ಜೇಬಿನಿಂದ
ತುಂಬಿ ತುಳುಕುತ್ತಿದ್ದ ನೋಟುಗಳು. ಚಿನ್ನದ ಹಲ್ಲುಗಳು, ಕೈತುಂಬಾ ವಜ್ರದ ಉಂಗುರಗಳು, ಅಪ್ಪಟ ಬಿಳಿಯ
ಸೂಟ್ ಧರಿಸಿ ಥೇಟ್ ಕುಬೇರನ ವಂಶಸ್ಥನಂತೆ ಕಾಣುತ್ತಿದ್ದ ಶ್ರೀಮಂತ ವಯಸ್ಕ ವ್ಯಕ್ತಿ ಬೀದಿಯಲ್ಲಿ ಅದೆಲ್ಲಿಂದ
ಪ್ರತ್ಯಕ್ಷನಾದನೋ, ಅವನ ಇತ್ಯೋಪರಿಯೇನೋ ಬೀದಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ, ಬೀದಿಯಲ್ಲೇ ಏನು
ಇಡೀ ಪ್ರಪಂಚದಲ್ಲಿ ಅವನನ್ನು ತಿಳಿದವರು, ಬಂಧುಗಳೆಂಬುವರು, ಮಿತ್ರರು ಯಾರೂ ಇರಲಿಲ್ಲ. ಬೀದಿಯಲ್ಲಿದ್ದ
ಸಮಸ್ತರ ಕಣ್ಣುಗಳು ಇವನೆಡೆಗೇ ಅಥವಾ ಈತನ ಮೈ ತುಂಬಾ ತಾಂಡವವಾಡುತ್ತಿದ್ದ ಕಾಂಚಾಣದ ಕಡೆಗೇ ನೆಟ್ಟಿದ್ದವು.
ಇವನಾರೋ ಹುಚ್ಚನೇ ಇರಬೇಕೆಂದು ಎಲ್ಲರೂ ಊಹಿಸುತ್ತಿದ್ದರು. ದುಡ್ಡು ಬಚ್ಚಿಟ್ಟರೇ ಉಳಿಯುವುದು ಕಷ್ಟ
ಅಂಥದ್ದರಲ್ಲಿ ಇವನು ತೆರೆದಿಟ್ಟುಕೊಂಡು ಓಡಾಡುತ್ತಿರುವನಲ್ಲ ಯಾರೀ ಶ್ರೀಮಂತ, ಏನಿವನ ಉದ್ದೇಶ ಎಂದು
ಹಲವರು ಹಲವು ರೀತಿಯಲ್ಲಿ ಯೋಚಿಸುತ್ತಿರುವಂತೆಯೇ ಎಲ್ಲರ ತೀಕ್ಷ್ಣ ಕಣ್ಣೋಟಗಳನ್ನು ಸೀಳಿಕೊಂಡು ಒಬ್ಬ
ಭಿಕ್ಷುಕ ನೇರವಾಗಿ ಶ್ರೀಮಂತನ ಹತ್ತಿರ ಹೋಗಿ ಭಿಕ್ಷಾಟನೆ ಮಾಡಿಯೇ ಬಿಟ್ಟ. ಆ ಶ್ರೀಮಂತ ತನ್ನ ಚಿನ್ನದ
ಹಲ್ಲುಗಳನ್ನು ಪ್ರದರ್ಶಸಿತ್ತಲೇ ಆ ಚಿತ್ತಾರದ ಬಟ್ಟೆ ತೊಟ್ಟ ವ್ಯಕ್ತಿಯನ್ನು ಕೈಹಿಡಿದು ನಿಲ್ಲಿಸಿ
ಆತನ ಹೆಗಲ ಮೇಲೆ ಕೈ ಹಾಕಿ ಅಲ್ಲಿಂದ ಕರೆದುಕೊಂಡು ಹೊರಟೇ ಬಿಟ್ಟ. ಅರೆರೆ! ಎಲ್ಲಿಗೆ ಕರೆದುಕೊಂಡು
ಹೋಗುತ್ತಿರುವನೋ, ಮೊದಲೇ ಹುಚ್ಚನಂತೆ ಕಂಡ ಈ ಶ್ರೀಮಂತನನ್ನು ನಂಬಿ ಭಿಕ್ಷುಕ ಅದಾವ ಧೈರ್ಯದ ಮೇಲೆ
ಆತನ ಜೊತೆ ಹೋಗುತ್ತಿರುವನೋ ಎಂದು ಎಲ್ಲರೂ ಶ್ರೀಮಂತ ಪ್ರತ್ಯಕ್ಷನಾದಾಗ ತೆರೆದ ಬಾಯನ್ನು ಇನ್ನೂ ಮುಚ್ಚದೆಯೇ
ನೋಡುತ್ತಿದ್ದ ಹಾಗೆಯೇ ಭಿಕ್ಷುಕನನ್ನು ಕರೆದುಕೊಂಡು ಬೀದಿಯಿಂದ ಕಾಣೆಯಾದನು. ಭಿಕ್ಷುಕನನ್ನು ಒಂದು
ಭವ್ಯ ಬಂಗಲೆಯ ಮುಂದೆ ತಂದು ನಿಲ್ಲಿಸಿದಾಗ ಭಿಕ್ಷುಕ ಹೆದರಿ ಸಾರ್ ದಯವಿಟ್ಟು ಒಂದಷ್ಟು ಪುಡಿಗಾಸು
ಹಾಕಿ ಸಾಕು ನನಿಗೆ ಎಂದು ಕೇಳಿದರೂ, ಹೆದರಬೇಡ ಬಾ ಎಂದು ಮಾತ್ರ ಹೇಳಿ ಕರೆದುಕೊಂಡು ಒಳಪ್ರವೇಶಿಸಲು
ದಾರಿ ತೋರಿದರೆ, ಭಿಕ್ಷುಕ ಏನೋ ಗಂಡಾಂತರದಲ್ಲಿ ಸಿಲುಕಿದ್ದೇನೆಂದು ಹೆದರಿ ಹಯ್ಯೋ ಬೇಡ ನಿಮ್ಮ ದುಡ್ಡೂ
ಬೇಡ ಏನೂ ಬೇಡ ನನ್ನನ್ನು ಬಿಟ್ಟುಬಿಡಿ ಎಂದು ಅಲ್ಲಿಂದ ಪೇರಿಕಿತ್ತಲು ಪ್ರಯತ್ನದಲ್ಲಿರುವಾಗ ಶ್ರೀಮಂತ
ನಕ್ಕು ಯಾತಕ್ಕೆ ಹೆದರುತ್ತಿದ್ದೀಯ ನಿನಗೆ ಏನೂ ಮಾಡುವುದಿಲ್ಲ ಬಾ ಎಂದು ಧೈರ್ಯ ತುಂಬಿ ಕರೆದುಕೊಂಡು
ಹೋಗುವನು. ಭಿಕ್ಷುಕ ಅಂಜಿಕೆಯನ್ನು ಹೊದ್ದುಕೊಂಡು ನಡುಗುತ್ತಲೇ ಒಳಗೆ ಹೋದ.
ನಂತರ
ಇನ್ನಾರಾರೋ ಇನ್ನೆಲ್ಲೆಲ್ಲೋ ಅದೇ ವಿಚಿತ್ರ ಶ್ರೀಮಂತನನ್ನು ಇನ್ನಾರನ್ನೋ ಕರೆದುಕೊಂಡು ಹೋಗುತ್ತಿರುವುದನ್ನು
ಕಂಡವರಿದ್ದಾರೆ. ಆದರೆ ಮತ್ತೆ ಆತನ ಜೊತೆ ಹೋದ ವ್ಯಕ್ತಿಗಳು ಮತ್ತೆ ಎಲ್ಲೂ ಕಾಣದಿರುವುದು ಜನರಲ್ಲಿ
ಆತಂಕ ಹುಟ್ಟಿಸುತ್ತಿದ್ದವು. ಈ ಶ್ರೀಮಂತನ ಬಗ್ಗೆ ಹಲವು ಊಹಾ ಪೋಹಗಳು ಬಾಯಿಂದ ಬಾಯಿಗೆ ಜನರಲ್ಲಿ ಹರಡಿ
ಇವನ ಬಗ್ಗೆ ಭಯವನ್ನು ಬೆಳೆಸಿಕೊಂಡರು ಆದರೆ ಕೊಂಚ ದಿನಗಳ ನಂತರ ಮುಂಚೆ ಇದ್ದ ಭಿಕ್ಷುಕನನ್ನು, ಶ್ರೀಮಂತನ
ಜೊತೆ ಹೋಗಿದ್ದ ಹಲವು ಸಾಮಾನ್ಯ ವ್ಯಕ್ತಿಗಳನ್ನು ಆ ಶ್ರೀಮಂತನ ಆಕಾರದಲ್ಲಿಯೇ ಕಾಣಸಿಗಲು ಶುರುವಾದರು.
ಅದೇ ರೀತಿಯ ಸೂಟು ತೊಟ್ಟು, ಜೇಬಿನ ತುಂಬಾ ಹಣ ತುಂಬಿಕೊಂಡು ಹಲ್ಲು ಕಿರಿಯುತ್ತಾ ದುಬಾರಿ ಕಾರೊಂದರಲ್ಲಿ
ಹೋಗುವುದನ್ನು ಕಂಡವರ ಎದೆ ಒಮ್ಮೆ ಕೆಲಸ ಮಾಡುವುದನ್ನೇ ನಿಲ್ಲಿಸಿ ಹೋ ಇದೇನೋ ಚಮತ್ಕಾರವಾಗಿದೆ, ಆ
ಶ್ರೀಮಂತ ಯಾರೋ ಮಾಮೂಲಿನ ಮನುಷ್ಯನಲ್ಲ ಅವನನ್ನು ಹಿಡಿದರೆ ತಮಗೂ ಏನಾದರೂ ಲಾಭವಾಗಬಹುದು ಎಂದು ಆ ಶ್ರೀಮಂತನನ್ನು
ಹುಡುಕಾಡ ಹತ್ತಿದರು. ಎಲ್ಲಿ ಸಿಗುವನೋ, ಏನು ಮಾಡುತ್ತಿರುವನೋ, ಹೇಗೆ ಅವನನ್ನು ಪತ್ತೆಹಚ್ಚುವುದೋ
ತಿಳಿಯದೇ ಸಿಕ್ಕ ಸಿಕ್ಕಲ್ಲಿ ಅವನ ಬಗ್ಗೆ ಯಾರಿಗಾದರೂ ಗೊತ್ತೇ ಎಂದು ಹುಚ್ಚರಂತೆ ಹುಡುಕಾಡತೊಡಗಿದರು
ಜನ. ಬಿಟ್ಟಿ ದುಡ್ಡೆಂದರೆ ದೇಹವೆಲ್ಲಾ ಜೇಬಂತೆ. ಜನರ ಕನಸಿನಲ್ಲೆಲ್ಲಾ ಆ ಶ್ರೀಮಂತನೇ ಬಂದು ಅವರನ್ನು
ಕರೆದುಕೊಂಡು ಹೋಗಿ ಧಿಢೀರನೆ ಶ್ರೀಮಂತರನ್ನಾಗಿ ಮಾರ್ಪಡಿಸಿದ ಹಾಗೆ ಕಂಡವರು ನಿದ್ರಿಸಲಾಗದೆ, ತಿನ್ನಲಾಗದೆ,
ನೆಮ್ಮದಿ ಕಳೆದುಕೊಂಡು ಓಡಾಡ ತೊಡಗಿದರು. ಆತನಿಂದ ಶ್ರೀಮಂತರಾಗಿ ಮಾರ್ಪಾಡಾದವರಾದರೂ ಸಿಕ್ಕರೆ ಸಾಕೆಂದು
ಮಾಡುವ ಕೆಲಸವನ್ನೆಲ್ಲಾ ಮರೆತು ಅಲೆಯತೊಡಗಿದರು. ಈ ವಿಷಯ ಮಾಧ್ಯಮದವರಿಗೆಲ್ಲಾ ತಿಳಿದು ಎಲ್ಲೆಲ್ಲೂ
ಆ ಶ್ರೀಮಂತನದೇ ಆರ್ಭಟ. ಈ ವಿಚಿತ್ರ ಶ್ರೀಮಂತನ ಬಗ್ಗೆ ಹಲವು ರೀತಿಯ ವಾದವಿವಾದಗಳು ಸೃಷ್ಟಿಯಾಗಿ ಅವನನ್ನು
ಅಥವಾ ಆತನಿಂದ ಶ್ರೀಮಂತರಾದವರೆನ್ನಲಾಗುತ್ತಿರುವವರನ್ನು ಕಂಡಲ್ಲಿ ಸೆರೆಹಿಡಿಯಬೇಕು. ಆತ ಜನರಲ್ಲಿ
ಇಲ್ಲ ಸಲ್ಲದ ಆಸೆ ಹುಟ್ಟಿಸುತ್ತಿದ್ದಾನೆ, ಅವನ ಬಗ್ಗೆ ನಿಗೂಢವಾದ ದೂರುಗಳು ಕೇಳಿಬಂದಿವೆ ಎಂದು ಕೇಸ್
ಕೂಡ ದಾಖಲಿಸಲಾಗುತ್ತದೆ. ಯಾರು, ಏನೆಂದು ಗೊತ್ತಾಗದೆ ಕೇವಲ ಹೇಳಿಕೇಳಿದವರ ಮಾತುಗಳು, ಮತ್ತು ಕೆಲವರು
ಕಾರ್ಯಕರ್ತರ ಒತ್ತಡದ ಮೇರೆಗೆ ಪೊಲೀಸರೂ ಸೇರಿ, ಹಲವರು, ಹಲವು ತಮ್ಮದೇ ಕಾರಣಗಳೊಂದಿಗೆ ಆ ಶ್ರೀಮಂತರನ್ನು
ಹುಡುಕಲು ಶುರುಮಾಡುತ್ತಾರೆ. ಯಾರು ಎಲ್ಲಿ ಕಂಡರೂ ಸುದ್ದಿ ಮುಟ್ಟಿಸುವಂತೆ ಸುದ್ದಿ ಸಮಾಚಾರ ಹಲವು
ಮಾಧ್ಯಮಗಳ ಮುಖಾಂತರ ಬಿತ್ತರವಾಗುತ್ತಲೇ ಇರುತ್ತದೆ. ಇಡೀ ರಾಜ್ಯದಲ್ಲಿಯೇ ಒಂದು ಆತಂಕ ಮತ್ತು ಕುತೂಹಲದ
ವಾತಾವರಣ ನಿರ್ಮಾಣವಾಗುತ್ತದೆ.
ಶ್ರೀಮಂತರನ್ನು
ಪತ್ತೆ ಹಚ್ಚುವ ಕಾರ್ಯದಲ್ಲಿ ಹಲವು ತಂಡಗಳು ಒಟ್ಟುಗೂಡಿದ್ದರಿಂದ ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ.
ಶ್ರೀಮಂತರು ಸಿಕ್ಕಿಬೀಳುತ್ತಾರೆ. ಆದರೆ ಸತ್ಯ ಸಂಗತಿ ಏನೆಂದು ತಿಳಿಯುವ ಮೊದಲು ಮತ್ತು ವಿಚಾರಣೆ ಆಗುವ
ಮುನ್ನ ವಿಷಯವನ್ನು ಜನರಿಗೆ ತಿಳಿಯದಂತೆ ಗೌಪ್ಯವಾಗಿಡಲಾಗುತ್ತದೆ. ಸಿಕ್ಕಿ ಬಿದ್ದ ಒಂದಿಬ್ಬರು ಶ್ರೀಮಂತರನ್ನು
ಬೇರೆ ಬೇರೆ ಕಡೆ ಗೌಪ್ಯವಾದ ಸ್ಥಳದಲ್ಲಿ ಕೂಡಿ ಹಾಕಿ ಸಂಬಂಧ ಪಟ್ಟವರು, ಪೊಲೀಸರು, ಮಂತ್ರಿಗಳು ನೇರವಾಗಿ
ಒಟ್ಟು ಸೇರಿ ಅವರುಗಳ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಗರೆಯುತ್ತಾರೆ. ಎಲ್ಲಿಂದ ಬಂತು ಈ ದಿಢೀರ್
ದುಡ್ಡು? ಯಾರು ನೀನು? ಎಲ್ಲಿ ಪೇರಿಸಿಟ್ಟಿದ್ದೀಯ ಎಲ್ಲಾ ದುಡ್ಡನ್ನ? ನಿನ್ನ ನಿವಾಸವೆಲ್ಲಿ? ನಿನ್ನ
ಸಂಸಾರ ಎಲ್ಲಿದೆ, ಯಾರು ಯಾರು ನಿನ್ನೊಂದಿಗೆ ಶಾಮೀಲಾಗಿದ್ದಾರೆ? ನಿನ್ನ ಕೆಲಸವೇನು? ನಿನ್ನನ್ನು ಶ್ರೀಮಂತನಾಗಿಸಿದ
ಆ ನಿಗೂಢ ವ್ಯಕ್ತಿ ಯಾರು? ಆತ ಎಲ್ಲಿ ಹೋದ? ದುಡ್ಡನ್ನೆಲ್ಲಾ ನೀನು ಎಲ್ಲೆಲ್ಲಿ ಖರ್ಚು ಮಾಡಿದ್ದೀಯ?
ಎಂದು ಅವನ ಉತ್ತವನ್ನೂ ಕಾಯದೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕೇಳುತ್ತಲೇ ಹೋಗುತ್ತಾರೆ. ಎಲ್ಲರ ಎದೆಬಡಿತ
ಜೋರಾಗಿರುತ್ತದೆ. ವಿಷಯ ದುಡ್ಡಿನದ್ದಾಗಿರುವುದರಿಂದ ನೆರೆದಿದ್ದವರೆಲ್ಲರಲ್ಲೂ ಉತ್ಸುಕತೆ ಸ್ಪಷ್ಟವಾಗಿ
ಕಾಣುತ್ತಿರುತ್ತದೆ. ಆ ಕತ್ತಲೆಯ ಕೋಣೆಯಲ್ಲಿ ಆತನ ತಲೆಯ ಮೇಲಿನಿಂದ ಬೀಳುತ್ತಿದ್ದ ಬೆಳಕಿನಲ್ಲಿ ಆ
ಶ್ರೀಮಂತ ವ್ಯಕ್ತಿ ಮುಗ್ಧನಂತೆ ನೋಡುತ್ತಾ ತನ್ನ ತಪ್ಪಾದರೂ ಏನು ಎಂಬಂತೆ ನೋಡುತ್ತಿರುತ್ತಾನೆ. ಇವನಾರೋ
ಅಕ್ರಮಣಕಾರಿ ವ್ಯಕ್ತಿ ಆಗಿರದಿದ್ದರೂ ಕೈಕೋಳ ಹಾಕಲಾಗಿರುತ್ತದೆ. ಈತ ಸಿಕ್ಕಿ ಬಿದ್ದಾಗ ಇವನ ಜೇಬಿನಲ್ಲಿದ್ದ
ನೋಟುಗಳು ಕೋಟಾ ನೋಟಲ್ಲ ಸರಕಾರದ ನೋಟುಗಳೇ ಎಂದು ತಿಳಿದುಬರುತ್ತದೆ. ಅದರ ಜೊತೆಗೆ ಈ ಮುಂಚೆ ಎಲ್ಲೆಲ್ಲಿ
ಈ ನೋಟುಗಳನ್ನ ಬಳಸಲಾಗಿದೆ ಎಂದು ಅದರ ಇತಿಹಾಸ ಅನ್ವೇಷಣೆ ಮಾಡಲು ಯಾವುದೇ ರೀತಿಯ ಸುಳಿವು ಸಿಗುವುದಿಲ್ಲ.
ಅದರ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿರುತ್ತದೆ. ಈಗ ಏನೇ ಉತ್ತರ ಬಂದರೂ ಈ ವ್ಯಕ್ತಿಗಳಿಂದಲೇ ಬರಬೇಕೆಂದು
ಅವರುಗಳ ಮೇಲೆಯೇ ಒತ್ತಡ ಹೇರಿ ಉತ್ತರ ತೆಗೆಸಲು ಹಲವು ಪ್ರಯತ್ನಗಳನ್ನ ಮಾಡುತ್ತಾರೆ. ಆತನಿಗೂ ಅವನನ್ನು
ಶ್ರೀಮಂತನನ್ನಾಗಿಸಿದ ವ್ಯಕ್ತಿಯ ಹೆಸರು, ಕುಲ, ಗೋತ್ರ, ಮೂಲ ಏನೂ ಗೊತ್ತಿರುವುದಿಲ್ಲ.
ಒಬ್ಬ
ಶ್ರೀಮಂತ ತನ್ನನ್ನು ಕರೆದುಕೊಂಡು ಒಂದು ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ಒಳಗೆ ಹೋಗುತ್ತಾ ಅಂಗಳದಲ್ಲಿ
ಬಿದ್ದಿದ್ದ ಒಂದೆರಡು ನೋಟುಗಳನ್ನು ಕದ್ದು ಜೇಬಿಗಿಳಿಬಿಡುವಾಗ ಆ ಶ್ರೀಮಂತ ನೋಡಿ ನಕ್ಕು ಅದೇನ್ ಬೇಡ
ಬಿಡು ಎಂದಷ್ಟೇ ಹೇಳಿ ಮನೆಯ ಹಿತ್ತಲು ಪ್ರವೇಶಿಸುತ್ತಾನೆ. ತಾನು ಹೆದರೆದರಿಕೊಂಡೇ ಪ್ರವೇಶಿಸಿದರೆ
ಆ ಅದೇನೋ ವಿಚಿತ್ರವಾದ ವಿವರಿಸಲಾಗದಂತಹ ದೃಶ್ಯ ಅದೇನೋ ದುಡ್ಡಿನ ಮರದಂತಹ ಒಂದು ಮರ ಅದರ ತುಂಬಾ ನೋಟುಗಳು.
ಎಷ್ಟು ಬೇಕೋ ಕಿತ್ತುಕೊಂಡು ಯಾರನ್ನು ಬೇಕಾದರೂ ಕರೆದು ಸಹಾಯದೊಂದಿಗೆ ತೆಗೆದುಕೊಂಡು ಹೋಗಲು ಹೇಳುತ್ತಾನೆ.
ತಾನು ಮೂಟೆ ಮೂಟೆ ಗಟ್ಟಲೆ ತುಂಬಿಸಿಕೊಂಡು ಲೆಕ್ಕ ಹಾಕಲಾರದಷ್ಟು ದುಡ್ಡನ್ನು ಮನೆಗೆ ತೆಗೆದುಕೊಂಡು
ಹೋಗುತ್ತನೆ. ತನ್ನ ಮನೆಯಲ್ಲೂ ಒಂದು ಅಂಥದ್ದೇ ಮರ ಹುಟ್ಟಿಕೊಳ್ಳುತ್ತದೆ. ಆ ಶ್ರೀಮಂತ ತನಗೆ ಸಹಾಯ
ಮಾಡಿದಂತೆ ಇನ್ನು ಎಷ್ಟೋ ಜನರಿಗೆ ಸಹಾಯ ಮಾಡಿರುತ್ತಾನೆ. ಆ ಶ್ರೀಮಂತನಿಗೂ ಯಾರೋ ಶ್ರೀಮಂತ ಸಹಾಯ ಮಾಡಿದ್ದರಂತೆ,
ನಂತರ ತಾನೂ, ಮತ್ತು ಆ ಶ್ರೀಮಂತನಿಂದ ಸಹಾಯ ಪಡೆದ ಫಲಾನುಭವಿಗಳೆಲ್ಲರೂ ಇನ್ನು ಎಷ್ಟೋ ಜನರಿಗೆ ಸಹಾಯ
ಮಾಡಿರುವುದಾಗಿ ಮತ್ತು ತನ್ನಿಂದ ಫಲಾನುಭವ ಹೊಂದಿದವರೂ ಸಹ ಅದೇ ಮಾರ್ಗದಲ್ಲಿ ಮುಂದುವರೆಯುತ್ತಿರುವುದಾಗಿ
ವಿವರವಾಗಿ ತನ್ನ ವಿಸ್ಮಯ ಕಥೆಯನ್ನು ಬಿಚ್ಚಿಡಿತ್ತಾನೆ. ಎಲ್ಲರೂ ಬಾಯಿ ಕಳೆದು ಒಳಗೆ ಹೋಗಿ ಬರುತ್ತಿದ್ದ
ನೊಣವನ್ನೂ ಲೆಕ್ಕಿಸದೆ ಹಾಗೇ ಸ್ತಬ್ಧವಾಗಿ ಕುಳಿತಿರುತ್ತಾರೆ. ಮತ್ತೊಬ್ಬ ಸಿಕ್ಕಿಬಿದ್ದವನ ಮಾತೂ ಸಹ
ನೂರಕ್ಕೆ ನೂರರಷ್ಟೂ ಇದೇ ಕಥೆಯಾಗಿರುತ್ತದೆ. ಆದರೆ ಒಬ್ಬರಿಗೊಬ್ಬರು ಗೊತ್ತಿಲ್ಲವೆಂದೇ ಹೇಳುತ್ತಿರುತ್ತಾರೆ.
ಯಾರಿಗೂ ಏನೂ ಅರ್ಥವಾಗಿರುವುದಿಲ್ಲ. ಒಂದಿನಿತೂ ನಂಬಲೂ ಸಾಧ್ಯವಾಗುವುದೂ ಇಲ್ಲ. ಹಲವು ರೀತಿ ದಂಡಿಸಿ,
ಏನು ಮಾಡಿದರೂ ಕೊನೆಗೂ ಅವರ ಪ್ರವರವನ್ನೇ ಮುಂದುವರೆಸುತ್ತಿರುತ್ತಾರೆ ಹೊರತು ತಮಗೆ ಬೇಕಾದ ಉತ್ತರ
ಹೊರಗೆಡುವುದಿಲ್ಲ. ಮತ್ತು ಅವರು ಹೇಳಿದ ಮರ ಕೂಡ ತಮ್ಮ ಮನೆಯಲ್ಲಿ ಸಿಗುವುದಿಲ್ಲ. ಯಾವುದೇ ರೀತಿಯ
ಆಧಾರವಿಲ್ಲದೇ ಅವರ ಸುಳ್ಳಿನ ಕಂತೆಯಂತಹ ಕಥೆಗಳನ್ನ ನಂಬಲು ಇಡೀ ಪ್ರಪಂಚದಲ್ಲಿ ಯಾರೂ ತಯಾರಿರುವುದಿಲ್ಲ.
ಹಲವಾರು ಪರೀಕ್ಷೆಗಳಲ್ಲಿ ಬುದ್ದಿ ಸ್ಥಿಮಿತವಾಗೇ ಇದೆ ಎಂದು ಕಂಡುಬರುತ್ತದೆ. ಅದೇ ಸಮಯದಲ್ಲಿ ಇನ್ನಷ್ಟು
ದಿಢೀರ್ ಶ್ರೀಮಂತರು ಸಿಕ್ಕಿಬೀಳುತ್ತಾರೆ. ಅವರದ್ದೂ ಅದೇ ಉವಾಚ. ಅಲ್ಲೂ ದುಡ್ಡು ಬಿಟ್ಟರೆ ಬೇರೇನೂ
ಸುಳಿವು ಸಿಗುವುದಿಲ್ಲ. ನ್ಯಾಯ ತೀರ್ಮಾನಕ್ಕೆ ಸಾಕ್ಷಿಗಳಿಲ್ಲದೇ, ಬಲವಾದ ಅಪರಾಧದ ಕಾರಣಗಳಿಲ್ಲದೆ.
ಎಲ್ಲ ಹೊರಬರುತ್ತಾರೆ. ಮತ್ತು ಈಗ ಇವರ ಬಳಿ ಇದ್ದ ದುಡ್ಡಿಗಾಗಿ ಹಲವರು ಕೊಲೆಯಾಗುತ್ತಾರೆ, ಇನ್ನೂ
ಹಲವರು ಶ್ರೀಮಂತರಾಗುತ್ತಾ ಹೋಗುತ್ತಾರೆ. ನೋಡ ನೋಡುತ್ತಾ ಇಡೀ ಊರು ಇಡೀ ರಾಜ್ಯ ಇಡೀ ದೇಶ ಶ್ರೀಮಂತವಾಗುತ್ತಾ
ಹೋಗುತ್ತದೆ. ಎಲ್ಲಿ ನೋಡಿದರೂ ಕೈಲಿ, ಕಾರಲ್ಲಿ, ಸಿಕ್ಕ ಸಿಕ್ಕದರಲ್ಲಿ ದುಡ್ಡು ತುಂಬಿಕೊಂಡು ಹೋಗುತ್ತಿರುವವರೇ
ಕಾಣಸಿಗುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಇದರಿಂದ ದೇಶದ ಹಣಕಾಸಿನ ಪರಿಸ್ಥಿತಿಯಲ್ಲಿ ತುಂಬಾ ಏರುಪೇರುಗಳಾಗುತ್ತವೆ.
ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುತ್ತಾ ಹೋಗುತ್ತದೆ. ಆದರೆ ಯಾರಿಂದಲೂ ಯಾವುದನ್ನೂ ತಡೆಯುವ ಹಾಗೆಯೇ
ಇರುವುದಿಲ್ಲ ಎಲ್ಲ ಮೂಕ ಪ್ರೇಕ್ಷಕರಾಗಿಯೇ ಉಳಿಯುತ್ತಾರೆ. ಎಲ್ಲರಿಗೂ ಬೇಕಾಗಿರುತ್ತದೆ ದುಡ್ಡು. ಎಷ್ಟು
ಬಂದರೂ ಸಾಲದೆ ಎಲ್ಲರೂ ಶಕ್ತಿ, ಜಾಗವಿರುವಷ್ಟೂ ಹಣವನ್ನು ಶೇಖರಿಸುವುದರಲ್ಲೇ ತೊಡಗುತ್ತಾರೆ. ಸಾಕು
ಸಾಕೆನಿಸುವಷ್ಟು ದುಡ್ಡು ಎಲ್ಲರಲ್ಲೂ ಸೇರುತ್ತಾ ಹೋಗುತ್ತದೆ. ಯಾರಿಗೂ ಕೆಲಸ ಮಾಡಲು, ಕನ್ನ ಹಾಕಲು,
ಕೊಲೆ ಮಾಡಲು, ಮುಂತಾದ ಯಾವುದೇ ಕಾರ್ಯಕ್ಕೂ ಈಗ ಕಾರಣವೇ ಇಲ್ಲವಾಗಿರುತ್ತದೆ. ಎಲ್ಲೆಲ್ಲೂ ದುಡ್ಡು
ಚೆಲ್ಲಾಡಿರುತ್ತದೆ. ಈ ವಿಷಯ ಶೀಘ್ರದಲ್ಲಿ ಇಡೀ ಪ್ರಪಂಚಕ್ಕೆ ಹಬ್ಬುತ್ತದೆ. ಎಲ್ಲರೂ ಲಗ್ಗೆಯಿಕ್ಕುತ್ತಾರೆ.
ಎಲ್ಲರ ದಾಳಿ ತಪ್ಪಿಸಿಕೊಳ್ಲಲಾಗದೆ ಇಡೀ ದೇಶ ತತ್ತರಿಸುತ್ತದೆ. ಮಾರಣ ಹೋಮವಾಗುತ್ತದೆ. ದುಡ್ಡನ್ನು
ಹೊರಗಿನಿಂದ ಬಂದವರೆಲ್ಲಾ ದೋಚಿಕೊಂಡು ಹೋಗಲು ಶುರುಮಾಡುತ್ತಾರೆ. ಮನುಷ್ಯತ್ವಕ್ಕೆ ಬೆಲೆಯೇ ಇಲ್ಲವಾಗುತ್ತದೆ.
ಎಲ್ಲರಿಗೂ ಬೇಕಾಗಿದ್ದು ದುಡ್ಡೊಂದೇ, ಯಾರಿಗೂ ತೊಂದರೆ ಮಾಡದಿರಲೆಂದು ತಾವೇ ದೇಶವಿದೇಶಗಳಿಗೆ ಹೋಗಿ
ದುಡ್ಡು ಹಂಚಿ ಬರಲು ಶುರುಮಾಡುತ್ತಾರೆ. ಎಲ್ಲರ ಮನೆಯಲ್ಲೂ ದುಡ್ಡಿನ ಮರ ಬೆಳೆಯುತ್ತಾ ಹೋಗುತ್ತದೆ.
ಚಿಕ್ಕ ಚಿಕ್ಕ ಹಳ್ಳಿಗಳಿಂದ ಹಿಡಿದು ಪ್ರತಿಯೊಬ್ಬ ಮನುಷ್ಯನಲ್ಲೂ ದುಡ್ಡು ಕ್ರೋಢೀಕಾರಿಸಲಾರಂಭವಾಗುತ್ತದೆ.
ತಮ್ಮ ಬಳಿಯೂ ದುಡ್ಡು ಬರುವುದೆಂದು ತಿಳಿದು ಮುಗಿಬೀಳುವುದನ್ನು ಜನ ಕಡಿಮೆ ಮಾಡಿರುತ್ತಾರೆ. ದುಡ್ಡು
ಎಲ್ಲೆಡೆ ಪಸರಿಸುತ್ತಾ ಹೋಗುತ್ತದೆ. ಎಷ್ಟೋ ಕಂಪನಿಗಳು ಮುಚ್ಚಿ ಹೋಗುತ್ತವೆ. ಎಷ್ಟೋ ಜನ ಬುದ್ದಿವಂತರಾಗಿ
ತಿನಿಸುಗಳನ್ನು ಶೇಖರಿಸಿಡುತ್ತಾರೆ. ಇನ್ನೆಷ್ಟೋ ಜನ ದುಡ್ಡನ್ನು ಲೀಲಾಜಾಲವಾಗಿ ವ್ಯಯ ಮಾಡಿ ಬೇಕಾದ್ದು
ಮಾಡಿ ಆನಂದವನನುಭವಿಸುತ್ತಾರೆ. ಎತ್ತ ನೋಡಿದರೂ ದುಡ್ಡೇ ದುಡ್ಡು. ಇದಕ್ಕಾಗಿಯೇ ತಾವು ಇಷ್ಟೆಲ್ಲಾ
ಬವಣೆಗಳನ್ನು ಇಷ್ಟು ದಿನ ಅನುಭವಿಸಿದ್ದಾ ಎಂದು ಕೈಲಿ ಹಿಡಿದು ಜನ ದಿಗ್ಮೂಢರಂತೆ ನಿಂತಿರುತ್ತಾರೆ.
ಎಷ್ಟು ವ್ಯಯ ಮಾಡಿದರೂ ದುಡ್ಡು ಎಲ್ಲರಲ್ಲೂ ಸೇರುತ್ತಲೇ ಇರುತ್ತದೆ. ನೋಡನೋಡುತಲೇ ಇಡೀ ಪ್ರಪಂಚದಲ್ಲಿ
ಪ್ರತಿಯೊಬ್ಬ ಮನುಷ್ಯನಲ್ಲಿ ಅಪರಿಮಿತ ದುಡ್ಡಿರುತ್ತದೆ. ಅದೇ ದುಡ್ಡಿರುವುದರ ಕಾರಣದಿಂದ ಹಲವಾರು ಪ್ರಲೋಭನೆಗಳಿಗೆ
ಸಿಕ್ಕು ಎಷ್ಟೋ ಕಡೆ ಮನುಷ್ಯ ಮನುಷ್ಯರಲ್ಲಿ ಜಗಳಗಳು ಶುರುವಾಗುತ್ತದೆ. ಕೊಲೆಗಳಾಗುತ್ತದೆ. ಮತ್ತೊಂದು
ಘಟ್ಟದ ನಂತರ ಎಲ್ಲಾ ಶಾಂತವಾಗುತ್ತದೆ. ಮನುಷ್ಯರು ಬದುಕುವುದರ ಆಸಕ್ತಿಯನ್ನೇ ಕಳೆದುಕೂಳ್ಳುತ್ತಾರೆ.
ಏನು ಮಾಡಲೂ ಕಾರಣವೇ ಸಿಗದಂತಾಗಿರುತ್ತದೆ. ಆಕಾಶ ನೋಡುತ್ತಾ ಹಲವರು ಕಾಲ ಕಳೆಯುತ್ತಿರುತ್ತಾರೆ. ಮೂಲಭೂತ
ಅವಶ್ಯಕತೆಗಳಂತಹ ಬಟ್ಟೆ, ಆಹಾರ ಉತ್ಪಾದನೆಯೂ ಸಹ ನಿಂತುಹೋಗುತ್ತದೆ. ಇಡೀ ಪ್ರಪಂಚ ದುಡ್ಡೊಂದು ಬಿಟ್ಟು
ಬೇರೆಲ್ಲದರ ಕೊರತೆಯಿಂದ ವಿನಾಶದ ಹಾದಿ ಹಿಡಿದಿರುವ ಸ್ಪಷ್ಟ ಸೂಚನೆಗಳು ಕಾಣಸಿಗುತ್ತವೆ.
ಕೆಲವೇ
ವರ್ಷಗಳ ನಂತರ……
ಕಳ್ಳನೊಬ್ಬ
ಬಾಗಿಲು ತೆರೆದಿದ್ದ ಮನೆಗೆ ನುಗ್ಗುತ್ತಾನೆ. ಚಿನ್ನಾಭರಣ, ದುಡ್ಡು ತುಂಬಿದ್ದ ಲಾಕರ್ ತೆರೆದಿರುತ್ತದೆ,
ಅದರ ಎದುರುಗಡೆ ಬೀಗ ಹಾಕಿರುವ ಕೋಣೆಯನ್ನು ಕಷ್ಟ ಪಟ್ಟು ಮುರಿದು, ಸದ್ದು ಕೇಳಿ ಬಂದ ಮನೆಯವರ ಜೊತೆಯೆಲ್ಲಾ
ಕಿತ್ತಾಡಿ ಅನ್ನದ ಪಾತ್ರೆ ಎತ್ತಿಕೊಂಡು ಪರಾರಿಯಾಗುತ್ತಾನೆ. ಬಡವರ ಮನೆಯಲ್ಲೂ ಕನ್ನ ಹಾಕುವ ಇಂಥವರನ್ನು
ಶಪಿಸುತ್ತಾ ಇಡೀ ರಾತ್ರಿ ನಿದ್ರೆ ಮಾಡದೇ ಮನೆಯವರೆಲ್ಲಾ ತಲೆ ಮೇಲೆ ಕೈ ಹೊತ್ತು ಕಳೆಯುತ್ತಾರೆ. ನೆರೆಮನೆಯವರೆಲ್ಲಾ
ಮಾರನೆಯ ದಿನ ಸಾಂತ್ವಾನ ಹೇಳಿ ತಮ್ಮ ಬಳಿ ಇದ್ದದ್ದನ್ನ ಹಂಚಿಕೊಳ್ಳುತ್ತಾರೆ. ಕೆಲಸಗಳೆಲ್ಲಾ ಮುಂಚಿನಂತೆಯೇ
ನಡೆಯುತ್ತಿರುತ್ತದೆ. ಅನ್ನಕ್ಕೆ, ಗ್ಯಾಸ್ ಗೆ, ಪೆಟ್ರೋಲ್ ಗೆ ಮುಂಚಿನಂತೆಯೇ ಬೇಡಿಕೆಯಿರುತ್ತದೆ.
ಆದರೆ ಸರಕುಗಳಿಗೆ ಬದಲಾಗಿ ಬೇರೆ ಏನನ್ನಾದರೂ ಕೊಡಬೇಕಾಗಿರುತ್ತದೆ. ಎಲ್ಲರ ಬಳಿಯೂ ಇರುವ ದುಡ್ಡು ಚಲಾವಣೆಯಲ್ಲಿ
ಇಲ್ಲದೆ ಬಹಳ ಸಮಯವಾಗಿರುತ್ತದೆ. ಅನ್ನ ಬೇಕೆಂದರೆ ರಾಗಿ ಕೊಡಬೇಕಾಗಿರುತ್ತದೆ. ರೈತರಿಗೆ ಅತಿ ಹೆಚ್ಚಿನ
ಹುದ್ದೆ ನೀಡಲಾಗಿರುತ್ತದೆ. ಸಿಟಿಯಲ್ಲಿರುವವರು ಅಕ್ಕಿ, ರಾಗಿ ಪಡೆಯಲು, ತಮ್ಮ ಬಳಿಯಿರುವ ಅಲಂಕಾರಿಕ
ವಸ್ತುಗಳನ್ನು ಬದಲಾಗಿ ಕೊಡಬೇಕಾಗಿರುತ್ತದೆ. ಬದಲಾಗಿ ಏನೂ ಕೊಡಲಾಗದವರು ಬಡವರಾಗಿ ಬದುಕುತ್ತಿರುತ್ತಾರೆ.
ಪ್ರತಿಯೊಂದು ವಸ್ತುವಿಗೂ ಅದರ ಬೇಡಿಕೆಗೆ ತಕ್ಕಂತೆ ಬೆಲೆಯಿರುತ್ತದೆ. ಎಲ್ಲ ಕೆಲಸಗಳೂ ಮಾಮೂಲಿನಂತೆ
ನಡೆಯುತ್ತಿರುತ್ತವೆ. ದುಡ್ಡಿಗಾಗಿ, ಆಸ್ತಿಗಾಗಿ ಮನುಷ್ಯತ್ವವನ್ನು ಕಳೆದುಕೊಂಡಿದ್ದ ಜನರ ಜಾಗದಲ್ಲಿ
ಈಗ ಹೊಟ್ಟೆಗಾಗಿ, ಬಟ್ಟೆಗಾಗಿ, ನೀರಿಗಾಗಿ, ಮೂಲಭೂತ ಅವಶ್ಯಕತೆಗಳಿಗಾಗಿ ಜಗಳಗಳು ನಡೆಯುತ್ತಿರುತ್ತವೆ,
ಆದರೆ ಮನುಷ್ಯತ್ವ ಪೂರಾ ಕಳೆದುಕೊಂಡಿರುವುದಿಲ್ಲ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬದುಕು ಸಾಗಿಸುತ್ತಿರುತ್ತಾರೆ.
ದುಡ್ಡು, ಹಣ, ರೊಕ್ಕ, ಕಾಸು, ಲಕ್ಶ್ಮಿ, ಕಾಂಚಾಣ ಒಂದಿಲ್ಲ ಅಷ್ಟೇ, ಪ್ರಪಂಚ ಮುಂಚಿನಂತೆಯೇ ನಡೆಯುತ್ತಿರುತ್ತದೆ.
No comments:
Post a Comment