ಓದಿ ಓಡಿದವರು!

Thursday 5 April 2012

ಪು ತಿ ನೋ…..!(ಪುಟ ತಿರುಗಿಸಿ ನೋಡಿ)


           ನ್ ಜೀವನ ಸಾರ್ ನಮ್ಮದು. ಇವೆಲ್ಲ ನಮಗೆ ಬೇಕಿತ್ತಾ ಅನ್ಸುತ್ತೆ ಒಂದೊಂದ್ಸಲ. ಕೆಲಸ, ಕೆಲಸ, ಕೆಲಸ.. ಮೂರು ತಿಂಗಳು! ಮೂರು ತಿಂಗಳು ನಿರಂತರವಾಗಿ ಕಂಪ್ಯೂಟರ್ ಕೀಲಿಮಣೆ ಹೇಗೆ ಕುಟ್ಟಬೇಕು ಅಂತ ಹೇಳ್ಕೊಡೋದ್ರಲ್ಲೇ ಕಳೆದ್ರು ನಮ್ಮ ಕಂಪನಿಯವರು. ಪ್ರತಿದಿನ ಬೆಳಗ್ಗೆ ಎದ್ದು ಬರುವೆ, ಸೀದಾ ಅದೇ ಕಿತ್ತೋಗಿರೋ ಕಂಪ್ಯೂಟರ್ ಮುಂದೆ ಕೂರುವೆ, ಎರಡೂ ಕೈಯಲ್ಲಿನ ಹತ್ತೂ ಬೆರಳುಗಳನ್ನ ಒಂಬತ್ತು ಗಂಟೆಗಳ ಕಾಲ ನಿರಂತರವಾಗಿ(ಮಧ್ಯ ಒಂದು ಘಂಟೆ ಊಟಕ್ಕೆ ಬಿಡುವು) ಇರುವ ೨೬ ಇಂಗ್ಲೀಷು ಕೀಲಿಗಳು, ಪಕ್ಕದಲ್ಲಿ ೧೦ ಸಂಖ್ಯೆಗಳ ಕೀಲಿಗಳು ಮತ್ತು ಅಪರೂಪಕ್ಕೆ ಉಪಯೋಗಕ್ಕೆ ಬರುವ ಹನ್ನೆರಡು ಫಂಕ್ಷನ್ ಕೀಲಿಗಳನ್ನ ಕುಟಕುಟನೆ ಕುಟ್ಟುವೆ, ಮನೆಗೆ ಮರಳುವೆ. ಬರಬರುತ್ತಾ ನಾನು ಕಂಪ್ಯೂಟರ್ ಕುಟ್ಟುತ್ತಿದ್ದೆನೋ, ಕಂಪ್ಯೂಟರೇ ದಿನಂಪ್ರತಿ ನನ್ನ ತಲೆಯ ಮೇಲೆ ಕುಟ್ಟುತ್ತಿತ್ತೋ ಎಂಬ ಅನುಮಾನ ನನಗೆ. ಮೊದಮೊದಲು ಏನು ಹುರುಪೆಂತೀರಿ, ಭಾರೀ ಕೆಲಸವೆಂಬಂತೆ ಕಛೇರಿಗೆ ಬಂದಿದ್ದೇ ಕಂಪ್ಯೂಟರ್ ಹಿಡಿದು ಕುಟ್ಟುತ್ತಿದ್ದ ಬಿರುಸಿಗೆ ಅಕ್ಕಪಕ್ಕದವರೇ ಅಲ್ಲ ಮೂರು ಸಾಲುಗಳಲ್ಲಿ ಕುಳಿತಿದ್ದವರೂ ನನ್ನ ಕಡೆಯೇ ನೋಡುತ್ತಿದ್ದರು. ಅದೆಷ್ಟು ಕೀಲಿಗಳು, ತಮ್ಮ ಅಂಗಾಂಗ ಕಳಚಿ ಕೆಳಗೆ ಬೀಳುತ್ತಿದ್ದವೋ, ಯಾವುದರ ಮೇಲೂ ಕರುಣೆ ತೋರದೆ ಕುಟ್ಟಿಹಾಕಿದ್ದೆ. ಕ್ರಮೇಣ ಯಾಂತ್ರಿಕತೆ ಎನಿಸಹತ್ತಿದ ಮೇಲೆ ಕುಟ್ಟುವುದು ಕುಂಟಿತವಾಗ್ತಾ ಬಂದಿತ್ತು. ಟೀಮ್ ಲೀಡರ್ ಎನ್ನುವ ಸೆಕ್ಯುರಿಟಿ ದರ್ಜೆಯವನು ನನ್ನ ಕೈಗಳು ಸುಮ್ಮನಾದಾಗೆಲ್ಲ ಬಂದು ತಲೆಯ ಮೇಲೆ ಮೊಟಕುತ್ತಿದ್ದನು. ಮೊಟಕಿಸಿಕೊಳ್ಳುತ್ತಾ, ಕುಟುಕಿಸಿಕೊಳ್ಳುತ್ತಾ, ಬೆನ್ನು ತಟ್ಟಿಸಿಕೊಳ್ಳುತ್ತಾ ಅಂತೂ ಅಕ್ಕಪಕ್ಕದಲ್ಲಿ ಕುಟ್ಟುವ ಸದ್ದು ಜೋರಾದಾಗೆಲ್ಲಾ ಇನ್ನೂ ಜೋರಾಗಿ ಕುಟ್ಟಿ ಸ್ಪರ್ಧಿಸಿ ಸೈ ಎನ್ನಿಸಿಕೊಳ್ಳುತ್ತಾ ಮುಂದುವರೆದಿದ್ದೆ. ನನ್ನ ಬಳಿ ಒಂದು ಮೊಬೈಲ್ ಫೋನ್ ಎಂಬ ಮತ್ತೊಂದು ಪುಟ್ಟ ಯಂತ್ರವೂ ಸಹ ಇತ್ತು!

ಅದು ಅಪರೂಪಕ್ಕೊಮ್ಮೆ ಸದ್ದು ಮಾಡಿ ತಾನು ಇನ್ನೂ ಬದುಕುಳಿದಿರುವುದಾಗಿ ಎಚ್ಚರಿಸುತ್ತಲಿತ್ತು. ಒಂದು ಕರೆ ಬರುತ್ತಿರಲಿಲ್ಲ, ಒಂದು ಮೆಸೇಜು ಬರುತ್ತಿರಲಿಲ್ಲ. ಅದಕ್ಕೂ ಬೇಸರವಾಗಿ ಉಸಿರಾಡದೇ ಹಾಗೇ ಬಿದ್ದಿರುತ್ತಿತ್ತು. ಒಂದು ಘಂಟೆಯ ಕರೆಂಟಿನ ಊಟ ಹಾಕಿಸಿದರೇ ಮುಗಿಯಿತು ಕನಿಷ್ಠ ಮೂರು ದಿನ ಮತ್ತೆ ಊಟ ಕೇಳುತ್ತಿರಲಿಲ್ಲ, ತಂಟೆ ಮಾಡುತ್ತಿರಲಿಲ್ಲ. ಸದಾ ಮಲಗಿರುತ್ತಿದ್ದ ನನ್ನ ಮೊಬೈಲ್ ಫೋನು ಸರಿಯಾಗಿ, ಟಾಯ್ಲೆಟ್ ಹೋಗಿದ್ದಾಗಲೋ, ಸ್ನಾನಕ್ಕೆ ಹೋಗುವಾಗಲೋ, ಎದ್ದು ಬಾಯಿ ಬಡಿದುಕೊಳ್ಳುತ್ತಿತ್ತು, ಎದ್ದು ಬಿದ್ದು ಓಡಿಬಂದು ಸ್ವೀಕರಿಸಿದರೆ ಹೇಯ್… ಸ್ವೀಟಿ…. ನಾನು ಪ್ರಿಯಾ….., ಐ ಲವ್ ಯು ಡಾರ್ಲಿಂಗ್……. ಅಂತಾಳೆ ಅಂದ್ಕೊಂಡ್ರೆ ಸರ್ ಕುಟ್ತಾ ಕುಟ್ತಾ ಕೈ ಮುರ್ಕೊಂಡ್ರೆ ಇನ್ಶುರೆಂಸ್ ಕೊಡ್ತೀವಿ, ಸಾಲ ಮಾಡ್ಕೊಂಡ್ ಹಾಳಾಗೋಕೆ ಕಾರ್ಡ್ ಕೊಡ್ತೀವಿ, ದುಡ್ಡು ಜಾಸ್ತಿ ಇದ್ರೆ ಕೊಡಿ ನಾವ್ ಇಟ್ಕೋತೀವಿ ಅಂತ ಬಿಜಿನೆಸ್ ಮಾತಾನಾಡಿ ಬೇಡಮ್ಮ ಅಂದಿದ್ದೇ ಟಾಟಾ ಮಾಡೋರು ಸಿಕ್ತಿದ್ರು. ನಿಟ್ಟುಸಿರಿನಲ್ಲೇ ಸ್ನಾನ ಮುಗಿಸಿ ಬಿಡ್ತಿದ್ದೆ. ಕಛೇರಿಯ ಮೀಟಿಂಗೊಂದರಲ್ಲಿ ಮ್ಯಾನೇಜರ್ ಎಂಬ ಪ್ರಾಣಿಯು ಗಂಭೀರವಾದ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿರಲು ಸ್ತಬ್ಧವಾಗಿದ್ದ ವಾತಾವರಣದಲ್ಲಿ ಇದ್ದಕಿದ್ದಂಗೆ ನನ್ನ ಮೊಬೈಲ್ ಹೋssssssss, ಎಂದು ಬಾಯಿ ತೆರೆಯುವುದು, ಮೂರು ಮೂರು ಬಾರಿ ನಿರಾಕರಿಸಿದರೂ ಸ್ವೀಕರಿಸೋ ಬಡ್ಡೀ ಮಗನೆ ಎಂದು ಹಿಂದೆ ಬಿದ್ದು ಮೆಲ್ಲಗೆ ಹಲ್ಲೋ ಎಂದರೆ ಮತ್ತಿನ್ನಾರೋ ಲಲನಾಮಣಿ ಸಾರ್ ಶೇವಿಂಗ್ ಮಾಡಿ ನಮ್ ಬ್ಯಾಂಕ್ ನಲ್ಲಿ ಅಂತ. ಮಾತನಾಡಲಾಗದೆ ಮತ್ತೆ ಫೋನು ಮಾಡುವಳೆಂದು ಹೇಳಿದ್ದಕ್ಕೆ ಆಯ್ತೆಂದು ಹೇಳಿ ಕಟ್ ಮಾಡಿದೆ. ಮ್ಯಾನೇಜರ್ ಪ್ರಾಣಿಗೆ ಬಯ್ಯುವುದಕ್ಕೆ ಕಾರಣ ಬೇಕಾಗೇ ಇರಲಿಲ್ಲ ಅಂತದ್ದರಲ್ಲಿ ಸಿಕ್ಕರೆ ಬಿಡುವನಾ, ಮೀಟಿಂಗಿಗೆ ಬರುವ ಮುನ್ನ ಆ ಮೊಬೈಲ್ ಬಾಯಿಗೆ ಏನಾದ್ರೂ ತುರುಕುವುದನ್ನ ಕಲಿ ಎಂದು ಹೇಳಿಯೇ ಹೇಳಿದ. ಇನ್ಯಾವನೋ ಇನ್ನೊಮ್ಮೆ ಸಾರ್ ಗಾಡಿ ಬೇಕಾ ಅಂತ ಶನಿವಾರದ ದಿನ ಇನ್ನೂ ಬೆಳಗಾಗುವ ಮುನ್ನ ಎದ್ದೇಳಿಸಿದ. ಕೊಡಪ್ಪಾ ಅಂದೆ, ಮನೆಗೆ ಕಳ್ಸಿಬಿಡ್ತೀನಿ ಅಂದ ಆಯ್ತು ಒಳ್ಳೇದಾಯ್ತು ಕಳ್ಸಪ್ಪ ಅಂದೆ. ವಿಳಾಸ ಕೊಡಿ ನಮ್ಮ ಹುಡುಗನ್ನ ಕಳ್ಸ್ತೀನಿ ಅಂದ ಡ್ರೈವರ್ ಬೇಡಪ್ಪಾ ಎರಡು ಚಕ್ರದ ಗಾಡಿ ತಾನೆ ನಾನೇ ಓಡಿಸ್ಕೋತೀನಿ ಅಂದೆ. ಹ ಹ ಹ ಚೆನ್ನಾಗ್ ಮಾತಾಡ್ತೀರಾ ಸಾರ್, ನೀವು ಯಾವ ಮಾಡೆಲ್ ಗಾಡಿ ಬೇಕೋ ತೊಗೋಬೋದು ಸರ್, ೦% ಲೋನ್ ಇರುತ್ತೆ ನಮ್ಮ ಹುಡುಗ ಎಲ್ಲಾ ವಿವರಿಸ್ತಾನೆ ನಿಮಗೆ ಅಂದ, ಸಾಲ ಯಾರಪ್ಪಾ ಕೆಳಿದ್ದು ನಿನಗೆ ಈಗ ಗಾಡಿ ಬೇಕಾದ್ರೆ ಕೊಡು ಅಂದೆ, ಸರ್ ಕ್ಯಾಶ್ ಅಂಡ್ ಕ್ಯಾರಿ ಗಿಂತ ಸಾಲದಲ್ಲಿ ತೊಗೊಳ್ಳಿ ಸಾರ್ ೦% ಬಡ್ಡಿ ಎಂದ ಆಹಾ! ದುಡ್ಡು ಕೊಡ್ತೀನಿ ಅನ್ನೋರಿಗೂ ಲೋನ್ ತೊಗೊ ಅಂತಾನಲ್ಲಾ ಇವನು ಎಂದುಕೊಂಡು ಅಪ್ಪಾ ತಂದೆ ದುಡ್ಡು ಕೊಡ್ತೀನಿ ಅಂತ ಯಾರು ಹೇಳಿದ್ದು ನಿನಗೆ, ನೀನು ಗಾಡಿ ಕೊಡ್ತೀನಿ ಅಂದದ್ದಕ್ಕೆ ಕೊಡು ಅಂದೆ ಅಷ್ಟೇ ಎಂದೆ, ಅದೇನೋ ಮೊಬೈಲ್ ನಲ್ಲಿ ಕುಯ್ ಕುಯ್ ಶಬ್ಧ ಬರಲು ಶುರುವಾಯ್ತು. ಕಟ್ ಮಾಡಿದನೇನೋ ಆಸಾಮಿ!

ಈ ನನ್ನ ಮೊಬೈಲ್ ವಿಳಾಸವನ್ನ ಇವರುಗಳಿಗೆ ಅದ್ಯಾರು ಕೊಡುತ್ತಿದ್ದರೋ ಕಾಣೆ. ಅಪರೂಪಕ್ಕೊಮ್ಮೆ ಸ್ನೇಹಿತನೊಬ್ಬ ಫೋನು ಮಾಡಿದ್ದ ಹದಿನೈದು ನಿಮಿಷದೊಳಗೆ ನಾಲ್ಕು ಬಾರಿ ಯಾರದೋ ಪ್ರಾಣವೇ ಹೋಗುತ್ತಿದೆಯೆಂಬಂತೆ ಆತುರದಲ್ಲಿದ್ದರು. ಗೊತ್ತಿದ್ದೂ ಗೊತ್ತಿದ್ದೂ ಯಾರೆಂದು ನಾನೇ ಕರೆ ಮಾಡಲು ಸರ್ ಇದು ಡಾಶ್ ಬ್ಯಾಂಕಿನಿಂದ ನಿಮಗೆ ಒಂದು ಹೊಸ ಶೇವಿಂಗ್ ಖಾತೆಯ ಬಗ್ಗೆ ತಿಳಿಸಬೇಕಿತ್ತು ಎಂದಳು. ಮಾತನ್ನೂ ಆಡದೆ ಕಟ್ ಮಾಡಿದೆ. ಆದರೆ ಮತ್ತೆ ಕರೆ ಮಾಡಿದಳು. ಧ್ವನಿ ತುಂಬಾ ಚೆನ್ನಾಗಿತ್ತು. ಮನಸಿಲ್ಲದಿದ್ದರೂ ಕರೆ ಸ್ವೀಕರಿಸಿದೆ. ಇಲ್ಲಮ್ಮ ನನ್ನ ಬಳಿ ಕೂಡಿಡಲು ನಿಜವಾಗಲೂ ದುಡ್ಡಿಲ್ಲ ಎಂದೆ. ಮತ್ತೆ ಮುಂದಿನ ತಿಂಗಳು ಕರೆ ಮಾಡಲಾ ಸರ್ ಎಂದಳು ಬೇಡಮ್ಮಾ ನನ್ನ ಆರ್ಥಿಕ ಪರಿಸ್ಥಿತಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇದ್ದಂಗೆ ದಿನಗಳೆದಂತೆ ಹದಗೆಡುತ್ತೇ ಹೊರತು ಸುಧಾರಿಸುವುದಿಲ್ಲ ಎಂದೆ. ಅದೇನು ಅರ್ಥವಾಯ್ತೋ ಒಟ್ಟಿನಲ್ಲಿ ಕಿಲಕಿಲನೆ ನಕ್ಕಳು, ಸರ್ ತುಂಬಾ ಒಳ್ಳೇ ಆಫರ್ ಇದೆ ಸರ್ ಎಂದು ಏನೇನೋ ಹೇಳುತ್ತಿದ್ದಳವಳು ನಾನು ಆಹಾ ಶಾರೀರವೇ ಇಷ್ಟು ಸುಂದರ ಇನ್ನ ಶರೀರ ಇನ್ನೆಷ್ಟು ಸುಂದರವಾಗಿರಬಹುದು ಎಂದು ಲೆಕ್ಕ ಹಾಕುತ್ತಲಿದ್ದೆ. ಸರ್ ಹಣ ಹೂಡಿ ಸರ್ ಎಂದು ಗೋಗರೆಯುತ್ತಿದ್ದ ಆ ಧ್ವನಿಗೆ ಕಠೋರವಾಗಿ ಸಾಧ್ಯವಿಲ್ಲ ಎನ್ನುವ ಮನಸ್ಸಿಲ್ಲ ಆದರೆ ಹೂಡಲು ತೂಕವಿಲ್ಲದ ನನ್ನ ಪರ್ಸಿಗೆ ಶಕ್ತಿಯಿಲ್ಲ. ನುಣುಚಿಕೊಳ್ಳಲು ಸಾಲ ಬೇಕೆಂದು ನೋಡುತ್ತಿದ್ದೇನೆಂದು ಹೇಳಿದೆ. ಹೋ.. ಸರ್ ಗೃಹ ಸಾಲಾನಾ ವೈಯಕ್ತಿಕ ಸಾಲಾನಾ ಎಂದಳು. ಸುಳ್ಳಿನ ಮೇಲೇ ಮತ್ತೊಂದು ಸುಳ್ಳು ಕಟ್ಟಿದೆ. ಸರಿ ಎಂದು ಕಿವಿಯನ್ನು ತಬ್ಬಿ ಹಿಡಿದಿದ್ದವಳು ಬಿಟ್ಟಳು. ಯಾಕೆ ಕೇಳಿದಳೆಂದು ಅರ್ಥವಾಗಲಿಲ್ಲ, ಸುಮ್ಮನಾದೆ. ಮತ್ತೆ ಸಂಜೆ ಯಾವನೋ ಕರೆ ಮಾಡಿ ಮೊದಲೇ ಗೊಬ್ಬರವಾಗಿರುವ ನನ್ನ ತಲೆ ಏರಿ ಮೂರೇ ದಿನದಲ್ಲಿ ಲೋನ್ ಕೊಡಿಸುವುದಾಗಿ ಹೇಳಿದ. ಬೇಡಬೇಡವೆಂದರೂ ಕಛೇರಿಯವರೆಗೂ ಬಂದು ಯಾವುದೇ ರೀತಿಯ ದಾಖಲೆಗಳು ನನ್ನ ಬಳಿ ಇಲ್ಲ ಆದರೂ ಸಾಲ ಬೇಕೆಂದು ಹೇಳಿದ್ದಕ್ಕೆ ಕುಪಿತಗೊಂಡು ರಸ್ತೆಯಲ್ಲಿಯೇ ಮಾತಿಗೆ ಮಾತು ಬೆಳೆಸಿ ಹೊರಟು ಹೋದ.

(೨) 

“ಸರ್ ನಾನು ಡ್ಯಾಶ್ ಬ್ಯಾಂಕಿನಿಂದ ನಿಮಗೆ ಕರೆ ಮಾಡ್ತಿದ್ದೀನಿ ನಿಮ್ಮ ಬಳಿ ದುಡ್ಡು ಜಾಸ್ತಿ ಇದೆಯ ಸಾರ್ ಒಂದು ಹೊಸ ಉಳಿತಾಯ ಯೋಜನೆ ಇದೆ, ನೀವು ಅದರಲ್ಲಿ ಹಣ ತೊಡಗಿಸೋಕೆ ಮನಸ್ಸು ಮಾಡ್ತೀರಾ” “ಫೋನಿಡಮ್ಮಾ ಸುಮ್ಮನೆ ತಲೆ ತಿನ್ನಬೇಡ” ಎಂದು ಬಂದ ಪ್ರತಿಕ್ರಿಯೆಗೆ ಒಂದು ಗುಟುಕು ನೀರು ಕುಡಿದು ೪೫ ಎಂಬ ನಂಬರಿಗೆ ಗುರುತು ಹಾಕಿಕೊಂಡು ನಿಟ್ಟುಸಿರೊಂದನ್ನು ಬಿಟ್ಟು ಮತ್ತೆ ಕೃತಕವೇ ಆಗಿದ್ದರೂ ಕೃತಕವೆಂದು ಊಹಿಸಲೂ ಸಾಧ್ಯವಾಗದ ಹಾಗೆ ತುಟಿ ಅರಳಿಸಿ ೪೬ನೇ ವ್ಯಕ್ತಿಗೆ ಮತ್ತದೇ ಉರು ಹೊಡೆದಂತಾಗಿರುವ ಪದಗಳನ್ನು ಹೇಳಿ ಅಂಥದ್ದೇ ಮೊತ್ತೊಂದು ಪ್ರತಿಕ್ರಿಯೆ ಮಾಮೂಲಿನಂತೆ ಸ್ವೀಕರಿಸುವಳು. ದಿನಕ್ಕೆ ಅರವತ್ತು ಜನರನ್ನ ಸಂಪರ್ಕಿಸಿದರೂ ಕೊನೆಗೂ ಒಂದೂ ಕಸ್ಟ-ಮರನನ್ನು ದೊರಕಿಸಲಾಗದೆ ದಿನದ ಅಂತ್ಯದಲ್ಲಿ ತನ್ನ ಮ್ಯಾನೇಜರನ ಬಳಿ ಕುಂಬಳಕಾಯಿ ಕುಂಬಳಕಾಯಿ ಎಂದು ಬಯ್ಸಿಕೊಂಡು ಮನೆಗೆ ಮರಳುವಳು. ಈ ಕುಂಬಳಕಾಯಿ ಎಂಬುದು ಕಾಲ್ ಸೆಂಟರ್ ಗಳಲ್ಲಿ ತರಬೇತಿ ಕೊಡುವಾಗ ಕೆಟ್ಟ ಅಥವಾ ಕ್ರುದ್ಧ ಕಸ್ಟ-ಮರ್ ಗಳು ಏನೇ ಬಯ್ದರೂ ಆ ಶಬ್ಧಗಳನ್ನು ‘ಕುಂಬಳಕಾಯಿ’ ಎಂಬ ಪದಕ್ಕೆ ಹೋಲಿಸಿ ಶಾಂತವಾಗಿಯೇ ಪ್ರತಿಕ್ರಿಯಿಸಲು ಹೇಳಿಕೊಟ್ಟಿರಲಾಗುತ್ತದೆ. ಅದೇ ನೀತಿಯನ್ನು ತಮ್ಮ ಟೀಮ್ ಲೀಡರ್, ಮ್ಯಾನೇಜರುಗಳ ಮೇಲೂ ಪ್ರಯೋಗಿಸಿ ಕೆಲಸದಲ್ಲಿ ಕೊಂಚ ನೆಮ್ಮದಿ ಉಳಿಸಿಕೊಂಡಿರುತ್ತಾರೆ. ಅಂದಿನ ಗುರಿ ತಲುಪದಿದ್ದಾಗ ಮ್ಯಾನೇಜರ್ ಕರೆಸಿ ಬಯ್ಯುತ್ತಿದ್ದರೆ ಹೀಗೆ ಕೇಳಿಸುತ್ತಿರುತ್ತದೆ. “ನೀನು ದೊಡ್ಡ ಕುಂಬಳಕಾಯಿ, ಒಂದು ದಿನವಾದರೂ ಕುಂಬಳಕಾಯಿ ಗುರಿ ತಲುಪಲು ಸಾಧ್ಯವಾಗದಿದ್ದಮೇಲೆ ಇನ್ನೇನು ಕುಂಬಳಕಾಯಿ ಕೆಲಸ ನೀನು ಮಾಡ್ತಿರೋದು ಇಲ್ಲಿ. ಮೇಲಿನ ಕುಂಬಳಕಾಯಿಗಳಿಗೆ ನಾನೇನಂತ ಕುಂಬಳಕಾಯಿ ಉತ್ತರಿಸೋದು. ನಿನ್ನ ಕುಂಬಳಕಾಯಿ ಕೈಲಿ ಈ ಕುಂಬಳಕಾಯಿ ಕೆಲಸವನ್ನ ನಿರ್ವಹಿಸಲಾಗದಿದ್ರೆ ಸುಮ್ಮನೆ ಬಿಟ್ಟು ಹೋಗ್ತಾ ಇರು. ಒಬ್ಬ ಕುಂಬಳಕಾಯಿ ಕಸ್ಟ-ಮರನನ್ನು ಹಿಡಿಯೋದು ಅಷ್ಟು ಕುಂಬಳಕಾಯಿ ಕಷ್ಟಾನಾ ನಿನಗೆ” ಎಂದು ಕುಂಬಳಕಾಯಿ ಜಪ ಮುಂದುವರೆಯುತ್ತಲೇ ಇರುತ್ತದೆ ಕೆಲಸಗಾರರು ಒಳಗೊಳಗೆ ನಗುತ್ತಲೇ ಇರುತ್ತಾರೆ. ಅಂತೂ ಅರವತ್ತು ಕಸ್ಟ-ಮರರ ನಿರಾಕರಣೆಯಿಂದ ಸುಸ್ತಾಗದ ಡ್ಯಾಶ್ ಬ್ಯಾಂಕಿನ ಲಲನೆ ದಿನಾಂತ್ಯದಲ್ಲಿ ಮ್ಯಾನೇಜರನ ಕುಂಬಳಕಾಯಿ ಸಹಸ್ರನಾಮದಿಂದ ಸುಸ್ತಾಗಿ ತಲೆ ಹಿಡಿದುಕೊಂಡು ಕಛೇರಿಯಿಂದ ಹೊರಬಿದ್ದರೆ ತನಗಾಗಿ ಸ್ಪ್ಲೆಂಡರ್ ಎಂಬ ಗಾಡಿಯ ಮೇಲೆ ಕೂತು ಹೊಗೆ ಬಿಡುತ್ತಾ ತನ್ನ ತಲೆನೋವನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದ ಗಂಡನನ್ನು ಸೇರಿ ದಿನಪೂರ್ತಿ ಮಾತಿನ ಆಸರೆಯಲ್ಲಿದ್ದ ಇಬ್ಬರೂ ತುಟಿಬಿಚ್ಚದೆ ಮನೆ ಸೇರುವರು. ಈ ಗಂಡನೆಂಬ ಗಂಡನ ದಿನವೂ ಸಹ ರೋಮಾಂಚಕವಾಗಿ ಕಳೆದಿರುತ್ತದೆ.

ಬೆಳಗ್ಗೆ ಒಂದು ಸಿಗರೇಟು ಸೇದಿ ದಿನದ ಯುದ್ಧಕ್ಕೆ ಸರ್ವಸನ್ನದ್ಧನಾಗಿ ಕಛೇರಿಗೆ ಕಾಲಿರಿಸಿದರೆ ಇವತ್ತು ಮೂರು ಜನರನ್ನಾದರೂ ತರದಿದ್ದರೆ ಕೆಲಸ ಬಿಟ್ಟು ಹೋಗಬೇಕೆಂದು ಹೇಳುತ್ತಿರಲು ಮ್ಯಾನೇಜರನ್ನು ಲಂಗೋಟಿಯಲ್ಲಿ ಬೆನ್ನು ಬಾಗಿ ಕೋಲಿನ ಆಸರೆಯಲ್ಲಿ ಕಲ್ಪಿಸಿಕೊಂಡು ತನ್ನನ್ನು ಬ್ರಿಟೀಷರ ವೇಷದಲ್ಲಿ ಕಾಣಿಸಿಕೊಂಡು ಬ್ರಿಟೀಷರೆ ದೇಶ ಬಿಟ್ಟು ತೊಲಗಿ ಎಂದಂತೆ ಒಂದು ಕ್ಷಣ ತೆರೆದ ಕಣ್ಣಿನಿಂದಲೇ ಕನಸು ಕಂಡು ಹಿ ಹಿ ಹಿ ಎಂದು ಬಾಯಿ ತೆರೆಯಲು ಲಂಗೋಟಿ ಮ್ಯಾನೇಜರು ಇನ್ನೂ ಉರಿದುಬೀಳುವನು. ಅರ್ಜಿ ಪತ್ರಗಳನ್ನು, ಮಾಹಿತಿ ಕೈಪಿಡಿಗಳನ್ನು, ಹಾಳೆಗಳು ಇನ್ನೊಂದು ಮತ್ತೊಂದು ಬ್ಯಾಗಿಗೆ ಸೇರಿಸಿಕೊಂಡು ಹೊರಟನೆಂದರೆ, ಕಂಪನಿಗಳ ಮುಂದೆ ನಿಂತು, ಸತ್ತಿರುವ ತಲೆಗೆ ಸಿಗರೇಟೆಂಬ ಪಂಜಿನಿಂದ ಬೆಂಕಿ ಕೊಡಲು, ಉಸಿರಾಡಲು, ತಳದಲ್ಲಿ ಹೊತ್ತಿರುವ ಬೆಂಕಿ ಆರಿಸಿಕೊಳ್ಳಲು ಇಂತಹ ಹಲವಾರು ಕಾರಣಗಳಿಗೆ ಹೊರಗೆ ಕಾಣಿಸಿಕೊಳ್ಳುತ್ತಿದ್ದ ಐಟಿ ಮಿಕಗಳನ್ನು ದೇವಸ್ಥಾನದ ಹೊರಗಿನ ಜಾಗಗಳಲ್ಲಿ ಮಂಗಗಳು ಲಗ್ಗೆ ಹಾಕುವಂತೆ ಸಾರ್ ಸಾಲ ಮಾಡ್ಕೊಳ್ಳಿ, ಸಾರ್ ಹಾಳಾಗೋಗಿ, ಸಾರ್ ತುಪ್ಪ ತಿನ್ನಿ, ಸಾರ್ ನಿಮ್ಮ ರಕ್ತ ಹೀರೋಕೆ ಒಂದು ಛಾನ್ಸ್ ಕೊಡಿ ಎಂದು ಆ ಲಲನೆಯ ಗಂಡ ಮತ್ತು ಅವನ ಸಂಗಡಿಗರು ದುಂಬಾಲು ಬಿದ್ದು ಏನದೆಂದು ಕೇಳಿಸಿಕೊಳ್ಳಲು ಮುಂದಾದ ಒಂದಿಬ್ಬರನ್ನೇ ರಾಜರ ಮರ್ಯಾದೆಯೊಂದಿಗೆ ತಮ್ಮ ಬ್ಯಾಂಕ್ ನೀಡುತ್ತಿರುವ ಎಲ್ಲಾ ವಿಶೇಷ ಕೊಡುಗೆಯನ್ನು ವಿವರಿಸಿದರೆ ತಮ್ಮ ಐಸಿ ಚಿಪ್ಪುಗಳು ತುಂಬಿರುವ ತಲೆಯನ್ನು ಅಸಡಾಬಸಡಾ ಆಡಿಸಿ ಹೊರಟವರನ್ನು ಗೇಟಿನ ತನಕ ಹಿಂಬಾಲಿಸಿ ತಲೆಕೆರೆದುಕೊಂಡು ವಾಪಾಸು ಬರುವರು. ಅಂತೂ ಸಂಜೆ ಮರಳಿದಾಗ ಖಾಲಿ ಕೈ, ಖಾಲಿ ಜೇಬು, ಖಾಲಿ ತಲೆ, ಖಾಲಿ ಅರ್ಜಿ ಪತ್ರಗಳು, ಮತ್ತದೇ ಲಂಗೋಟಿ ಮ್ಯಾನೇಜರು, ಇವನ ಕೆಂಪು ಮೋರೆ ಬ್ರಿಟೀಷು ವೇಷ ಹಾಕಿಬಂದು ಪಿಸ್ತೂಲಿನಲ್ಲಿದ್ದ ಎಲ್ಲ ಗುಂಡನ್ನು ತಲೆಗೆ ಹೊಡೆದುಕೊಂಡು ಸಿಡಿಮದ್ದುಗಳಿಂದ ಸಿಡಿಯುತ್ತಿದ್ದ ತಲೆಯನ್ನು ಹೊತ್ತುಕೊಂಡು ಹೆಂಡತಿಯ ಕಛೇರಿಯ ಬಳಿಗೆ ಬಂದು ನಿಂತು ತಲೆಯಲ್ಲಿದ್ದ ಬಾಂಬುಗಳಿಗೆ ಬೆಂಕಿ ಕೊಡುತ್ತಾ ನಿಲ್ಲುವನು, ಇನ್ನೊಂದು ಸೋತ ಜೀವವನ್ನು ಮೌನವಾಗಿ ಮನೆಗೆ ಹೊತ್ತೊಯ್ದು ಮನೆಯಲ್ಲಿ ಮುಗ್ಗರಿಸುವರು.

ಆ ಲಲನೆ ಮತ್ತು ಈ ಬ್ರಿಟೀಷನ ಪ್ರೇಮ ಪ್ರಸಂಗವೆಂದರೆ ಒಂದು ಪ್ರೇಮ ಪ್ರಸಂಗ. ಈ ಬ್ರಿಟೀಷನು ಜೀವನ ವಿಮಾ ಕಂಪನಿಯೊಂದರಲ್ಲಿ ಆಳುತ್ತಿದ್ದಾಗ ಹೇಗೋ ಮೊಬೈಲು ಸಂಖ್ಯೆ ಪತ್ತೆ ಹಚ್ಚಿ ಮೇಡಮ್ಮ ಧನ್ಯವಾದಗಳು ನಮ್ಮ ವಿಮಾ ಕಂಪನಿಯಿಂದ ನಿಮ್ಮನ್ನು ಪೆಶಲ್ ಕೊಡುಗೆಯೊಂದಕ್ಕೆ ಆಯ್ಕೆ ಮಾಡಲಾಗಿದೆ ಎಂದದ್ದಕ್ಕೆ ಎರಡನೇ ಪಿಯುಸಿ ಡುಮುಕಿ ಹೊಡೆದು ಯಾವುದಾದರೂ ಕೆಲಸಕ್ಕೆ ಕಾಯುತ್ತಿದ್ದ ಲಲನೆ ತನ್ನ ಅರ್ಧ ಕಿವಿ ಮುಚ್ಚಿದ್ದ ಜುಮುಕಿಯಿಂದಾಗಿ ಸರಿಯಾಗಿ ಕೇಳಿಸದೇ ಓಹೋ ತಾನೆಂಬ ಮಹಾಬುದ್ದಿವಂತೆ ಕೆಲಸಕ್ಕೆ ಆಯ್ಕೆಯಾಗಿರುವಳೆಂದು ತಪ್ಪು ತಪ್ಪೇ ಪರಿಭಾವಿಸಿ, ಎಲ್ಲಿಗೆ ಬರಬೇಕು, ಮುಂದಿನ ಕ್ರಮಗಳೇನೆಂದು ಉತ್ಸಾಹದಿಂದ ಕೇಳುತ್ತಿರಲು ಬ್ರಿಟೀಷು ಮಹಾರಾಜರು ಆಹಾ ದೊಡ್ಡ ಮಿಕವೇ ಸಿಕ್ಕಂತಿದೆ ಎಂದು ತಾನೇ ಮನೆ ಬಾಗಿಲಿಗೆ ಬರುವುದಾಗಿ, ಎಲ್ಲ ವಿವರಗಳನ್ನು ನೀಡುವುದಾಗಿ ಹೇಳುವನು. ಅರೆರೆ! ಕಂಪನಿಗಳು ಬಾಗಿಲಿಗೆ ಬಂದು ಕೆಲಸ ಕೊಡುತ್ತಿವೆಯಾ ಎಂದು ತನ್ನ ಉದ್ದನೆಯ ಮೂಗಿನ ಮೇಲೆ ಕೈ ಇಟ್ಟುಕೊಂಡೇ ತನ್ನ ಪಾಸಾದ ಸ್ನೇಹಿತೆಯರಿಗೆ ಕೊರೆಯದೇ ಇರಲಿಲ್ಲ ಲಲನೆ. ಅಂತೂ ಮನೆ ಬಾಗಿಲಿಗೆ ಬಂದ ಕೆಂಪು ಮೂತಿಯವನನ್ನು ಮನೆಯವರೆಲ್ಲಾ ವರನಿಗೆ ಸತ್ಕರಿಸಿದಂತೆ ಸತ್ಕರಿಸಿದರಿಂದಲೋ ಏನೋ, ಅಲ್ಲಿ ಅಂದು ಆದ ಅವಾಂತರಗಳು, ಮುಂದೆ ಹೇಗೆ ಬದಲಾಗುತ್ತಾ ಹೋದವೆಂದರೆ ಆತ ವೊಡಾಫೋನು, ಆಕೆ ಏರ್ಟೆಲ್ಲು ಗ್ರಾಹಕ ಸೇವೆಯಲ್ಲಿ ಸೇರಿದಾಗ ಇಬ್ಬರ ನಡುವೆ ಪ್ರೇಮಾಂಕುರವಾಯಿತು, ಈತ ಹೀರೋ ಹೊಂಡಾ ಆಕೆ ಮಣಪ್ಪುರಂ ಸೇರುವಾಗ ಮದುವೆಯಾಯಿತು ಫ್ಯಾಮಿಲಿ ಪ್ಲಾನಿಂಗ್ ಮಾಡುವ ಹೊತ್ತಿಗೆ ಆಕೆ ಶೇವಿಂಗ್ಸ್ ಖಾತೆ ತೆರೆಯುವಲ್ಲಿ ಆತ ಸಾಲ ಮಾಡಿಸುವಲ್ಲಿ ಬಿಜಿಯಾದರು.

ಈ ನಡುವೆ ಇಬ್ಬರ ನಡುವೆ ಮಾತುಗಳು ಅದಲು ಬದಲಾಗುತ್ತಿದ್ದುದು ಬಹಳ ಬಹಳ ವಿರಳ. ಆಕೆ ಉತ್ತರ ಧೃವದಿಂ ಎಂದರೆ ಈತ ದಕ್ಷಿಣ ದೃವಕೂ ಎನ್ನುತ್ತಿರುವ ಆದರೆ ಚುಂಬಕ ಗಾಳಿ ಮಾತ್ರ ಇಬ್ಬರ ಮಧ್ಯ ಬೀಸಲೊಲ್ಲದು. ಲಲನೆ ಶೇವಿಂಗ್ ಮಾಡು ಎನ್ನುತ್ತಿರಲು ಈ ಕೆಂಪು ಮೂತಿಯವ ಎಲ್ಲರ ತಲೆ ಬೋಳಿಸಲೆತ್ನಿಸಿ ತನ್ನ ತಲೆಯನ್ನೇ ಬೋಳಿಸಿಕೊಳ್ಳುತ್ತಿದ್ದ. ಬೇರೆವರಿಗೆ ಸಾಲ ಕೊಡಿಸುವ ಭರದಲ್ಲಿ ತನ್ನ ಸಾಲ ಬೆಟ್ಟದಷ್ಟಾಗಿತ್ತು. ಮಕ್ಕಳನ್ನು ಇನ್ನೂ ಮುಂದಿನ ವರುಷ ಹುಟ್ಟಿರೆಂದು ಇನ್ನೂ ತಳ್ಳುತ್ತಲೇ ಇದ್ದರು. ಅಪರೂಪಕ್ಕೆ ಮನೆಯಲ್ಲಿ ಬಾಯಿ ತೆರೆದರೆ ಮನೆಯಲ್ಲಿ ತಂಗಳು ಪೆಟ್ಟಿಗೆ ಕೆಟ್ಟಿದೆ ಎನ್ನುವಳು ಅದಕ್ಕುತ್ತರವಾಗಿ ತನ್ನ ಆರ್ ಸಿ ಬುಕ್ ಅಡ ಇಟ್ಟಿರುವುದಾಗಿ ಮುಂದಿನ ತಿಂಗಳು ತನ್ನ ಗಾಡಿ ಇಡುವುದಾಗಿ ಹೇಳುವನು. ಇದೇ ಸಂಸಾರದ ಸಮಸ್ಯೆಗಳ ಸಾಗರದಲ್ಲಿ ಮಿಂದು ಕಛೇರಿಯ ಕಡೆಗೆ ಹೊಸ ವಿಸ್ಮಯವನ್ನು ಸೃಷ್ಠಿಸುವವರಂತೆ ಕಾಲಿಡುವರು.

ಅಂದೂ ಸಹ ಹಾಗೆಯೇ ೩೩ನೇ ವ್ಯಕ್ತಿಯ ಫೋನ್ ನಂಬರಿಗೆ ಕರೆ ಮಾಡಿದರೆ ನೀವು ಕರೆ ಮಾಡುತ್ತಿರುವ ಚಂದಾದಾರರು ಬೇರೆ ಕರೆಯಲ್ಲಿ ಬಿಜಿಯಾಗಿದ್ದಾರೆ ದಯವಿಟ್ಟು ಸ್ವಲ್ಪ ಸಮಯದ ನಂತರ ಕರೆ ಮಾಡಿ ಎನ್ನುತ್ತಿದ್ದರೂ ಯಾರಿಗೆ ಗೊತ್ತು ಯಾರು ಶೇವ್ ಮಾಡಿಸಿಕೊಳ್ಳುವರೋ ಎಂದು ಲಲನೆ ಪದೇ ಪದೇ ಪ್ರಯತ್ನಿಸುತ್ತಿರುಷ್ಟರಲ್ಲಿ ಆತನೇ ಕರೆ ಮಾಡುವನು. ಅವನ ಪರಿಸ್ಥಿತಿ ಭಾರತದ ಪರಿಸ್ಥಿತಿಯ ಅಸಂಬದ್ಧ ಪ್ರವಚನವಾದ ಮೇಲೆ ಸಾಲ ಬೇಕಾಗಿರುವುದಾಗಿ ತಿಳಿದ ಲಲನೆ ತನ್ನ ಗಂಡನಿಗಾದರೂ ಉಪಯೋಗವಾದೀತೆಂದು ಆತನಿಗಾಗಿ ಸಂಖ್ಯೆ ಗುರುತುಹಾಕಿಕೊಳ್ಳುವಳು. ಲಂಗೋಟಿ ಮ್ಯಾನೇಜರನ ಕೈಲಿ ಕ್ವಿಟ್ ಇಂಡಿಯಾ ಚಳುವಳಿ, ಚಲೇ ಜಾವ್ ಚಳುವಳಿಯ ಪ್ರವಚನವನ್ನು ಎರಡೂ ಕಿವಿಗಳಿಂದ ಕೇಳಿಸಿಕೊಳ್ಳುತ್ತಿದ್ದ ಮತ್ತು ಇಬ್ಬರು ತನ್ನ ಸ್ನೇಹಿತರಿಗೆ ಕೊಡುಗೆಗಳನ್ನು ವಿವರಿಸಿ ಬರುವಂತೆ ಆದೇಶ ನೀಡಿಸಿಕೊಳ್ಳುತ್ತಿದ್ದ ಗಂಡನಿಗೆ ಕರೆ ಮಾಡಿ ಆ ಸಾಲ ಬೇಕಾಗಿರುವ ದೈವಾಂಶಸಂಭೂತನ ಮೊಬೈಲ್ ಸಂಖ್ಯೆಯನ್ನು ಕೊಟ್ಟು, ಬೇಗ ಹಿಡಿದರೆ ಕೆಲಸವಾದೀತೆಂದು ಹೇಳುವಳು. ಈ ಕೆಂಪು ಮೂತಿಯವನೂ ನಂಬಿ ಆತನನ್ನು ಪುಸಲಾಯಿಸಿ ಆತ ಏನು ಅಸಡ್ಡೆಯಿಂದ ಉತ್ತರ ನೀಡಿದರೂ ಕೊನೆಗೂ ಬಂದು ತನ್ನ ಬ್ಯಾಂಕಿನ ಕೊಡುಗೆಯನ್ನು ವಿವರಿಸುವುದಾಗಿ ಹೇಳಿ ಒಪ್ಪಿಸುವನು. ಸಂಜೆ ೫ ಘಂಟೆಗೆ ಮ್ಯಾನೇಜರ್ ಕಡೆಯಿಂದ ಯಾರೋ ಗೊತ್ತಿರದ ಸಾಲ ಅವಶ್ಯಕತೆಯಿರದ ದೊಡ್ಡ ಮನುಷ್ಯರು, ಇನ್ನೊಂದು ಕಡೆ ಸಾಲ ಬೇಕಿರುವ ಈ ಆಪದ್ಬಾಂಧವ. ಕಸ್ಟ-ಮರನ್ನು ಹಿಡಿದರೆ ಮ್ಯಾನೇಜರು ಖುಷಿಯಾಗುವನೆಂದು ಎಲ್ಲಾ ಬಿಟ್ಟು ದೈವಾಂಶಸಂಭೂತನ ಬಳಿಗೆ ಹೋಗುವನು. ಅಲ್ಲಿ ಆತ ಕೇಳುವುದೆಲ್ಲಾ ಕೇಳಿ, ಸಾಲ ಕೊಡು ಆದರೆ ವಾಪಾಸು ಕೇಳುವ ಧೈರ್ಯ ಮಾಡಬೇಡ ತನ್ನ ಬಳಿ ಕೊಡಲು ಸಹ ಯಾವುದೇ ದಾಖಲೆಗಳಿಲ್ಲ ಎಂದದ್ದನ್ನ ಕೇಳಿ ಸೋಲು, ನಿರಾಸೆ, ಕೋಪ ಎಲ್ಲ ಒಟ್ಟೊಟ್ಟಿಗೇ ಒತ್ತರಿಸಿಬಂದು ಮಾತಿಗೆ ಮಾತು ಬೆಳೆಸಿ ಜಗಳವಾಡಿ ಹೊರಟುಹೋಗುವನು.

ಮೂರು ದಿನವಾದರೂ ಲಲನೆ ಕಣ್ಣೀರು ಸುರಿಸುತ್ತಾ, ಬಾಗಿಲು ತೆರೆದು ಮನೆಯ ಹೊರಗೆ ಯಾವುದೇ ಗಾಡಿ ಸುಳಿಯಲು ಹೊರಗೆ ಬಂದು ನೋಡುತ್ತಾ ರಸ್ತೆಯನ್ನು ದಿಟ್ಟಿಸುತ್ತಾ ನಿಂತಿರುವಳು. ಏಳೂವರೆ ತಿಂಗಳ ನಂತರ ಬರುವ ಒಂದು ಜೀವಕ್ಕೆ ಅದರ ವಿದ್ಯಾಭ್ಯಾಸಕ್ಕೆ ವಿಶೇಷ ಉಳಿತಾಯ ಖಾತೆಯೊಂದನ್ನ ತೆರೆಯಬೇಕೆಂದು ತನ್ನ ಕೆಂಪು ಮೋರೆ ಗಂಡನಿಗೆ ಹೇಳಬೇಕಿತ್ತು!
                                                    -ನೀ.ಮ. ಹೇಮಂತ್

No comments:

Post a Comment