ಓದಿ ಓಡಿದವರು!

Thursday, 19 April 2012

ಧಿಕ್ಕಾರಾರ್ಹ ಗುರುವಿಗೆ!



ಧಿಕ್ಕಾರ ನಿಮಗಲ್ಲ. ನಿಮ್ಮಲ್ಲಿನ ಒಂದು ಗುಣಕ್ಕೆ. ನನ್ನ ಈ ಖಾರವಾದ ಮಾತುಗಳಿಂದ ನಿಮ್ಮ ಮನಸ್ಸಿಗೆ ನೋವಾಗುವುದು ಖಂಡಿತ. ನಾನು ಕ್ಷಮೆ ಕೇಳುವ ದುಸ್ಸಾಹಸ ಮಾಡುವುದಿಲ್ಲ. ಆದರೆ ಬರೆದು ನಿಮಗೆ ತಲುಪಿಸಿಯೇ ತೀರುತ್ತೇನೆ. ನನ್ನ ಮನಸ್ಸಿಗೆ ನಿಮ್ಮ ಇಂದಿನ ವರ್ತನೆಯಿಂದಾಗಿ ಅಪಾರವಾದ ಖೇದ ಉಂಟಾಗಿರುವುದು ಖಂಡಿತ. ಇನ್ನು ಮುಂದೆ ನೀವು ಯಾವ ವಿದ್ಯಾರ್ಥಿಯ ಭುಜದ ಮೇಲೆ ಕೈಹಾಕಿ ಸ್ನೇಹಪೂರ್ವಕವಾಗಿ ಮಾತನಾಡಿಸುವಾಗಲೂ ನಿಮ್ಮ ಕೈ ಏನನ್ನೋ ಹುಡುಕುತ್ತಿದೆ ಎಂದು ಭಾಸವಾಗುತ್ತದೆ. ಅದನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ. ನನ್ನ ಸ್ನೇಹಿತ ವೃಂದದವರು ನಿಮ್ಮನ್ನು ಏಕವಚನದಿಂದ ಕರೆದಾಗಲೆಲ್ಲಾ ಎಲ್ಲರ ಮೇಲೂ ಕೆಂಡ ಕಾರುತ್ತಿದ್ದೆ. ನಾನೇನೂ ಸಾಚಾ ಖಂಡಿತಾ ಅಲ್ಲಾ, ಇತರ ನನಗೆ ಇಷ್ಟವಾಗದ ಪ್ರಾಧ್ಯಾಪಕರನ್ನು ನಾನೂ ಸಹ ಏಕವಚನದಲ್ಲೇ ಸಂಬೋಧಿಸುವೆ. ಇದು ಕೇವಲ ವಿದ್ಯಾರ್ಥಿಗಳಿಗೆ ಪ್ರಾದ್ಯಾಪಕರ ಮೇಲಿರಬಹುದಾದ ಕೋಪ, ಯಾವುದೋ ಹಳೆಯ ವೈಶಮ್ಯ ಅಥವಾ ಹುಡುಗುಬುದ್ದಿಯ, ಹಾಗೆ ಸಂಬೋಧಿಸುವುದರಿಂದ ಸಿಗಬಹುದಾದ ವಿಕೃತವಾದ ತೃಪ್ತಿಯ ಪ್ರತೀಕವಷ್ಟೇ. ನಮ್ಮ ವರ್ತನೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ ಆದರೆ ಯಾರೆದುರಿಗೂ ಅಗೌರವ ಸೂಚಕವಾಗಿ ನಡೆದುಕೊಳ್ಳದಿರುವುದರಿಂದ, ಯಾರ ಮನಸಿಗೂ ಹಾನಿಯಾಗದಿರುವುದರಿಂದ ಅಂತಹ ದೊಡ್ಡ ಮೊತ್ತದ ತಪ್ಪೆಂದು ಪರಿಗಣಿಸುತ್ತಿಲ್ಲ.

ನಾನು ಕಾಲೇಜಿಗೆ ಸೇರಿ ಇದು ಮೂರನೇ ವರ್ಷ. ಇನ್ನು ಕೆಲವು ತಿಂಗಳಲ್ಲಿ ಈ ಕಾಲೇಜಿಗೆ ನಮಸ್ಕಾರ ಹೊಡೆದು ಹೊರೆಟು ಹೋಗುವವ. ಮೊದಲ ದಿನದ ನಿಮ್ಮ ಮೊದಲ ಉಪನ್ಯಾಸದಿಂದ ಹಿಡಿದು ಇಂದಿನ ಉಪನ್ಯಾಸದವರೆಗೂ ಎಲ್ಲಿ ಏನು ಹೇಗೆ ಕೇಳಿದರೂ ಕರಾರುವಾಕ್ಕಾಗಿ ವಿವರಿಸುವ ಶಕ್ತಿ ನನ್ನಲ್ಲಿದೆ. ಅದರ ಸಂಪೂರ್ಣ ಶ್ರೇಯ ನಿಮಗೇ ಸಲ್ಲಬೇಕಾದ್ದು. ನಿಮ್ಮ ಉಪನ್ಯಾಸದ ವೈಖರಿ ಹಾಗಿದೆ. ನೀವು ಪಾಠದ ಜೊತೆಗೆ ಹೇಳುತ್ತಿದ್ದ ನೀತಿ ಮಾತುಗಳನ್ನೂ ಸಹ ಪುಸ್ತಕದಲ್ಲಿ, ಮನಸ್ಸಿನಲ್ಲಿ ಬರೆದುಕೊಳ್ಳುತ್ತಿದ್ದೆ. ಎಲ್ಲವನ್ನೂ ನೆನೆಯುತ್ತಿರುತ್ತೇನೆ. ನನ್ನ ಅಪ್ಪ ಅಮ್ಮನ ನಂತರ ನನಗೆ “ರೋಲ್ ಮಾಡೆಲ್” ಎಂದು ಯಾರಾದರೂ ಇದ್ದರೆ ಅದು ನೀವೇ. ನನಗೆ ಗಣಿತ ಕಂಡರೆ ಗುಮ್ಮನನ್ನು ಕಂಡ ಹಾಗೆ ಅಗುತ್ತಿತ್ತು. ಪದವಿಗೆ ಸೇರುವ ಮುನ್ನ ಚೀಟಿಗಳು, ಪಕ್ಕದವನ ಉತ್ತರಪತ್ರಿಕೆಗಳು, ನೋಟ್ ಪುಸ್ತಕಗಳು, ಏನೆಲ್ಲಾ ಕಂತ್ರಿ ಕೆಲಸ ಮಾಡಲು ಸಾಧ್ಯವಿತ್ತೋ ಎಲ್ಲ ವಿದ್ಯೆಯನ್ನೂ ಉಪಯೋಗಿಸಿ ಪದವಿಪೂರ್ವದವರೆಗೂ ಗಣಿತದಲ್ಲಿ ಉತ್ತೀರ್ಣನಾಗುತ್ತಿದ್ದೆ. ನುಂಗಲಾರದ ಬಿಸಿತುಪ್ಪದಂತಿತ್ತು ಗಣಿತ. ಆ ಉಪಾಧ್ಯಾಯರುಗಳೂ ಹಾಗೇ ಇರುತ್ತಿದ್ದರು. ಪದವಿಯಲ್ಲಿ ನೀವು ಹೇಳಿಕೊಡುತ್ತಿದ್ದ ರೀತಿಗೇ ಗಣಿತ ಸುಲಲಿತವಾಗಿ ತಲೆಯೊಳಗಡೆ ಇಳಿದುಬಿಡುತ್ತಿತ್ತು. ನೀವು ಇಷ್ಟವಾದ್ದರಿಂದಲೋ ಅಥವಾ ಗಣಿತದ ಲೆಕ್ಕಗಳು ಪ್ರಪ್ರಥಮ ಬಾರಿಗೆ ಅರ್ಥವಾಗುತ್ತಿದ್ದುದರಿಂದಲೋ ನೀವು ಮತ್ತು ಗಣಿತ ಎರಡೂ ಅತಿ ಇಷ್ಟಪಡುವ ವಿಷಯಗಳಾಗಿ ಹೋಯ್ತು. ಕನಸಿನಲ್ಲೂ ಕೂಡ ಡಿಫರೆನ್ಶಿಯೇಶನ್, ಇಂಟಿಗ್ರೇಶನ್, ಟ್ರಿಗ್ನೋಮೆಟ್ರಿ ವಿಷಯಗಳು ಬರಲು ಶುರುಮಾಡಿದ್ದವು. ಅತಿದೊಡ್ಡ ಲೆಕ್ಕಗಳನ್ನು ಪಟಪಟನೆ ಬಿಡಿಸಿದ ಹಾಗೆ, ಸೈನ್ ಟೀಟಾ, ಕಾಸ್ ಟೀಟಾ, ಆಲ್ಫಾ ಗಾಮಾ ಗಾಳೆಂಬ ಅಪ್ಪಟ ಗಣಿತ ಶಬ್ಧಗಳ ಜೊತೆ ಕುಣಿತ ಮಾಡಿದ ಹಾಗೆ ಅನ್ನಿಸುತ್ತಲಿತ್ತು.

ನೀವು ವರ್ಷಕ್ಕೆ ಕನಿಷ್ಠ ಪಕ್ಷ ಐದು ಜನ ಬಡ ಹುಡುಗರನ್ನು ನಿಮ್ಮ ಸ್ವಂತ ಖರ್ಚಿನಲ್ಲಿ ಓದಿಸುತ್ತೀರೆಂಬ ವಿಷಯ ಕಿವಿಗೆ ಬಿದ್ದಾಗಲಂತೂ ನಿಮ್ಮ ಮೇಲೆ ಗೌರವ ಇಮ್ಮಡಿಗೊಂಡಿತ್ತು. ಆ ಅಷ್ಟೂ ಜನ ಹುಡುಗರು ನಿಮ್ಮ ಜಾತಿಯವರೇ ಆಗಿರುತ್ತಿದ್ದರೆಂದು ಹೇಳಿ ನಿಮ್ಮ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು, ನಿಮ್ಮ ಹೆಸರು ಹಾಳುಮಾಡಲು ಯಾರೋ ಕಾಲೇಜಿಗೆ ಹಬ್ಬಿಸಿದ್ದರು. ಮೈ ಉರಿಯುತ್ತಿತ್ತು. ನಮ್ಮ ತರಗತಿಯಲ್ಲೀ ನೀವು ನಂಬುತ್ತೀರೋ ಇಲ್ಲವೋ ಹುಡುಗ ಹುಡುಗಿಯರಲ್ಲಿ ಒಳಗೊಳಗೇ ಜಾತಿಯ ಆಧಾರದ ಮೇಲೆ ಗುಂಪುಗಳಿದ್ದವು. ಬೇರೆ ಜಾತಿಯವನನ್ನು ತಮ್ಮ ಗುಂಪಿನಲ್ಲಿ ಬಿಟ್ಟುಕೊಳ್ಳುತ್ತಲೂ ಇರಲಿಲ್ಲ. ಛೇ, ಎಷ್ಟೋ ಸಲ ಬೇಸರವಾಗುತ್ತಿತ್ತು ಕೊನೆಯ ಸಾಲಿನಲ್ಲಿ ಯಾರಗೊಡವೆಗೂ ಹೋಗದೆ ಇದ್ದುಬಿಡುತ್ತಿದ್ದೆ. ಧರಿದ್ರ ಅವರವರ ಅಪ್ಪ ಅಮ್ಮಂದಿರು ಕಲಿಸಿರುವ ಬುದ್ಧಿಯೇ ಬಂದಿರುತ್ತದೆಂದು ಅವರ ಪೋಷಕರನ್ನೂ ಸಹ ಶಪಿಸಿದ್ದೇನೆ. ನನ್ನ ಸಾಲಿನಲ್ಲಿ ಎಲ್ಲ ಜಾತಿಯ ಹುಡುಗರು ಕುಳಿತಿರುತ್ತಿದ್ದರು ಒಟ್ಟಿಗೆ ಊಟ ಮಾಡುತ್ತಿದ್ದೆವು. ವಿದ್ಯೆ ಕಲಿಯುವುದು ಅಂಕಗಳಿಸಲಿಕ್ಕಲ್ಲ, ಅಷ್ಟೇ ಉದ್ದೇಶವಾದರೆ ಕೂಲಿಮಾಡುವವರಿಗೂ ನಮಗೂ ವ್ಯತ್ಯಾಸವಿರುವುದಿಲ್ಲ, ವಿದ್ಯೆ ವೈಚಾರಿಕತೆಯನ್ನ ಬೆಳಸಬೇಕೆಂದು ನೀವು ಎಂದೋ ಹೇಳಿದ ಮಾತು ನೆನಪಾಗುತ್ತಿತ್ತು.

ನನ್ನ ಆಸಕ್ತಿ ಕಂಡು ನೀವು ಎರಡು ಅಪರೂಪದ ಪುಸ್ತಕಗಳನ್ನು ತಂದುಕೊಟ್ಟಾಗ ನನ್ನ ಕಣ್ಣಲ್ಲಿ ನೀರು ತಡೆಯಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಕುಣಿದು ಕುಪ್ಪಳಿಸಿದ್ದೆ. ನನ್ನ ಜೀವಮಾನದ ಅತಿಶ್ರೇಷ್ಠ ಉಡುಗೊರೆಯಾಗಿದ್ದವು ಅವು. ಇದುವರೆಗೂ ಮೂರು ಬಾರಿ ಓದಿದ್ದೇನೆ. ನೀವು ಕೊಟ್ಟ ಮೂರು ದಿನದವರೆಗೂ ಅವು ಮಲಗುವಾಗಲೂ ಸಹ ನನ್ನ ಕೈಯಲ್ಲೇ ಇರುತ್ತಿದ್ದವು. ಪ್ರತಿನಿತ್ಯ ತರಗತಿಯ ನಂತರ ನಿಮ್ಮ ಬಳಿ ಬಂದು ಹೊಸ ಲೆಕ್ಕವನ್ನು ನಿಮ್ಮೊಂದಿಗೆ ಚರ್ಚಿಸದಿದ್ದರೆ ಅಂದು ಏನೋ ಕಳೆದುಕೊಂಡ ಅನುಭವ. ನೀವು ನಿಮ್ಮ ಮಗಳ ವಿಷಯಗಳನ್ನೂ ಹಂಚಿಕೊಳ್ಳುವಾಗ ನಿಮಗೆ ನನ್ನ ಮೇಲೆ ಎಷ್ಟು ನಂಬಿಕೆ ಇತ್ತೆಂದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಆಸಕ್ತಿ, ಶ್ರದ್ಧೆ, ಆಸ್ಥೆ, ಉತ್ಸಾಹ, ಸನ್ಮಾರ್ಗದಲ್ಲಿದ್ದವರೆಲ್ಲರನ್ನೂ ನೀವು ಹೀಗೇ ನಡೆಸಿಕೊಳ್ಳುತ್ತಿದ್ದಿರಿ ನನಗೆ ಗೊತ್ತಿತ್ತು. ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುವ ಹೊಣೆ ನನ್ನ ಮೇಲಿತ್ತು. ಬೇರೆಲ್ಲಾ ವಿಷಯಗಳಲ್ಲಿ ೬೦, ೭೦ ಪಡೆಯುತ್ತಿದ್ದ ನಾನು ಗಣಿತದಲ್ಲಿ ೯೦ರ ಮೇಲೆ ಪಡೆಯುತ್ತಿದ್ದುದಕ್ಕೆ ನಿಮ್ಮ ಪ್ರೋತ್ಸಾಹ, ಸ್ಪೂರ್ತಿಯೇ ಕಾರಣ.

ಗೆಳೆಯರೆನಿಸಿಕೊಂಡವರು ನಿಮ್ಮ ಮಗಳನ್ನು ನನಗೆ ಕೊಡುವಿರೆಂದು, ಅದಕ್ಕೇ ನಿಮಗೆ ನನ್ನ ಮೆಲೆ ಅಷ್ಟು ಆಸಕ್ತಿ ಎಂದು, ನೀವು ನಾನು ಒಂದೇ ಜಾತಿಯವರಿರಬೇಕೆಂದೂ ಈ ರೀತಿಯಾಗಿ ಏನೇನೋ ಛೇಡಿಸುತ್ತಿದ್ದರು. ನಕ್ಕು ಸುಮ್ಮನಾಗುತ್ತಲಿದ್ದೆ. ನನಗೆ ಗೊತ್ತಿತ್ತು ಕಲಿಯುವ ಆಸಕ್ತಿಯಿದ್ದವರೆಲ್ಲರನ್ನೂ ನೀವು ಹೀಗೇ ಪ್ರೋತ್ಸಾಹಿಸುತ್ತಿದ್ದಿರೆಂದು. ಆದರೆ ಇಂದು ನೀವು ನಿಮ್ಮ ಕಛೇರಿಯಲ್ಲಿ ಆಡಿದ ಮಾತಿನಿಂದಾಗಿ ಇನ್ನೂ ಒತ್ತಿಬರುತ್ತಿರುವ ಹಲವಾರು ನಿಮ್ಮ ಸನ್ನಡತೆಯ ನೆನಪುಗಳು ಕಹಿ ಅನುಭವ ತರುತ್ತಿದೆ. ಮನೆಯಲ್ಲಿ ಈ ಭಾನುವಾರ **** ಪೂಜೆ ಇಟ್ಟುಕೊಂಡಿದ್ದೇನೆ. ನಮ್ಮ ಜಾತಿಯವರನ್ನ ಮಾತ್ರ ಕರೀತಿರೋದು, ಅಂದಹಾಗೆ ನಿನಗೆ ಉಪನ** ಆಗಿದೆಯೆ…. ಎಂದು ಮಾತನಾಡುತ್ತಲಿದ್ದ ನಿಮ್ಮ ಮಾತುಗಳು ನಿಜಕ್ಕೂ ಕಿವಿಯನ್ನು ಕೊರೆದುಕೊಂಡೇ ಹೋಗುತ್ತಿದ್ದವು. ಇಲ್ಲ ನಾನು ನಿಮ್ಮ ಜಾತಿಯವನಲ್ಲ ನಾನೊಬ್ಬ ಶೂಧ್ರನೆಂದು ಕೂಗಬೇಕೆನಿಸಿತು. ಆದರೆ ಯಾವ ಜಾತಿಯೂ ಮೇಲು ಕೀಳೆಂಬ ನಂಬಿಕೆ ನನ್ನಲ್ಲಿರಲಿಲ್ಲ. ನಾನು ವಿದ್ಯಾರ್ಥಿ ಜಾತಿಯಲ್ಲಿದ್ದೆ ಅಷ್ಟೇ. ನೀವು “ಗುರು” ಜಾತಿಯಲ್ಲಿದ್ದಿರಿ. ಬಾಯಿ ತೆರೆಯಲೂ ಸಾಧ್ಯವಾಗಲಿಲ್ಲ ನಿಮಗೆ ಹೇಳದೆಯೇ ಹೊರಟುಬಂದೆ.

ನಿಮ್ಮಂದ ಸಮಾಜಕ್ಕೆ ಉತ್ತಮ ನಾಗರಿಕರು, ಮಾನವತಾವಾದಿಗಳು ಹೊರಬರಬೇಕೇ ಹೊರತು, ಜಾತಿಪ್ರತಿನಿಧಿಗಳಲ್ಲ. ನನ್ನ ಸುತ್ತ ಇದ್ದ ಗೆಳೆಯರಲ್ಲಿನ ಮೂರ್ಖತನ ನಿಮ್ಮಲ್ಲೂ ಇತ್ತು. ನೀವೇ ಇನ್ನೂ ಕಲಿಯುವುದಿದೆ, ಇನ್ನು ನಮಗೇನು ಕಲಿಸಲು ಸಾಧ್ಯ. ನೀವು ಇಷ್ಟು ದಿನ ನನಗೆ ನೀಡಿದ ಎಲ್ಲ ರೀತಿಯ ಪ್ರೋತ್ಸಾಹ, ಗುರುಶಿಷ್ಯ ಸಂಬಂಧವಾಗಿರಲಿಲ್ಲವೇನೋ ಎಂದು ಈಗ ಅನುಮಾನ ಹುಟ್ಟುತ್ತಿದೆ. ನೀವು ಕೊಟ್ಟ ಪುಸ್ತಕವನ್ನು ಕೋಪಕ್ಕೆ ಸಿಲುಕಿ ತಿಪ್ಪೆಗೆ ಎಸೆದುಬಿಟ್ಟೆ. ಗಣಿತದ ಲೆಕ್ಕ ಒಂದೂ ಸರಿಯಾಗುತ್ತಿಲ್ಲ. ಅಂಕಗಳಿಗಾಗಿ ಪಾಠ ಮಾಡುವುದು ಮುಖ್ಯವಲ್ಲ, ನಿಮ್ಮಿಂದ ವೈಚಾರಿಕತೆಯನ್ನು ಹೊತ್ತ ಪ್ರಜೆಗಳು ಹೊರಬರಬೇಕಲ್ಲವೇ? ಹೀಗೆಲ್ಲಾ ಅವಾಚ್ಯವಾಗಿ ಮನಸು ಬೇಡವೆಂದರೂ ಯೋಚಿಸುತ್ತಲಿದೆ. ನೇರವಾಗಿ ಬರೆದಿದ್ದೇನೆ ಸಹ.

ಇನ್ನೂ ಅದೇ ಹಳಸು ಜಾತಿಗಳನ್ನು ಬೆಳೆಸುತ್ತಾ, ದೇಶದ ಉನ್ನತಿಯ ಲೆಕ್ಕಾಚಾರ ತಲೆಕೆಳಗು ಮಾಡುವ ಪ್ರಯತ್ನ ನಿಲ್ಲಿಸೋಣ. ದೇಶದ ಏಳಿಗಾಗಿಯಲ್ಲದಿದ್ದರೂ ಯಕ:ಶ್ಚಿತ್ ಮಾನವೀಯತೆಯ ಏಳಿಗೆಗಾಗಿಯಾದರೂ ಒಟ್ಟಾಗಿ ಕಲಿಯೋಣ, ದುಡಿಯೋಣ, ಬದುಕೋಣ. ಮೊದಲು ಮಾನವರಾಗೋಣ. ಇಂತಿ ನಿಮ್ಮ ಅವಿಧೇಯ, ಧಿಕ್ಕಾರಾರ್ಹ ಶಿಷ್ಯ.

***********

ಕಾಲೇಜಿನ ಪ್ರಿನ್ಸಿಪಾಲ್ ಕಛೇರಿಯಿಂದ ಫೋನ್ ಬಂದು ಅಪ್ಪ ಅಮ್ಮ ಕಛೇರಿಯಲ್ಲಿ ಪ್ರಾಂಶುಪಾಲರು, ಗಣಿತದ ನನ್ನ ಗುರುಗಳ ಜೊತೆ ದೊಡ್ಡ ವಾದ ವಿವಾದವೇ ನಡೆದಿತ್ತು. ಹೊರಗೆ ನನಗೆ ಕಾಲು ಕೈಗಳು ನಡುಗುತ್ತಲಿತ್ತು. ನನ್ನ ಬಳಿ ಮಾತನ್ನೂ ಆಡದೆ ನನ್ನನ್ನು ಕಾಲೇಜಿನಿಂದ ತೆಗೆದುಹಾಕುವರೆಂದು ನಿರ್ಧರಿಸಿದರಂತೆ. ನಾನು ಮಾಡಿದ್ದು ತಪ್ಪಾದರೆ ಅವರು ಮಾಡಿದ್ದು ಕೂಡ ತಪ್ಪೇ. ನಾನು ಕಾಲೇಜಿನಿಂದ ಹೊರಗಡೆ ಹೋಗುವಹಾಗಿದ್ದರೆ ಅವರೂ ಹೊರಗೋಗಬೇಕು. ನನ್ನ ತಪ್ಪಿಗೆ ಕಾರಣ ಅವರೇ ಎಂದು ಧಿಕ್ಕರಿಸುವುದರಲ್ಲಿದ್ದ ನನಗೆ ಅಪ್ಪನ ಕಪಾಳೆ ಮೋಕ್ಷ ಸುಮ್ಮನಾಗಿಸಿತು. ಇಡೀ ಕಾಲೇಜಿನಲ್ಲಿ ಹಾಗಂತೆ ಹೀಗಂತೆ ಎಂದು ಅಂತೆ ಕಂತೆಗಳಲ್ಲಿ ಸುದ್ದಿ ಹಬ್ಬತೊಡಗಿತು.

*********

ಪತ್ರ ತೆಗೆದುಕೊಂಡು ಇನ್ನೂ ಬಂದಿರದ ಗುರುಗಳ ಟೇಬಲ್ ಬಳಿ ಇಟ್ಟು ಬಂದೆ, ಮಾಮೂಲಿನಂತೆ ೯ ಘಂಟೆಯ ವೇಳೆಗೆ ತಮ್ಮ ವಿಭಾಗಕ್ಕೆ ಹೋದವರು ಮತ್ತೆ ಇನ್ನರ್ಧ ಘಂಟೆಯಲ್ಲಿ ಕಾಲೇಜಿನಿಂದ ಹೊರಟು ಹೋದರು. ಅದೇನು ಪತ್ರ ಓದಿದರೋ ಇಲ್ಲವೋ ಗೊತ್ತಾಗದೆ ಹೋಗಿ ಪತ್ರ ಇಟ್ಟ ಸ್ಥಳವನ್ನು ಹುಡುಕಾಡಿದರೆ ಅಲ್ಲಿರಲಿಲ್ಲ. ಸರಿ, ಯಾವ ರೀತಿ ಪ್ರತಿಕ್ರಿಯೆ ಬರಬಹುದೆಂದು ಒಂದೆರಡು ದಿನ ಕಾದೆ. ಒಂದೆರಡು ದಿನವಿರಲಿ ಉಳಿದಿದ್ದ ಮೂರು ತಿಂಗಳು ಕಳೆದರೂ ಗುರುಗಳ ಪತ್ತೆಯೇ ಇಲ್ಲ. ಉಳಿದಿದ್ದ ಪಾಠಗಳನ್ನು ಇನ್ನೊಬ್ಬರಿಗೆ ವಹಿಸಲಾಗಿತ್ತು. ದೀರ್ಘವಾದ ರಜೆಯಲ್ಲಿರುವರೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಹುಷಾರಿಲ್ಲವೆಂದರು ಕೆಲವರು. ಯಾವುದೋ ಕ್ಷುಲ್ಲಕ ಕಾರಣಕ್ಕೆ ನಾನು ಅಷ್ಟು ದೊಡ್ಡ ಮೇಧಾವಿಯಂತೆ ಪತ್ರ ಬರೆಯಬಾರದಿತ್ತು. ಅವರವರ ನಂಬಿಕೆ ಅವರವರಿಗೆ ಬಿಟ್ಟದ್ದು. ನನಗೇಕೆ ಬೇಕಿತ್ತು ಅವರ ವಿಷಯ. ಏನೇ ಆದರೂ ಅವರಲ್ಲಿದ್ದ ಗಣಿತದ ಮತ್ತು ಉಪನ್ಯಾಸದ ಮೇಲಿನ ಹಿಡಿತ, ಅನುಭವಕ್ಕೆ ನಾನು ಗೌರವ ಕೊಡಬೇಕಿತ್ತು. ಆತ ವ್ಯಯಕ್ತಿಕವಾಗಿ ಏನೇ ಆಗಿದ್ದರೂ ಅದು ನನಗೆ ಬೇಡವಾದ ವಿಷಯವಾಗಿತ್ತು. ಈಗ ಅವರು ನನ್ನಿಂದಲೇ ಕಾಲೇಜಿಗೆ ಬರದಹಾಗಾಗಿದ್ದರೆ ಎಂದು ಸಂಕಟವಾಯ್ತು. ತಪ್ಪು ಒಪ್ಪುಗಳ ಗೊಡವೆಗೆ ಹೋಗದೆ ಎಷ್ಟೇ ಆದರೂ ದೊಡ್ಡವರು, ಅವರ ಮುಂದೆ ಸಣ್ಣವನಾದರೂ ಪರವಾಗಿಲ್ಲವೆನಿಸಿ ಕ್ಷಮಾಪಣೆ ಕೇಳುವುದೆಂದು ತೀರ್ಮಾನಿಸಿ ಕರೆ ಮಾಡಿದರೆ ಕಟ್ ಮಾಡುತ್ತಿದ್ದರು. ಎರಡು ಮೂರು ಬಾರಿ ಪ್ರಯತ್ನಿಸಿದರೂ ಅದೇ ಪ್ರತಿಕ್ರಿಯೆ. ಮೊದಲೇ ಸೂಕ್ಷ್ಮ ಭಾವನೆಯ ಮನುಷ್ಯ, ಹಚ್ಚಿಕೊಂಡಿದ್ದರು ಬೇರೆ. ಆದರೆ ಅವರು ಹಚ್ಚಿಕೊಂಡಿದ್ದು ಜಾತಿಯ ಆಧಾರದ ಮೇಲೆ. ಥು ಮತ್ತದೇ ಯೋಚನೆ. ಬೆಂಕಿಗೆ ಹಾಕಬೇಕು ಜಾತಿ. ಇದರಿಂದಲೇ ನಾನು ಮಾಡಬಾರದ್ದನ್ನು ಮಾಡಿದ್ದು. ತಪ್ಪಿಗೆ ತಪ್ಪು ಉತ್ತರವಾಗಿರಲಿಲ್ಲ, ನಿರ್ಲಕ್ಷಿಸಿದ್ದರೆ ಪಾಠ ಹೇಳಿದಹಾಗಿರುತ್ತಿತ್ತು. ಈಗ ಅವರ ಜೀವನದ ಕೆಲವು ದಿನಗಳನ್ನಾದರೂ ಹಾನಿಗೊಳಿಸಿದ್ದರೆ ಆ ನೋವು ನನ್ನ ಜೀವನನ್ನು ಕಿತ್ತು ತಿನ್ನುವುದು ಖಂಡಿತ. ಛೇ ಹೀಗಾಗಿರಲಾರದು!
************

ಪತ್ರ ತಲುಪಿಸಿದ ದಿನವೇ ಮೂರನೇ ಪೀರಿಯಡ್ ಅವರದ್ದೇ ಇತ್ತು, ಪ್ರತಿನಿತ್ಯ ಬರುವಂತೆ ಎರಡನೇ ಪೀರಿಯಡ್ ಮುಗಿಯುತ್ತಿದ್ದಂತೆಯೇ ಒಂದು ಕೈಯಲ್ಲಿ ಮೂರು ಚಾಕ್ ಪೀಸ್, ಎರೇಜರ್ ಇನ್ನೊಂದು ಕೈಯಲ್ಲಿ ಹಾಜರಾತಿ ಪುಸ್ತಕ ತಂದಿದ್ದರು. ಹಾಜರಾತಿಗಾಗಿ ಮಾತ್ರ ಬರುತ್ತಿದ್ದ ಕೆಲವರು ಇವರ ಕ್ಲಾಸಿಗೆ ಬರುವ ಅಗತ್ಯವೇ ಇರಲಿಲ್ಲ ಏಕೆಂದರೆ ಎಲ್ಲರಿಗೂ ಹಾಜರಾತಿ ಬೀಳುತ್ತಿತ್ತು. ಬಂದವರೇ ಅಂದಿನ ವಿಷಯ ವಿವರಿಸಲು ಶುರುಮಾಡಿದರು. ನನ್ನ ಪತ್ರ ಇನ್ನೂ ಓದಿಲ್ಲವೆಂದು ನನಗೆ ಅನುಮಾನ. ನನ್ನ ಕಡೆ ನೋಡುವುದನ್ನ ನಿಲ್ಲಿಸಿದ್ದರೇನೋ ಎಂಬ ಅನುಮಾನ ಶುರುವಾಯ್ತು. ಎರಡು ಮೂರು ದಿನ ಕಳೆದರೂ ಪತ್ರದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಪಾಠ ಮಾಡುತ್ತಿದ್ದರು. ಬೇಕೆಂತಲೇ ಏನಾದರೂ ಸಂದೇಹಗಳನ್ನು ಕೇಳಿದಾಗ ವಿವರಿಸುತ್ತಿದ್ದರು. ಅವರು ನನ್ನ ಕಡೆ ನೋಡುವುದನ್ನ ನಿಲ್ಲಿಸಿದ್ದರೆಂಬುದು ಖಾತ್ರಿಯಾಯ್ತು. ಹಲವು ದಿನಗಳ ನಂತರ ಪತ್ರದ ವಿಷಯ ಎತ್ತದೇ ಯಾವುದೋ ಅರ್ಥವಾಗದಿದ್ದ ವಿಷಯವನ್ನು ಹೇಳಿಸಿಕೊಳ್ಳಲು ಹೋದಾಗ ಕೂಡ ವಿವರಿಸಿ ಕಳುಹಿಸಿದರು. ಹೆಚ್ಚು ಮಾತುಕತೆಯಿರಲಿಲ್ಲ, ಮತ್ತು ಕೊಂಚ ಗರಮ್ಮಾಗಿದ್ದರೋ ಎಂದು ಅನುಮಾನವಾಯ್ತು. ಆದರೆ ಮುಂಚಿನಂತೆ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಇದು ಖಂಡಿತಾ ನನ್ನ ಪತ್ರದ ನಂತರದ ಪರಿಣಾಮವೇ ಹೌದೆಂದು ಗೊತ್ತಾಯ್ತು. ಪ್ರತಿದಿನ ಅವರು ಯಾರಿಗೇ ಬಯ್ದರು, ಏನೇ ಮಾತನಾಡಿದರೂ ಪರೋಕ್ಷವಾಗಿ ನನಗೇ ಹೇಳಿದರೇನೋ ಎಂದೆನಿಸುತ್ತಿತ್ತು ಅದು ನಿಜವೋ ನನ್ನ ಮೂಗಿನ ನೇರದ ಯೋಚನೆಯೋ, ನನ್ನಲ್ಲಿ ಕಾಡುತ್ತಿದ್ದ ಪಾಪಪ್ರಜ್ಞೆಯ ಫಲವೋ ಗೊತ್ತಿಲ್ಲ. ಕೋಪಕ್ಕೆ ಮೂಗು ಕೊಯ್ದುಕೊಂಡಾಗಿತ್ತು. ಒಮ್ಮೆ ಧೈರ್ಯ ಮಾಡಿ ಅವರು ಮನೆಗೆ ಮರಳುವ ಸಮಯದಲ್ಲಿ ಕಾರಿನ ಬಳಿಯೇ ಹೋಗಿ ನಾನು ನಿಮಗೆ ಒಂದು ಪತ್ರ ಬರೆದಿದ್ದೆ ನೀವ್ಯಾಕೆ ಏನೂ ಪ್ರತಿಕ್ರಿಯೆ ಎಂದು ಹೇಳುವಷ್ಟರಲ್ಲಿ ತಡೆದು ನೀನು ನಿನ್ನ ಏನೆಂದು ತಿಳಿದಿದ್ದೀಯ, ನಾನ್ಯಾರಂತ ಗೊತ್ತಾ ನಿನಗೆ, ನಿನ್ನ ವಯಸ್ಸಿನಷ್ಟು ತರಗತಿಗಳಿಗೆ ಪಾಠ ಮಾಡಿದ್ದೇನೆ ನಾನು. ಯಾರ ಹತ್ತಿರ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಕಾಮನ್ ಸೆನ್ಸ್ ಇಲ್ವಾ ನಿನಗೆ. ನನ್ನ ಕಣ್ಮುಂದೆ ನಿಲ್ಲಬೇಡ ಹೊರಡು. ಎಂದು ಕಾರ್ ಹತ್ತಿ ಹೊರಟೇ ಹೋದರು. ಇಡೀ ಕಾಲೇಜು ನನ್ನನ್ನೇ ನೋಡುತ್ತಿರುವಂತೆ ಅನಿಸುತ್ತಿತ್ತು. ತಲೆಯೆತ್ತಲೂ ಆಗಲಿಲ್ಲ. ನಿಂತಲ್ಲೇ ಕುಸಿದು ಹೋಗಿದ್ದೆ. ಆದರೆ ಇತ್ತೀಚೆಗೆ ಗುರುಗಳು ಯಾರ ಹೆಗಲ ಮೇಲೂ ಕೈ ಹಾಕಿ ಹುಡುಕುತ್ತಿದ್ದುದು ನಿಂತಿತ್ತು. ಆದರೆ ಪಾಠವನ್ನು ಮಾತ್ರ ಯಾವುದೇ ಲೋಪವಿಲ್ಲದೇ ಮುಂದುವರೆಸಿದ್ದರು.

**********

ರಾತ್ರಿಯೆಲ್ಲಾ ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಪುಸ್ತಕದೊಳಗೆ ಇಟ್ಟಿದ್ದ ಪತ್ರ ತಲೆಯಲ್ಲಿ ಸೇರಿಕೊಂಡು ಪತ್ರ ನೀಡಿದಮೇಲೆ ಆಗಬಹುದಾದ ನಂತರದ ಪರಿಣಾಮವನ್ನು ಚಿಂತಿಸುತ್ತಲೇ ಇತ್ತು. ಮುಂಜಾನೆ ೩ ಘಂಟೆ ಬಾರಿಸುತ್ತಲಿತ್ತು. ಕಣ್ಣುರಿಗಿಂತ ಹೆಚ್ಚಾಗಿ ಎದೆ ಉರಿಯುತ್ತಲಿತ್ತು. ಪತ್ರ ಕೊಟ್ಟರೆ ಆಗುವ ಪುರುಷಾರ್ಥ ಏನಿತ್ತು? ಹೆಚ್ಚೆಂದರೆ ಅವರಲ್ಲಿದ್ದ ಗುರುವನ್ನು ಕಳೆದುಕೊಳ್ಳುತ್ತೇನೇನೋ? ಆದರೆ ಇನ್ನು ಮುಂದೆ ಯಾರೊಂದಿಗೂ ಮತಾಂಧರಂತೆ ನಡೆದುಕೊಳ್ಳುವ ಧೈರ್ಯ ಮಾಡಲಾರರು. ಮುಂದಿನ ವರ್ಷದಿಂದ ಜಾತಿಯ ಆಧಾರದ ಮೇಲೆ ಧನಸಹಾಯ ಕೂಡ ಮಾಡಲಾರರು. ಆದರೆ ನಾನು ಖಿನ್ನನಾಗಿ ನನ್ನ ಉಳಿದ ವರ್ಷ ಕಳೆಯಬೇಕಾದೀತು. ಇಷ್ಟು ವಯಸ್ಸಾಗುವವರೆಗೂ ಅವರ ನಂಬಿಕೆಗಳು ಬದಲಾಗದ್ದು ಈಗ ನಾನು ಬರೆಯುವ ಯಕಃಶ್ಚಿತ್ ಪತ್ರದಿಂದ ಬದಲಾಗುತ್ತದೆಂದು ಹೇಗೆ ನಂಬುವುದು? ಇದು ನನ್ನ ಮೂರ್ಖತನವಷ್ಟೇ. ನನಗೆ ಈ ಜಾತಿ ವ್ಯವಸ್ಥೆಯ ಮೇಲಿರುವ ಕ್ರೋಧವನ್ನು ಇವರ ಮೂಲಕ ಹೊರಗಾಕಿದ್ದೆನಷ್ಟೇಯೇನೋ? ಅವರವರ ನಂಬಿಕೆ ಅವರವರಿಗೆ ಹಾಗೇ ಇದ್ದುಬಿಡಲಿ ಉಪದೇಶ ಮಾಡಲು ನಾನ್ಯಾವ ದೊಡ್ಡ ಮನುಷ್ಯ? ಈ ಪತ್ರವನ್ನು ಹರಿದುಬಿಡಲೆ? ನೆಮ್ಮದಿಯಾಗಿ ನಿದ್ರೆಯಾದರೂ ಬರುತ್ತಲಿತ್ತು! ಆದರೆ ಸಾವಿರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿದ್ದವರೂ, ನನ್ನಂತಹ ಎಷ್ಟೋ ಜನರ ಮೊಟ್ಟ ಮೊದಲ ರೋಲ್ ಮಾಡೆಲ್ ಗಳಾಗಿರುವವರು ಮಾಡಿದ ತಪ್ಪನ್ನ ನಾಳೆ ನಾವು ಮುಂದುವರೆಸಿಕೊಂಡು ಹೋಗುವಹಾಗಾದರೆ? ಬೇರೆ ಯಾವುದೇ ಮಾರ್ಗದಲ್ಲಿಯಾದರೂ ತಿಳಿಹೇಳಲು ಸಾಧ್ಯವಿದೆಯೆ? ಅಥವಾ ಯಾರೇ ಹೀಗೆ ಮಾತನಾಡಿದಾಗಲೂ ನಿರ್ಲಕ್ಷಿಸುವುದೇ ಉತ್ತಮ ಮಾರ್ಗವೇ? ರಾತ್ರಿ ಕಳೆದು ಬೆಳಗಾಗೇ ಹೋಯ್ತು. ಕಾಲೇಜಿನ ದಾರಿ ಹಿಡಿದೆ. ಪತ್ರ ಪುಸ್ತಕದೊಳಗೆ ಹಾಗೇ ಇತ್ತು!

                                                                                           -ನೀ.ಮ. ಹೇಮಂತ್


2 comments:

  1. ನಿಮ್ಮ ಕಥೆಗಳು ಓದುಗರನ್ನು ಹಿಡಿದಿಟ್ಟುಕೊಂಡು,ಅದರ ನೈಜತೆಯನ್ನು ತಲೆಗೆ ತಾಕುವಂತೆ ಮಾಡುತ್ತವೆ,ನನ್ನಲ್ಲಿ ಅತಿರಂಜಿತವಾಗಿ ವರ್ಣಿಸಲು ಪದಗಳೇ ಬರುತ್ತಿಲ್ಲ,,ಸದಾಕಾಲ ನಿಮ್ಮ ಲೇಖನಿಯ ಓಟ ಇನ್ನೂ ಇನ್ನೂ ಮುಂದುವರಿಯಲಿ.ಶುಭಂ..RAMESH.KULKARNI,,,

    ReplyDelete
    Replies
    1. ತುಂಬು ಧನ್ಯವಾದಗಳು ರಮೇಶ್ ಅವರೇ... ಜೊತೆಯಲ್ಲಿ ಸಾಗೋಣ... :-)

      Delete