ಸೂರ್ಯನ ಬೆಳಕು ಕಣ್ಣುಗಳಿಗೆ ಚುಚ್ಚಿದ್ದೇ ಹಾಸಿಗೆಯಿಂದೆದ್ದು
ಧರಿಸಿದ್ದ ಬಟ್ಟೆ ಕಿತ್ತೆಸೆದು ಮನಸ್ಸನ್ನು ಶುಭ್ರ ನೀರಿನಿಂದ ತೊಳೆದು, ಮನಸನ್ನು ನಗ್ನವಾಗೇ ಇಟ್ಟು
ದೇಹವನ್ನು ಮಾತ್ರ ಶುಚಿಯಾದ ಬಟ್ಟೆಯಿಂದ ಮುಚ್ಚಿಕೊಂಡು, ನೆರಳಿನಲ್ಲಿ ತನ್ನ ಮುಖವನ್ನು ನೋಡಿಕೊಂಡು
ಕಿಟಕಿಗಳು, ಬಾಗಿಲು, ಮಾಡು, ದೊಡ್ಡ ದೊಡ್ಡ ಗೋಡೆಗಳನ್ನು ಹೊಂದಿದ್ದ ಕೊಠಡಿಯಿಂದ ಹೊರಬಿದ್ದವನೇ ಸುತ್ತ
ಓಡುತ್ತಾ, ಜಿಗಿಯುತ್ತಾ, ನಡೆಯುತ್ತಾ, ತೆವಳುತ್ತಾ ಇದ್ದ ತನ್ನಂತೆಯೇ ಇದ್ದ ಇತರ ಮಾನವಾಕೃತಿಗಳನ್ನು
ವಿಸ್ಮಯದಿಂದ ನೋಡುತ್ತಾ ರಸ್ತೆಯ ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪುವನು. ನೋಡ ನೋಡುತ್ತಿದ್ದಂತೆಯೇ
ಎಲ್ಲರೂ ಕಾಯುತ್ತಿದ್ದ ಧಡೂತಿ ವಾಹನವೊಂದು ತನ್ನ ಒಡಲೊಳಗೆ ಸಹಸ್ರ ಜೀವಗಳನ್ನು ತುಂಬಿಸಿಕೊಂಡು ಬಂತಾದರೂ
ಇನ್ನಷ್ಟು ಅಲ್ಲಿ ಕಾಯುತ್ತಿದ್ದ ಜೀವಗಳನ್ನು ನುಂಗಿಕೊಂಡು ಶ್ರಮವಹಿಸಿ ಗುಟುರು ಹಾಕುತ್ತಾ, ಬುಸ್ಸ
ಬುಸ್ಸನೆ ಹೊಗೆಯುಗುಳುತ್ತಾ ಮುಂದೆ ಸಾಗಿತು. ಎಲ್ಲ ನೇತಾಡುತ್ತಾ, ತೂರಾಡುತ್ತಾ, ತೂಕಡಿಸುತ್ತಲಿದ್ದ
ಕ್ಷುದ್ರ ಜೀವಿಗಳ ಮಧ್ಯದಲ್ಲಿ ಇವನೂ ಸಹ ನೇತಾಡುತ್ತಾ ನಿಂತಿದ್ದ. ಗುಡಾಣದೊಳಗೆ ಈಗ ತಾನೆ ಸೇರಿಕೊಂಡವರಲ್ಲೆರನ್ನೂ
ತಟ್ಟಿ ತಟ್ಟಿ ಎಚ್ಚರಿಸುತ್ತಾ ಎಲ್ಲಿಗೆ… ಎಲ್ಲಿಗೆ ಪಯಣ ಎಂದು ಕೇಳುತ್ತಾ ಬಂದೋರ್ವ ವ್ಯಕ್ತಿಯನ್ನು
ನೋಡುತ್ತಿದ್ದ ಇವನು ಅದ್ಯಾಕೋ ಇದ್ದಕಿದ್ದಂತೆ ಗೊಂದಲಕ್ಕೊಳಗಾದ. ಎಲ್ಲರೂ ಯಾವುದಾವುದೋ ನಿಲ್ದಾಣದ
ಹೆಸರನ್ನು, ತಲುಪಲಿಚ್ಛಿಸುವ ಜಾಗದ ಹೆಸರನ್ನು ಹೇಳುತ್ತಿದ್ದುದನ್ನು ಕಂಡು ಇನ್ನಷ್ಟು ಚಿಂತಾಮಗ್ನನಾದ.
ತನ್ನ ಚಿಂತನೆಗೆ ಸಮಯವೇ ಕೊಡದೆ ಎಲ್ಲರನ್ನು ಎಚ್ಚರಿಸುತ್ತಲಿದ್ದ ವ್ಯಕ್ತಿ ಇವನ ಬಳಿಗೆ ಧಾವಿಸಿಯೇ
ಬಿಟ್ಟ. “ಎಲ್ಲಿಗೆ” ಎಂದು ಆತ ಕೇಳಿದ ಪರಿಗೇ ಇವನು ಬೆಚ್ಚಿ ಎಚ್ಚೆತ್ತು ಬೆವರತೊಡಗಿದ. ಹಾಗೆ ಎಚ್ಚರಿಸಿದ
ವ್ಯಕ್ತಿಯನ್ನು ತೀಕ್ಷ್ಣವಾಗಿ ಗಮನಿಸಲು ಆತ ಚಿರಪರಿಚಿತನಂತೆ ಕಂಡ. ನಡುಗುತ್ತಿದ್ದ ಕೈಗಳಿಂದ ಬೆವರೊರೆಸಿಕೊಳ್ಳುತ್ತಾ,
ಒಮ್ಮೆ ಎಂಜಲು ನುಂಗಿ ಆ ಎಚ್ಚರಿಸಿದಾತ ಬೇರಾರೂ ಅಲ್ಲ ತನ್ನ ಜನ್ಮದಾತನೇ ಎಂದು ತಿಳಿದು ಎಲ್ಲಿಗೆ ಎಂಬ
ಆತನ ಪ್ರಶ್ನೆಗೆ ಏನೆಂದು ಉತ್ತರಿಸುವುದೆಂದು ಅರಿಯದೇ ಗೊ.. ಗೊ… ಗೊತ್ತಿಲ್ಲ ಎನ್ನುವನು. ಜನ್ಮದಾತ
ತತ್ಕ್ಷಣವೇ ಕೋಪೋದ್ರಿಕ್ತನಾಗಿ ಎಲ್ಲಿಗೆಂದು ಗೊತ್ತಿಲ್ಲದೇ ಹೇಗೆ ಗಾಡಿ ಹತ್ತಿದೆ. ಮೂರ್ಖನ ತರಹ ವರ್ತಿಸಬೇಡ.
ಎಲ್ಲಿಗೆಂದು ಹೇಳು ಸುಮ್ಮನೆ ಎಂದು ಗದರಿಸುವನು. ಯಾವುದಾವುದೋ ಗುರಿಗಳಿಗೆ ಹೊರಟಿದ್ದ ಸಮಸ್ತರ ಕಣ್ಣುಗಳೂ
ಇವನನ್ನೇ ವಿಚಿತ್ರವಾಗಿ ನೋಡುತ್ತಿರುವುದನ್ನು ಕಂಡು ಇನ್ನಷ್ಟು ಗೊಂದಲಕ್ಕೊಳಗಾದ. ಎಲ್ಲಿಗೆಂದು ಹೇಳುವುದು?
ತಾನು ಯಾಕೆ ಹೊರಟಿರುವನು? ಎಲ್ಲಿಗಾದರೂ ಯಾತಕ್ಕೆ ಹೋಗಬೇಕು? ತನ್ನ ಸುತ್ತ ಅಂಟಿಕೊಂಡಿದ್ದ ಎಲ್ಲರ
ಕಿವಿಗಳು, ಕಣ್ಣುಗಳು, ಬಾಯಿಗಳು, ಕೈಗಳೊಂದು ಕಡೆ, ತನ್ನ ತಲೆಯಲ್ಲೇ ಏಳುತ್ತಿದ್ದ ಪ್ರಶ್ನೆಗಳಿನ್ನೊಂದು
ಕಡೆ ತಲೆಯಲ್ಲಿ ಅಲ್ಲೋಲಕಲ್ಲೋಲ ಶುರುವಾಗಿ ತಲೆ ಗಟ್ಟಿಯಾಗಿ ಹಿಡಿದುಕೊಂಡು ಒದ್ದಾಡುವನು.


ಒಂದು ಎತ್ತರದ ಜಾಗದಲ್ಲಿ ನಿಂತು ಎಲ್ಲ ಓಡುತ್ತಿರುವವರು ಎಲ್ಲಿಗೆ
ಹೋಗಿ ಸೇರುತ್ತಿರುವವರೆಂದು ನೋಡುವನು. ನಡೆದು ಹೋಗುತ್ತಿದ್ದ ಎಷ್ಟೋ ಜನ, ವಾಹನಗಳಲ್ಲಿ ಹೋಗುತ್ತಿದ್ದ
ಎಷ್ಟೋ ಜನ, ಇನ್ನೆಷ್ಟೋ ಜನರೊಂದಿಗೆ ಕೈಜೋಡಿಸುತ್ತಾ, ಇನ್ನೂ ಒಂದಷ್ಟು ಜನರನ್ನು ಸೇರಿಸಿಕೊಳ್ಳುತ್ತಾ
ಮುಂದುವರೆಯುತ್ತಾ ಹಲವಾರು ಹಳ್ಳ ದಿಣ್ಣೆಗಳನ್ನು, ಕಲ್ಲು ಮುಳ್ಳುಗಳನ್ನು, ತಣ್ಣನೆಯ ನೆರಳಲ್ಲಿ ವಿಶ್ರಮಿಸುತ್ತಾ,
ಬಿಸಿಯ ಸೂರ್ಯನಲ್ಲಿ ಬೇಯುತ್ತಾ, ಹಲವಾರು ಹಿಂಬಾಲಕರನ್ನು ಪಡೆದುಕೊಳ್ಳುತ್ತಾ ಯಾವುದೋ ಒಂದು ಹಂತದಲ್ಲಿ
ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಡುವರು. ಅವರು ತಮ್ಮ ಗುರಿ ತಲುಪಿದರೋ ಇಲ್ಲವೋ ಅವರಿಗೂ ಗೊತ್ತಿತ್ತೋ
ಇಲ್ಲವೋ. ಆ ಕ್ಯಾಮೆರಾ ಹಿಡಿದ ಮನುಷ್ಯ ಹೇಳಿದ್ದು ಸರಿಯಿತ್ತು. ಕಣ್ಮರೆಯಾಗುವ ಮುನ್ನ ತಾನು ಕುದುರೆಯಂತಾಗದೇ,
ಸ್ವಚ್ಛಂದವಾಗಿ ಬದುಕುವ ಹುಲಿಯಾಗಬೇಕಿತ್ತು. ಆ ಎತ್ತರದ ಜಾಗದಿಂದ ಹೀಗೆ ನಿರ್ಧರಿಸುತ್ತಾ ಮುಂದುವರೆದ
ಹಾಗೆ ತನ್ನೊಂದಿಗೆ ತನ್ನ ವಯಸ್ಸಿನ ಹುಡುಗಿಯೊಬ್ಬಳು ಕೈ ಹಿಡಿದಳು. ಇನ್ನೂ ಮುಂದೆ ಹೋಗುತ್ತಾ ಅವಳ
ಕೈಲೊಂದು ಚಿಕ್ಕ ಮಗುವೊಂದು ಸೇರಿಕೊಂಡಿತು. ತಾನು ನಿಧಾನವಾಗಿ ಮುನ್ನಡೆಯುತ್ತಾ ಕೆಲವು ಹೊತ್ತು ಮರಗಿಡಗಳ
ನಡುವೆ, ಇನ್ನೂ ಕೊಂಚ ದಿನ ಪೆನ್ನು ಪೇಪರು ಕೈಲಿ ಹಿಡಿದು, ಇನ್ನೊಮ್ಮೆ ತನ್ನೊಂದಿಗಿನ ಹುಡುಗಿ, ಮಗುವಿನ
ಜೊತೆ ಯಾವುದೋ ಮನೆಯೆದುರು, ಇನ್ನೊಮ್ಮೆ ಇನ್ನೆಲ್ಲೋ ಇನ್ನು ಹೇಗೋ ಬದುಕುತ್ತಾ ಒಮ್ಮೆ ಕಣ್ಮರೆಯಾಗುವನು.
ನೀ.ಮ. ಹೇಮಂತ್
ಖೆಡ್ಡಾದೊಳಗೆ ನನ್ನನು ನಾನೇ ಮರೆತುಕೊಂಡೇನೋ ಅನ್ನುವಂತಾಯ್ತು ದಾರಿಹುಡುಕುತ್ತಾ. ಅಪೂರ್ವ ಬರಹ ಹೇಮಂತ್.
ReplyDeleteಧನ್ಯವಾದಗಳು ಗುರುಗಳೇ.. ಹಲವು ದಾರಿಗಳ ವಿಸ್ಮಯವನ್ನು ಕಾಣುವ ಅದೃಷ್ಟ ಎಲ್ಲರಿಗೂ ಲಭಿಸಲಿ ಹ ಹ..
Deleteಅದ್ಭುತ ಬರಹ, ಅನೇಕ ಅರ್ಥಗಳಿವೆ, ಹೀಗೆ ಜೀವನ ನಿರಂತರ ಹುಡುಕಾಟ, ತನ್ನೊಳಗಿನ ತನ್ನ ಹುಡುಕಾಟ, ಯಾರಿಗೂ ಗೊತ್ತು ಗುರಿಗಳಿಲ್ಲದ ಓಟ..ಅದ್ಭುತ ಅರ್ಥಗಳಿವೆ. ಧನ್ಯವಾದಗಳು ಸರ್
ReplyDeleteಎಲ್ಲ ಅರ್ಥಗಳನ್ನೂ ನಿಮ್ಮಂತಹ ದೃಷ್ಟಿಕೋನಗಳುಳ್ಳ ಬುದ್ದಿಜೀವಿ ಓದುಗರಿಗೆ ಬಿಟ್ಟಿದ್ದೇನೆ. ನಿಮ್ಮ ಭಾವ, ಭಕುತಿಗೆ ತಕ್ಕಂತೆ ಹಹಹ.. ತುಂಬಾ ಥ್ಯಾಂಕ್ಸ್ ರೀ ಸವಿತಾ ಅವರೇ, ಓದಿದ್ದಕ್ಕೆ ಮತ್ತು ಬರೆದಿದ್ದಕ್ಕೆ.. ಖೆಡ್ಡದಲ್ಲಿ ಬೀಳುತ್ತಿರಿ :-)
Delete