ಮುನ್ನುಡಿ:
ಇದು ಪ್ರೇಮಿಗಳ ಸಲ್ಲಾಪವಲ್ಲ. ಇದು ಅನೈತಿಕ ಸಂಬಂಧವಲ್ಲ. ಇವನು ಕಾಮುಕನಲ್ಲ. ಅವಳು ಲಜ್ಜೆಗೆಟ್ಟ ಹೆಣ್ಣಲ್ಲ.
ಆದರೆ ಇದೊಂದು ಪ್ರೇಮಕೆಥೆ.
ಮೌನ.
ಮನದಲ್ಲಿ ನೂರು ತೊಳಲಾಟಗಳಿದ್ದರೂ ಆತ ತುಟಿ ಬಿಚ್ಚದೆ ತನ್ನ ಮೇಲೆ ಮಾತ್ರ, ತನ್ನೆದುರಿಗಿದ್ದ ದೀಪ
ಪಸರಿಸುತ್ತಿದ್ದ ಮಂದ ಬೆಳಕಿನಲ್ಲಿ ಕುಳಿತಿದ್ದ. ಉಳಿದ ಇಡೀ ಕೋಣೆ ಕತ್ತಲ್ಲಲ್ಲಿ ಮಲಗಿತ್ತು. ಆತನ
ಹಿಂದೆ ಇದ್ದ ಮಂಚದ ಮೇಲೆ ಆಕೆ ತಲೆ ಎತ್ತದೆ ಕುಳಿತಿದ್ದಳು. ಇಡೀ ಕೋಣೆಯಲ್ಲಿದ್ದ ಕತ್ತಲು, ಖಾಲಿತನ
ಅವಳ ಒಳಗೂ ಇತ್ತು. ವಿದ್ಯುದ್ದೀಪವನ್ನೇ ಕಣ್ಣು ಮಿಟುಕಿಸದೆಯೇ ನೋಡುತ್ತಾ ಮೌನ ಮುರಿದು “ನನಗೆ ನೀನು
ಬೇಕು” ಎಂದುದ್ಗರಿಸುವನು. ಆಕೆಯೂ ತಾಳ್ಮೆಯಿಂದ “ನನಗೂ ನೀನು ಬೇಕು” ಎಂದು ಉತ್ತರಿಸಿ ಚಿಕ್ಕದಾಗಿ
ನಗುವಳು. ಮತ್ತದೇ ಮೌನದ ಆಸರೆ ಪಡೆದು ಕೊಂಚ ಸಮಯದ ನಂತರ ನಿಧಾನವಾಗಿ ಅವಳ ಕಡೆ ತಿರುಗುತ್ತಾ ಮತ್ಯಾಕ್
ನೀನು ನನ್ನ ಬಳಿ ಬರಲ್ಲ ಅಂತೀಯ ಎಂದು ಅವಳನ್ನೇ ನೋಡತೊಡಗಿದ. ಅವಳು ನೇರವಾಗಿ “ನಿನ್ನಲ್ಲಿ ಮುಂಚಿನ
ಆ ಸಾಮರ್ಥ್ಯ ಉಳಿದಿಲ್ಲ ಅದಕ್ಕೇ ನನಗೆ ಬರಲು ಇಷ್ಟವಾಗುತ್ತಿಲ್ಲ” ಎಂದು ನುಡಿದಳು. ಈತನಿಗೆ ಅವಮಾನವಾದಂತಾಯಿತು.
ಮುಖ ಹಿಂಜಿಕೊಂಡು, ತನ್ನ ಕಾಲುಗಳ ಕಡೆ ನೋಡತೊಡಗಿದ. ಕಣ್ಣು ಮೇಲೆತ್ತದೆಯೇ ತನ್ನ ಮಾತು ಮುಂದುವರೆಸಿದ.
ನಾನು ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದೀನಿ. ನೀನು ನನಗೆ ಪ್ರತಿ ದಿನ ಬೇಕೇ ಬೇಕು ಎಂದು ಹೇಳುವಷ್ಟರಲ್ಲಿ
ಅವಳು ನಗಲು ಶುರುಮಾಡುವಳು. ಇವನಿಗೆ ಕೋಪ ಬಂದರೂ ತಡೆದುಕೊಂಡು ಯಾಕ್ ನಗ್ತೀಯಾ, ನೀನಾಗಿ ನೀನೇ ಬಂದರೆ
ನಾನು ಸ್ವೀಕರಿಸಬೇಕು. ನನಗೆ ಬೇಕೆಂದಾಗ ನೀನ್ ಯಾಕ್ ಬರಲ್ಲ? ಅವಳು ಮತ್ತೆ ನಗುವಳು. ನನಿಗೆ ನಿನ್ನ
ನಗು ಬೇಡ, ಉತ್ತರ ಹೇಳು ಎಂದು ತಾಳ್ಮೆ ಕಳೆದುಕೊಂಡು ಹೇಳುವನು. ಅವಳು ಕೀಟಲೆ ಮಾಡುವ ರೀತಿಯಲ್ಲಿ,
“ನೀನು ನನ್ನನ್ನ ಉಪಯೋಗಿಸಿಕೊಳ್ತಿದ್ಯ, ನನಗೆ ಬೇಕು ಅನ್ನಿಸಿದಾಗ ತಾನೆ ನಿನ್ನನ್ನ ಉಪಯೋಗಿಸೋದಕ್ಕೆ
ಬಿಡಬೇಕು?” ಎಂದು ಒಳಗೊಳಗೇ ನಗುವಳು. ಅವನು ಅವಳ ಮಾತನ್ನು ಒಪ್ಪದೇ “ಇಲ್ಲ ನಾನು ನಿನ್ನನ್ನು ಎಷ್ಟು
ಉಪಯೋಗಿಸಿಕೊಳ್ತಿದ್ದೀನೋ, ನೀನೂ ನನ್ನನ್ನ ಅಷ್ಟೇ ಉಪಯೋಗಿಸ್ಕೊಳ್ತಿದ್ಯ. ನಿನಗೂ ಅಗತ್ಯವಿದೆ, ಅದು
ನಿನಗೆ ನೆನಪಿರಲಿ” ಎಂದು ಅವಳ ಉತ್ತರವನ್ನು ನಿರೀಕ್ಷಿಸುವನು. ಅವಳು ಕೊಂಚ ಆಧಿಕಾರ ವಾಣಿಯಲ್ಲೇ, ನನಗೆ
ನಿನ್ನ ಅಗತ್ಯ ಇಲ್ಲ ಎಂದು ಹೇಳಿ ಮಾತು ಮುರಿಯುವಳು.
ಅವನ
ಮರ್ಯಾದೆಗೆ ಧಕ್ಕೆಯುಂಟಾದಂತಾಗಿ ಏನು ಮಾಡುವುದೆಂದು ತೋಚದೆ, ತನ್ನ ಟೇಬಲ್ ಬಳಿ ಹೋಗಿ ಒಂದು ಸಿಗರೇಟ್
ಹಚ್ಚಿ ಧೀರ್ಘವಾಗಿ ಹೊಗೆ ಎಳೆದುಕೊಂಡು ಹೊಗೆ ಒಮ್ಮೆ ಶ್ವಾಸಕೋಶದವರೆಗೂ ಸುತ್ತಿ, ಹೊಗೆಯ ಮತ್ತು ಮೆದುಳನ್ನು
ಆವರಿಸಿ, ತಲೆ ಎತ್ತಿ ಹೊಗೆ ಬಿಡುತ್ತಾ ನಾನು ನನ್ನ ಪಾಡಿಗೆ ಇದ್ದೆ ತಾನೆ ನೀನೇ ಪ್ರತಿ ದಿನ, ಪ್ರತಿ
ಕ್ಷಣ ನನ್ನನ್ನ ಕಾಡಿ ನಿನ್ನ ಸಂಗ ಬೆಳೆಸುವಂತೆ ಮಾಡಿದ್ದು, ನೆನಪಿರಲಿ. ಆಗ ನಿನಗೆ ನನ್ನ ಅಗತ್ಯವಿತ್ತು.
ಇಲ್ಲವಾದಲ್ಲಿ ಸತ್ತು ಹೋಗಿರುತ್ತಿದ್ದೆ. ಆದರೆ ಈಗ ನನ್ನ ಅಗತ್ಯ ಕಾಣ್ತಿಲ್ಲ ನಿನಗೆ ಅಲ್ವಾ. ನೀನು
ಬರೋ ಮುನ್ನ ಕೂಡ ನಾನು ಚೆನ್ನಾಗೆ ಇದ್ದೆ, ಪುಸ್ತಕಗಳು, ಕೆಲ್ಸಗಳು, ನನ್ನದೇ ಸಂಬಂಧಗಳು, ಹೊಣೆಗಾರಿಕೆಗಳು
ಎಲ್ಲದರ ನಡುವೆಯೂ ನಿನಗಾಗಿ ಬಿಡುವು ಮಾಡ್ಕೋತಿದ್ದೆ. ನಿನಗೋಸ್ಕರ ಎಲ್ಲದರಿಂದ ಹೊರಬಂದು ನಿನ್ನ ಜೊತೆ
ಸಮಯ ವ್ಯಯ ಮಾಡ್ತಿದ್ದೆ. ಆಗ ಸಮಯವಲ್ಲದ ಸಮಯದಲ್ಲೆಲ್ಲಾ ನನ್ನನ್ನ ಹುಡುಕಿಕೊಂಡು ಬಂದಾಗ ನಿನ್ನನ್ನ
ಸಂತೋಷವಾಗಿ ಉಪಚರಿಸುತ್ತಿದ್ದೆ. ನಿನಗೋಸ್ಕರ ಎಷ್ಟು ರಾತ್ರಿಗಳು ನಾನು ನಿದ್ರೆ ಬಿಟ್ಟಿದ್ದೀನಿ, ಊಟ
ಬಿಟ್ಟು ನೆಮ್ಮದಿ ಕಳ್ಕೊಂಡಿದ್ದೀನಿ ನನಿಗೆ ಮಾತ್ರ ಗೊತ್ತು. ನಿನಗೆ ಮೋಸ ಆಗಬಾರದು, ನೀನು ಚೆನ್ನಾಗಿರಬೇಕು
ಅಂತ ಏನೆಲ್ಲಾ ಮಾಡೋವಾಗ ಹೇಳಬೇಕಿತ್ತು ನನ್ನ ಅಗತ್ಯ ನಿನಗೆ ಇಲ್ಲ ಅಂತ. ಇಷ್ಟು ಹೊತ್ತು ಸುಮ್ಮನೆ
ಕೇಳಿಸಿಕೊಳ್ಳುತ್ತಿದ್ದ ಅವಳು ನೀನು ತುಂಬಾನೇ ಭಾವುಕನಾಗ್ತಿದ್ಯ. ನೀನು ಹೇಳ್ತಿರೋದೆಲ್ಲಾ ಸಂಪೂರ್ಣವಾಗಿ
ತಪ್ಪು ಅಂತ ನಾನು ಹೇಳ್ತಿಲ್ಲಾ ಆದರೆ, ವಾಸ್ತವ ಪರಿಸ್ತಿತಿಯನ್ನ ನೀನೂ ಕೂಡ ಒಪ್ಪಿಕೊಳ್ಳಲೇ ಬೇಕು.
ಆಗ ನನಗೆ ನೀನು ಬೇಕಿತ್ತು. ಈಗಲೂ ಕೂಡ, ಆದರೆ ಆಗ ನಿನ್ನಲ್ಲಿ ಇದ್ದ ಯಾವುದೇ ಗುಣ ಈಗ ಉಳಿದಿಲ್ಲ.
ನಾನಾಗಿ ನಾನೇ, ನನಗೆ ಗೊತ್ತಿಲ್ಲದೇನೇ ನಿನಗೆ ಒಪ್ಪಿಸಿಕೊಂಡುಬಿಡ್ತಿದ್ದೆ. ಮತ್ತೆ ನೀನು ಎಲ್ಲವನ್ನೂ
ನನಗೆ ಮಾತ್ರ ಬೇಕಾಗಿ ಮಾಡಿದ್ದು ಅನ್ನೋ ರೀತಿ ಯೋಚಿಸ್ತಿದ್ದೀಯ. ನನಗೆ ನಿನ್ನ ಅವಶ್ಯಕತೆ ಎಷ್ಟಿತ್ತೋ
ನಿನಗೂ ಸಹ ನಾನು ಬೇಕಿತ್ತು. ಇಲ್ಲವಾದಲ್ಲಿ ಹೇಗೆ ನನ್ನ ಜೊತೆ ಸೇರ್ತಿದ್ದೆ ನೀನು? ಅವಳ ಮಾತುಗಳನ್ನ
ಅರಗಿಸಿಕೊಳ್ಳಲಾಗದೆ, ಸಿಗರೇಟನ್ನ ನಂದಿಸುತ್ತಾ, ಶುರುಮಾಡಿದ್ದು ನೀನೇ ತಾನೆ, ನಿನ್ನಿಂದಲೇ ಕ್ರಮೇಣ
ನಿನ್ನ ಹಂಬಲ ನನ್ನಲ್ಲಿ ಹುಟ್ಟುತ್ತಾ ಹೋಗಿದ್ದು ಎಂದು ಆರೋಪವನ್ನು ಅವಳ ಮೇಲೆಯೇ ಹಾಕುವನು. ಅವಳು
ಕೂಡ ಒಪ್ಪದೇ ಇನ್ನೂ ಶಾಂತವಾಗಿಯೇ, ಮುಗುಳ್ನಗುತ್ತಲೇ ಒಂದು ಕೈಯಿಂದ ಚಪ್ಪಾಳೆ ಸಾಧ್ಯ ಇಲ್ಲ, ಶುರುವಾಗಿದ್ದು
ನಿನ್ನ ಬಯಕೆಗಳಿಂದಲೇ. ಯೋಚನೆ ಮಾಡಿ ನೋಡು. ನಿನಗೆ ಬೇಕಿತ್ತು, ನಾನು ಸಿಕ್ಕೆ ಅಷ್ಟೇ ಎಂದು ಮತ್ತೆ
ಆರೋಪವನ್ನು ಅವನ ಕಡೆಗೇ ತಿರುಗಿಸಿ ನಿರುಮ್ಮಳವಾಗಿರುವಳು. ಆತ ಏನು ಬೇಕಾದರೂ ಅನುಭವಿಸಿಯಾನು. ಅವಳಿಂದ
ಸೋಲನ್ನು ಮಾತ್ರ ಸಾಧ್ಯವಿಲ್ಲ. ಸೋಲಿನ ಹಿಂದೆಯೇ ಬಂದ ನಿಸ್ಸಹಾಯಕತೆ, ನಿಸ್ಸಹಯಾಕತೆಯ ಜೊತೆಗೆ ಬಂದ
ಕೋಪವನ್ನು ತಾಳ್ಮೆಯೆಂಬ ಅಸ್ತ್ರವನ್ನು ಶಕ್ತಿ ಮೀರಿ ಪ್ರಯೋಗಿಸಿ ಅವಳು ಕುಳಿತಿರುವ ಮಂಚದ ಮೇಲೆ ಅವಳ
ಎದುರುಗಡೆಯೇ ಕೂತು ಅವಳ ಕೈ ಹಿಡಿದು, ನೋಡು ನಿನ್ನನ್ನ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಸ್ತೀನಿ, ನೀನು
ಹೇಗೇ ಬದಲಾದರೂ ನಾನು ಕೇಳಲ್ಲ, ಆದರೆ ನೀನು ಇಷ್ಟು ದಿನ ನನ್ನ ಜೊತೆ ಹೇಗೆ ನಡೆದುಕೊಳ್ತಿದ್ಯೋ ಹಾಗೇ
ಇರು. ನಾನು ಕೇಳಿ ಕೇಳಿದ್ದನ್ನೆಲ್ಲಾ ಸಂತೋಷವಾಗೇ ಕೊಡ್ತಿದ್ದೆ. ನಿನಗೂ ಖುಷಿ ನನಗೂ ಖುಷಿ ಇರ್ತಿತ್ತು.
ಇದ್ದಕ್ಕಿದ್ದ ಹಾಗೆ ನೀನು ನನ್ನನ್ನ ಹೀಗೆ ದೂರ ತಳ್ಳಿದ್ರೆ ನಾನ್ ಏನ್ ಮಾಡ್ಲಿ ಹೇಳು. ನೀನು ಜೊತೆಲಿದ್ರೆ
ನಾನೂ ಬದುಕ್ತಿದ್ದೀನಿ ಅನ್ಸುತ್ತೆ ಇಲ್ಲ ಅಂದ್ರೆ ಕೇವಲ ಜೀವಿಸ್ತಿರೋ ದೇಹ ಇದ್ದಂಗೆ ಇರ್ತೀನಿ. ನನಿಗೆ
ನೀನು ಬೇಕು ಎಂದು ಗಟ್ಟಿಯಾಗಿ ಕೈ ಹಿಡಿಯುವನು. ಅವಳು ಕೊಸರಾಡಿಕೊಂಡು ಕೈ ಬಿಡಿಸಿಕೂಳ್ಳುತ್ತಾ, ನೀನು
ನನ್ನಲ್ಲಿ ಅಸಹ್ಯವನ್ನ ಹುಟ್ಟಿಸುತ್ತಿದ್ದೀಯ, ನೀನ್ ಹೀಗೆ ನನ್ನನ್ನ ಬೇಡ್ಕೋಬಾರದು, ನನ್ನಲ್ಲಿ ಮುಂಚಿನಂತೆ
ಅದೇ ಹಂಬಲ ಹುಟ್ಟುವಂತೆ ಮಾಡು ನಾನು ಮತ್ತದೇ ನಿನ್ನವಳಾಗಿ ಇರ್ತೀನಿ. ಯಾಕೆ ನಿನಗೆ ಇದು ಅರ್ಥ ಆಗ್ತಿಲ್ಲ.
ನಾನು ನಿನ್ನ ಬಲವಂತಕ್ಕೆ ಇದ್ದೆ ಅಂದ್ರೂ ಏನೂ ಉಪಯೋಗ ಆಗಲ್ಲ. ನಿನಗೇ ಬೇಸರ ಹುಟ್ಟೋಕೆ ಶುರುವಾಗುತ್ತೆ.
ಅರ್ಥ ಮಾಡ್ಕೊ ಸ್ವಲ್ಪ, ಚಟಕ್ಕೆ ಬೀಳಬೇಡ ಎಂದು ಅವಳು ದೂರ ಸರಿಯಲು ಪ್ರಯತ್ನ ಪಟ್ಟಷ್ಟೂ ಇವನು ಇಲ್ಲ
ನೋಡು ನೀನು ನನ್ನಿಂದ ದೂರ ಹೋಗೋಕೆ ಹೀಗೆಲ್ಲಾ ಕಾರಣಗಳನ್ನ ಕೊಡ್ತಿದ್ಯಾ ಅಷ್ಟೇ. ನನ್ನಲ್ಲಿ ಏನೂ ಅಂಥಾ
ಬದಲಾವಣೆ ಆಗಿಲ್ಲ. ಮುಂಚಿನಂತೆಯೇ ನಿನ್ನನ್ನು ಪುಳಕಗೊಳಿಸ್ತೀನಿ, ಸಂತೋಷ ಪಡಿಸುತ್ತೀನಿ, ಅದೇ ಸುಖದಲ್ಲಿ
ನಿನ್ನನ್ನ ತೇಲಿಸ್ತೀನಿ ಎಂದು ಅವಳನ್ನು ಎಳೆದಾಡುವನು. ನೀನು ತಪ್ಪು ಮಾಡ್ತಿದ್ಯ. ನೆನ್ನೆ ಆಗಿದ್ದನ್ನ
ನೆನೆಸಿಕೊಂಡು ಶಾಂತವಾಗಿ ಯೋಚನೆ ಮಾಡು. ಆವೇಶಕ್ಕೆ ಒಳಗಾಗಿದ್ಯ. ಈಗ ಮಾಡೋದೆಲ್ಲಾ ನಂತರ ನಿನಗೆ ತಪ್ಪಾಗೇ
ಕಾಣ್ಸುತ್ತೆ. ಆಮೇಲೆ ಮತ್ತೆ ಖಿನ್ನನಾಗ್ತೀಯಾ. ಕ್ಷಮೆ ಕೇಳಿದ್ರು ಉಪಯೋಗ ಆಗಲ್ಲ. ಎಂದು ಅವಳು ಹೇಳುತ್ತಿದ್ದರೂ
ಅವಳನ್ನು ಬಲವಂತ ಪಡಿಸುತ್ತಲೇ ಹೋಗುತ್ತಾನೆ. ಅವಳು ಮೊದಮೊದಲು ವಿರೋಧಿಸುತ್ತಾಳೆ. ತಳ್ಳಿದರೂ, ಎತ್ತ
ತಿರುಗಿದರೂ ಬೇಕೇ ಬೇಕೆಂದು ಹಟ ತೊಟ್ಟವನಲ್ಲಿ ಕ್ರಮೇಣ ಒಪ್ಪಿಕೊಂಡು ಅಸಹಾಯಕಳಾಗಿ, ಪ್ರತಿಕ್ರಿಯೆಯನ್ನೇ
ನೀಡದೆ ಸುಮ್ಮನಿದ್ದುಬಿಡುವಳು. ಆತ ಬಲಾತ್ಕಾರವಾಗಿ ಅವಳನ್ನು ಪಡೆದ.
ಮೌನ.
ಇಡೀ
ಕೊಠಡಿಯಲ್ಲಿ ಒಂದು ತುದಿಯಲ್ಲಿ ಇರುವ ಹಾಳೆಗಳ ಮೇಲೆ ಬೀಳುತ್ತಿರುವ ಮಂದ ಬೆಳಕು, ಮತ್ತೆಲ್ಲಾ ಕತ್ತಲೆ.
ಕತ್ತಲೆಯಲ್ಲಿ ಯಾವುದೇ ಚಲನೆಯಿಲ್ಲದೆ ಅದೇ ಮಂಚದ ಮೇಲೆ ಕುಳಿತಿರುವ ಎರಡು ಕತ್ತಲ ಆಕೃತಿಗಳಂತಿರುವ
ಆವನು ಮತ್ತು ಅವಳು. ಕತ್ತಲಲ್ಲೂ ನಿರಂತರವಾಗಿ, ಸ್ಪಷ್ಟವಾಗಿ ಶಬ್ಧ ಮಾಡುತ್ತಾ ಕೆಲಸ ಮಾಡುತ್ತಿರುವ
ಗಡಿಯಾರ. ಎಷ್ಟೋ ಸಮಯದ ನಂತರ ಮೌನವನ್ನು ಸೀಳಿ, ಅವನ ಬಿಕ್ಕುವಿಕೆಯ ಶಬ್ದ. ಅಸಹ್ಯವಾಗ್ತಿದೆ ಎಂದು
ಮಾತ್ರ ಹೇಳಿ ಮತ್ತೆ ಬಿಕ್ಕುತ್ತಿರುವನು. ಅವಳು ನಿಶ್ಚಲವಾಗಿ ಹಾಗೇ ಕುಳಿತಿರುವಳು. ಅವಳು, ಅಳುತ್ತಿರುವಳೋ,
ಇವನಂತೆಯೇ ಬೇಸರದಲ್ಲಿರುವಳೋ, ಏನೂ ಆಗದವಳಂತೆ ನಿರ್ಭಾವವಾಗಿರುವಳೋ ಅವನಿಗೂ ಗೊತ್ತಾಗಲಿಲ್ಲ ಅವಳ ಕಡೆ
ನೋಡುವ ಧೈರ್ಯವೂ ಬರಲಿಲ್ಲ. ಅವನ ಮನಸಿನಾಳದ ಮಾತುಗಳು ಹೊರಬರಲಾರಂಭಿಸಿದವು. ನಾನು ಹೀಗಿರಲಿಲ್ಲ. ನಾವೂ
ಹೀಗಿರಲಿಲ್ಲ. ಎಷ್ಟು ಉನ್ಮಾದ ಸಿಗುತ್ತಿತ್ತು. ಆ ರೋಮಾಂಚಕತೆ ಯಾಕೆ ಕಳೆದುಹೋಗಿದೆಯೋ ತಿಳಿಯುತ್ತಿಲ್ಲ.
ಅಮೃತವನ್ನು ಹಂಚಿಕೊಂಡಂತಿರುತ್ತಿತ್ತು ಆ ದಿನಗಳು. ಈಗ ವಿಷ ಸೇವಿಸಿದ ಅನುಭವ ತರುತ್ತಿದೆ. ನೀನು ಹೇಳಿದ್ದು
ನಿಜ, ಏನೋ ಬದಲಾವಣೆ ಖಂಡಿತ ಆಗಿದೆ. ನಿನ್ನನ್ನು ಬಲಾತ್ಕಾರವಾಗಿ ಪಡೆದಂತೆನಿಸುತ್ತಿದೆ. ನೀನೂ ಯಾಕೆ
ಮುಂಚಿನಂತೆ ಪ್ರತಿಕ್ರಿಯಿಸುತ್ತಿಲ್ಲ. ಎಲ್ಲಾ ಕೃತಕವೆನಿಸುತ್ತಿದೆ. ನಿನ್ನನ್ನು ಪಡೆದಾಗ ಮುಂಚೆ ಇರುತ್ತಿದ್ದ
ಗೆಲುವಿನ ಮನೋಭಾವ ಈಗ ಯಾಕಿಲ್ಲ. ನಾನು ಸೋತಂತೆನಿಸುತ್ತಿದೆ. ನಿನ್ನನ್ನು ಮತ್ತೆ ಹಾಗೆ ಮುಂಚಿನಂತೆ
ಪಡೆಯಲು, ನೀನೂ ಹರ್ಷಿಸಲು ನಾನು ಏನು ಮಾಡಬೇಕು. ಅವಳು ಆಕೃತಿಯಂತೆಯೇ ಕುಳಿತಿರುವಳು. ಯಾವುದಕ್ಕೂ
ಉತ್ತರವಿಲ್ಲ. ಇನ್ನಷ್ಟು ಗೊಂದಲಕ್ಕೊಳಗಾಗಿ ಮಂಚದಿಂದ ಎದ್ದು ಚಡಪಡಿಸುತ್ತಾ ತನ್ನ ಟೇಬಲ್ ಬಳಿ ಹೋಗಿ
ತಲೆಯ ಮೇಲೆ ಕೈ ಹೊತ್ತು ನಿಲ್ಲುವನು. ತನ್ನ ಸೋಲು ತನ್ನನ್ನು ಕಿತ್ತು ತಿನ್ನುತ್ತಾ ಹಿಂಸಿಸುತ್ತಿರುತ್ತದೆ.
ತಲೆ ಕೆಟ್ಟು ಟೇಬಲ್ ಮೇಲಿದ್ದ ಹಾಳೆಗಳನ್ನು ಕಿತ್ತು ಹರಿದು ಹಾಕುವನು. ಮನಸ್ಸಿಗೆ ಆದರೂ ನೆಮ್ಮದಿಯಿಲ್ಲ.
ಸಿಗರೇಟ್ ಹಚ್ಚಿ ಅಲ್ಲೇ ಕುರ್ಚಿಯ ಮೇಲೆ ಕೂತು ಸೇದುವನು. ತನ್ನ ಅವಳ ಎಷ್ಟೋ ವರುಷಗಳ ಅನುಬಂಧ, ಅವಳನ್ನು
ಎಷ್ಟೋ ಸಲ ಅರ್ಧ ರಮಿಸಿ ಎದ್ದಾಗ ಆಗುತ್ತಿದ್ದ ಬೇಸರ, ಅವಳು ದಿನಕ್ಕೊಂದು ಚಂದದಲ್ಲಿ ಇವನನ್ನು ಆಕರ್ಷಿಸುತ್ತಿದ್ದ
ಪರಿ, ಇವಳನ್ನು ಯಾರೂ ಇಷ್ಟ ಪಡದಿದ್ದಾಗ ಅವಳೊಂದಿಗೆ ಒಂಟಿಯಾಗಿ ತಾನು ಕಳೆಯುತ್ತಿದ್ದ ಸಮಯ, ಒಂದೊಮ್ಮೆ
ಅವಳಿಗೆ ಬೇಡಿಕೆ ಹೆಚ್ಚಾದಾಗ ಇವನೂ ಸೇರಿ ಅವಳ ಅಲಂಕಾರವನ್ನು ಹೆಚ್ಚಿಸುತ್ತಿದ್ದ ಕ್ಷಣಗಳು ಎಲ್ಲ ತನ್ನ
ತಲೆಯೆಂಬ ಮಿಕ್ಸಿಯಲ್ಲಿ ಗರಗರನೆ ತಿರುಗಿ ನೋವು ತನ್ನ ಕಣ್ಣಿನಿಂದ ತೊಟ್ಟಿಕ್ಕುತ್ತಾ ಹೊರಹೊಮ್ಮುತ್ತಿತ್ತು.
ಸಿಗರೇಟ್ ಮುಗಿಸಿ ಮಂಚದ ಕಡೆ ತಿರುಗಿ ನೋಡಲು ಅವಳು ಹೊರೆಟುಹೋಗಿರುತ್ತಾಳೆ. ಹೋಗುವಾಗ ಹೇಳಿ ಕೂಡ ಹೋಗಿಲ್ಲವೆಂದು
ಮನಸಿನಲ್ಲೇ ಅವಳನ್ನು ಬಯ್ದುಕೊಳ್ಳುತ್ತಾ ಕೋಣೆಯಲ್ಲಿ ನಿಲ್ಲಲಾಗದೆ ಹೊರಟುಹೋಗುವನು. ಮತ್ತದೇ ನೀರವತೆ
ಕತ್ತಲೆ ಕೋಣೆಯನ್ನು ಆವರಿಸುತ್ತದೆ. ಚೂರು ಪಾರು ಬೆಳಕಿನಲ್ಲಿ ಚಿಂದಿಯಾದ ಹಾಳೆಗಳು ಮಾತ್ರ ಬಿದ್ದಿರುತ್ತದೆ.
ಹಲವಾರು
ದಿನಗಳ ವರೆಗೆ ಅವಳನ್ನು ಮರೆಯಲೆಂದು ಅವನು ದೇಶಾಂತರ ಹೊರಟುಹೋಗುತ್ತಾನೆ. ಹಲವಾರು ಊರುಗಳಲ್ಲಿ, ಹಳ್ಳಿಗಳಲ್ಲಿ,
ಕಾಡು ಪ್ರದೇಶದಲ್ಲಿ ಹಲವು ರೀತಿಯ ಪರಿಸರದಲ್ಲಿ ಸುತ್ತಾಡಿ, ಹಲವು ಜನರೊಂದಿಗೆ ಬದುಕಿ ಎಲ್ಲೋ ಕಳೆದುಹೋಗಿದ್ದವನು
ಮತ್ತೆ ಮನೆಗೆ ಬರುತ್ತಾನೆ. ತನ್ನ ಕೋಣೆಯ ಒಳಹೊಕ್ಕ ತಕ್ಷಣವೇ ಆ ಮಂಚ, ಆ ಹರಿದು ಅಲ್ಲೇ ಬಿದ್ದಿದ್ದ
ಹಾಳೆಯನ್ನು ಕಂಡಾಕ್ಷಣ ಹಳೆಯ ತನ್ನ ಸೋಲಿನ ನೆನಪು ಮರುಕಳಿಸುತ್ತದೆ. ಆದರೆ ಮನಸು ನಿರಾಳವಾಗಿರುತ್ತದೆ.
ತನ್ನ ಹಿಂದಿನ ಹೆಡ್ಡತನಕ್ಕೆ ತಾನೇ ನಗುತ್ತಾನೆ. ತನಗೆ ಈಗ ಬರೆಯಬೇಕೆಂದು ಉತ್ಸುಕತೆ ಮೂಡುತ್ತದೆ.
ಹೊಸ ಹಾಳೆ ತಂದಿಟ್ಟು, ಸಿಗರೇಟ್ ಪ್ಯಾಕ್ ಒಂದು ತಂದಿಟ್ಟುಕೊಂಡು ಬರೆಯಲು ಕೂರುತ್ತಾನೆ. ಬಾಗಿಲು ಬಡಿದ
ಸದ್ದಾಗುತ್ತದೆ. ಎದ್ದು ಹೋಗಿ ನೋಡಲು ಅವಳು ಬಾಗಿಲಲ್ಲಿ ನಿಂತಿರುತ್ತಾಳೆ. ಆದರೆ ಈಗ ಅವಳಲ್ಲಿ ಲವಲವಿಕೆ
ಇರುತ್ತದೆ. ಕರೆಯದೇ ಒಳಗೆ ಬಂದವಳೇ ಬಾಗಿಲು ಹಾಕುವ ಮುನ್ನ ಬರಸೆಳೆದು ಅಪ್ಪಿಕೊಂಡು ಮುದ್ದಿಸುತ್ತಾಳೆ.
ಅವಳನ್ನು ಹೊತ್ತುಕೊಂಡೇ ಕೋಣೆ ಪ್ರವೇಶಿಸುತ್ತಾನೆ. ಒಂದು ಒಳ್ಳೆಯ ಕಥೆ ಹುಟ್ಟುತ್ತದೆ. ಆ ನಿಶ್ಯಬ್ಧ
ಕೋಣೆಯಲ್ಲಿ ಗಡಿಯಾರದ ಮುಳ್ಳು ಮಾತ್ರ ಸದ್ದು ಕೇಳುವಹಾಗೆ ಚಲಿಸುತ್ತಿರುತ್ತದೆ. ಕಥೆ ಪೂರ್ಣವಾದ ನಂತರ
ಆ ಕಳೆದುಹೋದ ಗೆಲುವು, ರೋಮಾಂಚಕತೆಯ ಆನಂದ ಸವಿಯುತ್ತಾನೆ. ಅವಳು ಅವನ ತೋಳಿನಲ್ಲಿ ಮಂದಹಾಸದೊಂದಿಗೆ
ವಿಶ್ರಮಿಸುತ್ತಿರುತ್ತಾಳೆ. ಅವಳನ್ನು ಮತ್ತೆ ಪಡೆದುಕೊಂಡ ಖುಷಿಯಲ್ಲಿ ಹಾಳೆಯನ್ನು ಮುತ್ತಿಡುತ್ತಾನೆ.
ಹಿನ್ನುಡಿ:
ಅದಾಗದೇ ಹುಟ್ಟಿದಾಗ ‘ಕತೆ’, ಬಲಾತ್ಕಾರಕ್ಕೆ ಹುಟ್ಟುವುದು ಅನೈತಿ’ಕತೆ’
-ನೀ.ಮ.ಹೇಮಂತ್
No comments:
Post a Comment