ಓದಿ ಓಡಿದವರು!

Sunday 5 August 2012

ಕರ್ಮ!ನನ್ನ ಹೆಸರು ಶರಣ್
ನನ್ನ ಹೆಸರು ಶರಣ್, ನಾನು…
ನನ್ನ ಹೆಸರು ಶರಣ್, ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ.. ಕ್ಷಮಿಸಿ.. ಅಂಬೇಡ್ಕರ್ ಕಾಲೇಜಿನಲ್ಲಿ ಎಮ್. ಬಿ. ಎ ಪದವಿ ಮುಗಿಸಿದ್ದೇನೆ.
ನಾನು… ನಾನು… ನನ್ನ ಗಂಟಲಿನಲ್ಲಿ ನೂರು ಜನ ಸೇರಿಕೊಂಡು ನನ್ನ ಮುಂದಿನ ಪದಗಳನ್ನು ಹೊರಬರದಂತೆ ಹಿಡಿದು ಹಿಂದಕ್ಕೆ ಎಳೆಯುತ್ತಿದ್ದರು. ಏನು ಹರಸಾಹಸ ಪಟ್ಟರೂ ಪದಗಳು ಹೊರಬರಲೇ ಇಲ್ಲ. ಶಕ್ತಿ ಮೀರಿ ಪ್ರಯತ್ನ ಪಟ್ಟಷ್ಟೂ ಬೆವರು ಹೊರಬರುತ್ತಿತ್ತೇ ಹೊರತು ಪದಗಳು ಹೊರಬರಲಿಲ್ಲ.

ಸರಿ ವಂದನೆಗಳು ನೀವು ಕುಳಿತುಕೊಳ್ಳಿ. ನೆಕ್ಸ್ಟ್ ಎಂದರು. ನಾನು ಕೂರುವ ಮುನ್ನವೇ ನನ್ನ ಪಕ್ಕದವನು ಸರಕ್ಕನೆ ಎದ್ದು ನಿಂತು ಬಾಯಿ ಪಾಠ ಮಾಡಿದ್ದೆಲ್ಲವನ್ನೂ ಒಪ್ಪಿಸಲು ಶುರುಮಾಡಿದ. ನನ್ನೊಳಗೆ ಪದಗಳನ್ನೆಲ್ಲಾ ಹಗ್ಗ ಕಟ್ಟಿ ಜಗ್ಗುತ್ತಿದ್ದವರೇ ಕೊನೆಗೂ ಗೆದ್ದು ಕೇಕೆ ಹಾಕಲು ಶುರುಮಾಡಿದರು. ಸೋತಿದ್ದಕ್ಕೋ ಏನೋ ಕೈಗಳು ತೀಕ್ಷ್ಣವಾಗಿ ಕಂಪಿಸುತ್ತಿದ್ದವು. ಒಳಗೆ ನನ್ನ ಆತ್ಮವಿಶ್ವಾಸದೊಂದಿಗೆ ಯುದ್ಧ ಮಾಡುತ್ತಿದ್ದವರಿಂದಲೂ, ಮತ್ತು ನನ್ನೊಂದಿಗೆ ಸ್ಪರ್ಧಿಸಿ ಕೆಲಸ ಕಿತ್ತುಕೊಳ್ಳಲು ಬಂದಿದ್ದವರಿಂದಲೂ ಒಂದೇ ಬಾರಿಗೆ ಸೆಣಸಲಾಗದೇ ಸೋತು ಕುಳಿತು ಕಷ್ಟ ಪಟ್ಟು ಎಂಜಲು ನುಂಗಿದೆ. ಗೊತ್ತಾಗೋಯ್ತು ಈ ಕಂಪನಿ ನನಗೆ ಕೆಲಸ ಕೊಡುವುದಿಲ್ಲ ಎಂದು. ಆದರೂ ಅವರೇ ಕಳುಹಿಸುವವರೆಗೂ ಕಾಯಬೇಕಿತ್ತು. ಎಲ್ಲರ ಸರದಿ ಮುಗಿದ ನಂತರ ಒಂದಷ್ಟು ಜನರ ಪಟ್ಟಿ ಓದಿದರು, ಯಾರ ಹೆಸರನ್ನು ಕರೆಯಲಾಗಲಿಲ್ಲವೋ ಅವರು ಇನ್ನು ಹೊರಡಬಹುದು. ಮತ್ತೆ ಮೂರು ತಿಂಗಳ ನಂತರ ಸ್ಪರ್ಧಿಸಲು ನೀವು ಅರ್ಹರು. ಮುಂದಿನ ಬಾರಿಗೆ ಶುಭವಾಗಲಿ ಎಂದು ಹರಸಿ ಮರ್ಯಾದೆಯಿಂದಲೇ ಕಳುಹಿಸಿದರು. ಯಾವಾಗ ಎದ್ದು ಓಡಿಬರುವೆನೋ ಎಂದೆನಿಸಿತ್ತು. ಬಿಟ್ಟಿದ್ದೇ ಸಾಕೆಂದು ಮೊದಲು ಸೋತವರ ಗುಂಪಿನಿಂದ ದೂರ ಓಡಿ ಬಂದು ಸುಧಾರಿಸಿಕೊಂಡೆ. ಇದು ಕಳೆದ ಬಾರಿಯ ಅನುಭವ. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಲು ನನ್ನಿಂದ ಸಾಧ್ಯವಾಗುವುದಿಲ್ವಾ? ಅಷ್ಟು ಕಷ್ಟ ಏನಿದೆ, ಕೆಲಸ ಗಿಟ್ಟಿಸೋದು. ಹೆದರುವುದಕ್ಕೆ ಅಲ್ಲಿ ಅಂಥದ್ದೇನೂ ಇಲ್ವಲ್ಲ. ಸ್ವಲ್ಪ ಧೈರ್ಯವಾಗಿ ಗೊತ್ತಿರುವುದನ್ನ ಗೊತ್ತಿರುವ ಹಾಗೇ ಹೇಳಿದರೆ ಮುಗಿದು ಹೋಯಿತು. ಕೆಲಸ ಸಿಕ್ಕ ಹಾಗೆಯೇ. ಈ ಬಾರಿ ಹೇಗಾದರೂ ಮಾಡಿ ಕೆಲಸ ಹೊಡೆಯಲೇ ಬೇಕು. ನನಗಿಂತ ಅರ್ಧಂಬರ್ಧ ಇಂಗ್ಲೀಷಿನಲ್ಲಿ ಮಾತನಾಡುವವರೆಲ್ಲಾ ಕೆಲಸ ಪಡೆದರು ಕೊನೆಯ ಬಾರಿ. ಈ ಸಲ ಏನೇ ಆಗಲಿ ಮಾತನಾಡಬೇಕು.

ಕೆಲಸ ಬೇಕು, ಕೆಲಸ ಬೇಕು, ಕೆಲಸ ಬೇಕು, ಕೆಲಸ ಬೇಕು.. ನೂರು ಬಾರಿ ಹೇಳಿಕೊಂಡದ್ದಾಯ್ತು. ಇಂಟರ್ ವ್ಯೂ ಗೆ ಇನ್ನೂ ಅರ್ಧ ಘಂಟೆ ಬಾಕಿ ಇದೆ. ಧರಿದ್ರದ್ದು ನನ್ನ ಬಗ್ಗೆಯ ಪರಿಚಯ ಬರೆದುಕೊಂಡಿರುವುದನ್ನ ಉರು ಹೊಡೆದಾದ್ರೂ ಹೇಳಬೇಕೀಸಲ.

ನಾನು ಶರಣ್ ನಾನು ಅಂಬೇಡ್ಕರ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದೇನೆ. ಎಮ್. ಬಿ. ಎ ನಲ್ಲಿ ಫಿನಾನ್ಸ್ ನನ್ನ ಐಚ್ಛಿಕ ವಿಷಯ. ನಾನು ಹುಟ್ಟಿ ಬೆಳೆದದ್ದು, ನೆಲೆಸಿರುವುದು ಬೆಂಗಳೂರಿನಲ್ಲೆ. ನನ್ನ ಮನೆಯಲ್ಲಿ ನನ್ನ ತಂದೆ ತಾಯಿ ಮತ್ತು ತಮ್ಮನಿದ್ದಾನೆ. ನಾನು ಎರಡು ವರ್ಷದ ಡಿಪ್ಲೊಮಾ ಕಂಪ್ಯೂಟರ್ ಕೋರ್ಸ್ ಮಾಡಿಕೊಂಡಿದ್ದೇನೆ. ಟೈಪಿಂಗ್ ಜೂನಿಯರ್ ನಲ್ಲಿ ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದೇನೆ. ನಾನು ಎರಡು ವರ್ಷ ಎನ್ ಸಿ ಸಿ ಯಲ್ಲಿ ಅಭ್ಯರ್ತಿಯಾಗಿದ್ದೆ. ಮತ್ತು ಮೂರು ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಅದು ಬಿಟ್ಟರೆ ಸಾಹಿತ್ಯ ಓದುವುದು, ಅಂತರರಾಷ್ಟ್ರೀಯ ಉತ್ತಮ ಚಲನಚಿತ್ರಗಳನ್ನ ಸಂಗ್ರಹಿಸುವುದು ಮತ್ತು ನೋಡುವುದು ನನ್ನ ಇತರೆ ಆಸಕ್ತಿಯ ಹವ್ಯಾಸಗಳು. ನಾನು ಶ್ರಮಜೀವಿ, ಹಠವಾದಿ, ಹೊಸ ವಿಷಯಗಳನ್ನ ಬಹುಬೇಗ ಗ್ರಹಿಸಬಲ್ಲೆ…. ಇಷ್ಟನ್ನ ಒಳಗೆ ಹೋಗುವವರೆಗೂ ಉರು ಹೊಡೆಯಬೇಕು. ಛೆ ನನ್ನ ಬಗ್ಗೆ ನಾನೇ ಹೀಗೆ ಬಾಯಿಪಾಠ ಮಾಡಿ ಕಲಿಯಬೇಕಾ. ನಾನು ಬೇರೆಯವರ ಬಗ್ಗೆ ಹೇಳ್ತಿದ್ದೀನೋ ಅಥವಾ ನನ್ನ ಬಗ್ಗೆಯೇ ಹೇಳ್ತಿದ್ದೀನೋ. ಕೆಲಸ ಸಿಗೋದಕ್ಕೆ ಏನೇನು ಮಾಡಬೇಕಪ್ಪಾ. ಒಮ್ಮೆ ಕೆಲಸ ಗಿಟ್ಟಿಸಿದರೆ ಸಾಕು ಆಮೇಲೆ ನನ್ನ ಸಾಮರ್ಥವೇನೆಂದು ಸಾಬೀತು ಪಡಿಸಬಹುದು. ನನಗೆ ಗೊತ್ತಿದ್ದ ಹಾಗೆ ಕೆಲಸ ಅಷ್ಟು ಕಷ್ಟಕರವಾಗಿರಲಾರದು. ಕಷ್ಟಕರವಾಗಿಯೇ ಇದ್ದರೂ ಏನೀಗ, ಕಷ್ಟ ಪಟ್ಟು ದುಡಿಯಲು ನಾನೆಂದೂ ಹೆದರಿದವನಲ್ಲವಲ್ಲ. ಯಾಕೋ ಇವತ್ತು ಕೆಲಸ ಸಿಕ್ಕೇ ಸಿಗುತ್ತೆ ಅನ್ನಿಸುತ್ತಿದೆ. ನೋಡುವ, ಇವತ್ತು ನನ್ನ ಅದೃಷ್ಟ ಹೇಗಿದೆ ಅಂತ. ಥು ಆಲೋಚನೆ ಎಲ್ಲೆಲ್ಲಿಗೋ ಹೋಗ್ತಿದೆ. ಟೆಲ್ ಮಿ ಅಬೌಟ್ ಯುವರ್ ಸೆಲ್ಫ್, ನಿಮ್ಮ ಬಗ್ಗೆ ಹೇಳಿ ಅಂದ ಕೂಡಲೆ ಬಿಟ್ಟ ಬಾಣದಂತೆ ಈ ಅಷ್ಟೂ ಮಾತನ್ನು ಥುಪುಕ್ ಥುಪುಕ್ಕನೆ ಹೊರಗುಗುಳಬೇಕು. ಈ ಬಾರಿ ಗಂಟಲಲ್ಲಿ ನೂರು ಜನರಲ್ಲ ಸಾವಿರ ಜನ ಬೇಕಾದರೆ ಹಗ್ಗ ಯಾಕೆ ದೊಡ್ಡ ದೊಡ್ಡ ಕಬ್ಬಿಣದ ಸಲಾಕೆಗಳನ್ನೇ ಹಾಕಿ ಜಗ್ಗಲಿ ನಾನು ಮಣಿಯುವವನಲ್ಲ. ಈ ಕಂಪನಿಯಲ್ಲಿ ನನಗೆ ಕೆಲಸ ಬೇಕಷ್ಟೇ. ಅಪ್ಪನ ಸಾಲಗಳಿಗೆ ನೆರವಾಗಬೇಕು. ಮುಂದೆ ನಾನಂದುಕೊಂಡದ್ದನೆಲ್ಲಾ ಮಾಡಬೇಕೆಂದ್ರೆ ಈ ಕೆಲಸ ಪಡೆದುಕೊಳ್ಳಲೇ ಬೇಕು. ನನಗೆ ಈ ಕೆಲಸ ಬೇಕು, ನನಗೆ ಈ ಕೆಲಸ ಬೇಕು, ನನಗೆ ಈ ಕೆಲಸ ಬೇಕು. ಒಳಗೆ ಹೋಗಿ ನನ್ನ ಹೆಸರು ಬರುವವರೆಗೂ ಇದೇ ಮಾತನ್ನ ನೂರು ಸಲ ಹೇಳಿಕೊಳ್ಳುತ್ತಿದ್ದರೆ ಆತ್ಮವಿಶ್ವಾಸ ವೃದ್ಧಿಸುತ್ತದೆ.


The sum of ages of 5 children born at the intervals of 3 years each is 50 years. What is the age of the youngest child? ಆಯ್ಕೆಗಳೇನಿದ್ವು: ಎ. 4 Years ಬಿ. 8 Years ಸಿ. 10 Years ಡಿ. None of these. ಈ ಪ್ರಶ್ನೆಗೆ ಉತ್ತರ ಯಾವುದು ಹಾಕಿದ್ದೆ. ೪ ವರ್ಷ ಅಂತಾನಾ ಅಥವಾ ಯಾವುದೂ ಅಲ್ಲ ಅಂತ ಏನಾದ್ರೂ ಹಾಕಿಬಿಟ್ಟೆನಾ ಅಂತ ಗೊತ್ತಾಗ್ತಿಲ್ಲ. ಮೊದಲ ಸುತ್ತು ಆಪ್ಟಿಟ್ಯೂಡ್ ಸುತ್ತು ಇಂತಹ ತಲೆ ಕೆಡಿಸುವ ನೂರು ಪ್ರಶ್ನೆಗಳು ಅದನ್ನ ಉತ್ತರಿಸುವುದಕ್ಕೆ ಒಂದು ಪ್ರಶ್ನೆಗೆ ಒಂದು ನಿಮಿಷಕ್ಕಿಂತ ಕಡಿಮೆ ಅವಧಿ. ತೊಂಭತ್ತು ನಿಮಿಷಕ್ಕೆ ಸರಿಯಾಗಿ ಪೇಪರ್ ಕಿತ್ತುಕೊಂಡವರು ಎರಡು ಘಂಟೆಯಾಯ್ತು ಇನ್ನೂ ಫಲಿತಾಂಶ ಬಂದಿಲ್ಲ. ಅವಕಾಶವಿರುವುದು ಮೂರೋ ಅಥವಾ ನಾಲ್ಕೋ ಇರಬಹುದೇನೋ ಇಲ್ಲಿ ನೆರೆದಿರುವುದು ನೋಡಿದರೆ ಬರೋಬ್ಬರಿ ತೊಂಬತ್ತು ಜನ. ಈ ಕಾಯಿಸುವಿಕೆ ಕೂಡ ಸಂದರ್ಶನದ ಒಂದು ಭಾಗವಂತೆ, ತಾಳ್ಮೆಯಿಂದ ಕಾಯದಿರುವವನನ್ನು ಆಯ್ಕೆ ಮಾಡಲಾಗುವುದಿಲ್ಲವಂತೆ ಅಂತ ಅವನಾರೋ ಹೇಳುತ್ತಿದ್ದುದು ಕೇಳಿಸುತ್ತಿತ್ತು. ಅದೆಷ್ಟು ನಿಜವೋ, ಸುಳ್ಳೋ ಅಂತೂ ಒಬ್ಬರೂ ಕುಂತ ಜಾಗದಿಂದ ಕದಲುವ ರಿಸ್ಕ್ ತೆಗೆದುಕೊಳ್ಳುಲು ತಯಾರಿರಲಿಲ್ಲ. ಎರಡು ಘಂಟೆಯಾದರೂ ಕಾಯುತ್ತಲೇ ಇದ್ದರು. ಮೊದಲರ್ಧ ಘಂಟೆ ಗಪ್ ಚುಪ್ಪಾಗಿದ್ದವರು ನಿಧಾನವಾಗಿ ಅಲ್ಲಲ್ಲಿ ಗುಸಗುಸ ಪಿಸಪಿಸ ಶುರುವಾಯ್ತು. ನನ್ನ ಪಕ್ಕದಲ್ಲಿದ್ದವನು ಮಾತಿಗೆ ಮೊದಲಾದ. ಅವನು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವನಂತೆ ರಜೆ ಹಾಕಿ ಇವತ್ತು ಸಂದರ್ಶನಕ್ಕೆ ಬಂದಿರುವನಂತೆ. ಆ ಕಂಪನಿಯಲ್ಲಿ ತೊಂದರೆ ಏನಾಗಿತ್ತೆಂದರೆ ಅಯ್ಯೋ ಅಲ್ಲಿ ಕೆಲಸ ಬೋರು, ಅದಕ್ಕೇ ಇಲ್ಲಿಗೆ ಜಂಪ್ ಮಾಡ್ತಿದ್ದೇನೆಂದ. ಈತನ ಬಳಿ ಈಗಾಗಲೇ ಕೆಲಸವಿದೆ ಇವನಿಗೇನಪ್ಪಾ ಕಷ್ಟ ಇಲ್ಲಿ ಸಿಗದಿದ್ದರೂ ತೊಂದರೆಯಿಲ್ಲ ಎಂದುಕೊಂಡೆ. ಮೊದಲ ಸುತ್ತಿನಲ್ಲಿ ಆಯ್ಕೆಯಾದರೆ ಸಾಕೆಂದು ಮನಸ್ಸಿನಲ್ಲೇ ಅಂದುಕೊಂಡೆ. ಮೌನವಾಗಿದ್ದಷ್ಟೂ ಭಯ ಕಾಡುವುದು, ಮತ್ತು ಮನದಲ್ಲಿರುವ ಸಾವಿರ ಭಯೋತ್ಪಾದಕರು ತಲೆಯೆತ್ತುವರೆಂದು ಭಯವಾಗಿ ಅವನೊಂದಿಗೆ ಮಾತು ಮುಂದುವರೆಸಲು ಆ ಪ್ರಶ್ನೆಗೆ ಏನು ಉತ್ತರಿಸಿದನೆಂದು ಕೇಳಿದೆ.

ಆ ಮಕ್ಕಳ ವಯಸ್ಸುಗಳನ್ನ ‘x’ ಎಂದು ಬರೆದುಕೋ, (x + 3), (x + 6), (x + 9) ಮತ್ತು (x + 12) ವರ್ಷಗಳು ಅಂತಿಟ್ಟುಕೋ.
ಹಾಗಾಗಿ, x + (x + 3) + (x + 6) + (x + 9) + (x + 12) = 50
http://www.indiabix.com/_files/images/aptitude/1-sym-imp.gif 5x = 20
http://www.indiabix.com/_files/images/aptitude/1-sym-imp.gif x = 4.
* ಕೊನೆಯ ಮಗುವಿನ ವಯಸ್ಸು = x = 4 ವರ್ಷಗಳು.
ಅಯ್ಯಯ್ಯಪ್ಪ ಇವನೇನು ಮನುಷ್ಯನೋ ಏನೋ ಗೊತ್ತಾಗಲಿಲ್ಲ. ಶಾಲೆಯಲ್ಲಿ ಭಲೇ ಬುದ್ಧಿವಂತನಿರಬೇಕೆಂದುಕೊಂಡೆ. ನಾನೇನೋ ಅಡ್ಡೇಟಿನ ಮೇಲೆ ಗುಡ್ಡೇಟು ಲೆಕ್ಕ ಹಾಕಿ ಉತ್ತರ ಬರೆದರೆ ಇವನು ಈ ರೀತಿ ಲೆಕ್ಕಾಚಾರ ಹಾಕಿದ್ದಾನಲ್ಲ ಪುಣ್ಯಾತ್ಮ ಎಂದುಕೊಂಡೆ. ಇವನಿಗೆ ಕೆಲಸ ಗ್ಯಾರಂಟಿ, ನನ್ನಂತವನಿಗೆ ಕೆಲಸ ಸಿಗಲಾರದು ಎಂದು ಅಳುಕು ಶುರುವಾಯ್ತು. ತಲೆಕೆಡಿಸಿಕೊಂಡಿರುವ ಸಮಯದಲ್ಲೇ ಡುಮ್ಮಗಿನ ಫಲಿತಾಂಶ ಹೊತ್ತ ಮೇಡ್ರಮ್ಮು ಬಂದರು. ನನ್ನ ಪಕ್ಕದ ಬುದ್ಧಿವಂತನನ್ನೂ ಸೇರಿಸಿ ಇಪ್ಪತ್ತು ಜನರ ಹೆಸರನ್ನು ಕೂಗಿದರು. ಅವರೆಲ್ಲಾ ಎದ್ದು ನಿಂತರು. ನನ್ನ ಹೆಸರು ಬರಲೇ ಇಲ್ಲ. ಮತ್ತೆ ಮುಗೀತು ಕತೆ ಎಂದುಕೊಂಡೆ, ಹಣೆ ಚಚ್ಚಿಕೊಳ್ಳುವಂತಾಯ್ತು. ಆದರೆ ಆ ಇಪ್ಪತ್ತು ಜನರನ್ನ ಕಳುಹಿಸಲಾಯ್ತು. ಅರೆರೆ! ಇದು ಹೇಗೆ ಸಾಧ್ಯವೆಂದೇ ಅರ್ಥವಾಗಲಿಲ್ಲ. ಎದೆ ತನ್ನಿಂತಾನೇ ಉಬ್ಬಿ ಹೋಯ್ತು. ಅದೆಲ್ಲಿತ್ತೋ ಒಂದು ರೀತಿಯ ಹುರುಪು, ಕಣ್ಗಳಲ್ಲಿ ಹೊಳಪು ಮೂಡಿದವು. ಯಸ್ ಯಸ್ ಯಸ್ ಎಂದು ಒಮ್ಮೆ ಒಳಗೊಳಗೇ ಕೂಗಿಕೊಂಡೆ. ಗೆಲ್ಲುವೆನೆಂಬ ಹುರುಪು ಮತ್ತೆ ಬಂತು. ಎಚ್ಚೆತ್ತು ಕೂತೆ. ಆತ ಹೋಗುತ್ತಾ ಆಲ್ ದಿ ಬೆಸ್ಟ್ ಹೇಳಿ ಹೋದ. ಆದರೆ ಬುದ್ಧಿವಂತರನ್ನ ಕಳುಹಿಸಿ ಉಳಿದ ದಡ್ಡರಿಗೆ ಕೆಲಸ ಕೊಟ್ಟಿರಬಹುದೇ ಎಂಬ ಚಿಂತೆ ಕಾಡಲು ಶುರುವಾಯ್ತು. ನೋಡಿಕೊಂಡರಾಯ್ತು ಯಾವುದೋ ಒಂದು ಕೆಲಸ ಸಧ್ಯಕ್ಕೆ ಸಿಕ್ಕಿದೆಯಲ್ಲ ಮುಂದೆ ನೋಡಿಕೊಂಡರಾಯ್ತೆಂದು ಕೂತೆ. ಎರಡನೆಯ ಸುತ್ತು. ಒಂದು ವಿಷಯದ ಮೆಲೆ ಎರಡು ನಿಮಿಷದವರೆಗೂ ಮಾತನಾಡಬೇಕಿತ್ತು ಮತ್ತು ನನ್ನ ಬಗ್ಗೆ ವಿವರಿಸಬೇಕಿತ್ತು. ಆತ್ಮವಿಶ್ವಾಸ ದ್ವಿಗುಣಗೊಂಡಿದ್ದರಿಂದ ಬಾಯಿಗೆ ಬಂದದ್ದನ್ನ ಒದರಿದೆ. ಎರಡನೆಯ ಸುತ್ತೂ ಕೂಡ ಆಯ್ಕೆಯಾಗೇ ಹೋಯ್ತು.

ಎರಡನೆಯ ಸುತ್ತಿನಲ್ಲಿ ಮೂವತ್ತೈದು ಜನರನ್ನ ಕಳುಹಿಸಲಾಯ್ತು. ಕೆಲವರು ಹೋಗುತ್ತಿದ್ದಾಗ ಕಣ್ಣಿನಲ್ಲಿ ನೀರು ಹಾಕಿಕೊಂಡು ಹೊರಟರು. ಛೆ ಪಾಪ ಎಂದೆಣಿಸಿತು. ಯಾರು ಯಾರಿಗೆ ಏನೇನು ಅಗತ್ಯವೋ. ಇಲ್ಲಿ ಸ್ಪರ್ಧಿಸಲಾಗದೆ ನನಗಿಂತ ಪ್ರತಿಭಾವಂತರು ಸೋತು ಹೋಗುತ್ತಿರುವರೇನೋ ಗೆದ್ದಿದ್ದವರ ಕಣ್ಣುಗಳಲ್ಲಿ ಸಧ್ಯ ತಾವು ಬಚಾವಾದೆವೆಂಬ ಒಂದು ರೀತಿಯ ನಿರಾಳತೆ ಮತ್ತು ಖುಷಿಯಿತ್ತು. ಸೋತವರಿಗೆ ಬೇರೆಲ್ಲಾದರೂ ಕೆಲಸ ಸಿಗಲಿ ಎಂದು ಮನದಲ್ಲೇ ಹರಸಿ ಮೂರನೆಯ ಸುತ್ತಿಗೆ ಸಿದ್ಧನಾದೆ. ಒಬ್ಬೊಬ್ಬರಾಗಿ ಹೆಸರು ಕರೆಯುವರಂತೆ. ಹೋಗಿ ಮ್ಯಾನೇಜರನೊಂದಿಗೆ ಪ್ರಶ್ನೋತ್ತರ ಸುತ್ತು ಎದುರಿಸಬೇಕಂತೆ. ಮತ್ತೆ ಕಾಯುವ ಪರೀಕ್ಷೆ. ಒಬ್ಬೊಬ್ಬರು ಹೋದರೆ ಅರ್ಧರ್ಧ ಘಂಟೆ. ಅಂತೂ ನನ್ನ ಸರದಿ ಬಂತು. ಶರಣ್ ಎಂದದ್ದೇ ದಡಬಡನೆ ಎದ್ದು ಒಳಗೆ ಹೋದೆ.

ಕಂಗ್ರಾಚುಲೇಷನ್ಸ್ ಆಯ್ಕೆಯಾಗಿರುವುದಕ್ಕೆ ಬನ್ನಿ ಕುಳಿತುಕೊಳ್ಳಿ ಅಂತ ಎದುರಿನ ಕುರ್ಚಿಯ ಮೇಲೆ ಕೂರಿಸಿದರು. ನಾನು ಆಯ್ಕೆಯೇ ಆಗಿ ಹೋಗಿದ್ದೇನೆಂದು ಹೆಮ್ಮೆ, ಖುಷಿಯಾಯ್ತು. ನೋಡಿ ನಮ್ಮ ಕಂಪನಿಯಲ್ಲಿ ಶಿಫ್ಟ್ ಗಳು ಇರುತ್ತವೆ, ನೀವು ಅದಕ್ಕೆ ಹೊಂದಿಕೊಳ್ಳಲು ಒಪ್ಪಿಗೆಯಿದೆಯಾ? ಆಯ್ತು ಸರಿ ನನಗೆ ಒಪ್ಪಿಗೆ ಇದೆ ಎಂದೆ. ಒಂಭತ್ತು ಘಂಟೆಗಳು ಮಾತ್ರ ಕೆಲಸ ಇರುತ್ತೆ ಅಂತ ಹೇಳೋಕಾಗಲ್ಲ, ಕೆಲವು ಸಲ ಹನ್ನೆರಡು ಗಂಟೆಗಳ ಕಾಲ ಬೇಕಾದರೂ ಕೆಲಸ ಇರಬಹುದು. ಯಾವ ಸಮಯದಲ್ಲಿ ಕೆಲಸಕ್ಕೆ ಕರೆದರೂ ಬರಬೇಕಾಗುತ್ತೆ. ಕೆಲವು ಸಲ ಶನಿವಾರ ಭಾನುವಾರವೂ ಸಹ ಕೆಲಸ ಮಾಡಬೇಕಾಗುತ್ತೆ. ನೀವು ತಯಾರಿದ್ದೀರಾ ಎಂದರು. ಏನು ಹೇಳಬಹುದೆಂದು ಯೋಚಿಸುತ್ತಲಿದ್ದೆ. ಹಿಂದೆ ನಿಂತು ಮೊದಲ ಸುತ್ತಿನಲ್ಲಿ ಆಯ್ಕೆಯಾಗಲಾರದೇ ಹೋದ ಇಪ್ಪತ್ತೂ ಜನರು ನಾನು ಏನು ಪ್ರತಿಕ್ರಿಯೆ ನೀಡಬಹುದೆಂದು ಕಣ್ಣುಗಳನ್ನು ಇಷ್ಟಿಷ್ಟಗಲ ತೆರೆದು ಕಾಯುತ್ತಾ ನನ್ನನ್ನೇ ನೋಡುತ್ತಿರುವ ಹಾಗೆ ಭಾಸವಾಯ್ತು. ಥಟ್ಟನೆ ಹಿಂದೆ ತಿರುಗಿ ನೋಡಿದೆ ಯಾರೂ ಇರಲಿಲ್ಲ. ಎಚ್ ಆರ್ ಮಾತು ಮುಂದುವರೆಸಿದರು. ನಿಮಗೆ ಎಂಟು ಸಾವಿರ ತಿಂಗಳಿಗೆ ಸಂಬಳ ನಿಗದಿ ಮಾಡಲಾಗಿದೆ. ಮತ್ತು ಆರು ತಿಂಗಳ ಕಂಟ್ರಾಕ್ಟ್ ಮೇಲೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಆರು ತಿಂಗಳಿಗೆ ನಿಮ್ಮನ್ನು ತೆಗೆದುಕೊಳ್ಳುತ್ತಿರುವ ಪ್ರಾಜೆಕ್ಟ್ ಮುಗಿದುಹೋಗಲಿದೆ. ನಂತರ ನಮಗೆ ಇನ್ನಾವುದಾದರೂ ಪ್ರಾಜೆಕ್ಟ್ ಸಿಕ್ಕರೆ ಅಥವಾ ಮತ್ತಾವುದಾದರೂ ಪ್ರಾಜೆಕ್ಟಿನಲ್ಲಿ ಅವಕಾಶವಿದ್ದರೆ ನಿಮ್ಮನ್ನು ತೆಗೆದುಕೊಳ್ಳಲಾಗುವುದು. ನಿಮಗೆ ಈ ಎಲ್ಲಾ ಕಂಡೀಷನ್ನಿಗೆ ಒಪ್ಪಿಗೆ ಇದ್ದರೆ ನಾಳೆ ಬಂದು ಆಫರ್ ಲೆಟರ್ ಸ್ವೀಕರಿಸಿಕೊಂಡು ಹೋಗಬಹುದು ಎಂದರು. ಇಷ್ಟು ದೊಡ್ಡ ಕಂಪನಿಯಲ್ಲಿ ಕೆಲಸ ಗೆದ್ದೇಬಿಟ್ಟೆನೆಂದು ಹೆಮ್ಮೆಹಿಂದ ಬೀಗುತ್ತಿದ್ದವನ ತಲೆಯ ಮೇಲೆ ಮೊಟಕಿ ಕಾಲುಗಳನ್ನು ನೆಲದಿಂದ ಮೂರು ಅಡಿಯಷ್ಟಾದರೂ ಒಳಕ್ಕೆ ಹುಗಿದಹಾಗಾಯ್ತು. ಏನೆಂದು ಉತ್ತರ ಕೊಡುವುದು. ಇವರು ಹೇಳುತ್ತಿರುವುದಕ್ಕೆಲ್ಲಾ ಒಪ್ಪಿಗೆಯೆಂದು ಹೇಳಿಬಿಡಲೇ. ಸುಲಭವಾಗಿ ಕೆಲಸವೂ ಸಿಕ್ಕೇಹೋಗುತ್ತದೆ. ಆದರೆ ಇವರು ಷರತ್ತುಗಳನ್ನು ಹಾಕುತ್ತಿರುವುದನ್ನು ನೋಡಿದರೆ ಕೆಲಸಕ್ಕೆ ತೆಗೆದುಕೊಂಡಹಾಗಿಲ್ಲ ಜೀತಕ್ಕೆ ಕರೆಯುತ್ತಿರುವಹಾಗಿದೆ. ನನಗೆ ಯೋಚಿಸಲು ಸಮಯಾವಕಾಶ ಕೊಡಿ ಎಂದೆ. ಒಂದು ಘಂಟೆ ಯೋಚಿಸಿ ನಿನ್ನ ನಿರ್ಧಾರ ತಿಳಿಸು ಎಂದು ಕಳುಹಿದರು.ನನ್ನ ನಂತರ ಮತ್ತೊಬ್ಬ ಒಳಗೆ ಹೋದ. ಮಗದೊಬ್ಬ ಒಳಗೆ ಹೋದ ಎಲ್ಲರೂ ನಗುನಗುತ್ತಲೇ ಹೊರಬಂದರು. ಒಬ್ಬಳನ್ನು ತಡೆದು ನೀವು ಕಂಟ್ರಾಕ್ಟಿಗೆ ಸಹಿ ಹಾಕಿದಿರೇನೆಂದು ಕೇಳಿದರೆ ಹೌದು ಎಂದಳು. ಸೋತವರೆಲ್ಲರೂ ನನ್ನ ಸುತ್ತ ನಿಂತು ನನ್ನ ಕೆಲಸ ಕಿತ್ತುಕೊಂಡಿದ್ದೀಯ ಸುಮ್ಮನೆ ಒಪ್ಪಿಕೋ ಎನ್ನುತ್ತಲಿದ್ದರು. ಅಪ್ಪ ಅಮ್ಮ ಎಲ್ಲಾದರೆ ಏನೋ, ಹೇಗೂ ಎಲ್ಲಾದರೂ ಕೆಲಸ ಮಾಡಬೇಕಿರುವುದೇ ತಾನೇ ಕಂಪನಿಗಳವರು ಈ ರೀತಿಯ ಷರತ್ತುಗಳನ್ನೂ ಹಾಕಬಾರದೆಂದರೆ ಹೇಗೆ ಎಂದು ಉಪದೇಶ ನೀಡುತ್ತಿದ್ದರು. ಲೋ ಹೊರಗಡೆ ಹೋಗಿ ನೋಡು ಕೆಲಸ ಒಂದು ಕೊಡ್ತೀವಿ ಅಂದರೆ ಏನು ಮಾಡಲೂ ಸಹ ಸಿದ್ಧರಿರುವವರು ಎಷ್ಟು ಜನ ಕ್ಯೂ ನಿಂತಿದ್ದಾರೆ ನೀನು ಒಪ್ಪಿಕೊಳ್ಳದಿದ್ದರೆ ಐ.ಟಿ ಕಂಪನಿಗಳಿಗೆ ಯಾವ ರೀತಿಯ ನಷ್ಟವೂ ಇಲ್ಲ, ನಷ್ಟವೇನಿದ್ದರೂ ನಿನಗೇನೇ, ಸುಮ್ಮನೆ ಒಪ್ಪಿಕೋ ಎಂದು ನನ್ನ ನೆರಳೇ ಹೇಳುತ್ತಿತ್ತು. ಆದರೂ ಆತ ನನ್ನ ಬದುಕನ್ನೇ ಗುತ್ತಿಗೆ ಕೇಳುತ್ತಿರುವವನ ಹಾಗೆ ಕಂಡ. ಅವನಿಗೆ ಬೇಕಾದ ಹಾಗೆ ನಾನು ಯಾಕೆ ಬದುಕಬೇಕೆಂದೆನಿಸಿತು. ಮೂರ್ಖತನವೆಂದು ಗೊತ್ತಿದ್ದರೂ ಐಟಿ ಕಂಪನಿಗಳಿಗೆ ಒಟ್ಟಾರೆಯಾಗಿ ಒಂದು ನಮಸ್ಕಾರ ಹೊಡೆದುಬಿಟ್ಟೆ. ಮುಂದೇನು ಮಾಡುತ್ತೀನೋ ಗೊತ್ತಿಲ್ಲ, ಸಾಲ ಹೇಗೆ ಹೊರುತ್ತೀನೋ ಗೊತ್ತಿಲ್ಲ. ಜೀವನ ಹೇಗೆ ನಡೆಯುವುದೋ ಗೊತ್ತಿಲ್ಲ. ಆದರೆ ಸೋತವರೆಲ್ಲರೂ ಬಂದು ಕೈಕುಲುಕಿ ಧನ್ಯವಾದಗಳು ನಮಗೊಂದು ಅವಕಾಶ ಸಿಕ್ಕಿತು ನಿಮ್ಮಿಂದ ಎಂದು ಮತ್ತೆ ಒಳಹೋಗುತ್ತಿರುವಂತೆನಿಸಿತು. ಹಿಂದಿರುಗದೆ, ನನ್ನ ನಿರ್ಧಾರವನ್ನೂ ಹೇಳದೇ ಕಂಪನಿಗಳಿಗೆ ಬೆನ್ನು ಹಾಕಿದೆ. +ನೀ.ಮ. ಹೇಮಂತ್

No comments:

Post a Comment