*
* * * *
ಬಿಳೀ ಟೈಲ್ಸ್ ಮೇಲೆ ಚಿತ್ರವಿಚಿತ್ರವಾಗಿ ಹರಡಿ ಬಿದ್ದಿರುವ
ಬಣ್ಣ. ನನ್ನ

*
* * * *
ಹಾ ಹಾ ಹಾ.. ನನ್ನ ಸೌಂದರ್ಯ ಇವತ್ತು ಉಳಿಯಿತು. ಇದು ಮೊಟ್ಟ
ಮೊದಲ ಬಾರಿ ನಾನು ಗೆದ್ದಿರುವುದು. ಅಯ್ಯೋ ನನ್ನ ಖುಷಿ ಯಾರಿಗೆ ಹೇಳಿಕೊಳ್ಳಲಿ. ಆದರೆ ನನ್ನ ಬಲಗೈ
ಎತ್ತಲಾಗ್ತಿಲ್ಲ, ಬೆರಳುಗಳನ್ನ ಮುಟ್ಟಿದರೆ ನೋಯುತ್ತಿದೆ. ಮೂಳೆ ಮುರಿದಿಲ್ಲವಾದರೆ ಸರಿ ಅಷ್ಟೇ. ಆದರೆ
ನನ್ನ ಚಿತ್ರ ನಗುತ್ತಲಿದೆ. ಇಂದು ನಡೆದದ್ದೇನು. ಮಾಮೂಲಿನಂತೆ ಬಾಗಿಲು ಧಿಡೀರನೆ ಬಡಿಯುತ್ತ ಬಂದ.
ಬಂದವನೇ ಅರ್ಧ ಪೂರ್ಣಗೊಂಡಿದ್ದ ಚಿತ್ರದ ಪರದೆಯನ್ನು ನಿಲುವಿನಿಂದ ಕಿತ್ತು ಹಿಡಿದುಕೊಂಡ. ನನ್ನ ಯಾವುದೇ
ರೀತಿಯ ಪ್ರತಿಕ್ರಿಯೆಯಿಲ್ಲದ್ದು ಕಂಡು ಗೊಂದಲಗೊಂಡಿರಬಹುದು. ಅವನಿಗೆ ನಾನು ವಿರೋಧಿಸುವುದೇ ಬೇಕಿತ್ತೆನಿಸುತ್ತೆ.
ನಾನು ಸುಮ್ಮನೆ ನಿಂತಿರುವುದನ್ನು ಕಂಡು ಚಿತ್ರವನ್ನು ಬಿಟ್ಟು ನನ್ನ ಮೇಲೆಯೇ ಎರಗಿದ. ಎರಡೂ ಕಪಾಳೆಗೆ
ಹೊಡೆದ. ಈ ಕೈಯಿದ್ರೆ ತಾನೆ ನೀನು ಈ ಕುಲಗೆಟ್ಟ ಚಿತ್ರಗಳನ್ನ ಬಿಡಿಸುತ್ತಾ ನಿಲ್ಲುವುದು ಎಂದು ನನ್ನ
ಬಲಗೈಯನ್ನೇ ತಿರುಗಿಸಿದ. ನಿನಗಿದರಿಂದ ಯಾವ ರೀತಿ ತೊಂದರೆ ಆಗ್ತಿದೆ. ನಿನಗೆ ಸಮಯಕ್ಕೆ ಸರಿಯಾಗಿ ಅಡುಗೆ
ಮಾಡಿ ಹಾಕ್ತಿದ್ದೀನಿ ತಾನೆ. ಮನೆಕೆಲಸಗಳಲ್ಲಿ ಏನಾದ್ರು ನನ್ನಿಂದ ಲೋಪವಾಗಿದ್ಯ ಹೇಳು. ನನ್ನ ಬಿಡುವಿನ
ವೇಳೆಯಲ್ಲಿ ನಾನು ಚಿತ್ರ ಬಿಡಿಸುತ್ತೀನಿ. ಅದು ನಿನ್ನಿಂದ ಯಾಕೆ ಸಹಿಸೋಕೆ ಆಗ್ತಿಲ್ಲ ಎಂದದ್ದಕ್ಕೆ.
ನೀನು ಚಿತ್ರ ಬಿಡಿಸಿ ಯಾವ ಪ್ರಶಸ್ತಿ ತೊಗೊಬೇಕು ಅಂತ ಅಂದುಕೊಂಡಿದ್ಯಾ, ನಿನ್ನ ಚಿತ್ರಗಳು ಈ ಗೋಡೆಗಳಿಂದ
ಹೊರಗೂ ಸಹ ಹೋಗೋದಿಲ್ಲ ನೆನಪಿರಲಿ. ನಿನ್ನ ಧರಿದ್ರ ಚಿತ್ರಗಳನ್ನ ಯಾವನು ನೋಡ್ತಾನೆ. ನಿನ್ನನ್ನ ನೀನು
ಮಹಾನ್ ಕಲಾವಿದೆ ಅಂತ ಅಂದುಕೊಂಡಿದ್ಯಾ ಹೇಗೆ. ಕುಲಗೆಟ್ಟ ಅಭಿರುಚಿ ನಿನ್ನದು ಎಂದು ಅವನೇ ನಿರ್ಧರಿಸಿ
ಅಬ್ಬರಿಸಿದ. ಕೈಗಳು ಪ್ರಾಣ ಹೋಗುವಹಾಗೆ ನೋಯುತ್ತಿತ್ತು. ಕೈಬಿಟ್ಟು ಮಾತನಾಡು ನೀನು ಎಂದು ನೂಕಿದ್ದು
ಅವನಿಗೆ ಅವಮಾನವಾದಂತಾಗಿರಬೇಕು. ಕಾಲು ಕಾಲಿನಲ್ಲಿ ಒದ್ದು ಹೋದ. ಕೊನೆಗೂ ಅವನ ಬಾಯಿಯಲ್ಲಿ ಬಂದ ಮಾತು
ಚಿತ್ರಕಲೆ ಬಿಡು ಅಷ್ಟೇ ಎಂದು. ಯಾಕವನಿಗೆ ನನ್ನ ಚಿತ್ರಕಲೆಯ ಮೇಲೆ ಇಷ್ಟು ತಾತ್ಸಾರ, ಇಷ್ಟು ದ್ವೇಷ,
ಇಷ್ಟು ವಿರೋಧ. ನನಗದೇ ಅರ್ಥವಾಗುತ್ತಿರಲಿಲ್ಲ. ಅವನದ್ದು ಹಠವಾದರೆ ನನ್ನದೂ ಹಠವೇ. ಅವನು ಹೊಡೆಯುವಾಗ,
ಕೈ ತಿರುಗಿಸಿದಾಗ ನಾನ್ಯಾಕೆ ಕಣ್ಣೀರು ಹಾಕುತ್ತಾ, ಬಲಹೀನಳಾಗಿ ಅಮ್ಮನನ್ನು ನೆನೆದು, ದಯವಿಟ್ಟು ಬಿಡು
ಬಿಡು ಎಂದು ಅವನಿಗೆ ಬೇಡಿಕೊಂಡೆನೋ ಇವಾಗ ನಾಚಿಕೆಯಾಗುತ್ತಿದೆ. ಆದರೆ ನನ್ನ ಸೌಂದರ್ಯ ನಗುತ್ತಲಿದೆ.
ಇದು ನನ್ನ ಸೋಲಲ್ಲ ನನ್ನ ಗೆಲುವೇ ಸರಿ. ಅವನು ಸೋತಿದ್ದ, ಅದಕ್ಕೇ ಕಣ್ಣಲ್ಲಿ ಕಣ್ಣಿಟ್ಟು ನನ್ನಲ್ಲಿ
ಮಾತನಾಡಲಾಗಲಿಲ್ಲ ಅವನಿಗೆ. ನಿಂತು ನನ್ನ ಮಾತುಗಳನ್ನ ಎದುರಿಸಲಾಗಲಿಲ್ಲ, ಹೋದ. ಆದರೆ ಎಲ್ಲಿಗೆ ಹೋದಾನು.
ಮತ್ತೆ ಬರಲೇ ಬೇಕು, ನನ್ನನ್ನು ಎದುರಿಸಲೇ ಬೇಕು.
*
* * * *
ಮಹಿಳೆಯರನ್ನು ಬೆಂಬಲಿಸುವ, ಸಮಾಜದಲ್ಲಿರುವ ಹಲವು ಸಂಘಟನೆಗಳಲ್ಲಿ
ಯಾವುದಾದರೂ ಒಂದಕ್ಕೆ ಮೊರೆ ಹೋಗಬೇಕೆಂದು ಹಲವು ಬಾರಿ ಅನಿಸಿತ್ತು. ಈ ಮಹಾಪುರುಷನ ವೈಯಕ್ತಿಕ ಜೀವನದಲ್ಲಿನ
ನಡುವಳಿಕೆಯನ್ನು ಇಡೀ ಸಮಾಜಕ್ಕೆ ತೋರಗೊಡಬೇಕೆಂದು ದ್ವೇಷ ಹುಟ್ಟಿದ್ದುಂಟು. ಆದರೆ ಇದು ಒಬ್ಬ ಗಂಡು
ಹೆಣ್ಣಿನ ಮೇಲೆ ಮಾಡುತ್ತಿರುವ ದೌರ್ಜನ್ಯವಾಗಿತ್ತೆಂದು ನನಗೆ ಅನುಮಾನ ಸದಾ ಇದೆ. ಅವನು ಗಂಡು ಹೌದು,
ನಾನು ಹೆಣ್ಣು ಹೌದು ಆದರೆ ನನ್ನ ಮೇಲೆ ಆತ ಚಲಾಯಿಸುತ್ತಿದ್ದ ಅಧಿಕಾರವನ್ನು ತನ್ನ ಕೈಕೆಳಗೆ ಕೆಲಸ
ಮಾಡುತ್ತಿದ್ದ ಮತ್ತೊಬ್ಬ ಗಂಡಿನ ಮೇಲೂ ಸಹ ಚಲಾಯಿಸುತ್ತಿದ್ದ. ಇದು ಅವನಲ್ಲಿನ ಅಹಂಭಾವ, ತಾನು ಮೇಲು
ಇತರರು ಕೀಳೆಂಬ ನಡವಳಿಕೆಯಷ್ಟೇ, ಹಾಗಾಗಿ ಇದು ಮನುಷ್ಯ ಮನುಷ್ಯನ ನಡುವಿನ ದ್ವಂದ್ವವಷ್ಟೇ. ಅದಕ್ಕಾಗಿ
ಸ್ತ್ರೀ ಸಮಾನತೆಗಾಗಿ, ಪುರುಷ ಪ್ರಧಾನ ಸಮಾಜದ ವಿರುದ್ಧ ಹೋರಾಡುವ ಯಾವ ಬುದ್ಧಿಜೀವಿಗಳ ಬಳಿಯೂ ಹೋಗುವುದು
ಸರಿಯೆನಿಸಲಿಲ್ಲ. ಅದರಿಂದ ಸಮಸ್ಯೆ ಇನ್ನೊಂದು ರೂಪ ಪಡೆಯುತ್ತಿತ್ತೇ ಹೊರತು ಪರಿಹಾರವಾಗುತ್ತಿರಲಿಲ್ಲ.
ಏನೇ ಆಗಲಿ ನನಗೆ ಅವನು ಬೇಕಿತ್ತು, ಅವನ ದುಡ್ಡಿಗಾಗಿ ಅಲ್ಲ, ಆಸರೆಗಾಗಿ ಅಲ್ಲ, ಘನತೆಗಾಗಿ ಅಲ್ಲ,
ಮತ್ತಾವುದೇ ಕಾರಣಕ್ಕಾಗಿ ಅಲ್ಲ ಕೇವಲ ಅವನ ಪ್ರೇಮಕ್ಕಾಗಿ, ನನ್ನಲ್ಲಿದ್ದ ಅವನಲ್ಲಿನ ಪ್ರೇಮಕ್ಕಾಗಿ.
ಅವನಿಗೂ ಸಹ ಅದೇ ಕಾರಣಕ್ಕಾಗಿ ನಾನು ಬೇಕಿತ್ತು ಅದು ನನಗೆ ಗೊತ್ತು. ಆದರೆ ಈ ಸಮಸ್ಯೆಗೆ ಪರಿಹಾರ ಬೇಕು.
ಅದನ್ನು ನಾನೇ ಕಂಡುಕೊಳ್ಳಬೇಕಿದೆ. ಆಸ್ಪತ್ರೆಯಲ್ಲಿ ಕೈಯಿನ ಇಲಾಜು ಮಾಡಿಸಿಕೊಳ್ಳಲು ಹೇಳಿದ ಸುಳ್ಳು
ನನ್ನಲ್ಲಿ ಇಷ್ಟು ಆಲೋಚನೆಗಳನ್ನು ಹುಟ್ಟಿಸಲು ಪ್ರೇರೇಪಿಸಿತ್ತು. ಸಧ್ಯ ಕೈಗಳ ನೋವು, ಊತ ಮೂರು ದಿನಗಳಲ್ಲಿ
ಕಡಿಮೆಯಾಯಿತು. ಮತ್ತೆ ನನ್ನ ಚಿತ್ರಕಲೆಯ ಸೌಂದರ್ಯವನ್ನು ಜಾಗೃತಗೊಳಿಸಿದೆ. ಈ ಬಾರಿ ಬಿಳಿ ಕೈಯಿನ
ಮೇಲಾಗಿರುವ ಕೆಂಪು ಗಾಯಕ್ಕೆ ಹಸಿರು ಔಷಧಿ ಹಚ್ಚುತ್ತಿರುವ ಕಪ್ಪು ಕೈಯಿನ ಚಿತ್ರ ಬರೆದರೆ ಹೇಗೆಂದು
ಒಂದು ಆಲೋಚನೆ. ಇಲ್ಲಾ, ಒಂದು ಊತ ಬಂದಿರುವ ಬಿಳಿಯ ಕೈ ಒಂದು ಸವಕಲು ಕಪ್ಪು ಕೈಯನ್ನು ಬಾಕುವಿನಿಂದ
ಚುಚ್ಚುತ್ತಿರುವ ವಿಲಕ್ಷಣ ಕೃತಿಯನ್ನು ಬರೆಯಬೇಕೆಂದು ಮನಸ್ಸಾಗುತ್ತಿದೆ. ಛೆ ಛೆ ಕ್ರೌರ್ಯಕ್ಕೆ ಕ್ರೌರ್ಯವೇ
ಉತ್ತರವಾಗಲಾರದು, ಅದು ಪರಿಹಾರವಲ್ಲ ಪ್ರತೀಕಾರ, ಸಮಸ್ಯೆಯ ಮುಂದುವರಿಕೆ. ಹಾಗಾದ್ರೆ ಔಷಾಧಿಯ ಚಿತ್ರವನ್ನೇ
ಬರೆಯುವುದು ಸರಿಯೆಂದು ನಿರ್ಧರಿಸಿ ಬಣ್ಣ ಕಲೆಸಲು ಶುರುಮಾಡಿದೆ.
*
* * * *
ಬಣ್ಣಗಳನ್ನು ನನ್ನ ಮೇಲೇ ಸುರಿದು, ಜುಟ್ಟು ಎಳೆದಾಡಿ, ಕಾಲಲ್ಲಿ
ಒದ್ದು, ಕೈಮುರಿದು ಏನು ಮಾಡಿದರೂ ನಾನು ಅಳಲೂ ಇಲ್ಲ ವಿರೋಧಿಸಲೂ ಇಲ್ಲ. ಹೊಡೆದೊಡೆದು ಅವನಿಗೇ ಸಾಕಾಯ್ತೇನೋ.
ಎರಡು ದಿನವಾಯ್ತು, ಮೂರು ದಿನವಾಯ್ತು ನಾನು ಪ್ರತಿಕ್ರಿಯೆ ಕೊಡುವುದನ್ನು ಸಂಪೂರ್ಣ ನಿಲ್ಲಿಸಿದ್ದೆ.
ಸುಸ್ತಾಗುವಷ್ಟು ಹೊಡೆದು ಹೋಗುತ್ತಿದ್ದ. ನೋವನ್ನು ನುಂಗಲು ಕಲಿಯುತ್ತಾ ಬಂದಿದ್ದೆ. ಈಗೀಗ ಅವನ ನಿರರ್ಥ,
ನಿಷ್ಪ್ರಯೋಜಕ ಪ್ರಯತ್ನ ಕಂಡು ಒಳಗೊಳಗೇ ನಗೆ ಬರುತ್ತಲಿತ್ತು. ಎಷ್ಟು ಬಲಾಢ್ಯನೆಂದು ತಾನು ತಿಳಿದಿದ್ದನೋ
ಗೊತ್ತಿಲ್ಲ, ನನಗಂತೂ ಅಷ್ಟೇ ಕ್ಷೀಣಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಲಿತ್ತು. ಬಹುಷಃ ಅವನಿಗೂ
ಗೊತ್ತಾಗಿತ್ತೇನೋ. ತನ್ನ ಸೋಲಿನಲ್ಲಿ ತನಗೆ ಅವಮಾನವಿದೆ, ತನ್ನ ಸೋಲನ್ನಾದರೂ ಎದುರಿಸಿಯಾನು ಅನುಮಾನವನ್ನು
ಖಂಡಿತಾ ಎದುರಿಸುವ ಶಕ್ತಿ ಪ್ರಬಲನೆಂದುಕೊಂಡಿದ್ದ ಅವನಿಗೆ ಇರಲು ಸಾಧ್ಯವಿಲ್ಲ. ಆದರೆ ಅವನ ಹಾದಿಯಲ್ಲಿ
ಸೋಲಿಗಷ್ಟೇ ಅವಕಾಶವಿರುವುದು. ಆ ಸೋಲನ್ನು ತಾನು ಅವಮಾನವೆಂದು ಪರಿಗಣಿಸಿದರೆ ಅದಕ್ಕೆ ಅವನೇ ಹೊಣೆ.
*
* * * *
ಇಂದೂ ನೇರವಾಗಿ ಒಳಗೆ ಬಂದವನೇ ಔಷಧಿಯ ಕೈಗಳ ಚಿತ್ರ ಪೂರ್ಣಗೊಳಿಸುವ
ಕೊನೆಯ ಹಂತದಲ್ಲಿದ್ದವಳನ್ನು ಕಂಡು ಹೊಡೆಯಲು ಕೈ ಎತ್ತಿದವನು ಇಳಿಸಿ ಕೈಲಿದ್ದ ಮೊಬೈಲನ್ನು ನೆಲಕ್ಕಪ್ಪಳಿಸಿ,
ತಲೆಕೆಡಿಸಿಕೊಂಡು, ಅಡುಗೆ ಮನೆಗೆ ಹೋಗಿ, ಮಾಡ್ತೀಯಲ್ಲಾ ಮಾಡು, ನಿನ್ನ ಚಿತ್ರಕಲೆ, ನಿನ್ನ ಹಠ, ನೀನೇ
ಬದುಕು, ನಾನೇನು ಅಲ್ಲ ಅಂದಮೇಲೆ ನಾನ್ಯಾಕೆ ಬದುಕಿರಲಿ ಎಂದು ಘರ್ಜಿಸುತ್ತಲೇ ತಲೆಯ ಮೇಲೆ ಸೀಮೆ ಎಣ್ಣೆ
ತಂದು ಸುರಿದುಕೊಂಡೇ ಬಿಟ್ಟ. ಅವನ ಕಣ್ಣಲ್ಲಿ ನೀರಿತ್ತೋ, ಇಲ್ಲ ಸೀಮೆ ಎಣ್ಣೆಯೇ ಸುರಿಯುತ್ತಲಿತ್ತೋ
ತಿಳಿಯಲಿಲ್ಲ. ಆದರೆ ಈ ತನ್ನ ಆಘಾತಕಾರೀ ಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಬೆಂಕಿ ಕಡ್ಡಿ
ಗೀರಲು ಪ್ರಯತ್ನಿಸುತ್ತಿದ್ದವನನ್ನು ತಡೆದು ಬೆಂಕಿ ಪೊಟ್ಟಣ ಬಿಸಾಕಿದೆ. ಬದುಕೋಕಂತೂ ಬಿಡಲಿಲ್ಲ, ಸಾಯೋಕಾದ್ರೂ
ಬಿಡು ಎಂದ. ಏನಾಗಿದೆ ನಿನಗೆ ಸಾಯೋಂಥದ್ದು, ನಿನ್ನ ಸಮಸ್ಯೆಯಾದರೂ ಏನು ಎಂದೆ. ನಿನ್ನ ಹಠ, ನಿನ್ನ
ಕೆಟ್ಟ ಹಠ, ನಿನ್ನ ಹಠ ನನ್ನನ್ನ ದಿನೇ ದಿನೇ ಕೊಲ್ಲುತ್ತಲಿದೆ ಎಂದ. ನಿನ್ನ ಹಠವೂ ಎಂದಷ್ಟೇ ಹೇಳಿ
ಸುಮ್ಮನೆ ನಿಂತೆ. ಎಷ್ಟು ಹೊತ್ತು ಮೌನವಾಗಿದ್ದೆವೋ ಗೊತ್ತಿಲ್ಲ. ಸುಮ್ಮನೆ ಕುಳಿತೇ ಇದ್ದ. ನೇರವಾಗಿ
ಅವನ ಬಳಿ ಹೋಗಿ ಅವನ ಕೆನ್ನೆ ಹಿಡಿದು ನೆಲ ನೋಡುತ್ತಿದ್ದ ಅವನ ಮುಖವನ್ನೆತ್ತಿ ಅವನ ಒದ್ದೆ ಕಣ್ಣುಗಳನ್ನು
ದಿಟ್ಟಿಸಿದೆ. ನೀನು ನನ್ನ ಚಿತ್ರಕಲೆಯನ್ನು ಒಪ್ಪುವುದರಲ್ಲೇ ನಿನ್ನ ಗೆಲುವಿದೆ, ಅದು ನಿನ್ನ ಸೋಲಲ್ಲ
ಕಣೋ ಎಂದೆ. ಗಟ್ಟಿಯಾಗಿ ತಬ್ಬಿ ಮಗುವಿನಂತೆ ಅತ್ತ. ನಾನು ಯಾವುದನ್ನ ಬೇಡವೆಂದರೂ ನೀನು ಅದನ್ನೇ ಮಾಡ್ತೀಯೆ.
ನನಗೆ ನೀನು ಕೊಂಚವೂ ಗೌರವ ಕೊಡೋದಿಲ್ಲ. ನಿನ್ನ ಹಠ ನನ್ನಲ್ಲಿ ಇನ್ನಷ್ಟು ಛಲ ಮೂಡಿಸುತ್ತೆ. ನಿನ್ನನ್ನು
ನನ್ನ ದಾರಿಗೆ ತಂದುಕೊಳ್ಳಬೇಕೆಂದು ಎಷ್ಟು ಪ್ರಯತ್ನ ಪಟ್ಟರೂ ನೀನು ನಿನ್ನದೇ ದಾರೀಲಿ ಹೋಗ್ತೀಯ. ಮತ್ತೆ
ನಾನ್ಯಾಕೆ ಬದುಕಿರಲಿ ಹೇಳು. ಎಂದು ನನ್ನ ಹಿಂದೆ ಕಣ್ನೊರೆಸಿಕೊಳ್ಳುತ್ತಿದ್ದ. ನಿನ್ನ ಇಷ್ಟಗಳಂತೆ
ನಡೆದರೆ ಮಾತ್ರ ನಿನ್ನನ್ನು ಗೌರವಿಸುವುದೆಂದರ್ಥಾನಾ? ನನಗೆ ನಿನ್ನ ಮೇಲೆ ಎಷ್ಟು ಪ್ರೀತಿ, ಗೌರವವಿದೆ
ಅಂತ ನನ್ನ ಭೂದಿಯಾದ, ಹರಿದುಹೋದ ಎಷ್ಟೋ ಚಿತ್ರಗಳನ್ನ ಕೇಳು ಹೇಳ್ತವೆ. ನನ್ನ ಔಷಧಿಗಳನ್ನ ಕೇಳು ಗೊತ್ತಾಗುತ್ತೆ.
ನಾನು ಮನಸು ಮಾಡಿದ್ರೆ ನಿನ್ನನ್ನ ಬಿಟ್ಟು ಹೋಗೋದೇನು ಕಷ್ಟ ಇರಲಿಲ್ಲ ಅಲ್ವಾ. ಎಂದು ಕೇಳುವಷ್ಟರಲ್ಲಿ
ಬಾಯಿ ಮುಚ್ಚಿದ. ಸಾಕು ದಯವಿಟ್ಟು ಇಷ್ಟು ಅವಮಾನ ಮಾಡಬೇಡ. ನಾಚಿಕೆಯಾಗುತ್ತೆ ಎಂದು ಸುಮ್ಮನೆ ಅಪ್ಪಿಕೊಂಡೇ
ಇದ್ದ. ಎಷ್ಟೋ ಹೊತ್ತಿನ ನಂತರ ಸರಿ ಮಾಡ್ಕೋ ನಿನ್ನ ಚಿತ್ರಗಳನ್ನ ಎಂದ ನೀನು ಹೇಳದಿದ್ರು ನಾನು ಮಾಡುವವಳೇ
ಎಂದೆ ಇಬ್ಬರೂ ನಕ್ಕೆವು. ಅವನು ಹಾಳು ಮಾಡಿದಷ್ಟೂ ಚಿತ್ರಗಳ ಲೆಕ್ಕ ಕೊಟ್ಟದ್ದನ್ನು ಕಂಡು ನಿಜವಾಗಲೂ
ಬೆರಗಾಯ್ತು. He is always a gem of a man. ನನ್ನ ಕಣ್ಣುಗಳಲ್ಲೂ ನೀರು ತಡೆಯಲು ಸಾಧ್ಯವಾಗಲಿಲ್ಲ.
ದುಡ್ಡು ಕೊಟ್ರೂ ಸಿಕ್ತಿಲ್ಲ ಅಂತದ್ರಲ್ಲಿ ಎಮರ್ಜೆನ್ಸಿಗೆ ಅಂತ ಇಟ್ಟಿದ್ದ ಸೀಮೆ ಎಣ್ಣೆ ಖಾಲಿ ಮಾಡಿದ್ಯ,
ಗಬ್ಬು ವಾಸನೆ ಬೇರೆ ಮೊದಲು ಸ್ನಾನ ಮಾಡಪ್ಪಾ ನೀನು ಎಂದು ಕಣ್ಣೀರಿನೊಂದಿಗೆ ನಗುತ್ತಾ ಸ್ನಾನಕ್ಕೆ
ಹೊರಟೆವು. ನನ್ನ ಔಷಧಿಯ ಕೈಗಳ ಚಿತ್ರ ನಾಚುತ್ತಾ ನಗುತ್ತಲಿತ್ತು. ಅದರ ಮೇಲೆ ಬಿಳಿ ಬಣ್ಣದ ಬಟ್ಟೆ
ಮುಚ್ಚಿ ಸ್ನಾನಗೃಹ ಸೇರಿದೆವು.
-ನೀ.ಮ. ಹೇಮಂತ್
Nice one :)
ReplyDeleteThank you, keep reading :-)
Delete