ಟಪ್… ಟಪ್… ಟಪ್… ಎಂಬ ನಿರಂತರ ಶಬ್ಧ.
ದೊಡ್ಡ ಮಂಜು ಮುಸುಕಿದ ಕೋಣೆ. ಹಿಂದೆ ಎಲ್ಲೋ ಒಂದು ದೊಡ್ಡ
ಗಡಿಯಾರ ಒಂದೊಂದು ಸೆಕೆಂಡಿಗೂ ಟಪ್ ಟಪ್ ಟಪ್ ಎಂದು ಸದ್ದು ಮಾಡುತ್ತಾ ತಿರುಗುತ್ತಿರುವ ಗಡಿಯಾರದ ಮುಳ್ಳು.
ಘಮ್ಮನೆ ಸುಗಂಧ ಬೀರುತ್ತಿರುವ ಅದಾವುದೋ ದ್ರವ್ಯ. ಅಲ್ಲೆಲ್ಲೋ ತುಂಬಾ ದೂರದೂರದಲ್ಲಿ ಬಾರಿಸುತ್ತಿರುವಂತೆ,
ಕೀರಲಾಗಿ ಅಲೆ ಅಲೆಯಾಗಿ ತೇಲಿ ಬರುತ್ತಿರುವ ಅದಾವುದೋ ಸಿತಾರೋ ವೀಣೆಯದೋ ನಾದ. ಈ ಕೋಣೆಗೆ ಗೋಡೆಗಳಿವೆಯೋ
ಇಲ್ಲವೋ ಗೊತ್ತಿಲ್ಲ. ದೊಡ್ಡ ದೊಡ್ಡ ಕಿಟಕಿಗಳಂತೂ ಅಲ್ಲಲ್ಲಿ ಇವೆ. ಹಾಗೇ ಒಳ ಪ್ರವೇಶಿಸಿ ಕಿಟಕಿಯ
ಬಳಿ ಹೊರಗಿಣುಕಿದರೆ ದೊಡ್ಡ ಹಸಿರಸಿರು ಬೆಟ್ಟಗಳು ಮಧ್ಯದಲ್ಲೆಲ್ಲೋ ಚಲಿಸುತ್ತಿರುವ ಮೋಡಗಳ ನಡುವಿನಿಂದ
ಕಾಣುತ್ತಿರುವ ಜಲಪಾತ ಯಾವುದರ ಪರಿವೆಯೂ ಇಲ್ಲದೆ ಹಾರುತ್ತಿರುವ ಹಕ್ಕಿಗಳು. ಆಹಾ ಕಣ್ಣುಗಳನ್ನು ಮುಚ್ಚಿ
ಆಸ್ವಾದಿಸಬೇಕಷ್ಟೇ ಆ ಹೊರಗಿನ ಪ್ರಪಂಚವನ್ನ. ಢಣ್ಣ್!!!! ಗಡಿಯಾರ ಎಚ್ಚರಿಸಿತು.
ಒಂದು ಮೇಜು ಅದರ ಮೇಲೆ ಹಣ್ಣು ಹಂಪಲು, ಸಿಹಿ ತಿನಿಸುಗಳು,
ಹಾಲು ಸುಗಂಧ ಪಸರಿಸುತ್ತಿರುವ ಗಂಧದ ಕಡ್ಡಿಗಳು. ನೋಡಿದ್ದೇ ಅದೆಲ್ಲಿತ್ತೋ ಹಸಿವು ಥಟ್ಟನೆ ಶುರುವಾಗಿಹೋಯ್ತು.
ಹೊಟ್ಟೆ ಚುರುಗುಟ್ಟಿದ್ದೇ ಕಾಲುಗಳು ತನ್ನಿಂತಾನೇ ಎಳೆದುಕೊಂಡು ಅದರ ಬಳಿ ಹೋಗಿ ನಿಲ್ಲಿಸಿತು. ಯಾವುದನ್ನ
ಭಕ್ಷಿಸಲಿ. ಹೊಟ್ಟೆ ರಾಕ್ಷಸಾಕಾರ ತೊಟ್ಟು ಎಲ್ಲವನ್ನೂ ಒಂದೇ ಸಾರಿ ಮುಗಿಸಿಬಿಡು ಎನ್ನುತ್ತಲಿದೆ.
ಇನ್ನೇನು ಮುಟ್ಟಬೇಕು ಅರೆರೆ! ಹೊಳೆಯುತ್ತಿರುವ ಬಂಗಾರ, ದುಡ್ಡಿನ ಥಾಲಿ. ಆಸೆಯ ಮುಂದೆ ಹಸಿವು ಎಂಥದ್ದು!
ಹಣ್ಣು ಹಸಿವು ಎಲ್ಲ ಒಂದೇ ಏಟಿಗೆ ಥಟ್ಟನೆ ಕಣ್ಣಿನಿಂದ ಮರೆಯಾಗಿ ಬರೀ ಬಂಗಾರ, ದುಡ್ಡೇ ಕಾಣಿಸುತ್ತಲಿದ್ದವು.
ಬಿಟ್ಟರೆ ಕಣ್ಣುಗಳು ನನ್ನಿಂದ ಕಿತ್ತುಕೊಂಡು ಹೋಗಿ ಬಂಗಾರಕ್ಕೆ ಅಂಟಿಬಿಡುತ್ತಿದ್ದವೇನೋ. ಮೊದಲು ಅಷ್ಟೂ
ಅಮೂಲ್ಯವಾದವುಗಳನ್ನು ಸಾಧ್ಯವಾದಷ್ಟೂ ಬಾಚಿಕೊಂಡು ಇಲ್ಲಿಂದ ಪೇರಿ ಕಿತ್ತಬೇಕೆಂದುಕೊಂಡೆ. ನನ್ನ ಆಲೋಚನೆಗೆ
ನನಗೇ ನಗು ಬಂತು. ಎಲ್ಲಿಗೆಂದು ಓಡುವುದು? ಇಲ್ಲಿ ನನ್ನಿಂದ ಕಿತ್ತುಕೊಳ್ಳುವವರೂ ಯಾರೂ ಇಲ್ಲವಲ್ಲ.
ಆದರೆ, ದುಡ್ಡಿದೆ ಎಂದರೆ ಅಷ್ಟು ಸುಲಭವಾಗಿ ಅದು ನನಗೆ ಸಿಗುವಹಾಗಂತೂ ಇರುವುದಿಲ್ಲ. ನೂರು ರೂಪಾಯಿ
ಬೇಕೆಂದರೆ ದಿನವಿಡೀ ದುಡಿಯಬೇಕಾದೀತು. ಮೂವತ್ತು ರೂಪಾಯಿಗೆ ದೇಹ ಮಾರಿಕೊಂಡು ಸಂಪಾದಿಸುವವರಿದ್ದಾರೆ
ಇನ್ನ ಇಷ್ಟು ರಾಶಿ ಹಣ! ಯಾರಾದರೂ ಇದ್ದೇ ಇದ್ದಾರೆಂದು ಆ ಮಂಜು ಮುಸುಕಿದ ಕೋಣೆಯಲ್ಲಿ ಸಾಧ್ಯವಾದಷ್ಟೂ
ಕಣ್ಣರಳಿಸಿ ತೀಕ್ಷ್ಣವಾಗಿ ಪರಿಶೀಲಿಸಲು ಯತ್ನಿಸಿದೆ. ಕಾವಲಿಗೆ ಯಾರೂ ಇರಲಿಲ್ಲ. ಆದರೆ!
ಆದರೆ, ಇಡೀ ಪ್ರಪಂಚವನ್ನೇ ಮರೆಸಿಬಿಡುವ, ನೀಲ ಕಣ್ಗಳ, ಕಪ್ಪಾನೆ
ಕಪ್ಪು ಗುಂಗುರು, ನೀಳ ಕೇಶರಾಶಿಯ ಹಾಲಿನ ವರ್ಣವನ್ನೂ ನಾಚಿಸುವಂತಹ ತೊಗಲುಳ್ಳ ಸುಂದರಿಯೋರ್ವಳು ಸುಮ್ಮನೆ
ಕುಳಿತುರುವಳು. ಹೊರಗಿನ ಸುಂದರ ಪ್ರಪಂಚ, ಈ ಹಸಿವು ನೀಗಿಸುವ ವಿವಿಧ ಭಕ್ಷ್ಯ ಭೋಜನಗಳು, ಬಾಯಾರಿಸುವ
ಹಾಲು, ಸುತ್ತೆಲ್ಲೆಲ್ಲೂ ಬೇಕಾಬಿಟ್ಟಿ ಬಿದ್ದಿರುವ ವರ್ಣರಂಜಿತ ತರಹೇವಾರಿ ಧಿರಿಸುಗಳು, ಅಷ್ಟೇ ಏಕೆ
ಕಣ್ಣೆದುರಿಗೇ ಹೇರಳವಾಗಿ ಸುರಿದುಕೊಂಡಿರುವ ವೈಢೂರ್ಯಗಳೂ ಸಹ ನಿವಾಳಿಸಿ ಎಸೆದುಬಿಟ್ಟೇನು ಅವಳಿಗಾಗಿ.
ಒಮ್ಮೆ ನನ್ನೆಡೆ ತಿರುಗಿ ನೋಡಬಾರದಾ ಅವಳು ಎಂದುಕೊಳ್ಳುತ್ತಿದ್ದಂತೆಯೇ ಅಯ್ಯಯ್ಯೋ ನನ್ನೆಡೆಗೇ ತನ್ನ
ಕಣ್ಣ ಗೊಂಬೆಗಳನ್ನ ತಿರುಗಿಸಿ ಮಂದಹಾಸದೊಂದಿಗೆ ನೋಡಿಯೇ ಬಿಟ್ಟಳು. ಎದೆ ಒಮ್ಮೆ ತನ್ನ ಬಡಿತ ಸ್ಥಗಿತಗೊಳಿಸಿ
ಉಸಿರು ಒಳಗೇ ಕಟ್ಟಿಕೊಂಡಿತು. ಅವಳು ನನ್ನೆಡೆಗೆ ತಿರುಗಿದ್ದೇ, ನಾನು ಅವಳಿಂದ ಕಣ್ಣು ತಿರುಗಿಸಿ ಅವಳಿಗೆ
ಬೆನ್ನು ಹಾಕಿ ನಿಂತಿದ್ದಕ್ಕೆ ಬೇಸರಿಸಿದಳೋ ಏನೋ. ಇನ್ನೂ ನನ್ನೆಡೆಗೇ ನೋಡುತ್ತಲಿರಬಹುದೇ? ಅರೆರೆ,
ಇವಳನ್ನೇ ದುಡ್ಡು ಕಾಯಲಿಕ್ಕಾಗಿ ಏಕೆ ಬಿಟ್ಟಿರಬಾರದು. ಇವಳನ್ನು ನೋಡಿದವನು ಮತ್ತೆ ದುಡ್ಡಿನ ಕಡೆಗಂತೂ
ಹೋಗಲಾರನು. ಇಲ್ಲ ನಾನು ಮೋಸ ಹೋಗಬಾರದೆಂದೆನಿಸಿತು. ದುಡ್ಡಿದ್ದರೆ ಎಲ್ಲಾ ಸಿಕ್ಕಂತೆಯೇ, ಎಲ್ಲವನ್ನೂ
ಪಡೆದುಕೊಳ್ಳಬಹುದು. ಆದರೆ ಅವಳ ಹಿಂದೆ ಹೋದರೆ, ಅವಳೂ ಒಂದಲ್ಲ ಒಂದು ದಿನ ದುಡ್ಡು ಕೇಳಿಯೇ ಕೇಳುತ್ತಾಳೆ.
ದುಡ್ಡು ಮುಖ್ಯ. ಛೆ ಛೆ ಇಲ್ಲ ಇಂಥವಳ ಸಹವಾಸವಿಲ್ಲದ ದುಡ್ಡು ಇಟ್ಟುಕೊಂಡು ಏನು ಉಪ್ಪಿನಕಾಯಿ ಹಾಕಿಕೊಂಡು
ನೆಕ್ಕಲ. ಅವಳ ಕಡೆ ಮತ್ತೆ ತಿರುಗುವ ಧೈರ್ಯ ಮಾಡೋಣವೆಂದರೆ ಧೈರ್ಯ ಸಾಲದು. ನಾನು ಅವಳ ವಿರುದ್ಧ ತಿಕ್ಕಿನಲ್ಲಿ
ತಿರುಗಿದ್ದರೂ ನನ್ನ ಕಣ್ಣುಗಳು ಮಾತ್ರ ಅವಳಲ್ಲೇ ನೆಟ್ಟಿತ್ತು. ಕಣ್ಣಲ್ಲೇ ಅವಳನ್ನು ಇಡಿಯಾಗಿ ಬಿಡಿ
ಬಿಡಿಯಾಗಿ ಅಳತೆ ಮಾಡಿ, ಆಸ್ವಾದಿಸಿ, ಅನುಭವಿಸುವಷ್ಟರಲ್ಲೇ ಢಣ್…. ಢಣ್…. ಎಂದು ಹೊಡೆದುಕೊಂಡಿತು
ಗಂಟೆ, ಗಡಿಯಾರದ ಗಂಟೆ. ಅದು ಎಬ್ಬಿಸಿದ ಅಲೆಗಳಿಂದ ಒಮ್ಮೆ ಭೂಕಂಪನವಾದಂತಾಗಿ ಸುಧಾರಿಸಿಕೊಂಡು ಮತ್ತೆ
ಅವಳೆಡೆಗೆ ತಿರುಗಿದರೆ, ಅವಳೆಲ್ಲಿ. ಅಯ್ಯಯ್ಯೋ ಕಳೆದುಕೊಂಡೆ, ಮೀನಾಮೇಷ ಎಣಿಸಿ ತಪ್ಪು ಮಾಡಿದೆನೇನೋ.
ಇಲ್ಲೇ ಎಲ್ಲಾದರೂ ಇದ್ದಾಳು, ದೂರ ಹೋಗಿರಲಾರಳು ಎಂದುಕೊಂಡು ಹುಡುಕುತ್ತಾ ಹೊರಟೆ. ಆ ದೊಡ್ಡ ಗಡಿಯಾರದ
ಬಳಿ ಬಂದು ನಿಂತೆ. ಗಡಿಯಾರ ಹತ್ತಿ ಮೇಲಿನಿಂದ ಎಲ್ಲಾದರೂ ಕಾಣುವಳೇನೋ ಎಂದು ಹುಡುಕಿದೆ. ಅವಳು ಮುಂಚೆ
ಕುಳಿತಿದ್ದ ಜಾಗದಲ್ಲೇ ಇನ್ನಾರೋ ಕುಳಿತಿರುವ ಹಾಗೆ ಕಂಡಿತು.
ಇವಳು ಮುಂಚಿನವಳಿಗಿಂತಲೂ ಸುಂದರವಾಗಿದ್ದಳು. ಅವಳ ಪಕ್ಕ ಇದ್ದ
ಹಣ್ಣು ಹಂಪಲು ಬಾಡಿಹೋಗಿದ್ದವು. ಹೋದವಳು ಹೋದಳು, ಇವಳನ್ನಾದರೂ ಉಳಿಸಿಕೊಳ್ಳಬೇಕೆಂದು ಮನದಲ್ಲೇ ತೀರ್ಮಾನಿಸಿದೆ.
ಗಡಿಯಾರದಿಂದ ಇಳಿದು ಮೊದಲು ಅವಳ ಬಳಿ ಹೋಗುವುದೆಂದು ಹೊರಟೆ. ಗಡಿಯಾರ ಮತ್ತೆ ಢಣ್… ಢಣ್…. ಢಣ್ ಎಂದು
ಹೊಡೆದುಕೊಂಡಿತು. ಈ ಗಡಿಯಾರ ಬಡಿದುಕೊಂಡ ಹಾಗೆ ಇಲ್ಲಿ ಎಲ್ಲವೂ ಬದಲಾಗುತ್ತೆನಿಸುತ್ತೆ. ಈ ಬಾರಿಯೂ
ಬಡಿದುಕೊಂಡಿತು, ಇವಳೂ ಕಳೆದುಹೋಗುವಳೇನೋ ಎಂದು ಹೆದರಿಕೆಯಾಯ್ತು. ಅವಳ ಕಡೆ ತಿರುಗಿದರೆ ಇನ್ನೂ ಅಲ್ಲೇ
ಕುಳಿತಿದ್ದಳು. ಅವಳ ಬಳಿಗೆ ಓಡಿದೆ, ಇನ್ನೇನು ಅವಳನ್ನು ಸಮೀಪಿಸಬೇಕು ಕಾಣೆಯಾದಳು. ಹೊಟ್ಟೆ ಉರಿದುಹೋಯ್ತು.
ಕ್ರೋಧ ಉಕ್ಕಿಬಂತು. ಈ ಗಡಿಯಾರದಿಂದಲೇ ಎಲ್ಲಾ ಆಗಿದ್ದು ಗಡಿಯಾರವನ್ನು ಒಡೆದುಹಾಕಬೇಕೆಂದು ಗಡಿಯಾರದ
ಬಳಿ ನುಗ್ಗಿದೆ.
ಟಪ್.. ಟಪ್… ಟಪ್… ಎಂದು ದೊಡ್ಡದಾಗಿ ಸದ್ದು ಮಾಡುತ್ತಾ ಅದರ
ದೈತ್ಯ ಮುಳ್ಳುಗಳು ಸುತ್ತಿ ಸುತ್ತಿ ಸುತ್ತುತ್ತಲೇ ಇದ್ದವು. ಸೆಕೆಂಡಿನ ಮುಳ್ಳಿನ ಮೇಲೆ ಹಾರಿ ಹಿಡಿದುಕೊಂಡೆ.
ನಾನು ಅದಕ್ಕೆ ಜೋತುಬಿದ್ದರೂ ಅದು ಅದರ ಪಾಡಿಗೆ ಚಲಿಸುತ್ತಲೇ ಇತ್ತು. ಪ್ರತೀ ಬಾರಿ ಮುಂದೆ ಚಲಿಸುತ್ತಿದ್ದಂತೆಯೂ
ಕೈಗಳು ಜಾರುತ್ತಿದ್ದವು. ಇದು ಹೀಗೆ ಅಗುವುದಲ್ಲ. ಬೇರೆಯೇ ಮಾರ್ಗ ಉಪಯೋಗಿಸಬೇಕು ಇದನ್ನು ನಿಲ್ಲಿಸಲಿಕ್ಕೆಂದು
ಯೋಚಿಸುತ್ತಿದ್ದಂತೆಯೇ ಸೆಕೆಂಡಿನ ಮುಳ್ಳು ಹನ್ನೆರಡರ ಸಂಖ್ಯೆಯ ಕಡೆಗೆ ಚಲಿಸಲು ಶುರುವಾಯ್ತು. ಕೈ
ಜಾರಿ ಅಲ್ಲಿಂದ ಬಿದ್ದರೆ ಪ್ರಾಣ ಉಳಿಯುವುದಂತೂ ಮರೆತುಬಿಡಬೇಕು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು
ಸೆಕೆಂಡಿನ ಮುಳ್ಳು ಹನ್ನೊಂದರ ಹತ್ತಿರ ತಲುಪಿದ್ದೇ ಎಗರಿ ಹನ್ನೊಂದರ ಸಂಖ್ಯೆಯನ್ನು ಹಿಡಿಯಬೇಕೆಂದು
ಯೋಜನೆ ಹಾಕಿ ಕಾದೆ. ಹನ್ನೊಂದರ ಹತ್ತಿರ ಬಂತು ಬಂತೇ ಬಂತು ಎಗರಿ ಸಂಖ್ಯೆಯನ್ನು ಹಿಡಿದೇಬಿಟ್ಟೆ ಎನ್ನುವಷ್ಟರಲ್ಲಿ
ಜಾರಿ ಮೇಲಿಂದ ಬಿದ್ದು ಏಳರ ಸಂಖ್ಯೆಯ ಮೇಲೆ ಬಿದ್ದೆ. ಅದೆಷ್ಟು ಹೊತ್ತು ಬಿದ್ದಿದ್ದೆನೋ ಗೊತ್ತಿಲ್ಲ.
ದೊಡ್ಡ ಮುಳ್ಳು ತಳ್ಳಿ ನನ್ನನ್ನು ಕೆಳಗೆ ಬೀಳಿಸಿದಾಗಲೇ ಎಚ್ಚರವಾಗಿದ್ದು. ಈ ಗಡಿಯಾರವನ್ನು ನಿಷ್ಕ್ರಿಯಗೊಳಿಸುವ
ಬದಲು ಹಿಂದಕ್ಕೆ ಹಾಕಿದರೆ! ಆಲೋಚನೆ ಬಂದಿದ್ದೇ ಕಾರ್ಯಗತನಾದೆ. ದೊಡ್ಡ ದೊಡ್ಡ ಕಂಬಗಳಂತಿದ್ದ ಮೂರೂ
ಮುಳ್ಳುಗಳನ್ನು ಎಳೆದೆಳೆದು ಶಕ್ತಿ ಮೀರಿ ಜಗ್ಗಿದರೂ, ಸಂಖ್ಯೆಗಳನ್ನು ಕಿತ್ತು ಎಡಗಡೆ ಇರುವುದನ್ನು
ಬಲಗಡೆ, ಬಲಗಡೆ ಇರುವುದನ್ನು ಎಡಗಡೆ ಹಾಕಲು ಪ್ರಯತ್ನಿಸಿದರೂ, ಗಡಿಯಾರದ ಬ್ಯಾಟರಿ ಕಿತ್ತಲು ಪ್ರಯತ್ನಿಸಿದರೂ,
ಗಡಿಯಾರ ನಿಲ್ಲಲೇ ಇಲ್ಲ. ಗಡಿಯಾರ ಹಿಂದಕ್ಕಂತೂ ಚಲಿಸುವುದಿಲ್ಲ, ಹೋಗಲಿ ಚಲನೆಯಾದರೂ ನಿಧಾನಗತಿಯಲ್ಲಿ
ಹೋಗುವ ಹಾಗೆ ಏನಾದರೂ ಮಾಡಬಹುದೇನೋ ಪ್ರಯತ್ನಿಸಿದೆ. ಅದೂ ಸಾಧ್ಯವಾಗಲಿಲ್ಲ. ಹೋಗಲಿ ಒಡೆದೇ ಹಾಕಿಬಿಡೋಣ
ಎಂದುಕೊಂಡೆ. ಒಡೆಯುವುದಿರಲಿ ಚೂರು ಊನವೂ ಆಗಲಿಲ್ಲ. ಮುಳ್ಳನ್ನೇ ಕಿತ್ತುಬಿಟ್ಟರೆ ಎಂದು ಹೊಸ ಉಪಾಯ
ಹೊಳೆಯಿತು. ಕೇಂದ್ರಕ್ಕೆ ಹೋಗಿ ಎಳೆದೆ ಯಾವ ಸಾಹಸ, ದಾಳಿ, ಪ್ರಯತ್ನಗಳಿಗೂ ಜಗ್ಗಲಿಲ್ಲ. ಗಡಿಯಾರ ಸುತ್ತುತ್ತಲೇ
ಇತ್ತು, ಸುತ್ತುತ್ತಲೇ ಇತ್ತು, ಸುತ್ತುತ್ತಲೇ ಇತ್ತು.
ಗಡಿಯಾರದ ಮೇಲೆಯೇ ಹತ್ತಿ ಹನ್ನೆರಡರ ಸಂಖ್ಯೆಯ ಮೆಲೆ ಸುಸ್ತಾಗಿ
ಒರಗಿ ಕುಳಿತೆ. ಹಸಿವಿನಿಂದ ಮತ್ತೂ ನಿತ್ರಾಣವಾಗುವಂತಾಯಿತು. ಕೆಳಗೆ ಅದೇ ಸ್ಥಳದಲ್ಲಿ ಇನ್ನಾರೋ ಕುಳಿತಿರುವಂತಿತ್ತು.
ಮೊದಲೇ ಮಸುಕು ಮಸುಕಾಗಿ ಕಾಣುತ್ತಿತ್ತು, ಅದರ ಮೇಲೆ ಕಣ್ಣುಗಳು ಬೇರೆ ಶಕ್ತಿ ಕಳೆದುಕೊಂಡಿದ್ದವು.
ಸುಮ್ಮನೆ ನನ್ನ ಪಾಡಿಗೆ ನಾನು ಸಿಕ್ಕಿದ್ದ ಹಣ್ಣು ತಿಂದು, ಹಣ ಬಾಚಿಕೊಂಡು, ಸಿಕ್ಕಷ್ಟು ಸಮಯ ಅವಳೊಂದಿಗೆ
ಸ್ನೇಹ ಬೆಳೆಸಿದ್ದರೆ ಆಗುತ್ತಿತ್ತು. ನನ್ನ ಕೈಲಾಗದ ಕೆಲಸಕ್ಕೆ ಕೈ ಹಾಕಿ ಸೋತೆನಷ್ಟೇ. ಎಲ್ಲ ಕಡೆಯಿಂದ
ನಷ್ಟವಷ್ಟೇ. ನೋಡ ನೋಡುತ್ತಿದ್ದಂತೆ ಬೆಳಕು ಮಂದವಾಗುತ್ತಾ ಬಂತು. ಕತ್ತಲು ಎಲ್ಲೆಲ್ಲೂ ಆವರಿಸುತ್ತಲಿತ್ತು.
ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವುದಕ್ಕೂ ತ್ರಾಣವಿಲ್ಲ. ಹಣ ಹೆಣ್ಣು ಏನೂ ಬೇಕಿಲ್ಲ ಹೊಟ್ಟೆಗೆ ಏನಾದರು
ಬಿದ್ದರೆ ಸಾಕಿತ್ತು. ಆದರೆ ಅಷ್ಟು ಕೆಳಗೆ ಹೋಗುವ ಬಗೆ ಹೇಗೆ. ಸಹಾಯಕ್ಕೂ ಯಾರೂ ಇಲ್ಲ. ಎಲ್ಲೂ ಏನೂ
ಕಾಣದಂತಾಗಿ ಹೋಯ್ತು. ಮತ್ತೆ ಬೆಳಕು ಬರುವುದೋ ಇಲ್ಲವೋ ಗೊತ್ತಿಲ್ಲ. ಗಡಿಯಾರ ಮಾತ್ರ ಟಪ್.. ಟಪ್…
ಟಪ್… ಎಂದು ಅದರ ಪಾಡಿಗೆ ತಿರುಗುತ್ತಲೇ ಇತ್ತು.
+ನೀ.ಮ. ಹೇಮಂತ್
ಚೆನ್ನಾಗಿ ಬರೆದಿದ್ದೀರ.....ಸುಂದರ ಬ್ಲಾಗ್
ReplyDeleteHey thank you ಪದ್ಮಾ ಅವರೇ. ಸಾಧ್ಯವಾದಲ್ಲಿ ಇತರ ಕತೆಗಳಿಗೂ ಕಣ್ಣಾಡಿಸಿ :-)
Delete