Beware of DOG! / ನಾಯಿ
ಇದೆ ಎಚ್ಚರಿಕೆ!
“ಥು
ಮುಂಡೇದೇ ಮಾಡ್ತೀಯಾ ಇನ್ನೊಂದ್ಸಲ, ಎಲ್ಲಾ ನಿನ್ನಿಂದಾನೇ ಆಗಿದ್ದು” ಎಂದು ಮತ್ತೊಂದು ಹೊಡೆತ ಬಿತ್ತು.
ಬೀಳುತ್ತಿದ್ದ ಹೊಡೆತವನ್ನು ತಪ್ಪಿಸಿಕೊಳ್ಳಲು ಕತ್ತಿಗೆ ಕಟ್ಟಿದ್ದ ಹಗ್ಗವನ್ನು ಸಾಧ್ಯವಾದಷ್ಟೂ ಜಗ್ಗಿ
ಎತ್ತ ಹೋದರೂ ತಪ್ಪಿಸಿಕೊಳ್ಳಲಾಗದೆ ಏಟುಗಳು ಬೀಳುತ್ತಲೇ ಇತ್ತು. ಕುಯ್ಯೋ ಮರ್ರೋ ಎಂದು ತನ್ನ ಭಾಷೆಯಲ್ಲಿ
ಎಷ್ಟು ಬೇಡಿಕೊಂಡರೂ ಆತನ ಕೋಪಶಮನವಾಗುವರೆಗೂ ಹೊಡೆದು ನಂತರ ಎದ್ದು ಹೋದ. ಅಲ್ಲೇ ಕೂತು ಗಾಯಗಳಾಗಿರುವ
ಜಾಗಗಳಿಗೆ ನಾಲಿಗೆಯಿಂದ ಸವರಿಕೊಳ್ಳುತ್ತಾ ಆ ದೊಡ್ಡ ಮನೆಯಲ್ಲಿ ತನ್ನನ್ನು ಕೇಳುವವರಾರೂ ಇಲ್ಲದೆ ತನಗೆ
ತಾನೆ ಸಾಂತ್ವಾನ ಹೇಳಿಕೊಳ್ಳುತ್ತಾ ಕುಯ್ಗುಡುತ್ತಾ ಮಲಗಿತು. “ಶಾಂತಿ ನಿಲಯ” ಎಂಬ ಈ ಮನೆಯಲ್ಲಿ ಶಾಂತಿಯೊಂದಿಲ್ಲ
ಅದಕ್ಕಾಗಿಯೇ ಆ ಹೆಸರನ್ನು ಇಟ್ಟಿದ್ದಾರೇನೋ. ಮನೆಯ ನಾಮಫಲಕದ ಪಕ್ಕದಲ್ಲೇ ಚಿಕ್ಕ ಫಲಕದಲ್ಲಿ “ನಾಯಿ
ಇದೆ ಎಚ್ಚರಿಕೆ / Beware of DOG” ಎಂದು ಹಾಕಲಾಗಿತ್ತು.
ನಿಜ ಸಂಗತಿಯಲ್ಲಿ “ಮನುಷ್ಯರಿದ್ದಾರೆ ಎಚ್ಚರಿಕೆ/ Beware of HUMAN” ಎಂದು ಹಾಕಿದ್ದರೆ ಹೆಚ್ಚು
ಸೂಕ್ತವಾಗಿರುತ್ತಿತ್ತು, ಏಕೆಂದರೆ ಆ ಮನೆಯಲ್ಲಿ ಯಾರಿಗೂ ಕೆಡುಕುಂಟು ಮಾಡದೆ ತನ್ನ ಪಾಡಿಗೆ ತಾನು
ಇರುತ್ತಿದ್ದುದೆಂದರೆ ಆ ರಿಚಿ ಎಂಬ ಮೂಕಪ್ರಾಣಿಯೊಂದೇ. ರಿಚಿಯನ್ನು ಬಿಟ್ಟರೆ ಅಲ್ಲಿ ವಾಸಿಸುತ್ತಿದ್ದುದು
ಮೂರು ಮನುಷ್ಯ ಪ್ರಾಣಿಗಳು. ಯಾವಾಗಲೂ ಏನಾದರೂ ಕಿರಿಕಿರಿಯಲ್ಲಿ ತಲೆಕೂದಲು ಹರಿದುಕೊಳ್ಳುತ್ತಿದ್ದ
‘ತೊಂದರೆಗಳಿಂದ’ ಸಂಪದ್ಭರಿತ ಗಂಡ, ಪ್ರಪಂಚದಲ್ಲಿರುವ ಎಲ್ಲಾ ಸಮಸ್ಯೆಯ ನಿವಾರಣೆ ತನ್ನ ಹೊಣೆ, ಮನೆಯ
ಸಮಸ್ಯೆ ಮಾತ್ರ ಗಂಡನ ಹೊಣೆ ಎಂಬ ಸಮಾಜದಲ್ಲಿನ ಸೇವಕಿ ಮನೆಯ ಒಡತಿ ಹೆಂಡತಿ, ರಿಚಿ ಮಾತು ಬೇಕದರೆ ಕೇಳಿಯಾನು
ಅಪ್ಪ ಅಮ್ಮನ ಮಾತು ಮಾತ್ರ ಕೇಳಲೊಲ್ಲದ ನಿಖಿಲ್ ಎಂಬ ಮಗ. ಎಲ್ಲರ ಮನೆಯಲ್ಲೂ ಪ್ರೀತಿಯಿಂದ ನಾಯಿ, ಬೆಕ್ಕು
ಸಾಕಿದರೆ ಈ ಮನೆಯಲ್ಲಿ ಸಮಾಜ ಸೇವಕಿಯ ಮೇಲೆ ಕೋಪ ತೋರಿಸಿದರೆ ಮಹಿಳಾ ಸಮಾಜದ ಹಾವಳಿ, ಮಗನ ಮೇಲೆ ಕೋಪ
ತೋರಿಸಿದರೆ ಮಕ್ಕಳ ಮೇಲಿನ ದೌರ್ಜನ್ಯದ ಅಪರಾಧ ಎಂದು ಗಂಡ ತನ್ನ ಕಿರಿಕಿರಿಯನ್ನೆಲ್ಲಾ ತೀರಿಸಿಕೊಳ್ಳಲು,
ಗಂಡನ ಮೇಲೆ ತನ್ನ ಅಸಮಾಧಾನ ತೋರಿಸಿದರೆ ಎಲ್ಲಿ ಸೌತಿ ತರುವನೋ, ಮಗನ ಮೇಲೆ ತೋರಿಸಲು ಎಲ್ಲಿ ಎದುರುಬೀಳುವನೋ
ಎಂದು ತನ್ನ ಅಸಹಾಯಕತೆಯನ್ನು ತೀರಿಸಿಕೊಳ್ಳಲು, ಅಪ್ಪ ಅಮ್ಮನ ಮೇಲೆ ಎಗರಾಡಿದರೆ ಎಲ್ಲಿ ತನ್ನನ್ನು
ಬೋರ್ಡಿಂಗ್ ಸ್ಕೂಲಿಗೆ ಹಾಕುವರೋ, ತನ್ನ ಪಾಕೆಟ್ ಮನಿ ಎಲ್ಲಿ ನಿಂತುಹೋಗುವುದೋ ಎಂದು ತನ್ನ ಕ್ರೋಧವನ್ನೆಲ್ಲಾ
ತೀರಿಸಿಕೊಳ್ಳಲೋಸಗ ಮೂವರ ಒಮ್ಮತದ ಆಯ್ಕೆಯಾಗಿ ಆ ಮನೆಯೆಂಬ ಮನೆಯ ಗೇಟಿಗೆ ಎಚ್ಚರಿಕೆಯ ಫಲಕವನ್ನು ನೇತುಹಾಕಲು
ಅನ್ಯಾಯವಾಗಿ ಕಾರಣವಾಗಿತ್ತು ರಿಚಿ. ಹೇಗೂ ಪ್ರಾಣಿದಯಾ ಸಂಘಕ್ಕೆ ದೂರು ನೀಡಲು ಅದಕ್ಕೆ ಮಾತು ಬರುವುದಿಲ್ಲವಲ್ಲ
ಎಂಬ ಧೈರ್ಯದಿಂದ ತಮ್ಮ ಒಳಗಿನ ಎಲ್ಲಾ ಕ್ರೌರ್ಯಗಳನ್ನು ಅದರ ಮೇಲೆ ತೀರಿಸಿಕೊಂಡರೂ ಅದು ತಿರುಗಿಬೀಳದಂತೆ
ಕಟ್ಟಿಹಾಕಿ, ಸಾಯದಿರಲೆಂದು ಅದಕ್ಕೆ ಹೊಟ್ಟೆಗೆ ಅಷ್ಟೋ ಇಷ್ಟೋ ಹಾಕಿ ಸಾಕುತ್ತಿರುವರು.
ಬೆಳ್ಳಂಬೆಳಗ್ಗೆ
ಮನೆಯ ಒಳಗೆ ಏನೋ ಜಗಳ ಶುರುವಾಗಿ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಜೋರಾಗಿ ಕೇಳುತ್ತಿದ್ದಂತೆಯೇ
ಇವತ್ತೇನಪ್ಪ ಇವರುಗಳದ್ದು ಗೋಳು ಎಂದು ರಿಚಿ ತನ್ನ ಗೂಡಿನಿಂದ ತಲೆ ಹೊರಹಾಕಿ ಮಿಕಿಮಿಕಿ ನೋಡುತ್ತಿರಲು,
ಅಡುಗೆಮನೆಯ ಕಿಟಕಿ ತೆರೆದುಕೊಳ್ಳುತ್ತದೆ. ಮನೆಯ ‘ಒಡತಿ’ ಯನ್ನೇ ದೈನ್ಯದಿಂದ ನೋಡುತ್ತಿರಲು ಅದಾರ ಮೇಲೆ ಕೋಪವಿತ್ತೋ ಆಕೆಯ ಕೈಲಿದ್ದ ಟೀ
ಪುಡಿಯ ಗಸಿಯನ್ನು ಫಳಾರನೆ ರಿಚಿಯ ಮೂತಿಗೆ ಎಸಿಯುವಳು. ಥೂ ಇದೇನ್ ಗುರು ಬೆಳಗ್ಗೇನೇ ಅಭಿಷೇಕ ಎಂಬಂತೆ
ತನ್ನ ಮೂತಿಯನ್ನು ತನ್ನ ಮುಂಗೈಗಳಿಂದ ತಾನೇ ಸರಸರನೆ ಉಜ್ಜಿಕೊಳ್ಳುತ್ತಾ ಕೂರುವುದು ರಿಚಿ. ಇದೇನು
ಪ್ರಥಮಬಾರಿಗೆ ಆಗಿರದೆ, ನೆನ್ನೆ ಕಾಫಿ ಪುಡಿಯ ಗಸಿ, ಮೊನ್ನೆ ಬಿಸಿ ನೀರು, ಅದಕ್ಕೂ ಹಿಂದಿನ ದಿನ ಅಕ್ಕಿ
ತೊಳದ ನೀರು, ಅದಕ್ಕೂ ಹಿಂದಿನ ದಿನ ಅವರೇ ಕಾಳು ಸಿಪ್ಪೆ ಹೀಗೇ ದಿನಕ್ಕೊಂದೊಂದು ಅಭಿಷೇಕ ಕಂಡಿದ್ದ
ರಿಚಿ ತಾಳ್ಮೆ ಎಂದರೇನೆಂದು ಅರಿತುಕೊಂಡಿತ್ತು. ಮಧ್ಯಾಹ್ನದ ವೇಳೆಗೇ ಶಾಲೆಯಿಂದ ಮನೆಗೆ ಮರುಳುತ್ತಿದ್ದ
ನಿಖಿಲ್ ಸ್ನೇಹಿತನಿಂದ ಅನುಭವಿಸಿದ ಸೋಲಿಗೋ, ಗುರುಗಳಿಂದ ಅನುಭವಿಸಿದ ಶಿಕ್ಷೇಗೋ ಪ್ರತೀಕಾರವೆಂಬಂತೆ,
ಮನೆಯಲ್ಲಿನ ಒಂಟಿತನದ ಅಡ್ಡಪರಿಣಾಮವೋ ಎಂಬಂತೆ ಇದ್ದ ಒಬ್ಬನೇ ಸಂಗಾತಿ ರಿಚಿಗೆ ಕಾಟ ಕೊಡುವುದನ್ನು
ರೂಢಿಸಿಕೊಂಡಿದ್ದ. ಮೊದಮೊದಲು ಆಟವಾಡುತ್ತಾ, ನಂತರ ಆಟದ ಅತಿರೇಖವೆಂಬಂತೆ ಪೆನ್ಸಿಲ್ ನಿಂದ ಚುಚ್ಚಿ,
ನೋವು ತಾಳಲಾರದೆ ಕಚ್ಚಲು ಬಂದ ರಿಚಿಯಿಂದ ತಪ್ಪಿಸಿಕೊಂಡು ಪಕ್ಕದಲ್ಲಿದ್ದ ಚೂಪನೆಯ ಕಂಬಿಯಿಂದ ತಿವಿದು
ವಿಕೃತಾನಂದ ಅನುಭವಿಸಿ ಸುಧಾರಿಸಿಕೊಳ್ಳುವಷ್ಟರಲ್ಲಿ ಮನೆಯ ಮುಖ್ಯವಾದ ಪಾತ್ರ ಒಳಗೆ ಕಾರು ನುಗ್ಗಿಸಿಕೊಂಡು
ಬಂದು ನೇರವಾಗಿ ರಿಚಿಯ ಗೂಡಿಗೆ ತಗುಲಿಕೊಂಡೇ ನಿಲ್ಲಿಸಿ ಹೆದರಿ ಬರುವ ಒಂದೇ ಭಾಷೆಯಲ್ಲಿ ಭೌ ಭೌ ಎಂದು
ಕೂಗುತ್ತಿದ್ದ ರಿಚಿಯನ್ನು ಏನ ಬಂತೋ ರೋಗ ನಿಂಗೆ ನನ್ನ ನೋಡಿ ಬೊಗಳ್ತೀಯ ಧರಿದ್ರದ್ದೇ ತೊಗೊ.. ತೊಗೋ..
ಎಂದು ಉಳಿದಿದ್ದ ಚೂರು ಪಾರು ಶಕ್ತಿಯನ್ನು ಅದರ ಮೇಲೆ ವ್ಯಯಿಸಿ ಮನೆಯ ಒಳಗೆ ಹೋಗುವನು. ಬೆಳಗ್ಗಿನಿಂದ
ಉಳಿದಿದ್ದನ್ನು, ಯಾರೂ ತಿನ್ನಲು ಸಾಧ್ಯವಾಗದ್ದನ್ನು ತಂದು ರಿಚಿಯ ಮುಂದಿರಿಸಿ ಹೋಗುವನು. ದೊಡ್ಡ ಮನೆ,
ದಿನಕ್ಕೊಂದಾದ್ರು ಲೆಗ್ ಪೀಸ್ ಖಚಿತ ಎಂದು ಚಿಕ್ಕದರಲ್ಲಿ ತಾನು ಆಸೆ ಪಟ್ಟು ಈ ಮನೆಗೆ ತನ್ನ ತಾಯಿಯನ್ನು
ಮರೆತು ಬಂದದ್ದನ್ನು ಈಗ ನೆನೆಸಿಕೊಂಡು ಕಣ್ಣೀರಿಡುತ್ತಾ ಪಾಲಿಗೆ ಬಂದದ್ದನ್ನ ಪರಮಭಕ್ಷ್ಯವೆಂದು ಭಾವಿಸಿ
ಒಳಗೆ ಇಳಿಸುವುದು ರಿಚಿ. ರಾತ್ರಿ ತಿಂದದ್ದನ್ನ ಅರಗಿಸಲೆಂದೋ, ಮನೆಯ ಒಳಗಡೆ ಹೆಂಡತಿಯೆಂಬ ಬುಲ್ಡಾಗ್
ಬೊಗಳುವಿಕೆಯನ್ನು ತಪ್ಪಿಸಿಕೊಳ್ಳಲೆಂದೋ, ರಿಚಿಯನ್ನು ಕರೆದುಕೊಂಡು ವಾಕಿಂಗ್ ಶಾಸ್ತ್ರಕ್ಕೆ ಹೋಗಿ,
ಅದಕ್ಕೆ ಬರದಿದ್ದರೂ ಅದು ತಿಂದದ್ದನ್ನ ಹೊರಗೆ ಹಾಕುವವರೆಗೂ ಬಿಡದೆ ಬಲವಂತವಾಗಿ ಯಾವುದಾದರೂ ಒಂದು
ರೂಪದಲ್ಲಿ ಹೊರಗೆ ಹಾಕಿಸಿ ಮತ್ತೆ ತಂದು ಗೂಡಿನಲ್ಲಿ ಕಟ್ಟಿಹಾಕುವನು. ಹೊರಗೆ ದೂರದಿಂದ ಕಂಡ ತನ್ನ
ಕನಸಿನ ಪ್ರೇಯಸಿಯರನ್ನ ನೆನೆಸಿಕೊಂಡು ರಿಚಿ ಹಾಗೆಯೇ ಕನಸಿನಲೋಕದ ಕದ ತಟ್ಟುವಷ್ಟರಲ್ಲಿ ಒಳಗೆ ಇದ್ದ
ಬುಲ್ಡಾಗ್, ಡೋಬರ್ ಮನ್ ಮತ್ತು ಪಗ್ ಗಳು ಅರಚುವ ಶಬ್ದಗಳು ಕೇಳಿ ಮತ್ತೆ ತನ್ನ ನರಕಕ್ಕೆ ಹಿಂದಿರುಗಿ
ಮೂತಿ ಇಷ್ಟೇ ಮಾಡಿಕೊಳ್ಳುವುದು ರಿಚಿ. ಅಂದು ಕೂಡ ಅದೇ ರೀತಿ ಮಾರಣಾಂತಿಕ ಹಲ್ಲೆ ನಡೆಸಿ ಅರೆಜೀವವಾಗಿದ್ದ
ರಿಚಿ ಮೈಯಿಂದ ವಿಚಿತ್ರವಾಗಿ ನರಳುವ ಶಬ್ಧ ಹೊರಬರುತ್ತಿತ್ತು. ಅದು ಕಿವಿಗೆ ತಾಕದ ಹಾಗೆಯೇ, ಬೆಡ್
ರೂಮ್ ನಲ್ಲಿ ಬುಲ್ ಡಾಗ್, ಇನ್ನೊಂದು ರೂಮಿನಲ್ಲಿ ಪುಸ್ತಕದ ಹಾಸಿಗೆ ಮೇಲೆ ಪಗ್ ಮತ್ತು ಹಾಲ್ ನಲ್ಲಿರುವ
ಸೋಫಾದ ಮೇಲೆ, ಲಾಪ್ ಟಾಪ್ ಮತ್ತು ಬಾಯಿ ತೆರೆದು ಗೊರಕೆ ಹೊಡೆಯುತ್ತಾ ಡೋಬರ್ ಮನ್ ಮಲಗಿತ್ತು.
ಬೆಳಗ್ಗೆ………
ಡೋಬರ್ ಮನ್ ನಿಧಾನವಾಗಿ ಕಣ್ಣು ಬಿಟ್ಟು ಇದೆಲ್ಲೋ ವಿಚಿತ್ರವಾಗಿ ಬಂದಂತಿದೆಯಲ್ಲಾ ಎಂದು ನಿದ್ರೆಯ
ಮಂಪರಿನಲ್ಲೇ ನೋಡಿ ಹಾಗೇ ಮಲಗಿಕೊಂಡಿತು ತತ್ಕ್ಷಣ ಏನೋ ಪ್ರಮಾದವಾಗಿದೆಯೆಂಬಂತೆ ಧಿಡೀರನೆ ಕಣ್ಣು ತೆರೆದು
ಸುತ್ತ ನೋಡಲು ಹಯ್ಯೋ ಇದಾವುದೋ ಗೂಡು, ತನ್ನ ಕುತ್ತಿಗೆಗೆ ಯಾರೋ ಹಗ್ಗ ಕಟ್ಟಿದ್ದಾರೆ! ಹೆದರಿ ಎದ್ದೇಳಲು
ಪ್ರಯತ್ನ ಪಟ್ಟು ಗೂಡಿನ ಮಾಡು ತಗುಲಿ ಕೆಳಗೆ ಬೀಳುವನು, ತನ್ನಿಂದ ಪೂರ್ಣವಾಗಿ ಎದ್ದೇಳಲೂ ಸಹ ಆಗುತ್ತಿರಲಿಲ್ಲ,
ತಾನು ನಿಲ್ಲಲು ನಾಲ್ಕೂ ಕಾಲನ್ನು ಬಳಸಬೇಕಾಗಿತ್ತು. ಹಾಗೇ ನಿಂತು ಸುತ್ತ ನೋಡಲು ಪಕ್ಕದ ಗೂಡಿನಲ್ಲಿ
ತನ್ನ ಬುಲ್ಡಾಗ್ ನೆಮ್ಮದಿಯಾಗಿ ಮಲಗಿದೆ. ಥು ಎಲ್ಲಿ ತೊಗೊಂಡೋಗಿ ಹಾಕಿದರೂ ಇವಳ ಗೊರಕೆ ಮಾತ್ರ ಕಡಿಮೆಯಾಗಲ್ಲ
ಎಂದು ಹಾಗೇ ನಾಲ್ಕು ಕಲಿನಲ್ಲೇ ತೆವಳಿಕೊಂಡು ಅವಳನ್ನು ತಟ್ಟಲು, ಬೌ ಬೌ ಎನ್ನುವಳು ಅವಳ ಅವಸ್ಥೆಯನ್ನು
ಕಂಡು ಡೋಬರ್ ಗೆ ನಗು ತಡೆಯಲಾಗಲಿಲ್ಲ, ನಕ್ಕರೆ ಅವನೂ ಸಹ ಬೊ…ಬೌ ಎಂದು ಶಬ್ಧ ಹೊರಬರುತ್ತಿದೆ. ಹಯ್ಯೋ
ಇದೇನಿದು ಅವಾಂತರ, ಏನಾಯ್ತು ನಮಗೆ ಎಂದು ಅವಳನ್ನು ಕರೆಯಲು ಪ್ರಯತ್ನ ಪಟ್ಟರೆ ಬೌ….ಬೌ ಬೌ ಬೌ ಎಂದು
ಮಾತ್ರ ಮಾತು ಹೊರಹೊಮ್ಮುತ್ತಿದೆ. ಹಯ್ಯೋ ಮನಸಿನಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ ಆದರೆ ಮಾತು ಹೊರಬಂದಾಗ
ಮಾತ್ರ ಯಾಕೆ ಹೀಗಾಗುತ್ತಿದೆ ಎಂದು ವಿಸ್ಮಯಗೊಂಡು, ಆದರೂ ಇದೇನೋ ವಿಚಿತ್ರವಾಗಿದೆ ಎಂದು ಮತ್ತೆ ಮತ್ತೆ
ಬೌ ಬೌ ಬೌ ಬೌ… ಎಂದು ಒಳಗೊಳಗೇ ತಾನೇ ತನ್ನ ಪರಿಸ್ಥಿತಿಗೆ
ನಗುವನು. ಅಷ್ಟರಲ್ಲಿ “ರಿಚೀ……, ಥೂ ಮುಂಡೇದೆ, ಯಾರೋ ಒಳಗೆ ಬಿಟ್ಟಿದ್ದು ಹೋಗಾಚೆ” ಎಂದು ಹೇಳಿಕೊಂಡು
ಬುಲ್ಡಾಗ್ ಕೂಡ ತನ್ನ ವಿಚಿತ್ರ ಮಾತಿನ ವರೆಸೆಗೆ ಹೌಹಾರಿ ಎದ್ದು ಕುಳಿತು ತನ್ನ ಪರಿಸ್ಥಿತಿಯನ್ನೂ
ಅರಿತು, ಹೊಂದುಕೊಂಡು ಕೂತು ಇಬ್ಬರೂ ಯೋಚಿಸುವರು. ಅಷ್ಟರಲ್ಲಿ ತಮ್ಮ ಪುತ್ರ ರತ್ನ ಎಲ್ಲಿದ್ದಾನೆಂದು
ಅಚ್ಚರಿಯಾಗಿ ಪಕ್ಕದ ಗೂಡಿನಲ್ಲಿ ನೋಡಲು, ಪುತ್ರ ರತ್ನವೆಂಬ ಪಗ್ ಮರಿಯು ಮಲಗಿಕೊಂಡೇ ಮಾಮೂಲಿನಂತೆ
ಸುಯ್ಯನೆ ಮೂತ್ರ ಜಲಪಾತ ನಿರ್ಮಿಸುತ್ತಿತ್ತು. ನಂತರ ಮೂವರೂ ಸಮಾಲೋಚನೆಗೆಂಬಂತೆ ಕೂತು ದೀರ್ಘಾಲೋಚನೆ
ನಡೆಸಿ ಡೋಬರ್ಮನ್ ಏನೋ ಹೇಳಲು ಬಾಯಿ ತೆರೆದು ಬೌ ಬೌ ಎಂದಿತು ಮೂವರಿಗೂ ನಗು ತಡೆಯಲಾಗಿಲ್ಲ. ಬಿದ್ದು
ಬಿದ್ದು ಕುಯ್ ಬೌ ಬೌ ಎಂದುಕೊಂಡೇ ನಕ್ಕವು, ತಮ್ಮ ನಗುವಿನ ಪರಿ ಕಂಡು ಇನ್ನಷ್ಟು ನಕ್ಕವು. ಆದರೆ ತಮ್ಮ
ನಿಜ ಪರಿಸ್ಥಿತಿಯ ಅರಿವಾಗಿ, ಡೋಬರ್ಮನ್ ಇಂದು ತಾನು ಮುಖ್ಯವಾದ ಬೋರ್ಡ್ ಮೀಟಿಂಗ್ ನಲ್ಲಿ ಉಪಸ್ಥಿತನಿರಬೇಕಿತ್ತೆಂದು,
ಬುಲ್ಡಾಗ್ ಇಂದು ಪ್ರೆಸ್ ಮೀಟ್ ನಲ್ಲಿ ತಾನು ಒಪ್ಪಿಸಬೇಕಿದ್ದ ಪೂರ್ವನಿಯೋಜಿತ ಮಾತುಗಳ ಬಗ್ಗೆ ನೆನೆಸಿಕೊಂಡು
ಹಗ್ಗ ಕೀಳುವಂತೆ ಎಳೆಯುತ್ತಿರಲು, ಸಧ್ಯ ಇಂದು ತನ್ನ ಸ್ಕೂಲ್ ನಿಂದ ಮುಕ್ತಿ ಸಿಕ್ಕಿತೆಂದು ಪಗ್ ಮಾತ್ರ
ಇನ್ನೂ ತನ್ನ ತಂದೆ ತಾಯಿಯನ್ನು ನೋಡಿ ಆಗಬೇಕಿತ್ತು ಇವರುಗಳಿಗೆ ಎಂದು ನೋಡಿ ನೋಡಿ ನಗುತ್ತಲಿತ್ತು.
ಮೂವರೂ
ಏನು ಮಾಡುವುದೆಂದು ತೋಚದೆ ಕೈಚೆಲ್ಲಿ ಕೂತಿರುವಾಗ ಮನೆಯ ಕದ ತೆರೆಯುತ್ತದೆ. ಹಾ!!! ತಮ್ಮ ಮನೆಯಲ್ಲಿ
ಯಾರು ಸೇರಿರುವರೆಂದು ಕುತೂಹಲದಿಂದ ಗೂಡಿನಿಂದ ಹೊರಗೆ ಮೂತಿ ಹಾಕಿ ಕಣ್ಣರಳಿಸಿ, ಉಸಿರು ಬಿಗಿಹಿಡಿದು
ನೋಡುತ್ತಿರಲು ತಾವು ಯಾವುದನ್ನು ಅಗಿರದಿರಲೆಂದು ಮನದಲ್ಲಿ ಕೇಳಿಕೊಳ್ಳುತ್ತಿದ್ದರೋ ಅದೇ ರಿಚಿ ಬಾಗಿಲು
ತೆರೆದು ನಿಧಾನಗತಿಯಲ್ಲಿ ಕೈಲಿ ಬ್ರೆಡ್ ಪೀಸೊಂದು ಹಿಡಿದು ಅವರ ಬಳಿಗೆ ಠೀವಿಯಿಂದ ನಡೆದುಬರುತ್ತಿರುವನು.
ಅರೆರೆ ಇವನಿಗೆ ಹೇಗಪ್ಪಾ ಎರಡು ಕಾಲಿನಲ್ಲಿ ನಡೆಯಲು ಸಾಧ್ಯ! ತನ್ನ ದುಬಾರಿ ಡ್ರೆಸ್ ಬೇರೆ ಥೂ ಅದನ್ನ
ಒಗೆಯದೇ ಹಾಕುವಹಾಗಿಲ್ಲ ಇನ್ನ ಎಂದು ತನ್ನ ಪರಿಸ್ಥಿತಿಯಲ್ಲೂ ಡೋಬರ್ಮನ್ ಯೋಚಿಸದೇ ಇರಲಿಲ್ಲ. ಇದೆಲ್ಲಾ
ರಿಚಿಯದ್ದೇ ಪಿತೂರಿ ಎಂದು ಅರಿತು ಡೋಬರ್ಮನ್ ಜೊತೆ ಸೇರಿ, ಬುಲ್ಡಾಗ್ ಸಹ ಕೋಪದಿಂದ ಹಗ್ಗ ಕಿತ್ತು
ಬರುವ ಹಾಗೆ ರಿಚಿಯೆಡೆಗೆ ಮುನ್ನುಗ್ಗಲು ಪ್ರಯತ್ನಿಸುತ್ತಾ, ಸಾಧ್ಯವಾಗದೇ ಅಲ್ಲೇ ಬೌ ಬೌ ಎಂದು ಹಲ್ಲು
ತೋರಿಸುತ್ತಾ ರಿಚಿಯನ್ನು ತಿಂದು ಹಾಕುವಹಾಗೆ ಗುರ್ರ್‍ರ್‍ರ್‍ರ್‍ರ್.. ದುರುಗುಟ್ಟುವರು. ಪಗ್ ಏನು
ನಡೆಯುತ್ತಿದೆಯೆಂದು ಗೊತ್ತಾಗದೆ ಬೆರಗುಗಣ್ಣಿನೊಂದಿಗೆ ಕೂತೇ ಇತ್ತು. ರಿಚಿ ಬಂದವನೇ ನೇರವಾಗಿ ಅಲ್ಲೆ
ಬಳಿ ಇದ್ದ ಚಾಟಿಯಂತಹ ದಾರವನ್ನು ತೆಗೆದು ಬಾರಿಸ ತೊಡಗಿದ. ಏನು ನಿಮ್ಮ ಗಲಾಟೆ ಬೆಳಗ್ಗೆ ಬೆಳಗ್ಗೇನೇ.
ಮುಚ್ಚಿಕೊಂಡು ಬಿದ್ದಿರೋಕೆ ಆಗಲ್ವಾ ಅಂತ ಬಯ್ಯುತ್ತಲೇ ತನ್ನ ಕೈಲಿದ್ದ ಬ್ರೆಡ್ ಪೀಸನ್ನು ಗಬಕ್ಕನೆ
ಒಂದೇ ಸಲಕ್ಕೆ ಬಾಯಿಗೆ ಹಾಕಿ ಥೇಟ್ ನಾಯಿಯ ರೀತಿಯೇ ಕಚಕಚನೆ ತಿಂದನು. ಮೈಕೈ ಕಿತ್ತುಕೊಂಡಿದ್ದ ಬುಲ್ಡಾಗ್
ಮತ್ತು ಡೋಬರ್ಮನ್ ವಿಲವಿಲನೆ ಒದ್ದಾಡುತ್ತಾ ನೋವಿಗೆ ಕುಯ್ ಕುಯ್ ಸದ್ದು ಹೊರಡಿಸುತ್ತಿದ್ದರು. ಇನ್ನೊಮ್ಮೆ
ಈ ರೀತಿ ಬಾಯಿಬಡಿದುಕೊಂಡು ಸದ್ದು ಮಾಡಿದರೆ ಸಾಯಿಸಿಬಿಡುವುದಾಗಿ ಹೇಳಿ ಒಳಗೆ ಹೋದ ರಿಚಿ. ಮುಚ್ಚಿದ
ಬಾಗಿಲು, ತಾವೇ ಕಟ್ಟಿಸಿದ್ದ ದೊಡ್ಡ ಗೋಡೆಯನ್ನು ನೋಡುತ್ತಾ ಇದೇನಿದು ತಮ್ಮ ಜೀವನ ಇದ್ದಕ್ಕಿದ್ದ ಹಾಗೆ
ಹೀಗೆ ರಾಂಗ್ ಟರ್ನ್ ತೊಗೊಂಡಿತಲ್ಲ ಎಂದು ಅಲ್ಲೇ ಬಿದ್ದು ಶೋಕವ್ಯಕ್ತಪಡಿಸಿದರು.
ಏನು
ಮಾಡುವುದೆಂದು ತೋಚದೆ, ಕಾಲ ಕಳೆಯಲು ಹಾಗೇ ಮೂವರೂ ಮೂತಿ ನೆಲಕ್ಕೂರಿ ಬಿದ್ದುಕೊಂಡು ಪಿಳಿ ಪಿಳಿ ಎನ್ನುತ್ತಿರಲು
ಬಾಗಿಲು ಮತ್ತೆ ತೆರೆಯುತ್ತದೆ. ಮತ್ತೇನು ಕಾದಿದೆಯೋ ಎಂದು ಎಲ್ಲಾ ಬಾಯಿ ಕಳೆದು ಬಾಗಿಲ ಕಡೆ ನೋಡಲು,
ರಿಚಿ ಪೆಡಿಗ್ರೀ ದೊಡ್ಡ ಪ್ಯಾಕೆಟ್ ಹಿಡಿದು, ಬಾಯಿಗೆ ಎಗರಿಸುತ್ತಾ ನಡೆದು ಬರುತ್ತಾ ಏನು ಅಷ್ಟು ದೊಡ್ಡ
ಮನೆನಲ್ಲಿ ಇದ್ದಾಗ ಎಲ್ಲಾ ಬಾಯಿ ಬಡ್ಕೋತಿದ್ರಿ, ಕಚ್ಚಾಡ್ತಿದ್ರಿ ಇಲ್ಲಿ ಹಿಂಗೆ ಒಳ್ಳೇ ಬೆಪ್ಪು ತಕ್ಕಡಿಗಳು
ಬಿದ್ದಂಗೆ ಬಿದ್ದಿದ್ದೀರ ಎಂದು ರಿಚಿ ಹಾಕಿದ ಪ್ರಶ್ನೆಗೆ ಮಿಕಿ ಮಿಕಿ ಮುಖ ನೋಡಿಕೊಂಡವೂ ಮೂವರೂ. ಏನು?
ನಿಮಗೇ ಹೇಳ್ತಿರೋದು ಎದ್ದು ಕಿತ್ತಾಡಿ, ದಿನಾ ನಿಮ್ಮ ಜಗಳ ನೋಡಿ ನೋಡಿ ಇವಾಗ ಸುಮ್ನಿದ್ರೆ ಬೋರ್ ಹೊಡೆಯುತ್ತೆ.
ಎದ್ದೇಳಿ ಹ್ಮ್.. ಎಂದು ಚಟೀರನೆ ಚಾಟಿ ಏಟು ಕೊಡುವನು. ಏಟಿನ ನೋವು ತಾಳಲಾರದೆ ಕಚ್ಚಾಡುವುದಕ್ಕೆ ಶುರುಮಾಡುವರು.
ಅವರುಗಳು ಒಬ್ಬರ ಮೇಲೆ ಒಬ್ಬರು ಬಿದ್ದು ಒದ್ದಾಡುವುದನ್ನ ನೋಡಿ ಆನಂದಿಸಿ ರಿಚಿ ಎದುರಿಗಿದ್ದ ಕಾರ್
ಮೇಲೆ ಕೂತಿದ್ದವನು, ಅದೇನ್ ಕಚ್ಚಾಡ್ತೀರೋ ಥು ನಿಮ್ಮ ಮನುಷ್ಯ ಜಾತಿಗಳಿಗಿಷ್ಟು, ಎಂದು ಮತ್ತೆ ಚಾಟಿ
ಬೀಸುವನು. ಪಗ್ ಬಳಿ ಹೋಗಿ ಇದೇ ಪೆನ್ಸಿಲ್ ನಲ್ಲಿ ಚುಚ್ಚುತ್ತಿದ್ದೆ ಅಲ್ವಾ ಎಂದು ಜೇಬಿನಿಂದ ಹೊರತೆಗೆದು
ನೋಡು ಹೇಗಾಗುತ್ತೆ ಎಂದು ಚುಚ್ಚಲು ಮುಂದೆ ಹೋಗಲು ಅಕ್ಕ ಪಕ್ಕದಲ್ಲಿದ್ದ ಡಾಬರ್ಮನ್ ಮತ್ತು ಬುಲ್ಡಾಗ್
ಗುರ್‍ರ್ ಎಂದವು ಚಾಟಿಯಲ್ಲಿ ಎರಡು ಕೊಟ್ಟು ಸುಮ್ಮನಿರಿಸಿ, ಹೆದರಿ ಹಿಂದೆ ಹಿಂದೆ ಹೋಗುತ್ತಾ ಕುಯ್…
ಎನ್ನುತ್ತಿದ್ದ ಪಗ್ ಕಾಲ ಬಳಿ ಚುಚ್ಚಿ ಕುಯ್ಯೋ ಎನ್ನುವಂತೆ ಮಾಡಿ ರಿಚಿ ನಗುವನು. ನೋವಾಗುತ್ತೆ ಅಲ್ವಾ
ಎಂದು ಕೇಳಿದ್ದಕ್ಕೆ, ಹಯ್ಯೋ ಅರ್ಥ ಆಯ್ತು ಕ್ಷಮಿಸಿಬಿಡಪ್ಪಾ ಎಂದು ಕೈಗಳನ್ನು ಮುಂದೆ ಮಾಡಿ ಪಗ್ ಬೇಡಿಕೊಳ್ಳುವನು.
ಗೂಡಿನ ಎರಡು ಮೂಲೆಗಳಲ್ಲಿ ಅಸಹಾಯಕರಾಗಿ ನೋಡುತ್ತಿದ್ದ ತಂದೆ ತಾಯಿಗಳನ್ನು ನೋಡಿ ಚಾಟಿ ತೋರಿಸುತ್ತಲೇ
ನಿಮ್ಮನ್ನ ಮಧ್ಯಾಹ್ನ ಬಂದು ನೋಡಿಕೊಳ್ಳುತ್ತೀನಿ, ಏನಾದರೂ ಬಾಲ ಬಿಚ್ಚಿದರೆ ಇದೆ ನಿಮಗೆ ಮಾರೀ ಹಬ್ಬ
ಎಂದು ಹೇಳಿ ಗೇಟಿನಿಂದ ಹೊರಗೆ ಸದ್ದು ಮರೆಯಾಗುವವರೆಗೂ ಎಲ್ಲರೂ ಸುಮ್ಮನಿದ್ದು, ಮಗನ ಸೊಂಟದ ಬಳಿ ಆಗಿದ್ದ
ಗಾಯವನ್ನು ಇಬ್ಬರೂ ಸೇರಿ ಸಂತೈಸಿ ನೆಕ್ಕುವರು. ಅವನು ಬರುವಷ್ಟರಲ್ಲಿ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು
ಏನೇನು ಪ್ರಯತ್ನಿಸಿದರೂ, ಕತ್ತಿಗೆ ಕಟ್ಟಿರುವ ಹಗ್ಗ ಮಾತ್ರ ಜಗ್ಗಲಾಗದೆ, ಊಳಿಟ್ಟು ಯಾರನ್ನಾದರೂ ಕರೆಯಲು
ಪ್ರಯತ್ನಿಸಿದರು. ಮನುಷ್ಯರು ಸಾಯುತ್ತಿದ್ದಾರೆಂದರೇ ಸುಮ್ಮನೆ ಟಿವಿ ನೋಡುತ್ತಾ ಊಟ ಮಾಡುವ ಜನ ಇನ್ನ
ತಮ್ಮ ಊಳಿನ ಸದ್ದಿಗೆ ಪ್ರತಿಕ್ರಿಯಿಸುವರೇ ಎಂದು ಅರ್ಧ ಘಂಟೆ ಕೂಗಿದ ನಂತರ ಗೊತ್ತಾಗಿ ಸುಧಾರಿಸಿಕೊಂಡು
ಹಾಗೇ ಕಣ್ಮುಚ್ಚಿ ತಮ್ಮ ವಿಚಿತ್ರ ಪರಿಸ್ಥಿತಿಗೆ ತಾವು ನಂಬಿದ್ದ ದೇವರನ್ನು ಕೊನೆಗೆ ಶಪಿಸುತ್ತಾ ಕೂರುವರು.
ಮಧ್ಯಾಹ್ನದ
ಸಮಯಕ್ಕೆ ಸರಿಯಾಗಿ ರಿಚಿಯೊಂದಿಗೆ, ಹೆಸರಿಲ್ಲದ ಹಲವು ಬೀದಿ ಬೀದಿಯ ಕೊಳಕು ಮಂದಿ, ಬೆಂಗಳೂರಿನ ರಸ್ತೆಗಳಲ್ಲಿ
ಗಾಡಿಗಳಿಗೆ ಸಿಕ್ಕು ಅಂಗವಿಕಲರಾಗಿರುವ ಮಂದಿ, ಮತ್ತು ಯಾರ ಮನೆಯವರೋ ಆದ ಹೈಬ್ರೀಡ್ ಮಂದಿ ಎಲ್ಲಾ ಗಲಾಟೆ
ಮಾಡುತ್ತಾ “Beware of HUMAN/ ಮನುಷ್ಯರಿದ್ದಾರೆ ಎಚ್ಚರಿಕೆ” ಎಂಬ ಬೋರ್ಡ್ ನೋಡುತ್ತಾ, ಗೇಟ್ ಪ್ರವೇಶಿಸಿ,
ಮನೆಯ ಪಕ್ಕದಲ್ಲಿ ಕಟ್ಟಿ ಹಾಕಿದ್ದ ಮನುಷ್ಯರನ್ನು ನೋಡಿ ಹಂಗಿಸುತ್ತಾ, ಛೂ.. ಛೂ.. ಎಂದು ಛೇಡಿಸುತ್ತಾ,
ನಗುತ್ತಾ, ಕುಣಿಯುತ್ತಾ ಎಲ್ಲಾ ಮನೆಯ ಒಳಗೇ ಹೋಗುವರು.
ಇದೇನಪ್ಪಾ, ಮನೆ ಏನು ಗಬ್ಬೆಬ್ಬಿಸುವರೋ, ಏನೇನು ಹಾಳು ಮಾಡುವರೋ, ತಮ್ಮ ಅಮೂಲ್ಯವಾದ ಆಸ್ತಿ ಇಂಥಾ
ನಾಯಿಗಳ ಕೈಗೆ ಸಿಕ್ಕು ಹಾಳಾಗುತ್ತಿದೆಯಲ್ಲಾ, ತಮ್ಮ ಮನೆಯಲ್ಲೇ ತಾವು ಒಂದು ದಿನಕ್ಕೂ ಇಷ್ಟು ಖುಷಿಯಿಂದ,
ಆರಾಮವಾಗಿ ಕಾಲ ಕಳೆದಿಲ್ಲವಲ್ಲಾ ಎಂದು ಮಮ್ಮಲಮರುಗುತ್ತಾ, ಮುಚ್ಚಿದ್ದ ಬಾಗಿಲ ಕಡೆಗೇ ನೋಡುತ್ತಾ,
ಒಳಗಿಂದ ಬರುತ್ತಿದ್ದ ಸಂಗೀತ, ಕುಣಿತ, ಕೂಗುವಿಕೆಯ ಶಬ್ಧಗಳನ್ನು ಬಾಯ್ತೆರೆದು ನೋಡುತ್ತಾ ಮೂಢರಂತೆ
ನೋಡುತ್ತಾ ಕುಳಿತಿರುವರು. ಒಳಗೆ ಹೋದ ನಾಯಿಗಳನ್ನು ಬಯ್ಯುವಂತೆ ಎಷ್ಟು ಬೌ ಬೌ ಎಂದು ಅರಚಿದರೂ ಯಾರೂ
ಕಿವಿಗೆ ಹಾಕಿಕೊಳ್ಳದೇ ತಮ್ಮ ಕ್ರಿಯೆ ಮುಂದುವರೆಸುವರು. ಒಳಗೆ ಅವರುಗಳು ಏನು ಮಾಡುತ್ತಿರಬಹುದು ಎಂದು
ಈ ಮೂವರೂ ಕಲ್ಪಿಸಿಕೊಳ್ಳುತ್ತಾ, ಟಿವಿಯಲ್ಲಿ ಬಿತ್ತರವಾಗುತ್ತಿದ್ದ ನಾಯಿಗಳ ಕಾರ್ಯಕ್ರಮವನ್ನು ನೋಡುತ್ತಾ,
ಬಟ್ಟಿಲಲ್ಲಿ ಹಣ್ಣಿನ ಜ್ಯೂಸನ್ನು ಹಾಕಿ ಸರ್‍ರ್‍ರ್‍ರ್‍ರ್ ಎಂದು ಹೀರುತ್ತಾ ಕೆಲವರು, ಬೆಡ್ರೂಮು
ಸೇರಿ ಅಲ್ಲಿ ವಿನೋದವಾಗಿ ಆಟವಾಡುತ್ತಾ ಕೆಲವರು, ಶವರ್ ಕೆಳಗೆ ಸೋಪಿನ ನೊರೆಯನ್ನು ಬಚ್ಚಲ ಮನೆಯ ತುಂಬಾ
ಚೆಲ್ಲಿ ಹರಡಿ ಹುಟ್ಟಿದಾರಬ್ಯ ಮಾಡಿರದ ಮಜ್ಜನದ ರುಚಿ ನೋಡುತ್ತಾ ಕೆಲವರು, ಹೊಟ್ಟೆಗೆ ಒಳ್ಳೆ ಊಟವನ್ನೇ
ಕಾಣದೆ ಹೊಟ್ಟೆ ಬೆನ್ನಿಗೆ ಅಂಟಿದಂತಿದ್ದ ಕೆಲವರು ಕೈತುಂಬಾ ಮಾಂಸದ ಹಸಿ ತುಂಡನ್ನೇ ಬಾಯಲ್ಲಿ ಜೊಲ್ಲು
ಸುರಿಸಿಕೊಂಡು ಗಬಗಬನೆ ಮೆಲ್ಲುತ್ತಿದ್ದ ಕೆಲವರು ಹೀಗೆ ಮನೆ ತುಂಬಾ ತುಂಬಿಕೊಂಡು ತಮ್ಮ ಮನೆಯನ್ನು
ಅಧಿಕಾರದಲ್ಲಿ ಉಪಯೋಗಿಸುತ್ತಿರಬಹುದೆಂದು ನೆನೆದು ಹೊಟ್ಟೆ ಉರಿದುಕೊಂಡು ಏನೂ ಮಾಡಲಾಗದೆ ಕೈಚೆಲ್ಲಿ
ಕೂತಿರುವರು ಬುಲ್ಡಾಗ್, ಪಗ್ ಮತ್ತು ಡೋಬರ್ಮನ್.
ತುಂಬಾ
ಹೊತ್ತಿನ ನಂತರ ರಿಚಿ ಮತ್ತು ಹಲವರು ಕೈಲಿ ಮಾಂಸ, ಪಾನೀಯಗಳನ್ನು ಹಿಡಿದುಕೊಂಡು ಬಂದು ಎದುರಿಗೆ ನಿಂತರೂ
ಮೂವರೂ ಏನೂ ಪ್ರತಿಕ್ರಿಯೆ ಕೊಡದೆ ಹಾಗೇ ಬಿದ್ದಿರುವುದನ್ನು ಕಂಡು, ಅವರ ಕೊಬ್ಬಡಗಿಸಲೋಸಗ ಹಲವು ರೀತಿ
ಚಿತ್ರ ಹಿಂಸೆ ಕೊಟ್ಟು, ಅಟ್ಟಾಡಿಸಿಕೊಂಡು ಹೊಡೆದು, ಬಾಯಿಗೆ ಬಂದ ಹಾಗೆ ಬಯ್ಯತೊಡಗುವರು. ಯಾರೋ ಒಬ್ಬ
ಬೀದಿ ನಾಯಿ ಪಾಪ ತನ್ನ ಮುರಿದಿರುವ ಕಾಲನ್ನು ತೋರಿಸಿ, ನನ್ನಂತ ಒಂದು ಜೀವವು ರಸ್ತೆಯಲ್ಲಿ ಹೋಗುತ್ತಿದ್ದರು
ಲಕ್ಷಿಸದೆ ನನ್ನ ಮೇಲೆ ಇವನ ಸ್ನೇಹಿತನೋರ್ವನೇ ಕಾಲು ಮುರಿದಿದ್ದೆಂದು ದೂರು ನೀಡುತ್ತಾ ಡಾಬರ್ಮನ್
ಕಾಲನ್ನು ಕಚ್ಚುವನು, ಇನ್ನಾರೋ ನಾಯಿ ಬುಲ್ಡಾಗ್ ಕಡೆ ಹೋಗಿ ಇಂಥವಳೇ ಒಬ್ಬಳು ತನ್ನನ್ನು ಚಿತ್ರ ಹಿಂಸೆ
ಕೊಟ್ಟು ಈ ರೀತಿಯ ಸಣಕಲು ದೇಹಕ್ಕೆ ಕಾರಣ ಎಂದು ಎಳೆದಾಡುವನು. ಬುಲ್ಡಾಗ್ ಮೈಮೇಲೆಲ್ಲಾ ಪರಚಿದ ಗೆರೆಗಳು
ಬೀಳುವವು. ಈ ಪಗ್ ನಂತಹವನೇ ಒಬ್ಬ ತನ್ನ ಕಿವಿ ಕಿತ್ತಿದ್ದೆಂದು ಹೇಳಿ ಇನ್ನೊಬ್ಬ ಪಗ್ ನ ಜುಟ್ಟು ಹಿಡಿದು
ಎಳೆಯುವನು. ತಮ್ಮನ್ನು ಸಿಕ್ಕ ಸಿಕ್ಕಲ್ಲಿ ಬಲೆ ಬೀಸಿ, ಕರೆಂಟ್ ಶಾಕ್ ಕೊಟ್ಟು, ಎಳೆದೊಯ್ದು ನಪುಂಸಕರನ್ನಾಗಿ
ಮಾಡಿದ್ದನ್ನು ಬಂದಿದ್ದವರಲ್ಲಿ ಹಲವು ದಡೂತಿಗಳು ಕಣ್ಣಿನಲ್ಲಿ ನೀರು ಹಾಕಿಕೊಂಡೇ ಹೇಳುತ್ತಾ ಮೂವರ
ಮೇಲೂ ಎಗರಿ ಬೀಳುವರು. ಎಲ್ಲರೂ ಒಟ್ಟು ಸೇರಿ ಮೂವರನ್ನೂ
ತಮ್ಮಲ್ಲಿರುವ ಕ್ರೋಧ ತೀರಿಸಿಕೊಳ್ಳುತ್ತಿರಲು ರಿಚಿ ಗೊತ್ತಾಯ್ತಾ ನೀವುಗಳು ನಮ್ಮ ಮೇಲೆ ಮಾಡಿದ್ದ
ದೌರ್ಜನ್ಯ ನಿಮಗೆ ಇದರಿಂದ ಬುದ್ದಿ ಬರಲ್ಲ ಅಂತ ಗೊತ್ತು ಅನುಭವಿಸಿ, ಇನ್ನೂ ಅನುಭವಿಸಿ ಎಂಬಂತೆ ಸುಮ್ಮನೆ
ನೋಡುತ್ತಾ ಕಾರ್ ಮೇಲೆ ಕುಳಿತು ಮೂಳೆ ಕಡಿಯುತ್ತಿರುವನು. ನೋವು ತಾಳಲಾರದೆ ಮೂವರೂ ಅರಚುತ್ತಾ ಊಳಿಡುವರು.
ಲಾಪ್
ಟಾಪನ್ನು ಅಷ್ಟು ದೂರ ಎಸೆದು ಮನೆಯೊಡೆಯ ಸೋಫಾದಿಂದ ಕೆಳಗುದುರುವನು, ರೂಮಿನಲ್ಲಿ ಕೂದಲು ಹರಡಿಕೊಂಡು
ಬಿದ್ದಿದ್ದ ಒಡತಿ ಬೆಚ್ಚಿ ಎದ್ದು ಅರಚುವಳು, ಪುಸ್ತಕದ ಮೇಲೆ ಬಿದ್ದಿದ್ದ, ಸುತ್ತ ಪುಸ್ತಕಗಳನ್ನು
ಒದ್ದೆ ಮಾಡಿಕೊಂಡಿದ್ದ ನಿಖಿಲ್ ಒಮ್ಮೆ ಕುಮುಟಾರಿ ಏಳುವನು. ಎಲ್ಲಾ ಎದ್ದು ಹಾಲ್ ನಲ್ಲಿ ಬಂದು ನೋಡಿಕೊಳ್ಳಲು,
ಗಂಡನ ಕಾಲಿನಲ್ಲಿ ನಾಯಿಯ ಹಲ್ಲಿನ ಗುರುತಿರುತ್ತದೆ. ಒಡತಿಯ ಸೊಂಟವೆಲ್ಲಾ ಗೆರೆಗಳಿರುತ್ತದೆ, ಪಗ್
ನ ಕಾಲಿನಲ್ಲೂ ಚುಚ್ಚಿದ ಗುರುತಿರುತ್ತದೆ. ಯಾರಿಂದಲೂ ಏನೂ ಮಾತು ಹೊರಡುವುದಿಲ್ಲ. ಸುಮ್ಮನೆ ನಾಯಿಗೂಡಿನ
ಬಳಿ ಹೋಗುತ್ತಾರೆ. ನಾಯಿ ಸದ್ದಿಲ್ಲದೆ ಬಿದ್ದಿರುತ್ತದೆ. ಧೈರ್ಯ ಮಾಡಿ ಹತ್ತಿರ ಹೋಗಿ ನೋಡಲು ರಿಚಿ
ಸತ್ತು ಹೋಗಿರುತ್ತದೆ.
Beware
of HUMAN/ ಮನುಷ್ಯರಿದ್ದಾರೆ ಎಚ್ಚರಿಕೆ!
No comments:
Post a Comment