ಆಹಾ!
ಆ ಮನೆಯೆಂಬೋ ಮನೆಯನ್ನು ಯಾವ ಪದಗಳಲ್ಲಿ ವರ್ಣಿಸುವುದು. ತಲೆಯ ಕೆಳಗೆ ಮುಖ, ಮುಖದ ಕೆಳಗೆ ಕುತ್ತಿಗೆ,
ಕುತ್ತಿಗೆ ಕೆಳಗೆ ಭುಜ, ಭುಜದಿಂದ ಇಳಿಬಿಟ್ಟ ಕೈಗಳು ನಡುವೆ ಎದೆ, ಹೊಟ್ಟೆಯೋಪಾದಿಯಾಗಿ ಕಾಲುಗುರಿನವರೆಗೂ
ವಿನ್ಯಾಸಗೊಂಡಿದ್ದರೆ ಮಾತ್ರ ಅದನ್ನು ದೇಹವೆಂದು ಕರೆಯಬಹುದಲ್ಲವೇ. ತಲೆ, ಕಾಲು, ಕೈ, ಹೊಟ್ಟೆ, ಸೊಂಟ,
ಎದೆ ಎಲ್ಲ ಹೆಂಗಂದರೆ ಹಂಗೆ ಪೇರಿಸಿಟ್ಟಿದ್ದರೆ ದೇಹವೆಂದು ಕರೆಯಲು ಹೇಗೆ ಸಾಧ್ಯ, ಆದರೂ ಆ ಅಪೂರ್ವ
ಕಲಾಕೃತಿಯನ್ನು ಎರಡು ಮಾನವ ಜೀವಗಳು ಮತ್ತು ಸಹಸ್ರ ಮಾನವೇತರ ಜೀವಿಗಳು ವಾಸಿಸುತ್ತಿದ್ದರೆಂಬ ಏಕಮಾತ್ರ
ಕಾರಣದಿಂದ ಮನೆಯೆಂದೇ ಕರೆಯಬೇಕು. ಹಾಲ್ ನ ಶೆಲ್ಫ್ ನಲ್ಲಿ ತುಂಬಿಟ್ಟಿದ್ದ ಅಡುಗೆ ಸಾಮಾನುಗಳ ಡಬ್ಬಿಗಳಲ್ಲಿಂದ
ಸಿಕ್ಕ ಸಿಕ್ಕದ್ದನ್ನ ಕೊಳ್ಳೆ ಹೊಡೆದು ಸಾಲಾಗಿ ಸಾಗಿಸುತ್ತಿದ್ದ ಇರುವೆಗಳು, ಮನೆಯ ತುಂಬಾ ಆಕ್ರಮಿಸಿದ್ದ
ಜೇಡರ ಹುಳುಗಳು, ಆಡುಗೆಮನೆಗೆ ಎಲ್ಲರಿಗೂ ನಿರ್ಬಂಧವಿದ್ದರೂ ರಾಜಾರೋಷವಾಗಿ ತನ್ನ ಅಧಿಪತ್ಯ ಸಾಧಿಸಿದ್ದ
ಇಲಿಗಳು, ಮತ್ತು ಇಲಿಗಳನ್ನೂ ಗಣನೆಗೆ ತೆಗೆದುಕೊಳ್ಳದ ಜಿರಳೆಗಳು. ಮನೆಯಲ್ಲಿ ಬೇರಾವ ಆಹಾರ ಪದಾರ್ಥಗಳನ್ನೂ
ಸೇವಿಸದೇ ಇರುವ ಎರಡು ಮಾನವ ಜೀವಿಗಳ ರಕ್ತವನ್ನೇ ಅವಲಂಬಿಸಿ ರಾತ್ರಿಗಾಗಿಯೇ ಕಾದು ಇಡೀ ದಿನ ಅವಿತುಕುಳಿತಿರುವ
ಮಲಗುವ ಕೋಣೆಯಲ್ಲಿನ ತಿಗಣೆಗಳು, ಬಾತ್ರೂಮಿನಲ್ಲಿ ಸದಾ ಬರುತ್ತಿದ್ದ ಘಮ ಘಮ ಸುವಾಸನೆಗೆ, ಎಲ್ಲೆಲ್ಲಿಂದಲೋ
ತಮ್ಮ ಬಂಧುಗಳನ್ನೆಲ್ಲಾ ಕರೆದುಕೊಂಡು ಬಂದು ವಾಸವಾಗಿದ್ದ ಸೊಳ್ಳೆಗಳು ಮತ್ತು ನೊಣಗಳು, ಅಕ್ಕಿಯಲ್ಲಿ,
ಹಳೇ ರಾಗಿಯಲ್ಲಿ, ಬಳಕೆಗೇ ಬಾರದೆ ಸತ್ತು ಹೋಗಿದ್ದ ಹುರುಳಿ ಕಾಳಿನಲ್ಲಿ ತನ್ನ ವಂಶಾಭಿವೃದ್ಧಿ ಮಾಡಿಕೊಂಡಿದ್ದ
ಹಲವು ನುಸಿ ಕ್ರಿಮಿಗಳ ಹಲವಾರು ತಲೆಮಾರುಗಳು. ಇವೆಲ್ಲದರ ನಡುವೆ ಸಹಬಾಳ್ವೆ ನಡೆಸುತ್ತಿದ್ದ ಅಪ್ಪನೆಂಬ
ಮಗನೂ, ಮಗನೆಂಬ ಅಪ್ಪನೂ!
ನಡುಮನೆಯ
ಬಲಭಾಗವನ್ನು ಅಲಂಕರಿಸಿದ್ದ ಸಿಲಿಂಡರ್ ತಲೆಯ ಮೇಲಿದ್ದ ಟೇಬಲ್ ಮೇಲೆ ಕುಕ್ಕುರುಬಡಿದಿದ್ದ ಸ್ಟೋವು
ಅದರ ಮೇಲೆ ಅಂಡುರಿಸಿಕೊಂಡು ಸುಯ್ಯನೇ ಬಾಯಿ ಬಡಿದುಕೊಳ್ಳುತ್ತಿದ್ದ ಕುಕ್ಕರಿಗೆ ಉತ್ತರವೆಂಬಂತೆ ಬಚ್ಚಲಿಂದ
“ಲೋ ಅಪ್ಪ ಸ್ಟೋವ್ ಆಫ್ ಮಾಡೋ..” ಎಂದು ಧ್ವನಿ ಬರಲು ಸ್ಕ್ರಾಪ್ ಅಂಗಡಿಯ ತದ್ರೂಪದಂತಿದ್ದ ಬೆಡ್ರೂಮಿನಲ್ಲಿ
ಸ್ಕೂಲ್ ಶರ್ಟಿನ ಗುಂಡಿ ಹೊಲಿದುಕೊಳ್ಳುತ್ತಿದ್ದ ಅಪ್ಪನೆಂಬ ಮಗನು “ಮಗಾ…, ನಿಂದ್ಯಾಕೋ ಓವರಾಯ್ತು”
ಎಂದು ಹೇಳಿ ಸೂಜಿಯೊಂದಿಗಿದ್ದ ದಾರ ಬಾಯಲ್ಲಿ ಕಚ್ಚಿ ಕತ್ತರಿಸುತ್ತಾ ಬಂದು ಸ್ಟೋವ್ ಆರಿಸುವನು. ರೂಪಕಾಲಂಕಾರದಂತೆ
ಸ್ಟೋವ್ ಬಾಯಿ ಮುಚ್ಚುವುದು. ಪ್ಯಾಂಟು ಮೇಲೆಳೆಯುತ್ತಾ “ಇವತ್ತೂ ಪುಲಾವಾ, ದಿನಾ ಅದೇ ತಿಂದು ತಿಂದೂ
ಸಾಕಾಗೋಯ್ತು” ಎಂದು ಕೇಳಿಸುವಂತೆಯೇ ಅಪ್ಪನೆಂಬ ಮಗನು ಗೊಣಗಲು, ಮಗನೆಂಬ ಅಪ್ಪ ಸ್ನಾನ ಮುಗಿಸಿ ಬಚ್ಚಲು
ಮನೆಯ ಬಾಗಿಲಲ್ಲಿ ಕಾಲೊರೆಸುತ್ತಾ “ಇಲ್ಲ ಕಣೋ ಇವತ್ತು ಬಿಸಿ ಬೇಳೇ ಬಾತ್, ಆಹಾ ಘಮ್ಮಂತಿದೆ ವಾಸನೆ”
ಎಂದು ತನ್ನ ನಳಪಾಕವನ್ನು ತಾನೇ ಹೊಗಳುವನು. ಕುಕ್ಕರ್ ಕೂಡ ಒಳಗೊಳಗೇ ಕಿಸಕ್ಕೆಂದು ನಗುವಂತೆ ಭಾಸವಾಗಿ
ಮೇಲೇರಿದ್ದವನು ಕೆಳಗಿಳಿಯುವನು. ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಛೇಡಿಸುತ್ತಾ, ಮಾಡಿದ್ದುಣ್ಣೋ ಮಹರಾಯ
ಎಂಬಂತೆ ಹೊಟ್ಟೆಗೂ ಬುತ್ತಿಗೂ ಸಾಧ್ಯವಾದಷ್ಟು ತುಂಬಿಕೊಂಡು ಆಫೀಸಿಗೆ ಮತ್ತು ಸ್ಕೂಲಿನ ಕಡೆಗೆ ಹೊರಡಲು
ಸನ್ನದ್ಧರಾದರು. ಗಣಿತ ಹೋಮ್ ವರ್ಕ್ ಬುಕ್ಕೆಲ್ಲಿ, ನನ್ ಕನ್ನಡಕ ಎಲ್ಲೋ ಎಂದು ಇಬ್ಬರೂ ಕೊನೆಗೆ ತಾವು
ತಾವೇ ಹುಡುಕಿ, ಹೊರಡುವ ಮುನ್ನ, ಅಪ್ಪ ೫೦ ರೂಪಾಯಿ ಕೊಡೋ ಎಂದು ಮಗನೆಂಬ ಅಪ್ಪ ಗೋಗರೆಯಲು. ಯಾಕೆ,
ಏನು ಎಂದೆಲ್ಲ ವಿಚಾರಿಸಿ, ಕೊನೆಗೆ ಕುಡಿದು ಬಂದೇ ಅಂದ್ರೆ ನಾನ್ ಇವತ್ತು ಮನೆಗೇ ಬರಲ್ಲ ಹೇಳಿದ್ದೀನಿ
ಎಂದು ಚೇತಾವನಿ ಕೊಟ್ಟು, ತನ್ನ ಜಿಯೋಮೆಟ್ರಿ ಬಾಕ್ಸ್ ನಲ್ಲಿದ್ದ ೫೦ ರ ನೋಟೊಂದನ್ನು ಕೊಟ್ಟು, ಕೆನ್ನೆ
ಗಿಲ್ಲಿಸಿಕೊಂಡು ಅಂತೂ ಇಬ್ಬರ ದಾರಿ ಹಿಡಿದರು. ಇನ್ನ ಸಂಜೆಯವರೆಗೂ ಮನೆಯ ಮೂಲೆ ಮೂಲೆಯಲ್ಲಿ ಅಡಗಿದ್ದ
ಎಲ್ಲಾ ಮಾನವೇತರ ಜೀವಿಗಳು ಸ್ವತಂತ್ರವಾಗಿ ಮನೆಯಲ್ಲಿ ಬದುಕುವುವು. ಎಲ್ಲವೂ ತಿಂದುಂಡು, ಆಟವಾಡಿ ಸುಸ್ತಾಗಿ
ತಮ್ಮ ತಮ್ಮ ಗೂಡು ಸೇರುವಷ್ಟರಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ. ಅಪ್ಪನೆಂಬ ಮಗನು ಪುಸ್ತಕಮೂಟೆಯನ್ನು
ಎಸೆದು ಸರ್ರ್ರನೆ ಏನೋ ಘನಕಾರ್ಯವಿರುವಂತೆ ಬಟ್ಟೆ ಬದಲಿಸಿ ಬಾಗಿಲು ತೆಗೆದುಹಾಕಿಯೇ ಬ್ಯಾಟು ಬಾಲು
ಹಿಡಿದು ಓಡುವನು. ಸ್ವಲ್ಪ ಹೊತ್ತಿನಲ್ಲಿ ತರಕಾರಿ, ಮಣ್ಣು ಮಸಿ ಕಪ್ಪನೆಯ ಕವರ್ ಗಳನ್ನು ಹಿಡಿದುಕೊಂದು
ಬಂದ ಮಗನೆಂಬ ಅಪ್ಪನು ಮಾಮೂಲಿನಂತೆ ಎಷ್ಟು ಹೇಳಿದ್ರು ಬುದ್ದಿ ಬರಲ್ಲ ಇವನಿಗೆ ಎಂದು ಮನಸಿನಲ್ಲೇ ಬಯ್ದುಕೊಂಡು
ಮುಚ್ಚಿರುವ ಸುಟ್ಟ ಆಡುಗೆ ಮನೆ ಕಡೆ ಒಮ್ಮೆ ನೋಡಿ ನಿಟ್ಟುಸಿರು ಬಿಟ್ಟು ವೇಶ ಬದಲಿಸುವನು. ಇನ್ನ ತಂಟೆ,
ತಕರಾರುಗಳು, ತುಂಟಾಟದ ಮಾತುಗಳು, ಆಟ, ಆಡುಗೆ, ಊಟ, ಟೀವಿ, ಹೋಮ್ ವರ್ಕ್, ಪಾಠ, ಪ್ರವಚನ, ಎಲ್ಲೆಲ್ಲಿದ್ದರೋ
ಹಂಗೆ ನಿದ್ರೆ. ಹಿಂಗೆ ವಾರದ ಆರೂ ದಿನ ಮುಗಿಯುತ್ತದೆ. ಭಾನುವಾರದೊಂದು ದಿನ, ಸಿನಿಮಾ, ಶಾಪಿಂಗ್,
ಹೋಟೆಲ್ ಇಂಥೆಲ್ಲಾದರೂ ಸುತ್ತಾಟ. ಅಪರೂಪಕ್ಕೂ ಸ್ನೇಹಿತರು ಮನೆಗೆ ಬರುವುದಿಲ್ಲ. ಸಿಕ್ಕರೆ ಎಲ್ಲಾದರೂ
ಹೊರಗೆ ಸಿಗುವರು. ಅವರೊಂದಿಗೆ ಒಂದಷ್ಟು ಸಮಯ ಹರಣ. ಹೀಗೆ ಈ ಇಬ್ಬರ ಜೀವನ ತಮ್ಮದೇ ಪುಟ್ಟ ಪ್ರಪಂಚವನ್ನ
ಕಟ್ಟಿಕೊಂಡು ಸಾಗುತ್ತದೆ. ಆದರೆ ಅಪ್ಪನಿಗೆ ಮಗನೆಂಬ ಹೆಸರು, ಅಪ್ಪನಿಗೆ ಮಗನ ಸ್ಥಾನ ಬರಲು ಕಾರಣ ಹುಡುಕಹೊರಟರೆ,
ಇಲಿ, ಹೆಗ್ಗಣಗಳ ರಾಜ್ಯವಾಗಿರುವ ಸುಟ್ಟ ಅಡುಗೆ ಮನೆಯೂ ಮುಖ್ಯಪಾತ್ರವಾಗುತ್ತದೆ.
ಮಾಮೂಲಿನಂತೆ
ಆಫೀಸಿನಿಂದ ಮನೆ ಕಡೆಗೆ ಬಂದ ರಾಜಗೋಪಾಲನಿಗೆ ಕಂಡ ದೃಶ್ಯ ಮನೆಯ ಮುಂದೆ ನೆರೆದಿದ್ದ ಜನ, ಮನೆಯ ಕಿಟಕಿಯಿಂದೆಲ್ಲಾ
ಹೊರಬರುತ್ತಿದ್ದ ಹೊಗೆ. ಕೈಲಿದ್ದ ಟಪ್ಪರ್ ವೇರ್ ಚೀಲ ಹಾಗೇ ಕೆಳಗೆ ಬಿದ್ದಿದ್ದೂ, ಮನೆಯ ಬಾಗಿಲ ಬಳಿ
ಓಡಿದ್ದು, ಅದೇ ಕ್ಷಣಕ್ಕೆ ಯಾರೋ ಬಾಗಿಲು ಮುರಿದು ಒಳಪ್ರವೇಶಿಸಿದ್ದು, ಮನೆಯ ಒಳಗೆ ಧಗಧಗನೆ ಉರಿಯುತ್ತಿದ್ದ
ಅಡುಗೆಮನೆಯಲ್ಲಿ ಮುಕ್ಕಾಲು ಪಾಲು ಸುಟ್ಟು ಕರಕಲಾಗಿದ್ದ ಹೆಂಡತಿಯನ್ನು ನೋಡಿದ್ದೇ ಒಳಓಡುತ್ತಿದ್ದವನು
ಹಾಗೇ ಬಾಗಿಲ ಬಳಿಯೇ ಕಾಲು ಸೋತು ಬಿದ್ದುಹೋದ. ಕಣ್ಣು ತೆರೆದಿತ್ತು, ಮುಖ ನೇರವಾಗಿ ಹೆಂಡತಿಯ ಸುಟ್ಟು
ಕರಕಲಾಗುತ್ತಿದ್ದ ದೇಹಕ್ಕೆ ಒಳಗೆ ಬಂದ ಜನ ಕಂಬಳಿ ಹಾಕುತ್ತಿದ್ದುದನ್ನೇ ನೋಡುತ್ತಿತ್ತು. ದೇಹದಲ್ಲಿ
ಯಾವುದೇ ರೀತಿಯ ಚಲನೆಯಿರಲಿಲ್ಲ. ಆಡುಗೆ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪಾತ್ರೆ ಪಗಡೆಗಳು,
ಸ್ಕ್ರೀನ್ ಬಟ್ಟೆ, ಗೋಡೆಯೆಲ್ಲ ಬೆಂಕಿ ಹೊತ್ತಿ ಉರಿಯುತ್ತು ಎಲ್ಲಾ ನೀರು ತಂದು ಸುರಿಯುತ್ತಿದ್ದರು.
ಯಾರು ಯಾರೋ ಬಂದು ರಾಜಗೋಪಾಲನನ್ನು ಎತ್ತಿ ಕೂರಿಸಲು, ನೀರು ಕುಡಿಸಲು ಪ್ರಯತ್ನಿಸುತ್ತಿದ್ದರು. ಹಾಕಿದ
ನೀರು ಹಾಗೇ ವಾಪಸಾಗುತ್ತಿತ್ತು. ರಾಜಗೋಪಾಲನ ಕೈಕಾಲು ಉಜ್ಜಿ ತಲೆ ಮೇಲೆಲ್ಲಾ ನೀರು ಹಾಕಿ ಯಾರೋ ತಟ್ಟುತ್ತಿದ್ದರು.
ಹೆಂಡತಿಯ ಆಗಲೇ ಪ್ರಾಣ ಹೋಗಿರಬಹುದಾದ ದೇಹದ ಕಡೆಗೇ ಅವನ ಕಣ್ಣು ನೆಟ್ಟಿತ್ತು. ಯಾರೋ ಇಬ್ಬರು ದೇಹವನ್ನು
ಕಂಬಳಿಯಿಂದ ಸಂಪೂರ್ಣವಾಗಿ ಸುತ್ತಲು ಎತ್ತಿದರು, ದೇಹ ಇಬ್ಭಾಗವಾಗುವುದನ್ನು ಕಂಡಿದ್ದೇ, ರಾಜಗೋಪಾಲ
ವಾಂತಿ ಮಾಡಿಕೊಳ್ಳುತ್ತಾ ಅದೇ ಅವಸ್ಥೆಯಲ್ಲಿ ನೆಲಕ್ಕುರುಳಿದ. ಸುತ್ತಲೂ ಕೂಗಾಡುತ್ತಾ, ಅತ್ತಿಂದಿತ್ತ
ಇತ್ತಿಂದತ್ತ ಓಡಾಡುತ್ತಾ ಇದ್ದ ಜನರ ಕಾಲುಗಳು, ಸಾಗಿಸಲಾಗುತ್ತಿದ್ದ ಛಿದ್ರಗೊಂಡಿದ್ದ ಹೆಂಡತಿಯ ದೇಹ
ಹಾಗೇ ಮಂಜುಮಂಜಾಗುತ್ತಾ ಹೋಯಿತು. ಹೊರಗಿನಿಂದ ಅಳುತ್ತಾ, ಕೂಗುತ್ತಾ ಓಡಿಬರುತ್ತಿದ್ದ ರೋಹಿತ್ ನನ್ನು
ಯಾರೋ ಹೊರಗಿದ್ದ ಹೆಂಗಸರು ತಡೆದು, ಸಂತೈಸಿ ಬಲವಂತವಾಗಿ ಕರೆದುಕೊಂಡು ಹೋದರು.
ಮಾನಸಿಕ
ಆಘಾತದಿಂದ ಆಸ್ಪತ್ರೆ ಸೇರಿದ್ದ ರಾಜಗೋಪಾಲನನ್ನು ಮತ್ತು ತಾಯಿಯ ಅಂತ್ಯಸಂಸ್ಕಾರ ರಕ್ಷಿತ್ ಕೈಲೇ ಮಾಡಿಸಿ
ಕೆಲವು ದಿನಗಳು ಅಕ್ಕ ಪಕ್ಕದ ಮನೆಯವರೇ ನೋಡಿಕೊಂಡರು. ಕ್ರಮೇಣ, ರಕ್ಷಿತ್ ತಾನೇ ಅಪ್ಪನ ಜೊತೆ ಹೆಚ್ಚು
ಹೊತ್ತು ಇದ್ದು, ಕ್ರಮೇಣ ಚೇತರಿಸಿಕೊಂಡ ತಂದೆಯನ್ನು ಹದಿನೈದು ದಿನಗಳ ತರುವಾಯ ಮನೆಗೆ ಕರೆತಂದನು.
ಅಕ್ಕಪಕ್ಕದವರೆಲ್ಲಾ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಮನೆ ಒಳಗೆ ಬರಲು ಕಂಡಿದ್ದ ಘೋರ ದೃಶ್ಯಗಳೆಲ್ಲಾ
ಹಾಗೇ ಕಣ್ಮುಂದೆ ಬರುತ್ತಿದ್ದವು. ಅಡುಗೆ ಮನೆ ಹಾಗೇ ಅನಾಥವಾಗಿ ಬಿದ್ದಿತ್ತು. ಅಡುಗೆ ಮನೆ ಎದುರೇ
ಕುಸಿದು ಬಿದ್ದು ಅಳಲು ಹತ್ತಿದ ತಂದೆಗೆ ಏನು ಹೇಳುವುದೆಂದು ತೋಚದೆ ಹಾಗೇ ದೂರದಲ್ಲಿ ಕುಕ್ಕುರುಗಾಲಿಲೆ
ಕೂತು ರಕ್ಷಿತ್ ಕೂಡ ಅತ್ತ. ಕಣ್ನೊರೆಸಿಕೊಂಡು, ಹೋಟೆಲ್ ನಿಂದ ತಂದಿದ್ದ ಇಡ್ಲಿ ಪ್ಯಾಕೆಟ್ಟನ್ನು ಅಪ್ಪನ
ಮುಂದೆ ಬಿಚ್ಚಿಟ್ಟು ತಾನೇ ಕೈತುತ್ತಿನಲ್ಲಿ ತಂದೆಯ ಬಾಯಿಯ ಬಳಿ ಇಟ್ಟ. ತಿನ್ನಪ್ಪ ಅಳಬಾರ್ದಲ್ವ, ಒಳ್ಳೇ
ಮಕ್ಳು ಹೆದರ್ಕೊಂಡು ಅಳ್ತಾರಾ ಎಂದು ಮುಗ್ಧವಾಗಿ ಕೇಳಿದ ರಕ್ಷಿತ್ ನನ್ನು ಕಂಡು ಇನ್ನಷ್ಟು ಅಳು ಬರುವುದರ
ಜೊತೆಗೆ ತನ್ನ ಪ್ರೇಮಿಯಾದ ಹೆಂಡತಿಯ ಎಲ್ಲ ಹಳೆಯ ನೆನಪು ತೆರೆದುಕೊಂಡವು. ಅವಳೂ ತಾನು ಯಾವಗಲಾದರೂ
ಧೃತಿಗೆಟ್ಟಾಗ ಇದೇ ರೀತಿ ಮುಖವನ್ನು ಅವಳ ಅಂಗೈಯಲ್ಲಿ ತುಂಬಿಸಿಕೊಂಡು ಒಳ್ಳೇ ಮಕ್ಕಳು ಹೀಗೆ ಧೈರ್ಯ
ಕಳ್ಕೋತಾರಾ ಎಂದು ಹೇಳುತ್ತಿದ್ದುದು ನೆನಪಾಗಿ ಕರುಳು ಚುರಕ್ಕೆಂದಿತು. ಮನೆಯವರೆಲ್ಲರ ವಿರೋಧ ಕಟ್ಟಿಕೊಂಡು
ಮದುವೆಯಾಗಿ ಈ ಮನೆಗೆ ಮಾಡಿದಾಗಿನಿಂದಲೂ, ತಾನು ಮನೆಯಲ್ಲಿರುವ, ಲೈಟ್ ಹೊತ್ತಿಸಿರುವ ಅಷ್ಟೂ ಹೊತ್ತೂ
ಇದೇ ಅಡುಗೆ ಮನೆಯಲ್ಲೇ ಕಳೆಯುತ್ತಿದ್ದುದು, ಇದೇ ಅಡುಗೆ ಮನೆಯಲ್ಲೇ ಪ್ರಾಣ ಬಿಟ್ಟಿದ್ದು ಏನು ವಿಪರ್ಯಾಸವಿರಬಹುದು
ಎಂದು ಕಣ್ಣಲ್ಲಿ ನೀರು ಹಾಕುತ್ತಾ ತನ್ನ ಮಗನ ಕೈಲಿದ್ದ ಇಡ್ಲಿ ಬಾಯಿಗೆ ಹಾಕಿಸಿಕೊಳ್ಳುವನು. ಮಗನಿಗೆ
ಇಡ್ಲಿ ತಿನ್ನಿಸುತ್ತಾ ಎಲ್ಲಿದ್ಯಪ್ಪಾ ಇಷ್ಟು ದಿನ ಎಂದು ಕೇಳಲು, ನಿರ್ಮಲ ಆಂಟಿ ಮನೇಲಿದ್ದೆ…. ಹ್ಮ್…
ಆಮೇಲೆ.. ಆಮೇಲೇ… ಅಮ್ಮಂಗೆ ನಾನೇ ಬೆಂಕಿ ಕೊಟ್ಟೆ ಕಣೋ ಎಂದು ಸಾಧಾರಣವಾಗಿ ಹೇಳುತ್ತಿದ್ದ ಮಗನ ಕಡೆ
ನೋಡುತ್ತಾ, ಮಗನನ್ನು ಬಿಗಿದಪ್ಪಿ ಇನ್ನಷ್ಟು ಅತ್ತನು. ರಕ್ಷಿತ್ ಬಿಡಿಸಿಕೊಂಡು, ಯಾಕೋ ಮಗನೆ ಅಳ್ತೀಯಾ,
ಅಮ್ಮ ಮತ್ತೆ ಬರಲ್ಲ ಅಂತಾನಾ….., ಏನೂ ಮಾಡೋಕೆ ಆಗಲ್ಲ, ಬೇರೆ ಅಮ್ಮನ್ನ ತಂದ್ರೆ ಆಯ್ತು ಬಿಡು ಅಂತಿದ್ರು
ಸರೋಜ ಆಂಟಿ. ಬೇರೆ ತರೋಣ ಬಿಡೋಲೋ ಎಂದು ಹೇಳಿದ್ದಕ್ಕೆ ಹೊಡೆಯಬೇಕೋ, ಅಳಬೇಕೋ ಗೊತ್ತಾಗಲಿಲ್ಲ ರಾಜಗೋಪಾಲನಿಗೆ.
ಯಾವಾಗಲೂ ಯಾಕೋ ನೀನು ಇಷ್ಟು ಸೆನ್ಸಿಟಿವ್ ಎಂದು ಯಾವಾಗಲೂ ಕೇಳುತ್ತಿದ್ದ ಹೆಂಡತಿ ಅಡುಗೆ ಮನೆಯಲ್ಲಿ
ನಿಂತಿರುವಂತೆ ಭಾಸವಾಯ್ತು. ಇದು ಕಳೆದು ೬ ವರ್ಷಗಳು ಸಂದವು.
ಅಡುಗೆ
ಮನೆಗೆ ಕಾಲಿಟ್ಟರೆ ಆ ಸುಟ್ಟ ಗೋಡೆ, ಮಧ್ಯದಲ್ಲಿ ಕರಕಲಾಗುತ್ತಿದ್ದ ಹೆಂಡತಿಯ ಚಿತ್ರವೇ ಕಣ್ಮುಂದೆ
ಬಂದಂತಾಗುತ್ತಿತ್ತೆಂದು, ಮರದ ಹಲಗೆ ಹೊಡೆಸಿ ಮುಚ್ಚಲಾಯ್ತು. ಅಡುಗೆ ಮನೆ ಹಾಲ್ ನ ಬಲ ಪಾರ್ಶ್ವದಲ್ಲೇ
ಸೃಷ್ಟಿಯಾಯ್ತು. ಮನೆಯನ್ನು ಚಾಕಚಕ್ಯವಾಗಿಡಲು ಶ್ರಮಿಸುತ್ತಿದ್ದ ಏಕಮಾತ್ರ ಜೀವವೇ ಇಲ್ಲವಾದ ಮೇಲೆ
ಯಾವುದು ಎಲ್ಲಿರಬೇಕೋ ಅಲ್ಲಿ ಇಲ್ಲವಾಗದಾಯ್ತು. ಇಬ್ಬರಿಗೂ ಮನೆ ಒಡ್ಡು ಒಡ್ಡಾಗಿದ್ದರೇನೇ ಸರಿ ಎಂದೆನಿಸತೊಡಗಿತು.
ಸಂಗಾತಿಯ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲಾಗದೆ, ಮಧ್ಯವಸನಿಯಾಗ ತೊಡಗಿದ ತಂದೆಯನ್ನು ೮ ವರ್ಷದವನಿದ್ದಾಗಲೇ
ತಾನೇ ಜವಾಬ್ದಾರಿ ತೊಗೊಳ್ಳಬೇಕೆಂದು, ತನಗೆ ಯಾವಾಗಲೂ ಅಮ್ಮ ಹೇಳುತ್ತಿದ್ದ ನಿಮ್ಮಪ್ಪ ಸಕ್ಕತ್ ಸಾಫ್ಟ್
ಕಣೋ ಅವರಿಗೆ ಯಾವತ್ತೂ ನೋಯಿಸಬೇಡ ಕಣೋ ತರಲೆ ಎಂಬ ಮಾತುಗಳು ನೆನಪಿಗೆ ಬರುತ್ತಿತ್ತು. ತಂದೆಯ ಗಲ್ಲ
ಹಿಡಿದು ಇನ್ಮೇಲೆ ನೀನೇ ನನ್ ಮಗ, ನಾನು ನಿಂಗೆ ಅಪ್ಪ, ಸುಮ್ಮನೆ ನಾನು ಹೇಳಿದಂಗೆ ಕೇಳ್ಬೇಕು ಗೊತ್ತಾಯ್ತಾ
ಎಂದು ಹೆಗಲೇರಿ ಆರ್ಡರ್ ಮಾಡಿ ಜೇಬಿನಲ್ಲಿದ್ದ ದುಡ್ಡು ಕಿತ್ತುಕೊಂಡು, ಸುಮ್ಮನೆ ದುಡ್ಡು ನನಗೆ ತಂದು
ಕೊಡು, ಕುಡ್ಕೊಂಡ್ ಬಂದು ನನ್ನ್ ಸ್ನೇಹಿತರೆಲ್ಲಾ ನನ್ನ ನೋಡಿ ನಗೋ ಹಾಗೆ ಮಾಡಿದ್ರೆ ಅಮ್ಮನತ್ರ ಹೋಗ್ಬಿಡ್ತೀನಿ
ಅಷ್ಟೇ ಎಂದು ಬೆದರಿಸಿದನು. ವರುಷಗಳು ಸಂದವು, ಮಗ ಅಪ್ಪನಾದ, ಅಪ್ಪ ಮಗನಾದ. ೭ ಇದ್ದವನು ೧೩ ವರ್ಷದವನಾದ
ರಕ್ಷಿತ್ ಗೆ ಈಗ ೨೪ ವರ್ಷ! ಈಗಲೂ ಅಪ್ಪ ಮಗನೇ, ಮಗ ಅಪ್ಪನೇ. ಒಳ್ಳೆಯ ಗೆಳೆಯರಂತೆ ಇಬ್ಬರೂ ಕಿತ್ತಾಡಿಕೊಂಡು
ಚೆನ್ನಾಗಿರುವರು. ಮಗನಾದ ಅಪ್ಪ ತನ್ನ ರಿಟೈರ್ ದಿನದ ಏಲ್ಲಾ ಚಟುವಟಿಕೆಗಳ ಬಗ್ಗೆ ಪ್ರತಿನಿತ್ಯ ಹೇಳಿಕೊಳ್ಳಬೇಕು.
ಅಪ್ಪನಾದ ಮಗ ತನ್ನ ಯಾವುದೇ ವಿಷಯ ಹೇಳುವುದಿಲ್ಲ. ಅದರ ವಿಷಯವಾಗಿಯೇ ಇಬ್ಬರಲ್ಲೂ ಆಗಾಗ ಜಗಳ. ಮಗ ಮುನಿಸಿಕೊಂಡಾಗ,
ಅಪ್ಪ ಎಣ್ಣೆ ಬಾಟಲಿ ಮುಂದಿಟ್ಟು ಕೋಪಶಮನ ಮಾಡುವನು. ಮನೆಯಲ್ಲಿ ಹಳೆಯ ಗುಜರಿಗಳೆಲ್ಲಾ ಹೋಗಿ ಹೊಸ ಹೊಸ
ಗುಜರಿ ಬಂದು ಇನ್ನೂ ಕಲಾತ್ಮಕವಾಗಿರುವುದು. ಸದಾ ಬಾಗಿಲು ಹಾಕಿಕೊಂಡೇ ಸ್ವಚ್ಚ ಗಾಳಿ ಇಲ್ಲದೆ ಹೊಗೆ
ತುಂಬಿಕೊಂಡಂತ ವಾತಾವರಣ. ಅಡುಗೆ ಮನೆಯಲ್ಲಿ ಅದೆಷ್ಟು ತಲೆಮಾರು ಇಲಿಗಳು ಬಂದು ಹೋದುವೋ, ಹಿಂದಿನಿಂದ
ಗೋಡೆ ತೂತು ಮಾಡಿ, ಹೊರಗಿನ ಪರಿಸರಕ್ಕೂ ತಮ್ಮ ಅರಮನೆಗೂ ಮಾರ್ಗ ಕಲ್ಪಿಸಿ, ಇನ್ನೂ ನೂರಾರು ಜೀವಿಗಳ
ಒಂದು ಊರೇ ಸೃಷ್ಟಿಯಾಗಿ ಎಲ್ಲರೂ ಸಾಮ್ಯದಿಂದ ಬದುಕುತ್ತಿದ್ದವು. ಇಂತಿರ್ಪ ಸಮಯದಲ್ಲಿ ಮಗನೆಂಬೋ ಅಪ್ಪನ
ಎದುರು ತಂದು ಒಂದು ಹುಡುಗಿಯನ್ನು ನಿಲ್ಲಿಸಿದ ರಕ್ಷಿತ್.
ರಾಜಗೋಪಾಲನಿಗೂ
ಹುಡುಗಿ ಇಷ್ಟವಾದಳು. ಆದರೆ ಆಕೆ ಮನೆಗೆ ಬಂದಿದ್ದ ಮೊದಲನೇ ದಿನವೇ ಆ ಕಲಾತ್ಮಕ ಮನೆಯನ್ನ, ಮೊದಲು ಖಾಲಿ
ಮಾಡಿ, ಹೊಸ ಬಣ್ಣ ಬಳಿಸಿ, ಮುಖ್ಯವಾಗಿ ಅಡುಗೆ ಮನೆಯನ್ನು ಮತ್ತೆ ತೆರೆಯುವಂತೆ ತಾಕೀತು ಮಾಡಿ, ಇಲ್ಲವಾದಲ್ಲಿ
ತಾನು ಈ ಮನೆಗೆ ಬರುವುದೇ ಇಲ್ಲವೆಂದು ಮೂಗು ಮುರಿದು ಹೋದಳು. ಮಗನೆಂಬ ತಂದೆಗೆ ಅದು ಸುತಾರಾಂ ಒಪ್ಪಿಗೆಯಿಲ್ಲ.
ತಂದೆಯೆಂಬೋ ಮಗನಿಗೆ ಇನ್ನೂ ಹಳೆಯ ನೆನಪುಗಳಲ್ಲೇ ಬದುಕುವುದಕ್ಕಿಂತ ಮುಂದೆ ಸಾಗುವುದರಲ್ಲಿ ತಪ್ಪೇನೂ
ಕಾಣಿಸುತ್ತಿರಲಿಲ್ಲ. ಇಂತಹ ಸಮಯದಲ್ಲೇ ರಕ್ಷಿತ್ ಗೂ ಸುಮಳಿಗೂ ಸರಳವಾಗಿ ವಿವಾಹವಾಯ್ತು. ಆಕೆ ಮನೆಗೆ
ಕಾಲಿರಿಸಿದ ಮೊದಲ ದಿನವೇ ರೂಮ್ ನಲ್ಲಿದ್ದ ಗುಜರಿಯೆಲ್ಲಾ ಮನೆಯಿಂದ ಗುಜರಿ ಅಂಗಡಿ ಸೇರಿದವು. ಮನೆಯಲ್ಲಿನ
ಮುಕ್ಕೋಟಿ ಜೀವಗಳು ಡೋಮೆಕ್ಸ್ ಬಂದಿದೆ ಎಂದು ಅಡ್ವರ್ಟೈಸ್ಮೆಂಟಿನಲ್ಲಿ ಓಡುತ್ತಿದ್ದ ಹಾಗೆ ಓಡ ಹತ್ತಿದವು.
ಮನೆಯ ಹೊರಗೆ ಸಾಲು ಸಾಲಾಗಿ ಹಾರಿ, ತೂರಿ, ಓಡಿ ಬರುತ್ತಿದ್ದ ಜೀವಿಗಳನ್ನು ಕಂಡು ಸುತ್ತ ಮುತ್ತ ಮನೆಯವರೆಲ್ಲಾ
ಬಂದು ಹಲವು ದಿನ ಜಗಳಕ್ಕೆ ಇಳಿದರು. ತಮ್ಮ ಮನೆಯಲ್ಲಿ ಸೇರಿರುವ ಜಿರಳೆ, ಹಲ್ಲಿ, ತಿಗಣೆ, ಎಲ್ಲಾ ನಿಮ್ಮ
ಮನೆಯದೇ, ಅದನ್ನು ಓಡಿಸಲಿಕ್ಕೆ ಇಷ್ಟು ಖರ್ಚಾಗಿದೆ ಕೊಡಿ ಎಂದು ದುಂಬಾಲು ಬೀಳ ತೊಡಗಿದರು. ಇನ್ನು
ಉಳಿದಿದ್ದು ಅಡುಗೆ ಮನೆಯೊಂದೇ. ತಂದೆಯೆಂಬ ಮಗ ತೆರೆಯೋಣವೆಂದು, ಮಗನೆಂಬಾ ತಂದೆ ಬೇಡವೆಂದು, ಹೆಂಡತಿಯೆಂಬ
ಗಂಡ ಕೂಡ ತೆರೆಯೋಣವೆಂದು, “ಹೆಂಡತಿಯಾದ ಗಂಡ” ಸೈ ಎನ್ನಲು ಕೊನೆಗೂ ಇಲಿ ಸಂಸಾರಗಳು ಗುಳೆ ಕಿತ್ತವು.
ಅಗ್ನಿ ಮೂಲೆಯಲ್ಲಿ ಸ್ಟೋವ್ ಹೊತ್ತಿಕೊಂಡವು. ಮಗನೆಂಬ ತಂದೆ ದಿನದ ಬಹಳ ಸಮಯ ಹೊರಗೇ ಕಳೆಯಲು ಶುರುಮಾಡಿದ.
ಹೆಂಡತಿಯಾದ ತಂದೆಯೆಂಬ ಮಗ ಮನೆಯಲ್ಲೇ ಹೆಚ್ಚು ಹೊತ್ತು ಕಳೆಯಲು ಶುರುಮಾಡಿದ. ಮನೆಗೆ ಈಗ ಸ್ನೇಹಿತ,
ಸಹಪಾಠಿಗಳ ಗುಂಪು ಬಂದು ತಿಂದು ತೇಗಿ ಹೋಗುತ್ತಿರುವರು.
-ಹೇಮಂತ್
ನನ್ನ ಬ್ಲಾಗ್ ಗೆ ಬ೦ದಿದ್ದಕ್ಕಾಗಿ ಧನ್ಯವಾದಗಳು ಹೇಮಂತ್ ಕುಮಾರ್. ಕಥೆ ವಿಭಿನ್ನವಾಗಿ ಚೆನ್ನಾಗಿದೆ, ಅಭಿನ೦ದನೆಗಳು.
ReplyDeleteಪ್ರಭಾ ಅವರೇ, ಪ್ರತಿವಂದನೆಗಳು ನನ್ನ ಕಡೆಯಿಂದಾನೂ :-) ಕಥೆ ಆಸಕ್ತಿವಹಿಸಿ ಓದಿದ್ದಕ್ಕೆ ಮತ್ತು ಜೊತೆಯಿರುವುದಕ್ಕೆ :-)
ReplyDelete