ತಾಳ್ಮೆ,
ಕಿವಿ, ಕಣ್ಣು, ಸಾವು!
|
ಮುನ್ನುಡಿ:
ಈ ತಿಕ್ಕಲು ಕಥೆ ಅರ್ಥವಾಗದಿದ್ದಲ್ಲಿ ಇದರಲ್ಲಿ ಯಾವುದೇ ರೀತಿಯ ಅರ್ಥವಿಲ್ಲ. ಈ ಕಥೆಯನ್ನು ಅರ್ಥೈಸಿಕೊಳ್ಳಲು
ಪ್ರಯತ್ನಿಸಿದರೆ ಇದರಲ್ಲಿ ಓದುಗನ ಸಾಮರ್ಥ್ಯಾನುಸಾರ ಅರ್ಥವಡಗಿದೆ! ಶುಭವಾಗಲಿ!
“ನನ್ನ
ಕಣ್ಣುಗಳನ್ನು ಕಿತ್ತುಬಿಡಿ! ನನಗೆ ಪ್ರಪಂಚದ ಏನನ್ನೂ ನೋಡಲು ಇಷ್ಟವಿಲ್ಲ. ಡಾಕ್ಟರೇ, ನಿಮ್ಮಿಂದ ಮಾತ್ರ
ಇದು ಸಾಧ್ಯ. ದಯವಿಟ್ಟು ನನ್ನ ಕಣ್ಣುಗಳನ್ನ ಕಿತ್ತುಹಾಕಿ ನನ್ನನ್ನು ಉಳಿಸಿ!”
ಡಾಕ್ಟರು
ಸಮಾಧಾನ ಮಾಡ್ಕೊಳ್ಳಿ ನೀವು ತುಂಬಾ ಗೊಂದಲದಲ್ಲಿದ್ದೀರೆಂದು ಕಾಣುತ್ತದೆ, ಸಂಯಮ ಕಳೆದುಕೊಳ್ಳಬೇಡಿ
ಎಂದು ಸಮಾಧಾನಪಡಿಸಲು ಪ್ರಯತ್ನಿಸದರೂ ಆತ ಇಲ್ಲ ನನ್ನ ಕಣ್ಣುಗಳನ್ನು ನೀವು ತೆಗೆಯುವಹಾಗಿದ್ದರೆ ಮಾತ್ರ
ನಾನು ಸುಮ್ಮನಾಗುವುದು. ಈ ಕೆಲಸ ನಿಮ್ಮಿಂದಲ್ಲದೇ ಬೇರಾರಿಂದಲೂ ಸಾಧ್ಯವಿಲ್ಲ ಡಾಕ್ಟ್ರೇ. ನಿಮ್ಮನ್ನೇ
ನಂಬಿ ಬಂದಿದ್ದೇನೆ ನನ್ನನ್ನು ಉಳಿಸಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಲೇ ಇರುವನು. ಡಾಕ್ಟರಿಗೆ
ಏನು ಹೇಳುವುದೆಂದು ತೋಚದೆ ಸರಿ ಮಲಗಿ ಎಂದು ಬಿಳಿ ಬಟ್ಟೆ ಹಾಸಿದ್ದ ಮಂಚದ ಮೇಲೆ ಮಲಗಿಸಿ ನಿಮ್ಮ ಸಮಸ್ಯೆಯೇನು.
ಕಣ್ಣುಗಳಲ್ಲಿ ಏನಾದರೂ ತೊಂದರೆಯಿದೆಯೇ, ಉರಿ, ತುರಿಕೆ, ನೋವು, ಊತ, ಚುಚ್ಚುವಿಕೆಯ ಅನುಭವವೇನಾದರೂ
ಆಗುತ್ತಿದೆಯೇ ಎಂದು ಪರೀಕ್ಷಿಸುತ್ತಾ ಕೇಳಲು ಅಂಥದ್ದೇನೂ ಇಲ್ಲ ಎಂದು ಆ ವ್ಯಕ್ತಿ ಕಾರಣ ಕೇಳಬೇಡಿ
ದಯವಿಟ್ಟು ಈ ಕ್ಷಣವೇ ಕಣ್ಣುಗಳನ್ನ ಕಿತ್ತುಬಿಡಿ ಎಂದು ಕೇಳುವನು. ಡಾಕ್ಟರು ಇನ್ನೂ ತಾಳ್ಮೆಯಿಂದಲೇ
ಸರಿನಪ್ಪ ಕಣ್ಣುಗಳು ತಾನೆ ಕಿತ್ತೋಣಂತೆ ಆದರೆ ಇದು ಅಮಾನವೀಯ ಕೃತ್ಯ ಎಂದು ನಿನಗೆ ಗೊತ್ತಿದೆ ತಾನೆ.
ಇದರಿಂದ ನನಗೆ ಶಿಕ್ಷೆ ಸಹ ಆಗುವ ಎಲ್ಲಾ ಸಾಧ್ಯತೆಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಇದು ನನ್ನ ವೃತ್ತಿ
ಧರ್ಮಕ್ಕೆ ದ್ರೋಹವೆಸಗಿದ ಹಾಗೆ. ನಾನು ಹಾಗೆಲ್ಲ ಮಾಡಬರುವುದಿಲ್ಲ. ದಯವಿಟ್ಟು ಅರ್ಥಮಾಡಿಕೋ ಎಂದು
ಈ ವ್ಯಕ್ತಿಯ ವಿಚಿತ್ರ ಬೇಡಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರಲು. ದಯವಿಟ್ಟು ಡಾಕ್ಟರೇ
ಈ ಕೆಲಸ ಬೇರಾರಿಂದಲೂ ಸಾಧ್ಯವಾಗದು ಇದು ಕೇವಲ ನಿಮ್ಮ ಕೈಲಿಂದ ಮಾತ್ರ ಸಾಧ್ಯ. ನನಗೆ ಈ ಪ್ರಪಂಚವನ್ನ
ನೋಡುವುದು ಇನ್ನು ಸಾಧ್ಯವಿಲ್ಲ. ಇದು ನಿಮ್ಮ ವೃತ್ತಿ ಧರ್ಮಕ್ಕೆ ಯಾವ ರೀತಿಯಲ್ಲೂ ಚ್ಯುತಿ ತರುವುದಿಲ್ಲ
ಏಕೆಂದರೆ ಈ ಕಣ್ಣುಗಳು ಇದ್ದಲ್ಲಿ ತಾನೇ ಪ್ರಾಣ ಬಿಡುವೆನೆಂದು, ಒಂದು ಜೀವ ಉಳಿಸಿದ ಹಾಗಾಗುವುದೆಂದು,
ಇನ್ನು ಕಣ್ಕಿತ್ತರೆ ಡಾಕ್ಟರರ ವಿರುದ್ಧ ದೂರು ನೀಡಲು ಈ ಪ್ರಪಂಚಾಲ್ಲಿ ತನ್ನ ಹಿತಚಿಂತಕರಾರೂ ಇಲ್ಲವೆಂದು
ಹೇಳುತ್ತಾ ಡಾಕ್ಟರರ ಕೈ ಗಟ್ಟಿಯಾಗಿ ಹಿಡಿದುಕೊಂಡು ಕಣ್ತೆಗೆಯುವೆನೆಂದು ಮಾತುಕೊಡುವವರೆಗೂ ಕೈಬಿಡುವುದಿಲ್ಲವೆಂದು
ಹೇಳಿ ಕೊನೆಗೂ ಡಾಕ್ಟರರು ಬೇರೆ ದಾರಿ ಕಾಣದೆ ಮಾತು ಕೊಟ್ಟ ನಂತರ ಕೈಬಿಡುವನು. ತಿಪ್ಪರಲಾಗ ಹಾಕಿದರೂ,
ಹಣದಹೊಳೆಯನ್ನೇ ಹರಿಸಿದರೂ ದೃಷ್ಠಿ ಬಾರದ ಎಷ್ಟೋ ಜನರನ್ನು ನೆನೆಯುತ್ತಾ ಎಲ್ಲ ಸರಿಯಾಗಿದ್ದರೂ ಈ ವಿಚಿತ್ರ
ಮನುಷ್ಯ ತಾನೇ ಕಣ್ಣು ಕಿತ್ತುಹಾಕಿರೆಂದು ಹೇಳುತ್ತಿರುವ ಮೊಟ್ಟ ಮೊದಲ ಮನುಷ್ಯನಿರಬೇಕೆಂದು ಮನಸಿನಲ್ಲೇ
ಅಂದುಕೊಳ್ಳುತ್ತಾ, ಕಣ್ಣುಗುಡ್ಡೆಗಳನ್ನು ಕೀಳಲು ಸಜ್ಜಾಗುತ್ತಾ, ಮಂಚದ ಮೇಲೆ ಕಣ್ಮುಚ್ಚಿಕೊಂಡೇ ಕಾತುರತೆಯಿಂದ
ಮಲಗಿದ್ದ ವ್ಯಕ್ತಿಯ ಎದುರು ನಿಂತು ಆತನ ಹೆಸರು ಕೇಳಲು ಆತ ಹೆಸರು ಹಾಳಾಗಿಹೋಗಲಿ ಡಾಕ್ಟ್ರೇ ಎಂದು
ಮರೆಮಾಚುವನು. ನನ್ನನ್ನೇ ಏಕೆ ಅರಸಿಬಂದೆ ಎಂದು ಪ್ರಶ್ನಿಸಲು ಆತ ನಗುವನು.
ನೀವು
ನನ್ನನ್ನ ಮರೆತುಹೋಗಿದ್ದೀರೆಂದು ಕಾಣುತ್ತದೆ. ಹೀಗೇ ಬಹಳ ವರ್ಷಗಳ ಹಿಂದೆ ನಾನು ನಿಮ್ಮನ್ನ ಸಂಪರ್ಕಿಸಿದ್ದೆ
ಎಂದು ಹೇಳುವನು. ಯಾವಾಗೆಂದು ಡಾಕ್ಟರಿಗೆ ಹೊಳೆಯದೆ, ತಲೆಕೆರೆದುಕೊಂಡು ಯಾವಾಗ ಎಂದು ಆತನನ್ನೇ ಕೇಳಲು
ಆತ ಈಗ್ಗೆ ಹಲವು ವರ್ಷಗಳ ಹಿಂದೆ ನಾನು ಅತಿಯಾದ ಗೊಂದಲದಲ್ಲಿ ಸಿಲುಕಿದ್ದೆ. ನನಗೆ ಏನೋ ದೊಡ್ಡ ರೋಗವೊಂದು
ತಗುಲಿತ್ತು. ಯಾವ ಡಾಕ್ಟರರ ಬಳಿ ಹೋದರೂ, ಯಾವ ಚಿಕಿತ್ಸೆ ಪಡೆದರೂ, ಏನೇನು ಪ್ರಯೋಗ ಮಾಡಿದರೂ ಗುಣವಾಗದ
ನನ್ನ ರೋಗವನ್ನ ನೀವು ಒಂದು ದಿನದಲ್ಲಿ ಗುಣಪಡಿಸಿದಿರಿ ಮತ್ತು ಆ ರೋಗ ಮತ್ತೆ ಬಾರದಿರಲು ದಾರಿ ತೋರಿಸಿದಿರಿ
ಎಂದು ಹೇಳುವನು. ಡಾಕ್ಟರಿಗೆ ಆರ್ಥವಾಗದೇ, ನೆನಪು ಕೂಡ ಬಾರದೆ. ಯಾವಾಗ, ಹೇಗೆ ಎಂದು ಆತನನ್ನೇ ಪ್ರಶ್ನಿಸಲು,
ಆತ ರೋಗದಿಂದ ನಲುಗಿ ರಸ್ತೆ ರಸ್ತೆಗಳಲ್ಲಿ, ಸರಿಯಾದ ಚಿಕಿತ್ಸೆಗೆಂದು ಅಲೆಯುತ್ತಿದ್ದಾಗ ಒಮ್ಮೆ ನಿಮ್ಮ
ಆಫೀಸಿನ ಮುಂದಿರುವ “ಇಲ್ಲಿದೆ ಎಲ್ಲಕ್ಕೂ ಪರಿಹಾರ” ಎಂಬ ನಾಮಫಲಕವನ್ನ ನೋಡಿ ಇಲ್ಲಿ ತನ್ನ ರೋಗಕ್ಕೊಂದು
ಪರಿಹರವಿರಬಹುದೇ ಎಂದು ಅನುಮಾನಿಸುತ್ತಲೇ ಒಳಬರಲು, ನೀವೇ ನನ್ನನ್ನು ಮುಗುಳ್ನಗೆಯೊಂದಿಗೆ ಬರಮಾಡಿಕೊಂಡಿರಿ,
ನನ್ನನ್ನು ಒಂದು ಅರಾಮ ಕುರ್ಚಿಯಲ್ಲಿ ಕೂಡ್ರಿಸಿ ನನ್ನನ್ನು ಉಪಚರಿಸಿದಿರಿ. ನನ್ನ ಸಮಸ್ಯೆಯನ್ನ ಸುವಿಸ್ತಾರವಾಗಿ
ಆಲಿಸಿದಿರಿ ಮತ್ತು ಪರಿಹಾರವನ್ನೂ ಸಹ ಥಟ್ಟನೆ ಕಂಡುಹಿಡಿದಿರಿ ಎಂದು ಹೇಳಲು ಡಾಕ್ಟರರ ನೆನಪಿನ ಮೂಟೆಗಳಲ್ಲಿ
ಮೂಲೆಯೊಂದರಲ್ಲಿ ಇದ್ದ ಹಳೆಯ ಒಂದು ಸಂಗತಿ ಹಾಗೇ ತೆರೆದುಕೊಳ್ಳುವುದು. ಈ ಮನುಷ್ಯ ಅಂದು ಬಂದು ತನ್ನನ್ನು
ಏನೋ ಬಾಧೆ ಕಾಡುತ್ತಿದ್ದೆ. ಪರಿಹಾರ ಸಿಗದಿದ್ದಲ್ಲಿ ಸಾಯುವೆನೆಂದು ಮರುಗುತ್ತಿರಲು. ಸಮಸ್ಯೆಯ ಜಾಡಿಗೆ
ಹೋಗಲೆಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಲು ಈ ವ್ಯಕ್ತಿ ಹೇಳಿದ ಸಮಸ್ಯೆಯನ್ನು ಕೇಳಿ ಅಚ್ಚರಿಪಡುವರು.
ತನ್ನ ಗಾಡಿ ಎರಡು ಬಾರಿ ಕಿಕ್ ಹೊಡೆದಾಗಲೂ ಶುರುವಾಗದಿದ್ದಲ್ಲಿ ತನಗೆ ಕೋಪಬಂದು ಗಾಡಿಯನ್ನು ರಸ್ತೆ
ಮಧ್ಯದಲ್ಲೇ ಬಿಸಾಕಿ ಹೋಗುವುದು, ತನ್ನ ಸುತ್ತಲ ಜನ ತನ್ನ ಇಷ್ಟಕ್ಕೆ ವಿರುದ್ಧವಾಗಿ ಮಾಡಿದಾಗ ತನ್ನಲ್ಲಿರುವ
ಕ್ರೋಧ ಹೊರಗೆ ಬಂದು ಅವರನ್ನೆಲ್ಲಾ ಚಚ್ಚಿರುವುದು, ಸಿಕ್ಕಸಿಕ್ಕವರೊಡನೆ ಜಗಳ, ತನ್ನ ಕಂಪ್ಯೂಟರ್,
ಟಿವಿ, ಫ್ಯಾನ್, ಮುಂತಾದಂತಹ ಮನೆಯ ತನ್ನ ಎಲ್ಲಾ ವಸ್ತುಗಳು ಇವನ ಕೈಯಿಂದಲೇ ಚೂರು ಚೂರಾಗಿರುವುದು
ಈಗ ರಸ್ತೆ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಎರಗುತ್ತಿರುವನೆಂದು ತಿಳಿದುಕೊಂಡು, ಇದು ಮನೋರೋಗವೇ
ಎಂದು ಮೊದಮೊದಲು ತಿಳಿದರೂ ಇಲ್ಲ ಇದು ಸಾಧಾರಣ ಖಾಯಿಲೆ. ಈತನಿಗೆ ಏನೂ ಆಗಿಲ್ಲ ತಾಳ್ಮೆ ಕಳೆದುಕೊಂಡಿದ್ದಾನಷ್ಟೇ
ಎಂದು ಅರಿತು. ಇವನ ಹುಚ್ಚಾಟಕ್ಕೆ ಪರಿಹಾರ ಕೊಟ್ಟಿರುತ್ತಾರೆ. ನೇರವಾಗಿ ಆತನನ್ನು ಎಳೆದುಕೊಂಡು ಆಫೀಸಿನ
ಒಳಕೋಣೆಯಲ್ಲಿದ್ದ ಫ್ಯಾಕ್ಟರಿಗೆ ಎಳೆದೊಯ್ದು, ಹಲವಾರು ಸೂಜಿಗೆ ದಾರ ಪೋಣಿಸುತ್ತಿದ್ದವರನ್ನು, ರಾಗಿಯಲ್ಲಿ
ಸಾಸಿವೆ ಹೆಕ್ಕುತ್ತಿದ್ದವರನ್ನು, ಮಣ್ಣಿನಲ್ಲಿನ ಕಣಗಳನ್ನು ಎಣಿಸುತ್ತಿದ್ದವರನ್ನೆಲ್ಲಾ ಹಾದುಕೊಂಡು
ನೂರಾರು ಮಂದಿಯಾದ ನಂತರ ಒಂದು ಹೂವಿನ ಗುಡ್ಡೆ ಹಾಕಿಕೊಂಡು ತನ್ನ ಪಾಡಿಗೆ ಗಿಜಗುಡುತ್ತಿದ್ದ ಆ ಸಂತೆಯ
ಜಾಗದಲ್ಲೂ ತನ್ನ ಪಾಡಿಗೆ ತಾನು ಹೂವು ಕಟ್ಟುತ್ತಿದ್ದ ಒಬ್ಬ ಹೆಂಗಸ ಬಳಿ ಬಿಟ್ಟು ಇಂದು ಆ ವ್ಯಕ್ತಿ
ಹೂವು ಕಟ್ಟುವನೆಂದು ಹೇಳಿ ಹೋಗುವನು. ಒಂದೊಂದೇ ಒಂದೊಂದೇ ಹೂವನ್ನು ಕಟ್ಟುತ್ತಾ ಕಟ್ಟುತ್ತಾ ಸಂಜೆ
ಡಾಕ್ಟರು ಹಿಂದಿರುಗಿದಾಗ ಆ ವ್ಯಕ್ತಿಯ ಮುಖದಲ್ಲಿ ಶಾಂತತೆ ಕಂಡಿದ್ದು ನೆನಸಿಕೊಂಡು ಹೋ ಇವನಾ ಈ ವ್ಯಕ್ತಿ
ಈಗ ಈತನಿಗೆ ಏನಾಗಿರಬಹುದು ಮತ್ತೊಂದು ಹೊಸ ಸಮಸ್ಯೆಯನ್ನ ತಂದಿರುವನಲ್ಲಾ ಎಂದು ಆತನತ್ತ ನೋಡುವರು.
ನೀವು
ಮತ್ತೆ ತಾಳ್ಮೆ ಕಳೆದುಕೊಂಡಿರುವಂತಿದೆ ಎಂದು ಡಾಕ್ಟರು ಕೇಳಲು. ಆತ, ತನ್ನಿಂದ ಈ ಪ್ರಪಂಚದಲ್ಲಿ ಏರುತ್ತಿರುವ
ಬಿಸಿಲಿನ ತೀಕ್ಷ್ಣತೆಯನ್ನು ನೋಡಲಾಗುತ್ತಿಲ್ಲವೆಂದು, ತನ್ನ ಕಣ್ಣುಗಳಲ್ಲಿ ನೀರು ಬರಲು ಶುರುವಾಗಿದ್ದು
ಈಗ ರಕ್ತವಾಗಿ ಪರಿಣಮಿಸುತ್ತಿದೆಯೆಂದು ಹೇಳುವನು. ಈ ಬಿಸಿಲು ಪ್ರತಿಯೊಬ್ಬ ಜೀವಿಯನ್ನೂ ಆವರಿಸಿದೆ.
ಒಬ್ಬ ಇನ್ನೊಬ್ಬನ ಮೇಲೆ ಈ ಶಾಖವನ್ನು ಕಾರುತ್ತಾ ಪ್ರತಿಯೊಬ್ಬರ ಕಣ್ಣುಗಳಲ್ಲೂ ಅದು ಕಾಣುತ್ತಿದೆ.
ಯಾರ ಕಣ್ಣಿನಲ್ಲೂ ತಾನು ಕಣ್ಣಿಟ್ಟು ನೋಡುವ ಹಾಗಿಲ್ಲ, ನೋಡಿದರೆಲ್ಲಿ ತನ್ನ ಕಣ್ಣುಗಳೂ ಆ ಉರಿ ಬೆಂಕಿಯನ್ನು
ತುಂಬಿಕೊಳ್ಳುವುದೋ ಎಂದು ಹೆದರಿಕೆಯಾಗುತ್ತಿದೆ. ಎಷ್ಟೋ ಜನ ಈ ಇತರರ ಕಣ್ಣುಗಳಲ್ಲಿರುವ ಉರಿಯಿಂದ ತಪ್ಪಿಸಿಕೊಳ್ಳಲು
ಕಪ್ಪು ಕಣ್ಣಡಕಗಳನ್ನೋ, ಇನ್ನೂ ಹಲವು ಮಾರ್ಗಗಳನ್ನು ಅನುಸರಿಸಲೆತ್ನಿಸಿ, ಏನು ಮಾಡಿದರೂ ಸಫಲರಾಗದೆ
ಅದೇ ಉರಿಯಲ್ಲಿ ನಲುಗುತ್ತಿರುವರೆಂದು ಹೇಳುವನು. ಇದಕ್ಕೆ ಬೇರೆ ಮಾರ್ಗ ಹುಡುಕುವುದೊಳಿತು ಒಮ್ಮೆ ಕಳೆದುಕೊಂಡ
ಕಣ್ಣುಗಳು ಮತ್ತೆ ಸಿಗುವುದಿಲ್ಲೆಂದು, ಯಾವ ರೀತಿಯಲ್ಲಿ ಹೇಳಿದರು ತನ್ನ ನಿರ್ಧಾರಕ್ಕೆ ಆ ವ್ಯಕ್ತಿ
ಬದ್ಧನಾಗಿದ್ದರಿಂದ ಕೊನೆಗೂ ಕಣ್ಕಿತ್ತು ಸುಧಾರಿಸಿಕೊಂಡ ನಂತರ ಆ ವ್ಯಕ್ತಿಯನ್ನು ಕಳಿಸಿಕೊಡುವರು.
ಹೋಗುವಾಗ ಆತ ಭಲೇ ಖುಷಿಯಿಂದ, ತನ್ನ ಜೀವ ಉಳಿಸಿದ ದೇವರೆಂದು ಅವರ ಕಾಲಿಗೆರಗಿ ನಮಸ್ಕರಿಸಿ ಕೈತುಂಬಾ
ತನ್ನಲ್ಲಿದ್ದ ಸಂಪತ್ತನ್ನೆಲ್ಲಾ ಸುರುವಿಹೋಗುವನು. ಡಾಕ್ಟರು ಈತ ಮತ್ತೆ ಬರದಿರಲೆಂದು ಆಶಿಸುತ್ತಾ
ಕಳಿಸಿಕೊಡುವರು.
ಹಲವಾರು
ವರುಷಗಳ ನಂತರ ಅದೇ “ಇಲ್ಲಿದೆ ಎಲ್ಲಕ್ಕೂ ಪರಿಹಾರ” ಎಂಬ ಆಫೀಸಿನ ಬಾಗಿಲ ಮುಂದೆ ಒಂದು ಆಕೃತಿ ನಿಂತಿರುತ್ತದೆ.
ಬರಮಾಡಿಕೊಳ್ಳಲು ಅದೇ ಡಾಕ್ಟರೆಂಬೋ ಡಾಕ್ಟರು ಹೋಗಿ ನೋಡಲು ಎಂದೂ ಮರೆಯಲಾಗದ ಆ ವಿಶಿಷ್ಟ, ವಿಚಿತ್ರ
ಆಕೃತಿ ನಿಂತಿರುತ್ತದೆ. ಇಂತಹ ಸಹಸ್ರ ನಮೂನಮೂನೆಯ ರೋಗಿಗಳನ್ನು, ಸಮಸ್ಯೆಗಳನ್ನು ಕಂಡಿದ್ದ ಪರಿಹಾರನಿಧಿಯಂತಹ
ಡಾಕ್ಟರೆಂದು ಕರೆಸಿಕೊಳ್ಳುತ್ತಿರುವ ಆ ದೈವಾಂಶಸಂಭೂತನಿಗೆ ಯಾವುದೇ ರೀತಿಯ ಅಚ್ಚರಿಯಾಗುವುದಿಲ್ಲ.
ಆದರೆ, ಈತ ತನ್ನ ಕಣ್ಣುಗಳನ್ನು ಮತ್ತೆ ಕೇಳಲು ಬಂದಿರದಿದ್ದರೆ ಸಾಕೆಂದು ಮನಸಿನಲ್ಲೇ ಪ್ರಾರ್ಥಿಸಿಕೊಂಡರು.
ಏಕೆಂದರೆ, ಆ ಕಣ್ಣುಗಳಾಗಲೇ ಇಬ್ಬರು ಬಿಸಿಲಿನ ಉರಿಯ ತೀಕ್ಷ್ಣತೆಯನ್ನು ಕಣ್ಣಿಗೆ ಚುಚ್ಚಿಸಿಕೊಂಡರೂ
ಪರವಾಯಿಲ್ಲ ಆದರೆ ಕತ್ತಲೆಯ ಕಿಚ್ಚನ್ನು ಸಹಿಸಲಾಗದವರಿಗೆ ಹಂಚಿ ಆಗಿತ್ತು. ಬಾಗಿಲಲ್ಲಿ ನಿಂತಿದ್ದ
ಈ ವ್ಯಕ್ತಿಯನ್ನು ನೋಡಿದರೆ ಕಿವಿಗಳಲ್ಲಿ ದೊಡ್ಡ ಹತ್ತಿಯ ಬೆಟ್ಟವನ್ನೇ ತುರುಕಿಕೊಂಡು ಬಂದಿರುವುದನ್ನು
ಕಂಡ ಕೂಡಲೇ ಈ ಬಾರಿ ಖಾತ್ರಿಯಾಗಿ ಕಿವಿ ಕಿವುಡು ಮಾಡಿಸಿಕೊಳ್ಳಲು ಬಂದಿರುವನೆಂದು ತಿಳಿದ ಡಾಕ್ಟರು,
ಏನಾಯಿತೆಂದು ಕೇಳುತ್ತಾ ಒಳಗೆ ಕರೆದುಕೊಂಡು ಹೋಗಲು, ಮಂಚದ ಮೇಲೆ ಕೂರುತ್ತಾ ಆ ವ್ಯಕ್ತಿ ತನ್ನ ಕಿವಿಗಳನ್ನು
ಮೊದಲು ಕಿವುಡಾಗಿಸಿ, ತಾನು ಕಣ್ಣು ಕಳೆದುಕೊಂಡಮೇಲೆ ತನಗೆ ಅರಿವಾದದ್ದು ಈ ಪ್ರಪಂಚದಲ್ಲಿ ಏನು ಕರ್ಕಶ
ಶಬ್ಧವಿದೆ ಎಂದು ಹೇಳುವನು. ಡಾಕ್ಟರು ಯಾಕೆ, ಏನು ಎತ್ತವೆಂದು ಕೇಳುತ್ತಿರಲು ಆತ ಡಾಕ್ಟರರ ಮಾತನ್ನು
ಕಿವಿ ಮೇಲೆ ಹಾಕಿಕೊಳ್ಳದೇ ಮಾತು ಮುಂದುವರೆಸುವನು. ಪ್ರಪಂಚದ ತುಂಬಾ ವಿಚಿತ್ರ, ವಿಚಿತ್ರ ವಾಹನಗಳು,
ಯಂತ್ರಗಳು, ಮನುಷ್ಯರ ಮಾತುಗಳು, ಗಲಾಟೆ, ಆಕ್ರಂದನ, ಚೀರಾಟ, ಬಯ್ಗುಳ, ಇಂತಹ ವಿಕೃತ ಶಬ್ಧಗಳು ಎಲ್ಲಿ
ಹೋದರೂ ತನ್ನನ್ನು ಹಿಂಬಾಲಿಸಿದ್ದು, ನಗರಗಳಲ್ಲಿನ ಶಬ್ಧ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಹಳ್ಳಿಗಳಿಗೆ
ಹೋದರೆ, ಆ ನೀರವತೆ, ಆ ತಣ್ಣನೆ ಬೀಸುತ್ತಿದ್ದ ಗಾಳಿಯ ಶಬ್ಧ, ಎಲ್ಲರಿಂದ ದೂರ ಹೋಗಿ ಕಾಡಿನಲ್ಲಿ ಇರಲು,
ಮರ ಗಿಡ ಪ್ರಾಣಿಪಕ್ಷಿಗಳ ಶಬ್ಧವೂ ಸಹ ಕಿವಿ ತೂತು ಬೀಳುವಂತೆ ಕರ್ಕಶವಾಗಿ ಕೇಳಲಾರಂಭಿಸಿದ್ದು, ಎಲ್ಲ
ಶಬ್ಧಗಳಿಂದ ತಪ್ಪಿಸಿಕೊಳ್ಳಲು ಕಿವಿ ಮುಚ್ಚಿಕೊಂಡರೂ ತನ್ನ ಒಡಲಿಗೆ ಇಳಿಯುತ್ತಿದ್ದ ನೀರೂ ಸಹ ಶಬ್ಧ
ಮಾಡಲಾರಂಭಿಸಿದ್ದು ಎಲ್ಲವನ್ನೂ ಹೇಳಿ ತನಗೆ ಏಕಾಂತದಲ್ಲಿನ, ಮೌನದಲ್ಲಿನ ಶಬ್ಧವೂ ಕೂಡ ಕೇಳದ ಹಾಗೆ
ಮಾಡಿರೆಂದು ಮತ್ತೆ ದುಂಬಾಲು ಬೀಳುವನು. ಶ್ರವಣಶಕ್ತಿಯನ್ನು ಕಳೆದುಕೊಂಡು ಮತ್ತದೇ ಲವಲವಿಕೆಯಿಂದ ಹೊರಡುವನು.
ಇನ್ನೊಂದಷ್ಟು ವರ್ಷಗಳ ನಂತರ ನಾಲಗೆ ಕೀಳಿರೆಂದು ಬಂದೇ ಬರುತ್ತಾನೆಂದು ಡಾಕ್ಟರೇ ಊಹಿಸುತ್ತಾ ಕಳಿಸಿಕೊಡುವರು.
ಅಂತೆಯೇ
ಹಲವು ವರ್ಷಗಳ ನಂತರ ಅದೇ ಡಾಕ್ಟರರ ಮುಂದೆ ಪ್ರತ್ಯಕ್ಷವಾಗಿ ಒಳಗೆ ನಡೆಯುತ್ತಾ, ತನ್ನ ಹೊಸ ತೊಂದರೆಯನ್ನು
ವಿವರಿಸುವನು. ಈ ಎಲ್ಲಾ ಕರ್ಕಶ ಶಬ್ಧಗಳು, ಕಣ್ಕುಕ್ಕುವ ಧಗೆ ಹೊರಗಡೆಯಲ್ಲ ತನ್ನ ಒಳಗೇ ಆವರಿಸಿ ಹಲವು
ರೀತಿಯ ಕೋಲಾಹಲವೆಬ್ಬಿಸುತ್ತಿದೆ. ಏನೇನೋ ತಾನು ತಡೆಯಲಾರದಂತಹ ಆಲೋಚನೆಗಳು ಬರುತ್ತಿವೆ. ತನ್ನನ್ನು
ಕಿತ್ತು ಕಿತ್ತು ತಿನ್ನುತ್ತಿವೆ ಎಂದು ಹೇಳುವನು. ತನ್ನ ತಲೆಯೊಳಗೆ ಕೋಲಾಹಲ, ಚಂಡಮಾರುತ, ಬಿರುಗಾಳಿ,
ಭೂಕಂಪಗಳಾಗುತ್ತಿರುವುದಾಗಿ, ತನ್ನಿಂದ ಈ ತುಮುಲವನ್ನು ಒಳಗೇ ಕುದಿಯುತ್ತಿರುವ ದಾವಾನಲವನ್ನು ಇನ್ನು
ತನ್ನಿಂದ ಸಹಿಸಲಾಗುತ್ತಿಲ್ಲವೆಂದು ಇದಕ್ಕೆ ಒಂದೇ ಮಾರ್ಗವೆಂದು ಹೇಳುವನು. ಮೆದುಳನ್ನು ಕೀಳಬೇಕೇನೆಂದು
ಡಾಕ್ಟರು ನೋಡುತ್ತಿರಲು. ಆ ವ್ಯಕ್ತಿ ತನ್ನ ಹೃದಯವನ್ನೇ ಕಿತ್ತುಬಿಡಿರೆಂದು ಅದರಿಂದಲೇ ತನ್ನ ತಲೆ
ಇಷ್ಟೆಲ್ಲಾ ತೊಂದರೆ ಕೊಡುತ್ತಿರುವುದಾಗಿ ಹೃದಯವನ್ನು ಆದಷ್ಟು ಬೇಗ ಕಿತ್ತುಬಿಡಲು ವಿನಂತಿಸಿಕೊಳ್ಳುವನು.
ಕಿವಿ,
ಕಣ್ಣುಗಳನ್ನು ಕಳೆದುಕೊಂಡಿದ್ದ ದೇಹದಲ್ಲಿನ ಹೃದಯ ತೆಗೆದಾಕ್ಷಣ, ಕೈಕಾಲು ಸಕಲಾಂಗ ದೇಹವು ನಿಸ್ತೇಜವಾಗುವುದು.
ಸುಧಾರಿಸಿಕೊಂಡ ಕೆಲವು ಘಂಟೆಗಳೊಳಗೆ ಆ ವ್ಯಕ್ತಿ ನಿರ್ವಿಕಾರ, ನಿರ್ಲಿಪ್ತ ಮುಖಮುದ್ರೆಯಲ್ಲಿ, ಡಾಕ್ಟರರ
ಮರುಳುವಿಕೆಗೂ ಕಾಯದೆ ನೇರ ನಡೆದುಹೋಗುವನು. ಹಾಗೆ ಹೋದ ಆ ವ್ಯಕ್ತಿ ಮತ್ತೆಂದೂ “ಇಲ್ಲಿದೆ ಎಲ್ಲಕ್ಕೂ
ಪರಿಹಾರ”ಕ್ಕೆ ಮರಳುವ ಸುಸಮಯ ಒದಗಲಿಲ್ಲ!
-ಹೇಮಂತ್
No comments:
Post a Comment