ಅವಳು ಅಡುಗೆ ಮನೆಯಲ್ಲಿದ್ದಾಳೆ. ಎಲ್ಲರೊಂದಿಗೆ ನಗುನಗುತ್ತಲೇ
ಇದ್ದವಳು ಈಗ ಅಡುಗೆ ಮನೆಯಲ್ಲಿ ಒಬ್ಬಳೇ ಇರುವಾಗ ಕಣ್ಣೊರೆಸಿಕೊಳ್ಳುತ್ತಿದ್ದಾಳೆ. ಅವಳು ಎಲ್ಲಾ ಮರೆತಿರಬಹುದಾ.
ಛೇ ಇಷ್ಟು ಬೇಗ ಮರೆಯಲು ಸಾಧ್ಯವೇ ಇಲ್ಲ. ಆದರೆ ಹೇಗೆ ಎಲ್ಲವನ್ನೂ ಒಪ್ಪಿಕೊಂಡಳೋ. ಅವಳಿಗಷ್ಟು ಧೈರ್ಯ
ಎಲ್ಲಿಂದ ಬಂತೋ ಗೊತ್ತಾಗುತ್ತಿಲ್ಲ. ನಾನಂತೂ ತುಂಬಾ ದುರ್ಬಲ, ಹೇಡಿಯಾಗಿಬಿಟ್ಟೆ. ಅತ್ತ ನಡುಮನೆಯಲ್ಲಿ
ಎಲ್ಲಾ ವಿಶ್ರಮಿಸುತ್ತಾ, ಹರಟುತ್ತಾ, ಬಂದಿರುವ ಉಡುಗೊರೆ, ದುಡ್ಡನ್ನು ಲೆಕ್ಕ ಮಾಡುತ್ತಾ ಕುಳಿತಿದ್ದಾರೆ.
ಇನ್ನೊಂದು ಕಡೆ ಮಲಗುವ ಕೋಣೆಯಲ್ಲಿ ಹಳೇ ಮಂಚಕ್ಕೇ ಹೊಸ ಹಾಸಿಗೆ, ಹೊದಿಕೆ ಹಾಕಿ ಸಿದ್ಧಗೊಳಿಸುತ್ತಿದ್ದಾರೆ.
ಸಿನಿಮಾಗಳಲ್ಲಿ ತೋರಿಸಿದಂತೆ ಹೂವುಗಳನ್ನು ಹಾಸಿಗೆಯ ಪೂರ್ತಿ ಹರಡಿ ಮಂಚ ಪೂರ್ತಿ ಹೂವಿನ ಹಾರಗಳಿಂದ
ಶೃಂಗರಿಸಿ, ಪಕ್ಕದಲ್ಲಿ ಹಣ್ಣುಹಂಪಲು, ಸಿಹಿ ತಿನಿಸುಗಳನ್ನೆಲ್ಲಾ ಇಟ್ಟು ಸಂಬಂಧಿಕರೆಲ್ಲಾ ತಂದು ಅವಳನ್ನು
ಒಳಗೆ ಬಿಟ್ಟು ಬೀಗ ಹಾಕಿ ಹೋಗಲಾರರು ಅನಿಸುತ್ತೆ, ಸಾಧಾರಣವಾಗಿ ಹಾಲು ಕೊಟ್ಟು ಕೋಣೆಗೆ ಬಿಡಬಹುದೇನೋ
ಅಷ್ಟೇ. ಛೇ! ಈ ಮೊದಲ ರಾತ್ರಿಯ ಏರ್ಪಾಟು ತಪ್ಪಲು ಯಾವುದಾದರೂ ಸಾಧ್ಯತೆಗಳಿರಬಹುದಾ. ಅವಳು ನನಗಿವತ್ತು
ಸಾಧ್ಯವಿಲ್ಲ ತುಂಬಾ ಸುಸ್ತಾಗಿದೆ ಎಂದೇನಾದರು ನೆಪ ತೆಗೆದು ಬೇಡವೆಂದರೆ ಮುಂದೂಡಿಯಾರೇನೋ ಬಹುಶಃ,
ಆದರೆ ಎಲ್ಲ ಸಿದ್ಧತೆಗಳು ನಡೆದಿವೆ ಅವಳೂ ಮಾನಸಿಕವಾಗಿ ನಿರೀಕ್ಷಿಸುತ್ತಿರಬಹುದು ಇಷ್ಟೊತ್ತಿಗಾಗಲೇ.
ಹಾಲು ಉಕ್ಕಿಬರುವುದನ್ನೇ ಕಾಯುತ್ತಾ ಇನ್ನೂ ಅಲ್ಲೇ ನಿಂತಿದ್ದಳು. ಅಕಸ್ಮಾತ್ ಇವತ್ತೇ ಧಿಡೀರನೆ ಹೊರಗಾದರೆ!
ಸಾಧ್ಯವಿಲ್ಲ ಆ ಸಮಯವನ್ನೆಲ್ಲಾ ನೋಡಿಯೇ ಮದುವೆಯ ತಾರೀಖು ನಿಗದಿಪಡಿಸಿರುತ್ತಾರೆ. ಹೇಗೋ ಇವತ್ತು ತಪ್ಪಿದರೆ
ಏನಂತೆ ನಾಳೆಯೋ, ನಾಡಿದ್ದೋ, ಇನ್ನೆಂದಾದರೂ ಆಗಲೇ ಬೇಕಲ್ಲಾ. ಮದುವೆಯಂತೂ ಆಗಿದೆ. ಪರವಾನಗಿ ಸಿಕ್ಕಿದೆ.
ಆದರೆ ಇವತ್ತು ತಪ್ಪಿದರೆ ಸಾಕು ನಾಳೆಯ ಕತೆ ನಾಳೆಗೆ ನೋಡಿಕೊಳ್ಳೋಣ. ಹೇಗೆ ಹೇಗೆ ಹೇಗೆ ಹೇಗೆ ತಪ್ಪಬಹುದು.
ಹಾಲು ಕೆನೆ ಕಟ್ಟಿ, ಕಾವು ಹೆಚ್ಚಾದಂತೆಲ್ಲಾ ಮೇಲೆ ಮೇಲೆ ಏರುತ್ತಿದೆ. ಹಾಲು ಉಕ್ಕಿಬಂದು ಚೆಲ್ಲುತ್ತಿದ್ದರೂ
ಅವಳಿನ್ನೂ ಒಲೆ ಆರಿಸುತ್ತಿಲ್ಲ. ಇನ್ನಾರೋ ಬಂದು ಒಲೆ ಆರಿಸಿ ಅವಳನ್ನು ಇನ್ನೆಲ್ಲೋ ಕರೆದುಕೊಂಡು ಹೋದರು.
ಇನ್ನೂ ಅದಾವ ಪೂಜೆ, ಮಣ್ಣು ಮಸಿ ಶಾಸ್ತ್ರಗಳು ಇವೆಯೋ ಗೊತ್ತಿಲ್ಲ.
ಥೂ, ನಾನು ಈ ದರಿಧ್ರ ಆಲೋಚನೆಗಳನ್ನ ಮೊದಲು ನಿಲ್ಲಿಸಬೇಕು.
ಒಮ್ಮೆ ನಿದ್ರೆ ಬಂದರೆ ಸಾಕು ಬೆಳಗ್ಗೆ ಆಗುವುದೇ ಗೊತ್ತಾಗುವುದಿಲ್ಲ. ಎಲ್ಲಾ ಮರೆತು ನಿದ್ರೆ ಮಾಡಬೇಕೀಗ.
ನಿದ್ರೆ ಮಾತ್ರೆಯನ್ನಾದರೂ ತೆಗೆದುಕೊಂಡುಬಿಡಬೇಕಿತ್ತು. ಮೊದಲೇ ಯಾಕೆ ಹೊಳೆಯಲಿಲ್ಲ. ಹೋಗಿ ಕೇಳಿದರೂ
ಮೆಡಿಕಲ್ ಸ್ಟೋರ್ ನಲ್ಲಿ ಕೊಡಲಾರರೆನಿಸುತ್ತೆ. ನಿದ್ರೆ ಮಾಡಬೇಕು. ನಿದ್ರೆ, ನಿದ್ರೆ, ನಿದ್ರೆ, ನಿದ್ರೆ,…
ನಿದ್ರೆ ಎಷ್ಟು ಸಾರಿ ಹೇಳಿಕೊಂಡರೂ ನಿದ್ರೆ ಮಾತ್ರ ಬರುತ್ತಿಲ್ಲವಲ್ಲ ಅಯ್ಯೋ ಏನು ಮಾಡಿದರೆ ನಿದ್ರೆ
ಬರಬಹುದು. ನಿದ್ರೆ ಬರದಿದ್ದರೂ ಪರವಾಗಿಲ್ಲ ನೆನಪುಗಳು ಕಾಡದಿದ್ದರೆ ಸಾಕು. ನಾನ್ಯಾಕೆ ಇಷ್ಟು ಕುಲಗೆಟ್ಟವನ
ತರಹ ಯೋಚಿಸುತ್ತಿದ್ದೇನೆ. ತಡೆಯುವುದಾದರೂ ಹೇಗೆ. ಬೇಡವೆಂದರೂ ನುಗ್ಗಿಬರುತ್ತಿರುವ ಕಣ್ಣಿಗೆ ಕಟ್ಟಿದ
ಹಾಗೆ ಕಾಣಿಸುತ್ತಿರುವ ಕೆಟ್ಟ ಕೆಟ್ಟ ಅಸಹ್ಯ ಆಲೋಚನೆಗಳನ್ನು ತಡೆಯಲು ಪ್ರಯತ್ನಿಸಿದಷ್ಟೂ ತಲೆ ಧಿಮ್ಮೆನ್ನುತ್ತಿದೆ.
ಅಬ್ಭಾ! ತಲೆ ಇಷ್ಟು ಭಾರವಿರಬಹುದೆಂದು ನಾನೆಂದೂ ಊಹಿಸಿರಲಿಲ್ಲ. ಅವಳು ಹಾಲು ಹಿಡಿದು ಹೊರಟೇ ಬಿಟ್ಟಳು.
ಇನ್ನೇನು ರೂಮಿಗೆ ಬಂದೇಬಿಡುತ್ತಾಳೆನಿಸುತ್ತೆ. ತಡೆಯಬೇಕು ಅವಳನ್ನ, ಹೇಗಾದರೂ ತಡೆಯಬೇಕು. ಹಾಸಿಗೆಯಲ್ಲಿ
ಬಿದ್ದು ಹೊರಳಾಡುತ್ತಿದ್ದವನು ಧಡಾರನೆ ಎದ್ದು ಬಾಗಿಲುಗಳನ್ನು ತೆರೆದು ಹಾಗೇ ಕತ್ತಲು ತುಂಬಿದ ರಸ್ತೆಗಳಲ್ಲಿ
ಬರಿಗಾಲಿನಲ್ಲಿ ಓಡಹತ್ತಿದೆ. ಅವಳು ಅವನನ್ನು ಕೂಡುವ ಮೊದಲು ನಾನು ತಡೆಯಬೇಕು. ನಾನು ಇಲ್ಲಿಂದ ಅವರ
ಮನೆಯವರೆಗೂ ಓಡುವಷ್ಟರಲ್ಲಿ ಅವಳು ಒಪ್ಪಿಸಿಕೊಂಡರೆ, ಇಲ್ಲಾ ನಾನು ಇನ್ನೂ ಜೋರಾಗಿ ಓಡಬೇಕು. ನಾನು
ತಡೆಯಲು ಸಾಧ್ಯ. ಇನ್ನೂ ಜೋರಾಗಿ ಓಡಬೇಕು. ಓಡಬೇಕು. ಗಾಳಿಯವೇಗದಲ್ಲಿ ಓಡಬೇಕು. ಕಾಲು ಸೋಲುವವರೆಗೂ
ಓಡಬೇಕು. ಉಸಿರು ಬಿಗಿಹಿಡಿದು ಓಡಬೇಕು. ಓಡೋಡಿ ಅಂತೂ ಅವಳ ಮನೆಯನ್ನು ತಲುಪಿದೆ. ಗೇಟು, ಬಾಗಿಲು,
ಹೊರಗೆ ಮಲಗಿದ್ದ ಹಲವರನ್ನು ದಾಟಿಕೊಂಡು ನೇರವಾಗಿ ಒಳಗೆ ನುಗ್ಗಿದೆ.
ಲೋಟದಲ್ಲಿನ ಹಾಲು ಅರ್ಧ ಮಾತ್ರ ಖಾಲಿಯಾಗಿತ್ತು. ಬಹುಶಃ ಅವಳು
ಕುಡಿದಿರಲಿಕ್ಕಿಲ್ಲ. ಇಬ್ಬರೂ ಕುಳಿತಿದ್ದರು. ಕತ್ತಲೆ ತುಂಬಿದ್ದ ಕೊಠಡಿಯಾದರೂ ಸ್ಪಶ್ಟವಾಗಿ ಕಾಣುತ್ತಿತ್ತು.
ಸೆರಗು ಆಗತಾನೆ ಜಾರಿತು. ಉಸಿರಾಡಲೂ ಸಮಯವಿಲ್ಲ. ಅವನ ಕೈಗಳು, ಅಯ್ಯೋ ಚಂದು ನಾ ಬಂದೆ. ಅವನ ಪ್ರತಿಯೊಂದು
ಮುದ್ದನ್ನೂ ಸುಮ್ಮನೆ ಸ್ವೀಕರಿಸುತ್ತಿದ್ದಾಳೆ. ಹೇಗೆ ಎಚ್ಚರಿಸಲಿ ಇವಳನ್ನ. ಕತ್ತಲೆಯಲಿ ನಾನಿವರಿಗೆ
ಕಾಣುತ್ತಿಲ್ಲವೇನೋ. ಚಂದೂ ಎಂದು ಜೋರಾಗಿ ಕೂಗಿಬಿಡಲೇ. ಇಲ್ಲಾ, ಶೃಂಗಾರದಾಟದಲ್ಲಿರುವವರನ್ನು ಭಂಗಪಡಿಸುವುದು
ಮಹಾ ಪಾಪವಂತೆ. ಆದರೆ ಅವಳು ನನ್ನವಳು. ಆ ದೇಹದ ಸಮಸ್ತ ಅಂಗಗಳೂ ನನ್ನವು. ಅವನ ಕೈಗಳನ್ನು ಮೊದಲು ಕತ್ತರಿಸಿಬಿಡಬೇಕು.
ಅವನ ಮೇಲೆ ಪ್ರಪಂಚದ ಯಾವ ವಸ್ತುವಿನ ಮೇಲೂ ಹುಟ್ಟಲಾರದಷ್ಟು ಆಕ್ರೋಶ ಹುಟ್ಟುತ್ತಿದೆ. ಅವಳನ್ನು ಹಕ್ಕಿನಿಂದ
ವಿವಸ್ತ್ರಗೊಳಿಸುತ್ತಿದ್ದಾನೆ. ಅವಳು ಸುಮ್ಮನಿದ್ದಾಳೆ. ಅವನನ್ನು ಏನು ಮಾಡಿದರೂ ಉಪಯೋಗವಿಲ್ಲ. ಮೊದಲು
ಅವಳನ್ನ ದರದರನೆ ಎಳೆದುಕೊಂಡು ಅವನಿಂದ, ಹೊರಗೆ ಮಲಗಿರುವ ಸರ್ವ ಸಂಬಂಧಿಕರಿಂದ, ಈ ಊರಿನಿಂದ, ಈ ದರಿಧ್ರ
ಪ್ರಪಂಚದಿಂದ ದೂರ ಬಹುದೂರ ಕರೆದುಕೊಂಡು ಹೋಗಿಬಿಡಬೇಕು. ಆಗಲೇ ಅವಳನ್ನು ಅವನಿಂದ ಉಳಿಸಲು ಸಾಧ್ಯ.
ಅಯ್ಯೋ ಮಲಗೇ ಬಿಟ್ಟರು. ಸಾವಿರ ವಾಹನಗಳ ಶಬ್ಧಗಳಿಗಿಂತ ಕರ್ಕಶವಾಗಿದೆ ಇವರ ಉಸಿರಾಟದ, ಮಂಚದ ಶಬ್ಧ.
ನನ್ನ ಕಿವಿಗಳನ್ನು ಮೊದಲು ಕಿತ್ತಿಟ್ಟುಬಿಡಬೇಕು. ಹಾsssssssss.. ಈ ನನ್ನ ಆಲೋಚನೆಗಳು, ಇಡೀ ಪ್ರಪಂಚವನ್ನು
ಸೀಳಿ ಅವಳ ಕೋಣೆಯವರೆಗೂ ಹೊಕ್ಕು ಎಲ್ಲವನ್ನು ಕಣ್ಣಾರೆ ನೋಡುತ್ತಿರುವ ನನ್ನ ವಿಕೃತ ಆಲೋಚನೆಗಳನ್ನು
ತಡೆಯುವುದಾದರೂ ಹೇಗೆ. ನಾನ್ಯಾಕೆ ಇಷ್ಟು ಅಮಾನವೀಯನಾದೆ. ಅವಳ ಕೋಣೆ ಹೊಕ್ಕು ನೋಡುತ್ತಿರುವುದಕ್ಕೇ
ಇಷ್ಟು ಸಂಕಟ, ತೊಳಲಾಟ, ಇನ್ನು ಅವಳನ್ನು ಹೊಕ್ಕು ನೋಡಿದ್ದರೆ ಏನಾಗಬಹುದು. ಅವರ ಬೆವರ ಹನಿಗಳನ್ನು
ಕಲ್ಪಿಸಿಕೊಂಡು ಕಣ್ಣ ಹನಿಗಳು ದಿಂಬನ್ನು ಒದ್ದೆ ಮಾಡುತ್ತಲಿರುವುದನ್ನು ತಡೆಯುವುದಾದರೂ ಹೇಗೆ. ಚಿಂತಿಸಬಾರದ್ದನೆಲ್ಲಾ
ಚಿಂತಿಸಿ ಮತ್ತೆಂದಾದರೂ ಅವಳ ಭಾವನೆಗಳಿಗೆ ಸ್ಪಂಧಿಸುವುದಾದರೂ ಹೇಗೆ, ನೋಡಬಾರದ್ದನ್ನೆಲ್ಲಾ ಕಲ್ಪಿಸಿಕೊಂಡು
ಅವಳ ಕಂಗಳನ್ನು ಎದುರಿಸುವುದಾದರೂ ಹೇಗೆ. ಯಾವ ಮಗ್ಗುಲಲ್ಲಿ ತಿರುಗಿದರೆ ನಿದ್ರೆ ಬರಬಹುದು. ಏನು ಮಾಡಿದರೆ
ಈ ರಾತ್ರಿ ಸಾಯಬಹುದು.
ಇಬ್ಬರೂ ಸ್ತಬ್ಧವಾಗಿ ಮಲಗಿದ್ದಾರೆ. ಅವಳ ಕಣ್ಣುಗಳು ಇನ್ನೂ
ತೆರೆದೇ ಇವೆಯೇನೋ. ಕತ್ತಲಲ್ಲಿ ಏನು ದಿಟ್ಟಿಸುತ್ತಿರಬಹುದು. ಆಗೇ ಹೋಯ್ತೇನೋ ಎಲ್ಲಾ. ನನಗೆ ಕ್ಷಣಗಳು
ಯುಗದಂತೆ ಸಾಗುತ್ತಿವೆ, ಇವರಿಗೆ ಯುಗಗಳು ಕ್ಷಣದಂತೆ ಕಳೆದು ತಣ್ಣಗೆ ಮಲಗಿದ್ದಾರೆ. ಇಷ್ಟೇನಾ ಅಗಬಹುದಾದದ್ದು.
ಅವಳ ದೇಹದ ಉಗುರೂ ನನ್ನದೆಂದುಕೊಳ್ಳುತ್ತಿದ್ದವನಿಂದ ಸಂಪೂರ್ಣ ಕಸಿದುಕೊಂಡಾಗಿರಬೇಕು ಈಗ. ಎಲ್ಲರೂ
ಸೇರಿ ನನ್ನಿಂದ ಕಿತ್ತುಕೊಂಡರು. ಹ ಹ ಹ ಹ.. ಎಲ್ಲಾ ಮೂರ್ಖರು. ಮುಖ್ಯವಾದ ಅವಳ ಅಂಗ ನನ್ನ ಬಳಿಯೇ
ಇದೆಯಲ್ಲ. ಅವಳ ಮನಸ್ಸು. ಅರೆ! ಆದರೆ ಇಷ್ಟು ದೊಡ್ಡ ದೊಡ್ಡ ಅಂಗಗಳನ್ನೇ ಕೊಟ್ಟಾಯ್ತು ಇನ್ನು ಇಷ್ಟು
ಚಿಕ್ಕ, ಕಣ್ಣಿಗೆ ಕಾಣದಷ್ಟು ಚಿಕ್ಕ ಮನಸ್ಸನ್ನು ಕೊಡಲಾರಳೇ. ಮನಸ್ಸು ಕೊಟ್ಟವರಿಗೆ ದೇಹ ಹಂಚಿಕೊಳ್ಳಬಹುದೆಂಬುದೆಷ್ಟು
ನಿಜವೋ, ದೇಹ ಹಂಚಿಕೊಂಡವರೊಡನೆ ಮನಸು ಕೂಡ ಕ್ರಮೇಣ ಹಂಚಿಕೊಳ್ಳುವರೆನುವುದು ನಿಜ, ಇಲ್ಲವಾದಲ್ಲಿ ಆತ್ಮಹತ್ಯೆ,
ವಿಚ್ಛೇದನದ ಸಂಖ್ಯೆ ಜಾಸ್ತಿಯಾಗಬೇಕಿತ್ತಲ್ಲವೇ. ಕನಿಷ್ಟಪಕ್ಷ ನೆಮ್ಮದಿಯಾಗಿ ಮಲಗಲಿ ಅವಳು. ನಾನಿಲ್ಲೇ
ಇದ್ದರೆ ಮಲಗಲಾರಳೆನಿಸುತ್ತೆ. ಆದರೆ ಇನ್ನು ಮುಂದೆ ಎಂದಿನಂತೆ ‘ಶುಭರಾತ್ರಿ, ಸಿಹಿಕನಸು’ಗಳೆಂದು ಅವಳಿಗೆ
ಶುಭಕೋರಲೂ ಸಹ ಆಗಲಾರದೇನೋ ನನ್ನಿಂದ. ಚಂಡಮಾರುತದ ನಂತರದ ನಿಶ್ಯಬ್ಧತೆ, ನೀರವತೆಯಲ್ಲಿ ನಿಧಾನಕ್ಕೆ
ಹೊರಟೆ. ಮನೆಯ ಹೊರಗಡೆ ದೊಡ್ಡ ಸ್ಮಶಾನದಂತಹ ಮರಳುಗಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಭಾಸವಾಗುತ್ತಿತ್ತು.
ತಡೆಯುವುದಾದರೆ ಮದುವೆಯನ್ನು ತಡೆಯುವ ಧೈರ್ಯ ಮಾಡಬೇಕಿತ್ತು ನಾನು. ಯಾರ ಮುಖ ನೋಡಿ, ಯಾರ ಸಂಬಂಧಕ್ಕೆ
ಗೌರವ ಕೊಟ್ಟು ಪ್ರೀತಿ ಬಿಟ್ಟುಕೊಟ್ಟರೂ ಈಗ ಈ ನರಕಯಾತನೆಯನ್ನು ತಡೆಯಲು ಯಾರೂ ಬರುವುದಿಲ್ಲ. ಸ್ವಾರ್ಥಿಗಳಾಗದಿದ್ದಲ್ಲಿ
ಪ್ರೀತಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲವೇನೋ ಹಾಗಾದರೆ. ಯಾವಾಗಲೋ ಜೋಂಪು ಹತ್ತಿತ್ತು. ವಿಚಾರಗಳು
ಗಿರಗಿಟ್ಟಲೆ ಸುತ್ತುತ್ತಲೇ ಇದ್ದವು. ರಸ್ತೆ ತುಂಬಾ ಹರಡಿದ್ದ ಕತ್ತಲೆ ಮೈಯಿಗೂ ಅಂಟುತ್ತಲೇ ಕತ್ತಲೆಯಲ್ಲಿ
ಕರಗಿಹೋದೆ.
*
* * * *
ಅಂತೂ ಆಗೋಯ್ತು. ಏನು ಮಾಡುತ್ತಿದ್ದಾನೋ ಏನೋ. ಎಲ್ಲರ ಹಾಗೆ
ಅವನೂ ಈಗ ಕುಡಿಯಲು ಶುರುಮಾಡದಿದ್ದರೆ ಸಾಕು. ಬೆಳಗ್ಗಿನಿಂದ ಮೆಸೇಜು ಮಾಡಿಲ್ಲ. ಒಂದು ಹೊತ್ತು ಮೆಸೇಜು
ಮಾಡದಿದ್ದರೂ ಕರೆ ಮಾಡಿ ವಿಚಾರಿಸುತ್ತಲಿದ್ದ. ಈಗೇನು ಮಾಡುತ್ತಿರುವನೋ. ನಾನೇ ಮೆಸೇಜು ಮಾಡೋಣವೆಂದರೆ
ನನ್ನ ಮದುವೆಯ ವಿಷಯವನ್ನು ನೆನಪಿಸಿದ ಹಾಗಾಗುತ್ತೇನೋ ಅಂತ ಭಯ. ನನ್ನ ಮೇಲೆ ಎಷ್ಟು ಕೋಪಗೊಂಡಿರುವನೋ,
ಯಾವಾಗಲಾದರೂ ಎದುರು ಬಂದಾಗ ಅಸಹ್ಯಪಟ್ಟು ಮುಖಮುರಿದು ಹೋಗದಿದ್ದರೆ ಸಾಕೆನಿಸುತ್ತೆ. ಹೇಗೆ ಎದುರಿಸಲಿ
ಅವನನ್ನ. ಹೇಗೆ ತಡಿಯಲಿ ಈ ಕಣ್ಣೀರನ್ನ. ನನಗಿಂತ ಜಾಸ್ತಿ ಅಳುತ್ತಿರುವನೇನೋ. ಅವನೂ ಆದಷ್ಟು ಬೇಗ ಒಂದು
ಮದುವೆಯಾಗಿ ಚೆನ್ನಾಗಿದ್ದರೆ ಸಾಕು. ಛೇ ಎಲ್ಲರಂತೆ ನಾನೂ ಅವನ ಮಗಳ ಹೆಸರಲ್ಲಿ, ಅವನ ಪಾಸ್ವರ್ಡ್ ಗಳಲ್ಲಿ
ಸೇರಿ ಹೋಗುತ್ತೀನೇನೋ. ಹುಡುಗಿಯರು ಕೈ ಕೊಟ್ಟು ಹೋಗುತ್ತಾರೆ ಎಂಬ ಆಪಾದನೆಗೆ ನಾನೂ ಹೊರತಲ್ಲ. ಇಂಥಾ
ಅಸಹ್ಯ ಜೀವನ ಮಾಡುವುದಕ್ಕಿಂತ ಸಾಯುವುದು ಮೇಲಿತ್ತು. ಇದೇ ಪರಿಸ್ಥಿತಿ ಬರುತ್ತದೆಂದು ಗೊತ್ತಿದ್ದೂ
ಪ್ರೀತಿ ಮಾಡಿದ್ದು ನನ್ನದೇ ತಪ್ಪು. ನನ್ನಿಂದ ಅವನ ಜೀವನ ಹಾಳಾಗದಿದ್ದರೆ ಸಾಕು. ಒಮ್ಮೆ ಅವನ ಮುಖ
ನೋಡಿದರೆ ಸಾಕು. ದಯವಿಟ್ಟು ಕ್ಷಮಿಸು ಚಿರು ನಿನಗೆ ಮೋಸ ಮಾಡಿಬಿಟ್ಟೆ.
ಏನ್ ಮಾಡ್ತಿದ್ಯೇ ಬೇಗ ಬಾ ಇನ್ನಾ ರೂಮು ರೆಡಿ ಮಾಡಬೇಕು.
ಇಷ್ಟೊತ್ತಾ, ಬಟ್ಟೆ ಬದಲಿಸೋದು ಎಂದು ಅಮ್ಮನ ಧ್ವನಿ. ನೆಮ್ಮದಿಯಾಗಿ ಅಳುವುದಕ್ಕೂ ಬಿಡುಬುದಿಲ್ಲ.
ಥು. ಈ ದರಿಧ್ರ ಮಣಭಾರ ಸೀರೆ ಮೊದಲು ಬಿಚ್ಚಿ ಬಿಸಾಕಬೇಕು. ರೂಮು ರೆಡಿ ಮಾಡಬೇಕಾ! ಇನ್ನಷ್ಟೇ ಅನ್ನಿಸುತ್ತೆ
ಗಂಡ, ಮನೆ, ಮಕ್ಕಳು, ಕೆಲಸ, ಸಂಸಾರ ಎಷ್ಟು ಬೇಗ ಗೃಹಿಣಿಯ ಪಟ್ಟಕ್ಕೆ ಬಂದುಬಿಟ್ಟೆ. ಅಂದುಕೊಂಡಿದ್ದೇ
ಏನೋ, ಕನಸು ಕಂಡಿದ್ದೇ ಏನೋ ಆಗುತ್ತಿರುವುದೇ ಇನ್ನೇನೋ. ಸಲೀಸಾಗಿ ಈ ಬಟ್ಟೆ ಕಳಚಿದ ಹಾಗೆ ಸಂಬಂಧವನ್ನ
ಕಳಚಿಬಿಟ್ಟೆನಲ್ಲಾ. ಹೊರಗೆ ಹೋದರೆ ಇನ್ನ ಶುರುವಾಗುತ್ತೆ ನಾಟಕಗಳು. ತಲೆಯ ತುಂಬಾ ಕಳೆದುಹೋಗುತ್ತಿರುವ,
ಕಳೆದುಕೊಳ್ಳುತ್ತಿರುವ ಚಿರುವಿನ ಹಳೆಯ ನೆನಪುಗಳೇ ತುಂಬಿಕೊಂಡು ಯಾವಾಗ ಹೊರಗೆ ಬಂದು ಎಲ್ಲರ ಮಾತಿಗೆ
ತಲೆಯಾಡಿಸಿ, ಹುಸಿನಗು ಪ್ರದರ್ಶಿಸುತ್ತಿದ್ದೆನೋ, ಯಾವಾಗ ಊಟಕ್ಕೆ ಹಾಕಿದರೋ, ಏನು ತಿಂದೆನೋ, ಒಂದೂ
ಗೊತ್ತಾಗಲಿಲ್ಲ, ಒಂದು ರೀತಿಯ ಮಂಪರಿನಲ್ಲಿದ್ದವಳಿಗೆ ಎಚ್ಚರವಾದದ್ದೇ ಕೈಯಲ್ಲಿ ಒಂದು ಲೋಟ ಹಾಲು ಹಿಡಿದು
ರೂಮಿನ ಕಡೆಗೆ ಹೊರಟಾಗ. ಅರೆ! ಏನು ಮಾಡಲು ಹೊರಟಿದ್ದೇನೆ. ಹೇಗೆ ಒಪ್ಪಿಕೊಳ್ಳುವೆ. ಮದುವೆ ಯಾರನ್ನು
ಬೇಕಾದರೂ ಮಾಡಿಕೊಳ್ಳಬಹುದು ಆದರೆ ಮೈಯನ್ನು ಹಂಚಿಕೊಳ್ಳುವುದು ಅಷ್ಟು ಸುಲಭವಾಗಲಾರದು. ಹೇಗೆ ಎದುರಿಸುವುದು.
ಮೈಮೇಲೆ ಚೇಳು ಹರಿದಂತಾದರೆ, ಅಸಹ್ಯ ಹುಟ್ಟಿ ನನಗೇ ಅರಿವಲ್ಲದೇ ದೂಡಿದರೆ ಏನಾಗುತ್ತದೋ. ಬಲವಂತವಾಗಿ
ನನ್ನ ಮೇಲೆರಗಲಾರರು. ಪಾಪ ತುಂಬಾ ಒಳ್ಳೆಯ ಮನುಷ್ಯನೇ. ಆದರೆ ಹೇಗೆ ಹೇಳುವುದು ನನ್ನ ಮನಸ್ಸು ಇನ್ನೂ
ನಿಮ್ಮನ್ನು ಒಪ್ಪಿಕೊಂಡಿಲ್ಲವೆಂದು. ನಾನು ಕಟ್ಟಿಕೊಂಡವನಿಗೂ ಮೋಸ ಮಾಡುತ್ತಿರುವೆನೇನೋ. ನನ್ನಂಥವಳು
ಬದುಕಿದ್ದು ಮಾಡುವುದಾದರೂ ಏನು. ಯೋಚಿಸುತ್ತಲೇ ಮಂಚದ ಮೇಲೆ ಪಕ್ಕದಲ್ಲಿ ಕುಳಿತಿದ್ದೆ.
ಅವರು ಬಾಗಿಲ ಚಿಲಕ ಹಾಕಿ, ದೀಪ ಆರಿಸಿ ಬರುತ್ತಿದ್ದಂತೆಯೇ
ಮೈ ನಡುಕ ಹುಟ್ಟಲು ಶುರುವಾಯ್ತು. ಬಗ್ಗಿಸಿದ್ದ ತಲೆಯೆತ್ತಲು ಆಗಲೇ ಇಲ್ಲ. ಶುರುಮಾಡೋಣವೇ ಎಂಬ ಪ್ರಶ್ನೆಗೆ
ಏನೆಂದು ಉತ್ತರಿಸಲಿ. ಇಲ್ಲಾ ನನಗೆ ಬೇಡವೆಂದು ಹೇಳುವ ಧೈರ್ಯ ನನ್ನಲ್ಲಿದೆಯಾ. ತಲೆಯಲ್ಲಿ ಬೇಡವೆನ್ನಲು
ಕಾರಣಗಳು ಹುಡುಕುವ ವ್ಯರ್ಥ ಪ್ರಯತ್ನವಷ್ಟೇ ಮೌನವೇ ನನ್ನ ಉತ್ತರವಾಗಿತ್ತು. ಮೌನ ಸಮ್ಮತಿ ಲಕ್ಷಣವಾಗಿರಲಾರದು
ಕೆಲವು ಸಲ. ಆಗಿ ಹೋಯ್ತು. ನಾನೂ ಕೂಡ ಎಲ್ಲಕ್ಕೂ ಪ್ರತಿಸ್ಪಂಧಿಸಿದೆನಷ್ಟೇ. ಈಗ ಯೋಚಿಸಿದರೆ ನನ್ನ
ಮೇಲೇ ಅಸಹ್ಯ ಹುಟ್ಟುತ್ತದೆ. ಎಷ್ಟು ಸಲೀಸಾಗಿ ಬದಲಾಗ್ತೀವೇನೋ ನಾವು. ನನಗೆ ಇವರಲ್ಲಿ ಚಿರು ಕಂಡನೇನೋ
ಎಂಬ ಅನುಮಾನ ಹುಟ್ಟಿದಾಗಲಂತೂ ಕತ್ತು ಹಿಚುಕಿಕೊಂಡು ಸಾಯಬೇಕೆನಿಸುತ್ತದೆ. ಇಲ್ಲಾ ಇನ್ನು ನಾನು ಚಿರುಗೆ
ಮುಖ ತೋರಿಸಲು ಸಾಧ್ಯವಿಲ್ಲ. ಕನ್ನಡಿಯನ್ನೂ ಸಹ ಹೇಗೆ ಎದುರಿಸಲಿ. ನನ್ನ ಮುಖ, ಈ ಮೈ ಸಂಪೂರ್ಣ ಬದಲಾದಂತೆನಿಸುವುದೇನೋ.
ಅವನ ಕೈ ಹಿಡಿದು ನಡೆಯಲು ಸಹ ಆಗುವುದಿಲ್ಲ. ನನ್ನ ಮೈ ಅಪವಿತ್ರವಾಗಿ ಹೋಯ್ತೇನೋ. ಛೇ ಈ ಕತ್ತಲೆ ಕೋಣೆ,
ಈ ಮಂಚ, ಈ ಪಕ್ಕದಲ್ಲಿ ಮಲಗಿರುವ ಗಂಡನೆಂಬ ಜೀವ ಎಲ್ಲವನ್ನೂ ಬಿಟ್ಟು ಹೀಗೇ ನಗ್ನವಾಗಿ ಕತ್ತಲೆಯಲ್ಲಿ
ಮರೆಯಾಗಿ ಹೋಗಿಬಿಡಬೇಕು.
*
* * *
ಕತ್ತಲೆ ಪ್ರಪಂಚ. ಎಲ್ಲೋ ದೂರದಲ್ಲಿ ಒಂದು ಚಿಕ್ಕ ಬೆಳಕು.
ಹೋಗುವುದೋ ಬೇಡವೋ ಎಂಬಂತೆ ಚಿರು ನಿಧಾನವಾಗಿ ಬೆಳಕಿನೆಡೆಗೆ ಬರಲು ಬೆಳಕಿನಡಿಯಲ್ಲಿ ನಗುತ್ತಾ ನಿಂತಿರುವ
ಚಂದು. ಕಣ್ಣೀರಿನಿಂದ ತೊಯ್ದಿರುವ ಕೆನ್ನೆಯನ್ನು ಕಂಡವಳೇ ಒರೆಸಿ ಏನೋ ಇದು ನಿನ್ನ ಅವಸ್ಥೆ ಎಂದು ಸುಧಾರಿಸುವಳು.
ನೀನೇನೇ ಇಲ್ಲಿ ಎಂದರೆ ಅಯ್ಯೋ ನನ್ನದೊಂದು ದೊಡ್ಡ ಕಥೆ ಬಿಡು ನನ್ನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು
ಪ್ರಯತ್ನಿಸಲೂ ಬೇಡ. ನೋಡು ನಾನಿಲ್ಲಿ ಇದ್ದೀನಿ, ನಿನಗಾಗಿ. ಸುಖವಾಗಿದ್ದೀನಿ ಕೂಡ. ಒಳ್ಳೆಯ ಗಂಡ ಕೂಡ.
ಹೇಯ್ ನಮಗ್ಯಾಕೋ ಬೇರೆಯವರ ವಿಷಯ. ನಮ್ಮಿಬ್ಬರ ನಡುವೆ ಬರಲು ಯಾರಿಗೂ ಅನುಮತಿ ಇಲ್ಲಾ ತಾನೆ. ಮುಂಚಿನಿಂದಲೂ
ಇಡೀ ಪ್ರಪಂಚದಲ್ಲಿ ಯಾರ ಬಗ್ಗೆಯೂ ತಲೆ ಕೆಡಿಸಿಕೊಂಡವರಲ್ಲ. ನಾವು, ನಾವು, ನಾವಷ್ಟೇ. ಹಾಗೇ ಇರೋಣ.
ನಾವು ದೂರ ಇದ್ರೂ, ಮೊಬೈಲು, ಮೆಸೇಜು, ಫೋನ್ ಕಾಲ್ ಗಳು, ಭೇಟಿ, ಮಾತು ಕತೆ ಯಾವುದೇ ಇಲ್ಲದಿದ್ದರೂ
ನಾವು ಜೊತೆಯಲ್ಲೇ ಇರುವುದನ್ನ ಕಲಿತಿಲ್ವಾ ಎಂದು ಚಂದು ಕೇಳುವಳು. ಚಿರು ನಕ್ಕು ಅಯ್ಯೋ ಈ ಮಾತುಗಳನ್ನ
ಕೇಳಿ ಎಷ್ಟು ದಿನಗಳಾಗಿತ್ತು ನೋಡು, ನೀನು ಹೀಗಿದ್ರೇನೇ ಚೆನ್ನ ಕಣೇ. ಈ ನಡುವೆ ಬರೀ ಅಳುವುದನ್ನೇ
ನೋಡಿ ನೋಡಿ ಸಾಕಾಗಿತ್ತು. ಇವಾಗ ಸರಿ ಇದ್ದೀಯ ನೋಡು ಎಂದು ಜೀವತುಂಬಿಕೊಳ್ಳುವನು. ಸರಿ ಈಗ ಎನು ಮಾಡೋಣ,
ಎಲ್ಲಿಗೆ ಹೋಗೋಣ ಎಂದು ಚಂದು. ಏನ್ ಮಾಡೋದೇ ಈ ಕತ್ತಲಲ್ಲಿ ಎಲ್ಲಿಗೂ ಹೋಗೋಕು ಆಗೋಲ್ಲ ಎಂದು ಕೈ ಹಿಡಿದು
ನಿಲ್ಲುವನು. ಕತ್ತಲೆಲ್ಲೋ ನಾವು ಒಟ್ಟಿಗೆ ಇರುವಾಗ ಬರೀ ಬೆಳಕೇನೇ ಅಲ್ಲಿ ನೋಡು ಸೂರ್ಯ ಹುಟ್ಟುತ್ತಿಲ್ವಾ.
ಬಾ ಮಾಮೂಲಿನಂತೆ ಕೈ ಕೈ ಹಿಡಿದು ಸುಮ್ಮನೆ ದಿಕ್ಕಿಲ್ಲದೇ ನಡೆಯುತ್ತಿರೋಣ ಅಷ್ಟೇ ಎಂದು ಕಣ್ಣು ಮಿಟಿಕಿಸುವಳು.
ಆಯ್ತು ನೆಡಿಯಪ್ಪಾ ಎಂದು ಇಬ್ಬರೂ ಸುಮ್ಮನೆ ನಡೆದು ಒಬ್ಬರಿಗೊಬ್ಬರು ತರಲೆ ಮಾಡುತ್ತಾ ಹುಟ್ತುತ್ತಿರುವ
ಸೂರ್ಯನೆಡೆಗೆ ಹೆಜ್ಜೆಹಾಕುವರು.
- ನೀ. ಮ. ಹೇಮಂತ್
ದೀರ್ಘವಾದರೂ ಚೆನ್ನಾಗಿದೆ
ReplyDeleteಹ ಹ ಹ.. ಅಂದುಕೊಂಡದ್ದಕ್ಕಿಂತ ಚಿಕ್ಕದಾಯ್ತೆಂದು ನಾನೆಂದುಕೊಂಡೆ :-) ಥ್ಯಾಂಕ್ಯೂ..
Deleteವಿಭಿನ್ನ ನಿರೂಪಣೆ ಎಂದರೆ ಅದು ಹೇಮಂತ್ ಕಥೆ. ಕಥೆ ಓದುತ್ತ ಒಳಗೆ ಹೊಕ್ಕರೆ ಅದು ಖೆಡ್ಡಾ! ಕರಗಿ ಹೋದೆ ನಾನೂ ಕೂಡ ಕತ್ತಲೆ ಪ್ರಪಂಚದೊಳಗೆ ಹೇಮಂತ್.
ReplyDeleteಧನ್ಯವಾದಗಳು ಗುರುಗಳೇ. ನಿಮ್ಮ ಸಾಹಿತ್ಯಾಸಕ್ತಿ, ಪ್ರೋತ್ಸಾಹ ದೊಡ್ಡದು.. :-)
Deleteನಿಜ, ಅದೆಷ್ಟೋ ಹತಾಶ ಹೃದಯಗಳ ಚಿತ್ರಣ. ಓದುತ್ತಾ ಮನಸು ನೊಂದುಕೊಂಡಿತು. ನಾನೂ ಇಣುಕಿ ನೋಡಿದ್ದ ಮೊದಲ ರಾತ್ರಿಯದು. ಚಂದು ತಿರುಗಿ ಬರಲಿಲ್ಲವಷ್ಟೆ!
ReplyDeleteಗೆಳೆಯ ಚಂದು ಹೋಗಿದ್ದರೆ ತಾನೆ ಬರುವುದಕ್ಕೆ, ಸದಾ ಕತ್ತಲೆಯ ಪ್ರಪಂಚದ ನಿಮ್ಮ ಆಲೋಚನೆಗಳಲ್ಲಿ ಇರುವಳೆಂಬುದೇ ಸತ್ಯ, ಕಥೆ ಓದುತ್ತಲೇ ನೆನೆದದ್ದೇ ಸಾಕ್ಷ್ಯ :-)
Deletenice story... bavanegalanu channage vaktha padisidera....:) keep going..
ReplyDeleteಧನ್ಯವಾದಗಳು ಗೆಳೆಯರೇ.. ಜೊತೆಯಲ್ಲಿರಿ.. ಓದುತ್ತಲಿರಿ... :-)
Deleteಎಲ್ಲರ ಜೀವನದಲ್ಲಿ ಅಂತ ಸೂರ್ಯ ಬರುವುದಿಲ್ಲ, ಬರಿ ಆಲೋಚನೆ, ಕಥೆ ಯಲ್ಲಿ, ಮಾತ್ರ ಅಂತ happy ending...!!!! :( ಜೀವನ ಕಥೆ, ಸಿನಿಮಾ ದಷ್ಟು ಸಣ್ಣದಾಗಿದ್ದರೆ ಚೆನ್ನಾಗಿತ್ತು...!!!
ReplyDeleteಕಥೆಯಲ್ಲಿನ ಮೂರನೆ ಘಟ್ಟ ಕೇವಲ ಕನಸಷ್ಟೇ... ಕಳೆದುಕೊಂಡದ್ದು ಹೋಗಾಯ್ತು. ಜೀವನದ ಹಾದಿ ಕತ್ತಲೋ, ಬೆಳಕೋ ಸಾಗಬೇಕಷ್ಟೇ.. ಚಿಕ್ಕದಾಗಿ ಮುಗಿದು ಹೋದರೆ ಮಜವಿರುವುದಿಲ್ಲ. ಕಳೆದುಕೊಂಡದ್ದರ ಜೊತೆಗೆ ಬದುವುಕುವುದೇ ಜೀವನ... :-) ಶುಭವಾಗಲಿ...
Deleteನನ್ನಂತ ಭಗ್ನ ಪ್ರೇಮಿಗಳು ಈ ಕಥೆನ ಓದಿದ್ರೆ ಅಳು ಬರುತ್ತೆ
ReplyDelete