ಓದಿ ಓಡಿದವರು!

Monday 6 August 2012

ಕಾಲ!
 ಪ್… ಟಪ್… ಟಪ್… ಎಂಬ ನಿರಂತರ ಶಬ್ಧ.
ದೊಡ್ಡ ಮಂಜು ಮುಸುಕಿದ ಕೋಣೆ. ಹಿಂದೆ ಎಲ್ಲೋ ಒಂದು ದೊಡ್ಡ ಗಡಿಯಾರ ಒಂದೊಂದು ಸೆಕೆಂಡಿಗೂ ಟಪ್ ಟಪ್ ಟಪ್ ಎಂದು ಸದ್ದು ಮಾಡುತ್ತಾ ತಿರುಗುತ್ತಿರುವ ಗಡಿಯಾರದ ಮುಳ್ಳು. ಘಮ್ಮನೆ ಸುಗಂಧ ಬೀರುತ್ತಿರುವ ಅದಾವುದೋ ದ್ರವ್ಯ. ಅಲ್ಲೆಲ್ಲೋ ತುಂಬಾ ದೂರದೂರದಲ್ಲಿ ಬಾರಿಸುತ್ತಿರುವಂತೆ, ಕೀರಲಾಗಿ ಅಲೆ ಅಲೆಯಾಗಿ ತೇಲಿ ಬರುತ್ತಿರುವ ಅದಾವುದೋ ಸಿತಾರೋ ವೀಣೆಯದೋ ನಾದ. ಈ ಕೋಣೆಗೆ ಗೋಡೆಗಳಿವೆಯೋ ಇಲ್ಲವೋ ಗೊತ್ತಿಲ್ಲ. ದೊಡ್ಡ ದೊಡ್ಡ ಕಿಟಕಿಗಳಂತೂ ಅಲ್ಲಲ್ಲಿ ಇವೆ. ಹಾಗೇ ಒಳ ಪ್ರವೇಶಿಸಿ ಕಿಟಕಿಯ ಬಳಿ ಹೊರಗಿಣುಕಿದರೆ ದೊಡ್ಡ ಹಸಿರಸಿರು ಬೆಟ್ಟಗಳು ಮಧ್ಯದಲ್ಲೆಲ್ಲೋ ಚಲಿಸುತ್ತಿರುವ ಮೋಡಗಳ ನಡುವಿನಿಂದ ಕಾಣುತ್ತಿರುವ ಜಲಪಾತ ಯಾವುದರ ಪರಿವೆಯೂ ಇಲ್ಲದೆ ಹಾರುತ್ತಿರುವ ಹಕ್ಕಿಗಳು. ಆಹಾ ಕಣ್ಣುಗಳನ್ನು ಮುಚ್ಚಿ ಆಸ್ವಾದಿಸಬೇಕಷ್ಟೇ ಆ ಹೊರಗಿನ ಪ್ರಪಂಚವನ್ನ. ಢಣ್ಣ್!!!! ಗಡಿಯಾರ ಎಚ್ಚರಿಸಿತು.

ಒಂದು ಮೇಜು ಅದರ ಮೇಲೆ ಹಣ್ಣು ಹಂಪಲು, ಸಿಹಿ ತಿನಿಸುಗಳು, ಹಾಲು ಸುಗಂಧ ಪಸರಿಸುತ್ತಿರುವ ಗಂಧದ ಕಡ್ಡಿಗಳು. ನೋಡಿದ್ದೇ ಅದೆಲ್ಲಿತ್ತೋ ಹಸಿವು ಥಟ್ಟನೆ ಶುರುವಾಗಿಹೋಯ್ತು. ಹೊಟ್ಟೆ ಚುರುಗುಟ್ಟಿದ್ದೇ ಕಾಲುಗಳು ತನ್ನಿಂತಾನೇ ಎಳೆದುಕೊಂಡು ಅದರ ಬಳಿ ಹೋಗಿ ನಿಲ್ಲಿಸಿತು. ಯಾವುದನ್ನ ಭಕ್ಷಿಸಲಿ. ಹೊಟ್ಟೆ ರಾಕ್ಷಸಾಕಾರ ತೊಟ್ಟು ಎಲ್ಲವನ್ನೂ ಒಂದೇ ಸಾರಿ ಮುಗಿಸಿಬಿಡು ಎನ್ನುತ್ತಲಿದೆ. ಇನ್ನೇನು ಮುಟ್ಟಬೇಕು ಅರೆರೆ! ಹೊಳೆಯುತ್ತಿರುವ ಬಂಗಾರ, ದುಡ್ಡಿನ ಥಾಲಿ. ಆಸೆಯ ಮುಂದೆ ಹಸಿವು ಎಂಥದ್ದು! ಹಣ್ಣು ಹಸಿವು ಎಲ್ಲ ಒಂದೇ ಏಟಿಗೆ ಥಟ್ಟನೆ ಕಣ್ಣಿನಿಂದ ಮರೆಯಾಗಿ ಬರೀ ಬಂಗಾರ, ದುಡ್ಡೇ ಕಾಣಿಸುತ್ತಲಿದ್ದವು. ಬಿಟ್ಟರೆ ಕಣ್ಣುಗಳು ನನ್ನಿಂದ ಕಿತ್ತುಕೊಂಡು ಹೋಗಿ ಬಂಗಾರಕ್ಕೆ ಅಂಟಿಬಿಡುತ್ತಿದ್ದವೇನೋ. ಮೊದಲು ಅಷ್ಟೂ ಅಮೂಲ್ಯವಾದವುಗಳನ್ನು ಸಾಧ್ಯವಾದಷ್ಟೂ ಬಾಚಿಕೊಂಡು ಇಲ್ಲಿಂದ ಪೇರಿ ಕಿತ್ತಬೇಕೆಂದುಕೊಂಡೆ. ನನ್ನ ಆಲೋಚನೆಗೆ ನನಗೇ ನಗು ಬಂತು. ಎಲ್ಲಿಗೆಂದು ಓಡುವುದು? ಇಲ್ಲಿ ನನ್ನಿಂದ ಕಿತ್ತುಕೊಳ್ಳುವವರೂ ಯಾರೂ ಇಲ್ಲವಲ್ಲ. ಆದರೆ, ದುಡ್ಡಿದೆ ಎಂದರೆ ಅಷ್ಟು ಸುಲಭವಾಗಿ ಅದು ನನಗೆ ಸಿಗುವಹಾಗಂತೂ ಇರುವುದಿಲ್ಲ. ನೂರು ರೂಪಾಯಿ ಬೇಕೆಂದರೆ ದಿನವಿಡೀ ದುಡಿಯಬೇಕಾದೀತು. ಮೂವತ್ತು ರೂಪಾಯಿಗೆ ದೇಹ ಮಾರಿಕೊಂಡು ಸಂಪಾದಿಸುವವರಿದ್ದಾರೆ ಇನ್ನ ಇಷ್ಟು ರಾಶಿ ಹಣ! ಯಾರಾದರೂ ಇದ್ದೇ ಇದ್ದಾರೆಂದು ಆ ಮಂಜು ಮುಸುಕಿದ ಕೋಣೆಯಲ್ಲಿ ಸಾಧ್ಯವಾದಷ್ಟೂ ಕಣ್ಣರಳಿಸಿ ತೀಕ್ಷ್ಣವಾಗಿ ಪರಿಶೀಲಿಸಲು ಯತ್ನಿಸಿದೆ. ಕಾವಲಿಗೆ ಯಾರೂ ಇರಲಿಲ್ಲ. ಆದರೆ!

ಆದರೆ, ಇಡೀ ಪ್ರಪಂಚವನ್ನೇ ಮರೆಸಿಬಿಡುವ, ನೀಲ ಕಣ್ಗಳ, ಕಪ್ಪಾನೆ ಕಪ್ಪು ಗುಂಗುರು, ನೀಳ ಕೇಶರಾಶಿಯ ಹಾಲಿನ ವರ್ಣವನ್ನೂ ನಾಚಿಸುವಂತಹ ತೊಗಲುಳ್ಳ ಸುಂದರಿಯೋರ್ವಳು ಸುಮ್ಮನೆ ಕುಳಿತುರುವಳು. ಹೊರಗಿನ ಸುಂದರ ಪ್ರಪಂಚ, ಈ ಹಸಿವು ನೀಗಿಸುವ ವಿವಿಧ ಭಕ್ಷ್ಯ ಭೋಜನಗಳು, ಬಾಯಾರಿಸುವ ಹಾಲು, ಸುತ್ತೆಲ್ಲೆಲ್ಲೂ ಬೇಕಾಬಿಟ್ಟಿ ಬಿದ್ದಿರುವ ವರ್ಣರಂಜಿತ ತರಹೇವಾರಿ ಧಿರಿಸುಗಳು, ಅಷ್ಟೇ ಏಕೆ ಕಣ್ಣೆದುರಿಗೇ ಹೇರಳವಾಗಿ ಸುರಿದುಕೊಂಡಿರುವ ವೈಢೂರ್ಯಗಳೂ ಸಹ ನಿವಾಳಿಸಿ ಎಸೆದುಬಿಟ್ಟೇನು ಅವಳಿಗಾಗಿ. ಒಮ್ಮೆ ನನ್ನೆಡೆ ತಿರುಗಿ ನೋಡಬಾರದಾ ಅವಳು ಎಂದುಕೊಳ್ಳುತ್ತಿದ್ದಂತೆಯೇ ಅಯ್ಯಯ್ಯೋ ನನ್ನೆಡೆಗೇ ತನ್ನ ಕಣ್ಣ ಗೊಂಬೆಗಳನ್ನ ತಿರುಗಿಸಿ ಮಂದಹಾಸದೊಂದಿಗೆ ನೋಡಿಯೇ ಬಿಟ್ಟಳು. ಎದೆ ಒಮ್ಮೆ ತನ್ನ ಬಡಿತ ಸ್ಥಗಿತಗೊಳಿಸಿ ಉಸಿರು ಒಳಗೇ ಕಟ್ಟಿಕೊಂಡಿತು. ಅವಳು ನನ್ನೆಡೆಗೆ ತಿರುಗಿದ್ದೇ, ನಾನು ಅವಳಿಂದ ಕಣ್ಣು ತಿರುಗಿಸಿ ಅವಳಿಗೆ ಬೆನ್ನು ಹಾಕಿ ನಿಂತಿದ್ದಕ್ಕೆ ಬೇಸರಿಸಿದಳೋ ಏನೋ. ಇನ್ನೂ ನನ್ನೆಡೆಗೇ ನೋಡುತ್ತಲಿರಬಹುದೇ? ಅರೆರೆ, ಇವಳನ್ನೇ ದುಡ್ಡು ಕಾಯಲಿಕ್ಕಾಗಿ ಏಕೆ ಬಿಟ್ಟಿರಬಾರದು. ಇವಳನ್ನು ನೋಡಿದವನು ಮತ್ತೆ ದುಡ್ಡಿನ ಕಡೆಗಂತೂ ಹೋಗಲಾರನು. ಇಲ್ಲ ನಾನು ಮೋಸ ಹೋಗಬಾರದೆಂದೆನಿಸಿತು. ದುಡ್ಡಿದ್ದರೆ ಎಲ್ಲಾ ಸಿಕ್ಕಂತೆಯೇ, ಎಲ್ಲವನ್ನೂ ಪಡೆದುಕೊಳ್ಳಬಹುದು. ಆದರೆ ಅವಳ ಹಿಂದೆ ಹೋದರೆ, ಅವಳೂ ಒಂದಲ್ಲ ಒಂದು ದಿನ ದುಡ್ಡು ಕೇಳಿಯೇ ಕೇಳುತ್ತಾಳೆ. ದುಡ್ಡು ಮುಖ್ಯ. ಛೆ ಛೆ ಇಲ್ಲ ಇಂಥವಳ ಸಹವಾಸವಿಲ್ಲದ ದುಡ್ಡು ಇಟ್ಟುಕೊಂಡು ಏನು ಉಪ್ಪಿನಕಾಯಿ ಹಾಕಿಕೊಂಡು ನೆಕ್ಕಲ. ಅವಳ ಕಡೆ ಮತ್ತೆ ತಿರುಗುವ ಧೈರ್ಯ ಮಾಡೋಣವೆಂದರೆ ಧೈರ್ಯ ಸಾಲದು. ನಾನು ಅವಳ ವಿರುದ್ಧ ತಿಕ್ಕಿನಲ್ಲಿ ತಿರುಗಿದ್ದರೂ ನನ್ನ ಕಣ್ಣುಗಳು ಮಾತ್ರ ಅವಳಲ್ಲೇ ನೆಟ್ಟಿತ್ತು. ಕಣ್ಣಲ್ಲೇ ಅವಳನ್ನು ಇಡಿಯಾಗಿ ಬಿಡಿ ಬಿಡಿಯಾಗಿ ಅಳತೆ ಮಾಡಿ, ಆಸ್ವಾದಿಸಿ, ಅನುಭವಿಸುವಷ್ಟರಲ್ಲೇ ಢಣ್…. ಢಣ್…. ಎಂದು ಹೊಡೆದುಕೊಂಡಿತು ಗಂಟೆ, ಗಡಿಯಾರದ ಗಂಟೆ. ಅದು ಎಬ್ಬಿಸಿದ ಅಲೆಗಳಿಂದ ಒಮ್ಮೆ ಭೂಕಂಪನವಾದಂತಾಗಿ ಸುಧಾರಿಸಿಕೊಂಡು ಮತ್ತೆ ಅವಳೆಡೆಗೆ ತಿರುಗಿದರೆ, ಅವಳೆಲ್ಲಿ. ಅಯ್ಯಯ್ಯೋ ಕಳೆದುಕೊಂಡೆ, ಮೀನಾಮೇಷ ಎಣಿಸಿ ತಪ್ಪು ಮಾಡಿದೆನೇನೋ. ಇಲ್ಲೇ ಎಲ್ಲಾದರೂ ಇದ್ದಾಳು, ದೂರ ಹೋಗಿರಲಾರಳು ಎಂದುಕೊಂಡು ಹುಡುಕುತ್ತಾ ಹೊರಟೆ. ಆ ದೊಡ್ಡ ಗಡಿಯಾರದ ಬಳಿ ಬಂದು ನಿಂತೆ. ಗಡಿಯಾರ ಹತ್ತಿ ಮೇಲಿನಿಂದ ಎಲ್ಲಾದರೂ ಕಾಣುವಳೇನೋ ಎಂದು ಹುಡುಕಿದೆ. ಅವಳು ಮುಂಚೆ ಕುಳಿತಿದ್ದ ಜಾಗದಲ್ಲೇ ಇನ್ನಾರೋ ಕುಳಿತಿರುವ ಹಾಗೆ ಕಂಡಿತು.

ಇವಳು ಮುಂಚಿನವಳಿಗಿಂತಲೂ ಸುಂದರವಾಗಿದ್ದಳು. ಅವಳ ಪಕ್ಕ ಇದ್ದ ಹಣ್ಣು ಹಂಪಲು ಬಾಡಿಹೋಗಿದ್ದವು. ಹೋದವಳು ಹೋದಳು, ಇವಳನ್ನಾದರೂ ಉಳಿಸಿಕೊಳ್ಳಬೇಕೆಂದು ಮನದಲ್ಲೇ ತೀರ್ಮಾನಿಸಿದೆ. ಗಡಿಯಾರದಿಂದ ಇಳಿದು ಮೊದಲು ಅವಳ ಬಳಿ ಹೋಗುವುದೆಂದು ಹೊರಟೆ. ಗಡಿಯಾರ ಮತ್ತೆ ಢಣ್… ಢಣ್…. ಢಣ್ ಎಂದು ಹೊಡೆದುಕೊಂಡಿತು. ಈ ಗಡಿಯಾರ ಬಡಿದುಕೊಂಡ ಹಾಗೆ ಇಲ್ಲಿ ಎಲ್ಲವೂ ಬದಲಾಗುತ್ತೆನಿಸುತ್ತೆ. ಈ ಬಾರಿಯೂ ಬಡಿದುಕೊಂಡಿತು, ಇವಳೂ ಕಳೆದುಹೋಗುವಳೇನೋ ಎಂದು ಹೆದರಿಕೆಯಾಯ್ತು. ಅವಳ ಕಡೆ ತಿರುಗಿದರೆ ಇನ್ನೂ ಅಲ್ಲೇ ಕುಳಿತಿದ್ದಳು. ಅವಳ ಬಳಿಗೆ ಓಡಿದೆ, ಇನ್ನೇನು ಅವಳನ್ನು ಸಮೀಪಿಸಬೇಕು ಕಾಣೆಯಾದಳು. ಹೊಟ್ಟೆ ಉರಿದುಹೋಯ್ತು. ಕ್ರೋಧ ಉಕ್ಕಿಬಂತು. ಈ ಗಡಿಯಾರದಿಂದಲೇ ಎಲ್ಲಾ ಆಗಿದ್ದು ಗಡಿಯಾರವನ್ನು ಒಡೆದುಹಾಕಬೇಕೆಂದು ಗಡಿಯಾರದ ಬಳಿ ನುಗ್ಗಿದೆ.

ಟಪ್.. ಟಪ್… ಟಪ್… ಎಂದು ದೊಡ್ಡದಾಗಿ ಸದ್ದು ಮಾಡುತ್ತಾ ಅದರ ದೈತ್ಯ ಮುಳ್ಳುಗಳು ಸುತ್ತಿ ಸುತ್ತಿ ಸುತ್ತುತ್ತಲೇ ಇದ್ದವು. ಸೆಕೆಂಡಿನ ಮುಳ್ಳಿನ ಮೇಲೆ ಹಾರಿ ಹಿಡಿದುಕೊಂಡೆ. ನಾನು ಅದಕ್ಕೆ ಜೋತುಬಿದ್ದರೂ ಅದು ಅದರ ಪಾಡಿಗೆ ಚಲಿಸುತ್ತಲೇ ಇತ್ತು. ಪ್ರತೀ ಬಾರಿ ಮುಂದೆ ಚಲಿಸುತ್ತಿದ್ದಂತೆಯೂ ಕೈಗಳು ಜಾರುತ್ತಿದ್ದವು. ಇದು ಹೀಗೆ ಅಗುವುದಲ್ಲ. ಬೇರೆಯೇ ಮಾರ್ಗ ಉಪಯೋಗಿಸಬೇಕು ಇದನ್ನು ನಿಲ್ಲಿಸಲಿಕ್ಕೆಂದು ಯೋಚಿಸುತ್ತಿದ್ದಂತೆಯೇ ಸೆಕೆಂಡಿನ ಮುಳ್ಳು ಹನ್ನೆರಡರ ಸಂಖ್ಯೆಯ ಕಡೆಗೆ ಚಲಿಸಲು ಶುರುವಾಯ್ತು. ಕೈ ಜಾರಿ ಅಲ್ಲಿಂದ ಬಿದ್ದರೆ ಪ್ರಾಣ ಉಳಿಯುವುದಂತೂ ಮರೆತುಬಿಡಬೇಕು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಸೆಕೆಂಡಿನ ಮುಳ್ಳು ಹನ್ನೊಂದರ ಹತ್ತಿರ ತಲುಪಿದ್ದೇ ಎಗರಿ ಹನ್ನೊಂದರ ಸಂಖ್ಯೆಯನ್ನು ಹಿಡಿಯಬೇಕೆಂದು ಯೋಜನೆ ಹಾಕಿ ಕಾದೆ. ಹನ್ನೊಂದರ ಹತ್ತಿರ ಬಂತು ಬಂತೇ ಬಂತು ಎಗರಿ ಸಂಖ್ಯೆಯನ್ನು ಹಿಡಿದೇಬಿಟ್ಟೆ ಎನ್ನುವಷ್ಟರಲ್ಲಿ ಜಾರಿ ಮೇಲಿಂದ ಬಿದ್ದು ಏಳರ ಸಂಖ್ಯೆಯ ಮೇಲೆ ಬಿದ್ದೆ. ಅದೆಷ್ಟು ಹೊತ್ತು ಬಿದ್ದಿದ್ದೆನೋ ಗೊತ್ತಿಲ್ಲ. ದೊಡ್ಡ ಮುಳ್ಳು ತಳ್ಳಿ ನನ್ನನ್ನು ಕೆಳಗೆ ಬೀಳಿಸಿದಾಗಲೇ ಎಚ್ಚರವಾಗಿದ್ದು. ಈ ಗಡಿಯಾರವನ್ನು ನಿಷ್ಕ್ರಿಯಗೊಳಿಸುವ ಬದಲು ಹಿಂದಕ್ಕೆ ಹಾಕಿದರೆ! ಆಲೋಚನೆ ಬಂದಿದ್ದೇ ಕಾರ್ಯಗತನಾದೆ. ದೊಡ್ಡ ದೊಡ್ಡ ಕಂಬಗಳಂತಿದ್ದ ಮೂರೂ ಮುಳ್ಳುಗಳನ್ನು ಎಳೆದೆಳೆದು ಶಕ್ತಿ ಮೀರಿ ಜಗ್ಗಿದರೂ, ಸಂಖ್ಯೆಗಳನ್ನು ಕಿತ್ತು ಎಡಗಡೆ ಇರುವುದನ್ನು ಬಲಗಡೆ, ಬಲಗಡೆ ಇರುವುದನ್ನು ಎಡಗಡೆ ಹಾಕಲು ಪ್ರಯತ್ನಿಸಿದರೂ, ಗಡಿಯಾರದ ಬ್ಯಾಟರಿ ಕಿತ್ತಲು ಪ್ರಯತ್ನಿಸಿದರೂ, ಗಡಿಯಾರ ನಿಲ್ಲಲೇ ಇಲ್ಲ. ಗಡಿಯಾರ ಹಿಂದಕ್ಕಂತೂ ಚಲಿಸುವುದಿಲ್ಲ, ಹೋಗಲಿ ಚಲನೆಯಾದರೂ ನಿಧಾನಗತಿಯಲ್ಲಿ ಹೋಗುವ ಹಾಗೆ ಏನಾದರೂ ಮಾಡಬಹುದೇನೋ ಪ್ರಯತ್ನಿಸಿದೆ. ಅದೂ ಸಾಧ್ಯವಾಗಲಿಲ್ಲ. ಹೋಗಲಿ ಒಡೆದೇ ಹಾಕಿಬಿಡೋಣ ಎಂದುಕೊಂಡೆ. ಒಡೆಯುವುದಿರಲಿ ಚೂರು ಊನವೂ ಆಗಲಿಲ್ಲ. ಮುಳ್ಳನ್ನೇ ಕಿತ್ತುಬಿಟ್ಟರೆ ಎಂದು ಹೊಸ ಉಪಾಯ ಹೊಳೆಯಿತು. ಕೇಂದ್ರಕ್ಕೆ ಹೋಗಿ ಎಳೆದೆ ಯಾವ ಸಾಹಸ, ದಾಳಿ, ಪ್ರಯತ್ನಗಳಿಗೂ ಜಗ್ಗಲಿಲ್ಲ. ಗಡಿಯಾರ ಸುತ್ತುತ್ತಲೇ ಇತ್ತು, ಸುತ್ತುತ್ತಲೇ ಇತ್ತು, ಸುತ್ತುತ್ತಲೇ ಇತ್ತು.

ಗಡಿಯಾರದ ಮೇಲೆಯೇ ಹತ್ತಿ ಹನ್ನೆರಡರ ಸಂಖ್ಯೆಯ ಮೆಲೆ ಸುಸ್ತಾಗಿ ಒರಗಿ ಕುಳಿತೆ. ಹಸಿವಿನಿಂದ ಮತ್ತೂ ನಿತ್ರಾಣವಾಗುವಂತಾಯಿತು. ಕೆಳಗೆ ಅದೇ ಸ್ಥಳದಲ್ಲಿ ಇನ್ನಾರೋ ಕುಳಿತಿರುವಂತಿತ್ತು. ಮೊದಲೇ ಮಸುಕು ಮಸುಕಾಗಿ ಕಾಣುತ್ತಿತ್ತು, ಅದರ ಮೇಲೆ ಕಣ್ಣುಗಳು ಬೇರೆ ಶಕ್ತಿ ಕಳೆದುಕೊಂಡಿದ್ದವು. ಸುಮ್ಮನೆ ನನ್ನ ಪಾಡಿಗೆ ನಾನು ಸಿಕ್ಕಿದ್ದ ಹಣ್ಣು ತಿಂದು, ಹಣ ಬಾಚಿಕೊಂಡು, ಸಿಕ್ಕಷ್ಟು ಸಮಯ ಅವಳೊಂದಿಗೆ ಸ್ನೇಹ ಬೆಳೆಸಿದ್ದರೆ ಆಗುತ್ತಿತ್ತು. ನನ್ನ ಕೈಲಾಗದ ಕೆಲಸಕ್ಕೆ ಕೈ ಹಾಕಿ ಸೋತೆನಷ್ಟೇ. ಎಲ್ಲ ಕಡೆಯಿಂದ ನಷ್ಟವಷ್ಟೇ. ನೋಡ ನೋಡುತ್ತಿದ್ದಂತೆ ಬೆಳಕು ಮಂದವಾಗುತ್ತಾ ಬಂತು. ಕತ್ತಲು ಎಲ್ಲೆಲ್ಲೂ ಆವರಿಸುತ್ತಲಿತ್ತು. ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವುದಕ್ಕೂ ತ್ರಾಣವಿಲ್ಲ. ಹಣ ಹೆಣ್ಣು ಏನೂ ಬೇಕಿಲ್ಲ ಹೊಟ್ಟೆಗೆ ಏನಾದರು ಬಿದ್ದರೆ ಸಾಕಿತ್ತು. ಆದರೆ ಅಷ್ಟು ಕೆಳಗೆ ಹೋಗುವ ಬಗೆ ಹೇಗೆ. ಸಹಾಯಕ್ಕೂ ಯಾರೂ ಇಲ್ಲ. ಎಲ್ಲೂ ಏನೂ ಕಾಣದಂತಾಗಿ ಹೋಯ್ತು. ಮತ್ತೆ ಬೆಳಕು ಬರುವುದೋ ಇಲ್ಲವೋ ಗೊತ್ತಿಲ್ಲ. ಗಡಿಯಾರ ಮಾತ್ರ ಟಪ್.. ಟಪ್… ಟಪ್… ಎಂದು ಅದರ ಪಾಡಿಗೆ ತಿರುಗುತ್ತಲೇ ಇತ್ತು. 

+ನೀ.ಮ. ಹೇಮಂತ್

Sunday 5 August 2012

ಪ್ರಶ್ನೆ!

ಒಂದೇ ರಾತ್ರಿಯ ಹಲವು ಕನಸು
           ಡಿಯೂರಪ್ಪನವರು ನಗುತ್ತಿರುವ ಫೋಟೋ ಪಕ್ಕದಲ್ಲಿ ಸದಾನಂದ ಗೌಡರು ಅಳುತ್ತಿರುವ ಫೋಟೋ ಫ್ರೇಮುಗಳು ಸಾರ್ವಜನಿಕವಾಗಿ ಕಾಣುವಹಾಗೆ ಹಾಕಲಾಗಿತ್ತು. ಅರೆರೆ ಇದೇನಪ್ಪಾ ವಿಚಿತ್ರ ಅಂತ ತಲೆಕೆಡಿಸಿಕೊಂಡು ಅಲ್ಲೇ ಯಾರೋ ಸುಕ್ಕು ಸುಕ್ಕಾಗಿದ್ದ ಖಾದಿ ಬಟ್ಟೆ ಧರಿಸಿ ಫೋಟೋಗಳನ್ನು ನೋಡುತ್ತಿದ್ದವನ ಬಳಿ ಹೋಗಿ ಏನ್ ಸಾರ್ ಇದು ನಿಜ ಜೀವನದಲ್ಲಿ ಸತ್ಯವಾಗುವಂಥದ್ದನ್ನ ಹಾಕಿ ಸಾರ್ ಅಂದೆ. ಆತ ನನ್ನೆಡೆಗೆ ತಿರುಗುತ್ತಾನೆ ನೋಡಿದ್ರೆ ಯಡಿಯೂರರು. ಇದೇ ಹೊಸಾ ಫೋಟೋ ಕಣೋ ಹುಡುಗ ಇನ್ನು ಮೇಲೆ ಹೀಗೇನೇ ಅಂತಂದ್ರು. ನಾವು ಹಿಂದೆ ಮಾತನಾಡುವ ಜಾತಿಯಲ್ಲಿ ಹುಟ್ಟಿರುವವರು ಎದುರಿಗೆ ಏನೂ ಪ್ರತಿಕ್ರಿಯೆ ಅಥವಾ ಹಾಸ್ಯ ಮಾಡಲಾಗಲಿಲ್ಲ. ಸುಮ್ಮನೆ ನಿಂತಿದ್ದೆ ಸದನದ ಎಡಗಡೆಯ ಬಾಗಿಲಿನಿಂದ ಯಾರೋ ಇನ್ನೊಂದು ಅದೇ ಗಾತ್ರದ ಫೋಟೋ ಫ್ರೇಮ್ ಹಿಡಿದು ಒಳಗೆ ಓಡಿಬಂದರು. ಹಿಂತಿರುಗಿ ನೋಡಿದೆ ಇಡೀ ಸದನ ಖಾಲಿಯಾಗಿತ್ತು. ಅರೆರೆ ಸದಾನಂದ ಗೌಡರು ಕ್ಲೋಸಪ್ ಸ್ಮೈಲ್ ಕೊಟ್ಟಿರುವ ಫೋಟೋ. ನನಗೇ ಗೊತ್ತಿಲ್ಲದೇ ಇದೇನ್ ಸಾರ್ ಅಂತ ಬಾಯಿಂದ ಮಾತುಗಳು ಹೊರಗೆ ಬಿದ್ದುಬಿಟ್ಟವು. ಫೋಟೋ ಹಿಡಿದಿದ್ದವನು ಆ ಫೋಟೋ ತೆಗೆದು ಇನ್ನು ಮೇಲೆ ಇದೇ ಹಾಕಬೇಕಂತೆ ಅಂದಿದ್ದೇ ಅಳುಮೊಗ ತೆಗೆದು ನಗುಮೊಗದ ಫೋಟೋ ತಗುಲಿಹಾಕಿದ. ಶೆಟ್ಟರ್ ಫೋಟೋ ಬಂದಮೇಲೆ ಸದಾನಂದರ ಪಕ್ಕದ ಜಾಗದಲ್ಲಿ ಹಾಕು ನನ್ನ ಫೋಟೋಗೆ ಕೈ ಹಚ್ಚಿದರೆ ಯಾರ ಫೋಟೋ ಕೂಡ ಉಳಿಸೋದಿಲ್ಲ ಎಚ್ಚರಿಕೆ ಅಂತ ಆತನೆಡೆಗೆ ಮತ್ತು ನನ್ನೆಡೆಗೆ ನೋಡಿ ಖಾಲಿ ಸದನದಲ್ಲೇ ಹೋಗಿ ಕುಳಿತರು ಯಡಿಯೂರರು. ಇಬ್ಬರೂ ಜಾಗ ಖಾಲಿ ಮಾಡಿದ ನಂತರ ಅಲ್ಲೇ ಅದೇ ಫೋಟೋ ಕೆಳಗೆ ನಗಬೇಕೋ, ಅಳಬೇಕೋ, ಕುಪಿತನಾಗಬೇಕೋ, ನಿರ್ಲಕ್ಷಿಸಿ ನನ್ನ ಪಾಡಿಗೆ ಹೊರಟುಹೋಗಬೇಕೋ, ಇನ್ನಾರಬಳಿಯಾದರೂ ಹಂಚಿಕೊಂಡು ಬಾಯಿಚಪಲ ತೀರಿಸಿಕೊಳ್ಳಬೇಕೋ ಏನೂ ತೀರ್ಮಾನಿಸಲಾಗದೇ ಸುಮ್ಮನೆ ನಿಂತೇ ಇದ್ದೆ.

ನೀವೆಲ್ಲಾ ಒಂದೇ ತರಹ ಕಾಣಿಸುತ್ತಿದ್ದೀರಾ ನನಗೆ. ಒಳ್ಳೇ ಹೊಸದಾಗಿ ಚೈನಾದವರನ್ನೋ, ವೆಸ್ಟ್ ಇಂಡೀಸ್ ಅವರನ್ನೋ ನೋಡಿದಾಗ ಎಲ್ಲಾ ಒಂದೇ ತರಹ ಇದ್ದಾರೆ ಅನ್ನಿಸೋದಿಲ್ವಾ ಹಾಗೇ ಅನ್ನಿಸುತ್ತಿದೆ ಅಂದದ್ದಕ್ಕೆ ನಗುತ್ತಲೇ ಉತ್ತರಿಸಿದರು. ನಮಗೂ ಅಷ್ಟೇ ಎಲ್ಲರೂ ಒಂದೇ ರೀತಿ ಕಾಣ್ತೀರಿ ಯಾವ ಬೇಧವೂ ಕಾಣೋಲ್ಲ ಯಾರಲ್ಲೂ, ಅಂತಂದರು.   ನಾನೂ ಒಮ್ಮೆ ಮುಗುಳ್ನಕ್ಕು ಇಡೀ ಕೊಠಡಿಯಲ್ಲಿ ನಿಂತು ಮಾತುಕತೆಗಳನ್ನು ಮುಂದುವರೆಸಿದ್ದ ಎಲ್ಲಾ ಒಂದೇ ರೀತಿಯ ಜನರನ್ನು ನೋಡಿದೆ. ಮತ್ತೆ ತಲೆಯಲ್ಲಿ ಒಂದು ಪ್ರಶ್ನೆ ಹುಟ್ಟಿತು. ನಾನು ಮಾತನಾಡಿಸುತ್ತಿದ್ದ ನನ್ನೆದುರಿನ ವ್ಯಕ್ತಿಯನ್ನೇ ಪ್ರಶ್ನಿಸಿದೆ. ಸಾರ್ ದಯವಿಟ್ಟು ತಪ್ಪು ತಿಳೀಬೇಡಿ, ನಿಮ್ಮ ಹೆಸರೇನು? ಎಂದೆ. ಈಶ್ವರ ಎಂದರು. ಹಾಗಾದರೆ ನಿಮ್ಮ ಪಕ್ಕದಲ್ಲಿರುವವರು ಪಾರ್ವತಿನಾ ಅಂದೆ. ಅಲ್ಲಾ ಗಂಗೆ ಅಂದ್ರು ಒಂದು ನಮಸ್ಕಾರ ಮಾಡಿದೆ. ಪ್ರತಿನಮಸ್ಕಾರ ಸ್ವೀಕರಿಸಿ ಮತ್ತೆ ಈಶ್ವರ ಅವರ ಕಡೆ ತಿರುಗಿ, ಮತ್ತೆ ನಿಮ್ಮ ತ್ರಿಶೂಲ, ಹಾವು, ವಿಭೂತಿ, ತೊಗಲು ಬಟ್ಟೆ ಇವೆಲ್ಲಾ.. ಎಂದು ಅಳುಕುತ್ತಲೇ ಕೇಳಿದ್ದಕ್ಕೆ ಗಂಗೆಯ ಮುಖ ಒಮ್ಮೆ ನೋಡಿ ಹಸನ್ಮುಖಿಯಾಗಿಯೇ ನೀನು ಪದವಿ ಮುಗಿದ ಮೇಲೆ ಗ್ರಾಡ್ಯುಯೇಷನ್ ದಿನದಂದು ಗೌನು ಟೊಪ್ಪಿ ಎಲ್ಲಾ ಧರಿಸಿರುತ್ತೀರಲ್ಲಾ ಅದನ್ನೇ ಯಾವಾಗಲೂ ಯಾಕೆ ಧರಿಸಿರುವುದಿಲ್ಲ ಎಂದರು. ಹಿ ಹಿ ಹಿ ಎಂದು ಬೆಪ್ಪನಂತೆ ನಕ್ಕೆ ಮತ್ತು ಆದರೆ ನಿಮ್ಮನ್ನ ಯಾವ ಚಿತ್ರಪಟದಲ್ಲಿ ನೋಡಿದ್ರೂ ಎಲ್ಲಾ ಕಲಾವಿದರೂ ನಿಮ್ಮನ್ನ ಹಾಗೇ ರಚಿಸಿರುತ್ತಾರೆ ಯಾವ ಸಿನಿಮಾದಲ್ಲಿ, ಟಿವಿ ಸೀರಿಯಲ್ಲು ನಾಟಕ ಯಾವುದರಲ್ಲಿ ಯಾವ ಸಮಯದಲ್ಲಿ ನೋಡಿದರೂ ಸಹ ಹಾಗೇ ಷೋಕೇಸ್ ಮಾಡಲಾಗುತ್ತದೆ ಅದಕ್ಕೇ ಕೇಳಿದೆ ಎಂದೆ. ಕ್ಲೀಷೆ…ಕ್ಲೀಷೆ ಎಂದು ಸುಮ್ಮನಾದರು. ನನ್ನೆದುರಿಗೆ ನಿಂತಿರುವ ನೀವುಗಳು ಒಂದೇ ರೀತಿ ಇದ್ದೀರಿ ಯಾರು ರಾಮ, ಯಾರು ಕೃಷ್ಣ, ಯಾರು ಗಣೇಶ ಎಂದು ಒಂದೂ ಗೊತ್ತಾಗುತ್ತಿಲ್ಲ, ನಿಮ್ಮನ್ನ ದೇವರೆಂದರೆ ನಮ್ಮಲ್ಲಿ ಯಾರೂ ನಂಬುವುದಿಲ್ಲ ಎಂದು ಎಲ್ಲರಿಗೂ ಕೇಳುವ ಹಾಗೆಯೇ ಹೇಳಿದೆ. ನಾವುಗಳು ದೇವರೆಂದು ನಿಮಗೆ ನಂಬಿಕೆ ಬರುವುದೋ ಇಲ್ಲವೋ ಗೊತ್ತಿಲ್ಲ, ನೀವಂತೂ ನಮ್ಮ ಪಾಲಿನ ದೇವರುಗಳು ಎಂದು ಸರ್ವಾನುಮತದಿಂದ ಒಪ್ಪಿಕೊಂಡರು. ಹೌದು ಹೌದು ಎಲ್ಲಾ ದೇವರುಗಳೂ ಒಪ್ಪಿಗೆ ಸೂಚಿಸುತ್ತಿದ್ದರು.ಕಾಸರವಳ್ಳಿ ಸಾರ್ ಮುಂದೆ ಮುಂದೆ ನಡೆದುಕೊಂಡು ಹೋಗ್ತಾ ಇದ್ರು. ನಾನು ಒಂದು ಕ್ಯಾಮೆರಾ ನನ್ನ ಪಕ್ಕದಲ್ಲಿ ಪರಮ ಒಂದು ಚಿತ್ರಕಥೆಯ ಹಾಳೆಗಳು ಕೈಲಿ ಹಿಡಿದು ಅವರ ಹಿಂದೆ ಹಿಂದೆ ಹುಲ್ಲಿನ ರಾಶಿಯಲ್ಲಿ ದಾರಿ ಮಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದೆವು. ಮಗಾ ಇದು ಕೂಡ ತೀರಾ ಕಲಾತ್ಮಕ ಚಿತ್ರದ ತರಹಾನೇ ಇಲ್ವೇನೋ ಅಂತ ನಾನು ಕೇಳೀದ್ರೆ ಇವರು ಕಮರ್ಷಿಯಲ್ ಮಾಡಲ್ಲ ಮಗಾ, ಗೊತ್ತಿರೋದೇ ಅಲ್ವಾ ಅಂತ ಪರಮ. ಕಾಸರವಳ್ಳಿಯವರು ನೋಡಿದ್ರೆ ಅವರ ಪಾಡಿಗೆ ಕೈ ಹಿಂದೆ ಕಟ್ಟಿಕೊಂಡು ದಾರಿ ಮಾಡಿಕೊಂಡು ನಡೆಯುತ್ತಲೇ ಇದ್ರು. ಹಿಂದಿನಿಂದ ಅವರ ಕನ್ನಡಕದ ದಾರ ಅವರ ನಡಿಗೆಯೊಂದಿಗೆ ಅತ್ತ ಇತ್ತ ಓಲಾಡುತ್ತಿದ್ದುದು ಕೂಡ ಸ್ಪಷ್ಟವಾಗಿ ಕಾಣುತ್ತಲಿತ್ತು. ಮತ್ತೆ ಪರಮನ ಕಡೆ ತಿರುಗಿ, ಆದರೆ ಸ್ಕ್ರಿಪ್ಟ್ ನಲ್ಲಿ ಎಂಥಾ ಗಟ್ಟಿತನ ಇದ್ಯೋ ಲೋ. ಹ್ಯಾಟ್ಸ್ ಆಫ್ ಕಣೋ ಅವರಿಗೆ ಈ ಸ್ಕ್ರಿಪ್ಟ್ ನಲ್ಲಿರುವ ಮಜಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಿಜವಾಗಲೂ ಸಿಗಲ್ಲ ಕಣೋ ಅಂದೆ. ನಾನು ಆ ಸಣ್ಣ ಕಥೆ ಕೂಡ ಓದಿದ್ದೀನಿ ಕಣೋ ಓದಿದಾಗ ಇದರಲ್ಲಿ ಸಿನಿಮಾ ಮಾಡೋಕೇನಿಲ್ಲಾ ಅಂತ ಅಂದುಕೊಂಡೆ, ಹಾ, ಅದು ನಮ್ಮ ತಲೆಗೆ ಹಾಗೇ ಅನಿಸಬೇಕಾದ್ದೇ ಬಿಡು ಆದರೆ ಈ ಸ್ಕ್ರಿಪ್ಟ್ ನೋಡಿದ ಮೇಲೆ ಅನಿಸ್ತಾ ಇದೆ ಕಾಸರವಳ್ಳಿ ಕಾಸರವಳ್ಳಿ ಯಾಕೆ ಆಗ್ತಾರೆ ಅಂತ ಅಂದ. ಅದೇನೋ ನಿಜ ಲೇ ಭಟ್ಟರ ಕಪರ್ಷಿಯಲ್ ಅಂಶದ ಹತ್ತು % ಆದರೂ ಇವರು ಅಳವಡಿಸಿಕೊಂಡು ಸ್ಕ್ರಿಪ್ಟ್ ಮಾಡ್ಬಿಟ್ರೆ ಕರ್ನಾಟಕದಲ್ಲಿ ಇವರ ಸಿನಿಮಾದ ರುಚಿ ನೋಡಿದ ಜನ ಬೇರೆ ಸಿನಿಮಾಗಳನ್ನ ಮೂಸಿ ಕೂಡ ನೋಡೋದಿಲ್ಲ ಅಷ್ಟೇ, ಆದರೆ ಈ ಮಟ್ಟಿಗಿನ ನೈಜತೆ, ಆ ಸೊಗಡನ್ನ, ಸದಭಿರುಚಿಯನ್ನ ಉಳಿಸಿಕೊಂಡು ಮತ್ತೆ ಕಮರ್ಷಿಯಲ್ ಮಾಡೋಕೋಸ್ಕರ ಬೇರೆ ಅಂಶಗಳನ್ನ ತುರುಕಿದರೆ ಈ ಸಿನಿಮಾನೇ ಕೆಟ್ಟು ಹೋಗುತ್ತೆ ಅಷ್ಟೇ. ಹಾಗೆ ನೋಡಿದರೆ ಇವರು ಇವರ ದಾರೀಲೇ ಸರಿ ಇದಾರೆ ಅನಿಸುತ್ತೆ ಕಣೋ ಅದು ಇದು ಅಂತ ನಮ್ಮ ನಮ್ಮಲ್ಲೇ ಮಾತು ನಡೆದೇ ಇತ್ತು. ಕಾಸರವಳ್ಳಿಯವರು ಚೂರೇ ಚೂರು ಹಿಂದೆ ನಮ್ಮ ಕಡೆ ತಿರುಗಿ ನಕ್ಕ ಹಾಗೆ ಕಂಡ್ರು. ನಾವು ಮಾತು ನಿಲ್ಲಿಸಿ ಹಿಂದೆ ಮುಂದುವರೆದೆವು. ಅವರು ಹುಲ್ಲಿನ ರಾಶಿಯಲ್ಲಿ ದಾರಿ ಮಾಡಿಕೊಂಡು ನಡೆಯುತ್ತಲೇ ಇದ್ರು.

ಕೈಯಲ್ಲೊಂದು ಕಂಡೋಮ್ ಪ್ಯಾಕೆಟ್ ಇತ್ತು. ಎದುರುಗಡೆ ದೂರದಲ್ಲಿ ಖಾಲಿ ಬಿಳಿ ಬಣ್ಣ ಹೊದ್ದಿರುವ ಗೋಡೆಯಲ್ಲಿ ಒಂದು ಬಿಳಿ ಬಣ್ಣದ್ದೇ ಬಾಗಿಲು ಕೂಡ ಮುಚ್ಚಿಕೊಂಡಿತ್ತು. ನಾನು ಕುಳಿತಿರುವ ಮಂಚದ ಮೇಲಿನ ಬಿಳಿ ಬಣ್ಣದ ಬಟ್ಟೆ ಕೂಡ ತೆಪ್ಪಗೆ ಸುಕ್ಕಾಗದೆ ಹಾಸಿಗೆಯ ಮೇಲೆ ಹಾಸಿಕೊಂಡಿತ್ತು. ನನ್ನ ಮೈಯಲ್ಲಂತೂ ಒಂದು ಇಂಚು ಕೂಡ ಬಟ್ಟೆ ಇರಲಿಲ್ಲ. ದೇಹದ ಸಮಸ್ತ ಸಾಮಾನುಗಳೂ ಪರೀಕ್ಷೆಗೆ ಕಾದಿರುವಂತೆ ಒಂದು ರೀತಿಯ ಟೆನ್ಶನ್, ಚಡಪಡಿಕೆ, ಅಳುಕು, ಕೊಂಚ ಭಯ, ಬಹಳಷ್ಟು ಆಸೆ, ಕಾತುರ, ಉದ್ವೇಗ, ನಿರೀಕ್ಷೆ, ಕುತೂಹಲ ಎಲ್ಲದರ ಮಿಶ್ರಣವಾಗಿ ತಲೆ ಜೊತೆಗೆ ಮಂಚದ ಪಕ್ಕದ ನೂರಿಪ್ಪತ್ತು ಸೆಕೆಂಡುಗಳುಳ್ಳ ಕೈಗಡಿಯಾರದ ಮುಳ್ಳುಗಳು ನಿಧಾನ ಗತಿಯಲ್ಲಿ ಚಲಿಸುತ್ತಿದ್ದವು ಇದ್ದಕ್ಕಿದ್ದಂತೆ ನಿಂತೇ ಹೋದವು. ಕಣ್ಣಿನ ಗೋಲಿಗಳು ಮಾತ್ರ ಒಮ್ಮೆ ಮುಚ್ಚಿದ ಬಾಗಿಲಿನೆಡೆಗೆ ಮತ್ತೊಮ್ಮೆ ಸ್ಥಗಿತವಾಗಿರುವ ಕಾಲದ ಸೂಚಕ ಕೈಗಡಿಯಾರದೆಡೆಗೆ ನೋಡುತ್ತಲಿಹುದು ಉಸಿರು ಹೆಚ್ಚುತ್ತಲಿಹುದು. ಗೋಲಿಗಳು ಅತ್ತ ಇತ್ತ ಅತ್ತ ಇತ್ತ ಅತ್ತ ಇತ್ತ ಸುತ್ತುತ್ತಿದ್ದಂತೆ ಕೈಯಲ್ಲಿದ್ದ ಪ್ಯಾಕೆಟ್ಟು ಸರಕ್ಕನೆ ಹರಿದು ಒಳಗಿದ್ದ ಅಂಟಂಟು ಕಂಡೋಮು ಕೈಗೆ ಬಂತು. ಮುಟ್ಟಿದ್ದೇ ಅಸಹ್ಯ. ಕೈಲಿ ಹಿಡಿಯಲಾಗದೆ ಬಿಳಿ ಹಾಸಿಗೆಯ ಮೇಲೆ ಹಾಕಿಬಿಟ್ಟೆ. ಅಯ್ಯಯ್ಯಾ ಇದನ್ನ ಮುಟ್ಟೋಕೇ ಒಂಥರಾ ಇದೆ ಇನ್ನ ಹಾಕಿಕೊಳ್ಳೋದು ಹೆಂಗೆ ಅಂತ. ಹ್ಯಾಗೆ ಇದನ್ನ ಬಳಸ್ತಾರೋ ಜನ. ಮುಖ ಕಿವುಚಿಕೊಂಡಿದ್ದು ಹಂಗೇ ಇತ್ತು. ಮತ್ತೊಮ್ಮೆ ಮುಚ್ಚಿಕೊಂಡು ಮಲಗಿಯೇ ಬಿಟ್ಟಿದ್ದ ಬಾಗಿಲೆಡೆಗೆ ನೋಡಿ ಸಾಹಸಪಟ್ಟು ಕೈಲಿ ಹಿಡಿದೆ. ಈ ಬಾರಿ ಅಷ್ಟೇನೂ ಅಸಹ್ಯವೆನಿಸಲಿಲ್ಲ. ಆದರೆ ನನ್ನ ಕಣ್ಣುಗಳೇಕೆ ಪದೇ ಪದೇ ಬಾಗಿಲೆಡೆಗೆ ನೋಡುತ್ತಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಯಾರಾದರೂ ಬರುವುದರಲ್ಲಿದ್ದಾರಾ? ನಾನು ಈ ವೇಷದಲ್ಲಿ ಯಾರನ್ನಾದರೂ ಕಾಯುತ್ತಲಿದ್ದೇನಾ? ನನ್ನ ಕೈಯಲ್ಲಿ ಕಂಡೋಮ್ ಯಾತಕ್ಕೆ ಬಂತು? ನಾನು ಹೀಗೆ ಯಾಕೆ ಕುಳಿತಿದ್ದೇನೆ? ನಾನಿರುವುದಾದರೂ ಎಲ್ಲಿ? ಗೋಡೆ, ಬಾಗಿಲು ಸಹಿತ ಇಡೀ ಕೋಣೆ, ಗಡಿಯಾರ, ಹಾಸಿಗೆ, ಮಂಚ, ಬಟ್ಟೆ ಎಲ್ಲವೂ ಬಿಳಿ ಬಿಳಿ ಇರುವುದರ ಅರ್ಥವಾದರೂ ಏನು? ನನ್ನಲ್ಲಿ ಆ ಎಲ್ಲಾ ಮಿಷ್ರ ಭಾವನೆಗಳು ಹುಟ್ಟುತ್ತಿದ್ದದ್ದಾದರೂ ಯಾಕೆ?

ಬಾಗಿಲು ಕಿರ್ರನೆ ತೆರೆದುಕೊಂಡಿತು!

ಈ ಕನಸುಗಳಿಗೆ ಏನು ಅರ್ಥವೋ ನಾಕಾಣೆ. ಒಂದಕ್ಕೊಂದಕ್ಕೆ ಸಂಬಂಧವಂತೂ ಯಾವ ದಿಕ್ಕಿನಿಂದಲೂ ಕಾಣುವುದಿಲ್ಲ. ಆದರೆ ಒಂದರ ನಂತರ ಒಳ್ಳೆ ಸೀರಿಯಲ್ ಎಪಿಸೋಡಿನಂತೆ ಬಂದಿತ್ತು. ಸುಮ್ಮನೆ ಹಾಗೇ ಬಂದವೋ ಅಥವಾ ಒಂದು ದಿನದಲ್ಲಿ ನಾವು ಯಾವುದಾವುದರ ಬಗ್ಗೆ ಚಿಂತಿಸುತ್ತೀವೋ, ಚರ್ಚಿಸಿರುತ್ತೇವೋ, ನಮ್ಮ ಸಮಯವನ್ನ ಯಾವುದಕ್ಕೆ ವ್ಯತ್ಯಯ ಮಾಡಿರುತ್ತೇವೋ ಅದಕ್ಕನುಸಾರವಾಗಿ ಕನಸುಗಳು ಬಿದ್ದಿರಬಹುದು ಎಂದುಕೊಂಡೆ. ಇದನ್ನು ಕಥೆ ಎಂದು ಕರೆಯಲಾಗುವುದಿಲ್ಲ. ಆದರೂ ಈ ಕನಸಿನ ಅಬ್ಸ್ಟ್ರಾಕ್ಟ್ ವಿಚಾರಗಳಲ್ಲಿ ಏನೋ ಹೇಳದಿರುವ ವಿಚಾರಗಳು ಇವೆ ಎಂದು ಕಂಡಿತು. ಈ ಕನಸುಗಳು ಯಥಾವತ್ ಹೀಗೇ ಬಿದ್ದವೆಂದು ಹೇಳಬರುವುದಿಲ್ಲ. ಆದರೂ ನೆನಪಿದ್ದಷ್ಟೂ ಅದಕ್ಕೆ ಅಕ್ಷರ ರೂಪ ಕೊಡಲಾಗಿದೆ. ಕಥೆಗೊಂದು ಶುರು, ಅಂತ್ಯ, ಯಾವುದೂ ಇಲ್ಲ ಒಂದಕ್ಕೊಂದು ಕೊಂಡಿಯೂ ಇಲ್ಲ ಸುಮ್ಮನೆ ವಕ್ಕರ ವಕ್ಕರವಾಗಿ ಹೆಂಗೆಂಗೋ ಇವೆ. ಹಿಂಗೇ ಬರೆದರೆ ಏನಾಗಬಹುದೆಂದು ಕೂಡ ಗೊತ್ತಿಲ್ಲ. ತಿಕ್ಕಲು ಆಲೋಚನೆಗಳೊಂದಿಗೆ ಮಲಗಿದರೆ ತಿಕ್ಕಲು ಕನಸುಗಳು ಅಷ್ಟೇ ತಿಕ್ಕಲು ರೀತಿಯ ನಿರೂಪಣೆ. ಒಟ್ಟಂದದಲ್ಲಿ ಏನಾದರೂ ತಲುಪಿಸುವವೇನೋ ಎಂಬೊಂದು ಆಶಯದ “ಪ್ರಶ್ನೆ”.+ನೀ.ಮ. ಹೇಮಂತ್

ಕರ್ಮ!ನನ್ನ ಹೆಸರು ಶರಣ್
ನನ್ನ ಹೆಸರು ಶರಣ್, ನಾನು…
ನನ್ನ ಹೆಸರು ಶರಣ್, ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ.. ಕ್ಷಮಿಸಿ.. ಅಂಬೇಡ್ಕರ್ ಕಾಲೇಜಿನಲ್ಲಿ ಎಮ್. ಬಿ. ಎ ಪದವಿ ಮುಗಿಸಿದ್ದೇನೆ.
ನಾನು… ನಾನು… ನನ್ನ ಗಂಟಲಿನಲ್ಲಿ ನೂರು ಜನ ಸೇರಿಕೊಂಡು ನನ್ನ ಮುಂದಿನ ಪದಗಳನ್ನು ಹೊರಬರದಂತೆ ಹಿಡಿದು ಹಿಂದಕ್ಕೆ ಎಳೆಯುತ್ತಿದ್ದರು. ಏನು ಹರಸಾಹಸ ಪಟ್ಟರೂ ಪದಗಳು ಹೊರಬರಲೇ ಇಲ್ಲ. ಶಕ್ತಿ ಮೀರಿ ಪ್ರಯತ್ನ ಪಟ್ಟಷ್ಟೂ ಬೆವರು ಹೊರಬರುತ್ತಿತ್ತೇ ಹೊರತು ಪದಗಳು ಹೊರಬರಲಿಲ್ಲ.

ಸರಿ ವಂದನೆಗಳು ನೀವು ಕುಳಿತುಕೊಳ್ಳಿ. ನೆಕ್ಸ್ಟ್ ಎಂದರು. ನಾನು ಕೂರುವ ಮುನ್ನವೇ ನನ್ನ ಪಕ್ಕದವನು ಸರಕ್ಕನೆ ಎದ್ದು ನಿಂತು ಬಾಯಿ ಪಾಠ ಮಾಡಿದ್ದೆಲ್ಲವನ್ನೂ ಒಪ್ಪಿಸಲು ಶುರುಮಾಡಿದ. ನನ್ನೊಳಗೆ ಪದಗಳನ್ನೆಲ್ಲಾ ಹಗ್ಗ ಕಟ್ಟಿ ಜಗ್ಗುತ್ತಿದ್ದವರೇ ಕೊನೆಗೂ ಗೆದ್ದು ಕೇಕೆ ಹಾಕಲು ಶುರುಮಾಡಿದರು. ಸೋತಿದ್ದಕ್ಕೋ ಏನೋ ಕೈಗಳು ತೀಕ್ಷ್ಣವಾಗಿ ಕಂಪಿಸುತ್ತಿದ್ದವು. ಒಳಗೆ ನನ್ನ ಆತ್ಮವಿಶ್ವಾಸದೊಂದಿಗೆ ಯುದ್ಧ ಮಾಡುತ್ತಿದ್ದವರಿಂದಲೂ, ಮತ್ತು ನನ್ನೊಂದಿಗೆ ಸ್ಪರ್ಧಿಸಿ ಕೆಲಸ ಕಿತ್ತುಕೊಳ್ಳಲು ಬಂದಿದ್ದವರಿಂದಲೂ ಒಂದೇ ಬಾರಿಗೆ ಸೆಣಸಲಾಗದೇ ಸೋತು ಕುಳಿತು ಕಷ್ಟ ಪಟ್ಟು ಎಂಜಲು ನುಂಗಿದೆ. ಗೊತ್ತಾಗೋಯ್ತು ಈ ಕಂಪನಿ ನನಗೆ ಕೆಲಸ ಕೊಡುವುದಿಲ್ಲ ಎಂದು. ಆದರೂ ಅವರೇ ಕಳುಹಿಸುವವರೆಗೂ ಕಾಯಬೇಕಿತ್ತು. ಎಲ್ಲರ ಸರದಿ ಮುಗಿದ ನಂತರ ಒಂದಷ್ಟು ಜನರ ಪಟ್ಟಿ ಓದಿದರು, ಯಾರ ಹೆಸರನ್ನು ಕರೆಯಲಾಗಲಿಲ್ಲವೋ ಅವರು ಇನ್ನು ಹೊರಡಬಹುದು. ಮತ್ತೆ ಮೂರು ತಿಂಗಳ ನಂತರ ಸ್ಪರ್ಧಿಸಲು ನೀವು ಅರ್ಹರು. ಮುಂದಿನ ಬಾರಿಗೆ ಶುಭವಾಗಲಿ ಎಂದು ಹರಸಿ ಮರ್ಯಾದೆಯಿಂದಲೇ ಕಳುಹಿಸಿದರು. ಯಾವಾಗ ಎದ್ದು ಓಡಿಬರುವೆನೋ ಎಂದೆನಿಸಿತ್ತು. ಬಿಟ್ಟಿದ್ದೇ ಸಾಕೆಂದು ಮೊದಲು ಸೋತವರ ಗುಂಪಿನಿಂದ ದೂರ ಓಡಿ ಬಂದು ಸುಧಾರಿಸಿಕೊಂಡೆ. ಇದು ಕಳೆದ ಬಾರಿಯ ಅನುಭವ. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಲು ನನ್ನಿಂದ ಸಾಧ್ಯವಾಗುವುದಿಲ್ವಾ? ಅಷ್ಟು ಕಷ್ಟ ಏನಿದೆ, ಕೆಲಸ ಗಿಟ್ಟಿಸೋದು. ಹೆದರುವುದಕ್ಕೆ ಅಲ್ಲಿ ಅಂಥದ್ದೇನೂ ಇಲ್ವಲ್ಲ. ಸ್ವಲ್ಪ ಧೈರ್ಯವಾಗಿ ಗೊತ್ತಿರುವುದನ್ನ ಗೊತ್ತಿರುವ ಹಾಗೇ ಹೇಳಿದರೆ ಮುಗಿದು ಹೋಯಿತು. ಕೆಲಸ ಸಿಕ್ಕ ಹಾಗೆಯೇ. ಈ ಬಾರಿ ಹೇಗಾದರೂ ಮಾಡಿ ಕೆಲಸ ಹೊಡೆಯಲೇ ಬೇಕು. ನನಗಿಂತ ಅರ್ಧಂಬರ್ಧ ಇಂಗ್ಲೀಷಿನಲ್ಲಿ ಮಾತನಾಡುವವರೆಲ್ಲಾ ಕೆಲಸ ಪಡೆದರು ಕೊನೆಯ ಬಾರಿ. ಈ ಸಲ ಏನೇ ಆಗಲಿ ಮಾತನಾಡಬೇಕು.

ಕೆಲಸ ಬೇಕು, ಕೆಲಸ ಬೇಕು, ಕೆಲಸ ಬೇಕು, ಕೆಲಸ ಬೇಕು.. ನೂರು ಬಾರಿ ಹೇಳಿಕೊಂಡದ್ದಾಯ್ತು. ಇಂಟರ್ ವ್ಯೂ ಗೆ ಇನ್ನೂ ಅರ್ಧ ಘಂಟೆ ಬಾಕಿ ಇದೆ. ಧರಿದ್ರದ್ದು ನನ್ನ ಬಗ್ಗೆಯ ಪರಿಚಯ ಬರೆದುಕೊಂಡಿರುವುದನ್ನ ಉರು ಹೊಡೆದಾದ್ರೂ ಹೇಳಬೇಕೀಸಲ.

ನಾನು ಶರಣ್ ನಾನು ಅಂಬೇಡ್ಕರ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದೇನೆ. ಎಮ್. ಬಿ. ಎ ನಲ್ಲಿ ಫಿನಾನ್ಸ್ ನನ್ನ ಐಚ್ಛಿಕ ವಿಷಯ. ನಾನು ಹುಟ್ಟಿ ಬೆಳೆದದ್ದು, ನೆಲೆಸಿರುವುದು ಬೆಂಗಳೂರಿನಲ್ಲೆ. ನನ್ನ ಮನೆಯಲ್ಲಿ ನನ್ನ ತಂದೆ ತಾಯಿ ಮತ್ತು ತಮ್ಮನಿದ್ದಾನೆ. ನಾನು ಎರಡು ವರ್ಷದ ಡಿಪ್ಲೊಮಾ ಕಂಪ್ಯೂಟರ್ ಕೋರ್ಸ್ ಮಾಡಿಕೊಂಡಿದ್ದೇನೆ. ಟೈಪಿಂಗ್ ಜೂನಿಯರ್ ನಲ್ಲಿ ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದೇನೆ. ನಾನು ಎರಡು ವರ್ಷ ಎನ್ ಸಿ ಸಿ ಯಲ್ಲಿ ಅಭ್ಯರ್ತಿಯಾಗಿದ್ದೆ. ಮತ್ತು ಮೂರು ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಅದು ಬಿಟ್ಟರೆ ಸಾಹಿತ್ಯ ಓದುವುದು, ಅಂತರರಾಷ್ಟ್ರೀಯ ಉತ್ತಮ ಚಲನಚಿತ್ರಗಳನ್ನ ಸಂಗ್ರಹಿಸುವುದು ಮತ್ತು ನೋಡುವುದು ನನ್ನ ಇತರೆ ಆಸಕ್ತಿಯ ಹವ್ಯಾಸಗಳು. ನಾನು ಶ್ರಮಜೀವಿ, ಹಠವಾದಿ, ಹೊಸ ವಿಷಯಗಳನ್ನ ಬಹುಬೇಗ ಗ್ರಹಿಸಬಲ್ಲೆ…. ಇಷ್ಟನ್ನ ಒಳಗೆ ಹೋಗುವವರೆಗೂ ಉರು ಹೊಡೆಯಬೇಕು. ಛೆ ನನ್ನ ಬಗ್ಗೆ ನಾನೇ ಹೀಗೆ ಬಾಯಿಪಾಠ ಮಾಡಿ ಕಲಿಯಬೇಕಾ. ನಾನು ಬೇರೆಯವರ ಬಗ್ಗೆ ಹೇಳ್ತಿದ್ದೀನೋ ಅಥವಾ ನನ್ನ ಬಗ್ಗೆಯೇ ಹೇಳ್ತಿದ್ದೀನೋ. ಕೆಲಸ ಸಿಗೋದಕ್ಕೆ ಏನೇನು ಮಾಡಬೇಕಪ್ಪಾ. ಒಮ್ಮೆ ಕೆಲಸ ಗಿಟ್ಟಿಸಿದರೆ ಸಾಕು ಆಮೇಲೆ ನನ್ನ ಸಾಮರ್ಥವೇನೆಂದು ಸಾಬೀತು ಪಡಿಸಬಹುದು. ನನಗೆ ಗೊತ್ತಿದ್ದ ಹಾಗೆ ಕೆಲಸ ಅಷ್ಟು ಕಷ್ಟಕರವಾಗಿರಲಾರದು. ಕಷ್ಟಕರವಾಗಿಯೇ ಇದ್ದರೂ ಏನೀಗ, ಕಷ್ಟ ಪಟ್ಟು ದುಡಿಯಲು ನಾನೆಂದೂ ಹೆದರಿದವನಲ್ಲವಲ್ಲ. ಯಾಕೋ ಇವತ್ತು ಕೆಲಸ ಸಿಕ್ಕೇ ಸಿಗುತ್ತೆ ಅನ್ನಿಸುತ್ತಿದೆ. ನೋಡುವ, ಇವತ್ತು ನನ್ನ ಅದೃಷ್ಟ ಹೇಗಿದೆ ಅಂತ. ಥು ಆಲೋಚನೆ ಎಲ್ಲೆಲ್ಲಿಗೋ ಹೋಗ್ತಿದೆ. ಟೆಲ್ ಮಿ ಅಬೌಟ್ ಯುವರ್ ಸೆಲ್ಫ್, ನಿಮ್ಮ ಬಗ್ಗೆ ಹೇಳಿ ಅಂದ ಕೂಡಲೆ ಬಿಟ್ಟ ಬಾಣದಂತೆ ಈ ಅಷ್ಟೂ ಮಾತನ್ನು ಥುಪುಕ್ ಥುಪುಕ್ಕನೆ ಹೊರಗುಗುಳಬೇಕು. ಈ ಬಾರಿ ಗಂಟಲಲ್ಲಿ ನೂರು ಜನರಲ್ಲ ಸಾವಿರ ಜನ ಬೇಕಾದರೆ ಹಗ್ಗ ಯಾಕೆ ದೊಡ್ಡ ದೊಡ್ಡ ಕಬ್ಬಿಣದ ಸಲಾಕೆಗಳನ್ನೇ ಹಾಕಿ ಜಗ್ಗಲಿ ನಾನು ಮಣಿಯುವವನಲ್ಲ. ಈ ಕಂಪನಿಯಲ್ಲಿ ನನಗೆ ಕೆಲಸ ಬೇಕಷ್ಟೇ. ಅಪ್ಪನ ಸಾಲಗಳಿಗೆ ನೆರವಾಗಬೇಕು. ಮುಂದೆ ನಾನಂದುಕೊಂಡದ್ದನೆಲ್ಲಾ ಮಾಡಬೇಕೆಂದ್ರೆ ಈ ಕೆಲಸ ಪಡೆದುಕೊಳ್ಳಲೇ ಬೇಕು. ನನಗೆ ಈ ಕೆಲಸ ಬೇಕು, ನನಗೆ ಈ ಕೆಲಸ ಬೇಕು, ನನಗೆ ಈ ಕೆಲಸ ಬೇಕು. ಒಳಗೆ ಹೋಗಿ ನನ್ನ ಹೆಸರು ಬರುವವರೆಗೂ ಇದೇ ಮಾತನ್ನ ನೂರು ಸಲ ಹೇಳಿಕೊಳ್ಳುತ್ತಿದ್ದರೆ ಆತ್ಮವಿಶ್ವಾಸ ವೃದ್ಧಿಸುತ್ತದೆ.


The sum of ages of 5 children born at the intervals of 3 years each is 50 years. What is the age of the youngest child? ಆಯ್ಕೆಗಳೇನಿದ್ವು: ಎ. 4 Years ಬಿ. 8 Years ಸಿ. 10 Years ಡಿ. None of these. ಈ ಪ್ರಶ್ನೆಗೆ ಉತ್ತರ ಯಾವುದು ಹಾಕಿದ್ದೆ. ೪ ವರ್ಷ ಅಂತಾನಾ ಅಥವಾ ಯಾವುದೂ ಅಲ್ಲ ಅಂತ ಏನಾದ್ರೂ ಹಾಕಿಬಿಟ್ಟೆನಾ ಅಂತ ಗೊತ್ತಾಗ್ತಿಲ್ಲ. ಮೊದಲ ಸುತ್ತು ಆಪ್ಟಿಟ್ಯೂಡ್ ಸುತ್ತು ಇಂತಹ ತಲೆ ಕೆಡಿಸುವ ನೂರು ಪ್ರಶ್ನೆಗಳು ಅದನ್ನ ಉತ್ತರಿಸುವುದಕ್ಕೆ ಒಂದು ಪ್ರಶ್ನೆಗೆ ಒಂದು ನಿಮಿಷಕ್ಕಿಂತ ಕಡಿಮೆ ಅವಧಿ. ತೊಂಭತ್ತು ನಿಮಿಷಕ್ಕೆ ಸರಿಯಾಗಿ ಪೇಪರ್ ಕಿತ್ತುಕೊಂಡವರು ಎರಡು ಘಂಟೆಯಾಯ್ತು ಇನ್ನೂ ಫಲಿತಾಂಶ ಬಂದಿಲ್ಲ. ಅವಕಾಶವಿರುವುದು ಮೂರೋ ಅಥವಾ ನಾಲ್ಕೋ ಇರಬಹುದೇನೋ ಇಲ್ಲಿ ನೆರೆದಿರುವುದು ನೋಡಿದರೆ ಬರೋಬ್ಬರಿ ತೊಂಬತ್ತು ಜನ. ಈ ಕಾಯಿಸುವಿಕೆ ಕೂಡ ಸಂದರ್ಶನದ ಒಂದು ಭಾಗವಂತೆ, ತಾಳ್ಮೆಯಿಂದ ಕಾಯದಿರುವವನನ್ನು ಆಯ್ಕೆ ಮಾಡಲಾಗುವುದಿಲ್ಲವಂತೆ ಅಂತ ಅವನಾರೋ ಹೇಳುತ್ತಿದ್ದುದು ಕೇಳಿಸುತ್ತಿತ್ತು. ಅದೆಷ್ಟು ನಿಜವೋ, ಸುಳ್ಳೋ ಅಂತೂ ಒಬ್ಬರೂ ಕುಂತ ಜಾಗದಿಂದ ಕದಲುವ ರಿಸ್ಕ್ ತೆಗೆದುಕೊಳ್ಳುಲು ತಯಾರಿರಲಿಲ್ಲ. ಎರಡು ಘಂಟೆಯಾದರೂ ಕಾಯುತ್ತಲೇ ಇದ್ದರು. ಮೊದಲರ್ಧ ಘಂಟೆ ಗಪ್ ಚುಪ್ಪಾಗಿದ್ದವರು ನಿಧಾನವಾಗಿ ಅಲ್ಲಲ್ಲಿ ಗುಸಗುಸ ಪಿಸಪಿಸ ಶುರುವಾಯ್ತು. ನನ್ನ ಪಕ್ಕದಲ್ಲಿದ್ದವನು ಮಾತಿಗೆ ಮೊದಲಾದ. ಅವನು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವನಂತೆ ರಜೆ ಹಾಕಿ ಇವತ್ತು ಸಂದರ್ಶನಕ್ಕೆ ಬಂದಿರುವನಂತೆ. ಆ ಕಂಪನಿಯಲ್ಲಿ ತೊಂದರೆ ಏನಾಗಿತ್ತೆಂದರೆ ಅಯ್ಯೋ ಅಲ್ಲಿ ಕೆಲಸ ಬೋರು, ಅದಕ್ಕೇ ಇಲ್ಲಿಗೆ ಜಂಪ್ ಮಾಡ್ತಿದ್ದೇನೆಂದ. ಈತನ ಬಳಿ ಈಗಾಗಲೇ ಕೆಲಸವಿದೆ ಇವನಿಗೇನಪ್ಪಾ ಕಷ್ಟ ಇಲ್ಲಿ ಸಿಗದಿದ್ದರೂ ತೊಂದರೆಯಿಲ್ಲ ಎಂದುಕೊಂಡೆ. ಮೊದಲ ಸುತ್ತಿನಲ್ಲಿ ಆಯ್ಕೆಯಾದರೆ ಸಾಕೆಂದು ಮನಸ್ಸಿನಲ್ಲೇ ಅಂದುಕೊಂಡೆ. ಮೌನವಾಗಿದ್ದಷ್ಟೂ ಭಯ ಕಾಡುವುದು, ಮತ್ತು ಮನದಲ್ಲಿರುವ ಸಾವಿರ ಭಯೋತ್ಪಾದಕರು ತಲೆಯೆತ್ತುವರೆಂದು ಭಯವಾಗಿ ಅವನೊಂದಿಗೆ ಮಾತು ಮುಂದುವರೆಸಲು ಆ ಪ್ರಶ್ನೆಗೆ ಏನು ಉತ್ತರಿಸಿದನೆಂದು ಕೇಳಿದೆ.

ಆ ಮಕ್ಕಳ ವಯಸ್ಸುಗಳನ್ನ ‘x’ ಎಂದು ಬರೆದುಕೋ, (x + 3), (x + 6), (x + 9) ಮತ್ತು (x + 12) ವರ್ಷಗಳು ಅಂತಿಟ್ಟುಕೋ.
ಹಾಗಾಗಿ, x + (x + 3) + (x + 6) + (x + 9) + (x + 12) = 50
http://www.indiabix.com/_files/images/aptitude/1-sym-imp.gif 5x = 20
http://www.indiabix.com/_files/images/aptitude/1-sym-imp.gif x = 4.
* ಕೊನೆಯ ಮಗುವಿನ ವಯಸ್ಸು = x = 4 ವರ್ಷಗಳು.
ಅಯ್ಯಯ್ಯಪ್ಪ ಇವನೇನು ಮನುಷ್ಯನೋ ಏನೋ ಗೊತ್ತಾಗಲಿಲ್ಲ. ಶಾಲೆಯಲ್ಲಿ ಭಲೇ ಬುದ್ಧಿವಂತನಿರಬೇಕೆಂದುಕೊಂಡೆ. ನಾನೇನೋ ಅಡ್ಡೇಟಿನ ಮೇಲೆ ಗುಡ್ಡೇಟು ಲೆಕ್ಕ ಹಾಕಿ ಉತ್ತರ ಬರೆದರೆ ಇವನು ಈ ರೀತಿ ಲೆಕ್ಕಾಚಾರ ಹಾಕಿದ್ದಾನಲ್ಲ ಪುಣ್ಯಾತ್ಮ ಎಂದುಕೊಂಡೆ. ಇವನಿಗೆ ಕೆಲಸ ಗ್ಯಾರಂಟಿ, ನನ್ನಂತವನಿಗೆ ಕೆಲಸ ಸಿಗಲಾರದು ಎಂದು ಅಳುಕು ಶುರುವಾಯ್ತು. ತಲೆಕೆಡಿಸಿಕೊಂಡಿರುವ ಸಮಯದಲ್ಲೇ ಡುಮ್ಮಗಿನ ಫಲಿತಾಂಶ ಹೊತ್ತ ಮೇಡ್ರಮ್ಮು ಬಂದರು. ನನ್ನ ಪಕ್ಕದ ಬುದ್ಧಿವಂತನನ್ನೂ ಸೇರಿಸಿ ಇಪ್ಪತ್ತು ಜನರ ಹೆಸರನ್ನು ಕೂಗಿದರು. ಅವರೆಲ್ಲಾ ಎದ್ದು ನಿಂತರು. ನನ್ನ ಹೆಸರು ಬರಲೇ ಇಲ್ಲ. ಮತ್ತೆ ಮುಗೀತು ಕತೆ ಎಂದುಕೊಂಡೆ, ಹಣೆ ಚಚ್ಚಿಕೊಳ್ಳುವಂತಾಯ್ತು. ಆದರೆ ಆ ಇಪ್ಪತ್ತು ಜನರನ್ನ ಕಳುಹಿಸಲಾಯ್ತು. ಅರೆರೆ! ಇದು ಹೇಗೆ ಸಾಧ್ಯವೆಂದೇ ಅರ್ಥವಾಗಲಿಲ್ಲ. ಎದೆ ತನ್ನಿಂತಾನೇ ಉಬ್ಬಿ ಹೋಯ್ತು. ಅದೆಲ್ಲಿತ್ತೋ ಒಂದು ರೀತಿಯ ಹುರುಪು, ಕಣ್ಗಳಲ್ಲಿ ಹೊಳಪು ಮೂಡಿದವು. ಯಸ್ ಯಸ್ ಯಸ್ ಎಂದು ಒಮ್ಮೆ ಒಳಗೊಳಗೇ ಕೂಗಿಕೊಂಡೆ. ಗೆಲ್ಲುವೆನೆಂಬ ಹುರುಪು ಮತ್ತೆ ಬಂತು. ಎಚ್ಚೆತ್ತು ಕೂತೆ. ಆತ ಹೋಗುತ್ತಾ ಆಲ್ ದಿ ಬೆಸ್ಟ್ ಹೇಳಿ ಹೋದ. ಆದರೆ ಬುದ್ಧಿವಂತರನ್ನ ಕಳುಹಿಸಿ ಉಳಿದ ದಡ್ಡರಿಗೆ ಕೆಲಸ ಕೊಟ್ಟಿರಬಹುದೇ ಎಂಬ ಚಿಂತೆ ಕಾಡಲು ಶುರುವಾಯ್ತು. ನೋಡಿಕೊಂಡರಾಯ್ತು ಯಾವುದೋ ಒಂದು ಕೆಲಸ ಸಧ್ಯಕ್ಕೆ ಸಿಕ್ಕಿದೆಯಲ್ಲ ಮುಂದೆ ನೋಡಿಕೊಂಡರಾಯ್ತೆಂದು ಕೂತೆ. ಎರಡನೆಯ ಸುತ್ತು. ಒಂದು ವಿಷಯದ ಮೆಲೆ ಎರಡು ನಿಮಿಷದವರೆಗೂ ಮಾತನಾಡಬೇಕಿತ್ತು ಮತ್ತು ನನ್ನ ಬಗ್ಗೆ ವಿವರಿಸಬೇಕಿತ್ತು. ಆತ್ಮವಿಶ್ವಾಸ ದ್ವಿಗುಣಗೊಂಡಿದ್ದರಿಂದ ಬಾಯಿಗೆ ಬಂದದ್ದನ್ನ ಒದರಿದೆ. ಎರಡನೆಯ ಸುತ್ತೂ ಕೂಡ ಆಯ್ಕೆಯಾಗೇ ಹೋಯ್ತು.

ಎರಡನೆಯ ಸುತ್ತಿನಲ್ಲಿ ಮೂವತ್ತೈದು ಜನರನ್ನ ಕಳುಹಿಸಲಾಯ್ತು. ಕೆಲವರು ಹೋಗುತ್ತಿದ್ದಾಗ ಕಣ್ಣಿನಲ್ಲಿ ನೀರು ಹಾಕಿಕೊಂಡು ಹೊರಟರು. ಛೆ ಪಾಪ ಎಂದೆಣಿಸಿತು. ಯಾರು ಯಾರಿಗೆ ಏನೇನು ಅಗತ್ಯವೋ. ಇಲ್ಲಿ ಸ್ಪರ್ಧಿಸಲಾಗದೆ ನನಗಿಂತ ಪ್ರತಿಭಾವಂತರು ಸೋತು ಹೋಗುತ್ತಿರುವರೇನೋ ಗೆದ್ದಿದ್ದವರ ಕಣ್ಣುಗಳಲ್ಲಿ ಸಧ್ಯ ತಾವು ಬಚಾವಾದೆವೆಂಬ ಒಂದು ರೀತಿಯ ನಿರಾಳತೆ ಮತ್ತು ಖುಷಿಯಿತ್ತು. ಸೋತವರಿಗೆ ಬೇರೆಲ್ಲಾದರೂ ಕೆಲಸ ಸಿಗಲಿ ಎಂದು ಮನದಲ್ಲೇ ಹರಸಿ ಮೂರನೆಯ ಸುತ್ತಿಗೆ ಸಿದ್ಧನಾದೆ. ಒಬ್ಬೊಬ್ಬರಾಗಿ ಹೆಸರು ಕರೆಯುವರಂತೆ. ಹೋಗಿ ಮ್ಯಾನೇಜರನೊಂದಿಗೆ ಪ್ರಶ್ನೋತ್ತರ ಸುತ್ತು ಎದುರಿಸಬೇಕಂತೆ. ಮತ್ತೆ ಕಾಯುವ ಪರೀಕ್ಷೆ. ಒಬ್ಬೊಬ್ಬರು ಹೋದರೆ ಅರ್ಧರ್ಧ ಘಂಟೆ. ಅಂತೂ ನನ್ನ ಸರದಿ ಬಂತು. ಶರಣ್ ಎಂದದ್ದೇ ದಡಬಡನೆ ಎದ್ದು ಒಳಗೆ ಹೋದೆ.

ಕಂಗ್ರಾಚುಲೇಷನ್ಸ್ ಆಯ್ಕೆಯಾಗಿರುವುದಕ್ಕೆ ಬನ್ನಿ ಕುಳಿತುಕೊಳ್ಳಿ ಅಂತ ಎದುರಿನ ಕುರ್ಚಿಯ ಮೇಲೆ ಕೂರಿಸಿದರು. ನಾನು ಆಯ್ಕೆಯೇ ಆಗಿ ಹೋಗಿದ್ದೇನೆಂದು ಹೆಮ್ಮೆ, ಖುಷಿಯಾಯ್ತು. ನೋಡಿ ನಮ್ಮ ಕಂಪನಿಯಲ್ಲಿ ಶಿಫ್ಟ್ ಗಳು ಇರುತ್ತವೆ, ನೀವು ಅದಕ್ಕೆ ಹೊಂದಿಕೊಳ್ಳಲು ಒಪ್ಪಿಗೆಯಿದೆಯಾ? ಆಯ್ತು ಸರಿ ನನಗೆ ಒಪ್ಪಿಗೆ ಇದೆ ಎಂದೆ. ಒಂಭತ್ತು ಘಂಟೆಗಳು ಮಾತ್ರ ಕೆಲಸ ಇರುತ್ತೆ ಅಂತ ಹೇಳೋಕಾಗಲ್ಲ, ಕೆಲವು ಸಲ ಹನ್ನೆರಡು ಗಂಟೆಗಳ ಕಾಲ ಬೇಕಾದರೂ ಕೆಲಸ ಇರಬಹುದು. ಯಾವ ಸಮಯದಲ್ಲಿ ಕೆಲಸಕ್ಕೆ ಕರೆದರೂ ಬರಬೇಕಾಗುತ್ತೆ. ಕೆಲವು ಸಲ ಶನಿವಾರ ಭಾನುವಾರವೂ ಸಹ ಕೆಲಸ ಮಾಡಬೇಕಾಗುತ್ತೆ. ನೀವು ತಯಾರಿದ್ದೀರಾ ಎಂದರು. ಏನು ಹೇಳಬಹುದೆಂದು ಯೋಚಿಸುತ್ತಲಿದ್ದೆ. ಹಿಂದೆ ನಿಂತು ಮೊದಲ ಸುತ್ತಿನಲ್ಲಿ ಆಯ್ಕೆಯಾಗಲಾರದೇ ಹೋದ ಇಪ್ಪತ್ತೂ ಜನರು ನಾನು ಏನು ಪ್ರತಿಕ್ರಿಯೆ ನೀಡಬಹುದೆಂದು ಕಣ್ಣುಗಳನ್ನು ಇಷ್ಟಿಷ್ಟಗಲ ತೆರೆದು ಕಾಯುತ್ತಾ ನನ್ನನ್ನೇ ನೋಡುತ್ತಿರುವ ಹಾಗೆ ಭಾಸವಾಯ್ತು. ಥಟ್ಟನೆ ಹಿಂದೆ ತಿರುಗಿ ನೋಡಿದೆ ಯಾರೂ ಇರಲಿಲ್ಲ. ಎಚ್ ಆರ್ ಮಾತು ಮುಂದುವರೆಸಿದರು. ನಿಮಗೆ ಎಂಟು ಸಾವಿರ ತಿಂಗಳಿಗೆ ಸಂಬಳ ನಿಗದಿ ಮಾಡಲಾಗಿದೆ. ಮತ್ತು ಆರು ತಿಂಗಳ ಕಂಟ್ರಾಕ್ಟ್ ಮೇಲೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಆರು ತಿಂಗಳಿಗೆ ನಿಮ್ಮನ್ನು ತೆಗೆದುಕೊಳ್ಳುತ್ತಿರುವ ಪ್ರಾಜೆಕ್ಟ್ ಮುಗಿದುಹೋಗಲಿದೆ. ನಂತರ ನಮಗೆ ಇನ್ನಾವುದಾದರೂ ಪ್ರಾಜೆಕ್ಟ್ ಸಿಕ್ಕರೆ ಅಥವಾ ಮತ್ತಾವುದಾದರೂ ಪ್ರಾಜೆಕ್ಟಿನಲ್ಲಿ ಅವಕಾಶವಿದ್ದರೆ ನಿಮ್ಮನ್ನು ತೆಗೆದುಕೊಳ್ಳಲಾಗುವುದು. ನಿಮಗೆ ಈ ಎಲ್ಲಾ ಕಂಡೀಷನ್ನಿಗೆ ಒಪ್ಪಿಗೆ ಇದ್ದರೆ ನಾಳೆ ಬಂದು ಆಫರ್ ಲೆಟರ್ ಸ್ವೀಕರಿಸಿಕೊಂಡು ಹೋಗಬಹುದು ಎಂದರು. ಇಷ್ಟು ದೊಡ್ಡ ಕಂಪನಿಯಲ್ಲಿ ಕೆಲಸ ಗೆದ್ದೇಬಿಟ್ಟೆನೆಂದು ಹೆಮ್ಮೆಹಿಂದ ಬೀಗುತ್ತಿದ್ದವನ ತಲೆಯ ಮೇಲೆ ಮೊಟಕಿ ಕಾಲುಗಳನ್ನು ನೆಲದಿಂದ ಮೂರು ಅಡಿಯಷ್ಟಾದರೂ ಒಳಕ್ಕೆ ಹುಗಿದಹಾಗಾಯ್ತು. ಏನೆಂದು ಉತ್ತರ ಕೊಡುವುದು. ಇವರು ಹೇಳುತ್ತಿರುವುದಕ್ಕೆಲ್ಲಾ ಒಪ್ಪಿಗೆಯೆಂದು ಹೇಳಿಬಿಡಲೇ. ಸುಲಭವಾಗಿ ಕೆಲಸವೂ ಸಿಕ್ಕೇಹೋಗುತ್ತದೆ. ಆದರೆ ಇವರು ಷರತ್ತುಗಳನ್ನು ಹಾಕುತ್ತಿರುವುದನ್ನು ನೋಡಿದರೆ ಕೆಲಸಕ್ಕೆ ತೆಗೆದುಕೊಂಡಹಾಗಿಲ್ಲ ಜೀತಕ್ಕೆ ಕರೆಯುತ್ತಿರುವಹಾಗಿದೆ. ನನಗೆ ಯೋಚಿಸಲು ಸಮಯಾವಕಾಶ ಕೊಡಿ ಎಂದೆ. ಒಂದು ಘಂಟೆ ಯೋಚಿಸಿ ನಿನ್ನ ನಿರ್ಧಾರ ತಿಳಿಸು ಎಂದು ಕಳುಹಿದರು.ನನ್ನ ನಂತರ ಮತ್ತೊಬ್ಬ ಒಳಗೆ ಹೋದ. ಮಗದೊಬ್ಬ ಒಳಗೆ ಹೋದ ಎಲ್ಲರೂ ನಗುನಗುತ್ತಲೇ ಹೊರಬಂದರು. ಒಬ್ಬಳನ್ನು ತಡೆದು ನೀವು ಕಂಟ್ರಾಕ್ಟಿಗೆ ಸಹಿ ಹಾಕಿದಿರೇನೆಂದು ಕೇಳಿದರೆ ಹೌದು ಎಂದಳು. ಸೋತವರೆಲ್ಲರೂ ನನ್ನ ಸುತ್ತ ನಿಂತು ನನ್ನ ಕೆಲಸ ಕಿತ್ತುಕೊಂಡಿದ್ದೀಯ ಸುಮ್ಮನೆ ಒಪ್ಪಿಕೋ ಎನ್ನುತ್ತಲಿದ್ದರು. ಅಪ್ಪ ಅಮ್ಮ ಎಲ್ಲಾದರೆ ಏನೋ, ಹೇಗೂ ಎಲ್ಲಾದರೂ ಕೆಲಸ ಮಾಡಬೇಕಿರುವುದೇ ತಾನೇ ಕಂಪನಿಗಳವರು ಈ ರೀತಿಯ ಷರತ್ತುಗಳನ್ನೂ ಹಾಕಬಾರದೆಂದರೆ ಹೇಗೆ ಎಂದು ಉಪದೇಶ ನೀಡುತ್ತಿದ್ದರು. ಲೋ ಹೊರಗಡೆ ಹೋಗಿ ನೋಡು ಕೆಲಸ ಒಂದು ಕೊಡ್ತೀವಿ ಅಂದರೆ ಏನು ಮಾಡಲೂ ಸಹ ಸಿದ್ಧರಿರುವವರು ಎಷ್ಟು ಜನ ಕ್ಯೂ ನಿಂತಿದ್ದಾರೆ ನೀನು ಒಪ್ಪಿಕೊಳ್ಳದಿದ್ದರೆ ಐ.ಟಿ ಕಂಪನಿಗಳಿಗೆ ಯಾವ ರೀತಿಯ ನಷ್ಟವೂ ಇಲ್ಲ, ನಷ್ಟವೇನಿದ್ದರೂ ನಿನಗೇನೇ, ಸುಮ್ಮನೆ ಒಪ್ಪಿಕೋ ಎಂದು ನನ್ನ ನೆರಳೇ ಹೇಳುತ್ತಿತ್ತು. ಆದರೂ ಆತ ನನ್ನ ಬದುಕನ್ನೇ ಗುತ್ತಿಗೆ ಕೇಳುತ್ತಿರುವವನ ಹಾಗೆ ಕಂಡ. ಅವನಿಗೆ ಬೇಕಾದ ಹಾಗೆ ನಾನು ಯಾಕೆ ಬದುಕಬೇಕೆಂದೆನಿಸಿತು. ಮೂರ್ಖತನವೆಂದು ಗೊತ್ತಿದ್ದರೂ ಐಟಿ ಕಂಪನಿಗಳಿಗೆ ಒಟ್ಟಾರೆಯಾಗಿ ಒಂದು ನಮಸ್ಕಾರ ಹೊಡೆದುಬಿಟ್ಟೆ. ಮುಂದೇನು ಮಾಡುತ್ತೀನೋ ಗೊತ್ತಿಲ್ಲ, ಸಾಲ ಹೇಗೆ ಹೊರುತ್ತೀನೋ ಗೊತ್ತಿಲ್ಲ. ಜೀವನ ಹೇಗೆ ನಡೆಯುವುದೋ ಗೊತ್ತಿಲ್ಲ. ಆದರೆ ಸೋತವರೆಲ್ಲರೂ ಬಂದು ಕೈಕುಲುಕಿ ಧನ್ಯವಾದಗಳು ನಮಗೊಂದು ಅವಕಾಶ ಸಿಕ್ಕಿತು ನಿಮ್ಮಿಂದ ಎಂದು ಮತ್ತೆ ಒಳಹೋಗುತ್ತಿರುವಂತೆನಿಸಿತು. ಹಿಂದಿರುಗದೆ, ನನ್ನ ನಿರ್ಧಾರವನ್ನೂ ಹೇಳದೇ ಕಂಪನಿಗಳಿಗೆ ಬೆನ್ನು ಹಾಕಿದೆ. +ನೀ.ಮ. ಹೇಮಂತ್