" ಸುಮ್ನಿರು ಪುಟ್ಟ ಏನಾಗಲ್ಲ... ಏ... ನಿಂಗೆ ಚಾಕ್ಲೇಟ್ ಬೇಡ್ವಾ" ಮಗು ಅದರ ಪಾಡಿಗೆ ಅಳುತ್ತಲೇ ಇತ್ತು. ಅದರ ತಂದೆ ಸಂತೈಸುತ್ತ ಅದರ ತಲೆಯನ್ನು ಹಿಡಿದೇ ಇದ್ದ. ಪಕ್ಕದ ಕುರ್ಚಿಯಲ್ಲಿ ಕುಳಿತು ಕನ್ನಡಿಯಲ್ಲಿ ಕಾಣುತಿದ್ದ ಆ ಮಗುವಿನ ಅಳುವ ಮೋರೆಯನ್ನು ನೋಡುತ್ತಲೇ ಇದ್ದೆ. ಎದ್ದು ಹೋಗ್ಬಿಡಲಾ, ಎಲ್ಲಾ ಒಂದೇ ಸಲಕ್ಕೆ ಖಾಲಿ ಆಗೋಗುತ್ತಲ್ಲ ಅಂತ ಕನ್ನಡಿಯಲ್ಲಿ ಮುಖ ನೋಡಿಕೊಂಡು ಯೋಚನೆ ಮಾಡಿದೆ. ಮತ್ತೊಂದು ಕ್ಷಣದಲ್ಲಿ, ಬೇಡ ನಿರ್ಧಾರ ಮಾಡಿ ಆಗಿದೆ ಯಾಕ್ ಸುಮ್ಮನೆ ಬದಲಾಯಿಸೋದು ಅಂತ ಸುಮ್ಮನೆ ಮುಖ ನೋಡುತ್ತಲೇ ಕುಳಿತೆ.
"ಮಾ..........." ಎಂದು ಹೆದರಿ ಕಿಟಾರನೆ ಕುರುಚುತ್ತಾ ಬಿದ್ದು ಎದ್ದು ಓಡಿದ ಆ ಪುಟ್ಟ ಸೇಟು ಹುಡುಗ. ನೆನ್ನೆ ಸಂಜೆ ಅರುಣನ ಮನೆಗೆ ಹೋಗಿದ್ದಾಗ ಮೆಟ್ಟಿಲ ಬಳಿ ಹಟಾತ್ತನೆ ಎದುರಿಗೆ ಸಿಕ್ಕ ನನ್ನನು ನೋಡಿ ಆ ರೀತಿ ಯಾಕೆ ಪ್ರತಿಕ್ರಿಯಿಸಿದ ಆ ಹುಡುಗ. ಆಗ ಏನೂ ಅರ್ಥವಾಗಲಿಲ್ಲ ಅಪರಿಚಿತನೆಂದಿರಬಹುದೇನೋ ಎಂದುಕೊಂಡು ಹೋದಕೆಲಸ ಮುಗಿಸಿದೆ, ಮರಳಿದೆ. ನಂತರ ಅರುಣ ಫೋನ್ ಮಾಡಿ ಲೇ ನೀನ್ ಹೋದ್ ಮೇಲೆ ಆ ಹುಡುಗ ಬಂದು ಅಣ್ಣ ಯಾರಣ್ಣ ಅದು ಹಂಗಿದ್ರಲ್ಲ ಭಯಾನೇ ಅಗೋಯ್ತು ಅಂತ ಹೇಳ್ಕೋತಿದ್ನಂತೆ. ಈಗ ಆ ಪಾಪದ ಹುಡಗ ಪ್ರತಿಕ್ರಿಯಿಸಿದ್ದು ನೆನೆಸಿಕೊಂಡರೆ ನಗು ಬರುತ್ತೆ. ಥತ್ ಅಷ್ಟು ಕೆಟ್ಟದಾಗಿದೀನಾ, ಯಾಕೋ ನನಿಗೆ ಕೆಟ್ಟದಾಗಿ ಕಾಣ್ತಿಲ್ಲವಲ್ಲ. ನೋಡೋ ಜನಗಳ ಕಣ್ಣು ಸರಿ ಇಲ್ವೋ, ನನ್ನ ಕಣ್ಣೇ ಹಾಳಾಗಿದ್ಯೋ ಕೊನೆಗೂ ಗೊತ್ತಾಗ್ಲೇ ಇಲ್ಲ.
ನಮ್ಮಮ್ಮ ಅಂತು ದಿನಕ್ಕೆ ಒಂದು ಸಲನಾದ್ರು ಕೈನೇ ಕತ್ರಿ ತರ ತೋರಿಸ್ತಾ ನೀನ್ ಇವತ್ತು ಮಲ್ಕೊ ಆಮೇಲೆ ಗೊತ್ತಾಗುತ್ತೆ ಅಂತ ಧಮ್ಕಿ ಹಾಕ್ತಿದ್ರು. ನಮ್ಮಪ್ಪ ಮೂರು ಸಲ ಯಾಕೋ ಹಿಂಗೆ, ಯಾಕೋ ಹಿಂಗೆ ಅಂತ ಕೇಳಿ ಕೇಳಿ ಪ್ರತಿ ಸಲ ಒಂದೊಂದು ಉತ್ತರ ಕೋಡ್ತಿದ್ದಕ್ಕೆ ಸಾಕಾಗಿ ಕೇಳೋದೇ ಬಿಟ್ಬಿಟ್ಟಿದ್ರು. ಆದ್ರೂ ಈ ಐದು ತಿಂಗಳು ಒಂತರಾ ಮಜಾ ಇತ್ತು. ಮೊನ್ನೆ ಯಾರೋ ಮನೆಗೆ ಬಂದಿದ್ರು, ನೇರವಾಗಿ ನಮ್ಮಪ್ಪನ ಅತ್ರ ನೋಡಿ ನಿಮ್ಮಗನಿಗೆ ಮಧುವೆ ಮಾಡಿಲ್ವಂತಲ್ಲ ಅದಕ್ಕೆ ಹೀಗಾಗಿದಾನೆ ಅಂದುಬಿಟ್ರು. ಆಹಾ ನಾನ್ ಯಾವಾಗ ಹೇಳಿದ್ದೆ ಇವ್ರತ್ರ ಅಂತ ಬಾಯಿ ಕಳ್ಕೊಂಡು ಅವರನ್ನೇ ನೋಡಿದೆ. ಸ್ವಲ್ಪ ದಿನದ ಹಿಂದೆ ಹಳೇ ಸ್ನೇಹಿತ ಸಿಕ್ಕ ಏನೋ ದೇವರಿಗೆ ಬಿಟ್ಟಿರೋದಾ ಅಂದ. ದೇವರನ್ನೇ ಬಿಟ್ಟಿದೀನಿ ಇನ್ನ ದೇವರಿಗ್ಯಾಕೆ ಬಿಡಲಿ ಅಂತ ಮನಸಿನಲ್ಲೇ ಅಂದುಕೊಂಡೆ. ಬಹುಮಟ್ಟಿಗಿನ ಜನ ಕೇಳಿದ್ದೆಂದರೆ "ಏನೋ ಲವ್ ಫೈಲ್ಯೂರಾ" ಅಂತ, ನಗು ಬರ್ತಿತ್ತು. ಸಾಯಿ ಬಾಬಾ ಅಂದ್ರು, ನಿತ್ಯಾನಂದ ಅಂದ್ರು, ಡೈರೆಕ್ಟರ್ ಲುಕ್ಕು ಅಂದ್ರು, ಬುದ್ದಿಜೀವಿಗಳ ಲಕ್ಷಣನಾ ಅಂದ್ರು, ಸುಮ್ಮನೆ ನಕ್ಕೆ.
ಸ್ನೇಹಿತರ ಗುಂಪಲ್ಲೇ ಒಬ್ಬೊಬ್ಬರೂ ಒಂದೊಂದು ರೀತಿ ಕೇಳ್ತಿದ್ರು, ಬರೆಯೋವಾಗ ಕೆರ್ಕೊಳ್ಳೋಕೆ ಇರಲಿ ಅಂತಾನಾ/ ಮಗಾ ದುಡ್ಡಿಲ್ವೇನೋ ಬಾರೋ ನಾನೇ ಕರ್ಕೊಂಡೊಗ್ತೀನಿ/ ಲೇ ಸೂಪರ್ ಲೇ ಹಿಂಗೇ ಇರೋ/ ಹುಡುಗೀರು ನಿನ್ನ ಕಡೆ ನೋಡ್ತಾರೇನೋ ಲೇ ಹಿಂಗೆ ಇದ್ರೆ ನಿನ್ನಿಂದ ನಮ್ ಕಡೇನೂ ನೋಡಲ್ಲಪ್ಪ ಒಳ್ಳೇ ಕಾಡ್ ಕಪಿ ಇದ್ದಂಗಿದ್ಯ/ ಕರಡಿ ಮ್ಯಾನ್/ ಚೆ ಗುವೆರಾ/ ಮಗಾ ಜೋಳಿಗೆ ಒಂದು ಮಿಸ್ಸಿಂಗ್ ಕಣೊ/ ಅಲ್ಲಾ ಶೋರೂಮೇ ಹಿಂಗೆ, ಇನ್ನ ಗೊಡೋನ್ ಹೆಂಗೋ etc etc... ಒಬ್ಬರು ದೂರದ ಹಿರಿಯ ಸ್ನೇಹಿತರು ಸಿಕ್ಕರು ಸೀರಿಯಸ್ ಮುಖಭಾವದಲ್ಲಿ ನಿಮಗೆ ಮಧುವೆ ಆಗಿದ್ಯ ಅಂದ್ರು. ಯಾಕೆ ಅಂದೆ, ಇಲ್ಲ ಹೆಂಡತಿ ತವರು ಮನೆಗೇನಾದ್ರು ಹೋಗಿದಾರ ಬಾಣಂತನಕ್ಕೆ ಅಂದ್ರು. ಹ.. ಹ.. ಹ.. ಇಲ್ಲ ಸಾರ್ ಯಾಕ್ ಕೇಳಿದ್ರಿ ಈ ತರಹ ಅಂದೆ. ಡೆಲಿವರಿ ಆಗೋವರೆಗೂ ನಮ್ಮ ಕನಕಪುರದ ಕಡೆ ಜನ ಹಿಂಗೇ ಇರ್ತಾರೆ ಹಾಗಾಗಿ ಕೇಳ್ದೆ ಅಷ್ಟೇ ಅಂದ್ರು. ಹಿಂಗೂ ಒಂದು ಆಚಾರ ಇರಬಹುದು ಅಂತ ಅವತ್ತೇ ಗೊತ್ತಾಗಿದ್ದು.
ಪ್ರತಿಯೊಬ್ಬರಿಗೂ ಅವರ ಪ್ರಶ್ನೆಗಳಿಗೆ ವಿರುದ್ಧವಾಗಿ ಹಾರಿಕೆಯ ಉತ್ತರವನ್ನಂತೂ ಕೊಡುತ್ತಿದ್ದೆ. ನಿನಗೆ ಸೆಟ್ ಆಗಲ್ಲ, ಚೆನ್ನಾಗ್ ಕಾಣಲ್ಲ ಅಂದ್ರು. ಯಾವಾಗಲೂ ಚೆನ್ನಾಗೇ ಯಾಕ್ ಕಾಣ್ಬೇಕು ಅಂದ್ರೆ ಉತ್ತರ ಬರ್ತಿರಲಿಲ್ಲ. ನಾನು ಹಿಂಗೇ ಇರಬೇಕು ಅಂತ ನಾನು ತೀರ್ಮಾನ ಮಾಡ್ಬೇಕಾ ಅಥವಾ ನಾನಿಷ್ಟೇ ಅಂತ ನನ್ನ ಸುತ್ತಲಿನ ಜನ ನನ್ನ ತೀರ್ಮಾನಿಸಿ ಆಗಿದ್ಯ ಅಂತ ಗೊತ್ತಾಗಲಿಲ್ಲ. ಇನ್ನೂ ಎಷ್ಟು ದಿನ ನಾನು ಹೀಗೇ ಇರ್ತೀನಿ ಅಂತ ಕೂಡ ಏನೂ ತೀರ್ಮಾನಿಸಿರಲಿಲ್ಲ. ಆದರೂ ಅವರ್ಯಾರೂ ನನ್ನನ್ನ ಏನೂ ಕೇಳದಿದ್ರೆ ನಾನು ಈ ವೇಷವನ್ನ ವಿಶೇಷವಾಗಿ ಪರಿಗಣಿಸುತ್ತಿರಲಿಲ್ಲ, ಅದರೊಂದಿಗೆ ಮುಂದುವರೆಯುತ್ತಿರಲಿಲ್ಲ.
ತಲೆಕೂದಲು, ಗಡ್ಡ ಬಿಟ್ಟಿದ್ದೆ ಅಷ್ಟೇ ರೀ.. ತಲೆಕೂದಲು ಗಡ್ಡ ಮುಖದ ತುಂಬಾ ಬಿಟ್ಟು ಒಂದಷ್ಟು ದಿನ ಓಡಾಡಬೇಕೆಂಬ ವಿಚಿತ್ರ ತಿಕ್ಕಲು ಬಯಕೆಯಾಗಿತ್ತು ಅಷ್ಟೇ. ಯಾಕೆ ದಾಡಿ ಬಿಟ್ಟಿದ್ಯ ಅಂತ ಪ್ರತಿಯೊಬ್ಬರೂ ಕೇಳುತ್ತಿದ್ದ ಪ್ರಶ್ನೆಗೆ ಕಾರಣ ನನಿಗೂ ಗೊತ್ತಿರಲಿಲ್ಲ. ದಾಡಿ ಬಿಡೋಕೂ ಕಾರಣ ಬೇಕು ಅಂತ ಕೂಡ ಮುಂಚಿತವಾಗಿ ನನಿಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಯಾರು ಏನೇ ಹೇಳಿದ್ರು ನನ್ನ ದಾರೀಲಿ ನನ್ನಿಷ್ಟದಂತೆ ಹೋಗ್ತಾ ಇರ್ತೀನಿ ಅಂತ ನಿರ್ಧರಿಸಿದ್ದೆ. ಯಾಕೋ ನಡೆದಿದ್ದು ಸಾಕೆನಿಸಿತು. ಯಾಕ್ ಬೇಕು ಇವೆಲ್ಲ ಅಂತ ವೈರಾಗ್ಯ ಮೂಡಿತ್ತು. ಒಂದು ವಿರಾಮ ತೊಗೊಳ್ಳೋಣವೆಂದು ನಿರ್ಧರಿಸಿ ಸಲೂನ್ ಕಡೆಗೆ ನಡೆದೆ. ಈ ನಿರ್ಧಾರಕ್ಕೂ ಒಂದು ಕಾರಣವಿರಲಿಲ್ಲ, ನನಿಗೆ ಕಾರಣ ಬೇಕಾಗೂ ಇರಲಿಲ್ಲ.
ಆ ಮಗು ಇನ್ನೂ ಬಿಕ್ಕುತ್ತಲೇ ಇತ್ತು. ತನ್ನ ಕೂದಲು ಹೋಯಿತೆಂಬ ಬೇಜಾರೋ ಅಥವಾ ಇದ್ಯಾವುದೋ ವಿಚಿತ್ರ ಕುರ್ಚಿಯ ಮೇಲೆ ಕೂರಿಸಿ ಬಟ್ಟೆ ಹೊದಿಸಿ ಕತ್ರಿ ಹಿಡಿದು ಏನು ಮಾಡುತ್ತಾರೋ ಎಂಬ ಹೆದರಿಕೆಗೋ ಗೊತ್ತಿಲ್ಲ. ಅದರ ಅಪ್ಪ ಅದರ ಕಣ್ಣೊರೆಸುತ್ತಾ ಚಿಲ್ಲರೆ ಪಡೆದುಕೊಂಡು ಹೊರಟರು. ನನ್ನ ಆಸ್ತಿ ಖಾಲಿಯಾಗಿ ನನ್ನ ಕಾಲ ಬಳಿ ಇತ್ತು. ಸಾಕಾ ಸಾರ್ ಅಂತ ಕನ್ನಡಿ ಹಿಡಿದು ತಲೆಯ ಹಿಂಬದಿಯೆಲ್ಲಾ ತೋರಿಸಿದ ಹ್ಮ್…. ಎಂದು ನಿಟ್ಟುಸಿರು ಬಿಡುತ್ತಾ ದುಡ್ಡು ಕೊಟ್ಟು ಎದ್ದು ನಡೆದೆ.
ಇಲ್ಲಿಗೆ ನನ್ನ "ದಾಡಿ ಯಾತ್ರೆ" ಮುಗಿಯಿತು.
Yathre was nice .. :)
ReplyDeleteThank you :-)
Deleteblade story ಅಲ್ಲ ಗಡ್ಡದ ಸ್ಟೋರಿ ended in blade :-) ಹಂಗೇ ಏನಾದ್ರು ನಮಗಿಷ್ಟದ್ದು ಮಾಡ್ತಿದ್ದರೆ ಸುತ್ತಲಿನ ಜನಕ್ಕೆ ವಿಚಿತ್ರವಾಗಿ ಕಾಣುತ್ತೆ, ಇನ್ನೊಮ್ಮೆ ಬೇರೆಯವರ ಮಾತು ಕೇಳಿ ಮನಸು ಬದಲಿಸಬೇಡಿ, ಕಾಲಿನ ಹೆಬ್ಬೆರಿಳಿಗೇ ತಾಕುವಷ್ಟು ಗಡ್ಡ ಬೆಳೆಸಿ ಹೇಳ್ತೀನಿ!! :-)
ReplyDeleteಅವಾಗವಾಗ ಯಾತ್ರೆ ಮಾಡ್ತಾ ಇರಿ ಸರ್..!!! ಇಲ್ಲ ಅಂದ್ರೆ ಜನ ತಪ್ಪು ತಿಳ್ಕೋತಾರೆ..!!!! :)
ReplyDeleteನೀವೊಬ್ಬರಾದ್ರೂ ಇದ್ದೀರಲ್ಲ ನೋಡಿ ನಮ್ ಯಾತ್ರೆ supportಗೆ :-) ಧನ್ಯವಾದಗಳು :-)
Delete