ಓದಿ ಓಡಿದವರು!

Friday 25 May 2012

ಬೆಂಗಾಡಿನಲ್ಲಿ ಪ್ರೈಸ್ಥಿತಿ!


ನಾನು ಭಾಗಿಯಾಗದ ಕ್ರಾಂತಿಯ ಫಲ
ಹಣ್ಣಲ್ಲವದು ಕೇವಲ ಮಲ
                          - ಅಂತ

          ಸುಮ್ಮನೆ ಸುತ್ತಾಡಲು ಹೊರಗಡೆ ಹೋಗಿಬರುತ್ತೇನೆಂದು ಹೊರಟೆ. ಅಮ್ಮ ಓಡಿಬಂದದ್ದನ್ನು ಕಂಡು ಇವತ್ತೂ ಬಯ್ಯುವರೆಂದುಕೊಂಡೆ. ಕಿವಿಯ ಕಿಟಕಿಗಳನ್ನು ಮುಚ್ಚುವ ಪ್ರಯತ್ನದಲ್ಲಿದ್ದವನಿಗೆ ಅಮ್ಮನ ಮಾತುಗಳು ಆಘಾತವನ್ನೇ ಉಂಟು ಮಾಡಿದವು. ನಡೆದುಕೊಂಡು ಹೋಗುತ್ತೀಯೇನೋ ಇರು ನಿಮ್ಮಪ್ಪನ ಗಾಡಿಯಲ್ಲಿ ಹೋಗು ಎಂದರು! ಆಹಾ! ಏನಪ್ಪಾ ಇದು ಮಾಯೆ ಎಂದು ತೆರೆದಿದ್ದ ಬಾಯಿ ಮುಚ್ಚುವಷ್ಟರಲ್ಲೇ ಸ್ವಯಂ ಅಪ್ಪನೇ ಬಂದು ಗಾಡಿ ಕೀ ಕೊಟ್ಟು ಪೆಟ್ರೋಲು ಬೇಕಾದರೆ ಹಾಕಿಸಿಕೋ ಎಂದು ದುಡ್ಡು ಕೊಟ್ಟು ಹೋದರು. ಏನೂ ಅರ್ಥವಾಗಲಿಲ್ಲ. ಅಪರೂಪಕ್ಕೆ ಏನಾದರೂ ತುರ್ತುಕಾರ್ಯಕ್ಕೆ ಗಾಡಿ ಮುಟ್ಟಿದಾಗಲೂ ಅಷ್ಟೋತ್ತರಗಳನ್ನು ಕೇಳಬೇಕಾಗಿತ್ತು. ಗಾಡಿ ಹತ್ತಿ ರಸ್ತೆಗಿಳಿದದ್ದೇ ಇನ್ನೂ ವಿಚಿತ್ರವನ್ನು ಕಂಡೆ, ರಸ್ತೆ ಖಾಲಿ! ಪಾದಚಾರಿ ಮಾರ್ಗ ಮಾತ್ರ ಭರ್ತಿ! ಎಲ್ಲರೂ ನನ್ನನ್ನೇ ಯಾರೋ ಕೆಂಪು ಕಾರ್ಪೆಟ್ಟಿನ ಮೇಲೆ ಬರುತ್ತಿರುವವನನ್ನು ನೋಡುವ ಹಾಗೆ ನೋಡುತ್ತಿದ್ದರು. ನೋಡುತ್ತಿದ್ದವರು ಅಲ್ಲಲ್ಲೇ ನಿಂತು ಚಪ್ಪಾಳೆ ತಟ್ಟಿ ಜಯಕಾರ ಕೂಗಲೂ ಸಹ ಶುರುಮಾಡಿಬಿಡುವುದೇ! ಏನಪ್ಪಾ ಇದು ಎಲ್ಲಿದ್ದೀನಿ ನಾನು ಎಂದು ಸುತ್ತಾ ನೋಡಿದೆ, ನಮ್ಮ ಬೀದಿಯೇ. ಕಮಾನ್ ರಮೇಶ ಕಮಾನ್ ಎಂದು ಸ್ನೇಹಿತನೊಬ್ಬ ರಸ್ತೆ ಪಕ್ಕದ ಜನರ ಗುಂಪಿನಲ್ಲಿ ನಿಂತು ನಾನೇನೋ ಯುದ್ಧಕ್ಕೆ ಹೊರಟಿರುವವನೆಂಬಂತೆ ಕಿರುಚುತ್ತಿದ್ದ. ನಾನೂ ಹೋದೆ ಹೋದೆ ಹೋದೆ ಪೆಟ್ರೋಲ್ ಬಂಕೊಂದು ಸಿಕ್ಕಿತು. ಸ್ಮಶಾನದಂತೆ ಸುಮ್ಮನೆ ಮಲಗಿತ್ತು. ಗಾಡಿಯಲ್ಲಿ ಬಂಕ್ ಪ್ರವೇಶಿಸಿದ್ದೇ ಎಲ್ಲಿ ಮೂಲೆ ಮೂಲೆಯಲ್ಲಿ ಅಡಗಿದ್ದರೋ ಕೆಲಸಗಾರರು ಓಡಿ ಬಂದಿದ್ದೇ, ಹೂವಿನ ಹಾರ ಹಾಕಿ ಬಣ್ಣ ಬಣ್ಣದ ಪೇಪರ್ ಗಳನ್ನು ಸುರಿದು ಗಾಡಿಯನ್ನು ಅವರೇ ತೆಗೆದುಕೊಂಡು ಒಳಗೆ ಬಂದು ಬನ್ನಿ ಪೆಟ್ರೋಲ್ ಹಾಕಿ ಗಾಡಿ ಒರೆಸಿಕಳುಹಿಸುತ್ತೇವೆ ಅಲ್ಲಿವರೆಗೂ ಹಾಡು ಕುಣಿತ ಏರ್ಪಡಿಸಲಾಗಿದೆ ಮಜಾ ಮಾಡಿ ಎಂದು ಒಳಗೆ ಎಳೆದುಕೊಂಡು ಹೋದವರೇ ಕುಣಿಯುತ್ತಿದ್ದ ಹುಡುಗ ಹುಡುಗಿಯರೊಡನೆ ಬಿಟ್ಟು ಹೋದರು. ಥು ನಾನು ಹೊರಟಿದ್ಯಾಕೆ ಇಲ್ಲಿ ಯಾಕೆ ಬಂದೆನೆಂದು ನಾನೇ ಆಫೀಸು ರೂಮಿನಿಂದ ಹೊರಗೆ ಬಂದೆ, ಅಪ್ಪನ ಬಜಾಜ್ ಗಾಡಿ ಫಳಫಳನೆ ಹೊಳೆಯುತ್ತಿತ್ತು. ಹೊರಗೆ ಕೈಕುಲುಕುತ್ತಲೇ ಕರೆದುಕೊಂಡು ಬಂದವರು ಗಾಡಿ, ಮತ್ತು ಕೀ ಜೊತೆಗೆ ಉಡುಗೊರೆಯನ್ನೂ ಕೊಟ್ಟು ಶುಭಾಷಯ ಹೇಳಿ ಬಂಕಿನ ಬಾಗಿಲವರೆಗೂ ಬಿಟ್ಟು ಟಾಟಾ ಮಾಡುತ್ತಾ ನಿಂತರು. ಅಷ್ಟು ದೂರ ಹೋಗುವಷ್ಟರಲ್ಲಿ ಒಬ್ಬ ಹುಡುಗ ಕೂಗುತ್ತಾ ಹಿಂದೆಯೇ ಓಡಿಬರುತ್ತಿರುವುದನ್ನು ಕಂಡು ಗಾಡಿ ನಿಲ್ಲಿಸಿದೆ. ಸಾರ್ ನೀವು ಅಲ್ಟೋ ಕಾರೊಂದನ್ನ ಗೆದ್ದೀದ್ದೀರಿ. ತೊಗೊಳ್ಳಿ ಕೀ ಎಂದು ದೊಡ್ಡ ಕೀಯೊಂದನ್ನು ಮುಂದೆ ಎತ್ತಿ ಹಿಡಿದ!

* * * * * *

ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ವಾರಸುದಾರರಿಲ್ಲದೇ ನಿಂತಿರುವುದನ್ನು ನೋಡುತ್ತಾ, ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕುತ್ತಲಿದ್ದ ಗೀತಾ ರಸ್ತೆ ತುಂಬಾ ಕತ್ತೆ, ಕುದುರೆ, ಒಂಟೆ, ಎತ್ತಿನಗಾಡಿಗಳನ್ನೇ ನೋಡುತ್ತಾ ಬೇಗ ಬೇಗ ಬಸ್ ನಿಲ್ದಾಣಕ್ಕೆ ಹೋದಳು. ಜನ ಮಾಮೂಲಿನಂತೆ ಬಸ್ ಬರುವ ದಾರಿ ಪದೇ ಪದೇ ನೋಡುತ್ತಾ ನಿಂತಿಹರು. ಎತ್ತಿನಗಾಡಿಯೊಂದು ಬಂದದ್ದೇ ಜನ ನೂಕುನುಗ್ಗಲಿನಲ್ಲಿ ಹತ್ತಿಕೊಂಡು ಇನ್ನುಳಿದವರು ಕಾಯುವರು. ದೂರದಲ್ಲಿ ಬರುತ್ತಿದ್ದ ಒಂದು ಒಂಟೆಯನ್ನು ನೋಡುತ್ತಾ ನಿಂತಿದ್ದ ಗೀತಾಳಿಗೆ ಒಂಟೆಯ ಮೇಲೆ ತನ್ನ ಸಹಪಾಠಿ ಬಂದು ಬಾ ಜೊತೆಯಲ್ಲಿ ಹಿಂದಿನ ಸೀಟು ಖಾಲಿಯಿದೆ ಎಂದು ಹೇಳಿದ್ದು ಇವಳು ಹತ್ತಿದ್ದು ತಡವಾಗಲಿಲ್ಲ. ಒಂಟೆ ನಿಧಾನಗತಿಯಲ್ಲಿ ಚಲಿಸುತ್ತಿದ್ದುದು ಒಂದೆರಡೇಟು ಬೀಳುತ್ತಲೇ ಓಡಲು ಶುರುಮಾಡಿತು. ಇದೊಳ್ಳೇ ಏರೋಬಿಕ್ಸ್ ವ್ಯಾಯಾಮವಿದ್ದ ಹಾಗಿದೆಯಲ್ವಾ ಎಂದು ನಗಲು ಶುರುಮಾಡಿದಳು. ಮೇಲೆ ಕೂತು ಇಡೀ ರಸ್ತೆ ಚೆನ್ನಾಗಿ ಕಾಣುತ್ತಲಿತ್ತು. ಆ ಎತ್ತಿನ ಗಾಡಿಯಲ್ಲಿ ಹಿಡಿಸೋದೇ ನಾಲ್ಕು ಜನ ಅದರಲ್ಲಿ ಆರು ಜನ ಅದು ಹೇಗೆ ಮುದುಡಿಕೊಂಡು ಕೂರ್ತಾರೋ ಗೊತ್ತಿಲ್ಲಮ್ಮ ನೀನು ಕಾಯ್ತಾ ಇದ್ದಿದ್ರೆ ನಟರಾಜಾ ಸರ್ವೀಸೇ ಕೊನೆಗೆ ಗತಿಯಾಗುತ್ತಿತ್ತು ಎಂದು ತನ್ನ ಸಹಪಾಠಿ ಹೇಳುತ್ತಿದ್ದ ಹಾಗೆಯೇ ಒಂಟೆ ಓಡುವುದನ್ನ ನಿಲ್ಲಿಸಿತು. ಏನಾಯ್ತೋ ಎಂದು ಇಬ್ಬರೂ ನೋಡ ನೋಡುವಷ್ಟರಲ್ಲೇ ಒಂಟೆ ಒಂದು ಮರದ ಎಲೆಗಳನ್ನು ತಿನ್ನಲು ಶುರುಮಾಡಿತು. ಹೋ ಇಂಧನ ಬೇಕಲ್ಲಾ ಪಾಪ ಇದಕ್ಕೂ ತಿಂದುಬಿಡಲೀ ತಾಳು ಎಂದು ಸುಮ್ಮನೆ ಮಾತನಾಡುತ್ತಾ ಕೂತರು. ಎಲ್ಲಾ ಶ್ರೀಮಂತರೂ ಒಳ್ಳೇ ಒಳ್ಳೇ ಕುದುರೆಗಳನ್ನ ತರಿಸಿದ್ದಾರಂತೆ ಕಣೇ ಎಂದು ಅವನು ಹೇಳಿದರೆ, ಲೋ ಕತ್ತೆ ಮೇಲೆ ಇಬ್ಬರು ಮೂರು ಮಕ್ಕಳು ಸ್ಕೂಲಿಗೆ ಹೋಗುತ್ತಿರುವುದನ್ನು ನೋಡಿದೆ ಇವತ್ತು ಗೊತ್ತಾ ಎಂದು ಅವಳು ಹೇಳುವಳು. ಟಾಂಗಾ ಒಂದು ಮನೆಯ ಬಾಗಿಲಿಗೇ ಬಂದಿತ್ತು ಮನೆಯಿಂದ ಆಫೀಸಿಗೆ ಒಬ್ಬರಿಗೆ ಹದಿನೈದು ರೂಪಾಯಿ ಹೇಳಿದ. ಸರಿ ಎತ್ತಿನಗಾಡಿ ಸಿಗುತ್ತಲ್ಲಾ ಅಂತ ಬಂದೆ ನೋಡಿದರೆ ಇವತ್ತು ಇಷ್ಟು ಜನ ಎಂದು ಹೇಳುತ್ತಿದ್ದ ಹಾಗೇ ಒಂಟೆ ತಿಂದು ಮುಗಿಸಿ ಹಾಗೇ ನೆಲಕ್ಕೆ ಕುಸಿಯಹತ್ತಿತು. ಮೇಲೆ ಕೂತಿದ್ದವರಿಬ್ಬರೂ ನೆಲಕ್ಕೆ ಉರುಳುವರೆಂದು ಭಯಕ್ಕೆ ಒಂಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಒಂಟೆ ಅಡ್ಡಡ್ಡ ಉರುಳುತ್ತಲಿತ್ತು!

* * * * * * *

ಚಿಟಾರನೆ ಕಿರುಚಿಕೊಂಡು ಗೀತಾ ಹಾಸಿಗೆಯಿಂದೆದ್ದಳು. ಕಣ್ಬಿಟ್ಟರೆ ಪಕ್ಕದಲ್ಲಿ ತನ್ನ ಗಂಡ ನಗುತ್ತ ಕುಳಿತಿದ್ದಾನೆ. ಬಿತ್ತಾ.. ಬಿತ್ತಾ ನಿನಗೂ ಕನಸು ಹ ಹ ಹ ಹ ಹ.. ನಾನೂ ಆಗಲೇ ಎದ್ದೆ. ನನ್ನ ಅಲ್ಟೋ ಅಯ್ಯೋ… ಎಂದು ಹಾಗೇ ಹಾಸಿಗೆಗೆ ಬಿದ್ದ. ಇನ್ನೂ ಬಿದ್ಕೊಂಡೇ ಇರಿ ಆಫೀಸಿಗೆ ತಡವಾದರೆ ನನ್ನ ಕೇಳಬೇಡಿ ಹೇಳಿದ್ದೀನಿ ಇವಾಗಲೇ ಎಂದು ಹೇಳುತ್ತಾ ಹೊರನಡೆಯುವಳು. ರಮೇಶನೂ ಸೋಂಬೇರಿಯಂತೆ ಎದ್ದು ಇನ್ನೂ ಪೇಪರು ಬಂದಿರದನ್ನು ಕಂಡು ಮೊದಲು ಟಿವಿ ಹಾಕಿ ವಾರ್ತೆಗಳು ಹಾಕುವನು. ಹಲ್ಲುಜ್ಜುತ್ತಿದ್ದ ಗೀತಳೂ ಬಾಯಲ್ಲಿ ಬ್ರಶ್ ಹಿಡಿದುಕೊಂಡೇ ಟಿವಿ ಮುಂದೆ ಬಂದು ನಿಲ್ಲುವಳು. ಇದೀಗ ಬಂದ ವಾರ್ತೆ, ಇಂದು ಪೆಟ್ರೋಲ್ ಬೆಲೆ ಏಕಾಏಕಿ ಹತ್ತು ರೂಪಾಯಿ ಏರಿಸಲಾಗಿದೆ. ಇನ್ನು ನಾಳೆಯ ಬೆಲೆ ನಾಳೆ ಹೇಳಲಾಗುವುದು ಎಂದು ಇತರ ವಾರ್ತೆಗಳನ್ನು ಮುಂದುವೆರೆಸುವರು. ರಮೇಶ ಬಾಯಿಕಳೆದು ನಿಂತಿದ್ದವನು ಎಚ್ಚೆತ್ತುಕೊಂಡು “ಅಲ್ಲಾ ನಿನ್ನೆಯ ಒಂದು ರೂಪಾಯಿ ಹೆಚ್ಚಳಕ್ಕೇ ಹಿಂಗೇ ಚಿತ್ರವಿಚಿತ್ರವಾಗಿ ಕನಸು ಬಿತ್ತು. ಇನ್ನು ಇವತ್ತು ಏನು ಕಾದಿದೆಯೋ” ಎಂದು  ಗೀತಾಳ ಕಡೆ ನೋಡಿದರೆ ಅವಳೂ ಹಲ್ಲುಜ್ಜುವುದನ್ನೂ ಮರೆತು ನಿಂತಿದ್ದವಳು ತಲೆ ಅಲ್ಲಾಡಿಸುತ್ತಾ ಬಚ್ಚಲು ಸೇರುವಳು. ಸಾಂಕೇತಿಕವಾಗಿಯೆಂಬಂತೆ ರೂಮಿನಲ್ಲಿದ್ದ ರಮೇಶನ ಮೊಬೈಲು ಕೂಡ ಬಾಯಿಬಡಿದುಕೊಳ್ಳಲು ಶುರುಮಾಡುತ್ತದೆ. ಕರೆ ಸ್ವೀಕರಿಸಿದ್ದೇ ತಡ ಅತ್ತಲಿಂದ ಮಂಜ ಲೋ ಮಗಾ ಎಂಥಾ ಕನಸು ಅಂತೀಯಾ ಹ ಹ ಹ ಎಂದು ನಗಲು ಶುರುಮಾಡಿದ್ದಕ್ಕೆ ರಮೇಶನ ಪಿತ್ತ ನೆತ್ತಿಗೇರಿ ಲೋ ಹೊಟ್ಟೆ ಉರೀತಿದೆ ನೀನು ಬೇರೆ ತಲೆ ತಿನ್ನಕ್ಕೇ, ಏನ್ ಸಮಾಚಾರ ಹೇಳು ಎಂದರೆ, ನನಗೆ ಒಂದು ಕನಸು ಬಿತ್ತೋ ಮಗ ಹೇಳ್ತೀನಿ ಕೇಳು ಎಂದು ಆಮೇಲೆ ಹೇಳುವಂತೆ ಬಿಡೋ ಮಾರಾಯ ಎಂದು ಏನು ಹೇಳಿದರೂ ಕೇಳದೇ ಪೀಡಿಸೀ ಫೋನಿನಲ್ಲೇ ಕಥೆ ಶುರುಮಾಡುವನು. ಹಸಿವಾಗುತ್ತಿದೆ ಎಂದು ಅಡುಗೆ ಮನೆಗೆ ಹೋದರೆ ಪೆಟ್ರೋಲ್ ಗಂಜಿ, ತಂಗಳು ಪೆಟ್ಟಿಗೆಯಲ್ಲಿದ್ದ ನೀರಿನ ಬಾಟಲ್ ತೆಗೆದರೆ ಅದರಲ್ಲೂ ಪೆಟ್ರೋಲ್, ಪೆಟ್ರೋಲ್ ಸ್ನಾನ, ಪೆಟ್ರೋಲ್ ಸ್ವಿಮ್ಮಿಂಗ್ ಪೂಲ್ ಎಲ್ಲೆಲ್ಲೂ ಪೆಟ್ರೋಲೇ ಬೇಕಾಬಿಟ್ಟಿ ಸಿಗುತ್ತಿತ್ತು ಎಂದು ಹೇಳಿದ್ದಕ್ಕೆ ನಗಬೇಕೋ, ಮುನಿಸಿಕೊಳ್ಳಬೇಕೋ ಅರ್ಥವಾಗದೇ ಮುಗೀತೇನಪ್ಪಾ ನಿನ್ನ ಅಸಂಬದ್ಧ ಪ್ರಲಾಪ ಎಂದು ಫೋನಿಡುವನು. ಬರುವ ಅರ್ಧ ಸಂಬಳ ಬರೀ ಓಡಾಟದ ಖರ್ಚಿಗೇ ಆದರೆ ಯಾವ ಖುಷಿಗೆ ದುಡಿಯಬೇಕು. ಸಂಬಳವಂತೂ ಜಾಸ್ತಿಯಾಗಲ್ಲ, ಖರ್ಚುಗಳು ಮಾತ್ರ ಜಾಸ್ತಿ ಆಗ್ತಾನೇ ಹೋಗ್ತಾವೆ ಎಂದು ಗೊಣಗುತ್ತಾ ತಾನೂ ಹೋಗಿ ನಿತ್ಯಕರ್ಮಗಳನ್ನು ಮುಗಿಸಿಬರುವಷ್ಟರಲ್ಲಿ ಗೀತಾ ತಿಂಡಿ ರೆಡಿ ಮಾಡಿ ತಾನೂ ಸ್ನಾನಾದಿ ಮುಗಿಸಿ ಬರುವಳು. ತಿಂಡಿ ತಿನ್ನುವ ಸಮಯಕ್ಕೆ ಸರಿಯಾಗಿ ಬಾಗಿಲು ಬಡಿಯುವ ಸದ್ದಾಗುತ್ತದೆ. ಇವತ್ತಾದರೂ ಆಫೀಸಿಗೆ ಬೇಗ ಹೋಗೋಣವೆಂದರೆ ಇದ್ಯಾರಪ್ಪಾ ಕಂಟಕರು ಎಂದು ಗೀತಾ ಹೋಗಿ ಬಾಗಿಲು ತೆರೆದರೆ ಅಕ್ಕ ಪಕ್ಕದ ಮನೆಯ ನಿಯತಕಾಲಿಕದ ಗಿರಾಕಿ ಮತ್ತು ಬಾಯಿಚಪಲದ ಗಿರಾಕಿ. ಇಬ್ಬರೂ ಬರಬಾರದ ಹೊತ್ತಿನಲ್ಲಿ ಬಂದಿದ್ದಾರೆಂದರೆ ಮುಗಿಯಿತು ಕತೆ.

ಇದಾರಾಮ್ಮ ರಮೇಶ ಅವರು ಎಂದು ಆಮಂತ್ರಣವಿಲ್ಲದೇ ತಮ್ಮ ನಿಯತಕಾಲಿಕವನ್ನು ಅವರು ಹಿಡಿದು ಒಳಗೆ ಬಂದು ಕೂತವರೇ ತಿಂಡಿ ತಿನ್ನಲು ಅಣಿಯಾಗುತ್ತಿದ್ದ ರಮೇಶನನ್ನು ಕಂಡು ನಿದ್ರೆ ಚೆನ್ನಾಗಿ ಬಂತೋ ಎನ್ನುವರು. ಹೋ ಬನ್ನಿ ಬನ್ನಿ ತಿಂಡಿ ತಿನ್ನಿ ಎಂದು ಔಪಚಾರಿಕವಾಗಿ ಕರೆದರೆ ಅಯ್ಯೋ ಊರೇ ಹೊತ್ತುಕೊಂಡು ಉರೀತಿದೆ ನೀವು ನೋಡಿದರೆ ಆರಾಮವಾಗಿ ತಿಂಡಿ ತಿನ್ತೀದ್ದೀರಲ್ಲಪ್ಪಾ ಎಂದು ತಿನ್ನುತ್ತಿದ್ದವನಿಗೂ ಉಪ್ಪಿಟ್ಟು ಕಾಂಕ್ರೀಟಿನಂತೆ ಗಂಟಲಲ್ಲಿ ಸಿಕ್ಕಿಬೀಳುವ ಹಾಗೆ ಮಾತನಾಡಿ ಕೆಮ್ಮಿ ನೀರು ಕುಡಿದು ಯಾಕೆ ಏನಾಯ್ತು ಅಂತದ್ದು ಎನ್ನಲು, ಅದೇ ಪೆಟ್ರೋಲ್ ದರ ಏರಿಕೆ ವಿಷಯ. ಸ್ವಾಮಿ ಇವಾಗ ೮ ಘಂಟೆಗೆ ಮುಖ್ಯಮಂತ್ರಿಗಳ ಭಾಷಣ ಇದೆ ನೋಡಿ ಬೆಲೆ ಏರಿಕೆ ಬಗ್ಗೆ ಎಂದು ಟಿವಿ ಹಾಕಿಸುವರು. ಮುಖ್ಯಮಂತ್ರಿಗಳು ಟಿವಿ ಚಾಲ್ತಿ ಮಾಡುವುದನ್ನೇ ಕಾಯುತ್ತಿದ್ದವರಂತೆ ಭಾಷಣ ಶುರುಮಾಡುವರು. “ನೋಡಿ ಪ್ರಜೆಗಳೇ, ಪೆಟ್ರೋಲ್ ಬೆಲೆ ನಿಮಗೆಲ್ಲರಿಗೂ ಗೊತ್ತಿರುವಂತೆ ಮೇಲೆ ಮೇಲೆ ಹೋಗುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಇನ್ಯಾವ ತೆರಿಗೆ ಹೆಚ್ಚಿಸಬಹುದೆಂದು ನಾವೂ ಕೂಡ ಕೂಲಂಕಶವಾಗಿ ಚರ್ಚಿಸುತ್ತಲೇ ಇದ್ದೇವೆ. ಹಾಗೂ ನಾವು ದುಡ್ಡು ತಿನ್ನುವುದನ್ನಂತೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ, ನಿಮಗೂ ಗೊತ್ತಿದೆ, ನೀವು ನಮ್ಮನ್ನು ಆಯ್ಕೆ ಮಾಡಿ ಈ ಸ್ಥಾನದಲ್ಲಿ ಕೂಡ್ರಿಸುವುದೇ ದುಡ್ಡು ತಿನ್ನಲೆಂದು, ಹಾಗಾಗಿ ನಾವು ಆ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಪೆಟ್ರೋಲ್ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದರೆ, ನೀವು ಗಾಡಿಗಳನ್ನು ಬಿಟ್ಟು ರಸ್ತೆಗಿಳಿಯಿರಿ, ನಿಮ್ಮೆಲ್ಲರ ಸಹಕಾರ ನಮ್ಮ ಪಕ್ಷದ ಮೇಲಿದೆಯೆಂದು ನಾವು ನಂಬುತ್ತೇವೆ, ಜೈ ಬೆಂಗಾಡು” ಎಂದು ಹೇಳಿ ಕಾರ್ಯಕ್ರಮಕ್ಕೆ ಮಂಗಳ ಹಾಡುತ್ತಾರೆ.

ಇವರಿಗೆಲ್ಲಾ ಬುದ್ದಿ ಕಲಿಸಬೇಕು ರೀ. ಕ್ರಾಂತಿ ಆಗಬೇಕು. ಅದಕ್ಕೇ ಇದೇ ತಿಂಗಳ ಮುವತ್ತೊಂದನೇ ತಾರೀಖು ಬೆಂಗಾಡಿನಾದ್ಯಂತ ಬಂದ್ ಕರೆ ನೀಡಿದ್ದಾರೆ. ಬಾಡಿಗೆ, ಭೋಗ್ಯಕ್ಕಿದ್ದ ಜನರೆಲ್ಲಾ ತಮ್ಮ ತಮ್ಮ ಆಫೀಸು, ನಿತ್ಯ ಓಡಾಟವಿರುವ ಜಾಗಗಳ ಹತ್ತಿರವೇ ಮನೆಗಳನ್ನ ಸ್ಥಳಾಂತರಿಸುತ್ತಿದ್ದಾರಂತೆ. ಈಗ ಬುದ್ದಿ ಬಂದು ಅನವಶ್ಯಕವಾಗಿ ಗಾಡಿಗಳನ್ನು ಬಳಸದೇ ಮೂಲೆ ಸೇರಿದ್ದ ಸೈಕಲ್ ಗಳನ್ನು ಹೊರತೆಗೆಯುತ್ತಿದ್ದಾರಂತೆ. ಎಂದು ರಮೇಶನಿಗೆ ಬೇಡವಾಗಿದ್ದ ವರದಿಯನ್ನು ಒಪ್ಪಿಸುವರು. ಈ ಬಾಯಿ ಚಪಲವಿರುವವರು ಮತ್ತೆ ಶುರುಮಾಡಿಕೊಂಡು ಸರ್ಕಾರದವರು ಮೊನ್ನೆ ಒಂದು ಐವತ್ತು ಪೈಸೆಯಾಯ್ತಿ, ನೆನ್ನೆ ಒಂದು ರೂಪಾಯಿಯಾಯ್ತು, ಇವತ್ತಾಗಲೇ ಬರೋಬ್ಬರಿ ಹತ್ತು ರೂಪಾಯಿ, ನಾಳೆ ಮತ್ತೆ ಇಪ್ಪತ್ತು ರೂಪಾಯಿ ಹೆಚ್ಚಳ ಮಾಡಲು ಸಿದ್ದರಾಗಿದ್ದಾರಂತೆ, ಈ ಪೆಟ್ರೋಲ್ ದರ ದಿನೇ ದಿನೇ ಹೀಗೇ ಏರುತ್ತಾ ಹೋಗುತ್ತದಂತೆ. ಅದರ ಜೊತೆಗೆಯೇ ಬಸ್ ಸ್ಟ್ಯಾಂಡ್ ಆಟೋ ಸ್ಟಾಂಡ್ ಗಳ ಮಾದರಿಯಲ್ಲಿ ಸೈಕಲ್ ಸ್ಟ್ಯಾಂಡ್ ಮಾಡಿ ಜನರು ಟಿಕೇಟ್ ಪಡೆದು ಸೈಕಲ್ ಬಳಸಬಹುದಂತೆ. ಎಲ್ಲಾ ಗಲ್ಲಿ ಗಲ್ಲಿಗೂ ಇಷ್ಟೆಂದು ಸೈಕಲ್ ಕೊಡುತ್ತಾರಂತೆ. ಈ ಸೈಕಲ್ ನಿಲ್ದಾಣ ನಿರ್ವಹಣೆಗೆಂದೇ ಹೊಸ ತಂಡವನ್ನ ರಚಿಸಲಾಗಿದೆಯಂತೆ. ಬೆಂಗಾಡು ಅತಿ ಶೀಘ್ರದಲ್ಲೇ ಇಂಧನಯುಕ್ತ ವಾಹನಮುಕ್ತವಾಗುತ್ತಂತೆ ಎಂದು ತನ್ನ ಮಾತು ಮುಗಿಸುವಷ್ಟರಲ್ಲಿ, ನಿಯತಕಾಲಿಕ ಗಿರಾಕಿ ಮಾತು ಶುರುಮಾಡುವರು. ಇಲ್ಲಿ ನೋಡಿ ಪತ್ರಿಕೆಯಲ್ಲಿ ಈ ಸುದ್ಧಿ ಹೇಗಿದೆ, ಯಾರೋ ಈ ಪೆಟ್ರೋಲ್ ಬೆಲೆ ಏರಿಕೆಯಿಂದ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಸಾಯಲು ತೀರ್ಮಾನ ಮಾಡಿದ್ದನಂತೆ. ಪೆಟ್ರೋಲ್ ಸುರಿದುಕೊಳ್ಳಲು ತಂದಿದ್ದ ಡಬ್ಬಿಯನ್ನೇ ಯಾರೋ ಕಿತ್ತುಕೊಂಡು ತಮ್ಮ ಗಾಡಿಗೆ ಹಾಕಿಕೊಂಡರಂತೆ ಈಗ ಆತ ಸಾಯಲು ಬೇರೆ ದಾರಿ ಹುಡುಕುತ್ತಿದ್ದಾನಂತೆ, ನಾಳೆಯಿಂದ ಗಾಡಿಗಳೇ ರೋಡಿಗೆ ಇಳಿಯದಿದ್ದರೆ ಗಾಡಿಗೆ ತಲೆ ಕೊಟ್ಟು ಸಾಯಲು ಸಹ ಆಗುವುದಿಲ್ಲವೆಂದು ಆತ ಪೇಚಾಡುತ್ತಿದ್ದಾನಂತೆ. ರಮೇಶನೂ ಮಾತುಗೂಡಿಸುತ್ತಾ ಹೌದು ಸಾರ್ ನೀವು ಹೇಳೋದು ಸರಿ ಕ್ರಾಂತಿ ಆಗಬೇಕು ನಮ್ಮ ಬೆಂಗಾಡಿನಲ್ಲಿ. ಮೊದಲು ನವೂ ಸರಿ ಹೋಗಬೇಕು, ನಾವು ಆಯ್ಕೆ ಮಾಡಿರುವ ಸರ್ಕಾರವೂ ಸರಿ ಹೋಗಬೇಕು. ಎಲ್ಲಾ ಒಟ್ಟಿಗೆ ಏಳಿಗೆಯ ಕಡೆಗೆ ದುಡೀಬೇಕು ಸಾರ್ ಎಂದು ಹೇಳುತ್ತಾ ಆಫೀಸಿಗೆ ಹೊರಡಬೇಕೆನ್ನುವನು. ಇಬ್ಬರೂ ಗಿರಾಕಿಗಳು ಎದ್ದು ಹೊರಡುವರು. ರಮೇಶ ಗೀತಾ ಹೊರಗೆ ಬರುತ್ತಾ ನನ್ನನ್ನು ನಿಮ್ಮ ಗಾಡಿಯಲ್ಲೇ ಬಿಟ್ಟು ಹೋಗ್ರೀ ಎಂದರೆ ರಮೇಶ ಅಯ್ಯೋ ಹೋಗಮ್ಮಾ ಪರವಾಗಿಲ್ಲ ಏನು ಹತ್ತು ರೂಪಾಯಿಗೆ ತಲೆ ಕೆಡಿಸಿಕೊಂಡ್ರೆ ಆಗುತ್ತಾ ಎಂದು ಇಬ್ಬರೂ ತಮ್ಮ ತಮ್ಮ ಗಾಡಿಗಳಲ್ಲಿ ಆಫೀಸಿಗೆ ಹೊರಡುವರು. ಇಡೀ ರಸ್ತೆ ಮಾಮೂಲಿನಂತೆ ನಿಧಾನಗತಿಯಲ್ಲಿ ಚಲಿಸುತ್ತಾ ಪೆಟ್ರೋಲ್ ಬಂಕಿನ ಮುಂದೆ ದೊಡ್ಡ ಕ್ಯೂ ನಿಂತಿರುವುದು. ಬೆಂಗಾಡು ಹೀಗೆಯೇ!








-ನೀ.ಮ. ಹೇಮಂತ್

2 comments:

  1. ವಿಡಂಬನೆ ಚೆನ್ನಾಗಿದೆ ಹೇಮಂತ್. ಅಂತೂ ನಮಗೂ ಇವತ್ತಿನ ಕನಸು ಪೆಟ್ರೋಲ್ ಮಯವಾಗಿರುವುದೋ ಏನೋ!

    ಬೆಂಗಾಡಿನಲ್ಲಿ ಪ್ರೈಸ್ಥಿತಿ!
    ಬೆಂಕಿ ಹೊಗೆಯಿಲ್ಲದೆ!

    ReplyDelete
  2. ಅಧ್ಬುತ ನಿರೂಪಣೆ, ಕಥೆ ಇಷ್ಟು ದೊಡ್ಡದಿದ್ದರೂ ಓದಿಸಿಕೊಂಡ ಪರಿ ಸೂಪರ್ :)

    ReplyDelete