ಓದಿ ಓಡಿದವರು!

Friday 27 April 2012

ಅಪ್ಪ, ಅಮ್ಮ ಮತ್ತು ಆಧ್ಯಾತ್ಮ!ಪ್ರೀತಿ ಮಾಡುವುದು ಹೇಗೆಂದು ನಮ್ಮ ಕೈಲಿ ಹೇಳಿಸಿಕೊಳ್ಳುವ ತಂದೆ ತಾಯಿ ಸಿಕ್ಕಿರುವ ನಾವೆಷ್ಟು ಧನ್ಯ!? ಸ್ನೇಹಿತನೊಬ್ಬನ ಮನೆಯಲ್ಲಿ ಅಪ್ಪ ಅಮ್ಮನ ಮಧ್ಯೆ ಸಾಮರಸ್ಯವಿಲ್ಲದೇ ಸದಾ ಜಗಳ ಆಡುತ್ತಿರುವರೆಂದು ಇಬ್ಬರ ನಡುವೆ ಪ್ರೀತಿಯೇ ಉಳಿದಿಲ್ಲವೆಂದು ರಾತ್ರಿ ತಡವಾಗಿ ಮನೆ ಕಡೆಗೆ ಮುಖ ಮಾಡುತ್ತಿದ್ದ. ಆಗೆಲ್ಲಾ ಈ ತರಹ ತಂಟೆ ತಕರಾರುಗಳು ನಮ್ಮ ಮನೆಯಲ್ಲಿಲ್ಲವಲ್ಲ ಸಧ್ಯ ಎಂದುಕೊಳ್ಳುತ್ತಿದ್ದೆ. ನಾನು ಪ್ರಾಣ ತೆಕ್ಕೋತೀನಿ ಇಲ್ಲಾ ಎಲ್ಲಾದರೂ ಹೊರಟುಹೋಗ್ತೀನಿ ಎಂದು ಗುಡುಗಿದ್ದರು ಅಪ್ಪ. ತಟ್ಟೆಯಲ್ಲಿದ್ದ ದೋಸೆ ಬಾಯಿಗೆ ಹೋಗುವುದಿಲ್ಲವೆಂದಿತು. ಗಂಟಲಲ್ಲಿದ್ದ ತುತ್ತು ಅಲ್ಲೇ ಕಚ್ಚಿಕೊಂಡಿತು. ಇವತ್ತು ಮಾಮೂಲಿ ದಿನವಲ್ಲವೆಂದು ಖಾತ್ರಿಯಾಯ್ತು. ಎಲ್ಲಾ ಶುರುವಾಗಿದ್ದು ಅಪ್ಪ ಆಧ್ಯಾತ್ಮ ಕೇಂದ್ರಕ್ಕೆ ಹೋಗಲು ಶುರುಮಾಡಿದ ಮೇಲೆಯೇ. ದೇವರ ಕೋಣೆ ಸೇರಿದ್ದ ದೇವರಿಗೆ ಪ್ರತಿನಿತ್ಯ ಸ್ನಾನ ಮಾಡಿ ಕೈಮುಗಿದು ಮುಂದಿನ ಕೆಲಸಗಳು ಶುರುಮಾಡುತ್ತಿದ್ದವರು ದಿನೇ ದಿನೇ ಅದನ್ನು ಬಿಟ್ಟರು, ಇಡೀ ಜೀವನದಲ್ಲಿ ಆಗದ ಬದಲಾವಣೆಗಳು ಇದ್ದಕ್ಕಿದ್ದಂತೆ ಕಾಣುತ್ತಾ ಬಂತು. ಅಪರೂಪಕ್ಕೆ ದೇವಸ್ಥಾನಕ್ಕೆ ಹೋಗುತ್ತಿದ್ದವರು ದೇವಸ್ಥಾನಕ್ಕೆ ಹೋಗುವುದನ್ನು ಬಿಟ್ಟದ್ದಲ್ಲದೇ ದೇವಸ್ಥಾನದಲ್ಲಿ ಇರುವವರು ದೇವರಲ್ಲ, ಅದು ಬರೀ ಬೂಟಾಟಿಕೆ, ಬಿಜಿನೆಸ್ ಆಗಿ ಹೋಗಿದೆ. ದೇವರು ಎಲ್ಲರ ಮನದಲ್ಲಿದ್ದಾನೆ ಅವನಿಗೆ ವಿಶೇಷ ಪೂಜೆ, ಹೋಮ, ಹವನಕ್ಕೆ ಖರ್ಚು ಮಾಡಬೇಕಿಲ್ಲ, ಬೇಕಿರುವುದು ಶ್ರದ್ಧೆಯಿಂದ ಪ್ರತಿಕ್ಷಣ ಅವನನ್ನ ನೆನೆಯುವುದು. ದೇವಸ್ಥಾನಕ್ಕೆ ಹೋಗದಿದ್ರೆ, ಕೈ ಮುಗಿಯದಿದ್ರೆ ಕುಪಿತ ಸಹ ಆಗುವುದಿಲ್ಲ ದೇವರೆನಿಸಿಕೊಂಡವನು. ಆತ ಯಾವುದೇ ರೀತಿಯ ಕೆಡುಕನ್ನು ಮಾಡಲಾರ, ಕೆಡುಕು ಮಾಡುವವನು ದೇವರೇ ಆಗುವುದಿಲ್ಲ. ದೇವರ ಕೋಪಕ್ಕೆ ಹೆದರಿ ಪೂಜೆ ಮಾಡುವುದು ತಪ್ಪು ಅದು ಭಕ್ತಿಯಲ್ಲ ಎಂದೆಲ್ಲಾ ಹೇಳುವಷ್ಟು ಬದಲಾದರು. ಅದಕ್ಕೆ ಸರಿಯಾಗಿ ಮನೆಗೆ ನೆಂಟರುಗಳೆನಿಸಿಕೊಂಡವರು ಯಾರಾದರೂ ಬಂದರೆಂದರೆ ಅದಕ್ಕೆ ಮದುವೆ, ಮುಂಜಿ, ಜನ್ಮದಿನದ ಸಂಭ್ರಮಾಚರಣೆಯ ಆಮಂತ್ರಣದ ಸಂದರ್ಭವಲ್ಲದಿದ್ದರೆ, ಆ ಕಾರಣಗಳು ಎಲ್ಲರಿಗೂ ಗೊತ್ತಿರುವಂತೆ ಒಂದೋ ತಮ್ಮ ಮನೆಯಲ್ಲಿ ಹಮ್ಮಿಕೊಂಡಿರುವ ಸತ್ಯನಾರಾಯಣ ವ್ರತವೋ, ಗಣಹೋಮವೋ, ದಯ್ಯದ ಮನೆಯ ವಾರ್ಷಿಕ ಪೂಜೆಯೋ, ಕುಲದೇವರ ಪೂಜೆಯೋ ಆಗಿರುತ್ತವೆ. ಅವರ ಆರಕ್ಕೆ ಏರದ ಮೂರಕ್ಕೆ ಇಳಿಯದ ಹಣಕಾಸಿನ ಪರಿಸ್ಥಿತಿ ಚೆನ್ನಾಗಿ ಗೊತ್ತಿದ್ದ ಅಪ್ಪ ಈ ಕಷ್ಟದಲ್ಲಿ ಇದೂ ಬೇಕಾ, ಎಲ್ಲಾ ಬರ್ತಾರೆ ಊಟ ಮಾಡಿಕೊಂಡು ಹೋಗ್ತಾರೆ, ನಷ್ಟ ನಿಮಗೇ ಅಲ್ವಾ, ಯಾಕೆ ಹೀಗೆ ದುಂದು ವೆಚ್ಛ ಮಾಡ್ತೀರಿ, ಎಂದೆಲ್ಲಾ ಕೆಲವು ಬಾರಿ ಉಪದೇಶ ಮಾಡುವರು. ಅಪ್ಪನಿಗೇನೋ ತನ್ನ ತಮ್ಮ, ತಂಗಿ, ಅಣ್ಣ ಎಂಬ ಪ್ರೀತಿ, ಆದರೆ ಕೇಳುವವರಿಗೆ ಅಪ್ಪನ ದೊಡ್ಡ ಗಂಟಲು, ಒರಟು ಮಾತು ಒಳಗಿದ್ದ ಪ್ರೀತಿಯನ್ನು ಮುಚ್ಚಿಹಾಕುವುದು. ಮತ್ತು ತಮ್ಮ ಆಲೋಚನೆ, ಯೋಜನೆ, ಮುಖ್ಯವಾಗಿ ತಮ್ಮ ನಂಬಿಕೆಗೆ ವಿರುದ್ಧವಾದ್ದರಿಂದ ಒಳಗೊಳಗೇ ಅಸಮಾಧಾನ ಮನೆ ಮಾಡುವುದು. ಅಪ್ಪನ ನಂಬಿಕೆಗೆ ವಿರುದ್ಧವಾಗಿ ವಾದಿಸಿದರೂ ಅಪ್ಪ ತಮ್ಮ ದಾರಿಗೇ ಬದ್ಧರಾಗಿರುತ್ತಿದ್ದುದರಿಂದ ಅಪ್ಪನಿಗೆ ಹೇಳಿ ಉಪಯೋಗವಿಲ್ಲವೆಂದು ನೇರವಾಗಿ ಎಲ್ಲವನ್ನೂ ಕೇಳುತ್ತಿದ್ದ ಅಮ್ಮನ ಕಿವಿಯಲ್ಲಿ ತುಂಬಿಸುವರು.

ಯಾಕ್ ಹೀಗೆ ಬದಲಾಗಿ ಹೋದರು, ಎಲ್ಲಾ ಯೋಗ ತರಗತಿಗಳಲ್ಲಿ ಮಾಡಿರುವ ಬ್ರೈನ್ ವಾಶ್ ಎಂದೊಬ್ಬರು, ದೇವರನ್ನು ಪೂಜೆ ಮಾಡಬೇಡ ಅದು ಇದು ಎಂದು ಹೇಳಿಕೊಂಡು ತಿರುಗಿದರೆ ಏನಾದ್ರು ತೊಂದರೆ ಆದ್ರೆ ಏನ್ ಮಾಡೋದು ಎಂದೊಬ್ಬರು, ಮೊದಮೊದಲು ಹೀಗೆ ಅಧ್ಯಾತ್ಮದ ಬಗ್ಗೆ ಹುಚ್ಚು ಬರಿಸುತ್ತಾರೆ, ನಂತರ ಕ್ರಮೇಣ ಸಂಸಾರ, ಕೆಲಸ ಎಲ್ಲಾ ಬೇಡ ಧ್ಯಾನ ಮಣ್ಣು ಮಸಿ ಎಂದು ಹೊರಟೇ ಹೋಗುತ್ತಾರೆ, ವೈರಾಗ್ಯ ತರಿಸಿಬಿಡುತ್ತಾರೆ, ಪಕ್ಕದ ರೋಡಿನವರ ಬಗ್ಗೆಯೋ, ಸುಮಿತ್ರಮ್ಮನ ಗಂಡನ ಬಗ್ಗೆಯೋ, ರಾಮೇಶ್ವರಿಯವರ ಸಂಸಾರದ ಕಥೆಯ ಉದಾಹರಿಸಿ ತಲೆಯಲ್ಲಿ ಹುಳ ಬಿಟ್ಟು ಹೋಗುವರು. ಪ್ರತಿನಿತ್ಯ ಅಪ್ಪನನ್ನು ಗಮನಿಸುತ್ತಿದ್ದ ಅಮ್ಮ, ಯಾವತ್ತೂ ಇಲ್ಲದ್ದು, ಹಬ್ಬ ಹರಿದಿನಕ್ಕೂ ಬೇಗ ಏಳದವರು ಮುಂಜಾನೆ ಐದು ಘಂಟೆಗೆ ಎದ್ದು ಧ್ಯಾನ ತರಗತಿಗಳಿಗೆ ತಪ್ಪದೇ ಹೋಗಲು ಶುರುಮಾಡಿರುವುದನ್ನು, ನಂತರ ಯಾವ ಸಮಾರಂಭಗಳಿಗೂ ಅರ್ಧ ದಿನ ಕೆಲಸಕ್ಕೆ ರಜೆ ಹಾಕಿ ಬರದವರು, ತಮಿಳು ನಾಡಿನಲ್ಲೆಲ್ಲೋ ಯೋಗ ಶಿಬಿರವಿದೆಯೆಂದು ಬರೋಬ್ಬರಿ ಮೂರು ದಿನಗಳು ಕೆಲಸ ರಜೆ ಹಾಕಿ, ಮೊಬೈಲ್ ಕೂಡ ಮನೆಯಲ್ಲೇ ಬಿಟ್ಟು ವಾಪಾಸು ಬರುತ್ತಾ ಕೈಯಲ್ಲೊಂದು ದೊಡ್ಡ ನಿಲುವುಗನ್ನಡಿ, ಬಿಳಿ ಖಾದಿ ಜುಬ್ಬದಂತಹ ವಿಚಿತ್ರ ವೇಷದಲ್ಲಿ ಬಂದದ್ದಲ್ಲದೆ ಬಂದವರೇ ನಾಲ್ಕು ಹೊತ್ತೂ ಧ್ಯಾನ ಶಿಬಿರದಲ್ಲಿ ಕೊಟ್ಟ ಪ್ರವಚನದ ಧ್ವನಿ ಮುದ್ರಣವನ್ನು ಜೋರಾಗಿ ಕೇಳುತ್ತಾ ಯಾಕೋ ಎಲ್ಲರಂತೆ ಇವರೂ ಧ್ಯಾನ, ವೈರಾಗ್ಯ ಎಂದು ಹೊರೆಟೇ ಹೋಗುವರೇನೋ ಎಂದು ಸದಾ ಒಳಗಿದ್ದ ಭಯ ಗರಿಗೆದರಿ ಧ್ಯಾನ, ಯೋಗಕ್ಕೆ ಅಮ್ಮ ತಮ್ಮ ವಿರೋಧ ವ್ಯಕ್ತ ಪಡಿಸಲು ಶುರುಮಾಡುವರು. ಅಪ್ಪ ಯಾವುದೇ ಕೆಲಸ ಮಾಡಿದ್ರು ತಮ್ಮನ್ನ ಪೂರ್ತಿ ಅದರಲ್ಲಿ ತೊಡಗಿಸಿಕೊಂಡು ಮಾಡುವಂತಹ ವ್ಯಕ್ತಿ. ಯಾರು ಏನೇ ವಿರೋಧಿಸಲಿ, ತಾವು ಹೊರಟ ದಾರಿಯಲ್ಲಿ ಹಿಂದಿರುಗಿ ನೋಡುವಂತಹ ಜಾಯಮಾನದಿಂದ ಬಂದವರಲ್ಲ. ಎಷ್ಟೇ ಸಮಸ್ಯೆಗಳು, ತೊಡಕುಗಳು, ಕಲ್ಲು ಮುಳ್ಳುಗಳಿರಲಿ ತಮ್ಮ ಹಾದಿಯಲ್ಲಿ ಮುಂದುವರೆಯುತ್ತಲೇ ಇರುತ್ತಾರೆ. ಇನ್ನು ಅಮ್ಮ ಇನ್ನೊಂದು ದಿಕ್ಕು, ತನಗೆ ಯಾವುದಾದರೂ ವಿಷಯ ಅಥವಾ ಏನೇ ಆಗಲಿ ಇಷ್ಟವಾಯ್ತೆದೆಂದರೆ ಅಥವಾ ರುಚಿಸದಿದ್ದರೆ ಆ ತಮ್ಮ ಅಭಿಪ್ರಾಯವನ್ನು ಹಾಗೇ ಯಾರು ಏನು ಮಾಡಿದರೂ ಬದಲಾಯಿಸಲು ಸಾಧ್ಯವೇ ಇಲ್ಲ. ಒಮ್ಮೆ ಇಷ್ಟವಿಲ್ಲವೆಂದರೆ ಮುಗಿದು ಹೋಯಿತು. ಅದು ಹಾಗೇ ಇರುತ್ತೆ. ಬಹುಷಃ ಇವರಿಬ್ಬರ ಗುಣವೇ ಇವರ ಮಕ್ಕಳಾದ ನಮಗೂ ಬಂದಿರಬಹುದು. ನಾವೂ ಹಿಡಿದ ಕೆಲಸ, ಇಟ್ಟ ಗುರಿಗಾಗಿ ಸಂಪೂರ್ಣ ಹಠತೊಟ್ಟು, ಧ್ಯಾನಸ್ಥರಾಗಿ ಮಾಡುತ್ತೇವೆನಿಸುತ್ತದೆ. ಅಪ್ಪ ಅಮ್ಮನಲ್ಲಿರುವ ಈ ಹಠಯೋಗ ಇವರಿಲ್ಲಿರುವ ಅತ್ಯುತ್ಕ್ರುಷ್ಟವಾದ ಶಕ್ತಿಯೇನೋ ಹೌದು ಆದರೆ, ಹಲವು ಬಾರಿ ತಿರುಗುಬಾಣವಾಗುತ್ತವೆ. ಈಗ ಆಗಿದ್ದೂ ಅದೇ.

ತಮ್ಮ ವ್ಯಾಪಾರ, ಸಂಸಾರ, ಸಾಲ, ಮನೆ, ಇಷ್ಟರ ಪ್ರಪಂಚದಲ್ಲೇ ಇದ್ದ ಅಪ್ಪ ಧ್ಯಾನ ತರಗತಿಗಳೆಂಬ ಸಂಪೂರ್ಣ ಅಪರಿಚಿತ ಪ್ರಪಂಚಕ್ಕೆ ಪರಿಚಯವಾಗಲೂ ಒಂದು ಕಾರಣವಿದೆ. ಅಪ್ಪ ಮಾಡುವ ಕೆಲಸ ನಾನೋ ನನ್ನ ತಮ್ಮನೋ ಮಾಡುವೆವೆಂದುಕೊಳ್ಳಲೂ ಸಹ ಧೈರ್ಯ ಹುಟ್ಟುವುದಿಲ್ಲ. ಚಿಲ್ಲರೆ ವ್ಯಾಪಾರದಂಗಡಿಯವರು ಆರ್ಡರ್ ಮಾಡಿದ ಸಾಮಾನುಗಳನ್ನು ಮಾರುಕಟ್ಟೆಯಿಂದ ತಂದು ಒಂದು ಟನ್ನಿನಷ್ಟು ಭಾರ ತನ್ನ ಟಿವಿಎಸ್ ಮೇಲೆ ಹೊರಿಸಿ ಅಂಗಡಿಗಳಿಗೆ ತಲುಪಿಸಿ ಬರುವರು. ಮಳೆ ಬರುವಾಗ ಸಾಮಾನುಗಳಿಗೆ ಟಾರ್ಪಾಲು ಹೊರಿಸಿ ಯಾವುದೋ ಸಣ್ಣ ಜಾಗದಲ್ಲಿ ಅರ್ಧಂಬರ್ಧ ತೊಯ್ದು ನಿಂತಿರುವುದನ್ನ ಎಷ್ಟೋ ಸಲ ನೋಡಿದ್ದೇನೆ. ಬಿಸಿಲಲ್ಲಿ ಹೊರಗೆ ತಲೆ ಹಾಕಲಾಗದೆ ಮನೆಯಲ್ಲಿ ತಣ್ಣಗೆ ಕುಳಿತಿರುವ ನಮ್ಮ ಹೊಟ್ಟೆಯನ್ನೂ ಸಹ ತಣ್ಣಗಾಗಿಸಲು, ಯಾವುದನ್ನೂ ಲೆಕ್ಕಿಸದೇ ಬೆಳಗ್ಗೆ ಮನೆ ಬಿಟ್ಟರೆ ರಾತ್ರಿಯವರೆಗೂ ಬೆವರು ಸುರಿಸಿ ಮನೆಗೆ ಮರಳುತ್ತಿದ್ದರು. ಭಾನುವಾರದೊಂದಿನ ಅಥವಾ ಯಾವುದೇ ಹಬ್ಬಕ್ಕೇ ಆಗಲಿ ಹೊಸ ಬಟ್ಟೆ ತೊಟ್ಟು, ಎಲ್ಲರೊಂದಿಗೆ ಸಮಯ ವ್ಯಯ ಮಾಡಿದ್ದು ಕನಸಿನಲ್ಲೂ ಬರುವುದಿಲ್ಲ. ಯಾಕೆ ಹೀಗೆ ದುಡೀತಾರೋ ಎಂದೊಮ್ಮೊಮ್ಮೆ ಅನಿಸಿದರೂ, ಅಷ್ಟು ಶಕ್ತಿ ಎಲ್ಲಿಂದ ಪಡೆದುಕೊಂಡರೆಂದು ಅಚ್ಚರಿಯಾಗುತ್ತೆ. ಈ ನೆಲ ಗುದ್ದಿ ನೀರು ತೆಗೆಯುವ ವಯಸ್ಸಿನಲ್ಲಿ ನಾನಾಗಲಿ ನನ್ನ ತಮ್ಮನಾಗಲಿ ಕಿತ್ತು ಗುಡ್ಡೆ ಹಾಕುತ್ತಿರುವುದಂತೂ ಅಷ್ಟರಲ್ಲೇ ಇದೆ. ಮಕ್ಕಳು, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಸಂತೋಷ ಇಷ್ಟೇ ಇವರ ಆಲೋಚನೆ. ಯಾಕೆ ಬೇಕು ಇವರಿಗೆ ನಮಗಾಗಿ ತಮ್ಮ ಆಯುಷ್ಯದ ಬಹುಮುಖ್ಯ ಭಾಗ, ತಮ್ಮ ಸ್ವಂತ ಸಂತೋಷ, ತಮ್ಮ ನೆಮ್ಮದಿ, ತಮ್ಮ ಸುಖ ಕಳೆದುಕೊಂಡರಲ್ಲಾ ಎಂಬುದೊಂದು ಚಿಂತೆ ಅವರ ಹರಿದ ಜೇಬುಗಳನ್ನು ಹೊಲಿದುಕೊಳ್ಳುತಿದ್ದಾಗಲೆಲ್ಲಾ ಕಾಡುತ್ತದೆ. ಇನ್ನು ಅಮ್ಮ. ಎದ್ದಿರುವ ಅಷ್ಟೂ ಹೊತ್ತು ನಮ್ಮ ಹೊಟ್ಟೆಗಾಗಿಯೇ ದುಡಿದಳಷ್ಟೇ. ಅಜ್ಜಿಯಾದ ಮೇಲೆ ಅವಳ ಮೊಮ್ಮಗು ಅಜ್ಜಿ ನೀವು ನಿಮ್ಮ ಜೀವನದಲ್ಲಿ ಏನು ನೋಡಿದ್ದೀರಿ, ಏನೇನು ಮಾಡಿದ್ದೀರೆಂದು ಅಕಸ್ಮಾತ್ ಕೇಳಿದರೆ, ನಿನ್ನ ಅಪ್ಪ ಚಿಕ್ಕಪ್ಪನ ಎಷ್ಟು ತಿಂದರೂ ತುಂಬದ ಬಕಾಸುರ ಹೊಟ್ಟೆಗಳನ್ನು ತುಂಬಿಸುತ್ತಲೇ ಇದ್ದೆ, ಅಡುಗೆ ಮನೆಯ ಖಾಲಿ ಪಾತ್ರೆಗಳಿಂದ ಹಿಡಿದು, ಪಾತ್ರೆಗಳ ಪಾಲಾಗುವವರೆಗೂ ಕಂಡೆನೆಂದು ಎಲ್ಲಿ ಹೇಳುವಳೋ ಎಂದು ಹೆದರಿಕೆಯಾಗುತ್ತದೆ. ತಿಂದ ತಟ್ಟೆಯನ್ನೂ ಸಹ ತೊಳೆದಿಡದ ಮಹಾನ್ ಪುತ್ರ ರತ್ನರು ನಾವುಗಳು. ಒಂದು ಊರು ತೋರಿಸಲು ಕರೆದೊಯ್ಯಲಿಲ್ಲ, ಒಂದು ಚಿನ್ನದ ಮೂಗುಬೊಟ್ಟು ಕೇಳಿದರೂ ಕೊಡಿಸುವ ಶಕ್ತಿ ಇನ್ನೂ ಬಂದಿಲ್ಲ, ತರಕಾರಿಗೆ, ದಿನಸಿಗೆಂದು ಅಪ್ಪ ಕೊಡುವ ಚೂರು ಪಾರು ದುಡ್ಡಲ್ಲಿಯೂ ಉಳಿಸಿ ಚೀಟಿಗಳನ್ನು ಹಾಕಿ ಚಿನ್ನ ಮಾಡುವ ಜಾಣ್ತನ, ಮತ್ತು ತಾಳ್ಮೆ ಅಮ್ಮನಂತಹ ದೈತ್ಯಪ್ರತಿಭೆಗಳಿಗಲ್ಲದೇ ಮತ್ತಾರಿಗೂ ಬರಲು ಸಾಧ್ಯವೇ ಇಲ್ಲ. ಅದೆಷ್ಟು ಬಾರಿ ಅನ್ನ ಕಡಿಮೆಯಾದಾಗ ಕಡಿಮೆ ಉಂಡಳೋ ಹಸಿವೇ ಇಲ್ಲ ಇವತ್ತು ಎಂದು ಸುಳ್ಳು ಬೇರೆ. ಇವರಿಗ್ಯಾಕೆ ಮಕ್ಕಳ ಮೇಲೆ ಇಷ್ಟು ವ್ಯಾಮೋಹ, ಮುಂದೆ ನಾವು ಎಂತೆಂಥಾ ಸೊಸೆಯರೆಂಬ ಕಿಲಾಡಿಗಳನ್ನು ಕರೆತಂದು ಯಾವ ಯಾವ ರೀತಿ ನೋವು ಕೊಡುವೆವೋ ಎಂದು ಭಯವಾಗುತ್ತೆ. ಇವರುಗಳು ಮಾಡಿರುವ ತ್ಯಾಗಕ್ಕೆ ಪ್ರತಿಯಾಗಿ ಎಂದಲ್ಲದಿದ್ದರೂ ಕನಿಷ್ಟ ಅಪ್ಪ ಅಮ್ಮನೆಂಬ ಪ್ರೀತಿ ಮಮತೆಯಾದರೂ ಬಂದವಳ ಮುತ್ತುಗಳು ಮರೆಸದಿರಲಿ ಎಂದು ಸದಾ ಪ್ರಾರ್ಥಿಸಿಕೊಳ್ಳುತ್ತೇನೆ. ಯಾರೂ ಕೆಟ್ಟವರಿರುವಿದಿಲ್ಲ ಆದರೆ, ಹೊಸ ಹಳೆಯ(ಅನುಭವಿ) ಆಲೋಚನೆಗಳ ದ್ವಂದ್ವದಿಂದಷ್ಟೇ ಎಷ್ಟೋ ಮನೆ ಮುರಿಯುತ್ತವೆ. ಅದೆಲ್ಲಾ ಇರಲಿ. ಈಗ ಆಗಿದ್ದಿಷ್ಟೇ.

ನಮ್ಮೆಲ್ಲರ ಜವಾಬ್ದಾರಿ ಹೊರುವುದಕ್ಕಾಗಿ ಸತತವಾಗಿ ವರ್ಷಾನುವರ್ಷ ಅಂಗಡಿಯ ಸಾಮಾನುಗಳನ್ನು ಹೊತ್ತ ತನ್ನ ಗಾಡಿಯ ಭಾರದ ದೆಸೆಯಿಂದಾಗಿ ಈಗ ಕೈ ಸ್ನಾಯುಗಳು ಉರಿ ಮತ್ತು ನೋವು ಕಾಣಿಸಿಕೊಂಡು ಕಾಡತೊಡಗಿದ್ದವು. ಹಾಗಾಗಿ ಹಲವಾರು ಇಂಗ್ಲೀಷು ಔಷಧಿ, ಆಯುರ್ವೇದ ಔಷಧಿ ಎಲ್ಲಾ ಖರ್ಚಾದರೂ ಕಡಿಮೆಯಾಗದೇ ಯಾರೋ ಹೇಳಿದ ಯೋಗ ಶಿಬಿರದ ಮೊರೆ ಹೊಕ್ಕು ಈಗ ಅದರಲ್ಲೇ ಏನೋ ಒಂದು ರೀತಿ ಕಾಲು, ಕೈಗಳ ನೋವು ಕೊಂಚ ಕಡಿಮೆಯಾದಂತೆನಿಸಿ, ಕೈಗೆ ಸಿಕ್ಕ ಮಾನಸಿಕ, ದೈಹಿಕ, ಸಾಂಸಾರಿಕ ತೊಂದರೆಗಳಿರುವವರಿಗೂ ಸಹ ಬಂದು ಸೇರಲು ಧ್ಯಾನ, ಯೋಗದಿಂದಾಗುವ ಲಾಭದ ಕುರಿತು ಚಿಕ್ಕ ಉಪದೇಶ ಕೊಡುತ್ತಿರುವ ಅಪ್ಪ,  ಹಲವರ ಅಪಾರ್ಥಕ್ಕೆ ಸಿಲುಕಿ ಅಮ್ಮನ ಕೆಂಗಣ್ಣಿಗೆ ಗುರಿಯಾಗಿರುವರು. ಅಮ್ಮನ ಇನ್ನೊಂದು ವಿಶೇಷತೆಯೇನಂದರೆ ತನಗೆ ಇಷ್ಟವಾಗದ ವಿಷಯಕ್ಕೆ ನೇರವಾಗಿ ಪ್ರತಿಭಟಿಸುವುದಿಲ್ಲ. ಅಪ್ಪ ಧ್ಯಾನಕ್ಕೆ ವ್ಯಯಿಸುತ್ತಿರುವ ಸಮಯ, ಮತ್ತು ತೋರುತ್ತಿರುವ ಆಸಕ್ತಿ, ಮನೆಯವರಲ್ಲಿ ಅಥವಾ ಬಂಧುಗಳಲ್ಲಿ ತೋರುತ್ತಿಲ್ಲ ಎಂದು ಮತ್ತು ತನಗೆ ಹಿಡಿಸದಿರುವ ಧ್ಯಾನ ತರಗತಿಗಳಿಗೆ ಮಧ್ಯ ಕೊಂಚ ದಿನ ಬಿಡುವು ಕೊಟ್ಟಿದ್ದರೂ ಈಗ ಮತ್ತೆ ಹೋಗಲು ಶುರುಮಾಡಿರುವುದರಿಂದ ಅಪ್ಪನೊಂದಿಗೆ ಮೌನವ್ರತ ಮಾಡಲು ಶುರುಮಾಡಿದ್ದರು. ಅಮ್ಮ ಅಪ್ಪನೊಂದಿಗೆ ಮೂರು ದಿನಗಳಿಂದ ಮಾತನಾಡುತ್ತಿರಲಿಲ್ಲವೆಂದು ನಮಗೂ ಸೂಕ್ಷ್ಮವಾಗಿ ಗೊತ್ತಾಗಿತ್ತು. ಅದೇನೂ ಅಂಥ ದೊಡ್ಡ ವಿಷಯವಾಗಿ ಕಾಣದಿದ್ದರಿಂದ ಸುಮ್ಮನಾಗಿದ್ದೆವು. ಇಂದು ಬೆಳಗ್ಗೆ ಎದ್ದು ಎಲ್ಲ ರೆಡಿಯಾಗುತ್ತಿದ್ದಂತೆಯೇ ಅಪ್ಪ ಎಲ್ಲರನ್ನೂ ಮನೆಯ ನಡುಮನೆಗೆ ಕರೆದು, ಮುಕ್ತವಾದ ಮಾತಿಗಿಳಿದರು. ನಡುಮನೆ ನ್ಯಾಯಾಲಯದ ರೂಪ ಪಡೆಯಿತು. ಅಮ್ಮನನ್ನು ನೇರವಾಗಿ ಪ್ರಶ್ನಿಸುತ್ತಾ ನಿನಗೆ ನನ್ನ ಮೇಲೇಕಷ್ಟು ಕೋಪ, ಯಾಕೆ ಮುಖ ಕೊಟ್ಟು ಮಾತನಾಡ್ತಿಲ್ಲ. ಮಕ್ಕಳ ಎದುರಿಗೇ ಕೇಳ್ತಿದ್ದೀನಿ. ಪ್ರೀತಿಯಿಂದ ನಡೆದುಕೊಳ್ಳೋಕೆ ಏನಾಗಿದೆ ಈಗ. ನಾನೇನು ಅಂತಹ ತಪ್ಪು ಮಾಡಿರುವುದು. ಎಂದರು. ಅಮ್ಮ ಟಿಫಿನ್ ಬಾಕ್ಸುಗಳಿಗೆ ಊಟ ಸುರುವುತ್ತಿದ್ದವರು, ಒಮ್ಮೆ ಚಕಿತರಾಗಿ ಮೇಲೆರಗುತ್ತಲೇ ಇದ್ದ ಪ್ರಶ್ನೆಗಳ ಸುರಿಮಳೆಯಿಂದ ಚೇತರಿಸಿಕೊಂಡು, ನನಗೆ ನೀವು ಧ್ಯಾನ ತರಗತಿಗಳಿಗೆ ಹೋಗೋದು ಇಷ್ಟ ಇಲ್ಲ. ಮೊದಲು ಬಿಡಿ ಅದನ್ನ ಎಂದರು. ಅದಕ್ಕಿದ್ದು ಅಪ್ಪ, ಅದಕ್ಕೂ ಇದಕ್ಕೂ ಏನು ಸಂಬಂಧ. ಇದು ಮೊದಲನೆ ಬಾರಿ ಅಲ್ಲ ನೀನು ನನ್ನ ಮೇಲೆ ಮುನಿಸಿಕೊಳ್ತಿರೋದು. ಎಷ್ಟು ಕಷ್ಟ ಆಗುತ್ತೆ ಗೊತ್ತಾ. ನಾನು ಎಲ್ಲಂದರಲ್ಲಿ ಕಣ್ಣಿಂದ ನೀರು ಹಾಕುವ ಹಾಗಿದೆ. ನಾನು ಪ್ರಾಣ ತೆಕ್ಕೋತೀನಿ ಇಲ್ಲಾ ಎಲ್ಲಾದರೂ ಹೊರಟುಹೋಗ್ತೀನಿ ಅಷ್ಟೇ ಮನೆಯ ವಾತಾವರಣ ಹಿಂಗೇ ಇದ್ದರೆ. ಎಲ್ಲರೊಟ್ಟಿಗೆ ಸರಿ ಇರ್ತೀಯ, ನನ್ನೊಟ್ಟಿಗೆ ಯಾಕ್ ಹಾಗೆ ನಡ್ಕೋಬೇಕು. ಹೋಗಲಿ ನಾನಾದರೂ ಯಾಕೆ ಧ್ಯಾನಕ್ಕೆ ಹೋಗ್ತಿದ್ದೀನಿ, ಆರೋಗ್ಯ ಸುಧಾರಿಸಲಿ ಅಂತ ತಾನೆ. ಅದೂ ನಾನೊಬ್ಬ ಚೆನ್ನಾಗಿರ್ಬೇಕು ಅಂತ ಏನಲ್ವಲ್ಲ. ಮೊದಲು ನನ್ನ ಆರೋಗ್ಯ ಚೆನ್ನಾಗಿದ್ದರೆ ಮನೆಯ ಹೊಣೆ ಹೊರೋಕೆ ಆಗೋದು. ಕಾಲು ಕೈ ಸೋತು ಮೂಲೇಲಿ ಕೂತರೆ ಮುಂದೆ ಯಾರು ನೋಡ್ತಾರೆ. ಬೇಡ ಅಂದ್ರೆ ಬೇಡಾ ಬಿಡು ಬಿಟ್ಟುಬಿಡ್ತೀನಿ. ಅಷ್ಟಕ್ಕೂ ಅಲ್ಲಿ ಏನು ಹೇಳ್ಕೊಡ್ತಾರೆ ಅಂತ ನಿನಗೆ ಹೇಗೆ ಗೊತ್ತಾಗುತ್ತ್. ಮನೆ ಬಿಟ್ತು ವೈರಾಗಿ ಆಗಿ, ಅಂತಾನೋ, ಇನ್ನೇನೋ ಹಾಳಾಗೋ ವಿಷಯ ಹೇಳಿಕೊಡೋದಿಲ್ವಲ್ಲ. ಅಲ್ಲಿ ಎಂಥಾ ಮುರಿದು ಹೋದ ಸಂಬಂಧಗಳು ಬಂದ್ರೂ, ಬೆಸುಗೆ ಹಾಕಿ ಕಳ್ಸಿರೋ ಎಷ್ಟು ಉದಾಹರಣೆಗಳಿವೆ. ನೀನು ಬಂದು ನೋಡು ಆಮೇಲೂ ಬೇಡ ಅನ್ನಿಸಿದ್ರೆ ನಾನೂ ಸಹ ಹೋಗೋದಿಲ್ಲ. ಗೊತ್ತಿಲ್ಲದೇ ಯಾವುದೇ ವಿಷಯವನ್ನು ತೀರ್ಮಾನಿಸಬಾರದು. ಎಂದು ಇನ್ನೂ ತಮ್ಮ ಮನದಾಳದ ನೋವನ್ನು, ತಮಗಾಗುತ್ತಿರುವ ಸಂಕಟವನ್ನು ಮುಕ್ತವಾಗಿ ಎಲ್ಲರ ಮುಂದಿಟ್ಟರು. ಒಂದೇ ಸೂರಿನಡಿಯಲ್ಲಿರುವ ಕೇವಲ ಮೂರು ಮತ್ತೊಂದು ಜನರಲ್ಲಿ ನಿಜವಾಗಲೂ ಏನು ನಡೆಯುತ್ತಿದೆ ಎಂದು ನಮಗೆ ಎಷ್ಟರ ಮಟ್ಟಿಗೆ ಗೊತ್ತಿದೆ. ಇಷ್ಟೆಲ್ಲಾ ಅಪ್ಪನಿಗಾಗುತ್ತಿದ್ದ ಕಿರುಕುಳ ಒಬ್ಬರಿಗಾದರೂ ಕಿಂಚಿತ್ತಾದರೂ ಅರಿವ್ಯಾಕಾಗಲಿಲ್ಲ. ಇನ್ನೇನು ನಾವು ಒಂದೇ ಮನೆಯಲ್ಲಿ ಬದುಕಿದ್ದರ ಉದೇಶ. ಸಂಸಾರ ಹೇಗಾಯ್ತಿದು. ಒಂದು ಮನೆಯಲ್ಲಿರುವ ನಾಲ್ಕು ಜನರ ಮನಸ್ಸು, ಇಷ್ಟ, ಕಷ್ಟಗಳನ್ನೇ ಅರ್ಥ ಮಾಡಿಕೊಳ್ಳುವುದೇ ಇಷ್ಟು ಕ್ಲಿಷ್ಟವಾದರೆ ಇಷ್ಟು ದೊಡ್ಡ ಪ್ರಪಂಚದಲ್ಲಿ ಎಷ್ಟೆಲ್ಲಾ ಯುದ್ಧಗಳು, ಜಗಳಗಳಲ್ಲಿ ಏನಾಶ್ಚರ್ಯ ಎಂದೊಮ್ಮೆ ಅನಿಸಿತು.

ಇಬ್ಬರಲ್ಲೂ ಪ್ರೀತಿ ಖಂಡಿತಾ ಇದೆ. ಕಳೆದುಕೊಳ್ಳುವ ಭಯವಿದೆ. ಅದಕ್ಕಾಗಿ ಹಂಬಲಿಸಿಯೇ ಅಪ್ಪ ವಿಷಯ ಪ್ರಸ್ತಾಪ ಮಾಡಿದ್ದು, ಮತ್ತು ಅಮ್ಮ ಅಪ್ಪನನ್ನು ಧ್ಯಾನಕೇಂದ್ರಕ್ಕೆ ಹೋಗದಂತೆ ತಡೆಯುತ್ತಿರುವುದು. ಆದರೆ ಅಪ್ಪನನ್ನು ಧ್ಯಾನಕೇಂದ್ರಕ್ಕೆ ಹೋಗದಂತೆ ತಡೆಯುವುದು ಸರಿಯಲ್ಲ, ಅಮ್ಮನನ್ನು ಮನವರಿಕೆ ಮಾಡಿಸಲು ಪ್ರಯತ್ನ ಪಟ್ಟಷ್ಟೂ ತನ್ನ ಪಟ್ಟು ಬಿಡಲೊಲ್ಲರು. ಅಪ್ಪನಿಗೇ ಸಾಧ್ಯವಾದಷ್ಟೂ ಮನದಟ್ಟು ಮಾಡಿಸಿ, ಸುಮ್ಮನೆ ಇಂಥಾ ಕ್ಷುಲ್ಲಕ ವಿಷಯಕ್ಕೆ ತಲೆಕೆಡಿಸಿಕೊಳ್ಳದೇ ಇಬ್ಬರೂ ಚೆನ್ನಾಗಿರಿ. ಈ ವಯಸ್ಸಿನಲ್ಲಿ ಈ ರೀತಿಯ ವೈಮನಸ್ಯ ಬೇಕಾ. ಸಾಲ, ಕೆಲಸ ಎಲ್ಲದರ ಹೊಣೆ ಹೊತ್ತದ್ದೂ ಸಾಕಿನ್ನು. ನಾವು ಮೀಸೆಗಳನ್ನು ಬೆಳೆಸಲು ಶುರುಮಾಡಿದ್ದೇವೆ. ನೋಡ್ಕೋತೀವಿ. ನೀವು ಇನ್ನಾದರೂ ಕೊಂಚ ಸಮಯ ಆರಾಮವಾಗಿ ಜೊತೆಗೆ ಓಡಾಡಿಕೊಂಡಿರುವುದನ್ನು ಪ್ರಯತ್ನಿಸಿ. ಹೆಚ್ಚು ಮಾತನಾಡಿ, ಜೊತೆಗೆ ಸಮಯ ಕಳೆಯುವುದನ್ನು ಶುರುಮಾಡಿ. ಇತರೆ ಇತರೆಯಾಗಿ ಆ ಸಮಯಕ್ಕೆ ಅಪ್ಪನನ್ನು ಸಮಾಧಾನ ಗೊಳಿಸಿದ್ದಾಯ್ತು. ಆದರೆ ಗೊತ್ತಿತ್ತು ಇದು ಸಮಸ್ಯೆಗೆ ಪರಿಹಾರವಲ್ಲವೆಂದು. ಕೆಲವು ವರ್ಷಗಳಿಂದ ದುಡಿಯುತ್ತಿದ್ದರೂ ಇದೇ ಮೊದಲ ಬಾರಿಗೆ ನಾವೂ ದೊಡ್ಡವರಾಗಿದ್ದೇವೆಂದು ಅನ್ನಿಸಹತ್ತಿತು. ಇದೇ ಮೊದಲ ಬಾರಿಗೆ ಅಪ್ಪ ಅಮ್ಮ ಮತ್ತೆ ಚಿಕ್ಕ ಮಕ್ಕಳಂತಾಗುತ್ತಿದ್ದಾರೆಂದು ಕೂಡ ಅನ್ನಿಸಿತು. ಮನಸ್ಸುಗಳು ಮಾಗಿದ ಮೇಲೆ ಮತ್ತೆ ಮಗುವಾಗುತ್ತವೆಯೇನೋ. ಮನೆಯಿಂದ ಹೊರಬಿದ್ದ ಮೇಲೂ ಎಲ್ಲರಲ್ಲೂ ಮನಃಶಾಂತಿ ಒದಗಿಸಬಲ್ಲ ಧ್ಯಾನ ಹೇಗೆ ನಮ್ಮ ಮನೆಯಲ್ಲಿ ನೆಮ್ಮದಿ ಕದಡುವ ಕೆಲಸ ಮಾಡಿತೆಂದು ಅರ್ಥವೇ ಆಗಲಿಲ್ಲ. ಮನೆಯಲ್ಲಿ ನಡೆದ ಎಲ್ಲ ಘಟನೆಗಳೂ ಹೊರಗೆ ಬಂದು ಚಿಂತಿಸಿದಾಗ ಹಾಸ್ಯಮಯವಾಗಿ ಕಂಡವು. ನಗಲಿಲ್ಲ. ಮನೆಗೆ ಹೋಗಿ ಹೊಂದಿಕೊಂಡು ಬದುಕದಿದ್ದರೆ ನಾನೇ ಮನೆ ಎಲ್ಲಾದರೂ ಹೊರಟು ಹೋಗುತ್ತೇನೆಂದು ಹೇಳಬೇಕೆನಿಸಿತು. ಹೇಳಲಿಲ್ಲ! 

                                                                                               - ನೀ.ಮ. ಹೇಮಂತ್


2 comments:

  1. ಕಥೆ ತುಂಬಾ ಚೆನ್ನಾಗಿದೆ ಹೇಮಂತ್... ಎಷ್ಟೋ ಮನೆಗಳಲ್ಲಿ ಹೀಗೇ ನೆಡೆಯುತ್ತೆ... ಎಲ್ಲರಂತೆ ಬದುಕಲಾಗದು ಅವರ ಜೀವನಗಳೇ ಬೇರೆ. ಎಲ್ಲರಿಗೂ ಅವರದೇ ಆದಂತ ಮನಸ್ಥಿತಿಗಳು ಇರುತ್ತವೆ. ಈ ಸಂತ್ಸಂಘ, ಆಶ್ರಮ, ಧ್ಯಾನ ಕೇಂದ್ರಗಳು ಜನರ ಭಾವನೆಗಳನ್ನ ಒಡೆಯದಂತೆ ಜೀವನ ನೆಡೆಸೋ ಹಾಗೆ ಮಾಡಬೇಕು

    ReplyDelete
    Replies
    1. ಖಂಡಿತಾ ಹೌದು ರೀ.. ವಂದನೆಗಳು ಆಸಕ್ತಿವಹಿಸಿ ಓದಿದ್ದಕ್ಕೆ ಮತ್ತು ವಿಚಾರ ಮಾಡಿದ್ದಕ್ಕೆ.. ಶುಭವಾಗಲಿ :-)

      Delete