ಓದಿ ಓಡಿದವರು!

Friday, 23 March 2012

ನಗುವ ಹೆಂಡತಿ!


ನಗುವಹೆಂಡತಿ


                 ಗುವ ಹೆಂಗಸನ್ನ, ಅಳುವ ಗಂಡಸನ್ನ ನಂಬಬಾರದಂತೆ ಹೌದಾ? ಆದರೆ ನನಗೆ ನನ್ನ ಹೆಂಡತಿಯನ್ನ ನಂಬದೆಯೇ ಬೇರೆ ವಿಧಿಯೇ ಇಲ್ಲ. ನನ್ನ ಹೆಂಡತಿಯನ್ನ ಯಾವ ಸಮಯದಲ್ಲಿ ನೆನೆದರೂ ಕಣ್ಣ ಮುಂದೆ ಬರುವ ಆಕೃತಿಗೆ ಕೇವಲ ಊರಗಲದ ಬಾಯಿ, ಬೆಣಚುಕಲ್ಲುಗಳಂತ ಹಲ್ಲುಗಳು! ಮಾಧ್ಯಮ ಸಂದರ್ಶನದಲ್ಲಿ, ಮದುವೆಯಲ್ಲಿ, ಸೂತಕದ ಮನೆಯಲ್ಲಿ, ಕಾರಿನಲ್ಲಿ, ಭಾಷಣ ಮಾಡುವಾಗ ಎಲ್ಲಿ, ಯಾವಾಗ ಕಂಡರೂ ಹಲ್ಲುಕಿರಿಯುವ ಮುಖ್ಯಮಂತ್ರಿಗಳಿಗೆ ಇಡೀ ರಾಜ್ಯದಲ್ಲಿ ಯಾರಾದರೂ ಸರಿಸಾಟಿಯಿದ್ದಾರೆಂದರೆ, ಅದು ನನ್ನ ಏಕಮಾತ್ರ ಪತ್ನಿ ಖುಷಿ. ಎಲ್ಲ ಮಕ್ಕಳೂ ಅಳುತ್ತಾ ಹುಟ್ಟಿದರೆ ಇವಳು ಹುಟ್ಟುವಾಗ ಒಸಡು ಕಿರಿಯುತ್ತಾ ನಗುತ್ತಲೇ ಹುಟ್ಟಿದ್ದಳಂತೆ ಆ ವಿಸ್ಮಯಕ್ಕೆ ಇವಳ ತೀರ್ಥರೂಪುಗಳು ಖುಷಿ ಎಂದು ನಾಮಕರಣ ಮಾಡಿದರಂತೆ ಎಂಬ ಒಂದು ಅಂತೆ ಕಂತೆ ಕಥೆಯು ಇವಳ ಅಜ್ಜಿಯ ಹಲ್ಲಿಲ್ಲದ ಬಾಯಿಯಲ್ಲಿ ಹಲವು ಬಾರಿ ನಾನು ಕೇಳಿದ್ದುಂಟು. ಇವಳ ನಗುವಿನ ಕಾರಣ ಇವಳ ತೀರ್ಥುರೂಪರನ್ನು ಕೇಳಿದರೆ, ಇವಳು ಶಾಲೆಯಲ್ಲಿದ್ದಾಗೊಮ್ಮೆ ನೈಟ್ರಸ್ ಆಕ್ಸೈಡ್ ಮೂಸಿದ್ದಲ್ಲದೇ, ಸಿಹಿ ಸಿಹಿಯಾಗಿದೆ ಎಂದು ಕುಡಿದುಬಿಟ್ಟಿದ್ದಳೆಂದು ಅದರಿಂದ ಇಂದಿನವರೆಗೂ ಅವಳು ನಗುತ್ತಲೇ ಇರುವಳೆಂದು ಹೇಳಿದ್ದು ಕೂಡ ಒಂದು ನೆನಪು. ನಾನು ಯಾವಾಗಲೂ ಚಿಂತೆಯಲ್ಲಿದ್ದುದನ್ನು ಕಂಡು ಸಮಸ್ಯೆಯೇನೆಂದು ಕೇಳಿದವರಿಗೆ ಹಿಂಜರಿಯುತ್ತಲೇ ನನ್ನ ಹೆಂಡತಿ ಯಾವಾಗಲೂ ನಗುವಳು ಎಂದು ಹೇಳಿದರೆ, ಕೇಳಿದವರೆಲ್ಲರೂ ನನ್ನ ಮೇಲೇ ಗೂಬೆ ಕೂರಿಸಿ, ಇದು ನನ್ನ ಏಳೇಳು ಜನುಮದ ಸುಕೃತಫಲ, ತಮ್ಮ ತಮ್ಮ ಹೆಂಡತೀರು ಅಪರೂಪಕೊಮ್ಮೆ ಕಿಸಕ್ಕೆಂದ ಶಬ್ಧ ಕೇಳಿದೊಡನೆ, ಆಹಾ ಇದೇ ಶುಭದಿನ ಎಂದು ತಿಳಿದು ರಮಿಸಲು ಹತ್ತಿರ ಹೋದರೆ, ಅದು ಸೀನಿದ ಸದ್ದೆಂದು ಸಾಕ್ಷಾತ್ಕಾರವಾಗಿ ಪೆಚ್ಚು ಮೋರೆಯಲ್ಲಿ ಹಿಂತಿರುಗುವರೆಂದು, ತಮ್ಮ ಹೆಂಡತೀರು ಮದುವೆ ಫೋಟೋದಲ್ಲಷ್ಟೇ ಸದಾ ನಗುವರೆಂದು ಮತ್ತೆ ನಗುವಿನ ಝಲಕ್ ಕಂಡು ಯಾವುದೋ ಕಾಲವಾಯ್ತೆಂದು ಸದಾ ಕಾಲ ಒಂದಲ್ಲಾ ಒಂದು ಕಾರಣಕ್ಕೆ ಮುಖ ಇಷ್ಟಗಲ ಮಾಡಿಕೊಂಡು, ಮೂತಿ ಮುರಿಯುತ್ತಿರುವರೆಂದು ಹೇಳುತ್ತಾ ಬಾಣಲೆ ತಲೆಯ ಮೇಲಿನ ಬೆವರೊರೆಸಿಕೊಂಡಾಗ ಮಾತ್ರ ಹೌದಪ್ಪಾ ಪಾಪ ತುಂಬಾ ಬೆಂದಿದ್ದಾರೆ ಸಂಸಾರದಲ್ಲಿ ಎಂದು ನನಗನಿಸದೇ ಇರಲಿಲ್ಲ, ಮತ್ತು ಹಲ್ಲಿಲ್ಲದವನ ಕಡಲೆ, ಕಡಲೆಯಿಲ್ಲದವನ ಹಲ್ಲಿನ ಗಾದೆ ನೆನಪಾಗದಿರಲಿಲ್ಲ. ಹೆಂಡತೀರು ನಗಬೇಕು ಸ್ವಾಮಿ ಆಗಲೇ ಸಂಸಾರ ಲವಲವಿಕೆಯಿಂದಿರುವುದು ಎಂದು ಯಾರೋ ಟಿವಿ ಯಲ್ಲಿ ಹೇಳುತ್ತಿದ್ದಾತನಿಗೆ ನನ್ನ ಹೆಂಡತಿಯಂತ ಹೆಂಡತಿ ಸಿಕ್ಕಬೇಕಿತ್ತು, ಆತನ ಹೆಂಡತಿ ನಕ್ಕಿದ್ದೇ ಕಂಡಿರುವುದಿಲ್ಲ ಬಡಪಾಯಿ ಅದಕ್ಕೆ ಕೇಳಿಕೊಳ್ಳುತ್ತಿದ್ದಾನೆಂದುಕೊಂಡು ಸುಮ್ಮನಾದೆ. ನನ್ನ ಹೆಂಡತಿಯ ನಗುವಿನಿಂದ ನಾನು ಇಷ್ಟು ಬಸವಳಿದಿದ್ದೇಕೆಂದು ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತೆ. ಅವಳಿಗೆ ಅಷ್ಟು ನಗುವುದಕ್ಕೆ ಚೈತನ್ಯವಾದರೂ ಎಲ್ಲಿಂದ ಬರುವುದೋ ಒಮ್ಮೆಯೂ ಅರ್ಥವಾಗಲಿಲ್ಲ. ಬೂಸ್ಟ್ ಇಸ್ ದ ಸೀಕ್ರೆಟ್ ಆಫ್ ಸಚಿನ್ ಸೆಹವಾಗ್ಸ್ ಎನರ್ಜಿ ಆದರೆ, ವಾಟ್ ಇಸ್ ದ ಸೀಕ್ರೆಟ್ ಆಫ್ ಮೈ ಹೆಂಡತೀಸ್ ಸ್ಮೈಲಿಂಗ್ ಎನರ್ಜಿ? ಏನೇ ಆದರೂ ಮನ:ಪೂರ್ವಕವಾಗಿ ನಗುತ್ತಾಳಪ್ಪಾ, ಅದಂತೂ ನಿಜ. ಒಂದು ದಿನಕ್ಕೂ ನಾಟಕೀಯ, ಅಸ್ವಾಭಾವಿಕ ನಗೆಗೆ ನಾನು ಸಾಕ್ಷಿಯಾಗಲೇ ಇಲ್ಲ.

            ತಾಳಿ ಕಟ್ಟುವಾಗ ತಲೆ ಬಗ್ಗಿಸಿಕೊಂಡು ಕಣ್ಣು ಹೊಡೆದು ನನ್ನ ಕಡೆಗೆ ಒಂದು ಮುಗುಳ್ನಗೆ ಬೀರಿದ್ದಳು. ಆಹಾ ಎಷ್ಟು ಚೆಂದ ನಗ್ತಾಳಪ್ಪಾ ನನ್ನ ಮುದ್ದು ಹೆಂಡತಿ ನಾನದೇ ಪುಣ್ಯ ಎಂದುಕೊಂಡಿದ್ದೆ. ಆರತಕ್ಷತೆಯಲ್ಲಿ ತೆಗೆದ ಹಲವು ಫೋಟೋ ಗಳು ಬ್ಲೇಚ್ ಆಗಿ ಹಾಳಾದವು ಫೋಟೋಗ್ರಾಫರನನ್ನು ಎಗ್ಗಾ ಮುಗ್ಗಾ ಬಯ್ಯಲು ಆತ ಬ್ಲೀಚ್ ಆಗಲು ಕಾರಣ ನನ್ನ ಹೆಂಡತಿಯ ಹಲ್ಲುಗಳು ಅದನ್ನು ಮುಚ್ಚಿದ್ದಿದ್ದರೆ ಫೋಟೋಗಳು ಸರಿಯಾದ ಬೆಳಕಿತ್ತು, ಕೊಟ್ಟ ಕೊಂಚ ಬೆಳಕೇ ಅವಳ ಹಲ್ಲುಗಳಿಂದ ಆ ರೀತಿ ಪ್ರತಿಫಲಿಸಿ ಮುಖಗಳು ಹಾಳಾಗಿದ್ದವೆಂದು ಹೇಳಲು ಬೇರೆ ದಾರಿ ಕಾಣದೇ ದುಡ್ಡು ಕೊಟ್ಟಿದ್ದಾಯ್ತು. ಅವಳ ನಗುವಿಗೆ ಮಾರು ಹೋಗಿ ಮದುವೆಯಾಗಿದ್ದ ನಾನು ಪ್ರಥಮ ರಾತ್ರಿಗೆ ಪಟ್ಟ ಪೇಚಾಟ ನನಗೆ ಮಾತ್ರ ಗೊತ್ತಿರುವುದು. ರಟ್ಟೆ ಮುಟ್ಟಿದರೆ ಒಳಗೊಳಗೇ ನಗುತ್ತಿದ್ದಳು, ಕೆನ್ನೆ ಮುಟ್ಟಿದರೆ ಕಣ್ಣಲ್ಲೇ ನಗುತ್ತಿದ್ದಳು, ತುಟಗೆ ಮುತ್ತಿಡಲು ಅದೆಷ್ಟು ಪ್ರಯತ್ನಿಸಿದರೂ ಮೀಸೆ ಚುಚ್ಚುತ್ತಿದೆ ಎಂದು ನಾಚುತ್ತಾ ನುಣುಚಿಕೊಂಡು ನಗುತ್ತಿದ್ದಳು, ಸೊಂಟಕ್ಕೆ ಕೈಹಚ್ಚಿದರೆ ನುಲಿನುಲಿದು ಕಿಲಕಿಲ ಸದ್ದು ಮಾಡುತ್ತಿದ್ದಳು, ಶು ಶು ಹೊರಗೇ ಕೇಳ್ಸುತ್ತೇ ಎಂದರೆ ಕಚಗುಳಿ ಆಗುತ್ತೆ ಎಂದು ಮತ್ತೆ ನಗುತ್ತಲೇ ಇದ್ದಳು. ಅಂತೂ ಉರುಳಾಡುವಷ್ಟರಲ್ಲಿ ಲೌಡ್ ಸ್ಪೀಕರಿನಲ್ಲಿ ನಕ್ಕು ಅಂತೂ ಮಾರನೆಯ ದಿನ ಮನೆಮಂದಿಯೆಲ್ಲಾ ನನ್ನ ನೋಡಿ ನೋಡಿ ಮುಸಿ ಮುಸಿ ನಗುವಂತೆ ಮಾಡಿದ್ದಳು.

          ನಾಲ್ಕೈದು ದಿನಗಳಿಂದ ಎಂಥಾ ಬಿಸಿ ಬಿಸಿ ಸಮಯದಲ್ಲೂ ಅವಳು ತಣ್ಣಗೆ ನಗುತ್ತಿದ್ದುದನ್ನು ಕಂಡೂ ಕಂಡೂ ಒಳಗೊಳಗೇ ಒಂದು ರೀತಿಯ ಕೋಪ ಹುಟ್ಟುತ್ತಿದ್ದಾಗಲೇ ಅವಳ ಅಜ್ಜಿ ಮೆಟ್ಟಿಲಿಳಿಯುವಾಗ ಬಿದ್ದು ಕಾಲು ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಮಾಡುವವರೆಗೂ ಸುಮ್ಮನಿದ್ದ ಅಜ್ಜಿ, ಔಷಧಿ ಬರೆದುಕೊಡುತ್ತಾ, ಜೆಲ್ ಬರೆದುಕೊಡುತ್ತೇನೆ, ಕ್ರಮೇಣ ನೋವು ಕಡಿಮೆ ಆಗುತ್ತೆ, ಆದಷ್ಟೂ ನಡೆದಾಡಿ, ಎನ್ನುತ್ತಿರಲು ಬಾಯಿಗೆ ಕೈ ಅಡ್ಡ ಹಿಡುದು ನಗುತ್ತಿದ್ದುದನ್ನು ನೋಡಿ ನಾನೂ, ವೈದ್ಯರೂ ಮುಖ ಮುಖ ನೋಡಿಕೊಂಡೆವು. ಅಜ್ಜಿ ಮನೆಗೆ ವಾಪಾಸಾಗುತ್ತಿದ್ದಾಗಲೂ ನಗುತ್ತಲೇ ಇತ್ತು. ನನಗಂತೂ ಈ ನಗುವುದೆಲ್ಲೋ ಪಿತ್ರಾರ್ಜಿತವಾಗಿ ಬಂದ ರೋಗವಿರಬಹುದೋ ಏನೋ ಎಂದು ಅನುಮಾನವಾಗಹತ್ತಿತ್ತು. ಮನೆಗೆ ಮರಳಿ ಯಾಕೆ ನಗುತ್ತಿದ್ದಾರೆಂದು ಕೇಳಲು, ಅವ ಜೆಲ್ ಯಾಕ್ ಕೊಡ್ತಾನ್ ಮಾರಾಯ, ನಡಿಯುಕಾತ್ತ ನನಗೆ, ಗಾಯ ಸೋಲ್ಪ ಗುಣಾದ್ರೆ ಸಾಕ್ ಮಾರಾಯ ನಡೀತೆ ಎಂದು ಹೇಳಿದ್ದು ಕಂಡು, ಅದಕ್ಕೇ ಮೂಳೆ ನೋವಿಗೆ ಜೆಲ್ ಕೊಡ್ತೀನಿ ಅಂದಿದ್ದು ಅವರು ಎಂದು ಹೇಳಿದ್ದೇ ಇನ್ನೂ ಜೋರಾಗಿ ನಗೆಯಾಡಲು ಶುರುಮಾಡಿತು ಅಜ್ಜಿ. ಸರಿಹೋಯ್ತು. ನೂಲಿನಂತೆ ಚೂಡಿದಾರ, ಅಜ್ಜಿಯಂತೆ ಮೊಮ್ಮಗಳು ಎಂದುಕೊಳ್ಳುತ್ತಾ ಏನಾಯ್ತೀಗ ಎಂದು ಕೇಳಿದ್ದಕ್ಕೆ, ತಮ್ಮ ಕಡೆ ಜೆಲ್ ಎಂದರೆ ಊರುಗೋಲೆಂದು, ಇವ ಜೆಲ್ ಬರ್ಕೊಡ್ತಾನೆಂದದ್ದಕ್ಕೆ ಜೆಲ್ ಹಿಡಿದು ನಡೆಯುವುದನ್ನು ನೆನೆದು ನಗೆ ಬಂತೆಂದು ಹೇಳಿದ್ದಕ್ಕೆ ನನಗೂ ನಗೆ ಬರದಿರಲಿಲ್ಲ. ಹನಿಮೂನು. ಹನಿಮೂನು ಹೋಗಿ ನಗೆಮೂನಾಗಿತ್ತು. ಅವಳು ನಗುವುದು, ನಾನು ನಗಿಸುವುದು. ನಾನು ಏನೇ ಮಾಡಿದರೂ ನಗುತ್ತಿದ್ದಳು. ನನ್ನ ಮೈಯ ಯಾವ ಭಾಗ ಕಂಡರೂ ನಗುತ್ತಿದ್ದಳು. ಕನ್ನಡಿಯ ಮುಂದೆ ನಿಂತರೆ ನನಗೆ ನಾನೇ ಕಪಿ ಕಂಡಂತೆ ಭಾಸವಾಗುತ್ತಿತ್ತು. ಆ ಮರ ನೋಡು ಎಷ್ಟು ಹೂವುಗಳು ತುಂಬಿದೆ ಎಂದರೆ, ಹ ಹ ಹ ಅಲ್ವಾ ನನಗಂತೂ ತುಂಬಾನೆ ಇಷ್ಟವಾಯ್ತಪ್ಪ ಎನ್ನುತ್ತಿದ್ದಳು. ಈ ಬಡತನ ಎಲ್ಲಿ ಹೋದರೂ ತಪ್ಪೋದಿಲ್ಲ ನೋಡು, ಎಂಥಾ ಬಡತನ ಆದ್ರೂ ಹಾಕೋಕೆ ಬಟ್ಟೆ, ತಿನ್ನೋಕೆ ಊಟ ಇದ್ದಿದ್ರೆ ಸಾಕಿತ್ತು ಎಂದು ಚಿಂದಿ ಬಟ್ಟೆಯಲ್ಲಿದ್ದ ಸಂಸಾರವನ್ನು ತೋರಿಸಿದರೆ, ನಮಗೆ ಅವರು ಬಡವರ ಹಾಗೆ ಕಾಣ್ತಾರೆ, ನಾವು ಇನ್ನೊಬ್ಬರಿಗೆ ಬಡವರ ಹಾಗೆ ಕಾಣ್ತೀವೇನೋ ಅಲ್ವಾ ಹ ಹ ಹ.. ಎಂದು ಮತ್ತೆ ಹಲ್ಲು ಝಳಪಿಸಿದಳು. ಇವಳು ನನ್ನ ಮಾತನ್ನ ಉಡಾಫೆ ಮಾಡ್ತಿದ್ದಳೋ ಇಲ್ಲ ವೇದಾಂತ ಹೇಳ್ತಿದ್ದಳೋ ಎಂದು ಅರ್ಥವಾಗದೆ ಒಂದು ಕೃತಕ ನಗೆ ಬೀರಿ ಫುಲ್ ಸ್ಟಾಪ್ ಹಾಕ್ತಿದ್ದೆ.

          ಮನೆಗೆ ಮರಳಿ ಕೆಲವು ದಿನಗಳಲ್ಲೇ ಅಮ್ಮನ ದೂರುಗಳು ಕ್ರಮೇಣ ಶುರುವಾದವು. ಏನೋ ಯಾವಾಗಲೂ ಚೆಲ್ಲು ಚೆಲ್ಲಾಗಿ ಆಡ್ತಾಳೆ, ಗಂಡನಾಗಿ ಸ್ವಲ್ಪ ನೀನು ಸುಧಾರಿಸಬೇಕು ಮೆತ್ತಗಿದ್ರೆ ಆಗಲ್ಲ ಪುಟ್ಟ, ನೋಡಿದ ಜನ ಏನನ್ನಲ್ಲಾ ಹೇಳು, ಶುರುನಲ್ಲೇ ಸ್ವಲ್ಪ ಬಂದೋಬಸ್ತ್ ಮಾಡು ಅವಳನ್ನ ಇಲ್ಲಾ ಅಂದ್ರೆ ಮುಂದೆ ಮುಂದೆ ತುಂಬಾ ಕಷ್ಟವಾಗುತ್ತೆ ಹೇಳಿದೀನಿ. ಡಾಂ ಡೂಂ ಡಸ್ ಪುಸ್ ಕೊಯ್ ಕೊಟಾರ್ ಎಂದು ಇನ್ನೂ ಏನೇನೋ ಬುದ್ದಿವಾದಗಳು ಹೇಳಿ ಅಮ್ಮ ಏನೋ ಆರಾಮವಾಗಿ ಹೋಗಿ ನಿದ್ರೆ ಮಾಡಿದರು. ನಾನೂ ಅಮ್ಮನ ಮಾತುಗಳು ಅರ್ಧಂಬರ್ಧ ಕಿವಿಗೆ ಹಾಕಿಕೊಂಡು ಟಿವಿ ಆಫ್ ಮಾಡಿ ಅದೇ ತಾನೇ ಹಾಲಿನ ಲೋಟವಿಡಿದುಕೊಂಡು ಗಟಗಟನೆ ಕುಡಿದು ತನ್ನ ತೇಗಿಗೆ ತಾನೇ ನಕ್ಕು ತುಟಿಗಳಿಗೆ ವಾಸಲೀನ್ ಬಳಿದುಕೊಳ್ಳುತ್ತಿದ್ದ ಅವಳನ್ನು ಕಳ್ಳನೋಟದಲ್ಲಿ ನೋಡುತ್ತಲೇ ಮುಖ ಗಂಟು ಹಾಕಿಕೊಳ್ಳಲು ಪ್ರಯತ್ನಿಸುವಷ್ಟರಲ್ಲಿ ಬಂದು ನನ್ನ ಬಾಹುಗಳನ್ನು ದಿಂಬು ಮಾಡಿಕೊಳ್ಳುತ್ತಿದ್ದಂತೆ ಗಂಟುಗಳೆಲ್ಲಾ ಬಿಚ್ಚಿಹೋದವು. ಒಂದು ದಿನ ಪರ್ಸ್ ಕಳೆದುಹೋಯ್ತು ಕಣೇ ಎಂದು ಚಿಂತೆಯಲ್ಲಿದ್ದರೆ, ಹ ಹ ಹ ಸ್ವಲ್ಪ ಜಾಗರೂಕರಾಗಿರೋಕೆ ಆಗಲ್ವ, ಏನ್ ಬೇಜವಾಬ್ದಾರಿನಪ್ಪ, ಪರ್ಸ್ ನ ಕಳ್ಕೊಂಡವರು ನಾಳೆ ನನ್ನ ಕಳ್ಕೊಳ್ಳಲ್ಲ ಅಂತ ಏನ್ ಗ್ಯಾರಂಟಿ ಹ ಹ ಹ ಹ ಹ.. ನನಗೆ ನಿಜವಾಗಲೂ ನಗು ಬರಲಿಲ್ಲ. ಅಂದು ಕೇಳಿಯೇ ಕೇಳಿದೆ, ಹೇಯ್ ನೀನ್ಯಾಕೇ ಯಾವಾಗಲೂ ನಗ್ತಿರ್ತೀಯಾ ಎಂದು ಸ್ವಲ್ಪ ಜೋರಾಗೇ ಕೇಳಿದ್ದೆನೇನೋ. ಅವಳ ಮುಖದಲ್ಲಾದ ಹಠಾತ್ ಬದಲಾವಣೆಯನ್ನ ಕಂಡು ಛೆ ಛೆ ಕಿಲಕಿಲನೆ ನಗುತ್ತಿದ್ದ ಮಗುವನ್ನ ಚಿವುಟಿಬಿಟ್ಟೆನೇನೋ ಆ ಪರ್ಸೂ ಬೇಡಾ ಅದರಲ್ಲಿದ್ದ ದುಡ್ಡೂ ಬೇಡ ಇವಳ ನಗುಮುಖವೊಂದೇ ಸಾಕು ಎಂದು ನಿಜವಾಗಲೂ ಅನ್ನಿಸಿತು. ಮುದುಡಿದ ಅವಳ ತುಟಿಗಳಿಗೆ ಮೀಸೆಯಿಂದ ಕಚಗುಳಿಯಿಟ್ಟೆ, ನಗುವಿನ ಬಾಗಿಲು ತೆರೆಯಿತು. ಸ್ವಲ್ಪ ದಿನ ಅವಳ ನಗುವಿನ ತಂಟೆಗೆ ಹೋಗಲೇ ಇಲ್ಲ. ಫೋನಲ್ಲಿ ಅವಳು ಅವಳ ಸ್ನೇಹಿತರ ಜೊತೆ ಮಾತನಾಡುತ್ತಾ ಸಿಗ್ನಲ್ ಸಿಗುವುದಿಲ್ಲೆಂದು ಮನೆಯ ಹೊರಗಿನ ಪೋರ್ಟಿಕೋದಲ್ಲ್ ನಿಂತು ಅಕ್ಕ ಪಕ್ಕದ ಮೂರು ಮೂರು ಮಹಡಿಯ ಪ್ರತಿಯೊಂದು ಮನೆಯ ಪ್ರತಿಯೊಬ್ಬರಿಗೂ ಕೇಳುವಂತೆ ನಗುತ್ತಿದ್ದರಿಂದ ನನ್ನ ಕಿವಿ ಆಗಾಗ ಅದು ಇದು ವಿಷಯ ಬೀಳಲು ಶುರುವಾಯ್ತು. ನಿನ್ನ ಹೆಂಡತಿ ಅದ್ಯಾರ್ ಜೊತೇನೋ ಮಾತಾಡ್ತಾ ಹೆಂಗ್ ನಗ್ತಿದ್ಳೂ ಅಂತೀಯಾ, ಏನ್ ವಿಷಯ ಇರುತ್ತೆ ಅವಳಿಗೆ ಹಾಗೆ ನಗೋದಕ್ಕೆ, ಹುಡುಗೀರು ಮದುವೆ ಆದಮೇಲೆ ಇಷ್ಟು ಚೆಲ್ಲು ಚೆಲ್ಲಾಗಿ ಆಡಬಾರದಪ್ಪ, ಹೆಣ್ಣಾದವಳಿಗೆ ಸ್ವಲ್ಪ ಗಾಂಭೀರ್ಯ ಇರ್ಬೇಕು, ಗಂಡ ಸರಿ ಇರಬೇಕು, ನಾವುಗಳು ನಮ್ಮ ಗಂಡಂದಿರು ಕಣ್ಣು ಬಿಟ್ಟರೆ ಅಡುಗೆ ಮನೆ ಸೇರ್ಕೊತಿದ್ವಿ ಇವಳು ನೋಡು, ಮನೆಯಲ್ಲಿ ಅವಳದ್ದೇ ಅಂತೆ ರೀ ರಾಜ್ಯಭಾರ, ಪಾಪ ಗಂಡಾನೇ ಎಲ್ಲಾ ಕೆಲಸಗಳನ್ನ ಮಾಡಿ ಕೆಲಸಕ್ಕೂ ಹೋಗ್ತಾನಂತೇ, ಅವಳು ಆರಾಮವಾಗಿ ಹತ್ತು ಗಂಟೆಗೆ ಎದ್ದೇಳೋದಂತೆ, ಅಂತೂ ಒಳ್ಳೇ ಹೆಂಡತಿ ಆಗೋಕೆ ನಾಲಾಯಕ್ಕಪ್ಪಾ, ಈಗಿನ ಹೆಣ್ಣು ಮಕ್ಕಳು ಯಾಕ್ ಹೇಳ್ತೀರಾ ನನ್ನ ಮಗಳು ಹಿಂಗೆನಾದ್ರು ಮಾಡಿದ್ರೆ ಕಾಲು ಮುರೀತಿದ್ದೆ…… ಸಹಸ್ರ ನಾಮವೇ ಸ್ತುತಿಸುತ್ತಿದ್ದರು. ಅಂತೂ ನನ್ನ ಹೆಂಡತಿ ಹೆಂಗೋ ಫೇಮಸ್ಸಂತೂ ಆಗ್ತಿದ್ದಳಪ್ಪ. ಪಾಪ ಎಲ್ಲಾ ಕೆಲಸಗಳನ್ನ ಮಾಡ್ತಿದ್ಳು. ಅಮ್ಮನಿಗೆ ಎಲ್ಲ ರೀತಿಯಲ್ಲಿ ನೆರವಾಗ್ತಿದ್ಳು ಅದಕ್ಕೇ, ಏನೇ ದೂರುಗಳಿದ್ರು ಅತ್ತೆ ಸೊಸೆ ಮೆಗಾ ಸೀರಿಯಲ್ ರೀತಿಯ ಯಾವುದೇ ತೊಂದರೆಗಳನ್ನ ಕೊಡ್ತಿರಲಿಲ್ಲ ನೇರವಾಗಿ. ತುತ್ತಾ…? ಮುತ್ತಾ…? ಗೊತ್ತಾ…? ಅಂತ ಹಾಡು ಹೇಳುವ ಪ್ರಮೇಯ ಸಹ ಎಂದೂ ಬರಲಿಲ್ಲ ಸಧ್ಯ. ಇವಳು ನಿದ್ರಿಸುತ್ತಿದ್ದಾಗಲೂ ಹಲ್ಲುಕಿರಿದೇ ಇರ್ತಿದ್ದಳು, ಕನಸಿನಲ್ಲಿ ಅದಾವ ಕಾಮೆಡಿ ಸೀನ್ಸ್ ನೋಡ್ತಿದ್ಲೋ ನನಗೆ ಎಂದೂ ಅರ್ಥವಾಗಲಿಲ್ಲ. ಎಷ್ಟು ಕೆಲಸಗಳಿದ್ರೂ, ಏನೇ ತೊಂದರೆಗಳಿದ್ರೂ ಒಟ್ಟಿನಲ್ಲಿ ಅವಳ ನಗೆಯೊಂದು ಸಾಕಿತ್ತು ಎಲ್ಲ ಮರೆಸುತ್ತಿತ್ತು. ಯಾವಾಗ ಮನೆಗೆ ಬಂದರೂ ಕಿಲಕಿಲನೆ ಬರಮಾಡಿಕೊಳ್ಳುತ್ತಿದ್ದಳು. ಯಾವ ಗಂಭೀರ ಕಷ್ಟಗಳನ್ನೇ ಹಂಚಿಕೊಳ್ಳುತ್ತಿದ್ದರೂ ಹಾಸ್ಯ ಪ್ರಹಸನವೆಂಬಂತೆ ಸಮಸ್ಯೆ ಅಷ್ಟೇನಾ ಎಂದೆನೆಸಿಬಿಡುತ್ತಿದ್ದಳು. ಇವಳ ಚೈತನ್ಯ ಚಿಲುಮೆಯಂತಹ ನಗುವಿಗೆ ನಿಜವಾಗಲೂ ಕ್ರಮೇಣ ಮಾರುಹೋಗುತ್ತಾ ಸಾಗುತ್ತಿದ್ದೆ.

          ಗಾಂಧೀಬಜಾರ್ ಬಳಿ ನಿನ್ನ ಹೆಂಡತಿಯನ್ನು ಕಂಡೆ, ಯಾರೋ ಇದ್ದನಪ್ಪ ಜೊತೆಗೆ ಎಂದು ಮೂರು ನಾಲ್ಕು ಬಾರಿ ವಿವಿಧರು ಹೇಳಿದಾಗ ಎಲ್ಲಿ ಹೋಗಿದ್ದೆ ಎಂದು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಳು. ನಗುವವರು ತುಂಬಾ ವಿಷಯಗಳನ್ನ ಮುಚ್ಚಿಡ್ತಾರೆ ಕಣೋ ಹುಶಾರು ಎಂದು ಅವರಿವರು ಎಚ್ಚರಿಸುತ್ತಿದ್ದುದು ತಲೆಯಲ್ಲಿ ಬೇರೆ ಕುಳಿತುಕೊಂಡು ಅವಳನ್ನು ಒಂದೆರಡು ಬಾರಿ ಹಿಂಬಾಲಿಸಿದೆ ಸಹ. ಮದುವೆಯಾಗಿ ನಾಲ್ಕು ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ ನಿಜ ಆದರೆ ಅದರ ಕೊರತೆ ಎಂದೂ ಕಾಡಿರಲಿಲ್ಲ ಈ ಮಗುವಿನಿಂದಾಗಿ. ಆದರೆ ಇವಳು ತಪ್ಪು ದಾರಿ ಏನಾದರು ಹಿಡಿದಿರಬಹುದೇ? ನನ್ನ ಆಫೀಸಿನ ವೇಳೆಯಲ್ಲಿ ಇವಳು ಗಾಂಧಿಬಜಾರ್ ಹೋಗಿ ಅಲ್ಲಿಂದ ಕೋರಮಂಗಲದವರೆಗೂ ಹೋಗುತ್ತಿದ್ದು ನಿಜವಾಗಿತ್ತು. ಜೊತೆಯಲ್ಲಿದ್ದವನಾರಿರಬಹುದು. ಇವಳ್ಯಾಕೆ ಈ ವಿಷಯ ನನ್ನಿಂದ ಮುಚ್ಚಿಟ್ಟಳು. ಏನಿರಬಹುದು ಇವರ ಮಧ್ಯೆ. ಇವಳನ್ನು ನಿಜವಾಗಲೂ ನಂಬಬಹುದೇ? ನಗುನಗುತ್ತಲೇ ನನ್ನ ಬೆನ್ನ ಹಿಂದೆಯೇ ಚೂರಿ ಹಾಕಿದಳಿವಳು. ಈ ವಿಷಯಗಳನ್ನ ಮರೆಮಾಚಲೆಂದೇ ಇವಳು ನಗುವನ್ನು ಬಳಸುತ್ತಿದ್ದಳೇನೋ? ಅಸಹ್ಯ ಹುಟ್ಟಿಸಿತು ಇವಳ ನಗು. ಅವಳ ಮುಖ ಸಹ ಹಲವು ದಿನಗಳು ನೋಡಲಾಗಲಿಲ್ಲ. ಇವಳು ಅಡುಗೆ ಹಾಲ್ ನಲ್ಲಿ ಕೂತು ಬೀನ್ ನನ್ನೋ ಕಾರ್ಟೂನ್ ನೋಡಿಯೋ ನಗುತ್ತಿದ್ದರೆ ರೂಮಿನಲ್ಲಿದ್ದ ನನಗೆ ಮೈ ಹೊತ್ತಿ ಉರಿಯುತ್ತಿತ್ತು. ನನ್ನನ್ನೂ ಕಾರ್ಟೂನ್ ಎಂದು ತಿಳಿದುಕೊಂಡಿದ್ದಾಳೆನಿಸುತ್ತೆ ಎಂದು ಒಳಗೊಳಗೇ ಹೇಳಿಕೊಳ್ಳುತ್ತಿದ್ದೆ. ಅವಳು ಎದ್ದು ಮಲಗಲು ಒಳ ಬರುವ ವೇಳೆಗೆ ಸರಿಯಾಗಿ ಅವಳ ವಿರುದ್ಧ ದಿಕ್ಕಿಗೆ ತಿರುಗಿ ಮಲಗುತ್ತಿದ್ದೆ. ನನ್ನ ಬೆನ್ನೇ ದಿಂಬು ಮಾಡಿ ಮಲಗುತ್ತಿದ್ದಳು. ಎಚ್ಚರವಿದ್ದರೂ ನಿಧಾನವಾಗಿ ಹಾಗೇ ಕೊಸರಾಡಿಕೊಂಡು ಮಲಗುತ್ತಿದ್ದೆ. ನಾನೇನು ಮಾಡಿದ್ದೆ ಇವಳಿಗೆ ನಗುವಿನಲ್ಲೇ ಕೊಂದಳಲ್ಲಾ ಎಂದು ಕೊರಗುತ್ತಿದ್ದೆ. ಒಂದು ದಿನ ಗಾಂಧಿ ಬಜಾರಿನಲ್ಲಿ ರಸ್ತೆಯಲ್ಲಿ ನಿಂತು ನಗೆಯಾಡುತ್ತಿದ್ದಾಗೊಮ್ಮೆ ಎದುರಿಗೇ ಸಿಕ್ಕುಬಿದ್ದಳು. ನಾನೇನೂ ಮಾತನಾಡಲಿಲ್ಲ. ಒಂದು ರೀತಿಯ ಗೆದ್ದ ಮನೋಭಾವದೊಂದಿಗೆ ಅವಳನ್ನೇ ನೋಡಿದೆ. ಕಪಾಳೆಗೆ ಬಿಗಿಯಬೇಕೆನಿಸಿತ್ತು. ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು ಎಂದು ನನ್ನ ಕೈ ಹಿಡಿದು ಪರಿಚಯ ಮಾಡಿಸಿದಳು. ಇವನು ನನ್ನ ಸ್ನೇಹಿತೆ ಲಕ್ಷ್ಮಿ ಇದಾಳಲ್ಲಾ ಅವಳ ಪ್ರೇಮಿ, ಪಾಪ ಲಕ್ಷ್ಮಿಗೆ ಇವಾಗ ಮದುವೆ ಗೊತ್ತಾಗಿದೆ ರೀ ನಾಳೆ ಓಡಿಹೋಗಿ ಮದುವೆ ಆಗ್ತಿದ್ದಾರೆ, ಹ ಹ ಹ ಹ ಹ ಎಂದು ಅದೇ ನಗೆ ನಕ್ಕಳು. ಅಲ್ಲಿ ಒಂದು ಕ್ಷಣವೂ ನಿಲ್ಲಲಾಗಲಿಲ್ಲ. ಕೈ ಕೊಸರಿಕೊಂಡು ಓಡಿ ಹೋದೆ. ಅವಳು ಏನೆಂದುಕೊಂಡಳೋ, ಆತ ಏನೆಂದುಕೊಂಡನೋ ತಿಳಿಯಲಿಲ್ಲ. ನನ್ನ ಮೇಲೇ ಅಸಹ್ಯ ಮೂಡಿತ್ತು. “ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು” “ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು” “ನನ್ನ ಮುದ್ದಿನ ಗಂಡ, ನನ್ನ ಜೀವನ, ನನ್ನ ಪ್ರಾಣ, ಇವರೇ ನಾನು, ನಾನೇ ಇವರು” ಅದೇ ಮಾತುಗಳು ತಲೆಯಲ್ಲಿ ಕುಂತು ಕೊಂದೇಬಿಡುವುದರಲ್ಲಿದ್ದವು. ಎಂಥಾ ಚಪ್ಪರ್ ಕೆಲ್ಸ ಮಾಡ್ಕೊಂಡೆ ನಾನು. ಇನ್ನು ಅವಳಿಗೆ ಮುಖ ತೋರಿಸಬಾರದು ನಾನು. ಅವಳಂತ ಪ್ರೇಮದೇವತೆಗೆ ನಾನು ಮೋಸ ಮಾಡಿದ್ದು. ಅದು ಹೇಗೆ ನಾನು ಅವಳ ಮೇಲೆ ನಂಬಿಕೆ ಕಳೆದುಕೊಂಡೆ. ಮುಖ ಮುಖ ಪರಚಿಕೊಳ್ಳಬೇಕೆನಿಸುತ್ತಿತ್ತು. ನಿಂತರೂ ಕುಂತರೂ ಮುಳ್ಳಿನ ಮೇಲೆ ನಿಂತಹಾಗೆ ಅನಿಸುತ್ತಿತ್ತು. ಮೈ ನರನರಗಳನ್ನ ಹರಿದುಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ. ಮೂರು ದಿನ ಮನೆಗೆ ಹೋಗಲೇ ಇಲ್ಲ. ಎಲ್ಲರೂ ಹೆದರಿ ಸ್ನೇಹಿತನೊಬ್ಬನೊಡಗೂಡಿ ಬಾರಿನಲ್ಲಿ ಕೂತಿದ್ದ ಕೆಂಪು ಕಣ್ಣಿನ ನನ್ನನ್ನು ಎತ್ತಿಕೊಂಡು ಮನೆ ಸೇರಿಸಿದಳು. ಮಾರನೆಯ ದಿನ ಎಚ್ಚರವಾದಾಗ ಕಣ್ಣಿನಲ್ಲಿ ನೀರಿದ್ದರೂ ಮುಗುಳ್ನಗುತ್ತಲೇ ಇದ್ದಳು. ಮುಖ ತೋರಿಸಲಾಗಲಿಲ್ಲ. ಮುಖ ತಿರುಗಿಸಿಕೊಂಡೆ. ಏನಾಯ್ತು ಎಂದಷ್ಟೇ ಕೇಳಿದಳು. ನಾನು ಪಾಪಿಯೆಂದೆ. ಕಣ್ಣೊರೆಸಿಕೊಳ್ಳುತ್ತಾ ಹ ಹ ಹ ಎಂದು ನಕ್ಕಳು. ನಾನೂ ಅಷ್ಟೇ ಎಂದಳು. ಇಲ್ಲ ಕಣೋ ನಾನು ಪಾಪಿ, ನಿನಗೆ ಸರಿಯಾದ ಗಂಡ ನಾನಲ್ಲ ಎಂದೆ. ಎದೆಗವುಚಿಕೊಂಡು ಗೊತ್ತು ಎಂದು ಮತ್ತೆ ನಕ್ಕಳು. ಕಿವಿಯಲ್ಲಿ ಸ್ವರ್ಗವನ್ನೇ ತಂದಿರಿಸಿದಳು. ಘೋರವಾದ ಎದೆ, ತಲೆ ಭಾರ ಒಂದೇ ಕ್ಷಣದಲ್ಲಿ ಇಳಿದುಹೋಯಿತು. ಕಳ್ಳಿಯ ಹಾಗೆ ನಗುತ್ತಲೇ ಇದ್ದಳು. ಅವಳು ನಾಚಿ ನೀರಾದಳೋ, ನಾನು ನಾಚಿ ನೀರಾದೆನೋ ತಿಳಿಯಲಿಲ್ಲ. ಎಲ್ಲವನ್ನೂ ಕಕ್ಕಿದೆ ಇಡೀ ದಿನ, ನನ್ನ ಮನದಲ್ಲಿದ್ದ ಕಟುಕನ ಬಗ್ಗೆ ಒಂದೊಂದು ಸಾಲು ಹೇಳಿದಾಗಲೂ ಅಮ್ಮನನ್ನು ಛೇಡಿಸುವಂತೆ ನಕ್ಕಳು. ಕೊನೆಯಲ್ಲಿ ರೀ ನಾನು ನಿಜವಾಗಲೂ ಓಡೋಗಿದ್ರೆ ಏನ್ ಮಾಡ್ತಿದ್ರೀ ಹ ಹ ಹ ಹ ಹ ಎಂದು ಮತ್ತಷ್ಟು ನಕ್ಕಳು. ಅವಳ ಬಾಯಿ ದಿನೇ ದಿನೇ ಬೆಳೆಯುತ್ತಾ ಎರಡೂ ಕಿವಿಯನ್ನು ಮುಟ್ಟುತ್ತಿವೆಯಾ ಎಂಬ ಅನುಮಾನ ಪ್ರಥಮ ಬಾರಿಗೆ ಮೂಡಿತು. ದಿನಗಳೆದಂತೆ ಅವಳ ನಗುವಿನ ಸಾಗದರಲೆಯಂತೆಯೇ ಉಬ್ಬುತ್ತಾ ಹೋಯಿತು ಅವಳ ಹೊಟ್ಟೆ.

          ಆಪರೇಷನ್ ಥಿಯೇಟರ್ ಒಳಗೂ ನನ್ನನ್ನ ಬಿಡದೇ ಎಳೆದುಕೊಂಡು ಹೋದಳು. ಹಯ್ಯೋ ಆಗ್ತಿಲ್ಲ.. ಅಮ್ಮಾ… ಹ ಹ ಹ ಹ ಆ….. ಎಂದು ಅವಳು ಕೂಗುತ್ತಿದ್ದುದು ನೋಡಲಿಕ್ಕಾಗುತ್ತಿರಲಿಲ್ಲ, ನಾರ್ಮಲ್ ಆಗ್ಲಿ ಎಂದು ಲೇಡೀ ಡಾಕ್ಟರರು ಬೇರೆ ಇವಳು ನೋಡಿದರೇ ಕಣ್ಣಿನಲ್ಲಿ ನೀರು ಸೋರಿಸಿಕೊಂಡೂ ನಗುತ್ತಿದ್ದಾಳೆ. ಅಂತೂ ಅಳುತ್ತಲೇ ಮಗಳು ಹುಟ್ಟಿದಳು. ಸಧ್ಯ ಖುಷಿ ಭಾಗ ಎರಡು ಜನಿಸಲಿಲ್ವಲ್ಲ ಎಂದು ಮಗಳು ಅಳುತ್ತಿದ್ದರೂ ನಾನು ನಕ್ಕೆ. ನನ್ನ ಮಗಳು ಪ್ರತಿನಿತ್ಯ ಅತ್ತಷ್ಟೂ ಬಾಣಂತಿ ಖುಷಿ ಪಡುತ್ತಿದ್ದಳು. ಅಯ್ಯೋ ನನ್ನ ಬಂಗಾರ ಹೆಂಗೆ ಅಳುತ್ತೆ ನೋಡಪ್ಪಾ ಎಂದು ನಗು ಚೆಲ್ಲುತ್ತಲೇ ಇದ್ದಳು. ದಿನಕ್ಕೊಂದು ಛಂದದಲ್ಲಿ ಮಗಳು ಬೆಳೆಯುತ್ತಾ ಹೋದಳು. ನನಗೆ ಜೀವನದ ಡಿವಿಡಿಯನ್ನ ಯಾರೋ ಪಾಸ್ಟ್ ಫಾರ್ವರ್ಡ್ ಮಾಡ್ತಿದ್ದಾರೇನೋ ಎಂದೆನಿಸುತ್ತಿತ್ತು. ಈಗ ಹುಟ್ಟಿದವಳು ಮಾತು ಕಲಿತಳು, ಸೌಮ್ಯ ಆದಳು, ನರ್ಸರಿ ಸೇರಿದಳು, ಸ್ಕೂಲು ಸೇರಿದಳು, ನನ್ನ ಬೆರಲನ್ನಿಡಿದು ಓಡಾಡುತ್ತಿದ್ದವಳು, ಪೆನ್ಸಿಲ್ ಹಿದಿದಳು ಪುಟ್ಟ ಪುಟ್ಟ ಬಟ್ಟೆ ಸಾಕಾಗದೇ ಹೋಯ್ತು. ಆದರೆ ಎಂಥಾ ಹಾಸ್ಯ ಮಾಡಿದರೂ, ಕಾರ್ಟೂನ್ ಹಾಕಿ ಕೂರಿಸಿದರೂ, ಕಚಗುಳಿ ಇಟ್ಟರೂ, ಹರಸಾಹಸ ಮಾಡಿದರೂ ಚಿಕ್ಕಂದಿನಿಂದ ಒಮ್ಮೆಯಾದರೂ ನನ್ನ ಮಗಳು ನಗುವುದನ್ನ ನಾನು ನೋಡಿದ್ದೇ ನೆನಪಿಲ್ಲ ನನಗೆ. ಏನೇ ನಿನ್ನ ಮಗಳ ನಗುವನ್ನೂ ಕಿತ್ತುಕೊಂಡು ನೀನೇ ನಗ್ತಿದ್ದೀಯಾ ಹೇಗೇ? ಒಂಚೂರಾದ್ರೂ ನಗಿಸೇ ಅದನ್ನ. ಎಂದು ನನ್ನ ನಗುವ ಹೆಂಡತಿಯನ್ನು ಏನೆಲ್ಲಾ ರೀಗಿಸಿದರೂ ಏನು ಮಾಡಿದರೂ ಹೆಸರಿಗೆ ತಕ್ಕಂತೆ ಸೌಮ್ಯವಾಗೇ, ಗಾಂಭೀರ್ಯವಾಗೇ ಇರುತ್ತಿದ್ದಳು. ಅಮ್ಮ ಮಗಳನ್ನ ನೋಡಿ ಕಲಿಯಬೇಕಿತ್ತು. ನನ್ನ ಹೆಂಡತಿ ಬಾಯಿ ಕಳೆದು ಚಿಕ್ಕ ಚಿಕ್ಕ ವಿಷಯಗಳಿಗೆ ಹಾ ಹಾ ಹಾ ಹಾ ಎಂದು ನಕ್ಕಾಗಲೆಲ್ಲಾ ಯಾವುದೋ ಕಾಡು ಕಪಿಯನ್ನು ನೋಡಿದಹಾಗೆ ಬೆರಗುಗಣ್ಣುಗಳಿಂದ ಮಗಳು ದಿಟ್ಟಿಸುತ್ತಿದ್ದಳು. ನಾನೂ ನನ್ನ ಮಗಳೂ ಒಂದು ಪಾರ್ಟಿ, ನನ್ನ ಹೆಂಡತಿಯೊಂದು ಪಾರ್ಟಿ ಯಾವಾಗಲೂ. ಇಬ್ಬರೂ ಸೇರಿ ಛೇಡಿಸುತ್ತಿದ್ದೆವು ಅವಳನ್ನ. ಒಮ್ಮೆ ಹಾಗೇ ಸುಮ್ಮನೆ ಕುಳಿತು ಕಾಲ ಹರಣ ಮಾಡುತ್ತಿದ್ದಾಗ, ಹೆಂಡತಿಯನ್ನು ತೆಕ್ಕೆಯಲ್ಲಿ ಸೇರಿಸಿಕೊಂಡು, ನಿನಗೆ ನಿಜವಾಗಲೂ ಸುಸ್ತಾಗ್ತಿಲ್ವೇನೇ ಇಷ್ಟು ವರ್ಷದಿಂದ ನಗುನಗುತ್ತಲೇ ಇದ್ಯಲ್ಲ ಎಂದು ಕೇಳಿದ್ದಕ್ಕೆ, ಉಸಿರಾಡಿ ಸುಸ್ತಾದಾಗ ನಗು ನಿಲ್ಲಬಹುದೇನೋ ಎಂದಳು. ಥು ಲೋಫರ್ ನಿನ್ನ ಹೋಗಿ ಹೋಗಿ ಕೇಳಿದೆನಲ್ಲಾ ಮುಚ್ಚೇ ಬಾಯಿ ಎಂದೆ ನಕ್ಕಳು. ಅವಳ ಅಂತರಾಳದ ಮಾತುಗಳು ಹೊರಬಿದ್ದವು. ನಾವು ಏನೇ ಮಾಡಿದ್ರೂ ಅದು ನಮ್ಮ ಸಂತೋಷಕ್ಕಾಗಿನೇ ಅಲ್ವಾ ರೀ. ಜಗಳ ಆಡ್ತಾರೆ, ಕೊಲೆ ಮಾಡ್ತಾರೆ, ದುಡ್ಡು ಸಂಪಾದನೆ ಮಾಡ್ತಾರೆ, ಜಾತಿ ಅಂತಾರೆ, ದೇವರು ಅಂತಾರೆ, ದುಖ ಕೊಡ್ತಾರೆ, ಮಕ್ಕಳು ಮಾಡ್ಕೊಂತಾರೆ, ಸಂಸಾರ ಅಂತಾರೆ, ಉಸಿರಾಡ್ತಾರೆ, ಬೆಳಗ್ಗೆ ಎದ್ದೇಳ್ತಾರೆ, ನಿದ್ರೆ ಮಾಡ್ತಾರೆ, ಆಕಾಶ ನೋಡ್ತಾರೆ, ಮುತ್ತು ಕೊಡ್ತಾರೆ, ಸರಸವಾಡ್ತಾರೆ, ಜೀವನ ಮಾಡ್ತಾರೆ, ಸಾಯ್ತಾರೆ ಎಲ್ಲದರ ಹಿಂದೆ ಇರೋ ಕಾರಣಗಳನ್ನ ಹುಡುಕ್ತಾ ಹೋಗಿ ಕೊನೆಗೆ ಮುಟ್ಟೋದೆ ಸಂತೋಷ, ಖುಷಿ… ನಾನೇ ರೀ ಎಂದು ಕಿವಿ ಕಿತ್ತು ಹೋಗುವ ಹಾಗೆ ನಕ್ಕಳು. ಮಾತೇ ಹೊರಡಲಿಲ್ಲ. ಜೀವನ ಸವೆಯುತ್ತಿರುವುದು ಗೊತ್ತೇ ಆಗ್ತಿರಲಿಲ್ಲ ನಮಿಗೆ. ನಮ್ಮ ಸಂಸಾರ ಆನಂದ ಸಾಗರ ಹಾಡು ಆಗಾಗ ನೆನಪಿಗೆ ಬರುತ್ತಲೇ ಇತ್ತು. ಅವಳ ಪ್ರತಿ ಹುಟ್ಟುಹಬ್ಬಕ್ಕೆ ನಡುರಾತ್ರಿ ಎಬ್ಬಿಸಿ “ನಗುತಾ ನಗುತಾ ಬಾಳು ನೀನು ನೂರು ವರುಷ, ಎಂದೂ ಹೀಗೇ ಇರಲಿ ಇರಲಿ ಹರುಷ ಹರುಷ…” ಇದೇ ಹಾಡು ಹಾಡಿ ಮಲಗಿಸುತ್ತಲಿದ್ದೆ, ಅಕ್ಷರಶಹ ಇವಳಿಗೆ ಹೋಲುತ್ತಿತ್ತು ಹಾಡು. ಇನ್ನೂ ಅರ್ಧ ಜೀವನ ಇವಳ ಜೊತೆ ಕಳೆಯೋದಿದೆ. ಅಯ್ಯೋ ಉಳಿದಿರುವ ನಮ್ಮ ಸಿನಿಮಾನಾದರೂ ಸ್ಲೋ ಅಂದರೆ ತುಂಬಾನೇ ಸ್ಲೋ ಆಗಿ ಹೋಗ್ಲಪ್ಪ ಎಂದು ಪ್ರತಿಕ್ಷಣ ಕೇಳಿಕೊಳ್ಳುತ್ತಾ ಜೀವನವನ್ನ ಸವಿಯುತ್ತಿದ್ದೇನೆ. ಹಾ ಹಾ ಹಾ ಹಾ ಹಾ…

ಹಿನ್ನುಡಿ: ನಗುತ್ತಾ, ನಗಿಸುತ್ತಾ ಬದುಕುತ್ತಿರುವ ಪ್ರತಿಯೊಬ್ಬ ಜೀವಿಗಳಿಗೆ ಮಾತ್ರ ಈ ಕಥೆಯನ್ನ ಖುಷಿ ಖುಷಿಯಾಗಿ ಯುಗಾದಿ ಹಬ್ಬದ ಈ ದಿನ ಅರ್ಪಿಸುತ್ತಿದ್ದೇನೆ. ಶುಭವಾಗಲಿ. ನಗುತಾ ನಗುತಾ ಬಾಳಿ ನೀವೂ ನೂರು(೬೦ ಇರಬೇಕು ಅಲ್ವಾ ಈಗಿನ ಮಿತಿ) ವರುಷ… ಯುಗ ಯುಗಾದಿ ಕಳೆದರೂ ಯುಗಾದಿ ಪ್ರತಿ ದಿನ ನಿಮ್ಮ ಮನೆಗೆ ಬರುತ್ತಲೇ ಇರಲಿ. ಹ ಹ ಹ..
ಅಯ್ಯೋ ಹೇಳೋದು ಮರೆತೆ: ಈ ಹೆಂಡತಿ, ಹೆಂಡತಿಯಲ್ಲ ನಾನು ನಾನಲ್ಲ ಮಗಳು ಮಗಳಲ್ಲ ಅಮ್ಮ ಅಮ್ಮನಲ್ಲ. ನಾನು ಖುಷಿ ಅರಸುತ್ತಿರುವ ಪ್ರತಿಯೊಬ್ಬರ ಸಂಕೇತ, ಹೆಂಡತಿ ಪ್ರತಿ ವಿಷಯದಲ್ಲಡಗಿರುವ ಸಂತಸ, ಹರ್ಷ, ಆನಂದದ ಸಂಕೇತ. ಅಮ್ಮ ನಮ್ಮಲ್ಲಿರುವ ಬಿಚ್ಚುತನಕ್ಕೆ ಹಿಡಿತದ, ನಿಯಂತ್ರಣದ(ನಿಯಂತ್ರಿಸುವ ಸಮಾಜದ) ಸಂಕೇತ, ಮಗಳು, ನಮ್ಮ ನಗುವನ್ನು ನಾವೇ ಗಾಂಭೀರ್ಯದಿಂದ ಪರ್ಯಾಲೋಚಿಸುವ, ಪರಾಮರ್ಶಿಸುವ, ವಿಮರ್ಶಿಸುವ ಸಂಕೇತ ಅಷ್ಟೇ.. ಹ ಹ ಹ… ಸಮಾಪ್ತಿ.


                                                                                    -ನೀ. ಮ. ಹೇಮಂತ್ ಕುಮಾರ್

5 comments:

 1. Manassige hithavagide e kathe..ugadhi habbada shubhashyagalu..

  ReplyDelete
  Replies
  1. dhanyavadagalu asakthivahisi odiddakke mathu spandisiddakke.. :-) Shubhavagali..

   Delete
 2. Kathe padige than thane nagutha, odisutha hogutha. Chenngide guru.....

  ReplyDelete
 3. ha ha ha h ah ha ha super shilpa gm
  super sir all the best

  ReplyDelete
 4. nimgenaguva hendti sigli tumba channagide baraha heege barita eri thnaks

  ReplyDelete