ಓದಿ ಓಡಿದವರು!

Saturday 3 March 2012

ಕ್ರೌರ್ಯ – ಕನಸು


ಮುನ್ನುಡಿ: ಏನಾದರೂ ಆಗು ಮೊದಲು ಮಾನವನಾಗು!

ರುಂಡವೊಂದು ರಕ್ತಸಿಡಿಸುತ್ತಾ ಗಾಳಿಯನ್ನು ಸೀಳುತ್ತಾ ನನ್ನ ಕಡೆಗೇ ಧಾವಿಸುತ್ತಿತ್ತು. ನನ್ನ ಮೇಲೇ ಎರಗಬಹುದೆಂದುಕೊಂಡು ಸರಪಳಿಗಳನ್ನು ಹಿಡಿದಿದ್ದ ನನ್ನ ಕೈಯನ್ನು ಭಯದಿಂದ ಮುಖಕ್ಕೆ ಅಡ್ಡಲಾಗಿ ಹಿಡಿದುಕೊಂಡೆ. ನನ್ನತ್ತ ಬರುತ್ತಿದ್ದ ರುಂಡ ಅಡ್ಡಬಂದ ಇನ್ನಾರ ಮುಂಡಕ್ಕೋ ಬಡಿದು ರಕ್ತಮಯಗೊಳಿಸಿ ಕೆಳಗೆ ಬಿತ್ತು. ಸುಧಾರಿಸಿಕೊಳ್ಳುವಷ್ಟರಲ್ಲಿ ಕೈಲಿದ್ದ ಮೂರು ಸರಪಳಿಗಳನ್ನ ಮೂವರೂ ಜಗ್ಗುತ್ತಾ ಪ್ರತಿಕ್ರಿಯಿಸಲು ಶುರುಮಾಡಿದರು. ಅತ್ತ ಕ್ರೌರ್ಯದ ಅಟ್ಟಹಾಸ ಇತ್ತ ಈ ಮೂವರ ನಗು, ಅಳು, ಕ್ರೋಧದ ಅಟ್ಟಹಾಸ. ಮೂರೂ ಸೇರಿ ನನ್ನೊಳಗೂ, ಸುತ್ತಲೂ ಕೋಲಾಹಲವನ್ನೆಬ್ಬಿಸುತ್ತಿದ್ದರು. ಬೀಸುತ್ತಿದ್ದ ಬಿರುಗಾಳಿಯಲ್ಲಿ ಇಡೀ ಊರೆಂಬೋ ಊರೇ ಶಂತವಾಗಿ ಒಳಗೆ ಸೇರಿಕೊಂಡಿದ್ದರೂ, ಊರಿನ ನಟ್ಟ ನಡುವೆ ಇದ್ದ ಈ ಚಿಕ್ಕ ವೃತ್ತಾಕಾರದ ಬಯಲಿನಲ್ಲಿ ಸೇರಿದ್ದ ಕೆಲವು ಕ್ರೂರ ಮೃಗಗಳಂತೆ ಕಂಗೊಳಿಸುತ್ತಿದ್ದ ಮಾನವಾಕೃತಿಗಳು ಬಗೆ ಬಗೆಯ ಆಯುಧಸನ್ನದ್ಧರಾಗಿ ತಮ್ಮ ತಮ್ಮಲ್ಲೇ ಕ್ರೂರವಾಗಿ ಹೊಡೆದಾಡಿಕೊಳ್ಳುತ್ತಿದ್ದರು. ಒಂದು ಆಕೃತಿ ಕಂಗಳಲ್ಲಿ ಬೆಂಕಿ ಉಗುಳುತ್ತಾ, ತನ್ನ ಕೈಲಿದ್ದ ದುಂಡನೆಯ ಅಸ್ತ್ರದಿಂದ ಇನ್ನೊಂದು ಆಕೃತಿಯ ತಲೆಯ ಮೇಲೆ ಜಜ್ಜಲು ತಲೆ ಮೂರು ಹೋಳಾಗಿ ಚಿಲ್ಲನೆ ರಕ್ತದ ಬುಗ್ಗೆ ಹೊರಹೊಮ್ಮಿತು. ಹೊರ ಹೊಮ್ಮಿದ ಬುಗ್ಗೆ, ಅಸ್ತ್ರಕ್ಕೆ, ಅಸ್ತ್ರ ಹಿಡಿದಿದ್ದ ಆಕೃತಿಯ ಮೈಕೈಗೆ ಸುತ್ತಲಿದ್ದ ಇನ್ನೊಂದಷ್ಟು ಆಕೃತಿಗಳಿಗೆ ಲೇಪಿತವಾಗಿ ಇನ್ನಷ್ಟು ಶೋಭಾಯಮಾನಗೊಳಿಸಿತು. ಅಲ್ಲಿದ್ದೆಲ್ಲ ಮಾನವಾಕೃತಿಗಳ ವಿರೂಪ ಕೋರೆ ಹಲ್ಲುಗಳು, ರಕ್ತಕ್ಕಾಗಿ ಹಪಹಪಿಸುತ್ತಾ ಹೊರಬಿಟ್ಟಿದ್ದ ನಾಲಗೆಗಳು, ಅಷ್ಟಷ್ಟಗಲ ಬಿಟ್ಟಿದ್ದ ಕೆಂಗಣ್ಣುಗಳು, ಮುಖಗಳಿಗೆ ಲೇಪಿತವಾಗಿದ್ದ ಕೆಂಪನೆಯ ನೀರು, ಮತ್ತು ಶಸ್ತ್ರಗಳಿಂದ ಅಲಂಕೃತರಾಗಿ ನಮ್ಮ ಮುಕ್ಕೋಟಿ ದೇವರುಗಳನ್ನು ಹೋಲುತ್ತಿದ್ದರು. ಆದರೆ ವಿಪರ್ಯಾಸವೆಂದರೆ ದೇವರುಗಳು ಮೈದಳೆದು ತಮ್ಮತಮ್ಮಲ್ಲೇ ಕಾದಾಡುತ್ತಿದ್ದುದು. ಯಾರು ಯಾರಿಗೆ ಯಾಕೆ ಕೈಕಾಲು ಕತ್ತರಿಸುತ್ತಿದ್ದರೂ ನನಗಂತೂ ಗೊತ್ತಿಲ್ಲ, ಆದರೆ ಆ ಭೀಬತ್ಸ ಪರಿಸರದಿಂದ ಅದೆಷ್ಟು ಬೇಗ ಪಾರಾಗುವೆನೋ ಎಂದು ಹಾತೊರೆಯುತ್ತಿದ್ದೆನು. ಆದರೆ ಸರಪಳಿಯಿಂದ ಬಂಧಿತರಾಗಿ, ಸರಪಳಿಯ ಸೂತ್ರ ನನ್ನ ಕೈಗಿಟ್ಟು ಆ ಕ್ರೌರ್ಯಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದ ಆ ಮೂವರಿಂದಲೂ ಕೂಡ ನಾನು ಪಾರಾಗಬೇಕಿತ್ತು. ಏನು ಮಾಡಿದರೂ ಆ ಸರಪಳಿಯನ್ನ ಬಿಡಲಾಗಲಿಲ್ಲ. ಆ ಮೂವರನ್ನು ಬಂಧಿತರನ್ನಾಗಿಸಿ ನಾನು ಸೂತ್ರ ಹಿಡಿದಿದ್ದೆನೋ ಅಥವಾ ನನ್ನನ್ನು ಬಂಧಿತನನ್ನಾಗಿಸಿ ಆ ಮೂವರೇ ಸೂತ್ರವನ್ನು ಹಿಡಿದಿದ್ದರೋ ಯೋಚಿಸಲು ಪ್ರಯತ್ನಿಸಿದರೂ ಸಹಿತ ಗೊಂದಲ ಹೆಚ್ಚಾಗುತ್ತಿತ್ತು. ಅತ್ತ ದರಿ ಇತ್ತ ಪುಲಿ ಮಧ್ಯೆ ನಾನು ಈ ಮೂವರ ಕಡೆ ನೋಡಲಾಗದೆ ಅತ್ತ ರಣಾಂಗಣದ ಕಡೆ ನಿರ್ಲಿಪ್ತನಾಗಿ ದೃಷ್ಟಿ ಹಾಯಿಸಿದರೆ ರಣಾಂಗಣದ ಹಿಂದೆ ಬಹುದೂರದಲ್ಲಿ ದೊಡ್ಡ ಬಿಳಿ ಕೈ ಮುರಿದ ಪುತ್ಥಳಿಯೊಂದು ದೃಷ್ಟಿ ಸೆಳೆಯಿತು. ಆ ಪುತ್ಥಳಿ ಕಣ್ಣಿಗೆ ಕಟ್ಟಿದ್ದ ಕಪ್ಪು ಬಟ್ಟೆ ಹಾಗೇ ಇತ್ತು, ಅದರ ಕಾಲಬಳಿ ಕತ್ತರಿಸಿದ್ದ ಕೈಯೊಂದಿಗೆ ತಕ್ಕಡಿಯೊಂದು ಬಿದ್ದಿತ್ತು. ಅದರ ಮುಂದೆ ರಕ್ತದೋಕುಳಿ ಮುಂದುವರೆದಿತ್ತು. ಆ ಮನಕಲುಕುವ ದೃಶ್ಯಕ್ಕೆ ಬೆನ್ನು ಮಾಡಿದರೆ ಮುಂದೆ ಅಳುತ್ತಿದ್ದವನು ಅಳುತ್ತಲೇ ಇದ್ದ, ನಗುತ್ತಿದ್ದವನು ನಗುತ್ತಲೇ ಇದ್ದ, ಬೊಗಳುತ್ತಿದ್ದವನು ಬೊಗಳುತ್ತಲೇ ಇದ್ದ. ಕಣ್ಣು ಕಿವಿ ಮುಚ್ಚಿದರೂ ಇವರೆಲ್ಲರೂ ಒಟ್ಟು ಸೇರಿ ಸೃಷ್ಟಿಸುತ್ತಿದ್ದ ದಾಂಧಲೆ ಒಳಹೊಕ್ಕು ಕೋಲಾಹಲ ಎಬ್ಬಿಸುವುದನ್ನು ತಡೆಯಲು ನನ್ನಿಂದ ಸಾಧ್ಯವಾಗಲೇ ಇಲ್ಲ.

ಹಯ್ಯೋ… ಒಬ್ಬರನ್ನೊಬ್ಬರು ನರಭಕ್ಷಕರಂತೆ ಹೀಗೆ ಭಕ್ಷಿಸುತ್ತಿದ್ದಾರಲ್ಲಾ, ಯಾರು ಇವರನ್ನು ಕಾಪಾಡುವುದು, ಆ ಪುತ್ಥಳಿ ಕೈ ಮುರಿದಿದೆ ಯಾರು ಅದನ್ನು ಮತ್ತೆ ಜೋಡಿಸುವುದು, ಈ ಗೋಳು ನೋಡಲಾಗದೆ ಮೈಲಿದ್ದ ನೀರೆಲ್ಲಾ ಖಾಲಿಯಾದರೂ, ಮನಸಲ್ಲಿ ಮಡುಗಟ್ಟಿರುವ ನೋವು ಮಾತ್ರ ಕಡಿಮೆಯಾಗುತ್ತಿಲ್ಲವಲ್ಲ. ಸಾಯುತ್ತಾ ವಿಲವಿಲನೆ ಒದ್ದಾಡುತ್ತಿರುವುದು ಬೇರಾರೂ ಅಲ್ಲ ನಮ್ಮವರೇ. ಆನೆ ಆನೆಯನ್ನು, ಹುಲಿ ಹುಲಿಯನ್ನು ಕೊಲ್ಲುವುದನ್ನ ಎಲ್ಲಾದರೂ ನೋಡಿದ್ದೀರಾ, ಇವರು ಮಾತ್ರ ಯಾಕೆ ಇವರಿವರಲ್ಲೇ ಹೀಗೆ ಕಚ್ಚಾಡುತಿದ್ದಾರೆ. ಇಂದು ಇಲ್ಲಿ ಹುಟ್ಟಿರುವ ಬಿರುಗಾಳಿ, ಬೆಂಕಿ ಮಳೆ ನಮ್ಮನ್ನೂ ಅತಿ ಶೀಘ್ರದಲ್ಲಿ ನುಂಗಿಹಾಕದೆ ಇರುವುದಿಲ್ಲ. ಇವರು ಬಿತ್ತುತ್ತಿರುವ ಕ್ರೌರ್ಯ ಹಬ್ಬುತ್ತಾ ಇಡೀ ಊರನ್ನು ನಾಶ ಮಾಡಿದರೆ ಇವರಿಗೆ ಏನು ಲಾಭವಾಗುತ್ತದೆ ಎಂದು ತನ್ನ ಕರುಳಿನ ಆಕ್ರಂದನವನ್ನ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮುಂದುವರೆಸುತ್ತಲೇ ಇದ್ದ ಎಡಗಡೆ ಇದ್ದಾತ. ಒಂದೇ ಕ್ಷಣದಲ್ಲಿ ಆತ ಹೆಣ್ಣಿನ ರೂಪತಳೆದಂತಾಯ್ತು. ಅರೆ ಇದು ಹೆಣ್ಮನಸ್ಸು ಅದಕ್ಕೇ ಈ ಕೋಲಾಹಲವನ್ನ ಕಂಡು ಹೀಗೆ ಮಮ್ಮಲಮರುಗುತ್ತಿದೆ. ಆದರೆ ಈ ಹೆಣ್ಣಿಗೂ ಆ ರಣಾಂಗಣದಲ್ಲಿನ ದೇವಾನುದೇವತೆಗಳಿಗೂ ಏನು ಸಂಬಂಧವಿರಬಹುದು. ಅವರಿಗಾಗಿ ಈಕೆಯಾಕೆ ಕಣ್ಣೀರಿಡುತ್ತಿದ್ದಾಳೆ. ಹೋ ಅಲ್ಲಿ ಏಳುತ್ತಿರುವ ಕಾಳ್ಗಿಚ್ಚು ತನ್ನಂತಹ ತನ್ನನ್ನೂ ಸುಡುವುದೆಂದು ಹೆದರಿ ಹೀಗೆ ಮಾತನಾಡುತ್ತಿರುವಳು ಎಂದು ಒಳಗೇ ಅನಿಸಿದರೂ ಅವಳನ್ನು ಪ್ರಶ್ನಿಸುವ ಮನಸು ಬರಲಿಲ್ಲ. ಆ ಎಲ್ಲಾ ದೇವರುಗಳ ಕೃತ್ಯವನ್ನು ತಡೆಯಬೇಕು ಬಿಡು ನನ್ನ ಬಿಡು… ಎಂದು ಮೈತುಂಬಾ ಒದ್ದೆ ಮಾಡಿದ್ದ ಕಣ್ಣಿರನ್ನು ಕಣ್ಣಿನ ಬಳಿ ಮಾತ್ರ ಒರೆಸಿಕೊಂಡು ನನ್ನ ಕೈಯಲ್ಲಿನ ಸರಪಳಿಯನ್ನು ಜಗ್ಗತೊಡಗಿದಳು. ಆಕೆ ಕೂಡ ನಾನು ಸರಪಳಿ ಹಿಡಿದಿದ್ದೆ ಎಂದು ತಿಳಿದಿದ್ದಳೋ ಏನೋ ಅದರೆ ಅವಳ ಕೋಳವನ್ನು ಬಿಡಿಸುವ ಶಕ್ತಿ ನನ್ನಲ್ಲೂ ಇರಲಿಲ್ಲ. ಆ ಬಿರುಗಾಳಿಯೆಡೆಗೆ ನುಗ್ಗಲು ಪ್ರಯತ್ನಿಸುತ್ತಾ ಸರಪಳಿಗಳನ್ನು ಎಳೆಯುತ್ತಲೇ ಇದ್ದಳು ಹಯ್ಯೋ.. ತಡೆಯಿರಿ…  ಹಯ್ಯೋ ಎದೆ ಎದೆ ಬಡಿದುಕೊಳ್ಳುತ್ತಾ ಕಿವಿ ಸೀಳಿಹೋಗುವಹಾಗೆ ಅರಚುತ್ತಲೇ ಇದ್ದಳು. ಪಕ್ಕದಲ್ಲೇ ಇದ್ದಾತ ನಗಲಾರಂಭಿಸಿದ.

ಆತ ನಗುವಿನ ಶಬ್ಧಕ್ಕೇ ಸುತ್ತಲಿದ್ದ ಎಷ್ಟೋ ಪಕ್ಷಿಗಳು ಸತ್ತುಹೋದವೆಂದು ಕಾಣುತ್ತದೆ. ಹೊಡೆಯಿರಿ, ಕತ್ತರಿಸಿ, ಚುಚ್ಚಿ, ಕರುಳು, ಮೆದುಳೆಲ್ಲವನ್ನೂ ಕಿತ್ತು ಹೊರಗೆಸೆಯಿರಿ ಆಹಾ… ಹಾಗೆ ಹಹಹಹಹಹಹಹಹಹಹಹಾ…. ಎಂದು ಆ ದೇವರುಗಳ ರಾಸಲೀಲೆಯನ್ನು ನೋಡಿ ಕಣ್ತುಂಬಿಸಿಕೊಂಡು ಮನಃಪೂರ್ವಕವಾಗಿ ಆನಂದಿಸುತ್ತಿದ್ದ. ಹಹಹ್ಹ… ಅಲ್ಲಿ ನೋಡಿ ನಾಲ್ಕು ಮಂದಿ ಸೇರಿ ಒಬ್ಬನನ್ನೇ ಥಳಿಸುತ್ತಿದ್ದಾರೆ. ಆಹಾ ಹಬ್ಬ ಈ ದಿನವೇ ಹಬ್ಬ ಇಂತಹ ಹಬ್ಬ ದಿನಕ್ಕೆ ಒಮ್ಮೆಯಾದರೂ ನಡೆಯಬೇಕು ಪರಮಾನಂದ, ಪರಮಾನಂದ ಎಂದು ಕೂಗುತ್ತಲಿದ್ದುದನ್ನು ಕೇಳಿಯೇ ಯಾರೋ ಮೇಲಿನಿಂದ ಮರದ ಪೀಠೋಪಕರಣಗಳನ್ನ ಎಸೆದು ಎಷ್ಟೋ ಮಡಕೆಯಂತಹ ತಲೆಗಳು ಹೋಳುಹೋಳಾಗುವುದನ್ನ ಚೀತ್ಕಾರಗಳೊಂದಿಗೆ ಹರ್ಷಿಸಿದರು. ಬನ್ನಿ ನಾವೂ ಅವರನ್ನು ಪ್ರೋತ್ಸಾಹಿಸುತ್ತಾ ಹುರುಪು ತುಂಬೋಣ ಎಂದು ಅರಚುತ್ತಾ ಚಪ್ಪಾಳೆ ತಟ್ಟುವಾಗ ಈತ ನಪುಂಸಕನಂತೆ ಕಂಡ. ಕ್ಯಾಕರಿಸಿ ಆತನ ಮುಖಕ್ಕೆ ಉಗಿಯಬೇಕೆನಿಸಿತು. ಸಾಯುತ್ತಿರುವವರನ್ನು ಕಂಡು ಸಂತೋಷ ಪಡುತ್ತಿರುವನಲ್ಲ ಎಂದು ಬೇಸರವೂ ಆಯ್ತು ಆದರೆ ಆತ ಇನ್ನೊಂದಷ್ಟು ಜನರನ್ನು ಹುರಿದುಂಬಿಸಲು, ಬಿರುಗಾಳಿ ಹೆಚ್ಚಿಸಲು ಸರಪಳಿಯನ್ನು ಜಗ್ಗುತ್ತಾ ಅವರೆಡೆಗೆ ನುಗ್ಗುತ್ತಲಿದ್ದ.

ಇವರಿಬ್ಬರನ್ನೂ ಕೆಂಗಣ್ಣುಗಳಿಂದ ದುರುದುರನೆ ನೋಡುತ್ತಿದ್ದ ಗಂಡೆಸೆಂಬೋ ಗಂಡಸು ಸರಪಳಿಗಳನ್ನೇ ತನ್ನ ಆಯುಧವನ್ನಾಗಿ ಮಾಡಿಕೊಂಡು ನಾನು ಮಾಡಬೇಕೆಂದಿದ್ದ ಕಾರ್ಯವನ್ನು ತಾನೇ ಮಾಡಿದನು ಕ್ಯಾಕರಿಸಿ ಇಬ್ಬರಿಗೂ ಉಗಿದು, ಸರಪಳಿಗಳಿಂದಲೇ ಇಬ್ಬರನ್ನೂ ಮುಖ ಮೂತಿ ನೋಡದೇ ಚಚ್ಚಿದನು. ಚಚ್ಚಿದರೂ ಆಕೆಯ ಅಳು, “ಅದರ” ನಗು ಮಾತ್ರ ಕಡಿಮೆಯಾಗಲಿಲ್ಲ. ಇನ್ನೂ ಹೆಚ್ಚು ಮಾಡಿ ಸಂದರ್ಭಕ್ಕೆ ಇನ್ನಷ್ಟು ಕಳೆ ತಂದರು. ಆತನ ಆವೇಶ ಅವರುಗಳ ವರ್ತನೆಯಿಂದ ಇನ್ನಷ್ಟು ಹೆಚ್ಚಾಯಿತು. ಆ ಮಾನವಾಕೃತಿ ದೇವರುಗಳು, ಹಿಂದೆಯಿರುವ ಅರ್ಧಂಬರ್ಧ ಪುಡಿಯಾದ ಪುತ್ಥಳಿ, ಇಲ್ಲಿ ಅಳುತ್ತಾ, ನಗುತ್ತಾ ಪ್ರತಿಕ್ರಿಯೆ ನೀಡುತ್ತಿರುವ ಪ್ರತಿಯೊಬ್ಬರನ್ನು ತುಳಿದು ಹಿಸುಕಿ ಅವಶೇಶವೂ ಸಿಗದಂತೆ ಮಾಡಬೇಕು. ಇವರೆಲ್ಲಾ ಯಾಕಿಲ್ಲಿ ಬದುಕಿದ್ದಾರೆ, ಇವರ ಹೆಗಲ ಮೇಲೆ ಇರುವ ಹೊಣೆಯಾದರೂ ಏನು, ಬೇಲಿಯಾಗಲು ಬಿಟ್ಟರೆ ಹೊಲ ಮೇಯಲು ಹತ್ತಿರುವ ಇವರನ್ನು ಉಳಿಸಿ ಏನು ಫಲ. ಇಂತವರು ಇರುವುದಕ್ಕಿಂತ ನಾಮಾವಶೇಷವಾಗುವುದೇ ಲೇಸು. ಇವನ ರೋಷದ ಮಾತಿಗೆ ಆಕೆ ಮತ್ತಷ್ಟು ಅತ್ತಳು, ನಾನು ಹೇಳಲಿಲ್ವ ಈ ಕಾಡ್ಗಿಚ್ಚು ನಮ್ಮನ್ನೂ ಬಿಡುವುದಿಲ್ಲ ಇದು ಹರಡುತ್ತಾ ಹೋಗುತ್ತದೆ. ವಿನಾಶ! ವಿನಾಶ! ವಿನಾಶ! ಇದನ್ನು ಈಗಲೇ ತಡೆಯಬೇಕು ಎಂದು ಇನ್ನಷ್ಟು ರೋಧಿಸಹತ್ತಿದಳು. ಹಾ… ಹಾ…. ಹಾ… ಹೋಗಲೀ… ಎಲ್ಲಾ ನಾಶವಾಗಿ ಹೋಗಲಿ ಎಂದು ನಪುಂಸಕ ನಕ್ಕ. ಎಲ್ಲರನ್ನೂ ಸುಡುವೆನು ಎಂದು ವೀರನು ಎಲ್ಲರನ್ನೂ ಎಳೆದಾಡುತ್ತಲಿದ್ದ. ಹಿಂದೆ ಬಿರುಗಾಳಿಗೆ ಎದ್ದ ಧೂಳು ಸುತ್ತಾನಾಲ್ಕು ಕಡೆ ಹರಡುತ್ತಿತ್ತು. ಎಲ್ಲರೂ ಕಣ್ಬಿಡಲಾಗದೆ ಅದರಲ್ಲೂ ಹೊಡೆದಾಡುತ್ತಾ ನಮ್ಮ ಸುತ್ತ ಹರಡಿಕೊಂಡರು. ಸರಪಳಿಗಳು ಕಿತ್ತುಕೊಂಡು ಹೋದವು. ಯಾರು ಯಾರು ಎಲ್ಲೆಲ್ಲಿ ಸೇರಿಹೋದರೋ, ಯಾರು ಯಾರನ್ನ ತಡೆದರೋ ಯಾರು ಯಾರನ್ನ ಹುರಿದುಂಬಿಸಿದರೋ, ಯಾರು ಯರನ್ನ ಮುಗಿಸಿದರೋ, ಯಾರು ಗೆದ್ದರೋ ಯಾರು ಸೋತರೋ ಒಂದೂ ತಿಳಿಯಲಿಲ್ಲ. ಯಾರು ಸೋತರೂ, ಗೆದ್ದರೂ, ಸೋಲು ಮಾತ್ರ ಮನುಷ್ಯನದ್ದೇ ಎಂದು ತಿಳಿದಿತ್ತು ನನಗೆ. ಕಣ್ಮುಚ್ಚಿಕೊಂಡೇ ಅವರಿವರಿಗೆ ಗುದ್ದಿಕೊಂಡೇ ಓಡಿದೆ.

ಬಿರುಗಾಳಿ ಕ್ರಮೇಣ ಕಡಿಮೆಯಾಗುತ್ತಾ ಹೋಯ್ತು. ಆ ಪುಟ್ಟ ವೃತ್ತಾಕಾರದ ಬಯಲಿಂದ ದೊಡ್ಡಾ ವಿಶಾಲ ಪ್ರಪಂಚದ ಕಡೆಗೆ ಓಡಿದೆ. ಇಡೀ ಪ್ರಪಂಚ ನೆಮ್ಮದಿಯಾಗಿ ನಿದ್ರೆ ಮಾಡುತ್ತಿದೆ ಎಂದೊಮ್ಮೆ ಎನಿಸಿತು. ಹಿಂದೆ ತಿರುಗುವ ಧೈರ್ಯವೂ ಇಲ್ಲದೆ ಜೀವದಲ್ಲಿ ಜೀವವಿರುವವರೆಗೂ ಓಡುವುದೆಂದು ತೀರ್ಮಾನಿಸಿ ಓಡಿದೆ. ಒಂದಷ್ಟು ಪ್ರಾಣಿಗಳೋಪಾದಿಯಲ್ಲಿ ಹೊತ್ತುಹೋಗುತ್ತಿದ್ದ ವಾಹನವೊಂದನ್ನು ಏರಿದೆ. ಸುತ್ತ ಕುಳಿತಿದ್ದವರಲ್ಲಿ ಕೆಲವರು ತಲೆ ಒಡೆಯುತ್ತಿದ್ದ ದೇವರುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಜೀವಕಳೆದುಕೊಂಡ ದೇವರುಗಳನ್ನ ಬೆಂಬಲಿಸುತ್ತಾ ತಮ್ಮಲ್ಲಿನ ಕ್ರೌರ್ಯವನ್ನ ಹೊರಗೆಡವುತ್ತಿದ್ದರು. ಹಯ್ಯೋ ಬೆಂಕಿಯಿಂದ ಬಾಣಲೆಗೆ ಬಿದ್ದ ಹಾಗೆ ಈ ವಾಹನದಲ್ಲಿ ಬಿದ್ದಂತೆ ಭಾಸವಾಯ್ತು. ಆ ವಾಹನದಿಂದ ಏಳುತ್ತಿದ್ದ ಕಪ್ಪನೆಯ ಹೊಗೆ, ಒಳಗೆ ತೂರಿ ಬಿರುಗಾಳಿಯಷ್ಟೇ ಭಯಾನಕವೆನಿಸಿತು. ಆ ಹೊಗೆಯಲ್ಲಿ ನನ್ನ ಕೈಯಲ್ಲಿ ಸರಪಳಿಗಳು ಮತ್ತೊಮ್ಮೆ ಕಾಣಿಸಿಕೊಂಡವು ಎದುರಿಗಿದ್ದವರೆಲ್ಲಾ ಆ ಮೂರು ಹೆಣ್ಣು, ಗಂಡು, ನಪುಂಸಕರಂತೆಯೇ ಕಂಡರು. ಆಕೆ ಹೇಳಿದ ಮಾತು ಮತ್ತೆ ಕಿವಿಯಲ್ಲಿ ಗುಯ್ಗುಡುತಿತ್ತು. ಅಲ್ಲಿ ಹುಟ್ಟಿದ್ದ ಬಿರುಗಾಳಿ ಆಕೆ ಹೇಳಿದಂತೆ ಎಲ್ಲ ಕಡೆಯೂ ಸದ್ದಿಲ್ಲದೆಯೇ ಪಸರಿಸುತ್ತಿತ್ತು. ಆ ಡೊಳ್ಳು ಹೊಟ್ಟೆಯ ವಾಹನದಲ್ಲಿ ಕೂರಲಾಗದೆ ಹೊರಕ್ಕೆ ನೆಗೆದೆ. ಯಾರ ಗೊಡವೆಗೂ ಹೋಗದೆ ಎಲ್ಲದರೂ ಅವಿತುಬಿಡುವುದೆನಿಸುತು. ಯವುದೋ ಕಟ್ಟಡದ ಒಳಹೊಕ್ಕೆ. ಕಟ್ಟಡದ ಹಲವು ಕೊಠಡಿಗಳ ಒಳಗೆ ಸೇರಿಕೊಂಡಿದ್ದ ವಿಚಿತ್ರ ಕ್ಷುದ್ರ ಜೀವಿಗಳೂ ಕೂಡ ಒಂದೊಂದು ಕೊಳವೆಗಳ ಮೂಲಕ ಆ ರಣಾಂಗಣದಲ್ಲಿ ನಡೆಯುತ್ತಿದ್ದ ಮಾರಣಹೋಮವನ್ನು ಚಪ್ಪರಸಿಕೊಂಡು ನೋಡುತ್ತಿದ್ದವು. ಇಲ್ಲೆಲ್ಲೂ ಇರಲು ನನ್ನಿಂದ ಸಾಧ್ಯವಿರಲಿಲ್ಲ. ಕ್ರೌರ್ಯವೆಂಬ ಬಿರುಗಾಳಿ ಎಲ್ಲೆಡೆಯೂ ಹಬ್ಬಿತ್ತು. ಯಾರೂ ಇನ್ನು ಉಳಿಯಲು ಸಾಧ್ಯವಿರಲಿಲ್ಲ. ಎಲ್ಲಾ ಒಂದಲ್ಲಾ ಒಂದು ರೀತಿ ಸತ್ತಾಗಿತ್ತು. ಎಲ್ಲರಲ್ಲೂ ಆ ಕ್ರೌರ್ಯವೆಸಗುತ್ತಿದ್ದ ದೇವರುಗಳೇ ಕಾಣಿಸಿಕೊಳ್ಳುತ್ತಿದ್ದರು. ಎಲ್ಲೂ ಇರದೆ, ಹೊರಟು ಹೋದೆ ನಿರ್ಜೀವ ಪ್ರದೇಶವೊಂದರಲ್ಲಿ ಕಾಲಿಟ್ಟೆ, ಎಲ್ಲೆಡೆಯೂ ಕತ್ತಲೆಯೇ ತುಂಬಿತ್ತು. ನನಗೂ ಸಾಕಾಗಿತ್ತು. ಅಲ್ಲೇ ಬಿದ್ದೆ. ಕಣ್ಮುಚ್ಚಿದೆ. ಕಣ್ತೆರೆದಿದ್ದರೂ ಏನೂ ಕಾಣುವಹಾಗಿರಲಿಲ್ಲ ಆ ಕತ್ತಲಲ್ಲಿ.

ಬಹುದೂರದಲ್ಲಿ ಒಂದು ಪುಟ್ಟ ಖಾಲಿ ಬಯಲು ಹೊಂಬೆಳಕಿನೊಂದಿಗೆ ಕಂಗೊಳಿಸುತ್ತಿತ್ತು. ಅಲ್ಲಿ ಏನೂ ಇರಲಿಲ್ಲ. ಅದೊಂದು ಕನಸಿನ ಪ್ರಪಂಚ, ಆ ಪ್ರಪಂಚಕ್ಕೆ ನಾನೇ ಮೊದಲಿಗ. ಆ ಪ್ರಪಂಚಕ್ಕೆ ನನಂಥವರು ಇನ್ನೆಷ್ಟೋ ಮನುಷ್ಯರು ಬರುವುದರಲ್ಲಿದ್ದರು, ಅದು ನನಗೆ ಖಚಿತವಾಗಿ ಗೊತ್ತಿತ್ತು. ಅದಕ್ಕಾಗಿ ಮೊದಲು ಅಲ್ಲೊಂದು ದ್ವಾರ ನಿರ್ಮಿಸಿದೆ, ತಕ್ಷಣವೇ ಚುಚ್ಚು ಮದ್ದೊಂದನ್ನು ನಾನೇ ತಯಾರು ಮಾಡಿದೆ, ಬಾಗಿಲಿನಲ್ಲಿ ನಾನೇ ನಿಂತೆ.  ಕ್ರಮೇಣ, ಆ ಕ್ರೂರವಾದ ಪ್ರಪಂಚದಿಂದ ಬೇಸತ್ತವರು, ನೆಮ್ಮದಿ, ಮನುಷ್ಯತ್ವವನ್ನು ಮಾತ್ರ ಅಪೇಕ್ಷಿಸುತ್ತಿದ್ದವರು ಪ್ರವಾಹದೋಪಾದಿಯಲ್ಲಿ ಬರತೊಡಗಿದರು. ಬರುವವರಿಗೆಲ್ಲಾ ಸೂಜಿ ಚುಚ್ಚಿ, ಕ್ರೌರ್ಯವೆಂಬ ರೋಗಕ್ಕೆ ಲಸಿಕೆ ನೀಡಿ ಒಳಗೆ ಬಿಟ್ಟೆ. ಎಲ್ಲರೂ ಸೇರಿ ಮೊಟ್ಟ ಮೊದಲ ಬಾರಿಗೆ ಒಂದು ಪುಟ್ಟ ಸಸಿ ನೆಟ್ಟರು. 
                                                               - ಹೇಮಂತ್

No comments:

Post a Comment