ವಾಹನಗಳ ಹಾರ್ನುಗಳ ಕರ್ಕಶ ಶಬ್ಧ. ಊರಗಲದ ರಸ್ತೆಯ ತುಂಬಾ
ಕಿಲೋಮೀಟರುಗಳ ಗಟ್ಟಲೆ ಉದ್ದೋಕೆ ಜಾಮ್ ಆಗಿರುವ ವಾಹನಗಳು. ಪ್ರತಿಯೊಂದು ಗಾಡಿಗಳಿಂದಲೂ ಏಳುತ್ತಿದ್ದ
ಹೊಗೆಯ ಧಗೆಯಿಂದ ಪ್ರತಿಯೊಂದು ವಾಹನದೊಳಗೂ ಸೇರಿಕೊಂಡಿದ್ದ ಕ್ಷುದ್ರ ಜೀವಿಗಳ ಬಟ್ಟೆ ಒದ್ದೆಯಾಗುವ
ಹಾಗೆ ಹರಿಯುತ್ತಿದ್ದ ಬೆವರು. ಆ ಮುಖಗಳಲ್ಲಿ ನೆಮ್ಮದಿ ಎಂಬ ಪದದ ಅರ್ಥ ಕಳೆದುಹೋಗಿ ಎಷ್ಟೋ ತಲೆಮಾರುಗಳು
ಸಂದಿರುವ ಹಾಗಿದೆ. ಪಾದಚಾರಿ ಮಾರ್ಗಗಳಲ್ಲಿ ಇರುವೆದಂಡಿನೋಪಾದಿಯಲ್ಲಿ ಹಿಂಡು ಹಿಂಡು ಕಣ್ಣು ಕಾಣುವವರೆಗೂ
ಸಾಗುತ್ತಲೇ ಇರುವ ಸಪೂರ ದೇಹಗಳನ್ನು ಹೊತ್ತ ಬೂಟ್ಸ್ ಕಾಲುಗಳು. ಅವೂ ಕೂಡ ಛಂದವಾಗಿ ಸಿಗ್ನಲ್ ಕೆಂಪಾದಾಗ
ನಿಲ್ಲುತ್ತಿದ್ದ ಪರಿ ಧೇಟ್ ರೋಬೋಟ್ ಯಂತ್ರಗಳನ್ನು ನೆನಪಿಸುವಂತಿದ್ದವು. ಒಬ್ಬರನ್ನೊಬ್ಬರು ಜನಸಾಗರದಲ್ಲಿ
ಅಂಟಿಕೊಂಡು ಸಾಗುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಆ ಗಲ್ಲಿಯ ಸಿಗ್ನಲ್ಲಿನಲ್ಲಿ ಮೂರೂ ಕಡೆ
ಕಾಣಬಹುದಾದದ್ದು ಇದೇ ದೃಶ್ಯ. ಮತ್ತೊಂದು ಕಡೆ ಮಾತ್ರ ಹೊಗೆಯ ಮೋಡದ ಮಸುಕಿನಲ್ಲಿ ವಾಹನ ಸಮುದ್ರವೇ
ಚಲಿಸುವ ಹಾಗೆ ಅಸ್ಪಶ್ಟವಾಗಿ ಕಾಣುತ್ತಲಿತ್ತು. ಇದೇ ರಸ್ತೆಯಲ್ಲಿ ಒಂದು ಮೊಬೈಲ್ ಜೈಲಿನಂತಹ ವಾಹನ
ವೇಗವಾಗಿ ಬಂದು ರಸ್ತೆ ತುಂಬೆಲ್ಲಾ ವಾಹನಗಳು ನಿಲುಗಡೆಯಾಗಿದ್ದ ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಕಟ್ಟಡಗಳಿದ್ದ
ಒಂದು ಗಲ್ಲಿಯನ್ನು ಪ್ರವೇಶಿಸಿ ನಿಂತುಕೊಂಡಿತು. ಇಡೀ ಗಲ್ಲಿಯಲ್ಲಿ ನಿಶ್ಯಬ್ಧತೆ ಮನೆಮಾಡಿತ್ತು. ಆ
ದೊಡ್ಡ ವಾಹನ ಕೂಡ ಕೊಂಚ ಹೊತ್ತು ನಿಶ್ಚಲವಾಗಿ ನಿಂತಿದ್ದುದು ಧಿಡೀರನೆ ಹಿಂದುಗಡೆಯ ಬಾಗಿಲು ತೆರೆದುಕೊಂಡದ್ದೇ
ಎಂಟರಿಂದ ಹತ್ತು ಯೋಧರಂತಹ ಜನ ಹೊರನೆಗೆಯುತ್ತಿದ್ದಂತೆಯೇ, ಮೂಲೆ ಮೂಲೆಗಳಲ್ಲಿ ಹಾವುಗಳಂತೆ ಸುರುಳಿಸುತ್ತಿಕೊಂಡು,
ಚೇಳುಗಳಂತೆ ಕುಟುಕಿಕೊಂಡು, ನಾಯಿಗಳಂತೆ ಒಂದರ ಮೇಲೊಂದು ಬಿದ್ದುಕೊಂಡು, ನರಿಗಳಂತೆ ಮೂಲೆ ಮೂಲೆಗಳಲ್ಲಿ
ಅಡಗಿಕೊಂಡಿದ್ದ ಜೋಡಿಗಳು ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮೂಲೆಮೂಲೆಗಳಿಂದ ಹೊರಬಿದ್ದು ಪ್ಯಾಂಟುಗಳನ್ನು
ಸ್ಕರ್ಟುಗಳನ್ನು ಎಳೆದುಕೊಳ್ಳುತ್ತಲೇ ಎದ್ದು ಬಿದ್ದು ಓಡಲು ಶುರುಮಾಡಿದವು. ಅಷ್ಟೇ ಕಣ್ರೆಪ್ಪೆ ಬಡಿಯುವಷ್ಟರ
ವೇಗದಲ್ಲಿ ವಾಹನದಿಂದ ಧುಮುಕಿದ ಗುಂಪು ಚದುರಿ ಅಟ್ಟಿಸಿಕೊಂಡು ಬಂದು ದಿಕ್ಕಾಪಾಲಾಗಿ ಓಡುತ್ತಿದ್ದ
ಜೋಡಿಗಳಲ್ಲಿ ಕೆಲವರನ್ನು ತಮ್ಮ ಬಳಿ ಇದ್ದ ದೊಡ್ಡ ದೊಡ್ಡ ಬಲೆಗಳಲ್ಲಿ ಹುಲಿ ಸಿಂಹಗಳನ್ನು ಬೇಟೆಯಾಡಿ
ಜೀವಂತವಾಗಿ ಹಿಡಿದಂತೆ ಕೆಡವಿಕೊಂಡು ಅದರಿಂದ ಹೊರಬರಲು ಶತಪ್ರಯತ್ನ ಪಡುತ್ತಾ, ಕೂಗಾಡುತ್ತಿದ್ದ ಹುಡುಗ
ಹುಡುಗಿಯರ ಮೇಲೆ ತಮ್ಮ ಬಳಿ ಇದ್ದ ಕರೆಂಟಿನದ್ದೆನಬಹುದಾದ ಉದ್ದನೆಯ ಕೋಲಿನ ತುದಿಯನ್ನು ಮೈಗೆ ತಾಕಿಸಿದ್ದೇ
ಧಿಮ್ಮನೆ ಕೆಳಗುರುಳುವರು. ಇನ್ನೂ ಕೆಲವರು ಸಿಕ್ಕ ಸಿಕ್ಕ ಜಾಗಗಳಲ್ಲಿ ಓಡೋಡಿ, ಚರಂಡಿಗಳಲ್ಲಿ, ಯಾವಯಾವುದೋ
ಮನೆಗಳಲ್ಲಿ ಅವಿತು ಮರೆಯಾಗುವರು!
ಹಿಂದುಗಡೆ ದೂರದಲ್ಲಿ ಯಾವುದೋ ಕೊಠಡಿಯಲ್ಲಿ ಅರಚಾಟ, ಚೀರಾಟ,
ಆಕ್ರಂದನ, ಗಲಾಟೆಯ ಶಬ್ಧಗಳ ಗೊಂದಲದ ವಾತಾವರಣದ ನಡುವೆ, ಸುತ್ತಲ ಕಡತಗಳ ಗೋಪುರಳಿಂದಲಂಕೃತ ತಲೆ ಕೂದಲು
ಕೆದರಿಕೊಂಡು ತನ್ನ ಮೊಂಡು ಮೀಸೆಯನ್ನು ತುರಿಸಿಕೊಳ್ಳುತ್ತಾ ಇನ್ನೂ ಮೂರು ಪೈಲುಗಳನ್ನು ಹಿಡಿದುಬಂದ
ಮೂವರು ಅಧಿಕಾರಿಗಳನ್ನೊಮ್ಮೆ ನೋಡಿ, ಇವತ್ತೆಷ್ಟಾಯ್ತು ಎಂದು ಕೇಳುವನು. ೪೫ ಜನ ಆಗಿದ್ದಾರೆ ಮುಂದಿನ
ಕಾರ್ಯಚರಣೆಗೆ ನಿಮ್ಮ ಸಹಿ ಬೇಕಿತ್ತೆನ್ನಲು, ಕಡತಗಳನ್ನು ಪರಿಶೀಲಿಸಿ ಸಹಿ ಹಾಕುತ್ತಾ ಸರಿಯಾದ ಕ್ರಮದಲ್ಲಿ
ಮುಂದುವರೆಯಿರಿ, ಕಳೆದಸಾರಿ ಮಾಡಿದ ಹಾಗೆ ಆತುರ ಬಿದ್ದು ನನ್ನ ತಲೆಗೆ ಮತ್ತೆ ತಂದರೆ ನೇರವಾಗಿ ಒಬ್ಬೊಬ್ಬರನ್ನೂ
ಗುಂಡು ಹೊಡೆದು ಸಾಯಿಸಿಬಿಡ್ತೇನೆ. ಇಪ್ಪತ್ನಾಲ್ಕು ಘಂಟೆ ಕಾಲಾವಕಾಶ ಕೊಡಿ ಬಂಧಿತರ ಕಡೆಯ ಹೊಣೆ ಹೊತ್ತವರು
ಯಾರೇ ಬಂದು ತಮ್ಮ ಬಳಿ ಇರುವ ಕಾನೂನುಬದ್ಧ ಪ್ರಮಾಣಪತ್ರಗಳನ್ನು ತೋರಿಸಲೇಬೇಕು. ಅವರ ಬಳಿ ಬಂಧಿತರು
ತಮ್ಮ ಜವಾಬ್ದಾರಿ ಎಂದು ಸಾಬೀತು ಪಡಿಸುವ ಪುರಾವೆಗಳಿಲ್ಲದಿದ್ದಲ್ಲಿ, ಮತ್ತು ಬಂಧಿತರ ಬಳಿ ತಮ್ಮ ಕೃತ್ಯಕ್ಕೆ
ಯಾವುದೇ ರೀತಿಯ ಪರವಾನಗಿ ಇಲ್ಲದಿದ್ದಲ್ಲಿ ಅಥವಾ ಪರವಾನಗಿ ಸಮಯ ಮೀರಿದ್ದಲ್ಲಿ ಸಹಿ ಹಾಕಿಸಿಕೊಂಡು
ಕಾರ್ಯಾಚರಣೆಯನ್ನು ಮುಂದುವರೆಸಿ. ಪ್ರತಿಯೊಬ್ಬ ಶಿಕ್ಷೆಯಿಂದ ಬಚಾವಾದ ಮತ್ತು ಶಿಕ್ಷೆಗೆ ಪಾತ್ರರಾದವರ
ವಿವರವೂ ದಾಖಲಾಗಬೇಕು. ಯಾವುದೇ ಉಲ್ಲಂಘನೆಯಾದಲ್ಲಿ ತೀವ್ರ ಶಿಕ್ಷೆ ಖಂಡಿತ, ನಿಮ್ಮ ಎಲ್ಲಾ ಅಧಿಕಾರಿಗಳಿಗೆ
ತಿಳಿಸಿ. ಹೊರಡಿ ಎಂದು ಬೆದರಿಸಿ ಕಳುಹಿಸಿ ಮತ್ತೆ ತನ್ನ ಕಡತಗಳಲ್ಲಿ ಹೂತುಹೋಗುವನು.
ಒಳಗೆ ಕೇಳಿಬರುತ್ತಿದ್ದ ಬಂಧಿತರ ಚೀರಾಟ, ಆಕ್ರಂದನ ಒಂದು
ಕಡೆ, ಸಾಲಾಗಿ ಇದ್ದ ಹತ್ತಿಪ್ಪತ್ತು ಮುಂಗಟ್ಟೆಗಳಿಗೆ ಅಳುತ್ತಾ, ಕೂಗಾಡುತ್ತಾ, ಕೋಪೋದ್ರಿಕ್ತ, ಹೆದರಿದ್ದ
ಪೋಷಕರು ಸೇರುತ್ತಲೇ ಇದ್ದವರನ್ನು ಹೊಡೆದು, ಬಯ್ದು ಸಾಲು ನಿರ್ಮಿಸುತ್ತಿದ್ದ ಅಧಿಕಾರಿ, ಮುಂಗಟ್ಟೆಗಳಲ್ಲಿ
ಕೂತು ಬಂದ ಪೋಷಕರ ದಾಖಲೆಗಾಳನ್ನು ಅಸಡ್ಡೆಯಿಂದ ತನ್ನ ಗಣಕಯಂತ್ರದೊಂದಿಗೆ ಹೊಂದಿಸುತ್ತಾ, ಪರಿಶೀಲಿಸುತ್ತಿರುವ
ಇನ್ನೊಂದಷ್ಟು ಅಧಿಕಾರಿಗಳು. ಅದ್ಯಾವುದೋ ಮುಂಗಟ್ಟೆಯಲ್ಲಿ ಬಂಧಿತನ ಪೋಷಕ ತಂದಿದ್ದ ದಾಖಲೆಯಲ್ಲಿನ
ಭಾವಚಿತ್ರಕ್ಕೂ ತನ್ನ ಕಡತ ತೋರುತ್ತಿದ್ದ ಭಾವಚಿತ್ರಕ್ಕೂ ಹೊಂದಾಣಿಕೆಯಾಗುತ್ತಿಲ್ಲವೆಂದು ಪುರಾವೆಗಳನ್ನು
ಎಸೆದು ಕಳುಹಿಸಲು ಆಕೆ ಕಾಲು ಹಿಡಿದು, ಸಂಕಟ ತೋಡಿಕೊಂಡು, ಲಂಚವನ್ನೂ ತಳ್ಳಿ ಇತರ ದಾಖಲೆಗಳನ್ನು ತೋರಿಸಿ
ಬಂಧಿತ ತನ್ನ ಮಗನನ್ನು ವಾಪಾಸು ಕರೆದುಕೊಂಡು ಹೋಗಲು ಪರವಾನಗಿ ದೊರೆತ ಮೇಲೆ ಒಳಗೆ ಹೋಗುವಳು. ಇನ್ನಾವುದೋ
ಮುಂಗಟ್ಟೆಯಲ್ಲಿ ದೊಂಬಿಯೇಳಿಸುತ್ತಿದ್ದವನೊಬ್ಬನನ್ನು ಕೆಲಸಗಾರರು ಬಂದು ಹೊರಗೆ ಹಾಕಿ ಬರುವರು. ಇನ್ನೂ
ಸಾವಿರಗಟ್ಟಲೆ ಸಾಲಿನಲ್ಲಿ ನಿಂತಿದ್ದ ಬಂಧಿತರ ಪೋಷಕರು, ಹೊಣೆ ಹೊತ್ತವರುಗಳು ಕಣ್ಣೊರೆಸಿಕೊಳ್ಳುತ್ತಾ,
ಎದೆ ಎದೆ ಬಡಿದುಕೊಳ್ಳುತ್ತಾ, ಬೆವರೊರೆಸಿಕೊಳ್ಳುತ್ತಾ, ಕೈಕಾಲು ನಡುಗಿಸಿಕೊಂಡು ಮುಂದೆ ಸಾಗಿದ್ದರು.
ಕೆಲವರ ದಾಖಲೆಗಳು ನಕಲೆಂದು ಸಾಬೀತಾಗುತ್ತಿದ್ದರೆ, ಇನ್ನೂ ಕೆಲವರ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೇ,
ಇನ್ನೂ ಕೆಲವರ ಬಳಿ ಕೊಡಲು ಲಂಚ ಸಾಕಾಗದೇ ಇಂಥಿವೇ ಹಲವು ಕಾರಣಗಳಿಗೆ ತಿರಸ್ಕೃತವಾಗುತ್ತಾ, ಗಲಾಟೆ
ಹುಯಿಲು ಮುಗಿಲು ಮುಟ್ಟುತ್ತಾ ಸಾಲುಗಳು ಕರಗುತ್ತಾ ಮತ್ತೆ ತುಂಬುತ್ತಾ ಹೋಗುತ್ತಿದ್ದವು. ಸ್ವೀಕೃತ
ಕೆಲವು ದಾಖಲೆಗಳಿಂದಾಗಿ ಕೆಲವು ಬಂಧಿತ ತಮ್ಮ ಮಗ ಮಗಳನ್ನು ಬಿಡಿಸಿಕೊಳ್ಳಲು ಯಶಸ್ವಿಯಾಗಿ ಅಪ್ಪಿಕೊಂಡು,
ಮುದ್ದಿಸುತ್ತಾ ಅಲ್ಲಿಂದ ಅತಿಶೀಘ್ರದಲ್ಲಿ ಜಾಗ ಖಾಲಿ ಮಾಡುತ್ತಿದ್ದರು, ಖಾಲಿಯಾದವರ ಜಾಗಕ್ಕೆ ಇನ್ನಷ್ಟು
ಬಂಧಿತರು ಬಂದು ಸೇರುತ್ತಿದ್ದರು. ಈ ಚಕ್ರ ಹೀಗೇ ಸಾಗುತ್ತಲಿತ್ತು!
ಅಡುಗೆ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಮಾತ್ರೆ ತಯಾರು ಮಾಡುತ್ತಿದ್ದ
ಹೆಂಡತಿಯ ಬಳಿ ಒಂದು ಪುಸ್ತಕವನ್ನು ಹಿಡಿದು ಬಂದ ಗಂಡ ಹ ಹ ಹ ಇಲ್ಲಿ ನೋಡೇ ಈ ಕಥೆ ಹೇಗಿದೆ ಗೊತ್ತಾ
ಒಂದು ಊರಂತೆ, ಅಲ್ಲಿ ಮಕ್ಕಳು ಮಾಡಿಕೊಂಡ್ರೆ ದುಡ್ಡು ಕೊಡ್ತಿದ್ರಂತೆ, ಆಮೇಲೆ ಯಾರು ಯಾರ ಜೊತೆ ಬೇಕಾದ್ರು
ಸಂಭೋಗ ನಡೆಸಬಹುದಿತ್ತಂತೆ, ಅದಕ್ಕಾಗಿ ಸರಕಾರದಲ್ಲಿ ಯಾವುದೇ ಕಟ್ಟಳೆಗಳು, ನಿಯಮಾವಳಿಗಳು ಇರಲೇ ಇಲ್ವಂತೆ,
ಇನ್ನೂ ಸರಕಾರದವರೇ ಅದೇನೋ ಕಂಡೋಮ್ ಗಳನ್ನು ಮುಫತ್ತಾಗಿ ಕೊಟ್ಟು ಪ್ರಚೋದಿಸುತ್ತಿದ್ದರಂತೆ. ಕೆಲವು
ಹೆಂಗಸರಿಗೆ ಇಬ್ಬರು ಗಂಡಂದಿರಂತೆ, ಇನ್ನೂ ಕೆಲವರು ಗಂಡಸರು ಎಷ್ಟು ಸಲ ಬೇಕಾದರೂ ಮದುವೆಯಾಗಬಹುದಿತ್ತಂತೆ,
ಮೂರ್ನಾಲ್ಕು ಹೆಂಡಂದಿರು ಅವರೆಲ್ಲರಿಗೂ ಕನಿಷ್ಠ ಪಕ್ಷ ಐದು ಮಕ್ಕಳಂತೆ. ಒಬ್ಬೊಬ್ಬನಿಗೆ ಮೂರ್ನಾಲ್ಕು
ಮನೆಗಳಿರ್ತಿದ್ವಂತೆ. ಅವರುಗಳು ಊಟಕ್ಕೆ ಒಂದೊಂದು ತಟ್ಟೆಗಳು, ಪಾತ್ರೆಗಳನ್ನ ಇಟ್ಟಿರ್ತಿದ್ರಂತೆ ಅದರ
ತುಂಬಾ ಅದೇನೋ ಬಿಳಿ ಬಿಳಿ ಕಾಳುಗಳನ್ನ ತುಂಬಿಸಿಕೊಂಡು ತಿನ್ನುತ್ತಿದ್ರಂತೆ. ಹಹಹ ಎಷ್ಟು ವಿಚಿತ್ರವಾಗಿದೆ
ಅಲ್ವಾ. ಇನ್ನೂ ಏನೇನೋ ಬರೆದಿದ್ದಾನೆ. ಈ ಕಥೆ ಹೊರಗೆ ಬಂದಿದ್ದೇ ಕಥೆಗಾರನ್ನ ಗಲ್ಲಿಗೆ ಏರಿಸಲಾಯ್ತಾಂತೆ!
ಹೆಂಡತಿ ಅದಕ್ಕೆ ಪ್ರತಿಕ್ರಿಯೆಯಾಗಿ ಆಗಬೇಕಾದ್ದೆ ಬಿಡಿ ಎಂದಷ್ಟೇ ಹೇಳಿ ನಿಟ್ಟುಸಿರುಬಿಟ್ಟು, ನಿಮ್ಮ
ತಂಡ ಮಾಡಿದ ಪ್ರತಿಭಟನೆ ಏನಾದ್ರೂ ಉಪಯೋಗ ಆಯ್ತಾ, ಎಂದು ವಿಷಯ ಬದಲಿಸಲು, ಗಂಡನೂ ಉತ್ತರವೆಂಬಂತೆ ಒಂದು
ನಿಟ್ಟುಸಿರು ಬಿಡುತ್ತಾ ತನ್ನ ಎಂಬತ್ತೊಂಬತ್ತನೇ ಮಹಡಿಯ ರೂಮಿನ ಕಿಟಕಿಯಿಂದ ಹೊರಗೆ ದಿಟ್ಟಿಸುತ್ತಾ,
ಈಗ ಇಪ್ಪತ್ನಾಲ್ಕು ಘಂಟೆ ಸಮಯಾವಕಾಶ ಕೊಡಲಾಗಿದೆಯಂತೆ. ಯಾರನ್ನೇ ಹಿಡಿದರೂ ತಕ್ಷಣ ಶಸ್ತ್ರಚಿಕಿತ್ಸೆ
ಮಾಡುವಹಾಗಿಲ್ಲ ಈಗ. ಒಂದು ಹಂತಕ್ಕೆ ಗೆದ್ದಂತೆಯೇ ಲೆಕ್ಕ. ಆದರೆ ನಮ್ಮ ಜನ ಯಾಕೆ ಹೀಗೆ ಮಾಡ್ಕೋಬೇಕು
ಅಂತ, ಸರಕಾರದ ನಿಯಮಗಳನ್ನ ಅದ್ಯಾಕೆ ಮುರೀತಾರೋ, ನಮ್ಮಂತಹ ಎಷ್ಟು ಸಂಸಾರಗಳು ಕಾನೂನು ಪಾಲಿಸುತ್ತಾ
ನೆಮ್ಮದಿಯಾಗಿ ಬದುಕುತ್ತಿಲ್ವಾ. ಮಕ್ಕಳು ಮಾಡಿಕೊಳ್ಳಲು ಪರವಾನಗಿ ದೊರೆತಿಲ್ಲ ಅಂದ್ರೆ, ಸಂಭೋಗಿಸಬಾರದು,
ಕಾನೂನು ಬಾಹಿರವಾಗಿ ಮಕ್ಕಳು ಮಾಡ್ಕೋಬಾರದು. ಅದ್ಯಾವಾಗ ಬುದ್ದಿ ಬರುತ್ತೋ ನಮ್ಮ ಜನಕ್ಕೆ ಗೊತ್ತಿಲ್ಲಪ್ಪ
ಎಂದು ಹೇಳಿದ್ದಕ್ಕೆ ಹೆಂಡತಿ ಮತ್ತದೇ ನಿಟ್ಟುಸಿರಿನಲ್ಲೇ ಪ್ರತಿಕ್ರಿಯಿಸುವರು.
ಕೆಂಪನೆ ಇಳಿಯುತ್ತಿರುವ ಸಂಜೆಯ ಸೂರ್ಯನಿಗೆ ಹೊಂದಾಣಿಕೆಯಾಗುವ
ಹಾಗೆ ಯಾವುದೋ ಬೀದಿಯಲ್ಲಿ “ರಕ್ಷಣಾ ಕಾರ್ಯಗಾರ” ಎಂಬ ನಾಮಫಲಕವಿದ್ದ ಮೊಬೈಲ್ ಜೈಲಿನಂತಹ ವ್ಯಾನು ಬೆಂಕಿಹೊತ್ತಿ
ಉರಿಯುತ್ತಿದೆ. ರಸ್ತೆಯ ಒಂದು ಮೂಲೆಯಲ್ಲಿ ಬಲೆಯಲ್ಲಿ ಸಿಲುಕಿ ಜ್ಞಾನ ತಪ್ಪಿ ಬಿದ್ದಿರುವ ಜೋಡಿ. ಮತ್ತೊಂದು
ಕಡೆ ಹಿಡಿಯಲು ಬಂದಿದ್ದ ಅಷ್ಟೂ ಅಧಿಕಾರಿಗಳನ್ನು ಕೆಲವರು ಬಚ್ಚಿಟ್ಟುಕೊಂಡು ಕಾದಿದ್ದು ತಮ್ಮ ಬಳಿ
ಇದ್ದ ದೊಡ್ಡ ದೊಡ್ಡ ಗನ್ನು ಸಿಡಿಮದ್ದುಗಳಿಂದ ಅನಿರೀಕ್ಷಿತ ದಾಳಿ ಎಸಗಿ, ರಕ್ತ ಕಾರುತ್ತಾ ಬಿದ್ದಿದ್ದ
ಅಧಿಕಾರಿಗಳನ್ನು ಥಳಿಸಿ ಬಲೆಗಳಲ್ಲಿ ಸಿಲುಕಿದ್ದವರನ್ನು ಹೊತ್ತು ಮಾಯವಾಗುವರು.
ರಸ್ತೆಗಳಲ್ಲಿ, ಅನುಮಾನವಿದ್ದ ಮನೆಗಳಲ್ಲಿ, ಸರ್ಕಾರ ನಡೆಸಿದ
ಸಮೀಕ್ಷೆಯ ವರದಿಯ ಆಧಾರದ ಮೇಲೆ ಹಿಡಿದುತಂದ ಹುಡುಗ ಹುಡುಗಿಯರನ್ನು ಸಲಾಕೆಗಳ ಹಿಂದೆ ತಳ್ಳಿ ಇಪ್ಪತ್ತ
ನಾಲ್ಕು ಘಂಟೆ ಕಾಲಾವಕಾಶ ಕೊಟ್ಟು ಅಷ್ಟರಲ್ಲಿ ಅವರುಗಳನ್ನು ಬಿಡಿಸಿಕೊಂಡು ಹೋಗಲು ಅವರ ಸಂಬಂಧಿಕರು
ತಕ್ಕ ಪುರಾವೆಗಳನ್ನು ಮಂಡಿಸದಿದ್ದಲ್ಲಿ ಆ ಹುಡುಗರನ್ನು ತೆಗೆದುಕೊಂಡು ಹೋಗಿ ಸಂತಾನೋತ್ಪತ್ತಿಗೆ ಬೇಕಾದ
ನರಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿಶ್ಕ್ರಿಯಗೊಳಿಸಿ ಅವರನ್ನು ಮತ್ತೆ ಮುಕ್ತಗೊಳಿಸುತ್ತಿದ್ದರು. ಈ ಕಾರ್ಯಾಚರಣೆಗಾಗಿಯೇ ಸರ್ಕಾರ ಒಂದು ಪಡೆಯನ್ನು ನೇಮಿಸಿತ್ತು.
ಈ ಸಂಸ್ಥೆಯನ್ನು, ಮತ್ತು ಸರ್ಕಾರದ ಈ ಆದೇಶವನ್ನು ವಿರೋಧಿಸುವ, ಈ ಕಾರ್ಯಾಚರಣೆಯಲ್ಲಿ ನೊಂದ ಮತ್ತು
ಇನ್ನೂ ಹಲವು ಸಂಘಟನೆಗಳು ಒಂದುಗೂಡಿ ತಲೆಮರೆಸಿಕೊಂಡು ಆಗಾಗ ಎಲ್ಲಂದರಲ್ಲಿ ಧಂಗೆಯೇಳುತ್ತಿತ್ತು.
ಹಲವಾರು ವರ್ಷಗಳ ಹಿಂದೆ ಜನ ಮಲಗಲು ಸಹಿತ ಜಾಗವಿಲ್ಲದೇ ಮನೆಗಳಲ್ಲಿ
ಮಾತ್ರವಲ್ಲದೇ ರಸ್ತೆಗಳಲ್ಲಿ, ಎಲ್ಲಂದರಲ್ಲಿ ಮಲಗಲಿಕ್ಕೆಂದೇ ತಾತ್ಕಾಲಿಕ ಜೋಪಡಿಗಳನ್ನು ಕಟ್ಟಿಕೊಳ್ಳತೊಡಗಿದ್ದರು.
ಈ ಜೋಪಡಿಗಳನ್ನು ರಾತ್ರಿಯ ಸಮಯದಲ್ಲಿ ೬ ಘಂಟೆಗಳ ಕಾಲ ಕಟ್ಟಿಕೊಳ್ಳಬಹುದಾದ ಪರವಾನಗಿ ಇತ್ತು. ನಂತರ
ಇನ್ನೂ ಬಿಚ್ಚಿಟ್ಟಿ ಜಾಗ ಖಾಲಿ ಮಾಡಿರದಿದ್ದರೆ ದಂಡ ಕಟ್ಟುವುದಲ್ಲದೇ ಮತ್ತೆ ಕಟ್ಟಿಕೊಳ್ಳುವ ಪರವಾನಗಿ,
ಮತ್ತು ಜೋಪಡಿಗಳನ್ನು ಕಿತ್ತುಕೊಳ್ಳಲಾಗುತ್ತಿತ್ತು. ಊಟಕ್ಕೆ ಶಕ್ತಿ ವೃದ್ಧಿಸುವ ಮಾತ್ರೆಗಳನ್ನ ಹೆಚು
ಹೆಚ್ಚು ತಯಾರಿಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಹಲವು ಸಂಘಟನೆಗಳು ಒಟ್ಟುಗೂಡಿ
ಅಂದಿನಿಂದ ಮನೆಗೊಂದೇ ಮಗುವೆಂಬ ನಿಯಮವನ್ನು ಕಿತ್ತು ಹಾಕಿ ಹೊಸ ನಿಯಮವನ್ನು ಜಾರಿಗೆ ತಂದಿತು. ಪ್ರತಿಯೊಂದು
ಸಂಸಾರದ ಒಟ್ಟು ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ಮಗು ಪಡೆಯಲು ಪರವಾನಗಿ ನೀಡುತ್ತಿತ್ತು.
ಪರವಾನಗಿ ಪಡೆದೇ ಸಂತಾನೋತ್ಪತ್ತಿ ಯೋಜನೆ ಹಾಕಿಕೊಳ್ಳಲು ಅರ್ಹರಾಗಿರುತ್ತಿದ್ದರು. ನಿಯಮ ಉಲ್ಲಂಘಿಸಿದರೆ,
ವೈದ್ಯ ಸೇವೆಯಿಂದ ಹಿಡಿದು ಎಲ್ಲ ರೀತಿಯ ಸವಲತ್ತುಗಳನ್ನು ಕಿತ್ತುಕೊಳ್ಳುವ ಸಂಪೂರ್ಣ ಹಕ್ಕು ಸರ್ಕಾರಕ್ಕಿತ್ತು.
ಜನಸಂಖ್ಯೆಯನ್ನು ನಿಯಂತ್ರಿಸಲಿಕ್ಕೆ, ಮಾನವಕುಲವನ್ನು ಉಳಿಸಲಿಕ್ಕೆ, ಈ ನಿಯಂತ್ರಣ ಹೇರುವುದು ಅನಿವಾರ್ಯವಾಗಿತ್ತು!
ಟಿವಿ, ರೇಡಿಯೋಗಳಲ್ಲಿ ರಾತ್ರಿ ೯ ಘಂಟೆಗೆ ನೇರ ಪ್ರಸಾರದಲ್ಲಿ
ದೇಶದ ಮೊದಲ ವ್ಯಕ್ತಿ ಬದಲಾಗಿರುವ ನಿಯಮಗಳನ್ನು ಸ್ಪಷ್ಟವಾಗಿ ವಿವರಿಸುವರು. ರಸ್ತೆ ರಸ್ತೆಗಳಲ್ಲಿದ್ದ
ದೊಡ್ಡ ದೊಡ್ಡ ಟಿವಿ ಪರದೆಗಳಲ್ಲಿ ಜನ ಬಾಯಿಕಳೆದು ನಿಂತು ವೀಕ್ಷಿಸುವರು. “ಪ್ರೀತಿಯ ಪ್ರಜೆಗಳೇ, ನಿಮ್ಮ
ಸುಖ, ಸಂತೋಷವೇ ನಮ್ಮ ಸಂತೋಷ. ನಿಮ್ಮ ಸುಗಮ ಜೀವನ ನಿರ್ಮಹಣೆಗಾಗಿ ಮಾರ್ಪಾಟುಗಳಾದ ನಂತರದ ನಿಯಮಗಳನ್ನು
ನಿಮ್ಮ ಮುಂದೆ ತೆರೆದಿಡಲಿದ್ದೇವೆ. ದಯವಿಟ್ಟು ಸಹಕರಿಸಿ. ಯಾವುದೇ ಗಂಡು ಅಥವಾ ಹೆಣ್ಣು ಸಂಭೋಗಿಸಲು
ಪರವಾನಗಿ ಪತ್ರ ಪಡೆದಿರಬೇಕು. ಪರವಾನಗಿ ಹೊಂದಿದವರಿಗೆ ಮಾತ್ರ ಕಂಡೋಮ್ ಗಳನ್ನು ತಿಂಗಳಿಗೆ ಐದು ಗರ್ಭನಿರೋಧಕಗಳನ್ನು
ನೀಡಲಾಗುವುದು. ಮತ್ತು ಯಾವುದೇ ಕಾರಣಕ್ಕೂ ಸಂತಾನೋತ್ಪತ್ತಿಯ ಯೋಜನೆಯಿದ್ದಲ್ಲಿ ಅದಕ್ಕೆ ಸರ್ಕಾರಕ್ಕೆ
ಸೂಕ್ತ ಕಾರಣಗಳನ್ನು ನಮೂದಿಸಿ ಅರ್ಜಿ ನೀಡತಕ್ಕದ್ದು. ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ
ಒಪ್ಪಿಗೆ ನೀಡಿದ ನಂತರವೇ ಮುಂದುವರೆಯತಕ್ಕದ್ದು. ಕಾನೂನು ಬಾಹಿರ ಮಕ್ಕಳನ್ನು ಮಾಡಿಕೊಂಡವರಿಗೆ ಸಜಾ
ಮತ್ತು ಅಂತಹ ಮಕ್ಕಳನ್ನು ಕಾನೂನು ಬಾಹಿರ ಮಕ್ಕಳೆಂದೇ ಪರಿಗಣಿಸಿ, ಆ ಮಕ್ಕಳಿಗೆ ಪ್ರಾಪ್ತ ವಯಸ್ಸಿಗೆ
ಬಂದಕೂಡಲೆ ಸಂತಾನೋತ್ಪತ್ತಿಯಾಗದಂತೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಹಾಗೂ ಕಾನೂನೀ ಹುಡುಗ ಹುಡುಗಿಯರು
ಹದಿಮೂರು ವರ್ಷದ ತನಕ ಯಾವುದೇ ರೀತಿ ಲೈಂಗಿಕ ಕ್ರಿಯೆಯಲ್ಲಿ ಸಿಕ್ಕಿಬಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ
ಶಸ್ತ್ರಚಿಕಿತ್ಸೆ ಮಾಡಲಾಗುವುದು. ನಾವು ಇದೇ ಹಾದಿಯಲ್ಲಿ ಸಾಗಿದಲ್ಲಿ ಇನ್ನೂ ಐದು ವರ್ಷದಲ್ಲಿ ಜನಸಂಖ್ಯೆ
ನಿಯಂತ್ರಣಕ್ಕೆ ಬಂದು ಮತ್ತೆ ಉಸಿರಾಡಲು ಸ್ವಚ್ಚ ಗಾಳಿ, ಪ್ರರಿಯೊಬ್ಬರಿಗೂ ಒಂದು ಮನೆ, ಮತ್ತು ಎರಡು
ಹೊತ್ತಿನ ಆಹಾರ ಪದಾರ್ಥಗಳನ್ನು ಒದಗಿಸುವಲ್ಲಿ ನಾವು ಗೆಲ್ಲುವಂತಾಗುತ್ತದೆ. ಎಲ್ಲರೂ ಸಹಕರಿಸಬೇಕೆಂದು
ವಿನಂತಿ. ಮತ್ತು ಸರ್ಕಾರ ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಸೂಕ್ತ ಕ್ರಮ ಶೀಘ್ರದಲ್ಲೇ
ಜರುಗಲಿದೆ. ಶುಭವಾಗಲಿ.” ಬಾಯ್ಕಳೆದುಕೊಂಡು ಆಕಾಶದೆತ್ತರಕ್ಕೆ ಇದ್ದ ಟಿವಿ ಪರದೆಗಳನ್ನು ನೋಡುತ್ತಿದ್ದ
ಸ್ತಭ್ದವಾಗಿದ್ದ ಜನತೆಯಲ್ಲಿ ಮತ್ತೆ ಚಲನೆ ಮೂಡಿತು. ಮತ್ತೆ ಜನಸಂಖ್ಯೆ ನಿಯಂತ್ರಣಕ್ಕೆ ಬಂದರೆ ಒಂದಾದರೂ
ಖಾಲಿ ರೋಡು ನೋಡಿ ಸಾಯಬೇಕೆಂದು ಹಲವರು ಅಂದುಕೊಳ್ಳುತ್ತಾ ಸಿಗ್ನಲ್ ಗಾಗಿ ಕಾಯುವರು. ಕಪ್ಪನೆ ಆಕಾಶದಲ್ಲಿ
ಕಪ್ಪು ಕಲೆಗಳೇ ಹೆಚ್ಚಿದ್ದ ಚಂದ್ರ ಜನಸಂಖ್ಯಾಸ್ಫೋಟದ ಪರಿಣಾಮವನ್ನು ಕಂಡು ನಗುತ್ತಾ ರಾತ್ರಿಗೆ
ನಾಂದಿ ಹಾಡುವನು.
-ನೀ.ಮ. ಹೇಮಂತ್
ಒಳ್ಳೆಯ ಶಕ್ತಿಶಾಲಿ ಕಥೆ. ನಿರೂಪಣೆಯೂ ಚೆನ್ನಾಗಿದೆ.
ReplyDeleteಥ್ಯಾಂಕ್ಯೂ ಈಶ್ವರ್ ಅವರೇ ಓದಿದ್ದಕ್ಕೆ ಮತ್ತು ಬೆನ್ನು ತಟ್ಟಿದ್ದಕ್ಕೆ :-)
Delete