ಯಾರಿಗೂ ಬಯಸದೆಯೂ ಸಹ ಕೇಡುಂಟು ಮಾಡಿದವನಾಗಿರಲಿಲ್ಲ. ಹಾಗೆಂದು ದೇವರು ಅವನ ಮೇಲೆ ಎಸಗುತ್ತಿದ್ದ ದೌರ್ಜನ್ಯ ಮಾರಣಾಂತಿಕ ಹಲ್ಲೆಯನ್ನು ಆತ ಸುಮ್ಮನೆ ಸ್ವೀಕರಿಸುತ್ತಿರಲಿಲ್ಲ. ದೇವರಿಗೆ ಸಡ್ಡೊಡೆದು ನಿಂತು ಎಲ್ಲ ಹಲ್ಲೆಯನ್ನು, ಆಘೋಷಿತ ಹಿಂಸೆಯನ್ನು ದಿಟ್ಟತನದಿಂದ ಎದುರಿಸುತ್ತಲೇ ಇದ್ದ. ದೇವರೇನು ಕಡಿಮೆ ಪರಾಕ್ರಮಿಯಾಗಿರಲಿಲ್ಲ ನಮಗೆಲ್ಲಾ ಗೊತ್ತಿರುವಂತೆ ಹಲವಾರು ದುಷ್ಟಶಕ್ತಿಗಳನ್ನು ತಾನೇ ಸೃಷ್ಟಿಸಿ ತಾನೇ ಹತಗೈಯುವಂತಹ ಹಲವು ಆಶ್ಚರ್ಯಕರ, ಫ್ಯಾಂಟಸಿ ಕಥೆ, ಚಿತ್ರಕಥೆಗಳನ್ನು ಬರೆದು ಸ್ವಯಂ ನಾಯಕನಟನಾಗಿ, ನಿರ್ದೇಶಕನಾಗಿ ಪಾತ್ರವಹಿಸಿ ಖಳನಾಯಕರನ್ನು ಸದೆಬಡಿದು ಹಲವು ಅಭಿಮಾನಿಗಳನ್ನು ಗಳಿಸಿಕೊಂಡಿರುವಂತಹ ವೀರಾಧಿವೀರ. ಇಂತಿರ್ಪ ಕೋಟ್ಯಾನುಕೋಟಿ ಕಥೆಗಳ ನಾಯಕನಟನು ಪ್ರಪ್ರಥಮ ಬಾರಿಗೆ ಖಳನಾಯಕನ ಪಾತ್ರವಹಿಸಲು ಸಜ್ಜಾಗಿರುವ ಏಕಮಾತ್ರ ಕಥೆ ನನ್ನ ಕಿವಿ, ಕಣ್ಣಿಗೆ ಬಿದ್ದಾಗ ನನಗೂ ಮೊದಮೊದಲು ನಂಬಲು ಸಾಧ್ಯವಾಗಲಿಲ್ಲ. ಆದರೆ ಸಚ್ ಕಡವಾ ಹೋತಾ ಹೈ ಜೀ…!!!!!!

ದೇವರ ವಿರುದ್ಧ ಯುದ್ದ ಸಾರಿ ಎದೆ ಸೆಟೆಸಿ ನಿಂತಿರುವ ಈ ಭುವನ್ ಯಾವುದೋ ಸೂಪರ್ ನಾಚುರಲ್ ಶಕ್ತಿ ಹೊಂದಿರುವ ಸೂಪರ್‍ಮ್ಯಾನ್ ಅಥವಾ, ಹೀಮ್ಯಾನ್ ಅಥವಾ, ಬ್ಯಾಟ್ ಮ್ಯಾನ್ ರೀತಿಯವನೇನೂ ಅಲ್ಲ. ಇವನಿಗೆ ನಿಜಸ್ವರೂಪದಲ್ಲಿ ಹೊಡೆದಾಟವಿರಲಿ, ಇನ್ನೂ ಮಾತು ಕೂಡ ಸರಿಯಾಗಿ ಬರುವುದಿಲ್ಲ. ಈತನಿಗೆ ಈಗ ನಾಲ್ಕು ವರುಷ. ಈತ ಬಾಲಕ ಸ್ವರೂಪಿ ವೀರ. ಅಂದು, ಕಂಸ ತನಗೆ ತನ್ನ ತಂಗಿಯ ಮಗನಿಂದಲೇ ಕಂಟಕವಿದೆ ಎಂದು ತಿಳಿದಾಗ ದೇವಕಿಯ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಮುಗಿಸಿದ್ದನಂತೆ. ಆಗ ಕೃಷ್ಣ ಆತನಿಂದಲೂ ಬಚಾವಾಗಿ ದೇವರೆಂಬ “ಹೀರೋ” ಆಗಿ ಕಂಸನನ್ನು ಕೊಂದನಂತೆ. ಇಂದು, ಕಂಸನ ಸ್ಥಾನದಲ್ಲಿ "ದೇವರು", ಕೃಷ್ಣನ ಸ್ಥಾನವನ್ನು ಇನ್ನೇನು ಯಶಸ್ವಿಯಾಗಿ ಅಲಂಕರಿಸಲಿರುವ ನಮ್ಮ "ಭುವನ್" ನಿಂತಿರುವನು. ದೇವರಿಗೆ ಈತನಿಂದ ಅದಾವ ಕಂಟಕವಿದೆಯೆಂದು ಹಣೆಬರಹ ಬರೆದಿತ್ತೋ ಒಟ್ಟಿನಲ್ಲಿ ಮುಗಿಸುವ ಶತಪ್ರಯತ್ನದಲ್ಲಿದ್ದ. ಭುವನ್ ಹುಟ್ಟಿದ ಕ್ಷಣವೇ ಉಸಿರನ್ನು ಒತ್ತಿ ಹಿಡಿದು, ಉಸಿರಾಟದ ತೊಂದರೆ ಕೊಟ್ಟು ಇನ್ನೇನು ಮುಗಿಸಿಬಿಡಬೇಕೆನ್ನುವಷ್ಟರಲ್ಲಿ, ಇನ್ನೂ ಭುವನನೆಂದು ನಾಮಕರಣ ಮಾಡಿಕೊಂಡಿರದಿದ್ದ ಪುಟ್ಟ ಹಸುಳೆ ಉಸಿರು ಒತ್ತಿ ಹಿಡಿದಿದ್ದ ಕೈಯನ್ನು ಕಚ್ಚಿ ಬಾಯಿತುಂಬಾ ರಕ್ತ ಲೇಪಿಸಿಕೊಂಡು ಪ್ರಪ್ರಥಮ ವಿಜಯ ಸಾಧಿಸಿದ್ದ. ಆದರೆ ಸೋಲನ್ನು ಸೋಲೆಂದು ಒಪ್ಪಿಕೊಳ್ಳದ ಪಾಕಿಸ್ತಾನದಂತೆ, ನಾಚಿಕೆ ಬಿಟ್ಟು ಮರಳಿ ಯತ್ನವ ಮಾಡು ಎಂದು ಗೆಲ್ಲುವವರೆಗೂ ನನ್ನ ದಂಡಯಾತ್ರೆ ಮುಂದುವರೆಯುತ್ತದೆ ಎಂದು ಗಜನಿ ಮೊಹಮದ್ದನಂತೆ, ಪ್ರತಿಜ್ಞೆ ಮಾಡಿದಹಾಗಿತ್ತು ದೇವರೆಂಬೋ ದೇವರು. ಕೂರ್ಮ, ನರಸಿಂಹ, ಮೊಸಳೆ, ಹಂದಿ ನಾಯಿಯಂತಹ ಹಲವು ವೇಷ ಧರಿಸಿದ್ದ ದೇವರು ಈಗ ಡಾಕ್ಟರರ ರೂಪದಲ್ಲಿ ಬಂದು ಬಾಯಲ್ಲಿ ರಕ್ತ ಕಂಡದ್ದರಿಂದ ಕರೆಂಟ್ ನಲ್ಲಿ ಇಟ್ಟು ಕೃತಕ ಉಸಿರಾಟದ ನೆಪದಲ್ಲಿ ತಾಯಿಯ ಹಾಲನ್ನೂ ಹಸುಳೆ ಪಡೆಯದ ಹಾಗೆ ಹುನ್ನಾರ ಮಾಡಿದರೂ ಅದೆಲ್ಲವನ್ನೂ ಎದುರಿಸಿ ಚೇತರಿಸಿಕೊಂಡು ತನ್ನ ತಾಯಿಯ ಹಾಲನ್ನು ಎರಡು ದಿನಗಳ ನಂತರ ಕುಡಿದು ಹಹಹ ಎಂದು ನಕ್ಕು "ಮಗನೆ... ದೇವರೇ ಅಮೃತ ನಾನು ಕುಡಿದಾಯ್ತು ಇನ್ನು ನನ್ನನ್ನಲ್ಲ ನನ್ನ ಕೂದಲನ್ನೂ ಸಹ ಮುಟ್ಟಲು ನಿನ್ನಿಂದ ಸಾಧ್ಯವಿಲ್ಲ, ಬಾ ಅದೇನು ಕಿತ್ತುಕೊಳ್ಳುತ್ತೀಯ ನಾನೂ ನೋಡುತ್ತೀನಿ" ಎಂಬಂತೆ ಮೊದಲ ಬಾರಿಗೆ ನಕ್ಕ ಭುವನ. ತಾಯಿತಂದೆಯರು ಮೊದಲ ಬಾರಿಗೆ ನೆಮ್ಮದಿಯಿಂದ ಉಸಿರಾಡಿದ್ದರು. ನೀವೇನು ಯೋಚನೆ ಮಾಡಬೇಡಿರಮ್ಮ ನಾನು ನಿಮ್ಮ ಮಗ, ಬರಲಿ ಅದಾರು ಬರುತ್ತಾರೋ, ನಿಮ್ಮಿಂದ ನನ್ನನ್ನ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಟ್ಟಿಯಾಗಿ ಅಮ್ಮನ ಅಪ್ಪನ ಕೈಬೆರಳನ್ನು ತನ್ನ ಎರಡೂ ಪುಟ್ಟ ಮುಷ್ಟಿಯಲ್ಲಿ ಹಿಡಿದು ನೆಮ್ಮದಿಯಾಗಿ ನಿದ್ರಿಸ ತೊಡಗಿದ ಬಾಲ ಭುವನ. ಸತತವಾಗಿ ಎರಡು ಸೋಲು! ಮುಂದಿನ ಬಾರಿ ಬಹಳ ಜಾಗರೂಕತೆಯಿಂದ ದಾಳಿ ಮಾಡಬೇಕೆಂದು ತೀರ್ಮಾನಿಸಿ ದೊಡ್ಡ ಯೋಜನೆಯೊಂದನ್ನು ನಿರ್ಮಿಸುತ್ತಾ ದೇವರು ಕೆಲಕಾಲ ತಲೆಮರೆಸಿಕೊಂಡ.

ಅದೇ ಸಮಯದಲ್ಲಿ ಬಾಲಕನಿಗೆ ಭುವನ ಎಂಬ ನಾಮವನ್ನು ಇತ್ತು ಹೆತ್ತವರು ಕೃತಾರ್ಥರಾಗಿದ್ದರು. ಮೊದಲ ಹುಟ್ಟಿದಬ್ಬದಂದೇ ದೇವರು ನೆರೆದಿದ್ದ ಹಲವು ಸಂಬಂಧಿಗಳಲ್ಲಿ ಸೇರಿಕೊಂಡು ತನ್ನ ವಕ್ರ ದೃಷ್ಟಿ ಬೀರಿ ಕಣ್ಣೆಸರಾಗುವಂತೆ ಮಾಡಿ, ಭುವನ ಅತಿಸಾರ ವಂತಿ ಬೇಧಿಯಿಂದ ನರಳುವಂತೆ ಮಾಡಿದ, ವೈದ್ಯರು ಆಹಾರದಲ್ಲಿ ತೊಂದರೆಯೆಂದರು, ಹಿರಿಯರು ದೃಷ್ಟಿಯಾಗಿದೆ ಎಂದರು ಆದರೆ ಭುವನನಿಗೆ ಮಾತ್ರ ಗೊತ್ತಿತ್ತು ಆ ದೃಷ್ಟಿ ಬೇರಾರದ್ದೂ ಅಲ್ಲ ಈ ಅಸುರನದ್ದೇ ಎಂದು. ಧೈರ್ಯ ಇದ್ದರೆ ಎದುರಿಗೆ ಬಂದು ಧಾಳಿ ಮಾಡೋ ಜನಗಳ ನಡುವಿನಲ್ಲಿ ನಿಂತು ಏಕೆ ಎದುರಿಸುತ್ತಿದ್ದೀಯೆ ಎಂದು ಸವಾಲ್ ಕೂಡ ತನ್ನ ಕಟ್ಟಿದ ಮುಷ್ಟಿಯಲ್ಲಿ ಮಾಡಿದರೂ ಕೇಳಿಸಿಕೊಳ್ಳಲು ದೇವರೆಲ್ಲಿದ್ದ ಸುತ್ತ ಮುತ್ತ ಎಲ್ಲೂ  ಕಾಣದ ಹಾಗೆ ಈ ಬಾರಿ ತನ್ನದೇ ಗೆಲುವೆಂದು ಅಷ್ಟದೇವತೆಗಳಿಗೆ ಪಾರ್ಟಿ ಕೊಡುತ್ತಿದ್ದ. ನಂತರ ಗೊತ್ತಾಗಿ ಥೂ ಪಾರ್ಟಿಯೆಲ್ಲಾ ವೇಸ್ಟ್ ಆಯಿತಲ್ಲಾ ಎಂದು ಮಮ್ಮಲನೆ ಮರುಗಿದನಲ್ಲದೆ ತನ್ನ ಮತ್ತೊಂದು ಸೋಲಿನ ಸೇಡನ್ನೂ ತೀರಿಸಿಕೊಳ್ಳುವುದಾಗಿ ಮತ್ತೊಂದು ಯೋಜನೆ ನಿರ್ಮಿಸುವುದೆಂದು ತೀರ್ಮಾನಿಸಿದ. ಏನು ಮಾಡಿದರೆ ಈ ಭುವನನನ್ನು ಮುಗಿಸಬಹುದು, ಒಂದು ದಾರಿ ಇರಲೇ ಬೇಕಲ್ಲಾ ಎಂದು ತನ್ನ ತಲೆಗೆ ಪೂರ್ತಿ ಕೆಲಸ ಕೊಟ್ಟು ಹಲವು ದಿನಗಳ ನಂತರ ಯಾವಾಗಲೂ ಭುವನನ ಜೊತೆಗಿರುತ್ತಿದ್ದ ತಾಯಿಯನ್ನೇ ಯಾಕೆ ಬಳಸಬಾರದೆಂದು ಹೊಂಚು ಹಾಕಿದ. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೂ ಗೆಲುವು ಮುಖ್ಯವಾಗಿತ್ತು.
ಭುವನನ ತಾಯಿ ಅಪಾರ ದೈವಭಕ್ತೆ. ಪ್ರತಿನಿತ್ಯ ದೇವರಿಗೆ ಪೂಜೆ ಸಲ್ಲಿಸಿಯೇ ತಾನೂ ಮತ್ತು ಭುವನನಿಗೂ ಹೊಟ್ಟೆಗೆ ಏನನ್ನಾದರೂ ಹಾಕುತ್ತಿದ್ದುದು. ಭುವನನಿಗೆ ಇದು ಸುತರಾಂ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಬೆಳಗ್ಗೆ ಎದ್ದವನೇ ಚಂಡಿ ಹಿಡಿದು, ಉಣಿಸುವವರೆಗೂ ಬಿಡುತ್ತಿರಲಿಲ್ಲ. ತಾಯಿ ಮಾತ್ರ ಹಸಿದುಕೊಂಡೇ ದೇವಸ್ಥಾನಕ್ಕೆ ಹೋಗಿ ನಂತರ ಏನನ್ನಾದರೂ ಸೇವಿಸುತ್ತಿದ್ದಳು. ದೇವರ ಬಳಿ ಆಕೆ ಕೇಳಿಕೊಳ್ಳುತ್ತಿದ್ದುದೂ ಸಹ ಒಂದೇ ವರ. ತನ್ನ ಮಗ ಭುವನನಿಗೆ ಆಯುರಾರೋಗ್ಯ ಕರುಣಿಸು ತನಗೆ ಏನೂ ಬೇಡ ಎಂದು. ಮುಂಚೆ ದಾನವರು ಮೃತ್ಯುಂಜಯ ವರ ಕೇಳಿಕೊಂಡಾಗ ಕೊಡಲಾಗದೆಂದು ಹೇಳಿ ಯರಿಂದಲೂ ಸಾವು ಬರದ ಹಗೆಯೋ, ಹೆಣ್ಣಿನಿಂದಲೋ, ಮೂಲೋಕಜೀವಿಗಳಿಂದಲ್ಲದೆ ತನ್ನಿಚ್ಚೆಯಿಂದ ಮಾತ್ರ ಮರಣಬರಲೆಂದೋ, ಯಾರೂ ಸಾಯಿಸದಂತೆಯೋ ಇನ್ನೊಂದು ಮತ್ತೊಂದು ವರವನ್ನು ಬದಲಿಗೆ ಕೇಳುವಂತೆ ಮಾಡಿ ಕುತಂತ್ರದಿಂದ ವರವನ್ನಿತ್ತು ನಂತರ ಅವರ ವರವೇ ಅವರಿಗೆ ಮುಳುವಾಗುವಂತೆ ಮಾಡಿ ಸಂಹರಿಸಿ ಒಳ್ಳೆಯ ಅನುಭವವಿದ್ದ ದೇವರು ಈಗಲೂ ಸಹ ತಾಯಿಯ ಪ್ರಾರ್ಥನೆಯಂತೆ ತಥಾಸ್ತು ಎಂದು ವರವನಿತ್ತು ಕರುಣಿಸುವುದಾಗಿ ಬಲಬದಿಯ ಹೂವನ್ನು ಬೀಳಿಸಿಯೋ, ಇನ್ನೊಂದೋ ಮತ್ತೊಂದೋ ಸಿಗ್ನಲ್ ನೀಡಿ ವರನೀಡಿದನು. ಅದನ್ನು ನಂಬಿದ ತಾಯಿ ಎಲ್ಲಾ ಮಾಮೂಲಿನ ಅಸುರರಂತೆ ಯಶಸ್ಸಿನ ಆಚರಣೆಗೆ ತೊಡಗಿದಳು. ಮಗನಿಗೆ ಆಯುರಾರೋಗ್ಯ ಕರುಣಿಸು ಎಂದು ಕೇಳಿದ್ದಕ್ಕೆ ಆಯುರಾರೋಗ್ಯ ಕರುಣಿಸುವೆನು ಆದರೆ ಎಂತಹ ಆಯುರಾರೋಗ್ಯ ಎಂದು ಆಕೆ ಕೇಳಿರಲಿಲ್ಲವಲ್ಲ, ಅದನ್ನು ಆತ ಉಪಯೋಗಿಸಲು ಮುಂದಾದ. ತಾಯಿಯಲ್ಲಿಯೇ ಸೇರಿ ಈ ವರವನ್ನು ಕರುಣಿಸುವುದಾಗಿ ನಿರ್ಧರಿಸಿ ತಾಯಿಯನ್ನು ಪ್ರವೇಶಿಸಿ ಭುವನನಿಗೆ ಈಗ ದೊಡ್ಡ ಯುದ್ಧದ ಮುಂಸೂಚನೆಯನ್ನು ನೀಡಿದ. ಭುವನ ಈಗ ನಿಜವಾಗಲೂ ಗೊಂದಲದಲ್ಲಿ ತೊಡಗಿದ. ತನ್ನ ತಾಯಿಗಾಗಿ ತಾನು ಪ್ರಾಣಬಿಡಲೂ ಸಿದ್ಧನಿದ್ದ. ಆದರೆ ಆ ತಾಯಿಯಲ್ಲಿ ಈಗ ದೇವರು ಸೇರಿ ದೇವರ ವಿರುದ್ಧ ಯುದ್ಧ ಸಾರಿದರೆ ತಾಯಿಗೆ ಏನಾದರೂ ಕೇಡುಂಟಾದರೆ ಏನು ಮಾಡುವುದೆಂದು ಚಿಂತೆಗೊಳಗಾದ. ದೇವರ ಈ ಬುದ್ಧಿವಂತಿಕೆಯ ಹೆಜ್ಜೆಯನ್ನು ವೈರಿಯಾಗಿದ್ದುಕೊಂಡೂ ಶ್ಲಾಘಿಸಿದನಾದರೂ ಮುಂದಿನ ಯುದ್ಧಕ್ಕೆ ಮಾನಸಿಕವಾಗಿ ಸನ್ನದ್ಧನಾದ.

ಭುವನನಿಗೆ ಆರೋಗ್ಯ ಕೊಂಚ ಅಸ್ಥಿರವಾದರೂ ವೈದ್ಯರ ಬಳಿ ಹೋಗದೆ ಹಲವು ದೇವಸ್ಥಾನಕ್ಕೋ, ದೇವರ ಸೇವಕರಾದ ಮಂತ್ರವಾದಿಗಳ ಬಳಿಯೋ ಹೋಗಿ ಯಂತ್ರ ಕಟ್ಟಿಸಿಯೋ, ಮಂತ್ರ ಹಾಕಿಸಿಯೋ, ಪ್ರಸಾದ, ಬೂದಿ ಬಾಯಿಗೆ ಹಾಕಿಯೋ, ಕುಂಕುಮ, ಗಂಧ ಲೇಪಿಸಿಯೋ ಆರೋಗ್ಯ ಸರಿಪಡಿಸಲು ಪ್ರಯತ್ನಿಸುತ್ತಿದ್ದ ದೇವರು ಸೇರಿಕೊಂಡಿದ್ದ ತಾಯಿಯನ್ನು ವಿರೋಧಿಸುತ್ತಾ, ಪ್ರಸಾದ ಉಗಿದು, ತಿಲಕ ಅಳಿಸಿ ಪ್ರತಿಭಟಿಸಿ ಚಂಡಿ ಹಿಡಿಯುತ್ತಿದ್ದ ಭುವನನಿಗೆ ತಾಯಿ ತಾಳಲಾರದೆ ತಾಳ್ಮೆ ಕಳೆದುಕೊಂಡು ಹೊಡೆಯಲು ಸಹ ಮುಂದಾದಳು. ಹಿಂದಿರುಗಿಸಿ ತಾಯಿಗೆ ಏನೂ ಮಾಡುವಹಾಗಿಲ್ಲ. ಆದರೆ ದೇವರ ಕುತಂತ್ರವನ್ನು ಗೆಲ್ಲಲು ಬಿಡುವಹಾಗೂ ಇಲ್ಲ ಆದ್ದರಿಂದ ತನ್ನ ಚಂಡಿತನ, ಪ್ರತಿಭಟನೆ ಏನು ಮಾಡಿದರೂ ನಿಲ್ಲಿಸದೆ, ಬೇರೆ ದಾರಿ ಕಾಣುವವರೆಗೂ ಮುಂದುವರೆಸುವುದಾಗಿ ಭುವನ ತೀರ್ಮಾನಿಸಿದ. ಈಗ ತಾಯಿ ಮಗನ ನಡುವೆಯೇ ಯುದ್ಧ ಘೋಷಣೆಯಾಯಿತು. ಆಹಾರ ನೀರು ಸರಿಯಾಗಿ ಸೇವಿಸದೇ ಚಂಡಿ ಹಿಡಿಯುತ್ತಿದ್ದ ಮಗನನ್ನು ಮೊದಮೊದಲು ಹಸಿವಾದ್ರೆ ತಿಂತೀಯಾ, ಇರು ಹಸಿದುಕೊಂಡು ಎಂದು ತಾಯಿ ಬಿಟ್ಟುಬಿಡುತ್ತಿದ್ದಾಗ ತನಗೆ ಗೊತ್ತಿದ್ದ ಒಂದೇ ಪ್ರತಿಭಟನಾ ಮಾರ್ಗ ಅಳುವುದನ್ನು ಜೋರುಮಾಡುತ್ತಿದ್ದ ಭುವನ. ತಾಯಿಯೇ ಈಗ ವಿರೋಧ ಪಕ್ಷವಾದಾಗ ತಾನು ಒಂಟಿಯಾದಂತೆಯೇ ಇನ್ನು ತಾನು ಯುದ್ಧ ನಡೆಸುವುದರಲ್ಲಿ ಏನೂ ಪ್ರಯೋಜನವಿಲ್ಲ ಎಂದು ಕೈಚೆಲ್ಲುವುಷ್ಟರಲ್ಲಿ ತಂದೆ ಮಗನ ಕೈ ಹಿಡಿದು ತಾಯಿಯನ್ನು ಜರಿದು ಲಾಲನೆಗೆ ಮುಂದಾಗಿದ್ದನ್ನು ಕಂಡು ನೂರು ಆನೆ ಬಲ ಪಡೆದು ಮತ್ತೆ ನಕ್ಕ. ತನಗೆ ಬದುಕುವುದಕ್ಕೆ ಇನ್ನೂ ಕಾರಣಗಳಿವೆ. ತಾನು ಇನ್ನೂ ಸೆಣೆಸಬೇಕು. ಆಗಿದ್ದಾಗಲಿ ಈ ಸೋಲನ್ನ ಇನ್ನು ಮುಂದೆ ಒಪ್ಪುವುದಿಲ್ಲವೆಂದು ಧೃಢ ಸಂಕಲ್ಪ ಮಾಡಿದನು.

ತಾಯಿಯೊಳಗಿದ್ದ ದೆವರು ತಾಯಿಯನ್ನು ಭುವನನ್ನು ನಿರ್ಲಕ್ಷಿಸುವಂತೆ ಮಾಡಲು ತಾಯಿಯಲ್ಲಿ ಆಲಸ್ಯ, ಬೇಜವಾಬ್ದಾರಿತನ, ಸೋಂಬೇರಿತನ ಮೈಗೂಡಿಸಿದನು. ತಾಯಿ ಸದಾ ಕಾಲ ಮಲಗಿಯೋ, ಟೀವಿ ನೋಡುತ್ತಲೋ ಭುವನನ ಕಡೆಗೆ ಹೆಚ್ಚು ಗಮನ ಕೊಡದೆ ಭುವನನ ಸಿಂಬಳ ತುಂಬಿದ ಮೂಗು ಹಾಗೇ ಬಿಟ್ಟು, ಸ್ನಾನಾದಿಗಳನ್ನು ಎರಡು ಮೂರು ದಿನಗಳಿಗೊಮ್ಮೆ ಮಾಡುತ್ತಲೋ, ಆಹಾರಾದಿಗಳನ್ನು ರುಚಿಕರವಾಗಿ ಮಾಡದೆಯೋ ಎಲ್ಲ ಭುವನನ ತಂದೆಯೇ ನೋಡಿಕೊಳ್ಳಲೆಂದು ಬಿಟ್ಟುಬಿಡುತ್ತಿದ್ದರು. ಭುವನನ ತಂದೆಯು ಮನೆಯಲ್ಲಿದ್ದಾಗ ಯವಾಗಲೂ ಭುವನನ್ನು ಉಪಚರಿಸುವಲ್ಲಿ ಆಸ್ಥೆವಹಿಸುತ್ತಿದ್ದರು. ಆದರೆ ದಿನದ ಮುಕ್ಕಾಲು ಪಾಲು ಕೆಲಸದಲ್ಲಿ ಹೊರಗಿರುತ್ತಿದ್ದರಿಂದ ಸರಿಯಾಗಿ ಅಂತೂ ಶುಭ್ರವಾಗಿರಲು, ಹೊಟ್ಟೆಗೆ ಸರಿಯಾಗಿ ಬೀಳಲು ತೊಂದರೆಯೇ ಆಗಿತ್ತು ಭುವನನಿಗೆ. ಇದರಿಂದಾಗಿ ಜ್ವರ, ನೆಗಡಿ, ಹೊಟ್ಟೆ ಉಬ್ಬರಿಸುವುದು ಇನ್ನೊಂದು ಮತ್ತೊಂದು ಖಾಯಿಲೆಗೆ ತುತ್ತಾಗಿಯೇ ಇರುತ್ತಿದ್ದ. ಒಟ್ಟಿನಲ್ಲಿ ಭುವನನಿಗೆ ಏನೇ ತೊಂದರೆ ಬಂದರೂ ದೇವರನ್ನೊಳಗೊಂಡಿದ್ದ ತಾಯಿ ದೇವರ ಶಕ್ತಿಯನ್ನೂ ಮೀರಿ ಮತ್ತೆ ದೇವಸ್ಥಾನಗಳ ಮೊರೆ ಹೋಗುತ್ತಿದ್ದಳು. ಸದಾ ಕಾಲ ವೈದ್ಯರ ಸಲಹೆಯ ಮೇರೆಗೆ ಔಷಧಿಯನ್ನು ಸರಿಯಾದ ಸಮಯಕ್ಕೆ ನೀಡಬೇಕೆಂದರೂ ಇಂದು ಹುಣ್ಣಿಮೆ, ಇಂದು ಸಂಕಷ್ಟಿ ಎಂದು, ಇಂದು ಅಮಾವಸ್ಯೆಯೆಂದೂ ಏನೋ ಕಾರಣ ಒಡ್ಡಿ ಅಂದೂ ಸಹ ಔಷಧಿ ಮಗನಿಗೆ ಕೊಡಬಾರದೆಂದು, ಔಷಧಿ ಸರಿಯಾಗಿ ಭುವನನಿಗೆ ತಲುಪಿಸದೆ ಮತ್ತೆ ಖಾಯಿಲೆ ಉಲ್ಬಣಿಸುವುದರಲ್ಲಿ ಕಾರಣರಾಗಿ, ಅದರಿಂದಾಗಿ ಜ್ವರ ನೆತ್ತಿಗೆ ಏರಿ ಭುವನ ಜ್ಞಾನ ಕಳೆದುಕೊಂಡು, ಹೇಗೆ ಹೇಗೋ ಆಡುವಹಾಗೆ ಆದರೂ, ಆ ಸ್ಥಿತಿಯಲ್ಲೂ ಇಂದು ಅಮಾವಸ್ಯೆ, ಇಂದು ಆಸ್ಪತ್ರೆಗೆ ಹೋಗಬಾರದೆಂದು ತಡೆಯುತ್ತಿದ್ದ ತಾಯಿಯನ್ನು ಹೊಡೆದು, ಬಯ್ದು ಗಂಡ ಆಸ್ಪತ್ರೆ ಸೇರಿಸಿ ಗುಣಪಡಿಸಿ ಮರುಕಳಿಸಿದರೆ, ಮತ್ತದೇ ವರಸೆ. ಈ ರೀತಿ ಪದೇ ಪದೇ ಭುವನನಿಗೆ ದೇಹಸ್ವಾಸ್ಥ್ಯ ಕೆಡಲು ಕಾರಣವೇನೆಂದು ವೈದ್ಯರನ್ನೇ ಕೇಳಿದರೆ ಸಮಯಕ್ಕೆ ಸರಿಯಾಗಿ ಔಷಧಿ ನೀಡದಿರುವುದೇ ಕಾರಣ ಎಂದು ಗುಟ್ಟನ್ನು ರಟ್ಟು ಮಾಡಲು ಗಂಡ ಹೆಂಡಿರಲ್ಲಿ ಮನೆಯಲ್ಲಿ ಜಗಳ ಶುರುವಾಗುತ್ತದೆ. ಹೆಂಡತಿಯ ಈ ಮೂರ್ಖತನಕ್ಕೆ ಏನು ಮಾಡುವುದೆಂದು, ಅವಳ ನಂಬಿಕೆಯನ್ನು ಅಲ್ಲಗಳೆಯಲೂ ಆಗದೆ, ಅವಳನ್ನು ತಿದ್ದಲೂ ಆಗದೆ, ದಿನಂಪ್ರತಿ ಆ ದೇವರು, ಈ ದೇವಸ್ಥಾನ, ಊ ಸ್ವಾಮೀಜಿಗಳು ಎಂದು ತಿರುಗುವ ಹೆಂಡತಿ ಮಗನಿಗೆ ಸಮಯಕ್ಕೆ ಸರಿಯಾಗಿ ಔಷಧಿಯನ್ನೂ ಕೊಡಲು ಮರೆಯುವಳಲ್ಲಾ ಎಂದು ಆ ಹೊಣೆಯನ್ನು ತಾನೇ ನಿರ್ವಹಿಸುವುದಾಗಿ ತೀರ್ಮಾನಿಸಿದ. ಕೆಲವೊಮ್ಮೆ ಒಂದು ಸಾರಿಗೆ ಎರಡೆರಡು ಬಾರಿ ತಾಯಿಯಿಂದಲೂ, ತಂದೆಯಿಂದಲೂ ಔಷಧಿ ಪಡೆದು, ಕೆಲವು ಬಾರಿ ಔಷಧಿಯನ್ನೇ ಪಡೆಯದೆ ಹೀಗೇ ಮತ್ತೆ ಮತ್ತೆ ಒಂದಲ್ಲಾ ಒಂದು ಖಾಯಿಲೆಗೆ ತುತ್ತಾಗಿ, ಚೇತರಿಸಿಕೊಂಡು ಮತ್ತೆ ಮೃತ್ಯುಂಜಯನಂತೆಯೇ ಹೊರಬರಲು ತಾಯಿಯೊಳಗಿದ್ದ ದೇವರು ಯಾಕೋ ಈ ದಾರಿಯೂ ಸರಿಯಾಗಿ ಪರಿಣಾಮ ಬೀರುತ್ತಿಲ್ಲವೆಂದು ಹೊರಗೆ ಓಡಿದನು.

ತಾಯಿಗೆ ಜ್ಞಾನೋದಯವಾಗಿ ಮಗನ ಲಾಲನೆ ಪಾಲನೆಯಲ್ಲಿ ದೇವರ ಅಗತ್ಯಕ್ಕಿಂತ ವೈದ್ಯರ, ಉಪಚಾರದ, ತಾಯಿಯ ಪ್ರೀತಿಯ, ಶುಚಿ ರುಚಿ ಆಹಾರದ, ಅಗತ್ಯವೇ ಹೆಚ್ಚಿದೆಯೆಂದು ಮನಗಂಡಳು. ಕಂಡ ಕಂಡ ಪೂಜಾರಿಗಳ ಮಾತಿಗಿಂತ ಗಂಡನ ಮಾತಿನಂತೆ ನಡೆಯುವುದು ಲೇಸೆಂದು ಪರಿಗಣಿಸಿದಳು. ಭುವನನ ತಾಯಿ ಮತ್ತೆ ತನಗೆ ದೊರಕಿದ್ದಕ್ಕೆ ಖುಷಿಪಟ್ಟನು. ಈಗ ನಾಲ್ಕು ವರುಷದಲ್ಲಿ ಹಲವಾರು ದಾಳಿಗೆ ತುತ್ತಾಗಿ, ಇನ್ನೂ ನಗುತ್ತಿರುವ ಉತ್ಸಾಹದ ಚಿಲುಮೆಯಂತ ಭಾರತದ ಸಂಕೇತದಂತೆ ಭುವನನು ನಕ್ಕನು. ನಾಲ್ಕು ವರ್ಷಕ್ಕೇ ತೊಡೆ ತಟ್ಟಿ ನೂರಲ್ಲಾ ಇನ್ನೂ ಸಾವಿರ ಸಲ ಬಂದು ಆಕ್ರಮಣ ಮಾಡು ನಿನ್ನೇ ಅಲ್ಲ ನಿಪ್ಪನ್ನೂ ಸೋಲಿಸ್ತೀನಿ ದೇವರ್ ನನ್ನ ಮಗನೇ ಬಾ ಅದೆಲ್ಲಿದ್ಯಾ ಎಂದು ಗುಡುಗು ಹಾಕಿದನು. ಪ್ರತಿ ಸಾರಿ ಸೆಡ್ಡು ಹೊಡೆದು ನಿಂತ ಭಾರತವನ್ನು ಕಂಡು ಇಲಿಮರಿಗಳಂತೆ ಪಾಕಿಸ್ತಾನದಲ್ಲೋ ಇನ್ನೆಲ್ಲೋ ಬಿಲದಲ್ಲಿ ಅವಿತು, ಮುಂದಿನ ಯೋಜನೆ ಹಾಕುವ ಆತಂಕವಾದಿಗಳಂತೆ ದೇವರೂ ಸಹ ಎಲ್ಲೋ ಅವಿತುಕುಳಿತು ಬಾಂಬ್ ದಾಳಿಗೋ, ಆತ್ಮಾಹುತಿ ದಾಳಿಗೋ, ಇನ್ನೊಂದೋ ಮತ್ತೊಂದೋ ಯೋಜನೆ ಯೋಜಿಸುತ್ತಾ ಇನ್ನೂ ಯುದ್ಧಕ್ಕೆ ಬಿಳಿ ಬಾವುಟ ತೋರಿಸದೆ ಇರುವನು. ಸಾವಿರ ಸೋಲಿನ ಸರದಾರನಾಗಿ, ಮುಖಭಂಗಾಲಂಕೃತ ದೇವರೂ, ಸೋಲಿಲ್ಲದ ಮೃತ್ಯುಂಜಯನಾಗಿ ವಿಜಯಕುಲತಿಲಕ ಧರಿಸಿದ ಭುವನನೂ ಇನ್ನೂ ಸೆಣಸುತ್ತಲೇ ಇರುವರು.
                                 
                                                         - ಹೇಮಂತ್

Saturday 10 March 2012

ಅವನು - ನಾನು!ಆಟದ ಮೈದಾನದಲ್ಲಿ ಆಗತಾನೆ ಬಾಯಿಗೆ ಬಬ್ಬಲ್ ಗಮ್ ಹಾಕಿಕೊಂಡು ಜಮಡಲು ಶುರುಮಾಡುವಷ್ಟರಲ್ಲಿ ಮುಂದಿನ ತರಗತಿಯ ಬೆಲ್ ಹೊಡೆಯಿತು. ಬಾಯಲ್ಲಿದ್ದ ಬಬ್ಬಲ್ ಗಮ್ ಉಗಿದು ದಡಬಡನೆ ಓಡುತ್ತಿದ್ದರೆ ಅವನು ಮಾತ್ರ ಆರಾಮವಾಗಿ ಕಚಕಚನೆ ಬಬ್ಬಲ್ ಗಮ್ ಜಗಿಯುತ್ತಾ ಆಟ ಮುಂದುವರೆಸಿದ್ದ. ಲೋ ಬಾರೋ ಮಾತಮಾಟಿಕ್ಸ್ ಕ್ಲಾಸ್ ಬೇರೆ, ಮಿಸ್ಸು ಬೆಂಚ್ ಮೇಲೆ ನಿಲ್ಲಿಸ್ತಾರೋ ಎಂದು ಹೇಳಿದರೂ ಸುಮ್ಮನೆ ನಕ್ಕು ಆಟವಾಡುತ್ತಿದ್ದ. ಬಬ್ಬಲ್ ಗಮ್ ಸವಿ ತೀರಿದ ನಂತರ ಉಗಿದು, ಚೆಂಡು ಕೈಲಿ ಹಿಡಿದು ತರಗತಿಯ ಅರ್ಧದಲ್ಲಿ “ಮೇ ಐ ಕಮಿನ್ ಮಿಸ್” ಎಂದು ಬಾಗಿಲ ಬಳಿ ನಿಂತು ತಲೆಕೆರೆದುಕೊಳ್ಳುತ್ತಿದ್ದ ಅವನನ್ನು ಎಲ್ಲರೂ ಭಲೇ ಇವನ ಧೈರ್ಯಕ್ಕೆ ಎಂದು ಮನಸಿನಲ್ಲೇ ಶ್ಲಾಘಿಸುತ್ತಿರಲು, ಪ್ರಶಸ್ತಿಯೆಂಬಂತೆ ನನ್ನ ಪಕ್ಕ, ಬೆಂಚ್ ಮೇಲೆ ನಿಲ್ಲಿಸಿ ಕೈಮೇಲೆ ಎರಡು ಛಟೀರನೆ ಏಟುಗಳು ಕೊಟ್ಟು ಪಾಠ ಮುಂದುವರೆಸಿದರು. ಲೋ ಇದು ನಿನಗೆ ಬೇಕಿತ್ತಾ… ಆಗಲೇ ಬಾರೋ ಅಂದ್ರೆ ಕೇಳ್ಲಿಲ್ಲ ಇವಾಗ ನೋಡು ಬೆಂಚ್ ಮೇಲೆ ನಿಂತ್ಕೊಂಡು ನೋಟ್ಸ್ ಬರ್ಕೋಬೇಕು ಎಂದು ವಿಷಾದದಿಂದ ಹೇಳಿದರೆ, “ಲೋ.. ಮೇಲೆ ನಿಂತ್ಕೊಂಡು ಹೆಂಗೆ ಕಾಣ್ಸುತ್ತೆ ಗೊತ್ತಾ, ಬೇಕಾದ್ರೆ ನೋಡು, ಹಿಂಗೆ ನಿಂತು ಯಾವಾಗಾದ್ರು ನೋಟ್ಸ್ ಬರ್ಕೊಂಡಿದ್ಯ.. ಸೂ……ಪರ್” ಎಂದು ಏನೋ ವಿಸ್ಮಯ ಕಂಡವನಂತೆ ಆಸೆ ಹುಟ್ಟಿಸಿದ. ಅವನ ಮಾತಿಗೆ ಮರುಳಾಗಿ, ಕೈಲಿ ನೋಟ್ಸ್ ಹಿಡಿದು ನಾನೂ ನಿಂತು ನೋಡಲು ಇಡೀ ಕ್ಲಾಸ್ ನನ್ನನ್ನೇ ನೋಡುತ್ತಲಿತ್ತು. ಗೊಳ್ಳನೆ ಎಲ್ಲರೂ ನಗಲು ಶುರುಮಾಡಿದರು. ಮಿಸ್ಸು “ಯು ಇಡಿಯಟ್, ಆರ್ ಯು ಪ್ಲೇಯಿಂಗ್ ಇನ್ ಕ್ಲಾಸ್” ಅದು ಇದು ಡಿಶುಮ್ ಡಿಶುಮ್ ಎಂದು ಏನೇನೋ ಬಯ್ದು ಮತ್ತೆ ಕೂರದಂತೆ ಮಾಡಿದರು. ನನ್ನ ಮೂರ್ಖತನ ನೆನೆಸಿಕೊಂಡರೆ ನನಗೆ ಈಗಲೂ ನಗು ತಡೆಯೋಕೆ ಆಗೊಲ್ಲ. ಅಂದೇ ನಿರ್ಧರಿಸಿದ್ದೆ ನಾನು, ನನ್ನ ತನವನ್ನ ಬಿಟ್ಟು ಇವನ ದಾರಿಯಲ್ಲಿ ಹೋಗಬಾರದು ಅಂತ. ಆದ್ರೆ ಇವತ್ತು ಅವನನ್ನ ನೋಡೋದಕ್ಕೇ ಕನಕಪುರದ ದಾರಿ ಹಿಡಿದಿದ್ದೀನಿ. ನಾನು ನನ್ನಷ್ಟಕ್ಕೆ ನಾನೇ ನಕ್ಕಿದ್ದು ಪಕ್ಕದಲ್ಲಿದ್ದ ಹೆಂಗಸು ಗಮನಿಸಿ ಅವರ ಪಕ್ಕದಲ್ಲಿದ್ದ ಹೆಂಗಸಿಗೆ ಏನೋ ಹೇಳುತ್ತಿರುವುದನ್ನು ನಾನು ಗಮನಿಸಿದೆ. ತಲೆ ಕೆಟ್ಟಿದೆ ಅಂದುಕೊಂಡ್ರೇನೋ. ನನ್ನ ನೆನಪುಗಳಿಂದ ಹೊರಗೆ ಬಂದು ಇಡೀ ಬಸ್ಸನ್ನು ಒಮ್ಮೆ ನೋಡಿದೆ, ಅರ್ಧ ನಿದ್ರಿಸುತ್ತಲಿತ್ತು, ಅರ್ಧ ಇನ್ನೊಬ್ಬರ ತಲೆ ಅಥವಾ ಇನ್ನೇನನ್ನೋ ತಿನ್ನುತ್ತಲಿತ್ತು. ಎಲ್ಲಾ ಹಳ್ಳಿಗಳಿಂದ ನಗರದ ಕಡೆಗೆ ಬರುತ್ತಿದ್ದರೆ, ಈ ಹೇಮಂತ ಹಳ್ಳಿಗೆ ಹೋಗಿ ಸೇರ್ಕೊಂಡಿದ್ದಾನಲ್ಲಾ ಏನಿರಬಹುದು ಕಾರಣ.

ಮೊದಲಿನಿಂದಲೂ ಇದೇ ರೀತಿಯ ಕಿತಾಪತಿ ಕೆಲ್ಸಗಳು ಮಾಡ್ಕೊಂಡ್ ಬಂದಿರೋ ಇತಿಹಾಸ ಇಟ್ಟುಕೊಂಡಿರೋದ್ರಿಂದ ಕನಕಪುರದಲ್ಲಿ ನಿವಾಸ ಹೂಡಿದ್ದೀನಿ ಬಾ ಸಿಗೋಣ ವಿಷಯವಿದೆ ಎಂದು ಆಮಂತ್ರಿಸಿದಾಗ ಅಂಥಾ ಅಚ್ಚರಿಯೇನಾಗಲಿಲ್ಲ. ಅವನಿಗೂ ನನಗೂ ಇದ್ದ ಒಂದೇ ಒಂದು ಸಾಮ್ಯವೆಂದರೆ ಹೆಸರು. ನಾನೂ ಹೇಮಂತ ಅವನೂ ಹೇಮಂತ. ಗೊಂದಲ ಆಗದಿರಲೆಂದು ಎಲ್ಲರೂ ನನ್ನನ್ನು ಹೇಮಾ ಎಂದು ಅವನನ್ನು ಹೇಮೀ ಎಂದು ಕರೆಯುತ್ತಿದ್ದರು.  ಅವನು ಉತ್ತರ ಧ್ರುವ ನಾನು ದಕ್ಷಿಣ ಧ್ರುವ ಆದರೂ ಹೇಮಾಹೇಮಿಗಳು ಯಾವಾಗಲೂ ಒಟ್ಟಿಗೆ ಇರುತ್ತಿದ್ದೆವು. ನಾನು ಹುಂ ಎಂದರೆ ಅವನು ಉಹುಂ ಎನ್ನುತ್ತಿದ್ದ, ನಾನು ಏರಿಗೆ ಏಳೆದರೆ ಅವನು ನೀರಿಗೆ ಎಳೆಯುತ್ತಿದ್ದ. ನಾನು ಎಷ್ಟು ಓದುತ್ತಿದ್ದೆನೋ, ಅವನು ಅಷ್ಟೇ ಆಟವಾಡುತ್ತಿದ್ದ. ನನ್ನ ಮನೆಯಲ್ಲಿ ಇದ್ದದ್ದು ಒಂದೇ ದೂರು ಅವನ ಜೊತೆ ಸೇರಬೇಡ ಅವನು ಸರಿ ಇಲ್ಲ, ಅವನ ಜೊತೆ ಸೇರಿದ್ರೆ ನಾನೂ ಹಾಳಾಗೋಗ್ತೀನಿ ಎಂಬುದು. ಅವನ ಮನೆಗೆ ಹೋದಾಗಲೆಲ್ಲ ನನ್ನ ಮುಂದೆಯೇ ಅವನಿಗೆ ಹೇಳುತ್ತಿದ್ದರು, ನೋಡಿ ಕಲಿ ಅವನ್ನ, ಜೊತೆಲಿದ್ರು ಬುದ್ದಿ ಬರಲ್ವಲ್ಲೋ ನಿನಗೆ, ನೀನಾದ್ರೂ ಒಂಚೂರು ಬುದ್ದಿ ಹೇಳಪ್ಪ, ಹೇಳ್ಕೊಡು ಜೊತೇಲಿ ಕೂರಿಸ್ಕೊಂಡು ಸ್ವಲ್ಪ, ಒಂಚೂರು ಓದು ತಲೆಗೆ ಅಂಟಲ್ಲಾ ಇವನಿಗೆ ಅಂತ. ಎಲ್ಲರ ಹತ್ತಿರ ಬಯ್ಗುಳ, ಒದೆ ತಿಂದೂ ತಿಂದೂ ಅವನಿಗೆ ಮೈ ಮನಸ್ಸು ಜೆಡ್ಡುಗಟ್ಟಿ ಹೋಗಿತ್ತೇನೋ ಅನ್ಸುತ್ತೆ. ಯಾವುದಕ್ಕೂ ಹೆದರ್ತಿರ್ಲಿಲ್ಲ ಅವನು. ಅಯ್ಯೋ ೨೫ಕ್ಕೆ ೨೦ ತೊಗೊಂಡ್ರೆ ಮನೇಲಿ ಯಾಕಿಷ್ಟು ಕಡಿಮೆ ಅಂಕ ಅಂತ ಎಲ್ಲಿ ಬಯ್ತಾರೋ ಅನ್ನೋ ಭಯಕ್ಕೇ ಒದ್ತಿದ್ದೆ. ಅವನ ತರಹ ಭಂಡ ಧೈರ್ಯದ ದಾರಿ ತುಳಿಯೋಕೂ ಹೆದರಿಕೆ ಆಗ್ತಿತ್ತು. ಪ್ರತಿ ಬಾರಿ ಮಾರ್ಕ್ಸ್ ಕಾರ್ಡ್ ಕೈಗೆ ಬಂದಾಗ್ಲೂ ಚೆನ್ನಾಗೇ ಮಾರ್ಕ್ಸ್ ಬಂದಿರೋ ನಾನೇ ಹೆದರಿಕೊಂಡು ತೊಗೊಂಡೋಗ್ತಿದ್ದೆ, ಆದರೆ ಫೈಲ್ ಆಗಿರುವ ಅವನು ಧೈರ್ಯವಾಗಿ ಮನೆಗೆ ಹೋಗ್ತಿದ್ದ. ಹೇಮಿಯ ಅಮ್ಮ ರುಬ್ಬುವ ಕಲ್ಲಿನಲ್ಲಿ ಹಿಟ್ಟು ರುಬ್ಬುತ್ತಿದ್ದರೆ, ಅಪ್ಪ ಇವನ ಜುಟ್ಟು ಹಿಡಿದು ರುಬ್ಬುತ್ತಿದ್ದರು. ಒದೆ ತಿಂದು ನೋವಿಗೆ ಅಲ್ಲಿ ಅಳುತ್ತಿದ್ದರೂ, ಹೊರಗೆ ಬಂದು ನನ್ನ ಜೊತೆ ಆಟವಾಡುತ್ತಿದ್ದ. ಹೇಮಿ ಚೆನ್ನಾಗಿ ಓದ್ಲಿಲ್ಲ ಅಂದ್ರೆ ಮುಂದೆ ಒಳ್ಳೇ ಕೆಲಸ ಸಿಗಲ್ವಂತೆ ಕಣೋ, ನೀನ್ಯಾಕೋ ಓದಲ್ಲ ಅಂತ ಅವನನ್ನ ಮನೆಗೆ ಹಿಂದಿರುಗುವ ದಾರಿಯಲ್ಲಿ ಕೇಳಿದರೆ, ಬೇಡ ಬಿಡು, ನಾನ್ ಕೆಲಸಾನೇ ಮಾಡೋದಿಲ್ಲ ಅಷ್ಟೇ ಎಂದು ಸುಲಭವಾಗಿ ಮಾತುಮುರಿಯುತ್ತಿದ್ದ.. ಇವನು ಈ ರೀತಿ ಮಾತನಾಡಿದಾಗಲೆಲ್ಲಾ, ಇವನು ಕೆಟ್ಟ ದಾರಿಯನ್ನೇ ತುಳಿಯುತ್ತಿದ್ದಾನೆ. ನನ್ನ ಮನೆಯಲ್ಲಿ ದೊಡ್ಡವರೆಲ್ಲಾ ಹೇಳುತ್ತಿದ್ದುದು ಸರಿಯೇ ಎಂದು ಎಷ್ಟೇ ಹತ್ತಿರವಾಗಿದ್ದರೂ ಅವನ ವರ್ತನೆಗೆ ಹೆದರಿ ಕೊಂಚ ದೂರವೇ ಇರುತ್ತಿದ್ದೆ. ಅವನು ಓದಿದ್ದನ್ನ ನಾನು ಕಂಡಿದ್ದೇ ಇಲ್ಲ. ಮನೆಯಲ್ಲಿ ಏನು ಮಾಡಿದರೂ ಓದಿಸಲು ಸಾಧ್ಯವಾಗದ್ದರಿಂದ ನಾನು ಹೋಗುತ್ತಿದ್ದ ಟ್ಯುಶನ್ ಗೆ ಕಳುಹಿಸಿದರು ಅಲ್ಲೂ ಅವರಿವರಿಗೆ ತರಲೆ ಮಾಡಿಕೊಂಡೇ ಕಾಲ ಕಳೆಯುತ್ತಿದ್ದ ಹೊರತು ಪಾಠದ ಕಡೆ ಗಮನ ಕೊಡುತ್ತಿದ್ದುದು ಎಂದೂ ಕಾಣಲಿಲ್ಲ, ತುಂಬಾ ಬಲವಂತ ಮಾಡಿದರೆ ಟ್ಯುಶನ್ ಕಡೆ ತಲೆ ವಾರಗಟ್ಟಲೆ ಟ್ಯುಶನ್ ಕಡೆ ತಲೆಹಾಕುವುದನ್ನೇ ಬಿಟ್ಟುಬಿಡುತ್ತಿದ್ದ. ಸುಮ್ಮನೆ ಫೀಸ್ ತಪ್ಪಿಹೋಗುತ್ತಲ್ಲಾ ಎಂದು ಟ್ಯುಶನ್ ಆಂಟಿಯೂ ಸಹ ಒತ್ತಾಯ ಪಡಿಸಿ ಹೇಳುವುದನ್ನ ನಿಲ್ಲಿಸಿದರು. ಮನೆಪಾಠದದಿಂದಲೂ ಅವನ ವಿದ್ಯಾಭ್ಯಾಸದಲ್ಲಿ ಏನೂ ಬದಲಾವಣೆಯಾಗಿಲ್ಲವೆಂದು ಮಾರ್ಕ್ಸ್ ಕಾರ್ಡ್ ಹಿಡಿದು ಟ್ಯುಶನ್ ಆಂಟಿಯ ಮುಂದೆ ಹಿಡಿಯಲು, ನನ್ನನ್ನು ಉದಾಹರಿಸಿ, ಇದು ತನ್ನ ದೋಷವಲ್ಲವೆಂದು ಹೇಳಿ ನುಣುಚಿಕೊಂಡರು. ಹಲವು ಬಾರಿ ಶಾಲೆಯ ಬಾಗಿಲವರೆಗೂ ಬರುತ್ತಿದ್ದ, ನನ್ನ ಪಕ್ಕದ ಅವನ ಜಾಗ ಖಾಲಿಯೇ ಇರುತ್ತಿತ್ತು. ಸಂಜೆ ಮನೆಗೆ ಹೋಗುವಾಗ ನನ್ನ ಜೊತೆ ಸೇರಿಕೊಳ್ಳುತ್ತಿದ್ದ, ಲೋ ಹೇಮಿ ಎಲ್ಲೋ ಹೋಗಿದ್ದೆ, ಯಾಕ್ ಕ್ಲಾಸ್ ಗೆ ಬರಲಿಲ್ಲ ಎಂದು ಕೇಳಿದರೆ, ಸೋಶಿಯಲ್ ಹೋಮ್ವರ್ಕ್ ಮಾಡಿಲ್ಲ ಬಂದ್ರೆ ಅವನು ಹೊಡಿತಾನೆ ಸುಮ್ಮನೆ ಯಾಕ್ ಬೇಕು ಹೊರಗಡೆ ಹುಡುಗರು ಕ್ರಿಕೆಟ್ ಆಡ್ತಿದ್ರು ಅವರ ಜೊತೆ ಆಡ್ತಿದ್ದೆ ಎಂದು ಆರಾಮವಾಗಿ ಹೇಳ್ತಿದ್ದ. ಟೆಸ್ಟ್ ಗಳು ನನ್ನಿಂದ ಕಾಪಿ ಹೊಡೆದೋ, ಹಲವು ಅನುತ್ತೀರ್ಣನಾಗಿಯೋ, ಅಂತಿಮಪರೀಕ್ಷೆಯಲ್ಲಿ, ಪಾಲಕರನ್ನು ಕರೆಸಿ, ಬುದ್ದಿವಾದ ಹೇಳಿ ನಂತರ ಮುಂದಿನ ತರಗತಿಗೆ ತಳ್ಳಿ, ಅಂತೂ ಹೆಂಗೋ, ಸ್ಕೂಲ್ ಕೂಡ ಯಶಸ್ವಿಯಾಗಿ ಮುಗಿಸಿಯೇ ಬಿಟ್ಟ. ವರ್ಷವೆಲ್ಲಾ, ಅಪ್ಪ ಅಮ್ಮನ ಹೊಡೆತಕ್ಕೆ ಹೆದರಿಯೋ, ಉಪಾಧ್ಯಾಯರ ಶಿಕ್ಷೆಗಳ ಭಯಕ್ಕೋ, ಮಾರ್ಕ್ಸ್ ಕಡಿಮೆ ಬಂದರೆ ಮುಂದೆ ಒಳ್ಳೇ ಕೆಲಸ ಸಿಗುವುದಿಲ್ಲ ಎಂಬ ಭಯಕ್ಕೋ ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ನನಗೆ ಇಡೀ ವರ್ಷವನ್ನ ಅವಲೋಕಿಸಿದರೆ ಬಹುಪಾಲು ಓದುತ್ತಿದ್ದುದು, ಬರೆಯುತ್ತಿದ್ದುದೇ ನೆನಪಿಲ್ಲಿರುತ್ತಿತ್ತು. ಆದರೂ ನಾನೂ ಪಾಸಾಗಿದ್ದೆ, ಅವನೂ ಪಾಸಾಗಿದ್ದ. ಶಾಲೆ ಅಂತೂ ಮುಗಿಯಿತು.

ನನ್ನ ತಂದೆತಾಯಿ ಹೋದಲ್ಲೆಲ್ಲಾ ನನ್ನ ಮಗ ಪ್ರಥಮ ದರ್ಜೆ, ನನ್ನ ಮಗ ಪ್ರಥಮ ದರ್ಜೆ ಎಂದು ಬೀಗುತ್ತಾ ಹೇಳಿಕೊಂಡು ತಿರುಗುತ್ತಿದ್ದರೆ. ಹೇಮಿ ಅಪ್ಪ ಅಮ್ಮ, ಧರಿದ್ರ ಎಲ್ಲಾ ವಿಷ್ಯದಲ್ಲೂ ಚುರುಕಾಗಿದ್ದಾನೆ, ಓದೊಂದು ತಲೆಗೇ ಹತ್ತಲ್ಲ ಇವನಿಗೆ ಎಂದು ಹೇಳಿಕೊಂಡು ಅವನ ತಲೆಗೆ ಮೊಟಕುತ್ತಿದ್ದರು. ಅದಕ್ಕೂ ನಗುತ್ತಲಿದ್ದ. ಕಾಲ ಸಂದುತ್ತಾ ಬಂತು ನನಗೆ ಪಾಸ್ ಅಗಲು, ಪಾಠ ಕಲಿತೋ, ಉರುಹೊಡೆದೋ ಒಟ್ಟಿನಲ್ಲಿ ಓದುವುದೊಂದೇ ಮಾರ್ಗವಾಗಿತ್ತು. ಆದರೆ ಅವನಿಗೆ ಹಲವು ಮಾರ್ಗಗಳು ಹುಟ್ಟಿಕೊಂಡಿತ್ತು. ಪಾಠದ ಜೊತೆಗೆ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ನಮ್ಮ ಸುತ್ತಲಿನ ವಾತಾವರಣದಲ್ಲೂ ಬದಲಾವಣೆಗಳಾದವು. ನನ್ನ ತಂದೆತಾಯಿ ಈಗ ಪ್ರಥಮ ದರ್ಜೆಯಲ್ಲಿ ಪಾಸಾದರೆ ಮಾಮೂಲೆಂಬಂತೆ ಪ್ರತಿಕ್ರಿಯಿಸುತ್ತಿದ್ದರು, ಇಡೀ ಕ್ಲಾಸಿಗೋ, ರಾಜ್ಯಕ್ಕೋ ಪ್ರಥಮ ದರ್ಜೆಯಲ್ಲಿ ಪಾಸಾದರೆ ಮಾತ್ರ ವಿಶೇಷ ಎಂಬಂತೆ ಅಂಥ ಉದಾಹರಣೆಗಳನ್ನು ಕೊಡಲು ಶುರುಮಾಡಿದ್ದರು. ನಾನೂ ಅದೇ ಹಾದಿಯಲ್ಲಿ ಶ್ರಮಿಸುತ್ತಿದ್ದೆ. ಹೇಮಿ ಮನೆಯಲ್ಲೂ ಅವನ ಅಪ್ಪ ಅಮ್ಮ ಎಷ್ಟು ಅಂತ ಬಯ್ಗುಳಗಳನ್ನು, ಹೊಡೆತಗಳನ್ನು ಕೊಡಲು ಸಾಧ್ಯ, ಬುದ್ದಿವಾದಗಳನ್ನು ಹೇಳಲು ಸಾಧ್ಯ, ತನ್ನ ಮಗ ಅಷ್ಟೇ ಎಂದು ಪರಿಗಣಿಸಿಬಿಟ್ಟಿದ್ದರು. ಅವನು ಏನು ಬೇಕಾದರೂ ಮಾಡಿಕೊಂಡು ಹೋಗಲಿ ಎಂದು ಅವನನ್ನು ತನ್ನ ದಾರಿಯಲ್ಲಿ ಬಿಟ್ಟುಬಿಟ್ಟಿದ್ದರು, ಅವನ ಮನೆಗೆ ಹೋದಾಗಲೆಲ್ಲಾ ನೋಡಪ್ಪಾ ಏನೋ ಮಾಡ್ತಿದ್ದಾನೆ, ಏನ್ ಹೇಳಿದರೂ ಯಾರ ಮಾತೂ ಕೇಳೋ ಜಾತಿಯಲ್ಲಿ ಹುಟ್ಲಿಲ್ವಲ್ಲ, ಏನು ಮಾಡಿ ಸಾಯೋಣ ಇವನ್ನ ಕಟ್ಕೊಂಡು, ಅದೇನಾಗ್ತಾನೋ ಅನ್ನೋದೇ ಭಯ ಆಗೋಗಿದೆ ನಮ್ಗೂ. ಒಂದೊಳ್ಳೇ ಕೆಲಸದಲ್ಲಿ ಸೇರಿದ್ರೆ ಸಾಕು ಆಮೇಲೆ ಅವನ ಜೀವನ ಅವನ್ದು ಎಂಬ ಮೃಧು ಧೋರಣೆ ತಳೆದುಬಿಟ್ಟಿದ್ರು. ಹೇಮಿ ಎಷ್ಟು ಓದಿದ್ರು ಸಾಕಾಗಲ್ಲ ಕಣೋ ತುಂಬಾ ಸ್ಪರ್ಧೆ ಇದೆ, ಕೆಲಸ ಸಿಗೋದು ತುಂಬಾನೇ ಕಷ್ಟ ಕಣೋ, ಏನ್ ಮಾಡಬೇಕು ಅಂತ ಇದ್ದೀಯ ನೀನು ಹೀಗಿದ್ದು ಎಂದು ಕೇಳಿದರೆ, ಮಗಾ ಹೇಮಾ ಓದೋಕೆ ನೀನಿದ್ದೀಯಲ್ಲಾ, ಓದು ಒಳ್ಳೇ ಕೆಲಸಕ್ಕೆ ಸೇರ್ಕೋ, ನನಗೆ ಕೆಲ್ಸ ಮಾಡೋಕೇ ಮೂಡಿಲ್ಲ, ನನ್ನ ಪಾಡಿಗೆ ಎಲ್ಲಾದರೂ ಸುತ್ತಾಡಿಕೊಂಡು ಇರ್ತೀನಿ ಅಷ್ಟೇ, ಕೆಲಸ ಮಾಡೋದಷ್ಟೇ ಜೀವನನಾ, ನೋಡು, ಓದೀ ಓದೀ ಈಗಲೇ ಅರ್ಧ ಹಾಳಾಗೋಗಿದ್ಯ ಮುಂದೆ ಏನಾಗ್ತೀಯೋ ಅಂತ ನನಗೆ ಭಯ ಆಗ್ತಾ ಇದೆ. ಹುಶಾರು ಕಣೋ ಎಂದು ನನಗೆ ತಿರುಮಂತ್ರ ಹಾಕಿ ಬಾಯ್ಮುಚ್ಚಿಸಿ ಕಳುಹಿಸುತ್ತಿದ್ದ.

ನನಗೆ ನಾನು ಅವನಿಂದ ಹೆಚ್ಚು ಸಾಧಿಸುತ್ತಿದ್ದೀನಿ ಅಂತ ಒಂದು ದಿನಕ್ಕೂ ಅನ್ನಿಸಲಿಲ್ಲ. ಪ್ರತಿಕ್ಷಣ ನನಗೆ ಅವನನ್ನ ಕಂಡರೆ ಹೊಟ್ಟೆ ಉರಿಯುತ್ತಿತ್ತು. ನಾನು ಏನು ಮಾಡಿದರೂ ಅವನ ರೀತಿ ಬದುಕಲಾಗುತ್ತಿರಲಿಲ್ಲ. ಅವನಿಗೆ ಬೇಕೆಂದ ಕಡೆ ಹೋಗುತ್ತಿದ್ದ, ಬೇಕೆಂದದ್ದನ್ನ ನೋಡುತ್ತಿದ್ದ, ಬೇಕೆಂದದ್ದನ್ನ ಅನುಭವಿಸುವ ಮಾರ್ಗ ಹುಡುಕುತ್ತಿದ್ದ, ಹೇಗೋ ತನಗೆ ಬೇಕಾದ ಹಾಗೆ ಬದುಕುತ್ತಿದ್ದ, ನನಗೆ ನನ್ನದೇ ಆದ ಚೌಕಟ್ಟು ನಿರ್ಮಾಣವಾಗುತ್ತಾ ಹೋಗುತ್ತಿತ್ತು, ನಾನು ಇಂಥದ್ದೇ ಮಾಡಬೇಕು, ನಾನು ಏನಾದರೂ ಕೊಂಚ ನನ್ನ ಹಾದಿಯಿಂದ ಸರಿದರೆ, ಅದರಿಂದ ನನ್ನ ಘನತೆಗೆ ಧಕ್ಕೆಯುಂಟಾಗುತ್ತದೆ, ನಾನು ಹೀಗೆ ಮಾಡುವಹಾಗಿಲ್ಲ, ನಾನು ಹಾಗೆ ಮಾಡುವಹಾಗಿಲ್ಲ, ಅಲ್ಲಿ ಹೋಗುವಹಾಗಿಲ್ಲ, ಇಲ್ಲಿ ನಿಲ್ಲುವಹಾಗಿಲ್ಲ, ಅದು ತಿನ್ನುವಹಾಗಿಲ್ಲ, ಇದು ನೋಡುವಹಾಗಿಲ್ಲ, ನನಗೆ ನಾನು ರೇಸ್ ಗೆ ಬಿಟ್ಟಿರುವ ಕುದುರೆಯಂತೆ ಕಾಣುತ್ತಿದ್ದೆ, ಅವನು ರಾಜಾರೋಷವಾಗಿ ಅಲೆಯುತ್ತಿದ್ದ ಹುಲಿಯಂತೆ ಕಾಣುತ್ತಿದ್ದ. ಆದರೂ ನನಗೆ ಎಲ್ಲೋ ಒಂದು ಕಡೆ ನನ್ನ ಮಾರ್ಗವೇ ಸರಿ, ನಾನು ಅವನಂತಾದರೆ ಅವನಂತೆಯೇ ಹಾಳಾಗಿಹೋಗುತ್ತೇನೆ ಎಂದು ಭಾವಿಸಿದ್ದೆ. ನಾನು ನನ್ನ ಡಿಗ್ರಿ ಮುಗಿಸಿ ಕೆಲಸಕ್ಕೆ ಅಲೆಯುತ್ತಿರಲು, ಅವನು ಇದ್ದಕ್ಕಿದ್ದಂತೆ ನಟನೆ ಮಾಡುವುದಾಗಿ ಸಿನಿಮಾ ರಂಗದಲ್ಲಿ ಅವಕಾಶ ಹುಡುಕುತ್ತಾ ಅಲೆಯುತ್ತಿದ್ದ. ಆಗಾಗ ಒಂದೊಂದು ಸಿನಿಮಾದಲ್ಲಿ ಅಲ್ಲಿ ಇಲ್ಲಿ ಮುಖ ತೋರಿಸುವ ಮಟ್ಟಿಗೂ ಆಗಿದ್ದ. ನನಗೂ ಒಂದು ಒಳ್ಳೆಯ ಕಂಪನಿಯೊಂದರಲ್ಲಿ ಕೆಲಸವೂ ದೊರೆಯಿತು. ಅವರ ಮನೆಯಲ್ಲಿ ಏನೋ ತೊಂದರೆಯಾಗಿ ಮನೆ ಬದಲಾಯಿಸಿ ದೂರ ಹೊರಟುಹೋದರು. ಕೊಂಚ ದಿನಗಳು ಸಂಪರ್ಕದಲ್ಲಿ ಇದ್ದನಾದರೂ ಕಾಣೆಯಾಗಿ ಹೋದ. ವಿದ್ಯೆಯಿಲ್ಲದೇ ಹೋದರೆ ಹಿಂಗೇ ಆಗುವುದು ಬಂದೆರಗುವ ತೊಂದರೆಯನ್ನು ಎದುರಿಸುವ ಶಕ್ತಿಯಾಗಲಿ, ನಿಭಾಯಿಸುವ ಧೈರ್ಯವಾಗಲಿ ಉಳಿಯುವುದಿಲ್ಲ ಎಂದು ಎಲ್ಲರೂ ಆಡಿಕೊಂಡರು. 

ನನಗೆ ತಿಳಿದ ಹಾಗೆ ನಾನು ಕಾಲೇಜಿನಲ್ಲಿರುವವರೆಗೂ ಮಾರ್ಕ್ಸ್ ಗಾಗಿ ಓದುತ್ತಿದ್ದರೆ, ಅವನು ತನ್ನ ಮನಸಂತೋಷಕ್ಕಾಗಿ ಹಲವು ಇತರೆ ಪುಸ್ತಕಗಳನ್ನು ಓದುತ್ತಿದ್ದ. ನಾನಿನ್ನು ಕಲಿಯುತ್ತಿರುವ ಸಮಯದಲ್ಲೇ ಅವನು ಗಳಿಸುವ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದ. ನನಗೆ ಈಗ ಸಿಕ್ಕಿರುವ ಕೆಲಸ ಹೋಯಿತೆಂದರೆ ಮುಂದೇನೆಂದು ನನಗೆ ಗೊತ್ತಿರಲಿಲ್ಲ ಆದರೆ ಅವನು ಎಲ್ಲಿದ್ದರು ಗೆಲ್ಲಬಲ್ಲ ಪ್ರಪಂಚ ಜ್ಞಾನವನ್ನ ಹೊಂದಿದ್ದ ಅನ್ನಿಸುತ್ತೆ. ಆದರೆ ಅವನು ಏನೇ ಮಾಡಿದರೂ ಆರಕ್ಕೆ ಏರುತ್ತಿರಲಿಲ್ಲ, ಮೂರಕ್ಕೆ ಇಳಿಯುತ್ತಿರಲಿಲ್ಲ. ಎಲ್ಲೋ ಏನೋ ತೊಂದರೆಗೆ ಸಿಲುಕಿ ನಲುಗುತ್ತಿದ್ದ. ಅವನು ಯಾವಾಗಲೂ ನಿನ್ನ ಜೀವನಾನೇ ಒಂಥರಾ ಸುರಕ್ಷಿತ ಕಣೋ. ಓದು, ಓದು ಮುಗಿದ ನಂತರ ಒಳ್ಳೇ ಕೆಲಸ ನಮ್ಮ್ ತರಹನಾ ಎಂದು ಯಾವಾಗಲೂ ಹೇಳುತ್ತಿದ್ದ. ಅವನೂ ಒಳಗೊಳಗೇ ನನ್ನ ಜೀವನ ಶೈಲಿಯನ್ನು ಮೆಚ್ಚಿದ್ದನೆಂದ್ ಕಾಣುತ್ತದೆ. ಹಲ್ಲಿದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲೇ ಇಲ್ಲ ಎಂಬಂತಾಗಿತ್ತೇನೋ ನಮ್ಮ ಕಥೆ. ಅವನು ಏನಾದರೊಂದು ಹೊಸ ತರಲೆಗಳಿಗೆ ಕೈ ಹಾಕುತ್ತಲೇ ಇದ್ದ, ಒಮ್ಮೆ ಮೊಗೈಲ್ ಅಂಗಡಿ ಹಾಕುವೆನೆಂದು ಹೊರಟ, ಇನ್ನೊಮ್ಮೆ ಶೇರಿನಲ್ಲಿ ಹಣ ಹೂಡುವುದಾಗಿ ಹೊರಟ, ಮತ್ತೊಮ್ಮೆ ಹೋಲ್ ಸೇಲ್ ವ್ಯಾಪಾರ ಶುರುಮಾಡುವುದಾಗಿ ನಿಂತ, ಮಗದೊಮ್ಮೆ ಇನ್ನೇನೋ ಮಾಡುವೆನೆಂದು ಊರೂರು ಅಲೆಯುತ್ತಿದ್ದ, ಅದಕ್ಕೆ ದುಡ್ಡೆಲ್ಲೆಲ್ಲಿಂದ ಸೇರಿಸುತ್ತಿದ್ದನೋ, ಧೈರ್ಯ ಹೇಗೆ ಮಾಡುತ್ತಿದ್ದನೋ, ಇಷ್ಟೆಲ್ಲಾ ಓದಿರುವ ನನಗೆ ಒಂದು ದಿನಕ್ಕೂ ಹೊಸ ದಾರಿಯಲ್ಲಿ ಹೋಗಲು, ಒಂದು ಹೊಸ ಹೆಜ್ಜೆ ಇಡಲೂ ನೂರು ಬಾರಿ ಯೋಚಿಸುವಂತಾಗುತ್ತಿತ್ತು. ವಿದ್ಯಾಭ್ಯಾಸ ನನ್ನಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ವಿಫಲವಾಗಿತ್ತೇನೋ.

ಅಂತೂ ಎಂದೋ ಕಳೆದುಹೋದವನನ್ನು ಹೇಗೋ ಪತ್ತೆ ಹಚ್ಚಿ ಹುಡುಕಿ ಸಂಪರ್ಕಸಿದ್ದಕ್ಕೆ ಕನಕಪುರದಲ್ಲಿರುವುದಾಗಿ ತಿಳಿಯಿತು. ಈಗ ಅವನೇ ನನ್ನನ್ನು ಮಾತನಾಡಬೇಕೆಂದು ಕರೆದಿದ್ದಾನೆ. ಹೋಗಿ ನೋಡಿಕೊಂಡುಬರುವುದೆಂದು ಹೊರಟವನು ಈ ಎಲ್ಲಾ ಹಳೆಯ ವಿಷಯಗಳನ್ನು ಮೆಲುಕು ಹಾಕುವಷ್ಟರಲ್ಲಿ ಅದೇ ಕಟ್ಟುಮಸ್ತು ದೇಹದ ಲವಲವಿಕೆ ಹೇಮಿ ಎದುರುಗೊಂಡ, ನನ್ನ ಅರ್ಧ ಬೋಳು ತಲೆಯನ್ನು ನೋಡಿ, ಹೊಡೆದು, ಏನೋ ಹೇಮಾ ವಿದ್ಯಾಭ್ಯಾಸದ ಅಡ್ಡಪರಿಣಾಮಾನಾ ಇದು ಎಂದು ಚೆನ್ನಾಗಿದೆ ಕಣೋ ಹೇರ್ ಸ್ಟೈಲ್ ಎಂದು ಹೇಳಿ ಸ್ವಚ್ಚಂದವಾಗಿ ನಗುತ್ತಲೇ ಒಂದು ಲಡಾಸು ಜೀಪ್ ಹತ್ತಿಸಿ ಕನಕಪುರದಿಂದ ಒಂದಿಪ್ಪತ್ತೈದು ಕಿಲೋಮೀಟರ್ ಕರೆದೊಯ್ದ. ಹೋಗುತ್ತಾ ಹಾದಿಯಲ್ಲೆಲ್ಲಾ ತನ್ನ ತೋಟವನ್ನು ತೋರಿಸುತ್ತಾ ಕರೆದೊಯ್ದ. ಹೊಸ ಮನೆ, ಹೊಸ ಮಡದಿಯನ್ನು, ತನ್ನ ಪ್ರಪಂಚವನ್ನು ಪರಿಚಯಿಸಿ ಇನ್ನಷ್ಟು ನಕ್ಕ. ತನ್ನ ಹೊಸ ಹೊಲವನ್ನೂ ತೋರಿಸಿ ಅಲ್ಲಿ ವ್ಯವಸಾಯದಲ್ಲಿ ತಾನು ಅಳವಡಿಸಬೇಕೆಂದಿರುವ ಹೊಸ ವಿಧಾನದ ಬಗ್ಗೆಯೂ ವಿವರಿಸಿದ. ಕೊನೆಗೆ ನನಗೆ ಇಷ್ಟವಿದ್ದಲ್ಲಿ ಆ ಯೋಜನೆಯ ಉಸ್ತುವಾರಿಯನ್ನು ಹೊರಿಸುವುದಾಗಿ ಕೂಡ ಹೇಳಿದ. ನನ್ನಲ್ಲಿ ಅಷ್ಟೋತ್ತೂ ಹೊರಹೊಮ್ಮುತ್ತಿದ್ದ ಹಳೆಯ ಆಲೋಚನೆಗಳಿರಲಿ, ಹೊಸ ಮಾತುಗಳೂ ಯಾವುವೂ ಹುಟ್ಟುತ್ತಿರಲಿಲ್ಲ. ಹೇಮಿ ನಾನಂದುಕೊಂಡದ್ದಕ್ಕಿಂತ ಬೆಳೆದು ನಿಂತಿದ್ದ. ನಾನು ಅಕ್ಷರಶಹ ಬೆಪ್ಪನಂತೆ ಬಾಯ್ಕಳೆದುಕೊಂಡು ನಿಂತು ಎಲ್ಲವನ್ನೂ ನೋಡಿದೆನಷ್ಟೇ!    
       
                                                             -ಹೇಮಂತ್                                                                                       

Monday 5 March 2012

ಅಪ್ಪನೆಂಬ ಮಗನೂ! ಮಗನೆಂಬ ಅಪ್ಪನೂ!ಆಹಾ! ಆ ಮನೆಯೆಂಬೋ ಮನೆಯನ್ನು ಯಾವ ಪದಗಳಲ್ಲಿ ವರ್ಣಿಸುವುದು. ತಲೆಯ ಕೆಳಗೆ ಮುಖ, ಮುಖದ ಕೆಳಗೆ ಕುತ್ತಿಗೆ, ಕುತ್ತಿಗೆ ಕೆಳಗೆ ಭುಜ, ಭುಜದಿಂದ ಇಳಿಬಿಟ್ಟ ಕೈಗಳು ನಡುವೆ ಎದೆ, ಹೊಟ್ಟೆಯೋಪಾದಿಯಾಗಿ ಕಾಲುಗುರಿನವರೆಗೂ ವಿನ್ಯಾಸಗೊಂಡಿದ್ದರೆ ಮಾತ್ರ ಅದನ್ನು ದೇಹವೆಂದು ಕರೆಯಬಹುದಲ್ಲವೇ. ತಲೆ, ಕಾಲು, ಕೈ, ಹೊಟ್ಟೆ, ಸೊಂಟ, ಎದೆ ಎಲ್ಲ ಹೆಂಗಂದರೆ ಹಂಗೆ ಪೇರಿಸಿಟ್ಟಿದ್ದರೆ ದೇಹವೆಂದು ಕರೆಯಲು ಹೇಗೆ ಸಾಧ್ಯ, ಆದರೂ ಆ ಅಪೂರ್ವ ಕಲಾಕೃತಿಯನ್ನು ಎರಡು ಮಾನವ ಜೀವಗಳು ಮತ್ತು ಸಹಸ್ರ ಮಾನವೇತರ ಜೀವಿಗಳು ವಾಸಿಸುತ್ತಿದ್ದರೆಂಬ ಏಕಮಾತ್ರ ಕಾರಣದಿಂದ ಮನೆಯೆಂದೇ ಕರೆಯಬೇಕು. ಹಾಲ್ ನ ಶೆಲ್ಫ್ ನಲ್ಲಿ ತುಂಬಿಟ್ಟಿದ್ದ ಅಡುಗೆ ಸಾಮಾನುಗಳ ಡಬ್ಬಿಗಳಲ್ಲಿಂದ ಸಿಕ್ಕ ಸಿಕ್ಕದ್ದನ್ನ ಕೊಳ್ಳೆ ಹೊಡೆದು ಸಾಲಾಗಿ ಸಾಗಿಸುತ್ತಿದ್ದ ಇರುವೆಗಳು, ಮನೆಯ ತುಂಬಾ ಆಕ್ರಮಿಸಿದ್ದ ಜೇಡರ ಹುಳುಗಳು, ಆಡುಗೆಮನೆಗೆ ಎಲ್ಲರಿಗೂ ನಿರ್ಬಂಧವಿದ್ದರೂ ರಾಜಾರೋಷವಾಗಿ ತನ್ನ ಅಧಿಪತ್ಯ ಸಾಧಿಸಿದ್ದ ಇಲಿಗಳು, ಮತ್ತು ಇಲಿಗಳನ್ನೂ ಗಣನೆಗೆ ತೆಗೆದುಕೊಳ್ಳದ ಜಿರಳೆಗಳು. ಮನೆಯಲ್ಲಿ ಬೇರಾವ ಆಹಾರ ಪದಾರ್ಥಗಳನ್ನೂ ಸೇವಿಸದೇ ಇರುವ ಎರಡು ಮಾನವ ಜೀವಿಗಳ ರಕ್ತವನ್ನೇ ಅವಲಂಬಿಸಿ ರಾತ್ರಿಗಾಗಿಯೇ ಕಾದು ಇಡೀ ದಿನ ಅವಿತುಕುಳಿತಿರುವ ಮಲಗುವ ಕೋಣೆಯಲ್ಲಿನ ತಿಗಣೆಗಳು, ಬಾತ್ರೂಮಿನಲ್ಲಿ ಸದಾ ಬರುತ್ತಿದ್ದ ಘಮ ಘಮ ಸುವಾಸನೆಗೆ, ಎಲ್ಲೆಲ್ಲಿಂದಲೋ ತಮ್ಮ ಬಂಧುಗಳನ್ನೆಲ್ಲಾ ಕರೆದುಕೊಂಡು ಬಂದು ವಾಸವಾಗಿದ್ದ ಸೊಳ್ಳೆಗಳು ಮತ್ತು ನೊಣಗಳು, ಅಕ್ಕಿಯಲ್ಲಿ, ಹಳೇ ರಾಗಿಯಲ್ಲಿ, ಬಳಕೆಗೇ ಬಾರದೆ ಸತ್ತು ಹೋಗಿದ್ದ ಹುರುಳಿ ಕಾಳಿನಲ್ಲಿ ತನ್ನ ವಂಶಾಭಿವೃದ್ಧಿ ಮಾಡಿಕೊಂಡಿದ್ದ ಹಲವು ನುಸಿ ಕ್ರಿಮಿಗಳ ಹಲವಾರು ತಲೆಮಾರುಗಳು. ಇವೆಲ್ಲದರ ನಡುವೆ ಸಹಬಾಳ್ವೆ ನಡೆಸುತ್ತಿದ್ದ ಅಪ್ಪನೆಂಬ ಮಗನೂ, ಮಗನೆಂಬ ಅಪ್ಪನೂ!

ನಡುಮನೆಯ ಬಲಭಾಗವನ್ನು ಅಲಂಕರಿಸಿದ್ದ ಸಿಲಿಂಡರ್ ತಲೆಯ ಮೇಲಿದ್ದ ಟೇಬಲ್ ಮೇಲೆ ಕುಕ್ಕುರುಬಡಿದಿದ್ದ ಸ್ಟೋವು ಅದರ ಮೇಲೆ ಅಂಡುರಿಸಿಕೊಂಡು ಸುಯ್ಯನೇ ಬಾಯಿ ಬಡಿದುಕೊಳ್ಳುತ್ತಿದ್ದ ಕುಕ್ಕರಿಗೆ ಉತ್ತರವೆಂಬಂತೆ ಬಚ್ಚಲಿಂದ “ಲೋ ಅಪ್ಪ ಸ್ಟೋವ್ ಆಫ್ ಮಾಡೋ..” ಎಂದು ಧ್ವನಿ ಬರಲು ಸ್ಕ್ರಾಪ್ ಅಂಗಡಿಯ ತದ್ರೂಪದಂತಿದ್ದ ಬೆಡ್ರೂಮಿನಲ್ಲಿ ಸ್ಕೂಲ್ ಶರ್ಟಿನ ಗುಂಡಿ ಹೊಲಿದುಕೊಳ್ಳುತ್ತಿದ್ದ ಅಪ್ಪನೆಂಬ ಮಗನು “ಮಗಾ…, ನಿಂದ್ಯಾಕೋ ಓವರಾಯ್ತು” ಎಂದು ಹೇಳಿ ಸೂಜಿಯೊಂದಿಗಿದ್ದ ದಾರ ಬಾಯಲ್ಲಿ ಕಚ್ಚಿ ಕತ್ತರಿಸುತ್ತಾ ಬಂದು ಸ್ಟೋವ್ ಆರಿಸುವನು. ರೂಪಕಾಲಂಕಾರದಂತೆ ಸ್ಟೋವ್ ಬಾಯಿ ಮುಚ್ಚುವುದು. ಪ್ಯಾಂಟು ಮೇಲೆಳೆಯುತ್ತಾ “ಇವತ್ತೂ ಪುಲಾವಾ, ದಿನಾ ಅದೇ ತಿಂದು ತಿಂದೂ ಸಾಕಾಗೋಯ್ತು” ಎಂದು ಕೇಳಿಸುವಂತೆಯೇ ಅಪ್ಪನೆಂಬ ಮಗನು ಗೊಣಗಲು, ಮಗನೆಂಬ ಅಪ್ಪ ಸ್ನಾನ ಮುಗಿಸಿ ಬಚ್ಚಲು ಮನೆಯ ಬಾಗಿಲಲ್ಲಿ ಕಾಲೊರೆಸುತ್ತಾ “ಇಲ್ಲ ಕಣೋ ಇವತ್ತು ಬಿಸಿ ಬೇಳೇ ಬಾತ್, ಆಹಾ ಘಮ್ಮಂತಿದೆ ವಾಸನೆ” ಎಂದು ತನ್ನ ನಳಪಾಕವನ್ನು ತಾನೇ ಹೊಗಳುವನು. ಕುಕ್ಕರ್ ಕೂಡ ಒಳಗೊಳಗೇ ಕಿಸಕ್ಕೆಂದು ನಗುವಂತೆ ಭಾಸವಾಗಿ ಮೇಲೇರಿದ್ದವನು ಕೆಳಗಿಳಿಯುವನು. ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಛೇಡಿಸುತ್ತಾ, ಮಾಡಿದ್ದುಣ್ಣೋ ಮಹರಾಯ ಎಂಬಂತೆ ಹೊಟ್ಟೆಗೂ ಬುತ್ತಿಗೂ ಸಾಧ್ಯವಾದಷ್ಟು ತುಂಬಿಕೊಂಡು ಆಫೀಸಿಗೆ ಮತ್ತು ಸ್ಕೂಲಿನ ಕಡೆಗೆ ಹೊರಡಲು ಸನ್ನದ್ಧರಾದರು. ಗಣಿತ ಹೋಮ್ ವರ್ಕ್ ಬುಕ್ಕೆಲ್ಲಿ, ನನ್ ಕನ್ನಡಕ ಎಲ್ಲೋ ಎಂದು ಇಬ್ಬರೂ ಕೊನೆಗೆ ತಾವು ತಾವೇ ಹುಡುಕಿ, ಹೊರಡುವ ಮುನ್ನ, ಅಪ್ಪ ೫೦ ರೂಪಾಯಿ ಕೊಡೋ ಎಂದು ಮಗನೆಂಬ ಅಪ್ಪ ಗೋಗರೆಯಲು. ಯಾಕೆ, ಏನು ಎಂದೆಲ್ಲ ವಿಚಾರಿಸಿ, ಕೊನೆಗೆ ಕುಡಿದು ಬಂದೇ ಅಂದ್ರೆ ನಾನ್ ಇವತ್ತು ಮನೆಗೇ ಬರಲ್ಲ ಹೇಳಿದ್ದೀನಿ ಎಂದು ಚೇತಾವನಿ ಕೊಟ್ಟು, ತನ್ನ ಜಿಯೋಮೆಟ್ರಿ ಬಾಕ್ಸ್ ನಲ್ಲಿದ್ದ ೫೦ ರ ನೋಟೊಂದನ್ನು ಕೊಟ್ಟು, ಕೆನ್ನೆ ಗಿಲ್ಲಿಸಿಕೊಂಡು ಅಂತೂ ಇಬ್ಬರ ದಾರಿ ಹಿಡಿದರು. ಇನ್ನ ಸಂಜೆಯವರೆಗೂ ಮನೆಯ ಮೂಲೆ ಮೂಲೆಯಲ್ಲಿ ಅಡಗಿದ್ದ ಎಲ್ಲಾ ಮಾನವೇತರ ಜೀವಿಗಳು ಸ್ವತಂತ್ರವಾಗಿ ಮನೆಯಲ್ಲಿ ಬದುಕುವುವು. ಎಲ್ಲವೂ ತಿಂದುಂಡು, ಆಟವಾಡಿ ಸುಸ್ತಾಗಿ ತಮ್ಮ ತಮ್ಮ ಗೂಡು ಸೇರುವಷ್ಟರಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ. ಅಪ್ಪನೆಂಬ ಮಗನು ಪುಸ್ತಕಮೂಟೆಯನ್ನು ಎಸೆದು ಸರ್ರ್ರನೆ ಏನೋ ಘನಕಾರ್ಯವಿರುವಂತೆ ಬಟ್ಟೆ ಬದಲಿಸಿ ಬಾಗಿಲು ತೆಗೆದುಹಾಕಿಯೇ ಬ್ಯಾಟು ಬಾಲು ಹಿಡಿದು ಓಡುವನು. ಸ್ವಲ್ಪ ಹೊತ್ತಿನಲ್ಲಿ ತರಕಾರಿ, ಮಣ್ಣು ಮಸಿ ಕಪ್ಪನೆಯ ಕವರ್ ಗಳನ್ನು ಹಿಡಿದುಕೊಂದು ಬಂದ ಮಗನೆಂಬ ಅಪ್ಪನು ಮಾಮೂಲಿನಂತೆ ಎಷ್ಟು ಹೇಳಿದ್ರು ಬುದ್ದಿ ಬರಲ್ಲ ಇವನಿಗೆ ಎಂದು ಮನಸಿನಲ್ಲೇ ಬಯ್ದುಕೊಂಡು ಮುಚ್ಚಿರುವ ಸುಟ್ಟ ಆಡುಗೆ ಮನೆ ಕಡೆ ಒಮ್ಮೆ ನೋಡಿ ನಿಟ್ಟುಸಿರು ಬಿಟ್ಟು ವೇಶ ಬದಲಿಸುವನು. ಇನ್ನ ತಂಟೆ, ತಕರಾರುಗಳು, ತುಂಟಾಟದ ಮಾತುಗಳು, ಆಟ, ಆಡುಗೆ, ಊಟ, ಟೀವಿ, ಹೋಮ್ ವರ್ಕ್, ಪಾಠ, ಪ್ರವಚನ, ಎಲ್ಲೆಲ್ಲಿದ್ದರೋ ಹಂಗೆ ನಿದ್ರೆ. ಹಿಂಗೆ ವಾರದ ಆರೂ ದಿನ ಮುಗಿಯುತ್ತದೆ. ಭಾನುವಾರದೊಂದು ದಿನ, ಸಿನಿಮಾ, ಶಾಪಿಂಗ್, ಹೋಟೆಲ್ ಇಂಥೆಲ್ಲಾದರೂ ಸುತ್ತಾಟ. ಅಪರೂಪಕ್ಕೂ ಸ್ನೇಹಿತರು ಮನೆಗೆ ಬರುವುದಿಲ್ಲ. ಸಿಕ್ಕರೆ ಎಲ್ಲಾದರೂ ಹೊರಗೆ ಸಿಗುವರು. ಅವರೊಂದಿಗೆ ಒಂದಷ್ಟು ಸಮಯ ಹರಣ. ಹೀಗೆ ಈ ಇಬ್ಬರ ಜೀವನ ತಮ್ಮದೇ ಪುಟ್ಟ ಪ್ರಪಂಚವನ್ನ ಕಟ್ಟಿಕೊಂಡು ಸಾಗುತ್ತದೆ. ಆದರೆ ಅಪ್ಪನಿಗೆ ಮಗನೆಂಬ ಹೆಸರು, ಅಪ್ಪನಿಗೆ ಮಗನ ಸ್ಥಾನ ಬರಲು ಕಾರಣ ಹುಡುಕಹೊರಟರೆ, ಇಲಿ, ಹೆಗ್ಗಣಗಳ ರಾಜ್ಯವಾಗಿರುವ ಸುಟ್ಟ ಅಡುಗೆ ಮನೆಯೂ ಮುಖ್ಯಪಾತ್ರವಾಗುತ್ತದೆ.

ಮಾಮೂಲಿನಂತೆ ಆಫೀಸಿನಿಂದ ಮನೆ ಕಡೆಗೆ ಬಂದ ರಾಜಗೋಪಾಲನಿಗೆ ಕಂಡ ದೃಶ್ಯ ಮನೆಯ ಮುಂದೆ ನೆರೆದಿದ್ದ ಜನ, ಮನೆಯ ಕಿಟಕಿಯಿಂದೆಲ್ಲಾ ಹೊರಬರುತ್ತಿದ್ದ ಹೊಗೆ. ಕೈಲಿದ್ದ ಟಪ್ಪರ್ ವೇರ್ ಚೀಲ ಹಾಗೇ ಕೆಳಗೆ ಬಿದ್ದಿದ್ದೂ, ಮನೆಯ ಬಾಗಿಲ ಬಳಿ ಓಡಿದ್ದು, ಅದೇ ಕ್ಷಣಕ್ಕೆ ಯಾರೋ ಬಾಗಿಲು ಮುರಿದು ಒಳಪ್ರವೇಶಿಸಿದ್ದು, ಮನೆಯ ಒಳಗೆ ಧಗಧಗನೆ ಉರಿಯುತ್ತಿದ್ದ ಅಡುಗೆಮನೆಯಲ್ಲಿ ಮುಕ್ಕಾಲು ಪಾಲು ಸುಟ್ಟು ಕರಕಲಾಗಿದ್ದ ಹೆಂಡತಿಯನ್ನು ನೋಡಿದ್ದೇ ಒಳಓಡುತ್ತಿದ್ದವನು ಹಾಗೇ ಬಾಗಿಲ ಬಳಿಯೇ ಕಾಲು ಸೋತು ಬಿದ್ದುಹೋದ. ಕಣ್ಣು ತೆರೆದಿತ್ತು, ಮುಖ ನೇರವಾಗಿ ಹೆಂಡತಿಯ ಸುಟ್ಟು ಕರಕಲಾಗುತ್ತಿದ್ದ ದೇಹಕ್ಕೆ ಒಳಗೆ ಬಂದ ಜನ ಕಂಬಳಿ ಹಾಕುತ್ತಿದ್ದುದನ್ನೇ ನೋಡುತ್ತಿತ್ತು. ದೇಹದಲ್ಲಿ ಯಾವುದೇ ರೀತಿಯ ಚಲನೆಯಿರಲಿಲ್ಲ. ಆಡುಗೆ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪಾತ್ರೆ ಪಗಡೆಗಳು, ಸ್ಕ್ರೀನ್ ಬಟ್ಟೆ, ಗೋಡೆಯೆಲ್ಲ ಬೆಂಕಿ ಹೊತ್ತಿ ಉರಿಯುತ್ತು ಎಲ್ಲಾ ನೀರು ತಂದು ಸುರಿಯುತ್ತಿದ್ದರು. ಯಾರು ಯಾರೋ ಬಂದು ರಾಜಗೋಪಾಲನನ್ನು ಎತ್ತಿ ಕೂರಿಸಲು, ನೀರು ಕುಡಿಸಲು ಪ್ರಯತ್ನಿಸುತ್ತಿದ್ದರು. ಹಾಕಿದ ನೀರು ಹಾಗೇ ವಾಪಸಾಗುತ್ತಿತ್ತು. ರಾಜಗೋಪಾಲನ ಕೈಕಾಲು ಉಜ್ಜಿ ತಲೆ ಮೇಲೆಲ್ಲಾ ನೀರು ಹಾಕಿ ಯಾರೋ ತಟ್ಟುತ್ತಿದ್ದರು. ಹೆಂಡತಿಯ ಆಗಲೇ ಪ್ರಾಣ ಹೋಗಿರಬಹುದಾದ ದೇಹದ ಕಡೆಗೇ ಅವನ ಕಣ್ಣು ನೆಟ್ಟಿತ್ತು. ಯಾರೋ ಇಬ್ಬರು ದೇಹವನ್ನು ಕಂಬಳಿಯಿಂದ ಸಂಪೂರ್ಣವಾಗಿ ಸುತ್ತಲು ಎತ್ತಿದರು, ದೇಹ ಇಬ್ಭಾಗವಾಗುವುದನ್ನು ಕಂಡಿದ್ದೇ, ರಾಜಗೋಪಾಲ ವಾಂತಿ ಮಾಡಿಕೊಳ್ಳುತ್ತಾ ಅದೇ ಅವಸ್ಥೆಯಲ್ಲಿ ನೆಲಕ್ಕುರುಳಿದ. ಸುತ್ತಲೂ ಕೂಗಾಡುತ್ತಾ, ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಾ ಇದ್ದ ಜನರ ಕಾಲುಗಳು, ಸಾಗಿಸಲಾಗುತ್ತಿದ್ದ ಛಿದ್ರಗೊಂಡಿದ್ದ ಹೆಂಡತಿಯ ದೇಹ ಹಾಗೇ ಮಂಜುಮಂಜಾಗುತ್ತಾ ಹೋಯಿತು. ಹೊರಗಿನಿಂದ ಅಳುತ್ತಾ, ಕೂಗುತ್ತಾ ಓಡಿಬರುತ್ತಿದ್ದ ರೋಹಿತ್ ನನ್ನು ಯಾರೋ ಹೊರಗಿದ್ದ ಹೆಂಗಸರು ತಡೆದು, ಸಂತೈಸಿ ಬಲವಂತವಾಗಿ ಕರೆದುಕೊಂಡು ಹೋದರು.

ಮಾನಸಿಕ ಆಘಾತದಿಂದ ಆಸ್ಪತ್ರೆ ಸೇರಿದ್ದ ರಾಜಗೋಪಾಲನನ್ನು ಮತ್ತು ತಾಯಿಯ ಅಂತ್ಯಸಂಸ್ಕಾರ ರಕ್ಷಿತ್ ಕೈಲೇ ಮಾಡಿಸಿ ಕೆಲವು ದಿನಗಳು ಅಕ್ಕ ಪಕ್ಕದ ಮನೆಯವರೇ ನೋಡಿಕೊಂಡರು. ಕ್ರಮೇಣ, ರಕ್ಷಿತ್ ತಾನೇ ಅಪ್ಪನ ಜೊತೆ ಹೆಚ್ಚು ಹೊತ್ತು ಇದ್ದು, ಕ್ರಮೇಣ ಚೇತರಿಸಿಕೊಂಡ ತಂದೆಯನ್ನು ಹದಿನೈದು ದಿನಗಳ ತರುವಾಯ ಮನೆಗೆ ಕರೆತಂದನು. ಅಕ್ಕಪಕ್ಕದವರೆಲ್ಲಾ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಮನೆ ಒಳಗೆ ಬರಲು ಕಂಡಿದ್ದ ಘೋರ ದೃಶ್ಯಗಳೆಲ್ಲಾ ಹಾಗೇ ಕಣ್ಮುಂದೆ ಬರುತ್ತಿದ್ದವು. ಅಡುಗೆ ಮನೆ ಹಾಗೇ ಅನಾಥವಾಗಿ ಬಿದ್ದಿತ್ತು. ಅಡುಗೆ ಮನೆ ಎದುರೇ ಕುಸಿದು ಬಿದ್ದು ಅಳಲು ಹತ್ತಿದ ತಂದೆಗೆ ಏನು ಹೇಳುವುದೆಂದು ತೋಚದೆ ಹಾಗೇ ದೂರದಲ್ಲಿ ಕುಕ್ಕುರುಗಾಲಿಲೆ ಕೂತು ರಕ್ಷಿತ್ ಕೂಡ ಅತ್ತ. ಕಣ್ನೊರೆಸಿಕೊಂಡು, ಹೋಟೆಲ್ ನಿಂದ ತಂದಿದ್ದ ಇಡ್ಲಿ ಪ್ಯಾಕೆಟ್ಟನ್ನು ಅಪ್ಪನ ಮುಂದೆ ಬಿಚ್ಚಿಟ್ಟು ತಾನೇ ಕೈತುತ್ತಿನಲ್ಲಿ ತಂದೆಯ ಬಾಯಿಯ ಬಳಿ ಇಟ್ಟ. ತಿನ್ನಪ್ಪ ಅಳಬಾರ್ದಲ್ವ, ಒಳ್ಳೇ ಮಕ್ಳು ಹೆದರ್ಕೊಂಡು ಅಳ್ತಾರಾ ಎಂದು ಮುಗ್ಧವಾಗಿ ಕೇಳಿದ ರಕ್ಷಿತ್ ನನ್ನು ಕಂಡು ಇನ್ನಷ್ಟು ಅಳು ಬರುವುದರ ಜೊತೆಗೆ ತನ್ನ ಪ್ರೇಮಿಯಾದ ಹೆಂಡತಿಯ ಎಲ್ಲ ಹಳೆಯ ನೆನಪು ತೆರೆದುಕೊಂಡವು. ಅವಳೂ ತಾನು ಯಾವಗಲಾದರೂ ಧೃತಿಗೆಟ್ಟಾಗ ಇದೇ ರೀತಿ ಮುಖವನ್ನು ಅವಳ ಅಂಗೈಯಲ್ಲಿ ತುಂಬಿಸಿಕೊಂಡು ಒಳ್ಳೇ ಮಕ್ಕಳು ಹೀಗೆ ಧೈರ್ಯ ಕಳ್ಕೋತಾರಾ ಎಂದು ಹೇಳುತ್ತಿದ್ದುದು ನೆನಪಾಗಿ ಕರುಳು ಚುರಕ್ಕೆಂದಿತು. ಮನೆಯವರೆಲ್ಲರ ವಿರೋಧ ಕಟ್ಟಿಕೊಂಡು ಮದುವೆಯಾಗಿ ಈ ಮನೆಗೆ ಮಾಡಿದಾಗಿನಿಂದಲೂ, ತಾನು ಮನೆಯಲ್ಲಿರುವ, ಲೈಟ್ ಹೊತ್ತಿಸಿರುವ ಅಷ್ಟೂ ಹೊತ್ತೂ ಇದೇ ಅಡುಗೆ ಮನೆಯಲ್ಲೇ ಕಳೆಯುತ್ತಿದ್ದುದು, ಇದೇ ಅಡುಗೆ ಮನೆಯಲ್ಲೇ ಪ್ರಾಣ ಬಿಟ್ಟಿದ್ದು ಏನು ವಿಪರ್ಯಾಸವಿರಬಹುದು ಎಂದು ಕಣ್ಣಲ್ಲಿ ನೀರು ಹಾಕುತ್ತಾ ತನ್ನ ಮಗನ ಕೈಲಿದ್ದ ಇಡ್ಲಿ ಬಾಯಿಗೆ ಹಾಕಿಸಿಕೊಳ್ಳುವನು. ಮಗನಿಗೆ ಇಡ್ಲಿ ತಿನ್ನಿಸುತ್ತಾ ಎಲ್ಲಿದ್ಯಪ್ಪಾ ಇಷ್ಟು ದಿನ ಎಂದು ಕೇಳಲು, ನಿರ್ಮಲ ಆಂಟಿ ಮನೇಲಿದ್ದೆ…. ಹ್ಮ್… ಆಮೇಲೆ.. ಆಮೇಲೇ… ಅಮ್ಮಂಗೆ ನಾನೇ ಬೆಂಕಿ ಕೊಟ್ಟೆ ಕಣೋ ಎಂದು ಸಾಧಾರಣವಾಗಿ ಹೇಳುತ್ತಿದ್ದ ಮಗನ ಕಡೆ ನೋಡುತ್ತಾ, ಮಗನನ್ನು ಬಿಗಿದಪ್ಪಿ ಇನ್ನಷ್ಟು ಅತ್ತನು. ರಕ್ಷಿತ್ ಬಿಡಿಸಿಕೊಂಡು, ಯಾಕೋ ಮಗನೆ ಅಳ್ತೀಯಾ, ಅಮ್ಮ ಮತ್ತೆ ಬರಲ್ಲ ಅಂತಾನಾ….., ಏನೂ ಮಾಡೋಕೆ ಆಗಲ್ಲ, ಬೇರೆ ಅಮ್ಮನ್ನ ತಂದ್ರೆ ಆಯ್ತು ಬಿಡು ಅಂತಿದ್ರು ಸರೋಜ ಆಂಟಿ. ಬೇರೆ ತರೋಣ ಬಿಡೋಲೋ ಎಂದು ಹೇಳಿದ್ದಕ್ಕೆ ಹೊಡೆಯಬೇಕೋ, ಅಳಬೇಕೋ ಗೊತ್ತಾಗಲಿಲ್ಲ ರಾಜಗೋಪಾಲನಿಗೆ. ಯಾವಾಗಲೂ ಯಾಕೋ ನೀನು ಇಷ್ಟು ಸೆನ್ಸಿಟಿವ್ ಎಂದು ಯಾವಾಗಲೂ ಕೇಳುತ್ತಿದ್ದ ಹೆಂಡತಿ ಅಡುಗೆ ಮನೆಯಲ್ಲಿ ನಿಂತಿರುವಂತೆ ಭಾಸವಾಯ್ತು. ಇದು ಕಳೆದು ೬ ವರ್ಷಗಳು ಸಂದವು.

ಅಡುಗೆ ಮನೆಗೆ ಕಾಲಿಟ್ಟರೆ ಆ ಸುಟ್ಟ ಗೋಡೆ, ಮಧ್ಯದಲ್ಲಿ ಕರಕಲಾಗುತ್ತಿದ್ದ ಹೆಂಡತಿಯ ಚಿತ್ರವೇ ಕಣ್ಮುಂದೆ ಬಂದಂತಾಗುತ್ತಿತ್ತೆಂದು, ಮರದ ಹಲಗೆ ಹೊಡೆಸಿ ಮುಚ್ಚಲಾಯ್ತು. ಅಡುಗೆ ಮನೆ ಹಾಲ್ ನ ಬಲ ಪಾರ್ಶ್ವದಲ್ಲೇ ಸೃಷ್ಟಿಯಾಯ್ತು. ಮನೆಯನ್ನು ಚಾಕಚಕ್ಯವಾಗಿಡಲು ಶ್ರಮಿಸುತ್ತಿದ್ದ ಏಕಮಾತ್ರ ಜೀವವೇ ಇಲ್ಲವಾದ ಮೇಲೆ ಯಾವುದು ಎಲ್ಲಿರಬೇಕೋ ಅಲ್ಲಿ ಇಲ್ಲವಾಗದಾಯ್ತು. ಇಬ್ಬರಿಗೂ ಮನೆ ಒಡ್ಡು ಒಡ್ಡಾಗಿದ್ದರೇನೇ ಸರಿ ಎಂದೆನಿಸತೊಡಗಿತು. ಸಂಗಾತಿಯ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲಾಗದೆ, ಮಧ್ಯವಸನಿಯಾಗ ತೊಡಗಿದ ತಂದೆಯನ್ನು ೮ ವರ್ಷದವನಿದ್ದಾಗಲೇ ತಾನೇ ಜವಾಬ್ದಾರಿ ತೊಗೊಳ್ಳಬೇಕೆಂದು, ತನಗೆ ಯಾವಾಗಲೂ ಅಮ್ಮ ಹೇಳುತ್ತಿದ್ದ ನಿಮ್ಮಪ್ಪ ಸಕ್ಕತ್ ಸಾಫ್ಟ್ ಕಣೋ ಅವರಿಗೆ ಯಾವತ್ತೂ ನೋಯಿಸಬೇಡ ಕಣೋ ತರಲೆ ಎಂಬ ಮಾತುಗಳು ನೆನಪಿಗೆ ಬರುತ್ತಿತ್ತು. ತಂದೆಯ ಗಲ್ಲ ಹಿಡಿದು ಇನ್ಮೇಲೆ ನೀನೇ ನನ್ ಮಗ, ನಾನು ನಿಂಗೆ ಅಪ್ಪ, ಸುಮ್ಮನೆ ನಾನು ಹೇಳಿದಂಗೆ ಕೇಳ್ಬೇಕು ಗೊತ್ತಾಯ್ತಾ ಎಂದು ಹೆಗಲೇರಿ ಆರ್ಡರ್ ಮಾಡಿ ಜೇಬಿನಲ್ಲಿದ್ದ ದುಡ್ಡು ಕಿತ್ತುಕೊಂಡು, ಸುಮ್ಮನೆ ದುಡ್ಡು ನನಗೆ ತಂದು ಕೊಡು, ಕುಡ್ಕೊಂಡ್ ಬಂದು ನನ್ನ್ ಸ್ನೇಹಿತರೆಲ್ಲಾ ನನ್ನ ನೋಡಿ ನಗೋ ಹಾಗೆ ಮಾಡಿದ್ರೆ ಅಮ್ಮನತ್ರ ಹೋಗ್ಬಿಡ್ತೀನಿ ಅಷ್ಟೇ ಎಂದು ಬೆದರಿಸಿದನು. ವರುಷಗಳು ಸಂದವು, ಮಗ ಅಪ್ಪನಾದ, ಅಪ್ಪ ಮಗನಾದ. ೭ ಇದ್ದವನು ೧೩ ವರ್ಷದವನಾದ ರಕ್ಷಿತ್ ಗೆ ಈಗ ೨೪ ವರ್ಷ! ಈಗಲೂ ಅಪ್ಪ ಮಗನೇ, ಮಗ ಅಪ್ಪನೇ. ಒಳ್ಳೆಯ ಗೆಳೆಯರಂತೆ ಇಬ್ಬರೂ ಕಿತ್ತಾಡಿಕೊಂಡು ಚೆನ್ನಾಗಿರುವರು. ಮಗನಾದ ಅಪ್ಪ ತನ್ನ ರಿಟೈರ್ ದಿನದ ಏಲ್ಲಾ ಚಟುವಟಿಕೆಗಳ ಬಗ್ಗೆ ಪ್ರತಿನಿತ್ಯ ಹೇಳಿಕೊಳ್ಳಬೇಕು. ಅಪ್ಪನಾದ ಮಗ ತನ್ನ ಯಾವುದೇ ವಿಷಯ ಹೇಳುವುದಿಲ್ಲ. ಅದರ ವಿಷಯವಾಗಿಯೇ ಇಬ್ಬರಲ್ಲೂ ಆಗಾಗ ಜಗಳ. ಮಗ ಮುನಿಸಿಕೊಂಡಾಗ, ಅಪ್ಪ ಎಣ್ಣೆ ಬಾಟಲಿ ಮುಂದಿಟ್ಟು ಕೋಪಶಮನ ಮಾಡುವನು. ಮನೆಯಲ್ಲಿ ಹಳೆಯ ಗುಜರಿಗಳೆಲ್ಲಾ ಹೋಗಿ ಹೊಸ ಹೊಸ ಗುಜರಿ ಬಂದು ಇನ್ನೂ ಕಲಾತ್ಮಕವಾಗಿರುವುದು. ಸದಾ ಬಾಗಿಲು ಹಾಕಿಕೊಂಡೇ ಸ್ವಚ್ಚ ಗಾಳಿ ಇಲ್ಲದೆ ಹೊಗೆ ತುಂಬಿಕೊಂಡಂತ ವಾತಾವರಣ. ಅಡುಗೆ ಮನೆಯಲ್ಲಿ ಅದೆಷ್ಟು ತಲೆಮಾರು ಇಲಿಗಳು ಬಂದು ಹೋದುವೋ, ಹಿಂದಿನಿಂದ ಗೋಡೆ ತೂತು ಮಾಡಿ, ಹೊರಗಿನ ಪರಿಸರಕ್ಕೂ ತಮ್ಮ ಅರಮನೆಗೂ ಮಾರ್ಗ ಕಲ್ಪಿಸಿ, ಇನ್ನೂ ನೂರಾರು ಜೀವಿಗಳ ಒಂದು ಊರೇ ಸೃಷ್ಟಿಯಾಗಿ ಎಲ್ಲರೂ ಸಾಮ್ಯದಿಂದ ಬದುಕುತ್ತಿದ್ದವು. ಇಂತಿರ್ಪ ಸಮಯದಲ್ಲಿ ಮಗನೆಂಬೋ ಅಪ್ಪನ ಎದುರು ತಂದು ಒಂದು ಹುಡುಗಿಯನ್ನು ನಿಲ್ಲಿಸಿದ ರಕ್ಷಿತ್.

ರಾಜಗೋಪಾಲನಿಗೂ ಹುಡುಗಿ ಇಷ್ಟವಾದಳು. ಆದರೆ ಆಕೆ ಮನೆಗೆ ಬಂದಿದ್ದ ಮೊದಲನೇ ದಿನವೇ ಆ ಕಲಾತ್ಮಕ ಮನೆಯನ್ನ, ಮೊದಲು ಖಾಲಿ ಮಾಡಿ, ಹೊಸ ಬಣ್ಣ ಬಳಿಸಿ, ಮುಖ್ಯವಾಗಿ ಅಡುಗೆ ಮನೆಯನ್ನು ಮತ್ತೆ ತೆರೆಯುವಂತೆ ತಾಕೀತು ಮಾಡಿ, ಇಲ್ಲವಾದಲ್ಲಿ ತಾನು ಈ ಮನೆಗೆ ಬರುವುದೇ ಇಲ್ಲವೆಂದು ಮೂಗು ಮುರಿದು ಹೋದಳು. ಮಗನೆಂಬ ತಂದೆಗೆ ಅದು ಸುತಾರಾಂ ಒಪ್ಪಿಗೆಯಿಲ್ಲ. ತಂದೆಯೆಂಬೋ ಮಗನಿಗೆ ಇನ್ನೂ ಹಳೆಯ ನೆನಪುಗಳಲ್ಲೇ ಬದುಕುವುದಕ್ಕಿಂತ ಮುಂದೆ ಸಾಗುವುದರಲ್ಲಿ ತಪ್ಪೇನೂ ಕಾಣಿಸುತ್ತಿರಲಿಲ್ಲ. ಇಂತಹ ಸಮಯದಲ್ಲೇ ರಕ್ಷಿತ್ ಗೂ ಸುಮಳಿಗೂ ಸರಳವಾಗಿ ವಿವಾಹವಾಯ್ತು. ಆಕೆ ಮನೆಗೆ ಕಾಲಿರಿಸಿದ ಮೊದಲ ದಿನವೇ ರೂಮ್ ನಲ್ಲಿದ್ದ ಗುಜರಿಯೆಲ್ಲಾ ಮನೆಯಿಂದ ಗುಜರಿ ಅಂಗಡಿ ಸೇರಿದವು. ಮನೆಯಲ್ಲಿನ ಮುಕ್ಕೋಟಿ ಜೀವಗಳು ಡೋಮೆಕ್ಸ್ ಬಂದಿದೆ ಎಂದು ಅಡ್ವರ್ಟೈಸ್ಮೆಂಟಿನಲ್ಲಿ ಓಡುತ್ತಿದ್ದ ಹಾಗೆ ಓಡ ಹತ್ತಿದವು. ಮನೆಯ ಹೊರಗೆ ಸಾಲು ಸಾಲಾಗಿ ಹಾರಿ, ತೂರಿ, ಓಡಿ ಬರುತ್ತಿದ್ದ ಜೀವಿಗಳನ್ನು ಕಂಡು ಸುತ್ತ ಮುತ್ತ ಮನೆಯವರೆಲ್ಲಾ ಬಂದು ಹಲವು ದಿನ ಜಗಳಕ್ಕೆ ಇಳಿದರು. ತಮ್ಮ ಮನೆಯಲ್ಲಿ ಸೇರಿರುವ ಜಿರಳೆ, ಹಲ್ಲಿ, ತಿಗಣೆ, ಎಲ್ಲಾ ನಿಮ್ಮ ಮನೆಯದೇ, ಅದನ್ನು ಓಡಿಸಲಿಕ್ಕೆ ಇಷ್ಟು ಖರ್ಚಾಗಿದೆ ಕೊಡಿ ಎಂದು ದುಂಬಾಲು ಬೀಳ ತೊಡಗಿದರು. ಇನ್ನು ಉಳಿದಿದ್ದು ಅಡುಗೆ ಮನೆಯೊಂದೇ. ತಂದೆಯೆಂಬ ಮಗ ತೆರೆಯೋಣವೆಂದು, ಮಗನೆಂಬಾ ತಂದೆ ಬೇಡವೆಂದು, ಹೆಂಡತಿಯೆಂಬ ಗಂಡ ಕೂಡ ತೆರೆಯೋಣವೆಂದು, “ಹೆಂಡತಿಯಾದ ಗಂಡ” ಸೈ ಎನ್ನಲು ಕೊನೆಗೂ ಇಲಿ ಸಂಸಾರಗಳು ಗುಳೆ ಕಿತ್ತವು. ಅಗ್ನಿ ಮೂಲೆಯಲ್ಲಿ ಸ್ಟೋವ್ ಹೊತ್ತಿಕೊಂಡವು. ಮಗನೆಂಬ ತಂದೆ ದಿನದ ಬಹಳ ಸಮಯ ಹೊರಗೇ ಕಳೆಯಲು ಶುರುಮಾಡಿದ. ಹೆಂಡತಿಯಾದ ತಂದೆಯೆಂಬ ಮಗ ಮನೆಯಲ್ಲೇ ಹೆಚ್ಚು ಹೊತ್ತು ಕಳೆಯಲು ಶುರುಮಾಡಿದ. ಮನೆಗೆ ಈಗ ಸ್ನೇಹಿತ, ಸಹಪಾಠಿಗಳ ಗುಂಪು ಬಂದು ತಿಂದು ತೇಗಿ ಹೋಗುತ್ತಿರುವರು.
                                                         -ಹೇಮಂತ್