ಓದಿ ಓಡಿದವರು!

52323

Monday, 27 February 2012

ನನ್ಗೊಂದಾಸೆ!


ಮುನ್ನುಡಿ: ಆಸೆಗಳೊಂದಿಗೆ ಜೀವನ. ಜೀವನದಲ್ಲಿನ ಆಸೆಗಳು.

ಆಸೆ. ನನಗೆ ಮನಸೋಯಿಚ್ಛೆ ಅಳುವಾಸೆ. ನೆಮ್ಮದಿಯಾಗಿ ನಿದ್ರಿಸುವಾಸೆ, ಹೊಟ್ಟೆತುಂಬಾ ಅಮ್ಮನ ಎದೆಹಾಲು ಸವಿಯುವಾಸೆ. ಅಪ್ಪನ ಮೇಲೆ ಸುಸು ಮಾಡಿ ತುಂಟನಗೆ ನಗುವಾಸೆ. ಸಿಕ್ಕ ಸಿಕ್ಕವರ ಬಟ್ಟೆಯ ಮೇಲೆ ಸಿಂಬಳ ಸುರಿಸುವಾಸೆ. ಆಟವಾಡುವಾಸೆ. ಸ್ವಂತವಾಗಿ ನಾನೇ ನಡೆಯುವಾಸೆ, ಸೈಕಲ್ ತುಳಿಯುವಾಸೆ, ಬಿದ್ದು ತರಚಿದ ಗಾಯವನ್ನು ಮಣ್ಣಿನಿಂದ ಲೇಪಿಸುವಾಸೆ. ಸ್ಕೂಲಿಗೆ ಹೋಗುವುದಿಲ್ಲವೆಂದು ಹಠ ಹಿಡಿಯುವಾಸೆ. ಶಾಲೆಯಲ್ಲಿ ಕೂತು ಪಾಠ ಕೇಳದೆಯೇ ನಿದ್ರಿಸುವಾಸೆ. ಓದು, ಸ್ಕೂಲು, ಹೋಮ್ ವರ್ಕ್ಸೂ, ಪಾಠ, ಪರೀಕ್ಷೆ, ಟ್ಯೂಷನ್, ಸಮವಸ್ತ್ರವಿಲ್ಲದೆ ಕಾಲ ಕಳೆಯುವಾಸೆ. ಸಾಕೆನಿಸುವಷ್ಟು ಚಾಕಲೇಟ್ ಚಪ್ಪರಿಸುವಾಸೆ. ಒಂದೇ ಒಂದು ರೂಪಾಯಿ ಹಿಡಿದು ಇಡೀ ಬಿಡಿಎ ಕಾಂಪ್ಲೆಕ್ಸ್ ಕೊಂಡುಕೊಳ್ಳುವಹಾಗೆ ಸುತ್ತುವಾಸೆ. ನೂರು ರೂಲ್ಸ್ ಹಾಕುವವರ, ಅದನ್ನು ಮುರಿದು ಮಜಾ ನೋಡುವವರನ್ನೆಲ್ಲಾ ನೋಡಿ ಸುಮ್ಮನೆ ನಗುವಾಸೆ.

ಬಣ್ಣಬಣ್ಣದ ಬ್ರಾಂಡೆಡ್ ಬಟ್ಟೆ ತೊಡುವಾಸೆ, ದಿನಕ್ಕೊಂದು ಗಾಡಿ ಏರುವಾಸೆ, ಸಿಗರೇಟ್ ರುಚಿ ನೋಡುವಾಸೆ, ಸಿಕ್ಕಸಿಕ್ಕಿದ್ದನ್ನೆಲ್ಲಾ ಕುಡಿಯುವಾಸೆ. ಸದಾ ಸ್ನೇಹಿತರೊಂದಿಗೆ ಸುತ್ತುವಾಸೆ. ನೋಡಬಾರದ ಜಾಗ, ಕೇರಿ, ಊರನ್ನೆಲ್ಲಾ ನೋಡುವಾಸೆ. ಎಲ್ಲ ರೀತಿಯ ತಿಂಡಿ ಊಟದ ರುಚಿ ನೋಡುವಾಸೆ. ಸಿಕ್ಕ ಸಿಕ್ಕ ಪುಸ್ತಕಗಳನ್ನೂ ಪರೀಕ್ಷೆಗಾಗಿ ಅಲ್ಲದಿದ್ದರೂ ಓದುವ ಆಸೆ. ಗುರಿಯೇ ಇಲ್ಲದೆ ಸುಮ್ಮನೆ ಗಾಡಿಯಲ್ಲಿ ಕೂತು ಹೋಗುತ್ತಲೇ, ಹೋಗುತ್ತಲೇ, ಹೋಗುತ್ತಲೇ ಇರುವಾಸೆ. ಖಾಲಿ ರೋಡೊಂದರಲ್ಲಿ, ನಿರ್ಜನ ಪ್ರದೇಶದಲ್ಲಿ ನಿರ್ಭಯವಾಗಿ ನಿದ್ರಿಸುವಾಸೆ. ಬೆಟ್ಟದ ತುತ್ತ ತುದಿಗೆ ಹೋಗಿ ತಂದೂರಿ ಚಿಕನ್ ಕೈಲಿ ಹಿಡಿದು ಎಳೆಯುವಾಸೆ. ಜನರೆಲ್ಲರಿಂದ ಕಳೆದುಹೋಗಿ ಪ್ರಾಣಿಗಳ ಜೊತೆ ವಾಸಿಸುವಾಸೆ. ಕೆಲವೇ ದಿನಗಳಾದರೂ ಕಾಡು ಮನುಷ್ಯರೊಂದಿಗೆ ಕಾಡು ಮನುಷ್ಯನಾಗುವಾಸೆ. ಹೊಟ್ಟೆಪಾಡಿಗೆ ದುಡಿದು ದುಡ್ಡು ಸಂಪಾದನೆ ಮಾಡಿ ಅದರಿಂದ ಆಹಾರ ಪಡೆಯುವ ಬದಲು, ನೇರವಾಗಿ ಮರದಿಂದಲೋ, ಬೇಟೆಯಾಡಿಯೋ ಹೊಟ್ಟೆತುಂಬಾ ತಿನ್ನುವಾಸೆ. ನಗರದಲ್ಲಿ ನಿಂತಲ್ಲಿಯೇ ನಿಂತು, ಎಲ್ಲಾ ಓಡುತ್ತಿರುವ ಜನರನ್ನು ನೋಡಿ ಹೊಟ್ಟೆ ಹುಣ್ಣು ಬರುವಷ್ಟು ನಗುವಾಸೆ. ಏನು ಮಾಡಬಾರದು ಎಂದರೂ ಅದನ್ನೇ ಮಾಡಿ ನಲಿವಾಸೆ. ಅಪ್ಪ ಅಮ್ಮನಿಗೆ ಬೇಕೆಂದೇ ಕೋಪ ಬರಿಸುವಾಸೆ. ಯಾರೊಂದಿಗೂ ಕಮಿಟ್, ಅಟ್ಯಾಚ್ ಆಗದೆ ಎಲ್ಲರನ್ನೂ ಪ್ರೀತಿಸುವಾಸೆ. ಇಷ್ಟ ಬಂದವರ ಜೊತೆ ಸುತ್ತಾಡುವಾಸೆ. ಎಲ್ಲರೂ ದುಡಿದಿರುವ ದುಡ್ಡು ತಂದು ಒಟ್ಟು ಹಾಕಿ ಗಾಂಧೀಜಿಯವರು ಪಾಶ್ಚಾತ್ಯ ಉಡುಪನ್ನು ಸುಟ್ಟ ಹಾಗಿ ಸುಟ್ಟುಬಿಡುವಾಸೆ. ಬೆಂಕಿಯೊಂದಿಗೆ ಸರಸವಾಡುವಾಸೆ. ಕಡಲ ಮೇಲೆ ಮರದ ದಿಮ್ಮಿಗಳನ್ನು ಕಟ್ಟಿ ದ್ರಾಕ್ಷಿ ತಿನ್ನುತ್ತಾ ಪ್ರಿಯತಮೆಯೋರ್ವಳ ಜೊತೆ ಆಕಾಶ ನೋಡುತ್ತಾ ತೇಲುವಾಸೆ. ಜಲಪಾತದೊಂದಿಗೆ ಸರ್ರನೆ ಹರಿದುಬರುವಾಸೆ. ರೆಕ್ಕೆ ಕಟ್ಟಿಕೊಂಡು ಆಕಾಶದ ತುತ್ತ ತುದಿಗೆ ಹೋಗಿ ಧುಪ್ಪನೆ ಕೆಳಗೆ ಧುಮುಕುವಾಸೆ.

ಸರಳವಾಗಿ ಸಹಜಸುಂದರಿಯೋರ್ವಳನ್ನು ಕಟ್ಟಿಕೊಳ್ಳುವಾಸೆ. ಅವಳೊಂದಿಗಿದ್ದು ಇಡೀ ಪ್ರಪಂಚವನ್ನು ಮರೆಯುವಾಸೆ, ಸುತ್ತುವಾಸೆ. ಯಾರ ತಂಟೆಗೂ ಹೋಗದೆ, ಕೆಲಸ, ಮನೆ, ಸಂಸಾರದಲ್ಲಿ ಮಗ್ನನಾಗುವಾಸೆ. ಮೌನವಾಗಿ ಸಂಸಾರ ಬೆಳೆಯುವುದನ್ನ ನೋಡುವಾಸೆ, ಕಣ್ಮುಚ್ಚಿ ಮಗಳ ಸ್ಪರ್ಶವನ್ನ ಅನುಭವಿಸುವಾಸೆ. ಕಿವಿಮುಚ್ಚಿ ಹೆಂಡತಿಯ ಎಲ್ಲಾ ಕಂಪ್ಲೈಂಟುಗಳನ್ನು ಕೇಳುವಾಸೆ. ಕಾಲಿಲ್ಲದವನಂತೆ ಮನೆಯಲ್ಲೇ ಕೂತಿರುವಾಸೆ. ಯಾವುದೇ ಕೆಲಸ ಮಾಡದೇ ವಿಶ್ರಾಂತಿಸುವ ಆಸೆ. ದೇಹ ಸ್ವಾಧೀನ ಕಳೆದುಕೊಂಡವನಂತೆ ಮಲಗಿಯೇ ಇರುವ ಆಸೆ. ತಕ್ಷಣ ಬೋಧಿವೃಕ್ಷದಡಿ ಜ್ಞಾನೋದಯವಾದಂತೆ ಮನೆಗೇ ಹಿಂತಿರುಗದಷ್ಟು ಕೆಲಸ ಮಾಡುವಾಸೆ. ದುಡ್ಡಿನ ಮೇಲೆ ದುಡ್ಡು ಬಾಚಿ, ಸಿಕ್ಕ ಸಿಕ್ಕ ಕೆಲಸಗಳಲ್ಲೆಲ್ಲಾ ಪಳಗಿ, ಕಂಡ ಕಂಡದ್ದನ್ನೆಲ್ಲಾ ರುಚಿಕರವಾದ ಕಥೆಗಳನ್ನು ಮಾಡಿ ಜನರನ್ನು ರಂಜಿಸುವಾಸೆ. ಹೆಸರು, ಅಡ್ಡ ಹೆಸರು, ಮಾಡಿ ಲೋಕಪ್ರಿಯನಾಗುವಾಸೆ. ಜನರ ವಿಶ್ವಾಸ ಗಳಿಸುವಾಸೆ. ದೋಚಲಾಗುವಷ್ಟೂ ದುಡ್ಡು ಎಲ್ಲಾ ಮಾರ್ಗಗಳಿಂದಲೂ ದೋಚುವಾಸೆ. ಬರುವ ದುಡ್ಡನ್ನು ಎಣಿಸಲಿಕ್ಕೇ ಒಂದಷ್ಟು ಜನರನ್ನ ನೇಮಿಸುವಾಸೆ. ಮಕ್ಕಳನ್ನೆಲ್ಲಾ ಅವರವರ ದಾರಿಗೆ ಬಿಟ್ಟು ದುಡಿದಿದ್ದನ್ನೆಲ್ಲಾ ಎಲ್ಲರಿಗೂ ಹಂಚಿ ಯಾರಿಗೆ ಸೇರಿದೆಯೆಂದೂ, ಯಾರಿಂದ ಬಂತೆಂದೂ ಗೊತ್ತಾಗದ ಹಾಗೆ ಎಲ್ಲ ನಷ್ಟ ಕಷ್ಟದಲ್ಲಿರುವವರಿಗೂ ಹಂಚಿ ಯಾರಿಗೂ ಗೊತ್ತಿಲ್ಲದ ಜಾಗಕ್ಕೆ ಹೋಗಿಬಿಡುವಾಸೆ. ಒಬ್ಬರಿಂದಲೂ ಎಂದೂ ಕೃತಜ್ಞತೆ ಪಡೆಯದರಿವ ಆಸೆ. ಎಲ್ಲಾ ಹಿಂದಿನ ಜೀವನವನ್ನು ಮೆಲುಕುಹಾಕುತ್ತಾ ಹೆಂಡತಿಯೊಂದಿಗೆ ಪರಿಸರದಲ್ಲಿ ಲೀನವಾಗುವಾಸೆ. ಬೆಂಕಿ ಹಚ್ಚಿಕೊಂಡೋ, ನೇಣು ಹಾಕಿಕೊಂಡೋ, ಗುಂಡು ಹೊಡೆದುಕೊಂಡೋ, ವಿಷ ಸೇವಿಸಿಯೋ, ವಿಚಿತ್ರವಾಗಿ ಸಾಯುವಾಸೆ.

ಸತ್ತ ಮೇಲೆ ಶವಕ್ಕೆ ಯಾವ ರೀತಿಯ ಹೂವಿನ ಅಲಂಕಾರ ಮಾಡದಿರಲೆಂದಾಸೆ. ಬಿದಿರು ಮೋಟಾರಿನ ಮೇಲೆ ಹೋಗದಿರಲೆಂದಾಸೆ. ಶಾಸ್ತ್ರ, ಮಂತ್ರ, ಪೂಜೆ, ಅಕ್ಕಿಕಾಳನ್ನು ಬಾಯಲ್ಲಿ ತಿನ್ನಲಾಗದಿರುವಾಗ ಹಾಕದಿರಲೆಂದಾಸೆ. ಕಣ್ಣು, ಕಿವಿ, ಹೃದಯ ಬೇಕು ಬೇಕಾದ್ದನ್ನು ಕಿತ್ತುಕೊಂಡು ಶವಸಂಸ್ಕಾರವನ್ನು ವಿಧಿವಿಧಾನಗಳೊಂದಿಗೆ ಮಾಡದಿರಲೆಂದಾಸೆ. ಮಣ್ಣೋ ಬೆಂಕಿಯೋ ಇಟ್ಟು ಯಾರೂ ಹಿಂದಿರುಗದೆಯೇ ಹೊರಟು ಹೋಗಲೆಂದಾಸೆ. ಸತ್ತ ಮೇಲೆ ಯಾರೂ ಯಾವುದೇ ಕಾರಣಕ್ಕೂ ನನ್ನನ್ನು ನೆನೆಯದಿರಲೆಂದಾಸೆ. ಯಾವುದೇ ರೀತಿಯ ಶೋಕಾಚರಣೆಯನ್ನು ಯಾರೂ ಯಾವುದೇ ರೀತಿಯಲ್ಲೂ ಮಾಡದೆ ಇರಲೆಂದಾಸೆ. ತಿಥಿಯ ಹೆಸರಿನಲ್ಲಿ ಪಕ್ಷಿ, ಪಶುವಿನೊಡಗೂಡಿ ಯಾವ ಬಂಧುಗಳೂ ವಡೆ ಪಾಯಸ ಮೆಲ್ಲದಿರಲೆಂದಾಸೆ. ಕುಂಕುಮ, ಹಾರ ಹಾಕಿಸಿಕೊಂಡ ಫೋಟೋ ಫ್ರೇಮ್ ಆಗದಿರಲೆಂದಾಸೆ. ಆಸೆ.

ಹಿನ್ನುಡಿ: ಆಸೆಗಳಿಗೆ ಕೊನೆಯಿಲ್ಲದಿರಲಿ… 

2 comments:

  1. ಹಹಹ .....ನಿಮ್ಮ ಆಸೆಗೆ ಮಿತಿಯಿಲ್ಲರೀ......ಬಾಲ್ಯದಿಂದ ಹಿಡಿದು ಸಾಯುವವರೆಗಿನ ಎಲ್ಲಾ ಅನುಭವಗಳನ್ನು ಪಡೆಯುವಾಸೆ.......ಚೆನ್ನಾಗಿದೆ......
    ನಿರೂಪಣೆ ಇಷ್ಟ ಆಯಿತು.....

    ನನ್ನ ಬ್ಲಾಗ್ ಗೂ ಬನ್ನಿ
    http://ashokkodlady.blogspot.com/

    ReplyDelete
    Replies
    1. ಸತ್ತ ನಂತರದ ಆಸೆಯನ್ನೂ ಒಳಗೊಂಡಿದೆ ಹಹಹಹಹ.. ಧನ್ಯವಾದಗಳು ಅಶೋಕ್ ಸರ್ ಆಸಕ್ತಿವಹಿಸಿ ಓದಿದ್ದಕ್ಕೆ.. :-) ನಿಮ್ಮ ಬ್ಲಾಗ್ ನಲ್ಲಿ ಈಗತಾನೆ ಕಣ್ಣುಬಿಡುತ್ತಿದ್ದೇನೆ :-)

      Delete