ಓದಿ ಓಡಿದವರು!

Monday 14 May 2012

ಅಮ್ಮನೆಂಬ ಬೇತಾಳ!


      ಇಂತಹ ಅಮ್ಮಂದಿರನ್ನ ಬಯ್ಯಲೇ ಬೇಕು ಬಿಡ್ರೀ. ನಾನು ಈ ಮಟ್ಟಕ್ಕೆ ಹಾಳಾಗೋಕೆ ನನ್ನಮ್ಮನೇ ಕಾರಣ. ನನ್ನ ಯಾವುದೇ ಗುಣಾವಗುಣಗಳ ಬಗ್ಗೆ ಯಾರೇ ಶಪಿಸಿದರೂ ಅದರ ಸಂಪೂರ್ಣ ಶ್ರೇಯ ನಮ್ಮಮ್ಮನಿಗೇ ಸಲ್ಲಬೇಕು. ಅವಳನ್ನು ಮನುಷ್ಯರ ಜಾತಿಗೆ ಸೇರಿಸಲು ಸಾಧ್ಯವೇ ಇಲ್ಲ. ಇಷ್ಟು ಕೆಟ್ಟ ಗುಣಗಳನ್ನು ಬಹುಶಃ ಅವಳಮ್ಮನಿಂದಲೇ ಕಲಿತಿರಬೇಕು. ನಾನೂ ಚಿಕ್ಕವನಿದ್ದಾಗ ನೋಡಿದ್ದೇನೆ ನನ್ನ ಅಜ್ಜಿಯನ್ನು. ನನ್ನಮ್ಮ ಥೇಟ್ ಅವಳದ್ದೇ ಪ್ರತಿರೂಪ, ಗುಣದಲ್ಲೇ ಆಗಲಿ, ವ್ಯಕ್ತಿತ್ವದಲ್ಲೇ ಆಗಲಿ, ಮುಖಚಹರೆಯಲ್ಲೇ ಆಗಲಿ, ಮೂಗು, ಕಿವಿ, ಕಣ್ಣುಗಳೂ ಸಹ ತದ್ರೂಪ. ಅದೇನೋ ನೂಲಿನಂತೆ ಸೀರೆ ಅಮ್ಮನಂತೆ ಮಗಳೆಂದು ಹೇಳುತ್ತಿದ್ದರಪ್ಪ ತಿಳಿದವರು, ಅದಕ್ಕೆ ಉದಾಹರಣೆ ನನ್ನಮ್ಮ. ಇರಲಿ, ಅವಳೆಂತವಳೆಂದು ಹೇಳುವುದಕ್ಕೆ ಒಂದು ಘಟನೆ ಮುಂದಿಡುತ್ತೇನೆ ನೋಡಿ. ಕದ್ದು ಮುಚ್ಚಿ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ, ನಾಲ್ಕು ವರ್ಷಗಳಿಂದ. ಈ ಜಾತಿ ಎನ್ನುವ ಅದೇನೋ ಅರ್ಥವಿಲ್ಲದ ಪದ ಇನ್ನೂ ಬಳಕೆಯಲ್ಲಿರುವ ಸಮಾಜದಲ್ಲಿರುವ ನನ್ನಮ್ಮನ ಕಿವಿಗೆ ನನ್ನಪ್ಪನ ಬಾಯಿಯಿಂದ ವಿಷ-ಯ ಬಿತ್ತು. ಆದರೆ ನನಗೆ ಜಾತಿ ಹಾಗೂ ಮೂತಿ ನೋಡಿ ಪ್ರೀತಿ ಹುಟ್ಟುವ ವಯಸ್ಸಲ್ಲ ಬಿಡಿ. ಅವಳ ಕೋತಿಯಂತಹ ಮನಸ್ಸು ನನ್ನ ಮನಸ್ಸಿನ ಮೇಲೆ ಹತ್ತಿ ಕೂತಿದ್ದು ಹಿಡಿಸಿತು, ಆ ಕ್ಷಣದಲ್ಲೇ ಅತಿ ಮಧುರ ಅನುರಾಗ ಶುರುವಾಯ್ತು. ನಮಗೇ ಅಂತ ಪಾರ್ಕಿತ್ತು, ಟಾಲ್ಕೀಸಿತ್ತು, ಕಾಫೀ ಡೇ ಇತ್ತು, ಸಾವಿರಾರು ಪಬ್ಬು, ರೆಸಾರ್ಟಿತ್ತು, ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆಯ ಸಹಸ್ರ ಸಹಸ್ರ ಸುಂದರ ಪ್ರೇಮತಾಣಗಳಿತ್ತು, ಕಾಲೇಜು, ಸ್ಪೆಶಲ್ ಕ್ಲಾಸು, ಟ್ರಿಪ್ಪುಗಳೆಂಬ ಕಾರಣಗಳಿತ್ತು, ಉಪ್ಪು ಖಾರ ತಿಂದಾ ಬಾಡೀಗ್ ಇಪ್ಪತ್ತೊಂದಾಗಿತ್ತು, ಆಯ್ತು ಬಿಡಿ ಅದಲ್ಲಾ ಕಥೆ. ಎಲ್ಲ ಹೇಳಿಕೊಂಡು ತಿರುಗಾಡುವುದರಲ್ಲಲ್ಲಾ ರೀ ಇರುವುದು ಅಸಲೀ ಮಜಾ. ಎಲ್ಲರೊಂದಿಗಿದ್ದೂ ಇಲ್ಲದಿರುವುದರಲ್ಲಿರುವುದು ನಿಜ. ಸರಿಯಾದ ಸಮಯದಲ್ಲಿ ಮನೆಯಲ್ಲಿ ವಿಷಯ ಸಿಡಿಸಿ, ಅಪ್ಪನ ಕೈಯಲ್ಲೊಂದು ಎಕೆ. ೪೭ ಅಮ್ಮನ ಕಣ್ಣಲ್ಲೊಂದೇನು ಸಹಸ್ರ ಹನಿಗಳ ಬಾಂಬನ್ನು ನನ್ನೆಡೆಗೆ ಆಸ್ಪೋಟಿಸಿ ಅದರಿಂದೆಲ್ಲಾ ತಪ್ಪಿಸಿಕೊಂಡು ಗಂಡುಗಲಿಯಂತೆ ನಾನು ನನ್ನ ಹೆಸರು ಹೇಳಲಾರದ ಪ್ರಿಯತಮೆಯನ್ನು ಕಟ್ಟಿಕೊಂಡು ಆರ್ ಎಕ್ಸ್ ೧೦೦ ನಲ್ಲಿ ಕುದುರೆಗಳ ರಥದ ಲೆವೆಲ್ ಗೆ ಫೀಲ್ ಮಾಡಿಕೊಂಡು ಹೋಗಿ ನನ್ನ ಪ್ರಿಯತಮೆ ಉರುಫ್ ಡವ್ ಅನ್ನೂ ಹೆತ್ತ ಬಿನ್ ಲಾಡೆನ್, ಒನಕೆ ಓಬವ್ವರ ದಾಳಿಗಳನ್ನು ಎದುರಿಸಿ ರಿಜಿಸ್ಟ್ರಾರ್ ಆಫೀಸೆಂಬ ಪಾಕಿಸ್ತಾನದಂತಹ ದೇಶಕ್ಕೆ ಗಡಿಪಾರಾಗಿ ಇಡೀ ಸಮಾಜವೆಂಬ ವಿಧ ವಿಧ ಭಯೋತ್ಪಾದಕರ ದಾಳಿಯನ್ನು ಎದುರಿಸಿ ಕೆಚ್ಚೆದೆಯಿಂದ ನನ್ನ ಡವ್ ಕೈ ಹಿಡಿದು, ಅದಾವುದೋ ಕಡತದಲ್ಲಿ ಆಟೋಗ್ರಾಫ್ ಹಾಕಿ ಹೊರಗೆ ಸ್ನೇಹಿತರ ಬಹುಪರಾಕುಗಳೊಂದಿಗೆ ಹೊರಗೆ ಮೆಟ್ಟಿಲಿಳಿಯುತ್ತಿದ್ದರೆ ನನ್ನ ಡವ್ ಕಣ್ಣಲ್ಲಿ ಕ್ರಿಶ್, ಎಂಧಿರನ್ ತರಹ ಅಲ್ಲದಿದ್ದರೂ ಅಣ್ಣಾ ಬಾಂಡಿನಂತಾದರೂ ಕಾಣಿಸಿಕೊಂಡಿದ್ದರೆ ಆಹಾ ಎದೆ ಹಂಗೇ ಅರ್ನಾಲ್ಡಿನಂತೆ ಉಬ್ಬಿಬಿಡುತ್ತಿತ್ತೆಂದು ಹಂಗೇ ಫಾಂಟಸಿ ಲೋಕದಲ್ಲಿ ತೇಲುತ್ತಿದ್ದ ನನಗೆ ಅಮ್ಮ ನೇರವಾಗಿ ಬಂದು ಉಬ್ಬಿದ ಎದೆಗೆ ಸೂಜಿ ಚುಚ್ಚಿ ರಿಯಲ್ ದುನಿಯಾಗೆ ತಂದು ನಿಲ್ಲಿಸಿದಳು. ಲೋ ಮುಚ್ಚಿಕೊಂಡು ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಮದುವೆ ಆಗು ಸುಮ್ಮನೆ ಖರ್ಚು ಮಾಡಿಸಬೇಡ. ಇದು ನನ್ನಮ್ಮನ ಪ್ರತಿಕ್ರಿಯೆ!

ಇಷ್ಟು ಚಿಕ್ಕದಾಗಿ! ಥತ್ ನನಗೊಂಚೂರು ಗೌರವ ಬೇಡವೇನ್ರೀ. ಮದುವೆಯಾಗಿ ಬಂದು ನನ್ನ ಡವ್ವು ನನ್ನ ಹೆಚ್ಚು ಗೌರವಿಸ್ತಾಳಾ ಇಲ್ಲಾ ನನ್ನಮ್ಮನ್ನಾ? ನೀವೇ ಹೇಳಿ. ಮಗ ಹೀರೋ ಆಗಲಿ ಅಂತ ಎಲ್ಲಾ ಅಮ್ಮಂದರು ಆಸೆ ಪಟ್ಟರೆ ಈ ನನ್ನಮ್ಮ ನನಗೇ ಸೈಡ್ ಹೊಡೆದು ಹೋಗೋದು ಎಷ್ಟು ಸರಿ? ಸೀನ್ ಸೃಷ್ಠಿಸು ತಾಯೇ, ಇದಲ್ಲಾ ನೀನು ಕೊಡಬೇಕಿರೋ ಪ್ರತಿಕ್ರಿಯೆ. ಇಂತಹ ಕಥೆಗಳು ಓಡಲ್ಲಮ್ಮ. ಟ್ವಿಸ್ಟ್ ಇರಬೇಕು, ತಂದೆ ತಾಯಿ ಪ್ರೇಮಿಗಳನ್ನ ಬೇರೆ ಮಾಡಬೇಕು, ಜಗಳ ಆಗಬೇಕು, ವಿಷ ಕುಡಿಯೋ ಸೀನ್ ಇರಬೇಕು, ಗೋಳಾಟದಲ್ಲಿ ಬಿಂದಿಗೆಗಳ ಗಟ್ಟಲೆ ಕಣ್ಣೀರು ಹರೀಬೇಕು. ಕರಳು ಅಂತ ಇರುತ್ತಲ್ಲ ಅದು ಚುರುಕ್ ಚುರುಕ್ ಅನ್ನಬೇಕು ನೋಡು ಅವಳು ಕೆಟ್ಟ ಕುಲಗೆಟ್ಟ ಜಾತಿ, ಅವರ ಮನೆಯಲ್ಲಿ ಅವರಮ್ಮ ಬೇರೆ ಮನೆ ಮಾಡು ಮದುವೆಯಾದ ಕೂಡಲೆ ಅಂತ ಹೇಳೋಂತಹ ವಿಚಿತ್ರ ಆಚಾರ ವಿಚಾರದ ಜನ ಎಂದು ಪಟಾಕಿ ಹತ್ತಿಸಿದೆ. ನೀರು ಸುರಿದು, ಸರಿಯಾಗೇ ಹೇಳಿದ್ದಾರೆ ಡಬ್ಬಾ ನನ್ನ ಮಗನೆ ಬೇರೆ ಮನೆ ಮಾಡು ನೀನು, ಮೊದಲು ಸ್ವಲ್ಪ ಪ್ರಪಂಚ ಜ್ಞಾನ ಬರಲೀ ನಿನಗೂವೇ. ಅಕ್ಕಿ, ಈರುಳ್ಳಿ, ನುಗ್ಗೇಕಾಯಿ ಬೆಲೆ ಎಷ್ಟು ಅಂತ ಗೊತ್ತೇನೋ ನಿನಗೆ ಲೋಫರ್ ಅಂತ ನನ್ನಮ್ಮ. ಇವಳು ಮನುಷ್ಯಳಾಗಲು ಸಾಧ್ಯವಾದರೂ ಇದೆಯಾ? ಇಂತಹ ಅಮ್ಮನನ್ನ ತಾಯಂದಿರ ದಿನಾಚರಣೆಯಂದು ಮಾತ್ರವಲ್ಲ ರೀ ದಿನಂಪ್ರತಿ, ಕ್ಷಣಂಪ್ರತಿ ಶಪಿಸುತ್ತೇನೆ. ಅಯ್ಯೋ ಇಷ್ಟಕ್ಕೇ ಬೋರ್ ಹೊಡೆದರೆ ಹೇಗ್ರೀ ನಿಮಗೆ, ಇದೇನ್ ಮಹಾ ಇವಳ ಫ್ಲಾಶ್ ಬ್ಯಾಕ್ ಕೇಳಿದರೆ ನಿದ್ರೇನೇ ಮಾಡ್ಬಿಡ್ತೀರಾ!

ಕಿತ್ತೋಗಿರೋ, ಪ್ರೈವೇಟ್, ಆಂಗ್ಲ ಭಾಷೆಯ ಶಾಲೆ ಕಣ್ರೀ. ವಿಪರೀತ ಮಳೆ ಅವತ್ತು. ಶಾಲೆಯ ಬೆಲ್ ಹೊಡೀತು. ಕಾರು, ಗಾಡಿಗಳಲ್ಲಿ ಕರೆದುಕೊಂಡು ಹೋಗುವವರು ಬಂದು ಕರೆದುಕೊಂಡು ಹೋಗುತ್ತಿದ್ದರು. ಮಳೆಯಲ್ಲಿ ಅಮ್ಮ ಬಂದಿರಳಾರಳೆಂದು ಕಾಯುತ್ತಾ ಕುಳಿತಿದ್ದವನ ಕಣ್ಣಿಗೆ ಅಚ್ಚರಿ. ಕೈಯಲ್ಲಿ ದೊಡ್ಡ ಪ್ಲಾಸ್ಟಿಕ್ ಕವರ್ ಹಿಡಿದು ತಲೆಗೆ ಸೆರಗು ಹೊದ್ದು ನೆನೆಯುತ್ತಾ ಬರುತ್ತಿರುವ ಅಮ್ಮ. ಕವರ್ರಿನಿಂದ ನನ್ನನ್ನು ಮುಚ್ಚಿ ಕರೆದುಕೊಂಡು ಹೊರಟಳು. ತನ್ನನ್ನು ತಾನು ಯಾವುದೋ ಸಿನೆಮಾದ ಹೀರೋಯಿನ್ ಎಂದು ತಿಳಿದಿದ್ದಳೆಂದು ಕಾಣುತ್ತೆ. ಅಷ್ಟು ಸಾಲದೆಂಬಂತೆ ನೀರು ತುಂಬಿದ್ದ ಚಿಕ್ಕ ಹಳ್ಳದಲ್ಲಿ ಕಾಲಿಟ್ಟು ಜಾರಿ ಬಿದ್ದಳು. ಸುತ್ತಲಿದ್ದ ಎಲ್ಲಾ ಹುಡುಗರೂ ಗೊಳ್ಳೆಂದು ನಕ್ಕಿದ್ದರು. ಥು ಅವಮಾನ ಮಾಡಿದ್ದಳು ಎಲ್ಲರ ಮುಂದೆ ಬಿದ್ದು. ಇವಳಿಗ್ಯಾಕೆ ಬೇಕಿತ್ತು ಈ ಕೆಲಸ. ಮಳೆಯಲ್ಲಿ ನೆಂದರೆ ಶೀತವಾಗುತ್ತೆ. ಹುಶಾರು ತಪ್ಪುತ್ತಾರೆಂದು ನನಗೆ ಹೇಳ್ತಾಳೆ ತಾನೇ ನೆನೆಯುತ್ತಾಳೆ. ಎಲ್ಲರೆದುರಿಗೆ ಬಿದ್ದರೆ ಅವಮಾನವಾಗುತ್ತೆಂದು ನನಗೆ ಗೊತ್ತಿರುವಷ್ಟೂ ಅವಳಿಗೆ ಗೊತ್ತಾಗುವುದಿಲ್ಲ. ನಕ್ಕಿದ್ದ ಎಲ್ಲರ ಅಮ್ಮಂದಿರೂ ಬಿದ್ದು ಕಾಲು ಮುರಿದುಕೊಳ್ಳಬೇಕೆಂದು ಶಪಿಸಿದ್ದೆ. ಎಲ್ಲರಿಗೂ ಅವಮಾನವಾಗಬೇಕು. ನಾನೂ ಕೇಕೆ ಹಾಕಿ ನಗಬೇಕು. ಬಿದ್ದರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಕಲ್ಪಿಸಿಕೊಂಡು, ಪದೇ ಪದೇ ನೆನೆನೆನೆದು ನಕ್ಕಿದ್ದೆ. ಅಂದಿನಿಂದ ಅಮ್ಮನ ತೋಳಿನವರೆಗೂ ಮುಚ್ಚಬಹುದಾದ ಕವರೊಂದನ್ನ ಬ್ಯಾಗಿನಲ್ಲಿ ತುರುಕಿಡಲು ಶುರುಮಾಡಿದೆ. ಮತ್ತು ಅಮ್ಮ ನನ್ನ ಕೈ ಹಿಡಿದು ನಡೆಯುವುದಿರಲಿ, ನಾನೇ ಅಮ್ಮನ ಕೈ ಬಿಡದೇ ಹಿಡಿದು ನಡೆಯುತ್ತಿದ್ದೆ ಮತ್ತೆ ಬಿದ್ದು ಅವಮಾನ ಮಾಡದಿರಲೆಂದು! ಇಂಥವಳನ್ನು ಮನುಷ್ಯಳೆನ್ನುವುದಾದರೂ ಹೇಗೆ? ಇನ್ನೇನು ದೇವರಂತೂ ಆಗಲು ಸಾಧ್ಯವೇ ಇಲ್ಲ. ಬೆಚ್ಚಗಿನ ಗರ್ಭಗುಡಿಯಿಂದ ಹೊರಗೆ ಕಾಲಿರಲಿ ಉಗುರಿರಿಸಿದ್ದೂ ಸಹ ಕಂಡಿಲ್ಲ ನಾನು. ಕತ್ತಲೆಯಲ್ಲೂ ಬೆಂಬಿಡದ ದೆವ್ವವೇ ಸರಿ ಇವಳು. ಅಮ್ಮ ದೇವರಲ್ಲ ದೆವ್ವ!

ನನಗಿಂತ ದೊಡ್ಡದಾಗಿ ಕಾಣುವವರಿಗೆಲ್ಲರಿಗೂ ಗೌರವ ಕೊಡಬೇಕಂತೆ. ಯಾರಿಗೂ ಹೊಡಿಬಾರದಂತೆ, ಬಯ್ಯಬಾರದಂತೆ, ನೋಯಿಸಬಾರದಂತೆ, ಜಗಳವಾಡಬಾರದಂತೆ, ದುಷ್ಟರನ್ನ ಕಂಡರೆ ದೂರವಿರಬಾರದಂತೆ, ದೂರವಿಡಬೇಕಂತೆ. ಯಾವತ್ತೂ ಯಾವುದೇ ಕಾರಣಕ್ಕೂ ಸುಳ್ಳು ಹೇಳಕೂಡದಂತೆ. ನೋವಾದಾಗ ಅಳಬಾರದಂತೆ, ಸಹಿಸಿಕೊಳ್ಳಬೇಕಂತೆ. ಸುಮ್ಮನೆ ಕೂರಬಾರದಂತೆ. ಹಿಡಿದ ಕೆಲಸ ಬಿಡಬಾರದಂತೆ. ಕಣ್ಣಿನಲ್ಲಿ ಕಣ್ಣಿಟ್ಟು ನೋಡಬೇಕಂತೆ. ಇವೆಲ್ಲಾ ಒಳ್ಳೆಯ ಉಪದೇಶಗಳೆಂದು ನಿಮಗೆ ಅನ್ನಿಸಿದ್ದರೆ ದಯವಿಟ್ಟು ಪುನರಾಲೋಚಿಸಿ. ಜಗಳವಾಡಬಾರದೆಂದು ಹೇಳುತ್ತಲೇ ಮಾತ್ಸ್ ಟೀಚರ್ ನನ್ನ ಕೈ ಮೇಲೆ ಬಾಸುಂಡೆ ಚಿತ್ರ ಬಿಡಿಸಿದಾಗಲೆಲ್ಲಾ ಕಿತ್ತಾಡುತ್ತಿದ್ದಳು. ದುಷ್ಟರನ್ನು ದೂರವಿಡಬೇಕೆಂದು ಹೇಳುತ್ತಲೇ ನನ್ನನ್ನು ಟೀಚರ್ ಗಳು, ಸ್ಕೂಲು, ಸ್ನೇಹಿತರೊಂದಿಗೆ ಬಿಟ್ಟು ಬರುತ್ತಿದ್ದಳು. ಸುಳ್ಳು ಹೇಳಲೇ ಬಾರದೆಂದು ಬೊಗಳುತ್ತಲೇ ಅಪ್ಪನ ಬಳಿ ಸಾವಿರ ಸುಳ್ಳು ಹೇಳುತ್ತಿದ್ದಳು, ಹರಿದ ಬಟ್ಟೆಯ ಬಗ್ಗೆ, ಖಾರ ಪುಡಿ ಡಬ್ಬಿಯಲ್ಲಿ ಇಡುತ್ತಿದ್ದ ಕಾಸಿನ ಬಗ್ಗೆ, ಸಾಲಗಾರರ ಬಯ್ಗುಳಗಳ ಬಗ್ಗೆ, ಆರೋಗ್ಯದ ಬಗ್ಗೆ, ತನ್ನ ಆಸೆಗಳ ಬಗ್ಗೆ, ಇತರೆ ಇತರೆ ಇತರೆ. ಒಮ್ಮೆಯೂ ಇಡೀ ಪ್ರಪಂಚದಲ್ಲಿ ಯಾರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿದ್ದು ನಾನೂ ನೋಡೇ ಇಲ್ಲ. ಇಂತಹ ಹಲವು ಬುದ್ದಿಮಾತುಗಳನ್ನ ನಾನು ಮಾತ್ರ ಪಾಲಿಸಬೇಕಂತೆ. ಆದರೂ ಪಾಲಿಸಿದೆ. ಸಿಕ್ಕ ಸಿಕ್ಕವರ ಸ್ನೇಹ ಬೆಳೆಸುತ್ತಿದ್ದೆ. ಯಾರೊಂದಿಗಿದ್ದರೂ ನಾನು ಅವರಂತಾಗುತ್ತಿರಲಿಲ್ಲ, ಎಲ್ಲರೂ ನನ್ನಂತಾಗುತ್ತಿದ್ದರು. ದುಶ್ಮನ್ ಗಳನ್ನು ಬೆಳೆಸಿಕೊಳ್ಳಲೇ ಇಲ್ಲ. ಜಗಳವಾಡಬೇಕೆಂದು ಮನಸಾದರೂ ದುಶ್ಮನ್ ಗಳೂ ಸಹ ಮತ್ತೆ ಸ್ನೇಹ ಸಂಪಾದಿಸಿಬಿಡುತ್ತಿದ್ದರು. ನನಗೆ ನಾನೇ ಹೇಡಿಯಂತೆ ಕಾಣುತ್ತಿದ್ದೆ. ಒಂದು ಹೊಡೆದಾಡಲು ಗೊತ್ತಿಲ್ಲ, ಜಗಳವಾಡಲು ಗೊತ್ತಿಲ್ಲ. ಅಮ್ಮನ್ ಅಕ್ಕನ್ ಎಂಬ ಪದಗಳನ್ನು ಲೀಲಾಜಾಲವಾಗಿ ಬಳಸಲು ಗೊತ್ತಿಲ್ಲ, ಕಾಪಿ ಹೊಡೆದು ಯಶಸ್ವಿಯಾಗಲಿಲ್ಲ, ಕೊನೆ ಬೆಂಚಿನ ಹುಡುಗರು ನನ್ನನ್ನು ಸೇರಿಸುತ್ತಿರಲಿಲ್ಲ, ಸಿಗರೇಟು ಕಲಿಯಲು ಭಯ, ಮನೆಯಲ್ಲಿ ತಿಳಿಸದೇ ಥಿಯೇಟರಿಗೆ ಹೋಗಿದ್ದು ಬಹಳ ವಿರಳ. ಇನ್ನೆಂತಹ ಬ್ರಹ್ಮವಿದ್ಯೆಯನ್ನು ಕಲಿತೆನೋ ಗೊತ್ತಿಲ್ಲ ನನ್ನ ಶಾಲೆಯೆಂಬ ಬ್ರಹ್ಮಾಂಡದಲ್ಲಿ. ಕಾಲೇಜು ಸೇರಿದ್ದೇ ಸೇರಿದ್ದು ಅರೆ! ನಾನ್ಯಾಕೆ ಇವನ್ನೆಲ್ಲಾ ಬಿಡಬೇಕು. ಸಿಗರೇಟಿನಿಂದ ಹೊಗೆ ಎಳೆದರೆ ಹೊಗೆಯೇ ಹೇಗೆ ಹೊರಗೆ ಬರುತ್ತೆ ನೋಡಲೇ ಬೇಕೆಂದು ಸೇದಿಯೇಬಿಟ್ಟೆ. ಒದೆ ತಿಂದು ಎಷ್ಟೋ ವರ್ಷವಾಗಿತ್ತು ಇವತ್ತು ಒದೆ ತಿನ್ನಲೇ ಬೇಕೆಂದು ಅಮ್ಮನೆದುರು ಊಟ ಮಾಡುವಾಗ ಹೇಳಿಯೂ ಬಿಟ್ಟೆ. ಹೊಡೆಯಲು ಕೈ ಎತ್ತಿದ ಅಪ್ಪನನ್ನೂ ತಡೆದು ಸೇದಿ ಹಾಳಾಗೋಗು ಕರಳು ಸುಟ್ಟೋದ ಮೇಲೆ ನಾನಂತೂ ತಾಯಿ ಕರುಳು ಕಿತ್ತು ಕೊಡಲ್ಲ ಬಡ್ಡೀ ಮಗನೆ ನಿನ್ ಕರುಳು ನಿನ್ನಿಷ್ಟ ಎಂದಷ್ಟೇ ಹೇಳಿ ನೆಮ್ಮದಿಯಾಗಿ ಊಟ ಮಾಡಿದಳು. ಸೇದುತ್ತಿರುವವರು ಎಷ್ಟೋ ಮಂದಿ ನೆಮ್ಮದಿಯಾಗಿಲ್ವಾ ಅವಳಿಗೇನು ಗೊತ್ತು ಸಿಗರೇಟಿನ ಮಜಾ ಎಂದು ಸೇದುತ್ತಲೇ ಹೋದೆ. ರಸ್ತೆಗಳಲ್ಲಿ ಹುಡುಗಿಯರ ಜೊತೆ ನಿಂತು ಹರಟುವುದನ್ನು ಕಂಡರೆ ಕಾಲು ಮುರೀತೀನೆಂದು ಚೇತಾವನಿ ಕೊಡುತ್ತಿದ್ದಳು. ಮನೆಗೆ ಕರೆದು ಏನಿದ್ದರೂ ಮಾತನಾಡಿಸು ಕಳುಹಿಸು ಎನ್ನುತ್ತಿದ್ದಳು. ರಸ್ತೆಯಲ್ಲೇ ಭೇಟಿಯಾಗಿ ಹರಟುತ್ತಿದ್ದೆ. ವರ್ಷಕ್ಕೊಬ್ಬಳನ್ನು ಗೊತ್ತು ಮಾಡಿ ನನ್ನ ಹೆಸರಿನ ಜೊತೆ ಸೇರಿಸಿ ಮಜಾ ತೊಗೋತಿದ್ರು ಸ್ನೇಹಿತರೂ ಕೂಡ, ನನ್ನ ಡವ್ ಬಂದು ಸಿಕ್ಕಿಬೀಳುವವರೆಗೂ. ನನ್ನ ಡವ್ವಿನ ಆಸೆಯಂತೆ ಜಿಮ್ ಎಂಬ ಅಗ್ನಿ ಪರೀಕ್ಷೆಗೆ ಗುರಿಯಾದೆ. ಮೈತುಂಬಾ ಇದ್ದ ಹೊಗೆ, ಕೈಕಾಲುಗಳನ್ನ ಚುಮ್ಮಾ ಅದರದಿಲ್ಲೇ ಎಂದು ರಜನೀಕಾಂತರ ಡೈಲಾಗ್ ಹೇಳಿ ಹೇಳಿ ನಡುಗಿಸುತ್ತಿತ್ತು. ಆಗ ಗೊತ್ತಾಯ್ತು ಸಿಗರೇಟಿನ ಪರಾಕ್ರಮ. ಸಿಗರೇಟು ಬಿಟ್ಟು, ಆಸ್ಪತ್ರೆ ಸೇರಿ ಬಿಳೀ ಹಾಸಿಗೆ ಮೇಲೆ ಬಿದ್ದಿದ್ದರೂ ಕೈ ತೋರಿಸಿ ನಕ್ಕು ನಕ್ಕೂ ಅವಮಾನಿಸಿ ನಿನ್ನ ಮುಖಕ್ಕೇ ಅವತ್ತೇ ಹೇಳಿದೆ ತಾನೆ, ಆಗಬೇಕು ನಿನಗೆ ಎಂದು ಛೇಡಿಸಿ. ಮುಂದಿನ ಹುಟ್ಟಿದ ಹಬ್ಬಕ್ಕೆ ಸಿಗರೇಟಿನ ಪ್ಯಾಕೆಟ್ಟೇ ಕೊಟ್ಟು ಪಕ ಪಕ ಪಕ ನಕ್ಕು ಕ್ಯಾಂಡಲ್ ಬೆಂಕಿ ಹೊತ್ತಿಸಿದ್ದಳು. ಯಾರಾದರೂ ಮಗನ ಆ ಪರಿಸ್ಥಿತಿಯಲ್ಲಿ ಭಯಂಕರ ಭೂತದ ಹಾಗೆ ನಗ್ತಾರೇನ್ರೀ? ನನ್ನಮ್ಮನನ್ನ ಪಿಶಾಚಿಯೆಂದು ಕರೆಯುವುದರಲ್ಲಿ ಏನು ತಪ್ಪು? ಬಿಟ್ಟೇ. ಸಿಗರೇಟಿನ ಕೈ ಬಿಟ್ಟೆ, ನನ್ನ ಡವ್ ಕೈ ಹಿಡಿದೆ. ಮುಚ್ಚಿಕೊಂಡು ಕಾಲೇಜು ಮುಗಿಸಿದೆ, ಕೆಲಸ ಹಿಡಿದೆ, ಮದುವೆಯಾದೆ. ಆದರೂ ಅಮ್ಮನ ವ್ಯಂಗ್ಯ ನಗು ನಿಲ್ಲಲಿಲ್ಲ.

ಬಂದವಳಿಗೆ ಮುತ್ತಿಗಿಂತ ತುತ್ತೇ ಹೆಚ್ಚು ಪ್ರಿಯ. ನಾನೇ ವಿಕ್ರಮ ನನ್ನಮ್ಮನೇ ಬೇತಾಳ. ಅವಳ ಯಾವ ಪರೀಕ್ಷೆಗಳಲ್ಲೂ ನಾನು ಗೆಲ್ಲಲಿಲ್ಲ. ನನ್ನ ತಲೆ ಹೋಳೂ ಆಗಲಿಲ್ಲ. ಬೇತಾಳವನ್ನು ಹೊತ್ತು ನಡೆಯುವುದೂ ತಪ್ಪಲಿಲ್ಲ. ಗೆದ್ದರೆ ಎಲ್ಲಿ ಹಾರಿಹೋಗುವಳೋ ಎಂದು ಅವಳಿಂದ ಸೋಲುತ್ತಲೇ ಬರುತ್ತಿರುವೆ. ಈ ಸೋಲಿನಂತೆ, ಬೇತಾಳವೂ ಸದಾ ಹೆಗಲೇರಿಯೇ ಇರಲೆಂದು ಆಶಿಸುತ್ತಿರುವೆ!

-ನೀ.ಮ. ಹೇಮಂತ್

13 comments:

  1. ಅಮ್ಮನ ವಿರಾಟ್ ರೂಪದ ಪ್ರಸ್ತುತಿ ಚೆನ್ನಾಗಿದೆ . ಅಮ್ಮಂದಿರೆ ಹಾಗೆ ಬೆನ್ನಿಗೆ ಬಿದ್ದ ಬೇತಾಳಗಳೇ .ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಬಿಡೋದಿಲ್ಲ

    ReplyDelete
    Replies
    1. ನಿಜ ರೀ.. ತಪ್ಪಿಸಿಕೊಳ್ಳಬೇಕೆಂದರೂ ತಪ್ಪಿಸಿಕೊಳ್ಳಲು ನಮ್ಮಿಂದ ಸಾಧ್ಯವೂ ಆಗುವುದಿಲ್ಲ ಬಿಡಿ :-) ಧನ್ಯವಾದಗಳು ಆಸಕ್ತಿವಹಿಸಿ ಓದಿ ವಿಚಾರ ಮಾಡಿದ್ದಕ್ಕೆ... ಶುಭವಾಗಲಿ, ಜೊತೆಗಿರಿ :-)

      Delete
  2. ಕಥೆ ಓದಿದ ನಂತರ ಮನಸ್ಸಲ್ಲಿ ಮೂಡುವ ಪ್ರಶ್ನೆ..., "ಗುರುವೇ, ಹೀಗೂ ಉಂಟೆ!"

    ReplyDelete
    Replies
    1. ಎಲ್ಲಾ ಅಮ್ಮಂದಿರು ಹೀಗೇ ಆದರೆ ಚೆನ್ನಾಗಿರುತ್ತೆ ಅಲ್ವಾ???? ಎಂಬ ಪ್ರಶ್ನೆ ಮೂಡಿದ್ದರೆ ಚೆನ್ನಾಗಿರುತ್ತಿತ್ತು.. ಪ್ರತಿಕ್ರಿಯೆ ಓದಿದ ನಂತರ ಹುಟ್ಟುವ ಒಂದೇ ಉತ್ತರ.. ಗೆಳೆಯ, ಹೀಗೇ ಉಂಟು :-) ಸಾಕ್ಷಾಧಾರಗಳಿವೆ ಹಿ ಹಿ ಹಿ.. hope you enjoyed the story :-)

      Delete
  3. ಅಧ್ಬುತ....:) ಹಳೆಯದೆಲ್ಲಾ ನೆನಪಾಯ್ತು.:-)

    ReplyDelete
    Replies
    1. ಥ್ಯಾಂಕ್ ಯೂ ಕಣ್ರೀ.. ಸವಿ ಸವಿ ನೆನಪುಗಳು ಕಾಡುತ್ತಲಿರಲಿ... :-)

      Delete
  4. ದೇವರಿಗೆ ಬೈಗುಳದ ಪ್ರಾರ್ಥನೆ ಮಾಡುವ 'ನಿಂದಾ ಸ್ತುತಿ' ಎಂಬ ಧಾಟಿಯಲ್ಲೇ ಇದೆ ನಿಮ್ಮ ಈ ಬರಹ. ಚೆನ್ನಾಗಿದೆ. ಇಷ್ಟವಾಯಿತು.

    ReplyDelete
    Replies
    1. ವಂದನೆಗಳು ರಘು ಅವರೇ... ಓದುತ್ತಲಿರಿ.. :-)

      Delete
  5. ಅಬ್ಬ ! ಕಥೆ ಓದ್ತಾ ಇದ್ದ ಹಾಗೆ ಒಂದು ಕ್ಷಣ ಅರಗಿಸಿ ಕೊಳ್ಳೋಕೆ ಟೈಮ್ ಆಯಿತು :) ಹು ಅಮ್ಮನ ರೂಪಗಳಲ್ಲಿ ಇದೊ ಒಂದು ,ಮೈ ಚಳಿ ಬಿಟ್ಟ ಬಿಂದಾಸ್ ಪದಗಳು .. ಕಥೆ ಆಸಕ್ತಿ ಮೂಡಸತ್ತೆ . ಅಮ್ಮನೆಂಬ ಬೇತಾಳ ಕ್ಕೆ ಸೋತು, ಜೀವನದಲ್ಲಿ ಗೆದ್ದು ಮುಂದೆ ಸಾಗಿ . ಚನ್ನಗಿದೆ ಕಣ್ರೀ ಹೇಮಂತ್ :)
    ಆರತಿ ಘಟಿಕರ್

    ReplyDelete
    Replies
    1. ಹಾ ಅಮ್ಮನನ್ನು ಸೋಲಿಸುವ ಪ್ರಯತ್ನಕ್ಕೂ ಹೋಗುವುದಿಲ್ಲ, ಜೀವನದಲ್ಲ್ಲಿ ಗೆಲ್ಲದೇ ಕೈಚೆಲ್ಲುವುದಿಲ್ಲ :-) ನೀವೂ ಹಾಗೇ ಮಾಡಿ ಆರತಿ ಅವರೇ. ವಂದನೆಗಳು ಓದುತ್ತಲಿರಿ.. ಶುಭವಾಗಲಿ.. ;-)

      Delete
  6. eesabeku eddu jayisabeku anno tara baiskobeku baiskond belibeku ammana hatra ammana baigulave baalige sopana alva hemant channagide ri nimma baraha

    ReplyDelete
  7. Iron Clays | TITanium Art - TitaniumArt
    TITanium Art · TITanium Art. TIN. TIN. TIN. TIN. TIN. TIN. TIN. TIN. TIN. TIN. TIN. TIN. TIN. TIN. TIN. TIN. titanium properties TIN. TIN. titanium dab tool TIN. TIN. TIN. TIN. TIN. TIN. TIN. TIN. TIN. thinkpad x1 titanium TIN. TIN. TIN. TIN. TIN. TIN. TIN. TIN. TIN. TIN. TIN. TIN. TIN. TIN. TIN. titanium canteen TIN. TIN. TIN. 2019 ford edge titanium for sale TIN. TIN. TIN. TIN. TIN. TIN. TIN. TIN. T

    ReplyDelete