ಓದಿ ಓಡಿದವರು!

Monday 27 February 2012

ನನ್ಗೊಂದಾಸೆ!


ಮುನ್ನುಡಿ: ಆಸೆಗಳೊಂದಿಗೆ ಜೀವನ. ಜೀವನದಲ್ಲಿನ ಆಸೆಗಳು.

ಆಸೆ. ನನಗೆ ಮನಸೋಯಿಚ್ಛೆ ಅಳುವಾಸೆ. ನೆಮ್ಮದಿಯಾಗಿ ನಿದ್ರಿಸುವಾಸೆ, ಹೊಟ್ಟೆತುಂಬಾ ಅಮ್ಮನ ಎದೆಹಾಲು ಸವಿಯುವಾಸೆ. ಅಪ್ಪನ ಮೇಲೆ ಸುಸು ಮಾಡಿ ತುಂಟನಗೆ ನಗುವಾಸೆ. ಸಿಕ್ಕ ಸಿಕ್ಕವರ ಬಟ್ಟೆಯ ಮೇಲೆ ಸಿಂಬಳ ಸುರಿಸುವಾಸೆ. ಆಟವಾಡುವಾಸೆ. ಸ್ವಂತವಾಗಿ ನಾನೇ ನಡೆಯುವಾಸೆ, ಸೈಕಲ್ ತುಳಿಯುವಾಸೆ, ಬಿದ್ದು ತರಚಿದ ಗಾಯವನ್ನು ಮಣ್ಣಿನಿಂದ ಲೇಪಿಸುವಾಸೆ. ಸ್ಕೂಲಿಗೆ ಹೋಗುವುದಿಲ್ಲವೆಂದು ಹಠ ಹಿಡಿಯುವಾಸೆ. ಶಾಲೆಯಲ್ಲಿ ಕೂತು ಪಾಠ ಕೇಳದೆಯೇ ನಿದ್ರಿಸುವಾಸೆ. ಓದು, ಸ್ಕೂಲು, ಹೋಮ್ ವರ್ಕ್ಸೂ, ಪಾಠ, ಪರೀಕ್ಷೆ, ಟ್ಯೂಷನ್, ಸಮವಸ್ತ್ರವಿಲ್ಲದೆ ಕಾಲ ಕಳೆಯುವಾಸೆ. ಸಾಕೆನಿಸುವಷ್ಟು ಚಾಕಲೇಟ್ ಚಪ್ಪರಿಸುವಾಸೆ. ಒಂದೇ ಒಂದು ರೂಪಾಯಿ ಹಿಡಿದು ಇಡೀ ಬಿಡಿಎ ಕಾಂಪ್ಲೆಕ್ಸ್ ಕೊಂಡುಕೊಳ್ಳುವಹಾಗೆ ಸುತ್ತುವಾಸೆ. ನೂರು ರೂಲ್ಸ್ ಹಾಕುವವರ, ಅದನ್ನು ಮುರಿದು ಮಜಾ ನೋಡುವವರನ್ನೆಲ್ಲಾ ನೋಡಿ ಸುಮ್ಮನೆ ನಗುವಾಸೆ.

ಬಣ್ಣಬಣ್ಣದ ಬ್ರಾಂಡೆಡ್ ಬಟ್ಟೆ ತೊಡುವಾಸೆ, ದಿನಕ್ಕೊಂದು ಗಾಡಿ ಏರುವಾಸೆ, ಸಿಗರೇಟ್ ರುಚಿ ನೋಡುವಾಸೆ, ಸಿಕ್ಕಸಿಕ್ಕಿದ್ದನ್ನೆಲ್ಲಾ ಕುಡಿಯುವಾಸೆ. ಸದಾ ಸ್ನೇಹಿತರೊಂದಿಗೆ ಸುತ್ತುವಾಸೆ. ನೋಡಬಾರದ ಜಾಗ, ಕೇರಿ, ಊರನ್ನೆಲ್ಲಾ ನೋಡುವಾಸೆ. ಎಲ್ಲ ರೀತಿಯ ತಿಂಡಿ ಊಟದ ರುಚಿ ನೋಡುವಾಸೆ. ಸಿಕ್ಕ ಸಿಕ್ಕ ಪುಸ್ತಕಗಳನ್ನೂ ಪರೀಕ್ಷೆಗಾಗಿ ಅಲ್ಲದಿದ್ದರೂ ಓದುವ ಆಸೆ. ಗುರಿಯೇ ಇಲ್ಲದೆ ಸುಮ್ಮನೆ ಗಾಡಿಯಲ್ಲಿ ಕೂತು ಹೋಗುತ್ತಲೇ, ಹೋಗುತ್ತಲೇ, ಹೋಗುತ್ತಲೇ ಇರುವಾಸೆ. ಖಾಲಿ ರೋಡೊಂದರಲ್ಲಿ, ನಿರ್ಜನ ಪ್ರದೇಶದಲ್ಲಿ ನಿರ್ಭಯವಾಗಿ ನಿದ್ರಿಸುವಾಸೆ. ಬೆಟ್ಟದ ತುತ್ತ ತುದಿಗೆ ಹೋಗಿ ತಂದೂರಿ ಚಿಕನ್ ಕೈಲಿ ಹಿಡಿದು ಎಳೆಯುವಾಸೆ. ಜನರೆಲ್ಲರಿಂದ ಕಳೆದುಹೋಗಿ ಪ್ರಾಣಿಗಳ ಜೊತೆ ವಾಸಿಸುವಾಸೆ. ಕೆಲವೇ ದಿನಗಳಾದರೂ ಕಾಡು ಮನುಷ್ಯರೊಂದಿಗೆ ಕಾಡು ಮನುಷ್ಯನಾಗುವಾಸೆ. ಹೊಟ್ಟೆಪಾಡಿಗೆ ದುಡಿದು ದುಡ್ಡು ಸಂಪಾದನೆ ಮಾಡಿ ಅದರಿಂದ ಆಹಾರ ಪಡೆಯುವ ಬದಲು, ನೇರವಾಗಿ ಮರದಿಂದಲೋ, ಬೇಟೆಯಾಡಿಯೋ ಹೊಟ್ಟೆತುಂಬಾ ತಿನ್ನುವಾಸೆ. ನಗರದಲ್ಲಿ ನಿಂತಲ್ಲಿಯೇ ನಿಂತು, ಎಲ್ಲಾ ಓಡುತ್ತಿರುವ ಜನರನ್ನು ನೋಡಿ ಹೊಟ್ಟೆ ಹುಣ್ಣು ಬರುವಷ್ಟು ನಗುವಾಸೆ. ಏನು ಮಾಡಬಾರದು ಎಂದರೂ ಅದನ್ನೇ ಮಾಡಿ ನಲಿವಾಸೆ. ಅಪ್ಪ ಅಮ್ಮನಿಗೆ ಬೇಕೆಂದೇ ಕೋಪ ಬರಿಸುವಾಸೆ. ಯಾರೊಂದಿಗೂ ಕಮಿಟ್, ಅಟ್ಯಾಚ್ ಆಗದೆ ಎಲ್ಲರನ್ನೂ ಪ್ರೀತಿಸುವಾಸೆ. ಇಷ್ಟ ಬಂದವರ ಜೊತೆ ಸುತ್ತಾಡುವಾಸೆ. ಎಲ್ಲರೂ ದುಡಿದಿರುವ ದುಡ್ಡು ತಂದು ಒಟ್ಟು ಹಾಕಿ ಗಾಂಧೀಜಿಯವರು ಪಾಶ್ಚಾತ್ಯ ಉಡುಪನ್ನು ಸುಟ್ಟ ಹಾಗಿ ಸುಟ್ಟುಬಿಡುವಾಸೆ. ಬೆಂಕಿಯೊಂದಿಗೆ ಸರಸವಾಡುವಾಸೆ. ಕಡಲ ಮೇಲೆ ಮರದ ದಿಮ್ಮಿಗಳನ್ನು ಕಟ್ಟಿ ದ್ರಾಕ್ಷಿ ತಿನ್ನುತ್ತಾ ಪ್ರಿಯತಮೆಯೋರ್ವಳ ಜೊತೆ ಆಕಾಶ ನೋಡುತ್ತಾ ತೇಲುವಾಸೆ. ಜಲಪಾತದೊಂದಿಗೆ ಸರ್ರನೆ ಹರಿದುಬರುವಾಸೆ. ರೆಕ್ಕೆ ಕಟ್ಟಿಕೊಂಡು ಆಕಾಶದ ತುತ್ತ ತುದಿಗೆ ಹೋಗಿ ಧುಪ್ಪನೆ ಕೆಳಗೆ ಧುಮುಕುವಾಸೆ.

ಸರಳವಾಗಿ ಸಹಜಸುಂದರಿಯೋರ್ವಳನ್ನು ಕಟ್ಟಿಕೊಳ್ಳುವಾಸೆ. ಅವಳೊಂದಿಗಿದ್ದು ಇಡೀ ಪ್ರಪಂಚವನ್ನು ಮರೆಯುವಾಸೆ, ಸುತ್ತುವಾಸೆ. ಯಾರ ತಂಟೆಗೂ ಹೋಗದೆ, ಕೆಲಸ, ಮನೆ, ಸಂಸಾರದಲ್ಲಿ ಮಗ್ನನಾಗುವಾಸೆ. ಮೌನವಾಗಿ ಸಂಸಾರ ಬೆಳೆಯುವುದನ್ನ ನೋಡುವಾಸೆ, ಕಣ್ಮುಚ್ಚಿ ಮಗಳ ಸ್ಪರ್ಶವನ್ನ ಅನುಭವಿಸುವಾಸೆ. ಕಿವಿಮುಚ್ಚಿ ಹೆಂಡತಿಯ ಎಲ್ಲಾ ಕಂಪ್ಲೈಂಟುಗಳನ್ನು ಕೇಳುವಾಸೆ. ಕಾಲಿಲ್ಲದವನಂತೆ ಮನೆಯಲ್ಲೇ ಕೂತಿರುವಾಸೆ. ಯಾವುದೇ ಕೆಲಸ ಮಾಡದೇ ವಿಶ್ರಾಂತಿಸುವ ಆಸೆ. ದೇಹ ಸ್ವಾಧೀನ ಕಳೆದುಕೊಂಡವನಂತೆ ಮಲಗಿಯೇ ಇರುವ ಆಸೆ. ತಕ್ಷಣ ಬೋಧಿವೃಕ್ಷದಡಿ ಜ್ಞಾನೋದಯವಾದಂತೆ ಮನೆಗೇ ಹಿಂತಿರುಗದಷ್ಟು ಕೆಲಸ ಮಾಡುವಾಸೆ. ದುಡ್ಡಿನ ಮೇಲೆ ದುಡ್ಡು ಬಾಚಿ, ಸಿಕ್ಕ ಸಿಕ್ಕ ಕೆಲಸಗಳಲ್ಲೆಲ್ಲಾ ಪಳಗಿ, ಕಂಡ ಕಂಡದ್ದನ್ನೆಲ್ಲಾ ರುಚಿಕರವಾದ ಕಥೆಗಳನ್ನು ಮಾಡಿ ಜನರನ್ನು ರಂಜಿಸುವಾಸೆ. ಹೆಸರು, ಅಡ್ಡ ಹೆಸರು, ಮಾಡಿ ಲೋಕಪ್ರಿಯನಾಗುವಾಸೆ. ಜನರ ವಿಶ್ವಾಸ ಗಳಿಸುವಾಸೆ. ದೋಚಲಾಗುವಷ್ಟೂ ದುಡ್ಡು ಎಲ್ಲಾ ಮಾರ್ಗಗಳಿಂದಲೂ ದೋಚುವಾಸೆ. ಬರುವ ದುಡ್ಡನ್ನು ಎಣಿಸಲಿಕ್ಕೇ ಒಂದಷ್ಟು ಜನರನ್ನ ನೇಮಿಸುವಾಸೆ. ಮಕ್ಕಳನ್ನೆಲ್ಲಾ ಅವರವರ ದಾರಿಗೆ ಬಿಟ್ಟು ದುಡಿದಿದ್ದನ್ನೆಲ್ಲಾ ಎಲ್ಲರಿಗೂ ಹಂಚಿ ಯಾರಿಗೆ ಸೇರಿದೆಯೆಂದೂ, ಯಾರಿಂದ ಬಂತೆಂದೂ ಗೊತ್ತಾಗದ ಹಾಗೆ ಎಲ್ಲ ನಷ್ಟ ಕಷ್ಟದಲ್ಲಿರುವವರಿಗೂ ಹಂಚಿ ಯಾರಿಗೂ ಗೊತ್ತಿಲ್ಲದ ಜಾಗಕ್ಕೆ ಹೋಗಿಬಿಡುವಾಸೆ. ಒಬ್ಬರಿಂದಲೂ ಎಂದೂ ಕೃತಜ್ಞತೆ ಪಡೆಯದರಿವ ಆಸೆ. ಎಲ್ಲಾ ಹಿಂದಿನ ಜೀವನವನ್ನು ಮೆಲುಕುಹಾಕುತ್ತಾ ಹೆಂಡತಿಯೊಂದಿಗೆ ಪರಿಸರದಲ್ಲಿ ಲೀನವಾಗುವಾಸೆ. ಬೆಂಕಿ ಹಚ್ಚಿಕೊಂಡೋ, ನೇಣು ಹಾಕಿಕೊಂಡೋ, ಗುಂಡು ಹೊಡೆದುಕೊಂಡೋ, ವಿಷ ಸೇವಿಸಿಯೋ, ವಿಚಿತ್ರವಾಗಿ ಸಾಯುವಾಸೆ.

ಸತ್ತ ಮೇಲೆ ಶವಕ್ಕೆ ಯಾವ ರೀತಿಯ ಹೂವಿನ ಅಲಂಕಾರ ಮಾಡದಿರಲೆಂದಾಸೆ. ಬಿದಿರು ಮೋಟಾರಿನ ಮೇಲೆ ಹೋಗದಿರಲೆಂದಾಸೆ. ಶಾಸ್ತ್ರ, ಮಂತ್ರ, ಪೂಜೆ, ಅಕ್ಕಿಕಾಳನ್ನು ಬಾಯಲ್ಲಿ ತಿನ್ನಲಾಗದಿರುವಾಗ ಹಾಕದಿರಲೆಂದಾಸೆ. ಕಣ್ಣು, ಕಿವಿ, ಹೃದಯ ಬೇಕು ಬೇಕಾದ್ದನ್ನು ಕಿತ್ತುಕೊಂಡು ಶವಸಂಸ್ಕಾರವನ್ನು ವಿಧಿವಿಧಾನಗಳೊಂದಿಗೆ ಮಾಡದಿರಲೆಂದಾಸೆ. ಮಣ್ಣೋ ಬೆಂಕಿಯೋ ಇಟ್ಟು ಯಾರೂ ಹಿಂದಿರುಗದೆಯೇ ಹೊರಟು ಹೋಗಲೆಂದಾಸೆ. ಸತ್ತ ಮೇಲೆ ಯಾರೂ ಯಾವುದೇ ಕಾರಣಕ್ಕೂ ನನ್ನನ್ನು ನೆನೆಯದಿರಲೆಂದಾಸೆ. ಯಾವುದೇ ರೀತಿಯ ಶೋಕಾಚರಣೆಯನ್ನು ಯಾರೂ ಯಾವುದೇ ರೀತಿಯಲ್ಲೂ ಮಾಡದೆ ಇರಲೆಂದಾಸೆ. ತಿಥಿಯ ಹೆಸರಿನಲ್ಲಿ ಪಕ್ಷಿ, ಪಶುವಿನೊಡಗೂಡಿ ಯಾವ ಬಂಧುಗಳೂ ವಡೆ ಪಾಯಸ ಮೆಲ್ಲದಿರಲೆಂದಾಸೆ. ಕುಂಕುಮ, ಹಾರ ಹಾಕಿಸಿಕೊಂಡ ಫೋಟೋ ಫ್ರೇಮ್ ಆಗದಿರಲೆಂದಾಸೆ. ಆಸೆ.

ಹಿನ್ನುಡಿ: ಆಸೆಗಳಿಗೆ ಕೊನೆಯಿಲ್ಲದಿರಲಿ… 

Tuesday 21 February 2012

ಸಾಕ್ಷಾತ್ಕಾರ!
ಮುನ್ನುಡಿ: ಇದೊಂದು ಸ್ವಗತ ಲಹರಿ. ನಿಮ್ಮ ನಿಮ್ಮ ಚೌಕಟ್ಟಿನಿಂದ ಹೊರಗೆ ಚಿಂತಿಸಲಿಷ್ಟಪಡದವರು ದಯವಿಟ್ಟು ಮುಂದುವರೆಯಬೇಡಿ.

ಇವನ ಕೈಯಲ್ಲಿ ಒಂದು ಅಸ್ತ್ರವಿದೆ. ಇವನು ಮನಸಿಗೆ ಬಂದದ್ದು ಮಾಡುತ್ತಾನೆ. ಇವನಿಗೆ ಕೋಪ ಬರಿಸಿದರೆ ವಿನಾಶ ಖಂಡಿತ. ತಪ್ಪು ದಾರಿಯಲ್ಲಿದ್ದವರಿಗೆ ಇವನು ತನ್ನದೇ ಆದ ರೀತಿಯಲ್ಲಿ ಪಾಠ ಕಲಿಸುತ್ತಾನೆ. ಇವನಿಗೆ ಯಾರ ಪ್ರಾಣ ಬೇಕಾದರೂ ತೆಗೆದುಕೊಳ್ಳುವ ಸ್ವಯಂ ಘೋಷಿತ ಹಕ್ಕಿದೆ. ಇವನ ದಾರಿ ತುಳಿಯದವರನ್ನು, ಇವನಿಗೆ ನಿಷ್ಠನಾಗಿರದವರನ್ನು ಎಲ್ಲಿ ಹೇಗೆ ಬೇಕಾದರೂ ಮುಗಿಸುತ್ತಾನೆ. ಇವನಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ತಕ್ಕ ಶಾಸ್ತಿ ಖಂಡಿತ. ಇವನನ್ನು ಕಾಣಲು ಇವನಿರುವ ಸ್ಥಳಕ್ಕೇ ಹೋಗಬೇಕು. ಇವನಿಗೆ ತುಂಬಾ ಜನ ಪರಿಪಾಲಕರಿದ್ದಾರೆ. ಇವನಿಗೆ ದಕ್ಷಿಣೆ ಸದಾ ಸಲ್ಲಿಸಲೇ ಬೇಕು. ಇವನ ಬಗ್ಗೆ ಭಯವನ್ನಿಟ್ಟು ಎಲ್ಲರೂ ಬದುಕಬೇಕು. ಮರೆತರೆ ಮರಣದಲ್ಲೂ ಕೈ ಹಿಡಿಯುವುದಿಲ್ಲ. ಇವನು ಹೇಳುವುದು ಅಂತಿಮ. ಇವನು ಯಾರ ಮಾತಿಗೂ ಅಂಜುವುದಿಲ್ಲ. ಯಾರ ಮಾತನ್ನೂ ಪರಿಗಣಿಸುವುದಿಲ್ಲ. ಯಾರೂ ವಿರೋಧಿಸುವಹಾಗಿಲ್ಲ. ಯಾರಿಗೂ ಪ್ರಶ್ನಿಸುವ ಹಕ್ಕಿಲ್ಲ. ನನ್ನ ಎಡಗಡೆಗೆ ಇವನನ್ನು ಒಂದು ಕುರ್ಚಿ ಹಾಕಿ ಕುಳ್ಳಿರಿಸಿದ್ದೆ. ಬಲಗಡೆಗೆ ಇನ್ನೊಬ್ಬ ವಿಶಿಷ್ಟವಾದ ಇಂದು(ಶಿವರಾತ್ರಿಯ ದಿನ) ಭಯಾನಕ ಬಿಝಿಯಾಗಿರುವ ವ್ಯಕ್ತಿತ್ವವನ್ನು ಹಿಡಿದುತಂದು ಕೂರಿಸಿದ್ದೆ. ಈತ ತನ್ನದೇ ಆದ ವಿಚಿತ್ರ ಆಸನವನ್ನು ತಂದು ಅದರ ಮೇಲೆಯೇ ಕುಳಿತಿದ್ದ. ಈ ಮೇಲೆ ಹೇಳಿರುವ ಎಲ್ಲಾ ಗುಣಲಕ್ಷಣಗಳನ್ನು ಇವನಿಗೂ ಆರೋಪಿಸಬಹುದು.

ಇಬ್ಬರೂ ನೋಡಲು ಒಂದೇ ರೀತಿ ಕಂಡರೂ ಇಬ್ಬರ ವ್ಯಕ್ತಿತ್ವ ಅಜಗಜಾಂತರ ವ್ಯತ್ಯಾಸವನ್ನು ಹೊಂದಿತ್ತು. ಆದರೂ ಇಬ್ಬರನ್ನೂ ನಾವು ಒಂದೇ ತಕ್ಕಡಿಯಲ್ಲಿ ತೂಗಲು ಶುರುಮಾಡಿರುವುದರಿಂದ ಒಮ್ಮೆ ಇವರನ್ನು ಎದುರುಬದುರು ಕುಳ್ಳಿರಿಸಿ ನನಗೆ ಇವರಿಬ್ಬರ ನಡುವೆ ಇರುವ ಗೊಂದಲವನ್ನು ನಿವಾರಿಸಿಕೊಳ್ಳಲೋಸಗ ಇಂದಿನ ಶುಭಸಂದರ್ಭದಲ್ಲಿ ಕರೆಸಿದ್ದೆ. ಇಬ್ಬರೂ ಅನಾವಶ್ಯಕವಾಗಿ ಮಾತನಾಡದೇ ಒಂದೇ ರೀತಿಯ ಗಾಂಭೀರ್ಯತೆಯನ್ನು ಮೆರೆಯುತ್ತಿದ್ದರು. ಆದರೂ ಅದೇನೋ ಇಬ್ಬರ ಮುಖದಲ್ಲೂ ಒಂದೇ ರೀತಿಯ ಕಾಂತಿಯಿತ್ತು. ನನ್ನ ಮನಸಿನಲ್ಲಿ ಇಬ್ಬರನ್ನು ತಾಳೆನೋಡುತ್ತಿದ್ದಂತೆಯೂ ಇನ್ನೂ ಗೊಂದಲಗಳು ಹುಟ್ಟಿ, ವಿಚಾರಲಹರಿಯೇ ಹರಿಯುತ್ತಿತ್ತು.

ನನ್ನ ಬಲಗಡೆಯಿದ್ದವರಿಂದ ನಾನು ನನ್ನ ಪ್ರಶ್ನೆ ಶುರುಮಾಡಿದೆ. ಇಷ್ಟೆಲ್ಲಾ ಜನರಿಂದ ಇಷ್ಟು ಕೋರಿಕೆಗಳು, ಸಮಸ್ಯೆಗಳು, ಅಹವಾಲುಗಳು, ಬೇಡಿಕೆಗಳು, ಮುಂತಾದವು ನಿನ್ನ ಬಳಿ ಬಂದರೂ ಹೇಗೆ ನೀನು ಹೀಗೆ ಮಂದಹಾಸದೊಂದಿಗೆ ಕುಳಿತಿದ್ದೀಯ. ಏನಿದರ ರಹಸ್ಯ ಎಂದು ಕೇಳಿದ್ದಕ್ಕೆ, ಆತನಿಂದ ಬಂದ ಉತ್ತರ ಮಂದಹಾಸದ ನಿಶ್ಕಲ್ಮಶ ಮೋರೆಯಷ್ಟೇ. ಆದರೆ ಆತ ಉತ್ತರಿಸದಿದ್ದರೂ ಉತ್ತರಿಸಿದಹಾಗಿತ್ತು. ಉತ್ತರ ನನ್ನ ವಿವೇಚನೆಗೆ ತಲುಪಿತು. ಅವನ ‘ನಿರುತ್ತರ’ವೇ ನನ್ನ ಪ್ರಶ್ನೆಗೆ ಉತ್ತರವೆನಿಸುತ್ತದೆ.

ನನ್ನ ಎಡಗಡೆಯಿದ್ದ ಮನುಷ್ಯನನ್ನುದ್ದೇಶಿಸಿ ನೀನು ಮಾಡುತ್ತಿರುವ ಕೆಲಸ, ನಿನ್ನ ಮಾರ್ಗ ತಪ್ಪಲ್ಲವೇ? ಎಂದು ಕೇಳಿದರೆ, ನಾನು ಮಾಡುತ್ತಿರುವುದು ತಪ್ಪಾದರೆ, ಜನ ಸಾಮಾನ್ಯರು ಮಾಡುತ್ತಿರುವುದೂ ಕೂಡ ತಪ್ಪು. ನನಗೆ ನಾನು ಮಾಡುತ್ತಿರುವುದು ಸರಿ ಎಂದೆನಿಸಿದ್ದಕ್ಕೇ ಮಾಡುತ್ತಿರುವುದು. ಜನ ಅವರಿಗೆ ಸರಿ ಎನಿಸಿದ್ದು ಅವರು ಮಾಡುತ್ತಿದ್ದಾರೆ. ಇಲ್ಲಿ ತಪ್ಪೇನಿದೆ ಎಂದು ಮತ್ತೆ ನನ್ನನ್ನೇ ಮರುಪ್ರಶ್ನೆ ಮಾಡಿದ. ಉತ್ತರಿಸುವ ಶಕ್ತಿ ನನ್ನಲ್ಲಿರಲಿಲ್ಲ.

ಮತ್ತೆ ಬಲಗಡೆ ತಿರುಗಿ ನೀವು ಈ ಎಡಗಡೆ ಕುಳಿತಿರುವ ಮನುಷ್ಯನಿಗಿಂತ ಯಾವುದೇ ರೀತಿಯಲ್ಲಿ ಭಿನ್ನವಾಗಿ ಕಾಣುತ್ತಿಲ್ಲ ನನಗೆ ಅವನು ಮಾಡುತ್ತಿರುವ ಭಯೋತ್ಪಾದನೆ ನೀವೂ ಸಹ ಮಾಡುತ್ತಿದ್ದೀರಿ. ಮಕ್ಕಳನ್ನು ಪೋಷಕರು, ಹಿರಿಯರು, ಗುರುಗಳು ತಮಗೆ ಸರಿ ಎನಿಸಿದ ಮಾರ್ಗ ಅನುಸರಿಸುವಂತೆ ಮಾಡಲು ನಿಮ್ಮನ್ನು ಉಪಯೋಗಿಸಿ, ಭಯ ಹುಟ್ಟಿಸುತ್ತಾರೆ. ಕದಿಯಬಾರದು ‘ನೀನು’ ಕಣ್ಣು ಕಿತ್ಕೋತೀಯ, ಸುಳ್ಳು ಹೇಳಬಾರದು ‘ನೀನು’ ಬಾಯಿ ಕಸಿದುಕೊಳ್ತೀಯ, ನಿನಗೆ ಪ್ರತಿದಿನ ನಮಸ್ಕರಿಸಬೇಕು ಇಲ್ಲವಾದಲ್ಲಿ ಮುನಿಸಿಕೊಂಡು ಶಾಪ ಕೊಡುತ್ತೀಯೆ, ಇಂಥ ದಿನ ಇಂಥ ಆಹಾರ ತಿನ್ನಕೂಡದು ಇಲ್ಲವಾದಲ್ಲಿ ನಿನ್ನ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ನಿನ್ನನ್ನು ನಂಬದವರು, ಪೂಜಿಸದವರು ಹಾಳಾಗಿ ಹೋಗುತ್ತಾರೆ. ನಿನ್ನ ಪ್ರಸಾದವನ್ನು ಕಣ್ಣಿಗೊತ್ತಿಕೊಳ್ಳಬೇಕು, ನಿನ್ನನ್ನು ಸಂಪ್ರೀತಗೊಳಿಸಲು ಹಣವ್ಯಯ ಮಾಡಿ ಅರ್ಚನಾದಿಗಳನ್ನು ಮಾಡಿಸಬೇಕು, ನೀನು ಮನೆ ಮನೆಯಲ್ಲಿ ನೆಲೆಸಲು ನಿನ್ನನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ನಿನ್ನನ್ನು ಬಯ್ಯಬಾರದು, ನಿನ್ನನ್ನು ಸದಾ ಹೊಗಳುತ್ತಲೇ ಇರಬೇಕು, ನಿನ್ನನ್ನು ಪ್ರಶ್ನಿಸಬಾರದು. ಇಲ್ಲಿಂದಾ ಹಿಡಿದು ನಿನ್ನ ಹೆಸರಿನಲ್ಲಿ ಮೊಬೈಲ್ ಗೆ ಅಥವಾ ಫ಼ೇಸ್ ಬುಕ್ ನಲ್ಲಿ ಮೆಸೇಜ್ ಬಂದರೆ ಅದನ್ನ ಮತ್ತೊಂದಷ್ಟು ಜನರಿಗೆ ಕಳುಹಿಸಿದರೆ ನಿನ್ನ ಪ್ರೀತಿಗೆ ಪಾತ್ರರಾಗಬಹುದು ಎಂಬುವ ತನಕ ಮತ್ತು ಇನ್ನೂ ಮುಂದುವರೆದು ಬೀದಿ ಬೀದಿಗಳಲ್ಲಿ ನಿನ್ನ ಹೆಸರನ್ನು ಉಪಯೋಗಿಸಿ ಜನ ಮೂತ್ರ ವಿಸರ್ಜನೆ ಮಾಡದ ಹಾಗೆ ತಡೆಗಟ್ಟುವಲ್ಲಿ ನಿನ್ನ ಭಯೋತ್ಪಾದಕ ಗುಣ ಸಹಾಯಕವಾಗುತ್ತಿದೆ. ಏನು ಹೇಳುವೆ ಇದರ ಬಗ್ಗೆ ಎಂದು ಕೇಳಿದ್ದಕ್ಕೆ. ಶಾಂತವಾಗೇ ಉತ್ತರಿಸಿದ. ನೀನು ಕೇಳಿದ ಅಷ್ಟೂ ಪ್ರಶ್ನೆಗಳಿಗೆ ನಾನು ಜವಾಬ್ದಾರನಲ್ಲ. ನಾನು ಅಲ್ಲೆಲ್ಲೂ ಇಲ್ಲವೇ ಇಲ್ಲ. ಭಕ್ತಿ ಇದ್ದಲ್ಲಿ ನಾನಿದ್ದೇನೆ ಎಂದು ಮಾತ್ರ ಹೇಳಿದ.

ನನ್ನ ಎಡಗಡೆ ಇದ್ದ ವ್ಯಕ್ತಿ ಮಧ್ಯೆ ಬಾಯಿ ಹಾಕಿ ಇವರು ದೇವಸ್ಥಾನದಲ್ಲಿ ಮತ್ರ ಇರೋದು ಎಂದು ಹೇಳಿದ. ಅದಕ್ಕೆ ಬಲಗಡೆ ಇದ್ದಾತ ಮನೆ ಮನೆಯಲ್ಲಿ, ಮನ ಮನದಲ್ಲೂ, ಕಣ ಕಣದಲ್ಲೂ ಇದ್ದೇನೆ ಎಂದ. ಎಡಗಡೆ ಇದ್ದಾತ, ಮತ್ತೆ ಜನ ದೇವಸ್ಥಾನಕ್ಕೆ ಯಾಕೆ ಬರುತ್ತಾರೆ ಎಂದು ಪ್ರಶ್ನೆ ಮುಂದುವರೆಸಿದ, ತಮ್ಮಲ್ಲಿರುವ ನನ್ನನ್ನು ಕಾಣಲಸಮರ್ಥರು ಹುಡುಕಿಹೊರಡುತ್ತಾರೆ ಎಂದು ತೀಕ್ಷ್ಣವಾಗಿ ಉತ್ತರ ಬಂತು. ಎಡ ವ್ಯಕ್ತಿ ಮಾತು ಮುಂದುವರೆಸುತ್ತಾ ನೀನು ಮೋಸಗಾರ ನಿನ್ನ ಕೈಯಲ್ಲಿ ಏನೂ ಆಗಲ್ಲ, ನಾನು ಇಷ್ಟೆಲ್ಲಾ ಜನರನ್ನ ಸಾಮೂಹಿಕವಾಗಿ ಮುಗಿಸಿದ್ದೇನೆ ನೀನು ನಿಜವಾಗಲೂ ಶಕ್ತಿಯುತನಾಗಿದ್ದಲ್ಲಿ ನನ್ನನ್ನು ಇಷ್ಟು ರಾಜಾರೋಷವಾಗಿ ಓಡಾಡಲು ಬಿಡುತ್ತಿದ್ದೆಯಾ ಎಂದು ಕೇಳಿದ. ಉತ್ತರ ಏನು ಬರಬಹುದೆಂಬ ಕುತೂಹಲ ನನಗೇ ಹೆಚ್ಚಿತ್ತು. ಉತ್ತರ ಶಾಂತವಾಗೇ ಬಂತು. ತಪ್ಪು ಮಾಡಿದವರನ್ನೆಲ್ಲಾ ಹಿಡಿದು ಶಿಕ್ಷಿಸುತ್ತಾ ಕೂರುವ ಕೆಲಸ ನನ್ನದಲ್ಲ. ನೀನು ಭಯೋತ್ಪಾದನೆಯಲ್ಲಿ ತೊಡಗಿದ್ದಲ್ಲಿ, ಭಯೋತ್ಪಾದನೆ ನಿನ್ನನ್ನು ಕರೆದೊಯ್ಯುತ್ತದೆ. ಎಲ್ಲಾ ಮನುಷ್ಯರು ಮಾಡಿಕೊಂಡಿರುವ ಆಯಾ ಕಾಲದ ವ್ಯವಸ್ಥ್ಯಾನುಸಾರವಾಗಿ ಜಗತ್ತು ನಡೆಯುತ್ತದಷ್ಟೇ. ಏನೇ ಆದರೂ ಕಾರಣಕರ್ತ ಮನುಷ್ಯನೇ ಅಂತಿಮವಾಗಿ.

ಮತ್ತೆ ನಿನ್ನ ಪಾತ್ರವೇನು ಎಂದು ಕುತೂಹಲ ತಡೆಯಲಾಗದೆ ನಾನೇ ಕೇಳಿದೆ. ಅದೇ ತಾಳ್ಮೆಯಿಂದಲೇ ಉತ್ತರಿಸಿದ ಆತ, ನಾನು ಏನೂ ಅಲ್ಲ. ನಾನು ಹೊರಗಿಲ್ಲ, ನಿಮ್ಮ ಒಳಗಿದ್ದೇನೆ, ನನ್ನನ್ನ ನೀವು ಕಂಡುಕೊಂಡಹಾಗಿ ಕಾಣಸಿಗುತ್ತೇನೆ. ಬಳಸಿದ ಹಾಗೆ ಬಳಕೆಯಾಗುತ್ತೇನೆ. ನಾನಿಲ್ಲ ಎಂದರೆ ನಾನಿಲ್ಲ, ನಾನಿದ್ದೇನೆಂದರೆ ನಿಮ್ಮ ಇಷ್ಟಾರ್ಥ ರೂಪದಲ್ಲಿ ಇದ್ದೇನೆ. ಇದ್ದೇನೆ ಎಂಬುದೇ ನಂಬಿಕೆ. ಆ ನಂಬಿಕೆಯಷ್ಟೇ ನಾನು. ಇನ್ನೇನೂ ಇಲ್ಲ.

ಇವರೊಂದಿಗೆ ಮಾತುಕತೆ ಮುಂದುವರೆಯುತ್ತಲೇ ಹೋಯಿತು. ದೇವರ ಹೆಸರಿನಲ್ಲಿ ನಾವು ಮಾಡುತ್ತಿದ್ದ ಭಯೋತ್ಪಾದನೆಯನ್ನು ನೆನೆಸಿಕೊಂಡಾಗ ಈಗ ನಗು ಬರುತ್ತಲಿತ್ತು. ಯಾವ ರೂಪದಲ್ಲಿ ಮಾಡಿದರೂ ಭಯೋತ್ಪಾದನೆಯು ಒಂದು ಕ್ರೌರ್ಯ ಪ್ರದರ್ಶನವಷ್ಟೇ. ಎಡಗಡೆ ಇದ್ದ ಭಯೋತ್ಪಾದಕ ನಮ್ಮೆಲ್ಲರ ಪ್ರತೀಕವಾಗೇ ಕುಳಿತು ವಾದಿಸುತ್ತಿದ್ದ. ಬಲಗಡೆ ಇದ್ದ ನಮ್ಮೊಳಗಿರುವ ದೇವರು ನಿಜ ಸ್ವರೂಪದ ಅರಿವು ಮೂಡಿಸಲು ಶ್ರಮ ಪಡದೆ ಹಲವು ಬಾರಿ ನಿರುತ್ತರನಾಗಿ ನೆಮ್ಮದಿಯಾಗಿ ಇದ್ದ. ಇವರಿಬ್ಬರ ನಡುವೆ ಇದ್ದ ನಾನು ಇನ್ನು ಮುಂದೆ ನನ್ನಲ್ಲಿರುವ ದೇವರನ್ನೇ ಪೂಜಿಸುವ, ಆರಾಧಿಸುವ, ದಾರಿಯಲ್ಲಿ ಮುನ್ನಡೆಯಬೇಕೆಂದು ತೀರ್ಮಾನಿಸಿದ್ದೆ. ಮತ್ತೇನೇ ಸಂಶಯ, ಪ್ರಶ್ನೆಗಳು ಹುಟ್ಟಿದಲ್ಲಿ ನನ್ನ ಒಳಗಿರುವ ದೇವರನ್ನೇ ಯಾವ ಭಯವಿಲ್ಲದೇ, ಯಾವಾಗ ಬೇಕೆಂದರೂ ಸಂಪರ್ಕಿಸಿ ಸಂದರ್ಶನ ಮಾಡುವ ಸ್ವಾತಂತ್ರ್ಯವಿತ್ತು. ನನ್ನ ಶಿವರಾತ್ರಿಯ ಜಾಗರಣೆ ಹೀಗೆ ಮುಕ್ತಾಯವಾಯ್ತು. ಇದು ನನ್ನ ಸಾಕ್ಷಾತ್ಕಾರವೆಂಬುದು ನನ್ನ “ನಂಬಿಕೆ”. ನನ್ನ ದೇವರನ್ನು ನಾನು ನನ್ನಲ್ಲೇ ಕಂಡುಕೊಂಡಿದ್ದೇನೆ. ನನ್ನ ದೇವರ ಹೆಸರು “ದೇವರು” ಅಷ್ಟೇ. ಈ ನನ್ನ ದೇವರು ಈ ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ದೇವರುಗಳ ದೇವರು. ಅವರೆಲ್ಲರ ಮೇಲೆ ಕೆಲಸವಿಲ್ಲದೆ ಕೇವಲ ನನಗಾಗಿ ಮಾತ್ರ ದುಡಿಯುತ್ತಾ, ನನಗೆ ಸಹಾಯ ಮಾಡುತ್ತಾ, ನನ್ನ ಕೆಲಸಗಳಿಗೆ ಹುರಿದುಂಬಿಸುತ್ತಾ, ನನ್ನ ಸ್ಫೂರ್ತಿಯಾಗುತ್ತಾ, ಸ್ನೇಹಿತನಾಗಿ ಸಲಹೆ ನೀಡುತ್ತಾ, ಗುರುವಾಗಿ ಹರಸುತ್ತಾ, ಎಲ್ಲ ದೇವರುಗಳ ವರಗಳನ್ನು, ಶಾಪಗಳನ್ನು ಮನ್ನ ಮಾಡುತ್ತಾ ನನ್ನನ್ನು ಕಾಪಾಡುತ್ತಾ, ನನ್ನ ವಿವೇಚನೆಯನ್ನು ಚುರುಕುಗೊಳಿಸುತ್ತಾ, ನನ್ನನ್ನು ಪ್ರತಿ ಹೆಜ್ಜೆಗೂ ಪ್ರಶ್ನಿಸುತ್ತಾ, ಲಾಲಿಸುತ್ತಾ, ಪಾಲಿಸುತ್ತಾ, ನಲಿಸುತ್ತಾ, ಉತ್ತೇಜಿಸುತ್ತಾ, ವಿನೋದ ಮಾಡುತ್ತಾ, ತಂಟೆ ಮಾಡುತ್ತಾ, ಪ್ರಯೋಗ ಮಾಡುತ್ತಾ, ಇತ್ಯಾದಿ ಇತ್ಯಾದಿ ಅನುಭವ ನೀಡುತ್ತಾ ಕೈ ಹಿಡಿದು ಸದಾ ಜೊತೆಯಲ್ಲಿ ಮುಂದುವರೆಯುತ್ತಿದ್ದಾನೆ.

ಹಿನ್ನುಡಿ: ಎಲ್ಲರೂ ಸರಿ! ಎಲ್ಲರೂ ತಪ್ಪು! ನಿಮ್ಮ ನಂಬಿಕೆಯೇ ನಿಮ್ಮ ಸಾಕ್ಷಾತ್ಕಾರಕ್ಕೆ ದಾರಿಮಾಡಿಕೊಡಲಿ. 

Sunday 19 February 2012

!


ಇವನು ವಿಚಿತ್ರ ಆಸಾಮಿ. 

ಇವನು ಕೂದಲು ಬಾಚುತ್ತಿದ್ದ. ಮುಖಕ್ಕೆ ಬಣ್ಣ ಹಚ್ಚುತ್ತಿದ್ದ. ದಾಡಿ ಬೋಳಿಸುತ್ತಿದ್ದ. ಬಟ್ಟೆ ಹಾಕುತಿದ್ದ. ಕಾಲಿಗೆ ಶೂ ಕೂಡ ಹಾಕುತಿದ್ದ. ಆದರೆ ಈ ಎಲ್ಲಾ ಕೆಲಸಗಳನ್ನ ಯಾರು ಯಾರಿಗೋ ಮಾಡುವಾಗ ಮನಸಿಟ್ಟು ಮಾಡಲೇ ಇಲ್ಲ. ಹಾಗಾಗಿ ಮತ್ತೆ ನಿರುದ್ಯೋಗಿ ಆಗಿದ್ದ. 
ಇವನ ತಲೆ ತುಂಬಾ ಕೂದಲಿತ್ತು, ಸುಂದರವಾದ ಮುಖ, ತರಹೇವಾರಿ ಬಟ್ಟೆಗಳನ್ನು ಧರಿಸುತಿದ್ದ. ಬಿಸಿಲಲ್ಲಿ ನಿಂತಾಗ ವಿಗ್ ತೆಗೆದು ತಲೆ ಕೆರೆದುಕೊಳ್ಳುತ್ತಿದ್ದ. ಮಳೆಯಲ್ಲಿ ನಿಂತರೆ ಮುಖದ ಬಣ್ಣ ನೀರಿನಲ್ಲಿ ಕರಗಿಹೋಗುತಿತ್ತು. ಬಟ್ಟೆಗಳನ್ನು ಬಳಸಿದ ನಂತರ ಹಿಂತಿರುಗಿಸಿ ಬರುತ್ತಿದ್ದ. ಅದೇ ಹರಕಲು ಬಟ್ಟೆ ಮತ್ತೆ ಅಂತಿಮವಾಗಿ ಉಳಿದಿರುತ್ತಿತ್ತು. 
ಇವನು ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ಆದರೆ ಈತ ಅನಾತ. ಇವನನ್ನು ಹಲವಾರು ಜನ ಪ್ರೀತಿಸುತ್ತಿದ್ದರು್ ಆದರೆ ಈತ ಏಕಾಂಗಿ. ಇವನು ಆರೋಗ್ಯವಾಗಿದ್ದ ಆದರೆ ಇವನಿಗೆ ಹಲವಾರು ರೋಗಗಳಿದ್ದವು. ಇವನ ಹಲವಾರು ಮನೋರೋಗಗಳನ್ನು ಗುಣಪಡಿಸಿಕೊಳ್ಳುವಷ್ಟರಲ್ಲಿ, ದೇಹಾರೋಗ್ಯ ಹದಗೆಟ್ಟಿತ್ತು. 
ಇವನು ಅತ್ಯದ್ಭುತ ಮಾತುಗಾರ, ಮಾತಿನ ಮೋಡಿಗಾರ ಆದರೆ ಈತ ಮೂಕ. ಇವನು ಚಿರಪರಿಚಿತ, ಜಗಜನಿತ ಆದರೆ ಈತ ಅಪರಿಚಿತ.
ಈತ ನನ್ನ ಸ್ನೇಹಿತ ಆದರೆ ಇವನಿಗೆ ಯಾರೂ ಸ್ನೇಹಿತರೇ ಇರಲಿಲ್ಲ. ಇವನ ಬಳಿ ಸಕಲೈಶ್ವರ್ಯವಿತ್ತು ಆದರೆ ಈತ ಬಡವ. ಇವನು ಸದಾ ನಗುತ್ತಲೇ ಇದ್ದ ಆದರೆ ಕೊನೆಗೂ ಸಂತೋಷ ಪಡಲೇ ಇಲ್ಲ. ಇವನಿಗೆ ಹಲವಾರು ಹೆಸರುಗಳಿದ್ದವು ಆದರೂ ಹೇಳಹೆಸರಿಲ್ಲದವನಾಗಿದ್ದ. ಇಂದು ಕೂಡ ಈತನನ್ನು ಕಂಡೆ, ಆದರೆ ಈತ ಸತ್ತು ಹಲವಾರು ವರುಷಗಳಾಯ್ತು.

ಇವನ ಜೀವನ ನನ್ನಲ್ಲಿ ಇನ್ನೂ ಹಲವಾರು ಗೊಂದಲಗಳನ್ನು ಸೃಷ್ಟಿಸಿದ್ದವು. ಇವನು ದೇವರಿಗೆ ಪೂಜೆ ಮಾಡಿದ್ದೇ ಇಲ್ಲ. ದೈವೀಭಕ್ತನೆಂದು ಮನಸಾರೆ ಹೇಳಿಕೊಳ್ಳುತ್ತಿದ್ದ. ಇವನದೇ ಸಂಸಾರವಿತ್ತು. ಇವನು ಮದುವೆಯೇ ಅಗಿರಲಿಲ್ಲ. ಇವನನ್ನು ಬಲ್ಲವರು ಕರುಣಾಮಯಿಯೆಂದು ಪೂಜಿಸಿತ್ತಿದ್ದರು, ಇವನು ಇರುವವರೆಗೂ ಒಂದು ನಯಾ ಪೈಸಾ ದಾನ ಮಾಡಿದ್ದೇ ಇಲ್ಲ. ಇವನನ್ನು ಹಲವರು ಗುರುವೆಂದು ಸ್ವೀಕರಿಸಿದ್ದರು ಆದರೆ ಇವನು ಎಂದೂ ಯಾರಿಗೂ ಏನೂ ಕಲಿಸಲು ಪ್ರಯತ್ನಿಸಲೂ ಇಲ್ಲ.
ಇವನು ಹಲವಾರು ಹೆಣ್ಣುಗಳ ಸಹವಾಸ ಮಾಡಿದ್ದ, ಆದರೆ ಎಂದೂ ಯಾರೊಂದಿಗೂ ಅನೈತಿಕವಾಗಿ ನಡೆದುಕೊಂಡೇ ಇರಲಿಲ್ಲ. ಇವನು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಸಹ ಸೋಲಿನ ಬೇಗೆಯಲ್ಲಿ ಬೇಯುತ್ತಲೇ ಇದ್ದ. ಈತ ನಿರಂತರ ಪರಿಶ್ರಮ ಪಡುತ್ತಲೇ ಇದ್ದ ಆದರೂ ಸುಖಾಸೀನನಾಗೇ ಕಂಡ. ಇವನು ಇವನದ್ದೇ ಆದ ಪ್ರತ್ಯೇಕ ದಾರಿ ಸೃಷ್ಟಿಸಿ ಓಡುತ್ತಿದ್ದ ಆದರೂ ಇವನಿಗೆ ಸ್ಫರ್ಧಿಗಳಿದ್ದರು. 
ಇವನು ಹಲವಾರು ಬಾರಿ ಹುಟ್ಟಿ ಹಲವಾರು ಬಾರಿ ಸತ್ತಿದ್ದ ಆದರೆ ಇವನಿಗೆ ಇದ್ದದ್ದು ಒಂದೇ ಜೀವನ. ಈಗಲೂ ಸತ್ತು ಹಲವಾರು ವರುಷಗಳಾಯ್ತು ಆದರೂ ಬದುಕಿದ್ದ. ನಮ್ಮ ಜೊತೆಯಲ್ಲೇ ಓಡಾಡಿಕೊಂಡಿದ್ದ ಆದರೂ ನೂರು ಊರುಗಳಾಚೆ, ಜನರಿಂದ ತುಂಬಾ ದೂರವಿದ್ದ. 

ಇವನಿಗೂ ಕೂಡ ಹೃದಯವೆಂಬುದಿತ್ತು ಅದೂ ಕೂಡ ಮಿಡಿಯುತ್ತಲಿತ್ತು. ಇವನಿಗೂ ದೇಹವೆಂಬುದಿತ್ತು. ಇವನೂ ಮನುಷ್ಯನಾಗಿದ್ದ. ಕಲಾವಿದ!

Friday 17 February 2012

ನಾನೇ ಮನುಷ್ಯ?!


ಮುನ್ನುಡಿ: ಇದೊಂದು ಪ್ರಯೋಗ. ಈ ಕಥೆ ನೇರವಾಗಿ ಓದಿಸಿಕೊಂಡು ಹೋಗುವುದಿಲ್ಲ. ಇಲ್ಲಿರುವ ಕಥೆಯ ಹಿಂದೆ ಕೋಟ್ಯಾಂತರ ಕಥೆಗಳಿವೆ. ಎಲ್ಲವನ್ನು ಓದುಗನ ಸಾಮರ್ಥ್ಯಕ್ಕೆ, ತರ್ಕಕ್ಕೆ, ಆಲೋಚನೆಗೆ, ಅಂತಿಮವಾಗಿ ಬಿಟ್ಟಿದ್ದೇನೆ. ನಿಮ್ಮ ಬುದ್ಧಿಮತ್ತೆಗೆ ತಕ್ಕಂತೆ ಕಥೆಯ ಅರ್ಥ ರೂಪುಗೊಳ್ಳುತ್ತದ್ದೆ. ಪ್ರಶ್ನೆಗಳಿದ್ದಲ್ಲಿ ಮುಕ್ತವಾಗಿ ಚರ್ಚಿಸಿ. ಧನ್ಯವಾದಗಳು!
----------------------------------------------------------------------------------------------------------------------------------

ಕೊರಳಿನಿಂದ ಚಿಲುಮೆಯೋಪಾದಿಯಲ್ಲಿ ರಕ್ತ ಚಿಮ್ಮುತ್ತಿತ್ತು. ಹಾಡಿಗೆ ಶೃತಿ ಸೇರಿದಂತೆ ಸಮಸ್ತ ದೇಹವು ಅಲೆಅಲೆಯಾಗಿ ನಲುಗುತ್ತಲಿತ್ತು. ರಕ್ತ ಹರಿದು ಆ ಕ್ಲೀನಾದ ನೆಲದ ಬಿಳಿಯ ಟೈಲ್ಸ್ ಮೇಲೆ ಕೆಂಪು ಕಾಲುವೆಯನ್ನು ರಚಿಸಿತ್ತು. ಗಂಡನ ದೇಹದ ರಕ್ತ, ಪಕ್ಕದಲ್ಲಿ ಅದೇ ಸ್ಥಿತಿಯಲ್ಲಿ ಬಿದ್ದಿದ್ದ ಹೆಂಡತಿಯ ದೇಹದ ರಕ್ತದೊಂದಿಗೆ ಬೆರೆತು ಇನ್ನೂ ದೊಡ್ಡ ಕಾಲುವೆಯಂತೆ ಹರಿಯುತ್ತಲಿತ್ತು. ಆಹಾ ಇದಕ್ಕೆ ದಂಪತಿಗಳೆಂದು ಕರೆಯುತ್ತಾರೇನೋ. ಕೊನೆಯ ಘಳಿಗೆಯಲ್ಲಿ ಅವರ ಮುಖಗಳನ್ನೇ ತದೇಕಚಿತ್ತನಾಗಿ ನೋಡುತ್ತಲಿದ್ದೆ. ಆ ಉಸಿರೆಳೆದುಕೊಳ್ಳಲು ಹವಣಿಸುತ್ತಿದ್ದ ಬಾಯಿಗಳಿಂದ ವಿಚಿತ್ರ ಶಬ್ದವು ಸ್ಫುಟವಾಗಿ ಕೇಳಿಸುತ್ತಲಿತ್ತು. ಮನಕೆ ವಿಕೃತವಾದ ಆನಂದ ಸಿಗುತ್ತಲಿತ್ತು. ನೋಡನೋಡುತ್ತಾ ಕೈಲಿದ್ದ ಸೇಬನ್ನು ಮುಗಿಸುವ ಹೊತ್ತಿಗೆ, ದೇಹಗಳು ಶಾಂತವಾಗಿದ್ದವು. ಕಣ್ಣುಗಳು ಹಾಗೇ ತೆರೆದುಕೊಂಡೇ ಇದ್ದವು. ರಕ್ತದ ಕಾಲುವೆಯನ್ನು ತುಳಿದುಕೊಂಡೇ ರಂಗೋಲಿ ಹಾಕುವವನಂತೆ ಎದ್ದು ನಡೆದೆ.
ನನ್ನನ್ನು ಹಿಡಿದು ಕೋರ್ಟಿನ ಮುಂದೆ ನಿಲ್ಲಿಸಿದರು. ಎದುರುವಾದಿಸುವರಾರಿಲ್ಲದೆ ನನ್ನ ವಿರುದ್ಧದ ಸಾಕ್ಷಿಗಳು, ಪುರಾವೆಗಳು ಎತ್ತಿ ಹಿಡಿದು ನಾನೇ ತಪ್ಪಿತಸ್ತ ಎಂದು ನಿರ್ಧರಿಸಹೊರಟಿದ್ದರು. ವಕೀಲ ನನ್ನಿಂದ ಮೂರು ಅಡಿ ದೂರದಲ್ಲೇ ನಿಂತು ವಾದ ಮಂಡಿಸುತ್ತಿದ್ದ. ನ್ಯಾಯಾಧೀಶ ತೆಪ್ಪಗೆ ಏನೋ ನೋಡುತ್ತಾ, ಓದುತ್ತಲಿದ್ದ. ಕೈಲಿದ್ದ ಕೋಳದೊಂದಿಗೇ ಪಕ್ಕದಲ್ಲಿದ್ದ ಇನ್ಸ್ಪೆಕ್ಟರ್ ಬಳಿ ಇದ್ದ ರಿವಾಲ್ವರ್ ಕಸಿದುಕೊಂಡು ನೇರವಾಗಿ ಸಾಕ್ಷಿಗಳು, ಮತ್ತು ವಕೀಲನನ್ನು ಸುಟ್ಟೆ, ಬೇಗ ಸತ್ತು ಹೋದರು. ಓಡುತ್ತಲಿದ್ದ ನ್ಯಾಯಾಧೀಶನೆಡೆಗೆ ನೋಡಿದೆ ಎಗರಿ ಅವನ ಮುಂದೆ ನಿಂತೆ ಪಕ್ಕದಲ್ಲಿದ್ದ ಸುತ್ತಿಗೆಯಿಂದ ತಲೆ ಒಡೆದು ಹಾಕಿದೆ. ಓಡಿದವರೆಲ್ಲಾ ಉಳಿದುಕೊಂಡರು, ಹಿಡಿಯಬಂದವರೆಲ್ಲಾ ಹೊಗೆಹಾಕಿಕೊಂಡರು. ಇಡೀ ಕೋರ್ಟನ್ನು ರಕ್ತದಿಂದ ತೊಳೆದು ಬಂದೆ.
ಒಂದು ವಾಹನವೇರಿದೆ. ಹೋಗಹೋಗುತ್ತಾ ದಾರಿಯಲ್ಲಿ ಅಡ್ಡ ಬಂದವರನ್ನೆಲ್ಲಾ ಹೊಡೆದುಕೊಂಡು ಹೋದೆ, ಕೆಲವರ ದೇಹ ಛಿದ್ರವಾಯಿತು, ಜೀವ ಮಾತ್ರ ಉಳಿದುಕೊಂಡಿತು. ಕೆಲವರು ನನ್ನ ವಾಹನದ ಹೊಡೆತದ ರಭಸಕ್ಕೆ ಸಿಲುಕುವ ಮುನ್ನವೇ ಜೀವ ಹಾರಿಸಿಕೊಂಡಿದ್ದರು. ಹೊಡೆತಕ್ಕೆ ಸಿಕ್ಕು ಉಳಿದವರು, ಸುತ್ತಮುತ್ತಲಿದ್ದವರು ಎಲ್ಲ ಬಂದು ನನ್ನ ವಾಹನವನ್ನು ಹೊಡೆದು, ಬೆಂಕಿ ಹಚ್ಚಿ ಒಳಗಿದ್ದ ಆಕ್ರೋಶವನ್ನು ಉರಿಸಿದರು. ಅವರ ಮೂರ್ಖತನಕ್ಕೆ ಆಗಲೇ ವಾಹನದಿಂದ ಹೊರಗೆ ಕುಳಿತಿದ್ದ ನಾನು ನಕ್ಕೆ. ಅವರಲ್ಲಿ ತುಂಬಿದ್ದ ಆಕ್ರೋಶ ನೋಡಲು ಸೊಗಸಾಗಿತ್ತು. ಎದ್ದು ಅಲ್ಲಿಂದ ಹೊರಟೆ, ಒಬ್ಬೊಬ್ಬರನ್ನೇ ಮುಗಿಸುವ ಆಟ ಬೇಸರವೆನಿಸತೊಡಗಿತ್ತು. ದಾರಿಯಲ್ಲಿ ಸಿಕ್ಕ ಗಾಡಿಗಳ ಬ್ರೇಕ್ ಫೈಲ್ ಮಾಡಿದೆ. ಒಟ್ಟಿಗೇ ಒಂದಷ್ಟು ಜನ ಜೀವ ಬಿಟ್ಟರು. ಗಾಡಿ ಗಾಡಿಗಳು ಗುದ್ದಿ ಮುದ್ದಾಡುವುದನ್ನು ನೋಡುವುದೇ ಒಂದು ಅದ್ಭುತವಾದ ವೈಭೋಗ. ತಲೆಯಲ್ಲಿ ಮತ್ತೊಂದು ಚಿಂತನೆ ಮೂಡಿತು. ಉತ್ತುಂಗಕ್ಕೆ ಎದ್ದು ನಿಂತಿರುವ ಬೆಂಕಿಪೊಟ್ಟಣದಂತಹ ಕಟ್ಟಡಗಳನ್ನು ನೋಡುತ್ತಾ, ಅಷ್ಟು ದೊಡ್ಡ ಕಟ್ಟಡದ ಒಂದೇ ಒಂದು ಪಿಲ್ಲರ್ ಕಿತ್ತು ಹಾಕಿದೆ. ಇಡೀ ದೈತ್ಯ ಬಿಲ್ಡಿಂಗ್ ಒಂದೇ ಕ್ಷಣದಲ್ಲಿ ನೋಡನೋಡುತ್ತಲೇ ಉರುಳಿ ಎಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಯಿತು. ಆದರೆ ಎದುರು ಕೂತು ಕೊಲ್ಲುವಾಗ ಸಿಗುತ್ತಿದ್ದ ಆ ಉನ್ಮಾದ, ಆ ಮಜಾ ತಪ್ಪಿಹೋಗುತ್ತಿತ್ತು. ಇನ್ನೂ ಏನೂ ಅರಿಯದವರಂತೆ ಉಳಿದಿದ್ದವರನ್ನೂ ಬೆನ್ನಟ್ಟಿ ಸುಟ್ಟೆ. ನನ್ನನ್ನು ಪತ್ತೆ ಹಚ್ಚಲು ನಿರ್ಧರಿಸಿದವರನ್ನು, ಕಾರ್ಯಪ್ರವೃತ್ತರಾಗುವ ಮುನ್ನವೇ ಮುಗಿಸಿದೆ. ಇಡೀ ಊರು ಸ್ಮಶಾನವಾಯಿತು. ಇಡೀ ಊರಿಗೆ ಊರು ನಿರ್ನಾಮವಾಗಿ ನೀರವತೆಯಲ್ಲಿ ಮುಳುಗಿತ್ತು. ಎತ್ತರದ ಕಟ್ಟಡವೊಂದು ಬಿದ್ದು ನಿರ್ಮಾಣವಾಗಿದ್ದ ಗೋಪುರದ ಮೇಲೆ ಕೂತು ಇಡೀ ಊರನ್ನು ನೋಡಿದೆ. ಸಾಯುವ ಮುನ್ನ ಆಸ್ತಿ, ಗಳಿಕೆ, ಹೆಣ್ಣಿನ ಆಮಿಷಗಳನ್ನು ಒಡ್ಡಿ ಜೀವದಾನ ಕೇಳುತ್ತಿದ್ದವರನ್ನು, ಏನೂ ಗೊತ್ತೇ ಆಗುವ ಮುನ್ನ ಪೆದ್ದು ಪೆದ್ದಾಗಿ ಮುಗಿದುಹೋದವರನ್ನು ನೆನೆದು ನಗು ಬಂತು. ಅದಕ್ಕಿಂತಲೂ ಸತ್ತವರು ಸತ್ತರು, ಉಳಿದಿದ್ದವರು ಅವರ ಸುತ್ತ ಸೇರಿ ಹಲವಾರು ಕಾರಣಗಳಿಟ್ಟುಕೊಂಡು ರೋಧಿಸುತ್ತಿದ್ದುದರ ಪರಿ ನೋಡವುದೇ ಚೆನ್ನ. ಆ ಆನಂದವೆಲ್ಲಾ ಈಗಿಲ್ಲ. ಊರಿಗೆ ಊರೇ ಮುಳುಗಿಹೋಯ್ತು. ಈ ಊರಿನ ಸ್ಮಶಾನದಲ್ಲಿ ಸುಮ್ಮನೆ ಕೂರಲಾಗದೆ ಮುಂದಿನ ಊರಿನ ಕಡೆಗೆ ನಡೆದೆ.
ಆ ಊರಿನಲ್ಲಿ ನಿರೀಕ್ಷಿಸಿದಂತೆ ಜನರ ಸಂತೆಯಿರಲಿಲ್ಲ. ಬದಲಾಗಿ, ಹೋದ ತಕ್ಷಣ ಕಣ್ಣಿಗೆ ಬಿದ್ದದ್ದು ವಿಚಿತ್ರವಾದ ಶಬ್ಧದೊಂದಿಗೆ, ಬೆಂಕಿಯ ಬುಗ್ಗೆ, ಬಾಂಬ್ ಸ್ಫೋಟ. ಇದೇನಾಗುತ್ತಿದೆ ಎಂದು ಅರಿವಾಗಲಿಲ್ಲ. ಬಾಂಬ್ ಸ್ಫೋಟ ನೋಡುವುದೇ ಕಣ್ಣಿಗೊಂದು ಹಬ್ಬ. ಸುತ್ತ ಮುತ್ತಲ ಎಷ್ಟೋ ಮೈಲಿಗಳ ವರೆಗೆ ಇದ್ದ ಮನುಷ್ಯರನ್ನೊಳಗೂಡಿ ಎಲ್ಲ ರೀತಿಯ ಜೀವಿಗಳೂ ಕ್ರಿಮಿಗಳಂತೆ ಕೆಲವೇ ಕ್ಷಣಗಳಲ್ಲಿ ಹೇಳಹೆಸರಿಲ್ಲದೇ ಕಾಣೆಯಾಗುವಂತಹ ಅಭೂತಪೂರ್ವ ತಂತ್ರ. ನನ್ನ ಎಷ್ಟೋ ದಿನಗಳ ಶ್ರಮದ ಎದುರು ಇದು ಅಮೋಘವಾದ ಶಕ್ತಿ. ವಿಸ್ಮಯನಾಗಿ ಬಾಂಬ್ ಧಾಳಿ ನಡೆಯುವೆಡೆಯೆಲ್ಲಾ ಹೋಗಿ ನಿಂತು ನೋಡಿ ಆನಂದಿಸುತ್ತಿದ್ದೆ. ಬಾಂಬ್ ಧಾಳಿಯಲ್ಲಿ ತುಂಬಾ ಇಷ್ಟವಾಗುತ್ತಿದ್ದ ವಿಷಯವೆಂದರೆ, ಯಾರೂ ನೂಕದೆ, ಯಾರೂ ಹೊಡೆಯದೆ ಚಕ್ರಾಕಾರದಲ್ಲಿ ಸುತ್ತಲಿದ್ದ ಜನರೆಲ್ಲಾ ರಕ್ತ ಕಾರುತ್ತಾ ತಾವಾಗಿಯೇ ಹಾರುವುದನ್ನು ನೋಡುವುದೇ ಒಂದು ರೀತಿಯ ಮಜಾ. ನನಗಿಂತ ವಿಭಿನ್ನವಾಗಿ ಯಾರು ಈ ರೀತಿಯಲ್ಲಿ ಸಂಭ್ರಮ ಆಚರಿಸುತ್ತಿರುವರು ಎಂದು ಹುಡುಕ ಹೊರಟೆ. ನನಗಿಂತಲೂ ವಿಚಿತ್ರ ಮನುಷ್ಯನೊಬ್ಬ ದೊರೆತ. ಸ್ನೇಹಿತರಾದೆವು. ಅಂದಿನಿಂದ ಅವನ ಆಚರಣೆಗಳಲ್ಲೆಲ್ಲಾ ಇಬ್ಬರೂ ಸೇರಿ ನೆರವೇರಿಸುತ್ತಿದ್ದೆವು. ಇನ್ನೂ ವಿಚಿತ್ರ ವಿಚಿತ್ರ ಶೈಲಿಯಲ್ಲಿ ಸಾಯಿಸುವ ಕಾರ್ಯಕ್ರಮ ಹಂಬಿಕೊಂಡೆವು.
ಎಷ್ಟು ಮುಗಿಸಿದರೂ ಮತ್ತಷ್ಟು ಹುಟ್ಟುತ್ತಲೇ ಇದ್ದರು. ಮತ್ತೆ ಮತ್ತೆ ನಮಗೂ ಕೆಲಸ. ಒಂದು ಊರು ಖಾಲಿ ಮಾಡುವುದು. ಮತ್ತೆ ಮುಂದಿನ ಊರಿಗೆ ಕಾಲಿಡುವುದು. ಅಲ್ಲಿ ಇನ್ನೊಬ್ಬ ನಮ್ಮಂತಹವನ ಸ್ನೇಹ. ಹಾಗೇ ಮುಂದುವರೆದು ಮುಂದೆ ನಮ್ಮದೇ ಒಂದು ದಂಡೇ ಆಯ್ತು. ಕಲವು ಕಡೆ ಜನರೇ ಅವರ ವಿರುಧ ಅವರೇ ಹೊಡೆದಾಡಿ ಸತ್ತರು. ನಾವು ಪ್ರೇಕ್ಷಕರಾಗಿ, ಹುರಿದುಂಬಿಸುತ್ತಾ ಹೊಡೆದುಕೊಂಡು, ಕಚ್ಚಾಡಿಕೊಂಡು ಸಾಯಲು ಪ್ರೇರೇಪಿಸಿದೆವು. ಅದೊಂದು ಹಬ್ಬ, ಹೆಚ್ಚು ಹೆಚ್ಚು ದಿನಗಳು ಹೇಗೇ ಇದ್ದಲ್ಲಿ ಒಂದಷ್ಟು ಮನರಂಜನೆಯಾದರೂ ಸಿಕ್ಕುತ್ತಿತ್ತು. ಅವರ ಯುದ್ಧದಲ್ಲಿ ಉಳಿದವರನ್ನ ನಾವು ಹೊಡೆದುಹಾಕಿದೆವು. ಅಂತೂ ಇಡೀ ಪ್ರಪಂಚ ಸ್ಮಶಾನವಾಯ್ತು. ಎಲ್ಲರೂ ವಿಜಯೋತ್ಸವ ಆಚರಿಸಿದೆವು. ಈ ಕುರುಕ್ಷೇತ್ರದಂತಹ ಸ್ಮಶಾನವನ್ನು ನೋಡುತ್ತಾ ಎಷ್ಟೋ ಪ್ರಶ್ನೆಗಳು ಮನದಲ್ಲಿ ಹುಟ್ಟುತ್ತಿದ್ದವು. ಹೀಗೆ ಒಂದೇ ಏಟಿಗೆ, ಒಂದೇ ಕ್ಷಣದಲ್ಲಿ ಜೀವಬಿಟ್ಟುಬಿಡುವ ನಿಶ್ಶಕ್ತರಾದ ಇವರುಗಳು, ಏಕೆ ಹೀಗೆ, ಇಷ್ಟೆಲ್ಲಾ ಹೋರಾಡಿ, ಇಷ್ಟೆಲ್ಲಾ ಅಸ್ತಿಗಳನ್ನು ಮಾಡಿ, ಇಷ್ಟೆಲ್ಲಾ ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟುತ್ತಿದ್ದರು? ಏಕೆ ನಾಳೆ ಬದುಕುವುದಕ್ಕಾಗಿ ಇಂದು ತಮ್ಮ ಜೀವನವನ್ನು ಹಾಳುಗೆಡವಿಕೊಂಡು ನಾಳೆಯೂ ಬದುಕದೆ ಒಂದು ದಿನ ಹೀಗೆ ನಮ್ಮ ಕೈ ಸೇರಿ ಕೊನೆಗೂ ಬದುಕದೆಯೇ ಸತ್ತೇ ಹೋಗುತ್ತಿದ್ದರು? ಎಷ್ಟೋ ಜನರನ್ನು ಸಾಯಿಸುವಾಗ, ನಿಜವಾಗಲೂ ಬದುಕಿದ್ದವರನ್ನ ಕೊಂದೆವಾ ಅಥವಾ ಸತ್ತಿದ್ದವರನ್ನೇ ಮತ್ತೆ ಸಾಯಿಸಿದೆವಾ? ಯಾವ ಪುರುಶಾರ್ಥಕ್ಕಾಗಿ, ಯಾರು ಬದುಕಲಿಕ್ಕಾಗಿ ಹಲವಾರು ಕಾರಣಗಳಿಂದ ಅವರವರಲ್ಲೇ ಹೊಡೆದಾಡಿ ಸತ್ತರು? ಇವರೆಲ್ಲಾ ಇಷ್ಟು ಕ್ಷುಲ್ಲಕವಾಗಿ ಸಾಯಲು ಅಷ್ಟೆಲ್ಲಾ ಶ್ರಮದ ಜೀವನ ಬದುಕಬೇಕಿತ್ತಾ? ಯಾವುದಕ್ಕೂ ಉತ್ತರ ಕೇಳೋಣವೆಂದರೆ ಯಾರು ಇಂದು ಬದುಕುಳಿದಿಲ್ಲ. ಇನ್ನು ಮುಂದೆ ಹುಟ್ಟುವವರನ್ನು ಕೇಳಿ ಪ್ರಯೋಜನವಿಲ್ಲ.
ನಾವು ವಿಜಯೋತ್ಸವ ಮುಂದುವರೆಸಿದ್ದೆವು. ಮನುಷ್ಯರ ಸಾವಿಲ್ಲದೇ, ಮನೋರಂಜನೆಯಿಲ್ಲದೆ ಸತ್ತು, ಕೊಳೆತು ನಾರುತ್ತಿದ್ದ ದೇಹಗಳನ್ನೇ ತೆಗೆದುಕೊಂಡು ಅದನ್ನು ಛಿದ್ರ ಗೊಳಿಸಿ ಅಂತ್ಯಕ್ರಿಯೆಯ ಆಟವಾಡತೊಡಗಿದೆವು. ಅವರವರ ಬಂಧುಗಳೆನಿಸಿಕೊಂಡವರು ಸಾವಿನ ಮನೆಯಲ್ಲಿ ಅಳುವಿನ ಆಟವಾಡುತ್ತಿದ್ದುದನ್ನು ನಕಲು ಮಾಡಿ ಆನಂದಿಸಿದೆವು. ನಂತರ ಈ ಮನುಷ್ಯರು ಮಾಡುತಿದ್ದ ಅಂತ್ಯಕ್ರಿಯಾ ವಿಧಾನಗಳನ್ನು ಆಚರಿಸುವ ಆಟವಾಡಲು ತೀರ್ಮಾನಿಸಿದೆವು. ಒಬ್ಬ ಮಣ್ಣು ಮಾಡಬೇಕೆಂದ, ಮತ್ತೊಬ್ಬ ಸುಡಬೇಕೆಂದ, ಇನ್ನೊಬ್ಬ ನೀರಿಗೆ ಹಾಕಬೇಕೆಂದ, ಮಗದೊಬ್ಬ ಗಾಳಿಯಲ್ಲೇ ಬಿಡುವುದು ಶ್ರೇಷ್ಠವೆಂದ. ಇದರ ವಿಷಯವಾಗಿಯೇ ನಮ್ಮ ನಮ್ಮಲ್ಲೇ ಜಗಳಗಳು ಶುರುವಾದವು. ಆತನ ಜಾತಿಗನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು ಅವರ ಬಂಧುಗಳು ಎಂಬ ವಿಷಯ ಪ್ರಸ್ತಾಪವಾಯ್ತು. ಆ ದೇಹಗಳಲ್ಲಿ ಅವರ ಜಾತಿ ಸೂಚಿಸುವ ಯಾವುದೇ ಕುರುಹುಗಳು ಉಳಿದಿರಲಿಲ್ಲ. ಕೆಲವರನ್ನು ಮಣ್ಣು ಮಾಡುವುದಾಗಿಯೂ, ಕೆಲವರನ್ನು ನೀರು, ಗಾಳಿ, ಬೆಂಕಿಗೆ ಒಡ್ಡುವುದಾಗಿಯೂ ತೀರ್ಮಾನಿಸಿದೆವು. ಹೇಗೆ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ಕೊನೆಗೆ ಅವನ್ನು ತಿನ್ನುತ್ತಿದ್ದುದು ಜೀವಿಗಳೇ. ಪರಿಸರದಲ್ಲೇ ಲೀನವಾಗುತಿದ್ದರು.
ಈ ಹೆಣಗಳೊಂದಿಗಿನ ಆಟ ಆನಂದವನ್ನು ತರುತ್ತಿರಲಿಲ್ಲ. ಹಸಿದ ಪ್ರಾಣಿಗಳಂತಾಗಿದ್ದೆವು. ಬದುಕಲು ಸಾಯಿಸಬೇಕಿತ್ತು ನಮಗೆ. ಅಲ್ಲಿ ಬದುಕಿದ್ದವರು ನಾವು ಮಾತ್ರ. ಸಾಯಿಸದೇ ಬದುಕುವುದು ಹೇಯವೆನಿಸುತ್ತಿತ್ತು. ಆಹಾರ ಸೇರುತ್ತಿರಲಿಲ್ಲ. ಜೀವದಲ್ಲಿ ಚೇತನವಿರಲಿಲ್ಲ. ನಮ್ಮ ನಮ್ಮನ್ನೇ ಗಿರಿಯಾಗಿಸಿಕೊಂಡು ಸಾವಿನ ಆಟವಾಡಿದೆವು. ಎಲ್ಲರೂ ಒಬ್ಬೊಬ್ಬರಾಗಿ ನಿರ್ಗಮಿಸಿದರು. ಯಾರನ್ನು ಯಾವ ರೀತಿ ಕೊಲ್ಲಬೇಕೆಂದು ಪ್ಲಾನ್ ಮಾಡಿ ಸಾವಿಗೆ ತಳ್ಳುತ್ತಿದ್ದೆವು. ಎಲ್ಲರೂ ಸತ್ತರು. ನಾನು ಇನ್ನೂ ಉಳಿದಿದ್ದೆ. ಯಾರೂ ಇಲ್ಲದೆ, ಏನೂ ಇಲ್ಲದೆ ಈ ಸ್ಮಶಾನದಲ್ಲಿ ಮೌನವಾಗಿ ಏನೂ ಮಾಡದೆ ಬಿದ್ದೇ ಇದ್ದೆ. ಇನ್ನು ಬದುಕಿದ್ದವನು ನಾನೇ. ಬದುಕಬೇಕೆಂದರೆ ಸಾಯಿಸಬೇಕಿತ್ತು. ಸಾಯಿಸಲು ಯಾವ ಜೀವಿಯೂ ಉಳಿದಿರಲಿಲ್ಲ. ಮನುಷ್ಯನೇ ಬದುಕುವುದಕ್ಕಾಗಿ ಮುಕ್ಕಾಲು ಜೀವಿಗಳನ್ನು ಮುಗಿಸಿದ್ದ. ನಾನು ಮನುಷ್ಯರನ್ನು ಮುಗಿಸುತ್ತಾ ಅವರೊಂದಿಗೆ ಉಳಿದ ಜೀವಿಗಳನ್ನು ಮುಗಿಸಿದ್ದೆ. ಇನ್ನೂ ಉಳಿದ ಕ್ರಿಮಿಗಳನ್ನು ಸಾಯಿಸುತ್ತಾ ಕಾಲ ಕಳೆಯಲು ಪ್ರಯತ್ನ ಪಟ್ಟೆ ಆಗಲಿಲ್ಲ. ಆನೆಯನ್ನು ಸಾಯಿಸಿದ ಮೇಲೆ ಇರುವೆಯ ಸಾವು ಮಜಾ ನೀಡುತ್ತಿರಲಿಲ್ಲ. ಸತ್ತವರಲ್ಲಿ ಯಾರಿಗಾದರೂ ಚೂರಾದರೂ ಪ್ರಾಣ ಉಳಿದಿದೆಯೇನೋ ಹುಡುಕಿದೆ ಯಾವ ಜೀವವೂ ಸಿಗಲಿಲ್ಲ. ಸತ್ತವರಲ್ಲಿ ಯಾರಿಗಾದರೂ ಮತ್ತೆ ಜೀವ ಕೊಟ್ಟು ಸಾಯಿಸಲಾಗುವುದೋ ಪ್ರಯತ್ನ ಪಟ್ಟೆ ನನ್ನ ಹುಚ್ಚಾಟಕ್ಕೆ ನಗು ಬಂತು, ನನಗೆ ಸಾಯಿಸುವ ಶಕ್ತಿ ಇತ್ತೇ ವಿನಃ ಬದುಕಿಸುವ ಸಾಮರ್ಥ್ಯವಿರಲಿಲ್ಲ. ನನಗೆ ಸಾಯಿಸಲು ಜೀವ ಬೇಕಿತ್ತು. ಜೀವ ಉಳಿದಿದ್ದು ನನ್ನಲ್ಲಿ ಮಾತ್ರ. ನನ್ನನ್ನೇ ಸಾಯಿಸಿಕೊಳ್ಳುವುದೊಂದೇ ಉಳಿದ ಮಾರ್ಗ. ನನ್ನನ್ನೇ ಸಾಯಿಸುತ್ತಾ, ಆ ನೋವಿನಲ್ಲಿ ಸಾವಿನ ಮಾದಕತೆ ಕಂಡುಕೊಂಡೆ. ನನ್ನ ಸಾವನ್ನು ನಾನೇ ಆನಂದಿಸುತ್ತಾ…

ಸತ್ತೆ!
----------------------------------------------------------------------------------------------------------------------------------
ಹಿನ್ನುಡಿ: ವಿನಾಶಕ್ಕಾಗಿ ಮನುಷ್ಯ. ಮನುಷ್ಯನಿಂದಲೇ ವಿನಾಶ!

Monday 13 February 2012

ಲವ್-ಡೇ!

ಮುನ್ನುಡಿ: ಕಥೆ ಓದುವ ಸಾಮರ್ಥ್ಯವಿರುವರಿಗೆ, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುವ ಸಮಸ್ತರಿಗೂ ಮತ್ತು ವಿಶೇಷವಾಗಿ ಎಲ್ಲ ತರುಣ, ತರುಣಿ ಮತ್ತು ಮುಖ್ಯವಾಗಿ ತಾರುಣ್ಯರಿಗೆ.
ಪ್ರೇಮಿಗಳ ದಿನಾಚರಣೆ ಎಷ್ಟು ಸರಿ ಎಷ್ಟು ತಪ್ಪು ನಿಮಗೆ ಬಿಟ್ಟದ್ದು!


ಇನ್ನೂ ೮ ಘಂಟೆ, ಕೈಲಿರುವ ಗುಲಾಬಿ ಇನ್ನು ಮೂರು ಘಂಟೆಯಷ್ಟರಲ್ಲಿ ಮುದುಡುವುದಿಲ್ಲ ತಾನೇ ಎಂದು ಜಾಗರೂಕತೆಯಿಂದ ಇಟ್ಟುಕೊಂಡೆ. ಅವಳಿನ್ನೂ ಬರುವುದು ೧೧ ಘಂಟೆಗೆ. ಕೂತಲ್ಲಿ ಕೂರಲಾಗಲಿಲ್ಲ. ಇವತ್ತೇನೋ ಪಾರ್ಕ್ ನಲ್ಲಿ ಜನ ತುಂಬಾ ಇದ್ದಾರೆ. ಎಲ್ಲಾ ಹುಡುಗ ಹುಡುಗಿಯರು ಕೆಂಪು ಕೆಂಪಾಗಿ ಓಡಾಡುತ್ತಿದ್ದಾರೆ. ಅವಳು ಬರುವುದು ೧೧ ಘಂಟೆಗೆ ಎಂದು ತಿಳಿದಿದ್ದೂ ಇಷ್ಟು ಬೇಗ ಬರುವ ಕಾರಣವೇನೆಂದು ತಿಳಿಯದೆ ನನ್ನ ಹೆಡ್ಡತನಕ್ಕೆ ನಾನೇ ನಕ್ಕೆ. ಅವಳು ಬೇಗ ಬರಬಹುದಾ ಎಂದು ಬರುವ ದಾರಿಯನ್ನು ಆಗಾಗ ನೋಡತೊಡಗಿದೆ. ಅದೇನೋ ಒಂದು ರೀತಿಯ ಖುಷಿ. ಕಾಯುವುದರಲ್ಲಿ ನಿಜವಾಗಲೂ ಸುಖವಿದೆ, ಮಜವಿದೆ. ಕಣ್ಮುಚ್ಚಿದರೂ, ಕಣ್ತೆರೆದರೂ ಅವಳ ನಗು, ಮಗುವಿನಂತ ಮೋರೆಯೇ ಕಣ್ಣಮುಂದೆ ಬಂದಂತಾಗುತ್ತಿದೆ. ಏನೇನೋ ಹಳೆಯ ನೆನಪುಗಳು. ಹಾಗೇ ಆನಂದಿಸುತ್ತಿದ್ದ ನನ್ನನ್ನು ನನ್ನ ನೆನಪುಗಳಿಂದ ಹೊರಗೆಳೆದುಕೊಂಡು ಬಂದು ನನ್ನ ಬೆಂಚಿನ ಮೇಲೆ ಕೂಡ್ರಿಸಿದರು ಇಬ್ಬರು ವಿಚಿತ್ರ ಆಕೃತಿಯ ವ್ಯಕ್ತಿಗಳು. ಇವರು ಇದೇ ಊರಿನ ವ್ಯಕ್ತಿಗಳು ಹೌದಾ ಎಂದು ಒಮ್ಮೆ ಸಂದೇಹವಾಯ್ತು. ತಲೆಯ ಮೇಲೆ ಆ ವಿಚಿತ್ರ ಟೋಪಿ, ಮೈತುಂಬ ಬಣ್ಣ ಬಣ್ಣದ ವಿಚಿತ್ರ ಹೊಲಿಗೆಯ ಬಟ್ಟೆ, ಉದ್ದನೆಯ ಚಪ್ಪಲಿಗಳು. ಅಪಾದ ಮಸ್ತಕವಾಗ್ ಒಮ್ಮೆ ಇಬ್ಬರನ್ನೂ ನೋಡಿದೆ. ಬಂದವರೇ ನನ್ನ ಎಡಬಲದಲ್ಲಿ ಕುಳಿತರು. ಇಬ್ಬರನ್ನೂ ಆಶ್ಚರ್ಯದಿಂದ ನೋಡಿದೆ. ಇಬ್ಬರೂ ನನ್ನನ್ನೇ ನೋಡುತ್ತಿದ್ದರು. ಅರೆ! ಇವರ್ಯಾರು, ನನ್ನನ್ನೇಕೆ ಹೀಗೆ ನೋಡುತ್ತಿದ್ದಾರೆ. ಅಲ್ಲ ಮುಂಚಿತವಾಗಿಯೇ ಆಕ್ರಮಿಸಿರುವ ಬೆಂಚಿಗೆ ಬಂದು ಕೂರುವಾಗ ಅನುಮತಿ ಕೇಳುವ ಕನಿಷ್ಟ ಮ್ಯಾನರ್ಸ್ ಇಲ್ವ ಇವರಿಗೆ ಎಂದು ಸಿಟ್ಟುಬರದೇ ಇರಲಿಲ್ಲ. ಇಬ್ಬರೂ ಒಟ್ಟಿಗೆ ಯಾರದರೂ ಬರ್ತಾರ ಎಂದು ಕೇಳಿದರು. ಇಬ್ಬರ ಕಡೆಗೂ ಒಮ್ಮೆ ತಿರುಗಿ ಹೌದು ಎಂಬಂತೆ ತಲೆಯಾಡಿಸಿದೆ. ಎಡಗಡೆ ಕೂತಿದ್ದವನು ಬರಲಿ ಬಿಡಿ ಎಂದು ಹೇಳಿ ಸುಮ್ಮನೆ ಕೂತರು. ನಾನೇ ಎದ್ದು ಹೋಗುವುದೇ ಒಳ್ಳೆಯದ ಎಂದು ಯೋಚಿಸಿದೆ. ಛೇ ಎಲ್ಲ ಸುಂದರ ನೆನಪುಗಳನ್ನ ಹಾಳು ಮಾಡಿದರು. ಹೋಗುತ್ತಾರೇನೋ ಕಾದೆ. ಇಬ್ಬರೂ ಎದ್ದೇಳುವಹಾಗೆ ಕಾಣಲಿಲ್ಲ. ಸುತ್ತ ಎಲ್ಲ ಹುಡುಗ ಹುಡುಗಿಯರನ್ನ ನೋಡುತ್ತಾ ಏನೋ ಒಳಗೊಳಗೇ ಮಾತನಾಡುತ್ತಾ ಇದ್ದಂಗೆ ಕಂಡರು. ಸರಿ ನಾನೇ ಸ್ಥಳ ಬದಲಾವಣೆ ಮಾಡುವುದು ಒಳ್ಳೆಯದೆಂದು ಎದ್ದು ಹೊರಡಲು ಅನುವಾದೆ. ಥಟ್ಟನೆ ಇಬ್ಬರೂ ನನ್ನ ಕೈ ಹಿಡಿದು ಅರೆ ಎಲ್ಲಿ ಹೊರಟಿರಿ ಕೂತ್ಕೊಳ್ಳಿ ಎಂದರು. ನಾನು ಏನೇ ಪ್ರತಿಕ್ರಿಯಿಸುವ ಮುನ್ನ ಹಾ ಗೊತ್ತು ಬಿಡಿ ಇವತ್ತು ಯಾರ ತೊಂದರೆ ತಕರಾರು ಇಲ್ಲದೆ ನಿಮ್ಮ ಹುಡುಗಿಯ ಜೊತೆ ಆರಾಮವಾಗಿ ಕಾಲ ಕಳೆಯೋಣ ಅಂತ ಇಲ್ಲಿಗೆ ಬಂದ್ರೆ ಯಾರಪ್ಪಾ ಇವರಿಬ್ಬರು ರಾಹು ಕೇತು ತರ ತಗಲಾಕೊಂಡ್ರು ಅಂತ ತಾನೆ ನಿಮ್ಮ ಯೋಚನೆ ಎಂದು ನಕ್ಕರು. ನನ್ನ ಎರಡೂ ಕೈ ಇನ್ನೂ ಹಿಡಿದುಕೊಂಡೇ ಮಾತು ಮುಂದುವರೆಸಿದರು, ಹೆದರ್ಕೋಬೇಡಿ ನನ್ನ ಹೆಸರು ಹು, ನಾನು ಉಹು ಎಂದು ಎಡ ಬಲ ಕೂತಿದ್ದವರು ಹೇಳಿದರು. ಇವರು ಯಾರಾದರೆ ನನಿಗೇನಾಗಬೇಕಿತ್ತು. ಹು ಅಂತೆ ಉಹು ಅಂತೆ ಮನದಲ್ಲೇ ಈ ಶನಿಗಳು ಎದ್ದು ಹೋದರೆ ಸಾಕೆಂದು ಕೊಸರಾಡಿಕೊಂಡು ಕೈಗಳನ್ನು ಬಿಡಿಸಿಕೊಂಡೆ. ನನ್ನನ್ನು ನೋಡಿ ಮತ್ತೆ ನಕ್ಕರು. ಉಹು ನನ್ನ ಕಿವಿಯ ಬಳಿ ಬಂದು ಇದು ಸರಿನಾ ಎಂದ, ಏನು ಹೇಳುತ್ತಿದ್ದಾನಿವನು ಅರ್ಥವಾಗದೆ ಅವನ ಕಡೆ ತಿರುಗಿ ಪ್ರಶ್ನಾರ್ಥಕವಾಗಿ ನೋಡಿದೆ. ಇತ್ತ ಕಡೆಯಿಂದ ಹು ಜೋರಾಗಿ ಏನ್ ಪ್ಲಾನ್ ಇವತ್ತು. ಫುಲ್ ಮಜಾನಾ!! ಎಂದು ಮತ್ತೆ ಅಸಹ್ಯ ಹುಟ್ಟಿಸುವ ನಗು ನಕ್ಕ. ಉಹು ಮತ್ತೆ ಮಾತು ಮುಂದುವರೆಸಿದ “ವಾಲೆಂಟೈನ್ಸ್ ಡೇ ಅಂತೆ ಮಣ್ಣು, ಅಲ್ನೋಡು ಅಸಹ್ಯ ನನ್ನ ಮಕ್ಕಳು ಯಾವ ಜಾಗ ಅಂತ ಇಲ್ಲ, ಸಮಯ ಅಂತ ಇಲ್ಲ ನಾಚಿಕೆ ಮಾನ ಮರ್ಯಾದೆ ಬಿಟ್ಟು ಹೆಂಗೆ ಓಡಾಡ್ತಿದಾರೆ ನೋಡು, ಚಪ್ಪಲಿಯಲ್ಲಿ ಹೊಡಿಬೇಕು ಇವರಿಗೆ” ಎಂದ ಹೋ ಇವತ್ತು ಪ್ರೇಮಿಗಳ ದಿನಾನಾ ಅದಕ್ಕೆ ಮತ್ತೆ ಗುಲಾಬಿ ಬೆಲೆ ಇವತ್ತು ಇಷ್ಟಿರಿವುದು, ಮತ್ತು ಪಾರ್ಕ್ ನಲ್ಲಿ ಇಷ್ಟು ಜನ ತುಂಬಿರುವುದು ಎಂದು ಯೋಚಿಸಿದೆ. ಆದರೆ ಇವನ್ಯಾಕೆ ಹೀಗೆ ಇವರನ್ನ ಬಯ್ಯುತ್ತಿದ್ದಾನೆ. ಅವರು ಹೇಗಿದ್ದರೆ ಇವನಿಗೇನಂತೆ ಎಂದು ಹು ಕಡೆ ತಿರುಗಿದೆ ಅವನು ತಲೆ ಬಗ್ಗಿಸಿ ಏನೂ ಮಾತನಾಡದೆ ಕೂತಿದ್ದ. ನಿಧಾನವಾಗಿ ಮತ್ತು ಶಾಂತವಾಗೇ ನನ್ನ ಕಡೆ ತಿರುಗಿ ಅವರು ನಡೆದುಕೊಳ್ಳುತ್ತಿರುವ ರೀತಿ ಅಲ್ಲ ತೊಂದರೆ ಇರುವುದು ನಮ್ಮ ಕಣ್ಣುಗಳಲ್ಲಿ, ಹೆಣ್ಣು ಗಂಡು ಜೊತೆಗಿದ್ದಾರೆ ಎಂದಾಕ್ಷಣ ಅವರ ಬಗ್ಗೆ ಕೆಟ್ಟದಾಗಿ ಕಲ್ಪಿಸುವುದು ಸಮಾಜದ ಮಾಮೂಲಿನ ಸಂಗತಿ ತಾನೆ. ಅದರಲ್ಲೂ ಇವರು ಪಾಪ ಇನ್ನೂ ಹುಡುಗ ಹುಡುಗಿಯರು ಎಂದು ಪಾರ್ಕಿನಲ್ಲಿದ್ದ ಪ್ರೇಮಿಗಳನ್ನು ಸಮರ್ಥಿಸಿದ. ಉಹು ನನ್ನನ್ನು ಅವನ ಕಡೆ ತಿರುಗಿಸಿ, ಏನೂ ನಮ್ಮ ದೃಷ್ಟಿಕೋನ ತಪ್ಪಂತಲ್ಲವೇ ಬಾ ತೋರಿಸುತ್ತೀನಿ ನಿನಗೆ ಆಮೇಲೆ ನೀನೇ ನಿರ್ಧರಿಸುವಂತೆ ಎಂದು ನನ್ನ ಕೈ ಹಿಡಿದು ಎದ್ದು ನಿಂತ. ಅರೆರೆ! ಇದೇನಪ್ಪ ನಾನು ಯಾರು ಇವರ್ಯಾರು, ಇವರೇಕೆ ನನಗೆ ಈ ಕಥೆಗಳನ್ನ ಹೇಳುತ್ತಿದ್ದಾರೆ. ಸುಮ್ಮನೆ ನನ್ನನ್ನ ಇದರಲ್ಲಿ ಸಿಕ್ಕಿಸುತ್ತಿದ್ದಾರೋ, ಏನು ನಡೆಯುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ, ಪಾರ್ಕಿನಿಂದ ಮಾಯವಾಗಿದ್ದೆವು!
ಉಹು ನನ್ನ ಕೈ ಹಿಡಿದು ನಿಂತಿದ್ದ ಪಕ್ಕದಲ್ಲಿ ಹು ಕೂಡ ನಿಂತಿದ್ದ. ಎಲ್ಲಿದ್ದೇವೆಂದು ಸುತ್ತ ನೋಡಿದೆ, ಇದಾವುದೋ ನಿರ್ಜನ ಪ್ರದೇಶ, ನಗರ ಹೊರವಲಯವಿದ್ದರೂ ಇರಬಹುದು. ಅರೆ! ಕಾರಿನ ಮೇಲೆ ನಿಂತಿದ್ದೆವು. ಉಹು ಬಗ್ಗಿ ಕಾರಿನ ಕಿಟಕಿಯಿಂದ ನೋಡುವಂತೆ ಹೇಳಿದ, ಹಾಗೆಯೇ ಮಾಡಿದೆ ಏನಿರಬಹುದೆಂಬ ಕುತೂಹಲವಿತ್ತು. ಕಾರಿನೊಳಗಡೆ ಗಂಡು ಹೆಣ್ಣು ಸವಿ ಹಂಚಿಕೊಳ್ಳುತ್ತಾ, ಕ್ರಿಯಾಶೀಲರಾಗಿದ್ದರು. ನೋಡಲಾಗಲಿಲ್ಲ ಮುಖ ಕಿವುಚಿಕೊಂಡು ಮೇಲೆದ್ದೆ. ಮಾತು ಹೊರಡಲಿಲ್ಲ. ಏನಿದೆಂಬಂತೆ ಮುಖ ಮಾಡಿದೆ. ಇಲ್ಲಿಗೆ ಯಾಕೆ ಬಂದಿದ್ದೆವೆಂಬುದು ಅರ್ಥವಾಗಲಿಲ್ಲ. ಉಹು ನನ್ನ ರಟ್ಟೆ ಹಿಡಿದು ನೋಡಿದೆಯಾ ಇದಕ್ಕೆ ಏನು ಹೇಳ್ತೀಯಾ? ಇದು ನಮ್ಮ ಸಂಸ್ಕೃತಿನಾ? ಇದೇ ಪ್ರೇಮಿಗಳ ದಿನದ ವಿಶೇಷಾನಾ? ಇಷ್ಟೇ ಅಲ್ಲ ಬಾ ಎಂದು ಮತ್ತೆ ಅಲ್ಲಿಂದ ಮಾಯವಾದೆವು.
ಇದಾವುದೋ ಹೋಟೆಲೋ ರೆಸೋರ್ಟೋ ಇರಬೇಕು. ಉಹು ಒಂದು ಗುಂಪಿನ ಕಡೆ ತೋರಿಸುತ್ತಾ ನೋಡು ಆ ಅಬ್ಬರದ ಸಂಗಿತ, ಸಿಗರೇಟು, ಕುಡಿತ, ಕುಣಿತ ಈ ಅರೆ ನಗ್ನ ಉಡುಗೆ ತೊಡುಗೆ, ಹುಡುಗ ಹುಡುಗಿ ಎಂಬ ಬೇಧವಿಲ್ಲದೆ ಒಬ್ಬರ ಮೇಲೆ ಒಬ್ಬರು ಬಿದ್ದು ಅಸಹ್ಯ ನರ್ತನ ಹೇಗಿದೆ ಪ್ರೇಮಿಗಳ ದಿನದ ಕಾರುಬಾರು. ಪ್ರೇಮ ಈ ಸ್ವರೂಪಕ್ಕೆ ಬಂದಿದೆಯಾ? ಇದು ನಿಜವಾಗಲೂ ಪ್ರೇಮವೇನಾ? ಪ್ರೇಮದ ಹೆಸರಿನಲ್ಲಿ ಎಂಥ ವಿಕೃತವಾದ ಆಚರಣೆಗಳನ್ನು ಮಾಡುತ್ತಿದ್ದೇವೆ ನೋಡು. ಇಷ್ಟೇ ಅಲ್ಲ ಬಾ ಇನ್ನೂ ಇದೆ ಎಂದು ಕೈ ಹಿಡಿದ ಹು ಕಡೆ ನೋಡಿದೆ ಯಾಕೋ ಮನುಷ್ಯ ಏನೂ ಹೇಳುವ ಸ್ಥಿತಿಯಲ್ಲಿದ್ದಂತೆ ಕಾಣಿಸಲಿಲ್ಲ. ಮಾಯವಾದೆವು.
ಪಾರ್ಕಿನಲ್ಲಿ ಬಂದು ಉಹು ತಾನು ಗೆದ್ದಂತೆ ನೋಡಿದೆಯಾ ಗೊತ್ತಾಯ್ತಾ ಹೇಗಿದೆ ವ್ಯಾ-ಲೆಂಟೈನ್ ಡೇ ಎಂದು ಸುಮ್ಮನಿದ್ದ ಹು ಕಡೆ ತಿರುಗಿದ. ಆತ ಸೋಲನ್ನು ಒಪ್ಪಿಕೊಂಡಂತೆ ಕಾಣಲಿಲ್ಲ. ಹು ಸುಮ್ಮನೆ ಮುಗುಳ್ನಗುತ್ತಿದ್ದುದನ್ನು ಕಂಡು ಉಹು ರೊಚ್ಚಿಗೆದ್ದು ಈ ದಿನವನ್ನ ನಮ್ಮ ದೇಶದ ಕಾಲೆಂಡರ್ ನಿಂದಲೇ ತೆಗೆದುಹಾಕಬೇಕು. ಎಲ್ಲಾ ಪಾಶ್ಚಾತ್ಯ ಸಂಸ್ಕೃತಿಯನ್ನ ನಕಲು ಮಾಡಲು ಹೊರಟಿದ್ದಾರೆ ನಮ್ಮ ಯುವಜನತೆ. ಅರ್ಥವಿಲ್ಲದ ಆಚರಣೆಗಳನ್ನ ನಾವು ತಡೆಯಬೇಕು, ಚಿಕ್ಕ ಹುಡುಗರಿಗೂ ಇದು ತಪ್ಪೆಂದು ಅರಿವು ಮೂಡಿಸಬೇಕು ಎಂದು ತನ್ನ ಮಾತುಗಳನ್ನು ಮುಂದುವರೆಸುತ್ತಿದ್ದ, ಹು ಈಗ ಮೌನ ಮುರಿದು ಯಾವುದು ತಪ್ಪು ಅದರಲ್ಲಿ ಎಂದು ಕೇಳಿದ. ಇಷ್ಟೆಲ್ಲಾ ನೋಡಿಯಾದ ಮೇಲೆ ಇದೇನಾ ಕೇಳ್ತಿರೋದು ಎಂದು ಉಹು ಉತ್ತರಿಸಿದ. ಹು ನನ್ನ ಕೈ ಹಿಡಿದು ಬಾ ಎಂದು ಕರೆದುಕೊಂಡೊಯ್ದ, ಮೂವರೂ ಮತ್ತೆ ಮಾಯವಾದೆವು.
ಕಾರಿನ ಒಳಗಡೆ ಹಿಂದಿನ ಸೀಟ್ ಹಿಂಬದಿಯಲ್ಲಿ ಮೂವರೂ ಅವಿತು ಕೂತಹಾಗಿತ್ತು. ಚಿಕ್ಕ ಜಾಗ, ಹು ನನ್ನ ಕೈ ಹಿಡಿದಿದ್ದ, ಉಹು ನನ್ನನ್ನೇ ದುರುಗುಟ್ಟಿನೋಡುತ್ತಿದ್ದ. ಹಿಂದೆ ತಮ್ಮ ಪ್ರಪಂಚದಲ್ಲಿ ಮಗ್ನರಾಗಿದ್ದ ಪ್ರೇಮಿಗಳೆಂಬೋ ಪ್ರೇಮಿಗಳು. ಅಲ್ಲಿ ಒಂದು ಕ್ಷಣವೂ ಕೂಡ್ರಲಾಗಲಿಲ್ಲ, ಕಿವಿ ಗಟ್ಟಿಯಾಗಿ ಮುಚ್ಚಿ, ಮುಖ ಹಿಂಜಿ ಕೂತಿದ್ದೆ. ಹು ನನ್ನನ್ನು ನೋಡಿ ನೋಡಿ ಒಳಗೊಳಗೇ ನಗುತ್ತಿದ್ದ. ಉಹು ಏನೂ ಭಾವವೇ ಇಲ್ಲದೆ ಕೂತಿದ್ದ. ಸ್ವಲ್ಪ ಸಮಯದ ನಂತರ ಹು ಕಿವಿಯಿಂದ ಕೈ ತೆರೆಸಿದ. ಹಿಂದೆ ಕೇಳುತ್ತಿದ್ದ ನಗುವಿನ ಶಬ್ದದಷ್ಟೇ ಜೋರಾಗಿ ಉಸಿರು ಕೇಳಿಸುತಿತ್ತು. ಆಕೆ  ಲವ್ ಯು ಎಂದಳು ಲವ್ ಯು ಟೂ ತರ್ಲೆ ಎಂದ ಆತ. ಮುಂದಿನ ವರ್ಷ ನಮ್ ಕನಸಿನ ಮನೇಲಿ ನಾವ್ ಹೀಗೇ ಇರತೀವೇನೋ ಎಂದಳು ಆಕೆ, ಇಲ್ಲ ಜಾಗ ದೊಡ್ಡದಾಗಿರುತ್ತೆ ಹಿಂಗೆ ಯಾಕೆ ಎಂದು ಛೇಡಿಸಿದ ಆತ. ಇಬ್ಬರೂ ಮುದ್ದು ಮುದ್ದಾಗಿ ನಕ್ಕರು. ಥು ಆ ಮೀಸೆ ಬಿಡೋ ನೀನು ಅಸಹ್ಯವಾಗಿದ್ಯ, ಮದುವೆ ಆದ್ಮೇಲೆ ಹಿಂಗಿರು ಆಮೇಲ್ ಇದೆ ನಿಂಗೆ ಸೀರೆ ಉಡ್ಸ್ತೀನಿ. ಒಹೊ ನೀನ್ ಉಗುರು ಕಟ್ ಮಾಡ್ತೀಯಾ ಹೇಳು ಒಳ್ಳೇ ರಾಕ್ಷಸಿ ಇದ್ದಂಗೆ ಇದ್ಯ ಥು. ಎಷ್ಟು ಕಷ್ಟ ಪಟ್ಟು ಬೆಳೆಸಿದ್ದೀನಿ ಹೋಗೋ ಕೋತಿ ಎಂದು ಅವರದೇ ಪ್ರಪಂಚದಲ್ಲಿ ಮಾತುಗಳು, ಮುತ್ತುಗಳು ಉದುರುತ್ತಲೇ ಇದ್ದವು, ಮುಳ್ಳಿನ ಮೇಲೆ ಕೂತಹಾಗಿತ್ತು. ಮಾಯವಾದೆವು
ರೆಸೋರ್ಟ್, ಗುಂಪಿನ ನಡುವೆ ಇದ್ದೆವು ಒಂದು ಕೈ ಹು ಹಿಡಿದಿದ್ದ, ಪಕ್ಕದಲ್ಲಿ ಉಹು ನಿಂತಿದ್ದ, ಇನ್ನೊಂದು ಕೈಲಿ ವೈನ್ ಹಿಡಿದಿದ್ದೆ. ಅದೇ ಅಬ್ಬರದ ಹಾಡು ಎಲ್ಲಾ ಕುಣಿಯುತ್ತಿದ್ದರು, ನಾವು ನಿಂತಿದ್ದೆವು ನಮ್ಮನ್ನು ಜೊತೆ ಸೇರಿಸಿಕೊಂಡು ಎಳೆದೊಯ್ದರು ಹಾಡಿಗೆ ತಕ್ಕಂತೆ ಕುಣಿದೆವು, ಕೂಗಿದೆವು, ಕುಡಿದೆವು, ಹಾಡಿದೆವು, ಸುಸ್ತಾಯ್ತು ಅಲ್ಲಿಂದ ಹೊರನಡೆದೆವು. ಮಜಾ ಬಂತು ಇಲ್ಲಿ ಏನ್ ತಪ್ಪಿತ್ತು ಗೊತ್ತಾಗಲಿಲ್ಲ. ಆಗಲೆ ದೂರದಲ್ಲಿ ನಿಂತು ನೋಡಿದಾಗಿನ ತಪ್ಪು ಮಾಡುವಾಗ ಗೊತ್ತಾಗುವುದಿಲ್ಲವಾ ಪ್ರಶ್ನೆ ಹುಟ್ಟಿತು! ಎಲ್ಲಾ ಆನಂದಿಸುತ್ತಿದ್ದವರ ಮುಖ ನೋಡಿದೆ ಆ ಅಮಾಯಕ, ಮುಗ್ಧ ನಗು ಮುಖಗಳು, ತೇಲಾಡುತಿದ್ದರು ತಮ್ಮದೇ ಪ್ರಪಂಚದಲ್ಲಿ, ಅವರನ್ನು ನೋಡುತ್ತಲೇ ಕಾರಿನಲ್ಲಿ ನಡೆದ ದೃಶ್ಯ ಮನಸಿಗೆ ಬಂತು ತಮ್ಮ ತಮ್ಮ ಜೀವನ ಅವರು ಬೇಕಾದಂಗೆ ಬದುಕುತ್ತಿದ್ದಾರೆ ಏನು ತಪ್ಪಿತ್ತು ಅದರಲ್ಲಿ, ಪ್ರೀತಿ ಎರಡೂ ಕಡೆಯಿಂದ ನಿಷ್ಕಲ್ಮಷವಾದಲ್ಲಿ, ತಮ್ಮ ಖಾಸಗಿ ಜೀವನದಲ್ಲಿ ಹೇಗಿದ್ದರೆ ಯಾರಿಗೆ ಏನಾಗಬೇಕಿದೆ?
ಪಾರ್ಕುಗಳ ಪೊಟರೆಗಳು, ರಸ್ತೆ ತಿರುವುಗಳು, ಕಾಲೇಜು, ಮಾಲ್ ಗಳು, ಸಿನಿಮಾ ಥಿಯೇಟರ್ ಗಳು, ಕೈಕೈ ಹಿಡಿದು ಅಲೆದಾಟಗಳು, ಕಲರ್ ಕಲರ್ ಗಿಫ್ಟುಗಳು, ತಿಂಡಿಗಳು, ತುಂಡು ಉಡುಗೆಗಳು, ತರಹೇವಾರಿ ಊಟಗಳು, ಮತ್ತಿನ ಸಾಮಾಗ್ರಿಗಳು, ಪ್ರೊಪೋಸಲ್ ಗಳು, ಪ್ರೈವೆಸಿಗಳು, ಎಲ್ಲವೂ ಹು ತೋರಿಸಿದಂತೆ ಸರಿಯಾಗೇ ಕಂಡವು, ಆದರೆ ಮತ್ತೆ ಉಹು ತೋರುವಂತೆ ತಪ್ಪಾಗೆ ಕಂಡವು. ಯಾವುದು ಸರಿ ಯಾವುದು ತಪ್ಪು ಎಂದು ಗೊಂದಲ ಮನದಲ್ಲಿ ಮೂಡಿತು. ಪಕ್ಕದಲ್ಲಿ ಇವರುಗಳು ಬೇರೆ ಮಾತಿಗೆ ಮಾತು ಬೆಳೆಸುತ್ತಲೇ ಇದ್ದರು. ಮಧ್ಯ ನಾನು ಎಡ ಬಲ ಹು ಮತ್ತು ಉಹು. ನೀನೂ ಈ ಪ್ರೇಮಿಗಳ ದಿನವನ್ನ ಆಚರಿಸಬೇಕಾ ಅಂತ ಉಹು, ಪ್ರೇಮಿಗಳ ದಿನವನ್ನ ವರ್ಷಕ್ಕೆ ಒಂದು ದಿನ ಅಲ್ಲ ಇಡೀ ವರ್ಷ ಆಚರಿಸು ಅಂತ ಹು. ಉಹು: ಪ್ರೀತಿಗೆ ಮಹಲು, ಗೋಪುರಗಳನ್ನ ಕಟ್ಟಿರೋ ಸಂಸ್ಕೃತಿ ನಮ್ಮದು ಅದನ್ನ ಬೀದಿಗಳಿಗೆ ತರೋ ಸಂಸ್ಕೃತಿ ನಮಿಗೆ ಬೇಕಾ? ಹು: ಓಪನ್ ಆಗಿ ಪ್ರೀತಿ ಕೂಡ ಹಂಚಿಕೊಳ್ಳೋಕಾಗದೇ ಕದ್ದು ಮುಚ್ಚಿ ಪ್ರೀತಿ ಮಾಡು ಅಂತ ನಮ್ಮ ಸಂಸ್ಕೃತಿ ಹೇಳುತ್ತಾ? ಉಹು: ಪ್ರೀತಿ ಹೆಸರಿನಲ್ಲಿ ಅನೈತಿಕವಾಗಿ ನಡೆದುಕೊಳ್ಳೋದನ್ನ ಪ್ರೀತಿ ಅಂತಾರ? ಹು: ಒಬ್ಬರಿಗೊಬ್ಬರು ಬದ್ಧರಾಗಿರೋವಾಗ, ಇಬ್ಬರ ಸಮ್ಮತಿಯೂ ಇದ್ದಲ್ಲಿ ತಮ್ಮ ರೀತಿಯಲಿ ಬದುಕುವುದರಲ್ಲಿ ತಪ್ಪೇನು? ಉಹು: ಒಬ್ಬರ ಜೊತೆ ಮನಸು ದೇಹ ಹಂಚಿಕೊಂಡು ಮತ್ತೆ ಇನ್ನೊಬ್ಬರ ಜೊತೆ ಮದುವೆಯಾಗಿರೋ ಎಷ್ಟು ಪ್ರಕರಣಗಳಿಲ್ಲ ಎಲ್ಲಾ ಇದೇ ಪ್ರೀತಿಯ ಮತ್ತಿನಲ್ಲಿ ಮಾಡಿಕೊಂಡಿದ್ದಲ್ಲವೇನು? ಹು: ಇದು ಇಬ್ಬರು ಪ್ರೇಮಿಸಿದವರನ್ನ ಮದುವೆಯಾಗದ ಹಾಗೆ ತಡೆಯೋ ಸಮಾಜದ ತಪ್ಪಾ, ಇಲ್ಲ ಪ್ರೇಮಿಗಳ ತಪ್ಪಾ? ಉಹು: ಇದು ಅಷ್ಟು ಸುಲಭವಾದ ಪ್ರಶ್ನೆ ಅಲ್ಲ, ಸುಮ್ಮನೆ ಯಾರನ್ನೋ ಇಷ್ಟ ಪಟ್ಟು ಪ್ರೀತಿ ಮಾಡೋದು ದೊಡ್ಡ ವಿಷಯವಲ್ಲ, ಮದುವೆ ಅನ್ನೋದು ಇಡೀ ಮುಂದಿನ ಜೀವನದ ನಿರ್ಧಾರ. ಹುರುಪಿನಲ್ಲಿ ಪ್ರೀತಿ ಮಾಡಿ ನಂತರ ಆಗುವ ಬ್ರೇಕಪ್ ಗಳಿಗೆ ಯಾರು ಹೊಣೆ? ಹು: ಇಡೀ ಸಮಾಜ, ಇಡೀ ವ್ಯವಸ್ಥೆ ಹೊಣೆ. ಪ್ರೀತಿಯನ್ನು ಮುರಿಯಲು ಒಟ್ಟಾಗುವ ನಮ್ಮ ಸಮಾಜ, ಪ್ರೇಮವನ್ನು ಒಂದುಗೂಡಿಸುವ ಕಾರ್ಯದಲ್ಲಿ ಯಾಕೆ ಒಟ್ಟಾಗಿ ಸಹಕರಿಸುವುದಿಲ್ಲ. ಪ್ರೀತಿ ಮಾಡುವುದನ್ನೂ ಗುರು ಹಿರಿಯರಿಂದ ಮುಚ್ಚಿಟ್ಟು ತಪ್ಪು ನಿರ್ಧಾರ ತೆಗೆದ್ಕೊಳ್ಳುವುದರಲ್ಲಿ ಪರೋಕ್ಷವಾಗಿ ಕಾರಣರಾಗುವುದರ ಬದಲು, ಯಾಕೆ ತಮ್ಮ ತಮ್ಮ ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಕೊಟ್ಟು, ತಮ್ಮ ಜೀವನ ಬದುಕಲು ಬಿಟ್ಟು, ಅವರ ಅನನುಭವಿ ತಪ್ಪು ಹೆಜ್ಜೆಗಳನ್ನು ತೋರಿಸಿಕೊಟ್ಟು ಜೊತೆ ನಿಂತರೆ ನೀನು ಹೇಳಿದಂತಹ ತೊಂದರೆಗಳು ಎಲ್ಲಿ ಉಗಮಿಸುತ್ತವೆ?
ಇವರ ವಾಗ್ವಾದಗಳು ಮುಂದುವರೆಯುತ್ತಲೇ ಹೋಯ್ತು. ನನ್ನ ಕಿವಿಗಳು ಶಬ್ದಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದವು. ನನ್ನ ಕಣ್ಣುಗಳು ಈಗ ತೆರೆದುಕೊಂಡವು, ಮುದುಡಿದ ಮನಸು ಅರಳಿತು, ನಿಂತು ಹೋಗಿದ್ದ ನರನಾಡಿಗಳಲ್ಲಿನ ರಕ್ತ ಸಂಚಲನ ಈಗ ಮತ್ತೆ ಶುರುವಾದುವೇನೋ ಎನಿಸಿತು, ಅವಳು ಬರುತ್ತಿರುವತ್ತಲೇ ನೋಡಿದೆ. ಅವಳ ಮುಗ್ಧ ನಡಿಗೆ, ನನ್ನನ್ನು ಅಲ್ಲಿಂದಲೇ ನೋಡಿದ್ದಳೇನೋ ಎಂಬಂತೆ ನೇರವಾಗಿ ನನ್ನ ಬಳಿಗೆ ನಡೆದು ಬರುತ್ತಿದ್ದಳು. ನನಗೇ ಅರಿವಿಲ್ಲದಂತೆ ನನ್ನ ಕಾಲುಗಳು ಅವಳ ಕಡೆಗೆ ನಡೆಯತೊಡಗಿದವು. ವಾಗ್ಧಾಳಿಯಲ್ಲಿ ತೊಡಗಿದ್ದ ಪುಣ್ಯಾತ್ಮರು ಮೂಕಾಗಿ, ಗಮನ ನನ್ನ ಕಡೆ ಕೇಂದ್ರೀಕರಿಸಿ ನನ್ನ ಕಡೆಗೇ ನೋಡುತ್ತಿದ್ದರೆಂದು ಕಾಣುತ್ತದೆ. ನಾನು ಯಾರನ್ನೂ ಲೆಕ್ಕಿಸಲಿಲ್ಲ, ಸೀದಾ ಹೋದೆ ಕೈಲಿದ್ದ ಹೂವನ್ನು ಮುದುಡುವ ಮುನ್ನ ಅವಳ ಕೈ ಸೇರಿಸಿದೆ. ಅವಳ ಕೈ ಹಿಡಿದು ಬಂದಿದ್ದವಳು, ಅವಳನ್ನು ನನ್ನ ಕೈ ಸೇರಿಸಿ ಅವಳ ಕಿವಿಯಲ್ಲಿ ಏನೋ ಉಸುರಿ ಹೋದಳು. ಅವಳ ಕೈ ಹಿಡಿದು ಅಂಗೈ ಮೇಲೆ ಹೊರಡೋಣವಾ ಎಂದು ಬರೆದೆ ಅವಳ ನಗುಮುಖದಲ್ಲೇ ಹ್ಮ್.. ಎಂದಳು. ಅವಳ ಮುಖದಲ್ಲಿ ಯಾವತ್ತೂ ಕುಂದದ ಆ ನಗು ಎಲ್ಲಿಂದ ಪಡೆದುಕೊಂಡಿದ್ದಳೋ. ಈ ಪ್ರಪಂಚವನ್ನ ನೋಡದೇ ಇರೋದ್ರಿಂದ ಹಾಗೇನೋ ಗೊತ್ತಿಲ್ಲ. ಎಲ್ಲಿಗೆ ಹೊರಟಿದ್ವೋ ಅದೂ ಗೊತ್ತಿಲ್ಲ, ಎಲ್ಲಿಗೆ ಅಂತ ಅವಳೂ ಕೇಳಲಿಲ್ಲ. ನಡೆದುಹೊರಟೆವು. ಹು ಮತ್ತು ಉಹು ಮಾತು ನಿಲ್ಲಿಸಿದ್ದರು. ಅವರಲ್ಲಿ ಏನು ನಿರ್ಧಾರವಾಯಿತೋ ನನಗೆ ಬೇಕಿರಲಿಲ್ಲ. ಪ್ರೇಮಿಗಳ ದಿನ, ಸಮಾಜ, ತಪ್ಪು, ಸರಿ ಯಾವ ಪರಿವೆಯೂ ಕೂಡ ನಮಗೆ ಬೇಕಿರಲಿಲ್ಲ. ನಾನೇ ಅವಳ ಕಣ್ಣು, ಅವಳೇ ನನ್ನ ಮಾತು, ಇದುವೇ ನಮ್ಮ ಸಂಸಾರ. ಪ್ರೇಮವೇ ನಮ್ಮ ಮಾರ್ಗ.

ಹಿನ್ನುಡಿ: ಏನು ಬರೆಯುವುದೋ ನನಗೂ ಗೊತ್ತಿಲ್ಲ. ವಿಚಾರ ನಿಮ್ಮ ತಲೆಯಲ್ಲಿ ಬಿತ್ತನೆಯಾಗಲಿ. ನಿಮ್ಮ ನಿಮ್ಮ ತಪ್ಪು ಸರಿಗಳನ್ನ ನೀವೇ ಕಂಡುಕೊಳ್ಳಿ!

ನಮ್ಮೂರ ರಸ್ತೆಯಲಿ!!!!!!!!!!!!!!!!!!!!!!!


ಮುನ್ನುಡಿ: ಏನೂ ಹೇಳುವುದಿಲ್ಲ! ಓದಿ!

ಪ್ರಪಂಚ ಸುತ್ತುತ್ತಿದೆ. ಇದೇನಿದು ಇಷ್ಟು ವೇಗವಾಗಿ ಸುತ್ತುತ್ತಿದೆ ಇವತ್ತು. ಹೋ!!… ಹೋ!!!…….. ಹೋ!!!!…………..
ಯಾರೋ ಕಿರಾತಕರು ಭೂಮಿನಾ ತೊಗೊಂಡು ಗಿರಗಿಟ್ಟಲೆ ಮೇಲೆ ಇಟ್ಬಿಟ್ಟಿದಾರೆ ಅನ್ಸುತ್ತೆ. 
ಕಣ್ಣು ಬಿಡಕ್ಕಾಗ್ತಿಲ್ಲ, ಪಿನ್ ನಿಂದ ಕಣ್ಣಿಗೆ ಚುಚ್ಚಿದಂಗೆ ಇದೆ, ಯಾರೋ ಬಾಳೆ ಹಣ್ಣಿನ ಸಿಪ್ಪೆ ಬಿಸಾಕಿದ್ರೇನೋ ತುಳಿದೆ ಜಾರಿದೆ. 
ಗಾಡಿಗಳ ಡರ್‍ರ್‍ರ್‍ರ್‍ರ್‍ರ್‍ರ್‍ ಪೀಈಈಈಈ ಸದ್ದು ಮಾತ್ರ ಕೇಳಿ ಬರುತ್ತಿದೆ. ಹೋ….!! ಎಲ್ಲೀ ಹಾರುತ್ತಿದ್ದೀನಿ ಕಾಲುಗಳು ನಿಲ್ಲುತ್ತಿಲ್ಲ ಹಯ್ಯೋ ಯಾರಾದರೂ ಹಿಡಿಯಿರಿ ಹ..ಹ..ಹ.. ಆಕಾಶದಲ್ಲಿ ತೇಲ್ತಾ ಇದ್ದೀನಿ, ಚೆನ್ನಾಗಿದೆ. ಹೆಗಲಮೇಲೆ ಇದ್ದ ಭಾರದ ಜೊತೆಗೆ ಮೈ ಭಾರ ಕೂಡ ಕಡಿಮೆ ಆದಹಾಗೆ ಅನ್ನಿಸ್ತಿದೆ. ಇನ್ನೂ ಮೇಲೆ ಮೇಲೆ ಹೋಗ್ತಾನೇ ಇದ್ದೀನಿ ಎಲ್ಲಿಗೆ ಹೋಗ್ತಿದ್ದೀನೋ ತಿಳೀತಿಲ್ವೇ. 
ಹೊ! ಏರೋಪ್ಲೇನ್ ಬಂತು ಹಯ್ಯಯ್ಯೋ ನನ್ನ ಕಡೆಗೆ ಬರ್ತಾಇದೆ. ಗುದ್ದುತ್ತೆ. ಹಯ್ಯೋ ಬಂತು… ಬಂತು…. ಸರಕ್!!.. ನನ್ ಪ್ಯಾಂಟ್ ಹಿಂಭಾಗ ಕಿತ್ಕೊಂಡೋಯ್ತು. ಉಫ್ ಬಚಾವಾದೆ. 

ಆಹಾ ನಿದ್ರೆ ಬರ್ತಾಯಿದೆ. ಈ ತಂಪು ಗಾಳಿಗೆ.

ಅದೇನೋ ಸುಗಂಧದ ವಾಸನೆ ಬರುತ್ತಿತ್ತು, ಮೆತ್ತನೆಯ ಹಾಸಿಗೆಯಲ್ಲಿ ಮಲಗಿದ್ದೆ, ಕಣ್ಬಿಟ್ಟೆ!!!!! ಆಹಾ! ಇದಾವುದಪ್ಪಾ ಜಾಗ ಎಂದು ಕಣ್ಣುಬಿಡುವಷ್ಟರಲ್ಲಿ, ನನ್ನ ಹೆಂಡತಿ, ಮೈತುಂಬಾ ಆಭರಣಗಳನ್ನೇ ಉಟ್ಟು ನಡೆದು ಬಳಿಗೆ ಬಂದು ಕುಡಿಯಲು ಅಮೃತ ಕೊಟ್ಟಳು. ಇವಳನ್ನೇ ನಾನು ಮದುವೆ ಆಗಿದ್ದಾ! ಇದೇನ್ ಬಂತು ಇವಳಿಗೆ ಕೇಡುಗಾಲ ಇಷ್ಟು ಸೂಪರ್ ಆಗೋಗಿದ್ದಾಳಲ್ಲಾ. ಸ್ನಾನ ಮಾಡ್ದೇನೇ? ಇದೇನೇ ಹಿಂಗೆ ಹೊಳಿತಿದ್ಯಾ? ಏನ್ ಬಂತು ನಿಂಗೆ ರೋಗ ಅಂದೆ. ಕುಡೀರ್ರೀ ಸುಮ್ಮನೆ ರೇಗ್ಸಿದ್ದು ಸಾಕು ಅಂದ್ಳು. ಇದಾವುದೋ ನರಕ ಇರಬೇಕು. ಏನೋ ಮಸಲತ್ತಿದೆ ನನ್ನನ್ನ ಇಲ್ಲಿ ತಂದು ಸಿಕ್ಕಿಹಾಕಿಸಿದ್ದಾರಲ್ಲ, ಇವಳು ಯಾರೋ ಮಾಯಾವಿ ಇರಬೇಕು ನನ್ನ ಹೆಂಡತಿ ನನಗೆ ಪ್ರೀತಿಯಿಂದ ಅಮೃತ ಕೊಡೋದು!!!! ಅದು ನನ್ನನ್ನ ನೋಡಿ ಹಲ್ಲು (ಪ್ರಧಮ ಬಾರಿಗೆ ಬಿಳೀಗಿದೆ) ಕಾಣುವ ಹಾಗೆ ಮುಗುಳುನಗ್ತಿದ್ದಾಳೆ ಓಹೋ! ನಾನು ಬದುಕೇ ಇಲ್ಲ ಹಾಗಾದ್ರೆ ಭೂಮಿ ಪ್ರಳಯ ಆಗೋಗಿದೆ ಅಂತ ಎದ್ದು ಮೊದಲು ಅಲ್ಲಿಂದ ಬೇಲಿ ಕಿತ್ತೆ. ಓಡಿ ಬರುವ ಮುನ್ನ ಹೆಂಡತಿಯ ಕೈಲಿದ್ದ ಅಮೃತ ಕಸಿದುಕೊಂಡು ಬರುವುದನ್ನ ಮರೆಯಲಿಲ್ಲ. ಎಷ್ಟು ದೂರ ಓಡಿ ಬಂದರೂ ಅದೇನೋ ವಿಚಿತ್ರವಾಗಿ ಮೃಧುವಾದ ಧ್ವನಿಯಲ್ಲಿ ಡಾಲಿಂಗ್ ಡಾಲಿಂಗ್ ಅಂತಾ ಬಡ್ಕೋತಿದ್ದಿದ್ದು ಕೇಳಿಸುತ್ತಿತ್ತು.

ರಸ್ತೆಯಲ್ಲಿ ನಡೆದುಬರುತ್ತಾ ನೋಡಿದರೆ ಊರೆಲ್ಲಾ ಹಾಗೇ ಇದೆ ಇನ್ನೂ ಪ್ರಳಯ ಆಗಿಲ್ಲ! ಆದ್ರೆ ಇದಾವುದೋ ನಮ್ಮ ಊರಿನ ತರಹಾನೇ ಕಾಣ್ತಿಲ್ಲ. ಏನೋ ವಿಚಿತ್ರವಾಗಿದೆ. ಯಾಕ್ ಹೀಗಿದೆ ಅಂತ ಸುತ್ತ ನೋಡಿದೆ. ರೋಡ್ ಮೇಲೇನೋ ಟಾರ್ ಬಿದ್ದಿತ್ತು ಆದರೆ ಟಾರ್ ಮೇಲೆ ಹೊಂಡಗಳೇ ಇಲ್ಲ. ಇದೇನ್ ಊರಪ್ಪಾ! ಹೆಂಗೆ ಬದುಕ್ತಾರೆ ನಮ್ ಜನ ಇಲ್ಲಿ. ಇದು ನಮ್ಮೂರಲ್ಲ ಇದಾವುದೋ ಬೇರೆ ಊರು ಸಂಶಯ ಶುರುವಾಯ್ತು. ಅಲ್ಲೇ ಸೈಕಲ್ ಮೇಲೆ ಜಾರುತ್ತಿದ್ದ ಯಾರೋ ಒಬ್ಬ ಯುವಕನ್ನ ಕೇಳ್ದೆ. ಸಾರ್ ಇದು ನಮ್ಮೂರ ಅಂದೆ. ಗೊತ್ತಿಲ್ಲ ಸಾರ್ ಅಂದ. ಥು ಇದು ಹಿಂಡಿಯಾನಾ ಅಂದೆ. ಹೌದ್ರೀ ಯಾಕ್ ತಲೆ ಕೆಟ್ಟಿದ್ಯಾ ಅಂದ. ಇಲ್ಲ ಕಣ್ಣು ಕಾಣ್ತಿಲ್ಲ ಅಂದೆ. ಹಾಸ್ಪಿಟಲಾ ಎಲ್ಲಿದೆ ಅಂದೆ ಆತ ಏನೂ ಹೇಳಲಿಲ್ಲ. ಹೋ ಇದು ನಮ್ಮೂರೆ ಏನೋ ವಿಚಿತ್ರವಾಗಿ ಕಾಣ್ತಿದೆ ಆದ್ರೆ ಜನ ಮಾತ್ರ ಹಂಗೇ ಇದ್ದಾರಲ್ಲ! ಕೈಲಿದ್ದ ಅಮೃತದ ಶೀಶೆ ಗಟಗಟನೆ ಎತ್ತಿದೆ. ಹಂಗೇ ನಡೆದುಬರುತ್ತಾ ಆಸ್ಪತ್ರೆ ಕಾಣ್ತು ಇದೇನೋ ನಾನು ಇವತ್ತಿನ ವರೆಗೂ ಕಾಣದ ದೃಶ್ಯ ಕಂಡೆ. ಖಾಕಿ ಬಟ್ಟೆ ಹಾಕೊಂಡು ಎಲ್ಲರ ಶುಶ್ರೂಷೆ ಮಾಡ್ತಿದಾರೆ! ಇದೇನ್ ಇದು ಖಾಕಿ ಬಟ್ಟೆಯವರಗೆ ಇಲ್ಲೇನ್ ಕೆಲಸ. ಕುತೂಹಲಕರವಾಗಿದ್ಯಲ್ಲ!! ಎಲ್ಲ ರೋಗಿಗಳನ್ನೂ ಖಾಕಿಯವರೇ ರಿಪೇರಿ ಮಾಡ್ತಿದ್ರು. ತಲೆಕೆಟ್ಟಂಗಾಯ್ತು. ಇನ್ನೊಂದಷ್ಟು ಅಮೃತ ಸುರುವಿಕೊಂಡೆ. ಹಾಗೆ ಅಲ್ಲಿಂದ ಬಂದೆ ಇನ್ನು ಸ್ವಲ್ಪ ಹೊತ್ತು ಅಲ್ಲಿದ್ರೆ ತಲೆ ಕೆಡೋದ್ ಗ್ಯಾರಂಟಿ ಇತ್ತು. ನನಗೆ ನೆನಪಿರೋದು ಖಾಕಿ ಹಾಕಿರೋರು ಹಾಸ್ಪಿಟಲ್ ಗೆ ಕಳಿಸೋದು ಮಾತ್ರ ಇದೇನೋ ಮಾಯೆನೇ ಅಗೋಗಿದೆ. ಒಟ್ಟಿನಲ್ಲಿ. ನಮಗ್ಯಾಕಪ್ಪ ಬೇರೆಯವರ ಉಸಾಬರಿ, ಅವರತ್ರ ಚಿಕಿತ್ಸೆ ಮಾಡಿಸಿಕೊಳ್ತಿರೋ ರೋಗಿಗಳ ಪಾಡು ಮಾತ್ರ ಭಯಾನಕವೆನ್ನಿಸಿತು. ಹೊರಬಂದೆ.

ಆದ್ರೆ ಖಾಕಿಯವರೆಲ್ಲಾ ಆಸ್ಪತ್ರೆ ಸಾರಿದಮೇಲೆ ಠಾಣೆಯಲ್ಲಿ ಯಾರಿದ್ದಾರಪ್ಪ ನೋಡೇ ಬಿಡೋಣ ಅಂತ ಹುಡುಕಿ ಹುಡುಕಿ ಹೋದೆ. ಹುಡುಕಿ ಹುಡುಕಿ ಹೋಗಿದ್ದೇ ಬಂತು ಮಣ್ಣು ಅಲ್ಲೇನಿತ್ತು ಖಾಲಿ ಠಾಣೆ. ಇದು ಗೊತ್ತಿರಬೇಕಿತ್ತು ನನಗೆ ಮತ್ತೆ ಇಲ್ಲ ನಾನು ಇನ್ನಾ ನಮ್ಮೂರಲ್ಲೇ ಇದ್ದೀನಿ ಅಂತ ಖಾತ್ರಿಯಾಯ್ತು. ಆದರೆ ಕಟ್ಟಡದ ಹಿಂದೆ ಇರೋ ಮೈದಾನದಲ್ಲಿ ಏನೋ ಶಬ್ಧ ಬರುತ್ತಿತ್ತು. ಏನು ಅಂತ್ ಇಣುಕಿನೋಡಿದ್ರೆ ಎಲ್ಲಾ ಮಿಲಿಟರಿ ಮನುಷ್ಯರು. ಅದೇನ್ ಕಟ್ಟು ಮಸ್ತಾದ ದೇಹ ಏನ್ ಕಥೆ ಇವರೆಲ್ಲಾ ಸ್ಟೇಷನ್ ಅತ್ರ ಏನ್ ಮಾಡ್ತಿದಾರಪ್ಪ. ಒಳಗೆ ಸೆಲ್ ಗಳು ನೋಡಿದ್ರೆ ಖಾಲಿ ಖಾಲಿ, ಇವರು ವ್ಯಾಯಾಮ, ಡ್ರಿಲ್ ಮಾಡ್ಕೊಂಡಿದ್ದಾರೆ ಮತ್ತೆ ಇದು ನಮ್ಮೂರಲ್ಲ ಅಂತ ಸಂಶಯ ಬಲವಾಯ್ತು. ನನ್ನ ಕಣ್ಣು ನಂಬೋಕೆ ಸಾಧ್ಯ ಇಲ್ಲ. ಹೊಟ್ಟೆಗಳು ಒಂದಾದ್ರು ಬೇಡ್ವಾ. ತಿಂದ ಲಂಚದ ಭಿಕ್ಷೆಯೆಲ್ಲಾ ಹೊಟ್ಟೆಗೆ ಹೋಗ್ದೆ ಎಲ್ಲಿ ಹೋಯ್ತು ಗುರುವೇ ಅಂತ ತಲೆಗೆ ಎಷ್ಟೋ ಹೊತ್ತು ಕೆಲಸ ಕೊಟ್ಟೆ. ಅಮೃತ ಇನ್ನೊಂದಷ್ಟು ಏರಿಸಿದೆ.

ತಲೆ ಗಿರ್‍ರ್‍ರ್‍ರ್‍ರ್‍ರ್‍ ಅಂತ ತಿರುಗುತ್ತಿತ್ತು. ನಿಂತಲ್ಲೇ ಇದ್ದಕಿದ್ದಹಾಗೆ ನಾಯಿ ಉಚ್ಚೆ ಮುಖದ ಮೇಲೆಲ್ಲಾ ಬಿತ್ತು ಎಲ್ಲಿಂದ ಬಿತ್ತು ಗೊತ್ತಾಗಲಿಲ್ಲ. ಮೇಲೆಲ್ಲಾ ನೋಡಿದೆ. ನಾಯಿಯೇನ್ ಮೇಲೆ ಹತ್ತಿತ್ತಾ. ಇದೇನಪ್ಪಾ ಒಂದೂ ಅರ್ಥವಾಗಲಿಲ್ಲ. ಹಂಗೇ ಮುಖ ಒರೆಸಿಕೊಂಡು ಥು ಅಸಹ್ಯ ಕೈಲಿದ್ದ ಅಮೃತವನ್ನೇ ಮುಖಕ್ಕೆಲ್ಲಾ ಸುರುವಿಕೊಂಡೆ. ನಂತರ ಸರಿ ಹೋಯ್ತು. ಆದ್ರೆ ನಾಯಿ ಮೂತ್ರ ಮುಖದ ಮೇಲೆ ಎಲ್ಲಿಂದ ಬಿತ್ತು ಗೊತ್ತೇ ಆಗಲಿಲ್ಲ. ತಲೆಗೆ ಜಾಸ್ತಿ ಕೆಲಸ ಕೊಡೋದ್ ಒಳ್ಳೇದಲ್ಲ ಅಂತ ವಿಷಯವನ್ನ ಅಲ್ಲೇ ಮರೆಯೋದೇ ಸೂಕ್ತ ಅಂತ ಅಲ್ಲೇ ಬಿಟ್ಟೆ. ಅಮೃತ ಏರಿಸಿಬಿಟ್ಟೆ. ಮುಂದೆ ಒಂದಷ್ಟು ಸೈಕಲ್ ಗಳು ಹೋಗುತ್ತಿದ್ವು. ಎಲ್ಲಾ ಒಂದೇ ತರಹದ ಬಿಳಿ ಕೋಟುಗಳನ್ನ ಧರಿಸಿದ್ರು. ಅರೆರೆ ಡಾಕ್ಟರ್ ಗಳು ಬಡ್ಡಿ ಮಕ್ಳು ಇಲ್ಲೆಲ್ಲಿಗೋ ಹೋಗ್ತಿದಾರೆ. ನಾನು ಅವರುಗಳು ಹೋಗುತ್ತಿದ್ದ ಕಡೆಗೆ ತೂರಿದೆ. ಯಾವುದೋ ದೊಡ್ಡು ಗೋಡೆ ದಾಟಿ ಒಳಗೆ ಹೋದ್ರೆ. ಡಾಕ್ಟರ್ ಗಳದ್ದೇ ಸಂತೆ. ದೊಡ್ಡ ಓಪನ್ ಸಭಾಂಗಣ. ಬಿಸಿಲಲ್ಲೇ ಕೂತು ಎಲ್ಲಾ ಏನೋ ಬರೆದುಕೊಳ್ತಿದ್ರು. ಮುಂದೆ ಮಧ್ಯದಲ್ಲಿ ಯಾರೋ ಇವರನ್ನೆಲ್ಲಾ 
ನಿಯಂತ್ರಿಸುತ್ತಿದ್ದವನಿರಬೇಕು. ಆ ವ್ಯಕ್ತಿ ಏನೋ ಮಾತನಾಡುತಿದ್ದ. ಇವರುಗಳೆಲ್ಲಾ ತಮ್ಮ ತಮ್ಮ ಟೇಬಲ್ ಗಳ ಮೇಲಿರುವ ದಪ್ಪ ಪುಸ್ತಕದಲ್ಲಿ ಏನೋ ಹುಡುಕಿ ಹುಡುಕಿ ಹೆಕ್ಕಿ ಉತ್ತರ ನೀಡುತ್ತಿದ್ದರು. ಮೊದಲೇ ಡಾಕ್ಟರ್ ಗಳಲ್ವಾ ಅವರು ಮಾತನಾಡುತ್ತಿದ್ದುದು ಏನೋ ವಿಚಿತ್ರವಾದ ಸಮಸ್ಯೆಯ ಬಗ್ಗೆ ಅಂತ ಗೊತ್ತಾಗುತ್ತಿತ್ತು. ಆದರೆ ಏನೂ ಅಂತ ಅರ್ಥವಾಗಲಿಲ್ಲ. ತುಂಬಾ ಓದಿರ್ತಾರಪ್ಪ. ಅದಕ್ಕೆ ಎಂಥ ರೋಗಗಳನ್ನೂ ಗುಣಪಡಿಸ್ತಾರೆ ಅಂತ ಮನಸಲ್ಲೇ ಅಂದುಕೊಂಡು ಬಾಯಿ ಕಳೆದುಕೊಂಡು ಅವರುಗಳನ್ನೇ ನೋಡಿದೆ. ಆದರೆ ಪಾಪ ಈ ಬಿಸಿಲಿನಲ್ಲಿ ಇವರುಗಳನ್ನ ಕೂರಿಸಿ ಯಾಕೆ ಇಷ್ಟು ಕಷ್ಟ ಕೊಡ್ತಿದ್ದಾರೋ ಇವರುಗಳಿಗೆ ಅಂತ ಅಲ್ಲೇ ಒಬ್ಬನನ್ನ, ಯಾಕ್ರಣ್ಣ AC ರೂಮ್ ಬರವೇ ನಿಮಗೆ ತಣ್ಣಗೆ ಕೂರೋದ್ ಬಿಟ್ಟು ಇಲ್ಲಿ ಈ ಕಷ್ಟ ಪಡೋದ್ ಬೇಕಿತ್ತೇ ಅಂದೆ. ಶ್… ದಯವಿಟ್ಟು ನಿಮ್ಮ ಮನೆಗೆ ಇವತ್ತು ಸಂಜೆ ಅಲ್ನೋಡಿ ಆ ಮೂರನೆ ಸಾಲಿನಲ್ಲಿ ಇದ್ದಾರಲ್ಲ ಆ ವ್ಯಕ್ತಿ ವಿಶ್ವಾಸ್ ಅವರು ಬಂದಾಗ ಏನ್ ಹೇಳ್ಬೇಕಿದ್ಯೋ ಹೇಳ್ಕೊಳ್ಳಿ ಅವರು ನಿಮ್ಮ ಸಮಸ್ಯೆಯನ್ನ ಸರಿಪಡಿಸ್ತಾರೆ ಅಂದ. ನಮ್ಮನೇಗಾ ನನ್ಗೇನಾಗಿದೆ. ಸಾರ್ ದಯವಿಟ್ಟು ಕ್ಷಮಿಸಿ ನಿಮ್ ಮಾತುಗಳು ಕೇಳೋ ಸಮಯ ಇಲ್ಲ ಅಂತ ಅಲ್ಲ ಆದ್ರೆ ಇಲ್ಲಿ ಸರಿಯಾಗಿ ತಿಳಿದುಕೊಳ್ಳದಿದ್ರೆ, ಒಂದು ಮೂರು ಜನಕ್ಕೆ ತೊಂದರೆ ಆಗುತ್ತೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಅಂದ, ಯಾಕೆ ಏನ್ ಸಮಸ್ಯೆ ಅಂದೆ. ಆ ವ್ಯಕ್ತಿ ಬರೆಯುತ್ತಿದ್ದುದನ್ನು ಬಿಟ್ಟು ಸಾರ್ ನನಿಗೆ ಮತ ನೀಡಿರೋ ಮೂರು ಜನರ ಮನೆಯಲ್ಲಿ ಒಂದು ಚಿಕ್ಕ ಸಮಸ್ಯೆ ಇದೆ. ಕ್ಷಮಿಸಿ ಏನ್ ಸಮಸ್ಯ್ ಅಂತ ಹೇಳೋಕಾಗೊಲ್ಲ. ೨೪ ಘಂಟೆಯಲ್ಲಿ ನಿವಾರಿಸಲೇ ಬೇಕು ಇಲ್ಲವಾದಲ್ಲಿ ನಾನು ರಾಜಿನಾಮೆ ಕೊಡುತ್ತೇನೆ ಅಂತ ನಿರ್ಧಾರ ಮಾಡಿದ್ದೇನೆ. ದಯವಿಟ್ಟು ಕ್ಷಮಿಸಿ. ಆಮೇಲೆ ಮಾತನಾಡೋಣ ಅಂದ. ಎದೆ ಹೊಡೆದುಕೊಳ್ಳುವುದೇ ಎರಡೇನು ಐದು ನಿಮಿಷ ನಿಂತು ಹೋಯ್ತು. ಸತ್ತೆ ಅಂದುಕೊಂಡೆ. ಏನ್ ಆಗೋಯ್ತು. ಇದು ಸಾಧ್ಯನೇ ಇಲ್ಲಾ. ನಮ್ಮ ಪ್ರತಿನಿಧಿಗಳು, ನಮ್ಮ ನಾಯಕರು ಹೀಗೆ, ಹೆಬ್ಬೆಟ್ಟು ಒತ್ತೋದೆಲ್ಲ ಬಿಟ್ಟು, ಒಳ, ಒಣ, ರಣ ಜಗಳ ಆಡೋದ್ ಬಿಟ್ಟು, ಆಸ್ತಿ, ದುಡ್ಡು ದೋಚೋದ್ ಬಿಟ್ಟು ಈ ಲೆವೆಲ್ ಗೆ ಹಾಳಾಗೊಗಿದ್ದಾರಲ್ಲಾ. ಈ ಊರಾ ನಮ್ಮದಾಗೋಕೆ ಸಾಧ್ಯನೇ ಇಲ್ಲ. ಇಲ್ಲಿ ಇನ್ನೊಂದು ನಿಮಿಷ ಇದ್ರೆ ನಾನು ಹುಚ್ಚಾಸ್ಪತ್ರೆಯಲ್ಲಿ ಸೇರೋದು ಖಂಡಿತ. ಕೈಲಿದ್ದ ಅಮೃತವನ್ನ ಕುಡಿದೆ, ಕುಡಿದೆ, ಉಸಿರು ಬಂತು, ಹೊಟ್ಟೆ ತುಂಬ ಕುಡಿದೆ. ಹಯ್ಯೋ ನನ್ನ ಮಗಂದು, ಈ ಕೈಲಿರೋ ಅಮೃತದ ಶೀಶೆ ಇರೋದು ಎರಡಿಂಚು ಆಗ್ಲಿಂದ ಲೀಟರ್ ಗಟ್ಟಲೆ ಕುಡಿಯುತ್ತಲೇ ಇದ್ದೀನಿ, ಬರ್ತಾನೆ ಇದ್ಯಲ್ಲ. ಹೆಂಗೆ ಸಾಧ್ಯ ಅಂತ ಎಲ್ಲಾ ಚೆಲ್ಲಿದೆ ಬರ್ತಾನೇ ಇತ್ತು. ಭಯವಾಯ್ತು. ಬಿಸಾಡೋಣವೆಂದರೆ ಮನಸು ಬರಲೊಲ್ಲದು. ಶೀಶೆ ಹಿಡಿದುಕೊಂಡೇ ಓಡಿದೆ. 

ಹೋ ಇದು ಊರೇ ಅಲ್ಲಾ. ಇದು ನರಕ, ಇಲ್ಲಿಂದ ತಪ್ಪಿಸ್ಕೊಂಡು ಮೊದಲು ಜೀವ ಉಳಿಸಿಕೊಳ್ಬೇಕು ಅಂತ ಜೀವ ಇರುವ ತನಕ ಓಡಿದೆ. ಓಡುತ್ತಾ ದಾರಿಯಲ್ಲಿ ನೋಡಬಾರದ ಘೋರ ದೃಶ್ಯಗಳನ್ನ ಈ ಕಣ್ಣುಗಳಲ್ಲಿ ನೋಡಿದ್ದಾಯ್ತು. ಮಣ್ಣಿನಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಜನರನ್ಸುತ್ತೆ ಅವರನ್ನೆಲ್ಲಾ ಕ್ಯಾಮೆರಾ ಹಿಡಿದು ಯಾರು ಯಾರೋ ಚಿತ್ರಿಸುತ್ತುದ್ದರು. ಅದರಲ್ಲಿ ಏನಿತ್ತೋ ಮಣ್ಣು ಗೊತ್ತಿಲ್ಲ. ಹೇಗೆ ಉತ್ತುವುದು, ಹೇಗೆ ಬಿತ್ತುವುದು ಅಂತಾನೂ ಚಿತ್ಸಿಸಿಕೊಂಡು ಜನಕ್ಕೆ ತೋರಿಸಿದರೆ ಯಾರ್ ನೋಡ್ತಾರೆ. ಇದನ್ನೆಲ್ಲಾ ಯಾಕೆ ತೆಗಿತಿದಾರೆ ಇವರು! ಹಯ್ಯೋ ನನಿಗ್ಯಾಕ್ ಬೇಕು ಓಡುತ್ತಲೇ ಇದ್ದೆ. ಓಡಿ ಓಡಿ ಓಡಿ ಇದಾವುದೋ ಗಡಿಗೆ ತಲುಪಿದೆ ಅನ್ಸುತ್ತೆ. ಒಂದಷ್ಟು ಜನ ಪಹರೆಗೆ ನಿಂತಂತೆ ಕಂಡರು ದೂರದಿಂದ. ಅವರು ನನ್ನನ್ನು ಸುಟ್ಟರೂ ಚಿಂತೆಯಿಲ್ಲ. ಮೊದಲು ನಾನು ಇಲ್ಲಿಂದ ಪಾರಾಗಬೇಕು ಅಂತ ಹತ್ತಿರ ಹೋದೆ. ಎಲ್ಲಾ ಕೈಲಿ ಗುಲಾಬಿ ಹಿಡಿದು ಖಾದಿ ತೊಟ್ಟು ಮಾತನಾಡುತ್ತಾ ಕುಳಿತಿದ್ದರು. ಹೃದಯ ನಿಂತು ಹೋಯಿತು. ಮತ್ತೆ ಕಣ್ಣುಗಳು ಚಲಿಸಲಿಲ್ಲ. ಕೈಕಾಲುಗಳು ಜೀವಕಳೆದುಕೊಂಡವು. ಇದ್ದಕಿದ್ದಂತೆ ಯಾರೋ ನನ್ನನ್ನ ಎಸೆದಂತಾಯಿತು. ಕೈಲಿದ್ದ ಅಮೃತ ಕೆಳಗೆ ಬಿದ್ದುಹೋಯಿತು.
ಥಟ್ಟನೆ ಎದ್ದು ಕುಳಿತೆ. ಜೋರಾಗಿ ಉಸಿರಾಡಿದೆ. ನನ್ನ ಅಮೃತದ ಶೀಶೆಗಾಗಿ ಹುಡುಕಿದೆ. ಇದಾವುದೋ ಬಾಟಲಿ ಖಾಲಿಯಾಗಿತ್ತು. ಚೂರು ಇದ್ದದ್ದಕ್ಕೆ ಬಾಯಿ ಹಾಕಿ ನೆಕ್ಕಿದೆ. ಕತ್ತಲಾಗಿತ್ತು. ಅದೇ ಡರ್‍ರ್‍ರ್‍ರ್‍ರ್‍ರ್‍ ಪೀಈಈಈಈಈಈ ಗಾಡಿ ಸುಂದರ ಗಾಡಿ ಶಬ್ದ. ಮುಖದ ಮೇಲೆ ಶ್ವಾನ ಮೂತ್ರದ ವಾಸನೆ. ಥು ಟೈಟಾಗಿ ಎಲ್ಲಂದ್ರಲ್ಲಿ ಬಿದ್ರೆ, ನಮ್ಮ ಕಾರ್ಪರೇಷನ್ ನಾಯಿಗಳು ಕೂಡ ಸುಮ್ಮನೆ ಬಿಡಲ್ಲಪ್ಪ. ನನ್ನ ಮಗಂದು ಎಲ್ಲೂ ಜಾಗ ಸಿಗಲಿಲ್ವ ಅದಕ್ಕೆ. ಮುಂಡೇದು ನಾಳೆ ಸಿಗಲಿ ಅದ್ಯಾವ್ ನಾಯಿನೋ ಪತ್ತೆ ಹಚ್ಚಿ ಕೇಸ್ ಹಾಕಬೇಕು. ಥು ಎಂದು ತೂರಾಡುತ್ತಾ ಎದ್ದು, ಗಲೀಜಾಗಿದ್ದ ಬಟ್ಟೆ ಒದರಿಕೊಂಡೆ. ಗಡ್ಡಾ ಕರೆದುಕೊಳ್ಳುತ್ತಾ ನಡೆದು ತೇಲುತ್ತಾ ಬಂದೆ ಯಾವನೋ ತಿಪ್ಪೆ ಹತ್ರ ಎತ್ತಿ ಹಾಕಿದ್ನೇನೋ ಪಾಪಿ ನನ್ ಮಗ ಈ ತರಹ ಸೋಷಿಯಲ್ ಸರ್ವೀಸ್ ತುಂಬಾ ಚೆನ್ನಾಗ್ ಮಾಡ್ತಾರೆ ನಮ್ ಜನ. ಎಂದು ಜೇಬಿಗೆ ಕೈ ಇಳಿ ಬಿಟ್ರೆ, ಬೆಳಿಗ್ಗೆ ೧೦ ರೂಪಾಯಿ ಇತ್ತು. ಅದೂ ಯಾರೋ ಎಗರಿಸಿದ್ರು. ಎಂದು ಅವರನ್ನೊಂದಷ್ಟು ಶಪಿಸಿಕೊಳ್ಳುತ್ತಾ ರಸ್ತೆಯಲ್ಲಿ ಕಾಲಿಟ್ಟೆ. ಹಳ್ಳದಲ್ಲಿರುವ ಕೊಚ್ಚೆ. ಪಚಕ್ ಎಂದು ಮೈಮೇಲೆ ಎರಚಿತು!

ಹಿನ್ನುಡಿ: ರಸ್ತೆಯಲ್ಲಿ ಇಂದು ನಡೆದು ಬರುತ್ತಾ, ಹಲವಾರು ಬಾರಿ ಕಂಡಂತೆ ಯಾರೋ ನನ್ನ ಈ ಕಥೆಯ ಕೇಂದ್ರ ಬಿಂದು ನೆಮ್ಮದಿಯಾಗಿ ಮಲಗಿತ್ತು. ಹಿಂದೆ ಹುಟ್ಟಿಸದ ಈ ಕಥೆಯನ್ನ ಇಂದು ಮೊಳಕೆಯೊಡಿಸಿತು. 
Hope You Enjoyed..  Your comment is my payment for your enjoymentJ Thank you…


Wednesday 8 February 2012

ಸವದಿ ಸ್ಥಾನದಿ ನನ್ನ ಸಮರ್ಥನೆಯ ದುರ್ಬುದ್ಧಿ!

ಮುನ್ನುಡಿ: ಉದ್ರೇಕಕೊಳಗಾಗದೆ ಶಾಂತವಾಗಿ ಓದುವವರಿಗೆ ಮಾತ್ರ!


ಏನ್ ಹೇಳೋದಕ್ಕೆ ಇಷ್ಟಪಡ್ತೀರಾ ಈ ಸಮಯದಲ್ಲಿ. ಮೀಡಿಯಾದವರ ಪ್ರಶ್ನೆ.
ಏನ್ ಹೇಳಲಿ ಇಂಥ ಸಂದರ್ಭದಲ್ಲಿ, ನನ್ನ ತಪ್ಪು ಇಷ್ಟು ದೊಡ್ಡದೆಂದು ನನಗೆ ಅನ್ನಿಸುತ್ತಿಲ್ಲ.
ನೀವು ಜನಪ್ರತಿನಿಧಿಯಾಗಿದ್ದುಕೊಂಡು ಈ ರೀತಿ ಮಾಡಿದ್ದೂ ಅಲ್ಲದೇ ನನ್ನ ತಪ್ಪು ಅಷ್ಟು ದೊಡ್ಡದಲ್ಲ ಎಂದು ಹೇಳುವುದು ವಿಷಾದದ ಸಂಗತಿಯಲ್ಲವೇ?
ಇಲ್ಲಾ ನನ್ನ ಬಳಿ ಸಮರ್ಥಿಸಿಕೊಳ್ಳಲು ಕಾರಣಗಳಿವೆ.
ನೀವು ಅಸೆಂಬ್ಲಿಯಲ್ಲಿ ಕೂತು ನೀಲಿ ಚಿತ್ರ ನೋಡುವ ಅಪರಾಧ ಎಸಗಿದ್ದೀರೆಂದು ಸಾಕ್ಷಿ ಸಮೇತ ವರದಿಯಾಗಿದೆ ಇದಕ್ಕೆ ಏನ್ ಹೇಳ್ತೀರಿ?
ಇದರಲ್ಲಿ ಅಪರಾಧ ಯಾವುದು. ಸದನದಲ್ಲಿ ಕೂತು ನೋಡಿದ್ದೋ? ಅಥವಾ ನೀಲಿ ಚಿತ್ರ ನೋಡಿದ್ದೋ?
ಎರಡೂ ಅಪರಾಧಗಳೇ ಅಲ್ಲವೇ?
ನನಗೆ ಹಾಗೆನಿಸುವುದಿಲ್ಲ. ಸದನದಲ್ಲಿ ಕಲಾಪ ನಡೆಯುವಾಗ ನೋಡಿದ್ದು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ. ಆದರೆ ಅದಕ್ಕಾಗಿ ಇಷ್ಟು ದೊಡ್ಡ ಇಶ್ಶ್ಯು ಮಾಡುವುದು ಯಾವ ನ್ಯಾಯ. ಸದನದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ನಾನು ಬೇರೆ ಕಡೆ ಗಮನ ಹರಿಸಿದ್ದು ನನ್ನ ತಪ್ಪೇ ಅದಕ್ಕಾಗಿ ನಾನು ಜನರಲ್ಲಿ ಮತ್ತು ಎಲ್ಲ ಸಂಬಂಧಪಟ್ಟವರ ಬಳಿ ಕ್ಷಮಾ ಯಾಚಿಸುತ್ತೇನೆ ಮತ್ತು ಇನ್ನು ಮುಂದೆ ಈ ರೀತಿ ತಪ್ಪೆಸಗದಂತೆ ಎಚ್ಚರವಹಿಸುತ್ತೇನೆ. ಆದರೆ ಈ ರೀತಿ ಕೇವಲ ನಾನು ಮಾತ್ರವಲ್ಲ ಚರ್ಚೆ ನಡೆಯುವಂತ ಸಂದರ್ಭದಲ್ಲಿ ನಮ್ಮ ಮಾನ್ಯ ಮುಖ್ಯಮಂತ್ರಿಗಳೂ ಸಹ ನಿದ್ರೆ ಮಾಡುತ್ತಿದ್ದುದುಂಟು, ಕೆಲವು ಕಲಾಪಗಳು ನಡೆಯದಂತೆ ಮಂತ್ರಿಗಳು ಗಲಾಟೆ ಎಬ್ಬಿಸಿ ತಡೆ ಹಾಕಿದ್ದುಂಟು, ಕೆಲವರು ಮಾತನಾಡುವಾಗ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿದ್ದುಂಟು, ಇನ್ನೊಮ್ಮೆ ಕುಸ್ತಿಯ ಅಖಾಡಕ್ಕೆ ಇಳಿದಿದ್ದುಂಟು, ಎಷ್ಟೋ ಜನ ಕಲಾಪಗಳಿಗೆ ಬರದೇ ಇರುವ ಉದಾಹರಣೆ ಎಷ್ಟು ಬೇಕು ನಿಮಗೆ, ಹೀಗೇ ಹೇಳುತ್ತಾ ಹೋದರೆ ಸಾವಿರ ಘಟನೆಗಳಿವೆ. ಅದಾವುದೂ ಇಷ್ಟು ದೊಡ್ಡ ಇಶ್ಶ್ಯೂ ಅಗದಿರುವುದು   ಈಗ್ಯಾಕೆ ನೀವು ಮೀಡಿಯಾದವರು ಎಳೆದಾಡುತ್ತಿದ್ದೀರ ಮತ್ತು ಜನತೆ ಯಾಕೆ ಇಷ್ಟು ಆಕ್ರೋಶ ವ್ಯಕ್ತ ಪಡಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ ನನಗೆ.

ಇನ್ನು ನೀಲಿ ಚಿತ್ರ ನೋಡಿದ್ದರ ಬಗ್ಗೆ, ನನಗೇನೂ ಅದು ತಪ್ಪೆಂದು ಅನಿಸುತ್ತಿಲ್ಲ. ಕಾಲೇಜ್ ಹುಡುಗರೇ ನೋಡುವಾಗ, ಪ್ರಬುದ್ಧವಾಗಿರುವ ನಾನು ನೋಡಿದರೆ ತಪ್ಪೇನು. ಅಷ್ಟಕ್ಕೂ ‘ನೀಲಿ’ ಚಿತ್ರ ಎಂದು ಕೀಳಾಗಿ ಹೇಳುವಹಾಗೆ ಯಾಕೆ ಬ್ರಾಂಡ್ ಮಾಡಲಾಗುತ್ತಿದೆ? ಸಾಂಸಾರಿಕ ಚಿತ್ರ, ಪ್ರೇಮಕಥೆಯುಳ್ಳ ಚಿತ್ರ, action oriented ಚಿತ್ರ, ಫಾಂಟಸಿ ಚಿತ್ರ, ಕಲಾತ್ಮಕ ಚಿತ್ರಗಳಾಂತೆಯೇ ಸೆಕ್ಸ್ ಓರಿಯೆಂಟೆಡ್ ಚಿತ್ರಗಳು, ಅಷ್ಟೇ! ಎಲ್ಲರೂ ಎಲ್ಲ ಚಿತ್ರಗಳನ್ನೂ ನೋಡಲಾಗುವುದಿಲ್ಲ. ಆದರೆ ಪ್ರತಿಯೊಂದು ರೀತಿಯ ಚಿತ್ರಕ್ಕೂ ಅದರದ್ದೇ ಆದ ಪ್ರೇಕ್ಷಕರು ಇದ್ದೇ ಇದ್ದಾರೆ ಅದಕ್ಕಾಗಿಯೇ ಎಲ್ಲ ರೀತಿಯ ಚಿತ್ರಗಳೂ ನಿರ್ಮಾಣವಾಗುತ್ತಿವೆ ನೆನಪಿರಲಿ.
ನಾನು ಚಿತ್ರ ನೋಡಿದ್ದು ತಪ್ಪಲ್ಲ ಆದರೆ ನೋಡಿದ ಸ್ಥಳ ಮತ್ತು ಸಮಯ ಸರಿ ಇರಲಿಲ್ಲ ಅದು ನಾನೂ ಸಹ ಒಪ್ಪುತ್ತೇನೆ. ನನ್ನ ಬೇಜವಾಬ್ದಾರಿ ತನದ ತಪ್ಪಿಗೆ, ಕರ್ತವ್ಯ ಲೋಪಕ್ಕೆ ನನಗೆ ತಕ್ಕ ಶಿಕ್ಷೆಗೆ ಸಿದ್ಧನಿದ್ದೇನೆ. ಆದರೆ ಅಪಪ್ರಚಾರ ಮಾಡುತ್ತಾ, ಬೇಕೆಂದೇ ಹೈಪ್ ದಯವಿಟ್ಟೂ ಸೃಷ್ಟಿಸಬೇಡಿ ಅದಕ್ಕೆ ಅರ್ಥವಿಲ್ಲ. ಧನ್ಯವಾದಗಳು

ಹೀಗೆ ಮನ ಬಿಚ್ಚಿ ಇರುವ ಸತ್ಯವನ್ನು ವೈಚಾರಿಕವಾಗಿ ಹೇಳಿ ಕತೆಯನ್ನು ಮುಗಿಸಬಹುದಿತ್ತೇನೋ. ಆದರೆ ಕೇಳುವ ವ್ಯವಧಾನ ಮೀಡಿಯಾದವರಿಗಾಗಲಿ, ಪ್ರತಿಭಟನೆ ಮಾಡುತಿದ್ದ ಪ್ರಜೆಗಳಿಗಾಗಲಿ ಇದ್ದಂತೆ ಕಾಣಲಿಲ್ಲ. ವಿಷಯವನ್ನು ಸಾಧಾರಣವಾಗಿ ಮುಗಿಸುವ ಇಚ್ಛೆ ಯಾರಿಗೂ ಇದ್ದಂತೆಯೂ ಕಾಣಲಿಲ್ಲ. ಎಲ್ಲಕ್ಕಿಂತ ಮೇಲಾಗಿ, ವೈಚಾರಿಕವಾಗಿ ಮಾತನಾಡುವ ಸಾಮರ್ಥ್ಯ ನಾಯಕರಿಗೆ ಇದ್ದಂತೆ ಮೊದಲೇ ಕಾಣಲಿಲ್ಲ. ಒಂದು ಚಿಕ್ಕ ತಪ್ಪನ್ನು ಮುಚ್ಚಿಹಾಕುವುದಕ್ಕೆ, ಮತ್ತೊಂದು ಸುಳ್ಳಿನ ಮೊರೆ ಹೊಕ್ಕು ಇನ್ನೂ ಗೊಂದಲದಲ್ಲೇ ಸಿಲುಕಿಕೊಂಡಿದ್ದರು.  ತಪ್ಪು ಮಾಡುವುದು ಮಾನವನ ಜನ್ಮಸಿದ್ದ ಹಕ್ಕು. ತಿದ್ದಿ ನಡೆಯುವುದೂ ಸಹ. ಒಪ್ಪಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಮತ್ತು ಒಪ್ಪಿಕೊಳ್ಳಲು ಧೈರ್ಯ ಬೇಕು. ಧೈರ್ಯವಿರುವಂತವರು ಸ್ಥಾನವನ್ನು ಅಲಂಕರಿಸಬೇಕು. ಒಬ್ಬ ಬಸ್ ಡ್ರೈವರ್ಗೂ ಸಹ ೮ ಬಾರಿ ಎಸಗಬಹುದಾದ ತಪ್ಪಿಗೆ ಕ್ಷಮೆಯಿದೆ. ತಪು ಎಲ್ಲರಿಂದಲೂ ಆಗುತ್ತದೆ. ಆದರೆ ಡ್ರೈವರ್ ತನ್ನ ಕೆಲಸಕ್ಕೆ ತರಬೇತಿ ಪಡೆದುಕೊಂಡಿರುತ್ತಾರೆ. ರಾಜಕಾರಿಣಿಯಾಗಲು, ಒಂದು ವಿದ್ಯಾಭ್ಯಾಸದ ಪರಿಮಿತಿಯಾದರೂ ಇಟ್ಟರೆ ಸರಿಹೋಗುತ್ತದೇನೋ. ಒಂದೋ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಾರೆ, ಏನಾದರೂ ಕರ್ತವ್ಯಲೋಪವಾದಲ್ಲಿ, ತಪ್ಪೊಪ್ಪಿಕೊಂಡು ತಿದ್ದಿಕೊಂಡು ಮುನ್ನಡೆಯುವ ಧೈರ್ಯಮಾಡುತ್ತಾರೆ. ಅಂಥವರು ಇನ್ನಾದರೂ ಬರಲೆಂದು ಹಗಲುಗನಸು ಕಾಣುತ್ತಾ ನನ್ನ ವಿತಂಡವಾದವನ್ನು ಮುಗಿಸುತ್ತೇನೆ.                                 
-       ಹೇಮಂತ್

Tuesday 7 February 2012

Chance-Choice (ಒಂದು ಸಕ್ಸಸ್ ಸೂತ್ರದ ಝಲಕ್)


Chance

“ಏನಪ್ಪ! ಏನಾಗಬೇಕಿತ್ತು! “
“ಸಾರ್ ಒಂದು ಚಾನ್ಸ್. ನಾನು ಏನು ಅಂತ ಪ್ರೂವ್ ಮಾಡಿತೋರಿಸ್ತೀನಿ ಸಾರ್”
“ಯೋ ಹೋಗಯ್ಯ ಸುಮ್ಮನೆ ತಲೆ ತಿನ್ನಬೇಡ, ನನ್ನ ಟೆನ್ಶನ್ ನಂಗೆ ನೀ….ನ್ ಬೇರೆ”
“ಸಾ….ರ್‍” ಎನ್ನುವಷ್ಟರಲ್ಲಿ ರಾಕಿ ಬಂದು ಮೈಮೇಲೆ ಎರಗೇಬಿಟ್ಟಿತು. ಒಮ್ಮೆ ದಿಗ್ಭ್ರಾಂತನಾದೆ. ರಾಕಿ.. ರಾಕಿ ಕಮ್ ಹಿಯರ್ ಎಂದು ಎಳೆದುಕೊಂಡು ಹೋದರು. ಅದು ಚಾನ್ಸ್ ಕೇಳಲೇ ಇಲ್ಲ ಅದೇನೆಂದು ನಿರೂಪಿಸಿತ್ತು. ನಾನು ನಿರೂಪಿಸಲು ಸಾಧ್ಯವಾಗಲೇ ಇಲ್ಲ. ಚಾನ್ಸ್ ಕೇಳುತ್ತಿದ್ದವನು ಸಹ ನಾನಾಗಿರಲಿಲ್ಲ. ಹೊರಬಂದೆ. ಇಲ್ಲ ಹೇಳಿಕಳುಹಿಸುತ್ತೇನೆ ಹೋಗಯ್ಯ ಎಂದು ಹೊರಗೆ ಕಳುಹಿಸಿದರು. ಅವರು ಹೇಳಿಕಳುಹಿಸುವುದಿಲ್ಲ ಎಂದು ನನಗೂ ಗೊತ್ತಿತ್ತು. ಅವರಿಗೂ ಗೊತ್ತಿತ್ತು ಅನ್ನಿಸುತ್ತದೆ. ಮನೆಯ ದಾರಿ ಹಿಡಿದೆ. ಸ್ನೇಹಿತರ ಬಳಿ ಕಥೆಗಳಿಗೆ ಕಲರ್ ಹಾಕಿ ಹೇಳುತ್ತಿದ್ದೆ ಅದೊಂದೇ ನನಗೆ ಸಿಕ್ಕ ಚಾನ್ಸ್ ಇಲ್ಲಿಯವರೆಗೂ. ಎಲ್ಲೋ ಶೂಟಿಂಗ್ ನಡೆಯುತ್ತಿದೆ ಎಂದಾಕ್ಷಣ ಹೋಗಿ ನಿಂತು ದಿನಪೂರ್ತಿ ನೋಡುತ್ತಾ, ಕಲಿಯುತ್ತಾ ನಿಂತಿರುತ್ತಿದ್ದೆ. ಸಿಕ್ಕ ಸಿಕ್ಕ ಡೈರೆಕ್ಟರ್ ಗಳ ಬಳಿ ಹೋಗಿ, ಕೆಲವು ಸಲ ಕಾಲಿಗೂ ಸಹ ಬಿದ್ದಿದ್ದೆ. ಹೆಡ್ಡನಂತೆ ಕಥೆಗಳನ್ನು ಕೊಟ್ಟುಬಂದಿದ್ದೆ. ಮೊನ್ನೆ ಒಬ್ಬರ ಮನೆಗೆ ಮೂರು ಕಥೆಗಳನ್ನು ಒಟ್ಟಿಗೆ ಕೊಟ್ಟು ಅದರಲ್ಲಿ ಪತ್ರ ಬರೆದು ನನ್ನ ಕಷ್ಟಗಳನ್ನು ತೋಡಿಕೊಂಡು ಅವರು ಚಾನ್ಸ್ ಕೊಟ್ಟರೆ ನನಗೆ ಆಗಬಹುದಾದ ಸಹಾಯದ ವಿವರಣೆ ಕೊಟ್ಟು ಪ್ಯಾಕೆಟ್ ಮಾಡಿ ಡೈರೆಕ್ಟರ್ ಗೆ ತಲುಪಿಸಲು ಹೇಳಿ ಮನೆಯವರಿಗೆ ಕೊಟ್ಟು ಬಂದಿದ್ದೆ. ಮಾರನೆ ದಿನ ಮತ್ತೆ ಮನೆಗೆ ಹೋಗಿ ಅಹವಾಲು ಹೇಳಿಕೊಳ್ಳೋಣವೆಂದು ಹೋದೆ. ಅದೇ ಸಮಯಕ್ಕೆ ಕೆಲಸದವಳು ಕಸದ ಬುಟ್ಟಿಯಲ್ಲಿ ಕಸದೊಂದಿಗೆ ನನ್ನ ಹಳದಿ ಪ್ಯಾಕೆಟ್ಟನ್ನೂ ಬಿಚ್ಚದೆಯೇ ತುಂಬಿಕೊಂಡು ಹೋಗಿ ಹಾಕಿ ಬಂದಳು. ಯಾಕೋ ಅದನ್ನು ಎತ್ತಿಕೊಳ್ಳುವ ಮನಸು ಬರಲಿಲ್ಲ, ಆ ಮನುಷ್ಯನನ್ನು ಭೇಟಿಯಾಗಲೂ ಮನಸು ಬರಲಿಲ್ಲ. ಅಲ್ಲಿಂದ ಹೊರಗೆ ಬಂದೆ. ಅತ್ತೆ. ನನ್ನ ಮುಂದೆ ನನ್ನ ಹೆಂಡತಿ ಬೆಂಕಿಯಲ್ಲಿ ಉರಿದಂತೆ ಕಣ್ಣಿಗೆ ಕಟ್ಟಿದಂತೆ ನನ್ನ ಶ್ರಮದ ಪ್ಯಾಕೆಟ್ ಕಸದ ತೊಟ್ಟಿಯಲ್ಲಿ ಬಿದ್ದಿದ್ದನ್ನು ಮತ್ತೆ ಮತ್ತೆ ನನೆಸಿಕೊಂಡು ಅತ್ತೆ. ಏನು ಮಾಡುವುದು ದಾರಿ ತೋರಲಿಲ್ಲ. ಬೇರೆ ಯಾವುದೇ ಕೆಲಸ ಮಾಡಹೋದರೂ ಸರಿಹೊಂದದೆ ಮೂರು ಮೂರು ತಿಂಗಳಿಗೂ ಕೆಲಸಗಳನ್ನು ಬಿಟ್ಟು ಈಗ ಯಾವ ಕೆಲಸಗಳೂ ದೊರಕದಂತಾಗಿತ್ತು. ಊಟಕ್ಕೂ ಕಷ್ಟ. ನಿದ್ದೆ ಒಂದು ಏನಿದ್ದರೂ ಇಲ್ಲದಿದ್ದರೂ ಮಾಡುತ್ತಿರುವೆ. ಕೆಲವು ಸಲ ಹಗಲು ರಾತ್ರಿ ಎನ್ನದೇ ನಿದ್ರೆ ಮಾಡುವೆ. ತಲೆಕೆಟ್ಟಾಗ ಯಾವುದಾದರೂ ಮೂಲದಿಂದ ಸಿಗರೇಟ್ ಹೊಂಚಿ ಧಮ್ಮೆಳೆದು ಹೊಗೆ ಬಿಟ್ಟರೆ, ನನ್ನ ಜೀವನ ಹೊಗೆಯಾಗುತ್ತಿರುವುದು ಕೊಂಚ ಸಮಯವಾದರೂ ಮರೆಯಬಹುದಿತ್ತು. ಧೃತಿಗೆಡಲಿಲ್ಲ ಸಿಕ್ಕ ಸಿಕ್ಕ ಡೈರೆಕ್ಟರ್ ಗಳ ಹತ್ತಿರ ಹೋಗುತ್ತಲೇ ಇದ್ದೆ. ಮೊದಮೊದಲು ಆಗುತ್ತಿದ್ದ ಮುಜುಗರ ಈಗ ಆಗುತ್ತಿರಲಿಲ್ಲ. ಅವರು ಏನು ಬಾಯಿಗೆ ಬಂದದ್ದು ಬೈದರೂ ಸುಮ್ಮನೆ ಇರುತ್ತಿದ್ದೆ. ಆತ ಒಂದು ಚಾನ್ಸ್ ಕೊಡುತ್ತಾನೆಂಬ ಒಂದು ಆಸೆ. ಆದರೆ ಮತ್ತೆ ನಿರಾಸೆಯಲ್ಲಿ ಮುಕ್ತಾಯವಾಗುತ್ತಿತ್ತು. ಎಷ್ಟೋ ಜನ ನನ್ನ ರೀತಿ ಚಾನ್ಸ್ ಕೇಳುತ್ತಾ ಹೋಗುತ್ತಿದ್ದುದೇ ಇದಕ್ಕೆ ಕಾರಣ. ಎಲ್ಲರನ್ನೂ ಬಾಯಿಗೆ ಬಂದಂತೆ ಶಪಿಸುತ್ತಿದ್ದೆ. ಪ್ರತಿಭೆಯಿಲ್ಲದವರೂ ಹೀಗೆ ಚಾನ್ಸ್ ಕೇಳಿ ಕೇಳಿ ನನ್ನಂತವರಿಗೂ ಚಾನ್ಸ್ ಸಿಗದಂತಾಗಿದೆ ಎಂಬುದು ನನ್ನ ಭಾವನೆಯಾಗಿತ್ತು. ಒಂದು ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಬಿಟ್ಟಿದ್ದರೆ ಸಾಕಾಗಿತ್ತು. ಮುಂದೆ ಹೇಗೋ ಅದರ ಹೆಸರಿನಲ್ಲೇ ಮುಂದುವರೆದು ಇನ್ನೊಂದೆರಡು ಸಿನಿಮಾಗಳು ಅಸಿಸ್ಟೆಂಟ್ ಕೆಲಸ ನಿರ್ವಹಿಸಿ, ಅಷ್ಟರಲ್ಲಿ ಒಂದಷ್ಟು ಸಿನಿಮಾ ಮೇಕಿಂಗ್ ಕಲಿತು ಒಬ್ಬ ನಿರ್ಮಾಪಕನನ್ನ್ ಹಿಡಿದು ಕಷ್ಟಬಿದ್ದು ಒಂದು ಸಿನಿಮಾ ಮಾಡಿಬಿಡಬಹುದಿತ್ತು. ನನ್ನ ಕಥೆಗಳನ್ನು ಜನ ಒಪ್ಪುತ್ತಾರೆ ಎಂಬ ನಂಬಿಕೆ ನನ್ನಲ್ಲಿತ್ತು. ಹಾಗೂ ಹೀಗೂ ಒಂದು ಸಿನಿಮಾದಲ್ಲಿ ಅಸಿಸ್ಟೆಂಟ್ ಕೆಲಸ ಸಿಕ್ಕಿತ್ತು. ಒಂದು ಸ್ಕೆಡ್ಯೂಲ್ ಮುಗಿಯಿತು. ಅದೇನು ರಾಜಕೀಯ ನಡೆಯಿತೋ ಗೊತ್ತಾಗಲಿಲ್ಲ ಪ್ರೊಡಕ್ಷನ್ ಮ್ಯಾನೇಜರ್ ಗೆ ಫೋನ್ ಮಾಡಿದರೆ ಬೇರೆಯವರನ್ನು ಹಾಕಿಕೊಂಡಿರುವುದಾಗಿ ಹೇಳಿ ಮುಂದಿನ ಸಿನಿಮಾಗೆ ಹೇಳುವುದಾಗಿ ಫೋನ್ ಇಟ್ಟ. ನಾನು ಸಿನಿಮಾ ಮಾಡಲೇ ಬೇಕಿತ್ತು. ಬೇರೆ ಯಾವುದೇ ಕೆಲಸ ಮಾಡಲು ಮನಸು ಒಪ್ಪುತ್ತಿರಲಿಲ್ಲ. ಮೂರು ವರ್ಷದಿಂದ ಸಿನಿಮಾಗಳನ್ನು ನೋಡಿಕೊಂಡು, ಹಲವು ಜನರನ್ನು ಭೇಟಿ ಮಾಡಿಕೊಂಡು ಓಡಾಡಿಕೊಂಡೇ ಕಾಲ ತಳ್ಳಿದ್ದೆ. ನನ್ನಲ್ಲಿ ಟಾಲೆಂಟ್ ಇದೆ ಎಂದು ಸ್ನೇಹಿತರು, ಎಲ್ಲರೂ ಹೇಳುತ್ತಿದ್ದರು. ಆದರೆ ಒಂದೆರಡು ಚಿಕ್ಕ ಪುಟ್ಟ ಕೆಲಸಗಳನ್ನು ಬಿಟ್ಟರೆ ಒಳ್ಳೇ ಅವಕಾಶಗಳೇ ಯಾಕೆ ಸಿಗುತ್ತಿಲ್ಲವೋ ಗೊತ್ತಾಗಲಿಲ್ಲ. ಸಿಕ್ಕ ಸಿಕ್ಕಲ್ಲೆಲ್ಲ ಕೈಸಾಲ ಮಾಡಿಕೊಂಡು ಅದರದ್ದೊಂದು ರೋದನೆ. ಮನೆಯಲ್ಲಿ ಯಾವುದೇ ರೀತಿಯ ಸಹಾಯ ಕೇಳುವ ಹಾಗಿರಲಿಲ್ಲ. ಕೆಲಸ ಮಾಡು ಆಮೇಲೆ ಏನೇ ಕಷ್ಟ ಬಂದರೂ ಸಹಾಯ ಮಾಡುತ್ತೇವೆಂದು ಕಳೆದಬಾರಿಯೇ ಫೋನ್ ಮಾಡಿದ್ದಾಗ ಹೇಳಿದ್ದರು. ನನ್ನ ಕಷ್ಟ ಅವರಿಗೆ ಅರ್ಥವಾಗೊಲ್ಲ. ಕೆಲಸ ಮಾಡಿದರೆ ನಾನು ಡೈವರ್ಟ್ ಆಗ್ತೇನೆಂದು ನನಗೆ ಗೊತ್ತಿತ್ತು. ಮನಸಿಲ್ಲದ ಕೆಲಸ ಮಾಡವುದರ ಬದಲು ಸಾಯುವುದು ಮೇಲೆಂದೆನಿಸುತ್ತಿತ್ತು. ಏನೇ ಆಗಲಿ ಒಂದು ಚಾನ್ಸ್ ಗಿಟ್ಟಿಸುತ್ತೇನೆಂದು ನಂಬಿಕೆಯಿತ್ತು. ಉಪೇಂದ್ರ ಸರ್ ಬಂದ ದಾರಿಯಲ್ಲೇ ಯಾಕೆ ಪ್ರಯತ್ನ ಪಡಬಾರದೆಂದು ಕಾಶಿನಾಥರ ಮನೆಗೆ ಹೋಗಿ ಬಾಗಿಲು ತಟ್ಟಿದರೆ ಬರಿ ಕಿಟಕಿ ತೆರೆಯಿತು. ನಾನು ಸಿನಿಮಾ ಮಾಡುತ್ತಿಲ್ಲ ಶೇರ್ ಬಿಸಿನೆಸ್ ಶುರುಮಾಡಿದ್ದೇನೆ ಹೊರಡಿ ಎಂದು ಕಿಟಕಿ ಮುಚ್ಚಿಕೊಂಡರು. ಒಂದು ವಾರದಿಂದ ಕಾಶಿ ಸರ್ ಗೆ ಹೇಳಲೆಂದು ರೆಡಿ ಮಾಡಿದ ಕಥೆಯನ್ನು ಮುಚ್ಚಿದ ಕಿಟಕಿ ಬಾಗಿಲ ಮುಂದೆಯೇ ಹಿಡಿದು ಸ್ವಲ್ಪ ಹೊತ್ತು ನಿಂತಿದ್ದೆ. ನಂತರ ಸುನೀಲ್ ಕುಮಾರ್ ದೇಸಾಯಿ, ಇನ್ನೊಬ್ಬರು ಮತ್ತೊಬ್ಬರು ಹಾಗೇ ಹೋಯಿತು ಪಟ್ಟಿ. ಯಾರೂ ಕೈಗೂ ಸಿಗಲಿಲ್ಲ ಕಣ್ಣಿಗೂ ಬೀಳಲಿಲ್ಲ. ಸ್ವಲ್ಪ ದಿನ ಮತ್ತೆ ಬೇರೆ ಕೆಲಸ ಮಾಡಿದೆ. ದಿನ ರಾತ್ರಿ ಒಂದು ಸಿನಿಮಾ ಅಧ್ಯಯನ ಮಾಡುವುದು, ಒಂದು ಕಥೆಯ ಬಗ್ಗೆ ಯೋಚಿಸುವುದು ಬರೆಯುವುದು ನಡೆದೇ ಇತ್ತು. ಸುತ್ತ ಮುತ್ತ ತಿಳಿದಿದ್ದವರು ಎಲ್ಲರೂ ತೆವಳುತ್ತಲೇ ಇದ್ದರು. ಯಾರೂ ಯಾರಿಗೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಎಲ್ಲ ಸೋಲುತ್ತಿರುವ ಮನುಷ್ಯರ ನಡುವೆ ನಾನೊಬ್ಬ ಸೋತ ಮನುಷ್ಯ. ಹಾಗಾಗಿ ಜೊತೆಗಿದ್ದೆವು. ಒಬ್ಬರ ಸೋಲನ್ನು ನೋಡಿ ಮತ್ತೊಬ್ಬರಿಗೆ ಸ್ಥೈರ್ಯ. ಹಲವಾರು ಕಡೆ ಬಿಟ್ಟ ಬಾಣದಲ್ಲಿ ಯಾವುದೋ ಒಂದು ನಾಟಿಕೊಂಡು ಬರಹೇಳಿದರು. ಸ್ಕ್ರಿಪ್ಟ್ ಕೆಲಸಕ್ಕೆ ಜೊತೆಗೆ ಹಾಕಿಕೊಂಡರು, ಮನಸಿಟ್ಟು, ದಿನಪೂರ್ತಿ ಕೂತು ದುಡಿದೆ. ತಲೆಯಲ್ಲಿದ್ದ ಅಷ್ಟೂ ಕ್ರಿಯೇಟಿವಿಟಿ ಖರ್ಚು ಮಾಡಿ ಒಳ್ಳೊಳ್ಳೇ ಐಡಿಯಾಗಳನ್ನು ಕೊಟ್ಟೆ. ತೆಗೆದುಕೊಂಡರು. ಸ್ಕ್ರಿಪ್ಟ್ ಕೆಲಸ ಮೂರು ತಿಂಗಳ ಅವಿರತ ಪರಿಶ್ರಮದ ನಂತರ ಮುಗಿಯಿತು. ಶೂಟಿಂಗ್ ಇನ್ನೂ ನಿಧಾನವಾಗುತ್ತದೆಂದು ಹೇಳಿ ಕಳುಹಿಸುವುದಾಗಿ ಹೇಳಿದರು. ವಾರಕ್ಕೊಮ್ಮೆ ಫೋನ್ ಮಾಡಿ ಯಾವಾಗ, ಏನೆಂದು ವಿಚಾರಿಸುತ್ತಿದ್ದೆ. ಇನ್ನೊಂದು ತಿಂಗಳಾದ ಮೇಲೆಂದು ಸುದ್ದಿ ಬಂದಿತ್ತು. ಒಂದು ತಿಂಗಳ ನಂತರ ಫೋನ್ ಮಾಡಿದಾಗ ತಿಳಿಯಿತು ಯಾರೋ ಪ್ರೊಡ್ಯೂಸರ್ ಕಡೆಯ ಅಸಿಸ್ಟೆಂಟ್ ಗಳನ್ನೇ ಹಾಕಿಕೊಂಡು ಸಿನಿಮಾ ಆಗಲೇ ಶುರುವಾಗಿ ಆಗಿದೆ ಎಂದು. ಡೈರೆಕ್ಟರ್ ಗೆ ಫೋನ್ ಮಾಡಿ ಬಾಯಿಗೆ ಬಂದಿದ್ದು ಮಾತನಾಡಿದೆ. ಕುಡಿದಿದ್ದೆ. ಬಾಯಿ ನಿಲ್ಲಲಿಲ್ಲ. ತಲೆ ಕೆಟ್ಟಿತ್ತು ಮನೆಯಲ್ಲಿ ಕೊಟ್ಟಿದ್ದ ಐದು ವರ್ಷದ ಗಡುವು ಕೂಡ ಮುಗಿಯುತ್ತಾ ಬಂದಿತ್ತು. ಆದರೂ ನಾನು ಕಿಂಚಿತ್ ಏನೂ ಹೇಳಿಕೊಳ್ಳುವಂತಹದ್ದು ಸಾಧಿಸಿರಲಿಲ್ಲ. ಮನೆಯವರ, ಚಿತ್ರರಂಗದ ಪುಡಿ ಸಾಧಕರ, ಸ್ನೇಹಿತರ, ಗುರುತುಪರಿಚಯದವರ ಬಳಿ ಅನಿಸಿಕೊಂಡಿದ್ದು, ಅವಮಾನಗೊಂಡದ್ದು, ಎಲ್ಲಾ ತಲೆಯಲ್ಲಿ ಗಿರಗಿಟ್ಟಲೆ ಸುತ್ತಿದಹಾಗೆ ಸುತ್ತುತ್ತಿತ್ತು. ಮನಸು ವಿಕಾರಗೊಂಡಿತು. ನನ್ನ ಕನಸಿನ ಜೀವನದ ಅಂತ್ಯದ ದಾರಿಯನ್ನು ಆಯ್ಕೆಮಾಡಿಕೊಂಡೆ. ಆದರೆ ಇದು ನನ್ನ ಕಥೆಯ ಮುಕ್ತಾಯವಲ್ಲ. ಇದು ಮುನ್ನುಡಿಯಷ್ಟೇ.

Choice

ದೊಡ್ಡ ದೊಡ್ಡ ಕ್ರೇನ್ ಗಳ ಜಾಗಕ್ಕೆ ಜಿಮ್ಮಿಜಿಪ್ ಗಳು, ಹೆಲಿಕಾಪ್ಟರ್ ಗಳು ಬಂದಿವೆ, ಎರಿ ಕ್ಯಾಮೆರಾಗಳ, ದೊಡ್ಡ ದೊಡ್ಡ ರೀಲ್ ಗಳ ಜಾಗಕ್ಕೆ, ಡಿಜಿಟಲ್ ಕ್ಯಾಮೆರಾಗಳು, ಸ್ಯಾಟಿಲೈಟ್ ಟೆಲಿಕಾಸ್ಟ್ ಗಳು ಬಂದಿವೆ, ಮನೆ ಮನೆಗೆ ಸಿನಿಮಾ ತಲುಪುತ್ತಿವೆ. ಸಿನಿಮಾ ಶೈಲಿ ಬದಲಾಗಿದೆ. ಆದರೆ ನಾನು ಇನ್ನೂ ಅದೇ ಹಳೆಯ 90s ರೀತಿಯಲ್ಲಿ ಚಾನ್ಸ್ ಕೇಳಿಕೊಂಡು ಅಲೆದರೆ ಈಗಿರುವ competition ನಲ್ಲಿ ನಾನು ಹಿಂದುಳಿಯುವುದು ಖಂಡಿತ. ನನ್ನ ಆಸೆಗಳು, ಕನಸುಗಳು ಒಂದಲ್ಲಾ ಒಂದು ದಿನ ಕಮರಿಹೋಗುವುದು ಖಚಿತವೆಂದು ತಿಳಿದಿತ್ತು. ಸುತ್ತ ಮುತ್ತಲ ಎಲ್ಲರ ಮೇಲಿನ ರೀತಿಯ ಪ್ರಯತ್ನಗಳು ವಿಫಲವಾಗುವುದನ್ನು ಕಣ್ಣಾರೆ ನೋಡಿದ್ದೆ. ಓಡುವ ಕುದುರೆಗೆ ಮಾತ್ರ ಇಲ್ಲಿ ಬೆಲೆ ಎಂಬುದನ್ನು ಚಿತ್ರರಂಗಕ್ಕೆ ಕಾಲಿಡಬೇಕೆಂದು ನಿರ್ಧರಿಸುವ ಮುನ್ನವೇ ತಿಳಿದುಕೊಂಡಿದ್ದೆ. ಇಲ್ಲಿ ಉಳಿಯಬೇಕಾದಲ್ಲಿ upgrade ಆಗುತ್ತಿರಬೇಕು. Upgrade ಆಗಲು ಹೊಸ ಹೊಸದನ್ನು ಸದಾ ಕಲಿಯುತ್ತಾ ಮುಂದುವರೆಯಬೇಕು. ಗುರಿಯಿಲ್ಲದ ದಾರಿಯಲ್ಲಿ ಅಲೆಯುತ್ತಾ ಚಾನ್ಸ್ ಕೇಳುತ್ತಲೇ ಕಳೆದುಹೋಗುವುದಕ್ಕಿಂತ, ಗುರಿಯಿಟ್ಟು ಇದೇ ದಾರಿಯಲ್ಲಿ, ಇದೇ ಮಾಡಬೇಕೆಂದು ನಿರ್ಧರಿಸಿ ನನ್ನದೇ ಚಾಯ್ಸ್ ನಲ್ಲಿ ಮುಂದುವರೆಯಬೇಕೆಂದು ನಿರ್ಧರಿಸಿದ್ದೆ. ಮೊದಲು ಒಂದಷ್ಟು ಜನರನ್ನ ಕಲಿಯುವ ಮಾರ್ಗಗಳನ್ನು ತಿಳಿಯಲು ಸಂಪರ್ಕಿಸಿದೆ. ಎರಡು ಮಾರ್ಗಗಳು ಕಾಣಿಸಿಕೊಂಡವು. ಒಂದು ಶಾಸ್ತ್ರೀಯವಾಗಿ ಒಂದು ಇನ್ಸ್ಟಿಟ್ಯೂಟ್ ನಲ್ಲಿ ಕಲಿಯುವುದು ಮತ್ತೊಂದು ಚಿತ್ರರಂಗದಲ್ಲೇ ಇದ್ದು ಪ್ರಾಕ್ಟಿಕಲ್ ಆಗಿ ಕಲಿಯುವುದು. ಆದರೆ ಎರಡೂ ಸಹ ತೀರಾ ಮೂಲಭೂತವಾದ ಸಿನಿಮಾ ಭಾಷೆಯನ್ನು ಕಲಿಸುತ್ತವೆ. ಮುಂದಿನದು ನನ್ನ ಪರಿಶ್ರಮ ಅಷ್ಟೇ. ಚಿತ್ರಗಳಲ್ಲಿ ಚಿಕ್ಕ ಪುಟ್ಟ ಕೆಲಸಗಳಿಂದ ಶುರುಮಾಡಿ, ಕ್ರಮೇಣ ಬೆಳೆಯುತ್ತಾ ಹೋಗುವುದಕ್ಕೆ ಮನಸು ಒಪ್ಪಲಿಲ್ಲ, ಒಂದು ಚಿಕ್ಕ ಇನ್ಸ್ಟಿಟ್ಯೂಟ್ ಸೇರಿದೆ. ಕೆಲವು ವಿಷಯಗಳನ್ನು ಸಂಗ್ರಹಿಸಿದೆ. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂಬುದು ಗೊತ್ತಾಯಿತು. ಕೆಲವು ಸಲಕರಣೆಗಳನ್ನು ಸಂಗ್ರಹಿಸುವುದು ಒಳಿತೆಂದು ತಿಳಿಯಿತು. ಎಲ್ಲದಕ್ಕೂ ದುಡ್ಡು ಬೇಕಿತ್ತು. ಸರಿ ಜೀವನೋಪಾಯಕ್ಕೆ ದಾರಿಯಾಗಬೇಕಿತ್ತು. ನನ್ನ ಖರ್ಚಿಗೂ ಕೈ ಒಡ್ಡುತ್ತಾ ಹೋದರೆ ಮುಂದೆ ಬರಬಹುದಾದ ವಿಪತ್ತಿನ ಅರಿವಿತ್ತು. ಒಂದು ಕೆಲಸ ಹಿಡಿದೆ. ಕೆಲಸ ಕಷ್ಟಕರವಾಗಿತ್ತು. ಕಷ್ಟಪಟ್ಟೇ ದುಡಿಯುತ್ತಿದ್ದೆ. ಪುಸ್ತಕಗಳನ್ನು ಸಂಪಾದಿಸಿದೆ. ಸಮಯ ಸಿಕ್ಕಾಗಲೆಲ್ಲ ಸಾಹಿತ್ಯ ಸವಿಯುವ ಮಾರ್ಗ ಹುಡುಕಿದೆ. ಓದುತ್ತಾ ಓದುತ್ತಾ ಓದುತ್ತಾ ಆತ್ಮವಿಶ್ವಾಸ ಯಾವ ಮಟ್ಟಿಗೆ ದೊರಕುತ್ತಾ ಹೋಯಿತೆಂದರೆ ನನ್ನನ್ನು ಹಿಡಿಯಲು ಯಾರಿಂದಲೂ ಸಾಧ್ಯವಿರುತ್ತಿರಲಿಲ್ಲ. ನಿದ್ರೆ ಇನ್ನಷ್ಟು ಕಡಿಮೆ ಮಾಡಿದೆ. ಪ್ರಪಂಚದ ಅತ್ಯುತ್ತಮ ಸಿನಿಮಾಗಳನ್ನು ಅಧ್ಯಯನ ಮಾಡಲು ಶುರುಮಾಡಿದೆ. ಏನಾದರೂ ಚಿಕ್ಕ ಪುಟ್ಟ ಸಿನಿಮಾ ಮಾಡಬೇಕೆಂದು ಕೆಲವು ಕಥೆಗಳು ಅವಾಗಿ ಅವೇ ಕಾಡುತ್ತಿದ್ದವು. ಒಂದಷ್ಟು like minded ಜನರನ್ನ ಒಟ್ಟು ಹಾಕಿದೆ. ಎಲ್ಲರಲ್ಲೂ ಅದೇ ತುಡಿತವಿತ್ತು. ಏನೋ ಸಾಧಿಸಬೇಕೆಂಬ ಆಕಾಂಕ್ಷೆಯಿತ್ತು. ಎಲ್ಲರೂ ಸೇರಿ ಒಂದು ಕಿರುಚಿತ್ರ ಮಾಡಿದೆವು. ದಟ್ಟ ದರಿದ್ರವಾಗಿತ್ತು. ಹೇಗೆ ಚಿತ್ರ ಮಾಡಬಾರದೆಂದು ಅರಿವಾಯ್ತು. ಮುಂದೆ ಆ ತಪ್ಪುಗಳನ್ನು ತಿದ್ದುಕೊಂಡು ಇನ್ನೊಂದು ಪ್ರಯತ್ನಕ್ಕಿಳಿದೆವು. ಅದೂ ಇನ್ನೊಂದು ನಮೂನೆಯಾಯ್ತು. ಆದರೆ ಕಲಿಯುವುದಕ್ಕೆ ಅದೊಂದು ಅವಕಾಶವಾಯ್ತು. ತಂಡದಲ್ಲಿದ್ದ ಹಲವರು ಸ್ವಲ್ಪ ಆಸಕ್ತಿ ತೋರುವುದನ್ನ ಕಡಿಮೆ ಮಾಡುತ್ತಾ ಬಂದರು. ಅವರ ಬದಲು ಇನ್ನೊಂದಷ್ಟು ಜನ ಸೇರ್ಪಡೆಯಾದರು. ಒಟ್ಟಿನಲ್ಲಿ ಕೆಲಸಗಳು ನಿಲ್ಲಲಿಲ್ಲ. ಸಿನಿಮಾ ಮಾಡುತ್ತೇವೋ ಇಲ್ಲವೋ ಗೊತ್ತಿಲ್ಲ. ಆ ಹಾದಿಯಲ್ಲಂತು ಏನು ಮಾಡಬೇಕೆಂಬುದನ್ನು ಅರಿತು ನಮ್ಮದೇ ಆದ ದಾರಿಯಲ್ಲಿ, ನಮ್ಮದೇ ಆದ styleನಲ್ಲಿ ಮುನ್ನಡೆಯುತ್ತಿದ್ದೇವೆ. ಸಿನಿಮಾರಂಗದಲ್ಲಿ ಬಿದ್ದಾಗಿದೆ ಸಿನಿಮಾ ಮಾಡಲೇಬೇಕು, ಗೆಲ್ಲಿಸಲೇಬೇಕೆಂಬ ಅನಿವಾರ್ಯತೆಯಿಂದ ಉಳಿದುಕೊಂಡಿಲ್ಲ. ಜೀವನಕ್ಕೊಂದು ದಾರಿಮಾಡಿಕೊಂಡು ಸಿನಿಮಾನೇ ಮಾಡಬೇಕೆಂಬ ಪಾಶನ್ ನಿಂದ ಸಿನಿಮಾ ಮಾಡಲು ಹೊರಟಿದ್ದೇವೆ. ಈಗ ಕ್ರಿಯಾಶೀಲ, ಮೌಲ್ಯಯುತ ಸಿನಿಮಾಗಳತ್ತ ಗಮನಕೊಡಬಹುದೆಂದೆನಿಸುತ್ತದೆ.

ಹಿನ್ನುಡಿ: ಇದು ಸ್ವಗತ ಶೈಲಿಯ ವಿವರಣೆಯಲ್ಲಿ ಇಬ್ಬರು ಸಾಧನೆಯ ಹಾದಿಯ ಭಿನ್ನತೆಯ ವಿವರಣೆಯನ್ನು ನೀಡಿದ್ದೇನೆ,  ಮೊದಲ ಭಾಗದ ವ್ಯಥೆ ಇಂದಿಗೂ ಪಡುತ್ತಿರುವ ಹಲವರ ಅನಿರ್ಧಿಶ್ಚಿತ ರೀತಿಯ ಒಂದು ಚಿಕ್ಕ ತುಣುಕಷ್ಟೇ. ಎರಡನೇ ಭಾಗದ ಸಕ್ಸಸ್ ಸೂತ್ರವೂ ಸಹ ಇಂತಹ ಹಲವು ಸೂತ್ರಗಳನ್ನು ಬಳಸಿ ಗೆದ್ದವರ, ಗೆಲುವಿನ ಮಾರ್ಗದಲ್ಲಿ ಹೊರಟವರ ಒಂದು ಚಿಕ್ಕ ಉದಾಹರಣೆಯಷ್ಟೇ. ಏನೇ ಮಾಡಿ, ಯಾವುದೇ ಮಾರ್ಗ ಹಿಡಿಯಿರಿ, ನಾಯಿಯಾಗದಿರಿ, ಹುಲಿಯಂತೆ ನುಗ್ಗಿ. ಅವಕಾಶಗಳು ಸದಾ ಇದೆ. ನೋಡುವ ಕಣ್ಣುಬೇಕಷ್ಟೇ. ಅವಕಾಶಗಳು ಮುಗಿದ ದಿನ. ಅವಕಾಶಗಳನ್ನು ಸೃಷ್ಟಿಸೋಣ. ಗೆಲುವಿನ ರುಚಿ ಶ್ರಮಕ್ಕೆ ಬೆಲೆತಂದುಕೊಡಲಿ. 

Friday 3 February 2012

ಓಟ

ಮುನ್ನುಡಿ: ಓಡುವ ಮನುಷ್ಯನ ಕಥೆ :-)"On your mark.......... set........... go............." ರಿವಾಲ್ವರ್ ನಿಂದ ಹೊರಬಂದ ಬುಲ್ಲೇಟ್ ನಂತೆಯೇ ಓಡಲು ಶುರುಮಾಡಿದ್ದರು ಎಲ್ಲಾ. ನಾನು ಗೆರೆಯ ಬಳಿ ನಿಂತೇ ಇದ್ದೆ. ಓಡಬೇಕೆನಿಸಲಿಲ್ಲ. ನನ್ನ ಶಾಲೆಯ ಗುರುಗಳೆಲ್ಲ ಓಡು ಓಡು ಎಂದು ಅರಚುತ್ತಿದ್ದರು. ಅವರನ್ನೊಮ್ಮೆ ನೋಡಿದೆ ಎಲ್ಲಾ ತಲೆಯ ಮೇಲೆ ಕೈ ಹೊತ್ತು ಪೆಚ್ಚು ಪೆಚ್ಚಾಗಿ ಕಾಣುತ್ತಿದ್ದರು. ಅವರನ್ನು ನೋಡಿ ನಗಬೇಕೆನಿಸಿತು ಒಮ್ಮೆ. ಅಲ್ಲಿಂದ ಹೊರನಡೆದೆ. ಓಡಿದವರಲ್ಲಿ ಯಾರೋ ಗೆದ್ದರೆಂದು ಕಾಣುತ್ತದೆ ನೋಡುತ್ತಿದ್ದವರೆಲ್ಲ ಅತ್ತ ನೋಡಿ ಹರ್ಷೋದ್ಗಾರ ಮಾಡುತ್ತಿದ್ದರು. ನನ್ನ ಗುರುಗಳೆಲ್ಲ ಓಡಿಬಂದು ಏನಾಯ್ತೋ ನಿಂಗೆ, ಯಾಕ್ ಓಡಲಿಲ್ಲ, wats your problem I say, ಎಂದು ಸಿಟ್ಟಿನಿಂದಲೇ ಕೇಳುತ್ತಿದ್ದರು ಉತ್ತರ ಹೇಳಲು ಮನಸು ಬಂದಿರಲಿಲ್ವೋ ಅಥವಾ ನನಿಗೆ ಓಡಲು ಇಷ್ಟವಿರಲಿಲ್ಲ ಎಂದು ಹೇಳಲು ಧೈರ್ಯ ಸಾಕಾಗಲಿಲ್ವೋ ಒಟ್ಟಿನಲ್ಲಿ ಉತ್ತರಿಸಲಿಲ್ಲ. ಕಿಟ್ ತೆಗೆದುಕೊಂಡು ಹೊರನಡೆದೆ. ನೆರೆದಿದ್ದ ಹಲವಾರು ಶಾಲೆಯ ಹುಡುಗರ ಪೋಷಕರು ನಗುತಿದ್ದರು. ಹೊರನಡೆಯುವಾಗ ಯಾಕೋ ಹುಡುಗ ಭಯ ಆಗೋಯ್ತಾ ಎಂದು ಛೇಡಿಸಿದರು. ತಲೆ ಬಗ್ಗಿಸಿಕೊಂಡು ನಡೆದೆ. ಓಡುವುದು ನನಗಿಷ್ಟ. ಬೆಳಗ್ಗೆ ಎದ್ದು ೫ ಕಿಲೋ ಮೀಟರ್ ಪ್ರತಿದಿನ ಓಡುತ್ತಿದ್ದೆ. ಟೈಮರ್ ಸೆಟ್ ಮಾಡಿ ನನ್ನ ಹಿಂದಿನ ಓಡುವ ವೇಗವನ್ನು ಪ್ರತಿ ಸಲ ಸತತವಾಗಿ ಮೀರಿಸುತ್ತಿದ್ದೆ. ನನಿಗೆ ಇತರರೊಂದಿಗೆ ಸ್ಪರ್ಧಿಸುವುದು ಇಷ್ತವಿರಲಿಲ್ಲ. ಎಷ್ಟು ಹೇಳಿದರೂ ಕೇಳದೆ ಅಪ್ಪ ಅಮ್ಮ, ಪಿಟಿ ಸರ್ ಒತ್ತಾಯಿಸಿ ಎಷ್ಟು ಬೇಡವೆಂದರೂ ಅಲ್ಲಿವರೆಗೂ ಕರೆದುಕೊಂಡು ಹೋಗಿ ನಿಲ್ಲಿಸಿದ್ದರು. ಕೊನೆಗೂ ನಾನು ಸ್ಪರ್ಧಿಸಲೇ ಇಲ್ಲ. ಇನ್ನೊಬ್ಬರೊಂದಿಗೆ ಸ್ಪರ್ಧಿಸಿ ಸೋಲುವುದರ ಬಗ್ಗೆ ಭಯವಿರಲಿಲ್ಲ ಆದರೆ, ಇನ್ನೊಬ್ಬರೊಂದಿಗೆ ಸ್ಪರ್ಧಿಸುವುದು ನನಗೆ ಬೇಕಿರಲಿಲ್ಲ. 

ಮನೆಗೆ ಹೋಗುವಷ್ಟರಲ್ಲಿ ಪಿಟಿ ಸರ್ ವಿಷಯ ಮನೆಗೆ ಮುಟ್ಟಿಸಿದ್ದರು. ಅಪ್ಪ ತರಾಟೆಗೆ ತೆಗೆದುಕೊಂಡರು, ನಿನಗೆ ಓಡೋದಕ್ಕೆ ಇಷ್ಟವಿಲ್ಲ ಅಂದ್ರೆ ಮತ್ತೆ ಬೆಳಗ್ಗೇನೆ ಎದ್ದು ಯಾಕ್ ಹಾಗೆ ಪ್ರಾಕ್ಟೀಸ್ ಮಾಡ್ತಿಯ. ಏನ್ ಬಂದಿದೆ ನಿನಗೆ, ಯಾಕ್ ಹಿಂಗ್ ಆಡ್ತೀಯ, ಏನಾಗ್ತಿತ್ತು ಓಡಿದ್ರೆ ನಿನಗೆ ಎಲ್ಲರೂ ಗೆಲ್ಲೋಕೆ ಏನೇನೋ ಮಾಡ್ತಾರೆ, ನಿನ್ನಲ್ಲಿ ಗೆಲ್ಲೋ ತಾಕತ್ತಿದೆ, ಯಾಕ್ ಸ್ಪರ್ಧಿಸೊಲ್ಲ, ನಿನ್ನ ಪ್ರಾಬ್ಲಮ್ಮಾದ್ರು ಏನೋ ಎಂದು ಮಾತನಾಡುತ್ತಲೇ ಇದ್ರು. ನಾನು ನಗುತ್ತಲೇ ಅಪ್ಪ ನನಿಗೆ ಅವರುಗಳೊಂದಿಗೆ ಸ್ಪರ್ಧಿಸೋಕೆ ಇಷ್ಟವಿಲ್ಲ ಮುಂಚೆನೇ ಹೇಳಿದ್ದೆ ತಾನೆ ಎಂದೆ. ಇನ್ಯಾರ್ ಜೊತೆ ಸ್ಪರ್ಧಿಸ್ತೀಯಪ್ಪ ನೀನು ಎಂದರು ಕೆಂಡವಾಗಿ. ನನ್ನ ಜೊತೆ ಎಂದೆ, ಮಣ್ಣು ಮುಕ್ಕು ಹೋಗಿ, ಸ್ವಲ್ಪನಾದ್ರು ತಲೆಲಿ ಬುದ್ದಿ ಇರ್ಬೇಕು, ಇಲ್ಲ ಅಂದ್ರೆ ಇನ್ನೊಬ್ರು ಹೇಳಿದ್ದನ್ನ ಕೇಳೋಕಾದ್ರು ಗೊತ್ತಿರಬೇಕು. ನೋಡು ಗೆಲ್ಲಬೇಕು ಅಂದ್ರೆ ನಮ್ಮ ಜೊತೆ ಅಲ್ಲ ಇನ್ನೊಬ್ಬರ ಜೊತೆ ಸ್ಪರ್ಧಿಸಬೇಕಾಗುತ್ತೆ. ಸ್ಕೂಲ್ ನಲ್ಲಿ ನೋಡಿದ್ರೆ ಎಲ್ಲಾ ಸಬ್ಜೆಕ್ಟ್ ನಲ್ಲೂ ಸೊನ್ನೆ, ಒಂದು ಉತ್ತರ ಬರೆಯೋ ಪ್ರಯತ್ನ ಕೂಡ ಮಾಡಿರಲ್ಲ, ಎಲ್ಲಾ ಉತ್ತರಗಳೂ ಗೊತ್ತು ಇವನಿಗೆ ಬರೆಯೋದಿಲ್ಲ ಅಂತಾರೆ ಟೀಚರ್ಸ್ ನೋಡಿದ್ರೆ. ಇದೇನೋ ಸ್ಕೂಲ್ ಎಕ್ಸಾಮ್ಸ್, ಹತ್ತನೇ ಕ್ಲಾಸಲ್ಲೂ ಹಿಂಗೇ ಆದ್ರೆ ಯಾವನ್ ತಳ್ತಾನೆ ಅವಾಗ ನಿನ್ನ. ಹುಚ್ಚನ ತರಹ ಆಡ್ಬೇಡ ನೀನು. ಸಾಕಾಯ್ತು ನಿನ್ ಎಡವಟ್ಟು ಕೆಲಸಗಳನ್ನ ನೋಡಿ ನೋಡಿ ಎಂದು ಮಾತು ಇನ್ನೂ ಅಸ್ಪಷ್ಟವಾಗಿ ಕೇಳುತ್ತಲೇ ಇತ್ತು ನನಿಗೆ ನಿದ್ರೆ ಬರುತ್ತಲಿತ್ತು. ಬಟ್ಟೆ ಕೂಡ ಬದಲಿಸದೆ ರೂಮ್ ನಲ್ಲಿ ಹಾಗೇ ಮಲಗಿದೆ. 

ಶಾಲೆಯಲ್ಲಿ, ಮನೆಯ ಸುತ್ತ ಒಳ್ಳೆಯ ಗೆಳೆಯರ ಬಳಗವಿತ್ತು ಸುಸ್ತಾಗುವವರೆಗೂ ಆಟಗಳನ್ನು ಆಡುತ್ತಿದ್ದೆವು. ಎಲ್ಲರಿಗೂ ನಾನೊಂದು ರೀತಿ ಇಷ್ಟ, ಸ್ವಚ್ಛಂದವಾಗಿ ಊರೂರು ಸುತ್ತುತ್ತಿದ್ದೆವು. ಶಾಲೆಯಲ್ಲೂ ಎಲ್ಲಾ ಅಧ್ಯಾಪರಿಗೂ ವಿಶೇಷ ಪ್ರೀತಿ ನನ್ನ ಮೇಲೆ. ನಾನು ಮಾರ್ಕ್ಸ್ ತೆಗೆಯದಿದ್ದರೂ ನನಗೆ ಅಷ್ಟು ಗೌರವ ಸಿಗುತ್ತಿದ್ದುದನ್ನು ನೋಡಿ ಕೆಲ ಹುಡುಗರು ಅಸೂಯೆ ಪಡುತಿದ್ದರು. ನನಗೂ ಸಹ ಆ ಗೌರವ ಬೇಕಿರಲಿಲ್ಲ. ಅದನ್ನು ಅರ್ಥಮಾಡಿಸಲು ಪ್ರಯತ್ನವನ್ನೂ ಪಡಲಿಲ್ಲ ಕೂಡ. ಹೀಗೇ ಒಮ್ಮೆ ಶಾಲೆಯಲ್ಲಿ ಎಕ್ಸಿಬಿಷನ್ ಇತ್ತು ಒಂದು ವಿಚಿತ್ರವಾದ ಪ್ರಯೋಗ ಮಾಡಬೇಕೆಂದು ಆಸೆ ಇತ್ತು. ಮಾಡಿದೆ ಕೂಡ. 'ಬ್ಲಾಕ್ ಹೋಲ್'ಅನ್ನು ಕೃತಕವಾಗಿ ಸೃಷ್ಟಿಸುವ ಮಾಡೆಲ್ ಮಾಡಿದ್ದೆ. ಅದು ಎಲ್ಲರ ಮೆಚ್ಚುಗೆ ಗಿಟ್ಟಿಸಿ ಪ್ರಥಮ ಬಹುಮಾನವನ್ನು ಕೊಡುತ್ತಿರುವುದಾಗಿ ಘೋಷಿಸಿದರು. ನಾನು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೂ ಹೋಗಲಿಲ್ಲ. 

ನನ್ನ ಹತ್ತನೇ ತರಗತಿ, ಪಿಯುಸಿ ಕೂಡ 'ಪಾಸ್' ಆಗುವ ಸಂಖ್ಯೆಗಳನ್ನು ಪಡೆದಿದ್ದೆನಂತೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಕಾರಣವೋ ಇಲ್ಲ ಇನ್ನೇನಾದರೂ ಕೈವಾಡ ನಡೆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಪಾಸ್ ಅಗಿದ್ದೀಯೆ ಪದವಿ ಕಾಲೇಜ್ ಸೇರು ಎಂದರು ಎಲ್ಲಾ. ಒಂದು ವರ್ಷದಲ್ಲೇ ಮೂರೂ ವರ್ಷದ ಪುಸ್ತಕಗಳನ್ನು ಓದಿ ಪರೀಕ್ಷೆಗೆ ಕೂರದೆ ಓದಿಗೆ ತಿಲಾಂಜಲಿ ಇಟ್ಟೆ. ಮನೆಗೇ ಇನ್ನೊಂದಷ್ಟು ಪುಸ್ತಕಗಳನ್ನು ತರಿಸಿ ಓದಲು ಶುರುಮಾಡಿದೆ. ಹೊಸ ಹೊಸ ಗೆಳೆಯರೊಂದಿಗೆ ಕಾಲೇಜಿನ ಸುತ್ತಲೇ ಸುತ್ತುತ್ತಿದ್ದೆ. ಸರಿ ಎನಿಸಿದ್ದನ್ನೇಲ್ಲಾ ಗೆಳೆಯರೊಡಗೂಡಿ ಮಾಡಿದೆ. ಮನೆಯಲ್ಲೇ ಇದ್ದಷ್ಟೂ ಮನೆಯವರ ಪ್ರಶ್ನೆಗಳು, ಬಯ್ಗುಳಗಳೂ ಹೆಚ್ಚಾಗುತ್ತಾ ಹೋಗುತ್ತವೆಂದು ಗೊತ್ತಾಯ್ತು. ಬಹುಪಾಲು ಸಮಯ ಮನೆಯ ಹೊರಗಡೆಯೇ ಇರಲು ಶುರುಮಾಡಿದೆ. ವಿವಿಧ ರೀತಿಯ ಜನಗಳನ್ನು ಭೇಟಿಯಾಗುತ್ತಿದ್ದೆ. ಜೀವನ ವರ್ಣಮಯವಾಗಿದೆ ಎಂದು ಖುಷಿಯಾಗುತ್ತಿತ್ತು. ಆದರೆ ಮನೆಯವರಿಗೆ ಇರುವ ಆತಂಕ, ಭಯ ಏನೆಂಬುದು ಅರಿವಾಯ್ತು. ನಾನು ಏನು ಮಾಡಲು ಹೊರಟಿದ್ದೀನಿ, ಏನಾಗುತ್ತೀನಿ ಅದೇ ಅವರ ಮುಂದಿರುವ ಪ್ರಶ್ನೆ, ಚಿಂತೆ. ನನಗೂ ಗೊತ್ತಿರಲಿಲ್ಲ ಏನಾಗಲು ಹೊರಟಿದ್ದೇನೆಂದು. ಹೀಗಿರುವಾಗಲೇ ಮನೆಯ ಬಳಿ ಇದ್ದ ಒಂದು ಪ್ರಿಂಟಿಂಗ್ ಪ್ರೆಸ್ ಮುಚ್ಚುತ್ತಿದ್ದರು. ಅವರನ್ನೂ ತುಂಬಾ ಸಲ ಮಾತನಾಡಿಸಿದ್ದೆ. ಅಲ್ಲಿನ ಕ್ರಿಯಾಶೀಲ ಕೆಲಸ ಒಂದು ರೀತಿ ಮನಸಿಗೆ ಖುಷಿ ತರುತ್ತಿತ್ತು. ಅವರೊಂದಿಗೆ ಹಲವು ಬಾರಿ ಸುಮ್ಮನೆ ತೆವಲಿಗೆ ಕೆಲಸ ಮಾಡಿದ್ದೆ. ವ್ಯಾಪಾರದಲ್ಲಿ ಲಾಸ್ ಆಗಿ ಮುಚ್ಚಲಾಗುತ್ತಿದೆ ಎಂದು ವಿಷಯ ಗೊತ್ತಾಯ್ತು. ಅದ್ಯಾಕ್ ಹಾಗೆನ್ನಿಸಿತೋ ಗೊತ್ತಿಲ್ಲ. ಅಪ್ಪನ ಹತ್ತಿರ ಅವರ ವಿರೋಧ ಕಟ್ಟಿಕೊಂಡು ಎಲ್ಲರೂ ಎಷ್ಟು ಬೇಡವೆಂದರೂ ಆ ಪ್ರೆಸನ್ನು ಕೊಂಡುಕೊಂಡೆ. ಮನಸಿಟ್ಟು ಕೆಲಸ ಮಾಡಲು ಶುರುಮಾಡಿದೆ. ಮೊದಲೆರಡು ತಿಂಗಳು ಬಹಳ ಕಷ್ಟವಾಯ್ತು. ನಿಧಾನವಾಗಿ ಇಬ್ಬರು ಕೆಲಸಗಾರರು ಸಿಕ್ಕರು. ಒಂದೆರಡು ಪೀಸ್ ವರ್ಕ್ ಗಳು ಬಂದವು ಉಸಿರಾಡುವಂತಾಯ್ತು. ಸಾಲದಲ್ಲೇ ವ್ಯಾಪಾರ ನಡೆಯುತ್ತಿತ್ತೇ ವಿನಹ ಬರುತ್ತಿದ್ದ ಆದಾಯ ಏನೇನಕ್ಕೂ ಸಾಕಾಗಲಿಲ್ಲ. ಆದರೂ ಬಂದ ಪುಡಿ ಕೆಲಸಗಳನ್ನೇ ಇರುವ ತಲೆಯನ್ನೆಲ್ಲಾ ಖರ್ಚು ಮಾಡಿ ಆಸಕ್ತಿ ವಹಿಸಿ ಕೆಲಸ ಮಾಡಿದೆವು. ನಿಧಾನವಾಗಿ ಪ್ರೆಸ್ ಗೆ ಹೆಸರು ಬಂತು ಕೆಲಸಗಳು ಬಂತು, ಆದಾಯವೂ ಆಯ್ತು, ಲಾಭವೂ ಸಹ. ಇನ್ನೊಂದಷ್ತು ಕೆಲಸಗಾರರು ಸೇರ್ಪಡೆಯಾದರು, ಬಿಡುವು ಸಿಗದ ಹಾಗೆ ಕೆಲಸ ಬರತೊಡಗಿತು. ಅಪ್ಪ ಅಮ್ಮ ಎಲ್ಲಾ ನಿರಾಳವಾಗಿ ಉಸಿರುಬಿಟ್ಟರು. ಎಲ್ಲಾ ಆದಾಯವನ್ನೂ ಅಪ್ಪನ ಕೈಗೆ ಇತ್ತೆ. ಆಗಲಾದರೂ ನನ್ನ ಮೇಲೆ ಕೊಂಚ ಧೈರ್ಯ ಬಂತೇನೋ. 

ಒಂದು ದಿನ ಬೆಳಗ್ಗೆ ನಮ್ಮ ಪ್ರೆಸ್ ಬೀದಿಯ ಕೊನೆಯಲ್ಲೇ ಇನ್ನೊಂದು ಪುಟ್ಟ ಪ್ರೆಸ್ ಶುರುವಾಗಿರುವುದು ಗಮನಕ್ಕೆ ಬಂತು. ನಮಗಿಂತ ಅರ್ಧದ ಬೆಲೆಗೆ ಕೆಲಸಗಳನ್ನು ಒಪ್ಪಿಕೊಂಡು ಮಾಡಿಕೊಡಲು ಶುರುಮಾಡಿದರು. ನಮ್ಮ ಗ್ರಾಹಕರನ್ನು ಅವರತ್ತ ಎಳೆಯುವ ಪ್ರಯತ್ನ ನಡೆಯತೊಡಗಿತು. ಅಂದಿನಿಂದ ಪ್ರೆಸ್ ಬಿಟ್ಟೆ. ಅಪ್ಪ ಮುಂದುವರೆಸುತ್ತಾ ಪ್ರೆಸ್ ಚಾಲ್ತಿಯಲ್ಲಿಟ್ಟರು. ಅಷ್ಟು ದಿನ ಸಮಯ ಸಿಕ್ಕಾಗ ಸುಮ್ಮನೆ ಹವ್ಯಾಸಕ್ಕೆಂದು ಇಟ್ಟುಕೊಂಡಿದ್ದ ಚಿತ್ರಕಲೆಯನ್ನು ದಿನಪೂರ್ತಿ ಅಭ್ಯಾಸ ಮಾಡಲು ಶುರುಮಾಡಿದೆ. ಏನಾದರೂ ಬಿಡಿಸುತ್ತಿರುವಾಗ ಮನೆಯ ಹೊರಗೇ ಬರದೆ ದಿನಗಳನ್ನು ಕಳೆಯುತ್ತಿದ್ದೆ. ಎಲ್ಲಾದರೂ ಹೋಗಿದ್ದಾಗ ಅಲ್ಲೇ ಹಲವಾರು ದಿನಗಳನ್ನು ಕಳೆಯುತ್ತಿದ್ದೆ. ಹೋದ ಬಂದಲ್ಲೆಲ್ಲ, ಕಣ್ಣಿಗೆ ಕಂಡದ್ದನ್ನೆಲ್ಲ, ಕೈಗೆ ಸಿಕ್ಕದ್ದನ್ನೆಲ್ಲ ಚಿತ್ರ ಬಿಡಿಸುವುದೇ ಕೆಲಸವಾಗೋಯ್ತು. ಇದರಲ್ಲೇ ನನ್ನ ಖರ್ಚಿಗಾಗುವಷ್ಟು ದುಡ್ಡು ಹುಟ್ಟುವ ದಾರಿಯನ್ನು ಕಂಡುಕೊಂಡೆ. ಜೀವನ ಆರಾಮವಾಗೇ ಇತ್ತು. 

ಬಲವಂತ ಮಾಡಿ ಹುಡುಗಿ ನೋಡಲು ಕರೆದುಕೊಂಡು ಹೋದರು. ಯಾರೋ ಏನೋ ಗೊತಿಲ್ಲದೆ ಜೊತೆಯಲ್ಲಿ ಹೋಗಿ ಕುಳಿತೆ. ಮನೆಯಲ್ಲಿ ಇನ್ನೊಂದು ನಮ್ಮ ತರಹದ ಸಂಸಾರ ಹುಡುಗನನ್ನು ಕರೆದುಕೊಂಡು ಬಂದು ಕುಳಿತಿತ್ತು. ಬೆಳಗ್ಗೇಯೇ ಒಬ್ಬ ಹುಡುಗ ಬಂದು ಹೋಗಿರುವುದಾಗಿ ಅವನು ಹುಡುಗಿಗೆ ಇಷ್ಟವಾಗದಿರುವುದಾಗಿ ವಿಷಯ ತಿಳಿಯಿತು. ಅಲ್ಲಿ ಒಂದು ಕ್ಷಣವೂ ಕುಳಿತಿರಲು ಸಾಧ್ಯವಾಗಲಿಲ್ಲ. ಎದುರುಗಿದ್ದ ಹುಡುಗನನ್ನು ಹುಡುಗಿಯ ತಂದೆ ಆತನ ಇತ್ಯೋಪರಿಯನ್ನು ವಿಚಾರಿಸುತ್ತಿದ್ದರು. ಅವನೂ ಕುರಿಯಂತೆ ಎಲ್ಲಾ ಒಪ್ಪಿಸುತ್ತಿದ್ದ. ಇದೊಳ್ಳೆ ಸ್ವಯಂವರದ ಸೀನ್ ಇದ್ದಂಗೆ ಕಾಣುತ್ತಿತ್ತು. ನನ್ನನ್ನು ಏನಪ್ಪ ಏನ್ ಮಾಡ್ಕೊಂಡಿದ್ದೀರಾ ನೀವು ಎಂದರು ಮೊದಲ ಪ್ರಶ್ನೆ. ನನಿಗೆ ಈ ರೀತಿ, ನೀತಿಗಳು ಯಾಕೋ ಸರಿ ಬರುತ್ತಿಲ್ಲ, ನಾನು ಹೊರಡ್ತೇನೆ. ದಯವಿಟ್ಟು ಕ್ಷಮಿಸಿ ಎಂದು ಅಲ್ಲಿಂದಲೇ ಹೊರಟು ಬಂದೆ. ನಾನು ಬಂದಮೇಲೆ ಅದೇನು ಮಾತುಕತೆಗಳಾಯಿತೋ ಗೊತ್ತಿಲ್ಲ. ನನ್ನ ಮೊಬೈಲ್ ಗೆ ಒಂದು ಕರೆ ಬಂತು. ಹುಡುತಿಯ ಧ್ವನಿ, ಯಾಕ್ ಹಾಗೆ ಹೋದ್ರಿ. ನೀವು ನನ್ನ ಫೋಟೋ ನೋಡಿದ್ದೀರಾ? ಇಲ್ಲ ಅಂದ್ರೆ ನಿಮ್ಮಪ್ಪ ಅಮ್ಮನ ಕೈಲಿ ಒಂದು ಫೋಟೋ ಕೊಟ್ಟು ಕಳುಹಿಸಿದ್ದೀನಿ. ನಿಮಗೆ ಒಪ್ಪಿಗೆ  ಆದ್ರೆ ಹೇಳಿ ನನಿಗೆ ನೀವು ತುಂಬಾ ಇಷ್ಟಾ ಆದ್ರಿ ಅಂದ್ಲು. ಯಾಕೆ ಅಂತ ಕೇಳ್ಬೇಡಿ ಅಂದಳು. ನಾನೂ ಕೇಳಲಿಲ್ಲ, ಅವಳು ಹೇಳಲಿಲ್ಲ, ಮಧುವೆಯಂತೂ ಅಯ್ತು. 

ಜೀವನೋಪಾಯಕ್ಕೆ ಆಗುವಷ್ಟು ದುಡ್ಡಿತ್ತು, ಅಪ್ಪ ಕೆಲಸದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು, ಅಮ್ಮ ಮನೆಯ ಎಲ್ಲಾ ಕೆಲಸ, ಕೆಲಸದವರ ಕೈಲಿ ಮಾಡಿಸುತ್ತಿದ್ದರು. ಇವಳು ಓದಿದ್ದಳು, ಕೆಲಸ ಮಾಡುವ ಅವಶ್ಯಕತೆ ಇರಲಿಲ್ಲ, ನನ್ನ ಚಿತ್ರಕಲೆಯ ಕಡೆಯೇ ಆಸಕ್ತಿ ತೋರಿ, ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಸಾಂಸಾರಿಕ ಜೀವನದ ಸವಿಯನ್ನೂ ಸವಿಯುತ್ತಾ, ಚಿತ್ರಗಳು ಬಣ್ಣಗಳಂತೆ ಬೆರೆಯುತ್ತಾ ಜೀವನ ಸಾಗಿಸಿದೆವು. ಮನೆಯ ತುಂಬಾ ಎಲ್ಲಿ ನೋಡಿದರೂ ಚಿತ್ರಗಳೇ ಇರುತ್ತಿದ್ದವು. ಜಾಗ ಸಾಲದೆ ಇನ್ನೊಂದು ಮಹಡಿಯ ತುಂಬಾ ನನ್ನ ಚಿತ್ರಗಳನ್ನೇ ತುಂಬಿಸಿದೆ. ಮನೆಗೆ ಯಾರಾದರೂ ಬಂದರೆ ಎಲ್ಲ ಚಿತ್ರಗಳನ್ನು ನೋಡಿ ಹೋಗುತ್ತಿದ್ದರು. ಬರಬರುತ್ತಾ ಚಿತ್ರಗಳನ್ನು ನೋಡಲೆಂದೇ ಜನ ಬರಲು ಶುರುವಾದರು. ಇದರಿಂದಲೇ ಕಿರಿಕಿರಿಯಾಗಲು ಶುರುವಾಯ್ತು. ಬರುವವರನ್ನು ತಡೆಯಲಾಗಲಿಲ್ಲ. ಎಲ್ಲಾ ಉತ್ತಮ ಚಿತ್ರಗಳನ್ನೂ ಸ್ಥಳಾಂತರಿಸಿ ಇನ್ನೊಂದು ಕಟ್ಟಡದ ಪೂರಾ ಪ್ರದರ್ಶನಕ್ಕಿಟ್ಟೆ. ಕೆಲವನ್ನು ಉತ್ತಮ ಬೆಲೆಗೆ ಖರೀದಿಸುತ್ತಿದ್ದರು. ನಾನು ಮಾರುವುದಿಲ್ಲವೆಂದರೂ ಇವಳು ಕೇಳುತ್ತಿರಲಿಲ್ಲ. ಕ್ರಮೇಣ ವ್ಯಾಪಾರದ ಉಸ್ತುವಾರಿಯನ್ನು ಅವಳೇ ನಿರ್ವಹಿಸಲು ಶುರುಮಾಡಿದಳು. ನನ್ನ ಚಿತ್ರಗಳಿಂದಲೇ ಹಲವಾರು ವಿಶಿಷ್ಟ ಚಿತ್ರಕಾರರನ್ನು ಭೇಟಿಯಾಗುವ ಸಂದರ್ಭಗಳು ಒದಗಿಬಂತು. ಎಲ್ಲರೂ ಎದುರಿಗೆ ಚೆನ್ನಾಗೇ ಮಾತನಾಡುತ್ತಿದ್ದರು. ಹಿಂದೆ ಮೀಡಿಯಾದವರ ಮುಂದೆ ನನ್ನ ಚಿತ್ರಗಳು ಹೀಗಿವೆ, ಹಾಗಿವೆ ಎಂಬ ಮಾತು ನೋವುಂಟುಮಾಡುತ್ತಿದ್ದವು. 

ಉತ್ತಮ ಚಿತ್ರಕಾರರ ಸ್ಪರ್ಧೆಯೊಂದಕ್ಕೆ ನನ್ನ ಚಿತ್ರವನ್ನೂ ಕಳುಹಿಸಿದ್ದಳು. ೫ ಲಕ್ಷ ಬಹುಮಾನವಿತ್ತಂತೆ ಗೆದ್ದವರಿಗೆ. ಪ್ರಶಸ್ತಿ ಬಂತೋ ಇಲ್ಲವೋ ತಿಳಿದುಕೊಳ್ಳಲೂ ಹೋಗಲಿಲ್ಲ. ಬಣ್ಣ ಅಲ್ಲಿಗೆ ಬಿಟ್ಟೆ. ಮತ್ತೆ ಓಡಲು ಶುರುಮಾಡಿದೆ. ನನಗೇ ಸುಸ್ತಾಗುವವರೆಗೂ. 

ಹಿನ್ನುಡಿ: ಗೆಲುವು ಯಾಕೆ? ಸ್ಪರ್ಧೆ ಯಾಕೆ? ಹೆಸರು ಯಾಕೆ? ಅಥವಾ ಜೀವನ ಸಾಕೇ? 

Thursday 2 February 2012

“ಷೋ”ಈಗ್ಗೆ ಬಹಳ ಬಹಳ ವರ್ಷಗಳ ಹಿಂದೆ ನಮ್ಮ ನಮ್ಮ ಊರಿನಲ್ಲಿ ನೆಲೆಸಿದ್ದ ರಾಜರುಗಳು ಅಥವಾ ದೊಡ್ಡ ಮನುಷ್ಯರುಗಳು ತಮ್ಮ ಕಾರುಬಾರುಗಳಿಂದ, ಜನರ ಅಹವಾಲುಗಳಿಂದ, ನೂರಾರು ತೊಂದರೆ, ತೊಡಕುಗಳಿಂದ, ಎಲ್ಲಾ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಅಥವಾ ಕೊಂಚ ಹೊತ್ತು ದೂರವಿರಲು ಒಂದು ರೀತಿಯ ಇಂದಿನ ಭಾಷೆಯಲ್ಲಿ ಹೇಳುವುದಾದರೆ, ಫಾರಂ ಹೌಸ್ ಅಥವಾ ರೆಸೋರ್ಟ್ ಗಳ ರೀತಿ ಕಟ್ಟಿಸಿಕೊಂಡ ಏಕಾಂತ, ಪ್ರಶಾಂತ ಜಾಗಗಳೇ ಇರಬಹುದಾ ನಾನೀಗ ನಿಂತಿರುವ ಈ ಸ್ಪೆಷಲ್ ಥಿಯೇಟರ್ ಅಂತ ಯೋಚಿಸುತ್ತಿರಬೇಕಾದ್ರೆ ಎದುರುಗಡೆ ನಿಂತಿದ್ದ ಅಜ್ಜಿ ಸುಸ್ತಾಗಿ ಅಲ್ಲೆ ಯಾರು ಏನು ಅಂದುಕೊಂಡರೂ ಪರವಾಗಿಲ್ಲ ಅಂತ ಕೂತ್ಕೊಂಡು ಸುಧಾರಿಸಿಕೊಳ್ಳೋಕೆ ಶುರು ಮಾಡ್ತು. ಎರಡು ಘಂಟೆಯಿಂದ ನಿಂತಿದ್ದ ನಮ್ಮ ಸಾಲು ಅಥವಾ queue ನೂರು ಮೀಟರ್ ಮುಂದುವರೆದಿರಬಹುದೇನೋ. ನಾವು ಯಾವ ಕಾಲಕ್ಕೆ, ಬಾಗಿಲು ತಲುಪೋದು show ಎಷ್ಟುಹೊತ್ತಿಗೆ ಶುರುವಾಗೋದು ನೆನೆಸಿಕೊಂಡರೆ ಯಾಕ್ ಬಂದು ಇಲ್ಲಿ ಸಿಗಾಕೊಂಡೆನೋ ಅನ್ನಿಸುತ್ತಿದೆ. ಬಂದಾಯ್ತು ticket ತೊಗೊಂಡಾಯ್ತು ಬೇರೆ ದಾರಿ ಇಲ್ಲ show ಮುಗಿಸಿಕೊಂಡೇ ಮನೆಗೆ ಹೋಗೋದಷ್ಟೆ ಅಂದುಕೊಂಡೆ. ಹೇಳ್ಕೊಳ್ಳೋಕೆ ನಾಲಕ್ಕು ಜನ ಸ್ನೇಹಿತರು ನಿಂತಿದೀವಿ. ಮಾತನಾಡೋಕೆ ಎಷ್ಟು ಅಂತ ವಿಷಯ ಇರುತ್ತೆ. ನಿಂತು ನಿಂತು ಸುಸ್ತಾಗಿನೋ ಇಲ್ಲ ಮಾತೇ ಖಾಲಿಯಾಗಿತ್ತೋ ಒಟ್ಟಿನಲ್ಲಿ ಬಾಯಿಗೆ ಪುರಸೊತ್ತು ಸಿಕ್ಕಿತ್ತು. ಏನ್ ಮಾಡ್ತಿದಾರೆ ಅಂತ ನೋಡಿದ್ರೆ, ನಮ್ಮ ಸಾಲಿನ ಹಿಂದೆ ತಿರುವಿನಲ್ಲಿ ಕಾಣ್ತಿರೋ ಸುಂದರಿಯನ್ನ ನೋಡೋದ್ರಲ್ಲಿ ಎಲ್ಲಾ ಮಕ್ಕಳೂ busy. ಇದೋ ಸಮಾಚಾರ ಅಂತ ಸರಿ ನನ್ನ ಕಣ್ಣಿಗೆ ಮತ್ತೆ ಕೆಲಸ ಕೊಟ್ಟೆ, ಕೆಲವರು ಮೊಬೈಲ್ ನಲ್ಲಿ, ಕೆಲವರು ನೋಡೋಕ್ ಹೊರಟಿರೋ ಪಿಕ್ಚರ್ ಹೀರೋ ಎಲ್ಲಾ ಸಿನೆಮಾಗಳ ಹಾಡುಗಳನ್ನ ಹಾಡೋದರಲ್ಲಿ, ಇನ್ನ ಕೆಲವರು ನಮ್ಮ ವಯಸ್ಸಿನವರೇ ನಮ್ಮ ತರಹನೇ ಅಲ್ಲಿ ಇಲ್ಲಿ ಚಿಟ್ಟೆಗಳನ್ನ ಕಣ್ಣಲ್ಲೆ ಸರೆಹಿಡಿಯೋದ್ರಲ್ಲಿ ಒಟ್ಟಿನಲ್ಲಿ ಹೆಂಗೋ ಸಮಯ ಕಳಿತಿದ್ರು. ಆದ್ರೆ ಒಂದು ಹೊಟ್ಟೆ ಉರಿತಿದ್ದಿದ್ದು. ಎರಡು ಕಾಲು ಘಂಟೆಯಿಂದ ನಿಂತಿರೋ ನಾವು ಸೆಕೆಂಡೆ ಕ್ಲಾಸ್ ಟಿಕೆಟ್ ತೊಗೊಂಡಿರೋ ಜನ ನಿಂತೇ ಇದೀವಿ ಪಕ್ಕದಲ್ಲಿ ಅದ್ಯಾವ್ದೋ ಬಾಲ್ಕನಿ ಟಿಕೆಟ್ ತರಹ ತೊಗೊಂಡು ಸಲೀಸಾಗಿ ಒಳಗೆ ಹೋಗ್ತಿದಾರೆ. ಥು ನಾವು ಯಾಕ್ ಆ ಬಾಲ್ಕನಿ ಟಿಕೆಟ್ ತೊಗೊಳ್ಳಿಲ್ವೋ ಸುಮ್ಮನೆ ಸಮಯ ವ್ಯರ್ಥ. ಸರಿ ಹಾಗೋ ಹೀಗೋ ತೆವಳೀ ತೆವಳೀ ನಮ್ಮೆದುರಿಗೆ ಇದ್ದ ಅಜ್ಜಿ ಹೆಜ್ಜೆ ನಮಸ್ಕಾರದಂತೆ ಅಲ್ಲಲ್ಲಿ ಕೂತೂ ಕೂತೂ ಹಂಗೂ ಹಿಂಗೂ ಟಿಕೆಟ್ ಹರಿಯುವವನ ಹತ್ತಿರ ಬಂದ್ವಿ ಇಲ್ಲಿವರೆಗೂ ತಾಳ್ಮೆಯಿಂದ ಇದ್ದ ನಮ್ಮ ಜನಕ್ಕೆ ಏನ್ ಬಂತೋ ರೋಗ ನೂಕು ನುಗ್ಗಲು ಶುರುವಾಯ್ತು. ಜಗ್ಗಾಡಿ, ನುಗ್ಗಾಡಿ, ಅವರಿವರ ಮೇಲೆ ಉಚಿತವಾಗಿ ಉಜ್ಜಾಡಿ, ನಮ್ಮ ನಾಲ್ಕೂ ಜನರ ಟಿಕೆಟ್ ಹರಿಸಿ ಒಳಗ ಪ್ರವೇಶ ತೊಗೊಂಡ್ವಿ. ಒಳಗೆ ಹೋದ್ರೆ ಏನು!! ಸ್ಕ್ರೀನ್ ಇಲ್ಲ, DTS sound ಸ್ಪೀಕರ್ ಗಳು ಇದ್ವು, ಒಂದು stage ಅದರ ಮೇಲೆ ಒಬ್ಬ ಹೀರೋ ಅಷ್ಟೇ!!!!!! ಕೊಟ್ಟಿರೋ 100 ರೂಪಾಯಿಗೆ show duration ಎಷ್ಟು ಹೊತ್ತು ಗೊತ್ತ 2 ನಿಮಿಷ ಅಷ್ಟೇ. ಅದರಲ್ಲೂ ಎಷ್ಟೋ ಜನ ಕಣ್ಮುಚ್ಚಿಕೊಂಡೇ ನಿಂತುಬಿಟ್ಟಿದ್ರು. ಅರೆರೆ ಇದ್ಯಾವ ತರಹದ show ರೀ. ಎರಡು ನಿಮಿಷ ಸರಿಯಾಗಿ ನೋಡೋಣ ಅಂದ್ರೆ ಸೆಕ್ಯುರಿಟಿಗಳು ಎಳೆದೆಳೆದು ಇದು Live show not more than 2 mins ಹೊರಡಿ ಅಂತ ನೂಕುತಿದ್ದ. ಹೊರ ಬರೋವಾಗ, ಈ PVRಗಳಲ್ಲಿ cool drinks ಕೊಡೊಹಾಗೆ small drinks ಕೊಟ್ಟು ಕಳಿಸಿದ್ರು. ಅರೆ! ಇಷ್ಟೇನಾ! ಬೇರೆ ತಿಂಡಿಗಳು ತೊಗೊಬೇಕು ಅಂದ್ರೆ ಅದಕ್ಕೆ ಹೆಚ್ಚಿನ ದರ ಕಟ್ಬೇಕಂತೆ. ಥೂ ಭಾರೀ ಮೋಸ ಹೋದ್ವಪ್ಪ ಅನ್ನಿಸಿತು ಹೊರಬರೋವಾಗ. ಆದರೆ ಎಲ್ಲಾ ಹೊರಬರೋವಾಗ ಅದ್ಭುತವಾದ ಸಿನೆಮಾ ನೋಡಿ ಧನ್ಯರಾಗಿ ಹೊರಬರುತ್ತಿರೋ ರೀತಿ ಬರ್ತಿದ್ರು ಅದೇ ಆಶ್ಚರ್ಯ!!! ಈ ದೇವಸ್ಥಾನಗಳು ನಿಜವಾಗಲೂ ನನಗೆ ಹಿಂಗೇ ಕಂಡಿದ್ದು. ಇಲ್ಲಿ Business ಇತ್ತು ಭಕ್ತಿ ಕಾಣಿಸಲಿಲ್ಲ. ಒಳಗಡೆ ಸುಮ್ಮನೆ ಇರೋ “ಹೀರೋ” ದೇವರದ್ದು ಏನ್ ತಪ್ಪಿದ್ಯೋ ಇಲ್ವೋ ಗೊತ್ತಿಲ್ಲ ಆದರೆ ಸುತ್ತ ಇದ್ದಿದ್ದ ಫಲಾಪೇಕ್ಷಿಗಳು, ಫಲಾನುಭವಿಗಳದ್ದು ಖಂಡಿತವಾಗಿ ತಪ್ಪಿತ್ತು ಅಂತ ನನಿಗೆ ಅನ್ನಿಸಿತು. ದುಡ್ಡು ಕೊಟ್ಟು ನಾವು ನಿಜವಾಗಲೂ ದೇವರನ್ನ ನೋಡೋಕೆ ಆಗುತ್ತ????? ಇನ್ನಾ ನನಿಗೆ ಗೊತ್ತಾಗಲಿಲ್ಲ. ನಿಮಗೇನಾದರೂ ಗೊತ್ತಾದರೆ ನೀವೂ ಒಂದು ಥಿಯೇಟರ್ ಶುರುಮಾಡ್ಬಿಡಿ :-)

ಆತಂಕವಾದಿ


(ಮುನ್ನುಡಿ: ಈ ಪುಟ್ಕತೆ ಕಾಲ್ಪನಿಕವಲ್ಲ, ಮೊನ್ನೆ (೧೭-೦೧-೨೦೧೨) ನಡೆದ ಎರಡು ಸತ್ಯ ಘಟನೆಗಳನ್ನು ಆಧಾರಿಸಿ ಕಥೆಯ ರೂಪ ತಳೆದಿದ)

“Public ಅನಾಹುತ ಎದುರಿಸಬೇಕಾಗುತ್ತೆ. ಈಗಲೇ ಹೇಳ್ತಿದೀನಿ ಏನೇ ತೊಂದರೆ ಆದ್ರೂ ನಾವು ಜವಾಬ್ದಾರನಲ್ಲ” ಎದುರಿಗೇ ನಿಂತು AK47 ನಿಂದ ಗುಂಡಿನ ಸುರಿಮಳೆಗಯ್ದಹಾಗಿತ್ತು ಆ ಮಾತುಗಳು. ಕೆಲವು ನಿಮಿಷ ಸ್ತಬ್ಧವಾಗಿದ್ದೆ. ಒಂದು ಕ್ಷಣದಲ್ಲಿ “ಸೋಲು ಒಪ್ಪಿಕೊಳ್ಳೋದೇ ಆದರೆ ಸೈನ್ಯ ಹಿಂದಿರುಗುವಾಗ ಸಾಮಾನ್ಯ ಪ್ರಜೆಗಳನ್ನೂ ಒಳಗೊಂಡಂತೆ ಇಡೀ ಬರ್ಲಿನ್ ನಗರವನ್ನ ಧ್ವಂಸ ಮಾಡುತ್ತಾ ಯಾರನ್ನೂ ಉಳಿಸದೆ ಶತ್ರುಗಳಿಗೆ ನಿರ್ಜೀವ ನಗರವನ್ನ ಒಪ್ಪಿಸೋಣ, Show no mercy to anyone, ಸೋತವರಿಗೆ ಬದುಕುವ ಹಕ್ಕಿಲ್ಲ” ಎಂದು ಆಜ್ಞೆ ಹೊರಡಿಸಿದ್ದ ಹಿಟ್ಲರ್ ಮನಃಪಟಲದಲ್ಲಿ ಹಾದು ಹೋದ. ಮತ್ತೊಮ್ಮೆ ನನಗೇ ನೇರವಾಗಿ ಬೆದರಿಕೆ ಹಾಕುತಿದ್ದ ಮನುಷ್ಯನೆಡೆಗೆ ದಿಟ್ಟಿಸಿದೆ ‘ಹಿಟ್ಲರ್’ ಆತನಲ್ಲೀ ಹಿಟ್ಲರನೇ ಕಾಣಿಸುತ್ತಿದ್ದ ಹಿಟ್ಲರ್ ಸತ್ತಿಲ್ಲ ಇಲ್ಲೇ ಇದ್ದಾನೆ!!!! ಅಷ್ಟರಲ್ಲಿ ನನ್ನ ಪ್ರತಿನಿಧಿ ಎನಿಸಿಕೊಂಡ ಆ ವ್ಯಕ್ತಿ ಮಾತು ಮುಂದುವರೆಸಿದ. ಆತನ ಮುಂದೆ ಹಲವರು mike, cameraಗಳನ್ನು ಹಿಡಿದು ಸೆರೆಹಿಡಿಯುತ್ತಿದ್ದರು ಎಂದು ತನ್ನನ್ನು ತಾನು hero ಎಂದುಕೊಂಡಿದ್ದನೋ ಏನೋ ಗೊತ್ತಿಲ್ಲ ಆದರೆ ಅವರೆಲ್ಲರ ಹಿಂದೆ ನಿಂತಿದ್ದ ನನ್ನನ್ನು ನೇರವಾಗಿ ದಿಟ್ಟಿಸುತ್ತಾ ಕೈತೋರಿಸುತ್ತಲೇ ಮಾತು ಮುಂದುವರೆಸಿದ. ಇನ್ನು ನಾಲ್ಕು ದಿನಗಳಲ್ಲಿ ಸರ್ಕಾರ ನಮ್ಮ ಮನವಿಗಳನ್ನ ಪರಿಗಣಿಸದೇ ಇದ್ದರೆ ಈಗ ನಡೆಯುತ್ತಿರುವ ಅಡುಗೆ ಇಂಧನದ ಮುಷ್ಕರದ ಜೊತೆಗೆ, petroleum ಸಾಗಣೆಯ strike ಕೂಡ ಹೂಡಬೇಕಾಗುತ್ತದೆ. ಇದರಿಂದ ಭಾರಿ ಹಾನಿ ಉಂಟಾಗುತ್ತದೆ. ಏನೇ ಅವಘಡಗಳಾದ್ರೂ ನಾವು ಜವಾಬ್ದಾರರಲ್ಲ. ಆತ ನನ್ನನ್ನೇ ನೇರವಾಗಿ ನೋಡುತ್ತಾ ನನಗೆ ಬೆದರಿಕೆ ಒಡ್ಡುತ್ತಿದ್ದ ಅರೆರೆ ಇವನ್ಯಾರು ಆತಂಕವಾದಿಯಾಗಿ ಘಂಟಾಘೋಷವಾಗಿ ಎಲ್ಲರ ಮುಂದೆ ಬೆದರಿಕೆ ಹಾಕುತ್ತಿದ್ದರೂ ಸಹಿತ ನನ್ನ ಮುಂದಿದ್ದವರೆಲ್ಲರೂ ಅವನ ಮಾತುಗಳನ್ನ ಸೆರೆಹಿಡಿಯುವುದರಲ್ಲಿ busy ಅಗಿದ್ದಾರೆ. ಅಲ್ಲ ಇಂದು ಕೇವಲ ನನ್ನ ಮೂರು ಘಂಟೆಗಳ ಓಡಾಟಕ್ಕೆ ತೊಂದರೆ ಮಾಡಿದ ವಕೀಲರನ್ನೇ ಬಿಡದೆ ಅವರ ವಿರುದ್ಧ ಮುಷ್ಕರ ಹೂಡಿ ಇದೇ mike, camera ಹಿಡಿದವರ ಮುಂದೆ ವಕೀಲರ ದುಶ್ಕೃತ್ಯವನ್ನ ಎತ್ತಿ ಹಿಡಿದ ನನ್ನಂತ ನನಗೇ ಹೀಗೆ ಬೆದರಿಕೆ ಹಾಕುತ್ತಿದ್ದಾನಲ್ಲ. ಯಾರೋ ಮೂರು ವಕೀಲರು ಮಾಡಿದ ತಪ್ಪಿಗೆ, ಇನ್ಯಾರೋ ಕನಿಷ್ಟ ಬಿಲ್ಲೆಗಳು ಪ್ರತಿತಪ್ಪು ಮಾಡಿ ಅವರವರಲ್ಲಿ ನ್ಯಾಯ ತೀರ್ಮಾನ ಮಾಡಿಕೋಳ್ಳೋದನ್ನು ಬಿಟ್ಟು ಗುಲ್ಲೆಬ್ಬಿಸಿ, ಸಮಸ್ಯೆಯನ್ನು ಬೇಕಂತಲೇ ದೊಡ್ಡದು ಮಾಡಿ, ಒಗ್ಗಟ್ಟಿನ ಪ್ರದರ್ಶನದ ಹೆಸರಿನಲ್ಲಿ ಮುಷ್ಕರ ಹೂಡಿ ಯಾವುದೇ ರೀತಿ, ಭಾಗಿಯಾಗದ ನನಗೂ ತೊಂದರೆ ಮಾಡುತ್ತಿರುವಾಗ ನಾನ್ಯಾತಕ್ಕಾಗಿ ಸುಮ್ಮನಿರಲಿ ಅದಕ್ಕಾಗಿಯೇ ಧ್ವನಿ ಎತ್ತಿದ್ದೆ. ಅದೊಂದು ಆರು ಘಂಟೆಗಳ ಕಾಲ ಬಂದೊದಗಿದ ಚಿಕ್ಕ ತೊಂದರೆ ಅಷ್ಟೇ. ಇನ್ನು ಈ ಆತಂಕವಾದಿ ವ್ಯಕ್ತಿ ತಂದೊಡ್ಡುತ್ತಿರುವ ಸಮಸ್ಯೆ ಎಷ್ಟು ದಿನಗಳವರೆಗೆ ನನ್ನನ್ನು ಭಾದಿಸುವುದೋ ಗೊತ್ತಿಲ್ಲ. ಇನ್ನ ಇವನನ್ನ ಹೇಗೆ, ಮತ್ತು ಎಷ್ಟರ ಮಟ್ಟಿಗ್ ತರಾಟೆಗೆ ತೆಗೆದುಕೊಳ್ಳಲಿ. ಆ ವಕೀಲರಿಗೆ ಬುದ್ದಿ ಕಲಿಸಿದ್ದು ಸಾಲದು. ಇಂಥ ಆತಂಕವಾದಿಗೆ ಇನ್ನೂ ಹೆಚ್ಚಿನ ಪಾಠವನ್ನೇ ಕಲಿಸಬೇಕು. ಆತಂಕವಾದಿಗೆ ಪ್ರತಿ ಆತಂಕವಾದವೊಂದೇ ಮಾರ್ಗ. ಏಟಿಗೆ ಎದಿರೇಟು. ನನ್ನಲ್ಲಿರುವ ಆತಂಕವಾದಿ ಜಾಗೃತನಾದ. ಸರ್ಕಾರ ಮತ್ತು ಅನಿಲ ಕಂಪೆನಿಗಳ ಮಧ್ಯೆ ನೂರು ಸಮಸ್ಯೆಗಳಿರಲಿ ಅದನ್ನ ಅವರವು ಮಾತನಾಡಿ, ಚರ್ಚಿಸಿ ಬಗೆಹರಿಸಲಿ, ಆ ಸಮಸ್ಯೆಯ ನಿವಾರಣೆಗೆಂದೇ ಅವರು ಕುರ್ಚಿಯ ಮೇಲಿರೋದು, ಅದು ಬಿಟ್ಟು ನನ್ನಂತ ನನ್ನನ್ನ ಅಸ್ತ್ರವಾಗಿ ಬಳಸಿ ತಮ್ಮ ಕಾರ್ಯ ಸಾಧಿಸಲು ಹೊಂಚು ಹಾಕಿದರೆ ನಾನು ಸುಮ್ಮನಿರುವವನಲ್ಲ ಅಂತ ಇಂದು ಇವರುಗಳಿಗೆ ತೋರಿಸಿಕೊಡುತ್ತೇನೆ. ಇದಕ್ಕೆ ಒಂದೇ ದಾರಿ ಆ ಆತಂಕವಾದಿಯನ್ನೇ ಮುಗಿಸುವುದು. ಹೌದು. ಇದೇ ಸರಿ. ನಾನು ನನ್ನ ಕೈಲಿದ್ದ AK47 ಅವನಿಗೇ ಗುರಿಯಿಟ್ಟು ಕಣ್ಮುಚ್ಚಿ Trigger ಒತ್ತಿದೆ, ಒತ್ತಿದೆ, ಒತ್ತಿದೆ..................

ಮನಸ್ಸಿನಲ್ಲಿರುವ ಕ್ರೋಧ ಶಮನವಾಗುವವರೆಗೂ ಒತ್ತಿದೆ. TV channelಗಳು ಅಡ್ಡಾದಿಡ್ಡಿ change ಆಗೋಗಿತ್ತು. ಕೈಲಿದ್ದ TV Remote ಕೆಳಗಿಟ್ಟು, ಊಟದ ಕತೆ ಮುಗಿಸಿದೆ.      
                     – ಜೈ ಹಿಂದ್

(ಹಿನ್ನುಡಿ: ಈ ಕತೆಯಲ್ಲಿ ಬರುವ ನಾನು ಸ್ವಯಂ ನಾನಲ್ಲ, ಮತ್ಯಾರೆಂಬ ಪ್ರಶ್ನೆಗೆ ಉತ್ತರ ಸ್ವಯಂ ನೀವೇ!!!!!!)

ನ್ಯಾಯ 4 Saleಮುನ್ನುಡಿ: ಅರ್ಥವಾಗದಿದ್ದಲ್ಲಿ ಮತ್ತೊಮ್ಮೆ ಓದಿ ಪ್ಲೇಸ್ :-)


ನ್ಯಾಯ 4 Sale: “ನೋಡಿ ಸಾರ್ ಮನಸು ಮಾಡಿ ಚೂರು”, ಕಣ್ಣೆತ್ತಿ ನೋಡಿದೆ. ಆ ಮುಖವನ್ನೊಮ್ಮೆ ನೋಡಿದರೆ ಮತ್ತೆ ನಾನು ಮುಖ ತಿರುಗಿಸಿದರೂ ಕಣ್ಣುಗಳು ಮಾತ್ರ ಆ ಕಣ್ಣುಗಳಲ್ಲೇ ನೆಟ್ಟಿತ್ತು. ಅಂತಹ ಆಕರ್ಷಣೆ ಆ ಕಣ್ಣುಗಳಲ್ಲಿ, ಮುಖದಲ್ಲಿ. ಹಾಗೇ ಕಲ್ಪನಾ ಲೋಕಕ್ಕೆ ಹೊರಟೋಗಿದ್ನೇನೋ. ಅಷ್ಟರಲ್ಲಿ ಮತ್ತೊಮ್ಮೆ “ಸಾರ್ ಏನ್ ಯೋಚನೆ ಮಾಡಿದ್ರಿ” ಅಂತ ಅವಳ ಪಕ್ಕದಲ್ಲಿದ್ದ ವ್ಯಕ್ತಿ ಎಚ್ಚರಿಸಿದ. ಅಸಡ್ಡೆಯಿಂದ ಆ ವ್ಯಕ್ತಿಯ ಕಡೆಗೆ ನೋಡಿದೆ. ಅವನ ಮೋರೆ, ಅವನು ನೋಡುತ್ತಿದ್ದ ರೀತಿ ಎರಡೂ ಒಳ್ಳೆ ಪ್ರಸಾದ ತಿಂದ ನಂತರ ತೀರ್ಥ ಕುಡಿದ ಹಾಗಿತ್ತು. ಈತನದ್ದು ಒಳ್ಳೆ ಪೀಕಲಾಟಕ್ಕೆ ಬಂದಿತ್ತು ಅದೆಲ್ಲಿಂದ ಬಂದು ಗಂಟು ಬಿದ್ದಿದ್ದನೋ ನಕ್ಷತ್ರಿಕನ ತರಹ. ಅರ್ಧ ಘಂಟೆಯಿಂದ ತಲೆ ತಿಂತಿದ್ದ. ಬೆಳಗ್ಗಿನಿಂದ ಕೆಲಸಗಳೂ ಆಗಿರಲಿಲ್ಲ ಆಫೀಸಿನಲ್ಲಿ ಇವತ್ತು. ಒಂದು ಮಣ ಫೈಲ್ ಗಳನ್ನ ಬೇರೆ ತಂದು ಜಡಿದಿದ್ರು ಇವತ್ತು ನಂಗೆ. ಬಂದಿದ್ದು ಬೇರೆ ಲೇಟ್, ಹೊರಗೆ ಮೈ ಸುಡುವ ಬಿಸಿಲು. ಈ ವ್ಯಕ್ತಿ ಬಂದು ಎಲ್ಲರನ್ನೂ ಬಿಟ್ಟು ನನ್ನ ಟೇಬಲ್ ಬಳಿಯೇ ಬಂದು ಜಾಂಡಾ ಊರಬೇಕಾ. ಇವತ್ತು ನನ್ನ ದಿನಾನೇ ಸರಿಯಾಗಿಲ್ವೇನೋ. ಆದ್ರೆ ಇರೋ ಎಲ್ಲಾ ಹಳಬ್ರನ್ನ ಬಿಟ್ಟು ನನ್ನಂತ ಹೊಸಬನ ಟೇಬಲ್ ಅತ್ರಾನೇ ಬರೋಕೆ ಏನಾದ್ರೂ ಕಾರಣ ಇರಬಹುದಾ. ಬರೋದ್ ಬಂದ ಎಲ್ಲರ ಮುಂದೆ ಹೀಗೆ ಇವಳು ಮಾರಾಟಕ್ಕೆ ಇದಾಳೆ ನಿಮ್ಮ ರೇಟ್ ಏನು ಅಂತ ಇವನು ಕೇಳಿದ್ ರೀತಿಗೇ ನಾನೇ ಹೇಳಿ ಕಳಿಸಿದೆನೇನೋ ಅಂತ ನನಗೇ ಸಂದೇಹ ಶುರುವಾಗೋಯ್ತು ಒಂದು ಕ್ಷಣ. ಎದೆ ಢವ ಢವ ಹೊಡ್ಕೊತಿತ್ತು ಕೊಂಚ ಸುಧಾರಿಸಿಕೊಂಡು ಸುತ್ತ ನೋಡಿದ್ರೆ ಎಲ್ಲಾ ನನ್ನ ಕಡೇನೇ ನೋಡ್ತಿದಾರೆ. ಎಲ್ಲಾ ನನ್ನ ನೋಡ್ತಿದ್ರೋ ಅಥವಾ ಆ ಹೆಣ್ಣನ್ನ ನೋಡ್ತಿದ್ರೋ ಗೊತ್ತಾಗ್ಲಿಲ್ಲ. ರೀ ಸ್ವಲ್ಪ ಮೆಲ್ಲಗೆ ಮಾತನಾಡ್ರೀ ಏನ್ ನಿಮ್ಮ ಸಮಸ್ಯೆ. Government officeನಲ್ಲಿ ಹೀಗಾ ಮಾತನಾಡೋದು ಅಂತ ಕೇಳೋಷ್ಟರಲ್ಲೇ ಬಾಯಿ ಒಣಗೋಯ್ತು. ನನ್ನ ಅನುಮತಿಯಿಲ್ಲದೆ ಇಬ್ಬರೂ ನನ್ನೆದುರು ಕುಳಿತುಕೊಂಡ್ರು. ಯಾಕೋ ‘ಹೋಗಿ’ ಅನ್ನೋಕೂ ಅಗ್ಲಿಲ್ಲ, ಏನು ಹೇಳೋಕು ಮಾತು ಹೊರಬರ್ತಿರಲಿಲ್ಲ. ಒಂದು ಹೊಸ ಅಚಾನಕ್ ಸಮಸ್ಯೆಗೆ ತಕ್ಷಣ ಪ್ರತಿಕ್ರಿಯಿಸೋದು ಸ್ವಲ್ಪ ಕಷ್ಟಾನೇ ಅನ್ಸುತ್ತೆ. ಆತ ಮಾತು ಮುಂದುವರೆಸಿದ. ನೋಡಿ ಸಾರ್ ಬೇಗ ಇವಳನ್ನ ತೊಗೊಂಡ್ ಬಿಡಿ ರೇಟ್ ಸ್ವಲ್ಪ ಬೇಗ ಫಿಕ್ಸ್ ಮಾಡಿದ್ರೆ ಒಳ್ಳೇದಿತ್ತು ನಾನು ಕೆಲಸ ಮಾಡುವವನ ರೀತಿ ಫೈಲ್ ನಿಂದ ತಲೆ ಮೇಲೆ ಎತ್ತಲೇ ಇಲ್ಲ. 

ಆತ ನನ್ನ ಮುಜುಗರವನ್ನು ಅರ್ಥಮಾಡಿಕೊಂಡವನಂತೆ ನಿಮ್ಮ ಮನೆಗೆ ಕರ್ಕೊಂಡೋಗೋಕಾಗಲ್ಲ ಗೊತ್ತು ಇನ್ನೊಂದು ಮನೆ ಮಾಡಬಹುದು ಸ್ವಲ್ಪ ಉರ್ಜೆಂಟ್ ಇದೆ ಎಂದು ಇನ್ನೂ ಏನೇನೋ ಒದರಲು ಶುರುಮಾಡಿದ. ಆತ ಮಾತು ಮುಂದುವರೆಸಿದ್ದ ಆದರೆ ನನ್ನ ತಲೆಯಲ್ಲಿ ಅವನ ಪಕ್ಕದಲ್ಲಿದ್ದವಳ ಬಗ್ಗೆಯೇ ವಿಚಾರಗಳು ಸುರುಳಿ ಸುತ್ತುತ್ತಿದ್ದವು. ಅವಳು ಅಷ್ಟು ಸುಂದರವಾಗಿದ್ದರೂ ಏನೋ ಒಂದು ರೀತಿಯ ಗೌರವ ಹುಟ್ಟಿಸುವ ಮುಗ್ಧತೆ ಕಾಣುತಿತ್ತು. ಮೈ ಕಾಣುವಂತೆ ಬಟ್ಟೆ ತೊಟ್ಟಿದ್ದರೂ ಕೂಡ ಯಾವುದೇ ಕೆಟ್ಟ ಭಾವನೆಗಳು ಮೂಡುತ್ತಿರಲಿಲ್ಲ. ಅವಳಷ್ಟು ಕಷ್ಟದಲ್ಲಿದ್ದರೂ ಆ ಮುಖದಲ್ಲಿನ ಉಲ್ಲಾಸ ಕಾಂತಿ ಹೇಗೆ ಮೂಡಿದ್ದವೋ ಗೊತ್ತಿಲ್ಲ. ಇವಳನ್ನು ಒಲ್ಲೆನೆನ್ನುವ ಮನಸ್ಸು ಯಾರಿಗೂ ಬಾರದು ಆದರೆ ನಾನು ಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇವಳನ್ನು ಪಡೆದರೆ ನನ್ನ ಸಂಸಾರ ನನ್ನ ಕೆಲಸಕ್ಕೆ ಒಂದಲ್ಲ ಒಂದು ದಿನ ಒಂದಲ್ಲ ಒಂದು ರೀತಿ ತೊಂದರೆ ಸಂಭವಿಸುವುದಂತು ನಿಶ್ಚಿತ. ಆದರೆ ನಾನು ಇವಳನ್ನು ಬಿಟ್ಟರೆ ಇಲ್ಲಿರುವ ನರಭಕ್ಷಕರಂತೆ ಕಾಣುವ ಇವರು ಯಾರಾದರೋ ಪಡೆದೇ ತೀರುತ್ತಾರೆ. ಏನ್ ಮಾಡಲಿ ಈ ಗೊಂದಲದಿಂದ ಹೇಗೆ ಹೊರಗೆ ಬರಲಿ. ತಲೆಯಲ್ಲಿ ಅವಳನ್ನು ಪಡೆಯುವುದಕ್ಕೂ ಮತ್ತು ನಿರಾಕರಿಸುವುದಕ್ಕೂ ನೂರಾರು ಕಾರಣಗಳು ಹುಟ್ಟುತ್ತಿದ್ದವು. ಅವಳ ಕಡೆಗೊಮ್ಮೆ ಕಳ್ಳ ನೋಟ ಬೀರಿದೆ. ಆ ಹಸನ್ಮುಖಿಯ ಕಣ್ಣುಗಳು ತುಂಬಿದ್ದವೋ ಎಂಬಂತೆ ಭಾಸವಾಯಿತು. ಸರಿಯಾಗೊಮ್ಮೆ ನೋಡಿದೆ ಇಲ್ಲ ಅವಳ ಕಣ್ಣುಗಳು ತುಂಬಿದ್ದವು. ಆ ವ್ಯಕ್ತಿ ಮತ್ತೆ ಬೇಡಿಕೊಂಡ. ಅವನ ಮೇಲೆ ಅಸಹ್ಯ ಹುಟ್ಟಿತು. ಅದೆಲ್ಲಿತ್ತೋ ಬೆಂಕಿ, ಒಳಗಿದ್ದಷ್ಟೂ ಬೆಂಕಿಯನ್ನು ಅವನ ಮೇಲೆ ಕಾರಿದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ೨ ನಿಮಿಷ ಯಾವುದೇ ಕೆಲಸ ನಡೆಯಲಿಲ್ಲ. ಬಾಯಿಗೆ ಬಂದ ಅವಾಚ್ಯ ಶಬ್ಧಗಳನ್ನೂ ಉಪಯೋಗಿಸಿ ನಿನ್ನಂಥವರಿಂದಲೇ ಇಲ್ಲಿ ಎಲ್ಲ ಹೀಗಾಗಿರೋದು, ಮೊದಲು ಇಲ್ಲಿಂದ ಹೊರಡು ಕಣ್ಣಿಗೂ ಕಾಣಕೂಡದು ಎಂದು ಅವನನ್ನು ಮಾತನಾಡಲೂ ಬಿಡದೆ ಅವನು ಅವಳನ್ನು ಕರೆದುಕೊಂಡು ತೊಲಗುವವರೆಗೂ ಒಂದೇ ಉಸಿರಿನಲ್ಲಿ ಅರಚಿದೆ. ಮನದಲ್ಲೆದ್ದ ಬಿರುಗಾಳಿ ನಿಂತು ಎಲ್ಲಾ ಶಾಂತವಾದಂತೆನಿಸಿತು. ಯಾರ ಕಡೆಯೂ ಗಮನ ಕೊಡದೆ ಫೈಲ್ ಗಳಲ್ಲಿ ಮುಖ ತೂರಿಸಿದೆ. ಮನಸ್ಸೆಲ್ಲ ಆ ಕಣ್ತುಂಬಿದ್ದ ಅವಳನ್ನೇ ನೆನೆಯುತ್ತಿತ್ತು. ಅವನು ಹೋಗುವಾಗ ಅವಳ ರಟ್ಟೆ ಬಲವಾಗಿ ಹಿಡಿದೆಳೆಯುತ್ತಾ ಹೋಗಿದ್ದು ಕಣ್ಮುಂದೆ ಬಂದಂತಾಯ್ತು. ಅವಳನ್ನು ಕನಿಷ್ಟ ಅವನಿಂದ ಉಳಿಸಬಹುದಿತ್ತೇನೋ ಅವಳಿಗೆ ಅವನೇನು ತೊಂದರೆ ಕೊಡುತ್ತಿದ್ದಾನೋ ಎಂದು ಸಂಕಟವಾಯಿತು. ಕುಳಿತುಕೊಳ್ಳಲಾಗದೆ, ಅವಳನ್ನು ಹುಡುಕಿಕೊಂಡು ಹೊರಟೆ. 

ರಸ್ತೆ ತುಂಬೆಲ್ಲ ವಿಕಾರಾಕೃತಿಯ ಜನರು ಎಲ್ಲರ ಭಯಾನಕ ಕಣ್ಣುಗಳು ನನ್ನನ್ನೇ ನುಂಗಿ ಹಾಕುವ ಹಾಗೆ ನೋಡುತ್ತಿದ್ದಂತೆನಿಸಿತು. ಎಲ್ಲರನ್ನು ದಾಟಿ ಓಡಿದೆ, ಬೇಕಂತಲೇ ಜನ ಅಡ್ಡಿ ಬಂದಂತೆನಿಸುತಿತ್ತು, ಎಲ್ಲರನ್ನೂ ತಳ್ಳಿಕೊಂಡು ನುಗ್ಗಿದೆ. ರಣ ಬಿಸಿಲು ರಕ್ತ ಹೀರುತ್ತಿತ್ತು. ದಣಿವಾಗುವವರೆಗೂ ಅಲೆದೆ. ಹೊರ ಹೋದವರು ಯಾವ ದಾರಿ ಹಿಡಿದರೊ ಕೊನೆಗೂ ಸಿಗಲೇ ಇಲ್ಲ. ಹಿಂತಿರುಗಿ ಆಫೀಸ್ ಕಡೆ ಸೋತ ಹೆಣವನ್ನು ಹೊತ್ತು ನಡೆದೆ. ಕಣ್ಣೆತ್ತಿ ಜನರ ಸಂತೆಯನ್ನು ನೋಡಲಾಗಲಿಲ್ಲ. ರಸ್ತೆಯಲ್ಲಿದ್ದ ನಾಯಿಗಳು ಕೂಡ ಹುಲಿಯಂತೆ ಹಸುಗಳು ಕೂಡ ಆನೆಗಳಂತೆ ಕಾಣುತಿದ್ದವು. ಕಾಡಲ್ಲೇ ಇದ್ದೆನೇನೋ!!! ತಲೆಯಲ್ಲಿ ವಿಚಿತ್ರವಾದ ವಿಕೃತವಾದ ಆಲೋಚನೆಗಳನ್ನು ತುಂಬಿಕೊಂಡು ಆಫೀಸ್ ಸಮೀಪಿಸಿದೆ. ಬಾಗಿಲ ಬಳಿಯೇ ಆ ವ್ಯಕ್ತಿ ಅಸಹ್ಯವಾಗಿ ಹಲ್ಲು ಕಿರಿಯುತ್ತಾ ಹಂಗಿಸುವಂತೆ ನನ್ನತ್ತಲೇ ನೋಡುತ್ತಾ ಹೊರಟುಹೋದ. ಅವನ ಜೊತೆ ಅವಳು ಇರಲಿಲ್ಲ. ಈ ವ್ಯಕ್ತಿ ಒಳಗಿಂದ ಬಂದದ್ದನ್ನು ನೋಡಿ ಆತಂಕದಿಂದ ಒಳಗೆ ಹೋದೆ. ಕಣ್ಣು ಕತ್ತಲೆ ಬಂದಂತಾಯಿತು. ಉಸಿರು ಕಟ್ಟಿದಂತಾಯಿತು. ನನ್ನ ಸೀನಿಯರ್ ಸಹಪಾಟಿಗಳ ಮೈ ಕೈ ಎಲ್ಲಾ ರಕ್ತ ಸವರಿತ್ತು. ನನ್ನ ಕಡೆಗೆ ಬೇಕೆಂತಲೇ ಗಮನ ಕೊಡದೆ ಕೆಲಸ ಮುಂದುವರೆಸಿದ್ದರು. ನನ್ನ ಮೇಲಧಿಕಾರಿಯ ಕಡೆ ನೋಡಿದೆ. ಎಲ್ಲರೂ ಅದೇ ಸ್ಥಿತಿಯಲ್ಲಿದ್ದರು. ಒಮ್ಮೆ ವಾಕರಿಕೆ ಬಂದಂತಾಯಿತು. ಮುಳ್ಳಿನ ಆಸನದ ಮೇಲೆ ಕುಳಿತೆ. ನಾನೇ ಖರೀದಿಸಿದ್ದರೆ ಅವಳ ಜೀವವಾದರೂ ಉಳಿಯುತ್ತಿತ್ತೇನೋ. ಒಂದು ವರ್ಷದ ನಂತರ ನನ್ನ ಮೈ ಕೈ ಕೂಡ ರಕ್ತಮಯವಾಗಿದೆ!!!

ಇದು ಉಣಿಸುವವರ ತಪ್ಪೋ, ಭಕ್ಷಿಸುವವರ ತಪ್ಪೋ ಗೊತ್ತಿಲ್ಲ, ಒಟ್ಟಿನಲ್ಲಿ ಪ್ರತಿ ದಿನ ಪ್ರಲೋಭನೆ ಹುಟ್ಟಿಸುತ್ತಿದ್ದ ದುಡ್ಡು ಜೇಬಿಗಿಳಿಯುವ ಮುನ್ನ ಒಬ್ಬ ನ್ಯಾಯ‘ದೇವತೆ’ ಸಾಯುತ್ತಾ ಹೋದಳು. ಗೊತ್ತಿದ್ದೋ ಗೊತ್ತಿಲ್ಲದೆಯೋ, ಬೇಕೆಂದೋ ಬೇಡವೆಂದೋ, ಯಾವ ಕಾರಣದಿಂದಲೋ ಒಟ್ಟಿನಲ್ಲಿ ಅದೇ ಸಾಗರದಲ್ಲಿ ಸವಾರನಾಗಿ ಪಯಣ ಮುಂದುವರೆಸಿದೆ.

ಹಿನ್ನುಡಿ: ತುಂಬಾ ಸೀರಿಯಸ್ ಆಗಿದ್ದಲ್ಲಿ ಕ್ಷಮಿಸಿ :-)

ಯಾತ್ರೆ!(A Blade Story)


ಮುನ್ನುಡಿ: ಇದೊಂದು ಶುದ್ಧ ಅಸಂಬದ್ಧ ಕತೆ, ಇಲ್ಲಿ ವಿಚಾರಗಳಿಲ್ಲ. ಆದರೂ ಈ ವಿಚಾರಗಳನ್ನು ಹೇಳದೆ ಬಿಡುವುದಿಲ್ಲ :-)

" ಸುಮ್ನಿರು ಪುಟ್ಟ ಏನಾಗಲ್ಲ... ಏ... ನಿಂಗೆ ಚಾಕ್ಲೇಟ್ ಬೇಡ್ವಾ" ಮಗು ಅದರ ಪಾಡಿಗೆ ಅಳುತ್ತಲೇ ಇತ್ತು. ಅದರ ತಂದೆ ಸಂತೈಸುತ್ತ ಅದರ ತಲೆಯನ್ನು ಹಿಡಿದೇ ಇದ್ದ. ಪಕ್ಕದ ಕುರ್ಚಿಯಲ್ಲಿ ಕುಳಿತು ಕನ್ನಡಿಯಲ್ಲಿ ಕಾಣುತಿದ್ದ ಆ ಮಗುವಿನ ಅಳುವ ಮೋರೆಯನ್ನು ನೋಡುತ್ತಲೇ ಇದ್ದೆ. ಎದ್ದು ಹೋಗ್ಬಿಡಲಾ, ಎಲ್ಲಾ ಒಂದೇ ಸಲಕ್ಕೆ ಖಾಲಿ ಆಗೋಗುತ್ತಲ್ಲ ಅಂತ ಕನ್ನಡಿಯಲ್ಲಿ ಮುಖ ನೋಡಿಕೊಂಡು ಯೋಚನೆ ಮಾಡಿದೆ. ಮತ್ತೊಂದು ಕ್ಷಣದಲ್ಲಿ, ಬೇಡ ನಿರ್ಧಾರ ಮಾಡಿ ಆಗಿದೆ ಯಾಕ್ ಸುಮ್ಮನೆ ಬದಲಾಯಿಸೋದು ಅಂತ ಸುಮ್ಮನೆ ಮುಖ ನೋಡುತ್ತಲೇ ಕುಳಿತೆ. 
"ಮಾ..........." ಎಂದು ಹೆದರಿ ಕಿಟಾರನೆ ಕುರುಚುತ್ತಾ ಬಿದ್ದು ಎದ್ದು ಓಡಿದ ಆ ಪುಟ್ಟ ಸೇಟು ಹುಡುಗ. ನೆನ್ನೆ ಸಂಜೆ ಅರುಣನ ಮನೆಗೆ ಹೋಗಿದ್ದಾಗ ಮೆಟ್ಟಿಲ ಬಳಿ ಹಟಾತ್ತನೆ ಎದುರಿಗೆ ಸಿಕ್ಕ ನನ್ನನು ನೋಡಿ ಆ ರೀತಿ ಯಾಕೆ ಪ್ರತಿಕ್ರಿಯಿಸಿದ ಆ ಹುಡುಗ. ಆಗ ಏನೂ ಅರ್ಥವಾಗಲಿಲ್ಲ ಅಪರಿಚಿತನೆಂದಿರಬಹುದೇನೋ ಎಂದುಕೊಂಡು ಹೋದಕೆಲಸ ಮುಗಿಸಿದೆ, ಮರಳಿದೆ. ನಂತರ ಅರುಣ ಫೋನ್ ಮಾಡಿ ಲೇ ನೀನ್ ಹೋದ್ ಮೇಲೆ ಆ ಹುಡುಗ ಬಂದು ಅಣ್ಣ ಯಾರಣ್ಣ ಅದು ಹಂಗಿದ್ರಲ್ಲ ಭಯಾನೇ ಅಗೋಯ್ತು ಅಂತ ಹೇಳ್ಕೋತಿದ್ನಂತೆ. ಈಗ ಆ ಪಾಪದ ಹುಡಗ ಪ್ರತಿಕ್ರಿಯಿಸಿದ್ದು ನೆನೆಸಿಕೊಂಡರೆ ನಗು ಬರುತ್ತೆ. ಥತ್ ಅಷ್ಟು ಕೆಟ್ಟದಾಗಿದೀನಾ, ಯಾಕೋ ನನಿಗೆ ಕೆಟ್ಟದಾಗಿ ಕಾಣ್ತಿಲ್ಲವಲ್ಲ. ನೋಡೋ ಜನಗಳ ಕಣ್ಣು ಸರಿ ಇಲ್ವೋ, ನನ್ನ ಕಣ್ಣೇ ಹಾಳಾಗಿದ್ಯೋ ಕೊನೆಗೂ ಗೊತ್ತಾಗ್ಲೇ ಇಲ್ಲ. 

ನಮ್ಮಮ್ಮ ಅಂತು ದಿನಕ್ಕೆ ಒಂದು ಸಲನಾದ್ರು ಕೈನೇ ಕತ್ರಿ ತರ ತೋರಿಸ್ತಾ ನೀನ್ ಇವತ್ತು ಮಲ್ಕೊ ಆಮೇಲೆ ಗೊತ್ತಾಗುತ್ತೆ ಅಂತ ಧಮ್ಕಿ ಹಾಕ್ತಿದ್ರು. ನಮ್ಮಪ್ಪ ಮೂರು ಸಲ ಯಾಕೋ ಹಿಂಗೆ, ಯಾಕೋ ಹಿಂಗೆ ಅಂತ ಕೇಳಿ ಕೇಳಿ ಪ್ರತಿ ಸಲ ಒಂದೊಂದು ಉತ್ತರ ಕೋಡ್ತಿದ್ದಕ್ಕೆ ಸಾಕಾಗಿ ಕೇಳೋದೇ ಬಿಟ್ಬಿಟ್ಟಿದ್ರು. ಆದ್ರೂ ಈ ಐದು ತಿಂಗಳು ಒಂತರಾ ಮಜಾ ಇತ್ತು. ಮೊನ್ನೆ ಯಾರೋ ಮನೆಗೆ ಬಂದಿದ್ರು, ನೇರವಾಗಿ ನಮ್ಮಪ್ಪನ ಅತ್ರ ನೋಡಿ ನಿಮ್ಮಗನಿಗೆ ಮಧುವೆ ಮಾಡಿಲ್ವಂತಲ್ಲ ಅದಕ್ಕೆ ಹೀಗಾಗಿದಾನೆ ಅಂದುಬಿಟ್ರು. ಆಹಾ ನಾನ್ ಯಾವಾಗ ಹೇಳಿದ್ದೆ ಇವ್ರತ್ರ ಅಂತ ಬಾಯಿ ಕಳ್ಕೊಂಡು ಅವರನ್ನೇ ನೋಡಿದೆ. ಸ್ವಲ್ಪ ದಿನದ ಹಿಂದೆ ಹಳೇ ಸ್ನೇಹಿತ ಸಿಕ್ಕ ಏನೋ ದೇವರಿಗೆ ಬಿಟ್ಟಿರೋದಾ ಅಂದ. ದೇವರನ್ನೇ ಬಿಟ್ಟಿದೀನಿ ಇನ್ನ ದೇವರಿಗ್ಯಾಕೆ ಬಿಡಲಿ ಅಂತ ಮನಸಿನಲ್ಲೇ ಅಂದುಕೊಂಡೆ. ಬಹುಮಟ್ಟಿಗಿನ ಜನ ಕೇಳಿದ್ದೆಂದರೆ "ಏನೋ ಲವ್ ಫೈಲ್ಯೂರಾ" ಅಂತ, ನಗು ಬರ್ತಿತ್ತು. ಸಾಯಿ ಬಾಬಾ ಅಂದ್ರು, ನಿತ್ಯಾನಂದ ಅಂದ್ರು, ಡೈರೆಕ್ಟರ್ ಲುಕ್ಕು ಅಂದ್ರು, ಬುದ್ದಿಜೀವಿಗಳ ಲಕ್ಷಣನಾ ಅಂದ್ರು, ಸುಮ್ಮನೆ ನಕ್ಕೆ. 

ಸ್ನೇಹಿತರ ಗುಂಪಲ್ಲೇ ಒಬ್ಬೊಬ್ಬರೂ ಒಂದೊಂದು ರೀತಿ ಕೇಳ್ತಿದ್ರು, ಬರೆಯೋವಾಗ ಕೆರ್ಕೊಳ್ಳೋಕೆ ಇರಲಿ ಅಂತಾನಾ/ ಮಗಾ ದುಡ್ಡಿಲ್ವೇನೋ ಬಾರೋ ನಾನೇ ಕರ್ಕೊಂಡೊಗ್ತೀನಿ/ ಲೇ ಸೂಪರ್ ಲೇ ಹಿಂಗೇ ಇರೋ/ ಹುಡುಗೀರು ನಿನ್ನ ಕಡೆ ನೋಡ್ತಾರೇನೋ ಲೇ ಹಿಂಗೆ ಇದ್ರೆ ನಿನ್ನಿಂದ ನಮ್ ಕಡೇನೂ ನೋಡಲ್ಲಪ್ಪ ಒಳ್ಳೇ ಕಾಡ್ ಕಪಿ ಇದ್ದಂಗಿದ್ಯ/ ಕರಡಿ ಮ್ಯಾನ್/ ಚೆ ಗುವೆರಾ/ ಮಗಾ ಜೋಳಿಗೆ ಒಂದು ಮಿಸ್ಸಿಂಗ್ ಕಣೊ/ ಅಲ್ಲಾ ಶೋರೂಮೇ ಹಿಂಗೆ, ಇನ್ನ ಗೊಡೋನ್ ಹೆಂಗೋ etc etc... ಒಬ್ಬರು ದೂರದ ಹಿರಿಯ ಸ್ನೇಹಿತರು ಸಿಕ್ಕರು ಸೀರಿಯಸ್ ಮುಖಭಾವದಲ್ಲಿ ನಿಮಗೆ ಮಧುವೆ ಆಗಿದ್ಯ ಅಂದ್ರು. ಯಾಕೆ ಅಂದೆ, ಇಲ್ಲ ಹೆಂಡತಿ ತವರು ಮನೆಗೇನಾದ್ರು ಹೋಗಿದಾರ ಬಾಣಂತನಕ್ಕೆ ಅಂದ್ರು. ಹ.. ಹ.. ಹ.. ಇಲ್ಲ ಸಾರ್ ಯಾಕ್ ಕೇಳಿದ್ರಿ ಈ ತರಹ ಅಂದೆ. ಡೆಲಿವರಿ ಆಗೋವರೆಗೂ ನಮ್ಮ ಕನಕಪುರದ ಕಡೆ ಜನ ಹಿಂಗೇ ಇರ್ತಾರೆ ಹಾಗಾಗಿ ಕೇಳ್ದೆ ಅಷ್ಟೇ ಅಂದ್ರು. ಹಿಂಗೂ ಒಂದು ಆಚಾರ ಇರಬಹುದು ಅಂತ ಅವತ್ತೇ ಗೊತ್ತಾಗಿದ್ದು. 

ಪ್ರತಿಯೊಬ್ಬರಿಗೂ ಅವರ ಪ್ರಶ್ನೆಗಳಿಗೆ ವಿರುದ್ಧವಾಗಿ ಹಾರಿಕೆಯ ಉತ್ತರವನ್ನಂತೂ ಕೊಡುತ್ತಿದ್ದೆ. ನಿನಗೆ ಸೆಟ್ ಆಗಲ್ಲ, ಚೆನ್ನಾಗ್ ಕಾಣಲ್ಲ ಅಂದ್ರು. ಯಾವಾಗಲೂ ಚೆನ್ನಾಗೇ ಯಾಕ್ ಕಾಣ್ಬೇಕು ಅಂದ್ರೆ ಉತ್ತರ ಬರ್ತಿರಲಿಲ್ಲ. ನಾನು ಹಿಂಗೇ ಇರಬೇಕು ಅಂತ ನಾನು ತೀರ್ಮಾನ ಮಾಡ್ಬೇಕಾ ಅಥವಾ ನಾನಿಷ್ಟೇ ಅಂತ ನನ್ನ ಸುತ್ತಲಿನ ಜನ ನನ್ನ ತೀರ್ಮಾನಿಸಿ ಆಗಿದ್ಯ ಅಂತ ಗೊತ್ತಾಗಲಿಲ್ಲ. ಇನ್ನೂ ಎಷ್ಟು ದಿನ ನಾನು ಹೀಗೇ ಇರ್ತೀನಿ ಅಂತ ಕೂಡ ಏನೂ ತೀರ್ಮಾನಿಸಿರಲಿಲ್ಲ. ಆದರೂ ಅವರ್ಯಾರೂ ನನ್ನನ್ನ ಏನೂ ಕೇಳದಿದ್ರೆ ನಾನು ಈ ವೇಷವನ್ನ ವಿಶೇಷವಾಗಿ ಪರಿಗಣಿಸುತ್ತಿರಲಿಲ್ಲ, ಅದರೊಂದಿಗೆ ಮುಂದುವರೆಯುತ್ತಿರಲಿಲ್ಲ. 

ತಲೆಕೂದಲು, ಗಡ್ಡ ಬಿಟ್ಟಿದ್ದೆ ಅಷ್ಟೇ ರೀ.. ತಲೆಕೂದಲು ಗಡ್ಡ ಮುಖದ ತುಂಬಾ ಬಿಟ್ಟು ಒಂದಷ್ಟು ದಿನ ಓಡಾಡಬೇಕೆಂಬ ವಿಚಿತ್ರ ತಿಕ್ಕಲು ಬಯಕೆಯಾಗಿತ್ತು ಅಷ್ಟೇ. ಯಾಕೆ ದಾಡಿ ಬಿಟ್ಟಿದ್ಯ ಅಂತ ಪ್ರತಿಯೊಬ್ಬರೂ ಕೇಳುತ್ತಿದ್ದ ಪ್ರಶ್ನೆಗೆ ಕಾರಣ ನನಿಗೂ ಗೊತ್ತಿರಲಿಲ್ಲ. ದಾಡಿ ಬಿಡೋಕೂ ಕಾರಣ ಬೇಕು ಅಂತ ಕೂಡ ಮುಂಚಿತವಾಗಿ ನನಿಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಯಾರು ಏನೇ ಹೇಳಿದ್ರು ನನ್ನ ದಾರೀಲಿ ನನ್ನಿಷ್ಟದಂತೆ ಹೋಗ್ತಾ ಇರ್ತೀನಿ ಅಂತ ನಿರ್ಧರಿಸಿದ್ದೆ. ಯಾಕೋ ನಡೆದಿದ್ದು ಸಾಕೆನಿಸಿತು. ಯಾಕ್ ಬೇಕು ಇವೆಲ್ಲ ಅಂತ ವೈರಾಗ್ಯ ಮೂಡಿತ್ತು. ಒಂದು ವಿರಾಮ ತೊಗೊಳ್ಳೋಣವೆಂದು ನಿರ್ಧರಿಸಿ ಸಲೂನ್ ಕಡೆಗೆ ನಡೆದೆ. ಈ ನಿರ್ಧಾರಕ್ಕೂ ಒಂದು ಕಾರಣವಿರಲಿಲ್ಲ, ನನಿಗೆ ಕಾರಣ ಬೇಕಾಗೂ ಇರಲಿಲ್ಲ. 

ಆ ಮಗು ಇನ್ನೂ ಬಿಕ್ಕುತ್ತಲೇ ಇತ್ತು. ತನ್ನ ಕೂದಲು ಹೋಯಿತೆಂಬ ಬೇಜಾರೋ ಅಥವಾ ಇದ್ಯಾವುದೋ ವಿಚಿತ್ರ ಕುರ್ಚಿಯ ಮೇಲೆ ಕೂರಿಸಿ ಬಟ್ಟೆ ಹೊದಿಸಿ ಕತ್ರಿ ಹಿಡಿದು ಏನು ಮಾಡುತ್ತಾರೋ ಎಂಬ ಹೆದರಿಕೆಗೋ ಗೊತ್ತಿಲ್ಲ. ಅದರ ಅಪ್ಪ ಅದರ ಕಣ್ಣೊರೆಸುತ್ತಾ ಚಿಲ್ಲರೆ ಪಡೆದುಕೊಂಡು ಹೊರಟರು. ನನ್ನ ಆಸ್ತಿ ಖಾಲಿಯಾಗಿ ನನ್ನ ಕಾಲ ಬಳಿ ಇತ್ತು. ಸಾಕಾ ಸಾರ್ ಅಂತ ಕನ್ನಡಿ ಹಿಡಿದು ತಲೆಯ ಹಿಂಬದಿಯೆಲ್ಲಾ ತೋರಿಸಿದ ಹ್ಮ್…. ಎಂದು ನಿಟ್ಟುಸಿರು ಬಿಡುತ್ತಾ ದುಡ್ಡು ಕೊಟ್ಟು ಎದ್ದು ನಡೆದೆ. 

ಇಲ್ಲಿಗೆ ನನ್ನ "ದಾಡಿ ಯಾತ್ರೆ" ಮುಗಿಯಿತು. 

ಹಿನ್ನುಡಿ: ಈ ಕಥೆಯಲ್ಲದ ಕಥೆಯನ್ನು ವ್ಯಥೆ ಪಟ್ಟುಕೊಂಡು ಇಲ್ಲಿಯವರೆಗೂ ಓದಿದವರಿಗೂ, ಇನ್ನೊಬ್ಬರೊಂದಿಗೆ ಹಂಚಿಕೊಂಡವರಿಗೂ, ಓದುವಾಗ ಆಕಳಿಸಿದವರಿಗೂ, ಮೇಲಿನದ್ದೆಲ್ಲ ಬಿಟ್ಟು ಹಿನ್ನುಡಿಯನ್ನು ಮಾತ್ರ ಓದುತ್ತಿರುವವರಿಗೂ ತಮ್ಮ ಒಳಗೂ ಇರುವ ವಿಚಿತ್ರ ಬಯಕೆ ಗರಿಗೆದರುವಂತಾಗುತ್ತದೆ, ಮತ್ತು ತಮ್ಮ ಸುತ್ತಲ ರಂಗ್ ಬಿರಂಗಿ ಜನರ ರಂಗ್ ಬಿರಂಗಿ ಮಾತುಗಳು, ಪ್ರತಿಕ್ರಿಯೆಗಳು ಮನರಂಜಿಸುವಂತಾಗುತ್ತದೆ ತಥಾ.........................ಸ್ತು.