ಓದಿ ಓಡಿದವರು!

Monday, 23 April 2012

ಏನಿಲ್ಲ!?



 ಬೆಳಗ್ಗಿನಿಂದ ಅತ್ತೂ ಅತ್ತೂ ಸಾಕಾಯ್ತು. ಕಣ್ಣೀರಿನ ಜೊತೆಗೆ ಮೂಗು ಕೂಡ ಸುರ್ ಸುರ್ ಎನ್ನಲು ಶುರುಮಾಡುತ್ತೆ, ಅದೇ ವಿಚಿತ್ರ. ಧರಿದ್ರದ್ದು ಕಣ್ಣಲ್ಲಿ ನೀರು ನಿಲ್ಲೋಕೆ ಏನಾದ್ರೂ ಮಾಡಬೇಕು. ಈ ನಲ್ಲಿಯಂತಹದ್ದೇನಾದ್ರೂ ಫಿಟ್ ಮಾಡಬಹುದಾಗಿದ್ದರೆ ಮೊದಲು ಮಾಡಿಬಿಡ್ತಿದ್ದೆ, ಕಣ್ಣೀರು ನಿಲ್ಲಿಸಬಹುದಿತ್ತು. ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು, ನಿನ್ನೆ ರಾತ್ರಿ- ಇವತ್ತು ಬೆಳಗ್ಗೆ- ಮಧ್ಯಾಹ್ನ ಊಟ ಮಾಡಿರದಿದ್ದರಿಂದ ಹೊಟ್ಟೆ, ಚಿಂತಿಸಬಾರದ್ದನ್ನೆಲ್ಲಾ ಚಿಂತಿಸುತ್ತಿರುವುದರಿಂದ ಎದೆ ಒಟ್ಟೊಟ್ಟಿಗೇ ಉರೀತಿತ್ತು. ನೀರು ಕುಡಿದರೆ ಉರಿ ಕಡಿಮೆ ಆಗ್ತಿತ್ತೇನೋ, ಆದರೆ ಕುಡಿಯಲು ಭಯ, ಎಲ್ಲಾ ಕಣ್ಣಿನ ಮೂಲಕವೇ ಹೊರಗೆ ಬರುತ್ತೇನೋ ಅಂತ! ನನಗೇ ನಾಚಿಕೆಯಾಗುತ್ತೆ ಒಳ್ಳೇ ಹೆಂಗಸಿನ ತರಹ ಅಳ್ತೀನಲ್ಲಾ ಅಂತ. ಓಹ್! ಯಾವ ಗೂಬೆ ನನ್ನ ಮಗ ಹೇಳಿಕೊಟ್ಟನೋ ಹೆಂಗಸಿನ ತರಹ ಅಳೋದು ಅನ್ನೋ ಮಾತನ್ನ ಗೊತ್ತಿಲ್ಲ. ನೋವಾದ್ರೆ ಹೆಂಗಸರೇನು ಎಲ್ಲಾ ಪ್ರಾಣಿಗಳೂ ಅಳ್ತಾವೇನೋ. ನಾನು ಚಿಕ್ಕವನಿದ್ದಾಗ ನಮ್ಮಪ್ಪ ಕುಡಿದು ಬಂದು ಏನಾದರೂ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ನಮ್ಮಮ್ಮಿಗೆ ಹೊಡೆದಾಗಲೆಲ್ಲಾ ನಮ್ಮಮ್ಮಿ ಅತ್ತಿದ್ದನ್ನ ನಾನು ನೋಡೇ ಇರಲಿಲ್ಲ. ಪ್ರತಿಭಟಿಸುತ್ತಿದ್ದಳು. ಅಂಥಾ ಅಮ್ಮನಿಗೆ ಇಂಥಾ ಚಪ್ಪರ್ ಮಗ. ಆಗೆಲ್ಲಾ ನಮ್ಮಪ್ಪನ ಕತ್ತಿನ ಪಟ್ಟಿ ಹಿಡಿದು ಎರಡು ಬಿಗಿಯಾಗಿ ಕಪಾಳೆಗೆ ಬಿಟ್ಟು, ಈ ಪುರುಷಾರ್ಥಕ್ಕೆ, ನಿನ್ನ ಕುಟುಂಬ, ಅಮ್ಮನ ಕುಟುಂಬ ಎಲ್ಲಾ ಎದುರುಹಾಕಿಕೊಂಡು, ಪ್ರೇಮವಿವಾಹ ಬೇರೇ ಆಗಬೇಕಿತ್ತಾ ನೀನು, ಎಂದು ಕೇಳಬೇಕೆನಿಸುತ್ತಿತ್ತು. ಅವರ ಬಳಿ ಉತ್ತರವಿರಲು ಸಾಧ್ಯವೇ ಇಲ್ಲ. ಈಗ ಅಪ್ಪ ಅಮ್ಮಿಗೆ(ನಾವು ಹಾಗೇ ಕರೆಯೋದು) ಹೊಡೆಯೋ ಧೈರ್ಯ ಮಾಡಲು ಸಾಧ್ಯವಿಲ್ಲ. ನಾವಿದ್ದೀವಿ ಅಮ್ಮಿ ಕಡೆ ಅಂತ ಅವರಿಗೂ ಭಯ ಇದೆ.

ಆ ಕಜ್ಜೀ ನಾಯಿಯ ದೆವ್ವ ಇಡೀ ಈ ಪಾಳು ಬಿದ್ದಿರೋ ಆಫೀಸಿನಲ್ಲಿ ಕುಣಿದಾಡ್ತಿರೋ ಹಾಗೆ ಭಾಸವಾಗ್ತಿದೆ. ಅದು ಆಫೀಸಿನಲ್ಲಿ ಕುಣಿದಾಡ್ತಿತ್ತೋ, ನನ್ನ ತಲೆಯಲ್ಲೇ ಕುಣಿದಾಡ್ತಿತ್ತೋ. ದರಿದ್ರ ದೇವರನ್ನೇ ನಂಬದ ನಾನು, ದೆವ್ವವನ್ನ ಹೇಗೆ ನಂಬ್ತಿದ್ದೀನಿ ಅಂತ ನನಗೇ ಆಶ್ಚರ್ಯ. ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳಲಿ, ಮನೆ, ವ್ಯಾಪಾರ, ಕೆಲಸ, ತಮ್ಮನ ಭವಿಷ್ಯ, ತಂಗಿಯ ಮದುವೆ, ಅಪ್ಪನ ರಾದ್ಧಾಂತ, ಇತರೆ ಇತರೆ ಇತರೆ.. ಮನೆ ಸಮಸ್ಯೆ ಶುರುವಾಗಿದ್ದು ನನ್ನಿಂದಲೇ. ಆದರೆ, ಜೇಬಲ್ಲಿ ದುಡ್ಡಿಲ್ಲ ಅಂದ್ರೆ ಆತ್ಮಗೌರವ ಬಿಟ್ಟು ಬದುಕಬೇಕಾ? ಆ ಎಂಟು ಮನೆಗಳ ವಟಾರದಲ್ಲಿ ಹದಿನೈದು ವರ್ಷದಿಂದ ಇದ್ದವರು ನಾವೊಬ್ಬರೇ. ಎಲ್ಲ ಮನೆಯ ಬಾಡಿಗೆಗಳೂ ನಮಗಿಂತ ಮೂರು ಪಟ್ಟು ವೃದ್ಧಿಸಿವೆ. ನಾವೂ ಖಾಲಿ ಮಾಡಿದ್ರೆ ಅಷ್ಟಕ್ಕೇ ಬರುವ ಜನರು ಸಿಕ್ಕೇ ಸಿಗ್ತಾರೆ. ನಮಗೆ ಒಂದೇ ಸಲ ಬಾಡಿಗೆ ಜಾಸ್ತಿ ಮಾಡಲೂ ಆಗ್ತಿಲ್ಲ, ಕಡ್ಡಿ ಮುರಿದಹಾಗೆ ಖಾಲಿ ಮಾಡಿ ಅಂತ ಹೇಳಲೂ ಆಗ್ತಿಲ್ಲ ಅವನಿಗೆ. ಅದಕ್ಕಾಗಿ ಏನೇನೋ ಇಲ್ಲಸಲ್ಲದ ವಿಷಯಗಳಿಗೆ ಜಗಳ ತೆಗೀತಿದ್ದಾನೆ. ಅತ್ತಲಾಗಿ ನಾವೇ ಖಾಲಿ ಮಾಡಿ ಎಲ್ಲಾದ್ರೂ ಹಾಳಾಗಿಹೋಗೋಣ ಇವನ ಸಹವಾಸ ಸಾಕಿನ್ನ ಅನ್ನಿಸುತ್ತೆ ಆದ್ರೆ ತಿಂಗಳಿಗೆ ಕನಿಷ್ಠಪಕ್ಷ ಐದು ಸಾವಿರ ನಮ್ಮದಲ್ಲ ಅಂತ ಎತ್ತಿಡಬೇಕು. ಬೋಗ್ಯಕ್ಕೆ ಹೋಗಬೇಕಂದ್ರೆ ಎರಡು ಲಕ್ಷನಾದರೂ ಬೇಕು. ಬರೋದು ಹತ್ತು ಸಾವಿರ ಸಂಬಳ. ಇಂಜಿನೀರಿಂಗ್ ಮಾಡಿ ನಾನು ಕೆಲಸ ಮಾಡ್ತಿರೋ ಕಂಪೆನಿ, ನಾನು ಎಣಿಸುತ್ತಿರುವ ಸಂಬಳ ನೋಡಿದ್ರೆ ನನಗೆ ನಾಚಿಕೆಯಾಗುತ್ತೆ. ನನ್ನ ಗ್ರೂಪ್ ಹುಡುಗಿಯರೂ ಕೂಡ ಕಾರ್ ತೊಗೊಳ್ಳೋ ಯೋಜನೆಯಲ್ಲಿದ್ದಾರೆ, ನಾನು ನೋಡಿದ್ರೆ ಅಕ್ಸೆಸ್ ತೊಗೊಳ್ಳೋಕೂ ದುಡ್ಡು ಸಾಲದೆ ಸಾಲ ಮಾಡಿ ಮೂರು ತಿಂಗಳು ತೀರಿಸೋ ಪರಿಸ್ಥಿತಿ. ನನ್ನ ಪರಿಸ್ಥಿತಿಗೆ ನಾನೇ ಕಾರಣ ಅಂತ ಒಂದೊಂದು ಸಲ ಅನ್ನಿಸಿದ್ರೆ, ನಮ್ಮಪ್ಪ ಅಮ್ಮನೇ ಕಾರಣ ಅಂತ ಒಂದೊಂದ್ಸಲ ಅನ್ಸುತ್ತೆ. ಬುದ್ದಿ ಬಂದಾಗಿನಿಂದ ಅಪ್ಪನ ಜೊತೆ ಪ್ರೆಸ್ಸಿನಲ್ಲಿ ದುಡಿಯೋದೇ ಅಗೋಯ್ತು, ಇಂಜಿನಿಯರಿಂಗ್ ಹೆಂಗೆ ಮುಗಿಸಿದೆನೋ ಅನ್ಸುತ್ತೆ ಇವಾಗ.

ಎರಡು ಲಕ್ಷ ಸಾಲ ಮಾಡಿ ಮನೆ ಬೋಗ್ಯಕ್ಕೆ ಹಾಕಿಕೊಂಡುಬಿಡೋಣ ಅಂದುಕೊಂಡ್ರೆ, ಸ್ವಂತ ಪ್ರೆಸ್ ಶುರುಮಾಡಬೇಕೆಂದಿರುವ ಕನಸು ಮುಂದೂಡಬೇಕಾಗುತ್ತೆ. ಧೈರ್ಯ ಮಾಡಿ ಪ್ರೆಸ್ ಶುರುಮಾಡಿದ್ರೆ ಆಮೇಲೆ ಮನೆ ಮಾಲಿಕ ಇನ್ನೇನಾದರೂ ತಕರಾರು ತೆಗೆದು ಮನೆ ಖಾಲಿ ಮಾಡಿ ಎಂದರೆ ಬೀದಿಗೆ ಬೇಳಬೇಕಾಗುತ್ತೆ. ಪಕ್ಕದಮನೆಯವರ ಹತ್ತಿರ ಈ ವಟಾರದಲ್ಲಿರುವ ಪಾರಿವಾಳಗಳು ಬೇಜ್ಜಾನ್ ಹಾರಾಡ್ತಾ ಇವೆ ರೆಕ್ಕೆ ಕತ್ತರಿಸಬೇಕು ಸಧ್ಯದಲ್ಲೇ ಅಂತ ಪರೋಕ್ಷವಾಗಿ ನಮಗೇ ಹೇಳಿದಹಾಗೆ ಹೇಳ್ತಿದ್ನಂತೆ. ಎಲ್ಲದಕ್ಕೂ ಉತ್ತರ ಕೊಡಬೇಕು ಸರಿಯಾಗಿ ಅಂತ ಕಿಚ್ಚು ಹುಟ್ಟುತ್ತೆ. ನನ್ನ ತಮ್ಮನಾದರೂ ಮೂರು ವರ್ಷದಿಂದ ಬಾಕಿ ಉಳಿದಿರುವ ಡಿಪ್ಲೊಮಾದ ಒಂದೇ ಒಂದು ವಿಷಯ ಪಾಸು ಮಾಡ್ಕೊಳ್ಳೋ ಅಂದ್ರೆ ಕೇಳಲ್ಲಾ, ಒಂದು ಕೆಲ್ಸಾನೂ ಪ್ಲಾನ್ ಮಾಡಿ ಮಾಡಲ್ಲ, ಸುಮ್ಮನೆ ದುಡ್ಡು ಸುರೀತಾನೆ. ಏನಾದ್ರೂ ಹೇಳೋಕೆ ಹೋದ್ರೆ ಲೋ ನಿನ್ನ ಜೀವನ ನೋಡ್ಕೊಳ್ಳೋ ಹೋಗೋ ಅಂತಾನೆ. ದುರಹಂಕಾರಿ. ಸೇರಿದ್ದು ಕಾರ್ ಡ್ರೈವರ್ ಆಗಿ, ಈಗ ಫ್ಯಾಕ್ಟರಿ ಸೂಪರ್ವೈಸಿಂಗ್ ಕೂಡ ಸೇರಿಸಿ ಹನ್ನೆರಡು ಘಂಟೆ ಕೆಲಸ ಸೇರಿ ಐದೂವರೆ ಸಾವಿರ ಸಂಬಳ, ಬೇಕಿತ್ತಾ ಅವನಿಗೆ ಇದು. ಏನಾದರೂ ಹೇಳಿದರೆ ನೀನ್ ಬಿಡಪ್ಪಾ ಇಂಜಿನಿಯರು ನಾವ್ ಏನ್ ಮಾಡೋಣ ಅಂತ ಮಾತು ಬೇರೆ ಕೇಳಬೇಕು. ಸಂಬಳ ಜಾಸ್ತಿ ಮಾಡ್ತಿಲ್ಲಾ ಅಂತ ಅವರ ಬಾಸ್ ಜೊತೆ ಜಗಳ ಆಡಿ ಕೆಲ್ಸ ಬಿಡೋ ಸಂದರ್ಭ ಇದೆ ಅಂತಾನೆ. ತಂಗಿ ಕೆಲ್ಸ ಮಾಡ್ತಿರೋ ಆಟೋಕ್ಯಾಡ್ ಕಂಪನಿಯಲ್ಲಿ ಕೆಲ್ಸ ಈ ನಡುವೆ ಕಡಿಮೆಯಾಗಿರೋದ್ರಿಂದ ಮಾಲೀಕರು ಕೆಲ್ಸ ನಿಲ್ಲಿಸುವ ಯೋಜನೆಯಿದೆಯಂತೆ, ಈ ಹೊಚ್ಚ ಹೊಸದಾಗಿ ಶುರುವಾಗಿರುವ ಕಂಪೆನಿಗೆ ಸೇರಿ, ಏನೂ ಕೆಲ್ಸ ಇರದಿರುವುದು ನೋಡಿದ್ರೆ ಯಾವಾಗ ಇದೂ ಹೋಗುತ್ತೋ ಗೊತ್ತಾಗ್ತಿಲ್ಲ. ಇಂತಹ ಸಮಯದಲ್ಲಿ ಅಪ್ಪ ಪ್ರೆಸ್ ಓನರ್ ಅತ್ರ ಜಗಳ ಮಾಡ್ಕೊಂಡು ಕೆಲ್ಸ ಬಿಟ್ಟು ಮನೆಗೆ ಬಂದಿದ್ದಾರೆ. ಯಾರಿಗೆ ಏನು ಅಂತ ಹೇಳೋದು?

ಅಜ್ಜಿಯ ಮರಣದ ಸಮಯದಲ್ಲಿ ಅರವತ್ತು ಸಾವಿರ ಖರ್ಚು. ಅಜ್ಜಿಯ ಸಾವಿನ ನಷ್ಟ ದುಡ್ಡಿನಿಂದ ಅಳೆಯುವಹಾಗಾಯ್ತಲ್ಲಾ ಅಂತ ಬೇಸರ ಕೆಲವು ಸಲ. ಅಜ್ಜಿ ಸತ್ತ ಘಳಿಗೆ ಕೂಡ ಸರಿಯಿಲ್ಲವಂತೆ, ಅದಕ್ಕೇ ಸೂತಕ ಕಳೆದು ಸತ್ಯನಾರಾಯಣ ಪೂಜೆ ಮಾಡಿಸಿದಾಗ ಬಟ್ಟೆಗೆ ಬೆಂಕಿಹೊತ್ತಿಕೊಂಡಿದ್ದಂತೆ. ಶುದ್ಧ ಅವಿವೇಕ. ಅಜ್ಜಿಯ ತಿಥಿ ಮಾಡ್ತಿದ್ವೋ ನಮ್ಮ ತಿಥಿಯೇ ಮಾಡ್ಕೋತಿದ್ವೋ. ನಮ್ಮ ಜೀವನ ನಾವು ನೋಡ್ಕೊಳ್ಳೋದೇ ಕಷ್ಟ ಇದೆ ಅದರಲ್ಲಿ ಹುಟ್ಟಿದಾರಭ್ಯ ಮುಖ ಮೂತಿ ನೋಡಿರದ ಸಂಬಂಧಿಕರನ್ನೆಲ್ಲಾ ಕರೆಸಿ ಅಜ್ಜಿಯ ಹೆಸರಿನಲ್ಲಿ ತುಂಡು, ಗುಂಡು ಸೇವೆಯಂತೆ. ಯಾರಿಗೆ ಏನು ಹೇಳಿದರೂ ಏನೂ ಉಪಯೋಗ ಇಲ್ಲ. ನಮ್ಮನೆಯಲ್ಲಿ ಎಲ್ಲರಿಗೂ ಅವರಿಗೆ ಬೇಕಾದ ಹಾಗೇ ಅಗಬೇಕು. ಯಾಕೋ ಭವ್ಯ ತುಂಬಾ ನೆನಪಾಗ್ತಿದ್ದಾಳೆ. ಒಮ್ಮೆ ಫೋನ್ ಮಾಡಿ ಸುಮ್ಮನೆ ಧ್ವನಿ ಕೇಳಿದ್ರೆ ಸಾಕು ಅನ್ಸುತ್ತೆ. ಆದ್ರೆ ಅವಳು ಮತ್ತೆ ತಿರಸ್ಕರಿಸಿದರೆ ಮತ್ತಷ್ಟು ಸೋತ ಅನುಭವ. ಅವಳು ಒಳ್ಳೇ ಸ್ನೇಹಿತೆಯಾಗಿ ಆದ್ರೆ ಉಳ್ಕೋತಿದ್ದಳು. ಅವಳ ಸಂಬಂಧ ಕಳ್ಕೊಂಡವನೂ ನಾನೇನೇ. ಆದರೆ ಒಮ್ಮೆ ಪ್ರೀತಿ ಹುಟ್ಟಿದ ಮೇಲೆ ಮತ್ತೆ ಸ್ನೇಹಿತರಾಗಿರೋದು ನನ್ನಿಂದ ಸಾಧ್ಯವಿಲ್ಲದ ಮಾತು. ಅವಳ ಮದುವೆನೇ ಅಗೋಯ್ತೇನೋ.

ಎಲ್ಲೂ ಯಾವುದರಲ್ಲೂ ಗೆಲ್ಲಲಿಲ್ಲ ನಾನು. ಕಾಲೇಜಿನಲ್ಲಿದ್ದಾಗ ಸರಿಯಾಗಿ ಅತ್ತ ಮಜಾನೂ ಮಾಡಲಿಲ್ಲ, ಇತ್ತ ಓದಲೂ ಇಲ್ಲ, ವೀಡು, ಗಾಂಜಾ, ಬಿಎಫ್, ಹುಡುಗಿಯರು, ಟ್ರಿಪ್ಪುಗಳೆಂದು ಸುತ್ತುತ್ತಿದ್ದವರೆಲ್ಲಾ ಇವತ್ತು ವಿಪ್ರೋ, ಟಿಸಿಎಸ್ ಗಳಲ್ಲಿ ದುಡ್ಡೆಣಿಸುತ್ತಿದ್ದಾರೆ. ನನಗೆ ಅತ್ತ ಪ್ರೆಸ್ ಕೆಲಸವೂ ಕೈಗೆ ಹತ್ತಲಿಲ್ಲ ಇತ್ತ ಇಂಜಿನೀರಿಂಗ್ ಕೂಡ ಲಾಭ ಒದಗಿಸಲಿಲ್ಲ. ಈಗ ಕನಿಷ್ಟ ಪಕ್ಷ ನಾಲಕ್ಕು ಲಕ್ಷ ಬೇಕು. ಎಲ್ಲಿಂದ ಹುಟ್ಟಿಸುವುದು. ಯಾರು ಕೊಡ್ತಾರೆ? ಕೊಡೋರಿದ್ರು ಯಾವ ಗ್ಯಾರಂಟಿ ಮೇಲೆ ಕೊಡ್ತಾರೆ? ನಾನೇ ಯಾಕೆ ಹೀಗೆ ತಗುಲಿಹಾಕಿಕೊಳ್ತೀನಿ? ಎಲ್ಲಾ ಕಷ್ಟಗಳೂ ನನಗೇ ಯಾಕೆ ಬರ್ತಾವೆ? ಇವತ್ತು ಮನೆಯಿಂದ ಹೊರಡುವಾಗ ಹೆಲ್ಮೆಟ್ ಹಾಕೊಂಡೇ ಹೊರಡು ಎಂದು ಆರನೇ ಇಂದ್ರಿಯ ಕೂಗಿ ಕೂಗಿ ಯಾತಕ್ಕೆ ಹೇಳ್ತಿತ್ತು. ಅದಕ್ಕೆ ಸರಿಯಾಗಿ ರಸ್ತೆಯಲ್ಲಿ ಬರುವಾಗ ಆ ಕಜ್ಜಿ ನಾಯಿ ನನ್ನ ಗಾಡಿಗೆ ಅಡ್ಡ ಬಂದದ್ದೇ ತಪ್ಪಿಸಿಕೊಂಡು ಬಸ್ಸಿನ ಅಡಿ ಸಿಕ್ಕು ಚಟ್ನಿಯಾಗುವುದನ್ನ ಕಣ್ಣಾರೆ ನೋಡಿದಹಾಗಾಯ್ತು. ಅಸಹ್ಯ, ತಲೆ ತಿರುಗುತ್ತಿತ್ತೋ, ಯಾವಾಗ ವಾಂತಿ ಮಾಡಿಕೊಂಡೆನೋ ಒಂದೂ ಗೊತ್ತಾಗಲಿಲ್ಲ. ರಸ್ತೆಯ ಬದಿಯಲ್ಲಿ ಕೂರಿಸಿ ತಲೆ ಮೇಲೆ ಯಾರೋ ತಣ್ಣೀರು ತಟ್ಟಿದಾಗಲೇ ಎಚ್ಚರಾದದ್ದು. ಗಾಡಿಗೂ ಸಹ ಏನೂ ಆಗಿರಲಿಲ್ಲ. ಹೊಟ್ಟೆಗೆ ಏನೂ ಬಿದ್ದಿರದಿದ್ದುದರಿಂದ ನಿಶ್ಯಕ್ತಿಯಾಗಿರಬಹುದು. ಈ ಆಫೀಸಿನಲ್ಲಿ ಒಬ್ಬನೇ ದೆವ್ವದಂತೆ ಕೆಲಸವಿಲ್ಲದೇ ಕೂರುವುದಂತಹ ಹಿಂಸೆ ಇನ್ನೊಂದಿಲ್ಲ. ಹತ್ತು ಸಾವಿರ ಬಾಡಿಗೆ ಕೊಟ್ಟು ಕೆಲಸಗಳಿಲ್ಲದೇ ನನ್ನನ್ನು ಹೀಗೆ ಕೂರಿಸಿರುವಬದಲು ಹೇಗೂ ಲ್ಯಾಪ್ಟಾಪ್ ಇತ್ತು ಮನೆಯಲ್ಲೇ ಕೆಲಸ ಮಾಡು ಎಂದಿದ್ದರೆ ಇವರ ಗಂಟೇನು ಖರ್ಚಾಗುತ್ತಿತ್ತೋ ಗೊತ್ತಿಲ್ಲ. ನಾನು ಸತ್ತು ಹೋಗಿದ್ದೆನಾ? ಬೆಳಿಗ್ಗಿನಿಂದ ಫೂನು ಕೂಡ ಬಡಿದುಕೊಂಡಿಲ್ಲ. ಯಾರೂ ಆಫೀಸಿಗೂ ಬಂದಿಲ್ಲ. ನಾನು ಆ ನಾಯಿ ಸತ್ತಾಗಲೇ ಸತ್ತಿರಬಹುದೆನಿಸುತ್ತೆ. ಆ ನಾಯಿಯ ಕಳೇಬರದ ಮೇಲೆ ವಾಹನಗಳು ಸಾಗುತ್ತಿರುವಾಗ ಖಾಲಿ ಹೊಟ್ಟೆ ಕೂಡ ಕಲುಕಿದಹಾಗಾಗುತ್ತಿತ್ತು, ಹಾಗಾದರೆ ನಾನು ಬದುಕಿದ್ದೇನೆ. ಇಲ್ಲ ನನಗೆ ಹಸಿವೆಯೇ ಆಗ್ತಿಲ್ಲ, ಉಸಿರಾಡುತ್ತಿರುವುದೂ ಸಹ ಸಂಶಯವಾಗ್ತಿದೆ, ನಾನು ಬದುಕಿಲ್ಲ. ಓಹ್! ಇಲ್ಲ ಈ ವರ್ಷ ಶುರುವಾದಾಗಿನಿಂದ ಎಲ್ಲಾ ಅಪಶಕುನಗಳೇ ಆಗ್ತಿದ್ದಿದ್ದು ಇದಕ್ಕೇ ಇರಬೇಕು. ನಾನು ಇಷ್ಟು ಬೇಗ ಸಾಯುವ ಹಾಗಿಲ್ಲ. ಈ ವರ್ಷದಲ್ಲಿ ನನ್ನ ತಂಗಿಗೆ ಮದುವೆ ಮಾಡಲೇಬೇಕಂತೆ, ಇಲ್ಲವಾದಲ್ಲಿ ಇನ್ನೂ ಐದು ವರ್ಷ ಕಂಕಣಭಾಗ್ಯವಿಲ್ಲವಂತೆ. ನಾವು ಎಷ್ಟೇ ಕಿತ್ತಾಡಿಕೊಂಡರೂ ನಮ್ಮ ಮನೆಯಲ್ಲಿನ ಜೂಲಿ ವಯಸ್ಸಾಗಿ ಸತ್ತಾಗಲೇ ಒಂದು ತಿಂಗಳು ಹಾಸಿಗೆ ಹಿಡಿದಿದ್ದ ತಂಗಿ. ಅಪ್ಪನ ಮೇಲೆ ಅಷ್ಟು ಕೋಪವಿದ್ದರೂ ಅವರು ಮನೆಗೆ ಮರಳುವುದು ಕೊಂಚ ನಿಧಾನವಾದರೂ ತುಡಿಯುತ್ತಿದ್ದ ಅಮ್ಮಿ. ನಾನಾಗಲಿ, ನನ್ನ ತಮ್ಮನಾಗಲೀ ಅವರುಗಳ ಕಣ್ಮುಂದೆಯೇ ಇರಬೇಕೆಂದು ಬಯಸುವ ಎಲ್ಲರೂ. ನಾನಿನ್ನೂ ಒಮ್ಮೆಯಾದರೂ ಮದುವೆಯಾಗಬೇಕಿತ್ತು. ಪ್ರಪಂಚವನ್ನೇ ನೋಡದೆ ನಾನು ಸಾಯಬಾರದಿತ್ತು. ಸತ್ತ ಮೇಲೆ ಎಲ್ಲರೂ ಮೇಲೆ ಹೋಗ್ತಾರಂತೆ ನಾನು ಇಲ್ಲೇ ಇದ್ದೀನಿ. ಅಯ್ಯೋ ನಾನು ಮೇಲೆ ಹೋಗುವ ಮುನ್ನ ಅಮ್ಮನನ್ನ ಒಮ್ಮೆ ತಬ್ಬಿಕೊಳ್ಳಬೇಕು. ಅಪ್ಪನ ಬಳಿ ಕ್ಷಮೆ ಕೇಳಬೇಕೆನಿಸುತ್ತಿದೆ. ಮೊದಲು ಮನೆಗೆ ಹೋಗಬೇಕು.

ಗಾಡಿಯಲ್ಲಿ ಬರುತ್ತಿದ್ದರೂ ನನ್ನನ್ನು ಯಾರೂ ಗಮನಿಸುತ್ತಿಲ್ಲ. ನಾನು ಸತ್ತಿರುವುದು ಖಂಡಿತ. ಬೆಳಗ್ಗೆ ನನ್ನ ಮನಸ್ಸಿಗೆ ಹೊಳೆದದ್ದು ನಿಜ. ನೇರವಾಗಿ ಮನೆಗೆ ಬಂದು ಅಮ್ಮಿಯನ್ನು ತಬ್ಬಿಕೊಂಡು ಚಿಕ್ಕ ಮಗುವಿನಂತೆ ಅತ್ತೆ. ಎಲ್ಲರೂ ಹೆದರಿದರು. ಮೈಬಿಸಿಯಾಗಿರುವುದನ್ನು ಕಂಡು ಮಲಗಿಸಿದರು. ಕಣ್ಣಲ್ಲಿ ಇನ್ನೂ ನೀರು ಬರುತ್ತಲೇ ಇತ್ತು. ಅಪ್ಪ ಮಾತ್ರೆ ತಂದರೆಂದು ಕಾಣುತ್ತೆ. ತಣ್ಣೀರು ಬಟ್ಟೆ ತಲೆಯ ಮೇಲೆ ಹಾಕಿ ಬೆಚ್ಚಗೆ ಹೊದಿಸಿದರು. ಕತ್ತಲು.

ಗಾಢನಿದ್ರೆಯ ನಂತರ ಕತ್ತಲಲ್ಲಿ ಕಣ್ತೆರೆದೆ. ನನ್ನ ಕಥೆ ಮುಗಿದುಹೋಗಿತ್ತೆಂದು ಕಾಣುತ್ತೆ. ಎಲ್ಲಿದ್ದೀನೀಗ ನಾನು? ಪಕ್ಕದಲ್ಲಿ ಆಗತಾನೆ ಅಮ್ಮಿ ನಿದ್ರೆಗೆ ಸರಿದಿದ್ದರೆಂದು ಕಾಣುತ್ತೆ. ಓಹ್! ನಾನು ಮನೆಯಲ್ಲೇ ಇದ್ದೆ. ಬೆಳಗ್ಗೆ ನಾಲಕ್ಕು ಘಂಟೆ. ನಾನು ಸತ್ತಿಲ್ಲ. ನನ್ನ ಕಥೆಗೆ ಇದು ಮುಕ್ತಾಯವಲ್ಲ ಹಾಗಾದರೆ. ಎದ್ದು ನೇರ ಹೊರಗೆ ನಡೆದೆ. ಇನ್ನೂ ಮೈ ಬಿಸಿ ಇತ್ತು. ಬೆಳಗ್ಗಿನ ಚಳಿಯಲ್ಲಿ ಓಡಬೇಕೆನಿಸಿತು. ಚಪ್ಪಲಿ ಮೆಟ್ಟಿದ್ದೇ ಓಡಹತ್ತಿದೆ. ಖಾಲಿ ರಸ್ತೆ, ಮೊದ ಮೊದಲು ಕಾಲು ಇಡಲೂ ಸಹ ಆಗುತ್ತಿರಲಿಲ್ಲ. ಎದುರಿಗೆ ಬೀಸುತ್ತಿದ್ದ ಗಾಳಿಗೆ ಮೈಯೊಡ್ಡಿ ಓಡುವುದೇ ಒಂದು ಮಜಾ. ಮೈಕೈ ಸಡಿಲವಾಗುತ್ತಿದ್ದಂತೆ, ಓಡುವ ಹುರುಪು ಸಿಕ್ಕಿತು. ದಾರಿಗೊತ್ತಿಲ್ಲದೇ ಓಡುತ್ತಲಿದ್ದೆ. ಇನ್ನೂ ವೇಗವಾಗಿ ರಸ್ತೆಯ ತುಂಬಾ ಬೆಳಗ್ಗೆ ಅಷ್ಟು ಹೊತ್ತಿಗೇ ಕೆಲಸ ಶುರುಮಾಡಿದ್ದ ಹಲವಾಗು ಕಷ್ಟ ಜೀವಿಗಳನ್ನು ನೋಡಿದೆ. ಒಂದು ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಸೊಪ್ಪು ಇಳಿಸುತ್ತಿದ್ದಳೊಬ್ಬ ಹೆಂಗಸು. ಶಕ್ತಿಯಿರುವಷ್ಟೂ ಓಡಿ ಬೆವರಿನಿಂದ ಸ್ನಾನ ಮಾಡಿಕೊಂಡು ಬೆಳಕಾದ ಮೇಲೆ ಮನೆಗೆ ಮರಳಿದೆ. ಎಲ್ಲರೂ ಗಾಬರಿಗೊಂಡಿದ್ದರು. ನಗುಮುಖದಲ್ಲಿದ್ದವನನ್ನು ಕಂಡು ಚೇತರಿಸಿಕೊಂಡರು. ಹಿಂದಿನ ರಾತ್ರಿ ನಾನು ನಿದ್ರೆಯಲ್ಲಿ ಮಾಡಿದ್ದ ಏನೇನೋ ಅವಾಂತರಗಳನ್ನ ಹೇಳುತ್ತಿದ್ದರೆ ನನಗೆ ನಾಚಿಕೆಯಾಗುತ್ತಿತ್ತು. ಸ್ನಾನ ಮಾಡುವಾಗ ನಿರ್ಧರಿಸಿದೆ. ಯಾವುದೇ ಕಷ್ಟಕ್ಕೂ ಹೆದರಿ ಅಲ್ಲ ಎದುರಿಸಿ ಸಾಯಬೇಕು ಅಂತ. ಯಾವುದೇ ಸಮಯದಲ್ಲೂ ಕೈ ಕಟ್ಟುವುದನ್ನ ನಿಲ್ಲಿಸಿದೆ. ಮುಕ್ತವಾಗಿ ಕೈಗಳನ್ನು ತೆರೆದಿರುತ್ತಿದ್ದೆ. ಬಹಳ ಹಿಂದೆ ಮಾಡುತ್ತಿದ್ದ ಚಿತ್ರಕಲೆಯನ್ನ ಮತ್ತೆ ಶುರುಮಾಡಿದೆ. ಮನೆಯ ಮತ್ತು ಪ್ರಿಂಟಿಂಗ್ ಪ್ರೆಸ್ ಮಾಲೀಕರನ್ನು ಸುಮ್ಮ ಸುಮ್ಮನೆ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಲು ಶುರುಮಾಡಿದೆ. ಎರಡು ಕಲ್ಲುಗಳನ್ನು ಕೈಯಲ್ಲಿ ಹಿಡಿದು ಸುಮ್ಮನೆ ಕವಡೆಗಳಂತೆ ಆಡಿಸಲು ಶುರುಮಾಡಿದೆ. ಪ್ರತಿ ದಿನ ಬೆಳಗ್ಗೆ ಎದ್ದು ಓಡುತ್ತಿದ್ದೆ ಬಂದು ಸ್ನಾನಾದಿ ಮುಗಿಸಿ ದೇವರ ಫೋಟೋದ ಮೇಲೆ ಅಂಟಿಸಿದ್ದ ತಲುಪಬೇಕಿರುವ ಗುರಿಯ ಪಟ್ಟಿಯನ್ನು ನೋಡಿ ಅದನ್ನೇ ಒಮ್ಮೆ ಹೇಳಿಕೊಂಡು, ತಿಂಡಿ ತಿಂದು ಹೊರಡುತ್ತಿದ್ದೆ, ಸುಮ್ಮನೆ ಮನಸೋ ಇಚ್ಛೆ ಹಾಡಿಹೇಳಿಕೊಳ್ಳುತ್ತಿದ್ದೆ. ಅವಕಾಶ ಸಿಕ್ಕಾಗಲೆಲ್ಲ ನಗಲು ಶುರುಮಾಡಿದೆ. ದಿನಪೂರ್ತಿ ಏನೋ ಒಂದು ಮಾಡಿ ವ್ಯಯಿಸುತ್ತಲಿದ್ದೆ. ಸುಮ್ಮನೆ ನಾನೇ ಮೈಸೂರಿನಲ್ಲಿದ್ದ ನನ್ನ ಸಹಪಾಠಿಗಳಿಗೆ ತಲೆ ತಿನ್ನುತ್ತಿದೆ. ಮನೆಗೆ ಮರಳಿ ಚಿತ್ರಕಲೆ, ಮಾತುಕತೆ, ಹೊಸ ಪ್ರಿಂಟಿಂಗ್ ಪ್ರೆಸ್ ತೆರೆಯುವ ಪ್ಲಾನ್ ಬಗ್ಗೆ ಚರ್ಚೆ ಮಾಡುತ್ತಿದ್ದೆ. ನಾನೇನು ಒಬ್ಬಂಟಿಯಾಗಿರಲಿಲ್ಲ. ಎಲ್ಲರ ಸಹಕಾರವಿತ್ತು. ಸಮಸ್ಯೆಗಳು ಹಾಗೇ ಇತ್ತು. ನಾನು ಸಮಸ್ಯೆಯನ್ನ ನೋಡುವ ರೀತಿ ಬದಲಾಗಿತ್ತು. ಅದ್ಯಾಕೋ ಆಕಾಶ ಕಳಚಿಬಿದ್ದಂತೆನಿಸುತ್ತಿರಲಿಲ್ಲ. ಸಮಸ್ಯೆಯಿಂದ ಹೊರಗೆ ನಿಂತು ಯೋಚಿಸುತ್ತಿದ್ದೆ. ದಾರಿಗಳಿದ್ದವು. ನೋಡುವ ಕಣ್ಣುಗಳು ಬೇಕಿತ್ತಷ್ಟೇ. 


2 comments:

  1. ಎರಡು ಸಾಲಿನಲ್ಲಿ ಹೇಳಬೇಕಾದ ಸಂದೇಶಕ್ಕೆ ಚೆನ್ನಾಗಿ ಬಣ್ಣ ಬಳಿದಿದ್ದೀರಿ. ತುಂಬಾ ಇಷ್ಟವಾಯಿತು ನಿರೂಪಣೆ.

    ReplyDelete
    Replies
    1. ಹಹಹ.. ಏನ್ ಮಾಡೋಣ ಗೆಳೆಯ ಮೆಸೇಜು ಕೊಡುವುದಕ್ಕಿಂತ ಒಬ್ಬ ಮನುಷ್ಯನ ಚಿತ್ರಣ ಕೊಟ್ಟು ಬಿಟ್ಟರೆ ಮೆಸೇಜು ಕೂಡ ಜೊತೆಯಲ್ಲೇ ಹೋಗುತ್ತದೆ :-) ಹಾಗಾಗಿ ಎರಡು ವಾಕ್ಯವನ್ನ ವಿಸ್ತರಿಸಿ ಬರೆದಿದ್ದೇನೆ. ಧನ್ಯವಾದಗಳು ಓದಿದ್ದಕ್ಕೆ ಮತ್ತು ವಿಚಾರ ಮಾಡಿದ್ದಕ್ಕೆ.. :-)

      Delete