“ಅಪ್ಪ
ನಾನು ಸಾಯ್ಬೇಕು ಅಂತ ತೀರ್ಮಾನ ಮಾಡಿದ್ದೀನಿ”. ಬೆಳಗ್ಗೆಯೇ ಓದಲಾಗದ ಹಿಂದಿನ ದಿನದ ಹಳಸುಗಳನ್ನು ಸಂಜೆ
ಓದುತ್ತಾ ಕುಳಿತಿದ್ದ ತಂದೆ, ಮಧ್ಯಾಹ್ನದ ತಂಗಳನ್ನು ಮತ್ತೆ ರಾತ್ರಿಗಾಗಿ ಬಿಸಿ ಮಾಡುತ್ತಿದ್ದ ತಾಯಿ,
ಪುಸ್ತಕ ಮಗುಚಿ ಹಾಕುವ ಹೆಸರಿನಲ್ಲಿ ಕದ್ದು ಮುಚ್ಚಿ ತನ್ನ ಪ್ರಿಯಕರನಿಗೆ ಪ್ರೇಮಸಂದೇಶಗಳನ್ನು ರವಾನಿಸುತ್ತಿದ್ದ,
ಮುಂದೆ ಇದೇ ಮಾತನ್ನು ಹೇಳಲಿರುವ ತಂಗಿ, ಎಲ್ಲರ ಕಿವಿಗಳು ಒಮ್ಮೆಲೆ ನಿಮಿರಿದ್ದು, ಅಪ್ಪನ ಆರಾಮ ಕುರ್ಚಿಯ
ಎಡ ಬಲ ಬಂದು ಅಲಂಕರಿಸಿದ್ದು, ಅಪ್ಪನ ಕನ್ನಡಕಗಳು ಕಣ್ಣುಗಳಿಂದ ಹೊರಜಿಗಿದು ಕೈಗಳನ್ನು ಅಲಂಕರಿಸಿದ್ದು,
ಗಡಿಯಾರದ ಅತಿವೇಗದ ಮುಳ್ಳು ಐದರಿಂದ ಆರಕ್ಕೆ ಜಿಗಿಯುವಷ್ಟರಲ್ಲಿ ನಡೆದುಹೋಯಿತು. ಅಡುಗೆ ಮನೆಯ ಆಗತಾನೆ
ಚಿಕ್ಕದಾಗಿ ಕೊತಕೊತನೆ ಶಬ್ಧ ಮಾಡುತ್ತಿದ್ದ ಸಾರು, ಟಿಕ್ ಟಿಕ್ ಎಂದು ತೀಕ್ಷ್ಣವಾಗಿ ಸದ್ದು ಮಾಡುತ್ತಿದ್ದ
ಗಡಿಯಾರ ಬಿಟ್ಟರೆ ಎಲ್ಲರೂ ಗಪ್ ಚುಪ್. ನಾನು, ಅಶ್ವಿನಿ ಒಟ್ಟಿಗೆ ಪ್ರಾಣ ಕಳ್ಕೊಬೇಕು ಆಂತ ತೀರ್ಮಾನಿಸಿದ್ದೀವಿ.
ಅವಳಿಗೂ ಒಪ್ಪಿಗೆ ಇದೆ. ನಿಮ್ಮೆಲ್ಲರ ಒಪ್ಪಿಗೆ ಬೇಕು ಎಂದು ಎಲ್ಲರ ಬೇಸ್ತು ಬಿದ್ದ ಮುಖಗಳನ್ನೂ ನೂರು
ಗುಂಡಿಗೆಗಳ ಶಕ್ತಿ ತಂದುಕೊಂಡು ನೋಡಿದೆ. ಉಚ್ಛ್ವಾಸ, ನಿಶ್ವಾಸಗಳೂ ಕೂಡ ನಿಂತುಹೋಗಿರುವ ರೀತಿಯಲ್ಲಿದ್ದರು.
ಒಳಗೆಳೆದುಕೊಂಡ ಉಗುಳಿನ ಸದ್ದು ಮನೆಯ ಮೂಲೆ ಮೂಲೆಗೂ ಪ್ರತಿಧ್ವನಿಸಿದವು. ವೃತ್ತಪತ್ರಿಕೆಯನ್ನು ತನ್ನೆದುರುಗಿನ
ಟೀಪಾಯ್ ಮೇಲೆ ಎಸೆಯುತ್ತಾ, ಆರಾಮ ಕುರ್ಚಿಯಿಂದ ಮುಂದೆ ಬಾಗಿ ಕುಳಿತುಕೊಳ್ಳುತ್ತಾ, ಹಣೆಬರಹವನ್ನೊಮ್ಮೆ
ಅಳಿಸಿಕೊಳ್ಳುವವರಂತೆ ಉಜ್ಜಿಕೊಳ್ಳುತ್ತಾ, ನಿಂಗೆ ದಿನಾ ಒಂದೊಂದು ಇಂಥಾ ತಲೆನೋವು ತರದೇ ಇದ್ರೆ ತಿಂದಿದ್ದು
ಅರಗೋದೇ ಇಲ್ವೇನೋ, ಕುದಿಯುವ ರಕ್ತ ಅಂತ ಸೂರ್ಯ ಅಗ್ತೀನಿ ಅಂದುಕೊಳ್ಳೋದಿದ್ಯಲ್ಲ ಅದು ಪರಮಮೂರ್ಖತನ.
ಮೊದಲು ಆಗಬೇಕಿರೋ ಕೆಲಸ ನೋಡು. ಸಾಯ್ತಾನಂತೆ ಸಾಯ್ತಾನೆ, ಎಂದು ಫೋರ್ ಗಳು, ಸಿಕ್ಸರ್ ಗಳು ಬಾರಿಸಿ
ಆರಾಮ ಕುರ್ಚಿಯಲ್ಲಿ ಒರಗಲು, ಇಬ್ಬರೂ ಪ್ರೇಕ್ಷಕರು ಅವರನ್ನು ಅಭಿನಂದಿಸುತ್ತಿರುವವರಂತೆ ಕಂಡರು. ಇಲ್ಲಪ್ಪ,
ಇದು ನನ್ನ ಅನಿಸಿಕೆ ಅಲ್ಲ, ನನ್ನ ನಿರ್ಧಾರ, ಬದಲಾಯಿಸೋಕೆ ಸಾಧ್ಯವಿಲ್ಲ. ನಾವು ಸಾಯಲೇ ಬೇಕು ಅಷ್ಟೇ
ಎಂದು ಮತ್ತೊಂದು ಯಾರ್ಕರ್ ಹಾಕಿದೆ. ಕಣ್ರೆಪ್ಪೆ ಬಡಿಯುವಷ್ಟರಲ್ಲಿ ಎದ್ದು ಬಂದು ಹೊಡೆದದ್ದು, ಅಮ್ಮ,
ಸವಿತಾ ಅಪ್ಪನನ್ನು ಹಿಡಿದು ನಿಯಂತ್ರಿಸಿದ್ದು ಒಂದು ನಿಮಿಷದ ನಂತರವೇ ಗೊತ್ತಾಗಿದ್ದು. ನಿನಗೆ ಅಷ್ಟು
ಅವಸರ ಇದ್ದಿದ್ರೆ ಹೇಳೋಕೇನಾಗಿತ್ತು. ನಾವೇ ಯಾರಾದ್ರೂ ಒಂದೊಳ್ಳೆ ಮನೆತನದವಳನ್ನ ತಂದು ಕಟ್ಟಿ ಸಾಯಿಸ್ತಿದ್ವಿ.
ನೋಡು ಸುಮ್ಮನೆ ಆತುರ ಪಡಬೇಡ ಮೊದಲು ಕೆಲಸ ಮಾಡಿ ಸಾಯಿ, ಆಮೇಲೆ ಮಿಕ್ಕಿದ್ದು ನೋಡುವಂತೆ ಎಂದು ಗುಡುಗುತ್ತಲೇ
ಇದ್ದರು. ಇಲ್ಲಪ್ಪಾ ನಾನು ನನ್ನ ನಿರ್ಧಾರವನ್ನ ಬದಲಿಸೋಕೆ ಸಾಧ್ಯ ಇಲ್ಲ. ನಾನು ನನಿಗೆ ಇಷ್ಟ ಬಂದ
ಹಾಗೇ ಸಾಯ್ಬೇಕು ಅಂತ ತೀರ್ಮಾನಿಸಿ ಆಗಿದೆ ಎಂದೆ. ಸವಿತಾಳನ್ನು ಒಳಗೆ ಕಳುಹಿಸಿ ಅಪ್ಪ ಅಮ್ಮ ಇಬ್ಬರೂ
ಬೀಪ್ ಬೀಪ್.. ಬೀಪ್.. ಬೀಪ್.. ಎಂದು ಬೀಪ್ ಶಬ್ಧದಲ್ಲಿ ಏನೇನೋ ತಲೆ ಚಚ್ಚಿಕೊಂಡು ಹೇಳುತ್ತಲೇ ಇದ್ದರು,
ಅದೇನು ಹೇಳುತ್ತಿದ್ದರೋ, ಯಾವ ಭಾಷೆ ಬಳಸುತ್ತಿದ್ದರೋ, ತಲೆ ಚಿಟ್ಟು ಹಿಡಿಯುವಂತಿತ್ತು. ಒಂದೂ ಅರ್ಥವಾಗಲಿಲ್ಲ.
ತಲೆ ಕೊಡವಿಕೊಂಡು, ಸೀದಾ ಮನೆಯ ಹೊರಗೆ ನಡೆದೆ.
ಈ ಪ್ರತಿಕ್ರಿಯೆಯನ್ನು
ಮುಂಚಿತವಾಗಿಯೇ ನಿರೀಕ್ಷಿಸಿದ್ದೆ. ‘ಬೀಪ್ ಶಬ್ಧಗಳಲ್ಲಿ ಬಯ್ತಾರೆ. ಇರಲಿ, ನಾನು ಸಾಯುವುದಂತೂ ಖಚಿತ.
ಏನೇ ಬಂದರೂ ನಾನು ಹಿಂತಿರುಗಿ ನೋಡುವುದಿಲ್ಲ’ವೆಂದು ರಸ್ತೆಯಲ್ಲಿ ಎದುರುಬರುವವರಿಗೂ ಕೇಳುವಂತೆಯೇ
ನುಡಿಯುತ್ತಾ ಮುನ್ನಡೆದೆ. ಮಾಮೂಲಿನ ಜಾಗದಲ್ಲಿ ಗೆಳೆಯರು ಕಾಯುತ್ತಿದ್ದರು. ಮನೆಯ ಪ್ರಸಂಗವನ್ನು ಹೇಳಲು
ಎಲ್ಲರೂ ನಕ್ಕರು. ರಾಕಿ, ವಿಕ್ರಮ, ಜಾನಿ, ಸಯ್ಯದ್, ಕುಮ್ಮಿ ಬಾಯಿ ಬಿಟ್ಟದ್ದೇ ಎಲ್ಲರ ಒಳಗಿದ್ದ ಹೊಗೆ
ಹೊರಗೆ ಬಂದು ಸುತ್ತ ಮುತ್ತಿಕೊಂಡಿತು. ಗಾಳಿಗೆ ಢಿಕ್ಕಿ ಹೊಡೆದು ಸಾಯುವ ತನ್ನ ಹುಚ್ಚು ಆಸೆಯನ್ನು
ಪೂರೈಸಲೋಸಗ ಹೊಸ ದೊಡ್ಡ ಗಾಡಿಯೊಂದನ್ನ ತಂದೇ ಬಿಟ್ಟಿದ್ದ. ವಿಕ್ರಮನು ನಶೆಯಲ್ಲಿ ಮುಳುಗಿ ಸಾಯಲು ಆಗಲೇ
ದಿನಂಪ್ರತಿ ಶ್ರಮಿಸುತ್ತಲಿದ್ದ. ಜಾನಿ ಒಂದು ಲಕ್ಷ ಪುಸ್ತಕಗಳನ್ನು ನುಂಗಿ ಸತ್ತು ಗಿನ್ನಿಸ್ ದಾಖಲೆ
ನಿರ್ಮಿಸಬೇಕೆಂದು ನಿಶ್ಚಯಿಸಿದ್ದ. ಪ್ರತಿನಿತ್ಯ, ಪ್ರತಿಕ್ಷಣ ಅವನು ಬಾಯಿಗೆ ಹಾಳೆ ತುರುಕಿಕೊಳ್ಳುತ್ತಿದ್ದುದನ್ನು
ನೋಡಿದವರ್ಯಾರೂ ಅವನ ಗೆಲುವು ಖಚಿತವೆನ್ನುತ್ತಿದ್ದರು. ಸಯ್ಯದ್ ತನ್ನ ಅಪ್ಪನ ಕಂಪನಿಯಲ್ಲೇ ನೇಣು ಹಾಕಿಕೊಳ್ಳಲು
ಸರ್ವಸಿದ್ಧತೆ ನಡೆಸುತ್ತಲಿದ್ದ. ಅವನಿಗೆ ಮುಂಚಿನಿಂದಲೂ ತನ್ನದೇ ಎಂಬ ಗುರಿ ಇರಲಿಲ್ಲ. ಓದು ಮುಗಿಸಿತ್ತುದ್ದಂತೆ
ತನ್ನ ತಂದೆ ತಯಾರಿಸಿಟ್ಟಿದ್ದ ಕುಣಿಕೆಯಲ್ಲಿ ಕೊರಳೊಡ್ಡುವುದೆಂದು ಅವನಿಗೆ ಗೊತ್ತಿತ್ತು. ಎಲ್ಲರಿಗೂ
ತಮ್ಮ ಸಾವು ಖಚಿತವಾಗಿ ಗೊತ್ತಿತ್ತು. ನನಗೂ ಅಂಥದ್ದೊಂದು ಖಚಿತ ಸಾವು ಬೇಕೆಂಬ ಹಂಬಲವಿತ್ತು. ಅಪ್ಪನ
ಕುಣಿಕೆಗೆ ನಾನು ಕೊರಳೊಡ್ಡಲು ಇಷ್ಟವಿರಲಿಲ್ಲ. ಈ ಗಾಡಿ, ಪುಸ್ತಕಗಳಲ್ಲಿ ಅದೇಕೋ ಮನಸು ಒಗ್ಗುತ್ತಿರಲಿಲ್ಲ.
ಮನಸು ನನ್ನ ಸಾವಿನ ಹಾದಿಯ ಹುಡುಕಾಟದಲ್ಲಿತ್ತು. ನನ್ನಂತೆಯೇ ಹುಡುಕಾಟದಲ್ಲಿದ್ದವಳು ಅಶ್ವಿನಿ. ಇಬ್ಬರೂ
ಜೊತೆ ಸೇರಿದೆವು ನಮ್ಮ ಸಾವಿನ ಅನ್ವೇಷಣೆಯಲ್ಲಿ ಒಂದಾದೆವು. ನನ್ನ ಅವಳ ತರಂಗಾಂತರಗಳು ತುಂಬಾನೇ ಹೊಂದಿಕೊಂಡವು.
ಅದಕ್ಕಾಗಿ ಇಬ್ಬರೂ ಒಟ್ಟಿಗೆ ಸಾಯಲು ನಿರ್ಧರಿಸಿದ್ದೆವು. ಎಲ್ಲರಿಗಿಂತ ಹೆಚ್ಚು ವಿರೋಧ ನಮಗೆ ಸಿಗಲಿತ್ತೆಂಬ
ನಿರೀಕ್ಷೆ ನಮಗಿತ್ತು ಸಹ.
ಹೊಗೆಯ
ಮೋಡದ ಲಹರಿಯಲ್ಲಿ ಕಳೆದುಹೋಗಿದ್ದವನನ್ನು ನಾಲ್ವರ ನಗು ಎಚ್ಚರಿಸಿತು. ಜೀವನ ಇಷ್ಟು ಕ್ಲಿಷ್ಟವಾಗಿದ್ದರೂ
ಹೇಗೆ ನಗುವರಿವರೆಂಬುದೇ ನನಗೆ ಅಚ್ಚರಿ. ದಿನಗಳುರುಳಿದವು…. ಜಗಳ, ವೈಶಮ್ಯ, ವಿರೋಧಗಳ ನಡುವೆ ಅಶ್ವಿನಿ
ಕುತ್ತಿಗೆಗೆ ಹಗ್ಗ ಬಿಗಿದೆ, ನಾನೂ ಬೆಂಕಿಯಲ್ಲಿ ಬೆಂದು ಸತ್ತೆ. ಎಲ್ಲ ಸ್ನೇಹಿತರೂ ಅವರವರ ಇಚ್ಛೆಯಂತೆಯೇ
ಸತ್ತರು. ಎಲ್ಲರ ಹಿರಿಯರೂ ಕೊಂಚ ದಿನ ತಮ್ಮ ತಮ್ಮ ಕಣ್ಣೀರಿನಲ್ಲೇ ಮುಳುಗೆದ್ದರು. ನಿಜವಾಗಲೂ ಒಂದೊಂದು
ಸಲ ಮುಜುಗರವೆನಿಸುತ್ತಿತ್ತು, ತುಂಬಾ ನೋವು ತರುತ್ತಲಿತ್ತು. ಇವರುಗಳ ಮನ ನೋಯಿಸಿ ನಾವು ಸಾಧಿಸಿದ್ದಾದರೂ
ಏನೆಂದು ಪ್ರಶ್ನೆ ಹುಟ್ಟುತ್ತಲಿತ್ತು. ಆದರೆ ತಮ್ಮ ಮಕ್ಕಳ ಇಚ್ಛೆಯಂತೆಯೇ ಸಾಯಲು ಬಿಟ್ಟ ಎಷ್ಟೋ ತಂದೆ
ತಾಯಿಗಳ ಸಮಾಜವನ್ನೂ ಕೂಡ ಕಂಡಿದ್ದೆವು. ಸ್ನೇಹಿತ ಅಶೋಕ ಚದುರಂಗದ ಮಣೆಯಲ್ಲಿ ರಾಜ, ರಾಣಿ, ಮಂತ್ರಿಯರ
ಕೈಗಳಿಂದ ಸಾಯಲು ಹೊರಟಾಗ ತನ್ನ ತಂದೆ ತಾಯಿಗಳು ಶುಭ ಕೋರಿ ಕಳುಹಿಸುತ್ತಿದ್ದುದು ಇನ್ನೂ ಕಣ್ಣಿಗೆ
ಕಟ್ಟಿದಹಾಗಿತ್ತು.
ಸೂರ್ಯ
ಚಂದ್ರರು ಲಾಗ ಹಾಕಿ ಮುಳುಗೆದ್ದರು….
ಖಾಲಿ,
ಶಾಂತ ಬಯಲು, ನಾನೂ, ನನಗೆ ಗಂಟುಬಿದ್ದವಳು, ಆಕೆ ಕೈಯಲ್ಲೊಂದು, ಕಂಕುಳಲ್ಲೊಂದು ಮಿಲಿಮೀಟರ್ ಗಾತ್ರದ
ಜೀವಗಳು, ಜೊತೆಗೆ ನಮ್ಮ ಜೊತೆ ಸತ್ತ ಹಲವಾರು ಸ್ನೇಹಿತರುಗಳು, ಅವರ ಸ್ನೇಹಿತರುಗಳು ಎಲ್ಲರೂ ಒಂದು
ಸಾಲಿನಲ್ಲಿ ನಡೆದಿದ್ದೆವು. ನಮ್ಮ ಮುಂದೆಯೂ ಅದೇ ರೀತಿಯ ಎರಡೂ ತುತ್ತತುದಿಗೆ ಮುಟ್ಟುತ್ತಿರುವ ಸಾಲುಗಳು,
ನಮ್ಮ ಹಿಂದೆಯೂ ಅಂತಹುದೇ ಸಾಲುಗಳ ರಾಶಿಗಳು. ಎಲ್ಲರೂ ನಡೆದೆವು. ನಡೆಯುತ್ತಲೇ ಬಾಯಿಗಳು ಬಡಬಡಿಸುತ್ತಿದ್ದವು.
ಈ ದಿನಪತ್ರಿಕೆಯಲ್ಲಿ ಹಿಂದಿನ ದಿನದ ವಿಷಯಗಳ ಬದಲು ನಾಳಿನ ವಿಷಯಗಳು ಶುರುಮಾಡಬೇಕು ಕಣ್ರೋ ಎಂದೆ.
ರಾಕಿ, ಈ ಅಪ್ಪ ಅಮ್ಮಂದ್ರು ನಮಗೆ ಹೆಸರು ಕೊಡೋದೆಲ್ಲಾ ನಿಂತುಹೋಗಿ ನಾವು ಅಪ್ಪ ಅಮ್ಮಂದ್ರಿಗೆ ಹೆಸರು
ಕೊಡೋ ಹಾಗೆ ಮಾಡ್ಬೇಕು ಎಂದ, ಅಷ್ಟು ದೂರದಲ್ಲಿ ವಿಶ್ವ ಎಂಬೋರ್ವನು ಈ ನಗರಗಳಲ್ಲಿ ಬೇಸಾಯ, ಹೊಲಗಳನ್ನ
ಮಾಡ್ಬಿಡಬೇಕು, ಹಳ್ಳಿಗಳಿಗೆ ಎಲ್ಲ ಮನೆಗಳನ್ನ ಎತ್ತಂಗಡಿ ಮಾಡ್ಬಿಡಬೇಕು ಹೆಂಗಿರುತ್ತೆ ಎಂದೊಮ್ಮೆ
ಮೀಸೆ ತಿರುವಿದನು. ನಮ್ಮ ಹಿಂದಿನ ಸಾಲಿನವರೂ ಸಹ ಏನೇನೋ ನಮಗಿಂತಲೂ ವಿಚಿತ್ರವಾಗಿ ಮಾತನಾಡಿಕೊಳ್ಳುತ್ತಿದ್ದರು
ಮತ್ತು ನಮ್ಮ ಮಾತಿಗೆ ಸಣ್ಣದಾಗಿ ನಗುತ್ತಲಿದ್ದರು, ನಮ್ಮ ಮುಂದಿನ ಸಾಲಿನವರೂ ಸಹ ಹಿಂತಿರುಗಿ ಆಗಾಗ
ನಗುತ್ತಲಿದ್ದರು. ಆದರೆ ಇಬ್ಬರ ನಗುವಲ್ಲೂ ವ್ಯತ್ಯಾಸ ಕಾಣುತ್ತಲಿತ್ತು. ನಮ್ಮ ಸಾಲಿನವರ್ಯಾರೂ ಯಾವುದಕ್ಕೂ,
ಯಾರಿಗೂ ತಲೆ ಕೆಡಿಸಿಕೊಳ್ಳದೇ ನಮ್ಮ ಮಾತು ಮುಂದುವರೆಸುತ್ತಾ ಮುಂದೆ ಸಾಗಿದೆವು. ಯಾರೋ ಒಬ್ಬ ನಮ್ಮ
ಸಾಲಿನವನು ಮನೆ, ಮದುವೆ, ಸಂಸಾರ ಎಲ್ಲವೂ ಹೋಗಿ ಯಾವುದೂ ನನ್ನದಲ್ಲ, ಯಾರೂ ನನ್ನವರಲ್ಲ, ಪ್ರಪಂಚದಲ್ಲಿ
ಎಲ್ಲಿ ಯಾರು ಎಲ್ಲಿ ಬೇಕೆಂದರೂ ಇರುವಹಾಗೆ ಪ್ರಪಂಚವನ್ನ ಪರಿವರ್ತಿಸಬೇಕೆಂದು ತನ್ನ ಇಂದ್ರಜಾಲದ ಕಡ್ಡಿಯನ್ನ
ತಿರುವಲು ಶುರುಮಾಡಿದ, ಎಲ್ಲರೂ ಹೌದೌದೆಂದು ಅವನ ಹೊಸ ಆಲೋಚನೆಗೆ ಬೆನ್ನು ತಟ್ಟಿದೆವು. ಸೈಯೆದ್ ಕೂಡ
ಅವನಾಶೆಯನ್ನು ಮುಂದಿಟ್ಟನು, ಇನ್ನು ಮುಂದೆ ದುಡ್ಡು ಕೊಟ್ರೆ ಅನ್ನ ಸಿಗಬಾರದು, ಅನ್ನ ಕೊಟ್ರೆ ದುಡ್ಡು
ಸಿಗುವಹಾಗಾಗಬೇಕು, ನಾವು ದುಡ್ಡು ತಿನ್ನುವಂತಾಗಿಬಿಡಬೇಕು ಎಂದನು ಅವನ ಬೆನ್ನನ್ನೂ ತಟ್ಟಿದೆವು. ನಮ್ಮ
ಮಾತುಗಳ ಮೇಲೆ ನಂಬಿಕೆಯಿತ್ತು ನಮಗೆ. ಅದ್ಯಾರೋ ಪೊಲೀಸ್ ಠಾಣೆಯನ್ನೆಲ್ಲಾ ತೆಗೆದುಹಾಕಿ ಕಳ್ಳರ ಠಾಣೆಯನ್ನು
ಜಾರಿಗೆ ತರಬೇಕೆಂದು ಹಾಸ್ಯಮಯವಾಗಿ ತನ್ನ ವಿಷಯವನ್ನ ಹೇಳುತ್ತಿರುವಾಗ್ಗೆ ಎದುರಿಗೆ ಅಷ್ಟು ದೂರದಲ್ಲಿ
ದೊಡ್ಡ ಗೇಟೊಂದು ಕಂಡಿತು. ಎಷ್ಟೋ ದೂರ ಕ್ರಮಿಸಿದ್ದೆವು. ಎಲ್ಲರೂ ಗೇಟಿನ ಒಳಗೆ ನುಸುಳಿಕೊಂಡು ಮುಂದೆ
ಹೋಗಬೇಕಿತ್ತು. ಹಲವರು ಮೇಲೆ ಹತ್ತಲು ಯತ್ನಿಸಿದರು. ಕೊನೆಗೆ ಗೇಟ್ ನಿಂದ ನುಸುಳುವುದೇ ವಾಸಿಯೆಂದು
ಎಲ್ಲರೂ ಒಳನುಸುಳುತ್ತಾ ಬಂದೆವು. ಗೇಟಿನ ಆಚೆಗೆ ಕಂಡ ದೃಶ್ಯ ನಮ್ಮೆಲ್ಲರ ಮಾತುಗಳನ್ನ ಕಿತ್ತುಕೊಂಡಿತು.
ಸಂಪೂರ್ಣ ನಿಶ್ಯಬ್ಧ. ಎಲ್ಲರೂ ಬಿಟ್ಟ ಬಾಯಿ ಮುಚ್ಚಲೇ ಇಲ್ಲ. ನಮ್ಮ ಎದುರಿಗೆ ದೂರದಲ್ಲಿ ನಮಗೆ ಮುಖ
ಮಾಡಿ ನಿಂತಿದ್ದವರನ್ನ ನಾವು ಮರೆತಿರಲಿಲ್ಲ. ಆದರೆ ಇಲ್ಲಿ ಹೀಗೆ ನಮಗಿಂತ ಮುಂಚಿತವಾಗಿಯೇ ಬಂದು ನಿಂತಿರುವರೆಂಬ
ನಿರೀಕ್ಷೆಯೂ ನಮಗಿರಲಿಲ್ಲ. ಸಾವರಿಸಿಕೊಂಡು ನಮ್ಮ ಇಡೀ ಸಾಲು ಅವರನ್ನು ಸಮೀಪಿಸಿದೆವು. ಅವರದ್ದೂ ಒಂದು
ತುದಿಯಿಂದ ತುದಿಯವರೆಗೆ ಸಾಲಿತ್ತು. ಎಲ್ಲರೂ ಇದ್ದರು. ಆದರೆ, ಎಲ್ಲರೂ ಬಾಯಿಗಳನ್ನು ತೆರೆಯಲು ಸಾಧ್ಯವಾದಷ್ಟೂ
ದೊಡ್ಡದಾಗಿ ತೆರೆದು ನಗುತ್ತಲಿದ್ದರು. ಚಿತ್ರ ವಿಚಿತ್ರವಾಗಿ ನಗುತ್ತಲಿದ್ದರು. ಅವರ ನಗುವನ್ನು ಕಂಡು
ಅಸಹ್ಯವಾದ ಕೋಪ ಒಂದು ಕಡೆ, ಅದೇನೋ ಸೋತ ಮನೋಭಾವವೊಂದು ಕಡೆ, ಛಲವೊಂದು ಕಡೆ, ಇನ್ನೂ ಏನೇನೋ ಭಾವಗಳು
ಒಟ್ಟೊಟ್ಟಿಗೇ ಧಾಳಿಯಿಟ್ಟವು. ನಮ್ಮ ತಂದೆತಾಯಿ, ಗುರುಹಿರಿಯ ವಯಸ್ಕರನ್ನು ಇಲ್ಲಿ ನಿರೀಕ್ಷಿಸಿರಲಿಲ್ಲ
ಯಾರೂ ಸಹ. ಅದೇಕೋ, ಹಿಂದೆ ಅವರುಗಳು ಬೀಪ್ ಶಬ್ಧಗಳಲ್ಲಿ ಹೇಳುತ್ತಿದ್ದ ಎಲ್ಲ ಮಾತುಗಳೂ ಈಗ ಅರ್ಥವಾಗುತ್ತಿದ್ದವು.
ಕಣ್ಣೆದುರಿಗಿನ ಅವರುಗಳ ನಗು, ಕಿವಿಯಲ್ಲಿ ಗುಯ್ಗುಡುತ್ತಿರುವ ಅವರೆಲ್ಲರ ಅಂದಿನ ಕರ್ಕಶ ಮಾತುಗಳು
ಎಲ್ಲ ಒಟ್ಟು ಸೇರಿ ಭೂಮಿ ಗರ ಗರ ಗರನೆ ತಿರುಗಲು ಶುರುಮಾಡಿತು.
ಬೆಳಕು
ಕತ್ತಲನ್ನು, ಕತ್ತಲು ಬೆಳಕನ್ನು ನಿಧಾನಗತಿಯಲ್ಲಿ ನುಂಗುತ್ತಾ ಹೋಯಿತು…
ಮಗಳು
ನಗ್ನವಾಗಿ ಮೈ ಪ್ರದರ್ಶಿಸುತ್ತಾ ನಿಂತಿದ್ದಳು. ನನ್ನ ಕೈಯಲ್ಲಿ ಭೂತಕನ್ನಡಿಯೊಂದಿತ್ತು. ನಾನು ಗೊತ್ತಿದ್ದೂ
ಗೊತ್ತಿದ್ದೂ ಬೀಪ್ ಬೀಪ್ ಬೀಪ್ ಬೀಪ್ ಬೀಪ್… ಎಂದು ಏನೇನನ್ನೋ ಒದರುತ್ತಲಿದ್ದೆ. ತಡೆಯಬೇಕೆಂದರೂ ತಡೆಯಲು
ಸಾಧ್ಯವಾಗುತ್ತಲಿರಲ್ಲಿ. ಮಗಳ ಕಡೆ ಕಣ್ಣೆತ್ತಲೂ ಸಾಧ್ಯವಾಗುತ್ತಿರಲಿಲ್ಲ. ಅವಳು ಆರಾಮವಾಗಿ ಅರ್ಧ
ಕೂದಲು ಕತ್ತರಿಸುತ್ತಾ ನಿಂತಿದ್ದಳು. ಮತ್ತೆ ಬಾಯ್ತೆರೆದೆ, ಬೀಪ್ ಬೀಪ್ ಬೀಪ್ ಬೀಪ್…!
-ನೀ.ಮ. ಹೇಮಂತ್
No comments:
Post a Comment