ಓದಿ ಓಡಿದವರು!

Sunday 4 March 2012

ಟಿಕೇಟ್! ಮುಂದೆ!



ಮುನ್ನುಡಿ: ಹೆಂಗಂದರೆ ಹಂಗೆ ಬೆಳೆದುಕೊಂಡಿರುವ ನಮ್ಮ ದೇಹ ಒಂದು ಸರಿಯಾದ ರೂಪಕ್ಕೆ ಬರಲು, ಸಣ್ಣಗಾಗಲು, ಹಿಂಜಿಕೊಂಡಿರುವ ನಮ್ಮ ಮುಖಗಳು ಕೊಂಚವಾದರೂ ನಗೆಯಾಡಲು, ಹಲವು ದೇಶ, ವರ್ಣ, ಭಾಷೆ, ತತ್ವ, ವಿಚಾರ, ನಂಬಿಕೆಗಳ ಜನರನ್ನ ಬಿಟ್ಟಿಯಾಗಿ ಬೆರೆಯಲು, ಇನ್ನೊಬ್ಬರ ಮೊಬೈಲ್ ಮೆಸೇಜನ್ನು ಕದ್ದು ಮುಚ್ಚಿ ಓದಲು, ಹಾಸಿಗೆಇದ್ದಷ್ಟು ಮಾತ್ರ ಕಾಲು ಚಾಚು ಎಂಬ ಉದಾಹರಣೆಯನ್ನು ಕಣ್ಣಾರೆ ನೋಡಲು, ತಾಳ್ಮೆಯೆಂದರೇನೆಂದು ಕಲಿಯಲು, ಕಷ್ಟವೇನೆಂಬುದನ್ನು ಅರಿಯಲು, ಒಂದು ದೇಶದ ನಿಜಸ್ಥಿತಿಯನ್ನು ಅರಿಯಲು, ನಿಜವಾದ ವೈಚಾರಿಕ ಬುದ್ದಿ ಜೀವಿಗಳನ್ನು, ಸಂಧಿಸಲು, ಉಚಿತ ಮನೋರಂಜನೆಗಳನ್ನು ಪಡೆಯಲು, ನೆಲದ ಮೇಲೆ ಕಾಲಿರಿಸದೇ ತೇಲುವುದರ ಅನುಭವ ಪಡಿಯಲು, ಮೈಮರೆತರೆ ಆಗಬಹುದಾದ ಅಚಾತುರ್ಯದ ಸವಿಯನ್ನು ಸವಿಯಲು, ಕರಪ್ಷನ್ ನ ಮೂಲ ತಿಳಿಯಲು, ಸೆಕೆಂಡ್ ಹಾಂಡ್ ಟಿಕೇಟ್, ಪಾಸ್ ಗಳ ವ್ಯಾಪಾರವನ್ನು ಅರಿಯಲು, ಕಲಾತ್ಮಕತೆಯ ನಿಜಸ್ವರೂಪವನ್ನು ಚಿತ್ರಿಸಿಕೊಳ್ಳಲು ಬನ್ನಿ ಬಸ್ಸು ಹತ್ತಿ. ಮುಂದೆ!

ಟಿಕೇಟ್…. ಟಿಕೇಟ್ ತೊಗೊಳ್ರೀ… ರೀ ಚೆನ್ನಾಗಿ ಆರೋಗ್ಯವಾಗಿರೋರಿಗೆಲ್ಲಾ “ಟಿಕೇಟ್” ತೊಗೊಳಿ ಅಂತೀರಲ್ರೀ ಬಸ್ ಕಂಡಕ್ಟರ್ ರಿಗೆ ನಮ್ಮ ಕೋಣನಕುಂಟೆ ಕಡೆಯ ಬಸ್ ಪಾಸಿದ್ದ ಕಾಲೇಜು ಹುಡುಗರು ಕೊಟ್ಟ ಉತ್ತರವಾಗಿತ್ತು ಅದು. ಬಸ್ಸು ಕೂಡ ಒಮ್ಮೆ ಕಿಸಕ್ಕೆಂದು ನಗೆಯಾಡಿತ್ತು. ನಾನು ಎಲಚೇನಹಳ್ಳಿಯೆಂಬ ಬೆಂಗಳೂರು ನಗರದ ಭಾಗವೊಂದರಲ್ಲಿ ಬಸ್ ಹತ್ತಿ, ಅಷ್ಟು ಕಾಲಿಡಲೂ ಜಾಗವಿಲ್ಲದ ಬಸ್ಸಿನಲ್ಲಿಯೂ ಸೀಟೆಂಬ ಸೀಟನ್ನು ಗಿಟ್ಟಿಸುವಲ್ಲಿ ವಿಜಯಿಯಾಗಿದ್ದೆ. ಸೀಟ್ ಗೆದ್ದಿದ್ದಕ್ಕೆ ಪ್ರಶಸ್ತಿಯೆಂಬಂತೆ ನಿದ್ರೆ ಬಂದಿತ್ತು. ಒಂದು ರಾತ್ರಿ ಪೂರಾ ನಿದ್ರಿಸಿದವನಂತೆ ಎಚ್ಚೆತ್ತು ಎಲ್ಲಿದ್ದೀನಿ ಎಂದು ಕಣ್ಣುಜ್ಜಿಕೊಂಡು ಸುತ್ತಾ ನೋಡಿದರೆ ಸಾರಕ್ಕಿ ಸಿಗ್ನಲ್ ನಲ್ಲಿ ಇನ್ನೂ ಬಸ್ಸು ನಿದ್ರಿಸುತ್ತಲಿತ್ತು. ಇನ್ನೂ ಒಂದೇ ಸ್ಟಾಪ್ ಮುಂದುವರೆದಿರುವುದು!, ಏನ್ ಭಾರೀ ನಿದ್ರೆ ಮಾಡಿಲ್ಲ ಹಾಗಾದರೆ ಎಂದು ಕೈಗಡಿಯಾರ ನೋಡಿಕೊಂಡರೆ ನಾನು ಬಸ್ ಹತ್ತಿದ್ದು ೮.೩೦ ಈಗ ೯ ಘಂಟೆಯಾಗಿತ್ತು. ಅರ್ಧ ಘಂಟೆಯಾದರೂ ಇನ್ನೂ ಒಂದೇ ಸ್ಟಾಪ್ ಹೋಗಿದ್ದು. ಕನಕಪುರ ರೋಡನಲ್ಲಿ ಸಾಗುವವರಿಗೆ ಇದೇನು ಹೊಸ ತಲೆನೋವಲ್ಲ. ಹಾಗಾಗಿ ಯಾರೂ ತಲೆಕೆಡಿಸಿಕೊಳ್ಳದೇ ಬೆವರು ಸುರಿಸುತ್ತಾ, ಬಾಂಬು ಸಿಡಿಸುತ್ತಾ, ಮೂಗು ಮುಚ್ಚಿಕೊಳ್ಳುತ್ತಾ, ಮೈ ತುರುಸಿಕೊಳ್ಳುತ್ತಾ, ಕಂಬಿಗಳಿಗೆ, ಅಕ್ಕಪಕ್ಕದಲ್ಲಿದ್ದವರಿಗೆ ಒರಗಿಕೊಂಡು ಬಸ್ಸಿನಲ್ಲಿ ನೇತುಹಾಕಿಕೊಂಡಿದ್ದರು. ಕಂಡಕ್ಟರ್ ಒಬ್ಬ ಮಾತ್ರ ಅಂಡು ಸುಟ್ಟ ಬೆಕ್ಕಿನಂತೆ ಎಲ್ಲ ತರಹದ ವಾಸನೆಗಳನ್ನು ಅಲಕ್ಷಿಸಿ, ಹಿಂದಕ್ಕೂ ಮುಂದಕ್ಕೂ ಗಂಡಸರ ಕಾಲ್ತುಳಿದುಕೊಂಡು, ಹೆಂಗಸರ ಮೈಸವರಿಕೊಂಡು ಓಡಾಡುತ್ತಲೇ ಇದ್ದ. ಸಿಗ್ನಲ್ ಬಿಡಲೊಲ್ಲದು, ಗಾಡಿಗಳು ಮುಂದೋಗಲೊಲ್ಲದು, ಡ್ರೈವರಣ್ಣನಿಗೆ ಕೆಲಸವಿಲ್ಲದೆ ಹಾಗೇ ಹಿಂದೆ ನಿಂತಿದ್ದವರನ್ನು ನೋಡಿಕೊಂಡು ಬೆವರೊರೆಸಿಕೊಳ್ಳುತ್ತಿದ್ದ ಸಮಯದಲ್ಲಿ ಸಾರಕ್ಕಿ ಸಿಗ್ನಲ್ ಇನ್ನೇನು ಹಸಿರು ನಿಶಾನೆ ತೋರುವಷ್ಟರಲ್ಲಿ ಒಬ್ಬ ವಯಸ್ಕ ತಂಬಾಕಿನ ಗೂಡು ಬಸ್ ಹತ್ತಿಕೊಂಡಿತು. ನೀರನ್ನೇ ತೋರಿಸಿರದ ಮೂಳೆ ಮಾಂಸದ ತಡಿಕೆ, ಕುಪ್ಪಸ, ಸೀರೆಯೆಂದು ಹೆಸರಿಸಬಹುದಾದ ರಂಗು ರಂಗಿನ ಒಂದು ಮೊಳ ಕಡಿಮೆಯಿದ್ದ ಸೀರೆ, ರೆಡ್ ಲೈಟ್ ಇಲ್ಲದ ಖಾಲಿ ಹಣೆ. ತಂಬಾಕಿಗಾಗಿಯೇ ಇರುವ, ತಂಬಾಕಿನಿಂದ ಅಲಂಕರಿಸಿರುವ ಬಾಯೆಂಬೋ ಬಾಯಿ. ರಾಜ ಅಥವಾ ರಾಣಿ ಗಾಂಭೀರ್ಯದಲ್ಲಿ ಬಸ್ಸಿನ ಮುಂಭಾಗಿಲಲ್ಲಿ ಒಳಪ್ರವೇಶಿಸಿದರೆ ಸುತ್ತ ನಿಂತಿದ್ದ ಸೆಂಟ್ ಮುದ್ದೆಗಳು ಮುಖ ಸಿಂಡರಿಸಿಕೊಂಡು ತಂಬಾಕು ಗೂಡಿಗೆ ಗೌರವಸೂಚಕವಾಗಿ ಸರಿದು ರಾಜಮಾರ್ಗ ಮಾಡಿಕೊಟ್ಟರು. ಸಿಗ್ನಲ್ ನಿಂದ ಬಸ್ ತೆವಳಿ ಮುಂದಕ್ಕೆ ಹೋಗುವಷ್ಟರಲ್ಲಿ ಮೂರನೇ ಸಾಲಿನ ಆಸನದ ಬಳಿ ಕಂಬಿ ಹಿಡಿದು, ಸೆರಗೆಳೆದುಕೊಂಡು ಪ್ರತಿಷ್ಟಾಪಿತಳಾದಳು. ಮುಂದೊದಗಲಿತ್ತು ಮಜಬೂತಾದ ಮನರಂಜನೆಯೆಂದು ಮನುಷ್ಯಮಾತ್ರರಿಗೆ ಹೇಗೆ ಗೊತ್ತಾಗಬೇಕಿತ್ತು! ಮುಂದೆ!

ಸಾರಕ್ಕಿ ಬಸ್ ನಿಲ್ದಾಣದಲ್ಲಿ ಒಂದಷ್ಟು ಗಂಡಸರು ಹತ್ತಿದ ಕಾರಣ ಹಿಂದಿದ್ದ ಕಂಡಕ್ಟರ್ ಎಲ್ಲರಿಗೂ ಟಿಕೆಟ್ ಕೊಟ್ಟು, ಚಿಲ್ಲರೆ ಕೊಟ್ಟು, ಮುಂದೆ ಹೋಗುವಷ್ಟರಲ್ಲಿ ಬನಶಂಕರಿ ಸ್ಟೇಜ್ ತಂಗುದಾಣ, ಹಾಗಾಗಿ ಎಲ್ಲಾ ಲೆಕ್ಕ ಬರೆದಿಟ್ಟು ಬನಶಂಕರಿಯಲ್ಲಿ ತಮ್ಮ ಬಸ್ ಅನ್ನು ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾ, ಶಿವಾಜಿನಗರ್ ಶಿವಾಜಿನಗರ್ ಎಂದು ಬಾಗಿಲ ಬಳಿ ನಿಂತು ಕೂಗಿಕೊಳ್ಳುತ್ತಿದ್ದರೂ, ಡಬ್ಬಲ್ ರೋಡ್ ಹೋಗುತ್ತಾ, ರಿಚ್ಮಂಡ್ ಸರ್ಕಲ್ ಹೋಗುತ್ತಾ, ಶಿವಾಜಿನಗರ್ ಹೋಗುತ್ತಾ ಎಂದು ಕೇಳುತ್ತಿದ್ದ ಬುದ್ದಿಜೀವಿಗಳಿಗೆ ತಾಳ್ಮೆಯಿಂದ ಉತ್ತರಿಸಿ, ಬಸ್ ಭರ್ತಿಯಾದ ನಂತರ ರೈಟ್ ಹೇಳಿ ಮುಂದಿನ ಸಾಲುಗಳ ಕಡೆಗೆ ಮೂಗಿಟ್ಟಾಗಲೇ ಎಮ್ ಜಿ ರೋಡು, ರಿಚ್ಮಂಡ್ ಸರ್ಕಲ್ ಗಳ ವಾಸನೆಯ ನಡುವೆ ಇದಾವುದೋ ಅಪರಿಚಿತ ಕೆಂಗೇರಿ ವಾಸನೆ ಬಡಿಯುತ್ತಿರುವುದಲ್ಲಾ ಎಂದು ಅಲ್ಲೇ ಅನುಮಾನಿಸಿ, ಅದರ ಮೂಲ ಎಲ್ಲಿದೆ ಎಂದು ಥಟ್ಟನೆ ಪತ್ತೆ ಹಚ್ಚಿ, ಎಲ್ಲರನ್ನೂ ಟಿಕೇಟ್ “ತೊಗೊಳ್ಳಿ” ಎಂಬುದರ ಬದಲು ಈಗ ಟಿಕೇಟ್ ಬೇಕಾ ಎಂದು ಕೇಳುತ್ತಾ ತಂಬಾಕಿನ ಮೂಟೆಯನ್ನು ಟಿಕೇಟ್ ಬೇಕೇನಮ್ಮಾ ಎಂದು ಕೇಳಲು, ಬೇಡ ಎಂದು ಹೇಳಿ ಸಿಕ್ಕಿದ್ದ ಸೀಟಿನಲ್ಲಿ ಕಿಟಕಿಯ ಕಡೆ ನೋಡುತ್ತಾ ಕುಳಿತಿತು ಆ ಆಕೃತಿ. ಹೋ ಪಾಸ್ ಇರಬಹುದು ಎಂದು ಹಿಂದಿದ್ದ ಒಂದು ರಾಶಿ ಓರಿಗಳಲ್ಲಿ ಕೆಲವರಿಗೆ ಟಿಕೇಟ್ ಕೊಟ್ಟು ಕೆಲವರಿಗೆ ಅರ್ಧ ರೇಟಿಗೆ ಚಿಲ್ಲರೆಯನ್ನು ಮಾತ್ರ ಕೊಟ್ಟು ಮತ್ತೆ ಮುಂದೆ ಹೋಗುತ್ತಿದ್ದ ಕಂಡಕ್ಟರಿಗೆ ಎಮ್ ಜಿ ರೋಡಿನ ಸೆಂಟೊಂದು ಸಾರ್ ಆ ಯಮ್ಮ ಟಿಕೇಟ್ ತೊಗೊಂಡಿಲ್ಲ ನೋಡಿ ಎಂದು ಪಿನ್ ಚುಚ್ಚಿದಳು. ಕಂಡಕ್ಟರ್ ಆಗ ಹುಶಾರಾಗಿ, ಮೋ.. ಟಿಕೇಟ್ ಬೇಕೇನಮ್ಮ ಎಂದು ಮತ್ತೆ ಕೇಳಲು, ಬೇಡಪ್ಪೊ ಎಂದು ಮತ್ತೆ ಕಿಟಕಿಗೆ ಮುಖ ಅಂಟಿಸಿದಳು. ಪಾಸ್ ಇದ್ಯಾ?.. ಇಲ್ಲಾ!… ಮತ್ತೆ ಟಿಕೇಟ್ ಬೇಡಾ ಅಂತೀಯಾ, ಟಿಕೇಟ್ ತೊಗೋ!… ನಂಗ್ಬ್ಯಾಡಾ!... ಅರೆರೆ ಇದಾವುದಪ್ಪಾ ಕಿರೀಕು ಇವತ್ತು ಎಂದು ಏನು ಉತ್ತರಿಸುವುದೆಂದು ಕಂಡಕ್ಟರ್ ಒಂದು ಕ್ಷಣ ಯೋಚಿಸುವಷ್ಟರಲ್ಲಿ ಎಲ್ಲಾ ನಾರಿ ಮಣಿಗಳು, ಮಲ್ಲಿಕಾ ಶೆರಾವತ್ ಕೂತಿದ್ದರೆ ಯಾವ ಮುಖಭಾವದಲ್ಲಿ ನೋಡಬಹುದೋ ಥೇಟ್ ಅದೇ ಮುಖಮುದ್ರೆಯಲ್ಲಿ ಅವಳನ್ನು ದಿಟ್ಟಿಸುತ್ತಿದ್ದರು. ಇತ್ತ ಇನ್ನೂ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದ ಗಂಡಸರು ತಮ್ಮ ಪ್ರಪಂಚದಲ್ಲಿ ಮುಳುಗಿದ್ದರು. ಮೋ ಯಾಕೆ, ಎನ್ ನಿಮ್ಮಪ್ಪಂದ ಬಸ್ಸು, ಪ್ರಯಾಣ ಮಾಡ್ಬೇಕಂದ್ರೆ ಟಿಕೇಟ್ ತೊಗೊಬೇಕು, ಸುಮ್ಮನೆ ಎಲ್ಲಿಗೆ ಅಂತ ಹೇಳು ಎಂದು ಕೊಂಚ ಬಿರುಸಿನ ಧ್ವನಿಯಲ್ಲಿ ಕಂಡಕ್ಟರ್, ಸಿವ್ವಜ್ಜಿನಗರ ಎಂದಳು ಆಕೆ. ತೊಗೊ ಎಂದು ಹನ್ನೆರಡರ ಟಿಕೇಟು ಹರಿದು ಕೊಟ್ಟರೆ ಇಸಿದುಕೊಂಡು ಸುಮ್ಮನಾದಳು. ಮೋ… ಯಾಕೆಂಗಿದೆ ಮೈಗೆ ದುಡ್ಡು ಕೊಡು ಎಂದರೆ, ದುಡ್ಯಾಕೆ ಎಂದಳು… ಹೋ ನೀನ್ಯಾಕೋ ಇವತ್ತು ಮನೆಗೆ ಹೋಗಲ್ಲ ಅಂತ ಹೇಳಿ ಬಂದಿದ್ಯ ಅಂತ ಕಾಣುತ್ತೆ, ಮುಚ್ಕೊಂಡ್ ಟಿಕೇಟ್ ತೊಗೊಂಡಿರೋ ದುಡ್ಡು ಕೊಡು ೧೨ ರುಪಾಯಿ ಎಂದು ಗರಂ ಆಗಿ ಕೇಳಿದರೂ ಮತಿಲ್ಲ. ಇತ್ತ ಕಂಡಕ್ಟರಿಗೆ ಪಿತ್ತ ನೆತ್ತಿಗೇರುತ್ತಿದ್ದರೆ, ಅತ್ತ ಇಲ್ಲಿ ಏನೋ ವಿಷಯ ನಡೆಯುತ್ತಿದೆ ಎಂದು ಹಿಂದೆ ನಿಂತಿದ್ದವರಿಗೂ ವಿಷಯ ತಲುಪಿ ಎಲ್ಲಾ ತಮ್ಮ ತಮ್ಮ ಪ್ರಪಂಚದಿಂದ ಹೊರಬಿದ್ದು, ಏನು, ಏನು ಎಂದು ಕೇಳುತ್ತಾ, ಬಸ್ ಎಂಬ ಸಾಗುವ ಪ್ರಪಂಚದಲ್ಲಿ, ಕುಳಿತಿದ್ದವರು ಕೂಡ ನಿಂತು ಮಿಕಿ ಮಿಕಿ ನೋಡುತ್ತಿದ್ದರು. ಮುಂದೆ!

ಮೋ.. ಯಾಕೋ ನಿಂದು ಜಾಸ್ತಿ ಆಯ್ತು ಎದ್ದೇಳು ಮೇಲೆ, ಏನ್ ಆಟ ಆಡ್ತಿದ್ಯ ಇಲ್ಲಿ ನಮ್ ಜೊತೆ, ದುಡ್ಡು ಕೊಡು ಇಲ್ಲ ಟಿಕೇಟ್ ವಾಪಾಸ್ ಕೊಟ್ಟು ಇಳ್ಕೋ ಎಂದು ಅಬ್ಬರಿಸಿದ ಕಂಡಕ್ಟರ್ ಗೆ ಕೇರ್ ಮಾಡದೆ ಹೇಳಿದ್ದು ತನಗಲ್ಲವೆಂಬಂತೆ ಕಿಟಕಿಗೆ ಮುಖ ಅಂಟಿಸಿದ್ದಳು. ಅಷ್ಟೊತ್ತೂ ಸುಮ್ಮನಿದ್ದ ನಾರಿಮಣಿಗಳು ಅದೇನಮ್ಮಾ ನಿಂಗೆ ತಾನೆ ಹೇಳ್ತಿರೋದು, ಟಿಕೇಟ್ ತೊಗೊಳ್ಳೋಕೆ ಏನ್ ಪ್ರೋಬ್ಲಮ್ ನಿನಗೆ, ಸುಮ್ಮನೆ ತೊಗೊಳ್ರೀ, ಏನ್ ಇಲ್ಲಿ ಎಲ್ಲಾ ಅರಚ್ಕೊಳ್ತಿದ್ರೂ ಕೂತಿರೋದ್ ನೋಡು, ಯಾಕಮ್ಮಾ ಬಾಯಿ ಮಾತಿಗೆ ಬಗ್ಗಲ್ವ ಸುಮ್ಮನೆ ಟಿಕೇಟ್ ತೊಗೊ ಎಂದು ಮಹಿಳೆಯ ವಿರುದ್ಧವೇ ಮಹಿಳಾಂದೋಲನ ಶುರುಮಾಡಿದರು. ಕಂಡಕ್ಟರೂ ಸೇರಿಕೊಂಡು ಮೋ ಎದ್ದೇಳಮ್ಮ ಮೇಲೆ ಮಾನ ಮರ್ಯಾದೆಯಿಂದ ಹೇಳಿದ್ರೆ ಎಲ್ಲಿ ಅರ್ಥ ಆಗುತ್ತೆ ನಿಮಗೆ ಎಂದು ಕುಸ್ತಿಗೆ ಇಳಿಯುವವನಂತೆ ಹೇಳಲು. ಹಯ್ಯಾ ತಗಳಯ್ಯಾ ಎಂದು ಹೊಗೆಸೊಪ್ಪಿನ ಚೀಲದಿಂದ ಹೆಕ್ಕಿ, ಹೆಕ್ಕಿ ಎರಡು ೨ ರೂಪಾಯಿಯ, ಒಂದು ೧ ರುಪಾಯಿಯ ಚಿಲ್ಲರೆ ತೆಗೆದು ತೊಗೊ ಎಂದು ಕೈ ಒಡ್ಡಿದಳು. ತೆಗೆದು ಬಾರಿಸಿಬಿಡ್ತೀನಿ, ಏನ್ ಬೆಳಗ್ಗೆ ಬೆಳಗ್ಗೆ ಪ್ಯಾಕೆಟ್ ಹಾಕೊಂಬಂದಿದ್ಯ ಎಂದು ಕಂಡಕ್ಟರ್ ಘರ್ಜಿಸುತ್ತಿರಲು, ಏನು ತೆಗೆದು ಬಾರಿಸ್ತಾನೋ ಎಂದು ನನ್ನ ಹಿಂದಿದ್ದ ಕೋಣನಕುಂಟೆ ಹುಡುಗರು, ಪ್ಯಾಕೆಟ್ಟೇ ಹಾಕಿದಾಳೆ ಅಂತ ಅಷ್ಟು ಖಚಿತವಾಗಿ ಹೇಗೆ ನಿರ್ಧರಿಸಿದ ಎಂದು ನನ್ನ ತಲೆ ಹೇಳುತ್ತಿರುವಾಗಲೇ. ಮುಂದೇನು ಎಂದು ಎಲ್ಲಾ ಬಾಯಿ ಕಳೆದಿದ್ದರು. ಇರಾದೇ ಇಷ್ಟು, ಬೇಕಾ ತಕಾ, ಇಲ್ಲ ಓಗು ಎಂದಳು ಖದರ್ರಾಗಿ. ಆಗ ಇಡೀ ಬಸ್ಸಿನಲ್ಲಿದ್ದ ಬುದ್ದಿಜೀವಿಗಳು ತಮ್ಮ ಆಸನಗಳನ್ನೂ ಮರೆತು ಹೋಗಿ ಮೋ ಏನ್ ಆಗ್ಲಿಂದ ನೋಡ್ತಾ ಇದ್ದೀವಿ ಸುಮ್ಮನೆ ಟಿಕೇಟ್ ತೊಗೊಳ್ಳೋಕ್ ಆಗಲ್ವ ನಿಂಗೆ, ತೊಗೊ ಇಲ್ಲಾ ಇಳಿದುಹೋಗು ಸುಮ್ಮನೆ ಎಲ್ರಿಗೂ ತೊಂದರೆ ಕೊಡ್ಬೇಡಾ ಇಲ್ಲಿ, ಕಂಡಕ್ಟರಿಗೆ ಬೇರೆ ಕೆಲಸ ಇಲ್ಲ ಅನ್ಕೊಂಡ್ಯಾ, ಇಂಥಿವೇ ಮೊದಲಾದ ಪಂಚ್ ಡೈಲಾಗ್ ಗಳನ್ನು ಸ್ವಯಂಪ್ರೇರಿತರಾಗಿ ಹೇಳಿ ಮುಂದೇನು ಮಾಡುವಳೆಂದು ಕಾದುನೋಡುತ್ತಿರಲು. ಯಾರ ಮಾತಿಗೂ ಸೊಪ್ಪು ಹಾಕದೆ, ತನ್ನ ಪಾಡಿಗೆ ತಾನು ಹೊಗೆ ಸೊಪ್ಪು ತುಪ್ಪುಕ್ಕನೆ ಕಿಟಕಿಯಿಂದ ಹೊರಗುಗುಳಿತು ಅದು. ಅದು ನೇರವಾಗಿ ಕಂಡಕ್ಟರ್ ಮುಖದ ಮೇಲೇ ಉಗಿದಂತಾಗಿ, ಲಂಕೆಯನ್ನು ಸುಟ್ಟಾಗ ಆಗಿದ್ದ ರಾವಣಾಸುರನಂತೆ ಕುದಿಯುತ್ತಾ, ಜನರೊಂದಿಗೆ ಸೇರಿ, ಎಲ್ಲರೂ ಬೊಗಳುವ ಸದ್ದಿನಲ್ಲಿ ಏನೋ ಒಂದು ಪಂಚ್ ಡೈಲಾಗ್ ತಾನೂ ಹೇಳಿದ್ದು ನನಗೂ ಕೇಳಿಸಲಿಲ್ಲ ದಯವಿಟ್ಟು ಕ್ಷಮಿಸಿ. ಏನು ಒಗ್ಗಟ್ಟು ಏನು ಕಥೆ ನಮ್ಮ ಜನರಲ್ಲಿ, ಆ ದೃಶ್ಯವನ್ನು ನೋಡುತ್ತಲಿದ್ದ ನನ್ನ ಕಣ್ಣುಗಳೇ ಧನ್ಯ. ಆಗ ನನಗೆ ಅನಿಸಿದ ಒಂದೇ ಸಂಗತಿಯೆಂದರೆ ನಮ್ಮ ದೇಶದ ಎಷ್ಟೋ ಕ್ಷುದ್ರ ಸಮಸ್ಯೆಗಳಿಗೆ ಪರಿಹಾರವೆಂದರೆ ಒಂದು ದೊಡ್ಡ ಸಮಸ್ಯೆ ಬಂದೆರಗಬೇಕು ಆಗ, ಎಲ್ಲಾ ತೊಂದರೆಗಳು, ವೈಶಮ್ಯಗಳನ್ನು ಮರೆತು ನಾವು ಸಾಮ್ಯ ಮೆರೆಯುತ್ತೇವೇನೋ ಎಂದು ಬಿ ಎಮ್ ಟಿ ಸಿ ಬಸ್ಸಿನಡಿಯಲ್ಲಿ, ಆ ತಂಬಾಕು ಗೂಡಿನ ಪ್ರಸಂಗದಿಂದ ನನಗೆ ಜ್ಞಾನೋದಯವಾಯ್ತು. ಮನಸಿನಲ್ಲೇ ವಂದಿಸಿದೆ ಆ ಮಹಾ ತಾಯಿಗೆ. ಮುಂದೇನು!

ಎಲ್ಲಾ ಬೊಗಳುವ ನಾಯಿಗಳೇ ಇದೆ ಎಂದು ತಿಳಿದಿದ್ದ ನಾನು, ಬಸ್ ಡ್ರೈವರ್, ಮತ್ತು ಎಲ್ಲಾ ಪ್ರಯಾಣಿಕರ ಒಮ್ಮತದ ಬೆಂಬಲದಿಂದಾಗಿ ಹುರುಪಿನಲ್ಲಿದ್ದ ಕಂಡಕ್ಟರ್ ಸೀದಾ ಆಕೆಯ ರಟ್ಟೆಯನ್ನು ಹಿಡಿದೆಳೆಯುತ್ತಾ, ನೆಡಿ ಆಚೆಗೆ ಎಂದು ಗುಡುಗಿದ. ಆ ದೇಹವೆಂಬ ಗೂಡು ಅಲುಗಾಡಲಿಲ್ಲ, ಕೊಸರಿಕೊಂಡು ಕೂತೇ ಇತ್ತು. ಅಷ್ಟರಲ್ಲಿ ತಾವುಗಳು ನಾರಿ ಮಣಿಗಳು, ತಪ್ಪು ಏನೇ ಇರಲಿ ಇನ್ನೊಂದು ನಾರಿ ಮಣಿಗೆ ಬೆಂಬಲಿಸಬೇಕೆಂದು ಅದಾವುದೋ ಒಂದು ಮುಂದಿದ್ದ ಜೀವಕ್ಕೆ ಅನ್ನಿಸಿರಬಹುದು. ಹೋಗಲಿ ಬಿಡಿ ಸಾರ್ ಟಿಕೇಟ್ ಗೆ ನಾನೇ ದುಡ್ಡು ಕೊಡುತ್ತೀನಿ. ಬಿಡಿ ಕಿವುಡರ ಹತ್ತಿರ ಬಡ್ಕೊಂಡ್ರೆ ಏನ್ ಲಾಭ ಎಂದು ಹೀರೋಯಿನ್ ಆಗಲೆಂದು ನೋಡಿದರೆ ಕಂಡಕ್ಟರ್ ಗೆ ಆ ಗೂಡು ಮಾಡಿರುವ ಅವಮಾನ ತಡೆಯಲಾಗದೆ, ನೀವ್ ಯಾಕ್ ಮೇಡಮ್ ಕೊಡ್ತೀರಾ, ಕೊಡಲಿ ಅವಳೇ, ಇಂಥವರಿಗೆ ಅಯ್ಯೋ ಪಾಪ ಅಂದ್ರೆ ದಿನಕ್ಕೊಬ್ರು ಇಂಥವರು ಹುಟ್ಕೋತಾರೆ ಎಂದು ಹೇಳಿ ಅಣ್ಣಾ ಗಾಡಿ ಸೈಡ್ ಹಾಕು, ಒಂದೋ ಇವಳು ದುಡ್ಡು ಕೊಡಲಿ, ಇಲ್ಲಾ ಎದ್ದೋಗಲಿ ಎಂದು ಗಾಡಿ ಸೈಡ್ ಹಾಕಿಸಿ ಕೂಗಾಡಿ, ಎಲ್ಲರೂ ಸೇರಿ ಬಯ್ದು, ಈಗ ಕಂಡಕ್ಟರ್, ಡ್ರೈವರ್ ಮೇಲೆಯೇ ರೀ, ನಿಮ್ ಸಮಸ್ಯೆಗೆ ನಮ್ಮನ್ನ ಯಾಕ್ರೀ ಬಲಿಪಶು ಮಾಡ್ತಿದೀರಾ. ಮೊದಲೇ ಆಫೀಸಿಗೆ ಲೇಟ್ ಆಗಿದೆ ಹೊರಡ್ತೀರೋ ಇಲ್ವೋ ಈಗ ಎಂದು ತಿರುಗಿ ಬಿದ್ದಿದ್ದನ್ನು ಕಂಡು, ವಿಧಿಯಿಲ್ಲದೇ, ಪಾಸ್ ಇದ್ದ ಮಂದಿ ಇನ್ನೊಂದು ಬಸ್ ಹಿಡಿದು ಹೋದ ನಂತರ, ಬಸ್ ಮತ್ತೆ ಹೊರಡಿತು. ಗುಡುಗು, ಸಿಡಿಲು, ಮಳೆ ಏನೇ ಬರಲಿ ತಾನು ಶಿವಾಜಿನಗರದಲ್ಲೇ ಇಳಿಯುವುದೆಂದು ಸೀಟಿಗೆ ಬೇರುಬಿಟ್ಟಿತ್ತು ಗೂಡು. ಕಮರ್ಷಿಯಲ್ ಬ್ರೇಕ್ ನಂತರ ಪ್ರಯಾಣವೆಂಬ ಎಪಿಸೋಡ್ ಮತ್ತೆ ಶುರುವಾಯ್ತು. ಮುಂದೆ!

ಇವಳ ಮೇಲೆ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ತೀರ್ಮಾನಿಸಿ ಕಂಡಕ್ಟರ್ ಡ್ರೈವರ್ ದಾರಿಯುದ್ದಕ್ಕೂ ಬಯ್ಯುತ್ತಲೇ, ಬರಲಿ ಚೆಕಿಂಗ್ ಗೆ ಯಾರಾದರೂ ಹಿಡಿದು ಕೊಡಲಿಲ್ಲ ಅಂದ್ರೆ ಕೇಳು ಎಂದು ಬೆದರಿಕೆ ಹಾಕಿದರೂ ಕ್ಯಾರೇ ಕುತ್ತೇ ಅನ್ನದೇ ಕೂತಿತ್ತು. ಅದೆಂಗ್ ಹೋಗ್ತೀಯಾ ನೋಡ್ಕೋತೀನಿ ನೀನು ದುಡ್ಡು ಕೊಡದೇ ಎಂದು ಗುಟುರು ಹಾಕಿದರೂ, ಊಹು.. ಹೀಗೇ ಶಿವಾಜಿನಗರ ತಲುಪುವಷ್ಟರಲ್ಲಿ ಕಂಡಕ್ಟರ್, ಡ್ರೈವರ್ ಸೋದರ ಮಾವಂದಿರನ್ನು ಫೋನ್ ಮಾಡಿ ಶಿವಾಜಿನಗರದ ಬಸ್ ಸ್ಟಾಂಡಿನಲ್ಲಿ ಕಲೆ ಹಾಕಿ ಅಂತೂ ನಾವು ಬೆಂಬಲ ನೀಡ್ತೀವಿ ಎಂದು ಹೇಳಿದ್ದ ಹಲವರಲ್ಲಿ ಕೆಲವರನ್ನು ಮಾತ್ರ ಸಾಕ್ಷಿಗೆ ಉಳಿಸಿಕೊಂಡು, ಆಗ ತನ್ನ ಉಡದಂತಹ ಸೀಟ್ ಹಿಡಿತವನ್ನು ಬಿಟ್ಟು ತನ್ನ ಇಚ್ಚೆಯಿಂದಲೇ ಇಳಿದುಬಂದು ಪ್ರಶ್ನೋತ್ತರ ಸುತ್ತಿಗೆ ಸಜ್ಜಾದಳು. ಅಂದ ಹಾಗೆ ನಾನು ರಿಚ್ಮಂಡ್ ಸರ್ಕಲ್ ನಲ್ಲಿ ಇಳಿಯಬೇಕಿತ್ತು. ಕಥೆಯನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರೆ ನಾನು ಬದುಕುಳಿಯುತ್ತಿರಲಿಲ್ಲ ಹಾಗಾಗಿ ಇನ್ನೂ ಶಿವಾಜಿನಗರದಲ್ಲಿನ ನಾಟಕವನ್ನ ಕಣ್ತುಂಬಿಸಿಕೊಳ್ಳುತ್ತಿದ್ದೆ. ಹಾಗೆ ಮಾಡ್ತೀನಿ ಹೀಗೆ ಮಾಡ್ತೀನಿ ಎಂದು ಅರಚುತ್ತಿದ್ದವರೆಲ್ಲರೂ ಕ್ರಮೇಣ ಮಾಯವಾದರು. ಕಂಡಕ್ಟರ್, ಡ್ರೈವರ್, ಚೆಕಿಂಗ್ ಇನ್ಸ್ಪೆಕ್ಟರ್ಗಳೀರ್ವರು, ಮತ್ತು ದೂರದಲ್ಲಿ ದಾರಿಹೋಕನಂತೆ ನಾನು, ಬ್ಯಾಕ್ ಗ್ರೌಂಡನಲ್ಲಿ ಖಾಲಿ ಬಸ್ಸು. ಏನಮ್ಮಾ, ದುಡ್ಡು ಕೊಡು ಏನ್ ನಿನ್ ಸಮಸ್ಯೆ ಎಂದರೆ, ನೇರವಾಗಿ ದುಡ್ಡಿಲ್ಲಾ ಎಂದಳು, ನಿನ್ನ ಗಂಡ, ಮಕ್ಕಳು, ಯಾರಾದರೂ ಗುರುತು ಪರಿಚಯದವರಿಲ್ವೇನಮ್ಮಾ ಎಂದರೆ, ಯಾರೂ ಇಲ್ಲ ಎಂದಳು, ಅಲ್ಲಾ ದುಡ್ಡಿಲ್ಲಾ ಅಂದ್ರೆ ಬಸ್ ಯಾಕ್ ಹತ್ತಿದೆ ಎಂದರೆ, ಶಿವಾಜಿನಗರದಲ್ಲಿ ಕೆಲಸ ಐತೆ ಎಂದಳು. ಸರಿ ದಂಡ ಕಟ್ಲಿಲ್ಲ ಅಂದ್ರೆ ಮೂರು ತಿಂಗಳು ಸಜಾ ಕಣಮ್ಮಾ ಎಂದು ಶಾಂತವಾಗಿಯೇ ಅಧಿಕಾರಿಗಳು ಹೇಳಿದರೆ ಆಯ್ತು ಬುದ್ದಿ ಆರು ತಿಂಗಳು ಬೇಕಾದ್ರು ಹಾಕಿ, ಏನೋ ನಿಮ್ಮ ರುಣದಲ್ಲಿ ತಿನ್ಕೊಂಡು ಇರ್ತೀನಿ ಎಂದು ಬೆದರಿಕೆ ಹಾಕಿದಳು. ಅಧಿಕಾರಿಗಳು ಕಂಡಕ್ಟರನ್ನೊಮ್ಮೆ, ಡ್ರೈವರನ್ನೊಮ್ಮೆ ನೋಡಿದರು, ಆ ನೋಟದಲ್ಲಿ ಏನಿತ್ತೋ ನಾನರಿಯೆ. ಎಲ್ಲಾ ಬಾಲ ಮುದುರಿದ ನಾಯಿಗಳಂತೆ ಹೋದರು. ಸಿಂಹಿಣಿಯಂತೆ ಆಕೆ ನಡೆದು ಸೀದಾ ಹೋದಳು. ರೂಲೀಸು ಮುರಿದರೆ ಆಗೋದು ಇಷ್ಟೇನಾ? ಎಂದು ಒಮ್ಮೆ ಆಕೆಯ ಕೈ ಕುಲುಕಬೇಕೆನಿಸಿದರೂ, ಟೀಮ್ ಲೀಡರ್ ಫೋನ್ ಬರುತ್ತಿದ್ದುದರಿಂದ ಹಾಗೇ ಬಂದೆ. ಮುಂದೆ! ಹಹಹಹ…
                                                         
-ಹೇಮಂತ

No comments:

Post a Comment