ಪ್ರವೇಶ ಚೀಟಿ ತೆಗೆದುಕೊಳ್ಳಲು ನೂಕು ನುಗ್ಗಲು. ವಿಶೇಷ ಪ್ರವೇಶದ
ಮೂಲಕ ನನಗೇನೋ ಒಳಗೆ ನುಗ್ಗಲು ಅಷ್ಟು ಸಾಹಸ ಪಡಬೇಕಾಗಿ ಬರಲಿಲ್ಲ. ಆದರೆ ಬೆಂಗಾಡಿನ ಜನತೆ ಪಡುತ್ತಿದ್ದ
ತ್ರಾಸವನ್ನು ಕಂಡು ಮನೋರಂಜನೆಗೆ ಈ ಊರಿನಲ್ಲಿರುವ ಪ್ರಾಮುಖ್ಯತೆಯ ಅರಿವಾಯ್ತು. ದಿನಂಪ್ರತಿ ಹೊಟ್ಟೆಪಾಡಿಗಾಗಿ
ಕತ್ತೆ ದುಡಿದ ಹಾಗೆ ಯಾಂತ್ರಿಕವಾಗಿ ದುಡಿಯುವವರಿಗೆ, ಮನೋರಂಜನೆಯ ಅಗತ್ಯ ತುಂಬಾನೇ ಇತ್ತು ಕೂಡ. ಏನಿರಬಹುದು
ಕಾರ್ಯಕ್ರಮವೆಂಬ ಕುತೂಹಲ ನನಗೆ. ಕಾರ್ಯಕ್ರಮ ಶುರುವಾಗಲು ಇನ್ನೂ ಅರ್ಧ ತಾಸಿರುವಾಗಲೇ ಚಿತ್ರಮಂದಿರದ
ಒಳಗಡೆ ಪ್ರವೇಶ ನೀಡಿದರು. ಕತ್ತಲಲ್ಲಿ ಕ್ರಮಸಂಖ್ಯೆಯ ಆಧಾರದ ಮೆಲೆ ಸೀಟು ಹುಡುಕಿ ಕೂರುವಷ್ಟರಲ್ಲಿ
ಸಾಕು ಸಾಕಾಗಿ ಹೋಯಿತು. ಕೂತು ಮುಂದೆ ನೋಡಿದರೆ ಅರೆ! ಇದೇನಿದು ಬಿಳಿಪರದೆಯಿರಬೇಕಿದ್ದ ಜಾಗದಲ್ಲಿ
ಖಾಲಿ ನೆಲ! ಸುತ್ತಲೂ ಕಣ್ಣಾಡಿಸಿದರೆ ಇದು ಶೇಕ್ಸ್-ಪಿಯರ್ ಮಾದರಿಯ ರಂಗಮಂದಿರದಂತೆ ಕಂಡಿತು. ಸುತ್ತ
ಪ್ರೇಕ್ಷಕರು, ಮಧ್ಯ ಒಂದು ವೇದಿಕೆ ಕೂಡ ಇಲ್ಲ. ಅಥವಾ ಇದು ಸರ್ಕಸ್ಸಿಗಾಗಿ ನಿರ್ಮಿಸಿರುವ ರಂಗಮಂದಿರವಿರಬೆಹುದೇ?
ಹಾಗಾದರೆ ಇದು ಚಿತ್ರಮಂದಿರವಲ್ಲ ರಂಗಮಂದಿರವಿರಬಹುದೆಂದು ಊಹಿಸಿದೆ. ಸುತ್ತ ಪ್ರೇಕ್ಷಕರ ಜಾಗಕ್ಕೆ
ಕತ್ತಲು, ಮಧ್ಯ ದುಂಡನೆಯ ರಂಗಮಂಚಕ್ಕೆ ನಾಲ್ಕೂ ಕಡೆಗಳಿಂದ ಬೆಳಕು ನೀಡಲಾಗಿತ್ತು. ಪ್ರೇಕ್ಷಕರನ್ನು
ಮತ್ತು ಮಧ್ಯ ರಂಗಸ್ಥಳವನ್ನು ಬೇರ್ಪಾಡಿಸಲು ಕಂಬಿಯ ಜಾಲರೆಗಳನ್ನು ಹೆಣೆಯಲಾಗಿತ್ತು. ಪಕ್ಕದಲ್ಲಿ ಬಂದು
ಕುಳಿತ ಮನುಷ್ಯನನ್ನು ಸ್ವಾಮಿ ಇದು ನಾಟಕ ಪ್ರದರ್ಶನವೇ ಎಂದು ಬೆಂಗಾಡಿನ ಭಾಷೆಯಲ್ಲಿಯೇ ಕೇಳಿದೆ. ಆತ
ಇನ್ನಾವುದೋ ಭಾಷೆಯಲ್ಲಿ ಉತ್ತರಿಸಿದ್ದು ಅರ್ಥವಾಗಲಿಲ್ಲವಾದರು ಅವನು ಕೈಯಲ್ಲಾಡಿಸಿದ ಪರಿಯಿಂದ ಅಲ್ಲವೆಂದು
ಹೇಳಿದನೆನಿಸುತ್ತದೆ. ಈ ಬೆಂಗಾಡಿನಲ್ಲಿ ಬೆಂಗಾಡಿನ ಭಾಷೆ ಮಾತನಾಡುವುದಕ್ಕಿಂತ ವಿದೇಶೀ ಭಾಷೆಯನ್ನು
ಬಳಸುವವರೇ ಹೆಚ್ಚೆಂದು ಕೇಳಿದ್ದೆ, ಖಾತ್ರಿಯಾಯ್ತು. ಪ್ರದರ್ಶನ ಶುರುವಾಗಲು ಇನ್ನೂ ಹತ್ತು ನಿಮಿಷ
ಕಾಲಾವಕಾಶವಿತ್ತು. ಮೊದಲ ಘಂಟೆ ಬಾರಿಸಿದರು. ಮಧ್ಯದ ರಂಗಸ್ಥಳಕ್ಕೆ ಎರಡು ಕುರ್ಚಿಯನ್ನು ಎದುರುಬದಿರಾಗಿ
ಹಾಕಿ ಇಬ್ಬರು ಯಾವುದೋ ದ್ವಾರದಲ್ಲಿ ಮಾಯವಾದರು. ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಪ್ರೇಕ್ಷಕ
ವರ್ಗದಲ್ಲಿ ಹೆಂಗಸರು, ಚಿತ್ರವಿಚಿತ್ರ ತಿನಿಸುಗಳನ್ನು ಹಿಡಿದ ಪುಟ್ಟ ಪುಟ್ಟ ಮಕ್ಕಳು, ಗಂಡಸರು, ಎಲ್ಲ
ವಯೋಮಾನದವರೂ ಇದ್ದರು. ಪ್ರದರ್ಶನ ಶುರುವಾಗಲು ಐದು ನಿಮಿಷ ಇರುವಾಗಲೇ ಪ್ರೇಕ್ಷಕರಲ್ಲಿ ಗಲಾಟೆ ಹೋ..
ಎಂದು ಶುರುವಾಯ್ತು. ಹಾಗೆಯೇ ಮಧ್ಯದ ರಂಗಸ್ಥಳಕ್ಕೆ ಇಬ್ಬರು ಒಬ್ಬ ದಪ್ಪ ಮೀಸೆಯ, ನೀಲಿ ಸೂಟುಧಾರಿ,
ಅಜಾನುಬಾಹುಬಂದು ಒಂದು ಕುರ್ಚಿಯ ಮೇಲೆ ಆಸೀನನಾದ. ಅವನ ಮುಖದಲ್ಲಿ ಯಾವುದೇ ರೀತಿಯ ಭಾವಗಳಿರಲಿಲ್ಲವೆನಿಸುತ್ತೆ.
ತಲೆಯ ಮೇಲಿನಿಂದ ಬೀಳುತ್ತಿದ್ದ ಬೆಳಕಿನಿಂದಾಗಿ ಭೀಭತ್ಸವಾಗಿ ಕಾಣಿಸುತ್ತಿದ್ದುದಂತೂ ನಿಜ. ಪ್ರದರ್ಶನಕ್ಕೆ
ಇನ್ನು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಒಂದು ಕಿಲಕಿಲನೆ ನಗುತ್ತಲಿದ್ದ ಪುಟ್ಟ ಹುಡುಗಿ, ಆತನಿಗೆ
ದೈತ್ಯ ದೇಹದ ಮುಂದೆ ಇಲಿಯಂತೆ ಕಾಣುತ್ತಿದ್ದ ಹುಡುಗಿ ಬಂದು ಎದುರಿನ ಕುರ್ಚಿಯಲ್ಲಿ ಕುಳಿತಳು. ಪ್ರೇಕ್ಷಕವರ್ಗ
ಕೊನೆಯ ಗಂಟೆಯೊಡೆಯುತ್ತಿದ್ದ ಹಾಗೆಯೇ ಸ್ತಬ್ಧವಾಯ್ತು. ಯಾವ ಮಟ್ಟಿಗೆಂದರೆ, ಆ ಪುಟ್ಟ ಹುಡುಗಿಯ ಲಂಗದಲ್ಲಿದ್ದ
ಗಿಲ್ಕಿ ಸದ್ದು ಕೂಡ ಸ್ಪಶ್ಟವಾಗಿ ಕೇಳುವ ಹಾಗೆ ನಿಶ್ಯಬ್ಧವಾಗಿದ್ದನ್ನು ಕಂಡು ಕುತೂಹಲ ಹೆಚ್ಚಾಗಿ
ನನ್ನ ಎದೆಬಡಿತವೂ ಹೆಚ್ಚಾಯ್ತು!
ಕುಳಿತಿದ್ದಾತ ಮಾತಿಗೆ ಮೊದಲಾದ, “ನಿನ್ನ ಹೆಸರೇನು” ಅಷ್ಟೇನು
ಗಡುಸಾಗಿಲ್ಲದ ಧ್ವನಿಯಲ್ಲಿ ಕೇಳಿದನು. ಪ್ರಕೃತಿ ಎಂದು ಅವಳೂ ಅಷ್ಟೇ ಮುದ್ದಾಗಿ ಉತ್ತರಿಸಿದಳು. ನೋಡು
ನಿನಗೆ ಯವುದೇ ರೀತಿಯ ನಿರ್ಬಂಧಗಳಿಲ್ಲ. ನಿನಗಿಷ್ಟ ಬಂದ ಹಾಗೆ ಇರಬಹುದು ಗೊತ್ತಾಯ್ತಾ ಎಂದನು. ಹಾ
ಯಾಯ್ತು ಎಂದು ಕೈಕಟ್ಟಿ ಕುಳಿತಳು. ಎಲ್ಲಿ ನಗು ನೋಡೋಣ ಎಂದ ಅವಳು ಮುಂಚಿನಿಂದಲೇ ನಗುತ್ತಲೇ ಇದ್ದಳು.
ಇನ್ನೂ ಜೋರಾಗಿ ನಗು, ನಿನ್ನ ಮುದ್ದಾದ ಹಲ್ಲುಗಳು ಕಾಣಿಸುವಹಾಗೆ ಎಂದನು, ನಕ್ಕಳು, ನಿನ್ನ ನಗು ನನಗೆ
ತುಂಬಾ ಇಷ್ಟವಾಯ್ತು ತೊಗೋ ಈ ಚಾಕಲೇಟು, ನಿನಗೆ ಕಚಗುಳಿ ಕೊಡುತ್ತೀನಿ ಇನ್ನೂ ಜೋರಾಗಿ ನಗುತ್ತೀಯಾ
ಎಂದು ಚಾಕಲೇಟು ಕೊಟ್ಟು, ಇನ್ನೂ ಜೋರಾಗಿ ನಗುವ ಹಾಗೆ ಕಚಗುಳಿಯಿಟ್ಟನು. ಅವಳು ಬಿದ್ದು ಬಿದ್ದು ನಗುತ್ತಿದ್ದಳು.
ಇಲ್ಲಿ ಜನರೂ ಅವಳ ನಗುವಿನೊಂದಿಗೆ ನಗು ಬೆರೆಸಿ ನಗುತ್ತಲಿದ್ದರು. ಪ್ರಕೃತಿ ಕಣ್ಣಲ್ಲಿ ನೀರು ಸುರಿಯ
ಹತ್ತಿತು. ಅಬ್ಬ ಆಗುವುದಿಲ್ಲ. ಸಾಕೆಂದು, ಹೊಟ್ಟೆ ಹಿಡಿದುಕೊಂಡು ಸಾಕು ಸಾಕೆಂದು ಕೇಳಿಕೊಳ್ಳಲು ಶುರುಮಾಡಿದಳು.
ನಿನ್ನ ನಗು ನನಗೆ ತುಂಬಾ ಇಷ್ಟ ನಗು ಇನ್ನೂ ನಗು ಎಂದು ಇನ್ನೂ ಕಚಗುಳಿಯಿಟ್ಟು ನಗಿಸುತ್ತಲೇ ಇದ್ದ.
ಸುಸ್ತಾಗಿ ಆಕೆಯ ನಗು ಕ್ರಮೇಣ ಕಡಿಮೆಯಾಗುತ್ತಾ ಬಂತು. ಯಾಕೆ ನಿನಗೆ ಚಾಕಲೇಟು ಕೊಟ್ಟೆ ತಾನೆ, ನಗು
ಯಾಕೆ ನಿಲ್ಲಿಸಿದ್ದು ನಗು ಇನ್ನೂ ಎಂದು ಕೊಂಚ ಅಧಿಕಾರವಾಣಿಯಲ್ಲೇ ಹೇಳಹತ್ತಿದ. ನನ್ನಿಂದ ಇನ್ನು ನಗಲು
ಸಾಧ್ಯವಿಲ್ಲ. ಬಿಟ್ಟುಬಿಡೆಂದು ಕೇಳಿಕೊಳ್ಳಲು ಶುರುಮಾಡಿದಳು. ಆತ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ.
ಇನ್ನೂ ನಗು ಎಂದು ಪೀಡಿಸುತ್ತಲೇ ಇದ್ದ. ಆಕೆಯ ನಗು ಸಂಪೂರ್ಣ ನಂದಿ ಹೋಯಿತು. ಈ ನಗುವಿನ ಆಟ ವಿಚಿತ್ರ
ತಿರುವನ್ನು ಪಡೆಯಹತ್ತಿತು. ಆ ಹುಡುಗಿ ನಗಲು ವಿರೋಧಿಸಿದಳು. ಇನ್ನೂ ಪೀಡಿಸುತ್ತಿದ್ದ ಹಾಗೆಯೇ, ಆ
ಮುಗ್ಧ ಕಣ್ಣುಗಳಲ್ಲಿ ಅಳು ಬಂದೇ ಬಿಟ್ಟಿತು. ಯಾಕೆ ಅಳ್ತಿದ್ದೀಯ ನಾನೇನು ನಿನಗೆ ಹೊಡೆದೆನೇನೀಗ. ವಿನಾಕಾರಣ
ಅಳುವುದು ನನಗೆ ಹಿಡಿಸುವುದಿಲ್ಲ, ಅಳು ನಿಲ್ಲಿಸು ನೀನು ಎಂದು ಆಜ್ಞೆ ಮಾಡತೊಡಗಿದ. ಆಕೆ ಏನೂ ಉತ್ತರ
ಕೊಡದೇ ಅಳುತ್ತಲೇ ಇದ್ದಳು. ಅಳು ನಿಲ್ಲಿಸು ನೀನು. ಏನಾಯ್ತೀಗ ಎಂದು ಅವಳ ಮುಖ ಎತ್ತಿ ಪ್ರಶ್ನೆ ಕೇಳಿದ.
ಅವಳು ನನಗೆ ನಗಬೇಕೆನಿಸುತ್ತಿಲ್ಲ ಎಂದು ಕಣ್ನೊರೆಸಿಕೊಂಡು ಹೇಳುವಷ್ಟರಲ್ಲೇ ಅದಕ್ಕೇ ಹೀಗೆ ಅಳೋದಾ
ನೋಡು ಎಷ್ಟು ಜನರಿದ್ದಾರೆ ಎಲ್ಲರ ಮುಂದೆ ಅತ್ತು ನನಗೆ ಅವಮಾನ ಮಾಡ್ತಿದ್ದೀಯ ಮೊದಲು ಅಳು ನಿಲ್ಲಿಸು
ಎಂದು ಹೇಳುವನು. ಆಕೆ ಬಿಕ್ಕುತ್ತಾ ಕಣ್ಣೊರೆಸಿಕೊಂಡು ತಲೆಬಗ್ಗಿಸಿ ಕೂರುವಳು. ಸುತ್ತ ಜನರೂ ಅಯ್ಯೋ
ಪಾಪ ಎಂಬಂತೆ ತ್ಚ್.. ತ್ಚ್.. ಎಂದು ಲೊಚಗುಟ್ಟುತ್ತಿದ್ದರು. ಯಾಕೆ ತಲೆಬಗ್ಗಿಸಿ ಕೂತಿದ್ದೀಯ. ಆ ಕೂದಲನ್ನ
ಹಿಂದೆ ಕಟ್ಟುವುದಕ್ಕೆ ಏನು ತೊಂದರೆ ನಿನಗೆ. ನನ್ನ ಕಣ್ಣು ನೋಡಿ ಯಾಕೆ ಮಾತನಾಡುವುದಿಲ್ಲ ನೀನು. ಸರಿಯಾಗಿ
ನೆಟ್ಟಗೆ ಯಾಕೆ ಕೂರುವುದಿಲ್ಲ ನೀನು. ಉತ್ತರ ಕೊಡುವಾಗ ಕೈಗಳನ್ನು ಅಷ್ಟೋಂದು ಯಾಕೆ ಬಳಸುತ್ತೀಯ. ಹೀಗೇ
ಆಕೆ ಏನು ಮಾಡಿದರೂ ಪ್ರಶ್ನಿಸುತ್ತಾ ಅವಳನ್ನು ಗಲಿಬಿಲಿಗೊಳಿಸುವನು. ಥತ್ ಇದೆಂತಹ ಧರಿದ್ರ ಪ್ರದರ್ಶನಕ್ಕೆ
ಬಂದೆನಪ್ಪಾ ಎನಿಸದೇ ಇರಲಿಲ್ಲ ನನಗೆ. ಆದರೂ ಮುಂದೇನು ಎಂಬಂತೆ, ಕಣ್ಣು ಬಾಯಿಗಳನ್ನು ಬಿಟ್ಟುಕೊಂಡು
ಕೈಬಾಯಲ್ಲಿದ್ದ ತಿಂಡಿ ತಿನಿಸುಗಳನ್ನು ತಿನ್ನುವುದನ್ನೂ ಮರೆತು ನೋಡುತ್ತಲಿದ್ದರು. ನನಗೆ ಕೂರಲು ಜಿಗುಪ್ಸೆಯಾಗುತ್ತಿದ್ದರೂ
ಆ ಹುಡುಗಿಯ ಪಾಡು ನೋಡಿ ಮನಸು ಮರುಗುತ್ತಲಿತ್ತು. ಎದ್ದು ಹೊರಟುಹೋಗೋಣವೆಂದು ಒಂದು ಮನಸ್ಸು, ಆದರೆ
ಮುಂದೇನಾಗುವುದೋ ಎಂಬ ಕೆಟ್ಟ ಕುತೂಹಲ ಖಂಡಿತಾ ಇತ್ತು.
ಹುಡುಗಿ ಸುತ್ತಲೂ ಸುತ್ತಿ ಸುತ್ತಿ ಎಲ್ಲರನ್ನೂ ಮನೋರಂಜಿಸುವ
ಹಾಗೆ ಕುಣಿಯಳು ಶುರುಮಾಡಿದಳು. ಸುಮ್ಮನಾಗಿದ್ದ ಪ್ರೇಕ್ಷಕರಲ್ಲಿ ಸಂಚಲನ ಮೂಡಿ, ಪುಟ್ಟ ಮಕ್ಕಳೂ ಸೇರಿ
ಚಪ್ಪಾಳೆ ತಟ್ಟಿ ಜೊತೆಗೆ ಹಾಡುತ್ತಾ, ಕೂಗುತ್ತಾ ಹುಡುಗಿಯನ್ನು ಪ್ರೋತ್ಸಾಹಿಸಲು ಶುರುಮಾಡಿದರು. ಆ
ಹುಡುಗಿಗೆ ಬೇರೇನು ಇಷ್ಟವೆಂದು ಆತ ಕೇಳಿದಾಗ ಸ್ವಚ್ಛಂದವಾಗಿ ನೃತ್ಯ ಮಾಡುವುದು ಇಷ್ಟ ಎಂದಿದ್ದಳು.
ಕುಣಿ ಹಾಗಾದರೆ ಎಂದು ಕುಣಿಯಲು ಬಿಟ್ಟಿದ್ದ. ಅವಳು ಕುಣಿಯುತ್ತಿದ್ದರೆ ಅವನು ಸುಮ್ಮನೇ ಕುರ್ಚಿಯ ಮೇಲೆ
ಕುಳಿತು ನೋಡುತ್ತಲಿದ್ದ. ಅವಳ ಕಾಲುಗಳು ಜಿಂಕೆಯ ಕಾಲುಗಳಂತಿದ್ದವು. ಪುಟಪುಟಪುಟನೆ ಜಿಗಿಯುತ್ತಲಿದ್ದವು.
ಸುತ್ತ ಕುಳಿತಿದ್ದವರೆಲ್ಲರೂ ನಿಂತು ಚಪ್ಪಾಳೆ ತಟ್ಟುವ ಹಾಕೆ ಕುಣಿದಳು. ನಾನೂ ಕಣ್ಣರೆಪ್ಪೆ ಮುಚ್ಚದೆಯೇ
ಅವಳ ನೃತ್ಯ ಪ್ರತಿಭೆಗೆ ತಲೆದೂಗಿದೆ. ಇದಪ್ಪಾ ಪ್ರದರ್ಶನ, ಬಂದದ್ದಕ್ಕೂ ಸಾರ್ಥಕವಾಯ್ತೆಂದು ಅಂದುಕೊಂಡು,
ನೋಡನೋಡುತ್ತಿದ್ದಂತೆ ಸುತ್ತುತ್ತಾ ಸುತ್ತುತ್ತಾ ಎಡವಿ ಬಿದ್ದೇ ಬಿಟ್ಟಳು. ಕುಳಿತಿದ್ದ ಕೆಲವು ಪ್ರೇಕ್ಷಕರೂ
ಸಹ ನಿಂತು ಏನಾಯ್ತೋ ಅವಳಿಗೆ ಎಂದು ಗಾಬರಿಗೊಳ್ಳದೇ ಇರಲಿಲ್ಲ. ಅಷ್ಟು ಹೊತ್ತು ಪ್ರೋತ್ಸಾಹ ಕೂಡ ಮಾಡದೇ,
ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದವನು ಎದ್ದು ನೇರವಾಗಿ ಬಿದ್ದವಳ ಬಳಿಗೆ ಹೋಗಿದ್ದೇ ತಲೆಯ ಮೇಲೆ
ಛಟೀರನೆ ಹೊಡೆದೇ ಬಿಟ್ಟನು. ಎಲ್ಲ ಜನರೂ ಹೋ ಹೋ ಹೋ ಎಂದು ಬಾಯ ಮೇಲೆ ಕೈಯಿಟ್ಟರು. ಕುಣಿಯಲು ಬರದ ಮೇಲೆ
ಯಾಕೆ ಕುಣಿಯಬೇಕಿತ್ತು ನೀನು, ಅದೂ ಇದೂ ಎಂದು ಅವಳ ಹಿಂದೆ ನಿಂತು ಅರಚುತ್ತಲಿದ್ದನು. ತಲೆ ತಗ್ಗಿಸಿ
ತಿರುಚಿದ್ದ ಕಾಲು ಹಿಡಿದು ಸಾವರಿಸಿಕೊಳ್ಳುತ್ತಿದ್ದವಳು ಹಾಗೇ ಇದ್ದಳು. ಕೆದರಿದ್ದ ಅವಳ ಕೂದಲು ಅವಳ
ಮನಸ್ಸನ್ನು ಪ್ರತಿಬಿಂಬಿಸುತ್ತಿದ್ದವೋ ಏನೋ ಎಂದುಕೊಂಡೆ. ಇದೇನು ಪೂರ್ವನಿಯೋಜಿತ ನಾಟಕವೋ ಇಲ್ಲಾ ಜೀವನದ
ಬಿಂಬವೋ ಏನೂ ಅರ್ಥವಾಗದೇ ತಲೆತುರಿಸಿಕೊಂಡೆ. ಆಕೆ ಪಾಪ ಇನ್ನೂ ಕಾಲು ನೀವಿಕೊಳ್ಳುತ್ತಲೇ ಇದ್ದವಳು.
ಎದ್ದು ಅವನನ್ನು ವಿರೋಧಿಸಲು ಶುರುಮಾಡಿದಳು. ಒಮ್ಮೆ ಕುಣಿಯುವ ಪ್ರಯತ್ನವನ್ನಾದರೂ ಮಾಡಿನೋಡು ಅರ್ಥವಾಗುತ್ತೆ
ನೃತ್ಯದ ನೋವೇನೆಂದು ಎಂದು ದಿಟ್ಟವಾಗಿ ಹೇಳಿದಳು. ಶಹಬ್ಭಾಶ್ ಎಂದುಕೊಂಡೆ. ಅವಳು ಅಸಹಾಯಕಳಾಗಿರಲಾರಳು
ತಾಳ್ಮೆಯಿಂದ ವರ್ತಿಸುತ್ತಿದ್ದಳೇನೋ ಇಷ್ಟು ಹೊತ್ತಿನವರೆಗೂ ಎಂದು ನಾನೇ ಲೆಕ್ಕ ಹಾಕುತ್ತಿದ್ದೆ. ಅವನು
ಚಪ್ಪಾಳೆ ತಟ್ಟಿ ಇಬ್ಬರು ಮೊದಲು ಕುರ್ಚಿ ತಂದಿಟ್ಟ ಬೋಡರನ್ನು ಕರೆದು ಏನೋ ಕಿವಿಯಲ್ಲಿ ಉಸುರಿದ. ಅವರೂ
ಹೋದರು. ನೀಲಿ ಸೂಟುಧಾರಿ ಮತ್ತೆ ಅವಳತ್ತ ತಿರುಗಿ ಹೀಗೆ ಮೈಪ್ರದರ್ಶಿಸುವ ಹಾಗೆ ಬಟ್ಟೆ ತೊಡಲು ನಾಚಿಕೆಯಾಗಲ್ವಾ
ನಿನಗೆ ಎಂದು ಅಬ್ಬರಿಸಿದ. ಅವಳು ಅವನನ್ನೇ ನೇರವಾಗಿ ದಿಟ್ಟಿಸುತ್ತಲೇ ಇದ್ದಳು. ಇಬ್ಬರ ನಡುವೆ ವಾಕ್
ಸಮರವೇ ಶುರುವಾಯ್ತು. ನನ್ನಿಷ್ಟ ನಾನು ಹೇಗೆ ಬೇಕೋ ಬದುಕಬಹುದೆಂದು ನೀನೇ ಹೇಳಿದ್ದೆ ತಾನೆ ಎಂದು ಅವಳು.
ಹೇಗೆ ಬೇಕೋ ಬದುಕು ಆದರೆ ಹೀಗೆ ಬದುಕಲು ಯಾರು ಅನುಮತಿ ಕೊಟ್ಟದ್ದು ನಿನಗೆ ಎಂದು ಆತ. ಕೇಳಲು ನೀನ್ಯಾರೆಂದು
ಅವಳು. ಹಾಗೇ ಮಾತಿಗೆ ಮಾತು ಮುಂದುವರೆಯುತ್ತಲಿತ್ತು.
ಇಬ್ಬರು ಬೋಡರೂ ಒಂದೊಂದು ಕತ್ತಿಗಳನ್ನು ಇಬ್ಬರಿಗೂ ಕೊಟ್ಟು
ಹೋದರು. ಅವಳು ಕತ್ತಿ ಹಿಡಿದು ಕುಂಟುತ್ತಾ ನಿಂತಳು. ನೋಡ ನೋಡುತ್ತಿದ್ದಂತೆಯೇ. ಬಾ ಹೊಡೆದಾಡು ಎಂದು
ಹೋಗಿ ಅವಳ ಮೇಲೆ ಎರಗಿಯೇ ಬಿಟ್ಟ. ಶಕ್ತಿ ಮೀರಿ ಅವನನ್ನು ಎದುರಿಸಿದಳು. ಹೊಡೆದಾಟ ಶುರುವಾಯ್ತು. ಇದೇನು
ನಡೆಯುತ್ತಿದೆಯೆಂದು ನನಗೆ ಏನೆಂದರೆ ಏನೂ ಅರ್ಥವಾಗುತ್ತಲಿರಲಿಲ್ಲ. ಕಣ್ಣ ಮುಂದೆಯೇ ಆ ಪುಟ್ಟ ಹುಡುಗಿಗೂ
ಆ ದೈತ್ಯ ಸೂಟುಧಾರಿಗೂ ಹೊಡೆದಾಟ ಶುರುವಾಗೇ ಹೋಯ್ತು. ಇದು ಅನ್ಯಾಯ, ದೌರ್ಜನ್ಯ ಎಂದು ಕೆಲವು ಪ್ರೇಕ್ಷಕ
ವರ್ಗದವರು ಕೂಗಲು ಶುರುಮಾಡಿದರು. ಕೆಲವರು ಹುಡುಗಿಯನ್ನು ಹುರಿದುಂಬಿಸುವ ಮಾತುಗಳನ್ನಾಡುತ್ತಿದ್ದರೆ,
ಇನ್ನೂ ಕೆಲವರು ಆ ದೈತ್ಯನನ್ನು ಬಾಯಿಗೆ ಬಂದ ಹಾಗೆ ಜರಿಯುತ್ತಿದ್ದರು. ಮಕ್ಕಳು ಅಳಲು ಶುರುಮಾಡಿದ್ದವು.
ಆದರೂ ಕೆಲವರು ಕೈಲಿದ್ದ ತಿಂಡಿ ಯಾಂತ್ರಿಕವಾಗಿ ಬಾಯಿಗೆಸೆದುಕೊಳ್ಳುತ್ತಾ ಜಗಿಯುತ್ತಲೇ ಇದ್ದದ್ದು
ವಿಚಿತ್ರ. ಅವಕಾಶ ಸಿಕ್ಕಿದ್ದೇ ಅವಳನ್ನು ಕತ್ತಿಯಲಗಿನಿಂದ ನೂಕಿದ್ದೇ ಎರಡು ಅಡಿಯಷ್ಟು ಮೇಲಕ್ಕೆ ಹಾರಿ
ಅಷ್ಟು ಕಬ್ಬಿಣದ ಸರಳಿಗೆ ಹೋಗಿ ಹೊಡೆದು ಬಿದ್ದಳು. ಬಿದ್ದವಳನ್ನೂ ಬಿಡದೇ ಹೋಗಿ ಮೇಲೆರಗಲು ಪ್ರಯತ್ನಿಸುತ್ತಿದ್ದವನನ್ನು
ಅನ್ಯಾಯ, ಮೋಸ ಎಂದು ಜನರು ಅರಚುತ್ತಲೇ ಇದ್ದರೇ ಹೊರತು ಯಾರೂ ನಿಂತ ಸ್ಥಳದಿಂದ ಅಲುಗಲೂ ಇಲ್ಲ. ನನ್ನಿಂದ
ಇದನ್ನು ಅರಗಿಸಿಕೊಳ್ಳಲು ಇನ್ನು ಸಾಧ್ಯವಿರಲಿಲ್ಲ. ಕುಸಿದು ಕುಳಿತು ಕಣ್ಮುಚ್ಚಿದೆ. ಆದರೂ ಸುತ್ತ
ಉದ್ಗರಿಸುತ್ತಿದ್ದವರಿಂದಲೇ ಏನು ನಡೆಯುತ್ತಿರಬಹುದೆಂಬ ಚಿತ್ರಣ ಸ್ಮೃತಿಪಟಲದ ಮೇಲೆ ಮೂಡುತ್ತಲಿದ್ದುದನ್ನು
ತಡೆಯಲು ಸಾಧ್ಯವಾಗಲಿಲ್ಲ. ತಾನಿನ್ನು ಭಾಗವಹಿಸುವುದಿಲ್ಲವೆಂದು ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದರೂ
ಎಳೆದು ತಂದು ನಡುಮಧ್ಯಕ್ಕೆ ಬಿಡುತ್ತಲಿದ್ದನಂತೆ. ಎಲ್ಲ ಬಾಗಿಲುಗಳೂ ಮುಚ್ಚಿದ್ದವಂತೆ. ಅವಳು ಹೊರಗೆ
ಹೋಗಲು ಶತಪ್ರಯತ್ನ ಮಾಡುತ್ತಲೇ ಇದ್ದಳಂತೆ. ಎದ್ದು ಸೀದಾ ಹೊರನಡೆದೆ. ಸುಧಾರಿಸಿಕೊಳ್ಳಲು ಬಹಳ ಸಮಯವೇ
ಬೇಕಾಯಿತು. ಹೊರಗೆ ಸಂಪೂರ್ಣ ಕತ್ತಲಾಗಿತ್ತು. ಒಳಗೆ ನಡೆಯುತ್ತಿದ್ದ ಯಾವುದರ ಅರಿವೇ ಇಲ್ಲದೆ ತಮ್ಮ
ಪಾಡಿಗೆ ಓಡಾಡುತ್ತ, ತಮ್ಮ ಪ್ರಪಂಚದಲ್ಲೇ ಮುಳುಗಿರುವ ಜನತೆ. ಹಾಗೇ ಪ್ರದರ್ಶನ ಮಂದಿರದ ಗೋಡೆಗೆ ಒರಗಿ
ನಿಂತೆ. ಒಳಗಿನಿಂದ ಬರುತ್ತಿದ್ದ ಥೂ, ಚೀ, ಅಯ್ಯೋ, ಉದ್ಗಾರಗಳು ಇನ್ನೂ ಸ್ಪಷ್ಟವಾಗಿ ಕೇಳಿಬರುತ್ತಲೇ
ಇದ್ದವು. ಈ ದರಿಧ್ರ ಊರನ್ನೇ ಬಿಟ್ಟು ಹೋಗೋಣವೆಂದರೆ ಎಲ್ಲಿಗೆ ಹೋಗುವುದು. ಎಲ್ಲಾ ಕಡೆ ಹೊರಗೆ ನಡೆಯುತ್ತಿದ್ದು
ಇಲ್ಲಿ ಒಳಗೆ ನಡೆಯುತ್ತಿತ್ತಷ್ಟೇ! ಒರಗಿದ್ದ ಗೋಡೆಗೆ ಭಿತ್ತಿಪತ್ರವೊಂದನ್ನು ಹಚ್ಚಿದ್ದರು. ಒಂದು
ಧಡೂತಿ ನೀಲಿ ಬಟ್ಟೆಯವನ ನೆರಳಿನಲ್ಲಿ ತಲೆ ಮೇಲೆ ಎತ್ತಿ ನೋಡುತ್ತಿರುವ ಹುಡುಗಿ ಕೆಂಪು ಲಂಗದ ಪುಟ್ಟು
ಹುಡುಗಿ. ಈಗ ಅದರ ಅರ್ಥವಾಯ್ತು. ಆದರೆ ಪ್ರವೇಶ ಚೀಟಿ ಪಡೆಯುವಾಗ ಇನ್ನೂ ಮೂರು ಸಾಲುಗಳಿದ್ದವು. ಅದ್ಯಾಕಿರಬಹುದು
ಎಂದು ಥಟ್ಟನೆ ಪ್ರಶ್ನೆ ಹುಟ್ಟಿಕೊಂಡಿತು.

+ನೀ.ಮ. ಹೇಮಂತ್
Nice Story line :)
ReplyDeletethank you buddy :-)
Delete