ದೇವರು
ಪ್ರಾಣವನ್ನು ರಕ್ಷಿಸುವಾತ, ಕೇಳಿದರೆ ತನ್ನ ಆತ್ಮಲಿಂಗವನ್ನೇ ಕರುಣಿಸುವಾತ, ಎಲ್ಲ ಕಷ್ಟಗಳಿಂದ ನಮ್ಮನ್ನು
ರಕ್ಷಿಸುವಾತ, ಹಲವು ವರಗಳನ್ನು ಬಿಟ್ಟಿಯಾಗಿ, ಟ್ಯಾಕ್ಸ್ ಸಹ ಇಲ್ಲದೇ ಕರುಣಿಸುವಾತ, ಕೇವಲ ನಾಮಸ್ಮರಣೆಯಿಂದ
ಮನಕ್ಕೆ ಸಿಗರೇಟಿಗಿಂತ ಹೆಚ್ಚು ಆಹ್ಲಾದ ನೀಡಬಲ್ಲಾತ…. ಇತರೆ, ಇತರೆ ಏನೇನೋ ಕಥೆಗಳನ್ನು ಕೇಳಿದ್ದೆ,
ಇರಬಹುದೇನೋಪ್ಪಾ, ಆತ ಕೆಲಸ ಕಾರ್ಯ ಮಾಡದ, ಸುಮ್ಮನೆ ಅಂಪೈರ್ ರೀತಿ ನಿಂತು ಆಟಗಾರರಾದ ನಮ್ಮ ಆಟವನ್ನು
ತೀರ್ಮಾನಿಸುವಾತ ಅಂತ ಎಲ್ಲಾ ನನ್ನ ಗುರುಹಿರಿಯರಿಂದ ತಿಳಿದುಕೊಂಡಿದ್ದ ನನಗೆ, ಅವನು ಮಾಡಲು ಕೆಲಸವಿಲ್ಲದೆ
ನಮಗೆ ಎಲ್ಲ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುವ ಕೆಲಸವನ್ನ ಗುತ್ತಿಗೆಗೆ ಪಡೆದಿರುವನೆಂದು ನಂಬಲು
ಹೊರಟಿದ್ದ ನನಗೆ, ದೇವರ ಇನ್ನೊಂದು ಮುಖದ ಪರಿಚಯವಾಯ್ತು. ಈ ದೇವರೆಂಬೋ ದೇವರು ಒಬ್ಬ ಅಮಾಯಕನಿಗೆ ಕೇಡನ್ನೇ
ಉಂಟುಮಾಡಲು ಸಜ್ಜಾಗಿ ನಿಂತಿದ್ದ. ಭುವನ್. ದೇವರಿಗೆ ಅವನ ಮೇಲೆ ಅದಾವ ರೀತಿಯ ದ್ವೇಷವಿತ್ತೋ ನಾನರಿಯೆ,
ಪಾಪ ಭುವನನೂ ಕೂಡ ಅರಿತಿರಲಾರ ಯಾಕೆಂದರೆ ಅವನು ಯಾರಿಗೂ ಬಯಸದೆಯೂ ಸಹ ಕೇಡುಂಟು ಮಾಡಿದವನಾಗಿರಲಿಲ್ಲ.
ಹಾಗೆಂದು ದೇವರು ಅವನ ಮೇಲೆ ಎಸಗುತ್ತಿದ್ದ ದೌರ್ಜನ್ಯ ಮಾರಣಾಂತಿಕ ಹಲ್ಲೆಯನ್ನು ಆತ ಸುಮ್ಮನೆ ಸ್ವೀಕರಿಸುತ್ತಿರಲಿಲ್ಲ.
ದೇವರಿಗೆ ಸಡ್ಡೊಡೆದು ನಿಂತು ಎಲ್ಲ ಹಲ್ಲೆಯನ್ನು, ಆಘೋಷಿತ ಹಿಂಸೆಯನ್ನು ದಿಟ್ಟತನದಿಂದ ಎದುರಿಸುತ್ತಲೇ
ಇದ್ದ. ದೇವರೇನು ಕಡಿಮೆ ಪರಾಕ್ರಮಿಯಾಗಿರಲಿಲ್ಲ ನಮಗೆಲ್ಲಾ ಗೊತ್ತಿರುವಂತೆ ಹಲವಾರು ದುಷ್ಟಶಕ್ತಿಗಳನ್ನು
ತಾನೇ ಸೃಷ್ಟಿಸಿ ತಾನೇ ಹತಗೈಯುವಂತಹ ಹಲವು ಆಶ್ಚರ್ಯಕರ, ಫ್ಯಾಂಟಸಿ ಕಥೆ, ಚಿತ್ರಕಥೆಗಳನ್ನು ಬರೆದು
ಸ್ವಯಂ ನಾಯಕನಟನಾಗಿ, ನಿರ್ದೇಶಕನಾಗಿ ಪಾತ್ರವಹಿಸಿ ಖಳನಾಯಕರನ್ನು ಸದೆಬಡಿದು ಹಲವು ಅಭಿಮಾನಿಗಳನ್ನು
ಗಳಿಸಿಕೊಂಡಿರುವಂತಹ ವೀರಾಧಿವೀರ. ಇಂತಿರ್ಪ ಕೋಟ್ಯಾನುಕೋಟಿ ಕಥೆಗಳ ನಾಯಕನಟನು ಪ್ರಪ್ರಥಮ ಬಾರಿಗೆ
ಖಳನಾಯಕನ ಪಾತ್ರವಹಿಸಲು ಸಜ್ಜಾಗಿರುವ ಏಕಮಾತ್ರ ಕಥೆ ನನ್ನ ಕಿವಿ, ಕಣ್ಣಿಗೆ ಬಿದ್ದಾಗ ನನಗೂ ಮೊದಮೊದಲು
ನಂಬಲು ಸಾಧ್ಯವಾಗಲಿಲ್ಲ. ಆದರೆ ಸಚ್ ಕಡವಾ ಹೋತಾ ಹೈ ಜೀ…!!!!!!
ದೇವರ
ವಿರುದ್ಧ ಯುದ್ದ ಸಾರಿ ಎದೆ ಸೆಟೆಸಿ ನಿಂತಿರುವ ಈ ಭುವನ್ ಯಾವುದೋ ಸೂಪರ್ ನಾಚುರಲ್ ಶಕ್ತಿ ಹೊಂದಿರುವ
ಸೂಪರ್‍ಮ್ಯಾನ್ ಅಥವಾ, ಹೀಮ್ಯಾನ್ ಅಥವಾ, ಬ್ಯಾಟ್ ಮ್ಯಾನ್ ರೀತಿಯವನೇನೂ ಅಲ್ಲ. ಇವನಿಗೆ ನಿಜಸ್ವರೂಪದಲ್ಲಿ
ಹೊಡೆದಾಟವಿರಲಿ, ಇನ್ನೂ ಮಾತು ಕೂಡ ಸರಿಯಾಗಿ ಬರುವುದಿಲ್ಲ. ಈತನಿಗೆ ಈಗ ನಾಲ್ಕು ವರುಷ. ಈತ ಬಾಲಕ
ಸ್ವರೂಪಿ ವೀರ. ಅಂದು, ಕಂಸ ತನಗೆ ತನ್ನ ತಂಗಿಯ ಮಗನಿಂದಲೇ ಕಂಟಕವಿದೆ ಎಂದು ತಿಳಿದಾಗ ದೇವಕಿಯ ಮಕ್ಕಳನ್ನು
ನಿರ್ದಾಕ್ಷಿಣ್ಯವಾಗಿ ಮುಗಿಸಿದ್ದನಂತೆ. ಆಗ ಕೃಷ್ಣ ಆತನಿಂದಲೂ ಬಚಾವಾಗಿ ದೇವರೆಂಬ “ಹೀರೋ” ಆಗಿ ಕಂಸನನ್ನು
ಕೊಂದನಂತೆ. ಇಂದು, ಕಂಸನ ಸ್ಥಾನದಲ್ಲಿ "ದೇವರು", ಕೃಷ್ಣನ ಸ್ಥಾನವನ್ನು ಇನ್ನೇನು ಯಶಸ್ವಿಯಾಗಿ ಅಲಂಕರಿಸಲಿರುವ
ನಮ್ಮ "ಭುವನ್" ನಿಂತಿರುವನು. ದೇವರಿಗೆ ಈತನಿಂದ ಅದಾವ ಕಂಟಕವಿದೆಯೆಂದು ಹಣೆಬರಹ ಬರೆದಿತ್ತೋ ಒಟ್ಟಿನಲ್ಲಿ
ಮುಗಿಸುವ ಶತಪ್ರಯತ್ನದಲ್ಲಿದ್ದ. ಭುವನ್ ಹುಟ್ಟಿದ ಕ್ಷಣವೇ ಉಸಿರನ್ನು ಒತ್ತಿ ಹಿಡಿದು, ಉಸಿರಾಟದ ತೊಂದರೆ
ಕೊಟ್ಟು ಇನ್ನೇನು ಮುಗಿಸಿಬಿಡಬೇಕೆನ್ನುವಷ್ಟರಲ್ಲಿ, ಇನ್ನೂ ಭುವನನೆಂದು ನಾಮಕರಣ ಮಾಡಿಕೊಂಡಿರದಿದ್ದ
ಪುಟ್ಟ ಹಸುಳೆ ಉಸಿರು ಒತ್ತಿ ಹಿಡಿದಿದ್ದ ಕೈಯನ್ನು ಕಚ್ಚಿ ಬಾಯಿತುಂಬಾ ರಕ್ತ ಲೇಪಿಸಿಕೊಂಡು ಪ್ರಪ್ರಥಮ
ವಿಜಯ ಸಾಧಿಸಿದ್ದ. ಆದರೆ ಸೋಲನ್ನು ಸೋಲೆಂದು ಒಪ್ಪಿಕೊಳ್ಳದ ಪಾಕಿಸ್ತಾನದಂತೆ, ನಾಚಿಕೆ ಬಿಟ್ಟು ಮರಳಿ
ಯತ್ನವ ಮಾಡು ಎಂದು ಗೆಲ್ಲುವವರೆಗೂ ನನ್ನ ದಂಡಯಾತ್ರೆ ಮುಂದುವರೆಯುತ್ತದೆ ಎಂದು ಗಜನಿ ಮೊಹಮದ್ದನಂತೆ, ಪ್ರತಿಜ್ಞೆ ಮಾಡಿದಹಾಗಿತ್ತು ದೇವರೆಂಬೋ ದೇವರು. ಕೂರ್ಮ, ನರಸಿಂಹ, ಮೊಸಳೆ, ಹಂದಿ ನಾಯಿಯಂತಹ ಹಲವು
ವೇಷ ಧರಿಸಿದ್ದ ದೇವರು ಈಗ ಡಾಕ್ಟರರ ರೂಪದಲ್ಲಿ ಬಂದು ಬಾಯಲ್ಲಿ ರಕ್ತ ಕಂಡದ್ದರಿಂದ ಕರೆಂಟ್ ನಲ್ಲಿ
ಇಟ್ಟು ಕೃತಕ ಉಸಿರಾಟದ ನೆಪದಲ್ಲಿ ತಾಯಿಯ ಹಾಲನ್ನೂ ಹಸುಳೆ ಪಡೆಯದ ಹಾಗೆ ಹುನ್ನಾರ ಮಾಡಿದರೂ ಅದೆಲ್ಲವನ್ನೂ
ಎದುರಿಸಿ ಚೇತರಿಸಿಕೊಂಡು ತನ್ನ ತಾಯಿಯ ಹಾಲನ್ನು ಎರಡು ದಿನಗಳ ನಂತರ ಕುಡಿದು ಹಹಹ ಎಂದು ನಕ್ಕು "ಮಗನೆ... ದೇವರೇ ಅಮೃತ ನಾನು ಕುಡಿದಾಯ್ತು ಇನ್ನು ನನ್ನನ್ನಲ್ಲ ನನ್ನ ಕೂದಲನ್ನೂ ಸಹ ಮುಟ್ಟಲು ನಿನ್ನಿಂದ ಸಾಧ್ಯವಿಲ್ಲ, ಬಾ ಅದೇನು ಕಿತ್ತುಕೊಳ್ಳುತ್ತೀಯ ನಾನೂ ನೋಡುತ್ತೀನಿ" ಎಂಬಂತೆ ಮೊದಲ ಬಾರಿಗೆ ನಕ್ಕ ಭುವನ. ತಾಯಿತಂದೆಯರು
ಮೊದಲ ಬಾರಿಗೆ ನೆಮ್ಮದಿಯಿಂದ ಉಸಿರಾಡಿದ್ದರು. ನೀವೇನು ಯೋಚನೆ ಮಾಡಬೇಡಿರಮ್ಮ ನಾನು ನಿಮ್ಮ ಮಗ, ಬರಲಿ
ಅದಾರು ಬರುತ್ತಾರೋ, ನಿಮ್ಮಿಂದ ನನ್ನನ್ನ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಟ್ಟಿಯಾಗಿ
ಅಮ್ಮನ ಅಪ್ಪನ ಕೈಬೆರಳನ್ನು ತನ್ನ ಎರಡೂ ಪುಟ್ಟ ಮುಷ್ಟಿಯಲ್ಲಿ ಹಿಡಿದು ನೆಮ್ಮದಿಯಾಗಿ ನಿದ್ರಿಸ ತೊಡಗಿದ
ಬಾಲ ಭುವನ. ಸತತವಾಗಿ ಎರಡು ಸೋಲು! ಮುಂದಿನ ಬಾರಿ ಬಹಳ ಜಾಗರೂಕತೆಯಿಂದ ದಾಳಿ ಮಾಡಬೇಕೆಂದು ತೀರ್ಮಾನಿಸಿ
ದೊಡ್ಡ ಯೋಜನೆಯೊಂದನ್ನು ನಿರ್ಮಿಸುತ್ತಾ ದೇವರು ಕೆಲಕಾಲ ತಲೆಮರೆಸಿಕೊಂಡ.
ಅದೇ
ಸಮಯದಲ್ಲಿ ಬಾಲಕನಿಗೆ ಭುವನ ಎಂಬ ನಾಮವನ್ನು ಇತ್ತು ಹೆತ್ತವರು ಕೃತಾರ್ಥರಾಗಿದ್ದರು. ಮೊದಲ ಹುಟ್ಟಿದಬ್ಬದಂದೇ
ದೇವರು ನೆರೆದಿದ್ದ ಹಲವು ಸಂಬಂಧಿಗಳಲ್ಲಿ ಸೇರಿಕೊಂಡು ತನ್ನ ವಕ್ರ ದೃಷ್ಟಿ ಬೀರಿ ಕಣ್ಣೆಸರಾಗುವಂತೆ
ಮಾಡಿ, ಭುವನ ಅತಿಸಾರ ವಂತಿ ಬೇಧಿಯಿಂದ ನರಳುವಂತೆ ಮಾಡಿದ, ವೈದ್ಯರು ಆಹಾರದಲ್ಲಿ ತೊಂದರೆಯೆಂದರು,
ಹಿರಿಯರು ದೃಷ್ಟಿಯಾಗಿದೆ ಎಂದರು ಆದರೆ ಭುವನನಿಗೆ ಮಾತ್ರ ಗೊತ್ತಿತ್ತು ಆ ದೃಷ್ಟಿ ಬೇರಾರದ್ದೂ ಅಲ್ಲ
ಈ ಅಸುರನದ್ದೇ ಎಂದು. ಧೈರ್ಯ ಇದ್ದರೆ ಎದುರಿಗೆ ಬಂದು ಧಾಳಿ ಮಾಡೋ ಜನಗಳ ನಡುವಿನಲ್ಲಿ ನಿಂತು ಏಕೆ
ಎದುರಿಸುತ್ತಿದ್ದೀಯೆ ಎಂದು ಸವಾಲ್ ಕೂಡ ತನ್ನ ಕಟ್ಟಿದ ಮುಷ್ಟಿಯಲ್ಲಿ ಮಾಡಿದರೂ ಕೇಳಿಸಿಕೊಳ್ಳಲು ದೇವರೆಲ್ಲಿದ್ದ
ಸುತ್ತ ಮುತ್ತ ಎಲ್ಲೂ ಕಾಣದ ಹಾಗೆ ಈ ಬಾರಿ ತನ್ನದೇ
ಗೆಲುವೆಂದು ಅಷ್ಟದೇವತೆಗಳಿಗೆ ಪಾರ್ಟಿ ಕೊಡುತ್ತಿದ್ದ. ನಂತರ ಗೊತ್ತಾಗಿ ಥೂ ಪಾರ್ಟಿಯೆಲ್ಲಾ ವೇಸ್ಟ್
ಆಯಿತಲ್ಲಾ ಎಂದು ಮಮ್ಮಲನೆ ಮರುಗಿದನಲ್ಲದೆ ತನ್ನ ಮತ್ತೊಂದು ಸೋಲಿನ ಸೇಡನ್ನೂ ತೀರಿಸಿಕೊಳ್ಳುವುದಾಗಿ
ಮತ್ತೊಂದು ಯೋಜನೆ ನಿರ್ಮಿಸುವುದೆಂದು ತೀರ್ಮಾನಿಸಿದ. ಏನು ಮಾಡಿದರೆ ಈ ಭುವನನನ್ನು ಮುಗಿಸಬಹುದು, ಒಂದು
ದಾರಿ ಇರಲೇ ಬೇಕಲ್ಲಾ ಎಂದು ತನ್ನ ತಲೆಗೆ ಪೂರ್ತಿ ಕೆಲಸ ಕೊಟ್ಟು ಹಲವು ದಿನಗಳ ನಂತರ ಯಾವಾಗಲೂ ಭುವನನ
ಜೊತೆಗಿರುತ್ತಿದ್ದ ತಾಯಿಯನ್ನೇ ಯಾಕೆ ಬಳಸಬಾರದೆಂದು ಹೊಂಚು ಹಾಕಿದ. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
ಆದರೂ ಗೆಲುವು ಮುಖ್ಯವಾಗಿತ್ತು.
ಭುವನನ
ತಾಯಿ ಅಪಾರ ದೈವಭಕ್ತೆ. ಪ್ರತಿನಿತ್ಯ ದೇವರಿಗೆ ಪೂಜೆ ಸಲ್ಲಿಸಿಯೇ ತಾನೂ ಮತ್ತು ಭುವನನಿಗೂ ಹೊಟ್ಟೆಗೆ
ಏನನ್ನಾದರೂ ಹಾಕುತ್ತಿದ್ದುದು. ಭುವನನಿಗೆ ಇದು ಸುತರಾಂ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಬೆಳಗ್ಗೆ ಎದ್ದವನೇ
ಚಂಡಿ ಹಿಡಿದು, ಉಣಿಸುವವರೆಗೂ ಬಿಡುತ್ತಿರಲಿಲ್ಲ. ತಾಯಿ ಮಾತ್ರ ಹಸಿದುಕೊಂಡೇ ದೇವಸ್ಥಾನಕ್ಕೆ ಹೋಗಿ
ನಂತರ ಏನನ್ನಾದರೂ ಸೇವಿಸುತ್ತಿದ್ದಳು. ದೇವರ ಬಳಿ ಆಕೆ ಕೇಳಿಕೊಳ್ಳುತ್ತಿದ್ದುದೂ ಸಹ ಒಂದೇ ವರ. ತನ್ನ
ಮಗ ಭುವನನಿಗೆ ಆಯುರಾರೋಗ್ಯ ಕರುಣಿಸು ತನಗೆ ಏನೂ ಬೇಡ ಎಂದು. ಮುಂಚೆ ದಾನವರು ಮೃತ್ಯುಂಜಯ ವರ ಕೇಳಿಕೊಂಡಾಗ
ಕೊಡಲಾಗದೆಂದು ಹೇಳಿ ಯರಿಂದಲೂ ಸಾವು ಬರದ ಹಗೆಯೋ, ಹೆಣ್ಣಿನಿಂದಲೋ, ಮೂಲೋಕಜೀವಿಗಳಿಂದಲ್ಲದೆ ತನ್ನಿಚ್ಚೆಯಿಂದ
ಮಾತ್ರ ಮರಣಬರಲೆಂದೋ, ಯಾರೂ ಸಾಯಿಸದಂತೆಯೋ ಇನ್ನೊಂದು ಮತ್ತೊಂದು ವರವನ್ನು ಬದಲಿಗೆ ಕೇಳುವಂತೆ ಮಾಡಿ
ಕುತಂತ್ರದಿಂದ ವರವನ್ನಿತ್ತು ನಂತರ ಅವರ ವರವೇ ಅವರಿಗೆ ಮುಳುವಾಗುವಂತೆ ಮಾಡಿ ಸಂಹರಿಸಿ ಒಳ್ಳೆಯ ಅನುಭವವಿದ್ದ
ದೇವರು ಈಗಲೂ ಸಹ ತಾಯಿಯ ಪ್ರಾರ್ಥನೆಯಂತೆ ತಥಾಸ್ತು ಎಂದು ವರವನಿತ್ತು ಕರುಣಿಸುವುದಾಗಿ ಬಲಬದಿಯ ಹೂವನ್ನು
ಬೀಳಿಸಿಯೋ, ಇನ್ನೊಂದೋ ಮತ್ತೊಂದೋ ಸಿಗ್ನಲ್ ನೀಡಿ ವರನೀಡಿದನು. ಅದನ್ನು ನಂಬಿದ ತಾಯಿ ಎಲ್ಲಾ ಮಾಮೂಲಿನ
ಅಸುರರಂತೆ ಯಶಸ್ಸಿನ ಆಚರಣೆಗೆ ತೊಡಗಿದಳು. ಮಗನಿಗೆ ಆಯುರಾರೋಗ್ಯ ಕರುಣಿಸು ಎಂದು ಕೇಳಿದ್ದಕ್ಕೆ ಆಯುರಾರೋಗ್ಯ
ಕರುಣಿಸುವೆನು ಆದರೆ ಎಂತಹ ಆಯುರಾರೋಗ್ಯ ಎಂದು ಆಕೆ ಕೇಳಿರಲಿಲ್ಲವಲ್ಲ, ಅದನ್ನು ಆತ ಉಪಯೋಗಿಸಲು ಮುಂದಾದ.
ತಾಯಿಯಲ್ಲಿಯೇ ಸೇರಿ ಈ ವರವನ್ನು ಕರುಣಿಸುವುದಾಗಿ ನಿರ್ಧರಿಸಿ ತಾಯಿಯನ್ನು ಪ್ರವೇಶಿಸಿ ಭುವನನಿಗೆ
ಈಗ ದೊಡ್ಡ ಯುದ್ಧದ ಮುಂಸೂಚನೆಯನ್ನು ನೀಡಿದ. ಭುವನ ಈಗ ನಿಜವಾಗಲೂ ಗೊಂದಲದಲ್ಲಿ ತೊಡಗಿದ. ತನ್ನ ತಾಯಿಗಾಗಿ
ತಾನು ಪ್ರಾಣಬಿಡಲೂ ಸಿದ್ಧನಿದ್ದ. ಆದರೆ ಆ ತಾಯಿಯಲ್ಲಿ ಈಗ ದೇವರು ಸೇರಿ ದೇವರ ವಿರುದ್ಧ ಯುದ್ಧ ಸಾರಿದರೆ
ತಾಯಿಗೆ ಏನಾದರೂ ಕೇಡುಂಟಾದರೆ ಏನು ಮಾಡುವುದೆಂದು ಚಿಂತೆಗೊಳಗಾದ. ದೇವರ ಈ ಬುದ್ಧಿವಂತಿಕೆಯ ಹೆಜ್ಜೆಯನ್ನು
ವೈರಿಯಾಗಿದ್ದುಕೊಂಡೂ ಶ್ಲಾಘಿಸಿದನಾದರೂ ಮುಂದಿನ ಯುದ್ಧಕ್ಕೆ ಮಾನಸಿಕವಾಗಿ ಸನ್ನದ್ಧನಾದ.
ಭುವನನಿಗೆ
ಆರೋಗ್ಯ ಕೊಂಚ ಅಸ್ಥಿರವಾದರೂ ವೈದ್ಯರ ಬಳಿ ಹೋಗದೆ ಹಲವು ದೇವಸ್ಥಾನಕ್ಕೋ, ದೇವರ ಸೇವಕರಾದ ಮಂತ್ರವಾದಿಗಳ
ಬಳಿಯೋ ಹೋಗಿ ಯಂತ್ರ ಕಟ್ಟಿಸಿಯೋ, ಮಂತ್ರ ಹಾಕಿಸಿಯೋ, ಪ್ರಸಾದ, ಬೂದಿ ಬಾಯಿಗೆ ಹಾಕಿಯೋ, ಕುಂಕುಮ,
ಗಂಧ ಲೇಪಿಸಿಯೋ ಆರೋಗ್ಯ ಸರಿಪಡಿಸಲು ಪ್ರಯತ್ನಿಸುತ್ತಿದ್ದ ದೇವರು ಸೇರಿಕೊಂಡಿದ್ದ ತಾಯಿಯನ್ನು ವಿರೋಧಿಸುತ್ತಾ,
ಪ್ರಸಾದ ಉಗಿದು, ತಿಲಕ ಅಳಿಸಿ ಪ್ರತಿಭಟಿಸಿ ಚಂಡಿ ಹಿಡಿಯುತ್ತಿದ್ದ ಭುವನನಿಗೆ ತಾಯಿ ತಾಳಲಾರದೆ ತಾಳ್ಮೆ
ಕಳೆದುಕೊಂಡು ಹೊಡೆಯಲು ಸಹ ಮುಂದಾದಳು. ಹಿಂದಿರುಗಿಸಿ ತಾಯಿಗೆ ಏನೂ ಮಾಡುವಹಾಗಿಲ್ಲ. ಆದರೆ ದೇವರ ಕುತಂತ್ರವನ್ನು
ಗೆಲ್ಲಲು ಬಿಡುವಹಾಗೂ ಇಲ್ಲ ಆದ್ದರಿಂದ ತನ್ನ ಚಂಡಿತನ, ಪ್ರತಿಭಟನೆ ಏನು ಮಾಡಿದರೂ ನಿಲ್ಲಿಸದೆ, ಬೇರೆ
ದಾರಿ ಕಾಣುವವರೆಗೂ ಮುಂದುವರೆಸುವುದಾಗಿ ಭುವನ ತೀರ್ಮಾನಿಸಿದ. ಈಗ ತಾಯಿ ಮಗನ ನಡುವೆಯೇ ಯುದ್ಧ ಘೋಷಣೆಯಾಯಿತು.
ಆಹಾರ ನೀರು ಸರಿಯಾಗಿ ಸೇವಿಸದೇ ಚಂಡಿ ಹಿಡಿಯುತ್ತಿದ್ದ ಮಗನನ್ನು ಮೊದಮೊದಲು ಹಸಿವಾದ್ರೆ ತಿಂತೀಯಾ, ಇರು ಹಸಿದುಕೊಂಡು ಎಂದು ತಾಯಿ ಬಿಟ್ಟುಬಿಡುತ್ತಿದ್ದಾಗ ತನಗೆ ಗೊತ್ತಿದ್ದ ಒಂದೇ ಪ್ರತಿಭಟನಾ ಮಾರ್ಗ
ಅಳುವುದನ್ನು ಜೋರುಮಾಡುತ್ತಿದ್ದ ಭುವನ. ತಾಯಿಯೇ ಈಗ ವಿರೋಧ ಪಕ್ಷವಾದಾಗ ತಾನು ಒಂಟಿಯಾದಂತೆಯೇ ಇನ್ನು
ತಾನು ಯುದ್ಧ ನಡೆಸುವುದರಲ್ಲಿ ಏನೂ ಪ್ರಯೋಜನವಿಲ್ಲ ಎಂದು ಕೈಚೆಲ್ಲುವುಷ್ಟರಲ್ಲಿ ತಂದೆ ಮಗನ ಕೈ ಹಿಡಿದು
ತಾಯಿಯನ್ನು ಜರಿದು ಲಾಲನೆಗೆ ಮುಂದಾಗಿದ್ದನ್ನು ಕಂಡು ನೂರು ಆನೆ ಬಲ ಪಡೆದು ಮತ್ತೆ ನಕ್ಕ. ತನಗೆ ಬದುಕುವುದಕ್ಕೆ
ಇನ್ನೂ ಕಾರಣಗಳಿವೆ. ತಾನು ಇನ್ನೂ ಸೆಣೆಸಬೇಕು. ಆಗಿದ್ದಾಗಲಿ ಈ ಸೋಲನ್ನ ಇನ್ನು ಮುಂದೆ ಒಪ್ಪುವುದಿಲ್ಲವೆಂದು
ಧೃಢ ಸಂಕಲ್ಪ ಮಾಡಿದನು.
ತಾಯಿಯೊಳಗಿದ್ದ
ದೆವರು ತಾಯಿಯನ್ನು ಭುವನನ್ನು ನಿರ್ಲಕ್ಷಿಸುವಂತೆ ಮಾಡಲು ತಾಯಿಯಲ್ಲಿ ಆಲಸ್ಯ, ಬೇಜವಾಬ್ದಾರಿತನ, ಸೋಂಬೇರಿತನ
ಮೈಗೂಡಿಸಿದನು. ತಾಯಿ ಸದಾ ಕಾಲ ಮಲಗಿಯೋ, ಟೀವಿ ನೋಡುತ್ತಲೋ ಭುವನನ ಕಡೆಗೆ ಹೆಚ್ಚು ಗಮನ ಕೊಡದೆ ಭುವನನ
ಸಿಂಬಳ ತುಂಬಿದ ಮೂಗು ಹಾಗೇ ಬಿಟ್ಟು, ಸ್ನಾನಾದಿಗಳನ್ನು ಎರಡು ಮೂರು ದಿನಗಳಿಗೊಮ್ಮೆ ಮಾಡುತ್ತಲೋ,
ಆಹಾರಾದಿಗಳನ್ನು ರುಚಿಕರವಾಗಿ ಮಾಡದೆಯೋ ಎಲ್ಲ ಭುವನನ ತಂದೆಯೇ ನೋಡಿಕೊಳ್ಳಲೆಂದು ಬಿಟ್ಟುಬಿಡುತ್ತಿದ್ದರು.
ಭುವನನ ತಂದೆಯು ಮನೆಯಲ್ಲಿದ್ದಾಗ ಯವಾಗಲೂ ಭುವನನ್ನು ಉಪಚರಿಸುವಲ್ಲಿ ಆಸ್ಥೆವಹಿಸುತ್ತಿದ್ದರು. ಆದರೆ
ದಿನದ ಮುಕ್ಕಾಲು ಪಾಲು ಕೆಲಸದಲ್ಲಿ ಹೊರಗಿರುತ್ತಿದ್ದರಿಂದ ಸರಿಯಾಗಿ ಅಂತೂ ಶುಭ್ರವಾಗಿರಲು, ಹೊಟ್ಟೆಗೆ
ಸರಿಯಾಗಿ ಬೀಳಲು ತೊಂದರೆಯೇ ಆಗಿತ್ತು ಭುವನನಿಗೆ. ಇದರಿಂದಾಗಿ ಜ್ವರ, ನೆಗಡಿ, ಹೊಟ್ಟೆ ಉಬ್ಬರಿಸುವುದು
ಇನ್ನೊಂದು ಮತ್ತೊಂದು ಖಾಯಿಲೆಗೆ ತುತ್ತಾಗಿಯೇ ಇರುತ್ತಿದ್ದ. ಒಟ್ಟಿನಲ್ಲಿ ಭುವನನಿಗೆ ಏನೇ ತೊಂದರೆ
ಬಂದರೂ ದೇವರನ್ನೊಳಗೊಂಡಿದ್ದ ತಾಯಿ ದೇವರ ಶಕ್ತಿಯನ್ನೂ ಮೀರಿ ಮತ್ತೆ ದೇವಸ್ಥಾನಗಳ ಮೊರೆ ಹೋಗುತ್ತಿದ್ದಳು.
ಸದಾ ಕಾಲ ವೈದ್ಯರ ಸಲಹೆಯ ಮೇರೆಗೆ ಔಷಧಿಯನ್ನು ಸರಿಯಾದ ಸಮಯಕ್ಕೆ ನೀಡಬೇಕೆಂದರೂ ಇಂದು ಹುಣ್ಣಿಮೆ,
ಇಂದು ಸಂಕಷ್ಟಿ ಎಂದು, ಇಂದು ಅಮಾವಸ್ಯೆಯೆಂದೂ ಏನೋ ಕಾರಣ ಒಡ್ಡಿ ಅಂದೂ ಸಹ ಔಷಧಿ ಮಗನಿಗೆ ಕೊಡಬಾರದೆಂದು,
ಔಷಧಿ ಸರಿಯಾಗಿ ಭುವನನಿಗೆ ತಲುಪಿಸದೆ ಮತ್ತೆ ಖಾಯಿಲೆ ಉಲ್ಬಣಿಸುವುದರಲ್ಲಿ ಕಾರಣರಾಗಿ, ಅದರಿಂದಾಗಿ
ಜ್ವರ ನೆತ್ತಿಗೆ ಏರಿ ಭುವನ ಜ್ಞಾನ ಕಳೆದುಕೊಂಡು, ಹೇಗೆ ಹೇಗೋ ಆಡುವಹಾಗೆ ಆದರೂ, ಆ ಸ್ಥಿತಿಯಲ್ಲೂ
ಇಂದು ಅಮಾವಸ್ಯೆ, ಇಂದು ಆಸ್ಪತ್ರೆಗೆ ಹೋಗಬಾರದೆಂದು ತಡೆಯುತ್ತಿದ್ದ ತಾಯಿಯನ್ನು ಹೊಡೆದು, ಬಯ್ದು
ಗಂಡ ಆಸ್ಪತ್ರೆ ಸೇರಿಸಿ ಗುಣಪಡಿಸಿ ಮರುಕಳಿಸಿದರೆ, ಮತ್ತದೇ ವರಸೆ. ಈ ರೀತಿ ಪದೇ ಪದೇ ಭುವನನಿಗೆ ದೇಹಸ್ವಾಸ್ಥ್ಯ
ಕೆಡಲು ಕಾರಣವೇನೆಂದು ವೈದ್ಯರನ್ನೇ ಕೇಳಿದರೆ ಸಮಯಕ್ಕೆ ಸರಿಯಾಗಿ ಔಷಧಿ ನೀಡದಿರುವುದೇ ಕಾರಣ ಎಂದು
ಗುಟ್ಟನ್ನು ರಟ್ಟು ಮಾಡಲು ಗಂಡ ಹೆಂಡಿರಲ್ಲಿ ಮನೆಯಲ್ಲಿ ಜಗಳ ಶುರುವಾಗುತ್ತದೆ. ಹೆಂಡತಿಯ ಈ ಮೂರ್ಖತನಕ್ಕೆ
ಏನು ಮಾಡುವುದೆಂದು, ಅವಳ ನಂಬಿಕೆಯನ್ನು ಅಲ್ಲಗಳೆಯಲೂ ಆಗದೆ, ಅವಳನ್ನು ತಿದ್ದಲೂ ಆಗದೆ, ದಿನಂಪ್ರತಿ
ಆ ದೇವರು, ಈ ದೇವಸ್ಥಾನ, ಊ ಸ್ವಾಮೀಜಿಗಳು ಎಂದು ತಿರುಗುವ ಹೆಂಡತಿ ಮಗನಿಗೆ ಸಮಯಕ್ಕೆ ಸರಿಯಾಗಿ ಔಷಧಿಯನ್ನೂ
ಕೊಡಲು ಮರೆಯುವಳಲ್ಲಾ ಎಂದು ಆ ಹೊಣೆಯನ್ನು ತಾನೇ ನಿರ್ವಹಿಸುವುದಾಗಿ ತೀರ್ಮಾನಿಸಿದ. ಕೆಲವೊಮ್ಮೆ ಒಂದು
ಸಾರಿಗೆ ಎರಡೆರಡು ಬಾರಿ ತಾಯಿಯಿಂದಲೂ, ತಂದೆಯಿಂದಲೂ ಔಷಧಿ ಪಡೆದು, ಕೆಲವು ಬಾರಿ ಔಷಧಿಯನ್ನೇ ಪಡೆಯದೆ
ಹೀಗೇ ಮತ್ತೆ ಮತ್ತೆ ಒಂದಲ್ಲಾ ಒಂದು ಖಾಯಿಲೆಗೆ ತುತ್ತಾಗಿ, ಚೇತರಿಸಿಕೊಂಡು ಮತ್ತೆ ಮೃತ್ಯುಂಜಯನಂತೆಯೇ
ಹೊರಬರಲು ತಾಯಿಯೊಳಗಿದ್ದ ದೇವರು ಯಾಕೋ ಈ ದಾರಿಯೂ ಸರಿಯಾಗಿ ಪರಿಣಾಮ ಬೀರುತ್ತಿಲ್ಲವೆಂದು ಹೊರಗೆ ಓಡಿದನು.
ತಾಯಿಗೆ
ಜ್ಞಾನೋದಯವಾಗಿ ಮಗನ ಲಾಲನೆ ಪಾಲನೆಯಲ್ಲಿ ದೇವರ ಅಗತ್ಯಕ್ಕಿಂತ ವೈದ್ಯರ, ಉಪಚಾರದ, ತಾಯಿಯ ಪ್ರೀತಿಯ,
ಶುಚಿ ರುಚಿ ಆಹಾರದ, ಅಗತ್ಯವೇ ಹೆಚ್ಚಿದೆಯೆಂದು ಮನಗಂಡಳು. ಕಂಡ ಕಂಡ ಪೂಜಾರಿಗಳ ಮಾತಿಗಿಂತ ಗಂಡನ ಮಾತಿನಂತೆ
ನಡೆಯುವುದು ಲೇಸೆಂದು ಪರಿಗಣಿಸಿದಳು. ಭುವನನ ತಾಯಿ ಮತ್ತೆ ತನಗೆ ದೊರಕಿದ್ದಕ್ಕೆ ಖುಷಿಪಟ್ಟನು. ಈಗ
ನಾಲ್ಕು ವರುಷದಲ್ಲಿ ಹಲವಾರು ದಾಳಿಗೆ ತುತ್ತಾಗಿ, ಇನ್ನೂ ನಗುತ್ತಿರುವ ಉತ್ಸಾಹದ ಚಿಲುಮೆಯಂತ ಭಾರತದ
ಸಂಕೇತದಂತೆ ಭುವನನು ನಕ್ಕನು. ನಾಲ್ಕು ವರ್ಷಕ್ಕೇ ತೊಡೆ ತಟ್ಟಿ ನೂರಲ್ಲಾ ಇನ್ನೂ ಸಾವಿರ ಸಲ ಬಂದು
ಆಕ್ರಮಣ ಮಾಡು ನಿನ್ನೇ ಅಲ್ಲ ನಿಪ್ಪನ್ನೂ ಸೋಲಿಸ್ತೀನಿ ದೇವರ್ ನನ್ನ ಮಗನೇ ಬಾ ಅದೆಲ್ಲಿದ್ಯಾ ಎಂದು
ಗುಡುಗು ಹಾಕಿದನು. ಪ್ರತಿ ಸಾರಿ ಸೆಡ್ಡು ಹೊಡೆದು ನಿಂತ ಭಾರತವನ್ನು ಕಂಡು ಇಲಿಮರಿಗಳಂತೆ ಪಾಕಿಸ್ತಾನದಲ್ಲೋ
ಇನ್ನೆಲ್ಲೋ ಬಿಲದಲ್ಲಿ ಅವಿತು, ಮುಂದಿನ ಯೋಜನೆ ಹಾಕುವ ಆತಂಕವಾದಿಗಳಂತೆ ದೇವರೂ ಸಹ ಎಲ್ಲೋ ಅವಿತುಕುಳಿತು
ಬಾಂಬ್ ದಾಳಿಗೋ, ಆತ್ಮಾಹುತಿ ದಾಳಿಗೋ, ಇನ್ನೊಂದೋ ಮತ್ತೊಂದೋ ಯೋಜನೆ ಯೋಜಿಸುತ್ತಾ ಇನ್ನೂ ಯುದ್ಧಕ್ಕೆ
ಬಿಳಿ ಬಾವುಟ ತೋರಿಸದೆ ಇರುವನು. ಸಾವಿರ ಸೋಲಿನ ಸರದಾರನಾಗಿ, ಮುಖಭಂಗಾಲಂಕೃತ ದೇವರೂ, ಸೋಲಿಲ್ಲದ ಮೃತ್ಯುಂಜಯನಾಗಿ
ವಿಜಯಕುಲತಿಲಕ ಧರಿಸಿದ ಭುವನನೂ ಇನ್ನೂ ಸೆಣಸುತ್ತಲೇ ಇರುವರು.
- ಹೇಮಂತ್
No comments:
Post a Comment