ಓದಿ ಓಡಿದವರು!

Friday, 30 March 2012

ಬಡ-ಪಾಯಿ-ಖಾನೆ!


       ಈ ಮನೆಯಲ್ಲಿ ಬೆಳಗ್ಗೆ ೫.೩೦ ರಿಂದ ೧೦ ಘಂಟೆಯ ವರೆಗೆ ನಿರಂತರವಾಗಿ ಆಕ್ರಮಿತವಾಗಿರುವ ಏಕೈಕ ಕೊಠಡಿ ಇದೊಂದೇ. ಒಳಬಂದವರು ಮುಕ್ಕಾಲು ಘಂಟೆಯ ಕಡಿಮೆ ಹೊರಗೆ ಹೋದದ್ದು ಇತಿಹಾಸದಲ್ಲೇ ಇಲ್ಲ. ಮನೆಯೊಡತಿ ಇಡೀ ದಿನದ ಅಡುಗೆ ಪಟ್ಟಿ ನಿರ್ಧರಿಸುತ್ತಾ ನೆನಪಿಗೆ ಬಂದ ಯಾವ ಯಾವ ಅಡುಗೆ ಸಾಮಾಗ್ರಿಗಳು ಖಾಲಿಯಾಗಿವೆ, ಯಾವ ತರಕಾರಿ ತರುವುದು, ತಿಂಗಳ ಖರ್ಚುವೆಚ್ಚಗಳು ಎಷ್ಟಾಗಿವೆ, ಯಾವ ಕಡೆಯಿಂದ ಉಳಿಸಬಹುದು ಎಂದೆಲ್ಲಾ ಲೆಕ್ಕಾಚಾರ ಹಾಕುವುದು ಇಲ್ಲಿಂದಲೇ. ನಂತರ ಒಂದು ಕೈಯಲ್ಲಿ ಸಿಗರೇಟ್ ಪ್ಯಾಕೆಟ್ಟು, ಇನ್ನೊಂದು ಕೈಯಲ್ಲಿ ದಿನಪತ್ರಿಕೆ ಹಿಡಿದು ಒಳಗೆ ಬಂದರೆ ಕಾಲೇಜಿಗೆ ತಡವಾಗುತ್ತಿದೆಯೆಂದು ಹೊರಗೆ ಮಗ ಬಾಗಿಲನ್ನು ಅಪ್ಪನ ಖಾಲಿ ತಲೆಯನ್ನು ನೆನೆಸಿಕೊಂಡು ಜಡಿದಾಗಲೇ ಇಹಲೋಕಕ್ಕೆ ಮರಳಿ ನಿಧಾನವಾಗಿ ಮುಂದಿನವರಿಗೆ ದಾರಿ ಮಾಡಿಕೂಡುವುದು. ಹೊರಗೆ ತಡವಾಯ್ತೆಂದು ಬಾಯಿ ಬಾಯಿ ಬಡಿದುಕೊಂಡರೂ ಒಳಗೆ ಬಂದಾಕ್ಷಣ ಹೊರಗಿನ ಸಮಸ್ತ ಪ್ರಪಂಚದ ಪರಿವೆಯೇ ಇಲ್ಲದೆ ಆರಾಮವಾಗಿ ಒಂದು ತರಗತಿಯ ಅವಧಿಯನ್ನು ಕಳೆಯಲು ಹಿಂದೆ ಹೋಗಿದ್ದ ಕಾಲೇಜ್ ಟ್ರಿಪ್, ಮುಂದೆ ಬರಲಿರುವ ಬಹುನಿರೀಕ್ಷಿತ ಸಿನಿಮಾ ಹಾಡು ಗುನುಗುತ್ತಾ, ರಜನಿಕಾಂತ್ ಹೇರ್‍ಸ್ಟೈಲು, ಅಮೀರ್ ಖಾನ್ ಸಿಕ್ಸ್ ಪ್ಯಾಕು, ಇಮ್ರಾನ್ ಹಶ್ಮಿ ಹೊಸ ಲಿಪ್ ಲಾಕು, ತನ್ನ ಸ್ನೇಹಿತ ರಾಕೇಶನ ಹಲವು ಸ್ನೇಹಿತೆಯರು, ಎಲ್ಲಾ ಹಾಗೇ ತನ್ನ ಶುಕ್ಲಪಟಲದ ಪರದೆಯ ಮೇಲೆ ಹಾದು ಹೋಗುತ್ತಿರುವಾಗಲೇ ಮೂಲೋಕದಿಂದಾಚೆಯಿದ್ದರೂ ಕಾಲೇಜಿನ ಘಂಟೆ ತನ್ನ ಕಿವಿಗೆ ಬಿದ್ದು ಜ್ಞಾನೋದಯವಾಗಿ ಸರಸರನೆ ಹೊರಗೋಡುವನು. ಮಾಡಿರದ ಹೋಂವರ್ಕು, ಚಿತ್ರವಿಚಿತ್ರ ಶಿಕ್ಷೆ ವಿಧಿಸುವ ಗಣಿತದ ಉಪಾಧ್ಯಾಯರು, ತನ್ನ ಸಮಸ್ಯೆಯೇ ಸಾಕಾಗಿರುವಾಗ ದಿನಕ್ಕೊಂದರಂತೆ ಬರುವ ಹುಡುಗರ ಪ್ರೊಪೋಸಲ್ ಗಳು, ಈ ಹತ್ತನೆಯ ತರಗತಿ ಯಾವಾಗ ಮುಗಿಯುತ್ತೋ ಎಂದು ತಲೆಯ ಮೆಲೆ ಕೈ ಹೊತ್ತು ಅಲ್ಲೇ ಒಂದು ನಿದ್ರೆ ಮುಗಿಸಿ ಮೊಮ್ಮಗಳು ಹೊರಗೆ ಬರುವುದನ್ನೆ ಕಾಯುತ್ತಿದ್ದ ಕೊನೆಯ ಸದಸ್ಯೆ ಅಟ್ಟೆ ಕಲಿನ, ಹರಿದ ಚಪ್ಪಲಿಯ ನಾಲಗೆಯ ಅಜ್ಜಿ ಬೇಕಂತಲೇ ನಿಧಾನಿಸಬೇಕೆಂಬ ಉದ್ದೇಶವಿರದಿದ್ದರೂ ಆ ಸುಕ್ಕು ದೇಹವನ್ನು ಆ ಪಾಶ್ಚಾತ್ಯ ಕಮೋಡಿನ ಮೇಲೆ ಜೋಡಿಸಿ ಮತ್ತೆ ನಿಧಾನಗತಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ದೇಹವನ್ನು ಒಂದೊಂದೇ ಹೆಜ್ಜೆ ಯಾವುದೇ ಊನಗಳಿಲ್ಲದಂತೆ ಅಧಾರಸಹಿತ ಮುನ್ನಡೆದು ಬಾಗಿಲು ತೆರೆಯುವಷ್ಟರಲ್ಲಿ ಮುಕ್ಕಾಲು ಘಂಟೆಯ ಮಿತಿ ಪೂರ್ಣಗೊಂಡಿರುತ್ತದೆ. ಇದೇ ಪ್ರತಿ ಬೆಳಗ್ಗೆ ಕಂಡು ಬರುವ ಸಾಮಾನ್ಯ ದೃಶ್ಯ. ಇದರಲ್ಲಿ ಹಲವು ವರ್ಷಗಳಿಂದ ಯಾವುದೇ ರೀತಿಯ ಮಾರ್ಪಾಟುಗಳು ಕಂಡುಬಂದಿಲ್ಲ, ಪರಿವರ್ತನೆಗೆ ಯಾವುದೇ ರೀತಿಯ ಅಗತ್ಯವೂ ಸಹ ಇಲ್ಲಿಲ್ಲ. ಇಂತಿರ್ಪ ಈ ಮನೆಯ ಪಾಯಿಖಾನೆ ಇನ್ನೂ ಹಲವು ವರ್ಣರಂಜಿತ ಕಾರಣಗಳಿಗೆ ಬಳಕೆಯಾಗುತ್ತಿರುವುದು ಹುಬ್ಬೇರಿಸುವ ಸಂಗತಿಯೇ ಹೌದು!

ರಾತ್ರಿ ಎಷ್ಟು ಹೊತ್ತೆಂದರೆ ಅಷ್ಟು ಹೊತ್ತಿನಲ್ಲಿ, ಕಾಲೇಜು ರಜೆ ಇದ್ದಾಗ ಹೊರಗೆಲ್ಲೂ ಹೋಗದೇ ಇದ್ದರೆ ಆಗಾಗ ಪದೇ ಪದೇ ಹೋಗಿ ಹಾಜರಿ ಹಾಕಿ ಬರುತ್ತಿದ್ದ ಮಗನನ್ನು ತಂದೆ ತಾಯಿಗಳಿಬ್ಬರೂ ಗಮನಿಸುತ್ತಿದ್ದರು. ಹೊಟ್ಟೆ ಸರಿ ಇಲ್ವೇನೋ ಎಂದರೆ ಏನಿಲ್ಲ ಸರಿ ಇದೆ ಯಾಕೆ? ಎಂದು ಅವರನ್ನೇ ಮರುಪ್ರಶ್ನಿಸುತ್ತಿದ್ದನು. ಒಳಗೆ ಮೂಲೆ ಹಿಡಿದಿದ್ದ ಸುಕ್ಕು ದೇಹದ ಅತ್ತೆ ಸಿಕ್ಕಿದ್ದೇ ಅವಕಾಶವೆಂಬಂತೆ ಸೊಸೆ ಕೊಡುವ ಮೊಸರಲ್ಲೂ ಕಲ್ಲು ಹುಡುಕುವ ಬುದ್ದಿಯನ್ನು ಪ್ರದರ್ಶಿಸುತ್ತಾ ಬೆಳಗ್ಗೆ ಮಾಡಿದ್ದ ಚಟ್ನಿಯಲ್ಲಿ ಹಸಿಮೆಣಸು ಹೆಚ್ಚಾಯ್ತೆಂದೋ, ಮಧ್ಯಾಹ್ನದ ಸಾರಿಗೆ ಹುಳಿ ಹೆಚ್ಚಾಯ್ತೆಂದೋ, ಅನ್ನ ಸರಿಯಾಗಿ ಬೆಂದಿರಲಿಲ್ಲವೆಂದೋ ತನಗೂ ಹೊಟ್ಟೆ ಗುಳುಗುಳು ಎನ್ನುತ್ತಿದೆಯೆಂದು ಶ್ರಮವಹಿಸಿ ಎದ್ದುಬಂದು ಸುಖಾ ಸುಮ್ಮನೆ ಹಾಜರಿಹಾಕಿ ಬರುವುದು. ಪ್ರತಿ ಸಂಜೆ ಶಾಲೆಯಿಂದ ಮರಳಿ ಬಟ್ಟೆ ಬದಲಿಸಿ ನೇರ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡು ಅಂದು ಬಂದ ಪ್ರೇಮಪತ್ರವನ್ನ, ಹಿಡಿಸಿದ ವಾಕ್ಯವನ್ನ ಎರಡು ಮೂರು ಬಾರಿ ಓದಿ ಅಲ್ಲೇ ಫ್ಲಶ್ ಮಾಡಿ ಹಿಂದಿರುಗುತ್ತಿದ್ದವಳಿಗೆ ತನ್ನ ಅಣ್ಣನೂ ಯಾವುದಾದರೂ ಪ್ರೇಮ ಪತ್ರ ಓದಲು ಹೋಗಿ ಕೂರುವನೇನೋ ಎಂದು ಅನುಮಾನ ಬಂದರೂ ನೇರವಾಗಿ ಕೇಳಲು ಸಾಧ್ಯವಿರಲಿಲ್ಲ. ಅದೂ ಅಲ್ಲದೇ ಅಣ್ಣ ಕಂಪ್ಯೂಟರ್ ಈ ಮೇಲ್, ಫೇಸ್ಬುಕ್ ಎಲ್ಲಾ ಇರುವಾಗ ಇನ್ನೂ ಪತ್ರ ವ್ಯವಹಾರ ಇಟ್ಟುಕೊಂಡಿರುವುದು ಸತ್ಯಕ್ಕೆ ದೂರ ಎಂದು ತನಗೆ ತಾನೇ ಸಮಜಾಯಿಷಿ ಹೇಳಿಕೊಂಡು ಸುಮ್ಮನಾಗುವಳು. ಹೀಗಿರುವಾಗಲೇ ಒಂದು ಅಮೃತ ಘಳಿಗೆಯಂದು ಮಗ ಹಾಜರಿ ಹಾಕಿ ಬಂದು ಸ್ವಲ್ಪ ಹೊತ್ತಿಗೆ ರಾತ್ರಿ ಹೊಟ್ಟೆ ಬಿರಿಯುವಹಾಗೆ ತಿಂದು ನಿದ್ರಿಸಲಾಗದೆ ಅನ್ಲೋಡ್ ಮಾಡಲು ಹೋದ ಪಿತಾಮಹರು ತಮ್ಮ ಯಾವ ಪೊಲೀಸ್ ನಾಯಿಗೂ ಸೆಡ್ಡೊಡೆಯಬಲ್ಲ ನಾಸಿಕವನ್ನು ಬಳಸಿ ಮಗನ ದುಶ್ಕೃತ್ಯವನ್ನು ಪತ್ತೆ ಹಚ್ಚಿ ಮಲಗಿದ್ದ ಸಮಸ್ತ ಚರಾಚರಗಳು ಎಚ್ಚರಗೊಳ್ಳುವಂತೆ ಅಲ್ಲೇ ನಿಂತು ತುಂಬಿದ್ದ ಹೊಟ್ಟೆಯನ್ನು ಹಿಡಿದು ಕೂಗು ಹಾಕಲು, ಎಲ್ಲ ಎದ್ದು ಬಂದು ಪಾಯಿಖಾನೆಯನ್ನು ಬೆರಗುಗಣ್ಣಿನಿಂದ ನೋಡುತ್ತಿರಲು, ಬೆಕ್ಕಿನ ಮಾದರಿಯಲ್ಲಿ ನಡೆದುಬಂದ ಮಗನ ಜುಟ್ಟು ಹಿಡಿದು ಒಳಗೆ ಎಳೆದುಕೊಂಡರು. ಎಣ್ಣೆ ಹೊಡೆಯೋದನ್ನ ಬೇರೆ ಕಲಿತಿದ್ದೀಯೇನೋ, ಇದಕ್ಕೇನಾ ನಿನ್ನನ್ನ ನಾವು ಕಾಲೇಜಿಗೆ ಕಳಿಸಿದ್ದು, ಬೆಕ್ಕು ಕಣ್ಮುಚ್ಕೊಂಡು ರಮ್ ಕುಡಿದ್ರೆ ನನಿಗೆ ಗೊತ್ತಾಗಲ್ಲ ಅಂದುಕೊಂಡಿದ್ದೀಯೇನೋ. ಇನ್ನೂ ಏನೇನ್ ಕಲಿತಿದ್ದೀಯ ಹೇಳು ಬಡ್ಡೀ ಮಗನೆ ಹೇಳೋ ಎಂದು ಕಿವಿ ಹಿಂಡುತ್ತಿರಲು, ಅಜ್ಜಿ ಲಬೋ ಲಬೋ ಬಾಯಿ ಬಡಿದುಕೊಂಡಿದ್ದು, ಎಲ್ಲಾ ತನ್ನ ಸೊಸೆ ಕೊಟ್ಟಿರುವ ಸದರ ಎಂದು ಒದರಿದ್ದು ತಡವಾಗಲಿಲ್ಲ. ರಾತ್ರಿ ಇಷ್ಟು ಹೊತ್ತಾಗಿದೆ ಬೆಳಿಗ್ಗೆ ವಿಚಾರಿಸೋಣ ಸುಮ್ಮನಿರಿ ಅಕ್ಕ ಪಕ್ಕದವರಿಗೆಲ್ಲಾ ಕೇಳಿಸುತ್ತೆ ಮೊದಲೆ ನಿಮ್ಮ ಗಂಟಲು ಇಷ್ಟು ದೊಡ್ಡದಾಗಿದೆ ಎಂದು ರಂಪ ರಮ್ಮಾಯಣ ತಡೆಯಲು ತಾಯಿ ಪ್ರಯತ್ನಿಸಿದರೂ ಏನೂ ಫಲಕಾರಿಯಾಗದೆ ಮಗನಿಗೆ ಪಾಯಿಖಾನೆಯಲ್ಲೇ ಎರಡು ಮೂರು ಲಾತಗಳು ಬಿದ್ದೇ ಬಿದ್ದವು. ಆಮೇಲದೇನು ಎಮರ್ಜನ್ಸಿ ಡಿಕ್ಲೇರ್ ಆಯ್ತೋ ಅಥವಾ ಶಿಕ್ಷೆ ಸಾಕೆನಿಸಿತೋ ಗೂತ್ತಿಲ್ಲ ಒಟ್ಟಿನಲ್ಲಿ ಅಂದಿನ ಕಿರಿಕ್ಷೇತ್ರ ಅಲ್ಲಿಗೆ ಮುಕ್ತಾಯವಾಗಿ ಸೂತ್ರಧಾರಿಯೊಬ್ಬನನ್ನು ಬಿಟ್ಟು ಎಲ್ಲರೂ ತಮ್ಮ ತಮ್ಮ ಕೋಣೆಗಳಲ್ಲಿ ಮಾತುಕತೆಗಳಿಲ್ಲದೇ ಹೋಗಿ ಗುಬರಾಕಿಕೊಂಡರು. ತನ್ನ ಪತ್ರಗಳು ಅಕಸ್ಮಾತ್ ಸಿಕ್ಕಿಬಿದ್ದರೆ ತನಗೂ ಇದೇ ಗತಿ, ಇನ್ನು ಮುಂದೆ ಎಚ್ಚರವಹಿಸುವುದೆಂದು ಯೋಚಿಸದೇ ಇರಲಿಲ್ಲ ಆ ಮನೆಯ ಕಿರಿಯ ಸದಸ್ಯೆ.

ಅತ್ತೆ ಅಮೇರಿಕಾಕ್ಕೆ ಹೋಗಿದ್ದಾಗ ಅತ್ತೆಯನ್ನು ಕೊಂಚ ದಿನ ಊರಿನ ತಮ್ಮನ ಮನೆಯಲ್ಲಿ ಸ್ವಲ್ಪ ದಿನ ಏಕೆ ಬಿಡಬಾರದು, ಯಾವಾಗಲೂ ನಾವೇ ನೋಡಿಕೊಳ್ಳಬೇಕೆಂದರೆ ಹೇಗೆ, ಎಂದು ಗಂಡನ ಕಿವಿಯಲ್ಲಿ ಗುಸುಗುಸನೆ ಹೇಳಿದ್ದರೂ ಸಾಮಾನ್ಯ ಪಕ್ಕದಲ್ಲಿ ಕೂತು ಮಾತನಾಡಿದರೂ ಕೇಳದಿರುವ ಕಿವಿಗೆ ಅಮೆರಿಕಾದಲ್ಲಿರುವಾಗಲೂ ಕೇಳಿದ್ದು ವಿಪರ್ಯಾಸವೇ ಸರಿ. ಅಲ್ಲಿಂದಲೇ ಸೊಸೆಗೊಂದಿಷ್ಟು ಹಿಡಿ ಹಿಡಿ ಶಾಪ ಹಾಕಿ ಸುಸಮಯಕ್ಕೆ ಕಾದಿದ್ದು ಒಮ್ಮೆ ಸೊಸೆ ಲಂಡನ್ ಗೆ ಹೋಗಿದ್ದಾಗ ಮಗನ ಬಳಿ ಹೋಗಿ ಸೊಸೆ ತನ್ನನ್ನು ಬಾಯಿಗೆ ಬಂದ ಹಾಗೆ ಬಯ್ಯುವಳೆಂದು, ಎಲ್ಲರೂ ಮನೆಯಲ್ಲಿದ್ದಾಗ ಒಂದು ರೀತಿ, ಮನೆಯಲ್ಲಿ ತಾವಿಬ್ಬರೇ ಇದ್ದಾಗ ಒಂದು ರೀತಿ ನಡೆದುಕೊಳ್ಳುವಳೆಂದು ಮಗನ ಹಿತ್ತಾಳೆ ಕಿವಿಗೆ ಉಸುರುತ್ತಿದ್ದುದು ಒಳಗಿದ್ದ ತನ್ನ ಬಂಗಾರದ ಓಲೆಯಿರುವ ಕಿವಿಗೆ ಬಿದ್ದು ಅಲ್ಲಿ ಕುಳಿತೇ ಅತ್ತು ಎಷ್ಟು ಮಾಡಿ ಹಾಕಿದರೂ ಈ ಮುದುಕಿ ತನ್ನ ಮೇಲೆ ಈ ರೀತಿಯ ಗೂಬೆ ಕೂರಿಸುವುದಲ್ಲ ಎಂದು ಮಮ್ಮಲನೆ ಮರುಗುವಳು. ಮಲಗುವ ಕೊಠಡಿಗೆ ಹೋಗುತ್ತಾ ಲಂಡನ್ನಿಂದಲೇ ಸುರ್ ಸುರನೆ ಮೂಗೆಳೆದುಕೊಳ್ಳುವ ಶಬ್ಧ ಕೇಳಿದ್ದೇ ಹೆಂಡತಿ ಅಳುತ್ತಿರುವಳೆಂದ್ ಅರಿತು. ರಾತ್ರಿ ಮಲಗಲು ಬಂದ ಹೆಂಡತಿಗೆ ವಯಸ್ಸಾದವರು ಏನೋ ಹೇಳ್ತಾರೆ, ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಮಾರಾಯ್ತಿ. ಬಾಯಿಗೆ ಬಾಯಿ ಕೊಡೋಕೋಗ್ಬೇಡ ಎಂದು ರಮಿಸುನು. ಆದರೆ ವಿಷಯ ಅಷ್ಟಕ್ಕೇ ಮುಗಿದರೆ ಅತ್ತೆ ಸೊಸೆಯರಿದ್ದ ಮನೆಯಲ್ಲಿ ಮೆಗಾ ಸೀರಿಯಲ್ ಗಳಿಗೆ ಟಿ ಆರ್ ಪಿ ಹೇಗೆ ಸಿಕ್ಕೀತು!

ಯಾವಾಗಲೂ ಏನಾದರೂ ಹೇಳಿ ಮನ ನೋಯಿಸುತ್ತಿದ್ದ ಅತ್ತೆಗೆ ತಾನೇಕೆ ಸೇವೆ ಮಾಡಬೇಕು, ಬುದ್ದಿ ಕಲಿಸಬೇಕೆಂದು ಸೊಸೆ ಅತ್ತೆಗೆ ಅನ್ನ ಗಟ್ಟಿಯಾದರೆ ಅಜೀರ್ಣವಾಗುತ್ತದೆಂದು ಗೊತ್ತಿದ್ದರೂ ಅನ್ನಕ್ಕೆ ನೀರು ಕಡಿಮೆ ಹಾಕಿ ಅತ್ತೆಯ ಜೀರ್ಣಾಂಗ ವ್ಯವಸ್ಥೆಯನ್ನು ಕಲುಕಿ ಪದೇ ಪದೇ ಅಮೆರಿಕಾಕ್ಕೆ ಹೋಗುವಹಾಗೆ ಮಾಡಿ ಸೇಡು ತೀರಿಸಿಕೊಳ್ಳುವಳು. ಅತ್ತೆ ತನ್ನ ವಯಸ್ಸಿಗನುಸಾರವಾಗಿ ಯುಕ್ತಿ ಪ್ರದರ್ಶಿಸುತ್ತಾ ಸೊಸೆಯೇ ತನ್ನ ಸೇವೆ ಮಾಡುವಂತೆ ಪ್ರತಿ ಸಾರಿ ಹೋಗುವುದಕ್ಕೂ, ಮತ್ತೆ ತಂದು ಮಲಗಿಸುವುದಕ್ಕೂ ಸೊಸೆ ಓಡಾಡಿ ಸುಸ್ತಾಗುವಂತೆ ಮಾಡಿ ಅನ್ನಾಹಾರ ತನಗೆ ಬೇಕಾದಂತೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವುದು.

ಇತ್ತ ಮಗ ಅಪ್ಪನ ಯಾವುದಾದರೂ ಹುಳುಕು ಸಿಕ್ಕರೆ ಹಿಡಿದು ಅಮ್ಮನ ಬಳಿ ಹೇಳಿ ಸೇಡು ತೀರಿಸಿಕೊಳ್ಳಲು ಕಾಯುತ್ತಿರಲು, ಅಣ್ಣನನ್ನು ಮತ್ತೆಂದಾದರೂ ಸಿಕ್ಕಿಸಿ ಅವನ ಕೊಬ್ಬಡಗಿಸಬೇಕೆಂದು ತಂಗಿ ಯೋಚಿಸುತ್ತಿರಲು. ಅತ್ತ ಅತ್ತೆಯಿಂದ ಸೋತ ಸೊಸೆ ಮತ್ತೆ ಅತ್ತೆಯ ಮೂಗು ಮುರಿಯಲು ಹೂಂಚು ಹಾಕುತ್ತಿರಲು, ಸೊಸೆಗೆ ಸರಿಯಾಗಿ ಬುದ್ದಿಕಲಿಸಲು ಸುಕ್ಕು ದೇಹ ಯೋಜಿಸುತ್ತಿರಲು ಮಾಮೂಲಿನಂತೆ ವೃತ್ತಪತ್ರಿಕೆ ಮತ್ತು ಸಿಗರೇಟು ಹಿಡಿದು ಹೋದ ವ್ಯಕ್ತಿ ಒಂದು ಘಂಟೆಯಾದರೂ ಹೊರಬರದಿದ್ದುದನ್ನು ಕಂಡು ಮಗ ಬಾಗಿಲು ಬಡಿಯಲು ಒಳಗಿನಿಂದ ಸದ್ದೇ ಇಲ್ಲ. ಮಗನ ಗಾಬರಿ ಕಂಡು ತಾಯಿ, ಸೊಸೆಯ ತರಾತುರಿ ಕಂಡು ಅತ್ತೆ, ಎಲ್ಲರ ಅರಚಾಟ ಕಂಡು ಮಗಳು ಎಲ್ಲರೂ ಬಂದು ಬಾಗಿಲು ಬಡಿಯುತ್ತಾ ಒಳಗಿರುವ ಪುಣ್ಯಾತ್ಮನನ್ನು ಅಪ್ಪ, ರೀ, ಮಗನೇ ಎಂದು ಎಷ್ಟು ವಿಧವಿಧವಾಗಿ ಕರೆದರೂ ಒಳಗಿನಿಂದ ಸದ್ದೇ ಬಾರದ್ದನ್ನು ಕಂಡು ಎಲ್ಲರೂ ದಿಗ್ಭ್ರಾಂತರಾಗಿ, ಬಾಗಿಲು ಒಡೆದು ಪಾಯಿಖಾನೆ ಪ್ರವೇಶಿಸಲು, ಬೆರಳ ಸಂದಿಯಲ್ಲಿ ಸಿಗರೇಟ್ ಹಾಗೇ ಹಿಡಿದು ಬಾಯಿ ಕಳೆದು ಕಣ್ಣುಗಳು ತೆರೆದು ಪಂಚೆಯಿಲ್ಲದೇ ಹಾಗೇ ನೆಲಕ್ಕುರುಳಿರುವ ದೇಹ ಕಂಡು ಮಹಿಳೆಯರ ಹೃದಯವೂ ನಿಂತುಹೋಗುವಂತಾಗಿ ಹಣೆ, ಎದೆ ಬಡಿದುಕೊಳ್ಳುತ್ತಾ ಚೀರುವರು. ಮಗ ಕೊಂಚ ಸಮಯಪ್ರಜ್ಞೆ ತೋರಿ ಅಪ್ಪನನ್ನು ಹೊರಗೆಳೆದು ತಂದು ಮೈಕೈ ಉಜ್ಜಿ, ಎದೆ ಒತ್ತಿ, ಕೃತಕ ಉಸಿರು ಕೊಟ್ಟು ಎದೆಯ ಭಾಗವನ್ನು ಒತ್ತುತ್ತಿರುವಂತೆ ಹೇಳಿ ಅಕ್ಕಪಕ್ಕದವರ ಸಹಾಯ ಪಡೆದು ಧಿಡೀರನೆ ಆಸ್ಪತ್ರೆಗೆ ಕರೆದೊಯ್ಯಲು ಚಿಕಿತ್ಸೆ ಫಲಕಾರಿಯಾಗಿ ಸಣ್ಣ ಹೃದಯಾಘಾತವಾಗಿತ್ತೆಂದು ಹೇಳಲು ಹೋದ ಎಲ್ಲ ಜೀವಗಳು ಮರಳಿದಂತಾಗುತ್ತದೆ. ಕೊಂಚ ಚೇತರಿಸಿಕೊಂಡ ನಂತರ ಮತ್ತೆ ತಂದೆಯನ್ನು ಮನೆಗೆ ಕರೆತರುತ್ತಿದ್ದಂತೆ ಹಲವು ದಿನಗಳ ನಂತರ ಮನೆ ಪ್ರವೇಶಿಸುತ್ತಿದ್ದಂತೆ ಮೊದಲು ಹೋಗಿದ್ದು ಪಾಯಿಖಾನೆಗೆ! 

                                                    -ನೀ.ಮ. ಹೇಮಂತ್

No comments:

Post a Comment