ಓದಿ ಓಡಿದವರು!

Saturday 7 April 2012

ಡಾನ್ ಗಂಗಮ್ಮ!


       ಲ್ಲಾ ಬಿಡಿ! ಈಕೆ ಪಾಪ ಈ ಕಸುಬಿಗೆ ತನ್ನಿಚ್ಛೆಯಿಂದ ಬಂದಿರಲಾರಳು. ಈ ಸಮಾಜವೆಂಬ ಪಾಪಿ ಮನುಷ್ಯನೇ ತುಂಬಿರುವ, ಬೇರಾವ ಹುಲ್ಲುಕಡ್ಡಿಗೂ ಬದುಕಲು ಪರವಾನಗಿ ನೀಡದಿರುವ ಸಮಾಜವಿದೆಯಲ್ಲಾ ಅದೇ ಗಂಗಮ್ಮನಂತಹ ಅಮಾಯಕರನ್ನು ಈ ದಂಧೆಗೆ ಇಳಿಯಲು ಪ್ರೇರೇಪಿಸಿದ್ದು. ಅದಾವ ಮೂಲೆಯಲ್ಲಿ ಹುಲ್ಲು ತಿಂದುಕೊಂಡು ಹುಲ್ಲೆಯಂತೆ ಉಸಿರಾಡುತ್ತಿದ್ದಳೋ, ಈಗ ಇಲ್ಲಿ ಕುಳ್ಳಿರಿಸಿ ನೆಮ್ಮದಿಯಾಗಿ ಉಸಿರಾಡಲೂ ಸಹ ಸಮಯವಿಲ್ಲದಷ್ಟು ಬಿಜಿಯೆಂದರೆ ಬಿಜಿಯಾಗಿರುವಳು. ಇವಳನ್ನು ಈ ದರ್ಜೆಗೆ ತಂದಿರುವ ಮೂಲ ಪುರುಷ ವಿಟೋಬರಾಯ ಶಾಸ್ತ್ರಿ ಎಂಬ ಜುಟ್ಟು, ಜನಿವಾರ ಸಹಿತ ಜನ್ಮಿಸಿದ ರೌಡಿಯು. ಗಂಗಮ್ಮ ಎಂಬ ಚಿರತೆಗೆ ಶರಣು ಹೋಗುವ ಮುನ್ನ ಈತನು ಚಿಕ್ಕ ಪುಟ್ಟ ತನ್ನ ಶಕ್ತಿಗಾನುಸಾರ ಡೀಲ್ ಗಳನ್ನು ಮಾಡಿ ಸಿಕ್ಕಿದ್ದರಲ್ಲಿ ಗಂಜಿಯೋ, ಅಂಬಲಿಯೋ ಕುಡಿದು ಪುಟ್ ಪಾತ್ ಜೀವನ ಸಾಗಿಸುತ್ತಿದ್ದನು.

ಹೇಗೆ ತನ್ನ ಶೌರ್ಯ, ಪರಾಕ್ರಮ, ಸಾಮರ್ಥ್ಯವನ್ನು ಪ್ರಪಂಚಕ್ಕೆ ಸಾದರಪಡಿಸುವುದೆಂದು ಚಿಂತಿಸುತ್ತಾ, ಹಲವು ಬಗೆಯ ಕಲಾತ್ಮಕ ಮಾರ್ಗಗಳಲ್ಲಿ ‘ಡೀಲ್’ ಗಳಿಗೆ ಓಂ ಕಾರ ಹಾಡಿದರೂ ಯಾವುದೂ ಕೈಯಿಗೆ ಹತ್ತದೆ ‘ಫೀಳ್ಡ್’ನಲ್ಲಿ ಹೆಸರು ಮಾಡಲು ಸಾಧ್ಯವಾಗದೇ ಅದೇ ಪುಡಿ ರೌಡಿಯಾಗಿಯೇ ಬದುಕುತ್ತಿರುವ ಇಂತಹ ಸಂದರ್ಭದಲ್ಲೊಂದು ರಾತ್ರಿ ಮಾಡಿನ ರಂಧ್ರದಿಂದ ಇಣುಕುತ್ತಿದ್ದ ಹುಣ್ಣಿಮೆ ಚಂದ್ರನೆಂಬ ಅಪ್ರತಿಮ ದುಷ್ಟನ ಪ್ರೇರಣೆಯಿಂದಲೋ, ಒಡೆದ ಕಿಟಕಿ ಗಾಜಿನ ಸಂಧಿಯಿಂದ ಒಳನುಸುಳುತ್ತಿದ್ದ ವಿಷಪೂರಿತ ಗಾಳಿಯ ಕುಮ್ಮಕ್ಕಿನ ಸಹಾಯದಿಂದಲೋ ಹಾಗೇ ಕಣ್ಮುಚ್ಚಿದ್ದ ಶಾಸ್ತ್ರಿಯೆಂಬ ರೌಡಿಯ ನಿದ್ರೆಯೆಂಬ ಮಾಯಾಜಾಲದೊಳಗಿನ ಕನಸಿನ ಕೋಣೆಯಲ್ಲಿ ಥಟ್ಟನೆ ಪ್ರತ್ಯಕ್ಷಳಾದಳಂತೆ ‘ಫೀಲ್ಡ್’ ನಲ್ಲಿ ಈಗಾಗಲೇ ಭಾರೀ ಹೆಸರು ಮಾಡಿರುವ, ಅಪಾರ ಜನಸಾಗರದಲ್ಲಿ ಏಕಕಾಲಕ್ಕೆ ತನ್ನ ವರ್ಛಸ್ಸಿನಿಂದಲೇ ನಡುಕ ಹುಟ್ಟಿಸಿಬಿಡಬಲ್ಲ ಉಮಾಮಹೇಶ್ವರಿ ಉರುಫ್ ಶಕ್ತಿ ಉರುಫ್ ಮಾರಿ ಉರುಫ್ ದುರ್ಗಿ ಎಂಬಿವೇ ನೂರಾರು ಬಿರುದು ಪಡೆದಿರುವ ಡಾನ್. ಆಕೆಯನ್ನು ಕನಸಿನಲ್ಲಿ ಕಂಡಿದ್ದಕ್ಕೇ ಈ ಪುಡಿರೌಡಿ ತೇಪೆ ಚಾಪೆಯನ್ನು ಒದ್ದೆ ಮಾಡಿಕೊಂಡು, ಬಾಯೊಣಗಿಸಿಕೊಂಡು, ಮೈ ಪೂರಾ ನಡುಕ ಹುಟ್ಟಿಸಿಕೊಂಡು ತನ್ನ ಪ್ರಾಣಭಿಕ್ಷೆಗಾಗಿ ಅಂಗಲಾಚಿದಾಗ, ಪ್ರಸನ್ನಳಾದ ದುರ್ಗಿಯೆಂಬ ಮಾರಕಾಸ್ತ್ರ ಸಜ್ಜಿತ ಡಾನ್ ಹೊರಚಾಚಿದ್ದ ನಾಲಗೆಯನ್ನು ಒಳಗೆಳೆದುಕೊಂಡು ಕಿಸಿಕಿಸಿ ನಕ್ಕು ತನ್ನ ತಂಗಿ ಈಗತಾನೆ ಪಟ್ಟಕ್ಕೆ ಬಂದಿರುವುದಾಗಿ ಅವಳನ್ನು ತಾನು ತನ್ನಂತೆಯೇ ಡಾನ್ ಮಾಡಬೇಕೆಂದಿರುವುದಾಗಿ ಹೇಳಿ ಅದಕ್ಕೆ ಈ ಶಾಸ್ತ್ರಿಯಂತಹ ಪುಡಿರೌಡಿಯನ್ನು ಅನ್ವೇಷಿಸುತ್ತಿದ್ದಳಾಗಿ ಹೇಳಿದಳಂತೆ. ಇದಕ್ಕೆ ತನ್ನಿಂದ ಏನು ಸಹಾಯ ಬೇಕೆಂದು ಕೇಳಲು್, ಆಕೆಗೊಂದು ‘ಅಡ್ಡ’ ತಯಾರು ಮಾಡಬೇಕಾಗಿದೆ ಅದಕ್ಕೆ ತಾನೇ ಸಹಾಯ ಮಾಡುವುದಾಗಿ, ಶಸ್ತ್ರಿಯು ಕೇವಲ ಶಿಷ್ಯನಾಗಿ ಡೀಲ್ ಗಳನ್ನು ಅವಳ ಬಳಿಗೆ ಬರುವಂತೆ ಮಾಡಬೇಕೆಂದು ಹೇಳಿದಳಂತೆ. ಅಂತರರಾಷ್ಟ್ರೀಯ ಕುಖ್ಯಾತಿ ಪಡೆದಿರುವ, ಡಾನ್ ಗಳ ಡಾನ್ ಆಗಿರುವ ದುರ್ಗಿ ಆಜ್ಞಾಪಿಸಿದಳೆಂದರೆ ಒಲ್ಲೆನೆನ್ನುವ ಧೈರ್ಯ ಅದಾವ ಗಂಡರಗಂಡನ ಗಂಡಸ್ತನಕ್ಕಿದ್ದೀತು? ನವರಂಧ್ರಗಳನ್ನು ಮುಚ್ಚಿಕೊಂಡು ಒಪ್ಪಿಕೊಂಡನಂತೆ. ಮರುದಿನವೇ ನಗರದ ಹೃದಯಭಾಗದಲ್ಲಿಯೇ ಡಾನ್ ದುರ್ಗಿಯ ಶಿಫಾರಸಿನಿಂದಾಗಿ ಹಾಳು ಸ್ಥಳವೊಂದನ್ನು ಪಡೆದು, ಆಡಳಿತಕ್ಕೆ ಬೇಕಾದ ರೀತಿಯಲ್ಲಿ ಕೆಲವೇ ತಿಂಗಳುಗಳಲ್ಲಿ ಸಜ್ಜುಗೊಳಿಸಿ ಡಾನ್ ದುರ್ಗಿಯಲ್ಲಿದ್ದ ನ್ಯೂನತೆಯೆಂದರೆ ಆಕೆಯ ಭಯ ಹುಟ್ಟಿಸುತ್ತಿದ್ದ ಹೆಸರು ಮತ್ತು ವ್ಯಕ್ತಿತ್ವದಿಂದಾಗಿ ದೂರ ಉಳಿದಿದ್ದ ಕೆಲವರು ಮೃದು ಸ್ವಭಾವದವರನ್ನೂ ಗಮನದಲ್ಲಿಟ್ಟುಕೊಂಡು ಗಂಗಮ್ಮ ಎಂಬ ಸಾಧು, ಸಾತ್ವಿಕ ಹೆಸರು ಮತ್ತು ವೇಷಭೂಷಣವನ್ನು ಆರೋಪಿಸಿ ತನ್ನ ಕಛೇರಿಗೆ ಚಾಲನೆ ನೀಡಲಾಯಿತಂತೆ. ಇಂತಹ ಒಂದು ಸ್ವಕಪೋಲಕಲ್ಪಿತ ಕಥೆಯೊಂದನ್ನು ಈ ಅಂದಿನ ಪುಡಿರೌಡಿ ಇಂದಿನ ಗಂಗಮ್ಮನ ಬಲಗೈಬಂಟ ಶ್ರೀ ಶ್ರೀ ಶ್ರೀ ವಿಟೋಬರಾಯ ಶಾಸ್ತ್ರಿಯೆಂಬ ಸ್ಟೀಲ್ ಬಾಡಿ ಬಿಲ್ಡರನು ವಿವರ ಕೇಳಿಬಂದ ಸಮಸ್ತ ಮೀಡಿಯಾ ಮಿತ್ರರಿಗೆ ಘಂಟಾಘೋಷವಾಗಿ ತಿಳಿಸುತ್ತಾ, ಗಂಗಮ್ಮನ ಶಕ್ತಿ ಸಾಮರ್ಥ್ಯವನ್ನು ಹೊಗಳುವನು. ಅಲ್ಲದೇ ಸೂಚ್ಯವಾಗಿ ಡಾನ್ ದುರ್ಗಿಯ ಅಭಯ ಹಸ್ತ ತಮ್ಮ ಮೇಲಿರುವುದೆಂದು, ತಮ್ಮ ವೈರಿ ಡಾನ್ ದುರ್ಗಿಯ ವೈರಿಯೂ ಸಹ ಆಗುವರೆಂದು ಹೇಳಲು ಮೀಡಿಯಾ ದವರು ಗಾಂಧೀಜಿಯವರ ಮೂರು ಮಂಗಗಳ ಭಂಗಿಯಲ್ಲಿ ಅಷ್ಟೇ ಸೂಚ್ಯವಾಗಿ ನಮಸ್ಕರಿಸಿ ಹೊರಟುಹೋಗುವರು.

ಈ ಡಾನ್ ಗಳ ಕಾರ್ಯಕ್ಷೇತ್ರ ಅವಲಂಬಿತವಾಗಿರುವುದು ಕೇವಲ ಮಾನವರ ಸಮಸ್ಯೆಗಳೆಂಬ ಅಂಶದ ಮೇಲೆ. ಎಲ್ಲ ರೀತಿಯ ಸಮಸ್ಯೆಗಳಿಗೆ ತಮ್ಮ ಡಾನ್ ಬಳಿ ಉತ್ತರವಿರುವುದಾಗಿ ಬಲಗೈಬಂಟ ಫಟಿಂಗರು ಆಶ್ವಾಸನೆ ನೀಡುತ್ತಿದ್ದರು. ಈ ರಾಜಕೀಯ ಪುಡಾರಿಗಳೂ ಸಹ ಆಶ್ವಾಸನೆ ಕೊಡುವುದನ್ನ ಕಲಿತದ್ದು ಈ ಡಾನ್ ಗಳ ಆಶೀರ್ವಾದದಿಂದಲೇ. ಪ್ರತಿಯೋರ್ವ ಮಂತ್ರಿಯೂ ಒಂದಲ್ಲಾ ಒಂದು ಡಾನ್ ಆಸರೆಯಲ್ಲೇ ಮೇಲಕ್ಕೇರಿರುವುದು, ಮತ್ತು ಅಧಿಕಾರದಲ್ಲುಳಿಯಲು ಕೊಟ್ಟಿರುವ ಕಪ್ಪಕಾಣಿಕೆಗಳ(ಲಂಚ) ವಿವರಗಳು ಕೇವಲ ಈ ಬಲಗೈಬಂಟರಿಗೆ ಮತ್ರ ಗೊತ್ತಿರುವ ಅತಿಸೂಕ್ಷ್ಮ ಗೌಪ್ಯ ಸಂಗತಿ. ಈ ಡಾನ್ ಗಂಗಮ್ಮ ಕಾರ್ಯಪ್ರವೃತ್ತಳಾಗಿರುವಳೆಂದು ಸಮಸ್ತ ಜನತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿ ಮುಟ್ಟಿದಾಗ ಇಷ್ಟು ದಿನ ಹಿಂದಿನ ರಸ್ತೆಯಲ್ಲಿರುವ ಡಾನ್ ಮಾರಿಗೆ ಮಾಮೂಲುಗಳನ್ನು ಸಲ್ಲಿಸಿ ನಡೆದುಕೊಳ್ಳುತ್ತಿರುವರಾದ್ಧರಿಂದ ಈಗ ಯಾರಿಗೆ ಮಾಮೂಲುಗಳನ್ನು ಸಲ್ಲಿಸುವುದೆಂದು ಗೊಂದಲಕ್ಕೊಳಗಾಗುವರು. ನಾಲ್ಕು ಹೆಜ್ಜೆ ದೂರವಾದರೂ ಸರಿಯೇ ತಮ್ಮ ಇಷ್ಟು ದಿನದ ಸಮಸ್ಯೆಗಳ ಪರಿಹಾರದ ಆಶ್ವಾಸನೆಯ ಹೊಣೆಹೊತ್ತಿರುವ ಡಾನ್ ಮಾರಿಗೋ, ಪಕ್ಕದ ಬೀದಿಯ ಡಾನ್ ಕಾಳಿಗೋ ಹೋಗುವುದೇ ಲೇಸೆಂದು, ಅಕಸ್ಮಾತ್ ದಾರಿ ಬದಲಿಸಿದರೆ ಏನು ಅಚಾತುರ್ಯವೆಸಗುವುದೋ, ಅವರುಗಳ ಕೋಪ ಶಮನ ಮಾಡುವ ಶಕ್ತಿ ತಮ್ಮಂತಹ ನರಕಿತ್ತವರಲ್ಲೆಲ್ಲಿದೆ ಎಂದು ಸಮಸ್ತರೂ ಹಳೆಯ ಮಾರ್ಗವನ್ನೇ ಹಿಡಿಯುವರು.

ಅರೆ! ಇಷ್ಟೆಲ್ಲಾ ಶ್ರಮವಹಿಸಿ, ಆಕರ್ಷಕ ಕೊಡುಗೆಗಳನ್ನು ಕೊಟ್ಟು, ಜಾಹಿರಾತುಗಳನ್ನೂ ನೀಡಿದರೂ ಒಬ್ಬ ನರಮನುಷ್ಯನೆಂಬೋ ನರಮನುಷ್ಯನು ಒಳಗೆ ಬರದಿದ್ದುದನ್ನು ಕಂಡು ಕರ್ಚಾಗದ ಪ್ರಸಾದಕ್ಕೆ ಬರುತ್ತಿದ್ದ ನೊಣವನ್ನು ಓಡಿಸುತ್ತಾ, ಸ್ಟೀಲ್ ಬಾಡಿಬಿಲ್ಡರನ ತೋಳಿನಲ್ಲಿನ ರಕ್ತದ ಮಟ್ಟ ಪರೀಕ್ಷಿಸುತ್ತಿದ್ದ ಸೊಳ್ಳೆಯನ್ನು ಹೊಡೆಯತ್ತಾ ಕುಳಿತ್ತಿದ್ದಂತ ಸಂದರ್ಭದಲ್ಲಿ ತಲೆಗೆ ಹೊಸ ಯೋಜನೆಯೊಂದು ಹೊಳೆದು ಸುತ್ತ ಮುತ್ತಲ ಸಮಸ್ತ ಬಲಗೈ ಎಡಗೈ ಭಂಟರನ್ನು ಆಮಂತ್ರಿಸಿ ಒಂದು ಮೀಟಿಂಗ್ ಆಯೋಜಿಸುವನು. ಎಲ್ಲರೂ ಬದುಕಬೇಕು, ಆದಕ್ಕೇ ತಾವೆಲ್ಲರು ಕೈಜೋಡಿಸಬೇಕು, ಒಮ್ಮತದಿಂದ ದುಡಿದರೆ ಮಾತ್ರ ತಮ್ಮ ಡಾನ್ ಗಳು ದೀರ್ಘಕಾಲ ಚಲಾವಣೆಯಲ್ಲಿರಲು ಸಾಧ್ಯ ಇಲ್ಲವಾದಲ್ಲಿ ತಮ್ಮ ಬದುಕು ಪ್ರಶ್ನಾರ್ಥಕವಾಗುವಲ್ಲಿ ಯಾವ ಸಂಶಯವೂ ಇಲ್ಲ ಎಂದು ಎಲ್ಲರ ಮುಂದೆ ನಿಂತು ಕೊರೆದದ್ದನ್ನ ಸಮಸ್ತ ಬಲಗೈಭಂಟರೂ ಒಕ್ಕೊರಲಿನಿಂದ ಸಹಮತ ವ್ಯಕ್ತಪಡಿಸಿದ್ದೂ ಅಲ್ಲದೆ ಎಲ್ಲರೂ ಸೇರಿ ಹೊಸ ಡಾನ್ ಳಿಗೆ ಅಮೋಘ ಚಾಲನೆ ನೀಡುವಲ್ಲಿ ಸಹಕರಿಸುವುದಾಗಿ ಪ್ರಮಾಣ ತೆಗೆದುಕೊಂಡರು. ಅಂದಿನಿಂದ ಯಾವುದೇ ‘ಅಡ್ಡ’ಕ್ಕೆ ಯಾವುದೇ ಸಮಸ್ಯೆಯ ಅಹವಾಲಿನೊಂದಿಗೆ ಬರುತ್ತಿದ್ದ ಜನರನ್ನು ಹೊಸ ಡಾನ್ ಗಂಗಮ್ಮನಿಗೂ ಮಾಮೂಲು, ಹಫ್ತಾ ನೀಡಿ ನಡೆದುಕೊಂಡರೆ ಸಮಸ್ಯೆಗಳು ಶೀಘ್ರ ಪರಿಹರಿಪುದೆಂದು, ಅದರಿಂದ ತಮ್ಮ ಡಾನ್ ಯಾವುದೇ ರೀತಿಯಲ್ಲಿ ಬೇಸರಿಸುವುದಿಲ್ಲೆಂದು ಎಲ್ಲಾ ಅಕ್ಕತಂಗಿಯರಂತೆ, ಒಂದೇ ಸಂಸಾರವೆಂದು ಹೇಳಿ ಉತ್ತೇಜಿಸುವರು. ಅಂದಿನಿಂದ ಕ್ರಮೇಣ ಜನರೆಂಬೋ ಜನರು ಮೂರು ಡಾನ್ ಗಳ ಕಾಲಿಗೆ ಬೀಳುತ್ತಿದ್ದವರು ಮತ್ತೊಂದು ಸೇರಿಸಿಕೊಂಡು ನಾಲ್ವರಿಗೂ ಅಡ್ಡಡ್ಡ ಉದ್ದುದ್ದ ಬೀಳಲು ಶುರುಮಾಡಿದರು.

ಸುತ್ತಮುತ್ತೆಲ್ಲಾ ಡಾನ್ ಗಳಿಗಿಂತ ಬಹು ಬೇಗ ಪ್ರಸಿದ್ಧಳಾದ ಗಂಗಮ್ಮ ತನ್ನ ಬಳಿ ಬರುತ್ತಿದ್ದ ಸಮಸ್ತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಳು. ಹೇಗೆ ಎಂಬುದೊಂದು ಯಕ್ಷಪ್ರಶ್ನೆಯಾಗಿದ್ದರೂ ಪ್ರಶ್ನೆ ಮಾಡುವ ಧೈರ್ಯ ಹುಲುಮಾನವರಿಗೆಲ್ಲಿಂದ ಬರಬೇಕಿತ್ತು. ಉಗುರುಸುತ್ತಾಗಲಿ, ಜ್ವರ ಬರಲಿ, ಕೆಟ್ಟ ಕನಸು ಬೀಳಲಿ, ಹಲ್ಲಿ ಯಾವುದೋ ಮೂಲೆಯಲ್ಲಿ ಲೊಚಗುಟ್ಟಲಿ, ಬೀದಿಯ ತುದಿಯಲ್ಲಿ ನಾಯಿ ಸಮಯವಲ್ಲದ ಸಮಯದಲ್ಲಿ ಊಳಿಡಲಿ, ಕೈತಗುಲಿ ಕುಂಕುಮ ಚೆಲ್ಲಲಿ, ಗಾಳಿಗೆ ದೀಪ ನಂದಲಿ, ಮರೆತು ಎಡಗಡೆಯಿಂದ ಎದ್ದೇಳಲಿ, ಅಕಸ್ಮಾತ್ ಗೂಬೆಯೊಂದು ಎಲ್ಲಿಂದಲೋ ಬಂದು ತಮ್ಮ ಮನೆಯ ಮೇಲೆ ವಿಶ್ರಮಿಸಲಿ, ಅಚಾತುರ್ಯದಿಂದ ಬಟ್ಟೆಗೆ ಬೆಂಕಿ ತಗುಲಲಿ, ಹಲ್ಲಿ ಕಾಲ್ಜಾರಿ ಅಡಿಯಿಂದ ಮುಡಿಯವರೆಗೆ ಯಾವುದೇ ಸಾಮಾನಿನ ಮೇಲೆ ಬೀಳಲಿ, ಭಾರತ ಕ್ರಿಕೆಟ್ ಪಂದ್ಯ ಸೋಲುವ ಪರಿಸ್ಥಿತಿಯಲ್ಲಿರಲಿ, ತಮ್ಮ ನೆಚ್ಚಿನ ನಾಯಕನ ಸಿನೆಮಾ ಒಂದು ತೆರೆಕಾಣುವುದರಲ್ಲಿರಲಿ, ಪುಡಾರಿಯೋರ್ವನ ಮತದಾನ ಎಣಿಕೆ ನಡೆಯುತ್ತಿರಲಿ, ಸಿನಿಮಾದ ಮುಹೂರ್ತವಿರಲಿ, ಮದುವೆ ಮುಂಜಿಗಳಲ್ಲಿ ಮೂಗಿನವರೆಗೂ ತಿಂದು ಬೇಧಿ ಕಿತ್ತುಕೊಳ್ಳಲಿ, ಹೆಂಡತಿ ಹೊಟ್ಟೆಯಲ್ಲಿ ಗರ್ಭ ತುಂಬಿಕೊಳ್ಳಲಿ, ವಯಸ್ಸಾದ ಅಜ್ಜಿ ನರಳುತ್ತಿರಲಿ, ಮಗುವಿಗೆ ಹೆಸರಿಡುವುದಕ್ಕಿರಲಿ, ಎಲ್ಲ ರೀತಿಯ ಗಾಢವಾದ, ತೀಕ್ಷ್ಣವಾದ, ವೈಚಾರಿಕವಾದ, ಮಾನವರಂತಹ ಬಲಾಢ್ಯ ಪ್ರಾಣಿಗೆ ಬಗೆಹರಿಸಲು ಸಾಧ್ಯವೇ ಇಲ್ಲದ ಬಹು ದೊಡ್ಡ ಉದಾಹರಿಸಿದಂತಹ ಸಮಸ್ಯೆಗಳಿಗೆ ಇದ್ದದ್ದೊಂದೇ ಉತ್ತರ ಗಂಗಮ್ಮ. ವಿಧ ವಿಧದ, ವರ್ಣರಂಜಿತ, ರಿಯಾಯಿತಿ ಬೆಲೆಯಲ್ಲಿ ಶಕ್ತ್ಯಾನುಸಾರ ದಕ್ಷಿಣೆಯೊಂದನ್ನು ತಟ್ಟೆಯ ಅಡಿಯಲ್ಲೋ, ಮರೆಯಲ್ಲೋ ಕೋಡ್ವರ್ಡಿನೊಂದಿಗೆ ಹೇಳಿ ಭಂಟರಿಗೆ ಡೀಲ್ ಒಪ್ಪಿಸಿದರೇ ಮುಗಿಯಿತು ನಿಶ್ಚಿಂತೆಯಾಗಿ ಮನೆಗೆ ಮರಳುವಷ್ಟರಲ್ಲಿ ಗಂಗಮ್ಮನ ಪವಾಡ ನಡೆದಿರುತ್ತಿತ್ತು. ಈಕೆ ಕೆಲಸವಿಲ್ಲದವರಿಗೆ ಕೆಲಸ ಕೊಡಿಸುತ್ತಿದ್ದಳು, ಕನಸಿಲ್ಲದವರಿಗೆ ಕನಸು ಕೊಡುತ್ತಿದ್ದಳು, ಮನಸಿಲ್ಲದವರಿಗೆ ಮನಸು ಕೊಡುತ್ತಿದ್ದಳು, ಮದುವೆ ಮಾಡಿಸುತ್ತಿದ್ದಳು, ಮಕ್ಕಳು ಕೂಡ ಮಾಡಿಸುತ್ತಿದ್ದಳು, ಬೊಕ್ಕತಲೆಯವರಿಗೆ ಕೂದಲು ಕೊಡಿಸುತ್ತಿದ್ದಳು, ಹಲ್ಲುದುರಿರುವರಿಗೆ ಮತ್ತೆ ಹಲ್ಲುಸೆಟ್ಟು ಹಾಕಿಸುತ್ತಿದ್ದಳು, ಯೌವ್ವನ ಕುಂದಿದ್ದವರಿಗೆ ಹುರುಪು ನೀಡುತ್ತಿದ್ದಳು ಒಟ್ಟಿನಲ್ಲಿ ಸಾಮಾನ್ಯ ಮಾನವರಿಗಿಂತ ವೈಜ್ಞಾನಿಕವಾಗಿ ಮುನ್ನೂರು ವರ್ಷವಾದರೂ ಮುಂದಕ್ಕೆ ಯೋಚಿಸುತ್ತಿದ್ದಳು. ಮೆಷಿನ್ ಗನ್ನೂ, ಅಣು ಬಾಂಬೂ ಸಾಮಾನ್ಯರ ಕೈಲಿ ಕೊಟ್ಟು ತಾನು ಮಾತ್ರ ಇನ್ನೂ ಕೈಯಲ್ಲಿ ಅದೇ ಹಳೆಯ ಗುಜರಿ ತುಕ್ಕು ಹಿಡಿದ ಚಾಕು ಚೂರಿ ಅಸ್ತ್ರಗಳನ್ನು ಇಟ್ಟುಕೊಂಡಿದ್ದಳು. ಈಕೆ ದುಡಿದದ್ದನ್ನ ಯವನೂ ಸಹ ನೋಡಿರಲಿಲ್ಲ. ಅಹವಾಲನ್ನು ದುಡ್ಡು ಕಾಸಿನ ಸಮೇತ ಭಂಟರಿಗೆ ತಲುಪಿಸಿದರೆ ಗೌಪ್ಯವಾಗಿ ಆತ ಆದನ್ನು ಡಾನ್ ಬಳಿ ನಿವೇದಿಸಿ ಕಾರ್ಯಸಿದ್ದಿಯಾಗುವಂತೆ ಮಾಡುತ್ತಿದ್ದನು.

ಸರ್ಕಾರಗಳು ಉರುಳುತ್ತಿದ್ದವು, ಪಕ್ಷಗಳು ಬದಲಾಗುತ್ತಿದ್ದವು, ಹಳೆ ನೀರು ಕೊಚ್ಚಿ ಹೋಗುತ್ತಿತ್ತು, ಹೊಸ ನೀರು ಹರಿದುಬರುತ್ತಿತ್ತು ಗಡಿಯಾರ ತಿರುಗುತ್ತಲಿತ್ತು ಈ ಡಾನ್ ಗಳು ಮಾತ್ರ ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ತಣ್ಣಗೆ ತಮ್ಮ ಆಢಳಿತ ಮುಂದುವರೆಸುತ್ತಲೇ ಇದ್ದರು. ಎಷ್ಟಿದ್ದರೂ ರಾಜಕಾರಿಣಿಗಳೆಂಬ ಮನುಷ್ಯರು ಮನುಷ್ಯರೇ. ಕೊನೆಗೂ ಮನುಷ್ಯ ಬುದ್ದಿ ತೋರಿಸಿಯೇ ಬಿಟ್ಟರು. ತಮ್ಮ ಸರ್ಕಾರಗಳೇ ಉರುಳುತ್ತಿರುವಾಗ ಇವರ ಆಡಳಿತ ಯಾತಕ್ಕೆ ಸಾರ್ವಕಾಲಿಕವಾಗಿರಬೇಕೆಂದು ಕೆಲವು ನೊಂದ ಜೀವಿಗಳು, ಈ ಡಾನ್ ಗಳ ಬದ್ಧ ವೈರಿಗಳೂ ಆಗಿದ್ದ ಮಂದ ಬುದ್ಧಿಯವರನ್ನೂ ಸೇರಿಸಿಕೊಂಡು ಪಿತೂರಿ ಮಾಡಿ, ಎಲ್ಲಾ ಪಕ್ಷದವರೂ ಕೈಜೋಡಿಸಿ ಸರ್‍ರ್‍ರ್‍ರ್‍ರ್‍ರ್‍ರ್‍ರ್‍ರ್‍ರ್‍ರನೆ ಫ್ಲೈ ಓವರ್, ಕಾಂಪ್ಲೆಕ್ಸ್, ಮೆಟ್ರೋ ರೈಲನ್ನು ಈ ಡಾನ್ ಗಳ ಮೇಲೆ ರಾತ್ರೋ ರಾತ್ರಿ ಹರಿಸಿಯೇ ಬಿಟ್ಟರು. ಇಂದು ಈ ಎಷ್ಟೋ ದಶಕಗಳು ಆಳಿದ ಡಾನ್ ಗಳು ಕೇವಲ ದಂತಕತೆಗಳು ಮಾತ್ರ. ಅಳಿದುಳಿದಿರುವ ಡಾನ್ ಗಳು ಧೂಳು ತಿನ್ನುತ್ತಾ, ರಸ್ತೆ ರಸ್ತೆಯಲ್ಲಿ ತಿರುಪೆಯೆತ್ತುತ್ತಾ, ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಾ, ಸಾಕಲಾಗದೆ ಎಲ್ಲಾ ಸ್ಟೀಲ್ ಬಾಡಿ ಭಂಟರನ್ನೂ ಕಾಲಕ್ರಮೇಣ ಕಳೆದುಕೊಳ್ಳುತ್ತಾ ಅನಾಥವಾಗಿ ವಾಹನಗಳ ಧೂಳಿಗೆ ಸಿಕ್ಕೋ, ಜನಗಳ ನಿಟ್ಟುಸಿರು, ಕಫ, ಚಪ್ಪಲಿಗಳ ಗಬ್ಬುನಾತಕ್ಕೆ ಸಿಕ್ಕೋ, ಹಲವಾರು ರೋಗಗಳಿಗೆ ತುತ್ತಾಗಿ, ಕೈ, ಕಾಲು, ತಲೆಯಂತಹ ಹಲವು ಊನಮಾಡಿಕೊಂಡು ಅಂಗವಿಕಲರಾಗಿ ಕಣ್ಮರೆಯಾಗುತ್ತಿದ್ದಾರೆ. ಅವರುಗಳ ಮುಂದಿನ ಪೀಳಿಗೆ ಉಳಿಯಲು ಇರುವುದೊಂದೇ ದಾರಿ, ಚಾಕು, ಚೂರಿ, ಮಚ್ಚುಗಳಿಂದ ಪರಿವರ್ತನೆ! ಪರಿವರ್ತನೆ ಜಗದ ನಿಯಮ! 

                                                        - ನೀ.ಮ. ಹೇಮಂತ್

4 comments:

 1. ಹೇಮಂತ್ ನಿಮ್ಮ ಕಲ್ಪನಾಶಕ್ತಿಗೆ ಮತ್ತು ಪದಗಳನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸುವ ನಿಮ್ಮ ಶೈಲಿಗೆ ಒಂದು ನಮನ.. ಹೀಗೆಯೇ ಸಾಗಲಿ ನಿಮ್ಮ ಕಥೆಗಳ ಖೆಡ್ಡಾ...

  ReplyDelete
  Replies
  1. ಖಂಡಿತಾ.. ನಿರಂತರವಾಗಿ ಬರೆಯುವುದೊಂದೇ ನನ್ನಲ್ಲಿರುವ ಆಸ್ತಿ :-).. ಆಸಕ್ತಿವಹಿಸಿ ಓದುವ, ಓದಿದ ನಂತರ ಚಿಂತಿಸುವ, ವಿಮರ್ಶಿಸುವ ನಿಮ್ಮ ಆಸಕ್ತಿಗೆ ನನ್ನ ಸಾವಿರ ನಮನ... ಜೊತೆಯಲ್ಲಿ ಸಾಗೋಣ... ಧನ್ಯವಾದಗಳು...

   Delete
 2. ತುಂಬಾ ಚೆನ್ನಾಗಿದೆ ಹೇಮಂತ್ ಅವರೇ . ನಿಮ್ಮ ಕಲ್ಪನಾಶಕ್ತಿಗೊಂದು ಸಲಾಂ :-)

  ReplyDelete
  Replies
  1. ತುಂಬಾ ಥ್ಯಾಂಕ್ಸ್ ರೀ :-) ಓದಿದ್ದಕ್ಕೆ ಮತ್ತು ಬೆನ್ತಟ್ಟಿದ್ದಕ್ಕೆ :-)

   Delete