ಆಟದ
ಮೈದಾನದಲ್ಲಿ ಆಗತಾನೆ ಬಾಯಿಗೆ ಬಬ್ಬಲ್ ಗಮ್ ಹಾಕಿಕೊಂಡು ಜಮಡಲು ಶುರುಮಾಡುವಷ್ಟರಲ್ಲಿ ಮುಂದಿನ ತರಗತಿಯ
ಬೆಲ್ ಹೊಡೆಯಿತು. ಬಾಯಲ್ಲಿದ್ದ ಬಬ್ಬಲ್ ಗಮ್ ಉಗಿದು ದಡಬಡನೆ ಓಡುತ್ತಿದ್ದರೆ ಅವನು ಮಾತ್ರ ಆರಾಮವಾಗಿ
ಕಚಕಚನೆ ಬಬ್ಬಲ್ ಗಮ್ ಜಗಿಯುತ್ತಾ ಆಟ ಮುಂದುವರೆಸಿದ್ದ. ಲೋ ಬಾರೋ ಮಾತಮಾಟಿಕ್ಸ್ ಕ್ಲಾಸ್ ಬೇರೆ, ಮಿಸ್ಸು
ಬೆಂಚ್ ಮೇಲೆ ನಿಲ್ಲಿಸ್ತಾರೋ ಎಂದು ಹೇಳಿದರೂ ಸುಮ್ಮನೆ ನಕ್ಕು ಆಟವಾಡುತ್ತಿದ್ದ. ಬಬ್ಬಲ್ ಗಮ್ ಸವಿ
ತೀರಿದ ನಂತರ ಉಗಿದು, ಚೆಂಡು ಕೈಲಿ ಹಿಡಿದು ತರಗತಿಯ ಅರ್ಧದಲ್ಲಿ “ಮೇ ಐ ಕಮಿನ್ ಮಿಸ್” ಎಂದು ಬಾಗಿಲ
ಬಳಿ ನಿಂತು ತಲೆಕೆರೆದುಕೊಳ್ಳುತ್ತಿದ್ದ ಅವನನ್ನು ಎಲ್ಲರೂ ಭಲೇ ಇವನ ಧೈರ್ಯಕ್ಕೆ ಎಂದು ಮನಸಿನಲ್ಲೇ
ಶ್ಲಾಘಿಸುತ್ತಿರಲು, ಪ್ರಶಸ್ತಿಯೆಂಬಂತೆ ನನ್ನ ಪಕ್ಕ, ಬೆಂಚ್ ಮೇಲೆ ನಿಲ್ಲಿಸಿ ಕೈಮೇಲೆ ಎರಡು ಛಟೀರನೆ
ಏಟುಗಳು ಕೊಟ್ಟು ಪಾಠ ಮುಂದುವರೆಸಿದರು. ಲೋ ಇದು ನಿನಗೆ ಬೇಕಿತ್ತಾ… ಆಗಲೇ ಬಾರೋ ಅಂದ್ರೆ ಕೇಳ್ಲಿಲ್ಲ
ಇವಾಗ ನೋಡು ಬೆಂಚ್ ಮೇಲೆ ನಿಂತ್ಕೊಂಡು ನೋಟ್ಸ್ ಬರ್ಕೋಬೇಕು ಎಂದು ವಿಷಾದದಿಂದ ಹೇಳಿದರೆ, “ಲೋ.. ಮೇಲೆ
ನಿಂತ್ಕೊಂಡು ಹೆಂಗೆ ಕಾಣ್ಸುತ್ತೆ ಗೊತ್ತಾ, ಬೇಕಾದ್ರೆ ನೋಡು, ಹಿಂಗೆ ನಿಂತು ಯಾವಾಗಾದ್ರು ನೋಟ್ಸ್
ಬರ್ಕೊಂಡಿದ್ಯ.. ಸೂ……ಪರ್” ಎಂದು ಏನೋ ವಿಸ್ಮಯ ಕಂಡವನಂತೆ ಆಸೆ ಹುಟ್ಟಿಸಿದ. ಅವನ ಮಾತಿಗೆ ಮರುಳಾಗಿ,
ಕೈಲಿ ನೋಟ್ಸ್ ಹಿಡಿದು ನಾನೂ ನಿಂತು ನೋಡಲು ಇಡೀ ಕ್ಲಾಸ್ ನನ್ನನ್ನೇ ನೋಡುತ್ತಲಿತ್ತು. ಗೊಳ್ಳನೆ ಎಲ್ಲರೂ
ನಗಲು ಶುರುಮಾಡಿದರು. ಮಿಸ್ಸು “ಯು ಇಡಿಯಟ್, ಆರ್ ಯು ಪ್ಲೇಯಿಂಗ್ ಇನ್ ಕ್ಲಾಸ್” ಅದು ಇದು ಡಿಶುಮ್
ಡಿಶುಮ್ ಎಂದು ಏನೇನೋ ಬಯ್ದು ಮತ್ತೆ ಕೂರದಂತೆ ಮಾಡಿದರು. ನನ್ನ ಮೂರ್ಖತನ ನೆನೆಸಿಕೊಂಡರೆ ನನಗೆ ಈಗಲೂ
ನಗು ತಡೆಯೋಕೆ ಆಗೊಲ್ಲ. ಅಂದೇ ನಿರ್ಧರಿಸಿದ್ದೆ ನಾನು, ನನ್ನ ತನವನ್ನ ಬಿಟ್ಟು ಇವನ ದಾರಿಯಲ್ಲಿ ಹೋಗಬಾರದು
ಅಂತ. ಆದ್ರೆ ಇವತ್ತು ಅವನನ್ನ ನೋಡೋದಕ್ಕೇ ಕನಕಪುರದ ದಾರಿ ಹಿಡಿದಿದ್ದೀನಿ. ನಾನು ನನ್ನಷ್ಟಕ್ಕೆ ನಾನೇ
ನಕ್ಕಿದ್ದು ಪಕ್ಕದಲ್ಲಿದ್ದ ಹೆಂಗಸು ಗಮನಿಸಿ ಅವರ ಪಕ್ಕದಲ್ಲಿದ್ದ ಹೆಂಗಸಿಗೆ ಏನೋ ಹೇಳುತ್ತಿರುವುದನ್ನು
ನಾನು ಗಮನಿಸಿದೆ. ತಲೆ ಕೆಟ್ಟಿದೆ ಅಂದುಕೊಂಡ್ರೇನೋ. ನನ್ನ ನೆನಪುಗಳಿಂದ ಹೊರಗೆ ಬಂದು ಇಡೀ ಬಸ್ಸನ್ನು
ಒಮ್ಮೆ ನೋಡಿದೆ, ಅರ್ಧ ನಿದ್ರಿಸುತ್ತಲಿತ್ತು, ಅರ್ಧ ಇನ್ನೊಬ್ಬರ ತಲೆ ಅಥವಾ ಇನ್ನೇನನ್ನೋ ತಿನ್ನುತ್ತಲಿತ್ತು.
ಎಲ್ಲಾ ಹಳ್ಳಿಗಳಿಂದ ನಗರದ ಕಡೆಗೆ ಬರುತ್ತಿದ್ದರೆ, ಈ ಹೇಮಂತ ಹಳ್ಳಿಗೆ ಹೋಗಿ ಸೇರ್ಕೊಂಡಿದ್ದಾನಲ್ಲಾ
ಏನಿರಬಹುದು ಕಾರಣ.
ಮೊದಲಿನಿಂದಲೂ
ಇದೇ ರೀತಿಯ ಕಿತಾಪತಿ ಕೆಲ್ಸಗಳು ಮಾಡ್ಕೊಂಡ್ ಬಂದಿರೋ ಇತಿಹಾಸ ಇಟ್ಟುಕೊಂಡಿರೋದ್ರಿಂದ ಕನಕಪುರದಲ್ಲಿ
ನಿವಾಸ ಹೂಡಿದ್ದೀನಿ ಬಾ ಸಿಗೋಣ ವಿಷಯವಿದೆ ಎಂದು ಆಮಂತ್ರಿಸಿದಾಗ ಅಂಥಾ ಅಚ್ಚರಿಯೇನಾಗಲಿಲ್ಲ. ಅವನಿಗೂ
ನನಗೂ ಇದ್ದ ಒಂದೇ ಒಂದು ಸಾಮ್ಯವೆಂದರೆ ಹೆಸರು. ನಾನೂ ಹೇಮಂತ ಅವನೂ ಹೇಮಂತ. ಗೊಂದಲ ಆಗದಿರಲೆಂದು ಎಲ್ಲರೂ
ನನ್ನನ್ನು ಹೇಮಾ ಎಂದು ಅವನನ್ನು ಹೇಮೀ ಎಂದು ಕರೆಯುತ್ತಿದ್ದರು. ಅವನು ಉತ್ತರ ಧ್ರುವ ನಾನು ದಕ್ಷಿಣ ಧ್ರುವ ಆದರೂ ಹೇಮಾಹೇಮಿಗಳು
ಯಾವಾಗಲೂ ಒಟ್ಟಿಗೆ ಇರುತ್ತಿದ್ದೆವು. ನಾನು ಹುಂ ಎಂದರೆ ಅವನು ಉಹುಂ ಎನ್ನುತ್ತಿದ್ದ, ನಾನು ಏರಿಗೆ
ಏಳೆದರೆ ಅವನು ನೀರಿಗೆ ಎಳೆಯುತ್ತಿದ್ದ. ನಾನು ಎಷ್ಟು ಓದುತ್ತಿದ್ದೆನೋ, ಅವನು ಅಷ್ಟೇ ಆಟವಾಡುತ್ತಿದ್ದ.
ನನ್ನ ಮನೆಯಲ್ಲಿ ಇದ್ದದ್ದು ಒಂದೇ ದೂರು ಅವನ ಜೊತೆ ಸೇರಬೇಡ ಅವನು ಸರಿ ಇಲ್ಲ, ಅವನ ಜೊತೆ ಸೇರಿದ್ರೆ
ನಾನೂ ಹಾಳಾಗೋಗ್ತೀನಿ ಎಂಬುದು. ಅವನ ಮನೆಗೆ ಹೋದಾಗಲೆಲ್ಲ ನನ್ನ ಮುಂದೆಯೇ ಅವನಿಗೆ ಹೇಳುತ್ತಿದ್ದರು,
ನೋಡಿ ಕಲಿ ಅವನ್ನ, ಜೊತೆಲಿದ್ರು ಬುದ್ದಿ ಬರಲ್ವಲ್ಲೋ ನಿನಗೆ, ನೀನಾದ್ರೂ ಒಂಚೂರು ಬುದ್ದಿ ಹೇಳಪ್ಪ,
ಹೇಳ್ಕೊಡು ಜೊತೇಲಿ ಕೂರಿಸ್ಕೊಂಡು ಸ್ವಲ್ಪ, ಒಂಚೂರು ಓದು ತಲೆಗೆ ಅಂಟಲ್ಲಾ ಇವನಿಗೆ ಅಂತ. ಎಲ್ಲರ ಹತ್ತಿರ
ಬಯ್ಗುಳ, ಒದೆ ತಿಂದೂ ತಿಂದೂ ಅವನಿಗೆ ಮೈ ಮನಸ್ಸು ಜೆಡ್ಡುಗಟ್ಟಿ ಹೋಗಿತ್ತೇನೋ ಅನ್ಸುತ್ತೆ. ಯಾವುದಕ್ಕೂ
ಹೆದರ್ತಿರ್ಲಿಲ್ಲ ಅವನು. ಅಯ್ಯೋ ೨೫ಕ್ಕೆ ೨೦ ತೊಗೊಂಡ್ರೆ ಮನೇಲಿ ಯಾಕಿಷ್ಟು ಕಡಿಮೆ ಅಂಕ ಅಂತ ಎಲ್ಲಿ
ಬಯ್ತಾರೋ ಅನ್ನೋ ಭಯಕ್ಕೇ ಒದ್ತಿದ್ದೆ. ಅವನ ತರಹ ಭಂಡ ಧೈರ್ಯದ ದಾರಿ ತುಳಿಯೋಕೂ ಹೆದರಿಕೆ ಆಗ್ತಿತ್ತು.
ಪ್ರತಿ ಬಾರಿ ಮಾರ್ಕ್ಸ್ ಕಾರ್ಡ್ ಕೈಗೆ ಬಂದಾಗ್ಲೂ ಚೆನ್ನಾಗೇ ಮಾರ್ಕ್ಸ್ ಬಂದಿರೋ ನಾನೇ ಹೆದರಿಕೊಂಡು
ತೊಗೊಂಡೋಗ್ತಿದ್ದೆ, ಆದರೆ ಫೈಲ್ ಆಗಿರುವ ಅವನು ಧೈರ್ಯವಾಗಿ ಮನೆಗೆ ಹೋಗ್ತಿದ್ದ. ಹೇಮಿಯ ಅಮ್ಮ ರುಬ್ಬುವ
ಕಲ್ಲಿನಲ್ಲಿ ಹಿಟ್ಟು ರುಬ್ಬುತ್ತಿದ್ದರೆ, ಅಪ್ಪ ಇವನ ಜುಟ್ಟು ಹಿಡಿದು ರುಬ್ಬುತ್ತಿದ್ದರು. ಒದೆ ತಿಂದು
ನೋವಿಗೆ ಅಲ್ಲಿ ಅಳುತ್ತಿದ್ದರೂ, ಹೊರಗೆ ಬಂದು ನನ್ನ ಜೊತೆ ಆಟವಾಡುತ್ತಿದ್ದ. ಹೇಮಿ ಚೆನ್ನಾಗಿ ಓದ್ಲಿಲ್ಲ
ಅಂದ್ರೆ ಮುಂದೆ ಒಳ್ಳೇ ಕೆಲಸ ಸಿಗಲ್ವಂತೆ ಕಣೋ, ನೀನ್ಯಾಕೋ ಓದಲ್ಲ ಅಂತ ಅವನನ್ನ ಮನೆಗೆ ಹಿಂದಿರುಗುವ
ದಾರಿಯಲ್ಲಿ ಕೇಳಿದರೆ, ಬೇಡ ಬಿಡು, ನಾನ್ ಕೆಲಸಾನೇ ಮಾಡೋದಿಲ್ಲ ಅಷ್ಟೇ ಎಂದು ಸುಲಭವಾಗಿ ಮಾತುಮುರಿಯುತ್ತಿದ್ದ..
ಇವನು ಈ ರೀತಿ ಮಾತನಾಡಿದಾಗಲೆಲ್ಲಾ, ಇವನು ಕೆಟ್ಟ ದಾರಿಯನ್ನೇ ತುಳಿಯುತ್ತಿದ್ದಾನೆ. ನನ್ನ ಮನೆಯಲ್ಲಿ
ದೊಡ್ಡವರೆಲ್ಲಾ ಹೇಳುತ್ತಿದ್ದುದು ಸರಿಯೇ ಎಂದು ಎಷ್ಟೇ ಹತ್ತಿರವಾಗಿದ್ದರೂ ಅವನ ವರ್ತನೆಗೆ ಹೆದರಿ
ಕೊಂಚ ದೂರವೇ ಇರುತ್ತಿದ್ದೆ. ಅವನು ಓದಿದ್ದನ್ನ ನಾನು ಕಂಡಿದ್ದೇ ಇಲ್ಲ. ಮನೆಯಲ್ಲಿ ಏನು ಮಾಡಿದರೂ
ಓದಿಸಲು ಸಾಧ್ಯವಾಗದ್ದರಿಂದ ನಾನು ಹೋಗುತ್ತಿದ್ದ ಟ್ಯುಶನ್ ಗೆ ಕಳುಹಿಸಿದರು ಅಲ್ಲೂ ಅವರಿವರಿಗೆ ತರಲೆ
ಮಾಡಿಕೊಂಡೇ ಕಾಲ ಕಳೆಯುತ್ತಿದ್ದ ಹೊರತು ಪಾಠದ ಕಡೆ ಗಮನ ಕೊಡುತ್ತಿದ್ದುದು ಎಂದೂ ಕಾಣಲಿಲ್ಲ, ತುಂಬಾ
ಬಲವಂತ ಮಾಡಿದರೆ ಟ್ಯುಶನ್ ಕಡೆ ತಲೆ ವಾರಗಟ್ಟಲೆ ಟ್ಯುಶನ್ ಕಡೆ ತಲೆಹಾಕುವುದನ್ನೇ ಬಿಟ್ಟುಬಿಡುತ್ತಿದ್ದ.
ಸುಮ್ಮನೆ ಫೀಸ್ ತಪ್ಪಿಹೋಗುತ್ತಲ್ಲಾ ಎಂದು ಟ್ಯುಶನ್ ಆಂಟಿಯೂ ಸಹ ಒತ್ತಾಯ ಪಡಿಸಿ ಹೇಳುವುದನ್ನ ನಿಲ್ಲಿಸಿದರು.
ಮನೆಪಾಠದದಿಂದಲೂ ಅವನ ವಿದ್ಯಾಭ್ಯಾಸದಲ್ಲಿ ಏನೂ ಬದಲಾವಣೆಯಾಗಿಲ್ಲವೆಂದು ಮಾರ್ಕ್ಸ್ ಕಾರ್ಡ್ ಹಿಡಿದು
ಟ್ಯುಶನ್ ಆಂಟಿಯ ಮುಂದೆ ಹಿಡಿಯಲು, ನನ್ನನ್ನು ಉದಾಹರಿಸಿ, ಇದು ತನ್ನ ದೋಷವಲ್ಲವೆಂದು ಹೇಳಿ ನುಣುಚಿಕೊಂಡರು.
ಹಲವು ಬಾರಿ ಶಾಲೆಯ ಬಾಗಿಲವರೆಗೂ ಬರುತ್ತಿದ್ದ, ನನ್ನ ಪಕ್ಕದ ಅವನ ಜಾಗ ಖಾಲಿಯೇ ಇರುತ್ತಿತ್ತು. ಸಂಜೆ
ಮನೆಗೆ ಹೋಗುವಾಗ ನನ್ನ ಜೊತೆ ಸೇರಿಕೊಳ್ಳುತ್ತಿದ್ದ, ಲೋ ಹೇಮಿ ಎಲ್ಲೋ ಹೋಗಿದ್ದೆ, ಯಾಕ್ ಕ್ಲಾಸ್ ಗೆ
ಬರಲಿಲ್ಲ ಎಂದು ಕೇಳಿದರೆ, ಸೋಶಿಯಲ್ ಹೋಮ್ವರ್ಕ್ ಮಾಡಿಲ್ಲ ಬಂದ್ರೆ ಅವನು ಹೊಡಿತಾನೆ ಸುಮ್ಮನೆ ಯಾಕ್
ಬೇಕು ಹೊರಗಡೆ ಹುಡುಗರು ಕ್ರಿಕೆಟ್ ಆಡ್ತಿದ್ರು ಅವರ ಜೊತೆ ಆಡ್ತಿದ್ದೆ ಎಂದು ಆರಾಮವಾಗಿ ಹೇಳ್ತಿದ್ದ.
ಟೆಸ್ಟ್ ಗಳು ನನ್ನಿಂದ ಕಾಪಿ ಹೊಡೆದೋ, ಹಲವು ಅನುತ್ತೀರ್ಣನಾಗಿಯೋ, ಅಂತಿಮಪರೀಕ್ಷೆಯಲ್ಲಿ, ಪಾಲಕರನ್ನು
ಕರೆಸಿ, ಬುದ್ದಿವಾದ ಹೇಳಿ ನಂತರ ಮುಂದಿನ ತರಗತಿಗೆ ತಳ್ಳಿ, ಅಂತೂ ಹೆಂಗೋ, ಸ್ಕೂಲ್ ಕೂಡ ಯಶಸ್ವಿಯಾಗಿ
ಮುಗಿಸಿಯೇ ಬಿಟ್ಟ. ವರ್ಷವೆಲ್ಲಾ, ಅಪ್ಪ ಅಮ್ಮನ ಹೊಡೆತಕ್ಕೆ ಹೆದರಿಯೋ, ಉಪಾಧ್ಯಾಯರ ಶಿಕ್ಷೆಗಳ ಭಯಕ್ಕೋ,
ಮಾರ್ಕ್ಸ್ ಕಡಿಮೆ ಬಂದರೆ ಮುಂದೆ ಒಳ್ಳೇ ಕೆಲಸ ಸಿಗುವುದಿಲ್ಲ ಎಂಬ ಭಯಕ್ಕೋ ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ.
ನನಗೆ ಇಡೀ ವರ್ಷವನ್ನ ಅವಲೋಕಿಸಿದರೆ ಬಹುಪಾಲು ಓದುತ್ತಿದ್ದುದು, ಬರೆಯುತ್ತಿದ್ದುದೇ ನೆನಪಿಲ್ಲಿರುತ್ತಿತ್ತು.
ಆದರೂ ನಾನೂ ಪಾಸಾಗಿದ್ದೆ, ಅವನೂ ಪಾಸಾಗಿದ್ದ. ಶಾಲೆ ಅಂತೂ ಮುಗಿಯಿತು.
ನನ್ನ
ತಂದೆತಾಯಿ ಹೋದಲ್ಲೆಲ್ಲಾ ನನ್ನ ಮಗ ಪ್ರಥಮ ದರ್ಜೆ, ನನ್ನ ಮಗ ಪ್ರಥಮ ದರ್ಜೆ ಎಂದು ಬೀಗುತ್ತಾ ಹೇಳಿಕೊಂಡು
ತಿರುಗುತ್ತಿದ್ದರೆ. ಹೇಮಿ ಅಪ್ಪ ಅಮ್ಮ, ಧರಿದ್ರ ಎಲ್ಲಾ ವಿಷ್ಯದಲ್ಲೂ ಚುರುಕಾಗಿದ್ದಾನೆ, ಓದೊಂದು
ತಲೆಗೇ ಹತ್ತಲ್ಲ ಇವನಿಗೆ ಎಂದು ಹೇಳಿಕೊಂಡು ಅವನ ತಲೆಗೆ ಮೊಟಕುತ್ತಿದ್ದರು. ಅದಕ್ಕೂ ನಗುತ್ತಲಿದ್ದ.
ಕಾಲ ಸಂದುತ್ತಾ ಬಂತು ನನಗೆ ಪಾಸ್ ಅಗಲು, ಪಾಠ ಕಲಿತೋ, ಉರುಹೊಡೆದೋ ಒಟ್ಟಿನಲ್ಲಿ ಓದುವುದೊಂದೇ ಮಾರ್ಗವಾಗಿತ್ತು.
ಆದರೆ ಅವನಿಗೆ ಹಲವು ಮಾರ್ಗಗಳು ಹುಟ್ಟಿಕೊಂಡಿತ್ತು. ಪಾಠದ ಜೊತೆಗೆ ಎಲ್ಲ ರೀತಿಯ ಚಟುವಟಿಕೆಗಳಲ್ಲಿ
ಪಾಲ್ಗೊಳ್ಳುತ್ತಿದ್ದ. ನಮ್ಮ ಸುತ್ತಲಿನ ವಾತಾವರಣದಲ್ಲೂ ಬದಲಾವಣೆಗಳಾದವು. ನನ್ನ ತಂದೆತಾಯಿ ಈಗ ಪ್ರಥಮ
ದರ್ಜೆಯಲ್ಲಿ ಪಾಸಾದರೆ ಮಾಮೂಲೆಂಬಂತೆ ಪ್ರತಿಕ್ರಿಯಿಸುತ್ತಿದ್ದರು, ಇಡೀ ಕ್ಲಾಸಿಗೋ, ರಾಜ್ಯಕ್ಕೋ ಪ್ರಥಮ
ದರ್ಜೆಯಲ್ಲಿ ಪಾಸಾದರೆ ಮಾತ್ರ ವಿಶೇಷ ಎಂಬಂತೆ ಅಂಥ ಉದಾಹರಣೆಗಳನ್ನು ಕೊಡಲು ಶುರುಮಾಡಿದ್ದರು. ನಾನೂ
ಅದೇ ಹಾದಿಯಲ್ಲಿ ಶ್ರಮಿಸುತ್ತಿದ್ದೆ. ಹೇಮಿ ಮನೆಯಲ್ಲೂ ಅವನ ಅಪ್ಪ ಅಮ್ಮ ಎಷ್ಟು ಅಂತ ಬಯ್ಗುಳಗಳನ್ನು,
ಹೊಡೆತಗಳನ್ನು ಕೊಡಲು ಸಾಧ್ಯ, ಬುದ್ದಿವಾದಗಳನ್ನು ಹೇಳಲು ಸಾಧ್ಯ, ತನ್ನ ಮಗ ಅಷ್ಟೇ ಎಂದು ಪರಿಗಣಿಸಿಬಿಟ್ಟಿದ್ದರು.
ಅವನು ಏನು ಬೇಕಾದರೂ ಮಾಡಿಕೊಂಡು ಹೋಗಲಿ ಎಂದು ಅವನನ್ನು ತನ್ನ ದಾರಿಯಲ್ಲಿ ಬಿಟ್ಟುಬಿಟ್ಟಿದ್ದರು,
ಅವನ ಮನೆಗೆ ಹೋದಾಗಲೆಲ್ಲಾ ನೋಡಪ್ಪಾ ಏನೋ ಮಾಡ್ತಿದ್ದಾನೆ, ಏನ್ ಹೇಳಿದರೂ ಯಾರ ಮಾತೂ ಕೇಳೋ ಜಾತಿಯಲ್ಲಿ
ಹುಟ್ಲಿಲ್ವಲ್ಲ, ಏನು ಮಾಡಿ ಸಾಯೋಣ ಇವನ್ನ ಕಟ್ಕೊಂಡು, ಅದೇನಾಗ್ತಾನೋ ಅನ್ನೋದೇ ಭಯ ಆಗೋಗಿದೆ ನಮ್ಗೂ.
ಒಂದೊಳ್ಳೇ ಕೆಲಸದಲ್ಲಿ ಸೇರಿದ್ರೆ ಸಾಕು ಆಮೇಲೆ ಅವನ ಜೀವನ ಅವನ್ದು ಎಂಬ ಮೃಧು ಧೋರಣೆ ತಳೆದುಬಿಟ್ಟಿದ್ರು.
ಹೇಮಿ ಎಷ್ಟು ಓದಿದ್ರು ಸಾಕಾಗಲ್ಲ ಕಣೋ ತುಂಬಾ ಸ್ಪರ್ಧೆ ಇದೆ, ಕೆಲಸ ಸಿಗೋದು ತುಂಬಾನೇ ಕಷ್ಟ ಕಣೋ,
ಏನ್ ಮಾಡಬೇಕು ಅಂತ ಇದ್ದೀಯ ನೀನು ಹೀಗಿದ್ದು ಎಂದು ಕೇಳಿದರೆ, ಮಗಾ ಹೇಮಾ ಓದೋಕೆ ನೀನಿದ್ದೀಯಲ್ಲಾ,
ಓದು ಒಳ್ಳೇ ಕೆಲಸಕ್ಕೆ ಸೇರ್ಕೋ, ನನಗೆ ಕೆಲ್ಸ ಮಾಡೋಕೇ ಮೂಡಿಲ್ಲ, ನನ್ನ ಪಾಡಿಗೆ ಎಲ್ಲಾದರೂ ಸುತ್ತಾಡಿಕೊಂಡು
ಇರ್ತೀನಿ ಅಷ್ಟೇ, ಕೆಲಸ ಮಾಡೋದಷ್ಟೇ ಜೀವನನಾ, ನೋಡು, ಓದೀ ಓದೀ ಈಗಲೇ ಅರ್ಧ ಹಾಳಾಗೋಗಿದ್ಯ ಮುಂದೆ
ಏನಾಗ್ತೀಯೋ ಅಂತ ನನಗೆ ಭಯ ಆಗ್ತಾ ಇದೆ. ಹುಶಾರು ಕಣೋ ಎಂದು ನನಗೆ ತಿರುಮಂತ್ರ ಹಾಕಿ ಬಾಯ್ಮುಚ್ಚಿಸಿ
ಕಳುಹಿಸುತ್ತಿದ್ದ.
ನನಗೆ
ನಾನು ಅವನಿಂದ ಹೆಚ್ಚು ಸಾಧಿಸುತ್ತಿದ್ದೀನಿ ಅಂತ ಒಂದು ದಿನಕ್ಕೂ ಅನ್ನಿಸಲಿಲ್ಲ. ಪ್ರತಿಕ್ಷಣ ನನಗೆ
ಅವನನ್ನ ಕಂಡರೆ ಹೊಟ್ಟೆ ಉರಿಯುತ್ತಿತ್ತು. ನಾನು ಏನು ಮಾಡಿದರೂ ಅವನ ರೀತಿ ಬದುಕಲಾಗುತ್ತಿರಲಿಲ್ಲ.
ಅವನಿಗೆ ಬೇಕೆಂದ ಕಡೆ ಹೋಗುತ್ತಿದ್ದ, ಬೇಕೆಂದದ್ದನ್ನ ನೋಡುತ್ತಿದ್ದ, ಬೇಕೆಂದದ್ದನ್ನ ಅನುಭವಿಸುವ
ಮಾರ್ಗ ಹುಡುಕುತ್ತಿದ್ದ, ಹೇಗೋ ತನಗೆ ಬೇಕಾದ ಹಾಗೆ ಬದುಕುತ್ತಿದ್ದ, ನನಗೆ ನನ್ನದೇ ಆದ ಚೌಕಟ್ಟು ನಿರ್ಮಾಣವಾಗುತ್ತಾ
ಹೋಗುತ್ತಿತ್ತು, ನಾನು ಇಂಥದ್ದೇ ಮಾಡಬೇಕು, ನಾನು ಏನಾದರೂ ಕೊಂಚ ನನ್ನ ಹಾದಿಯಿಂದ ಸರಿದರೆ, ಅದರಿಂದ
ನನ್ನ ಘನತೆಗೆ ಧಕ್ಕೆಯುಂಟಾಗುತ್ತದೆ, ನಾನು ಹೀಗೆ ಮಾಡುವಹಾಗಿಲ್ಲ, ನಾನು ಹಾಗೆ ಮಾಡುವಹಾಗಿಲ್ಲ, ಅಲ್ಲಿ
ಹೋಗುವಹಾಗಿಲ್ಲ, ಇಲ್ಲಿ ನಿಲ್ಲುವಹಾಗಿಲ್ಲ, ಅದು ತಿನ್ನುವಹಾಗಿಲ್ಲ, ಇದು ನೋಡುವಹಾಗಿಲ್ಲ, ನನಗೆ ನಾನು
ರೇಸ್ ಗೆ ಬಿಟ್ಟಿರುವ ಕುದುರೆಯಂತೆ ಕಾಣುತ್ತಿದ್ದೆ, ಅವನು ರಾಜಾರೋಷವಾಗಿ ಅಲೆಯುತ್ತಿದ್ದ ಹುಲಿಯಂತೆ
ಕಾಣುತ್ತಿದ್ದ. ಆದರೂ ನನಗೆ ಎಲ್ಲೋ ಒಂದು ಕಡೆ ನನ್ನ ಮಾರ್ಗವೇ ಸರಿ, ನಾನು ಅವನಂತಾದರೆ ಅವನಂತೆಯೇ
ಹಾಳಾಗಿಹೋಗುತ್ತೇನೆ ಎಂದು ಭಾವಿಸಿದ್ದೆ. ನಾನು ನನ್ನ ಡಿಗ್ರಿ ಮುಗಿಸಿ ಕೆಲಸಕ್ಕೆ ಅಲೆಯುತ್ತಿರಲು,
ಅವನು ಇದ್ದಕ್ಕಿದ್ದಂತೆ ನಟನೆ ಮಾಡುವುದಾಗಿ ಸಿನಿಮಾ ರಂಗದಲ್ಲಿ ಅವಕಾಶ ಹುಡುಕುತ್ತಾ ಅಲೆಯುತ್ತಿದ್ದ.
ಆಗಾಗ ಒಂದೊಂದು ಸಿನಿಮಾದಲ್ಲಿ ಅಲ್ಲಿ ಇಲ್ಲಿ ಮುಖ ತೋರಿಸುವ ಮಟ್ಟಿಗೂ ಆಗಿದ್ದ. ನನಗೂ ಒಂದು ಒಳ್ಳೆಯ
ಕಂಪನಿಯೊಂದರಲ್ಲಿ ಕೆಲಸವೂ ದೊರೆಯಿತು. ಅವರ ಮನೆಯಲ್ಲಿ ಏನೋ ತೊಂದರೆಯಾಗಿ ಮನೆ ಬದಲಾಯಿಸಿ ದೂರ ಹೊರಟುಹೋದರು.
ಕೊಂಚ ದಿನಗಳು ಸಂಪರ್ಕದಲ್ಲಿ ಇದ್ದನಾದರೂ ಕಾಣೆಯಾಗಿ ಹೋದ. ವಿದ್ಯೆಯಿಲ್ಲದೇ ಹೋದರೆ ಹಿಂಗೇ ಆಗುವುದು
ಬಂದೆರಗುವ ತೊಂದರೆಯನ್ನು ಎದುರಿಸುವ ಶಕ್ತಿಯಾಗಲಿ, ನಿಭಾಯಿಸುವ ಧೈರ್ಯವಾಗಲಿ ಉಳಿಯುವುದಿಲ್ಲ ಎಂದು
ಎಲ್ಲರೂ ಆಡಿಕೊಂಡರು.
ನನಗೆ ತಿಳಿದ ಹಾಗೆ ನಾನು ಕಾಲೇಜಿನಲ್ಲಿರುವವರೆಗೂ ಮಾರ್ಕ್ಸ್ ಗಾಗಿ ಓದುತ್ತಿದ್ದರೆ, ಅವನು ತನ್ನ ಮನಸಂತೋಷಕ್ಕಾಗಿ ಹಲವು ಇತರೆ ಪುಸ್ತಕಗಳನ್ನು ಓದುತ್ತಿದ್ದ. ನಾನಿನ್ನು ಕಲಿಯುತ್ತಿರುವ ಸಮಯದಲ್ಲೇ ಅವನು ಗಳಿಸುವ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದ. ನನಗೆ ಈಗ ಸಿಕ್ಕಿರುವ ಕೆಲಸ ಹೋಯಿತೆಂದರೆ ಮುಂದೇನೆಂದು ನನಗೆ ಗೊತ್ತಿರಲಿಲ್ಲ ಆದರೆ ಅವನು ಎಲ್ಲಿದ್ದರು ಗೆಲ್ಲಬಲ್ಲ ಪ್ರಪಂಚ ಜ್ಞಾನವನ್ನ ಹೊಂದಿದ್ದ ಅನ್ನಿಸುತ್ತೆ. ಆದರೆ ಅವನು ಏನೇ ಮಾಡಿದರೂ ಆರಕ್ಕೆ ಏರುತ್ತಿರಲಿಲ್ಲ, ಮೂರಕ್ಕೆ ಇಳಿಯುತ್ತಿರಲಿಲ್ಲ. ಎಲ್ಲೋ ಏನೋ ತೊಂದರೆಗೆ ಸಿಲುಕಿ ನಲುಗುತ್ತಿದ್ದ. ಅವನು ಯಾವಾಗಲೂ ನಿನ್ನ ಜೀವನಾನೇ ಒಂಥರಾ ಸುರಕ್ಷಿತ ಕಣೋ. ಓದು, ಓದು ಮುಗಿದ ನಂತರ ಒಳ್ಳೇ ಕೆಲಸ ನಮ್ಮ್ ತರಹನಾ ಎಂದು ಯಾವಾಗಲೂ ಹೇಳುತ್ತಿದ್ದ. ಅವನೂ ಒಳಗೊಳಗೇ ನನ್ನ ಜೀವನ ಶೈಲಿಯನ್ನು ಮೆಚ್ಚಿದ್ದನೆಂದ್ ಕಾಣುತ್ತದೆ. ಹಲ್ಲಿದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲೇ ಇಲ್ಲ ಎಂಬಂತಾಗಿತ್ತೇನೋ ನಮ್ಮ ಕಥೆ. ಅವನು ಏನಾದರೊಂದು ಹೊಸ ತರಲೆಗಳಿಗೆ ಕೈ ಹಾಕುತ್ತಲೇ ಇದ್ದ, ಒಮ್ಮೆ ಮೊಗೈಲ್ ಅಂಗಡಿ ಹಾಕುವೆನೆಂದು ಹೊರಟ, ಇನ್ನೊಮ್ಮೆ ಶೇರಿನಲ್ಲಿ ಹಣ ಹೂಡುವುದಾಗಿ ಹೊರಟ, ಮತ್ತೊಮ್ಮೆ ಹೋಲ್ ಸೇಲ್ ವ್ಯಾಪಾರ ಶುರುಮಾಡುವುದಾಗಿ ನಿಂತ, ಮಗದೊಮ್ಮೆ ಇನ್ನೇನೋ ಮಾಡುವೆನೆಂದು ಊರೂರು ಅಲೆಯುತ್ತಿದ್ದ, ಅದಕ್ಕೆ ದುಡ್ಡೆಲ್ಲೆಲ್ಲಿಂದ ಸೇರಿಸುತ್ತಿದ್ದನೋ, ಧೈರ್ಯ ಹೇಗೆ ಮಾಡುತ್ತಿದ್ದನೋ, ಇಷ್ಟೆಲ್ಲಾ ಓದಿರುವ ನನಗೆ ಒಂದು ದಿನಕ್ಕೂ ಹೊಸ ದಾರಿಯಲ್ಲಿ ಹೋಗಲು, ಒಂದು ಹೊಸ ಹೆಜ್ಜೆ ಇಡಲೂ ನೂರು ಬಾರಿ ಯೋಚಿಸುವಂತಾಗುತ್ತಿತ್ತು. ವಿದ್ಯಾಭ್ಯಾಸ ನನ್ನಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ವಿಫಲವಾಗಿತ್ತೇನೋ.
ಅಂತೂ
ಎಂದೋ ಕಳೆದುಹೋದವನನ್ನು ಹೇಗೋ ಪತ್ತೆ ಹಚ್ಚಿ ಹುಡುಕಿ ಸಂಪರ್ಕಸಿದ್ದಕ್ಕೆ ಕನಕಪುರದಲ್ಲಿರುವುದಾಗಿ
ತಿಳಿಯಿತು. ಈಗ ಅವನೇ ನನ್ನನ್ನು ಮಾತನಾಡಬೇಕೆಂದು ಕರೆದಿದ್ದಾನೆ. ಹೋಗಿ ನೋಡಿಕೊಂಡುಬರುವುದೆಂದು ಹೊರಟವನು
ಈ ಎಲ್ಲಾ ಹಳೆಯ ವಿಷಯಗಳನ್ನು ಮೆಲುಕು ಹಾಕುವಷ್ಟರಲ್ಲಿ ಅದೇ ಕಟ್ಟುಮಸ್ತು ದೇಹದ ಲವಲವಿಕೆ ಹೇಮಿ ಎದುರುಗೊಂಡ,
ನನ್ನ ಅರ್ಧ ಬೋಳು ತಲೆಯನ್ನು ನೋಡಿ, ಹೊಡೆದು, ಏನೋ ಹೇಮಾ ವಿದ್ಯಾಭ್ಯಾಸದ ಅಡ್ಡಪರಿಣಾಮಾನಾ ಇದು ಎಂದು
ಚೆನ್ನಾಗಿದೆ ಕಣೋ ಹೇರ್ ಸ್ಟೈಲ್ ಎಂದು ಹೇಳಿ ಸ್ವಚ್ಚಂದವಾಗಿ ನಗುತ್ತಲೇ ಒಂದು ಲಡಾಸು ಜೀಪ್ ಹತ್ತಿಸಿ
ಕನಕಪುರದಿಂದ ಒಂದಿಪ್ಪತ್ತೈದು ಕಿಲೋಮೀಟರ್ ಕರೆದೊಯ್ದ. ಹೋಗುತ್ತಾ ಹಾದಿಯಲ್ಲೆಲ್ಲಾ ತನ್ನ ತೋಟವನ್ನು
ತೋರಿಸುತ್ತಾ ಕರೆದೊಯ್ದ. ಹೊಸ ಮನೆ, ಹೊಸ ಮಡದಿಯನ್ನು, ತನ್ನ ಪ್ರಪಂಚವನ್ನು ಪರಿಚಯಿಸಿ ಇನ್ನಷ್ಟು
ನಕ್ಕ. ತನ್ನ ಹೊಸ ಹೊಲವನ್ನೂ ತೋರಿಸಿ ಅಲ್ಲಿ ವ್ಯವಸಾಯದಲ್ಲಿ ತಾನು ಅಳವಡಿಸಬೇಕೆಂದಿರುವ ಹೊಸ ವಿಧಾನದ
ಬಗ್ಗೆಯೂ ವಿವರಿಸಿದ. ಕೊನೆಗೆ ನನಗೆ ಇಷ್ಟವಿದ್ದಲ್ಲಿ ಆ ಯೋಜನೆಯ ಉಸ್ತುವಾರಿಯನ್ನು ಹೊರಿಸುವುದಾಗಿ
ಕೂಡ ಹೇಳಿದ. ನನ್ನಲ್ಲಿ ಅಷ್ಟೋತ್ತೂ ಹೊರಹೊಮ್ಮುತ್ತಿದ್ದ ಹಳೆಯ ಆಲೋಚನೆಗಳಿರಲಿ, ಹೊಸ ಮಾತುಗಳೂ ಯಾವುವೂ
ಹುಟ್ಟುತ್ತಿರಲಿಲ್ಲ. ಹೇಮಿ ನಾನಂದುಕೊಂಡದ್ದಕ್ಕಿಂತ ಬೆಳೆದು ನಿಂತಿದ್ದ. ನಾನು ಅಕ್ಷರಶಹ ಬೆಪ್ಪನಂತೆ
ಬಾಯ್ಕಳೆದುಕೊಂಡು ನಿಂತು ಎಲ್ಲವನ್ನೂ ನೋಡಿದೆನಷ್ಟೇ!
-ಹೇಮಂತ್
No comments:
Post a Comment