ನೇರವಾಗಿ ಮನೆಗೆ ಹೋಗಬೇಕು. ಬ್ಯಾಗನ್ನ ಮಾಮೂಲಿನಂತೆಯೇ ಸೋಫಾದ
ಮೇಲೆ ಎಸೀಬೇಕು. ರೂಮಿಗೆ ಹೋಗಿ ಚಕಚಕನೆ ಬಟ್ಟೆ ಬದಲಿಸಿ ಕೈಕಾಲು ಮುಖ ತೊಳೆದು ಅಮ್ಮನನ್ನ ಸಮಾಧಾನವಾಗೇ
ಮಾತನಾಡಿಸಿ, ನೀರು ಕುಡಿದು ಬ್ಯಾಗು ತೊಗೊಂಡು ರೂಮು ಸೇರ್ಕೊಂಡು ಚಿಲಕ ಹಾಕ್ಕೊಬೇಕು. ಆದರೆ ಖಂಡಿತಾ
ಅಮ್ಮ ಫಲಿತಾಂಶ ಏನಾಯ್ತು ಅಂತ ಕೇಳೇ ಕೇಳ್ತಾಳೆ. ಏನಂತ ಹೇಳೋದು ಎಲ್ಲಾದರಲ್ಲೂ ೭೦ಕ್ಕಿಂತ ಜಾಸ್ತಿ
ಬಂದಿದೆ ಇನ್ನೂ ಶೇಕಡಾ ೫% ಹೆಚ್ಚಿಗೆ ಬರಬೇಕು ಅದಕ್ಕೇ ಮರುಮಾಪನಕ್ಕೆ ಹಾಕಬೇಕು ಅಂತ ಇದ್ದೀನಿ ಹಾಗಾಗಿ
ನನ್ನ ಫಲಿತಾಂಶ ಇನ್ನೂ ಎರಡು ತಿಂಗಳಾಗುತ್ತೆ ಖಾತ್ರಿಯಾಗೋದು ಅಂತ ಹೇಳಿಬಿಡಲಾ? ಥು ಯಾಕ್ ಹಿಂಗಾಯ್ತೋ,
ಏನೇನೋ ಅಂದುಕೊಂಡಿದ್ದೆ, ಎಲ್ಲಾ ಮೋಸ ಆಗೋಯ್ತು. ನಾನು ಓದಿದ್ದು ಒಂದೂ ಬರಲಿಲ್ಲ, ಯಾಕೆ ಹೀಗೆ ಎಡವಿದೆನೋ
ಗೊತ್ತಿಲ್ಲ. ಥು, ನಾನು ಅಳ್ತಿರೋದು ಬಸ್ಸಲ್ಲಿ ಯಾರು ನೋಡ್ತಿದ್ದಾರೋ ಏನೋ. ನಾನು ಅಳಬಾರದು. ಕಣ್ಣು
ಕೆಂಪಗಾದ್ರೆ ಅಮ್ಮ ಕಂಡು ಹಿಡಿದೇಬಿಡ್ತಾಳೆ. ಎಲ್ಲಾ ಒಳ್ಳೆ ಒಳ್ಳೆ ಕಾಲೇಜಿಗೆ ಸೇರ್ಕೋತಾರೆ. ಗಿರಿ
ಮುಂದೆ ಮಾನ ಮರ್ಯಾದೆ ಎಲ್ಲಾ ಹೋಯ್ತು. ಛಾಲೆಂಜಲ್ಲಿ ನಾನೇ ಸೋತೆ ಇನ್ನು ಎದುರಿಗೆ ಸಿಕ್ಕರೆ ಎಲ್ಲಾರ
ಮುಂದೆ ಅವಮಾನ ಮಾಡ್ತಾನೆ. ಇನ್ನು ಅಪ್ಪ ಕಾಲು ಮುರಿದಾಕ್ತಾರೇನೋ. ಯಾವಾಗಲೂ ಟ್ವೆಂಟಿ ಟ್ವೆಂಟಿ ನೋಡ್ಕೊಂಡು
ಕೂತಿರಬೇಡಾ ಪರೀಕ್ಷೆನಲ್ಲಿ ಗೇಯ್ಲ್ ಎಷ್ಟು ಸಿಕ್ಸ್ ಹೊಡೆದಾ ಅಂತ ಕೇಳಲ್ಲಾ ಅಂತ ಪದೇ ಪದೇ ಹೇಳ್ತಿದ್ದಾಗಲೇ
ಮಾತು ಕೇಳಬೇಕಿತ್ತು. ಇವತ್ತಂತೂ ಹೊಡೆದು ಸಾಯ್ಸೇ ಬಿಡ್ತಾರೇನೋ. ದಿವ್ಯಾ ಹೇಗೆ ತರಗತಿಗೇ ಮೊದಲು ಬಂದಳೋ.
ಛೇ ಅವಳಿಗೆ ಮುಖ ತೋರ್ಸೋ ಹಾಗಿಲ್ಲ. ಅವಳ ಕಾಲೇಜಿಗಂತೂ ಸೇರೋ ಹಾಗಿಲ್ಲ ನಾನು. ಯಾವುದೋ ಡಬ್ಬಾ ಕಾಲೇಜಿನಲ್ಲಿ ಸೀಟ್ ಸಿಕ್ರೆ ಇನ್ನ ಅಲ್ಲೂ
ಅಷ್ಟಕ್ಕಷ್ಟೇ ಮಾರ್ಕ್ಸ್ ಬರುತ್ತೆ, ಆಮೇಲೆ ಎಲ್ಲಾ ಒಳ್ಳೇ ಕೆಲಸಗಳಲ್ಲಿದ್ರೆ ನಾನು ಮಾತ್ರ ಕಿತ್ತೋಗಿರೋ
ಸರ್ಟಿಫಿಕೇಟ್ಸ್ ಇಟ್ಕೊಂಡು ಕೆಲಸಕ್ಕೆ ಅಲೆಯುತ್ತಿರ್ಬೇಕು ಅಷ್ಟೇ. ಅದಕ್ಕೂ ಮೊದಲೇ ನಾನು ಇಂಜಿನೀರಿಂಗ್
ತೊಗೊಳ್ಳೋಕೂ ಆಗಲ್ಲಾ ಅನ್ನಿಸುತ್ತೆ. ಅಪ್ಪನ ಹತ್ರ ಪೇಮೆಂಟ್ ಸೀಟಿಗೆ ಕಟ್ಟೋಕೆ ದುಡ್ಡೆಲ್ಲಿಂದ ಬರಬೇಕು.
ಹೆಡ್ ಮಾಸ್ಟ್ರು ಅಪ್ಪನಿಗೆ ತುಂಬಾ ಪರಿಚಯ ಇಷ್ಟು ಹೊತ್ತಿಗೆ ಅವರಿಗೆ ಫೋನು ಮಾಡಿ ತಿಳ್ಕೊಳ್ಳದಿದ್ರೆ
ಸಾಕಪ್ಪಾ. ದೇವರೇ ನನ್ನ ಫಲಿತಾಂಶ ಅಂತೂ ಕಿತ್ತುಕೊಂಡೆ ಎಲ್ಲಾದ್ರಲ್ಲೂ ಹಿಂದಿನ ಬೆಂಚಲ್ಲಿ ಕೂರ್ತಿದ್ದೆ.
ಧರಿದ್ರ ವಿಜ್ಞಾನದ ಪರೀಕ್ಷೆ ಇದ್ದಾಗಲೇ ಮೊದಲ ಬೆಂಚಲ್ಲಿ ಬೀಳಬೇಕಾ. ಈ ಮುವತ್ತೈದು, ನಲವತ್ತೊಂದು,
ಇಷ್ಟು ಮಾರ್ಕ್ಸ್ ತೊಗೊಂಡ್ರೂ ಒಂದೇ ಫೇಲಾದ್ರೂ ಒಂದೇ. ಏನಾದ್ರೂ ಆಗಲಿ. ಮೊದಲು ಅಮ್ಮನಿಗೆ ಫಲಿತಾಂಶಾನೇ
ಬಂದಿಲ್ಲ ಇನ್ನಾ ಸಂಜೆ ಬರುತ್ತೆ ಅಂತ ಹೇಳಿ ರೂಮು ಸೇರ್ಕೊಂಡ್ರೆ ಮುಗೀತು. ಹಾಗೇ ಮಾಡ್ತೀನಿ. ಎಂದೆಲ್ಲಾ
ಬಸ್ಸಿನಲ್ಲಿ ಕೂತು ಲೆಕ್ಕಾಚಾರ ಮಾಡಿ ಕೊನೆಗೂ ಒಂದು ನಿರ್ಧಾರಕ್ಕೆ ಬದ್ಧನಾಗುವಷ್ಟರಲ್ಲಿ ತನ್ನ ನಿಲ್ದಾಣಕ್ಕೆ
ತಲುಪಿ, ನೂಕು ನುಗ್ಗಲಿನಲ್ಲಿ ಬಸ್ಸು ಇಳಿದು ರಸ್ತೆಯ ಅಕ್ಕ ಪಕ್ಕ ಏನನ್ನೂ ಗಮನಿಸದೇ ಎಷ್ಟು ತಡೆದರೂ
ಕಣ್ಣಿನಲ್ಲಿ ಕಟ್ಟುತ್ತಿದ್ದ ನೀರನ್ನು ತಡೆಯಲಸಾಧ್ಯವಾಗಿ ಸ್ವಲ್ಪ ಹೊತ್ತು ಅದೇಕೋ ಖಾಲಿ ಖಾಲಿಯಾಗಿದ್ದ
ರಸ್ತೆಯಲ್ಲಿ ದೂರದಲ್ಲಿ ನಿಂತಿದ್ದ ಕಾಲ್ ಸೆಂಟರ್ ಕಾರೊಂದನ್ನು ಸುಮ್ಮನೆ ದಿಟ್ಟಿಸುತ್ತಾ ನಿಲ್ಲುವನು.
ಇನ್ನೂ ಸಮಯ ಕಳೆದರೆ ಅಪ್ಪ ಮನೆಗೆ ಬಂದುಬಿಡುವನು ಎಂದು ಹೆದರಿ ತಕ್ಷಣ ಕಣ್ಣೊರೆಸಿಕೊಂಡು ಮನೆಗೆ ನುಗ್ಗಿ
ಅಂದುಕೊಂಡಂತೆಯೇ ಮೆಷೀನಿನ ರೀತಿಯಲ್ಲೇ ಪೂರ್ವನಿಯೋಜಿತವಾಗೇ ವರ್ತಿಸುತ್ತಿರುವಷ್ಟರಲ್ಲಿ ಅಮ್ಮ ಹರೀ
ಅಪ್ಪ ನಿಮ್ ಸ್ಕೂಲ್ ಹತ್ರಾ ಬಂದು ನಿನ್ನ ಕರ್ಕೊಂಡು ಜೊತೇಗೇ ಬರ್ತೀನಿ ಅಂತ ಫೋನು ಮಾಡಿದ್ರಲ್ಲೋ ನೀನ್ಯಾಕ್
ಇಷ್ಟು ಬೇಗ ಬಂದೇ ಎಂದು ಪ್ರಶ್ನಿಸುತ್ತಿದ್ದಂತೆಯೇ ಎದೆ ಒಮ್ಮೆ ಢಸಕ್ಕೆಂದು ಕಣ್ಣು ತುಂಬಿಬಂದು ತಕ್ಷಣ
ಬಾತ್ರೂಮು ಸೇರಿ ಮುಖಕ್ಕೆ ನೀರು ಬಡಿದುಕೊಂಡು ಬಂದು ಇಲ್ಲಾ ಮಾ ಫಲಿತಾಂಶ ಇನ್ನಾ ಸಾಯಂಕಾಲಕ್ಕಂತೇ
ಅದಕ್ಕೇ ಬಂದ್ಬಿಟ್ಟೇ ಎಂದು ಹೇಳಿ ಊಟ ಬೇಡವೆಂದು ಹೇಳಿ ರೂಮು ಸೇರಿಕೊಂಡು ದಢಾರನೆ ಬಾಗಿಲು ಬಡಿಯುವನು.
ಉಸಿರು ಕಟ್ಟಿ ಬಂದ ಒಂದು ಗಂಡಾಂತರವನ್ನು ಯಶಸ್ವಿಯಾಗಿ ಎದುರಿಸಿ
ಒಳಗೆ ಬಂದು ಬಾಗಿಲ ಚಿಲಕ ಜಡಿದವನೇ ಶಬ್ಧ ಹೊರಗೆ ಹೋಗದಂತೆ ಒಳಗಿದ್ದ ಅಷ್ಟೂ ಸಂಕಟವನ್ನು, ಕೋಪವನ್ನು,
ನೋವನ್ನು, ಸೋಲನ್ನು ಅಳುವಿನ ಮೂಲಕ ಹೊರಗೆ ಹಾಕುವನು. ಬಿಕ್ಕುತ್ತಲೇ, ಇನ್ನು ತಡ ಮಾಡುವುದು ಸರಿಯಲ್ಲವೆಂದು
ಮೋಡ ಮುಸುಕಿದ ಕಣ್ಣುಗಳಿಂದಲೇ ಮಂಚದ ಕೆಳಗಿದ್ದ ಹಗ್ಗವನ್ನು ಹುಡುಕಿ ಗಂಟು ಹಾಕಿ ಫ್ಯಾನಿಗೆ ಹಾಕಿ
ಗಂಟು ಬಿಗಿಯುವನು. ಕೈಕಾಲುಗಳಲ್ಲಿ ಛಳಿಗೆ ನಡುಗುವಂತೆ
ನಡುಕ. ಆದರೆ ಮೈಪೂರ್ತಿ ಬೆವರಿನ ಹೊಳೆಯಲ್ಲಿ ತೊಯ್ದುಹೋಗುತ್ತಾ, ನಡುಗುವ ಕೈಗಳಿಂದಲೇ ಪುಸ್ತಕದ ಮಧ್ಯದ
ಹಾಳೆಯಲ್ಲಿ ನಾನು ಇಂಜಿನಿಯರಾಗಲು ಸಾಧ್ಯವಿಲ್ಲ. ಹಾಗಾಗಿ ಸತ್ತಿದ್ದೇನೆ ಎಂದು ಬರೆದು. ಆ ಹಾಳೆಯನ್ನು
ಹರಿದೆಸೆದು ಮತ್ತೇ ಇನ್ನೊಂದು ಹಾಳೆಯಲ್ಲಿ “ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ. ನಾನು ಸಾಯುತ್ತೇನೆ.”
ಎಂದಷ್ಟೇ ಬರೆದು ಅದರ ಮೇಲೆ ಎರಡು ಕಣ್ಹನಿಗಳನ್ನು ಬೀಳಿಸಿ ಸರ್ರನೆ ಮೂಗು ಎಳೆದುಕೊಂಡು ಮಂಚ ಹತ್ತಿ
ಹಗ್ಗ ಕೈಯಲ್ಲಿ ಹಿಡಿದು ಮತ್ತೇ ಕೆಳಗೆ ಇಳಿದು ಬಾಗಿಲ ಕೀ ರಂಧ್ರದಲ್ಲಿ ಅಮ್ಮ ಏನು ಮಾಡುತ್ತಿದ್ದಾರೆಂದು
ಗಮನಿಸುವನು. ಎಲ್ಲೂ ಸದ್ದಿಲ್ಲದಿರುವುದರಿಂದ ತಡ ಮಾಡದೆ ಮಂಚ ಹತ್ತಿ ಕುತ್ತಿಗೆಗೆ ಕುಣಿಕೆ ಅಲಂಕರಿಸಿಕೊಂಡೇ
ಬಿಡುವನು.
ಹ ಹ ಹ ಹ ಹ ಹ ಹ… ಹೋ ಹೋ ಹೋ ಹೋ ಹೋ ಹೋ.. ಎಂದು ಕರ್ಕಶವಾಗಿ
ನಗುತ್ತಲಿದ್ದ ಆಸಾಮಿ! ಮಂಚದಿಂದ ಸ್ವಲ್ಪ ಪಕ್ಕಕ್ಕಿದ್ದ ಫ್ಯಾನಿನ ಮೇಲೆ ಭಾರ ಬಿದ್ದದ್ದೇ ಧಡಾರನೆ
ನೆಲಕ್ಕುರುಳಿದ ಜೀವವನ್ನು ಕಂಡು ಸುಮಾರು ಅರ್ಧ ತಾಸು ನಿರಂತರವಾಗಿ ನಕ್ಕಿರಬಹುದು. ಕೆಳಗೆ ಬಿದ್ದವನು
ಎಷ್ಟು ಹೊತ್ತು ಹಾಗೇ ಬಿದ್ದಿದ್ದನೋ. ಕರ್ಕಶವಾದ ನಗು ಅಸ್ಪಷ್ಟವಾಗಿ ಕಿವಿಗಳನ್ನು ಹೊಕ್ಕು ಮಂಜು ತುಂಬಿದ್ದ
ಕಣ್ಣುಗಳನ್ನು ನಿಧಾನವಾಗಿ ತೆರೆಯುತ್ತಿದ್ದಂತೆಯೇ ಥಟ್ಟನೇ ಗಂಟಲು ಹಿಡಿದು ಒಳಗೆ ಖಾಲಿಯಾಗಿದ್ದ ಅಷ್ಟೂ
ಆಮ್ಲಜನಕವನ್ನು ಒಂದೇಟಿಗೇ ಕಣ್ಣು ಮೂಗು ಬಾಯಿ ಕಿವಿಗಳಿಂದ ಎಳೆದುಕೊಂಡು ಕೆಮ್ಮಲು ಶುರುಮಾಡುವನು.
ಅವನ ಅವಸ್ಥೆ ನೋಡಿ ಈ ಆಸಾಮಿ ಇನ್ನಷ್ಟು ಹಿ ಹಿ ಹಿ ಹಿ ಎಂದು ಬಾಯ್ತೆರೆದು ನಗುವನು. ಹರೀಶ ಎಚ್ಚೆತ್ತುಕೊಂಡು
ಸುತ್ತಾ ನೋಡುತ್ತಾ ಮೇಲೆ ಫ್ಯಾನಿನಲ್ಲಿ ನೇತಾಡುತ್ತಿದ್ದ ಹಗ್ಗಕ್ಕೆ ನೇತಾಡುತ್ತಲಿದ್ದ ತನ್ನ ದೇಹವನ್ನೇ
ಕಂಡಂತಾಗಿ ಬೆಚ್ಚಿ ಬೀಳುವನು. ಎದುರಿಗಿದ್ದ ವಿಚಿತ್ರ, ವಿಕೃತ ಆಸಾಮಿಯ ನಗು ಆಗಲೇ ಹರೀಶನ ಗಮನಕ್ಕೆ
ಬಂದದ್ದು. ಉಸಿರು ಕಟ್ಟಿದ್ದರಿಂದಲೋ ಏನೋ ತಲೆ ಸುತ್ತುತ್ತಲಿದ್ದರಿಂದ ಹಾಗೇ ಗೋಡೆಗೆ ತಡಕಾಡುತ್ತಾ
ಹುಡುಕಿ ಗೊಡೆಗೊರಗಿ ಕೂತು ಮಂಜು ಮಂಜಾಗಿ ಕಾಣುತ್ತಿದ್ದ ಕಾಮೆರಾ ಹಿಡಿದು ಕೂತಂತಿರುವ ಆಕೃತಿಯನ್ನು
ಕಣ್ಣು ಪಿಳುಕಿಸಿ ಪಿಳುಕಿಸಿ ನೋಡಲು ಪ್ರಯತ್ನಿಸುವನು. ಕೆಮ್ಮುತ್ತಾ, ಉಸಿರಾಡಲು ಶ್ರಮಿಸುತ್ತಾ ಕಣ್ಣುಜ್ಜಿಕೊಂಡು
ನೋಡಲು ಮುಖದ ತುಂಬಾ ಬಾಯಗಲಿಸಿ ಕೈಯಲ್ಲೊಂದು ಪುಟ್ಟ ಕ್ಯಾಮೆರಾ ತನ್ನನ್ನು ಸೆರೆಹಿಡಿಯುವಂತಯೇ ಹಿಡಿದು
ಮಂಚದ ಪಕ್ಕದ ಟೇಬಲ್ ಮೇಲೆ ಕೆಂಪು ಕೆಂಪು ಟೊಪ್ಪಿಗೆ, ಸೂಟು ಬೂಟು ಧರಿಸಿ ಎರಡೂ ಕಿವಿಗಳವರೆಗೂ ಚಾಚಿದ್ದ
ಬಾಯಿಯಿಂದ ಹಿ ಹಿ ಹಿ ಎಂದು ಕರ್ಕಶವಾದ ಧ್ವನಿ ಹೊರಡಿಸುತ್ತಾ, ಕಾಲುಗಳನ್ನು ಜೋಲಿಯಾಡಿಸುತ್ತಾ ಕುಳಿತಿದ್ದವನನ್ನು
ಒಮ್ಮೆ ನೋಡಿ ಹಾಗೇ ತಲೆ ಬಗ್ಗಿಸಿ ಕೂರುವನು. ಮೊದಲ ಬಾರಿಗೆ ನಗು ನಿಲ್ಲಿಸಿದ ವಿಚಿತ್ರಾಕೃತಿ ತುಂಬಾ
ಒಳ್ಳೆಯ ಪ್ರಯತ್ನ ಮಗಾ, ಸಖತ್ ಧೈರ್ಯಶಾಲಿ ನೀನು. ಆದರೆ ನಿನಗೆ ಗೊತ್ತ ಇಷ್ಟು ಧೈರ್ಯಶಾಲಿಯಾದ ನಿನ್ನನ್ನೂ
ಹೇಡಿ ಅಂತ ಕರೀತಾರೆ. ಹಿ ಹಿ ಹಿ ಎನ್ನುವನು. ಹರೀಶನಿಗೆ ಏನೂ ಅರ್ಥವಾಗದೆ ಕಷ್ಟಪಟ್ಟು ಯಾರ್ ನೀನು?
ಇಲ್ಲಿಗೆ ಹೇಗೆ ಬಂದೆ? ಎನ್ನುವನು. ಕೆಂಪು ಮಾನವ ಹರೀಶನ ಮಾತನ್ನು ಲೆಕ್ಕಿಸದೇ ಮಗಾ ಸಮಸ್ಯೆಯನ್ನ ಎದುರಿಸಿ
ಜೀವನ ಸಾಗಿಸೋಕೆ ಎಷ್ಟು ಧೈರ್ಯ ಬೇಕೋ ಅದಕ್ಕೆ ನೂರು ಪಟ್ಟು ಹೆಚ್ಚಿನ ಧೈರ್ಯ ಸಾವನ್ನ ಎದುರಿಸೋಕೆ
ಬೇಕು. ನೀನು ಧೈರ್ಯವಂತ ಕಣೋ ಸಾವನ್ನೇ ಎದುರಿಸಲು ಸಿದ್ಧನಾಗಿ ಹೋದೆ. ಸಮಸ್ಯೆ ಎದುರಿಸಲಾಗದೇ ಹೋದ
ಹೇಡಿ ಅಂತ ಎಲ್ಲಾರೂ ಹೇಳಿದರೂ ನಾನು ನಿನ್ನ ಜೊತೆಗೆ ಇದ್ದೀನಿ ಕಣೋ ಮಗಾ ಎಂದು ತನ್ನ ಮಾತು ಮುಂದುವರೆಸುವನು.
ಸ್ವಲ್ಪ ಸುಧಾರಿಸಿಕೊಂಡ ಹರೀಶ ರೀ ಯಾರ್ರೀ ನೀವು? ಏನ್ ಮಾತನಾಡ್ತಿದ್ದೀರಾ?
ಎನ್ನುವನು. ಅದಕ್ಕೆ ಆತ ಲೋ ಮಗಾ ನಾನು ಕಣೋ ದರ್ಶನ. ನಾನೂ ಹತ್ತು ವರ್ಷಗಳ ಹಿಂದೆ ನಿನ್ನ ಸ್ಕೂಲಿನಲ್ಲೇ
ಓದಿಬಂದವನು ಕಣೋ. ನಾನು ಕಥೆಗಾರ ಕಮ್ ನಿರ್ದೇಶಕ ನಿಮ್ಮಂತಹ ಧೈರ್ಯಶಾಲಿಗಳನ್ನ ಲೈವ್ ಶೂಟ್ ಮಾಡ್ತೀನಿ.
ಎಷ್ಟು ಚೆನ್ನಾಗಿ ಬಂದಿದೆ ಗೊತ್ತಾ ನೋಡ್ತೀಯಾ ನಿನ್ನ ಸಾಹಸವನ್ನ? ಎನ್ನುವನು. ಹರೀಶ ದರ್ಶನನ ಮಾತಿಗೆ
ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಗೋಡೆಗೊರಗಿ ಕುಳಿತು ಸುಮ್ಮನೆ ದಿಟ್ಟಿಸುತ್ತಿರುವನು. ಸರಿ
ಅಲ್ಲೇ ಕೋತ್ಕೋ, ನೋಡು ಆ ಗೋಡೆ ಮೇಲೆ ಪ್ರೊಜೆಕ್ಷನ್ ಮಾಡ್ತೇನೆ ಎಂದು ಕೈಯಲ್ಲಿದ್ದ ಕ್ಯಾಮೆರಾದಿಂದ
ಖಾಲಿ ಗೋಡೆಯ ಮೇಲೆ ಸೆರೆ ಹಿಡಿದಿದ್ದ ಹರೀಶನ ಕುಣಿಕೆಗೆ ಕತ್ತನ್ನಲಂಕರಿಸುವ ದೃಶ್ಯವನ್ನು ಸ್ಫುಟವಾಗಿ
ಸೆರೆಹಿಡಿದಿದ್ದಾನೆ. ಹರೀಶನಿಗೆ ವಿಸ್ಮಯವೊಂದು ಕಡೆ, ನಾಚಿಕೆಯೊಂದು ಕಡೆ, ತನ್ನನ್ನೇ ಹಾಗೆ ನೋಡಲು
ಹೇಸಿಗೆಯೊಂದು ಕಡೆ. ಸುಮ್ಮನೆ ತಲೆ ಬಗ್ಗಿಸಿ ಕೂರುವನು. ಆದರೆ ಈ ವ್ಯಕ್ತಿ ತನ್ನನ್ನು ಸೆರೆಹಿಡಿದಿದ್ದಾದರೂ
ಹೇಗೆ ಎಂದು ತನ್ನ ತಲೆಯಲ್ಲಿ ಪ್ರಶ್ನೆ ಗಿರಿಗಿಟ್ಟಲೆ ಹೊಡೆಯುತ್ತಿದ್ದರೂ ಕೇಳುವ ಮನಸ್ಸು ಮಾಡದೆ ಸುಮ್ಮನೆ
ಕುಳಿತುಕೊಳ್ಳುವನು. ಯಾರೀತ ದರ್ಶನ, ಎಲ್ಲಿಂದ ಬಂದನೀತ ಎಂದೆಲ್ಲಾ ತಲೆಯಲ್ಲಿ ಪ್ರಶ್ನೆ ಮೊಳಕೆಯೊಡೆಯುತ್ತಿದ್ದಂತೆಯೇ
ದರ್ಶನ ಮತ್ತೆ ನಕ್ಕು. ಇಲ್ಲಿ ನೋಡು ಮಗಾ ಹಗ್ಗಾ ನಿನ್ನ ಕತ್ತಿನಲ್ಲಿ ಹೇಗೆ ಸುಂದರವಾಗಿ ಅಲಂಕರಿಸಿದೆ
ಎಂದು ಮತ್ತೆ ಮತ್ತೇ ಅದನ್ನೇ ಖಾಲಿ ಗೋಡೆಯ ಪರದೆಯ ಮೇಲೆ ತೋರಿಸಿ ಬಾಯಗಲಿಸುವನು. ಮಗಾ ನಿನಗೆ ಗೊತ್ತಾ
ನಾನು ನನ್ನ ಕ್ಲಾಸಿಗೇ ಮೊದಲ ರಾಂಕ್ ತೊಗೊಂಡಿದ್ದೇ! ಆದರೆ ಮಜಾ ಕೇಳು ನಮ್ಮಪ್ಪ ನಮ್ ತಾತಾ ಏನು ದುಡಿದಿದ್ರೋ
ಅದರಲ್ಲಿ ಕಾಲು ಭಾಗ ದುಡಿಯೋಕೆ ನನ್ನ ಕೈಲಿ ಸಾಧ್ಯವಾಗಿಲ್ಲ. ಹ ಹ ಹ ಹ.. ನಮ್ಮಪ್ಪ ಏಳನೇ ಕ್ಲಾಸು
ಎರಡು ಸಲ ಡುಮ್ಕಿ, ನಮ್ ತಾತಾ ಒಂದನೇ ಕ್ಲಾಸಿಗೆ ನಮಸ್ಕಾರ ಹೊಡೆದು ಹೊಟೇಲೊಂದನ್ನ ಇಟ್ಟಿದ್ರಂತೆ.
ಹಿ ಹಿ ಹಿ… ನಾನು ಡಬ್ಬಲ್ ಡಿಗ್ರೀ ಮಾಡ್ದೆ. ನಾನು ಮಾಡ್ತಿದ್ದ ಕೆಲಸ ನೋಡಿ ನಮ್ಮ ತಾತ ನನ್ನನ್ನ ರೇಗಿಸೋಕೆ
ಶುರುಮಾಡಿದ್ರು, ತಾನೇ ಇನ್ನೂ ಒಳ್ಳೆಯ ಕೆಲಸ ಕೊಡ್ತಿದ್ದೆನಲ್ಲೋ ಅಂತ. ಅವೆಲ್ಲಾ ಬಿಡು ನಾನೇನು ನಿನಗೆ
ನೀತಿ ಹೇಳೋಕೆ ಬಂದಿಲ್ಲಪ್ಪಾ. ನೀನು ಮಾಡಿರೋ ಕೆಲಸ ಸರಿಯಾಗೇ ಇದೆ. ಹೇಯ್ ಅಂದ ಹಾಗೆ ನೀನು ಯಾವುದಾದರೂ
ಹುಡುಗಿಯನ್ನ ಪ್ರೀತಿ ಮಾಡಿದ್ಯಾ? ಎಂದು ಪ್ರಶ್ನಿಸಿ ಕ್ಯಾಮೆರಾ ಹರೀಶನಿಗೆ ಝೂಮ್ ಹಾಕುವನು. ಹರೀಶ
ಸುಮ್ಮನೆ ತಲೆ ಎತ್ತಿ ದುರುಗುಟ್ಟುವನು. ದರ್ಶನ ಮತ್ತೆ ಹಲ್ಲು ತೋರಿಸುತ್ತಾ ಹೇಯ್ ಹೇಳೋ ಮಗಾ ಲವ್
ಮಾಡಿದ್ಯಾ? ನಾಚ್ಕೋಬೇಡ ಹೇಳೋಲೇ ಎಂದೆಲ್ಲಾ ಪೀಡಿಸಿದ್ದಕ್ಕೆ ಹರೀಶ ಸುಮ್ಮನೆ ಇಲ್ಲವೆಂಬಂತೆ ತಲೆಯಲ್ಲಾಡಿಸುವನು.
ಹೋsssssss..ಹ ಹ ಹಹ ಹ.. ಎಂದು ದೀರ್ಘವಾಗಿ ಅಸಹ್ಯವಾಗಿ ನಗುವನು ಹರೀಶ ಮಾಮೂಲಿನ ದಿನಗಳಲ್ಲಾಗಿದ್ದರೆ
ಕಪ್ಪಾಳೆಗೆ ಹೊಡೆದುಬಿಡುತ್ತಿದ್ದನು ಹೀಗೆ ಅವಮಾನಿಸುವ ಹಾಗೆ ನಕ್ಕಿದ್ದಲ್ಲಿ. ಅಲ್ವೋ ಮಾರಾಯ ನೀನು
ಪ್ರಪಂಚದಲ್ಲಿ ಏನು ನೋಡಿದ್ಯಾ ಹಾಗಿದ್ರೆ. ನಾನು ಮೂರು ಮೂರು ಸಲ ಪ್ರೀತಿ ಮಾಡಿದ್ದೀನಿ ಗೊತ್ತಾ ನಿನಗೆ.
ನಿಜವಾದ ಪ್ರಪಂಚ ದರ್ಶನವಾಗೋದೇ ಸ್ಕೂಲು ಕಾಲೇಜು ಮುಗಿದ ನಂತರ ಕಣೋ ಗೊತ್ತಿರಲಿಲ್ವಾ ನಿನಗೆ? ಎಂದು
ಮತ್ತಷ್ಟು ನಗುವನು. ಹರೀಶನಿಗೆ ಕಿರಿಕಿರಿಯಾಗಿ ನೀನು ನಗುವುದನ್ನ ನಿಲ್ಲಿಸುತ್ತೀಯ ಇಲ್ಲಾ ನಿನ್ನ
ತಲೆ ಒಡೆದು ಹಾಕಲೋ ಇವಾಗ ಎನ್ನುವನು. ಅದಕ್ಕಿದ್ದು ದರ್ಶನ ಥಟ್ಟನೆ ಹಲ್ಲುಗಳನ್ನ ಬಾಯೊಳಗೆಳೆದುಕೊಂಡು
ಆಯ್ತಾಯ್ತು ಬಿಡಪ್ಪಾ ಎಂದು ಸುಮ್ಮನಾಗುವನು.
ಕೊಂಚ ಸಮಯ ಕ್ಯಾಮೆರಾದಲ್ಲಿ ಏನೇನೋ ರಿವೈಂಡ್ ಮಾಡುತ್ತಾ ಆಗಾಗ
ಕದ್ದು ಕದ್ದು ಹರೀಶನೆಡೆಗೆ ನೋಡುವನು ಹರೀಶ ಸುಮ್ಮನೆ ಮೊಣಕಾಲ ಚಿಪ್ಪಿನಲ್ಲಿ ಮುಖ ಹುದುಗಿಸಿ ಸುಮ್ಮನೆ
ಕೂತಿರುವನು. ದರ್ಶನ ಕೆಮ್ಮಿ ಶಬ್ಧ ಮಾಡಿದರೂ ಏನೂ ಪ್ರತಿಕ್ರಿಯೆಯಿಲ್ಲ. ಹಾಗೇ ಖಾಲಿ ಗೋಡೆಯ ಮೇಲೆ
ಏನೇನೋ ವಿಡಿಯೋಗಳನ್ನು ಪ್ರೊಜೆಕ್ಟ್ ಮಾಡುತ್ತಾ ವಿಡಿಯೋಗಳನ್ನು ರಿವೈಂಡ್ ಮಾಡುತ್ತಿರಲು ಯಾವುದೋ ಹುಡುಗಿಯ
ಬಾಯಿಯಿಂದ ವಿಷವು ಬಾಟಲಿಗೆ ವಾಪಾಸು ಹೋಗುವುದು, ಕಣ್ಣೀರು ಕೆನ್ನೆಯಿಂದ ಕಣ್ಣಿಗೆ ವಾಪಾಸು ಏರುವುದು
ಚಿಕ್ಕ ಬಾಟಲಿಯ ಮುಚ್ಚುಳವನ್ನು ಮುಚ್ಚುವಳು. ದರ್ಶನ ಅದನ್ನು ನೋಡುತ್ತಾ ಆನಂದಿಸುತ್ತಾ ಇನ್ನೂ ವೇಗವಾಗಿ
ರಿವೈಂಡ್ ಮಾಡುವನು. ಒಬ್ಬ ತನ್ನ ವಯಸ್ಸಿನವನೇ ಹರಿದ ಬನಿಯನ್ನಿನ ನೆಲಕ್ಕುರುಳಿದ್ದ ಹುಡುಗನೊಬ್ಬನ
ಹರಿದ ಕೈಯ ನರದೊಳಕ್ಕೆ, ನೆಲಕ್ಕೆ ಚೆಲ್ಲಿದ್ದ ಕೆಂಪು ರಕ್ತವು ಸರ್ರರ್ರನೆ ಒಳನುಗ್ಗುವುದು. ನೆಲಕ್ಕುರುಳಿದ್ದವನು
ಎದ್ದು ಚಾಕು ಕೈಯಲ್ಲಿ ಹಿಡಿಯುವನು. ಹರೀಶನೂ ಓರೆಗಣ್ಣಿನಲ್ಲಿ ಗೋಡೆಯ ಕಡೆಗೆ ನೋಡುತ್ತಿರುವುದನ್ನು
ಕಂಡು ಇನ್ನಷ್ಟು ನುಂಗಿದ್ದ ಮಾತ್ರೆ ಹೊರಬರುವ, ರೈಲಿನ ಹಳಿಯ ಮೇಲೆ ಛಿದ್ರವಾಗಿದ್ದವ ಎದ್ದು ನಿಲ್ಲುವುದು,
ಬೆಟ್ಟದ ಮೇಲೆಕ್ಕೆ ಉಲ್ಟಾ ಜಿಗಿಯುವುದನ್ನು ತೋರಿಸುತ್ತಾ ಹೇಯ್ ಹರಿ ಇದು ನೋಡೋ, ಅದು ನೋಡೋ ಎಂದು
ಗಂಭೀರವಾಗೇ ನೋಡುತ್ತಲಿದ್ದ ಹರೀಶನಿಗೆ ತೋರಿಸುತ್ತಾ ದರ್ಶನ ತಾನು ಮಾತ್ರ ನಗುತ್ತಲಿರುವನು. ಅಷ್ಟರಲ್ಲಿ
ಯಾರೋ ಕಾಲು ಕಾಲಿನಲ್ಲಿ ಒದೆಸಿಕೊಳ್ಳುತ್ತಿರುವ ಹುಡುಗನ ದೃಶ್ಯವೊಂದು ಬರುತ್ತದೆ. ತಕ್ಷಣ ರಿವೈಂಡ್
ನಿಲ್ಲಿಸಿ ಸ್ಥಗಿತಗೊಳಿಸಿ ದರ್ಶನ ಮತ್ತೆ ಹಲ್ಲುಬಿಡುವನು. ಹ ಹ ಹ ಇವನು ಯಾರು ಗೊತ್ತಾ, ನನ್ನ ಸ್ಕೂಲ್
ಸ್ನೇಹಿತ ಕಣೋ ಮಗಾ. ಇವನ ಕಥೆ ನೋಡು ಎಂದು ವಿಡಿಯೋ ಮುಂದುವರೆಸುವನು. ಒಬ್ಬ ಧಡೂತಿ ಹೊಟ್ಟೆ ಹೊತ್ತ
ಮನುಷ್ಯನಿಂದ ಹಿಗ್ಗಾ ಮುಗ್ಗಾ ಥಳಿಸಿಕೊಳ್ಳುತ್ತಿರುವ ಸಣಕಲು ಹುಡುಗನನ್ನು ಕಂಡರೇ ನೋಡುವವರಿಗೆ ಮೊದಲಿಗೆ
ಹಾಸ್ಯದೃಶ್ಯವೆನಿಸದೇ ಇರಲಾರದು.
ಮಗಾ ಅವನು ನನ್ನ ಸ್ಕೂಲ್ ಫ್ರೆಂಡು ಅವನ ಕಥೆ ಏನು ಗೊತ್ತಾ
ಎ ಬಿ ಸಿ ಡಿ ಕೂಡ ಝಡ್ ವರೆಗೂ ಬರೆಯೋಕೆ ಬರುತ್ತಿರಲಿಲ್ಲ ಅವನಿಗೆ ಎಲ್ಲಾ ಪರೀಕ್ಷೆನಲ್ಲೂ ಸೊನ್ನೆ,
ಎರಡು ಹೆಚ್ಚೆಂದರೆ ಐದು ಕನ್ನಡದಲ್ಲಿ ಹ ಹ ಹ. ಪ್ರತೀ ಬಾರಿ ಮಾರ್ಕ್ಸ್ ಕಾರ್ಡ್ ಹಿಡಿದು ಅಪ್ಪನ ಮುಂದೆ
ನಿಲ್ಲುತ್ತಲಿದ್ದ ಅವನಪ್ಪ ಮಿಲ್ಟ್ರೀ ನಿವೃತ್ತನಾಗಿದ್ದರಿಂದ ಗನ್ ಇರಲಿಲ್ಲವೇನೋ ಇದ್ದಿದ್ದರೆ ಢಮಾರ್
ಎನಿಸಿಬಿಡುತ್ತಿದ್ದ. ಪ್ರತಿಬಾರಿಯೂ ರೊಟ್ಟಿ ತಟ್ಟಿದ ಹಾಗೆ ತಟ್ಟುತ್ತಿದ್ದ ಇವನನ್ನ. ಈಗ ರೋಡುಗಳಲ್ಲಿ
ಹೋರ್ಡಿಂಗ್ಸ್ ನಲ್ಲಿ ಜಾಹೀರಾತುಗಳು ಕಾಣಿಸುತ್ತಾವಲ್ಲಾ ಅಂಥಾ ಎಷ್ಟೋ ಹೋರ್ಡಿಂಗ್ಸ್ ಇಟ್ಟುಕೊಂಡಿದ್ದಾನೆ.
ತಿಂಗಳಿಗೆ ಲಕ್ಷಾಂತರ ರೂಪಾಯಿ ಟರ್ನೋವರ್ ಇದೆ. ಆದರೆ ಒಂದು ವಿಷಯ ಗೊತ್ತಾ ಇವತ್ತಿಗೂ ಹತ್ತನೇ ತರಗತಿಯ
ಪರೀಕ್ಷೆ ಕಟ್ಟುತ್ತಲೇ ಇದ್ದಾನೆ ಅವನ ದಂಡ ಯಾತ್ರೆ ಮುಗಿಯಲ್ಲ ಅವನು ಸಮಾಜ ಶಾಸ್ತ್ರ ಪಾಸು ಮಾಡಲ್ಲಾ
ಹ ಹ ಹ ಹ ಹ ಹ ಹ ಎಂದು ಗಹಗಹಿಸಿ ನಗುವನು. ಹರೀಶ ಬಾಯಿ ಕಳೆದು ಖಾಲಿ ಗೋಡೆಯನ್ನೇ ನೋಡುತ್ತಲಿರುವನು.
ಇಬ್ಬರೂ ಥಟ್ಟನೆ ಮಾಯವಾಗಿಬಿಡುವರು.
*
* * * *
ಆಸ್ಪತ್ರೆಯಲ್ಲಿ ತುರ್ತುಚಿಕಿತ್ಸೆ ವಾರ್ಡಿನಿಂದ ಹೊರಗೆ ಬರುತ್ತಿದ್ದ
ಡಾಕ್ಟರನ್ನು ಹರೀಶನ ತಂದೆ ತಾಯಿಗಳು ತಡೆದು ಬಿಕ್ಕುತ್ತಲೇ ಹೇಗಿದ್ದಾನೆಂದು ಕೇಳುವರು. ಕರೆಂಟ್ ಟ್ರೀಟ್ಮೆಂಟ್
ಕೊಡುತ್ತಿರುವುದಾಗಿ ಈಗಲೇ ಏನೂ ಹೇಳಲಾಗುವುದಿಲ್ಲ, ದಯವಿಟ್ಟು ತಾಳ್ಮೆಯಿಂದಿರಿ ನಮ್ಮ ಕೈಲಾದ ಪ್ರಯತ್ನ
ನಾವು ಮಾಡ್ತೇವೆ ಎಂದು ನಿಲ್ಲದೇ ಹೊರಗೆ ನಡೆಯುವರು. ಬಿಳಿಬಟ್ಟೆಯಲ್ಲಿ ಅರ್ಧ ಮುಚ್ಚಿದ್ದ ಹರೀಶನ ದೇಹವು
ಕತ್ತಿನ ಸುತ್ತ ಬಂದಿದ್ದ ಕಪ್ಪು ಕಲೆಯೊಂದಿಗೆ ಜೀವನ ರೇಖೆ ನೇರವಾಗುವುದು ವಕ್ರವಾಗುವುದು ಹಾಗೇ ಸಾಗುತ್ತಲಿದೆ.
ಆಗಾಗೊಮ್ಮೆ ಕೈ ಬೆರೆಳುಗಳನ್ನ ಅಲುಗಿಸುತ್ತಾನೆ. ಕೋಮಾಗೆ ಹೋಗಿರಬಹುದೆಂದು ನರ್ಸ್ ಗಳು ಮಾತನಡಿಕೊಳ್ಳುವರು.
ವಿಶೇಷಜ್ಞರು ಬರುವವರೆಗೂ ಜೀವ ಹೋಗದಿದ್ದರೆ ಸಾಕೆಂದು ಆಸ್ಪತ್ರೆಯ ಸಿಬ್ಬಂದಿಯೂ ಕೇಳಿಕೊಳ್ಳುತ್ತಿಹರು.
ಎದೆ ಬಡಿತ, ದೇಹದೊಳ ಆಗಿರಬಹುದಾದ ರಕ್ತ ಸ್ರಾವವನ್ನೆಲ್ಲಾ ಪರೀಕ್ಷೆಗೆ ಒಳಪಡಿಸಿ ರಿಪೋರ್ಟಿಗಾಗಿ ಕಾಯುತ್ತಿರುವ
ವೈದ್ಯರ ಮುಖ ಮುಖ ನೋಡುತ್ತಾ ಕಣ್ಣೊರೆಸಿಕೊಳ್ಳುತ್ತಿರುವ ಹರೀಶನ ಅಪ್ಪ ಅಮ್ಮ. ಹರೀಶ ಮತ್ತು ದರ್ಶನ
ಮತ್ತದೇ ರೂಮಿನಲ್ಲಿ ಕ್ಯಾಮೆರಾದೊಂದಿಗೆ ಪ್ರತ್ಯಕ್ಷರಾಗುತ್ತಾರೆ!
ನೀ.ಮ. ಹೇಮಂತ್
super hemanth.....unforgettable storry....
ReplyDeleteThank you Yogi.. Keep reading.. :-)
Deleteತುಂಬ ಚೆನ್ನಾಗಿದೆ ಸರ್ ....!!! ಈಗಿನ ಮಕ್ಕಳಿಗೆ ಬರಿ ಗೆಲ್ಲೋದನ್ನೇ ಹೇಳಿಕೊಟ್ಟು ಸೋಲನ್ನು ಹೇಗೆ ಎದುರಿಸ ಬೇಕು ಅನ್ನೋದು ಗೊತ್ತಾಗಲ್ಲ...!!ಆಗ ಅವರಿಗೆ ಸುಲಬದ ದಾರಿ ಅಂದರೆ ಆತ್ಮಹತ್ಯೆ ..!! ಒಳ್ಳೆ motivational & inspirational story..!!!!
ReplyDeleteಹಾ ಹೌದು ಯಾವುದೇ ಸೋಲು ಅಂತಿಮವಲ್ಲವಷ್ಟೇ.. ತುಂಬಾ ಥಾಂಕ್ಸ್ ರೀ ಓದಿ ವಿಚಾರ ಮಾಡಿದ್ದಕ್ಕೆ.. :-)
Deleteವ್ಹಾ.... ಸೂಪರ್. ಕಥೆಯ ಎಳೆ ಮೊನ್ನೆಯ ಎಸ್ಸೆಸ್ಸಲ್ಸಿ ಫಲಿತಾಂಶ ಅಂತ ಭಾವಿಸುತ್ತೇನೆ. ನಿಜಕ್ಕೂ ಆಶ್ಚರ್ಯ ಆಗುತ್ತಿದೆ. ಸಣ್ಣ ಪುಟ್ಟ ಒಂದೆಳೆ ವಿಚಾರಗಳಿಗೆ ಇಷ್ಟು ಚೆನ್ನಾಗಿ ಬಣ್ಣ ಬಳಿಯುತ್ತೀರಲ್ಲ......... ಅದ್ಭುತ. ನಿರೂಪಣೆ ಮತ್ತು ಕಥೆಯ ಶೈಲಿ ತುಂಬಾ ಚೆನ್ನಾಗಿದೆ. ಸಲಾಂ...
ReplyDeleteಒಂದು ಚಿಕ್ಕ ಎಳೆಗಾಗಿ ಕಣ್ಣು ಬಾಯಿ ಕಿವಿಗಳನ್ನು ತೆರೆದು ಬಕಪಕ್ಷಿಗಳಂತೆ ನನ್ನೊಳಗಿನ ಕಥೆಗಾರ ಕಾಯುತ್ತಿರುತ್ತಾನೆ. ಸಿಕ್ಕದ್ದೇ ಬಡಿದು ಬಾಯಿಗೆ ಹಾಕಿಕೊಂಡು ಬಿಡುತ್ತೇನೆ. ಹಹಹಹಹ.. ವಂದನೆಗಳು ಗೆಳೆಯ ಓದಿ ವಿಚಾರ ಮಾಡಿದ್ದಕ್ಕೆ.. :-)
Delete